09 ಏಪ್ರಿಲ್ 2021

3 ಸಾವಿರ ರೂಪಾಯಿಗೆ ಬೆಂಗಳೂರಿಗೆ ಹೋಗಬೇಕಾಗಿಲ್ಲ , ಭೂಮಿ ಇದೆ ಎಂದರು ಅಪ್ಪ

 


ಸುಮಾರು  20  ವರ್ಷದ ಹಿಂದಿನ ಮೊದಲ ಹೆಜ್ಜೆ ಅದು.

ಆಗ ತಾನೆ ‌ ಇಲೆಕ್ಟ್ರೋನಿಕ್ಸ್‌& ಕಮ್ಯುನಿಕೇಶನ್ ಡಿಪ್ಲೊಮಾ ಮುಗಿಸಿ ಇಂಜಿನಿಯರಿಂಗ್‌ ಮಾಡುವ ಹಂಬಲ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಕೆಲಸಕ್ಕೆ ಹೋಗುವ ಮನಸ್ಸು. ಯಾವ ಆಯ್ಕೆ ಎಂದು ಅಪ್ಪನ ಮುಂದೆ ಬಂದು ನಿಂತೆ. 

ಅಪ್ಪ ಹೇಳಿದ್ದು ಹೀಗೆ ,"‌ ಯಾವುದೇ ಕೋಟ ಇಲ್ಲದ ನಮಗೆ ಮೆರಿಟಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದರೆ ಹೋಗು, ಯಾರಲ್ಲೂ ಸೀಟಿಗಾಗಿ ಕೇಳಲು ಹೋಗುವುದಿಲ್ಲ, ದಮ್ಮಯ್ಯ ಹಾಕಲು ಹೋಗುವುದಿಲ್ಲ. ನನಗೆ ಕಲಿಸಿದ ಪಾಠ ಅದು. ಒಂದು ವೇಳೆ ಸಿಕ್ಕಿದರೆ ಎಷ್ಟು ಖರ್ಚಾದರೂ ಸರಿ ಕಲಿಸುವೆ. ಇಲ್ಲದೇ ಇದ್ದರೆ ಕೆಲಸ ನೋಡು" ಎಂದರು.  ನಾಳೆಯೇ ಹೋಗುವ ಬೇಕಾದರೆ ಬೆಂಗಳೂರು ಹೋಗುವ, ನನ್ನ ಚಿಕ್ಕಯ್ಯನಲ್ಲಿ ಮಾತನಾಡುವೆ ಎಂದರು. ತಕ್ಷಣವೇ ಅರ್ಜಿ ಹಾಕಿದೆ. ಡಿಪ್ಲೊಮಾದಲ್ಲಿ ಫಸ್ಟ್‌ ಕ್ಲಾಸ್‌ ಮಾರ್ಕ್‌ ಇತ್ತು. ಇಂಜಿನಿಯರಿಂಗ್‌ ಗೆ ಸೀಟು ಸಿಗಬಹುದೆಂದ ಆಶಾವಾದಲ್ಲಿದ್ದೆ. ಕೌನ್ಸಿಲಿಂಗ್‌ ಗೆ ಬೆಂಗಳೂರಿಗೆ ಅಪ್ಪನ ಜೊತೆ ಹೋದೆ. ಮೀಸಲಾತಿ ಇಲ್ಲದ ನನಗೆ ಸೀಟು ಸಿಗಲಿಲ್ಲ.ಅಪ್ಪನೂ ಏನೂ ಹೇಳಲಿಲ್ಲ. ಬೆಂಗಳೂರಲ್ಲಿ ಅಪ್ಪನ ಚಿಕ್ಕಯ್ಯನ ಜೊತೆ ಮಾತನಾಡಿದ್ದಾಯಿತು. ಯಾವುದೇ ದು:ಖ ಇಲ್ಲದೆ ಬೆಂಗಳೂರಿನಿಂದ ವಾಪಾಸ್‌ ಮನೆಗೆ ಬಂದಾಗ ನನ್ನ ವಯಸ್ಸು 22. 

ಹುಚ್ಚು ಮನಸ್ಸು. ಏನಾದರೂ ಮಾಡಲೇಬೇಕು. ಮಿತ್ರರೆಲ್ಲರೂ ಒಬ್ಬೊಬ್ಬರು ಒಂದೊಂದು ಯೋಚನೆಯಲ್ಲಿದ್ದರು. ಜೊತೆಯಲ್ಲಿದ್ದ ಒಂದಿಬ್ಬರು ಇಂಜಿನಿಯರಿಂಗ್‌ ಮಾಡಿದರೆ ಇನ್ನೂ ಕೆಲವರು ಕೆಲಸದ ನಿಮಿತ್ತ ಬೆಂಗಳೂರು ಬಸ್ಸು ಹತ್ತಿದರು.  ನಾನೂ ಬೆಂಗಳೂರು ಬಸ್ಸು ಹತ್ತಿದೆ. ಅಪ್ಪನ ಕೈಯಿಂದ ಹಣ ಪಡೆದು ಉದ್ಯೋಗದ ಕನಸಿನಲ್ಲಿ ಬೆಂಗಳೂರು ಬಸ್ಸಿಗೆ ಹತ್ತಿದ ನಾನು ಬಸ್ಸು ಇಳಿಯುವಾಗ ಮುಂಜಾನೆ. ಬೆಳಕು ಹರಿಯಲಿಲ್ಲ. ಮಿತ್ರರೆಲ್ಲಾ ಸೇರಿ ಬಸ್‌ ಸ್ಟ್ಯಾಂಡ್‌ ಬಳಿ ಗಂಟೆ ಲೆಕ್ಕದಲ್ಲಿ ಸಿಗುತ್ತಿದ್ದ ಅತಿಥಿ ಗೃಹದಲ್ಲಿ ಕೊಠಡಿ ಮಾಡಿ ಇಂಟರ್‌ ವ್ಯೂ ಗೆ ತೆರಳಿದ್ದಾಯಿತು. ಅದು ಆಗಿನ ಬಿಪಿಎಲ್‌ ಕಂಪನಿ. ಇಂಟರ್‌ ವ್ಯೂನಲ್ಲಿ ಪಾಸಾದಾ ನಮ್ಮ ಕೆಲವು ಮಿತ್ರರಲ್ಲಿ ನಾನೂ ಒಬ್ಬ. ಸಂಬಳ ಕೇಳಿದಾಗ ಆಗಿನ ದಿನದಲ್ಲಿ 3000  ರೂಪಾಯಿ..!. 6  ತಿಂಗಳ ಬಳಿಕ ವೇತನ ಏರಿಕೆ ಬಗ್ಗೆ ಹೇಳಿದ್ದರು.  15  ದಿನಗಳ ನಂತರ ಕಂಪನಿಗೆ ಸೇರಲು ಹೇಳಿದ್ದರು. 

ಎಲ್ಲಿಗೂ ಹೋಗದೆ ಮನೆಗೆ ಬಂದು ಅಪ್ಪನ ಜೊತೆ ವಿಷಯ ಹೇಳಿದಾಗ ಅಪ್ಪ ಹೇಳಿದ್ದು," 3000  ರೂಪಾಯಿ ಸಂಬಳಕ್ಕೆ ಬೆಂಗಳೂರು ಹೋಗಬೇಕಾಗಿಲ್ಲ, ಭೂಮಿ ಇದೆ. ಅದನ್ನೇ ನೋಡಿಕೊಂಡರೆ ಸಾಕು. ಇದೆಲ್ಲಾ ಮತ್ಯಾರಿಗೆ. ಕೃಷಿ ಆಗಿದೆ, ಇನ್ನೂ ಸ್ವಲ್ಪ ಕೃಷಿ ಮಾಡಲು ಇದೆ." ಎಂದರು. ನನ್ನ ಅಪ್ಪ ಹಾಗೆಯೇ, ಒಂದೇ ಮಾತು. ಆ ನಿಲುವಿನಲ್ಲಿ ಯಾವತ್ತೂ ಬದಲಾವಣೆ ಇರದು. ಮತ್ತೆ ಮತ್ತೆ ಕೇಳಿದಾಗಲೂ ಅದನ್ನೇ ಹೇಳಿದರು. ಕೊನೆಗೆ ಹೇಳಿದರೂ, ಎಷ್ಟಾದರೂ ಕೊನೆಗೆ ಬರಬೇಕಾದ್ದು ಕೃಷಿಗೇ, ವಯಸ್ಸಾದ ಮೇಲೆ ಬಂದು ಏನು ಮಾಡುವಿ ? ಈ ಭೂಮಿ ಮಾರುವುದಾ ಎಂದು ಕೇಳಿದರು. ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಆಗ ಒಳಗೊಳಗೇ ಸಿಟ್ಟಾಗುತ್ತಾ ಸುಮ್ಮನೆ ಕುಳಿತೆ. ಅಂದಿನಿಂದ ಯಾವತ್ತೂ ಅಪ್ಪ ನನಗೆ ಖರ್ಚಿಗೆ ಹಣ ಇಲ್ಲ ಎಂದದ್ದೇ ಇಲ್ಲ. ಏನೇ ಖರ್ಚು ಮಾಡಿದರೂ ತೆಗೆದು ತೆಗೆದು ಕೊಡುತ್ತಿದ್ದರು. ಅವರಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ,  ನನಗೆ ಎಲ್ಲೂ ಯಾವುದೇ ತೊಂದರೆ ಆಗದಂತೆ ಅವರ ಜೀವಿತದ ಕೊನೆಯವರೆಗೂ ನೋಡಿಕೊಂಡಿದ್ದರು. ಅನೇಕ ಬಾರಿ ಸ್ವತ: ಕಲಿಯುವಿಕೆಗೇ ಅವಕಾಶ ಕೊಟ್ಟಿದ್ದರು. ಆಗಾಗ ಹೇಳುತ್ತಿದ್ದೆ, ನನ್ನ ಜೊತೆಗೆ ಇದ್ದವರಿಗೆ ಈಗ ಸಂಬಳ ಇಷ್ಟಂತೆ.. ಇಷ್ಟಂತೆ ಎಂದು. (ಈಗ ನನ್ನ ಜೊತೆ ಸೇರಿದವರಿಗೆ 1.5 ಲಕ್ಷ ಸಂಬಳವಂತೆ). ಅಪ್ಪ ಹೇಳಿದ್ದು, ಅಷ್ಟು ಸಂಬಳದಲ್ಲಿ  ಖರ್ಚಾಗಿ ಎಷ್ಟು ಉಳಿಯುತ್ತದೆಯಂತೆ..? ಅದು ನಾನು ನಿನಗೆ ಕೊಡುತ್ತೇನೆ ಎನ್ನುತ್ತಿದ್ದರು. ಅದನ್ನು ಮಾಡುತ್ತಿದ್ದರು ಕೂಡಾ. ಈಗ ಅನಿಸುತ್ತದೆ, ಅವರು ಕೃಷಿಯಿಂದ ಅದನ್ನೆಲ್ಲಾ ಹೇಗೆ ನಿಭಾಯಿಸುತ್ತಿದ್ದರು...?. ಭೂಮಿಗಾಗಿ ಹಾಗೂ ಭೂಮಿ ಉಳಿಯಲು ಎನ್ನುವುದು  ಈಗೀಗ ಅರ್ಥವಾಯಿತು. ಆ ಜವಾಬ್ದಾರಿ ಈಗ ಹೆಚ್ಚಾಗಿದೆ ಹಾಗೂ ಅವರಂತೆಯೇ ಮುಂದೆ ದಾಟಿಸಬೇಕು ಎಂಬ ಅರಿವು ಹೆಚ್ಚಾಯಿತು.

ಆದರೆ ಈ ನಡುವೆ ಕಾಲೇಜು  ದಿನಗಳಲ್ಲೇ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿಚಯವಾಗಿತ್ತು. ಹೀಗಾಗಿ ಸಾಮಾಜಿಕ ಕೆಲಸ ಕಾರ್ಯಗಳತ್ತ ಮನಸ್ಸಾಗಿತ್ತು. ಅಂದು ಸಾಮಾಜಿಕವಾಗಿ ನನ್ನನ್ನು ತೆರೆದುಕೊಳ್ಳಲು ಅವಕಾಶ ನೀಡಿತ್ತು. ಅದಕ್ಕೂ ಮುನ್ನ ಬರೆಯುವ ಹವ್ಯಾಸಕ್ಕೆ ವೇದಿಕೆ ನೀಡಿದ್ದು ಬಾಳಿಲದ ವಿದ್ಯಾಬೋಧಿನೀ ಪ್ರೌಢಶಾಲೆ. ಬಾಳಿಲ ಶಾಲೆ ನನ್ನನ್ನು ಬರೆಯುವ ಹವ್ಯಾಸಕ್ಕೆ ತೆರೆಸಿ ಇಂದಿಗೂ ಗಟ್ಟಿ ಮಾಡಿಸಿದ್ದಕ್ಕೆ ಋಣಿಯಾಗಿದ್ದೇನೆ. ಸಾಮಾಜಿಕವಾಗಿ ಹೆಸರು ಮಾಡುವುದಕ್ಕೆ ಅವಕಾಶ ಮಾಡಿಸಿದ ಹಾಗೂ ಬೆಳೆಸಿದ ಸಂಘಕ್ಕೆ ನಾನು ಋಣಿ. 

ಬರೆಯುವ ಹವ್ಯಾಸ ನನಗೆ ಇಂದಿಗೂ ಮನಸ್ಸಿಗೆ ಖುಷಿ ನೀಡಿದೆ. ಸಾಮಾಜಿಕ ಕೆಲಸಗಳಿಗೆ ಈಗ ಸ್ವಲ್ಪ ವಿರಾಮ ನೀಡುತ್ತಿದ್ದೇನೆ. ಇಷ್ಟೂ ಸಮಯ ಅಪ್ಪ ದುಡಿದ ಹಣವನ್ನು ಸಮಾಜದ ಕೆಲಸಗಳಿಗೆ ಖರ್ಚು ಮಾಡಿದ್ದೇನೆ ಎನ್ನುವಾಗ  ವಿಷಾದ ಮೂಡಿಸುತ್ತದೆ. ನನ್ನ ದುಡಿಮೆಯ ಹಣವೂ  ಸಮಾಜಕ್ಕಾಗಿ ವ್ಯಯ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ. ಈಚೆಗೆ ಒಂದು ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡುತ್ತಾ ಒಬ್ಬರು ಹೇಳಿದರು," ಅವನು ಬದಲಾಗಿದ್ದಾನೆ, ಈಗ ಮೊದಲಿನ ಹಾಗಿಲ್ಲ ಎಂದರು.ಅದಕ್ಕಾಗಿ ನನಗೆ ಬೇಸರವಿಲ್ಲ. ಅಪ್ಪ ದುಡಿದ ಹಣದ ಭಾಗವನ್ನು ಸಮಾಜದ ಕೆಲವು ಕೆಲಸಗಳಿಗೆ ಖರ್ಚು ಮಾಡಿದ್ದೇನೆ ಎನ್ನುವ ಆತ್ಮತೃಪ್ತಿ ಇದೆ. ಅಪ್ಪನಿಗೂ ಬೇಸರ ಇರಲಿಲ್ಲ. ಅಜ್ಜನ ಹಾಗೆ ಪುಳ್ಳಿಯೂ ಎನ್ನುತ್ತಿದ್ದರು. ಆದರೆ ಆಗಾಗ ಎಚ್ಚರಿಸುತ್ತಿದ್ದರು. ಅಜ್ಜನ ಕೊನೆಯ ಕಾಲದ ಪರಿಸ್ಥಿತಿಗಳನ್ನು. ಹೀಗಾಗಿ ಆ ಸಭೆಯಲ್ಲಿ ಪ್ರಸ್ತಾಪವಾದ ನನ್ನ ಹೆಸರು ಅಪ್ಪ ಹೇಳಿದ ಸಂಗತಿಗಳು ತಾಳೆಯಾಯಿತು. ಈ ಕಾರಣದಿಂದಲೇ ಸಾಮಾಜಿಕ ಕೆಲಸಗಳಿಗೆ ವಿರಾಮ ನೀಡುತ್ತಿದ್ದೇನೆ.

ಆ ದಿನಗಳಲ್ಲಿ  ಸಾಮಾಜಿಕ ಕೆಲಸಗಳ ಕಡೆಗೆ ಹೆಜ್ಜೆ ಹೇಗಾಯಿತು ಹೇಳುತ್ತೇನೆ, ನನ್ನನ್ನುಅಲ್ಲಿಗೆ ಎಳೆದವರು ಯಾರು ?, ಏನೇನು ಆಗಿತ್ತು, ಏನೇನು ಮಾಡಿದೆ, ನನ್ನನ್ನು ಸಮಾಜದಲ್ಲಿ ವ್ಯಕ್ತಿಯಾಗಿ ರೂಪಿಸಿದ್ದು ಹೇಗೆ ? ಯಾರು?  ಹೇಳುತ್ತೇನೆ.