08 ಫೆಬ್ರವರಿ 2008

ಲೋವೋಲ್ಟೇಜ್...... ಇದು ರೈತರ ಬವಣೆ..

ಸುಳ್ಯ ಎಇಇಯವರೊಂದಿಗೆ ಭಾರತೀಯ ಕಿಸಾನ್ ಸಂಘದ ಸದಸ್ಯರು





ಮೆಸ್ಕಾಂ ವ್ಯಾಪ್ತಿಯ ದ.ಕ.ಜಿಲ್ಲೆಯ ಬಹುತೇಕ ರೈತರಿಗೆ ವಿವಿಧ ಸಮಸ್ಯೆಗಳ ನಡುವೆ ಈಗ ಲೋವೋಲ್ಟೇಜ್ ಸಮಸ್ಯೆ ಕಾಡತೊಡಗಿದೆ.ಹಲವು ಬಾರಿ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಅಪ್ರಯೋಜನವಾಗಿದೆ.ಇದು ಕಳೆದ ಹತ್ತಾರು ವರ್ಷಗಳ ಸಮಸ್ಯೆ.ಈಗ ಈ ಸಮಸ್ಯೆ ಶಾಶ್ವತವೋ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ 4 ಜಿಲ್ಲೆಗಳು ಒಳಗೊಂಡಿದೆ.ಒಟ್ಟು 26322 ಚದರ ಮೀಟರ್ ಜನರಿಗೆ ಪ್ರಯೋಜನವಾಗಿದ್ದು 2 ವೃತ್ತಗಳಲ್ಲಿ 7 ವಿಭಾಗಗಳಿದ್ದು 35 ಉಪವಿಭಾಗಗಳಿವೆ.ಒಟ್ಟು 15,30,054 ಗ್ರಾಹಕರಿದ್ದಾರೆ.ಅದರಲ್ಲಿ 10,38,534 ಗೃಹಬಳಕ 1,39,794 ವಾಣಿಜ್ಯ,1,81,440ಪಂಪುಸೆಟ್ಟು, 17,417 ಇಂಡಸ್ಟ್ರೀ,11,174 ಬೀದಿದೀಪಗಳು ಸೇರುತ್ತವೆ.2006-07ರಲ್ಲಿ 78,69,889 ಲಕ್ಷ ರೂ ಆದಾಯವು ಮೆಸ್ಕಾಂಗೆ ಬಂದಿರುತ್ತದೆ.ಆದರೂ ವ್ಯವಸ್ಥೆ ಸರಿಯಾಗಿಲ್ಲ..!.

ಸದ್ಯ ಪುತ್ತೂರು ಹಾಗು ಸುಳ್ಯ ತಾಲೂಕಿನ ಸಮಸ್ಯೆಯ ಕಡೆಗೆ ನಾನು ಯೋಚಿಸುತ್ತೇನೆ.ಹಾಗೆಂದು ಇತರ ತಾಲೂಕುಗಳಲ್ಲಿ ಸಮಸ್ಯೆ ಇಲ್ಲ ಎಂದೇನಲ್ಲ.ಸುಳ್ಯವು ನನ್ನ ತಾಲೂಕು ಕೇಂದ್ರ,ಪುತ್ತೂರು ತೀರಾ ಪರಿಚಿತ ಪ್ರದೇಶ.

ಪುತ್ತೂರು ತಾಲೂಕಿನ ಉಪವಿಭಾಗದಲ್ಲಿ 15 ಸಾವಿರ ಪಂಪ್ ಸೆಟ್ಟುಗಳು ಕಾರ್ಯನಿರ್ವಹಿಸಿದರೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಗೃಹಬಳಕೆಯ ಸಂಪರ್ಕಗಳಿವೆ.ಇದರಿಂದ ಮುಂದೆ ಬಂದರೆ ಸುಳ್ಯ ತಾಲೂಕು.ಇಲ್ಲಿ ಸುಮಾರು 7 ಸಾವಿರ ಪಂಪ್ ಸೆಟ್ಟುಗಳು ,ಸುಮಾರು 18 ಸಾವಿರ ಗೃಹಬಳಕೆಯ ಸಂಪರ್ಕಗಳಿವೆ.ಆದರೆ ಇಲ್ಲಿನ ಯಾವುದೇ ಕೃಷಿಕರಿಗೆ ತೋಟಗಳಿಗೆ ನೀರುಣಿಸಲಾಗದೇ ಪರಿತಪಿಸಬೇಕಾಗಿದೆ.ಕಾರಣ ಲೋವೋಲ್ಟೇಜ್. ಅಂದರೆ ಒಂದು ತಂತಿಯಲ್ಲಿ 230 ವೋಲ್ಟೇಜ್ ಇರಬೇಕಾದಲ್ಲಿ ಕೇವಲ 90 ಅಥವಾ ಅದಕ್ಕಿಂತ ಕಡಿಮೆಯೇ...!. ಹಾಗಾದರೆ ಎಂತಹ ಪರಿಸ್ಥಿತಿ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ.!?.

