15 ಫೆಬ್ರವರಿ 2008

ಒಂದು ದಿನದ ಪ್ರೀತಿಯಲ್ಲಿ....



ಪ್ರೀತಿ.....!!!.

ಈ ಎರಡಕ್ಷರದ ಹಿಂದೆ ಹತ್ತಾರು ಪ್ರಶ್ನೆಗಳು.... ಕೆಲವೊಂದು ನಿಗೂಢಗಳು.....

ಪ್ರೀತಿಸಲು ಕಾರಣ ಬೇಕೇ?.. ಆದರೆ ಕಾರಣವಿಲ್ಲದೆ ಪ್ರೀತಿಸಲು ಸಾಧ್ಯವೇ..? ಪ್ರೀತಿಸಲು ಒಂದೇ ದಿನ ಸಾಕೇ...? ಸಾಕಾದರೆ ಅದು ಎಂತಹ ಪ್ರೀತಿ...?

ನಾನು ಹೀಗೆಯೇ ಪ್ರೀತಿಯ Definitionಗಾಗಿ ತುಂಬಾ ತಡಕಾಡಿದೆ.ಉತ್ತರ ಸಿಕ್ಕಿದ್ದು ಕೊನೆಗೂ "ಪ್ರೀತಿ" ಅಂತಲೇ...
ಅದನ್ನು ವ್ಯಾಖ್ಯಾನಿಸುವುದು ಹೇಗೆ?.ಎರಡು ಮನಸ್ಸುಗಳ ಬೆಸುಗೆಯೇ..? ಮನಸ್ಸುಗಳ ಭಾವದ ಹರಿದಾಟವೇ.. ಭಾವನೆಯ ಸಂಚಾರವೇ...? ಇಲ್ಲ ಎದು ಸಾಧ್ಯವಿಲ್ಲ...! ಹಾಗಿದ್ದರೆ ಅದೆಲ್ಲವನ್ನು ಒಂದೇ ದಿನದಲ್ಲಿ ವ್ಯಕ್ತಪಡಿಸಲು ಸಾಧ್ಯವಾ..?

ಪ್ರೀತಿಯನ್ನು ತೋರ್ಪಡಿಸುವುದು ಹೇಗೆ?

ನನಗೆ "ನಿನ್ನಲ್ಲಿ" ಪ್ರೀತಿಯಿದೆ ಎನ್ನುವುದನ್ನು ಹೇಗೆ ವ್ಯಕ್ತಪಡಿಸಲಿ? ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ-ತಂಗಿ.... ಸೇರಿದಂತೆ ಸಮಾಜದ ಸಮಸ್ತ ಜೀವಿಗಳಲ್ಲಿ ಪ್ರೀತಿಯಿದೆ ಎನ್ನುವುದನ್ನು ಹೇಗೆ ಹೊರಹಾಕಲಿ. ಅಲ್ಲ.. ಪ್ರೀತಿಯನ್ನು ಒಂದೇ ದಿನದಲ್ಲಿ ವ್ಯಕ್ತ್ಯಪಡಿಸಲು ಸಾಧ್ಯನಾ... ಅಂತ ನನಗೆ ಪದೇ ಪದೇ ಕಾಡುತ್ತದೆ.ಹಾಗೆ ಸಾಧ್ಯವಾಗಿದ್ದರೆ ಇಂದು ಇಷ್ಟು ತೊಳಲಾಟವೇಕೆ.? ನನಗನ್ನಿಸುವುದು ಆ ಒಂದು ದಿನದ ಪ್ರೀತಿಯಲ್ಲಿ ನಿಜವಾದ ಪ್ರೀತಿಯ ಸ್ಪರ್ಶ ಇಲ್ಲ... ಅದು "ಬೇರೆಯೇ" ಅರ್ಥ ಪಡೆಯುವ ಪ್ರೀತಿ ಅಂತ ನಾನು ಭಾವಿಸಿಕೊಂಡಿದ್ದೇನೆ.

ಕೆಂಗುಲಾಬಿ.... ಇದಕ್ಕೆ ಸಾತ್ ನೀಡುವ ಹಚ್ಚ ಹಸುರಿನ ಗಿಡ... ಅದರ ನೋಟವೇ ಚಂದ...ಪ್ರೀತಿಯ ಇನ್ನೊಂದು ರೂಪ...

ಅದರ ಸ್ಪರ್ಶವೇ ಅಧ್ಬುತ.... ಅನುದಿನವೂ ಅದು ಹಾಗೇ ಅಲ್ಲೇ ಇದ್ದರೆ ಎಷ್ಟು ಚೆನ್ನ.... ಮುಂಜಾನೆಯ ಒಂದು ನೋಟವೇ ಇಡೀ ದಿನದ ಬದುಕಿಗೆ ಸ್ಪೂರ್ತಿ.ಅಂತಹ ಗುಲಾಬಿಯನ್ನು ಒಂದು ದಿನದ ಪ್ರೀತಿಗಾಗಿ ಏಕೆ ನೀಡಬೇಕು.ಒಂದೇ ದಿನದಲ್ಲಿ ಬಾಡುವ ಹೂವನ್ನು ಹಚ್ಚ ಹಸುರಾಗಿದ್ದ ಗಿಡದಿಂದ ಏಕೆ ಕೀಳಬೆಕು?.ಮರುದಿನಕ್ಕೆ ಬಾಡಿ ಹಳತಾಗುವ ಆ ಸನ್ನಿವೇಶಕ್ಕೆ ಎದೆಮಾಡಿಕೊಡುವ ಬದಲು ಅನುದಿನವೂ ಅದೇ "ಪ್ರೀತಿ" ಹಚ್ಚ ಹಸುರಾಗಿದ್ದರೆ ಏನು ಚಂದ. ಹಾಗೆಂದೆ ಆ ಹೂವು ಅನುದಿನವೂ ಹಾಗೇ ಇರುತ್ತದೆಂಬ ಭ್ರಮೆ ನನಗಿಲ್ಲ.

ಪ್ರೇಮಿಗಳು....

ಪ್ರೀತಿಯ ಭಾಗವೇ ಪ್ರೀಮಿಗಳು.ಒಂದು ದಿನದ ಪ್ರೇಮಿಗಳ ದಿನಾಚರಣೆ ಮಾಡದ ಕಾರಣಕ್ಕೆ "ಬಲಿದಾನ"ಗೈದವರೂ ಪ್ರೇಮಿಗಳೇ. ಎಂತಹ "ಕುರುಡು"....

ನನಗೆ ತಿಳಿದ ಒಂದು ಪ್ರಕರಣ.....

ಪುತ್ತೂರಲ್ಲಿ ಡಿಪ್ಲೋಮಾ ಓದುತ್ತಿದ್ದಾಗಿನ ಸಮಯ...ನನ್ನ ಮಿತ್ರ ರಾಜೇಶ ಒಬ್ಬಳು ಹುಡುಗಿಯ ಹಿಂದೆ ಬಿದ್ದ.ಅದಕ್ಕೆ ಪ್ರೀತಿಯ ಹೆಸರು ನೀಡಿಕೊಂಡ.ಅವಳಿಗೆ ಅರಿವಿಲ್ಲದಂತೆ ಅವಳ ಹಿಂದೆ ಕಾಲೇಜು ಕಾರಿಡಾರ್.. ಹೋಟೇಲ್... ಬಸ್ ಸ್ಟ್ಯಾಂಡ್ .. ಹೀಗೆ ತಿರುಗಾಡಿದ.ಅಷ್ಟೂ ತಿರುಗಾಡಿದ್ದು ಎಂಬ ಎರಡು ಶಬ್ದ ಹೇಳಲು.ಕೊನೆಗೂ ಧೈರ್ಯ ತಂದು ಹೋಟೇಲ್ ಒಂದರಲ್ಲಿ ಪತ್ರವೊದನ್ನು ವೋಡಿದ.ಅದು ದೊಡ್ಡ ಸುದ್ದಿಯಾಯಿತು.ಕಾಲೇಜಿಗೂ ದೂರು ಹೋಯಿತು. ಆತ ಕಾಲೇಜಿನಿಂದ ಡಿಬಾರ್...!!.ಮರುದಿನ ರೂಂನಲ್ಲಿ ನಿದ್ರೆ ಮಾತ್ರೆ ತಿಂದು ಸಾವಿನತ್ತ ಹೊರಟ.ಮಿತ್ರರ ಸಕಾಲಿಕ ಪ್ರಯತ್ನದಿಂದ ಬದುಕಿದ.ಇಂದಿಗೂ ಆತ ಇದ್ದಾನೆ. ಪ್ರೀತಿ ಹಾಗಲ್ಲ ಅಂತಾನೆ...!]

ಈ ಪ್ರಕರದಣಲ್ಲಿ ನಾನು ಗಮನಿಸಿದ್ದು, ಆತನ ಪ್ರೀತಿ ಯಾವ ದಿಕ್ಕಿನಲ್ಲಿತ್ತು? ಆಲ್ಲಿ ಕೇವಲ ಒಂದು "ಬಯಕೆ'ಯ ಹಿಂದಿನ ಪ್ರೀತಿ ಮಾತ್ರಾ ಕಾಣುತ್ತಿತ್ತು. ಅದಕ್ಕಾಗಿ ಆತ ಅಲೆದಾಡಿದ... ನಿರಾಶನಾದ... ಸಾವಿನತ್ತ ಪ್ರಯಾಣಿಸಿದ... ಇದು ವಿಚಿತ್ರ.

ಇನ್ನೊಂದು ಸಂಗತಿ.

ಅದೇ ವರ್ಷ ಒಬ್ಬಳು ಯುವತಿಯ ಆತ್ಮಹತ್ಯೆ ನಡೆಯಿತು.ಅವಳು ವಿವಾಹಿತಳು.ಅವರ ವಿವಾಹದ ಹಿಂದೆ 1 ವರ್ಷದ ಪ್ರೇಮವಿತ್ತು.ಅಲ್ಲಿಗೆ ಅವರಿಬ್ಬರ ಸಂಬಂಧ ಕೊನೆಗೊಂಡಿತ್ತು.ಈ ಪ್ರಕರಣದಲ್ಲೂ ಪ್ರೀತಿಯ ಹಿಂದೆ ಒಂದು ಬಯಕೆ ಮಾತ್ರಾ ಎನ್ನುವುದು ಅರಿವಾಗುತ್ತದೆ.

ಇಂದು ಎಲ್ಲೆಲ್ಲೂ ನೋಡಿ.ಪ್ರೀತಿಯ ಶಬ್ದ ಹೆಚ್ಚು ಅಲೆದಾಡುವುದು ಕಾಲೇಜು ಕ್ಯಾಂಪಸ್ ಗಳಲ್ಲೇ.ನೀವು ಅಲ್ಲೆಲ್ಲಾ ಗಮನಿಸಿ ನೋಡಿ ಅಲ್ಲಿ ಈ ಪ್ರೀತಿಗೆ " ಕಾಮ" ದ ಸ್ಪರ್ಷ ಕಾಣುತ್ತದೆ. ಅಥವಾ "ಮಜಾ"ದ ಪರಿಕಲ್ಪನೆ ಕಾಣುತ್ತದೆ. ಅದಕ್ಕೆ ಒಂದೆರಡು ವರ್ಷದ ನಂತರ ಅರ್ಥವೇ ಇರುವುದಿಲ್ಲ.ಇನ್ನೂ ಪಕ್ವವಾಗದ ಮನಸ್ಸುಗಳಲ್ಲಿ ಪ್ರೀತಿ ಆ ಅರ್ಥದಲ್ಲಿ ,ಆ ದಾರಿಯಲ್ಲಿ ಸಾಗುತ್ತಿದೆ. ನಗರದಲ್ಲಿ ಅನೇಕ ಪ್ರಕರಣಗಳು ಪ್ರೀತಿ, ಪ್ರೇಮದ ಹೆಸರಲ್ಲಿ ಬಯಲಾಗುತ್ತಿವೆ.
ಇದಕ್ಕೆ ಕಾರಣವೇನು?.

ಇಂದು ಯುವಜನತೆಯನ್ನು ಆಕರ್ಷಿಸಲು ಪ್ರೀತಿ.. ಪ್ರೀತಿ, ಪ್ರೇಮದ ಸಿನಿಮಾಗಳು..., ಮಾಧ್ಯಮಗಳು..., ಎಲ್ಲೆಂದರಲ್ಲಿ ಅದೇ ವಿಚಾರಗಳನ್ನು ನೋಡುವ ಅಪ್ರಬುದ್ಧ ಮನಸ್ಸುಗಳು ಅದನ್ನೇ ತಮ್ಮೊಳಗೆ ಆಹ್ವಾನಿಸುತ್ತಾರೆ.ಅದರ ಪರಿಣಾಮವೇ ಇಂದಿನ ದಿನ... ಒಂದು ದಿನದ "ಪ್ರೀತಿ"ಗೆ ಮಹತ್ವ...

"ಪ್ರೀತಿ"ಯ ಎರಡಕ್ಷರದಲ್ಲಿ ಮಾನಸಿಕವಾಗಿ ಅದ್ಧುತ ಅನುಭವ..... ಅಲ್ಲಿ ಸಿಗುವ ಮಾನಸಿಕ ಸುಖ- ಸಂತಸ.. ಅಗಾಧತೆ... ಅಗಲಿಕೆಯ ನೊವು.... ಹೇಗೆ ವಿವರಿಸುವುದು.

ಇದು ಕೇವಲ ಗಂಡು-ಹೆಣ್ಣಿಗೇ ಮೀಸಲಲ್ಲ. ಮಿತ್ರ , ಅಣ್ಣ-ತಮ್ಮ , ಅಕ್ಕ -ತಂಗಿ... ಹೀಗೆ ಯಾರಲ್ಲಿಬೇಕಾದರೂ ಪ್ರಿತಿ ಇರಬಹುದಲ್ವಾ......

ಆದರೂ ನನಗನ್ನಿಸುತ್ತದೆ " ಒಂದೇ ದಿನದ ಪ್ರೀತಿ " ಶಾಶ್ವತವಾ...ಅದು ಸಾಧ್ಯಾನಾ......?

ಕಾಮೆಂಟ್‌ಗಳಿಲ್ಲ: