26 ಜುಲೈ 2008

ಕಳಚಿಕೊಂಡಿದೆ ಸಂಪರ್ಕದ ಕೊಂಡಿ...




ನಮ್ಮ ಹಳ್ಳಿಗಳು ಎಷ್ಟು ಸಂಕಷ್ಟವನ್ನು ಎದುರಿಸುತ್ತಿವೆ ಎಂಬುದನ್ನು ಇಲ್ಲಿ ನೋಡಿ. ಆದರೆ ಇಲ್ಲಿಯ ಜನ ಇದೊಂದು ಸಮಸ್ಯೆಯೇ ಅಲ್ಲ ಎಂಬ ರೀತಿಯಲ್ಲಿ ಬದುಕುತ್ತಾರೆ.ನಗರದಿಂದ ಬರುವ ಮಂದಿ ಒಂದು ಸಣ್ಣ ತೋಡು ದಾಟಲು ಹೆಣಗಾಡುತ್ತಾರೆ.ಆದರೆ ಈ ಜನ ನೋಡಿ. ಎಂತಹ ದೊಡ್ಡ ನದಿಯಿರಲಿ, ಹೊಳೆಯಿರಲಿ ಅದನ್ನು ದಾಟಿ ಹೋಗುತ್ತಾರೆ.ನೆಮ್ಮದಿಯ ಬದುಕು ಸಾಗಿಸುತ್ತಾರೆ. ಆದರೂ ನಮ್ಮ ಕಣ್ಣೋಟದಲ್ಲಿ ಕಂಡದ್ದು ಅಲ್ಲಿಯ ಸಮಸ್ಯೆಯೇ.ಅದನ್ನು ಇಲ್ಲಿ ಚಿತ್ರಿಸಿದ್ದೇನೆ.ಪರಿಹಾರ ಸಿಗುತ್ತೆ ಎಂಬ ಭರವಸೆಯಿಂದಲ್ಲ. ನನ್ನ ನೆಮ್ಮದಿಗಾಗಿ.

ನಗರದ ತಂತ್ರಜ್ಞಾನಗಳು ಹಳ್ಳಿಗೆ ತಲುಪಬೇಕು ಹಳ್ಳಿಯಿಂದ ಜೀವನಾವಶ್ಯಕ ವಸ್ತುಗಳು ನಗರಕ್ಕೆ ಬರಬೇಕು ಇದು ಸಾಮಾನ್ಯವಾದ ಒಂದು ಕಲ್ಪನೆ ಮತ್ತು ಚಿಂತನೆ.ಆದರೆ ಇಂದು ಬಹುತೇಕ ಹಳ್ಳಿಗಳು ನಗರವನ್ನು ಸಂಪರ್ಕಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.ಅದಕ್ಕೆ ಉತ್ತಮ ನಿದರ್ಶನ ಸುಳ್ಯ ತಾಲೂಕಿನ ಅರಂತೋಡಿನಲ್ಲಿದೆ.ಮಳೆಗಾಲದ ಪೂರ್ತಿ ಅವರ ಬದುಕು ತೀರಾ ಕಷ್ಟದಾಯಕವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡು ಪಂಜ ಊರು ಪಂಜ ಎಂಬ ಊರಿದೆ.ಇಲ್ಲಿ ಸುಮಾರು 80 - ರಿಂದ 100 ರಷ್ಟು ಮನೆಗಳಿವೆ.ಈ ಊರಿನ ಜನತೆಗೆ ಅತ್ಯಂತ ಹತ್ತಿರದ ಪೇಟೆಯೆಂದರೆ ಕಲ್ಲುಗುಂಡಿ.ಇಲ್ಲಿ ಸಮಸ್ಯೆಯಾಗುವುದು ಮಳೆಗಾಲದ 6 ತಿಂಗಳುಗಳ ಕಾಲ.ಕಲ್ಲುಗುಂಡಿ ಮತ್ತು ಕಾಡುಪಂಜ ಊರುವನ್ನು ಸಂಪರ್ಕಿಸಲುವ ಮುನ್ನ ನದಿಯೊಂದು ಹರಿಯುತ್ತದೆ. ಮಳೆಗಾಲ ಪೂರ್ತಿ ಈ ನದಿ ತುಂಬಿ ಹರಿಯುವ ಕಾರಣ ಇಲ್ಲಿನ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಸುಮಾರು 10 ವರ್ಷಗಳ ಹಿಂದೆ ತಾತ್ಕಾಲಿಕ ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು.ಆದರೆ ಅದು ಕಳೆದ ಒಂದೆರಡು ವರ್ಷದಿಂದ ತುಂಡಾಗಿ ಬಿದ್ದು ನಡೆದಾಡಲು ಸಾಧ್ಯವಾಗುತ್ತಿಲ್ಲ.ಹಾಗಾಗಿ ಇಲ್ಲಿನ ಜನ ಕೆಲ ಅಂತರದ ದೂರವನ್ನು 10 ರಿಂದ 15 ಕಿ ಮೀ ದೂರ ಸುತ್ತಿ ಬಳಸಿ ಬರುವಂತಾಗಿದೆ.ಶಾಲಾ ವಿದ್ಯಾರ್ಥಿಗಳಿಗೂ ಇದರಿಂದಾಗಿ ತೊಂದರೆಯಾಗಿದೆ.

ಈ ಕಾಲು ಸೇತುವೆ ದುರಸ್ಥಿಗಾಗಿ ಸ್ಥಳೀಯ ಪಂಚಾಯತ್ ಪ್ರತೀ ವರ್ಷದ ಮಳೆಗಾಲದ ಆರಂಭಕ್ಕೆ ಮುನ್ನ ಕೊಂಚ ಹಣ ಮೀಸಲಿಟ್ಟು ದುರಸ್ಥಿ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿದ್ದರೂ ಶಾಶ್ವತ ಪರಿಹಾರ ಇದುವರೆಗೆ ಸಾಧ್ಯವಾಗಿಲ್ಲ.ಮಳೆಗಾಲ ಹೋಗುವ ಮುನ್ನವೇ ಮತ್ತೆ ಸೇತುವೆ ಮುರಿದು ಬಿಡುತ್ತದೆ. ಇದರಿಂದಾಗಿ ಕಾಡುಪಂಜ ಊರುಪಂಜದ ಜನತೆ ಮಳೆಗಾಲದ 6 ತಿಂಗಳುಗಳ ಕಾಲ ಸಂಪೂರ್ಣ ದ್ವೀಪದ ಬದುಕು ಸಾಗಿಸಬೇಕಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶವು ಒಂದಿಲ್ಲೊಂದು ಸಮಸ್ಯೆಗಳನ್ನು ಅನುಭವಿಸುತ್ತಲೇ ಇದೆ.ಯಾವುದೇ ಸರಕಾರಗಳು ಬರಲಿ ಹಳ್ಳಿಗಳ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದು ಈಗ ಜನಜನಿತವಾಗಿದೆ. ಹಾಗಾಗಿ ಈಗ ಮತ್ತೆ ಹಳ್ಳಿಗಳತ್ತ ಸರಕಾರ ಕಣ್ಣೂ ಹಾಯಿಸಬಹುದೇ ಕಾಡುಪಂಜ ಊರು ಪಂಜದ ಜನತೆಯ ಬಹುದಿನ ಬೇಡಿಕೆ ಈಡೇರಿತೇ ಎಂಬುದನ್ನು ಕಾದು ನೋಡಬೇಕಾಗಿದೆ.

ಇದಿಷ್ಟು ನನ್ನ ಕ್ಯಾಮಾರದ ಮುಂದೆ ಕಂಡದ್ದು ಮತ್ತು ಸಮಸ್ಯೆಯ ವರದಿ.

ನಾನು ಮತ್ತು ನನ್ನ ಮಿತ್ರ ಈ ಜಾಗಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಕೆಲಸ ಮಾಡುತ್ತಿದ್ದರು. ಹೋ..! ಇಲ್ಲಿ ಕೆಲಸ ಶುರುವಾಗಿದೆ ಅಂತ ನಾವು ಅಂದು ಕೊಂಡೆವು. ಹೊಳೆಯ ಅತ್ತ ಕಡೆ ಕೆಲಸದಲ್ಲಿ ತೊಡಗಿದ್ದವರಲ್ಲಿ ಏರು ಧ್ವನಿಯಲ್ಲಿ ಮಾತನಾಡಿದೆವು. ನಾವು ಮೀಡಿಯಾದವರು ಅಂತ ಗೊತ್ತಾದ ಮೇಲೆ ಆತ ನಮ್ಮ ಕಡೆ ಹೆಜ್ಜೆ ಹಾಕಿದ.ಇನ್ನೂ ಹಲವರು ಬಂದರು. ಬಳಿಕ ನಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ " ನಾನು ಇದರ ಗುತ್ತಿಗೆದಾರ. ಈ ಸೇತುವೆಯ ಪುನರ್ ನಿರ್ಮಾಣದ ಕೆಲಸ ಮಾಡುತ್ತೇನೆ " ಎಂದೆಲ್ಲಾ ಹೇಳಿದ. ನಮಗನಿಸಿತು, ಈತನಿಗೆ ಇದರಲ್ಲಿ ಬಂಪರ್ ಲಾಭ ಪ್ರತೀವರ್ಷ ಪಂಚಾಯತ್ ಹಣ ಕೊಡುತ್ತದೆ ಇವನಿಗೂ ಪಂಚಾಯತ್ ನವರಿಗೂ ಸಮಪಾಲು - ಸಮಬಾಳು ಎಂಬ ನಿರ್ಧಾರಕ್ಕೆ ಬರುವಷ್ಟರಲ್ಲೇ ಆತ ಹೇಳಿದ " ಅಣ್ಣಾ ನೋಡಿ ಇದರಲ್ಲಿ ನನಗೇನೂ ಲಾಭವಿಲ್ಲ. ನನ್ನ ಕೈಯಿಂದಲೇ ಹಣ ಖಾಲಿಯಾಗುತ್ತದೆ.ನೀವು ಏನಾದರೂ ಮಾಡಿ ಇದನ್ನು ದುರಸ್ಥಿಯಾಗುವಂತೆ ಮಾಡಿ. ಶಾಶ್ವತ ಪರಿಹಾರ ಮಾಡಿ ಅಂತ ಹೇಳತೊಡಗಿದ.ಮತ್ತೆ ನೋಡಿದರೆ ಆತ ಅದೇ ಊರಿನ ವ್ಯಕ್ತಿ. ತನ್ನ ಗ್ರಾಮಕ್ಕಾಗಿ ಆತ ಪಂಚಾಯತ್ ನೀಡುವ ಕೊಂಚ ಹಣದಿಂದ ದುರಸ್ಥಿ ಮಾಡುತ್ತಾನೆ. ಪ್ರತೀ ವರ್ಷದಲ್ಲೂ ಆತನಿಗೆ ಇದೇ ಗತಿಯಂತೆ. ಹೀಗಾಗಿ, ಇನ್ನು ನನಗೆ ಈ ಕೆಲಸ ಬೇಡ ನಾನು ಏನಾದರು ಮಾಡಿ ಹೋಗುತ್ತೇನೆ ಎನ್ನುತ್ತಾನೆ.

ನನಗೆ ಅನ್ನಿಸಿದ್ದು ಅದಲ್ಲ.ಅಲ್ಲಿ ಕೋಟಿ ಕೋಟಿ ಲಾಭ ಹೊಡೆಯುವ ಜನರಿದ್ದರೆ ಇಲ್ಲಿ ಈತ ತನ್ನ ಕೈಯಿಂದಲೆ ಹಣ ಸುರಿದು ಊರಿನ ಸೇತುವೆ ನಿರ್ಮಾಣ ಮಾಡುತ್ತಾನಲ್ಲ. ಈತನಿಗೆ ಹಳ್ಳಿಯ ಬಗ್ಗೆ ಕಾಳಜಿ ಇದೆ ಅಂತಲ್ಲ, ಹಳ್ಳಿಗಾಗಿ ಕೆಲಸ ಮಾಡುತ್ತಾನಲ್ಲಾ. ಆ ಗುತ್ತಿಗೆದಾರನಿಗೆ ನಿಜಕ್ಕೂ ಒಂದು ಥ್ಯಾಂಕ್ಸ್.
ಗುತ್ತಿಗೆದಾರರು ಅಂದಾಕ್ಷಣ ಒಂದಷ್ಟು ಲಾಭವನ್ನು ಮಾಡುವುದಕ್ಕಾಗಿ ಕಳಪೆ ಕಾಮಗಾರಿ ಮಾಡುತ್ತಾರೆ ಎನ್ನುವ ಕಲ್ಪನೆಯನ್ನೇ ಜನ ಸಾಮಾನ್ಯರಲ್ಲಿ ಮಾತ್ರವಲ್ಲ ನನ್ನಂಥವರಲ್ಲಿ ಸದಾ ಗಟ್ಟಿಯಾಗುವಂತೆ ಮಾಡಿದ್ದ ಸಂಗತಿಯೊಂದಕ್ಕೆ ಇದು ಇನ್ನೊಂದು ಮಜಲನ್ನೂ , ಇನ್ನೊಂದು ಮುಖವನ್ನೂ ತೋರಿಸಿತು.

22 ಜುಲೈ 2008

ಆರಂಭವಾಗಲಿದೆ ವಿದ್ಯುತ್ ಪ್ರೊಜೆಕ್ಟ್...





ಬಹುಕಾಲ ಸುದ್ದಿಯಲ್ಲಿದ್ದು ನಂತರ ಸದ್ದಿಲ್ಲದೇ ಕುಳಿತಿದ್ದ ಕುಮಾರಧಾರಾ ಜಲ ವಿದ್ಯುತ್ ಯೋಜನೆ ಈಗ ಕಾರ್ಯಗತವಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿವೆ.ಈ ಯೋಜನೆಯ ವಿರೋಧದ ಮೂಲಕ ಸಾರ್ವಜನಿಕ ರಂಗಕ್ಕೆ ಬಂದವರು ಈಗ ಮಂತ್ರಿಯೂ ಆಗಿದ್ದಾರೆ.ಆದರೆ ಇನ್ನು ಈ ಯೋಜನೆ ನಿಲ್ಲುವ ಲಕ್ಷಣಗಳಿಲ್ಲ.ಈ ಯೋಜನೆಗೆ 200 ಕೋಟಿ ರೂ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಯಿಲ ಮತ್ತು ಶಾಂತಿಗೋಡು ಗ್ರಾಮಗಳ ನಡುವೆ ಕುಮಾರಧಾರಾ ನದಿಗೆ ವಳಕಡಮ ಎಂಬಲ್ಲಿ ಈ ಪ್ರಾಜೆಕ್ಟ್ ನಿರ್ಮಾಣವಾಗಲಿದೆ.ಭರೋಕ ವಿದ್ಯುತ್ ಕಂಪನಿಯು ತನ್ನ ಮಹತ್ವಾಕಾಂಕ್ಷೆಯ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಿದೆ.1995 ರಿಂದ ಈ ಪ್ರಾಜೆಕ್ಟ್ ನಿರ್ಮಾಣಕ್ಕಾಗಿ ಹಲವು ಪ್ರಯತ್ನ ನಡೆದಿತ್ತು.ಆದರೆ ಈ ಯೋಜನೆಗೆ ಸಾರ್ವಜನಿಕರಿಂದ ವ್ಯಾಪಕವಾದ ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು.ಸದ್ಯ ಅಲ್ಲೇ ಸಮೀಪದಲ್ಲಿ ಮಿನಿ ಘಟಕವನ್ನು ತಯಾರಿಸಿದ ಬಳಿಕ ಸದ್ಯದಲ್ಲೇ ಇಲ್ಲಿ ತನ್ನ ಕಾರ್ಯವನ್ನು ಆರಂಭಿಸಲಿದೆ. ಈಗಾಗಲೆ ಈ ಯೋಜನೆಯಿಂದ ಮುಳುಗಡೆಯಾಗಲಿರುವ ಉಭಯ ಗ್ರಾಮಗಳ ಸುಮಾರು 14 ಮಂದಿಗೆ ಪರಿಹಾರವನ್ನು ನೀಡಿ ಪ್ರತೀ ಎಕ್ರೆಗೆ 10 ಲಕ್ಷವನ್ನು ನೀಡಿದೆ.ಹಾಗಾಗಿ ಇಲ್ಲಿ ಈಗ ವ್ಯಾಪಕವಾದ ವಿರೀಧ ಕಂಡುಬಂದಿಲ್ಲ.ಮಾತ್ರವಲ್ಲ ಇಂದು ವಿದ್ಯುತ್ ಅನಿವಾರ್ಯವಾದ್ದರಿಂದ ಸಾರ್ವಜನಿಕರು ಈ ಯೋಜನೆಗೆ ಸಹಮತವನ್ನು ವ್ಯಕ್ತಪಡಿಸುತ್ತಾರೆ.ಅಲ್ಲದೆ ಇಲ್ಲಿ ತಯಾರಾಗುವ ಎಲ್ಲಾ ವಿದ್ಯುತ್ ಇದೇ ಊರಿಗೆ ನೀಡುವಂತೆ ಒತ್ತಾಯಿಸುತ್ತಾರೆ.


ಈ ಯೋಜನೆ ೧೯೯೫ ರಲ್ಲಿ ಈ ಊರಿಗೆ ಬಂದಾಗ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಆಗ ಸಾರ್ವಜನಿಕರೆಲ್ಲರೂ ಈ ಯೋಜನೆಯನ್ನಿ ವಿರೋಧಿಸಿದ್ದರು.ಈಗಿನ ಸಚಿವೆ ಶೋಭಾ ಕರಂದ್ಲಾಜೆಯವರು ಇದೇ ಊರಿನವರಾದ್ದರಿಂದ ಕುಮಾರಧಾರಾ ನದಿ ಉಳಿಸಿ ಹಾಗೂ ಪವರ್ ಪ್ರಾಜೆಕ್ಟ್ ವಿರೋಧಿ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದರು. ಈ ಹೋರಾಟದ ಮೂಲಕ ಅವರು ಸಾರ್ವಜನಿಕವಾಗಿ ಕಂಡುಕೊಂಡರು.ಈಗ ಅವರ ನಿಲುವು ಏನು ಎಂಬುದರ ಬಗ್ಗೆ ಸಾರ್ವಜನಿಕರ ಪ್ರಶ್ನೆಯಾಗಿದೆ. ಆರಂಭದಲ್ಲಿ ಈ ಯೋಜನೆಯ ಲೆಕ್ಕಾಚಾರಗಳನ್ನು ಒಂದೊಂದಾಗಿ ಮುಂದಿಟ್ಟು ಜನರಲ್ಲಿ ಗೊಂದಲ ಹುಟ್ಟಿಸಿತ್ತು. ನಂತರ ವಿವರವಾಗುತ್ತಾ ಹೋದಂತೆ ಪ್ರತಿಭಟನಾ ರೂಪಗಳೂ ನಿಧಾನವಾದವು. ಸದ್ಯದ ಮಾಹಿತಿಯಂತೆ ಕುಮಾರಧಾರಾ ನದಿಗೆ ೩೦೦ ಮೀಟರ್ ಎತ್ತರದಲ್ಲಿ ಅಣೆಕಟ್ಟು ನಿರ್ಮಿಸಿ ನೀರನ್ನು ತಗ್ಗು ಪ್ರದೇಶಕ್ಕೆ ಹಾಯಿಸಿ ಅಲ್ಲಿ ಟರ್ಬೈನ್ ಇರಿಸಿ ಪ್ರತಿದಿನ 10 ರಿಂದ 15 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಆದರೆ ಕೇವಲ ಮಳೆಗಾಲದಲ್ಲಿ ಮಾತ್ರಾ ಈ ಯೋಜನೆ ಚಾಲೂ ಇರುವುದು.


ಇಂದು ರಾಜ್ಯದಾದ್ಯಂತ ವಿದ್ಯುತ್ ಕೊರತೆ ಇರುವುದು ನಿಜ. ಹಾಗಾಗಿ ಅಲ್ಲಲ್ಲಿ ಕಿರುಜಲ ವಿದ್ಯುತ್ ಘಟಕಗಳು ಅನಿವಾರ್ಯ ಕೂಡಾ. ಹಾಗೆ ತಯಾರಿಸುವ ಮಿನಿಘಟಕಗಳ ಸ0ಪೂರ್ಣ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡುವ ಜವಾಬ್ದಾರಿ ಕಂಪೆನಿಗಳಿಗೆ. ಮಾತ್ರವಲ್ಲ ಅಲ್ಲಿ ತಯಾರಾಗುವ ವಿದ್ಯುತ್ ಆ ಭಾಗದ ಜನರಿಗೇ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ಒಂದು ಹೋರಾಟವನ್ನು ಆರಂಭಿಸಿದ ಬಳಿಕ ಜನರಿಗೆ ಅದರ ಸಂಪೂರ್ಣ ಮಾಹಿತಿಯನ್ನೂ ನೀಡದೆ ಅರ್ಧದಲ್ಲಿ ಜಾರಿಕೊಳ್ಳುವುದು ಸರಿಯಲ್ಲ ಎಂಬ ಮಾತಿನ ನಡುವೆಯೂ ತನ್ನ ಲಾಭವನ್ನು ಮಾತ್ರಾ ನೋಡಿಕೊಳ್ಳಬಾರದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

10 ಜುಲೈ 2008

ಮಂಟಪರ ಕಲಾ "ಮಂಟಪ"....




ಅಬ್ಬಾ..!.

ಎಂತಹ ನರ್ತನ ... ಎಂತಹ ಅಭಿನಯ...!!.ನಾನಂತೂ ಅವರ ಅಭಿಮಾನಿಯಾಗಿ ಬಿಟ್ಟೆ.

ಅದು ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ. ಮೊನ್ನೆ ಧರ್ಮಸ್ಥಳದಲ್ಲಿ ಏಕವ್ಯಕ್ತಿ ಯಕ್ಷಗಾನ ಸಪ್ತಾಹದ ಉದ್ಘಾಟನೆಯಿತ್ತು. ಅಲ್ಲಿಗೆ ಬೇರೊಂದು ವರದಿಗೆ ಹೋದಾಗ ಆ ಕಾರ್ಯಕ್ರಮಕ್ಕೂ ಹೋಗಿದ್ದೆ.ಮಂಟಪರ ಅಭಿನಯ ನೋಡಿ ನನಗಂತೂ ಅತ್ಯಂತ ಖುಷಿಯಾಗಿತ್ತು.ಅದೇ ವೇಳೆ ಸುಬ್ರಹ್ಮಣ್ಯದಲ್ಲೂ ಅವರಲ್ಲಿ ಕಾರ್ಯಕ್ರಮ ನಡೆಸಿಕೊಡಲು ಹೇಳಿದ್ದೇವೆ ಎಂದು ಮಿತ್ರ ಮಂಜುನಾಥ ಭಟ್ ಹೇಳಿದ್ದರು.ಹಾಗಾಗಿ ಮತ್ತೆ ಅಲ್ಲಿಗೆ ಹೋಗಿದ್ದೆ.ಅತ್ಯಂತ ಖುಷಿ ನೀಡಿತ್ತು.ಹಿಂದೆ ಅವರಿವರು ಹೇಳಿದ್ದನ್ನು ಕೇಳಿದ್ದೆ.ಕಾರ್ಯಕ್ರಮವನ್ನು ನಾನೇ ಸ್ವತ: ಆಸ್ವಾದಿಸಿದಾಗ ತುಂಬಾ ಉಲ್ಲಾಸವಾಯಿತು.ಅದನ್ನು ವಿಶ್ಲೇಷಿಸುವಷ್ಟು ದೊಡ್ಡವ ನಾನಲ್ಲ.ಹಾಗಾಗಿ ಆ ಬಗ್ಗೆ ಏನೂ ಹೇಳಲ್ಲ. ಚೆನ್ನಾಗಿತ್ತು ಎನ್ನುವುದನ್ನು ಬಿಟ್ಟು.

09 ಜುಲೈ 2008

ಚಿಕೂನ್ ಗುನ್ಯಾ ನಿವಾರಣೆಗೆ "ಯಜ್ಞ"ದ ಮೊರೆಹೋದರು....!!!





ಕರಾವಳಿ ಜಿಲ್ಲೆಯಾದ್ಯಂತ ಚಿಕೂನ್ ಗುನ್ಯಾ ಗುಮ್ಮ ನಲಿದಾಡಿತು.ಇಂದಿಗೂ ಜಿಲ್ಲೆಯಿಡೀ ಚಿಕೂನ್ ಗುನ್ಯಾ ಬಾಧಿಸಿದವರು ನರಳಾಡುತ್ತಲೇ ಇದ್ದಾರೆ. ಬೆಳ್ಳಂಬೆಳಗೆ ಏಳುವಾಗಲೇ ಗಂಟು ನೋವು ಕಾಡುತ್ತದೆ.ವೈದ್ಯಕೀಯವು ಈ ರೋಗದ ವಿಚಾರದಲ್ಲಿ ಸೋತಿದೆ ಎಂತಲೇ ವಿಶ್ಲೇಷಿಸಬೆಕಾಗುತ್ತದೆ.ಯಾವುದೇ ನಿಖರವಾದ ಔಷಧಿ ಚಿಕೂನ್ ಗುನ್ಯಾ ನಿವಾರಣೆಗೂ , ತಡೆಗಟ್ಟಲೂ ಇಲ್ಲ.ಅಲ್ಲಿ ಇಲ್ಲಿ ಹೇಳಿದ್ದೇ ಔಷಧಿ.ಹಾಗಾಗಿ ಜನರಿಗೆ ಮಾನಸಿಕವಾಗಿ ನೆಮ್ಮದಿಯಿಲ್ಲ.ಕಳೆದ 3 - 4 ತಿಂಗಳಿನಿಂದ ವಿಪರೀತವಾದ ನೋವಿನಿಂದ ಬಳಲುತ್ತಲೇ ಇದ್ದಾರೆ. ಈಗ ಬೇರೆ ವಿಧಿಯಿಲ್ಲದೆ ದೈವ ದೇವರುಗಳ ಮೊರೆ ಹೋಗಿದ್ದಾರೆ.ಅಂದು ಕರ್ನಾಟಕದ ಉತ್ತರ ಭಾಗದಲ್ಲಿ ಇಂತಹುದೇ ಕಾಯಿಲೆಯೊಂದು ಬಾಧಿಸಿದಾಗ ಆ ರೋಗಕ್ಕೆ ಕಾರಣವಾದ ವೈರಸನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಊರಿನಿಂದಾಚೆ ಬಿಟ್ಟಿದ್ದರು.ಈಗ ಕರಾವಳಿಯಲ್ಲೂ ಇಂತಹುದೇ ಇನ್ನೊಂದು ಅವತರಣಿಕೆ ಶುರುವಾಗಿದೆ. ಇದೆಲ್ಲವೂ ಮಾನಸಿಕವಾದ ನೆಮ್ಮದಿಗಾಗಿ , ಊರಿನಿಂದ ಈ ರೋಗ ನಿವಾರಣೆಯಾಗಲಿ , ತನ್ನೊಳಗಿನ ರೋಗ ನಿವಾರಣೆಯಾಗಲಿ ಎಂಬ ಒಂದೇ ಒಂದು ಆಸೆಗಾಗಿ...
ಜಿಲ್ಲೆಯ ವಿವಿದೆಡೆ ಚಿಕೂನ್ ಗುನ್ಯಾ ನಿವಾರಣೆಗಾಗಿ ಯಜ್ಞ, ಯಾಗಾದಿಗಳು , ಪಾರಾಯಣಗಳು ನಡೆದಿವೆ.ಮೊತ್ತ ಮೊದಲ ಬಾರಿಗೆ ಸುಳ್ಯದಲ್ಲಿ ಇಂತಹ ಯಾಗವೊಂದು ಇತ್ತೀಚೆಗೆ ನಡೆಯಿತು. ಈಗ ಪುತ್ತೂರಿನಲ್ಲಿ ಬೃಹತ್ ಮಟ್ಟದಲ್ಲಿ ಜ್ವರ ಶಾಂತಿ ಹೋಮ ಹಾಗೂ ಧನ್ವಂತರಿ ಜಪ ಸಹಿತ ಯಜ್ಞ ನಡೆಯಿತು.ಈ ಯಜ್ಞವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ವೇದ ಸಂವರ್ಧನ ಪ್ರತಿಷ್ಠಾನ ಪುತ್ತೂರು ಮತ್ತು ವ್ಯಕ್ತಿ ವಿಕಾಸ ಕೇಂದ್ರ ಮಂಗಳೂರು ವಲಯದ ನೇತೃತ್ವದಲ್ಲಿ ನಡೆಯಿತು.

ಯಜ್ಞದ ಉದ್ದೇಶ - ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾನಾ ವಿಧದ ರೋಗ ರುಜಿನಗಳು ತಾಂಡವವಾಡುತ್ತಿದೆ ಜನ ಸಾಮಾನ್ಯರ ಜೀವನವು ಜರ್ಝರಿತವಾಗಿ ಚಿಂತಾಜನಕ ಪರಿಸ್ಥಿತಿ ಉಂಟಾಗಿದೆ.ಆರೋಗ್ಯ ಶಾಸ್ತ್ರದ ವಿವಿಧ ಮಜಲುಗಳ ಪಾರಂಗತ ವೈದ್ಯರೂ ಸೋತಿದ್ದಾರೆ.ಈಗ "ಅನ್ಯಥಾ ಶರಣಂ ನಾಸ್ಥಿ"ಎಂದು ಭಗವಂತ ಮೊರೆ ಹೋಗಿ ಸಮಸ್ಥರಿಗೂ ಸನ್ಮಂಗಲ ಕರುಣಿಸು ಎಂದು ವೈದ್ಯರುಗಳ ದೇವತೆಯಾದ ಧನ್ವಂತರಿಯನ್ನೇ ಅರ್ಚಿಸಿ , ಪೂಜಿಸಿ ತೃಪ್ತಿ ಪಡಿಸಿ ಒಳಿತನ್ನು ಕಾಣಬೇಕಾಗಿದೆ.ಈ ಧನ್ವಂತರೀ ದೇವರ ಅರ್ಚನೆಯಿಂದ ಜ್ವರ , ಮೂಲವ್ಯಾಧಿ,ಹೃದಯದ ರೋಗ, ಕುಷ್ಠ ರೋಗ, ಕಿವಿ,ಕಣ್ಣು, ಆಮ್ಲ ಪಿತ್ತಾತಿಸಾರ, ಮತ್ತಿತರ ಮಾರಕ ರೋಗಗಳು ನಾಶವಾಗುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆಯಾದ್ದರಿಂದ ಈಗ ಯಜ್ಞವೇ ಅನಿವಾರ್ಯ.
ಆಧುನಿಕ ವೈದ್ಯಕೀಯ ಆವಿಷ್ಕಾರದಲ್ಲಿ ಕೂಡಾ ಚಿಕೂನ್ ಗುನ್ಯಾ , ಡೆಂಗ್ಯೂ,ಇಲಿ ಜ್ವರ ,ಮಂಗನ ಕಾಯಿಲೆ ಇತ್ಯಾದಿಗಳಿಗೆ ನಿರ್ದಿಷ್ಠವಾದ ಹಾಗೂ ಸಪರ್ಪಕವಾದ ಔಷಧಿಗಳಿಲ್ಲ.ಹೀಗಾಗಿ ಈ ನೂತನ ರೋಗಗಳ ನಿವಾರಣೆಗಾಗಿ ಲೋಕಕಲ್ಯಾಣಾರ್ಥವಾಗಿ ಈ ಧನ್ವಂತರೀ ಹಾಗೂ ಜ್ವರಶಾಂತಿ ಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸುತ್ತಾರೆ.

ಏನಿದು ಧನ್ವಂತರಿ...

ಶ್ರೀ ಧನ್ವಂತರಿಯು ದೇವತೆಗಳ ವೈದ್ಯನು.ಅಮೃತಕ್ಕಾಗಿ ದೇವತೆಗಳೂ ದೈತ್ಯರೂ ಸೇರಿ ಕ್ಷೀರ ಸಮುದ್ರವನ್ನು ಮಂಥನ ಮಾಡಿದಾಗ ಈತನು ಕ್ಷೀರ ಸಮುದ್ರದಿಂದ ಅಮೃತ ಕಲಶವನ್ನು ಹಿದಿದುಕೊಂಡು ಆವಿರ್ಭವಿಸಿದನು.ಧನ್ವಂತರಿಯು ಮಹಾವಿಷ್ಣುವಿನ ಅಂಶಾವಾತಾರವೆಂದು ಭಾಗವತದಲ್ಲಿ ಹೇಳಿದೆ.ಧನ್ವಂತರಿಯು ಭೂಲೋಕದಲ್ಲಿ ಆಯುರ್ವೇದವನ್ನು ಪುನರುಜ್ಜೀವನಗೊಳಿಸಿ ಪ್ರಚಾರಕ್ಕೆ ತಂದವನಾಗಿದ್ದಾನೆ ಎಂಬುದು ಉಲ್ಲೇಖ.ಬ್ರಹ್ಮನು ಆಯುರ್ವೇದವನ್ನು ಮೊದಲು ದಕ್ಷ ಪ್ರಜಾಪತಿಗೆ ಉಪದೇಶಿಸಿದನು ನಂತರ ದಕ್ಷನಿಂದ ಅಶ್ವಿನೀ ದೇವತೆಗಳು ಅಧ್ಯಯನ ನಡೆಸಿದರು ಆ ಬಳಿಕ ವಿವಿಧ ದೇವತೆಗಳೂ ಉಪದೇಶ ಪಡೆದು ಭೂಲೋಕದಲ್ಲಿ ಪ್ರಚಾರವಾಯಿತು ಎಂದು ಗ್ರಂಥಗಳು ಹೇಳುತ್ತವೆ.ಹೀಗೆಯೆ ಬ್ರಂಹ್ಮಾಂಡ ಪುರಾಣವನ್ನು ನೋಡಿದರೆ ಅಲ್ಲಿ ಧನ್ವಂತರಿ ಜಪ , ಹೋಮ, ವೃತ, ಪೂಜಾದಿಗಳಿಂದ ಜ್ವರ, ಮೂಲವ್ಯಾಧಿ, ಹೃದಯ ರೋಗ.ಇತ್ಯಾದಿ ಅನೇಕ ರೋಗಗಳಿಂದ ಬಾಧಿತನಾದ ಮನುಷ್ಯರು ಸಾ ರೋಗದಿಂದ ಮುಕ್ತರಾಗುತ್ತಾರೆ ಎಂದು ಹೇಳಿದೆ.

ಒಟ್ಟಿನಲ್ಲಿ ಇಂದು ಲೋಕದಲ್ಲಿ ವಿವಿಧ ಕಾರಣಗಳಿಗಾಗಿ ಮಾನಸಿಕವಾದ ನೆಮ್ಮದಿ ಕಡಿಮೆಯಾಗಿದೆ. ಈ ನಡುವೆಯೇ ಅಲ್ಲಲ್ಲಿ ಭಯಾನಕ , ಕಡಿಮೆಗೊಳ್ಳದ ರೋಗಗಳು , ಚಿಕೂನ್ ಗುನ್ಯಾದಂತಹ ನಿರಂತರ ಕಾಡುವ ಜ್ವರಗಳೂ ಕಾಣಿಸಿಕೊಂಡ ಕಾರಣ ಜನ ಮಾನಸಿಕವಾಗಿ ಜರ್ಝರಿತರಾಗಿದ್ದಾರೆ.ಹಾಗಾಗಿ ಯಜ್ಞ , ಯಾಗಾದಿಗಳಿಂದಲಾದರೂ ನೆಮ್ಮದಿ ಸಿಗುತ್ತಾ ಅಂತ ಹುಡುಕುತ್ತಿರ ಬಹುದಾ??.

07 ಜುಲೈ 2008

ಒಂದು ಪ್ರಕರಣ ಹಿಂದೆ.....

ಇದು ಅತ್ಯಂತ ಭಯಾನಕ ಮತ್ತು ಭೀಭತ್ಸ ಕೃತ್ಯ ಎಂಬುದರಲ್ಲಿ ಎರಡು ಮಾತಿಲ್ಲ.ಅದನ್ನು ಭೇದಿಸಿದ ಪೊಲೀಸರದು ವಿಳಂಬ ತಂತ್ರ.ಅವರ ಕಾರ್ಯಕ್ಕೆ ಶ್ಲಾಘಿಸ ಬೇಕಾಗಿಲ್ಲ.ಅಲ್ಲಿ ಇದ್ದದ್ದು ಸಾರ್ವಜನಿಕರ ಕಾಳಜಿ ಮತ್ತು ಮಾನವೀಯತೆ.ಅದು ಅಲ್ಲಿ ಮಾತ್ರಾ ಸಾಧ್ಯವೆನೋ..?

ಅದು ಬಡ ಮುಸ್ಲಿಂ ಕುಟುಂಬ.ಮಡಿಕೇರಿಯ ಭಾಗಮಂಡಲದ ಸಮೀಪದ ಅಯ್ಯಂಗೇರಿಯಲ್ಲಿ ವಾಸವಾಗಿತ್ತು.ಹೆಸರು ಮೊಯ್ಡು.ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿ ಪತ್ನಿ ಆಯಿಷಾ ಹಾಗೂ ಒಂದು ಹೆಣ್ಣು ಸಫಿಯಾ ಮತ್ತು 3 ಗಂಡು ಮಕ್ಕಳೊಂದಿಗೆ ಸುಖೀ ಸಂಸಾರ ಸಾಗಿಸುತ್ತಿದ್ದರು.ಆದರೆ ಇತ್ತೀಚಿನ 1 ವರ್ಷದಿಂದ ಈ ಕುಟುಂಬಕ್ಕೆ ನೆಮ್ಮದಿಯೇ ಇಲ್ಲ.ಕಾರಣ ಕಳೆದ ಒಂದೂವರೆ ವರ್ಷದಿಂದ ಅವರ ಮಗಳು ಸಫಿಯಾ ನಾಪತ್ತೆಯಾಗಿದ್ದಾಳೆ.ವರ್ಷ ಇನ್ನೂ 12 ದಾಟಿರಲಿಲ್ಲ.

ಬಡ ಕುಟುಂಬದ ಈ ಮನೆಯ ಯಜಮಾನ ಮೊಯ್ದು ಅವರಿಗೆ ತಮ್ಮ ಮಕ್ಕಳು ವಿದ್ಯಾವಂತರಾಗಬೆಕು ಎನ್ನುವ ಬಯಕೆ.ಆದರೆ ಕೈಯಲ್ಲಿ ಕಾಸಿಲ್ಲ ಅಂತೂ ಹಿರಿಯ ಮಗಳು ಸಫಿಯಾಳನ್ನು ಕೊಂಚ ಓದಿಸಿದ.ಮುಂದೆ ತಲೆಯಮೇಲೆ ಕೈ ಹೊತ್ತು ಮಗಳ ಮತ್ತು ಉಳಿದ ಮಕ್ಕಳ ಓದಿನ ಬಗ್ಗೆ ಚಿಂತೆ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಸುಮಾರು 2004ರ ವೇಳೆಗೆ ತನ್ನ ನಿಕಟವರ್ತಿ ದೂರದ ಸಂಬಂದಿ ಮಹಮ್ಮದ್ ಎಂಬವರ ಮೂಲಕ ಕಾಸರಗೋಡು ಸಮೀಪದ ಮಾಸ್ತಿಕುಂಡಿನಲ್ಲಿರುವ ಗುತ್ತಿಗೆದಾರ ಹಂಸಾರ ಮನೆಗೆ ಮನೆಕೆಲಸಕ್ಕೆಂದು ಸೇರಿಸಲಾಯಿತು.ಆದರೆ ಮನೆಯವರಾರಿಗೂ ಇದರಲ್ಲಿ ಸಮಾಧಾನವಿರಲಿಲ್ಲ.ತನ್ನ ಮಗಳನ್ನು ಓದಿಸಬೇಕು ಎಂಬ ಅಚಲವಾದ ನಿರ್ಧಾರ ಮೊಯ್ದು ಮತ್ತು ಆಯಿಷಾರಿಗಿತ್ತು.ಆಗ ನೀವೇನು ಗಾಬರಿಯಾಗಬೆಡಿ.ಇಲ್ಲಿ ನನ್ನ ಮಗಳನ್ನು ನೋಡಿಕೊಳ್ಳಲು ಮಾತ್ರಾ ಬೇರೇನೂ ಕೆಲಸವಿಲ್ಲ.ಶಾಲೆಗೆ ನಾನೇ ಕಳುಹಿದುತ್ತೇನೆ ಎಂದು ಹಂಸ ಮೊಯ್ದು ಕುಟುಂಬವನ್ನು ಸಮಾಧಾನ ಪಡಿಸುತ್ತಾನೆ. ಈ ಮಾತಿಗೆ ಮೊಯ್ದು ದಂಪತಿಗಳಿಗೂ ಸಂತಸವಾಯಿತು,ಒಬ್ಬಳು ಮಗಳ ಓದಿಗೆ ದಾರಿಯಾಯಿತಲ್ಲಾ ಅಂತ ಕೊಂಚ ನಿರಾಳರಾಗಿ ಬಿಟ್ಟರು.ಆದರೆ ಬಹುಶ: ಅವರು ಎಡವಿದ್ದು ಇಲ್ಲೆ ಎಂಬ ಅಂಶ ಅವರಿಗೆ ಅಂದು ಅರಿಗಾಗಿರಲಿಲ್ಲ.ಈಗ ಈ ಪ್ರಕರಣ ನಡೆದ ಬಳಿಕ ಕೊರಗುತ್ತಿದ್ದಾರೆ ಮೊಯ್ದು ಕುಟುಂಬಸ್ಥರು.ಈ ಹಂಸಾ ಮೂಲತ: ಕಾಸರಗೋಡಿನ ಮಾಸ್ತಿಕೋಡಿನವನು.ಇಲ್ಲಿ ಮನೆ ಆಸ್ತಿ ಎಲ್ಲಾ ಇದ್ದರೂ ಈತ ತನ್ನ ಪತ್ನಿಯೊಂದಿಗೆ ಗೋವಾದಲ್ಲಿ ಗುತ್ತಿಗೆ ಇನ್ನಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದ.ಅಲ್ಲಿ ತನ್ನ ಮಗುವನ್ನು ನೋಡಿಕೊಳ್ಳಲು ಹುಡುಗಿಯೊಬ್ಬಳ ಅನಿವಾರ್ಯತೆ ಬಂದಿದ್ದರಿಂದ ತನ್ನದೇ ಜಾತಿಯ ಬಾಲಕಿಯೊಬ್ಬಳನ್ನು ಹುಡುಕುತ್ತಿದ್ದ.ಆ ವೇಳೆಗೆ ಸಫಿಯಾ ಮದ್ಯವರ್ತಿಯ ಮೂಲಕ ಸಿಕ್ಕಿದ್ದಳು.ನಂತರ ಅವಳನ್ನು ಹಂಸಾ ಗೋವಾಕ್ಕೆ ಕರೆದುಕೊಂಡು ಹೋಗಿದ್ದ.ಆಗಾಗ ಊರಿಗೂ ಬರುತ್ತಿದ್ದ.

2 ವರ್ಷಗಳ ಕಾಲ ಚೆನ್ನಾಗೆ ಇದ್ದ ಸಫಿಯಾ ತನ್ನ ಮನೆಯವರೊಂದಿಗೆ ಮಾತನಾಡಿಕೊಂಡು , ಮೊಯ್ದು ತನ್ನ ಮಗಳನ್ನು ಆಗಾಗ ನೋಡಿಕೊಳ್ಳುತ್ತಲೂ ಇದ್ದರು. ಹಂಸನ ಮನೆಯಲ್ಲೂ ಅಂತಹ ಯಾವುದೇ ದೂರುಗಳೂ ಇದ್ದಿರಲಿಲ್ಲ. ಆದರೆ 2006 ಡಿಸೆಂಬರ್ 20 ರಂದು ಬೆಳಗ್ಗೆ ಮಾಸ್ತಿಕುಂಡಿನ ಮನೆಯಿಂದ ಸಫಿಯಾ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಯಾವಾಗ ಮೊಯ್ದು ದಂಪತಿಗಳಿಗೆ ತಲಪಿತೋ ಅಂದಿನಿಂದ ನೆಮ್ಮದಿ ಕಳಕೊಂಡು ಬಿಟ್ಟರು. ಈ ನಾಪತ್ತೆ ಪ್ರಕರಣದ ಮುನ್ನಾದಿನ ಹಂಸ ಕುಟುಂಬ ಗೋವಾಕ್ಕೆ ತೆರಳಿತ್ತು ಎಂಬ ಅಂಶ ನಂತರ ಬೆಳಕಿಗೆ ಬಂತು.ಈ ನಡುವೆ ಹಂಸಾ ಮೊಯ್ದು ಅವರಿಗೆ ದೂರವಾಣಿ ಮೂಲಕ ನಿಮ್ಮ ಮಗಳನ್ನು ಕರೆದುಕೊಂಡು ಹೋಗಲು ಬನ್ನಿ ಅಂತ ಡಿಸೆಂಬರ್ 20ರಂದು ಬೆಳಗ್ಗೆ ಹೇಳಿದ್ದ.ಆದರೆ ಮಧ್ಯಾಹ್ನದ ವೇಳೆಗೆ ನಾಪತ್ತೆಯಾಗಿರುವ ವಿಚಾರವನ್ನೂ ಹೇಳಿದ.ಹಾಗಾಗಿ ಗೊಂದಲಗಳು ಹುಟ್ಟಿಕೊಂಡವು. ಆ ನಂತರ ಗೋವಾದ ಮನೆಮಾಲೀಕನಲ್ಲಿ ವಿಚಾರಿಸಿದಾಗ ಡಿ.19ರ ರಾತ್ರಿ ಸಫಿಯಾಳೊಂದಿಗೆ ಈ ಕುಟುಂಬ ತೆರಳಿದೆ ಎಂಬ ಅಂಶ ಬೆಳಕಿಗೆ ಬಂದಿತು.ಹಾಗಾಗಿ ಆರಂಭದಲ್ಲಿ ಆದೂರು ಪೊಲೀಸ್ ಥಾಣೆಗೆ ದೂರು ನೀಡಲಾಯಿತು.ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸ್ಮೊಯ್ದು ದೂರು ನೀಡಿದರು.ಇದೆಲ್ಲಾ ನಡೆದದ್ದು ಡಿಸೆಂಬರ್ 2006 ರಲ್ಲಿ.ನಂತರ ಏನೆ ತನಿಖೆ ನಡೆದರೂ ಅದು ಪ್ರಗತಿ ಕಾಣಲಿಲ್ಲ.ಈ ನಡುವೆ ಸಫಿಯಾ ತಾಯಿ ಆಯಿಷಾ ಮಗಳನ್ನು ಹುಡುಕಿ ಕೊಡುವಂತೆ ಹೇಬಿಯಸ್ ಕ್ಲಾಪರ್ಸ್ ಅರ್ಜಿಯನ್ನೂ ಸಲ್ಲಿದರು.ಆದರೂ ಪ್ರಯೋಜನವಾಗಿಲ್ಲ.ಈ ನಡುವೆ ಗೋವಾದಿಂದ ಹಂಸಾ ಮರುಳುತ್ತಿರುವ ವೇಳೆ ಪೊಲೀಸ್ ಇಲಾಖಾ ಗೇಟ್ ಒಂದರಲ್ಲಿ ನೊಂದಾಯಿಸಿದ ಪ್ರಕಾರ ಕಾರಿನಲ್ಲಿ ಒಂದು ಚಿಕ್ಕ ಮಗು ಸೇರಿ ೩3ಜನ ಇದ್ದರು ಎಂಬ ಅಂಶ ಬೆಳಕಿಗೆ ಬಂದ ಕಾರಣ ಸಫಿಯಾ ಗೋವಾದಲ್ಲೇ ಕಾಣೆಯಾಗಿದ್ದಾಳೆ ಎಂಬುದು ಪೋಲೀಸರಿಗೂ ಅನುಮಾನ ಕಾಡಿತ್ತು. ಆದರೆ ಪೊಲೀಸ್ ತನಿಖೆ ಮುಂದುವರಿಯುತ್ತಿರಲಿಲ್ಲ.

ಸುಮಾರು ಒಂದೂವರೆ ವರ್ಷಗಳ ಬಳಿಕವೂ ವಿವಿಧ ಹೋರಾಟ ಮನವಿಗಳ ನಂತರವೂ ಯಾವುದೇ ಸುಳಿವು ದೊರೆಯದೇ ಇದ್ದಾಗ ನ್ಯಾಯಕ್ಕಾಗಿ ಸಾರ್ವಜನಿಕರು ಪಣತೊಟ್ಟರು.ಕ್ರಿಯಾ ಸಮಿತಿಯೊಂದನ್ನು ರಚಿಸಿಕೊಂಡು ಮೊಯ್ದು ಪರ ಹೋರಾಟಕ್ಕೆ ನಿಂತರು.ಸಫಿಯಾಳನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಕಾಸರಗೋಡಿನಲ್ಲಿ ಅನಿರ್ದಿಷ್ಠಾವಧಿ ಧರಣಿ ನಡೆಯಿತು.ನಿರಂತರ 82 ದಿನಗಳ ಕಾಲ ಪ್ರತೀದಿನ 2 ಜನರಂತೆ ಉಪವಾಸ ನಡೆಯಿತು.ಕೇರಳ ರಾಜ್ಯದಾದ್ಯಂತ ಸಫಿಯಾ ಪತ್ತೆಗೆ ಆಗ್ರಹಿಸಿ ಹೋರಾಟ ಸಮಿತಿ ರಚೆನೆಯಾಯಿತು.ಕೇರಳದಾದ್ಯಂತ ಪ್ರತಿಭಟನೆ ನಡೆಯಿತು.ಸರಕಾರಕ್ಕೂ ಚುರುಕು ಮುಟ್ಟಿತು.ತಕ್ಷಣವೇ ಸರಕಾರವು ಈ ಪ್ರಕರಣ ಪತ್ತೆಗೆ ಅಪರಾಧ ಪತ್ತೆ ದಳಕ್ಕೆ ವರ್ಗಾಯಿಸಿತು.

ಈದಾದ 2 ದಿನದಲ್ಲಿ ಹಂಸನನ್ನು ಮತ್ತು ಆತನ ಪತ್ನಿಯನ್ನು ಬಂಧಿಸಿ ವಿಚಾರಿಸಿದಾಗ ಸಫಿಯಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ತಕ್ಷಣವೇ ಬಧಿಸಲಾಯಿತು.ನಂತರ ವಿಚಾರಣೆ ನಡೆದಾಗ 2006 ಡಿ.26 ರಂದು ಗೋವಾದ ಫ್ಲಾಟ್ ನಲ್ಲಿ ತಂಗಿರುವಾಗ ಮಧ್ಯಾಹ್ನದ ಭೋಜನಕ್ಕಾಗಿ ಅನ್ನ ತಯಾರಿಸುತ್ತಿದ್ದ ವೇಳೆ ಆಯತಪ್ಪಿ ಗಂಜಿ ಸಫಿಯಾಳ ಮೇಲೆ ಬಿದ್ದು ಗಾಯಗಳಾಯಿತು.ಚಿಕಿತ್ಸೆ ನೀಡಿದರೂ ಕಡಿಮೆಯಾಗಿರಲಿಲ್ಲ.ಆದರೆ ಹೀಗೆ ಗಾಯಗೊಂಡ ಸಫಿಯಾ ಯಾರಿಗೂ ಕಾಣಕೂಡದು ಎಂದು ರೂಮೊಂದರಲ್ಲಿ ಕೂಡಿಹಾಕಿದ್ದರು.ಆದರೆ ಅವಳು ಸಂಜೆಯಾಗಿತ್ತಿದ್ದಂತೆ ತೀವ್ರ ಜ್ವರದಿಂದ ಬಳಲಿತ್ತಿದ್ದಳು ಕೊನೆಯ ಕ್ಷಣದಲ್ಲಿ ಅವಳು ಬದುಕುವ ಲಕ್ಷಣಗಳು ಕಾಣಿಸಿಕೊಳ್ಳಲಿಲ್ಲ.ಹಾಗಾಗಿ ಇನ್ನು ಹೀಗೆಯೇ ಬಿಟ್ಟರೆ ಅಪಾಯವೆಂದು ಅವಳ ಕೈಕಾಲು ,ರುಂಡವನ್ನು ಕಡಿದು ಗೋವಾದ ಅಣೆಕಟ್ಟೆಯೊಂದರ ಬಳಿ ಹೂತು ಹಾಕಿರುವುದಾಗಿ ಹಂಸ ಒಪ್ಪಿಕೊಂಡನು.ಹಾಗಾಗಿ ಮರಿದಿನವೇ ಗೋವಾಕ್ಕೆ ತೆರಳಿ ಎಲುಬುಗಳ ಪರಿಶೀಲನೆ ನಡೆದಿದೆ.

ಈ ನಡುವೆ ಒಂದು ವರ್ಷಗಳ ಕಾಲ ಪ್ರಕರಣ ವಿಳಂಬವಾಗಲು ಆದೂರಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಣ ನೀಡಿರುವ ವಿಚಾರವು ಬೆಳಕಿಗೆ ಬಂದಿತು.ತಕ್ಷಣವೇ ಆ ಅಧಿಕಾರಿಯನ್ನು ಸರಕಾರವು ವಜಾ ಮಾಡಿದೆ. ಅಪರಾಧ ಪತ್ತೆ ದಳ ಕಾರ್ಯಾಚರಣೆತಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.ಈ ನಡುವೆ ಕೇರಳದ ಅನೆಕ ಸಂಘಟನೆಗಳು ಮೊಯ್ದು ದಂಪತಿಗಳ ಪರ ನಿಂತಿದ್ದರು. ಪ್ರತಿದಿನ ಹೋರಾಟದಲ್ಲಿ ಭಾಗಿಯಾಗುತ್ತಿದ್ದರು.ಅತ್ಯಂತ ಬಡ ಕುಟುಂಬದ ಇವರಿಗೆ ಊರಿನ ಮಂದಿಯು ಸಂಪೂರ್ಣ ಸಹಕಾರ ನೀಡಿದ್ದರು. ಈಗ ಇವರ ಕುಟುಂಬಕ್ಕೆ ನೋವಿನಲ್ಲೂ ಆತನಿಗೆ ಶಿಕ್ಷೆಯಾಗಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ.

ಈ ಪ್ರಕರಣದ ವರದಿಯೊಂದನ್ನು ಮಾಡುವ ಸಲುವಾಗಿ ನನಗೆ ಹೋಗಬೇಕಿತ್ತು. ಕಾಸರಗೋಡಿಗೆ ನೇರವಾಗಿ ತೆರಳಿದಾಗ ಅಂದು ಹೋರಾಟ ಸಮಿತಿಯ ಪತ್ರಿಕಾಗೋಷ್ಠಿ ಇತ್ತೆಂದು ತಿಳಿಯಿತು.ತಕ್ಷಣವೇ ಅಲ್ಲಿನ ಪ್ರೆಸ್ ಕ್ಲಬ್ ಹುಡುಕಿ ಹೋರಾಟ ಸಮಿತಿಯ ಸದಸ್ಯರ ದೂರವಾಣಿ ನಂಬರ್ ಪಡೆದು ಮಾತನಾಡಿದೆ.ಪುಣ್ಯಕ್ಕೆ ಅಲ್ಲೇ ಇದ್ದರು.ಮಾತನಾಡಿದಾಗ ಎಲ್ಲಾ ವಿವರಗಳನ್ನು ನೀಡಿದರು.ನಂತರ ಸಫಿಯಾ ತಂದೆ ತಾಯಿಯನ್ನು ಭೇಟಿಯಾಗಬೆಕಾಯಿತು.ಅಲ್ಲಿಂದ ಸುಮಾರು 40 ಕೀ ಮೀ ಮತ್ತೆ ಪ್ರಯಾಣ. ಹಾಗೆ ದಾರಿಯಲ್ಲಿ ಸಾಗಲು ನನಗೆ ಸಾಥಿಯಾದವರು ಹೋರಾಟ ಸಮಿತಿ ಅಧ್ಯಕ್ಷರು. ಅವರಲ್ಲಿ ನಾನು ವಿಚಾರಿಸುತ್ತಾ ಹೋದೆ.ಅವರು ಹೇಳಿದರು ನನಗೆ ಸಫಿಯಾ ತಂದೆ-ತಾಯಿ ಯಾರೂ ಕೂಡಾ ಸಂಬಂಧಿಕರಲ್ಲ.ನನ್ನ ಮಿತ್ರ ಇವರ ವಿಚಾರ ಹೇಳಿದರು.ಮಾನವೀಯ ದೃಷ್ಠಿಯಲ್ಲಿ ಸಹಕರಿಸಿದೆ ಎನ್ನುತ್ತಾರೆ.ಮಾತ್ರವಲ್ಲ ಅವರು ನಡೆಸಿದ 82 ದಿನಗಳ ಪ್ರತಿಭಟನೆಯ ಎಲ್ಲಾ ವಿವರಗಳನ್ನು ಹಾಗೂ ಪತ್ರಿಕೆಗಳ ತುಣುಕುಗಳನ್ನು ತೆಗೆದಿರಿಸಿದ್ದರು.ಹಾಗೆ ಅವರು ತೆಗೆದಿರಿಸಿದ ಪತ್ರಿಕೆಗಳು 2000....!!!.ನನಗೆ ನಿಜಕ್ಕೂ ಅಚ್ಚರಿಯಾಯಿತು.ಮುಂದೆ ಅವರ ಮನೆ ಬಂತು.ನೋಡಿದಾಗ ಸಾಮಾನ್ಯ ಮನೆ.ಸಿರಿವಂತನೇನಲ್ಲ. ಮತ್ತೆ ಆತ ಹೇಳಿದ ಇಂದು ರಾತ್ರಿ ನಾವು ಗೋವಾಗೆ ಹೋಗುವವರಿದ್ದೇವೆ. ಖರ್ಚು?.ಅಂತ ನಾನು ಕೇಳಿದೆ.ಅದು ನಾವು ಸುಮಾರು 15 ಮಂದಿ ಹೋಗುತ್ತೆವೆ ಅವರವರ ಖರ್ಚು ಅವರಿಗೆ.ಸುಮಾರು 500 ರೂ ಬೇಕು ಎಂದು ಹೇಳಿದರು.ಇದೆಲ್ಲವನ್ನೂ ಕೇಳಿ , ನನಗೆ ಬೇಕಾದ ವಿಚಾರವನ್ನು ಸಂಗ್ರಹಿಸಿಕೊಂಡು ನಾನು ಬಂದೆ.ಪ್ರಕರಣದ ತನಿಖೆ ನಡೆಯುತ್ತಿದೆ.

ಇಂತಹ ಅನೇಕ ಸಂಗತಿಗಳು , ನಿಗೂಡ ಕೊಲೆಗಳು , ಬಡವರ ಅಳಲುಗಳು ನಮ್ಮಲ್ಲಿ ಎಷ್ಟು ನಡೆಯುವುದಿಲ್ಲ.ಇಲ್ಲಿ ಒಂದಾದರೂ ಪ್ರತಿಭಟನೆಗಳು ಮಾನವೀಯ ದೃಷ್ಠಿಯ ನೆಲೆಯಲ್ಲಿ ನಡೆದಿದೆಯಾ ಅಂತ ನಾನು ಲೆಕ್ಕ ಹಾಕುತ್ತ ಹಿಂತಿರುಗಿದೆ.ಯಾಕೆಂದರೆ ನನಗೆ ಅಲ್ಲಿ "ನಮ್ಮವರೇ' ಸಹಕರಿಸಿರಲಿಲ್ಲ.ಒಬ್ಬರನ್ನು ಬಿಟ್ಟರೆ...!!!?

03 ಜುಲೈ 2008

ಅರ್ಹತೆಯ ಬದುಕು....??




ನನಗೊಂದು ಪ್ರಶ್ನೆ .ಇದು ಅತ್ಯಂತ ಅಧಿಕ ಪ್ರಸಂಗ ಅಂತ ಕೆಲವರಿಗೆ ಅನ್ನಿಸಬಹುದು ಅಥವಾ ಎಂತಹ ಬಾಲಿಶ ಅನ್ನಿಸಬಹುದು ಅಥವಾ ಇದು ಕಾಮನ್ ಅಂತ ಹೇಳಿಬಿಡಬಹುದು.ಆದರೆ ಇದು ನನ್ನ ಪ್ರಶ್ನೆ ಮತ್ತು ಉತ್ತರ ಹುಡುಕು ಪ್ರಯತ್ನ.

ಮೊನ್ನೆ ಸುಮ್ಮನೆ ಕುಳಿತಿದ್ದಾಗ ಒಬ್ಬರು ಹಿರಿಯರು ಹೇಳುತ್ತಿದ್ದರು ಏಯ್ .. ನೀನು ನನ್ನಿಂದ ಸಣ್ಣವ ನನ್ನ ಕಾಲು ಹಿಡಿಯಬೇಕು ಅಂತ ಬೇರೊಬ್ಬನಲ್ಲಿ ಹೇಳುತ್ತಿದ್ದರು.[ಕಾಲು ಹಿಡಿಯುವುದು ಅಂದರೆ ತಲೆಬಾಗುವುದು ಎಂದರ್ಥ.ಇನ್ನೊಂದು ರೀತಿಯಲ್ಲಿ ಆಶೀರ್ವಾದ]. ಆತ ಏಕೆ ಅಂತ ಕೇಳುತ್ತಿದ್ದರೆ ನೀನು ನನ್ನಿಂದ ಸಣ್ಣವ ಅದಕ್ಕೆ. ದುರದೃಷ್ಟವೆಂಬಂತೆ ಆತನಲ್ಲಿ ಇದ್ದದ್ದು ಆ ಅರ್ಹತೆ ಮಾತ್ರಾ...!!.

ನಿಜವಾಗಲೂ ಹಿರಿಯರ ಆಶೀರ್ವಾದ ಬೇಕು, ನಿಜ. ಆದರೆ ಆತ ಕೇವಲ ಹಿರಿಯ ಎಂಬ ಒಂದೇ ಕಾರಣಕ್ಕೆ ಆತನಿಗೆ ನಮಸ್ಕರಿಸಬೇಕೇ?.ಅವನಲ್ಲೂ ಒಂದು ಅನುಭವ, ಒಂದು ವಿಚಾರ , ಒಂದು ಮಾರ್ಗದರ್ಶಕ ಗುಣ ಇರಬೇಕಲ್ಲ.?ಇಲ್ಲವಾದರೆ ಏಕೆ ಆತನಿಗೆ ನಮಸ್ಕರಿಸಬೆಕು?ಅಗತ್ಯ ಇದೆಯಾ?. ಹಾಗೆ ನೋಡಿದರೆ ಆತ ಹಿರಿಯ ಎಂಬುದನ್ನು ಬಿಟ್ಟರೆ ಅವನಿಂದ ಹೆಚ್ಚು ನಾವು ತಿಳಿದಿರುತ್ತೇವೆ.[ಹಾಗೆಂದು ಅಹಂ ಇರಬಾರದು.].ದುರಂತ ಅದುವೇ, ಇಂದು ಅರ್ಹತೆಯ ಮೇಲೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಮಾತನಾಡುವವರು ನೈತಿಕತೆ ಬಗ್ಗೆ ಹೇಳಿಬಿಡುತ್ತಾರೆ.ಅವರ ಇವರ ತಪ್ಪನ್ನು ಬೊಟ್ಟು ಮಾಡುತ್ತಾರೆ. ತನ್ನ ಅಂತರಾಳವನ್ನೊಮ್ಮೆ , ತನ್ನೊಳಗಿನ ಕಶ್ಮಲಗಳನ್ನು ನೋಡದೇ ಅಲ್ಲಿ ಕಮೆಂಟ್ ಮಾಡುತ್ತಾರೆ.ಆತ ಬಿಡುವ "ಬಡಾಯಿ"ಗಳೆಲ್ಲವೂ ಆತನ ಬದುಕಿನಲ್ಲಿ "ಬಂಡಲ್"ಆಗಿರುತ್ತದೆ. ಹಾಗಾಗಿ ಇಂದು ಸ್ವಲ್ಪ influence ಬೇಕು. ಟ್ಯಾಲೆಂಟ್ ಬೇಡ...,ಸ್ಥಾನ ಬೇಕು....ಆತ್ಮಗೌರವ ಬೇಡ.,.ಗೌರವ ಬೇಕು...... ಹೀಗೆಯೇ ನಡೆಯುತ್ತದೆ ಬದುಕು.... ಇನ್ನೊಬ್ಬರ ತುಳಿಯುತ್ತಾ..... ಹಲುಬುತ್ತಾ..... ಸಾಗುವ ಬದುಕು.
ಇದುವೇ ಇಂದಿನ ಸಮಾಜ.... ಇಂದಿನ ಬದುಕು.....

ಸುಮ್ಮನೆ ಆಲೋಚಿಸಿದ ಶಬ್ದಗಳನ್ನು ಇಲ್ಲಿ ಪೇರಿಸಿಟ್ಟಿದ್ದೇನೆ. ತುಂಬಾ ದಿನಗಳ ನಂತರ ಇಲ್ಲಿ ಕಾಣಿಸಿಕೊಳ್ಳಲು ಕಾರಣವಿದೆ ಅದನ್ನೂ ಈಗಲೆ ಹೇಳಿಬಿಡುತ್ತೇನೆ.

ಇದುವರೆಗೆ ಬರಹ , ಪತ್ರಿಕಾ ಮಾಧ್ಯದಲ್ಲಿ ಕಾಣಿಸಿಕೊಂಡಿದ್ದ ಬರೆಯುತ್ತಿದ್ದ ಈ ಹುಡುಗ ಈಗ ಟಿ ವಿ ಚಾನೆಲ್ ಒಂದರಲ್ಲಿ ಸೇರಿಕೊಂಡಿದ್ದೇ ಈ ವಿಳಂಬಕ್ಕೆ ಕಾರಣ.
ಸದ್ಯ ಸುವರ್ಣ ನ್ಯೂಸ್ ವಾಹಿನಿಯ ಪುತ್ತೂರು ಬಾತ್ಮೀದಾರ.ಪತ್ರಿಕೆಯಿಂದ ಟಿ.ವಿ ಕಡೆಗೆ ತೆರಳಿ ಹೊಸ ಕ್ಷೇತ್ರದ ಅನುಭವ.ನನ್ನ ಮಿತ್ರರನೇಕರು ಅಲ್ಲಿ ಇದ್ದಾರೆ.ಅನುಭವಗಳನ್ನು ಹೇಳುತ್ತಾರೆ.ದಾರಿಗಳನ್ನೂ ತೋರಿಸುತ್ತಾರೆ.ಅವರ ಅನುಭವಗಳು ನನ್ನ ಮುಂದಿನ ದಾರಿಗೆ ಪೆಟ್ರೋಲ್ ಇದ್ದಂತೆ.ಆಗಾಗ ಹಾಕಿಕೊಂಡು, ನಂತರ ಸ್ವಯಂಚಾಲಿತ.....!!!????. ಹೀಗಾಗಿ ಈಗ ಅವರಿಗೆ ವಂದಿಸುತ್ತೇನೆ.

ಆದರೆ ಇಲ್ಲಿ ಮಾತ್ರಾ ಆಗಾಗ ಕಾಣಿಸಿಕೊಳ್ಳುತ್ತಲೆ ಇರುತ್ತೇನೆ.