ಹಾಗೆಂದು ಈ ಸಮಸ್ಯೆ ಮೆಸ್ಕಾಂಗೆ ಗೊತ್ತಿಲ್ಲ ಎಂದೇನಲ್ಲ.ತಿಳಿದಿದ್ದರೂ ಸುಮ್ಮನಿರುತ್ತದೆ.ಹೋಗಿ ಕೇಳಿದರೆ ಹೌದು..ಹೌದು .. ಅದು ಕೆಪಿಟಿಸಿಎಲ್ ನವರಿಂದ ಸಮಸ್ಯೆಯಾಗುತ್ತಿರುವುದು ಎಂದು ನಮ್ಮಲೇ ಗೋಗರೆಯುತ್ತಾರೆ..!ಆದರೆ ಇವರಿಗೂ ಜವಾಬ್ದಾರಿ ಇದೆ ಎನ್ನುವ ಕನಿಷ್ಟ ತಿಳುವಳಿಕೆಯೂ ಇಲ್ಲ ಎನ್ನುವುದು ಅವರ ಬಂಡವಾಳವನ್ನು ತೋರಿಸುತ್ತದೆ.

ಕೃಷಿಕರದ್ದೇ ಸಂಘಟನೆಯಾದ ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಘಟಕವು ಗುರುವಾರದಂದು ಸುಳ್ಯದ ಮೆಸ್ಕಾಂ ಕಚೇರಿಗೆ ನಿಯೋಗದೊಂದಿಗೆ ತೆರಳಿ ಸುಮಾರು 10 ಅಂಶಗಳನ್ನು ಮುಂದಿಟ್ಟು ಎಇಇ ಶಿವಕುಮಾರ್ ಅವರೊಂದಿಗೆ ಚರ್ಚಿಸಿತು.ಆಗ ಅವರದು ಭರವಸೆ... ಹಾಗೆ ಮಾಡುತ್ತೇವೆ... ಹೀಗೆ ಅದು ಸಮಸ್ಯೆ.... ಅದು ಕೆಪಿಟಿಸಿಎಲ್ ಅವರ ಸಮಸ್ಯೆ.... ಮೇಲಾಧಿಕಾರಿಯನ್ನು ಕೇಳುತ್ತೇನೆ... ಎನ್ನುವ ಉತ್ತರ ಬಿಟ್ಟರೆ ಖಡಾಖಂಡಿತ ಉತ್ತರ ಸಿಗಲೇ ಇಲ್ಲ.ಇನ್ನೊಂದು ವಿಷಯ ಎಂದರೆ ಎಇಇಯವರು ಹೊಸಬರಾದ್ದರಿಂದ ಅವರಲ್ಲಿ ಅನುಭವದ ಕೊರತೆ ಕಂಡುಬಂದಿತ್ತು.ಆದರೆ ಭರವಸೆಗೆ ಕೊರತೆ ಇರಲಿಲ್ಲ..!

ಭಾರತೀಯ ಕಿಸಾನ್ ಸಂಘದ ಸುಳ್ಯ ಘಟಕ ಎಇಇ ಮುಂದಿಟ್ಟ ಅಂಶಗಳು ಇವು..

* ನೀರಾವರಿ ಪಂಪ್ ಸೆಟ್ಟುಗಳಿಗೆ ನೀಡುವ ವಿದ್ಯುತ್ ಲೋವೋಲ್ಟೇಜ್ ನಲ್ಲಿರುತ್ತದೆ.

*ಪಂಪ್ ಸೆಟ್ಟುಗಳಿಗೆ ನೀಡುವ ವಿದ್ಯುತ್ ನಲ್ಲಿ ನಿರಂತರತೆ ಇರುವುದಿಲ್ಲ

*ಸಾಯಂಕಾಲ 6 ರಿಂದ 10 ಗಂಟೆಯೊಳಗೆ ಅನಿಯಮಿತ ವಿದ್ಯುತ್ ಕಡಿತ

*ಕೃಷಿಕರಿಗೆ ಪಂಪ್ ಸೆಟ್ಟುಗಳಿಗೆ ಪ್ರತಿದಿನ 12 ಗಂಟೆ ವಿದ್ಯುತ್

*ತಾಲೂಕಿಗೆ ಹಲವೆಡೆ ಹಗಲು ಕೇವಲ 4 ಗಂಟೆ ಮಾತ್ರಾ ವಿದ್ಯುತ್ ಪೂರೈಕೆಯಾಗುತ್ತದೆ.

ಈ ಸಮಸ್ಯೆಗಳಿಂದ ಅನುಭವಿಸುವ 10 ತೊಂದರೆಗಳನ್ನು ತಿಳಿಸಲಾಯಿತು.

ಭಾರತೀಯ ಕಿಸಾನ್ ಸಂಘವು ಇಷ್ಟೆಲ್ಲಾ ಪ್ರಯತ್ನ ನಡೆಸುತ್ತಿರುವಾಗ ರೈತರ ಬಗ್ಗೆ ಮಾತನಾಡುವ ನಮ್ಮ ಜನಪ್ರತಿನಿಧಿಗಳು ವಿದ್ಯುತ್ ಸಮಸ್ಯೆಯ ಬಗ್ಗೆ ತುಟಿಬಿಚ್ಚಿಲ್ಲ.ಅವರು ಏನಿದ್ದರೂ ಉಚಿತ ವಿದ್ಯುತ್ ನೀಡುವ ಯೋಚನೆಯಲ್ಲಿದ್ದಾರೆ.ಇಂತಹ ಲೋವೋಲ್ಟೇಜ್ ಸಮಸ್ಯೆಗಳ ನಡುವೆಯೇ ಉಚಿತ ವಿದ್ಯುತ್ ಬಗ್ಗೆ ರೈತರು ಕನಸು ಕಾಣಬಹುದೇ..? ಈಗಿನ ಪರಿಸ್ಥಿತಿಯಲ್ಲಿ ಉಚಿತ ಬೇಡ ಗುಣಮಟ್ಟದ ವಿದ್ಯುತ್ ನೀಡಿದರೆ ಸಾಕು..!

ಭಾರತೀಯ ಕಿಸಾನ್ ಸಂಘದ ನಿಯೋಗದಲ್ಲಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಉಪಾದ್ಯಕ್ಷ ಪ್ರಭಾಕರ ರೈ, ಕೋಶಾಧಿಕಾರಿ ಆನಂದ ಗೌಡ, ಜತೆ ಕಾರ್ಯದರ್ಶಿ ಈಶ್ವರ ಭಟ್,ಗುತ್ತಿಗಾರು ಘಟಕದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ,ಕಾರ್ಯದರ್ಶಿ ಕುಮಾರಸ್ವಾಮಿ ಮೇಲ್ತೋಟ , ಎಣ್ಮೂರು ಘಟಕದ ಅಧ್ಯಕ್ಷ ರಮೇಶ್ ಕೋಟೆ ಭಾಗವಹಿಸಿದ್ದರು.

ಕೊನೆಯ ಮಾತು : ಕಿಸಾನ್ ಸಂಘದ ಪ್ರಮುಖರು ಮೆಸ್ಕಾಂ ಎಇಇಯವರಲ್ಲಿ ನೀವು ನಗರಕ್ಕೆ ವಿದ್ಯುತ್ ನಿರಂತರ ಕೊಡುತ್ತೀರಲ್ಲ ರೈತರಿಗೆ ಯಾಕೆ ಸಿಂಗಲ್ ಫೇಸ್ ಕೂಡಾ ಕೊಡುವುದಿಲ್ಲ ಎಂದಾಗ ಹಾಗಲ್ಲ ನಗರದಲ್ಲಿ ರೆವೆನ್ಯೂ ಇರುತ್ತಲ್ಲಾ ಅದಕ್ಕೆ ಕೊಡುತ್ತೇವೆ ಎಂದರು ಎಇಇ. ಹಾಗಾದ್ರೆ ಅದರ ಅರ್ಥ ಏನು ಹಳ್ಳಿಗಳಿಂದ ರೆವೆನ್ಯೂ ಬರೋದಿಲ್ವೇ..?. ಹಾಗೆ ನೋಡಿದ್ರೆ ಅತ್ಯಂತ ಪ್ರಾಮಾಣಿಕವಾಗಿ ರೆವೆನ್ಯೂ ಬರೋದು ಹಳ್ಳಿಗಳಿಂದಲೇ ಸ್ವಾಮಿ..! ಇನ್ನಾದ್ರೂ ಅರ್ಥ ಮಾಡ್ಕೊಳ್ಳಿ..

ಕಾಮೆಂಟ್‌ಗಳಿಲ್ಲ: