21 ಡಿಸೆಂಬರ್ 2017

ಹೊಲದಲ್ಲಿ ಟ್ರಾಕ್ಟರ್ ಓಡಿಸುವುದು ಕೀಳಲ್ಲ...!




ಅನೇಕರು ಅಂದುಕೊಳ್ಳುತ್ತಾರೆ, ಹೊಲದಲ್ಲಿ ಮಣ್ಣು ಮೆತ್ತಿಸಿಕೊಂಡು ಟ್ರಾಕ್ಟರ್ ಓಡಿಸುವುದು ಬದುಕಿನ ಸೋಲು, ಇದು ಸೋಲಿನ ಜೀವನ ಎಂದು ಬಿಂಬಿಸುತ್ತಾರೆ. ಈ ಮನಸ್ಥಿತಿಯಿಂದ ಹುಡುಗರು ಹೊರಬರಬೇಕು ಎಂದು ಕೃಷಿಕ ಲಕ್ಷ್ಮಣ ದೇವಸ್ಯ ಹೇಳುತ್ತಿರುವಾಗ ಅವರ ಮನಸ್ಸಿನಲ್ಲಿ ಉತ್ಸಾಹ ಕಂಡುಬರುತ್ತಿತ್ತು.ಕಾರಣ ಇಷ್ಟೇ, ಅವರು ಇಂಜಿನಿಯರ್ ಆಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿ ವಿದೇಶದಲ್ಲೂ ಇದ್ದು ಈಗ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶಸ್ವೀ ಬದುಕು ಸಾಗಿಸುತ್ತಿದ್ದಾರೆ.

ಹಳ್ಳಿಯಿಂದ ಬೆಂಗಳೂರು ಬಸ್ಸು ಹತ್ತುವ ಹುಡುಗನ ಮನಸ್ಸಿನಲ್ಲಿರುವ ಯೋಚನೆ ಒಂದೇ, ಲಕ್ಷ ಹಣ ಎಣಿಸಬೇಕು, ಸುಂದರವಾದ ಮನೆಯೊಂದನ್ನು ನಗರದ ನಡುವೆ ಕಟ್ಟಬೇಕು..!. ಅದರಾಚೆಗಿನ ಬದುಕು ಆಗ ಕಾಣಿಸುವುದಿಲ್ಲ. ದಿನ ಕಳೆದಂತೆ, ಇದೆಲ್ಲಾ ಕನಸು ಈಡೇರಿದ ನಂತರ ಏನು ಎಂಬ ಪ್ರಶ್ನೆ ಉಳಿದು ಬಿಡುತ್ತದೆ. ಹೊಸತೊಂದು ಸಾಧನೆ ಇಲ್ಲವಾಗುತ್ತದೆ. ಇದಕ್ಕಾಗಿಯೇ ದೊಡ್ಡ ಉದ್ಯೋಗ ಬಿಟ್ಟು ಹಳ್ಳಿಗೆ ಬಂದ ಯುವಕ ಲಕ್ಷ್ಮಣ ದೇವಸ್ಯ ಎಲ್ಲಾ ಯುವಕರಿಗೂ ಮಾದರಿಯಾಗುತ್ತಾರೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೇವಸ್ಯ ಎಂಬಲ್ಲಿ ಕೃಷಿ ಭೂಮಿ ಹೊಂದಿರುವ ಲಕ್ಷ್ಮಣ, ಬೆಂಗಳೂರಿನಲ್ಲಿ ಎಚ್‍ಎಎಲ್‍ನಲ್ಲಿ ಇಂಜಿನಿಯರ್ ಆಗಿದ್ದರು. ನಂತರ ಕೆನಡಾದಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಇದೆಲ್ಲಾ ಬದುಕು ಕೆಲವೇ ದಿನ ಎಂದು ಆವಾಗ ಅನಿಸಿತೋ, ಅಂದೇ ಹಳ್ಳಿಯ ತಮ್ಮ ಕೃಷಿ ಭೂಮಿಗೆ ಕುಟುಂಬ ಸಮೇತರಾಗಿ ಬರಲು ನಿರ್ಧರಿಸಿ  ಕೃಷಿಯಲ್ಲಿ ತೊಡಗಿಸಿಕೊಂಡರು. ಆದರೆ ಮತ್ತೆ ಒಂದು ವರ್ಷದ ಬಳಿಕ ಅಮೇರಿಕಾದಲ್ಲಿ ಕೆಲಸ ಮಾಡಿದರು, ಈಗ ಮತ್ತೆ ಹಳ್ಳಿಯ ಕೃಷಿ ಭೂಮಿಯಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದಾರೆ.

ಕೃಷಿಗೆ ಇಳಿದು ಒಂದು ವರ್ಷದ ಬಳಿಕ ಮತ್ತೆ ಅಮೇರಿಕಾದಲ್ಲಿ ಕೆಲಸ ಮಾಡಿದ ಅನುಭವವೂ ಲಕ್ಷ್ಮಣ ಚೆನ್ನಾಗಿ ವಿವರಿಸುತ್ತಾರೆ. ರಾಜಧಾನಿಯಿಂದ ಕೃಷಿಗೆ ಬಂದಾಗ ಅನೇಕ ಕೃಷಿಕರು ನೆಗೆಟಿವ್ ಆಗಿಯೇ ಮಾತನಾಡಿದರು. ಕೃಷಿ ಯಶಸ್ಸಿನ ಬಗ್ಗೆ ದಾರಿ ತೊರಿಸಲಿಲ್ಲ, ಬದಲಾಗಿ ಮಣ್ಣು ಮೆತ್ತಿಸಿಕೊಳ್ಳುವುದೇ ಸೋಲು ಎಂದೇ ಆಗಾಗ ಹೇಳಿದರು. ಈ ಎಲ್ಲದರೂ ನಡುವೆಯೂ ತಾನು ನಂಬಿದ ಬದುಕನ್ನು ಬಿಡದೆ ನಡೆದು ಬಂದ ಛಲಗಾರ. ಹೊಸ ಮಾದರಿಯ ಹಟ್ಟಿಯೊಂದನ್ನು ನಿರ್ಮಾಣ ಮಾಡಿದರು, ದೊಡ್ಡ ದೊಡ್ಡ ಕನಸು ಇಟ್ಟುಕೊಂಡರೂ ಕೃಷಿಯ ಆರ್ಥಿಕ ನೆರವು ಸಾಕಾಗಾದಾಗ ಮತ್ತೆ ಕುಟುಂಬ ಸಮೇತರಾಗಿ ಅಮೇರಿಕಾಕ್ಕೆ ತೆರಳಿ ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡಿ ಒಂದಷ್ಟು ಆದಾಯ ಗಳಿಸಿ ಈಗ ಮತ್ತೆ ಕೃಷಿ ಭೂಮಿಗೆ ಇಳಿದಿದ್ದಾರೆ. ಈಗ ಹಳೆಯ ಎಲ್ಲಾ ಸೋಲುಗಳನ್ನೂ ಎದುರಿಸಿ ಸಮರ್ಥವಾಗಿ ಕೃಷಿ ಮಾಡುತ್ತಿದ್ದಾರೆ. ಯಶಸ್ಸು ಕಾಣುತ್ತಿದ್ದಾರೆ. ಹಾಗಂತ ಸಾಫ್ಟ್‍ವೇರ್ ಬದುಕು ಬದುಕೇ ಅಲ್ಲ ಎಂದು ಎಲ್ಲೂ ಲಕ್ಷ್ಮಣ ಹೇಳುತ್ತಿಲ್ಲ. ದೇಶದ ಪ್ರಗತಿಗೆ, ಕೃಷಿ ಪ್ರಗತಿಗೆ ಅದೂ ಬೇಕು. ಆದರೆ ಹೊಲ ಬಿಟ್ಟು, ಕೃಷಿ ಬಿಟ್ಟು ಕಷ್ಟ ಎನ್ನುವುದಷ್ಟೇ ನನ್ನ ಉದ್ದೇಶ ಎನ್ನುತ್ತಾರೆ.
ಮುಂದೇನು ಎಂಬ ಕಲ್ಪನೆಯನ್ನೂ ಚೆನ್ನಾಗಿ ಇರಿಸಿಕೊಂಡಿದ್ದಾರೆ.  ಕೃಷಿಕರದ್ದೇ ನೆಗೆಟಿವ್ ಸಂಗತಿಗಳಿಗೆ ಬೆಲೆ ಕೊಡದೇ ತನ್ನದೇ ಮಾದರಿಯಲ್ಲಿ ಕೃಷಿ ನಡೆಸಿ ಮಾದರಿಯಾಗುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಕೃಷಿ ಜೊತೆಗೆ ಆಟವಾಡುತ್ತಾ ಪಾಠ ಕಲಿಯುವ ಮತ್ತು ಪರೀಕ್ಷೆ ಬರೆಸುವ ಉದ್ದೇಶ ಹೊಂದಿದ್ದಾರೆ. ನಗರದಲ್ಲಿದ್ದ ಅವರ ಪತ್ನಿಯೂ ಕೃಷಿಯ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.
ಮುಂದೇನು ಎಂಬ ಯೋಚನೆಗೆ ಉತ್ತರ "ವಿಗತಂ ವಿನೋದಂ" ಎಂಬ ಫ್ಯಾಕ್ಟರಿ ನಿರ್ಮಾಣ. ಈ ಕಂಪನಿಯನ್ನು ತನ್ನ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಲು ಭೂಮಿಕೆ ಸಿದ್ದ ಪಡಿಸಿದ್ದಾರೆ. ಇದರ ಉದ್ದೇಶ ಸ್ಪಷ್ಟವಾಗಿದೆ, ವಿಜ್ಞಾನ-ಗಣಿತ-ತಂತ್ರಜ್ಞಾನದ ಸಹಕಾರದಿಂದ ವಿನೋದವಾಗಿ ಮಕ್ಕಳಿಗೆ ಪಾಠ ಹೇಳಿಕೊಡುವ ವಿವಿಧ ವಸ್ತುಗಳ ತಯಾರಿ, ಮಕ್ಕಳನ್ನು  ಕ್ರಿಯೇಟಿವ್ ಆಗಿ ಬೆಳೆಸುತ್ತಾ ಹಳ್ಳಿಯ ಬದುಕಿಗೆ ಆದ್ಯತೆ ನೀಡುವುದರ ಜೊತೆಗೆ ಮಣ್ಣು ಮೆತ್ತಿಸಿಕೊಳ್ಳುವುದು ಸೋಲಿನ ಬದುಕಲ್ಲ, ಅದುವೇ ಮನುಷ್ಯ ಬದುಕಿನ ಮೊದಲ ಮೆಟ್ಟಿಲು ಎಂಬ ಪಾಠ ಮಾಡಲು ಸಿದ್ದ ಮಾಡಿಕೊಂಡಿದ್ದಾರೆ. ಇದೆಲ್ಲಾ ಈ ಬಾರಿ ಮಾಡಿಯೇ ತೀರುತ್ತೇನೆ ಎಂದು ಲಕ್ಷ್ಮಣ ಜಿದ್ದಿಗೆ ಬಿದ್ದಿದ್ದಾರೆ.
ಅನೇಕ ಯುವಕರು ಕೃಷಿ ಭೂಮಿ ಬಿಟ್ಟು ನಗರದ ವಾಸನೆ ಹಿಡಿದಾಗಲೇ ಹಳ್ಳಿ ವೃದ್ಧಾಶ್ರಮವಾಗುವ ಈ ಹೊತ್ತಿನಲ್ಲಿ, ವಿವಿಧ ಸವಾಲುಗಳನ್ನು  ಎದುರಿಸಲಾಗದೆ ಕೃಷಿಕರೇ  ತಮ್ಮ ಮಕ್ಕಳಿಗೆ ಮಣ್ಣಿನ ಬದುಕೇ ಬೇಡವೆನ್ನುವ ಮನೋಸ್ಥಿತಿ ಬೆಳೆಸುವ ಈ ಕಾಲದಲ್ಲಿ ಮಣ್ಣಿನ ಬಗ್ಗೆ, ಕೃಷಿ ಬದುಕಿನ ಬಗ್ಗೆ ಪಾಠ ಮಾಡುವ ಇಂತಹ ಮನಸ್ಸುಗಳಿಗೆ ಬೆಂಬಲ ನೀಡದೇ ಇದ್ದರೂ ನೆಗೆಟಿವ್ ಹೇಳದಿದ್ದರೆ ಸಾಕು ಅಷ್ಟೆ...!. ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಂದಿಗೂ, ನಮ್ಮದೇ ಭೂಮಿಯಲ್ಲಿ ಕೃಷಿ ಮಾಡಿ ಬದುಕುವ ವ್ಯಕ್ತಿಯೊಂದಿಗೂ ಇಲ್ಲಿರುವ ಮಂದಿ ಮಾತನಾಡಿಸುವ ಶೈಲಿ ಸಮಾನವಾಗಿದ್ದರೆ ಸಾಕು.
ಕೃಷಿಯ ಬಗ್ಗೆ ಅನಾದಾರ ತೋರುವ ಮಂದಿ , ಕೃಷಿ ವೃತ್ತಿಪರತೆಯ ಬಗ್ಗೆಯೂ ಅದೇ ದಾಟಿಯಲ್ಲಿ ಮಾತನಾಡಲಾರರು. ವಿದೇಶದ ಕೃಷಿಯಲ್ಲಿ ಕಾಣುವ ವೃತ್ತಿಪರತೆ, ದಕ್ಷತೆ ಇಲ್ಲಿ ಕಾಣದು. ಅನೇಕ ಬಾರಿ ಈ ಬಗ್ಗೆ ಬೇಸರ ತಂದಿದೆ. ಕ್ವಾಲಿಟಿ, ಬದ್ಧತೆಯಲ್ಲಿ ವಿದೇಶಗಳಿಂದ ನಾವು ತುಂಬಾ ಹಿಂದಿದ್ದೇವೆ. ಕೃಷಿ ಮಾತ್ರಾ ಬೇಡ ಎನ್ನುವ ನಾವು, ಕೃಷಿ ಬದ್ಧತೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಲಕ್ಷ್ಮಣ ಹೇಳುವಾಗ ಕೃಷಿ ಇಲ್ಲಿ ಏಕೆ ಸೋಲುತ್ತಿದೆ ಎನ್ನುವುದು  ಸ್ಪಷ್ಟವಾಗುತ್ತದೆ. ಇದಕ್ಕಾಗಿಯೇ ಹಳ್ಳಿಯ ಮಣ್ಣಿನಲ್ಲಿ ಯಶಸ್ಸು ಕಾಣಲು ಯುವ ಮನಸ್ಸುಗಳು ಕಾಣಬೇಕು, ಕೃಷಿ ಬದ್ಧತೆ ಹೆಚ್ಚಾಗಬೇಕು.

( ಹೊಸದಿಗಂತ - ಭೂಮಿಗೀತ - ಮಣ್ಣಿಗೆ ಮೆಟ್ಟಿಲು - 20 -12 - 2017 )


06 ಡಿಸೆಂಬರ್ 2017

ಹಳ್ಳಿಯಲ್ಲಿ ಸೋಲು ಕಾಣುವುದಿಲ್ಲ , ಹೊಲದಲ್ಲಿ ಸಾಲವೂ ಇಲ್ಲ....!





ಅದು ಮಹಾರಾಷ್ಟ್ರದ ಪುಟ್ಟ ಹಳ್ಳಿ. ಬರಗಾಲದಿಂದ ತತ್ತರಿಸಿ ಹೋಗಿದ್ದ ಊರು ಅದು. ಯಾವುದೇ ಕೃಷಿ ಮಾಡಿದರೂ ಕೈಗೆ ಸಿಗದ ಕಾಲ. ಆದರೆ ಈಗ ಕೃಷಿ ಯಶಸ್ಸು ಕಂಡಿದೆ, ಅಲ್ಲಿನ ಯುವಕನೊಬ್ಬ ಮಾಡಿರುವ ಪ್ರಯತ್ನ ಇಂದು ಉಳಿದೆಲ್ಲಾ ಕೃಷಿಕರಿಗೆ ಮಾದರಿಯಾಗಿದೆ...!. ನಮ್ಮ ನಾಡಿನ ಹುಬ್ಬಳ್ಳಿ ಸಮೀಪದ ಹನುಮನಹಳ್ಳಿ, ರಾಮಪುರ ಮೊದಲಾದ ಪ್ರದೇಶದಲ್ಲಿ ಕೂಡಾ ಬರಗಾಲದಿಂದ ಕೃಷಿಯೇ ಸೋಲುತ್ತಿದೆ ಎನ್ನುವ ಕೂಗು. ಇಲ್ಲೂ ಈಗ ಕಾಲ ಬದಲಾಗಿದೆ. ಇಡೀ ನಾಡಿಗೆ ಮಾದರಿಯಾಗಿದೆ. ಕೃಷಿಗೆ , ಕೃಷಿಕನಿಗೆ ಸೋಲು ಇಲ್ಲ ಎಂಬ ಸಂದೇಶ ಇದೆರಡೂ ಹಳ್ಳಿಗಳು ನೀಡಿವೆ. ಇದೆರಡೂ ಹಳ್ಳಿಯಲ್ಲಿ ಬದಲಾವಣೆಗೆ ಕಾರಣವಾದ್ದು ಸಾವಯವ ಪದ್ಧತಿಯ ಕೃಷಿ ಹಾಗೂ ಬದಲಾವಣೆಯ ಕೃಷಿ ಪದ್ದತಿ.

ನಾಡಿನಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಮೇಲಿನಿಂದ ಮೇಲೆ ಕೇಳುತ್ತಿದೆ. ಇದಕ್ಕೆ ಕಾರಣ ಕೇಳಿದರೆ ಬೆಳೆ ನಷ್ಟ ಹಾಗೂ ಸಾಲವೇ ಉತ್ತರವಾಗಿ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಬರಗಾಲವನ್ನೂ ಮೆಟ್ಟಿ ನಿಂತ ಉದಾಹರಣೆಗಳು ಸಾಕಷ್ಟು ಬಂದರೂ ರೈತರ ಮಾನಸಿಕ ಸ್ಥಿತಿ ಬದಲಾಗುತ್ತಿಲ್ಲ. ಬರಗಾಲಕ್ಕೆ, ನೀರಿನ ಕೊರತೆಗೆ ಸರಿಹೊಂದುವ ಬೆಳೆಯತ್ತ, ಕೃಷಿ ಪದ್ದತಿಯಲ್ಲಿ ಬದಲಾವಣೆಯ ಬಗ್ಗೆ ಚಿಂತನೆ ನಡೆಸದೇ ಇರುವುದು ತಿಳಿಯುತ್ತದೆ. ಭವಿಷ್ಯದಲ್ಲಿ ಸಮಸ್ಯೆ ಇರಬಹುದಾದರೂ ಏಕಬೆಳೆಯನ್ನೇ ಬಹುತೇಕ ರೈತರು ನೆಚ್ಚಿಕೊಂಡಿದ್ದಾರೆ. ಅದು ಬದಲಾಗಬೇಕಿದೆ.
ಅದು 2012 ರ ಸಮಯ ಹುಬ್ಬಳ್ಳಿಯ ವಿವಿದೆಡೆ ಬರಗಾಲದ ಛಾಯೆ ಕಂಡುಬಂದಿತ್ತು. ಅನೇಕ ರೈತರು ಕಂಗಾಲಾಗಿದ್ದರು. ಅನೇಕ ವರ್ಷಗಳಿಂಲೂ ಪರಂಪರಾಗತವಾಗಿ ಬೆಳೆದುಕೊಂಡು ಬಂದಿದ್ದ ರಾಗಿಯನ್ನೇ ಬೆಳೆಯುತ್ತಿದ್ದರು. ಬಹುಪಾಲು ರೈತರು ಪ್ರತೀ ವರ್ಷವೂ ಸೋಲುತ್ತಿದ್ದರು. ಬೆಳೆ ನಷ್ಟ ಅನುಭವಿಸುತ್ತಿದ್ದರು. ಆದರೆ ಆ ಊರಿನ ಕೆಲ ರೈತ ಮಾತ್ರ ಅತ್ಯುತ್ತಮ ಇಳುವರಿಯನ್ನು ತಂದರು. ಇದು ಉಳಿದೆಲ್ಲಾ ರೈತರಿಗೆ ಅಚ್ಚರಿ ಕಾದಿತ್ತು, ಇದಕ್ಕೆ ಕಾರಣ ಹುಡುಕಲು ತೊಡಗಿದರು. ಆಗ ಸಿಕ್ಕಿದ ಉತ್ತರ ಉಳಿದ ರೈತರಿಗೂ ಸೋಲಿನಿಂದ  ಹೊರಬರಲು ಕಾರಣವಾಯಿತು. ಬರಗಾಲಕ್ಕೆ ಉತ್ತರ ನೀಡಲು ಸಾಧ್ಯವಾಯಿತು.
ಅದುವರೆಗೆ ಉತ್ತಮ ಇಳುವರಿ ಬರಲು ರೈತರು ಸಾಕಷ್ಟು ರಾಸಾಯನಿಕ ಬಳಸಿ ಇಳುವರಿ ಪಡೆಯಲು ಪ್ರಯತ್ನ ಮಾಡುತ್ತಿದ್ದರು. ಆದರೆ ಮಳೆಯ ಕೊರತೆಯಿಂದ ಸಾಕಷ್ಟು ಫಸಲು ಇದ್ದರೂ ಕೈಗೆ ಬಾರದೆ ನಷ್ಟ ಅನುಭವಿಸುವ ಸ್ಥಿತಿ ಅದಾಗಿತ್ತು. ಪರಿಸ್ಥಿತಿ ಹೀಗಿರುವಾಗ, ಆಗ ರಾಜ್ಯದಲ್ಲಿ ಸಾವಯವ ಕೃಷಿಯ ಬಗ್ಗೆ ಜೋರಾದ ಚಳುವಳಿ ಇತ್ತು, ಸರಕಾರವೇ ಇದಕ್ಕಾಗಿ ಯೋಜನೆಯನ್ನೂ ಮಾಡಿತ್ತು. ಈ ಯೋಜನೆ ಹುಬ್ಬಳ್ಳಿ ಪರಿಸರದಲ್ಲೂ ಜಾರಿಯಾಯಿತು. ಸಾವಯವ ಸಂಘಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ಅನೇಕ ರೈತರು ಸಂಪೂರ್ಣ ಸಾವಯವ ಕೃಷಿಯತ್ತ ಆಕರ್ಷಿತರಾದರು. ಸಾವಯವ ಕೃಷಿ ಕಡೆಗೆ ಬರುವ ರೈತರಿಗೆ ಆರ್ಥಿಕ ನೆರವು, ವರ್ಮಿ-ಕಾಂಪೆÇೀಸ್ಟ್ ಮಾಡುವ ವಿಧಾನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಾ ಮಣ್ಣನ್ನು ಸಂರಕ್ಷಿಸುವ ಕೆಲಸ ನಡೆಯಿತು. ಇದರ ಫಲವಾಗಿ ಸಹಜವಾದ, ಸಮೃದ್ಧವಾದ ಕೃಷಿಯಾಯಿತು. ಮಣ್ಣು ಫಲವತ್ತಾಯಿತು, ಬರಗಾಲದ ನಡುವೆಯೂ ಇಳುವರಿ ಉಳಿಯಿತು. ಹೊಲದಲ್ಲಿ ಸಾಲವಿಲ್ಲ, ಸೋಲೂ ಇಲ್ಲ ಎಂಬ ಮನವರಿಕೆಯಾಯಿತು. ಈಗ ಅವರು ಬೆಳೆಯುತ್ತಿರುವ ರಾಗಿ ಹೊಸದಾದ ಯಾವುದೇ ಬೆಳೆ ಅಲ್ಲ ಬದಲಾಗಿ ಸಹಜ, ರಾಸಾಯನಿಕ ಮುಕ್ತವಾದ ಕೃಷಿಗೆ ತಿರುಗಿದ್ದಾರೆ ಅಷ್ಟೇ. ಇದೊಂದೇ ಸಾಕಿತ್ತು, ಆ ಹಳ್ಳಿಯ ರೈತರ ಬದುಕಿಗೆ ಬೆಳಕು ನೀಡಲು. ಹಿಂದೆಲ್ಲಾ ಕೀಟನಾಶಕ ಮತ್ತು ಬಿಟಿ-ಹತ್ತಿ, ಸೋಯಾ ಮತ್ತು ಮೆಕ್ಕೆಜೋಳದಂತಹ ನೀರಿನ ಆಶ್ರಯದ ಬೆಳೆಯ ಕೇಂದೀೀಕರಿಸುವ ಬದಲಾಗಿ ರಾಗಿಯ ಕಡೆಗೇ ಮನಸ್ಸು ಹೊರಳಿದೆ ಎನ್ನುವುದು ಯಶಸ್ಸಿನ ಸಂಕೇತ. ಕಳೆದ ವರ್ಷ ಸುಮಾರು 50 ಟನ್‍ಗಳಷ್ಟು ಬೆಳೆ ಮಾರಾಟ ಮಾಡಿದರೆ ಈ ಬಾರಿ ಅದಕ್ಕಿಂತ 4 ಪಟ್ಟು ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಎಂದರೆ ಸಾವಯವ ಕೃಷಿಪದ್ದತಿ ಹಾಗೂ ಮಣ್ಣಿನ ಫಲವತ್ತತೆಯ ಬಗ್ಗೆ ಈಗ ಯೋಚಿಸಬೇಕಾದ ಸಮಯ.

ಮಹಾರಾಷ್ಟ್ರದ ಜಲ್ಗಾಂವ್ ಪ್ರದೇಶದ ವೈದ್ಯಕೀಯ ವಿಭಾಗದಲ್ಲಿ ಓದುತ್ತಿದ್ದ ಯುವಕ ಸಂದೇಶ್ ತನ್ನ ಓದು ನಿಲ್ಲಿಸಿ ಹೊಸಸವಾಲನ್ನು ತೆಗೆದುಕೊಂಡು ಕೃಷಿಗೆ ಇಳಿದ. ಅನೇಕ ವರ್ಷಗಳಿಂದ ಬರಗಾಲದಿಂದ ಈಗಾಗಲೇ ಬೆಳೆಯುತ್ತಿದ್ದ ಬಾಳೆಹಣ್ಣು ಮತ್ತು ಹತ್ತಿ  ಕೃಷಿಯಿಂದ ನಷ್ಟವಾಗುತ್ತಿರುವ ಕಾರಣ ಕೃಷಿ ಪದ್ದತಿ ಬದಲಾಗಬೇಕು ಹಾಗೂ ಹಣವೂ ಲಭ್ಯವಾಗಬೇಕು ಎಂದು ಅಂತರ್ಜಾಲದಲ್ಲಿ ತಡಕಾಡಿ ಮಾಹಿತಿ ಪಡೆದು ಕೊನೆಗೆ ಕಾಶ್ಮೀರದ ಹವಾಮಾನದಲ್ಲಿ ಬೆಳೆಯುವ ಕೇಸರಿ ಕೃಷಿಗೆ ಇಳಿದ. ಇದಕ್ಕಾಗಿ ವಿವಿಧ ಪ್ರಯೋಗ ಮಾಡಿದ. ಆರಂಭದಲ್ಲಿ ಅನೇಕರು ಈ ಯುವಕನ ಪ್ರಯತ್ನಕ್ಕೆ ತಣ್ಣೀರು ಎರಚಿದರು. ಹಾಗಿದ್ದರೂ ಪ್ರಯತ್ನ ಬಿಡದೆ ಯಶಸ್ಸು ಸಾಧಿಸಿದ. ಈ ಅಪರೂಪದ ಬೆಳೆಯಿಂದ ಉತ್ತಮ ಆದಾಯ ಗಳಿಸಿದ. ಈಗ ಆ ಇಡೀ ಊರಿಗೆ ಹೊಸ ಕೃಷಿಯೊಂದು ಸಿಕ್ಕಿದೆ, ಬರಗಾಲಕ್ಕೆ ಉತ್ತರವನ್ನೂ ನೀಡಿದ್ದಾರೆ.

ಮಲೆನಾಡು ಭಾಗದಲ್ಲೂ ಇಂತಹದ್ದೇ ಮತ್ತೊಂದು ಸಮಸ್ಯೆ ಅಡಿಕೆ ಬೆಳೆಗಾರರದ್ದು. ಅಡಿಕೆ ಬಗ್ಗೆ ವಿಶ್ವದಾದ್ಯಂತ ಅಪಪ್ರಚಾರವಾಗುತ್ತಿರುವಾಗಲೂ ಅಡಿಕೆಯ ಭವಿಷ್ಯದ ಬಗ್ಗೆ ಇನ್ನೂ ಚಿಂತನೆಯನ್ನೇ ಶುರು ಮಾಡಿಲ್ಲ. ಇದರ ಜೊತೆಗೆ ಪರ್ಯಾಯ ಏನು ಎಂಬುದರ ಬಗ್ಗೆಯೂ ಯೋಚನೆ ನಡೆದಿಲ್ಲ. ಇಂದಿಗೂ ಅಡಿಕೆ ಧಾರಣೆಯ ಸುತ್ತಲೇ ಸುತ್ತುತ್ತಿರುವಾಗಲೇ ಕೆಲವು ರೈತರು, ಯುವಕರು ಅಡಿಕೆಯ ಪರ್ಯಾಯ ಬಳಕೆಯತ್ತ ಹಾಗೂ ಇನ್ನೂ ಕೆಲವು ರೈತರು ಪರ್ಯಾಯ ಬೆಳೆಯತ್ತ ಯೋಚನೆ ಮಾಡುತ್ತಿರುವುದು ನಿರೀಕ್ಷೆಯ ಮೆಟ್ಟಿಲು. ಯಾವತ್ತೂ ಕೃಷಿ ಸೋಲುವುದಿಲ್ಲ, ಆದರೆ ಕೃಷಿ ಪದ್ದತಿ ಹಾಗೂ ಮಾರುಕಟ್ಟೆಯ ವಿಧಾನದಲ್ಲಿ ರೈತನಿಗೆ ಯಶಸ್ಸು ದೂರವಾಗುತ್ತದೆ ಎನ್ನುವುದನ್ನು ಹುಬ್ಬಳ್ಳಿಯ ಪಟ್ಟ ಊರು ಹಾಗೂ ಮಹಾರಾಷ್ಟ್ರದ ಯುವಕ ಸಂದೇಶ ನೀಡುತ್ತಾನೆ.



 ( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು - 6 - 12 - 2017 )