30 ಅಕ್ಟೋಬರ್ 2008

ಬಂದಿದೆ ಪ್ರಶಸ್ತಿ.....




ಮತ್ತೆ ಬರುತ್ತಿದೆ ಕನ್ನಡ ರಾಜ್ಯೋತ್ಸವ.ಸರಕಾರವು ಎಂದಿನಂತೆ ಭರವಸೆಗಳನ್ನು ಹೇಳಲಿದೆ. ಈ ನಡುವೆ ಮಾಮೂಲಿನಂತೆ ಹಾಗೂ ಅದಕ್ಕಿಂತ ಹೆಚ್ಚಾಗಿ ಪ್ರಶಸ್ತಿಯನ್ನು ಘೋಷಿಸಿದೆ. ಸಹಜವಾಗಿಯೇ ಪ್ರಶಸ್ತಿ ಪ್ರಕಟವಾದ ಸುದ್ದಿ ಕೇಳಿದೊಡನೆಯೇ ಟಿ ವಿ ಲೋಗೋಗಳು ಪ್ರಶಸ್ತಿ ಪುರಸ್ಕೃತರ ಮುಂದೆ ಬಂದಾಗ ಅವರಲ್ಲೊಬ್ಬರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇಂಗ್ಲಿಷ್ ನಲ್ಲಿ..!!!. ಇದು ಕನ್ನಡ ರಾಜ್ಯೋತ್ಸವಕ್ಕೆ ಸಿಕ್ಕ ಗೌರವವೇ ಎಂಬ ಪ್ರಶ್ನೆ ಮನದಾಳದಲ್ಲಿ ಎದ್ದೇಳುತ್ತಿದೆ.ಆದರೆ ಇದನ್ನು ಕೇಳುವುದು ಯಾರಲ್ಲಿ??..

ಪ್ರತೀ ಬಾರಿಯೂ ಈ ಪ್ರಶಸ್ತಿಗಾಗಿ ಲಾಬಿ ನಡೆಯುತ್ತದೆ ಎನ್ನುವುದು ನಮಗೆಲ್ಲಾ ಗೊತ್ತಿದ್ದ ವಿಚಾರ.ಆದರೆ ಪ್ರಶಸ್ತಿಗಳು ನಿಜವಾದ ಅರ್ಹತೆಯಿದ್ದವರಿಗೆ ಸಿಗಬೇಕು ಎನ್ನುವ ಚಿಂತನೆ ನಮ್ಮೆಲ್ಲರಲ್ಲಿದ್ದರೂ ಹಾಗೆ ಆಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಜ್ಞಾನ ಈಗ ಬರತೊಡಗಿದೆ.ದು:ಖದ ಸಂಗತಿಯೆಂದರೆ ಅರ್ಹರಿಗೆ ಪ್ರಶಸ್ತಿ ಸಿಗುತ್ತಿಲ್ಲ ಬಿಡಿ. ಪ್ರಶಸ್ತಿ ಬಂದವರಾದರೂ ಒಂದೆರದು ದಿನವಾದರೂ ಕನ್ನಡದಲ್ಲಿ ಮಾತನಾಡಬಾರದೇ?.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎನ್ನುವ ಸಾಮಾನ್ಯ ಜ್ಞಾನವಾದರೂ ಬೇಡವೇ?. ಎಂಥಾ ಅವಸ್ಥೆ ಬಂತು.!!. ಬೇರೆ ಜನ ಸಿಕ್ಕಿಲ್ಲವೇ ಇವರಿಗೆ. ಇಂಗ್ಲಿಷ್ ನಲ್ಲಿ ಮಾತನಾಡಲಿ ಯಾರು ಬೇಡ ಅನ್ನುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲಾ ಸಮಸ್ತ ಕನ್ನಡಿಗರ ಪರವಾಗಿ,ಕನ್ನಡಿಗರ ಸರಕಾರದ ಪರವಾಗಿ ಅದಕ್ಕಾದರೂ ಗೌರವ ಕೊಡಬೇಕಲ್ಲಾ....

ಅದಿರಲಿ ರಾಜ್ಯೋತ್ಸವ ಎಂದಾಗ ಗಡಿನಾಡು ನೆನಪಾಗುತ್ತದೆ. ಇತ್ತ ಕಾಸರಗೋಡು ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಯಾವುದೇ ಮಾಧ್ಯಮಗಳಲ್ಲಿ ಬರಲಿ ಸರಕಾರ ಈ ಬಗ್ಗೆ ಗಮನ ಹರಿಸಿದೆಯಾ?. ಕಾಸರಗೋಡಿನಲ್ಲಿ ಇತ್ತೀಚೆಗೆ ಕನ್ನಡ ಶಾಲೆ ,ಕಾಲೇಜುಗಳಲ್ಲಿ ಕನ್ನಡದ ಬಗ್ಗೆ ಅವಹೇಳನ ಮಾಡಲಾಗಿತ್ತು. ಆದರೆ ಧ್ವನಿ ಎತ್ತಿದವರಿಲ್ಲ. ಗಡಿನಾಡಿನ ಕೆಲವು ಸಾಹಿತಿಗಳು ಮಾತನಾಡಿದ್ದರು. ಆದರೆ ಫಲ ಶೂನ್ಯ. ಈ ಬಗ್ಗೆ ರಸ್ತೆ ಬದಿಯಲ್ಲಿ ಹೋಗುವ ಜನರನ್ನು ಮಾತನಾಡಿಸಿದರೆ " ಏ ನಮಗೆ ಯಾವುದಾದರೇನು.." ಅಂತಾರೆ. ಇನ್ನೂ ಒಳ ಹೋದರೆ ಕೇರಳವೇ ಸರಿ ಅಂತಾರೆ. ಇಲ್ಲಿ ಕೆಲ ಬಂದ್ ಗಳು ಬಿಟ್ಟರೆ ಉಳಿದೆಲ್ಲಾ ಸೌಲಭ್ಯ ಚೆನ್ನಾಗಿಯೇ ಇದೆ ಅಂತಾರೆ. ಇಲ್ಲಿ ಎರಡು ರೀತಿಯಲ್ಲಿ ಜನ ಬದುಕುತ್ತಾರೆ. ಸಾಂಸ್ಕೃತಿಕವಾಗಿ ಕರ್ನಾಟಕವನ್ನು ಅವಲಂಬಿಸಿದರೆ ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕೇರಳವನ್ನು ಅವಲಂಬಿಸುತ್ತಾರೆ. ಅತ್ತ ಕರ್ನಾಟಕವನ್ನೂ ಬಿಡಲಾಗದೆ ಇತ್ತ ಕೇರಳವನ್ನೂ ಅವಲಂಬಿಸಲಾಗದ ಸ್ಥಿತಿಯಲ್ಲಿ ಇಲ್ಲಿನ ಜನರಿದ್ದಾರೆ.ಇಂತಹ ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು.....

27 ಅಕ್ಟೋಬರ್ 2008

ಹಣತೆ ಹಚ್ಚುತ್ತೇನೆ .....




ದೀಪ ಹಚ್ಚುತ್ತೇನೆ ನಾನು.... ದೀಪ ಹಚ್ಚುತ್ತೇನೆ ನಾನು...

ಜಗದ ಕತ್ತಲೆ ಕಳೆಯುತ್ತೇನೆಂಬ ಭ್ರಮೆಯಿಂದಲ್ಲ....

ದೀಪ ಇರುವಷ್ಟು ಕಾಲ ನಾನು ನಿನ್ನ ಮುಖವ.... ನೀನು ನನ್ನ ಮುಖವ ನೋಡಲೆಂದು....

ಇದು ಕೇಳಿದಾಗಲೇ ಮೈಪುಳಕಗೊಳ್ಳುತ್ತದೆ... ಇಲ್ಲಿ ಎಷ್ಟೊಂದು ಅರ್ಥಗಳು... ಈ ಕವಿತೆಯನ್ನು ಬರೆದವರು ಯಾರೆಂದು ನಮಗೆಲ್ಲಾ ಗೊತ್ತೇ ಇದೆ... ನಾನು ಇಲ್ಲಿ ಕೊಂಚ ಅದಕ್ಕೆ ಬಣ್ಣ ಹಚ್ಚಿರಬಹುದು .. ಆದರೆ ರಾಷ್ಟ್ರಕವಿಗಳು ಎಷ್ಟೊಂದು ಅಂದವಾಗಿ ಅಲ್ಲಿ ದಾಖಲಿಸಿದ್ದಾರೆ....

ದೀಪಗಳ ಹಬ್ಬ ಮತ್ತೆ ಬಂದಿದೆ. ಪ್ರತೀ ಬಾರಿಯೂ ಪತ್ರಿಕೆಯಲ್ಲಿ ದೀಪಗಳ ಬಗ್ಗೆ ಬರೆಯುತ್ತಿದ್ದಾತ ಈಗ ಇಲ್ಲಿ ದಾಖಲಿಸಿದ್ದಾನೆ.ಇರಲಿ ಅದಲ್ಲ ವಿಷಯ. ದೀಪಗಳ ಹಬ್ಬದಲ್ಲಿ ಎಷ್ಟೊಂದು ಅರ್ಥವಿದೆ. ರೈತರಿಗೆ ತನಗೆ ಬದುಕು ರೂಪಿಸಲು ಅನುವು ಮಾಡಿಕೊಟ್ಟ ಭೂಮಿಗೆ ಕೃತಜ್ಞತೆ ಸಲ್ಲಿಸುವ ಕಾಲವಾದರೆ ತನ್ನೊಂದಿಗೆ ದುಡಿದವರಿಗೂ ಧನ್ಯತೆಯನ್ನು ಸಮರ್ಪಿಸುವ ಸಂದರ್ಭ. ಹಾಗೆ ನೋಡಿದರೆ ಎಳೆಯ ಮಕ್ಕಳಿಗೆ ಪಟಾಕಿ ಸಿಡಿಸುವ ಹಬ್ಬ , ಹುಡುಗರಿಗೆ "ತನ್ನವರಿಗೆ" ಕೊಡುಗೆಯನ್ನು ನೀಡುವ ಕಾಲವಾದರೆ, ನವವಿಹಾಹಿತರಿಗೆ ಹೊಸ ಹಬ್ಬದ ಕಾಲ. ಹಿರಿಯರಿಗೆ ಮಾಮೂಲು ಹಬ್ಬ, ಅಜ್ಜಂದಿರಿಗೆ ನೆನಪಿನ ಹಬ್ಬ..... ಹೀಗೆಯೇ ಹಬ್ಬ ವಿವಿಧ ಮಜಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂದು ಅವರಿಗೆ ಕಾಣಿಸಿಕೊಣಿಸಿಕೊಂಡ ಹಬ್ಬ ನಾಳೆ ನಮ್ಮದೂ ಆಗಿರುತ್ತದೆ. ಹಾಗಾಗಿ ಇಂದು ಸಂಭ್ರಮಿಸಿದ್ದು ನಾಳೆಗೆ ನೆನಪಾಗಿ ಬಿಡುತ್ತದೆ. ಅದೇ ಅಲ್ಲವೇ ನಮ್ಮ ಬದುಕಿನ ಅನುಕ್ಷಣದ ದೀಪಾವಳಿ.
ದೀಪದ ಹಬ್ಬ ಸುತ್ತಲಿನ ಜನರಿಗೆ ಹೊಸ ಬೆಳಕನ್ನು ಕೊಡುತ್ತದೆ.ಅಲ್ಲೊಂದು ಇಲ್ಲೊಂದು ಹಣತೆಯಲ್ಲ ಪ್ರತಿ ಮನದಲ್ಲಿ , ಪ್ರತಿ ಮನೆಯಲ್ಲಿ ಈ ಹಣತೆ ಬೆಳಗೆಬೇಕು. ಅದು ಪ್ರೀತಿ, ಪ್ರೇಮ, ವಾತ್ಸ್ಯಲ್ಯವನ್ನು ಜೊತೆಗೆ ನಂಬಿಕೆ , ವಿಶ್ವಾಸವನ್ನು ಚೆಲ್ಲುವ ಹಣತೆಯಾಗಿರಬೇಕು. ಆರದ "ನಂದಾದೀಪ"ವಾಗಲಿ... ಅದು ಇನ್ನೊಂದು ಅಷ್ಟು ಹಣತೆ ಬೆಳಗಲು ನೆರವಾಗಲಿ.

ಹಚ್ಚುತ್ತೇನೆ ನಾನು ಹಣತೆಯನ್ನು... ಇನ್ನೊಂದು ಹಣತೆಯಿಂದ...

ಹಚ್ಚುತ್ತೇನೆ ನಾನು ದೀಪವನ್ನು .... ಪ್ರೀತಿಯ ದೀಪವನ್ನು .....

ಎಲ್ಲವೂ ಮತ್ತೆ ಸಿಗುತ್ತದೆ ,.. ಮತ್ತೆ ಉರಿಯುತ್ತದೆ ಎಂಬ ಭ್ರಮೆಯಿಂದಲ್ಲ...

ಉರಿದಯ ದೀಪವನ್ನು ಮತ್ತೆ ಹಚ್ಚೋಣ .... ಮತ್ತೆ ಬೆಳಗೋಣ...


ದೀಪಾವಳಿ ಶುಭ ತರಲಿ....

25 ಅಕ್ಟೋಬರ್ 2008

ಇಲ್ಲಿ ನಾವೇ ಎಲ್ಲಾ....!!




ದೇವಸ್ಥಾನಗಳೆಂದರೆ ನಂಬಿಕೆಯ , ಮಾನಸಿಕ ನೋವನ್ನು ತಣಿಸುವ ಕ್ಷೇತ್ರಗಳು. ಅಲ್ಲಿಗೆ ಹೋದರೆ ನೆಮ್ಮದಿ ಸಿಗುತ್ತದೆ, ಅಲ್ಲಿ ಸೇವೆ ಮಾಡಿಸಿದರೆ ಖಂಡಿತಾ ಒಳ್ಳೆಯದಾಗುತ್ತದೆ.... ಇದು ಬಹುತೇಕ ಜನರ ಕಲ್ಪನೆ. ಇನ್ನೊಂದು ಅರ್ಥದಲ್ಲಿ ನಂಬಿಕೆ.
ನಾನು ಗಮನಿಸಿದಂತೆ ಇಂದು ಧಾರ್ಮಿಕ ಹುಚ್ಚುತನ ಹೆಚ್ಚಾಗುತ್ತಿದೆ.ಹಾಗಾಗಿ ಇಂದು ಎಲ್ಲೆಲ್ಲೂ ರಶ್... ಪುಣ್ಯ ಕ್ಷೇತ್ರಗಳ ಒಳಹೊಕ್ಕಿ ನೆಮ್ಮದಿಯಿಂದ ಬಂದರೇ ಪುಣ್ಯ.
ಯಾಕೆಂದ್ರೆ ಯಾವುದೇ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಹೊರಬರುವಾಗ ಇನ್ನೊಂದು ನೋವನ್ನು ಹೊತ್ತುಕೊಂಡೇಬರಬೇಕಾಗುತ್ತದೆ. ನಾವು ಕಳೆಯಲು ಹೋದ ನೋವಿನೊಂದಿಗೆ ಇನ್ನೊಂದು ಹೊಸತು ಸೇರಿಕೊಳ್ಳುತ್ತದೆ. ಬಹುಶ: ದೇವರಿಗೆ ಇದೆಲ್ಲಾ ಕಾಣಿಸುವುದಿಲ್ಲವೇ ಅಂತ ಅನ್ನಿಸುತ್ತದೆ. ನಾವು ಇಲ್ಲಿನ ಪ್ರಮುಖ ದೇವಸ್ಥಾಗಳಿಗೆ ಹೋಗಿ ಅಲ್ಲಿ ಭಕ್ತರ ಹರಿವು ಜಾಸ್ತಿಯೇ ಇರುತ್ತದೆ. ಹೇಗಿದ್ದರೂ ಪ್ರಮುಖ ದೇವಸ್ಥಾನವಲ್ವೇ. ಆದರೆ ಅಲ್ಲಿನ ಸಿಬ್ಬಂದಿಗಳು ಇರುತ್ತಾರಲ್ಲಾ ಅವರಿಗೆ ಮನುಷ್ಯತ್ವವೆಂಬುದೇ ಇರುವುದಿಲ್ಲ. ಯಾವುದಾದರೊಂದು ಕೇಳಿದರೆ ಅದಕ್ಕೆ ಸರಿಯಾದ ಮಾಹಿತಿಯೂ ಇಲ್ಲ. ಉದ್ದಟತನದ ಪರಮಾವಧಿ. ಒಮ್ಮೊಮ್ಮೆ ಅನಿಸುತ್ತದೆ ಆ ಕ್ಷೇತ್ರದ ಸುಪ್ರೀಂ ಅವರೇ ಏನೋ . ದೇವರಿಗೆ ಅಲ್ಲಿ ಎರಡನೇ ಸ್ಥಾನವೇನೋ ಅಂತ ಅನಿಸಿಬಿಡುತ್ತದೆ. ಅದು ಅಲ್ಲಿ ಇಲ್ಲಿ ಅಂತ ಅಲ್ಲ ಎಲ್ಲಾ ಕಡೆಗಳಲ್ಲೂ ಅದೇ ವ್ಯವಸ್ಥೆ. ಹಾಗೆಂದು ನೀವು ಒಂದು ಕಾನನದ ನಡುವಿನ ಪ್ರಶಾಂತವದ ದೇವಸ್ಥಾನಕ್ಕೆ ಹೋಗಿ.ಅಲ್ಲಿ ಜನವೂ ಇರುವುದಿಲ್ಲ. ಸುಂದರ ಪರಿಸರದ ಮಧ್ಯೆ ಕೇಳುವ ಇಂಪಾದ ಹಾಡುಗಳೇ , ಹಕ್ಕಿಗಳ ಕಲರವವೇ ನಮ್ಮ ಮನಸ್ಸಿಗೆ ಹೊಸ ದಾರಿಯನ್ನು ತೊರಿಸಿತು.ನೆಮ್ಮದಿ ಸಿಕ್ಕಿತು. ಅಲ್ಲ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗಬೇಕೆಂದೇನೂ ಇಲ್ಲವಲ್ಲ. ಸುಂದರ ಸೊಬಗಿನ ಕಾಡಿನ ನಡುವೆ ಸ್ವಲ್ಪ ಹೊತ್ತು ಏಕಾಂಗಿಯಾಗು ಕುಳಿತು ಮೌನವಾದರೆ, ಧ್ಯಾನಸ್ಥವಾದರೆ ಏನು ಖುಷಿ ದೇವಸ್ಥಾನಕ್ಕೆ ಹೋದದ್ದಕ್ಕಿಂತ ಎರಡು ಪಟ್ಟು ಪುಣ್ಯ. ನಾನಂತೂ ಇತ್ತೀಚೆಗೆ ದೇವಸ್ಥಾನಕ್ಕೆ ಸೇವೆ ಸಲ್ಲಿಸಲೆಂದು ಹೋಗುವುದು ಕೊಂಚ ಕಡಿಮೆ ಮಾಡಿ ಮನೆಯ ತೋಟದ ನಡುವೆ , ಕಾಡಿನ ಬಳಿಯೇ ಮನೆಯ ಮಾಡಿರುವ ನಾವು ಸಂಜೆಯ ವೇಳೆಗೆ ಪರಿಸರವನ್ನು ಆಸ್ವಾದಿಸುತ್ತಾ ಖುಷಿಯನ್ನು ಸ್ಪಡೆಯುತ್ತೇನೆ. ಯಾಕೆಂದರೆ ಪ್ರತಿಷ್ಠಿತ ಎನಿಸಿದ ,ಅನಗತ್ಯ ಪ್ರಚಾರ ನೀಡುವ ಕೆಲವು ದೇವಸ್ಥಾನಗಳ ಒಳಹೊಕ್ಕು ಹೊರಬಂದಾಗ ಅಲ್ಲಿನ ಹುಳುಕುಗಳು, ಸಿಬ್ಬಂದಿಗಳ ದರ್ಪ ಎಲ್ಲವೂ ನೋಡಿದಾಗ ಅಯ್ಯೋ ಅಲ್ಲಿ ನೆಮ್ಮದಿಯ ಅರಸಾಟದಲ್ಲಿ ಭಕ್ತರಿದ್ದಾರಾ ಅಂತ ಅನ್ನಿಸುತ್ತದೆ. ಹಾಗಾಗಿ ಭಗವಂತನಿಗೆ ಇಲ್ಲಿಂದಲೇ ಇನ್ನೊಮ್ಮೆ ನಮಸ್ಕಾರ.

22 ಅಕ್ಟೋಬರ್ 2008

ಮೌನದಿಂದ ....

ಇಂದು ಭಾರತ ಹೆಮ್ಮೆ ಪಡುವ ದಿನ.ನಮ್ಮ ವಿಜ್ಞಾನಿಗಳು ಚಂದ್ರನಂಗಳಕ್ಕೆ ಉಪಗ್ರಹದ ಮೂಲಕ ಇಳಿದಿದ್ದಾರೆ. ಮುಂದೆ ಮಾನವ ಸಹಿತವಾಗಿ ಇಳಿಯಲಿದ್ದಾರೆ. ಬೆಳಗ್ಗೆ 6.20 ಕ್ಕೆ ಬಹುತೇಕ ಮಂದಿ ಟಿ.ವಿ ಪರದೆಯ ಮೇಲೆ ಕಾತರದಿಂದ ನೋಡುತ್ತಿದ್ದರು.ಆಗಸಕ್ಕೆ ಉಪಗ್ರಹವು ಚಿಮ್ಮುತ್ತಿದ್ದಂತೆ ಮೇರಾ ಭಾರತ್ ಮಹಾನ್ ಎನ್ನುವ ಒಳಭಾವವು ಹೆಚ್ಚಿತ್ತು.

ನಮ್ಮ ವಿಜ್ಞಾನಿಗಳ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ಬಂದಿದೆ.
....................................................................................

ಮೌನಿಯಾದೆ...

ಹಾಗೇ ನನಗೆ ಯಾಕೋ ಮೌನಿಯಾಗಬೇಕು ಎನಿಸಿತು. ನನ್ನ ಪ್ರಕಾರ ಮೌನಿಯಾದಾಗ ಇನ್ನಷ್ಟು ಸಂಗ್ರಹ ಸಾಧ್ಯ. ಅಲ್ಲದೆ ಇಂದಿನ ಕಾಲೆಳೆಯುವ ಕಾಲದಲ್ಲಿ, ಅದೇ ಹೆಚ್ಚು ಸೂಕ್ತ. ಒಂದು ಸಂದರ್ಭದಲ್ಲಿ ಅಹಂ,ಮದ,ಮತ್ಸರಾದಿಗಳ ಬಗ್ಗೆ ನನಗದಾಗದು ,ಅದು ನನ್ನ ಬಳಿ ಸುಳಿಯುವುದೂ ಬೇಡ ಅಂತ ಅಂದುಕೊಂಡಿದ್ದೆ. ಅದು ನನ್ನ ಮಟ್ಟಿಗೆ ಯಶಸ್ವಿಯಾಗಿತ್ತು. ಒಂದೊಂದು ಸಂದರ್ಭವನ್ನು ಬಿಟ್ಟೂ. ಆದರೆ ನನಗೆ ಈಗ ಅನಿಸುತ್ತದೆ ಅಂತಹದಿಲ್ಲದ ಜೀವವೊಂದಿದೆಯಾ?. ಒಬ್ಬ ವ್ಯಕ್ತಿ ಕೊಂಚ ಮೇಲೆರಿದ ಅಥವಾ ಸ್ವಲ್ಪ ಹೆಚ್ಚು ಪರಿಣಿತನಾದ ಅಂದಾಕ್ಷಣ ಏನೆಲ್ಲಾ ಮಾಡುತ್ತಾರೆ ಆತನನ್ನು ಕೆಳಗಿಳಿಸಲು. ಏಡಿಗಳ ಸಾಲಿಗೆ ಈ ಮನುಷ್ಯ ಸೇರುತ್ತಾನಲ್ಲಾ. ಮತ್ಸರ ಅವನಲ್ಲಿ ತಾಂಡವವಾಡುತ್ತವಲ್ಲಾ?. ಹಾಗಾಗಿ ನನಗನಿಸಿದ್ದು ಇದೆಲ್ಲವೂ ಜಗದ ನಿಯಮ....

ಈಗ ನಾನು ಮೌನಿಯಾಗಿದ್ದೇನೆ. ಇದು ವಿಷಾದವಲ್ಲ ಹೊಸ ನೋಟ... ಭಾವನೆಗಳನ್ನು ಹಂಚಿಕೊಳ್ಳುತ್ತಾ ಮುಂದೆ ಸಾಗುವ..... ಹೊಸಲೋಕವ ಸೃಷ್ಟಿಸಲಾಗುತ್ತಾ ನೋಡೋಣ.....

21 ಅಕ್ಟೋಬರ್ 2008

ಸಮಸ್ಯೆಯಿಂದ ಹೊರಬಂದು..



ಮತ್ತೆ ಆರಂಭವಾಗಿದೆ ಕೃಷಿಯ ಸಮಸ್ಯೆ.....

ಅದು ಯಾರಿಗೆ?. ಎನ್ನುವುದೇ ಮೊದಲ ಪ್ರಶ್ನೆ. ಕೃಷಿಯ ನಿಜವಾದ ಸಮಸ್ಯೆಯ ಬಗ್ಗೆ ದನಿ ಎತ್ತಿದರೆ ಪರವಾಗಿಲ್ಲ.ಇದೆ ಸಮಸ್ಯೆಯಿದೆ ಎಂದು ದೂರ ಎಲ್ಲೋ ಮಾಯಾನಗರಿಯಲ್ಲಿರುವ ಒಬ್ಬ ವ್ಯಕ್ತಿ ಹೇಗೆ ಹೇಳುತ್ತಾನೆ?ಆತನಿಗೆ ಹಳ್ಳಿಯೊಳಗಿನ ಸಮಸ್ಯೆ ಅರಿವಾಗಲು ಹೇಗೆ ಸಾಧ್ಯ.? ಆತ ಅಲ್ಲಿಂದಲೇ ಹೋ... ಎಷ್ಟು ಚೆನ್ನಾಗಿದೆ ಹಳ್ಳಿ... ಅಂತ ಹೇಳಬಹುದು. ಅಥವಾ ಯಾರೋ ಹೇಳಿದ್ದನ್ನು ಕೇಳಿ ಕಂಠಪಾಠ ಮಾಡಿ ಮತ್ತೆ ಮತ್ತೆ ಅದೇ ರಾಗವನ್ನು ಹಾಡಿಕೊಂಡು "ಹೆಸರನ್ನು" ಗಿಟ್ಟಿಸಿಕೊಳ್ಳಬಹುದು. ಬಿಟ್ಟರೆ ಬೇರೇನೂ ಸಾದ್ಯವಿಲ್ಲ. ನನಗೆ ಇಷ್ಟುಕ್ಕೂ ಏಕೆ ಮೈ ಉರಿಯಿತೆಂದರೆ ಮೊನ್ನೆ ಒಂದು ಪತ್ರಿಕೆಯಲ್ಲಿ "ಒಬ್ಬರು", ರೈತರ ಸಮಸ್ಯೆ ... ಅಲ್ಲಿ ಹಾಗಿದೆ.. ಹೀಗಿದೆ... ಕೂಲಿಕಾರರ ಸಮಸ್ಯೆ... ಹೀಗೆ ಸಮಸ್ಯೆಗಳ ಸುರಿಮಳೆಯನ್ನೇ ಹೇಳುತ್ತಾ.. ಹುಡುಗರಾರು ಅಲ್ಲಿ ನಿಲ್ಲುತ್ತಿಲ್ಲ ಎಂದು ಪರಿಸಮಾಪ್ತಿ ಮಾಡುತ್ತಾರೆ. ಇದು ಹೆಸರನ್ನು ಗಳಿಸಿಕೊಳ್ಳುವ ರೈತ ಪರ ಎನ್ನಿಸಿಕೊಳ್ಳುವ ವ್ಯವಸ್ಥೆ ಅಂತ ಆಗಲೇ ಭಾವಿಸಿದೆ. ಏಕೆ ಗೊತ್ತಾ ?.ಅಲ್ಲೆ ಅವರು ಸಮಸ್ಯೆಗಳನ್ನು ಹೇಳುತ್ತಾ ಯುವಕರಾರು ಹಳ್ಳಿಯಲ್ಲಿ ನಿಲ್ಲುತ್ತಿಲ್ಲ ಎಂದು ಹೇಳುತ್ತಾರೆ. ಅಲ್ಲಾ ಸ್ವಾಮಿ .. ನೀವು ಹೀಗೆ ಸಮಸ್ಯೆಗಳನ್ನೇ ಹೇಳಿದರೆ ಯಾರು ತಾನೆ ಇಲ್ಲಿ ನಿಂತಾರು ಹೇಳಿ?. ಅಲ್ಲಿರುವ ಸಾಧನೆಗಳ ಬಗ್ಗೆ ಹೇಳಿ... ಕೂಲಿಕಾರರರು ಕಷ್ಟದಿಂದಲಾದರೂ ಸಿಗುತ್ತಾರಲ್ಲಾ ಅದನ್ನು ಹೇಳಿ... ಎಲ್ಲೋ ಕೆಲವು ಇಲಾಖೆಗಳು ಕೃಷಿಕರಿಗೆ ಸಮಸ್ಯೆ ಕೊಡುತ್ತಾರಲ್ಲಾ ಆಗ ಅವರ ಪರ ನಿಲ್ಲಿ. ಅದು ಬಿಟ್ಟು ಸಮಸ್ಯೆ ಇದೆ ಎಂದು ಹೇಳಿದರೆ ಏನು ಪ್ರಯೋಜನ. ಏನಾದರೂ ಇದೆಯಾ?. ಹಳ್ಳಿಯನ್ನು ಇನ್ನಷ್ಟು ದೂರವಾಗಿಸುವ ಪ್ರಯತ್ನ ಇದಲ್ಲದೆ ಮತ್ತಿನ್ನೇನು?.

ನಿಜಕ್ಕೂ ಹಳ್ಳಿಯ ಸೊಬಗು ಚೆನ್ನಾಗಿದೆ... ಇಲ್ಲಿ ಸಮಸ್ಯೆ ಇದೆ. ಇಲ್ಲವೇ ಇಲ್ಲ ಅಂತಲ್ಲ. ಈಗ ಅದೆನ್ನೆಲಾ ಎದುರಿಸಲು ಪ್ರಯತ್ನಗಳು ನಡೆಯುತ್ತಿದೆ. ಸಮಸ್ಯೆ ಇದೆ ಎಂದು ಪಲಾಯನ ಮಾಡುವುದು ಸರಿನಾ ಅಂತ ರೈತರಿಗೆ ಧೈರ್ಯ ಹೇಳುವುದು ಬಿಟ್ಟೂ ಅಯ್ಯೋ ಅಲ್ಲಿ ಸಮಸ್ಯೆ ಇದೆ... ಇದೆ ಅಂತ ಹೆದರಿಸಿ ಮತ್ತೆ ಅವರ ಮಾನಸಿಕ ಧೈರ್ಯವನ್ನು ಕುಸಿತಮಾಡುವುದಾ?. ಸಮಸ್ಯೆಯ ಹಿಂದೆ ನಿಂತಾಗ ಸಹಜವಾಗಿಯೇ ರೈತರಿಗೆ ಧೈರ್ಯ ಬರುತ್ತೆ. ಒಂದಷ್ಟು ಜನ ಹಳ್ಳಿಯಲ್ಲೆ ಉಳಿಯುತ್ತಾರೆ. ಇಲ್ಲಾಂದ್ರೆ ಜನ ಮಾಯಾನಗರಿಯನ್ನೆ ಅರಸುತ್ತಾರೆ.

ಈಗ ಇನ್ನೊಂದು ಬೆಳವಣಿಗೆ ಆರಂಬವಾಗುತ್ತಿದೆ. ಇಂದಿನ ಆರ್ಥಿಕ ಅಸ್ಥಿರತೆಯ ,ಆರ್ಥಿಕ ಅಲ್ಲೋಲ ಕಲ್ಲೋಲದಿಂದಾಗಿ ಮಾಯಾನಗರಿಯಲ್ಲಿ ಜೀವನ ಮಟ್ಟವನ್ನು ಸುಧಾರಿಸುವುದು ಕಷ್ಟ ಹಾಗಾಗಿ ಹಳ್ಳಿಯೇ ವಾಸಿ ಎನ್ನುವ ಚರ್ಚೆಗಳು ಹಳ್ಳಿಯಲ್ಲಿ ಆರಂಭವಾಗುತಿದೆ.ಬಹುತೇಕ ಯಾಂತ್ರಿಕ ಕೃಷಿಯಲ್ಲಿ ತೊಡಗಿಕೊಂಡು ನೆಮ್ಮದಿಯ ಬದುಕನ್ನು ಅರಸುವಂತಾಗಿದೆ. ಚಿಕ್ಕದೊಂದು ಉದ್ಯೋಗ ಹಳ್ಳಿಯಲ್ಲೇ ಕೃಷಿಯೊಂದಿಗೆ ಇದ್ದರೆ ಚೆನ್ನ ಎಂಬಂತಾಗಿದೆ. ಹಾಗಾಗಿ ಇದುವರೆಗೆ ಶಾಲಾ ಮೇಷ್ಟುಗಳಾಗಲು ಹಿಂಜರಿಯುತ್ತಿದ್ದವರು ಈಗ ಅದರತ್ತಲೂ ಕಣ್ಣು ಹಾಯಿಸಿದ್ದಾರೆ.

ಹೊಸ ಬದಲಾವಣೆ ಆರಂಭವಾಗಲಿ. ಇದು ಹೆಚ್ಚು ಪ್ರಚಾರವಾಗಲಿ. ಸಮಸ್ಯೆ ಜೊತೆ ಸಾಗಿ ಪರಿಹಾರ ಕಾಣಲಿ. ಪರಿಹಾರ ಕಾಣದ ಸಮಸ್ಯೆಗಳನ್ನೇ ಮತ್ತೆ ಮತ್ತೆ ಕೆದಕುವುದು, ಸಮಸ್ಯೇ .. ಇದು ಸಮಸ್ಯೆ... ಅಂತ ರೈತರಿಗೆ ಹೇರುವುದು ಬೇಡ.

11 ಅಕ್ಟೋಬರ್ 2008

ತಪ್ಪಿದ ಬದುಕಿಗೆ ಕೊನೆ..???



ಇದು 2008 ರಲ್ಲೂ ಇರುವ ಜ್ವಲಂತ ಸಮಸ್ಯೆ.

ಸರಕಾರ ಯಾವುದೇ ಬರಲಿ , ಯಾರೇ ಮುಖ್ಯಮಂತ್ರಿಗಳಾಗಲಿ, ಏನೇ ಆದರೂ ಕೂಡಾ ಈ ಜನರ ಸಮಸ್ಯೆಗೆ ಪರಿಹಾರವೇ ಇಲ್ಲ. ಅವರ ಅಳಲನ್ನು ಕೇಳುವ ಮಂದಿಯೆ ಇಲ್ಲ. ನಗರದ ಕನಸನ್ನು ಹೊತ್ತ ಈ ಮಂದಿಯ ಪಾಡನ್ನು ನೋಡಿ ನಗರದಲ್ಲೆ ಕುಳಿತಿರುವ ಮಂದಿಗೆ ಅರ್ಥವಾದೀತೇ?.

ಸ್ವಾಮಿ ನಾವು ಯಾವಾಗ "ಮುಂದುವರಿದ"ವರಾಗುವುದು?. ಮುಂದುವರಿದ ದೇಶ ಎಂದರೆ ಈ ಹಳ್ಳೀಗೆ ಸೇತುವೆ ಮಾಡಿದರೆ ಮಾತ್ರಾ ಅಂತ ಅರ್ಥ ಅಲ್ಲ. ಆದರೆ ಈ ಸಮಸ್ಯೆ ಇರುವುದು ಇಂದು ನಿನ್ನೆಯದಲ್ಲ ಯಾವಾಗ ನಾಗರಿಕತೆ ಆರಂಭವಾಯೊತೋ ಅಂದಿನಿಂದ. ಹಾಗಾಗಿ ಈ ಜನರ ಪಾದು ನನಗೆ ಸುದ್ದಿಯೆನಿಸಿತು. ಜಗತ್ತಿಗೆ ಅರಿವಾಗಬೆಕು ಎನ್ನಿಸಿತು.

ಇದು ಬೆಳ್ತಂಗಡಿ ಸಮೀಪದ ನಿಟ್ಟೋಡಿ ಎಂಬ ಊರು.ಎಲ್ಲಾ ಊರುಗಳಂತೆಯೇ ಮಾನವ ಸಂಬಂಧದ ಮೇಲೆ ಪ್ರೀತಿ,ನಂಬಿಕೆಯನ್ನು ಉಳಿಸಿಕೊಂಡಿರುವ ಊರು. ಕಾರಣ, ಸುಮಾರು 50 ವರ್ಶಗಳಿಂದ ದ್ವೀಪವಾಗುತ್ತಿರುವ ಈ ಊರಿಗೆ ಸೇತುವೆಯನ್ನು ನಿರ್ಮಿಸಿಕೊಡುತ್ತೇವೆ ಅಂತ ಜನನಾಯಕರು ಹೇಳುತ್ತಲೇ ಬಂದಿದ್ದರು. ಇದುವರೆಗೆ ಕೈಗೂಡಲಿಲ್ಲ.ಆದರೂ ಅವರ ಮಾತನ್ನು ನಂಬಿದ್ದರು. ಓಟು ಬಂದಾಗ ಅಣ್ಣಾ "ನಮಸ್ಕಾರ" ಎನ್ನುತ್ತಾ ಬರುವ ನಾಯಕರು ಓಟು ಮಗಿದ ಬಳಿಕ ಅಲ್ಲಿಂದಲೇ ನಮಸ್ಕಾರ... ಹಾಗೆನ್ನುತ್ತಾ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾ ಮಾತಿಗೆ ಆರಂಬಿಸಿತ್ತಾರೆ. ಅಂದು ಇಂದಿರಾ ಗಾಂಧಿ ಕಾಲದಲ್ಲಿ ಒಮ್ಮೆ ಸೇತುವೆಗೆ ಸಿದ್ದತೆ ನಡೆದಿದ್ದಂತೆ ನಂತರ ಅದೆಲ್ಲವೂ ಮಂಗ ಮಾಯ...! ಆ ಬಳಿಕ ಯಾವುದೇ ಕೆಲಸಗಳು ನಡೆದಿಲ್ಲ. . ಈ ಪುಟ್ಟ ಹಳ್ಳಿಯಲ್ಲಿ 4000 ಜನರಿದ್ದಾರೆ. ಎರಡು ನದಿಗಳು ಈ ಹಳ್ಳಿಯನ್ನು ದ್ವೀಪವನ್ನಾಗಿಸುತ್ತದೆ. ಹಾಗಾಗಿ ಇವರಿಗೆ ನದಿ ದಾಟಲು ದೋಣಿಯ ಬದುಕೇ ಗತಿ. ಮಳೆ ಜೋರಾಗಿ ಬಂದರೆ ನದಿಯಲ್ಲಿ ದೋಣಿ ಸಾಗದು. ಹೀಗಾಗಿ ಜೀವಗಳು ಅತ್ತ.. ಇತ್ತ ...ಇದು ಕಳೆದ 50 ವರ್ಷಗಳ ಸಮಸ್ಯೆ. ನಮಗೆ ಯಾವುದೋ ಮೂಲಗಳಿಂದ ಈ ಸಮಸ್ಯೆ ತಿಳಿದಿತ್ತು. ಆದರೆ ಇದುವರೆಗೆ ಯಾವುದೇ ಮಾಧ್ಯಮಗಳು ಈ ಬಗ್ಗೆ ಬೆಳಕು ಚೆಲ್ಲಿರಲಿಲ್ಲ. ಹೀಗಾಗಿ ನಾವು ಹೋದಾಕ್ಷಣ ನಾವೇ ಅವರಿಗೆ ಸೇತುವೆಯನ್ನು ನಿರ್ಮಿಸಿಕೊಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಜನ ಖುಷಿಯಾದಂತಿತ್ತು.ಹೀಗಾಗಿ ಅವರ ನಿರೀಕ್ಷೆ ಸುಳ್ಳಾಗದಿರಲಿ ಸರಕಾರ ಈ ಬಗ್ಗೆ ಗಮನ ಹರಿಸಲಿ ಅಂತ "ಜೀವವಿರುವ" ಭಗವಂತನಲ್ಲಿ ಪ್ರಾರ್ಥಿಸಿದೆವು.ಕೊನೆಗೊಮ್ಮೆ ಸೇತುವೆ ಬೇಡ ತೂಗುಸೇತುವೆಯಾದರೂ ಆಗಲಿ.

ತಪ್ಪದ ತೆಪ್ಪದ ಬದುಕಿಗೆ ಕೊನೆಯಾಗಲಿ...

ತಪ್ಪಲಿ ಅವರ ದೋಣಿಯ ಬದುಕು...


ನಾಯಿ ಕೂಡಾ ದೋಣಿಗಾಗಿ ಕಾಯುತ್ತಿದೆಯೇ..??

05 ಅಕ್ಟೋಬರ್ 2008

ಬಸ್ ಯಾನ ....




ಬಸ್ ಪ್ರಯಾಣ.ಅನೇಕ ದಿನಗಳ ಬಳಿಕ ಅನುಭವವಾಯಿತು.ಅದರಲ್ಲೂ ಲೋಕಲ್ ಬಸ್ ಗಳಲ್ಲಿ ಪ್ರಯಾಣಿಸುವ ಅನುಭವ ಇದೆಯಲ್ಲ ಅದು ಒಂದು ರೀತಿಯಲ್ಲಿ ಖುಷಿ...ಸುದ್ದಿಯ ಮೂಲ.... ಇನ್ನೊಂದು ರೀತಿಯಲ್ಲಿ ಮಾನಸಿಕ ಕಿರಿ ಕಿರಿ. ನೈಟ್ ಬಸ್ ಗಳ ಪ್ರಯಾಣವಾದರೆ ಹಾಗಲ್ಲ. ರಾತ್ರಿ ಬಸ್ ಹತ್ತಿದರೆ ಬೆಳೆಗ್ಗೆ ಎಲ್ಲಿ ಬೇಕೋ ಅಲ್ಲಿ. ವಾಹನದ ಸದ್ದು ಬಿಟ್ಟರೆ ಮತ್ತೇನೂ ಇಲ್ಲ. ರಾತ್ರಿ ಬಸ್ ಗಳ ಪ್ರಯಾಣದ ಅನುಭವಕ್ಕಿಂತ ಲೋಕಲ್ ಬಸ್ ಪ್ರಯಾಣ ವಿಶಾಲ ಅನುಭವ ನೀಡುತ್ತದೆ.

ನಾನು ಲೋ(ಸ್ಲೋ)ಕಲ್ ಬಸ್ ನಲ್ಲಿ ಪ್ರಯಾಣಿಸದೆ ಅನೇಕ ಸಮಯಗಳಾಗಿತ್ತು.ಅನಿವಾರ್ಯವಾಗಿ ಕೆಲ ದಿನಗಳು ಬಸ್ ನಲ್ಲಿ ಪ್ರಯಾಣಿಸಬೇಕಾದ ಸಂದರ್ಭ ಬಂದಿತ್ತು. ಬಹುಶ: ಕಾಲೇಜು ದಿನಗಳ ಬಳಿಕ ಸ್ಕೂಟರ್ , ಬೈಕ್ , ಕಾರುಗಳಲ್ಲೆ ಪಯಾಣಿಸುತ್ತಿದ್ದ ಸಂದರ್ಭದಲ್ಲಿ ಆಗುತ್ತಿರುವ ಅನುಭವಕ್ಕಿಂತ ಇದು ಎಷ್ಟೋ ಭಿನ್ನ. ಪುತ್ತೂರಿಗೆ ತೆರಳಲು ಹಳ್ಳಿಯಿಂದ ಅಂದರೆ ನಮ್ಮಂತ ದೂರದ ಮಂದಿಗೆ ಬೆಳಗ್ಗೆ 7 ಗಂಟೆಗೆ ಹೊರದಬೇಕು. ಆ ಬಸ್ಸು ಬಿಟ್ತರೆ ಮತ್ತೆ ಬೇರೆ ಬಸ್ಸಿಲ್ಲ.ಹಾಗಾಗಿ 45 ಕಿ ಮೀ ದೂರದ ಪುತ್ತೂರಿಗೆ ಹೋಗಲು ಬೆಳಗ್ಗೆ ಬೆಗನೆ ಎದ್ದು ನಿತ್ಯ ಕರ್ಮವನ್ನು ಮುಗಿಸಿ ಬಸ್ಸಿಗೆ ಹೊರಡಲು ಅನುವಾಗಬೆಕು. ಅಂತೂ ಹೊರಟು ಬಂದಾಗ ಬಸ್ಸು ತಪ್ಪಿತೆಂದರೆ ಮತ್ತೆ 4-5 ಕಿ ಮೀ ದೂರ ಕಾಲ್ನಡಿಗೆ. ಆಗ ಬೈಯುವುದು ಮನೆಯಲ್ಲಿರುವ ಅಮ್ಮನನ್ನ ಅಥವಾ ಇನ್ನಾರನ್ನದರೂ. ಯಾಕೆಂದರೆ ಬೇಗನೆ ಸಿದ್ದ ಪಡಿಸಿಕೊಡಲಿಲ್ಲ, ಈಗ ನಾನು ನಡಿಯುವ ಹಾಗಾಯಿತಲ್ಲಾ ಅಂತ ಕೋಪ.ಒಂದು ವೇಳೆ ಬಸ್ಸು ಸಿಕ್ಕಿತು ಎನ್ನಿ.ಸೋಮವಾರವಾದರಂತೂ ಬಸ್ ರಶ್. ಸೀಟು ಸಿಗಲಾರದು. ಪುತ್ತೂರಿನವರೆಗೂ ಸ್ಟ್ಯಾಂಡಿಂಗ್..!.ಉಳಿದ ದಿನಗಳಲ್ಲಿ ಪರವಾಗಿಲ್ಲ ಎನ್ನುಬಹುದು. ಇಷ್ಟೆಲ್ಲಾ ಆದ ಬಳಿಕ ಪುತ್ತೂರಿಗೆ ತಲಪಿದರೆ. ಮತ್ತೆ ಕೆಲಸದ ಜೊತೆಗೆ ನೆನಪಾಗುವುದು ಸಮಯ. ಸಂಜೆ ಲಾಸ್ಟ್ ಬಸ್ 4.30ಕ್ಕೆ. ಅದಕ್ಕೂ ಮುನ್ನ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕು. ನಮಗೆಲ್ಲಾ ಎಲ್ಲಾಗುತ್ತೆ ಹಾಗೆ. ಅಲ್ಲಿ ಒಬ್ಬ ಮಿತ್ರ ಸಿಕ್ಕರೆ ಮಾತು... ಅಂತೂ ಇಂತೂ ಹಾಗೂ ಹೀಗೂ ಸಂಜೆಯಾಗಿ ಬಿಡುತ್ತೆ. ಬಸ್ ಗೆ ಸಮಯವೂ ಆಗಿ ಬಿಡುತ್ತೆ. ಇದು ನಮ್ಮಂಥವರ ಪಾಡಾದರೆ. ಹಳ್ಳಿಗರದ್ದು ಅಂದರೆ ಕೃಷಿಯಲ್ಲಿ ತೊಡಗಿಕೊಂಡಿರುವ ಮಂದಿಯದ್ದು ಹಾಗಲ್ಲ. ಅವರದ್ದು ಪೂರ್ವಯೋಜಿತವಾದ ಕೆಲಸಗಳು.ಇಂಥವಾರ ಪುತ್ತೂರಿಗೆ ಹೋಗುವುದು ಅಂತ ಸಿದ್ದತೆ ಮಾಡಿರುತ್ತಾರೆ. ಅಂದರೆ ಹಳ್ಳಿಯಲ್ಲಿ ದೊಡ್ಡ ಸಿಟಿ ಅಂದರೆ ಪುತ್ತೂರೆ. ಹಾಗಾಗಿ ಮೊದಲೆ ಸಿದ್ದತೆ. ಬೆಳಗ್ಗೆ ಬೇಗನೆ ಹೊರಟು ಅಷ್ಟೂ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ನಿಜವಾಗಲೂ ಪುತ್ತೂರಿಗೆ ನಮ್ಮೂರಿಂದ ಇರುವುದು 40 ರಿಂದ 45 ಕಿ ಮೀ. ಕೇವಲ 0.45 ರಿಂದ 1 ಗಂಟೆ ಪ್ರಯಾಣ..!! ಆದರೆ ವಾಹನಗಳ ಓಡಾಟ ಹಾಗೂ ರಸ್ತೆಯ ಕಾರಣದಿಂದಾಗಿ ಇದೆಲ್ಲಾ ಸಮಸ್ಯೆ.

ಇನ್ನು ಬಸ್ ಎಂದರೆ ಅಲ್ಲಿ ಮಾತನಾಡದ ವಿಷಯಗಳಿರುವುದಿಲ್ಲ. ಏನೆಲ್ಲಾ ಚರ್ಚೆಗಳಾಗುತ್ತವೆ. ಅದು ಹಾಗಲ್ಲವಂತೆ .. ಹೀಗಂತೆ... ಅಲ್ಲಿ ಹೀಗೊಂದು ಘಟನೆಯಾಗಿದೆಯಂತೆ... ಏನಂತೆ ಅದು ... ಹೀಗೆಯೆ ಅನೆಕ ಚರ್ಚೆಗಳು ನಡೆಯುತ್ತದೆ. ಕೆಲವೊಮ್ಮೆ ಕಂಡೆಕ್ಟರೊಂದಿಗೆ ಚಿಲ್ಲರೆಗಾಗಿ "ಚಿಲ್ಲರೆ" ಜಗಳ. "ನೋಡಿಕೊಳ್ಳು"ವ ಹಂತಕ್ಕೂ ಬರುತ್ತೆ ಬಿಡಿ. ಇಂತಹ ಹಲವು ಮಜಲುಗಳನ್ನು ದಾಟಿ ನೂರೆಂಟು ಕಡೆ ನಿಲ್ಲುವ ಬಸ್ಸು ಪುತ್ತೂರಿಗೆ ತಲಪುವಾಗ ಬರೊಬ್ಬರಿ 9 ಗಂಟೆ.ಅಂದರೆ ಭರ್ತಿ 2 ತಾಸು ಬಸ್ ಪ್ರಯಾಣ.


ಮತ್ತೆ ಬಸ್ ಯಾನದ ಅದರಲ್ಲೂ ಹಳ್ಳಿಯೊಳಗೆ , ನನ್ನೂರಲ್ಲೇ ಇರುವ , ನನ್ನೂರಿಗೇ ಬರುವ ಅದೇ ಬಾಳುಗೋಡು ಬಸ್ ನಲ್ಲಿ ಪ್ರಯಾಣಿಸುವ ಅನುವವಂತೂ ಖುಷಿಯಾಗಿತ್ತು. ಆದರೆ ಮತ್ತೆ ಮತ್ತೆ ಅಂತಹ ಅವಕಾಶ ಸಿಗದಿರಲಿ ಅಂತ ಮನದೊಳಗೆ ಹೇಳಿಕೊಳ್ಳುತ್ತಿರುತ್ತೇನೆ. ಯಾಕೆಂದರೆ 2 ಗಂಟೆ ಬಸ್ ನಲ್ಲಿ ಕುಳಿತುಕೊಳ್ಳುವುದೇ ಒಂದು ಸಜೆ.