28 ಫೆಬ್ರವರಿ 2008

ತುತ್ತು "ಅನ್ನ"ಕ್ಕೆ ಕುತ್ತು ಬರಲಿದೆ ನೋಡಿ...!?



ಎಲಾ ..! ಇದೇನು?."ಅನ್ನ"ಕ್ಕೆ ಕುತ್ತು ಬರುವುದೇ.. ಅಂತ ಹೇಳಬೇಡಿ.ಇದು ಹಾಗಲ್ಲ. ಅಕ್ಕಿಯ ಬೆಲೆ ಇನ್ನು 20 ವರ್ಷದ ಒಳಗೆ ಗಗನಕ್ಕೇರಲಿದೆ ಎಂಬ ಆತಂಕವನ್ನು ಹೀಗೆ ಹೇಳಿದೆ ಅಷ್ಟೆ.ಅಕ್ಕಿಯ ಬೆಲೆ ಏಕೆ ಏರುತ್ತೆ? ಕಾರಣವೇನು ಎಂದು ಪ್ರಶ್ನಿಸುವಿರಾ... ಮುಂದೆ ನೋಡಿ.

ಮೊನ್ನೆ "ಕೃಷಿಕರೇ ರೂಪಿಸುವ ಮಾಧ್ಯಮ" ಅಡಿಕೆ ಪತ್ರಿಕೆಯನ್ನು ಓದುತ್ತಿದ್ದೆ.ಅದರ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಅತ್ಯಂತ ಮನೋಜ್ಞವಾಗಿ ಕೃಷಿಕರ ಸಮಸ್ಯೆಯ ಬಗ್ಗೆ ಬರೆದಿದ್ದರು.ನನ್ನ ಮನಸ್ಸಿನಲ್ಲಿ ಅಂದಿನಿಂದಲೂ ಸುತ್ತುತ್ತಿದ್ದ ಭಾವನೆಗಳಿಗೆ ಅದು ಇನ್ನೊಂದು ಗರಿಯಾಯಿತು.ನಾನೂ ಒಬ್ಬ ಕೃಷಿ ಕುಟುಂಬದವನಾದ್ದರಿಂದ ಇನ್ನಷ್ಟು ಚಿಂತನೆಗೆ ದಾರಿಮಾಡಿತು.

ಅಡಿಕೆ ಪತ್ರಿಕೆಯ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಬರೆದ ಸಂಪಾದಕೀಯವನ್ನು ಹಾಗೇ ಇಲ್ಲಿ present ಮಾಡುವುದಿಲ್ಲ. ಅವರ ಅಕ್ಷರದ ಜೊತೆ ನನ್ನ ಭಾವನೆಗಳನ್ನೂ ಸೇರಿಸಿಬಿಡುತ್ತೇನೆ. ಅವರು ಮುಖ್ಯವಾಗಿ ಕೃಷಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗೂ ಅದರಿಂದಾಗಿ ಕೃಷಿಕರು ಎದುರಿಸುವ ಸಮಸ್ಯೆಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ.ಈ ಸಮಸ್ಯೆ ಎಷ್ಟು ಉಲ್ಪಣಿಸಿದೆಯೆಂದರೆ ಈಗ ಬೆಳೆ,ಬೆಲೆಗಳ ಚಿಂತನೆಗಳನ್ನು ಮೀರಿ ನಿಂತಿದೆ ಎನ್ನುವ ಪಡ್ರೆಯವರು ಆ ಬಗ್ಗೆ ಒಬ್ಬರು ಫೋನಿಸಿದ ಸಂದರ್ಭದಲ್ಲಿ ತೋಡಿಕೊಂಡ ಆತಂಕವನ್ನು ಅವರು ಹೇಳಿದ್ದು ಹೀಗೆ... ಪೊಳ್ಳಾಚಿಯ ಕೃಷಿಕರೊಬ್ಬರು ಫೋನಾಯಿಸುತ್ತಾ ಜಗತ್ತಿನ ಹಲವೆಡೆ ಇದೇ ಕೂಲಿಯಾಳುಗಳ ಸಮಸ್ಯೆ. ತಮಿಳುನಾಡಿನ ಭತ್ತದ ಗದ್ದೆಗಳು ಪರಿವರ್ತನೆಯಾಗುವ ವೇಗ ನೋಡಿದರೆ ಇನ್ನು 20 ವರ್ಷಗಳಲ್ಲಿ ಅಕ್ಕಿಗೆ ಕಿಲೋ ಒಂದಕ್ಕೆ 50 ರೂ ಆದರೂ ಅಚ್ಚರಿ ಬೇಡ ಎನ್ನುವ ಆತಂಕವನ್ನು ತೋಡಿಕೊಳ್ಳುತ್ತಾರೆ.ಪಡ್ರೆಯವರು ಈ ಬಗ್ಗೆ ಚೆನ್ನಾಗಿ ವಿವರಿಸುತ್ತಾರೆ ಸಂಪಾದಕೀಯವಂತೂ ಚೆನ್ನಾಗಿದೆ ವಾಸ್ತವನ್ನು ತೆರೆದಿಟ್ಟಿದ್ದಾರೆ.ನನ್ನಂತಹ ಹಲವಾರು ಯುವಕರಿಗೆ ಈ ಸಂಪಾದಕೀಯ ಉತ್ತೇಜನ ನೀಡೀತು ಎನ್ನುವ ನಂಬಿಕೆ ನನಗಿದೆಯಾದರೂ ಹಳ್ಳಿಯಲ್ಲಿ ಯುವಕರಿದ್ದಾರಾ? ಎಂದು ಒಳ ಮನಸ್ಸು ಕೇಳಿತು..!. ಈಗ ಅಕ್ಕಿಗೆ 15 - 20 ರೂ ಆದಾಗ ಬಡವರ ಚಿಂತೆ ಹೇಳತೀರದು.ಹಾಗಾದರೆ ಮುಂದಿನ ದಿನದ ಬಗ್ಗೆ ಈಗ ನೀವು ಚಿಂತೆ ಮಾಡಿ....

ನಮ್ಮ ಆಸುಪಾಸಿನಲ್ಲಿ ನೋಡಿದರೆ ಸುಮಾರು 10 - 15 ವರ್ಷಗಳ ಹಿಂದೆ ಎಲ್ಲಿ ನೋಡಿದರು ಗದ್ದೆಗಳಿದ್ದವು.ನೆಮ್ಮದಿಯ ಊಟವಿತ್ತು.[ಈಗ ಇಲ್ಲ ಅಂತ ಅಲ್ಲ] ಆಗ ಅಬ್ಬಬ್ಬಾ ಅಂದರೆ 5 ರಿಂದ 6 ರೂ ಅಕ್ಕಿಯ ಬೆಲೆ.ಆದರೆ ಈಗ ನೋಡಿ ಅಂದು ಗದ್ದೆ ಇದ್ದೆಡೆಯೆಲ್ಲಾ ಅಡಿಕೆ ತೋಟಗಳಾಗಿ ಮಾರ್ಪಾಡಾಗಿದೆ. ಕಾರಣ ಗದ್ದೆಯ ಕೆಲಸಕ್ಕೆ ಕೂಲಿಯಾಳುಗಳ ಸಮಸ್ಯೆ.ಹೆಚ್ಚು ಸಂಬಳ ಕೊಡೋಣ ಎಂದರೆ ಲಾಭವಿಲ್ಲ.ಹಾಗಾಗಿ ಯೋಚಿಸಿದ ರೈತರು "ಜಗದ" ಹೊಟ್ಟೆ ತುಂಬಿಸುವ ಬದಲು ತಮ್ಮ ಹೊಟ್ಟೆ ತುಂಬಿಸುವ ದಾರಿಯನ್ನು ಹುಡುಕಿ ಅಡಿಕೆಯ ಕಡೆಗೆ ಪ್ರಯಾಣ ಬೆಳೆಸಿದರು.ಈಗ ಅಲ್ಲೂ ಕಾರ್ಮಿಕರ ಸಮಸ್ಯೆಯಿದ್ದರೂ ಸುಧಾರಿಸಿಕೊಂಡು ಹೋಗುತ್ತಾರೆ.ನೀವು ಹಿಂದಿನ ಪದ್ದತಿಯನ್ನು ಗಮನಿಸಿ ಪ್ರತಿ ಮನೆ ಮನೆಯಲ್ಲಿ ಮನೆ ತುಂಬಿಸುವ ಸಂಪ್ರದಾಯವಿತ್ತು ಅದನ್ನು ಹೊಸ್ತು , ಹುತ್ತರಿ ಅಂತೆಲ್ಲಾ ಕರೆಯುತ್ತಾರೆ.ಅಂದರೆ ನಮ್ಮ ಹೊಲದಲ್ಲಿ ಬೆಳೆದ ಭತ್ತದಿಂದ ಅಕ್ಕಿಯನ್ನು ಮಾಡಿ ಅದರ ಅನ್ನದಿಂದ ದೇವರಿಗೆ ನೈವೇದ್ಯ ಸಮರ್ಪಿಸಿ ನಾವು ಉಣ್ಣುವ ಸಂಪ್ರದಾಯವಿದೆ.ಆದರೆ ಈಗ ಆ ಅಕ್ಕಿಗಾಗಿ ಅಲೆದಾಟ ಶುರುವಾಗಿದೆ.ಗದ್ದೆ ಇರುವ ಕಡೆ ಹುಡುಕಾಡಬೇಕಾದ ಸಂದರ್ಭ ಬಂದಿದೆ.ಮುಂದೆ ಪೇಟೆಯಿಂದಲೇ ಆಮದು ಮಾಡಿಕೊಳ್ಳಬೇಕಾಗಿ ಬರಬಹುದು.!. ಇದಕ್ಕೆಲ್ಲಾ ಕಾರಣ ಹುಡುಕಹೊರಟರೆ ಮೇಲ್ನೋಟಕ್ಕೆ ಕಾರ್ಮಿಕರ ಕೊರತೆಯೇ ಎದ್ದು ಕಾಣುತ್ತದೆ.

ಇನ್ನೊಂದು ಗಮನಿಸಬೇಕಾದ ಹಾಗು ಚಿಂತಿಸಬೇಕಾದ ಸಂಗತಿಯೆಂದರೆ ಜಮೀನಿರುವ ರೈತ ಮುಂದೆ ತನಗೆ ಬೇಕಾದಷ್ಟನ್ನು ಮಾತ್ರಾ ಬೆಳೆದು ಮಾರಾಟ ಮಾಡದೇ ಇದ್ದರೆ?ಆಗ ಅಕ್ಕಿಯ ಬೆಲೆ ಗಗನಕ್ಕೆ ಏರದೇ ಇದ್ದೀತೇ?.ಯೋಚಿಸಬೇಕು.

ಈ ನಡುವೆ ಅಕ್ಕಿ ಇಲ್ಲದಿದ್ದರೇನು ಗೋಧಿ ಇದೆಯಲ್ಲಾ ಎಂದು ನಾವು ಸುಮ್ಮನೆ ಕೂರುವ ಹಾಗಿಲ್ಲ.ಮೊನ್ನೆ ಪತ್ರಿಕೆಯಲ್ಲಿ ಅಂಕಿ ಅಂಶ ಸಹಿತ ವರದಿಯೊಂದು ಬಂದಿದೆ.ಆ ವರದಿಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ಗೋಧಿಯ ಬೆಳೆ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಸುದ್ದಿಯನ್ನು ಈಗಲೇ ಹೇಳಿದ್ದಾರೆ.ಅದರ ಪ್ರಕಾರ ಈ ಬಾರಿ 10 ಲಕ್ಷ ಟನ್ ಗೋಧಿ ಬೆಳೆ ಕಡಿಮೆಯಾಗಿದೆಯಂತೆ.ಅದನ್ನು ಭರ್ತಿ ಮಾಡಬೇಕಾದರೆ ಆಮದು ಮಾಡಿಕೊಳ್ಳಲೇ ಬೇಕು. ಇಲ್ಲವಾದಲ್ಲಿ ಆಹಾರ ಭದ್ರತೆಗೆ ಧಕ್ಕೆ ಬರಲಿದೆ. ಆಮದು ಮಾಡಿಕೊಂಡಾಗ ಬೆಲೆ ಏರಿಕೆ ಸಹಜವಾಗೇ ಆಗುತ್ತಲ್ಲಾ?. ಇದಕ್ಕೆ ಕಾರಣವೇನು?. ಈ ದೇಶ ಕೃಷಿ ಪ್ರದಾನವಾದ ದೇಶವಾದರೂ ಇಲ್ಲಿ ಕೃಷಿಕರಿಗೆ ಸೂಕ್ತ ಸ್ಥಾನ ಮಾನ ಸಿಗದಿರುವುದು ಅಂತ ಒಪ್ಪಿಕೊಳ್ಳಲೇಬೇಕು.

ಇದೆಲ್ಲದರ ಪರಿಣಾಮ ಸಿಗುತ್ತಲಿದೆ.ಇನ್ನಾದರೂ ಈ ಜಗ ಎಚ್ಚೆತ್ತರೆ ಸ್ವಲ್ಪ ಸುಧಾರಿಸೀತು.ಗಂಭೀರವಾಗಿ ಚಿಂತಿಸಿ ನೋಡಿ.

[ಚಿತ್ರ : ಭತ್ತದ ಪೈರಿಲ್ಲದೆ ಬೋಳಾಗಿರುವ ಗದ್ದೆಯ ನೋಟ ;ಈಗ ಹುಲ್ಲು ಬೆಳೆದಿದೆ]

ಕಾಮೆಂಟ್‌ಗಳಿಲ್ಲ: