29 ಫೆಬ್ರವರಿ 2008

ದುನಿಯಾ ವಿಜಯ್ ಸುಬ್ರಹ್ಮಣ್ಯದಲ್ಲಿ....



ಚಿತ್ರ ನಟ ದುನಿಯಾ ವಿಜಯ್ ಕುಕ್ಕೆ ಸುಬ್ರಹ್ಮಣ್ಯದಲ್ಲಿ....

ಹೌದು.. ಅವರು ಸುಬ್ರಹ್ಮಣ್ಯ ದೇವರಲ್ಲಿ ತನ್ನ ಅಭಿವೃದ್ಧಿಯನ್ನು ಪ್ರಾರ್ಥಿಸಿಕೊಂಡು ಸಮಾಜದ ಬಗ್ಗೆಯೂ ಸ್ವಲ್ಪ ನೋಡಿದರು... ಸಾಮಾಜಿಕ ಸಂಘಟನೆಯಲ್ಲೂ ಕಾಣಿಸಿಕೊಂಡರು.... ಅಶಕ್ತರಿಗೆ ದೇಣಿಗೆಯನ್ನೂ ನೀಡಿದರು.ಅದುವೇ ವಿಜಯ್ ಅವರ ಸ್ಪೆಷಲ್.

ಶುಕ್ರವಾರದಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವಿಜಯ್ ಅವರು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಜೇಸೀಐಗೆ ಭೇಟಿ ನೀಡಿ ಜೇಸೀ ವತಿಯಿಂದ ತಯಾರಿಸಿರುವ ಸುಬ್ರಹ್ಮಣ್ಯ ಕ್ಷೇತ್ರ ಮಾಹಿತಿ ಹಾಗೂ ರಸ್ತೆ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.ಇದೇ ವೇಳೆ ಜೇಸೀರೆಟ್ ವತಿಯಿಂದ ಪ್ರಕಟವಾಗುವ ಮಾಸಿಕ ಪತ್ರಿಕೆ "ಸ್ವಪ್ನ ಸಾಕಾರ"ವನ್ನು ಕೂಡಾ ಬಿಡುಗಡೆಗೊಳಿಸಿದ ವಿಜಯ್ ನಂತರ ಸುಬ್ರಹ್ಮಣ್ಯ ಜೇಸೀ ಮೂಲಕ ಅಂಗವಿಕಲರೊಬ್ಬರಿಗೆ 10 ಸಾವಿರದ ಚೆಕ್ ನೀಡಿದರು. ಬಳಿಕ ಮಾತನಾಡಿದ ಅವರು ಸಮಾಜ ಸೇವೆ ನನಗಿಷ್ಟ ,ಬಡವರ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುವೆ ಎಂದರು. ಈ ಸಂದರ್ಭದಲ್ಲಿ ಜೇಸೀ ಅಧ್ಯಕ್ಷ ಚಂದ್ರಶೇಖರ ನಾಯರ್, ಜೇಸೀರೆಟ್ ಅಧ್ಯಕ್ಷೆ ಸ್ವಪ್ನಾ ವೆಂಕಟೇಶ್ , ಜೇಸೀ ಕಾರ್ಯದರ್ಶಿ ,ತರಬೇತುದಾರರಾದ ವಿಮಲಾ ರಂಗಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸುದ್ದಿ ನನಗೆ ವಿಶೇಷ ಎನಿಸಿದ್ದು ಯಾಕೆಂದರೆ ಚಲನಚಿತ್ರ ನಟನೊಬ್ಬ ಸುಬ್ರಹ್ಮಣ್ಯ ದೇವರ ದರ್ಶನದ ಜೊತೆಗೆ ಸಮಾಜ ಬಗ್ಗೆಯೂ ಚಿಂತಿಸುತ್ತಾನಲ್ಲಾ , ಅಶಕ್ತರಿಗೆ ಸಹಾಯ ಹಸ್ತ ಚಾಚುತ್ತಾರಲ್ಲ ಅದು ಅಭಿನಂದನಾರ್ಹ.ಇಂದು ಇಂತಹ ಚಿತ್ರ ನಟರ ಅವಶ್ಯಕತೆಯಿದೆ. ಅಂತಹವರಿಗೆ ಜೇಸೀಯಂತಹ ಸಂಘಟನೆಗಳು ದಾರಿ ದೀಪವಾಗಲಿ.

28 ಫೆಬ್ರವರಿ 2008

ತುತ್ತು "ಅನ್ನ"ಕ್ಕೆ ಕುತ್ತು ಬರಲಿದೆ ನೋಡಿ...!?



ಎಲಾ ..! ಇದೇನು?."ಅನ್ನ"ಕ್ಕೆ ಕುತ್ತು ಬರುವುದೇ.. ಅಂತ ಹೇಳಬೇಡಿ.ಇದು ಹಾಗಲ್ಲ. ಅಕ್ಕಿಯ ಬೆಲೆ ಇನ್ನು 20 ವರ್ಷದ ಒಳಗೆ ಗಗನಕ್ಕೇರಲಿದೆ ಎಂಬ ಆತಂಕವನ್ನು ಹೀಗೆ ಹೇಳಿದೆ ಅಷ್ಟೆ.ಅಕ್ಕಿಯ ಬೆಲೆ ಏಕೆ ಏರುತ್ತೆ? ಕಾರಣವೇನು ಎಂದು ಪ್ರಶ್ನಿಸುವಿರಾ... ಮುಂದೆ ನೋಡಿ.

ಮೊನ್ನೆ "ಕೃಷಿಕರೇ ರೂಪಿಸುವ ಮಾಧ್ಯಮ" ಅಡಿಕೆ ಪತ್ರಿಕೆಯನ್ನು ಓದುತ್ತಿದ್ದೆ.ಅದರ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಅತ್ಯಂತ ಮನೋಜ್ಞವಾಗಿ ಕೃಷಿಕರ ಸಮಸ್ಯೆಯ ಬಗ್ಗೆ ಬರೆದಿದ್ದರು.ನನ್ನ ಮನಸ್ಸಿನಲ್ಲಿ ಅಂದಿನಿಂದಲೂ ಸುತ್ತುತ್ತಿದ್ದ ಭಾವನೆಗಳಿಗೆ ಅದು ಇನ್ನೊಂದು ಗರಿಯಾಯಿತು.ನಾನೂ ಒಬ್ಬ ಕೃಷಿ ಕುಟುಂಬದವನಾದ್ದರಿಂದ ಇನ್ನಷ್ಟು ಚಿಂತನೆಗೆ ದಾರಿಮಾಡಿತು.

ಅಡಿಕೆ ಪತ್ರಿಕೆಯ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಬರೆದ ಸಂಪಾದಕೀಯವನ್ನು ಹಾಗೇ ಇಲ್ಲಿ present ಮಾಡುವುದಿಲ್ಲ. ಅವರ ಅಕ್ಷರದ ಜೊತೆ ನನ್ನ ಭಾವನೆಗಳನ್ನೂ ಸೇರಿಸಿಬಿಡುತ್ತೇನೆ. ಅವರು ಮುಖ್ಯವಾಗಿ ಕೃಷಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗೂ ಅದರಿಂದಾಗಿ ಕೃಷಿಕರು ಎದುರಿಸುವ ಸಮಸ್ಯೆಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ.ಈ ಸಮಸ್ಯೆ ಎಷ್ಟು ಉಲ್ಪಣಿಸಿದೆಯೆಂದರೆ ಈಗ ಬೆಳೆ,ಬೆಲೆಗಳ ಚಿಂತನೆಗಳನ್ನು ಮೀರಿ ನಿಂತಿದೆ ಎನ್ನುವ ಪಡ್ರೆಯವರು ಆ ಬಗ್ಗೆ ಒಬ್ಬರು ಫೋನಿಸಿದ ಸಂದರ್ಭದಲ್ಲಿ ತೋಡಿಕೊಂಡ ಆತಂಕವನ್ನು ಅವರು ಹೇಳಿದ್ದು ಹೀಗೆ... ಪೊಳ್ಳಾಚಿಯ ಕೃಷಿಕರೊಬ್ಬರು ಫೋನಾಯಿಸುತ್ತಾ ಜಗತ್ತಿನ ಹಲವೆಡೆ ಇದೇ ಕೂಲಿಯಾಳುಗಳ ಸಮಸ್ಯೆ. ತಮಿಳುನಾಡಿನ ಭತ್ತದ ಗದ್ದೆಗಳು ಪರಿವರ್ತನೆಯಾಗುವ ವೇಗ ನೋಡಿದರೆ ಇನ್ನು 20 ವರ್ಷಗಳಲ್ಲಿ ಅಕ್ಕಿಗೆ ಕಿಲೋ ಒಂದಕ್ಕೆ 50 ರೂ ಆದರೂ ಅಚ್ಚರಿ ಬೇಡ ಎನ್ನುವ ಆತಂಕವನ್ನು ತೋಡಿಕೊಳ್ಳುತ್ತಾರೆ.ಪಡ್ರೆಯವರು ಈ ಬಗ್ಗೆ ಚೆನ್ನಾಗಿ ವಿವರಿಸುತ್ತಾರೆ ಸಂಪಾದಕೀಯವಂತೂ ಚೆನ್ನಾಗಿದೆ ವಾಸ್ತವನ್ನು ತೆರೆದಿಟ್ಟಿದ್ದಾರೆ.ನನ್ನಂತಹ ಹಲವಾರು ಯುವಕರಿಗೆ ಈ ಸಂಪಾದಕೀಯ ಉತ್ತೇಜನ ನೀಡೀತು ಎನ್ನುವ ನಂಬಿಕೆ ನನಗಿದೆಯಾದರೂ ಹಳ್ಳಿಯಲ್ಲಿ ಯುವಕರಿದ್ದಾರಾ? ಎಂದು ಒಳ ಮನಸ್ಸು ಕೇಳಿತು..!. ಈಗ ಅಕ್ಕಿಗೆ 15 - 20 ರೂ ಆದಾಗ ಬಡವರ ಚಿಂತೆ ಹೇಳತೀರದು.ಹಾಗಾದರೆ ಮುಂದಿನ ದಿನದ ಬಗ್ಗೆ ಈಗ ನೀವು ಚಿಂತೆ ಮಾಡಿ....

ನಮ್ಮ ಆಸುಪಾಸಿನಲ್ಲಿ ನೋಡಿದರೆ ಸುಮಾರು 10 - 15 ವರ್ಷಗಳ ಹಿಂದೆ ಎಲ್ಲಿ ನೋಡಿದರು ಗದ್ದೆಗಳಿದ್ದವು.ನೆಮ್ಮದಿಯ ಊಟವಿತ್ತು.[ಈಗ ಇಲ್ಲ ಅಂತ ಅಲ್ಲ] ಆಗ ಅಬ್ಬಬ್ಬಾ ಅಂದರೆ 5 ರಿಂದ 6 ರೂ ಅಕ್ಕಿಯ ಬೆಲೆ.ಆದರೆ ಈಗ ನೋಡಿ ಅಂದು ಗದ್ದೆ ಇದ್ದೆಡೆಯೆಲ್ಲಾ ಅಡಿಕೆ ತೋಟಗಳಾಗಿ ಮಾರ್ಪಾಡಾಗಿದೆ. ಕಾರಣ ಗದ್ದೆಯ ಕೆಲಸಕ್ಕೆ ಕೂಲಿಯಾಳುಗಳ ಸಮಸ್ಯೆ.ಹೆಚ್ಚು ಸಂಬಳ ಕೊಡೋಣ ಎಂದರೆ ಲಾಭವಿಲ್ಲ.ಹಾಗಾಗಿ ಯೋಚಿಸಿದ ರೈತರು "ಜಗದ" ಹೊಟ್ಟೆ ತುಂಬಿಸುವ ಬದಲು ತಮ್ಮ ಹೊಟ್ಟೆ ತುಂಬಿಸುವ ದಾರಿಯನ್ನು ಹುಡುಕಿ ಅಡಿಕೆಯ ಕಡೆಗೆ ಪ್ರಯಾಣ ಬೆಳೆಸಿದರು.ಈಗ ಅಲ್ಲೂ ಕಾರ್ಮಿಕರ ಸಮಸ್ಯೆಯಿದ್ದರೂ ಸುಧಾರಿಸಿಕೊಂಡು ಹೋಗುತ್ತಾರೆ.ನೀವು ಹಿಂದಿನ ಪದ್ದತಿಯನ್ನು ಗಮನಿಸಿ ಪ್ರತಿ ಮನೆ ಮನೆಯಲ್ಲಿ ಮನೆ ತುಂಬಿಸುವ ಸಂಪ್ರದಾಯವಿತ್ತು ಅದನ್ನು ಹೊಸ್ತು , ಹುತ್ತರಿ ಅಂತೆಲ್ಲಾ ಕರೆಯುತ್ತಾರೆ.ಅಂದರೆ ನಮ್ಮ ಹೊಲದಲ್ಲಿ ಬೆಳೆದ ಭತ್ತದಿಂದ ಅಕ್ಕಿಯನ್ನು ಮಾಡಿ ಅದರ ಅನ್ನದಿಂದ ದೇವರಿಗೆ ನೈವೇದ್ಯ ಸಮರ್ಪಿಸಿ ನಾವು ಉಣ್ಣುವ ಸಂಪ್ರದಾಯವಿದೆ.ಆದರೆ ಈಗ ಆ ಅಕ್ಕಿಗಾಗಿ ಅಲೆದಾಟ ಶುರುವಾಗಿದೆ.ಗದ್ದೆ ಇರುವ ಕಡೆ ಹುಡುಕಾಡಬೇಕಾದ ಸಂದರ್ಭ ಬಂದಿದೆ.ಮುಂದೆ ಪೇಟೆಯಿಂದಲೇ ಆಮದು ಮಾಡಿಕೊಳ್ಳಬೇಕಾಗಿ ಬರಬಹುದು.!. ಇದಕ್ಕೆಲ್ಲಾ ಕಾರಣ ಹುಡುಕಹೊರಟರೆ ಮೇಲ್ನೋಟಕ್ಕೆ ಕಾರ್ಮಿಕರ ಕೊರತೆಯೇ ಎದ್ದು ಕಾಣುತ್ತದೆ.

ಇನ್ನೊಂದು ಗಮನಿಸಬೇಕಾದ ಹಾಗು ಚಿಂತಿಸಬೇಕಾದ ಸಂಗತಿಯೆಂದರೆ ಜಮೀನಿರುವ ರೈತ ಮುಂದೆ ತನಗೆ ಬೇಕಾದಷ್ಟನ್ನು ಮಾತ್ರಾ ಬೆಳೆದು ಮಾರಾಟ ಮಾಡದೇ ಇದ್ದರೆ?ಆಗ ಅಕ್ಕಿಯ ಬೆಲೆ ಗಗನಕ್ಕೆ ಏರದೇ ಇದ್ದೀತೇ?.ಯೋಚಿಸಬೇಕು.

ಈ ನಡುವೆ ಅಕ್ಕಿ ಇಲ್ಲದಿದ್ದರೇನು ಗೋಧಿ ಇದೆಯಲ್ಲಾ ಎಂದು ನಾವು ಸುಮ್ಮನೆ ಕೂರುವ ಹಾಗಿಲ್ಲ.ಮೊನ್ನೆ ಪತ್ರಿಕೆಯಲ್ಲಿ ಅಂಕಿ ಅಂಶ ಸಹಿತ ವರದಿಯೊಂದು ಬಂದಿದೆ.ಆ ವರದಿಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ಗೋಧಿಯ ಬೆಳೆ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಸುದ್ದಿಯನ್ನು ಈಗಲೇ ಹೇಳಿದ್ದಾರೆ.ಅದರ ಪ್ರಕಾರ ಈ ಬಾರಿ 10 ಲಕ್ಷ ಟನ್ ಗೋಧಿ ಬೆಳೆ ಕಡಿಮೆಯಾಗಿದೆಯಂತೆ.ಅದನ್ನು ಭರ್ತಿ ಮಾಡಬೇಕಾದರೆ ಆಮದು ಮಾಡಿಕೊಳ್ಳಲೇ ಬೇಕು. ಇಲ್ಲವಾದಲ್ಲಿ ಆಹಾರ ಭದ್ರತೆಗೆ ಧಕ್ಕೆ ಬರಲಿದೆ. ಆಮದು ಮಾಡಿಕೊಂಡಾಗ ಬೆಲೆ ಏರಿಕೆ ಸಹಜವಾಗೇ ಆಗುತ್ತಲ್ಲಾ?. ಇದಕ್ಕೆ ಕಾರಣವೇನು?. ಈ ದೇಶ ಕೃಷಿ ಪ್ರದಾನವಾದ ದೇಶವಾದರೂ ಇಲ್ಲಿ ಕೃಷಿಕರಿಗೆ ಸೂಕ್ತ ಸ್ಥಾನ ಮಾನ ಸಿಗದಿರುವುದು ಅಂತ ಒಪ್ಪಿಕೊಳ್ಳಲೇಬೇಕು.

ಇದೆಲ್ಲದರ ಪರಿಣಾಮ ಸಿಗುತ್ತಲಿದೆ.ಇನ್ನಾದರೂ ಈ ಜಗ ಎಚ್ಚೆತ್ತರೆ ಸ್ವಲ್ಪ ಸುಧಾರಿಸೀತು.ಗಂಭೀರವಾಗಿ ಚಿಂತಿಸಿ ನೋಡಿ.

[ಚಿತ್ರ : ಭತ್ತದ ಪೈರಿಲ್ಲದೆ ಬೋಳಾಗಿರುವ ಗದ್ದೆಯ ನೋಟ ;ಈಗ ಹುಲ್ಲು ಬೆಳೆದಿದೆ]

ಸರ್ ಅಭಿನಂದನೆಗಳು...




ನನಗೊಂದು ಖುಷಿಯ ವಿಷಯ.

ಏನು ಗೊತ್ತಾ? ನಾನು ಗೌರವಿಸುವ ಹಾಗು ನನಗೆ ಅತ್ಯಂತ ಮಹತ್ವದ ಸಲಹೆಗಳನ್ನು ನೀಡಿರುವ ಎನ್ ಎಸ್ ಗೋವಿಂದರಿಗೆ ಎಂ ಫಿಲ್ ಪದವಿ ಲಭಿಸಿದೆ.

ಅದರ ಸಂಕ್ಷಿಪ್ತ ವಿವರ ಇಲ್ಲಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇಂಗ್ಲೀಷ್ ಉಪನ್ಯಾಸಕ ಎನ್.ಎಸ್. ಗೋವಿಂದರಿಗೆ ಅಣ್ಣಾಮಲೈ ವಿ.ವಿ.ಯು ಇಂಗ್ಲೀಷ್‌ನಲ್ಲಿ ಎಂ.ಫಿಲ್ ಪದವಿ ಪ್ರಧಾನ ಮಾಡಿದೆ.ಅವರು ಗಿರೀಶ್ ಕಾರ್ನಾಡರ ನಾಟಕಗಳ ಕುರಿತು ಅವರು ಅಧ್ಯಯನ ಪ್ರಬಂಧ ಮಂಡಿಸಿದ್ದರು. ಅಣ್ಣಾಮಲೈ ವಿ.ವಿ.ಯ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಡಾ| ರಾಜಶೇಖರನ್ ಮಾರ್ಗದರ್ಶನ ನೀಡಿರುತ್ತಾರೆ.

ಸರ್ ಅಭಿನಂದನೆಗಳು.

ಅವರ Email ID nsgovinda@rediffmail.com

27 ಫೆಬ್ರವರಿ 2008

ಶಿರಾಡಿಯಲ್ಲೂ ಈಗ "ಬಿಸಿ..ಬಿಸಿ"

ಆರಂಭದ ರಸ್ತೆ

ದುರಸ್ತಿಯ ಸಿದ್ದತೆ..



ಮತ್ತೆ ಶಿರಾಡಿ ನೆನಪಾಗಿದೆ....

ಶಿರಾಡಿ ಘಾಟ್ ಕಾಮಗಾರಿಯು ಎ.30 ರೊಳಗೆ ಪೂರ್ಣಗೊಳ್ಳಬೇಕಿದೆ.ಹಾಗೆಂದು ಕೇಂದ್ರ ಭೂಸಾರಿಗೆ ಸಚಿವ ಮುನಿಯಪ್ಪ ಕೂಡಾ ಹೇಳಿದ್ದರು.
ಇದಕ್ಕಾಗಿ ಕೆಲಸಗಳು ಭರದಿಂದ ಸಾಗಬೇಕಾದರೆ ಕಚ್ಚಾ ವಸ್ತುಗಳ ಪೂರೈಕೆ ಸಲೀಸಾಗಬೇಕು.ಆದರೆ ಮೊನ್ನೆ ಒಂದೆರಡು ದಿನದ ಲಾರಿ ಮುಷ್ಕರದಿಂದಾಗಿ ಶಿರಾಡಿಯ ಭರದ ಕಾಮಗಾರಿ ಬ್ರೇಕ್ ಬಿದ್ದಿದೆ.

ಶಿರಾಡಿ ರಸ್ತೆಯ ದುರವಸ್ಥೆಯನ್ನು "ಹಾಡಿ ಹೊಗಳಿದ" ಬಳಿಕ ದುರಸ್ಥಿ ಕಾಮಗಾರಿಯು ಆರಂಭಗೊಂಡು ಸುಮಾರು 50 ಕ್ಕೂ ಮಿಕ್ಕಿದ ಕಾರ್ಮಿಕರು ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸಿ 3 - 4 ತಂಡಗಳಲ್ಲಿ ಕೆಲಸಕ್ಕೆ ತೊಡಗಿದರು. ಗುತ್ತಿಗೆದಾರರು ,ಇಲಾಖಾ ಅಭಿಯಂತರರು ಆಗಾಗ ಶಿರಾಡಿಗೆ ಆಗಮಿಸಿ ಕಾಮಗಾರಿಗಳ ವೀಕ್ಷಣೆ ನಡೆಸುವ ಕಾರ್ಯದಲ್ಲಿ ನಿರತರಾಗಿದರು. ಈ ನಡುವೆ ಕೆಲವು ಘನವಾಹನಗಳು ಇದೇ ಮಾರ್ಗದಲ್ಲಿ ಚಲಿಸಿ ಕಾಮಗಾರಿಯ ಪ್ರಗತಿಗೆ ತೊಂದರೆಯುಂಟು ಮಾಡಿದ್ದೂ ಆಯಿತು."ಘನ ವಾಹನಗಳ ಸಂಚಾರಕ್ಕೆ ನಿಷೇಧವಿದೆ" ಎಂದರೂ ಕೆಲವೊಂದು ಘನ ವಾಹನಗಳು ಚಲಿಸುವುದು ಮಾಮೂಲಾಗಿದೆ ಎಂದು ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು ಹೇಳುತ್ತಾರೆ.ಇದರಿಂದ ಕಾಮಗಾರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಕಾರ್ಮಿಕರು.

ಈಗ ಒಂದೆರಡು ದಿನಗಳಿಂದ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವಿಳಂಬವಾದ್ದರಿಂದ ಇಲ್ಲಿ ಸಮಸ್ಯೆಯಾಗಿದೆ.ಲಾರಿ ಮುಷ್ಕರದಿಂದಾಗಿ ವಸ್ತುಗಳ ಸಾಗಾಟಕ್ಕೆ ತೊಂದರೆಯಾಗಿ, ಕಾಮಗಾರಿ ನಿಧಾನವಾಗಿದೆ.ಆದರೆ ಮಂಗಳವಾರದಿಂದ ಲಾರಿಗಳ ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳ ಪೂರೈಕೆಗೆ ಅನುಕೂಲವಾಗಿದೆ.ಸಾಕಷ್ಟು ವಸ್ತುಗಳ ಪೂರೈಕೆಯಾದ ತಕ್ಷಣ ಮತ್ತೆ ಕಾಮಗಾರಿ ಆರಂಭಬಹುದು ಎಂದು ಕಾರ್ಮಿಕರು ಹೇಳುತ್ತಾರೆ.ಈಗ ಒಂದು ಬದಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ.ಸುಮಾರು 7 ರಿಂದ 10 ತಿರುವುಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎನ್ನುವುದು ಕಾರ್ಮಿಕರ ಮಾತು.ಈ ನಡುವೆ ಕಾರ್ಮಿಕರು ಸಿಟ್ಟುಗೊಂಡಿದ್ದರು. ಅವರ ಶೈಲಿಯಲ್ಲೇ ಹೇಳುವುದಾದರೆ " ಏನ್ರಿ ಸಾರ್ ನಮ್ಗೆ ಎರಡು ದಿನದಿಂದ ಕೆಲ್ಸ ಇಲ್ರೀ ಹಿಂಗಾಗಿ ಪಗರ ಇಲ್ಲಿ ಸಾರ್.... ನಾವು ಹಿಂಗಾದ್ರೆ ಊರ್ಗೆ ಹೋಗ್ತೀವಿ...." ಅಂತಾರೆ.

ಎ.30 ರ ಒಳಗಾಗಿ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕಾದ ಹಿಮ್ಮೆಲೆಯಲ್ಲಿ ರಸ್ತೆ ದುರಸ್ತಿಗೆ ಅಗತ್ಯವುಳ್ಳ ಕಚ್ಚಾವಸ್ತುಗಳನ್ನು ಮುಷ್ಕರ ಸೇರಿದಂತೆ ಇನ್ನಿತರ ಬಂದ್ ಸಮಯದಲ್ಲೂ ಸರಬರಾಜಾಗುವಂತೆ ಸಂಬಂಧಿತರು ವ್ಯವಸ್ಥೆಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಾರೆ.ಈಗಾಗಲೇ ಶಿರಾಡಿ ಘಾಟ್ ರಸ್ತೆಯ ಬಂದ್ ಆದ ಹಿನ್ನೆಲೆಯಲ್ಲಿ ಪ್ರತಿದಿನ ಬೆಂಗಳೂರು - ಮಂಗಳೂರು ಹೆದ್ದಾರಿಯಿಂದಾಗಿ ಲಕ್ಷಾಂತರ ರೂ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯವು ಭರದಿಂದ ಸಾಗಿ ಮಾರ್ಚ್ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುವಂತೆ ಪ್ರಯತ್ನಿಸಬೇಕಾಗಿದೆ.

[ಚಿತ್ರಗಳು ಹಳೆಯದು..]

26 ಫೆಬ್ರವರಿ 2008

ಹಳ್ಳಿಗಾಡಿನ "AC" ಮನೆಗಳು.....



ಹಳ್ಳಿಗಾಡಿನ ಎಸಿ ಮನೆಗಳು..!?

ಇದೇನು ಹೊಸದು ಅಂತ ಅಂದು ಕೊಂಡ್ರಾ?.ಇಲ್ಲ ಖಂಡಿತಾ ಇಲ್ಲ.ಹಳ್ಳಿಗಳಲ್ಲಿ ಕಾಣಸಿಗುವ ಮನೆಯಿದು.ಆದರೆ ಎಂಥಾ ಬೇಸಗೆಯಲ್ಲೂ ಈ ಮನೆಯೊಳಗೆ ತಂಪು... ಮಳೆ ,ಚಳಿಯಲ್ಲಿ ಬಿಸಿ..!.ಇದುವೇ ಹುಲ್ಲಿನ ಮನೆ.

ಹಳ್ಳಿಯೊಳಗೇ ಇರುವ ನಾನು ಮೊನ್ನೆ ಇನ್ನೊಂದು ಹಳ್ಳಿಯೊಳಗೆ ವಿಶೇಷ ವರದಿಯೊಂದರ ಹುಡುಕಾಟದಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಮನೆಯೊಂದು ಸಿಕ್ಕಿತು.ತಕ್ಷಣ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು,ಮನೆಯ ಸನಿಹಕ್ಕೆ ಹೋದಾಗ ಅಜ್ಜಿಯೊಬ್ಬರು ಬಂದು "ದಾನೆ ಬತ್ತಾರ್..." [ಏನು ಬಂದಿರಿ..] ಎಂದು ವಿಚಾರಿಸಿದರು.ಮನೆ ಬಗ್ಗೆ ಕೇಳಿದೆ ಸುಮಾರು 15 ವರ್ಷ ಆಗಬಹುದು ಅಂದರು.ನಾನು ಹಾಗೆ ಮುಂದಕ್ಕೆ ಸಾಗಿದೆ....

ಅಲ್ಲಾ ಸ್ವಾಮಿ... ಆಫೀಸಲ್ಲಿ ,ಪೇಟೆ ಮನೆಯಲ್ಲಿ ಒಂದು ನಿಮಿಷ ಫ್ಯಾನ್ ತಿರುಗುವುದು ನಿಂತು ಬಿಟ್ರೆ ಏನು ಸೆಕೆಯಪ್ಪಾ... ಸೆಕೆ... ಉಸ್... ಅಂತ ಹೇಳುವ ಬದುಕು.ವಿದ್ಯುತ್ ಆಧರಿತ ಸಲಕರಣೆಗಳು ದಿನನಿತ್ಯದ ದಿನನಿತ್ಯದ ಬದುಕಿನಲ್ಲಿ ಅನುಕ್ಷಣದ ಅನಿವಾರ್ಯತೆಯಾಗಿ ಬಿಟ್ಟಿದೆ.ಹಾಗಾಗಿ ಎಲ್ಲೆಲ್ಲೂ ಸಲಕರಣೆಗಳದ್ದೇ ಸದ್ದು ಗದ್ದಲ.ಕನಿಷ್ಠ ಏರ್ ಕೂಲರ್ ಗಳಾದರೂ ಬೇಕೇ ಬೇಕು.ಫ್ಯಾನ್ ಇಲ್ಲದೆ ಬದುಕೇ ಇಲ್ಲವಾಗಿದೆ.

ಆದರೆ ಹಳ್ಳಿ ಜೀವನದಲ್ಲಿ ಮನೆ ಮಂದಿಗೆ "ಫ್ಯಾನ್" ಎನ್ನುವ ಬದುಕು ಇಲ್ಲವೇ ಇಲ್ಲ.ಯಾಕಂದ್ರೆ ಅಲ್ಲಿ ತಂಪೇ ತಂಪು..... ಅಲ್ಲಿ ವಿದ್ಯುತ್ ಸಲಕರಣೆಗಳ ಸದ್ದು ಗದ್ದಲದ ಬದಲು ಹಕ್ಕಿಗಳ ಕಲರವ,ಮಿಡತೆಗಳ ಇಂಪಾದ ಹಾಡುಗಳು...... ಒಟಗುಟ್ಟುವ ಕಪ್ಪೆಗಳು... ಇದಕ್ಕೆ ಅನುಗುಣವಾಗಿ ಮನೆಯ ವಿನ್ಯಾಸಗಳು, ಹುಲ್ಲಿನ ಛಾವಣಿ, ಮಣ್ಣಿನ ಗೋಡೆ, ಸೆಗಣಿ ಸಾರಿಸಿದ ನೆಲ,.... ಇದು ಹಳ್ಳಿಯ ಸೊಗಡನ್ನು ಹೆಚ್ಚಿಸುತ್ತದೆ.ಹಳ್ಳಿಯ ಕಲ್ಪನೆಗೆ ವಿಸ್ತಾರವಾದ ಮಜಲು ಸಿಗುತ್ತದೆ...

ನಗರದಲ್ಲಿ ಒಂದು ನಿಮಿಷ ಕರೆಂಟ್ ಇಲ್ಲದೆ ಇದ್ದರೆ ,ಎಸಿ ಇಲ್ಲದೇ ಹೋದರೆ ಬದುಕುವುದೇ ಕಷ್ಟವಾಗಿದೆ.ಆಫೀಸಲ್ಲಿ ಎಸಿ ಬೇಕೇ.. ಬೇಕು..
ನನಗೀಗಲೂ ನೆನಪು ಬರುತ್ತೆ.ನಾವು ಚಿಕ್ಕವರಿದ್ದಾಗ ಅಂತಹುದೇ ಮನೆ ನಮಗೂ ಇತ್ತು.ಛಾವಣೀ ಪೂರ್ತಿ ಹುಲ್ಲು,ಅದರ ಕೆಳಗೆ ಬಿದಿರಿನ ಛಾವಣಿ , ಸಲಾಕೆಗಳು.ಆ ಹುಲ್ಲಿಗಾಗಿ ಅಲೆದಾಟ, ಹುಲ್ಲು ಸಿಕ್ಕಿದ ನಂತರ ಛಾವಣಿಗೆ ಹುಲ್ಲು ಹಾಸುವ ಸಂಭ್ರಮ.ಅದಾದ ಬಳಿಕ ಶಿಖರದಲ್ಲಿ ತೆಂಗಿನ ಕಾಯಿ ಒಡೆಯುವುದು,ಮತ್ತೆರಡು ದಿನ ನೀರಿನ ಸಿಂಪಡಣೆ ... ಹೀಗೆ ನೆನಪಿನ ಬುತ್ತಿ ವಿಸ್ತಾರವಾಗುತ್ತಾ ಹೋಯಿತು. ಅದಕ್ಕೆ ಕಾರಣವಾದದ್ದು ಮೊನ್ನೆ ನನಗೆ ಕಾಣಸಿಕ್ಕ ಆ ಮನೆ.

ಆದರೆ ಈಗ ಅಂತಹ ಮನೆಗಳು ಹಳ್ಳಿಯಲ್ಲಿ ಬಲು ಅಪರೂಪ.ನಗರದಂತೆ ಹಳ್ಳಿಗಳಲ್ಲೂ ಕಾಂಕ್ರೀಟ್ ಕಾಡುಗಳು ಬೆಳೆಯುತ್ತಿದೆ.ಇದಕ್ಕೆ ನಾವು ಕೂಡಾ ಹೊರತಲ್ಲ.ಈ ಬಗ್ಗೆ ಇನ್ನೊಂದು ಮಗ್ಗುಲಲ್ಲಿ ಚಿಂತಿಸಿದರೆ ಕಾಂಕ್ರೀಟ್ ಕಟ್ಟಡಗಳು ಹಳ್ಳಿಗಳಲ್ಲಿ ಅನಿವಾರ್ಯ ಕೂಡಾ. ಮರ ಮಟ್ಟುಗಳ ಕೊರತೆ, ಹುಲ್ಲಿನ ಕೊರತೆ, ... ಹೀಗೆ ಸಮಸ್ಯೆಗಳು ಇದ್ದೇ ಇದೆ.ಹಾಗಾಗಿ ಕಾಂಕ್ರೀಟ್ ಕಾಡು ಎಂದರೂ ಇಂದಿಗೆ ಅದುವೇ ಪ್ರಸ್ತುತವಾಗಿದೆ.ಆದರೆ ಹಳ್ಳಿ ಸೊಗಡಿನ ಬಗ್ಗೆ ಚಿಂತಿಸಿದರೆ..... ದೇಹದಾರೋಗ್ಯದ ಬಗ್ಗೆ ನೋಡಿದರೆ....... ಸುಖ, ನೆಮ್ಮದಿಯ ಬಗ್ಗೆ ಗಮನಿಸಿದರೆ..... ಹಳ್ಳಿ ಹಳ್ಳಿಯಾಗಿ ಉಳಿಯುತ್ತಿಲ್ಲ ಅಂತ ಅನ್ಸುತ್ತೆ ಅಲ್ವಾ..?

24 ಫೆಬ್ರವರಿ 2008

"ಬೆಲೆ" ಬಾಳುವ ಸುಬ್ರಹ್ಮಣ್ಯದ "ಅಭಯ ಗಣಪ"

ಮೊದಲಿನ ಗಣಪ....



ಈಗಿನ ಗಣಪ....



ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ದೇಶದ ಅತೀ ಎತ್ತರ ಹಾಗೂ ವಿಶಿಷ್ಠ ಶೈಲಿಯ ಕುಕ್ಕೆ ಶ್ರೀ ಅಭಯ ಗಣಪತಿ ವಿಗ್ರಹಕ್ಕೆ ಭಾನುವಾರದಂದು ಬೆಳ್ಳಿ ಕವಚ ತೊಡಿಸಲಾಯಿತು.ಇದನ್ನು ಬೆಂಗಳೂರಿನ ದಾನಿಯೊಬ್ಬರು ಕೊಡ ಮಾಡಿದ್ದರು.ಇದರ ಒಟ್ಟು ಬೆಲೆ ಸುಮಾರು 88ಲಕ್ಷ.ಆದರೆ ಒಂದು ವಿಶ್ಯ ಗೊತ್ತಾ?.ಕುಕ್ಕೆ ಸುಬ್ರಹ್ಮಣ್ಯದ ಬಹುತೇಕ ಮಂದಿಗೆ ಈ ವಿಶ್ಯವೇ ಗೊತ್ತಿರಲಿಲ್ಲ.ಕಾರಣ ಯಾರೊಬ್ಬರಿಗೂ ಮಾಹಿತಿ ನೀಡಿರಲಿಲ್ಲ.ತಮ್ಮೂರಿನ ದೇವಸ್ಥಾನಕ್ಕೆ ಭಕ್ತರೊಬ್ಬರು ದಾನ ನೀಡುತ್ತಾರೆಂದರೆ ಜನರಿಗೆ ಸಂಭ್ರಮವಲ್ಲವೇ? ಆದರೂ ಏಕೆ ಹೇಳಿಲ್ಲ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಈ ಅಭಯ ಗಣಪನ ಗುಡಿಯು ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಕ್ಕೊಳಪಟ್ಟಿದೆ.ಶ್ರೀ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಗುಡಿಯ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಾರೆ.ಗಣಪನ ಗುಡಿಯು ದಕ್ಷಿಣ ಭಾರತಲ್ಲಿ ಅತ್ಯಂತ ವಿಶಿಷ್ಥವಾಗಿದೆ. ನೇಪಾಳ ಶೈಲಿಯನ್ನು ಹೊಂದಿದ ಈ ಗುಡಿಯು ಸುಬ್ರಹ್ಮಣ್ಯದ ಕ್ಷೇತ್ರದ ಸನಿಹದಲ್ಲೇ ಇದೆ. ಗುಡಿಯನ್ನು ನಿರ್ಮಿಸಿ 3 ವರ್ಷಗಳು ಸಂದಿವೆ.

ಪ್ರಕೃತ ಬೆಂಗಳೂರಿನ ಉದ್ಯಮಿ ಜಯರಾಮ ರೆಡ್ಡಿಯವರು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ಸಮ್ಮುಖದಲ್ಲಿ 140 ಕೆ.ಜಿಯ ಸುಮಾರು 88 ಲಕ್ಷ ಬೆಲೆ ಬಾಳುವ ರಜತ ಕವಚವನ್ನು ದಾನವಾಗಿ ಭಾನುವಾರ ನೀಡಿದರು.

ಈ ರಜತ ಕವಚದಲ್ಲಿ ಗಣಪನ ತಲೆ ಕಿರೀಟ ಭಾಗಗಳನ್ನೊಳಗೊಂಡು 28 ಕೆ.ಜಿ ಯಿದ್ದು ಗಣಪನೊ ವಿಗ್ರಹದ ವಿವಿಧ ಭಂಗಿಯಾನುಸಾರ ಒಟ್ಟು 12 ಕವಚಗಳಿವೆ. ಅವುಗಳನ್ನು ಜೋಡಿಸಲಾಗಿದೆ.

ಇದು ಊರಿನ ಜನರಿಗೆ ಸಂಭ್ರಮದ ಕ್ಷಣವಾಗಬೇಕಾಗಿತ್ತು. ಆದರೆ ವಿಷಯವನ್ನು ಪ್ರಚಾರಪಡಿಸದೆ ಸಾಕಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಒಂದು ವೇಳೆ ದಾನಿಗಳಿಗೆ ಪ್ರಚಾರದ ಹುಚ್ಚು ಇಲ್ಲ ಎಂದಾಗಿದ್ದರೆ ಕೆಲವು ಪ್ರಸಾರವಿರುವ ಪತ್ರಿಕೆಗಳಿಗೆ ಮಾತ್ರಾ ಕಾರ್ಯಕ್ರಮದ ಬಳಿಕ ಫೋಟೊವನ್ನು ನೀಡುವ ಅಗತ್ಯವಿರಲಿಲ್ಲ. ಪ್ರಚಾರದ ಅವಶ್ಯಕತೆಯಿದೆ ಎಂಬುದಂತೂ ಗ್ಯಾರಂಟಿ. ಆದರೆ ಊರಿನ ಮಂದಿಗೆ ಮಾತ್ರಾ ಹೇಳುವ ಕೆಲಸವನ್ನು ಮಾಡದಿರುವುದು ಸರಿಯಲ್ಲ.ದೇವರಿಗೆ ಊರಿನ ಜನ ಹಾಗೂ ಪರಊರಿನ ಜನ ಎಂಬ ಬೇದವಿಲ್ಲ ನಿಜ.ಆದರೆ ಅಷ್ಟೂ ಮೊತ್ತದ ವಸ್ತುವನ್ನು ನಾಳೆ ಕಾಯಬೇಕಾಗಿರುವುದು "ಭಗವಂತನಲ್ಲ" , ಉದ್ಯಮಿಗಳಂತೂ ಅಲ್ಲ. ಅದಕ್ಕೆ ಬೇಕಾಗಿರುವುದು ಊರಿನ "ಜನ".

ಒಟ್ಟಿನಲ್ಲಿ ಅಭಯ ಗಣಪನಿಗೆ ಬೆಳ್ಳಿಯ ಕವಚ ಅತ್ಯಂತ ಚೆನ್ನಾಗಿ ಕಾಣಿಸುತ್ತದೆ..........

ಉದ್ಯಮದಿಂದ " ಹರಿದು" ಬರುವ ಹಣ ಹೀಗಾದರೂ ಮುಗಿಯಲಿ...... ಭಗವಂತನ ಚಿಂತೆ ನಿತ್ಯವಿರಲಿ ಎಂದು ದಾನಿಗಲಿಗೆ ಹಾರೈಸೋಣವಲ್ಲಾ......

22 ಫೆಬ್ರವರಿ 2008

"ಜೀವ"ದ ಗೆಳೆಯ....



ಮಿತ್ರ....

ಬದುಕಿನಲ್ಲಿ ಈ ಎರಡಕ್ಷರಕ್ಕೆ ಬೆಲೆ ಇದ್ದೇ ಇದೆ.ಅದು ಅವನ ಬದುಕಿನ ನೋವನ್ನು ತಣಿಸಲು,ನಲಿವನ್ನು ಹೆಚ್ಚಿಸಿಕೊಳ್ಳಲು ಕಾರಣವಾಗುತ್ತದೆ.ಆತ ಪ್ರಾಣದ ಗೆಳೆಯ , ಜೀವದ ಒಡನಾಡಿ...

ಮಿತ್ರನಿಗಾಗಿ ತನ್ನ ಹಿತವನ್ನು ಬಲಿಕೊಡುವ ಮಂದಿ ಎಷ್ಟಿಲ್ಲ...? ಆತ ತನ್ನ ನೋವನ್ನು ಸಮಾಧಾನಿಸಿದ ಎಂಬ ಕಾರಣಕ್ಕಾಗಿ ಪ್ರಾಣದ ಹಂಗು ತೊರೆದು ಸಹಾಯ ಮಾಡುವವರು ಎಷ್ಟು ಜನ?.ಊಟದ ಸಮಯ ಮೀರಿದರೂ ಆತ ದೂರ ದೂರಿನಿಂದ ಇನ್ನೇನು ಬರುತ್ತಾನೆ ಎಂದು ಕಾಯುತ್ತಾ ಕೂರುವವರು ಎಷ್ಟು ಮಂದಿ?.ಆತ ಮಾಡಿದ ಸಾಧನೆಯನ್ನು ಹತ್ತಾರು ಮಂದಿಯಲ್ಲಿ ಹೇಳಿಕೊಂಡು ಖುಷಿ ಪಡುವ ಮಂದಿ ಎಷ್ಟಿಲ್ಲ?.ಅವನ ವಿಶಿಷ್ಠ,ವಿಶೇಷವಾದ ಸಾಧನೆಗೆ ಪ್ರೋತ್ಸಾಹಿಸಿ ಬೆನ್ನು ತಟ್ಟುವವರು ಎಷ್ಟಿದ್ದಾರೆ?.ಆತ ಹೇಳಿದ ಕೆಲಸವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಮಂದಿ ಎಷ್ಟಿಲ್ಲ......?..

ಇದೆಲ್ಲವೂ "ಗೆಳೆಯ" ಎನ್ನುವ ನೆಲೆಯಲ್ಲಿ ತಾನೆ..?.ಇದು ಎರಡು ಸಮಾನ ಮನಸ್ಕರ ನಡುವಿನ ಭಾಂಧವ್ಯ.ಅವಿನಾಭಾವ ನಂಟು.....
ಆ ಒಂದು ಶಬ್ದದ ನಡುವೆ ಯಾವುದೇ ವಿರೋಧ ಅಭಿಪ್ರಾಯಗಳು ಬರಬಾರದು.ಇಲ್ಲಿ ಇನ್ನೊಂದು ಅಂಶ ನೋಡಿ."ಗೆಳೆಯ"ನಿಗೆ ವಯಸ್ಸಿನ ಮಿತಿಯಿಲ್ಲ.ಆದು "ಸಮಾನ" ಮನಸ್ಕರ ಕೂಟ.ಹಾಗಾಗಿ ಅಲ್ಲೊಂದು ನಿರಂತರ ಹರಿವು ಇರುತ್ತೆ.ಅದಕ್ಕಿಂತ ಹೆಚ್ಚಾಗಿ ಮುಕ್ತವಾತಾವರಣ ಇರುತ್ತೆ.ಅನಿಸಿದ್ದನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಇರುತ್ತೆ.ಅದು ಇನ್ನೊಂದು ಕಡೆ ಅಸಾಧ್ಯ.ಹಾಗಾಗಿ ಮಿತ್ರ ಪ್ರತಿಯೊಬ್ಬನ ಬದುಕಿನಲ್ಲೂ "ಹತ್ತಿರ"ವಾಗುತ್ತಾನೆ.ಅದಕ್ಕೆ ಅಲ್ವೇ ಹಿರಿಯರು ಹೇಳಿದ್ದು ತಂದೆ ಮಕ್ಕಳು ಮಿತ್ರನಂತಿರಬೇಕು ಎಂದು..?.

ಕೆಲವೊಮ್ಮೆ ಹೀಗಾಗುತ್ತೆ.
"ಮಿತ್ರ"ರ ವಲಯದಲ್ಲಿ ಒಂದು ಸಣ್ಣ ಮತ್ಸರ ನುಗ್ಗಿಹೋದರೆ,ಅಹಂ ಶುರುವಾದರೆ ಅದು ಅಪಾಯಕಾರಿಯಾಗಿ ಸಾಗುತ್ತದೆ.ಕೊನೆಗೆ ಅದು ಮಿತ್ರನ ಅದ:ಪತನಕ್ಕೇ ಹಾತೊರೆಯುತ್ತದೆ. ಇದು"ವಿಶ್ವಾಸ ದ್ರೋಹ"?.ಅದುವೇ ಗೆಳೆಯನಿಗೆ ಮಾರ್ಗದರ್ಶಕನಾದರೆ ಮಿತ್ರನ ತಪ್ಪುಗಳನ್ನು, ಆತನ ಕ್ಷೇತ್ರದಲ್ಲಾದ ದೋಷಗಳನ್ನು ಹೇಳಿದರೆ ಆತನು ಪರಿಪೂರ್ಣನಾಗುವುದು ಸಾಧ್ಯ.

ಇನ್ನೂ ಒಂದಾಗುತ್ತೆ.
ಆತ ಎಲ್ಲೆಡೆ ಮಿತ್ರ.. ಮಿತ್ರ.. ಅಂತಾನೇ ಹೇಳ್ತಾನೆ.ಆದ್ರೆ ಅಂತರ್ಯದಲ್ಲಿ ಕಿಂಚಿತ್ ಕೂಡಾ ಆ 'ಭಾವ' ಕಾಣಿಸುವುದೇ ಇಲ್ಲ.ಇದು ಯಾರಿಗೆ ತಾನೆ ಬೇಸರವಾಗುವುದಿಲ್ಲ ಹೇಳಿ...?

"ಗೆಳೆಯ" ಯಾವತ್ತೂ ಪ್ರಾಣದ ಗೆಳೆಯನೇ.ಆತ ಬದುಕಿನ ಶಿಲ್ಪಿ ಎಂದರೂ ತಪ್ಪಲ್ಲ.ನಮ್ಮ ಅಂತರ್ಯವನ್ನು ಆತ ಬೆಳಗಬಲ್ಲ ಹಾಗಾಗೇ ಉತ್ತಮ ಗೆಳೆಯ ಇದ್ದರೆ ಬದುಕು ಉತ್ತಮವಾಗಬಹುದಲ್ವೇ......

20 ಫೆಬ್ರವರಿ 2008

ಕೊರಗರಿಂದ ಯಕ್ಷಗಾನ....



ಇಲ್ಲೊಂದು ಯಕ್ಷಗಾನ ಪ್ರದರ್ಶನ.

ಈ ಯಕ್ಷಗಾನಕ್ಕೆ ಇಷ್ಟೊಂದು ವಿಶೇಷ ಏನು ಅಂತೀರಾ?.

ಇದೆ ಈ ಯಕ್ಷಗಾನವನ್ನು ರಂಗದಲ್ಲಿ ಪ್ರಸ್ತುತ ಪಡಿಸಿದ್ದು ಕೊರಗರು.ಹಾಗಾಗಿ ಇದು ಉಳಿದೆಲ್ಲಾ ಯಕ್ಷಗಾನಗಳಿಗಿಂತ ಭಿನ್ನವಾಯಿತು.

ಯಕ್ಷಗಾನವು ಸುಳ್ಯ ತಾಲೂಕಿನ ಪಂಜದಲ್ಲಿ ನಡೆಯಿತು.ಕೊರಗರ ಅಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿತ್ತು.

ಇಡೀ ಕಾರ್ಯಕ್ರಮದಲ್ಲಿ ಜನ ಸಾಗರವೇ ಇಲ್ಲದಿದ್ದರೂ ಕೊರಗರು ಕೂಡಾ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿದರು ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡುವುದಕ್ಕೆ ಈ ಕಾರ್ಯಕ್ರಮ ಸಹಕಾರಿಯಾಗಿತ್ತು.ಇದೇ ರೀತಿಯಾಗಿ ಹಿಂದುಳಿದವರ ಉದ್ದಾರವನ್ನು ಮಾಡುತ್ತಾ ಸಾಗಿದರೆ ಇಲ್ಲಿನ ಅಸಮಾನತೆಗಳು ದೂರವಾಗಲು ಸಾಧ್ಯ. ಹೀಗಲ್ಲದೆ ಉಳ್ಳವರಿಂದ ತೆಗೆದು ಇಲ್ಲದವರಿಗೆ ಕೊಡುವುದರಿಂದ ಮಾನಸಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ತಾನೆ?.
ಆರಂಭದ ಕಾರ್ಯಕ್ರಮ ಇದಾದ ಕಾರಣ ಸಹಜವಾಗಿಯೇ ಲೋಪಗಳು ಇದ್ದೇ ಇತ್ತು.ಮುಂದೆ ಇದೆಲ್ಲವೂ ನಿವಾರಣೆಯಾದರೆ ಅತ್ಯಂತ ಯಶಸ್ವಿ ಕಾರ್ಯಕ್ರಮ ಎಂದಾಗುವುದರಲ್ಲಿ ನಿಸ್ಸಂದೇಹ.

19 ಫೆಬ್ರವರಿ 2008

42 ವರ್ಷದ ಬಳಿಕ ಡಾಮರೀಕರಣ...!!?





ನೀವಿದನ್ನು ನಂಬಿ ... ನಂಬಲೇಬೇಕು ಕೂಡಾ...


ಅಬ್ಬಾ....!

ಸುಬ್ರಹ್ಮಣ್ಯ - ಪುತ್ತೂರು ರಸ್ತೆಗೆ ಡಾಮರೀಕರಣಕ್ಕೆಮಂಗಳವಾರದಂದು ಚಾಲನೆ ನೀಡಲಾಯಿತು.ಈ ರಸ್ತೆಯು ಮರುಡಾಮರೀಕರಣಗೊಳ್ಳದೆ ಸುಮಾರು 42 ವರ್ಷ ಕಳೆದಿದೆ. ಹಾಗಾಗಿ ಈಗ ನಂಬಿ ಅಂತ ನಾನು ಹೇಳಿದ್ದು.

ಡಾಮರೀಕರಣವನ್ನು ಸುಬ್ರಹ್ಮಣ್ಯದಿಂದ ಸುಮಾರು 25 ಕಿ ಮೀ ದೂರದಿಂದ ಆರಂಭಗೊಂಡಿದ್ದು ಸುಬ್ರಹ್ಮಣ್ಯದ ಕಡೆಗೆ ಆಗಮಿಸುತ್ತಿದೆ.ಅದರಾಚಗೆ ಇನ್ನೊಬ್ಬರು ಗುತ್ತಿಗೆದಾರರು ಡಾಮರೀಕರಣ ಮಾಡುತ್ತಾರೆ.

ಅಂದು ರಸ್ತೆ ಸರಿಯಿಲ್ಲ ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪಂಜ ಜೇಸೀ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿದೆ ರಸ್ತೆ ತಡೆ ಹಾಗೂ ಪ್ರತಿಭಟನೆ ಮಾಡಲಾಗಿತ್ತು. ಆಗ ಅಧಿಕಾರಿಗಳು ಮರುಡಾಮರೀಕರಣದ ಭರವಸೆ ನೀಡಿದ್ದರು.
ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಗುಂಡ್ಯ - ಸುಬ್ರಹ್ಮಣ್ಯ ಬಹುತೇಕ ಸುಧಾರಿಸಿದೆ. ಆದರೆ ಉಪ್ಪಿನಂಗಡಿ-ಕಡಬ ರಸ್ತೆ ಮಾತ್ರಾ ಹದಗೆಟ್ಟಿದೆ. ಅದೊಂದು ದುರಸ್ಥಿಯಾದರೆ ಸುಬ್ರಹ್ಮಣ್ಯ ಸಂಪರ್ಕವು ಭಕ್ತರಿಗೆ ಸ್ವಲ್ಪ ನೆಮ್ಮದಿಯಾದೀತು.

ಈಗ ಜನಪ್ರತಿನಿಧಿಗಳಿಲ್ಲ ಹಾಗಾಗಿ ಅಭಿನಂದನೆ ಬೇಕಾಗಿಲ್ಲ ಅದೊಂದು ನೆಮ್ಮದಿ.

ಅಂತೂ ಡಾಮರೀಕರಣ ಶುರುವಾಯಿತಲ್ಲಾ... ಅದರಿಂದಲೇ "ಕನಸೊಂದು" ಶುರುವಾಗಿದೆ..........!!

17 ಫೆಬ್ರವರಿ 2008

ಭವಿಷ್ಯದ ವಿಷ್ಯ ಏನು..?



ಮೊನ್ನೆ ಮೊನ್ನೆಯ ಘಟನೆ.

ನೆನಪಿನ್ನೂ ಹಾಗೇ ಇದೆ...

ಇಂತಹ ಹಲವು ಘಟನೆಗಳು ಭಾರತದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ನಡೆದಿದೆ.ಅದರಿಂದ ನಾವಾದರೂ ಕಲಿತ ಪಾಠ ಏನು?.ಆ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ?.

ದಾವಣಗೆರೆಯ ಹೊನ್ನಾಳಿಯಲ್ಲಿ ಇಬ್ಬರು ಬೈಕ್ ಚೋರರು ಸೆರೆಸಿಕ್ಕರು.ನಂತರ ಅವರಿಗೆ ಜಾಮೀನು ಸಿದ್ದಗೊಂಡಿತು.ಜೈಲ್ ಅಧಿಕಾರಿಗಳು ಸೂಕ್ಷ್ಮವಾಗಿ ಅವರನ್ನು ಗಮನಿಸಿದ ಕಾರಣದಿಂದಾಗಿ ಆರೋಪಿಗಳ ಹಿಂದಿನ ಸತ್ಯ ಬಯಲಾಯಿತು.ಅವರಿಬ್ಬರೂ "ಉಗ್ರ"ರು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿತು.ನಂತರದ ಸಂಗತಿಗಳು ದಿನನಿತ್ಯದ ಪತ್ರಿಕೆಗಳಲ್ಲಿ ಬರುತ್ತಿದೆ.ಅವರ ಬಂಧನದ ನಂತರ ಹತ್ತು ಹಲವು ವಿಚಾರಗಳು ಹೊರಬಂದವು. ಐ ಟಿ ಕಂಪನಿಗಳಿಂದ ಹಿಡಿದು ನಮ್ಮ ಆರ್ಥಿಕ ವ್ಯವಸ್ಥೆ ,ಜನ ಸಾಮಾನ್ಯರ ನೆಮ್ಮದಿಗೆ ಭಂಗ ತರುವ ಹಲವು ವಿಚಾರಗಳು ಪೊಲೀಸರ ತನಿಖೆಯಿಂದ ಬಹಿರಂಗವಾಗುತ್ತಾ ಸಾಗಿ ಅವರ ಬೇರುಗಳ ಜಾಲಾಟ ನಡೆಯುತ್ತದೆ.ಇಂತಹ ಪ್ರಕರಣಗಳು ನಮ್ಮಲ್ಲಿ ಇದು ಮೊದಲಲ್ಲ.ಅಂತಹ ಆರೋಪಿಗಳಿಗೆ ಏಕೆ ಕಠಿಣ ಶಿಕ್ಷೆಯಾಗಬಾರದು?. ಆದರೂ ಏಕೆ ಶಿಕ್ಷೆಯಾಗುತ್ತಿಲ್ಲ?.ಸಂಸತ್ ಭವನದ ಮೇಲೇ ಧಾಳಿ ಮಾಡಿದವರ ಜೀವ ರಕ್ಷಿಸಿದ "ಪುಣ್ಯಾ"ತ್ಮರು ನಾವಲ್ಲವೇ?. ಹಾಗಿರುವಾಗ ಇಂದಿನ ಪ್ರಕರಣಕ್ಕೆ ಶಿಕ್ಷೆಯಾದೀತೆಂಬ ವಿಶ್ವಾಸ ಹೇಗೆ ಬರಲು ಸಾಧ್ಯ?. ಆದರೂ ಪೊಲೀಸರು ಶ್ರಮ ಪಟ್ಟು ಕೆಲಸ ನಿರ್ವಹಿಸುತ್ತಾರಲ್ಲಾ ಅದು ಗ್ರೇಟ್.

ಹೀಗೆ ಅನೇಕ "ಧಾಳಿ" ಪ್ರಕರಣಗಳು ನಮ್ಮ ಮುಂದೆ ಇರುವಾಗ.... ನಡೆದಿರುವಾಗ.... ನಮ್ಮ ಜನ ಏಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ.?.ನಮ್ಮ ನಡುವೆ ಸಂಶಯಿತ ವ್ಯಕ್ತಿಗಳು ಸುಳಿದಾಡುತ್ತಿರುವಾಗ ನಾವೇ ಸ್ವತಹ ತನಿಖೆಗೆ ಮುಂದಾಗಿದ್ದೇವಾ..? ಏಕೆಂದರೆ ನಮಗಿನ್ನೂ ಎಚ್ಚರಿಕೆ ಬಂದಿಲ್ಲ.ಇಂದು ದಾವಣಗೆರೆಯ ಪ್ರಕರಣದಲ್ಲಿ ಯಾರೊಬ್ಬರಿಗೂ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಅಂತಹ "ಉಗ್ರ"ರು ಮಾಡಬಹುದಾಗಿದ್ದ ಪ್ರಕರಣಗಳನ್ನು ಗಮನಿಸಿದರೆ ಮುಂದಿನ ಭವಿಷ್ಯ ಅಷ್ಟು ಸುಲಭವಿಲ್ಲ ಎಂಬುದು ಗೋಚರವಾಗುತ್ತದೆ.

ಹೀಗಾಗಿ ನಮ್ಮ ಮುಂದಿನ ಬದುಕು ಭದ್ರ ಎನಿಸುವುದಿಲ್ಲ ಏಕೆ ಗೊತ್ತಾ.ಮನೆಯಿಂದ ಪೇಟೆಯ ಕಡೆಗೆ ಹೋದ ನಮ್ಮ ಅಣ್ಣಂದಿರು , ಅಕ್ಕಂದಿರು, ತಂದೆ, ತಾಯಿ ಮತ್ತೆ ಸುಭದ್ರವಾಗಿ ಮನೆಗೆ ಸೇರಬಹುದೆಂಬ ನಂಬಿಕೆ ಇಲ್ಲವಾಗಿದೆ.ನಗರದ ಯಾವುದೇ ಕಡೆಗಳಲ್ಲಿ ಅವಘಡಗಳು ನಡೆಯಬಹುದು. ಈಗ ಅದೂ ಅಲ್ಲ ಹಳ್ಳಿ ಹಳ್ಳಿಗಳೂ ಮುಂದೆ ಉಗ್ರರ ತಾಣವಾಗುಬಹುದು ಎನ್ನುವ ಆತಂಕ ಜನರಿಗೆ ಕಾಡಿದರೆ ಅಚ್ಚರಿಯಿಲ್ಲ.

ಇಂತಹ "ಉಗ್ರ" ಘಟನೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕಾನೂನು ಕ್ರಮ ಅಗತ್ಯವಿತ್ತು.ಒಮ್ಮೆ ಜಾರಿಯಾಗಿತ್ತು ಕೂಡಾ.ಆದರೆ ಅದಕ್ಕೆ ರಾಜಕೀಯ ಸ್ಪರ್ಶ ಸೋಂಕಿ ಆ ಕಾನೂನು ಇಲ್ಲವಾಯಿತು.ಇಂತಹ ರಾಜಕೀಯ ವಿಚಾರಗಳೇ "ಉಗ್ರ"ರೂಪಕ್ಕೆ ಕಾರಣವಾಗುತ್ತಿದೆ ಎಂದರೆ ತಪ್ಪಿಲ್ಲ.ಹೀಗಾಗಿ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲವಾಗಿದೆ.ನಾವು ನಿರೀಕ್ಷಿಸದೇ ಬರುವ ಅವಘಡಗಳು ಒಂದೆಡೆಯಾದರೆ ಇವುಗಳೆಲ್ಲಾ ನಾವೇ ಬರಿಸಿಕೊಳ್ಳುವ ಅವಘಡಗಳೆಂದರೆ ತಪ್ಪಾಗಲಾರದು. ಹೀಗಾಗಿ ಮುಂದಿನ ಬದುಕು ನಿರೀಕ್ಷಿಸಿದಷ್ಟು ಸುಲಭವಿಲ್ಲ ಎನ್ನುವುದು ಗ್ಯಾರಂಟಿ.

ಬದುಕಿನ ಭದ್ರತೆಯ ಬಗ್ಗೆ ಮಾತನಾಡುವಾಗ ಇನ್ನೊಂದು ವಿಚಾರ ನೆನಪಿಗೆ ಬರುತ್ತಿದೆ.ಈಗ ನಗರದಲ್ಲಿ ಐಟಿ ಉದ್ಯಮಗಳಿಗೆ ಹೊಡೆತ ಆರಂಭವಾಗಿದೆ.ನಮ್ಮ ಎಲ್ಲಾ ಐಟಿ ಕಂಪನಿಗಳು ವಿದೇಶವನ್ನು ಅವಲಂಬಿಸಿರುವ ಕಾರಣ ಅಲ್ಲಿ ಆರ್ಥಿಕ ಪರಿಸ್ಥಿತಿಯು ನಮಗೆ ಹೊಡೆತವನ್ನುಂಟು ಮಾಡಿದೆ. ಇಗ ಡಾಲರ್ ಮೌಲ್ಯವು ಕುಸಿದ ಕಾರಣದಿಂದ ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ನಷ್ಟವಾಗುತ್ತಿದೆ.ಇದರ ಪರಿಣಾಮ ಐಟಿ ಉದ್ಯೋಗಿಗಳಿಗೆ ಭೀತಿ ಆರಂಭವಾಗಿದೆ.ಈಗಾಗಲೇ ಪ್ರತಿಷ್ಠಿತ ಕಂಪನಿಯೊಂದು ಸುಮಾರು ೫೦೦ ಉದ್ಯೋಗಿಗಳನ್ನು ಕೆಲಸದಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದೆ. ಇನ್ನೂ ೩೦೦೦ ಮಂದಿಗೆ ಅಭದ್ರತೆ ಕಾಡಿದೆ.ಮುಂದೆ ಐಟಿ ಕಂಪನಿಗಳ ಭವಿಷ್ಯ ಹೀಗೆ ಮುಂದುವರಿಯುತ್ತಾ... ಅಥವಾ ಸುಧಾರಿಸುತ್ತಾ... ಎನ್ನುವ ಆತಂಕ ಇದ್ದೇ ಇದೆ. ಇಂತಹ ಘಟನೆಗಳು ನಮ್ಮ ಆರ್ಥಿಕ ವ್ಯವಸ್ಥೆ ಧಕ್ಕೆಯುಂಟು ಮಾಡುವ ಸಂದರ್ಭಗಳೂ ಇರುವುದರಿಂದ ಈಗಲೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಹೀಗಾಗಿ ಮುಂದಿನ ಭವಿಷ್ಯವು ನಾವು ನೆನೆಸಿದಷ್ಟು ಸುಲಭವಾಗಿಲ್ಲ ಎನ್ನುವುದು ಈಗಲೇ ಗೋಚರವಾಗುತ್ತಿದೆ. ಹಳ್ಳಿಯ ಮಂದಿಯೂ ಚಿಂತಿಸಬೇಕಾದ ಕಾಲ ಬಂದಿದೆ.ಹಳ್ಳಿಯಲ್ಲಿ ಈಗ ನೆಮ್ಮದಿಯಿದ್ದರೂ ಮುಂದಿನ ದಿನಗಳ ಬಗ್ಗೆ ಯೋಚಿಸಬೇಕಾಗಿದೆ. ನಗರದ ಮಂದಿಗಂತೂ ಇತರ ಹತ್ತಾರು ತಲೆನೋವಿನ ನಡುವೆ ಈಗ ಉದ್ಯೋಗ ,ಉಗ್ರರ ಬಗ್ಗೆಯೂ ಚಿಂತಿಸಬೇಕಾದ ಅನಿವಾರ್ಯತೆಯಿದೆ.

15 ಫೆಬ್ರವರಿ 2008

ಇದೇಕೆ ಹೀಗೆ ....



ಇಲ್ಲಿ ಒಂದೆರಡು ಪ್ರಕರಣಗಳನ್ನು ನಿಮ್ಮ ಮುಂದೆ ಇಡ್ತೇನೆ... ಇದು ಕಟ್ಟುಕತೆಯಲ್ಲ... ನಮ್ಮೂರಿನ ,ನಮ್ಮ ನಡುವಿನ ಸತ್ಯ ಸಂಗತಿಗಳು. ಹಳ್ಳಿಯ ನನಗೆ ನಿಜಕ್ಕೂ ಅಚ್ಚರಿ ಹಾಗೂ ಆತಂಕವಾಗುತ್ತಿದೆ.ಸಮಾಜದಲ್ಲಿ ಹೀಗೂ ನಡೆಯುತ್ತದಾ..?. ಇಂಥವರೂ ಇದ್ದಾರಾ..?

ನಿಮಗೇನೆನ್ನಿಸುತ್ತದೆ ಎನ್ನುವುದನ್ನ ನನ್ನ Email ID puchhappady@yahoo.co.in ಗೆ ತಿಳಿಸಿ. ಅದು ಇನ್ನೊಂದು ಮಂಥನಕ್ಕೆ ಕಾರಣವಾಗಬಹುದು......!.

- ಒಂದು ಹಳ್ಳಿ.

ಅಲ್ಲಿನ ಕುಟುಂಬವೊಂದರಲ್ಲಿ 5 ಜನ. ತಂದೆ ತಾಯಿ, 2 ಗಂಡು, 1 ಹೆಣ್ಣು ಮಕ್ಕಳು.ತಂದೆ ಸಾಮಾನ್ಯ ಸ್ಥಿತಿವಂತರು.ಮಕ್ಕಳೆಲ್ಲರಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದರು.ಎಲ್ಲರೂ ಉದ್ಯೋಗದ ಹಾದಿ ಹಿಡಿದರು.ಮದುವೆಯೂ ಆಯಿತು.ತಂದೆಯ ಆಸ್ಥಿಯಲ್ಲಿ ಸಮಪಾಲು ನಡೆಯಿತು. ಅದಾದ ನಂತರ ಅಣ್ಣ- ತಮ್ಮರ ಒಳಗೊಳಗೆ ಒಂದು ಪೈಪೋಟಿ ಸುರುವಾಯಿತು .ಏನು ಗೊತ್ತಾ..? ತಂದೆ ನನ್ನ ಬಳಿ ... ನನ್ನ ಬಳಿ ಎಂಬ ಚರ್ಚೆ. ಆ ಚರ್ಚೆ ಹಿಂದೆ ಸ್ವಾರ್ಥವೂ ಇತ್ತು.ಏಕೆ ಗೊತ್ತಾ? ತಂದೆಯ ಹೆಸರಲ್ಲಿ ಜೀವ ವಿಮೆಯಿತ್ತು.ಅದೂ ಸುಮಾರು ಒಂದೆರಡು ಲಕ್ಷ ಅಲ್ಲ.ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚಿತ್ತು. ಹಾಗಾಗಿ ತಂದೆ ಸತ್ತರೆ ಅದು ಸಿಗುತ್ತಲ್ಲಾ ಎಂಬ ಆಸೆ.ಸರಿ ಅದು ಕೊನೆಗೆ ತಂದೆಯ ಬೇಡಿಕೆಯಂತೆ ಹಿರಿಮಗನಲ್ಲಿ ಉಳಿಯುವ ಮಾತುಕತೆಯಾಯಿತು. ಆಗಲೆ ಸುರುವಾಗಿದ್ದು ವಿವಾದ. ಮನೆಯೊಳಗೆ ಕೋಲಾಹಲ. ಅದು ಗೊತ್ತಲ್ಲ.. ಅಲ್ಲಿ ನಿಜವಾದ ಪ್ರೀತಿಯಿರಲಿಲ್ಲ.. ಅಲ್ಲಿದ್ದದ್ದು ಸ್ವಾರ್ಥ.ಹಾಗಾಗಿ ಜಗಳ ಬಂದೇ ಬರುತ್ತೆ.ಸ್ವಲ್ಪ ಸಮಯದ ನಂತರ "ಅಕಾಲಿಕ"ವಾಗಿ ತೀರಿಕೊಂಡ್ರು. ಹಾಗೆ ತೀರಿಕೊಂಡರೆ ಮಾತ್ರಾ ಅಲ್ಲವೇ ದುಡ್ಡು ಸಿಗೋದು?. ನಂತರ ಊರಿಡೀ ಸುದ್ದಿ ಹಬ್ಬಿತು.ಆದರೆ ಮಕ್ಕಳಿಗೆ ದುಡ್ಡಿ ಸಿಕ್ಕಿತಲ್ಲಾ?.

- ಇದು ಇನ್ನೊಂದು ಘಟನೆ.

ಅವರಿಗೆ ಏಕೈಕ ಪುತ್ರ.5 ಜನ ಪುತ್ರಿಯರು.ತನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಅವರು ಮನೆ ಮನೆ ಅಲೆದು 10 ರೂ ವಿನಿಂದ ಹಿಡಿದು 100 ರೂ ವರೆಗೆ ಕೇಳಿಕೊಂಡು.ಸುಮಾರು 15 ವರ್ಷ ಓದಿಸಿದರು.ಆತನಿಗೆ ಉದ್ಯೋಗ ಸಿಕ್ತು.ಅತ್ಯುನ್ನತ ಹುದ್ದೆಗೆ ಏರಿದ.ಹುದ್ದೆಗೆ ಏರುತ್ತಿದ್ದಂತೆಯೇ ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಆತ ಎರಡು ವರ್ಷಕ್ಕೊಮ್ಮೆ ಬಂದ.ಮತ್ತೆ ಮತ್ತೆ...... ಈಗ ತಂದೆ ಹಾಸಿಗೆ ಹಿಡಿದಿದ್ದಾರೆ. ಮಗನ ನೆನಪಾಗುತ್ತೆದೆ. ಆತ ಮೊನ್ನೆ ಬಂದಿದ್ದ ಅಂತ ನೆನಪಿಸಿ.. ಆತ ಫೋನ್ ಮಾಡಿದರೆ ಸಾಕು ಡಾಕ್ಟು ಬಂದು ನೋಡುತ್ತಾರೆ.ಅಂತ ಹಾಸಿಗೆಯಿಂದಲೂ ಮಗನ ಮೇಲೆ ಗೌರವ ತೋರುತ್ತಾರೆ.ಆದರೆ ಆತ ಇಂದಿಗೂ ಆ ಮನೆಗೆ ಬಂದಿಲ್ಲ.ಮನೆಗೆ ಕನಿಷ್ಠ ದೂರವಾಣಿ ಸಂಪರ್ಕವನ್ನೂ ಮಾಡಿಸಿಲ್ಲ. ಆಸ್ಪತ್ರೆಗೆ ದಾಖಲಾಗಿರುವಾಗ ದೂರವಾಣಿಯ ಮೂಲಕ ಮಾತನಾಡಿ ಹುಶಾರಾರುತ್ತೀರಾ ಅಂತ ಸಂತೈಸಿದ್ದಾನೆ. ನೀವು ಅದೆಲ್ಲಾ ಬಿಡಿ. ಆತ ನಗರಕ್ಕೆ ತೆರಳಿ ಸುಮಾರು ೨೫ ವರ್ಷವಾಗಿರಬಹುದು ಒಮ್ಮೆಯೂ ತಂದೆ-ತಾಯಿಯನ್ನು ನಗರ ತೋರಿಸಲೆಂದು ಕರಕೊಂಡು ಹೋಗಿಲ್ಲ...!?

ಇದೆರಡು ಪ್ರಕರಣಗಳಲ್ಲ.ಇಂತಹುದೇ ಕೆಲ ಪ್ರಕರಣಗಳು ನೆನಪಿನ ಪಟಲದಲ್ಲಿದೆ.ಆದರೆ ಅದು ಕೆಲವೊಮ್ಮೆ ಮತ್ತೆ ಮತ್ತೆ ಕಾಡುತ್ತಲ್ಲಾ ಆಗ ಹೊರಹಾಕಿಬಿಡಬೇಕೆನ್ನಿಸಿತು. ಇದು ಹಳ್ಳಿಯೊಳಗಿನ ಕತೆ. ಹಾಗಾದರೆ ನಗರದಲ್ಲಿ....??

ಯಾವಾಗ ನಾವು ಕಾರ್ಪೋರೇಟ್ ಸಂಸ್ಕೃತಿಯ ಭಾಗವಾದೆವೋ ಅಂದಿನಿಂದ ಇಂತಹ ಪ್ರಕರಣಗಳೂ ಹೆಚ್ಚಲು ಆರಂಭವಾಯಿತೇನೋ..?.

ಒಂದು ದಿನದ ಪ್ರೀತಿಯಲ್ಲಿ....



ಪ್ರೀತಿ.....!!!.

ಈ ಎರಡಕ್ಷರದ ಹಿಂದೆ ಹತ್ತಾರು ಪ್ರಶ್ನೆಗಳು.... ಕೆಲವೊಂದು ನಿಗೂಢಗಳು.....

ಪ್ರೀತಿಸಲು ಕಾರಣ ಬೇಕೇ?.. ಆದರೆ ಕಾರಣವಿಲ್ಲದೆ ಪ್ರೀತಿಸಲು ಸಾಧ್ಯವೇ..? ಪ್ರೀತಿಸಲು ಒಂದೇ ದಿನ ಸಾಕೇ...? ಸಾಕಾದರೆ ಅದು ಎಂತಹ ಪ್ರೀತಿ...?

ನಾನು ಹೀಗೆಯೇ ಪ್ರೀತಿಯ Definitionಗಾಗಿ ತುಂಬಾ ತಡಕಾಡಿದೆ.ಉತ್ತರ ಸಿಕ್ಕಿದ್ದು ಕೊನೆಗೂ "ಪ್ರೀತಿ" ಅಂತಲೇ...
ಅದನ್ನು ವ್ಯಾಖ್ಯಾನಿಸುವುದು ಹೇಗೆ?.ಎರಡು ಮನಸ್ಸುಗಳ ಬೆಸುಗೆಯೇ..? ಮನಸ್ಸುಗಳ ಭಾವದ ಹರಿದಾಟವೇ.. ಭಾವನೆಯ ಸಂಚಾರವೇ...? ಇಲ್ಲ ಎದು ಸಾಧ್ಯವಿಲ್ಲ...! ಹಾಗಿದ್ದರೆ ಅದೆಲ್ಲವನ್ನು ಒಂದೇ ದಿನದಲ್ಲಿ ವ್ಯಕ್ತಪಡಿಸಲು ಸಾಧ್ಯವಾ..?

ಪ್ರೀತಿಯನ್ನು ತೋರ್ಪಡಿಸುವುದು ಹೇಗೆ?

ನನಗೆ "ನಿನ್ನಲ್ಲಿ" ಪ್ರೀತಿಯಿದೆ ಎನ್ನುವುದನ್ನು ಹೇಗೆ ವ್ಯಕ್ತಪಡಿಸಲಿ? ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ-ತಂಗಿ.... ಸೇರಿದಂತೆ ಸಮಾಜದ ಸಮಸ್ತ ಜೀವಿಗಳಲ್ಲಿ ಪ್ರೀತಿಯಿದೆ ಎನ್ನುವುದನ್ನು ಹೇಗೆ ಹೊರಹಾಕಲಿ. ಅಲ್ಲ.. ಪ್ರೀತಿಯನ್ನು ಒಂದೇ ದಿನದಲ್ಲಿ ವ್ಯಕ್ತ್ಯಪಡಿಸಲು ಸಾಧ್ಯನಾ... ಅಂತ ನನಗೆ ಪದೇ ಪದೇ ಕಾಡುತ್ತದೆ.ಹಾಗೆ ಸಾಧ್ಯವಾಗಿದ್ದರೆ ಇಂದು ಇಷ್ಟು ತೊಳಲಾಟವೇಕೆ.? ನನಗನ್ನಿಸುವುದು ಆ ಒಂದು ದಿನದ ಪ್ರೀತಿಯಲ್ಲಿ ನಿಜವಾದ ಪ್ರೀತಿಯ ಸ್ಪರ್ಶ ಇಲ್ಲ... ಅದು "ಬೇರೆಯೇ" ಅರ್ಥ ಪಡೆಯುವ ಪ್ರೀತಿ ಅಂತ ನಾನು ಭಾವಿಸಿಕೊಂಡಿದ್ದೇನೆ.

ಕೆಂಗುಲಾಬಿ.... ಇದಕ್ಕೆ ಸಾತ್ ನೀಡುವ ಹಚ್ಚ ಹಸುರಿನ ಗಿಡ... ಅದರ ನೋಟವೇ ಚಂದ...ಪ್ರೀತಿಯ ಇನ್ನೊಂದು ರೂಪ...

ಅದರ ಸ್ಪರ್ಶವೇ ಅಧ್ಬುತ.... ಅನುದಿನವೂ ಅದು ಹಾಗೇ ಅಲ್ಲೇ ಇದ್ದರೆ ಎಷ್ಟು ಚೆನ್ನ.... ಮುಂಜಾನೆಯ ಒಂದು ನೋಟವೇ ಇಡೀ ದಿನದ ಬದುಕಿಗೆ ಸ್ಪೂರ್ತಿ.ಅಂತಹ ಗುಲಾಬಿಯನ್ನು ಒಂದು ದಿನದ ಪ್ರೀತಿಗಾಗಿ ಏಕೆ ನೀಡಬೇಕು.ಒಂದೇ ದಿನದಲ್ಲಿ ಬಾಡುವ ಹೂವನ್ನು ಹಚ್ಚ ಹಸುರಾಗಿದ್ದ ಗಿಡದಿಂದ ಏಕೆ ಕೀಳಬೆಕು?.ಮರುದಿನಕ್ಕೆ ಬಾಡಿ ಹಳತಾಗುವ ಆ ಸನ್ನಿವೇಶಕ್ಕೆ ಎದೆಮಾಡಿಕೊಡುವ ಬದಲು ಅನುದಿನವೂ ಅದೇ "ಪ್ರೀತಿ" ಹಚ್ಚ ಹಸುರಾಗಿದ್ದರೆ ಏನು ಚಂದ. ಹಾಗೆಂದೆ ಆ ಹೂವು ಅನುದಿನವೂ ಹಾಗೇ ಇರುತ್ತದೆಂಬ ಭ್ರಮೆ ನನಗಿಲ್ಲ.

ಪ್ರೇಮಿಗಳು....

ಪ್ರೀತಿಯ ಭಾಗವೇ ಪ್ರೀಮಿಗಳು.ಒಂದು ದಿನದ ಪ್ರೇಮಿಗಳ ದಿನಾಚರಣೆ ಮಾಡದ ಕಾರಣಕ್ಕೆ "ಬಲಿದಾನ"ಗೈದವರೂ ಪ್ರೇಮಿಗಳೇ. ಎಂತಹ "ಕುರುಡು"....

ನನಗೆ ತಿಳಿದ ಒಂದು ಪ್ರಕರಣ.....

ಪುತ್ತೂರಲ್ಲಿ ಡಿಪ್ಲೋಮಾ ಓದುತ್ತಿದ್ದಾಗಿನ ಸಮಯ...ನನ್ನ ಮಿತ್ರ ರಾಜೇಶ ಒಬ್ಬಳು ಹುಡುಗಿಯ ಹಿಂದೆ ಬಿದ್ದ.ಅದಕ್ಕೆ ಪ್ರೀತಿಯ ಹೆಸರು ನೀಡಿಕೊಂಡ.ಅವಳಿಗೆ ಅರಿವಿಲ್ಲದಂತೆ ಅವಳ ಹಿಂದೆ ಕಾಲೇಜು ಕಾರಿಡಾರ್.. ಹೋಟೇಲ್... ಬಸ್ ಸ್ಟ್ಯಾಂಡ್ .. ಹೀಗೆ ತಿರುಗಾಡಿದ.ಅಷ್ಟೂ ತಿರುಗಾಡಿದ್ದು ಎಂಬ ಎರಡು ಶಬ್ದ ಹೇಳಲು.ಕೊನೆಗೂ ಧೈರ್ಯ ತಂದು ಹೋಟೇಲ್ ಒಂದರಲ್ಲಿ ಪತ್ರವೊದನ್ನು ವೋಡಿದ.ಅದು ದೊಡ್ಡ ಸುದ್ದಿಯಾಯಿತು.ಕಾಲೇಜಿಗೂ ದೂರು ಹೋಯಿತು. ಆತ ಕಾಲೇಜಿನಿಂದ ಡಿಬಾರ್...!!.ಮರುದಿನ ರೂಂನಲ್ಲಿ ನಿದ್ರೆ ಮಾತ್ರೆ ತಿಂದು ಸಾವಿನತ್ತ ಹೊರಟ.ಮಿತ್ರರ ಸಕಾಲಿಕ ಪ್ರಯತ್ನದಿಂದ ಬದುಕಿದ.ಇಂದಿಗೂ ಆತ ಇದ್ದಾನೆ. ಪ್ರೀತಿ ಹಾಗಲ್ಲ ಅಂತಾನೆ...!]

ಈ ಪ್ರಕರದಣಲ್ಲಿ ನಾನು ಗಮನಿಸಿದ್ದು, ಆತನ ಪ್ರೀತಿ ಯಾವ ದಿಕ್ಕಿನಲ್ಲಿತ್ತು? ಆಲ್ಲಿ ಕೇವಲ ಒಂದು "ಬಯಕೆ'ಯ ಹಿಂದಿನ ಪ್ರೀತಿ ಮಾತ್ರಾ ಕಾಣುತ್ತಿತ್ತು. ಅದಕ್ಕಾಗಿ ಆತ ಅಲೆದಾಡಿದ... ನಿರಾಶನಾದ... ಸಾವಿನತ್ತ ಪ್ರಯಾಣಿಸಿದ... ಇದು ವಿಚಿತ್ರ.

ಇನ್ನೊಂದು ಸಂಗತಿ.

ಅದೇ ವರ್ಷ ಒಬ್ಬಳು ಯುವತಿಯ ಆತ್ಮಹತ್ಯೆ ನಡೆಯಿತು.ಅವಳು ವಿವಾಹಿತಳು.ಅವರ ವಿವಾಹದ ಹಿಂದೆ 1 ವರ್ಷದ ಪ್ರೇಮವಿತ್ತು.ಅಲ್ಲಿಗೆ ಅವರಿಬ್ಬರ ಸಂಬಂಧ ಕೊನೆಗೊಂಡಿತ್ತು.ಈ ಪ್ರಕರಣದಲ್ಲೂ ಪ್ರೀತಿಯ ಹಿಂದೆ ಒಂದು ಬಯಕೆ ಮಾತ್ರಾ ಎನ್ನುವುದು ಅರಿವಾಗುತ್ತದೆ.

ಇಂದು ಎಲ್ಲೆಲ್ಲೂ ನೋಡಿ.ಪ್ರೀತಿಯ ಶಬ್ದ ಹೆಚ್ಚು ಅಲೆದಾಡುವುದು ಕಾಲೇಜು ಕ್ಯಾಂಪಸ್ ಗಳಲ್ಲೇ.ನೀವು ಅಲ್ಲೆಲ್ಲಾ ಗಮನಿಸಿ ನೋಡಿ ಅಲ್ಲಿ ಈ ಪ್ರೀತಿಗೆ " ಕಾಮ" ದ ಸ್ಪರ್ಷ ಕಾಣುತ್ತದೆ. ಅಥವಾ "ಮಜಾ"ದ ಪರಿಕಲ್ಪನೆ ಕಾಣುತ್ತದೆ. ಅದಕ್ಕೆ ಒಂದೆರಡು ವರ್ಷದ ನಂತರ ಅರ್ಥವೇ ಇರುವುದಿಲ್ಲ.ಇನ್ನೂ ಪಕ್ವವಾಗದ ಮನಸ್ಸುಗಳಲ್ಲಿ ಪ್ರೀತಿ ಆ ಅರ್ಥದಲ್ಲಿ ,ಆ ದಾರಿಯಲ್ಲಿ ಸಾಗುತ್ತಿದೆ. ನಗರದಲ್ಲಿ ಅನೇಕ ಪ್ರಕರಣಗಳು ಪ್ರೀತಿ, ಪ್ರೇಮದ ಹೆಸರಲ್ಲಿ ಬಯಲಾಗುತ್ತಿವೆ.
ಇದಕ್ಕೆ ಕಾರಣವೇನು?.

ಇಂದು ಯುವಜನತೆಯನ್ನು ಆಕರ್ಷಿಸಲು ಪ್ರೀತಿ.. ಪ್ರೀತಿ, ಪ್ರೇಮದ ಸಿನಿಮಾಗಳು..., ಮಾಧ್ಯಮಗಳು..., ಎಲ್ಲೆಂದರಲ್ಲಿ ಅದೇ ವಿಚಾರಗಳನ್ನು ನೋಡುವ ಅಪ್ರಬುದ್ಧ ಮನಸ್ಸುಗಳು ಅದನ್ನೇ ತಮ್ಮೊಳಗೆ ಆಹ್ವಾನಿಸುತ್ತಾರೆ.ಅದರ ಪರಿಣಾಮವೇ ಇಂದಿನ ದಿನ... ಒಂದು ದಿನದ "ಪ್ರೀತಿ"ಗೆ ಮಹತ್ವ...

"ಪ್ರೀತಿ"ಯ ಎರಡಕ್ಷರದಲ್ಲಿ ಮಾನಸಿಕವಾಗಿ ಅದ್ಧುತ ಅನುಭವ..... ಅಲ್ಲಿ ಸಿಗುವ ಮಾನಸಿಕ ಸುಖ- ಸಂತಸ.. ಅಗಾಧತೆ... ಅಗಲಿಕೆಯ ನೊವು.... ಹೇಗೆ ವಿವರಿಸುವುದು.

ಇದು ಕೇವಲ ಗಂಡು-ಹೆಣ್ಣಿಗೇ ಮೀಸಲಲ್ಲ. ಮಿತ್ರ , ಅಣ್ಣ-ತಮ್ಮ , ಅಕ್ಕ -ತಂಗಿ... ಹೀಗೆ ಯಾರಲ್ಲಿಬೇಕಾದರೂ ಪ್ರಿತಿ ಇರಬಹುದಲ್ವಾ......

ಆದರೂ ನನಗನ್ನಿಸುತ್ತದೆ " ಒಂದೇ ದಿನದ ಪ್ರೀತಿ " ಶಾಶ್ವತವಾ...ಅದು ಸಾಧ್ಯಾನಾ......?

13 ಫೆಬ್ರವರಿ 2008

ಚಿಲ್ಲರೆ ಇಲ್ಲಾರಿ.....



ಚಿಲ್ಲರೆ ಸಮಸ್ಯೆ...!!!

ಚಿಲ್ಲರೆ ಇಲ್ಲಾಂದ್ರೆ ಆತ ತೋರಿಸುವುದು "ಚಿಲ್ಲರೆ" ಬುದ್ದಿಯನ್ನೇ.ಹಾಗಾಗಿ ನಾವೂ "ಚಿಲ್ಲರೆ"ಗಳಾಗುವ ಮೊದಲು ನಮ್ಮಲ್ಲಿ ಚಿಲ್ಲರೆ ರೆಡಿಯಾಗಿರುವುದು ಒಳ್ಳೆಯದಲ್ವಾ..!

ಮೊನ್ನೆ ಹಾಗೇ ಆಯಿತು.ಪತ್ರಿಕೆಯೊಂದನ್ನು ಪಡೆಯಲು 5 ರೂ ನೀಡಿದೆ.ಪತ್ರಿಕೆಗೆ 2.50 ರೂ ಅಲ್ವಾ.. ಅಂಗಡಿಯಾತ ನನಗೆ 2 ರೂ ನೀಡಿ 50 ಪೈಸೆಯ ಒಂದು ಚಾಕೋಲೇಟ್ ನೀಡಿದ.ಇದೇನು ಅಂತ ನಾನು ಕೇಳಿದೆ.ಆತ ಹೇಳಿದ "ಸಾರ್ ಚಿಲ್ಲರೆ ಇಲ್ಲ.." . ಹಾ.. ಸರಿ ಎಂದು ಸ್ವಲ್ಪ ಈ ಕಡೆ ಬಂದು ಪತ್ರಿಕೆ ನೋಡುತ್ತಾ ಚಿಂತಿಸಿದೆ.ಚಿಲ್ಲರೆಗೆ ಚಾಕೋಲೇಟ್... ಇದನ್ನು ಯಾರಿಗಪ್ಪಾ ನೀಡೋದು..? ಹೀಗೆ ವಿವಿಧ ಆಯಾಮಗಳಲ್ಲಿ ನೋಡಿದೆ. ನನಗೆ ಅಧಿಕಪ್ರಸಂಗ.ಸುಮ್ಮನೆ ತಲೆ ಹಾಳು ವಿಷಯಕ್ಕೆ ಯೋಚನೆಯೇಕೆ..? ಪತ್ರಿಕೆಯನ್ನು ಗಂಭೀರವಾಗಿ ಓದಿದೆ... ಹಾಗೇ "ಬಾಯಿ ಸಿಹಿ" ಮಾಡುತ್ತಾ....

ಮರುದಿನ ಅದೇ ಅಂಗಡಿಗೆ ಹೋಗಿ ಪತ್ರಿಕೆ ಪಡೆಯುವಾಗ 2 ರೂ ನೀಡಿ ಒಂದು ಚಾಕೋಲೇಟ್ ನೀಡಿದೆ. ಆತ ಇದೇನು ಇನ್ನು 50 ಪೈಸೆ......? ಎಂದು ರಾಗ ಎಳೆದ.ನಾನು "ಚಿಲ್ಲರೆ ಇಲ್ಲ.." ಎಂದೆ.ಆದ್ರೆ ಆತ ಒಪ್ಪ ಬೇಕೇ..? ಆದು ಆಗಲ್ಲ ಅಂತಾನೆ.ಹಾಗಿದ್ರೆ ನೀವು ನಿನ್ನೆ ಹೀಗೇ ಕೊಟ್ರಲ್ಲ ಎಂದರೆ.ಅದೂ.... ಇದೂ... ಅನ್ನುತ್ತಾ... ಚಿಲ್ಲರೆ ಇಲ್ಲಾಂದ್ರೆ ಪತ್ರಿಕೆ ಇಲ್ಲಾ ಅನ್ನುತ್ತಾನೆ...! ಏನಿದು ಅವಸ್ಥೆ..!?

ಕಾಲವೇ ಹಾಗೆ.ನನಗೊಂದು ನ್ಯಾಯ....... ನಿನಗೊಂದು ನ್ಯಾಯ...... ಅಲ್ವಾ..?

ಈ ಅಂಗಡಿಯವರು ಚಿಲ್ರೆ ಇದ್ರೂ ಒಂದು ಚಾಕೋಲೇಟ್ ಕೊಡುತ್ತಾರೆ.ಆಗ ಒಂದು ಪತ್ರಿಕೆಯ ಜೊತೆ ಒಂದು ಚಾಕೋಲೇಟ್ ಉಚಿತ ಎಂದರೂ ಪೈಸೆ 50..! ಆದರೆ ಅಂಗಡಿಯವನಿಗೆ 3 ರೂ ವ್ಯಾಪಾರ.ಒಟ್ಟು ಲಾಭ ಏನಿಲ್ಲವೆಂದರೂ 1 ರೂ..! ಹೇಗಿದೆ ವ್ಯವಹಾರ!.ಭಾನುವಾರ ಮತ್ತು ಶುಕ್ರವಾರ ಅಂಗಡಿಯಾತನಿಗೆ ನಷ್ಟವಂತೆ.ಅಂದು ಪತ್ರಿಕೆಗೆ 3 ರೂ ಅಲ್ವಾ..! ಈ ಚಿಲ್ಲರೆ ಬುದ್ದಿಯನ್ನು ಹೇಳಿದ್ದು ಇನ್ನೊಬ್ಬ ಅಂಗಡಿಯಾತ...! ಜನ ಹೆಚ್ಚಾಗಿ ಸುಮ್ಮನಿರುತ್ತಾರಂತೆ.ಯಾಕೆ ಗೊತ್ತಾ ಈ 50 ಪೈಸೆ ಏಕೆ ಚರ್ಚೆ?ಹೇಗಿದ್ರೂ ಒಂದು ಚಾಕೋಲೇಟ್ ನೀಡಿದ್ದಾನೆ ಇನ್ನೂ ಎರಡು ಪಡಕೊಂಡ್ರೆ ಮನೆ ಮಕ್ಕಳಿಗೆ ಆಗುತ್ತೇ ಅಂತ ಇನ್ನೆರಡು ಕೊಡಿ ಅಂತಾರೆ.ಹಾಗಾಗಿ ವ್ಯಾಪಾರ 5 ರೂ...!?. ಇದು ತಪ್ಪಲ್ಲ.ಅಂಗಡಿ ಹಾಕಿದ್ದು ವ್ಯಾಪರಕ್ಕಲ್ವಾ.ಅದರಲ್ಲಿನ Technic ಗೊತ್ತಿರಬೇಕಷ್ಟೆ...! ಹೀಗೆ....

ಚಿಲ್ಲರೆ ಅಂದಾಗ ಇನ್ನು ನೆನಪಾಗುವುದು ಬಸ್ ಕಂಡಕ್ಟರ್.ಸಾರ್ ಚಿಲ್ರೆ ಇಲ್ಲ ಇಳಿಯುವಾಗ ತಗೊಳ್ಳಿ ಅಂತ ಟಿಕೆಟ್ ಹಿಂದೆ ಬರೆಯುತ್ತಾನೆ.ನಮಗೂ ನೆನಪಿಲ್ಲ.ಆತನಿಗೆ ನೆನಪಿದ್ರೂ ನಮ್ಮನ್ನು ನೋಡುವಾಗ ಮರೆತಿರುತ್ತದೆ..!.ಬಸ್ಸಿಳಿದು ಮನೆಗೆ ಬಂದಾಗ ನೆನಪಾಗುತ್ತದೆ ಚಿಲ್ಲರೆ.ಇಂತಹ ಹತ್ತಾರು ಸಂಗತಿಗಳು,ಜಗಳಗಳೂ ನಡೆದದ್ದಿದೆ.ಅದೆಲ್ಲವೂ "ಚಿಲ್ಲರೆ"ಗಾಗಿ.ಹಾಗಾಗಿಯೇ ಸ್ವಲ್ಪ ಚಿಲ್ಲರೆ ನಿಮ್ಮಲ್ಲಿ ಸದಾ ಇರಲಿ.ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಚಿಲ್ಲರೆಯಾಗಿ ಯೋಚಿಸಿದ್ದು....! ಹೀಗೆ....!

12 ಫೆಬ್ರವರಿ 2008

ಮಾಯದ ಮಳೆಯೇ ಏನು ನಿನ್ನ ಲೀಲೆ....



ಎರಡು ದಿನಗಳ ಹಿಂದೆ ಊರಿನ ವಾತಾವರಣ ಸರಿ ಇರಲಿಲ್ಲ.

ಮಂಗಳವಾರ ಮಧ್ಯಾಹ್ನ ತುಂತುರು ಹನಿ ಬೀಳಲಾರಂಭಿಸಿತು.ಒಂದೆರಡು ಗಂಟೆಗಳ ಕಾಲ ಊರಿಡೀ ಹನಿ ಹನಿ ಮಳೆ ಇಳೆಗೆ ಸೇರಿತು.ಸ್ವಲ್ಪ ಹೊತ್ತಿನಲ್ಲೇ ಭುವಿಯಿಂದ ಭಾನಿನವರೆಗೆ ಮಣ್ಣಿನ ವಾಸನೆ ಹಬ್ಬಿತು.ಅಷ್ಟು ಹೊತ್ತು ಮಳೆ.....ಮಾಯದ ಮಳೆ......ತುಂತುರು ಮಳೆ......

ಸುಳ್ಯ ತಾಲೂಕಿನಾದ್ಯಂತ ಮಾತ್ರವಲ್ಲ ದ.ಕ.ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನ ಮಳೆ ಜಿನುಗಿತು.ನಗರದ ದ್ವಿಚಕ್ರ ಸವಾರರು "ನೆನೆ"ದು ಸಾಗಿದರೆ ,ಸಭೆ ಸಮಾರಂಭಗಳು ತುರಾತುರಿಯಲ್ಲಿ ನಡೆಯಿತು.ಹಳ್ಳಿಯ ಕೃಷಿಕರು ಮಾತ್ರಾ ಕಂಗಾಲು.ಹೊಲದ ಬೆಳೆ ಬಿದ್ದು ಹೋಗುವ ಆತಂಕ.ಅಡಿಕೆ ತೋಟದ ಕೃಷಿಕರಿಗೆ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡಿ ಮುಚ್ಚುವ ತುರಾತುರಿ.ಆದರೂ ಕೊನೆಗೆ ಒಂದು ಸ್ವಲ್ಪ ಒದ್ದೆಯೇ.ಇನ್ನೊಂದೆಡೆ ತೋಟದ ಹಿಂಗಾರಕ್ಕೆ ಬೀಳುವ ಹೊಡೆತದ ಚಿಂತೆ.ಹೀಗೆ ಅನಿರೀಕ್ಷಿತ ಮಳೆ ಎಲ್ಲರಿಗೂ ಒಮ್ಮೆ ಶಾಕ್ ನೀಡಿದರೆ ರಬ್ಬರ್ ಬೆಳೆಗಾರನಿಗೆ ಮಾತ್ರಾ ಒಮ್ಮೆ ಸ್ವಲ್ಪ ನೆಮ್ಮದಿಯಾಯಿತು.... ಹಾ... ಮಳೆ ...... ಎಂದು ಉದ್ಗರಿಸಿದ.

ಹಳ್ಳಿಯ ಅಜ್ಜಿ ಹೇಳುತ್ತಿದ್ದರಂತೆ "ಪುಯಿಂತೆಲ್ಟ್ ಬರ್ಸ ಬತ್ಂಟ ಪುಚ್ಚೆಗ್ಲಾ ಗಂಜಿ ಇಜ್ಜಾಂತೆ ಆವು". (ಮಕರ ಮಾಸದಲ್ಲಿ ಮಳೆ ಬಂದರೆ ಬೆಕ್ಕಿಗೂ ಅನ್ನ ಇಲ್ಲದಂತಾಗುವುದು).ಇದು ಅಪಾಯಕಾರಿ ಮಳೆ ಎನ್ನುವುದಕ್ಕೆ ಈ ಗಾದೆ.

ಅಬ್ಬಾ ಪ್ರಕೃತಿಯ ಲೀಲೆ ಏನು..?

ಗುರುವಿನ ಗುಲಾಮರು.... ಪ್ರತಿಭಟನೆಯ ಸುಲ್ತಾನರು..........





"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವ ಕಾಲ ಈಗ ಮುಗಿದುಹೋಗಿದೆ.

ಈಗೇನಿದ್ದರೂ ಗುರುವಿಗೇ ತಿರುಮಂತ್ರ..!.ಈಗ ಅದೂ ಅಲ್ಲ ಗುರುವಿನ ವಿರುದ್ದವೇ ಪ್ರತಿಭಟನೆ...!ಅದೂ ಏಕವಚನದಲ್ಲಿ..!ಹೌದು ಇದು ನಡೆದಿದೆ.

ಹಾಗೆಂದು ಪೂರ್ಣ ವಿದ್ಯಾರ್ಥಿಗಳದ್ದೇ ತಪ್ಪು ಅಂತ ಅಲ್ಲ ಅವರನ್ನು ಅಲ್ಲಿ ಬೆಳೆಸಿದ್ದೇ ಹಾಗೇ..!ಅದರ ಒಂದು ರೂಪ ಈಗ ವ್ಯಕ್ತವಾಗಿದೆ ಅಷ್ಟೇ..!.

ನನಗೀಗಲೂ ನೆನಪಿದೆ.ಆಗ ನಾನು 7 ನೇ ತರಗತಿಯಲ್ಲಿದ್ದೆ.ನನ್ನ ಮಿತ್ರ ಕೃಷ್ಣಪ್ರಸಾದ ಸಹಿತ 5 ಮಂದಿ ಒಂದೇ ಬೆಂಚಲ್ಲಿದ್ದೆವು.ಒಮ್ಮೆ ಅಧ್ಯಾಪಕರೊಬ್ಬರು ನಾವು ಗಲಾಟೆ ಮಾಡಿದೆವೆಂಬ ಕಾರಣಕ್ಕೆ ಹೊಡೆದಿದ್ದರು.ಅದರಿಂದ ನನ್ನ ಮಿತ್ರರಿಗೆ ಹಾಗೂ ನನಗೂ ತೀವ್ರ ಗಾಯವೂ ಆಗಿತ್ತು.ಆಗ ನಾವಾರು ಅದನ್ನು ಮನೆಯಲ್ಲೂ ಹೇಳಿರಲಿಲ್ಲ.ಪ್ರತಿಭಟನೆಯ ಬಗ್ಗೆಯೂ ಚಿಂತಿಸಿರಲಿಲ್ಲ.ಅಂದರೆ ನಾವು ಪುಕ್ಕಲರು ಅಂತಲ್ಲ. ಅದು ಹೊಡೆದದ್ದು ಮೇಸ್ಟ್ರು ಅಂತ ಸುಮ್ಮನಿರುತ್ತಿದ್ದೆವು.ಆದರೆ ಈಗ ನೊಡಿ 5 ತರಗತಿಯವನು ಅಧ್ಯಾಪಕರನ್ನೇ ಗದರಿಸುತ್ತಾನೆ..!.ಅದಲ್ಲ ನಮಗೆ ಹೊಡೆದಿದ್ದ ಮೇಸ್ಟ್ರು ಈಗಲೂ ಸಿಕ್ಕಾಗ ಮಾತನಾಡುತ್ತಾ ಹೇಳುತ್ತಾರೆ "ನೀವಿದ್ದಷ್ಟು ಉತ್ತಮ ಬ್ಯಾಚ್ ಗಳು ಈಗಿಲ್ಲ" ಅವರೇ ನೆನಪಿಸಿ ನಾವು ಹೊಡೆದದ್ದು ನಿಮ್ಮ ಒಳ್ಳೆಯದಕ್ಕೇ ಅನ್ನುತ್ತಾರೆ. ನಾವು ಅದನ್ನು ಮರೆತಿದ್ದೀವಲ್ಲ ಸಾರ್ ಎಂದಾಗ ಅವರು ಹೌದಾ.... ಅಂತಾರೆ.ಮಂಗಳವಾರ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ನೋಡಿದ ನನಗೆ ನನ್ನ ಬಾಲ್ಯವೊಮ್ಮೆ ನೆನಪಾಗಿ ಬಿಟ್ಟಿತು.ವಿಷಯ ಅದಲ್ಲ......

ಇದು ನಡೆದದ್ದು ಸುಳ್ಯ ತಾಲೂಕಿನ ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ.ಅದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು.ರಾಜರಸ್ತೆ ಬದಿಯ ಕಾಲೇಜಿನ ಮಹಾದ್ವಾರದ ಬಳಿ ಕುಳಿತು "ಇದು ಅಧ್ಯಾಪಕರ" ವಿರುದ್ದದ ಪ್ರತಿಭಟನೆ ಎಂಬ ಬೋರ್ಡೊಂದನ್ನು ಹಾಕಿ ಸುಮಾರು 18 ವಿದ್ಯಾರ್ಥಿಗಳು ಧಿಕ್ಕಾರ ಕೂಗುತ್ತಿದ್ದರು.ಅವರಲ್ಲಿ ಒಬ್ಬ ನಾಯಕನಲ್ಲಿ ಕೇಳಲಾಯಿತು.. ಏನು ವಿಷಯ..?. ಆತ ಒಂದು ಜೆರಾಕ್ಸ್ ಪ್ರತಿಯನ್ನು ನೀಡಿದ.ಅದರಲ್ಲಿ ಸುಮಾರು 8 ಅಂಶಗಳಿದ್ದವು.ಆತ ಹೇಳಿದ,ನಮಗೆ ಈ ಶೈಕ್ಷಣಿಕ ವರ್ಷದಲ್ಲಿ ಅಧ್ಯಾಪಕರಿಂದ ಅನ್ಯಾಯವಾಗಿದೆ..... . ಆದರೆ ಆ 8 ಅಂಶಗಳಲ್ಲಿ ಪಾಠ-ಪ್ರವಚನಗಳ ಬಗ್ಗೆ ನೋಡಿದರೆ ಕಾಣಿಸಿದ್ದು ಕೇವಲ ಒಂದು ಮಾತ್ರಾ..!?. ಹಾಗಾದರೆ ಏನು ವಿಷಯ..?. ನಿಮಗೆ ಕುತೂಹಲವಿದ್ದರೆ ಇದನ್ನು ಓದಿ ನಂತರ ಅದರ ಕೆಳಗೆ ಓದಿ....

* ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಖಾಯಂ ಪ್ರಾಂಶುಪಾಲರಾಗಿದ್ದರೂ ವಾರದಲ್ಲಿ 2 ದಿವಸ ಮಾತ್ರಾ ಇಲ್ಲಿ ಕೆಲಸ ಮಾಡುತ್ತಾರೆ.

*ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾದ ಕೂಸಪ್ಪ ಇವರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಬೇಕಿದ್ದು ಕೇವಲ 2 ದಿವಸ ಕೆಲಸ ಮಾಡುತ್ತಾರೆ.

* ಈ ಶೈಕ್ಷಣಿಕ ವರ್ಷ ಫೆಬ್ರವರಿ 25 ಕ್ಕೆ ಮುಗಿಯಲಿದ್ದು ಯಾವುದೇ ಪಾಠ-ಪಠ್ಯೇತರ ಚಟುವಟಿಕೆಗಳನ್ನು ಸರಿಯಾಗಿ ಮುಗಿಸದೆ 15 ದಿವಸ ಮುಂಚಿತವಾಗಿ ತರಗತಿ ಕೊನೆಗೊಳಿಸಿದ್ದಾರೆ.

*ಈ ವರುಷ ಶಾಲಾ ಕ್ಯಾಲೆಂಡರ್ ಗೆ ಎಂದು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಕ್ಯಾಲೆಂಡರ್ ಕೂಡಾ ಕೊಡದೇ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.

*ಪ್ರೌಡಶಾಲಾ ವಿಭಾಗದ ಶಿಕ್ಷಕರಾದ ನೀಲಪ್ಪ ಇವರು ಸ್ವಾತಂತ್ರ್ಯ ದಿನಾಚರಣೆಗೆ ವಿದ್ಯಾರ್ಥಿಗಳಿಂದ ತಲಾ 30 (500 ವಿದ್ಯಾರ್ಥಿ) ಸಂಗ್ರಹಿಸಿ ಕೇವಲ ಒಂದು ಲಾಡು ಕೊಟ್ಟು ಹಣ ನುಂಗಿ ಹಾಕಿರುತ್ತಾರೆ.

* ಪ್ರೌಡಶಾಲಾ ಶಿಕ್ಷಕ ನೀಲಪ್ಪ ಕಾಲೇಜಿನ ವಿಚಾರದಲ್ಲಿ ಮೂಗು ತೂರಿಸಿಕೊಂಡು ವಿದ್ಯಾರ್ಥಿಗಳಿಗೆ ಸದಾ ಬೈಯುವ ಕಾಯಕ ವಿದ್ಯಾರ್ಥಿನಿಯರ ಜೊತೆ ಮೈಮುಟ್ಟಿ ಮಾತನಾಡುವ ಕಾಮುಕ.

*ನಮ್ಮ ಕಾಲೇಜಿಗೆ ಕನ್ನಡ ಪಠ್ಯ ವಿಷಯಕ್ಕೆ ಸ್ವ ಇಚ್ಚೆಯಿಂದ ಬಂದ ಗೌರವ ಶಿಕ್ಷಕಿಯನ್ನು ನೀಲಪ್ಪ ಮಾಸ್ಟರ್ ಬೆದರಿಸಿ ಹಿಂದಕ್ಕೆ ಕಳುಹಿಸಿದ್ದಾರೆ.

* ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಭಾರತಿಯವರು ಕ್ಲಾಸಿನಲ್ಲಿ ಪ್ರವಚನಕ್ಕಿಂತ ಬೈಗುಳ ಸುರಿಮಳೆ ಸುರಿಸುತ್ತಾರೆ.

ಇದು ವಿದ್ಯಾರ್ಥಿಗಳ ಅನ್ಯಾದ ಪಟ್ಟಿ...!?.

ಈಗ ಈ ವಿವಾದ ಬರಲು ಕಾರಣವೇನು ಗೊತ್ತಾ ... ಅದನ್ನು ವಿದ್ಯಾರ್ಥಿಗಳು ವಿವರಿಸುವುದು ಹೀಗೆ...

ಈ ಶೈಕ್ಷಣಿಕ ವರ್ಷದಲ್ಲಿ ಇಷ್ಟೆಲ್ಲಾ ಅನ್ಯಾಯಗಳನ್ನು ಸಹಿಸಿಕೊಂಡ ನಾವು ಶೈಕ್ಷಣಿಕ ವರ್ಷದ ಬೇಡಿಕೆಯಾದ ಶಾಲಾ ವಾರ್ಷಿಕೋತ್ಸವ ,ಕ್ರೀಡೋತ್ಸವ ಮಾಡದೇ ನಮ್ಮ ಕೊನೆಯ ಬೇಡಿಕೆಯಾದ ಬೀಳ್ಕೊಡುಗೆ ಸಮಾರಂಭ ಮತ್ತು ಫೋಟೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಬೇಡಿಕೊಂಡೆವು ಅದನ್ನು ಮಾಡದೇ ನಮ್ಮನ್ನು ಕೆಟ್ಟ ರೀತಿಯಲ್ಲಿ ಬೈದು ಮನೆಗೆ ಅಟ್ಟಿದರು.ಹಾಗಾಗಿ ಈಗ ಪ್ರಾಂಶುಪಾಲರು ,ಉಪನ್ಯಾಸಕ ಕೂಸಪ್ಪ ,ಹಾಗೂ ಅಧ್ಯಾಪಕ ನೀಲಪ್ಪ ಇವರ ಧೋರಣೆ ವಿರುದ್ದ ನಮ್ಮ ಪ್ರತಿಭಟನೆ ಎನ್ನುವ ವಿದ್ಯಾರ್ಥಿಗಳು ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತ ಹೋರಾಟವನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ.

ಇದಿಷ್ಟು ವಿದ್ಯಾರ್ಥಿಗಳ ಆರೋಪ.... ಅವರಿಗಾದ ಅನ್ಯಾಯ...!?.

ಈ ಬಗ್ಗೆ ಕಾಲೇಜನ್ನು ಕೇಳಿದರೆ ಯಥಾಪ್ರಕಾರ ವಿದ್ಯಾರ್ಥಿಗಳ ಮೇಲೇಯೇ ಆರೋಪ.ಅದು ಸರಿ ಬಿಡಿ ಎಲ್ಲೆಡೆಯೂ ಹಾಗೆ.ನಮ್ಮ ತಪ್ಪನ್ನು ನಾವು ಹೇಳುತ್ತೇವಾ...? ಹೇಳಿದ್ದುಂಟಾ...?

ಇಲ್ಲಿನ ಸಂಗತಿಗಳನ್ನು ಗಮನಿಸಿದರೆ,ವಿದ್ಯಾರ್ಥಿಗಳಿಗೆ ಅನ್ಯಾಯವಾದ ಸಂಗತಿಗಳಲ್ಲಿ ಗಂಭೀರವಾದದ್ದು ಕಾಣಿಸುವುದಿಲ್ಲ.ಆದರೂ ಏಕೆ ಪ್ರತಿಭಟನೆ.ಅದು ಏಕೆ ಗೊತ್ತಾ?. ಅಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳನ್ನು ಹಾಗೆ ಬೆಳೆಸಿದ್ದಾರೆ.ಗುರುವಿನ ಮಾರ್ಗದರ್ಶನ ಹೇಗಿರುತ್ತೋ ಹಾಗೇ ಅಲ್ವೇ ವಿದ್ಯಾರ್ಥಿಗಳು ಬೆಳೆಯೋದು.ನನಗೆ ಆತ್ಮೀಯರಾದ ಒಂದಿಬ್ಬರು ಉಪನ್ಯಾಸಕರಿದ್ದಾರೆ.ಅವರು ಗುತ್ತಿಗಾರಿನಲ್ಲಿ ಅಲ್ಲ.ಅದು ಪುಣ್ಯ. ಆ ಉಪನ್ಯಾಸಕರಿಗೆ ಇಂದಿಗೂ ವಿದ್ಯಾರ್ಥಿಗಳು ಎಂತಹ ಗೌರವ ನೀಡುತ್ತಾರೆ. ಒಬ್ಬ ವಿದ್ಯಾರ್ಥಿ ಅವರ ಬಗ್ಗೆ ಹೇಳುತ್ತಾನೆ, ಅವರು ನಿಜವಾದ "ಗುರುಗಳು"..! . ಅಂದರೆ ಅವರು ಪಾಠದ ಜೊತೆಗೆ ಇತರ ವಿಷಯಗಳ ,ತಮ್ಮ ಅನುಭವಗಳನ್ನು ಹೇಳುತ್ತಾರೆ.ಅದು ಸರಿಯಾಗೂ ಇರುತ್ತದೆ.ವಿದ್ಯಾರ್ಥಿಗಳಿಗೆ ಅದು ದಾರಿ ದೀಪವಾಗುತ್ತದೆ.

ಆದರೆ ಇಲ್ಲಿ ಹಾಗಲ್ಲ.ಅದಕ್ಕಾಗೆ ಗುತ್ತಿಗಾರಿನಲ್ಲಿ ಅಧ್ಯಾಪಕರ ವಿರುದ್ದವೇ ಪ್ರತಿಭಟನೆ.

ನಿಜವಾಗಲೂ ವಿದ್ಯಾರ್ಥಿಗಳು ಗಮನಿಸಬೇಕು.2 ವರ್ಷ ಪಾಠ ಹೇಳಿದ(ಅವರು ಮಾರ್ಗದರ್ಶನ ಮಾಡಿರದೇ ಇರಲಿ) ಗುರುಗಳನ್ನು ಹಾಗೆ ಬೀದಿ ಬದಿಯಲ್ಲಿ ಧಿಕ್ಕಾರ ಕೂಗುವುದು,ಏಕವಚನದಲ್ಲಿ ಕೂಗುವುದು ನಮ್ಮ ಸಂಸ್ಕೃತಿಯಲ್ಲ.ಅಧ್ಯಾಪಕರು ಸಂಸ್ಕೃತಿಯ ಪಾಠ ಮಾಡದೇ ಇರಲಿ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು.

ನಿಜವಾಗಲೂ ಒಂದು 10 ವರ್ಷದ ಹಿಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಎಂತಹ ಅಜಗಜಾಂತರ...!? ಅಂದು ಗುರುವಿಗೆ ಕಲಿಸಬೇಕೆನ್ನುವ ಮನಸ್ಸಿತ್ತು. ಇಂದು ಹಣ ಮಾಡಬೇಕೆನ್ನುವ ಮನಸ್ಸಿದೆ....! ಹಾಗಾಗಿ ಈಗ ಆತಂಕವಾಗುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ ಎತ್ತೆ ಸಾಗುತ್ತಿದೆ, ಏನಾಗುತ್ತಿದೆ.ಇದಕ್ಕೆ ಕಾರಣರಾರು..?.ಇದಕ್ಕೇನು ಪರಿಹಾರ..?.ವಿದ್ಯಾರ್ಥಿಗಳ ಇಂದಿನ ಮನಸ್ಥಿತಿಯೇ....? ಸಮಾಜವಾ....?.ಉತ್ತರ ಮಾತ್ರಾ ಸಿಗುತ್ತಿಲ್ಲ...!.

ಕೊನೆಯ ಮಾತು : ಒಂದು ಸಂಸ್ಥೆಯ ಒಳಗಿನ ಗುಟ್ಟು ಗೊತ್ತಾಗುವುದು ಹೇಗೆ?.ಅಲ್ಲಿನ ಸಿಬ್ಬಂದಿಗಳೊಳಗೆ ಅಸಮಾಧಾನವಿದ್ದಾಗ ಮಾತ್ರಾ ತಾನೆ?.ಅದು ಶಿಕ್ಷಣ ಸಂಸ್ಥೆಗಳಲ್ಲೂ ಕಂಡುಬಂದರೆ ... ವ್ಯಕ್ತವಾಗುವುದು ವಿದ್ಯಾರ್ಥಿಗಳ ಮೂಲಕ ತಾನೆ..?. ಅದನ್ನೇ ವಿದ್ಯಾರ್ಥಿಗಳೂ ಮಾಡುವುದಲ್ಲವೇ. ಗುತ್ತಿಗಾರಿನ ಪ್ರತಿಭಟನೆಯಲ್ಲಿ ಸ್ವಲ್ಪ ಆ ಅಂಶವೂ ಕಂಡುಬಂತು.ಆದರೆ ಕ್ಲಾಸಿನಲ್ಲಿದ್ದ 58 ವಿದ್ಯಾರ್ಥಿಗಳ ಪೈಕಿ ಪ್ರತಿಭಟನೆಯಲ್ಲಿದ್ದದ್ದು ಕೇವಲ 18 ಮಂದಿ ಮಾತ್ರಾ..? ಹುಡುಗಿಯರಾರೂ ಇರಲಿಲ್ಲ..! ಈ 18 ಮಂದಿಗೆ ಮಾತ್ರಾ ಅನ್ಯಾಯವಾದದ್ದಾ.... ಅಂತ ಒಂದು ಅನುಮಾನ..

11 ಫೆಬ್ರವರಿ 2008

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ....



ಈಶ್ವರಪ್ಪ ಕುಟುಂಬ..



ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರದಂದು ಕುಟುಂಬ ಸಮೇತರಾಗಿ ಭೇಟಿ ನೀಡಿದರು.ಇದೇ ವೇಳೆ ಅವರು ದೇವಳದಲ್ಲಿ ಆಶ್ಲೇಷ ಬಲಿ ಸೇವೆ ಹಾಗೂ ತಮ್ಮ ಮೊಮ್ಮಗನಿಗೆ ನಾಣ್ಯದ ತುಲಾಭಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ನಾನು ಈಶ್ವರಪ್ಪನವರಲ್ಲಿ ಮಾತನಾಡಿದೆ.ವಿವಾದಗಳು ,ಭಿನ್ನಮತಗಳ ಬಗ್ಗೆ ಮಾತನಾಡಲಿಲ್ಲ ಅಷ್ಟು ಸಮಯ ಇದ್ದಿರಲಿಲ್ಲ ನನಗೂ ತುರ್ತು.. ಅವರಿಗೂ ಹಾಗೆ..,ಅವರಲ್ಲಿ ಕೇಳಿದ್ದು ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ.ಅವರ ತುರ್ತಿನ ನಡುವೆ ಕೇವಲ ಒಂದೆರಡು ನಿಮಿಷಗಳ ಕಾಲ ಮಾತ್ರಾ ಮಾತಿಗೆ ಸಿಕ್ಕರು.ಅದರ ಸಾರಾಂಶ ಇಷ್ಟು...

* ಚುನಾವಣೆಗೆ ಮುನ್ನ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಆಗ್ರಹ

* ಮರುವಿಂಗಡಣೆಯಾದರೆ ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೂ ಪ್ರಾತಿನಿಧ್ಯ ದೊರೆಯುತ್ತದೆ

*ಕೇಂದ್ರ ಸಚಿವ ಸಂಪುಟದಲ್ಲಿ ಈ ವಿಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳದೆ ವಿಳಂಬ ಏಕೆ?

* ಕ್ಷೇತ್ರ ಮರುವಿಂಗಡಣೆ ವಿಳಂಬಕ್ಕೆ ಕಾಂಗ್ರೇಸ್ ಕಾರಣ

*ಚುನಾವಣೆ ಮುಂದೂಡಿಕೆಗೆ ಕಾಂಗ್ರೇಸ್ ಈ ತಂತ್ರ ಅನುಸರಿಸುತ್ತಿದೆ

* ಚುನಾವಣೆ ವಿಳಂಬದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತ

* ಹಾಗಾಗಿ ಕೇಂದ್ರವು ತಕ್ಷಣವೇ ಕ್ಷೇತ್ರ ಮರುವಿಂಗಡಣೆಗೆ ಕ್ರಮ, ಸಚಿವ ಸಂಪುಟದಲ್ಲಿ ತೀರ್ಮಾನ ಮತ್ತು ನಿರ್ಣಯ ತೆಗೆದುಕೊಳ್ಳಲು ಒತ್ತಾಯ

* ಒಟ್ಟಿನಲ್ಲಿ ಚುನಾವಣೆ ವಿಳಂಬ ಸಲ್ಲದು

ಕೊನೆಯ ಮಾತು : ಸುಬ್ರಹ್ಮಣ್ಯದಲ್ಲಿ ಕೆ.ಎಸ್.ಈಶ್ವರಪ್ಪನವರು ದೇವಳದ ಒಳಾಂಗಣಕ್ಕೆ ಹೋಗಿ ಸಂಕಲ್ಪ ಮಾಡಿಸಿ
ಸಂಪುಟ ನರಸಿಂಹ ಸ್ವಾಮಿ ಮಠಕ್ಕೂ ಭೇಟಿ ನೀಡಿದ ಬಳಿಕ ಹೊರಬಂದು ಅಲ್ಲಿ ಸುಮ್ಮನೆ ನಿಂತಿದ್ದರು.ಒಬ್ಬ ಯಾತ್ರಾರ್ಥಿ ಬಂದು "ಸರ್ ನೀವು ಫಿಲ್ಮ್
ಇಂಡಸ್ಟ್ರಿಯವರಾ"ಅಂತ ಪ್ರಶ್ನಿಸಿದ.ಆಗ ಈಶ್ವರಪ್ಪನವರು "ಅಲ್ಲ ನಾನು ಎಕ್ಸ್ ಮಿನಿಸ್ಟ್ರು ಕಣಯ್ಯಾ.."ಅಂದರು.ಜೊತೆಗೆ ಇದ್ದವರು "ಮಾಜಿ ಮಂತ್ರಿಗಳು.."ಅಂದರು.ಆ ಯಾತ್ರಾರ್ಥಿ ಏಕೆ ಹಾಗೆ ಪ್ರಶ್ನಿಸಿದನೋ ಗೊತ್ತಿಲ್ಲ.ನನಗಂತೂ ಆಗ ಅನ್ನಿಸಿತು ನಮ್ಮ ರಾಜಕೀಯ ಈಗ ನಿಜಕ್ಕೂ ಹಾಗೇ
ಅಲ್ವಾ..? ಮೊನ್ನೆ ಮೊನ್ನೆ ಹಾಗೇ ಅನ್ಸಿತ್ತು..!.ಅದೊಂದು ಫಿಲ್ಮ್ ಇಂಡಸ್ಟ್ರೀ ತರವೇ. ದುಡ್ಡು ಹಾಕಿದ್ದನ್ನು ತೆಗೆಯುದು ಅಷ್ಟೇ..! ಇನ್ನೊಂದು ಅಂಶ ಅಂದರೆ ನಮ್ಮ ರಾಜಕೀಯದ ಮಂದಿಯನ್ನು ಜನ ಅಧಿಕಾರದ ನಂತರ ಮರೆಯುತ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿ ಬೇಕಾ..?.

10 ಫೆಬ್ರವರಿ 2008

ತುಳುನಾಡಿನಲ್ಲೀಗ "ಕೆಡ್ಡಸ"ದ ನೆನಪುಗಳು...

ಕೆಡ್ಡಸದ ಮಹತ್ವವನ್ನು ಹೇಳುತ್ತಾ ಮನೆ ಮನೆಗೆ ಸಾಗುವ ಭೂತನರ್ತಕ





ತುಳುನಾಡಿನ ಆಚರಣೆಗಳೆಲ್ಲವೂ ವಿಶೇಷ.ಮಳೆಗಾಲದಲ್ಲಿ ಆಟಿಯ ಸೊಬಗು,ಅದರ ವೈಜ್ಞಾನಿಕ ಹಿನ್ನೆಲೆಯು ಅತ್ಯಂತ ಸಕಾಲಿಕವಾಗಿ ಕಂಡುಬಂದರೆ ಈಗ "ಕೆಡ್ಡಸ"ವೂ ಕೂಡಾ ಅಷ್ಟೇ ಮಹತ್ವವನ್ನು ಪಡೆಯುತ್ತದೆ.ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೆಡ್ಡಸ ಆಚರಣೆಯು ನಡೆಯುತ್ತಿದೆ.ಈಗ ಕೆಡ್ಡಸವು ಭಾನುವಾರದಿಂದ ಆರಂಭಗೊಂಡು ೩ ದಿನಗಳ ಕಾಲ ನಡೆಯುತ್ತದೆ.

ಪ್ರತೀ ಬಾರಿಯೂ ಜನವರಿ-ಫೆಬ್ರವರಿ ತಿಂಗಳಲ್ಲಿ ಬರುವ ಈ ಆಚರಣೆಯು ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಮಹತ್ವ ಪಡೆದಿದೆ.ಜಾನಪದ ಕಲೆಗಳ ತವರೂರು ಎನಿಸಿದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಇಂದಿಗೂ ಈ ಆಚರಣೆಗೆ ಅತ್ಯಂತ ಮಹತ್ವವಿದೆ.ಕೆಡ್ಡಸ ಆರಂಭವಾಗುವ ಕೆಲ ದಿನಗಳ ಮೊದಲು ಊರಿನ ಜಾನಪದ ಹಾಗೂ ಭೂತನರ್ತನದ ಪ್ರಮುಖರು ಮನೆ ಮನೆಗೆ ತೆರಳಿ ಕೆಡ್ಡಸದ ಪಾಡ್ಡನವನ್ನು ಹೇಳಿ ಮನೆ ಮಂದಿ ನೀಡುವ ಹುಳಿ-ಮೆಣಸು ಹಾಗೂ ಇನ್ನಿತರ ವಸ್ತುಗಳನ್ನು ಪಡೆಯುತ್ತಾರೆ.ಮನೆಗಳಲ್ಲಿ ಹೇಳುವ ಪಾಡ್ಡನದಲ್ಲಿ ಕೆಡ್ಡಸದಂದು ನಡೆಯುವ ಊರಿನ ಕಟ್ಟುಪಾಡುಗಳನ್ನು ವಿವರಿಸುತ್ತಾರೆ. ಅದರಲ್ಲಿ ಊರಿನ ಭೂತಸ್ಥಾನದ ಬಾಗಿಲು ತೆರೆಯುವುದರಿಂದ ಆರಂಭಿಸಿ ಊರಿನ ಮಂದಿ ಶಿಕಾರಿಗೆ ತೆರಳುವುದು ,೩ ದಿನಗಳ ಕಾಲ ಹಸಿ,ಒಣಗಿದ ಮರಗಳನ್ನು ಮುರಿಯಬಾರದು, ಭೂಮಿ ಅದುರಬಾರದು ಎಂದು ವಿವರಿಸುತ್ತಾರೆ.ಆ ಪ್ರಕಾರ ೩ ದಿನಗಳ ಕಾಲ ಊರಿನ ಮಂದಿ ನಡೆದುಕೊಳ್ಳಬೇಕು ಎನ್ನುವುದು ವಾಡಿಕೆ.

"ಕೆಡ್ಡಸ"ವನ್ನು ಗ್ರಾಮೀಣರು ವಿವರಿಸುವುದು ಹೀಗೆ. ಆ ೩ ದಿನಗಳ ಕಾಲ ಭೂದೇವಿಯು ಋತುಮತಿಯಾಗಿರುತ್ತಾಳೆ.ಅಷ್ಟು ದಿನಗಳ ಕಾಲ ಭೂಮಿಯಲ್ಲಿರುವ ನಾವು ಸದ್ದಿಲ್ಲದೆ ಕುಳಿತುಕೊಳ್ಳಬೇಕು, ಭೂಮಿ ತಾಯಿಗೆ ಅರಶಿನ, ಎಣ್ಣೆ ಹಾಕಬೇಕು... ಎಂದು ಹೇಳುತ್ತಾರೆ.

ಆದರೆ ಈ ಆಚರೆಣೆಯ ಹಿಂದೆ ಒಂದು ತಾತ್ತ್ವಿಕವಾದ ಕಾರಣವಿರಬಹುದು. ವೈಜ್ಞಾನಿಕವಾಗಿ ಯೋಚಿಸಿದರೆ ವರ್ಷವಿಡೀ ಭೂಮಿಯಿಂದ ಲಾಭ ಪಡೆಯುವ ನಾವು ಕನಿಷ್ಟ ೩ ದಿನಗಳ ಕಾಲ ಭೂಮಿಗೆ ಸಮರ್ಪಿಸಬೇಕೆನ್ನುವ ಚಿಂತನೆಯಿರಬಹುದು.ಇನ್ನು ಊರಿನ ಜನತೆ ಶಿಕಾರಿಗೆ ಹೋಗಬೇಕು ಎನ್ನುವ ಕಲ್ಪನೆಯ ಹಿಂದೆ ನೋಡಿದರೆ ಕೃಷಿಗೆ ಹಾನಿಮಾಡುವ ಕಾಡು ಪ್ರಾಣಿಗಳನ್ನು ವರ್ಷಕ್ಕೊಂದು ಬಾರಿ ಇಡೀ ಊರೇ ಒಟ್ಟಾಗಿ ಕಾಡು ಪ್ರಾಣಿಯ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶವಿದ್ದಿರಬಹುದು.ಏಕೆಂದರೆ ಈಗಿನಂತೆ ತಾಂತ್ರಿಕ ಬೇಲಿಗಳು ಅಂದು ಇದ್ದಿರಲಿಲ್ಲ.ಇಂದು ಕಾಡು ಪ್ರಾಣಿಗಳು ತೀರಾ ವಿರಳವಾದ್ದರಿಂದ ಶಿಕಾರಿಯ ಮಾತು ಬರುವುದಿಲ್ಲ.

ಇಂತಹ ಆಚರಣೆಗಳು ಸಾಂಘಿಕ ಕಾರ್ಯಕ್ರಮಗಳು ಇಡೀ ಊರಿನ ಸಾಮರಸ್ಯಕ್ಕೆ ಕಾರಣವಾಗುತ್ತಿದ್ದವು.ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬನೂ ತುರ್ತಿನಲ್ಲಿರುವ ಕಾರಣ ಕೆಡ್ಡಸದಂತಹ ಸಾಂಘಿಕ ಆಚರೆಣೆಗಳು ನೆಲೆ ಕಳೆದುಕೊಳ್ಳುತ್ತಿವೆ.ಆದರೆ ಅಂತಹ ಆಚರಣೆಗಳನ್ನು ಮಾತ್ರವಲ್ಲ ಜಾನಪದೀಯ ಕಲೆಗಳನ್ನು ಇಂದಿಗೂ ಮೊಗ್ರದಂತಹ ಊರಿನಲ್ಲಿ ಬೆಳೆಸಿಕೊಂಡುಬಂದಿರುವುದು ನಿಜಕ್ಕೂ ಶ್ಲಾಘನೀಯ.

09 ಫೆಬ್ರವರಿ 2008

ಸಿಟಿ ಅಂದ್ರೆನೇ ತಲೆ ನೋವು... ಟ್ರಾಫಿಕ್ ಅಂದ್ರೆ ಇನ್ನಷ್ಟು....



ಮಿತ್ರ ವಿನಾಯಕ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದ.

ಬೆಂಗಳೂರಿಗೆ ಉದ್ಯೋಗಕ್ಕಾಗಿ ತೆರಳಿದ 6 ತಿಂಗಳ ಬಳಿಕ ಮನೆಗೆ ಬಂದಿದ್ದ.ಹಿಂದಿನ ಸ್ನೇಹವನ್ನು ಆತ ಮರೆತಿರಲಿಲ್ಲ. ಹೇಗಿದ್ರೂ "ನಮ್ಮೂರ" ಹುಡುಗ ಅಲ್ವಾ ಬೆಂಗಳೂರಿಗೆ ಹೋದ ಮೇಳೆ ಆತನ ಹಾವ-ಭಾವ,ಮಾತಿನ ಶೈಲಿ ಬದಲಾಗಿರಲಿಲ್ಲ.ಹಾಗಾಗಿ ಕೊಂಚ ನೆಮ್ಮದಿಯಾಯಿತು.ಸುಮ್ಮನೆ ಕೇಳಿದೆ ಹೇಗಿದೆ ಕೆಲ್ಸ,ಹೇಗಿದೆ ಬೆಂಗ್ಳೂರು?.ಅಷ್ಟೇ ಪ್ರಾಮಾಣಿಕವಾಗಿ ವಿನಾಯಕ ಹೇಳಿದ " ಬೇಡ ಮಾರಾಯ.ಸಾಕಗಿ ಹೋಯ್ತು.ದಿನವಿಡೀ ಕೆಲ್ಸ್ ಕೆಲ್ಸ್..ಫ್ರೆಂಡ್ಸ್ ಗಳೊದಿಗೆ ಒಂದಿಷ್ಟು ಮಾತಾಡೋಕು ಸಮಯವಿಲ್ಲ.ರಾತ್ರಿ ಹಗಲೆನ್ನದೆ ಕೆಲಸ.ಒಂದು ರೀತಿಯಲ್ಲಿ ನಗರದ ಜನರಿಗೆ ಹಗಲು ರಾತ್ರಿಯ ವ್ಯತ್ಯಾಸವೇ ಗೊತ್ತಿಲ್ಲ.ಒಂದೊಂದು ಪ್ರದೇಶದಲ್ಲಿ ಮಧ್ಯರಾತ್ರಿಯೂ ಹಗಲು ವೇಳೆ ಇದ್ದಷ್ಟೇ ಜನ ಇರುತ್ತಾರೆ.ನನಗಂತೂ ನೆಮ್ಮದಿಯೇ ಇಲ್ಲವಾಗಿದೆ.ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿ ಶುದ್ದ ಗಾಳಿ,ಮನಸ್ಸುಗಳ ಕೊರತೆಯಿದೆ,ಮಾತ್ರವಲ್ಲ ಇಲ್ಲಿನಂತೆ ಬೆಳೆಯಲು ಸಾಧ್ಯವಿಲ್ಲ" ಅಂತ ಹೇಳುತ್ತ ನಾನು ಈಗ ಇಲ್ಲಿನ ಶುದ್ದ ಗಾಳಿಯನ್ನು ತುಂಬಾ ಸೇವಿಸಿಕೊಂಡು ಹೋಗುತ್ತೇನೆ ಎಂದು ವಿವರಿಸುತ್ತಲೇ ಹೋದ.ಆತನಿಗೆ ಕೇವಲ 6 ತಿಂಗಳಲ್ಲೇ ಹಾಗೆ ಅನ್ನಿಸಲು ಕಾರಣ ಬೇರೆಯೇನಿಲ್ಲ ಚಿಕ್ಕಂದಿನಿಂದಲೂ ಆತ ಬೆಳೆದದ್ದು ಹಳ್ಳಿಯಲ್ಲೇ..!.ಈಗ ಅದರಲ್ಲಿ ಅಚ್ಚರಿಯೇನಿಲ್ಲ ಹಳ್ಳಿಯ ಮಂದಿಗೆ ನಗರಕ್ಕೆ ಹೋದರೆ ಹಾಗೆ ಅನ್ನಿಸದೆ ಇರದು.ಇನ್ನು ಒಂದು ವರ್ಷದಲ್ಲಿ ಆತನೂ ನಗರದ ಬದುಕಿಗೆ "ಹೊಂದಿಕೊಡರೆ" ಆಗಲೂ ಅಚ್ಚರಿಯಿಲ್ಲ.ಈಗ ನನಗನ್ನಿಸುತ್ತದೆ ಇದ್ದುದರಲ್ಲಿ ನಾನು ಧನ್ಯ..!. ಏಕೆ ಗೊತ್ತಾ ನಾನಿನ್ನೂ ಇಲ್ಲೇ ಇದ್ದೇನಲ್ಲಾ..! ಶುದ್ದ ಗಾಳಿ,ಒಂದಿಷ್ಟು ಶುದ್ದ ಜನ,ಶುದ್ದ ಮನಸ್ಸು ಸಿಗುತ್ತಲ್ಲಾ.ಹಣದ ವಿಚಾರ ಬಿಡಿ..

ಇಂದು ನನ್ನಂತಹ ಅನೇಕ ಯುವಕರು ಹಳ್ಳಿಯ ಬೇರನ್ನು ಬಿಟ್ಟು ನಗರದ ಬಳ್ಳಿಯ ಕಡೆಗೆ ಹೋಗುವಾಗ ನಾನು ಇಲ್ಲೇ ಇದ್ದೇನಲ್ಲಾ ಅಂತ ಅನೇಕ ಬಾರಿ ಅನ್ನಿಸಿತ್ತು.ಆರಂಭದಲ್ಲಂತೂ ಹಳ್ಳಿ ಬೇಡ ನಗರವೇ ವಾಸಿ ಎಂದು ಕೆಲಸದ ಹುಡುಕಾಟ ಆರಂಭಿಸಿದ್ದೆ.ಮನಸ್ಸು ತೊಳಲಾಟದಲ್ಲಿತ್ತು.ಒಮ್ಮೆ ಅವಕಾಶವೂ ಸಿಕ್ಕಿತು.ಮತ್ತೆ ಮನಸ್ಸು ಬೇಡ ಎಂದಿತು ಹಳ್ಳಿಯಲ್ಲೇ ಉಳಿದೆ..!

ಈಗ ಹಳ್ಳಿಯ ಕಡೆಗೆ ನೋಡಿದರೆ ಅಲ್ಲಿ ಯುವಕರ ದಂಡೇ ಕಡಿಮೆಯಾಗುತ್ತಿದೆ.ಅಲ್ಲಿ ಮೊದಲಿನ ಆರ್ಭಟದ ಚಟುವಟಿಕೆ ಈಗ ಕಾಣುತ್ತಿಲ್ಲ.ಸಭೆ ಸಮಾರಂಭಗಳಲ್ಲಿ ತಲೆ ಕೂದಲು ಬೆಳ್ಳಗಾದವರೇ ಕಾಣಸಿಗುತ್ತಾರೆ.ಅಂತಹವರ ನಡುವೆ ನನ್ನಂತಹ ಕೆಲ ಹುಡುಗರು ಸಿಗುತ್ತಾರೆ.ಇಂದಿನ ನನ್ನ ಮಿತ್ರರು ಹಳ್ಳಿಯನ್ನು ಬಿಟ್ಟು ನಗರವನ್ನು ಸೇರಲೂ ಕಾರಣವಿದೆ.ಇಲ್ಲಿ ಸೌಲಭ್ಯಗಳಲ್ಲಿ,ಹಣ ಸಂಪಾದನೆಯ ದಾರಿಗಳು ಸುಲಭವಲ್ಲ ಎಂದೆಲ್ಲಾ ಚಿಂತಿಸಿ "ಸುಲಭ"ದ ದಾರಿಯನ್ನು ಅರಸುತ್ತಾರೆ.ಅದಕ್ಕೆ ತಕ್ಕಂತೆ ನಮ್ಮ ಸಮಾಜದಲ್ಲಿ ಅದನ್ನೇ ಮಾತನಾಡುತ್ತಾರೆ.ಇನ್ನು 10 ವರ್ಷಗಳ ನಂತರ ಹೇಗಪ್ಪಾ?.ಹಳ್ಳಿ ಅಂದರೆ ಕಷ್ಟ....! ಹೀಗೇ ಮಾನಸಿಕವಾಗಿ ನನ್ನ ಮಿತ್ರರನ್ನು ದುರ್ಬಲರಾನ್ನಾಗಿಸುತ್ತಾ ಹೋಗುತ್ತಾರೆ.ಇನ್ನೊಂದು ನೋಡಿ ಒಬ್ಬರು,ನಿನಗೇನು ಕೆಲಸ? ಏನು ಕೃಷಿಯಲ್ಲೇ ಇದ್ದಿ ? ಬೇರೆ ಕೆಲಸ ನೋಡಿಲ್ವಾ.? ಅಂತ ಕೇಳುತ್ತಾರೆ.ಅವರಿಗೆ ನಾನು ಹೇಳುವುದು, ಸ್ವಾಮಿ ಕೃಷಿಯೂ ಒಂದು ಕೆಲಸವೇ. ಆದರೆ ಫಲ ಮಾತ್ರ ಇಂದಿನಿಂದ ನಾಳೆಗಲ್ಲ ವರ್ಷದ ಬಳಿಕ.ಅದನ್ನು ಅರ್ಥ ಮಾಡಿಕೊಳ್ಳಿ.ಕೃಷಿಕ ಎಂದಿಗೂ ನಿರುದ್ಯೋಗಿಯಲ್ಲ ,ಆತ ಸೋಮಾರಿಯೂ ಅಲ್ಲ.ಆತ ನಿಮಗಿಂತ ಭಿನ್ನ.ಆತ "ಸ್ವತಂತ್ರ" ಎಂದು ಛೇಡಿಸುತ್ತೇನೆ.ನನ್ನ ಮಿತ್ರರಿಗೆ ಇಂತಹವರ ಮಾತು ಮನಸ್ಸನ್ನು ನಾಟಿತು ಅವರು ನಗರದ ಹಾದಿ ಹಿಡಿದರು.ತಪ್ಪಿಲ್ಲಾ ಬಿಡಿ ನಮ್ಮ ಸಮಾಜವೇ ಅವರನ್ನು ಹಾಗೆ ಮಾಡಿದ್ದು.

ಆದ್ರೆ ಈಗ ಹಳ್ಳಿ ಬದಲಾಗುತ್ತಿದೆ.ಹಳ್ಳಿ ಅಂದ್ರೆನೇ ನೆಮ್ಮದಿ.ಈಗ ಯಂತ್ರಗಳು ಬಂದಿದೆ,ತಾಂತ್ರಿಕ ವ್ಯವಸ್ಥೆ ಬಲಗೊಡಿದೆ,ಸೌಲಭ್ಯಗಳು ನಗರಕ್ಕಿಂತ ಏನು ಕಮ್ಮಿ ಎನ್ನುವಷ್ಟು ಬರತೊಡಗಿದೆ.ಮನೆಯಿಂದಲೇ ಜಗತ್ತನ್ನು ಅಂತರ್ ಜಾಲದ ಮೂಲಕ ಸುತ್ತಾಡಬಹುದು,ಅಮೇರಿಕಾದ ಮಿತ್ರನಲ್ಲಿ ಚಾಟ್ ಮಾಡಬಹುದು, ಇನ್ನು ಮೊಬೈಲ್,ಟಿವಿ,ಕಾರು ಕಡಿಮೆ ವೆಚ್ಚದಲ್ಲಿ ಲಭ್ಯವಾದರೆ ಬಹುರೂಪಿ ಬಂಗ್ಲೆ.... ಹೀಗೆ ಏನು ಬೇಕು ಎಲ್ಲವೂ ಇಲ್ಲಿ ಈಗ ಲಭ್ಯ.ಅದಕ್ಕಿಂತ ಹೆಚ್ಚು ಮಾನಸಿಕವಾದ ನೆಮ್ಮದಿ,ಕುಟುಂಬದವರೊಂದಿಗಿನ ಒಡನಾಟ... ಮಿತ್ರರೊಂದಿಗಿನ ಓಡಾಟ... ಹರಟೆಗೆ ಸಮಯ... ಶುದ್ದ ಗಾಳಿ... ಮನಸ್ಸುಗಳು... ಇದೆಲ್ಲವೂ ನಗರದಲ್ಲಿ ಸಾಧ್ಯನಾ..? ಹಾಗಾಗಿ ಹಳ್ಳಿ ಅಂದ್ರೆ ಅದೇ ಸ್ವರ್ಗ ಅಂತ ನನ್ನ ಇನ್ನೊಬ್ಬ ಮಿತ್ರ ಹೇಳಿದ್ದು ಹೌದು ಅಂತ ಅನ್ನಿಸಿತು.ಇಲ್ಲಿ ಕೆಲವೊಂದು ತೊಂದರೆಗಳಿವೆ ಬಿಡಿ.ಅದೆಲ್ಲಾ ಏನೂ ಮಹಾ ಅಲ್ಲ.ನಗರದ ಬದುಕು ನೋಡಿದ್ರೆ ಅದು ಸಮಸ್ಯೆಯೇ ಅಲ್ಲ.ಇಲ್ಲಿ 5 ಕಿ ಮೀ ಹೋಗಲು 5 ನಿಮಿಷ ಸಾಕಾದರೆ ನಗರದಲ್ಲಿ ಏನಿಲ್ಲವೆಂದರೂ 30 ನಿಮಿಷ ಗ್ಯಾರಂಟಿ..!.ಅಲ್ಲೆಲ್ಲಾ ಟ್ರಾಫಿಕ್... ಟ್ರಾಫಿಕ್....!.ಅದೂ ಬೇರೆ ತಲೆ ನೋವು.ತುರ್ತಾಗಿ ಹೋಗಲಿದ್ದರೆ ದೇವರೇ ಗತಿ..!ಇನ್ನು ಕರೆಂಟ್ ಕೈ ಕೊಟ್ರೆ ಗೋವಿಂದ ... ನೀರಿಲ್ಲಾಂದ್ರೆ ಶಿವ .. ಶಿವಾ.. ಮೊಬೈಲ್ ಇಲ್ಲಾಂದ್ರೆ ಬದುಕೇ ಇಲ್ಲ..ದಿನಸಿ ,ತರಕಾರಿಗಳ ಬೆಲೆ ಏರಿದ್ರೆ ಅಯ್ಯೋ...! ಹೇಗಿದೆ ಬದುಕು..?.

ನನ್ನ ಮಿತ್ರೆರೇ ಒಂದು ಗಮನಿಸಿ,ನನ್ನ ಪರಿಚಿತರೊರ್ವರು ಬೇಕಾದವರೊಬ್ಬರು ನಗರಪ್ರದೇಶದಲ್ಲಿ ಉದ್ಯೋಗದಲ್ಲಿದ್ದಾರೆ.ಈಗ ಅವರು ನೂತನವಾಗಿ ಸ್ಥಳವೊಂದನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ.ಅವರು ನಗರದಲ್ಲಿ ಹತ್ತಾರು ವರ್ಷಗಳಿಂದ ಬದುಕುತ್ತಿದ್ದವರು.ಈಗ ಜಾಗ ನೋಡುವುದೆಲ್ಲಿ ಗೊತ್ತಾ.? ಅಚ್ಚರಿಯಾಗಬಹುದು... ಹಳ್ಳಿಯ ಪ್ರಶಾಂತವಾದ ಸ್ಥಳವನ್ನು...!. ಇನ್ನೊಬ್ಬರು ಈಗಾಗಲೇ ಖರೀದಿಸಿದ್ದಾರೆ. ತಿಂಗಳಿಗೊಮ್ಮೆ ಬೆಂಗಳೂರಿನಿಂದ ಬರುತ್ತಿದ್ದಾರೆ.ಈಗ ಅವರು ಹೇಳುವುದು ಏನು ಗೊತ್ತಾ This is permanent asset..!

ಮಿತ್ರರೇ ನಗರದಲ್ಲಿ ಸಂಪಾದಿಸಿ..ಆದರೆ ಹಳ್ಳಿಯ ಸೊಗಡನ್ನು ಮರೆಯಬೇಡಿ.ಮತ್ತೆ ಹಳ್ಳಿಗೇ ಬನ್ನಿ ನೀವು ಕ್ರಿಯಾಶೀಲರಾದರೇ ಹಳ್ಳಿಯಲ್ಲೇ ಚಿಕ್ಕದೊಂದು ಉದ್ಯೋಗವನ್ನೂ ಮಾಡಬಹುದು.ಇಲ್ಲವಾದರೆ ಸಂಘಟನೆಗಳಲ್ಲಿ ದುಡಿಯಬಹುದು ಆ ಮೂಲಕ ನಮ್ಮ ಕೆರಿಯರ್ ರೂಪಿಸಬಹುದು ಅಲ್ವಾ.? ಹಣ ಇರಲಿ.... ನೆಮ್ಮದಿಯೂ ಬೇಕಲ್ವಾ..!

ಮಿತ್ರ ವಿನಾಯಕನನ್ನು ನಾನು ನೆನಪಿಸಿಕೊಂಡದ್ದು ಅವನ ಚಟುವಟಿಕೆಗೆ,ಈಗಲೂ ನನಗೂ ಅವನಿಗಿರುವ ಮಿತ್ರತ್ವದ ಬಗ್ಗೆ ಆತನಿಗೆ ಹಳ್ಳಿಯ ಮೇಲಿರುವ ಪ್ರೀತಿಯ ಬಗ್ಗೆ. ವಿನಾಯಕ ನಗರದಲ್ಲಿದ್ದರೂ ನನ್ನ ಬಗ್ಗೆ ಅಂದರೆ ಹಳ್ಳಿಯ ಬಗ್ಗೆ ಚಿಂತಿಸುತ್ತಾನಲ್ಲ ನನಗೆ ಅದು ಖುಶಿ ಕೊಟ್ಟಿತು. ವಿನಾಯಕ ನನ್ನನ್ನು ಮತ್ತೆ ಮತ್ತೆ ನೆನಪಿಸಿದೆಯಲ್ಲಾ Hatsoff And also Good luck.

08 ಫೆಬ್ರವರಿ 2008

ಲೋವೋಲ್ಟೇಜ್...... ಇದು ರೈತರ ಬವಣೆ..

ಸುಳ್ಯ ಎಇಇಯವರೊಂದಿಗೆ ಭಾರತೀಯ ಕಿಸಾನ್ ಸಂಘದ ಸದಸ್ಯರು





ಮೆಸ್ಕಾಂ ವ್ಯಾಪ್ತಿಯ ದ.ಕ.ಜಿಲ್ಲೆಯ ಬಹುತೇಕ ರೈತರಿಗೆ ವಿವಿಧ ಸಮಸ್ಯೆಗಳ ನಡುವೆ ಈಗ ಲೋವೋಲ್ಟೇಜ್ ಸಮಸ್ಯೆ ಕಾಡತೊಡಗಿದೆ.ಹಲವು ಬಾರಿ ಮೆಸ್ಕಾಂಗೆ ಮನವಿ ಸಲ್ಲಿಸಿದರೂ ಅಪ್ರಯೋಜನವಾಗಿದೆ.ಇದು ಕಳೆದ ಹತ್ತಾರು ವರ್ಷಗಳ ಸಮಸ್ಯೆ.ಈಗ ಈ ಸಮಸ್ಯೆ ಶಾಶ್ವತವೋ ಎನ್ನುವಷ್ಟರ ಮಟ್ಟಿಗೆ ಬೆಳೆದಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ 4 ಜಿಲ್ಲೆಗಳು ಒಳಗೊಂಡಿದೆ.ಒಟ್ಟು 26322 ಚದರ ಮೀಟರ್ ಜನರಿಗೆ ಪ್ರಯೋಜನವಾಗಿದ್ದು 2 ವೃತ್ತಗಳಲ್ಲಿ 7 ವಿಭಾಗಗಳಿದ್ದು 35 ಉಪವಿಭಾಗಗಳಿವೆ.ಒಟ್ಟು 15,30,054 ಗ್ರಾಹಕರಿದ್ದಾರೆ.ಅದರಲ್ಲಿ 10,38,534 ಗೃಹಬಳಕ 1,39,794 ವಾಣಿಜ್ಯ,1,81,440ಪಂಪುಸೆಟ್ಟು, 17,417 ಇಂಡಸ್ಟ್ರೀ,11,174 ಬೀದಿದೀಪಗಳು ಸೇರುತ್ತವೆ.2006-07ರಲ್ಲಿ 78,69,889 ಲಕ್ಷ ರೂ ಆದಾಯವು ಮೆಸ್ಕಾಂಗೆ ಬಂದಿರುತ್ತದೆ.ಆದರೂ ವ್ಯವಸ್ಥೆ ಸರಿಯಾಗಿಲ್ಲ..!.

ಸದ್ಯ ಪುತ್ತೂರು ಹಾಗು ಸುಳ್ಯ ತಾಲೂಕಿನ ಸಮಸ್ಯೆಯ ಕಡೆಗೆ ನಾನು ಯೋಚಿಸುತ್ತೇನೆ.ಹಾಗೆಂದು ಇತರ ತಾಲೂಕುಗಳಲ್ಲಿ ಸಮಸ್ಯೆ ಇಲ್ಲ ಎಂದೇನಲ್ಲ.ಸುಳ್ಯವು ನನ್ನ ತಾಲೂಕು ಕೇಂದ್ರ,ಪುತ್ತೂರು ತೀರಾ ಪರಿಚಿತ ಪ್ರದೇಶ.

ಪುತ್ತೂರು ತಾಲೂಕಿನ ಉಪವಿಭಾಗದಲ್ಲಿ 15 ಸಾವಿರ ಪಂಪ್ ಸೆಟ್ಟುಗಳು ಕಾರ್ಯನಿರ್ವಹಿಸಿದರೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಗೃಹಬಳಕೆಯ ಸಂಪರ್ಕಗಳಿವೆ.ಇದರಿಂದ ಮುಂದೆ ಬಂದರೆ ಸುಳ್ಯ ತಾಲೂಕು.ಇಲ್ಲಿ ಸುಮಾರು 7 ಸಾವಿರ ಪಂಪ್ ಸೆಟ್ಟುಗಳು ,ಸುಮಾರು 18 ಸಾವಿರ ಗೃಹಬಳಕೆಯ ಸಂಪರ್ಕಗಳಿವೆ.ಆದರೆ ಇಲ್ಲಿನ ಯಾವುದೇ ಕೃಷಿಕರಿಗೆ ತೋಟಗಳಿಗೆ ನೀರುಣಿಸಲಾಗದೇ ಪರಿತಪಿಸಬೇಕಾಗಿದೆ.ಕಾರಣ ಲೋವೋಲ್ಟೇಜ್. ಅಂದರೆ ಒಂದು ತಂತಿಯಲ್ಲಿ 230 ವೋಲ್ಟೇಜ್ ಇರಬೇಕಾದಲ್ಲಿ ಕೇವಲ 90 ಅಥವಾ ಅದಕ್ಕಿಂತ ಕಡಿಮೆಯೇ...!. ಹಾಗಾದರೆ ಎಂತಹ ಪರಿಸ್ಥಿತಿ ಎನ್ನುವುದನ್ನು ನೀವೇ ಊಹಿಸಿಕೊಳ್ಳಿ.!?.

ಹಾಗೆಂದು ಈ ಸಮಸ್ಯೆ ಮೆಸ್ಕಾಂಗೆ ಗೊತ್ತಿಲ್ಲ ಎಂದೇನಲ್ಲ.ತಿಳಿದಿದ್ದರೂ ಸುಮ್ಮನಿರುತ್ತದೆ.ಹೋಗಿ ಕೇಳಿದರೆ ಹೌದು..ಹೌದು .. ಅದು ಕೆಪಿಟಿಸಿಎಲ್ ನವರಿಂದ ಸಮಸ್ಯೆಯಾಗುತ್ತಿರುವುದು ಎಂದು ನಮ್ಮಲೇ ಗೋಗರೆಯುತ್ತಾರೆ..!ಆದರೆ ಇವರಿಗೂ ಜವಾಬ್ದಾರಿ ಇದೆ ಎನ್ನುವ ಕನಿಷ್ಟ ತಿಳುವಳಿಕೆಯೂ ಇಲ್ಲ ಎನ್ನುವುದು ಅವರ ಬಂಡವಾಳವನ್ನು ತೋರಿಸುತ್ತದೆ.

ಕೃಷಿಕರದ್ದೇ ಸಂಘಟನೆಯಾದ ಭಾರತೀಯ ಕಿಸಾನ್ ಸಂಘದ ಸುಳ್ಯ ತಾಲೂಕು ಘಟಕವು ಗುರುವಾರದಂದು ಸುಳ್ಯದ ಮೆಸ್ಕಾಂ ಕಚೇರಿಗೆ ನಿಯೋಗದೊಂದಿಗೆ ತೆರಳಿ ಸುಮಾರು 10 ಅಂಶಗಳನ್ನು ಮುಂದಿಟ್ಟು ಎಇಇ ಶಿವಕುಮಾರ್ ಅವರೊಂದಿಗೆ ಚರ್ಚಿಸಿತು.ಆಗ ಅವರದು ಭರವಸೆ... ಹಾಗೆ ಮಾಡುತ್ತೇವೆ... ಹೀಗೆ ಅದು ಸಮಸ್ಯೆ.... ಅದು ಕೆಪಿಟಿಸಿಎಲ್ ಅವರ ಸಮಸ್ಯೆ.... ಮೇಲಾಧಿಕಾರಿಯನ್ನು ಕೇಳುತ್ತೇನೆ... ಎನ್ನುವ ಉತ್ತರ ಬಿಟ್ಟರೆ ಖಡಾಖಂಡಿತ ಉತ್ತರ ಸಿಗಲೇ ಇಲ್ಲ.ಇನ್ನೊಂದು ವಿಷಯ ಎಂದರೆ ಎಇಇಯವರು ಹೊಸಬರಾದ್ದರಿಂದ ಅವರಲ್ಲಿ ಅನುಭವದ ಕೊರತೆ ಕಂಡುಬಂದಿತ್ತು.ಆದರೆ ಭರವಸೆಗೆ ಕೊರತೆ ಇರಲಿಲ್ಲ..!

ಭಾರತೀಯ ಕಿಸಾನ್ ಸಂಘದ ಸುಳ್ಯ ಘಟಕ ಎಇಇ ಮುಂದಿಟ್ಟ ಅಂಶಗಳು ಇವು..

* ನೀರಾವರಿ ಪಂಪ್ ಸೆಟ್ಟುಗಳಿಗೆ ನೀಡುವ ವಿದ್ಯುತ್ ಲೋವೋಲ್ಟೇಜ್ ನಲ್ಲಿರುತ್ತದೆ.

*ಪಂಪ್ ಸೆಟ್ಟುಗಳಿಗೆ ನೀಡುವ ವಿದ್ಯುತ್ ನಲ್ಲಿ ನಿರಂತರತೆ ಇರುವುದಿಲ್ಲ

*ಸಾಯಂಕಾಲ 6 ರಿಂದ 10 ಗಂಟೆಯೊಳಗೆ ಅನಿಯಮಿತ ವಿದ್ಯುತ್ ಕಡಿತ

*ಕೃಷಿಕರಿಗೆ ಪಂಪ್ ಸೆಟ್ಟುಗಳಿಗೆ ಪ್ರತಿದಿನ 12 ಗಂಟೆ ವಿದ್ಯುತ್

*ತಾಲೂಕಿಗೆ ಹಲವೆಡೆ ಹಗಲು ಕೇವಲ 4 ಗಂಟೆ ಮಾತ್ರಾ ವಿದ್ಯುತ್ ಪೂರೈಕೆಯಾಗುತ್ತದೆ.

ಈ ಸಮಸ್ಯೆಗಳಿಂದ ಅನುಭವಿಸುವ 10 ತೊಂದರೆಗಳನ್ನು ತಿಳಿಸಲಾಯಿತು.

ಭಾರತೀಯ ಕಿಸಾನ್ ಸಂಘವು ಇಷ್ಟೆಲ್ಲಾ ಪ್ರಯತ್ನ ನಡೆಸುತ್ತಿರುವಾಗ ರೈತರ ಬಗ್ಗೆ ಮಾತನಾಡುವ ನಮ್ಮ ಜನಪ್ರತಿನಿಧಿಗಳು ವಿದ್ಯುತ್ ಸಮಸ್ಯೆಯ ಬಗ್ಗೆ ತುಟಿಬಿಚ್ಚಿಲ್ಲ.ಅವರು ಏನಿದ್ದರೂ ಉಚಿತ ವಿದ್ಯುತ್ ನೀಡುವ ಯೋಚನೆಯಲ್ಲಿದ್ದಾರೆ.ಇಂತಹ ಲೋವೋಲ್ಟೇಜ್ ಸಮಸ್ಯೆಗಳ ನಡುವೆಯೇ ಉಚಿತ ವಿದ್ಯುತ್ ಬಗ್ಗೆ ರೈತರು ಕನಸು ಕಾಣಬಹುದೇ..? ಈಗಿನ ಪರಿಸ್ಥಿತಿಯಲ್ಲಿ ಉಚಿತ ಬೇಡ ಗುಣಮಟ್ಟದ ವಿದ್ಯುತ್ ನೀಡಿದರೆ ಸಾಕು..!

ಭಾರತೀಯ ಕಿಸಾನ್ ಸಂಘದ ನಿಯೋಗದಲ್ಲಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಉಪಾದ್ಯಕ್ಷ ಪ್ರಭಾಕರ ರೈ, ಕೋಶಾಧಿಕಾರಿ ಆನಂದ ಗೌಡ, ಜತೆ ಕಾರ್ಯದರ್ಶಿ ಈಶ್ವರ ಭಟ್,ಗುತ್ತಿಗಾರು ಘಟಕದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ,ಕಾರ್ಯದರ್ಶಿ ಕುಮಾರಸ್ವಾಮಿ ಮೇಲ್ತೋಟ , ಎಣ್ಮೂರು ಘಟಕದ ಅಧ್ಯಕ್ಷ ರಮೇಶ್ ಕೋಟೆ ಭಾಗವಹಿಸಿದ್ದರು.

ಕೊನೆಯ ಮಾತು : ಕಿಸಾನ್ ಸಂಘದ ಪ್ರಮುಖರು ಮೆಸ್ಕಾಂ ಎಇಇಯವರಲ್ಲಿ ನೀವು ನಗರಕ್ಕೆ ವಿದ್ಯುತ್ ನಿರಂತರ ಕೊಡುತ್ತೀರಲ್ಲ ರೈತರಿಗೆ ಯಾಕೆ ಸಿಂಗಲ್ ಫೇಸ್ ಕೂಡಾ ಕೊಡುವುದಿಲ್ಲ ಎಂದಾಗ ಹಾಗಲ್ಲ ನಗರದಲ್ಲಿ ರೆವೆನ್ಯೂ ಇರುತ್ತಲ್ಲಾ ಅದಕ್ಕೆ ಕೊಡುತ್ತೇವೆ ಎಂದರು ಎಇಇ. ಹಾಗಾದ್ರೆ ಅದರ ಅರ್ಥ ಏನು ಹಳ್ಳಿಗಳಿಂದ ರೆವೆನ್ಯೂ ಬರೋದಿಲ್ವೇ..?. ಹಾಗೆ ನೋಡಿದ್ರೆ ಅತ್ಯಂತ ಪ್ರಾಮಾಣಿಕವಾಗಿ ರೆವೆನ್ಯೂ ಬರೋದು ಹಳ್ಳಿಗಳಿಂದಲೇ ಸ್ವಾಮಿ..! ಇನ್ನಾದ್ರೂ ಅರ್ಥ ಮಾಡ್ಕೊಳ್ಳಿ..

06 ಫೆಬ್ರವರಿ 2008

ಪುರಂದರೋತ್ಸವದಲ್ಲಿ ಸಂಗೀತ ಸುಧೆ..



ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಪುರಂದರೋತ್ಸವದ ಪ್ರಯುಕ್ತ ಗಾನ ಕಲಾಶ್ರೀ ಡಾ.ಸುಕನ್ಯ ಪ್ರಭಾಕರ್ ಮೈಸೂರು ಮತ್ತು ತಂಡದವರಿಂದ ಹರಿದಾಸ ಸಂಕೀರ್ತನೆಯು ನಡೆಯಿತು.

ಆದರೆ ದೊಡ್ಡ ಕಲಾವಿದರೊಬ್ಬರ ಸಂಗೀತವನ್ನು ಆಲಿಸಲು ಸೇರಿದ ಆಸಕ್ತರು ಮಾತ್ರ ವಿರಳವಾಗಿತ್ತು.ಅದಕ್ಕೆ ಪ್ರಚಾರದ ಕೊರತೆಯೇ ಮುಖ್ಯ ಕಾರಣವಾಗಿತ್ತು.ಕಾರ್ಯಕ್ರಮ ಅಚ್ಚುಕಟ್ಟಾಗಿತ್ತು.ಸುಮಾರು 2 ಗಂಟೆಗಳ ಕಾಲ ಸಂಗೀತ ಲೋಕದಲ್ಲಿ ತೇಲುವಂತೆ ಸುಕನ್ಯಾ ಪ್ರಭಾಕರ್ ಮಾಡಿದ್ದರು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.

ಸುಬ್ರಹ್ಮಣ್ಯ ಜೇಸೀಯಿಂದ ಜನೋಪಯೋಗಿ ಕಾರ್ಯಕ್ರಮ...




ಜೇಸೀಐ ಸುಬ್ರಹ್ಮಣ್ಯ ಕುಕ್ಕೆಶ್ರೀ ವತಿಯಿಂದ ಜೇಸೀ ದಿ.ಕುಮಾರ ನಾಯರ್ ಸ್ಮರಣಾರ್ಥ ನಿರಂತರ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದ ಸಪ್ತಾಹವು ಸುಬ್ರಹ್ಮಣ್ಯದಲ್ಲಿ ನಡೆಯಿತು.

ತರಬೇತಿ ಸಪ್ತಾಹವನ್ನು ಕೃಷಿಕ ಕೆ.ವಿ.ಸುಧೀರ್ ಉಧ್ಘಾಟಿಸಿದರು.ನಂತರದ ದಿನಗಳಲ್ಲಿ ಯಶಸ್ಸು ಕನಸಲ್ಲ,ಮಾನವೀಯ ಸಂಬಂಧಗಳು,ಮೌಲ್ಯಾಧಾರಿತ ಶಿಕ್ಷಣ,ಪರೀಕ್ಷಾ ಪೂರ್ವತಯಾರಿ,ಯಶಸ್ಸು,ಪರಿಣಾಮಕಾರಿ ಸಂಹನ ಹಾಗೂ ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ತರಬೇತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜೇಸೀ ವಲಯ ತರಬೇತುದಾರರಾದ ಸವಿತಾರ ಮುಡೂರು, ವಿಮಲಾರಂಗಯ್ಯ, ಚಂದ್ರಶೇಖರ ಕುಕ್ಕುಪುಣಿ, ರಾಜೇಶ್ ಕೆಡಿಂಜೆ, ಸೋಮಶೇಖರ ನೇರಳ, ಬಿ.ವಿಠಲ ರಾವ್, ಹಾಗೂ ಕೃಷ್ಣ ಮೋಹನ್ ಆಗಮಿಸಿದರು.

ಇದೇ ಸಂದರ್ಭದಲ್ಲಿ ಅನುಗ್ರಹ ಮಾಸಪತ್ರಿಕೆ ಮತ್ತು ಸ್ವಪ್ನ ಸಾಕಾರ ಗೃಹ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜೇಸೀ ಅಧ್ಯಕ್ಷ ಚಂದ್ರಶೇಖರ ನಾಯರ್, ಕಾರ್ಯದರ್ಶಿ ರೋಹಿತ್, ಜೇಸೀರೆಟ್ ಅಧ್ಯಕ್ಷೆ ಸ್ವಪ್ನಾ ವೆಂಕಟೇಶ್,ಜೇಜೇಸಿ ಅಧ್ಯಕ್ಷೆ ಅಲಕಾ ಎಂ.ಜಿ, ಮೊದಲಾದವರು ಭಾಗವಹಿಸಿದ್ದರು.ವಿವಿಧ ಕಾರ್ಯಕ್ರಮಗಳನ್ನು ಸುಬ್ರಹ್ಮಣ್ಯದ ವಿವಿಧ ಕಾಲೇಜು,ಶಾಲೆಗಳಲ್ಲಿ ನಡೆಸಲಾಗಿತ್ತು.

05 ಫೆಬ್ರವರಿ 2008

ನಮ್ಮ ರೈತರು ಈಗಲೂ ಸ್ವಾಭಿಮಾನಿಗಳು....



ಆಹಾರ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ಸಂಗತಿ ಈಗ ನಗರದ ಮಂದಿಗೆ ಅರ್ಥವಾಗತೊಡಗಿದೆ.ಇದಕ್ಕೆ ಕಾರಣವೇನು ಎಂಬುದನ್ನು ಈಗಲೇ ಸರಿಯಾಗಿ ಚಿಂತಿಸತೊಡಗಿದ್ದಾರೆ.ಜನಪ್ರತಿನಿಧಿಗಳು ಜಾಗೃತರಾಗಬೇಕಾದ್ದು ಈಗ ಅನಿವಾರ್ಯವಾಗಿದೆ.

ಇಡೀ ದೇಶಕ್ಕೆ ಹಾಗೂ ಇಲ್ಲಿನ ಜನರಿಗೆ ಬೇಕಾದ ಗೋಧಿ,ಭತ್ತ ಹಾಗೂ ಇನ್ನಿತರ ಧಾನ್ಯಗಳನ್ನು ಅತ್ಯಂತ ರಸಭರಿತವಾಗಿ ಬೆಳೆಯುವವನು ರೈತ.ಹಾಗಾಗಿ ಆತನೇ ಈ ದೇಶದ ಬೆನ್ನೆಲುಬು ಎಂಬುದರಲ್ಲಿ ಎರಡು ಮಾತಿಲ್ಲ.ಒಂದು ವೇಳೆ ಆತನ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಅದು ದೇಶದ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.ಆಗಲೂ ನಮ್ಮ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ದೇಶದ ಆಹಾರದ ಕೊರತೆ,ಭದ್ರತೆಗೆ ಧಕ್ಕೆ ಗ್ಯಾರಂಟಿ.

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಅನುಭವಿಸಿದ ಸಂಕಷ್ಟದಂತೆ ಉತ್ತರಪ್ರದೇಶದ ಹಳ್ಳಿಯ ರೈತರಿಗೂ ಈಗ ಆದದ್ದು ಇದೇ.ಅಲ್ಲಿನ ಕಬ್ಬು ಹಾಗೂ ಗೋಧಿ ಬೆಳೆಗಾರರು ಈಗ ತೀವ್ರ ಸಂಕಷ್ಟದಲ್ಲಿದ್ದಾರೆ.ಕಬ್ಬು ಬೆಳೆದು ಕಾರ್ಖಾನೆಗೆ ಕೊಂಡೋದರೆ ಅಲ್ಲಿನ ತಾಂತ್ರಿಕ ತೊಂದರೆ ರೈತರ ಮೇಲೆ ಪರಿಣಾಮ ಬೀರಿದೆ.ಇದರಿಂದ ಗೋಧಿಯನ್ನು ಅರೆಯಲು ಸಾಧ್ಯವಾಗದೆ ಬಾಕಿಯಾಗಿ ಉಳಿದಿದೆ.ಗಮನಿಸಿ ನೋಡಿ ದೇಶಕ್ಕೆ ಅಂದಾಜಿನ ಪ್ರಕಾರ ಸುಮಾರು 75 ರಿಂದ 77 ಮಿಲಿಯನ್ ಟನ್ ಗೋಧಿಯ ಅವಶ್ಯಕತೆ ಇದೆ.ಅದೆಲ್ಲವನ್ನೂ ನಮ್ಮ ರೈತರು ನೀಡುತ್ತಾರೆ ಮತ್ತೆ ಕಡಿಮೆಯಾದರೆ ಮಾತ್ರಾ ತರಿಸಲಾಗುತ್ತದೆ. ಆದರೆ ಈಗಿನ ಅಂದಾಜಿನ ಪ್ರಕಾರ ಸುಮಾರು 7 ಮಿಲಿಯನ್ ಟನ್ ಕೊರತೆ ಉಂಟಾಗುವ ಸಾಧ್ಯತೆಯಿದ್ದು ಇದನ್ನು ಹೊರ ದೇಶದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಹೀಗಾದರೆ ಸುಮಾರು 10 ಸಾವಿರ ಕೋಟಿ ರೂ ಗಳ ಮೌಲ್ಯದ ಗೋಧಿಯನ್ನು ತರಿಸಬೇಕಾಗಬಹುದು...!.ಆದರೆ ವಿದೇಶಗಳಲ್ಲಿ ಅಲ್ಲಿನ ಅವಶ್ಯಕತೆಗನುಗುಣವಾಗಿ ಗೋಧಿಯನ್ನು ಬೆಳೆಯುವ ಕಾರಣ ಅಲ್ಲೂ ಗೋಧಿಗೆ ಬೆಲೆ ಏರಿಕೆ ಕಂಡು ಬಂದರೆ ಇಲ್ಲೂ ಅದರ ಪರಿಣಾಮ ಬೀರುವುದು ಗ್ಯಾರಂಟಿ.ಇದೆಲ್ಲದರೆ ಪರಿಣಾಮ ದೇಶದ ಆಹಾರ ಭದ್ರತೆಯ ಮೇಲೆ ತೀವ್ರ ಪರಿಣಾಮ.

ಹಳ್ಳಿಯ ರೈತನಿಗೆ ಇದೆಲ್ಲದರ ಚಿಂತೆ ಬೇಡ ಏಕೆಂದರೆ ಇಂತಹ ವ್ಯವಸ್ಥೆಯಿಂದ ತನಗೆ ಲಾಭವಾಗದಿರಬಹುದು ಆದರೆ ಹೊಟ್ಟೆಹೊರೆಯಲು ಚಿಂತೆಯಿಲ್ಲ. ಆತನಿಗೆ ಅವಶ್ಯಕತೆಯುಳ್ಳ ಧವಸಗಳನ್ನು ಆತನೇ ಬೆಳೆದಿರುತ್ತಾನೆ.ಸರಕಾರದಿಂದ ಕೃಷಿಕರಿಗೆ ಯಾವುದೇ ಸಹಕಾರ ,ಪ್ರೋತ್ಸಾಹಗಳನ್ನು ನೀಡದೇ ಇದ್ದುದರ ಪರಿಣಾಮದಿಂದ ಈಗ ಇಂತಹ ಘಟನೆಗಳು ನಡೆಯುತ್ತವೆ.

ಈಗ ಸಂಕಷ್ಟಗಳನ್ನು ಎದುರಿಸಬೇಕಾದವರು ನಗರದ ಮಂದಿ ಹಾಗು ಜನನಾಯಕರು.ಹಾಗಾಗಿ ರೈತ ಇಂದಿಗೂ ದೇಶದ ಬೆನ್ನೆಲುಬಾಗಿಯೇ ಉಳಿದಿದ್ದಾನೆ. ಆತನೇ ಈ ದೇಶದ ಆರ್ಥಿಕ ವ್ಯವಸ್ಥೆಯ ಹಾಗು ಆಹಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.ನಗರದ ಐಟಿ - ಬಿಟಿ ಉದ್ಯಮಿಗಳಿಗೆ ನೀಡಿದಷ್ಟೇ ಮಹತ್ವ ಹಳ್ಳಿಯ ರೈತನಿಗೂ ನೀಡಬೇಕು ಎನ್ನುವುದು ತಿಳಿಯುವುದು ಇಂತಹ ಸಂದರ್ಭಗಳಲ್ಲಿ.

ಒಂದು ತುಲನಾತ್ಮಕ ವಿಚಾರವನ್ನು ನಾನು ಓದಿದ್ದೆ ಅದನ್ನು ಇನ್ನೊಮ್ಮೆ ನೆನಪಿಸಿ ನಿಮ್ಮ ಮುಂದಿಡುತ್ತೇನೆ.ಆಗ ನಮ್ಮ ರೈತರ ಸ್ವಾಭಿಮಾನ ಏನು ಎಂಬುದು ಅರ್ಥವಾಗಬಹುದು.

1970 ರಲ್ಲಿ 1 ಕಿಲೋ ಭತ್ತದ ಹಾಗು ಗೋಧಿಯ ಸರಾಸರಿ ಬೆಲೆ ಕೇವಲ 60 ಪೈಸೆ.ಅದೇ ಸಮಯದಲ್ಲಿ ಕೂಲಿಯಾಳುಗಳ ಸಂಬಳ 3 ರೂ, ಸರಕಾರಿ ನೌಕರರ ಸಂಬಳ ಮಾಸಿಕವಾಗಿ 90 ರೂ, 1 ಗ್ರಾಂ ಚಿನ್ನದ ಬೆಲೆ 15 ರೂ, 50 ಕಿಲೋ ಸಿಮೆಂಟಿನ ಬೆಲೆ 5 ರೂ. ಅದುವೇ 7 ರ ಹೊತ್ತಿಗೆ 1 ಕಿಲೋ ಗೋಧಿ,ಭತ್ತದ ಸರಾಸರಿ ಬೆಲೆ 6 ರಿಂದ 10 ರೂ ಚಿನ್ನದ ಬೆಲೆ ನಿಮಗೆ ಗೊತ್ತೇ ಇದೆ.ಸಿಮೆಂಟಿನ ಬೆಲೆ 230 ರೂ, ಇನ್ನು ಸರಕಾರಿ ನೌಕರರ ಸಂಬಳದ ಬಗ್ಗೆ ಹೇಳಬೇಕಾಗಿಲ್ಲ.

ಹಾಗಾದರೆ ನಿಜವಾಗಲೂ ಕೃಷಿಯುತ್ಪನ್ನಗಳ ಬೆಲೆ ಏರಿಕೆಯಾಗಿದೆಯೇ?ಇತರ ವಸ್ತುಗಳ ಬೆಲೆ ಏರಿದ ಅನುಪಾತದಲ್ಲಿ ಕೃಷಿಯುತ್ಪನ್ನಗಳ ಬೆಲೆಯೇರಿಕೆಯಾಗಿದ್ದರೆ ಅವುಗಳ ಬೆಲೆಯ ಬಗ್ಗೆ ಲೆಕ್ಕ ಹಾಕಿ.ಈಗ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.ಅದರಲ್ಲಿ ತೆಂಗು,ಅಡಿಕೆ,ಕಾಳುಮೆಣಸು,ಕಾಫಿ,ಕಬ್ಬು,ತರಕಾರಿ,ರಾಗಿ ಸೇರಿದಂತೆ ಹಲವು ರೈತರು ಸೇರುತ್ತಾರೆ.ಆದರೂ ಇಂದು ರೈತರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ.ಅಲ್ಲಿಯ ಸಮಸ್ಯೆ ಬೆಲೆ ಕುಸಿತ.ಇದರಿಂದಾಗಿ ರೈತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.ಇಂದಿನ ಪರಿಸ್ಥಿತಿ ನೋಡಿದರೆ 1 ಕಿಲೋ ಗೋಧಿ,ಭತ್ತದ ಬೆಲೆ 30 ರಿಂದ 40 ರೂ ಇರಬೇಕಾಗಿತ್ತು.ಆದರೆ ಇಂದಿಗೂ ಅವುಗಳ ಬೆಲೆ 10 ರಿಂದ 12 ಆದರೂ ರೈತರು ನೆಮ್ಮದಿಯಿಂದಿದ್ದಾರೆ.ಅದು ನೋಡಿ ರೈತರ ಸ್ವಾಭಿಮಾನ.ಅವರ ಋಣ ಭಾರವನ್ನು ತೀರಿಸಲು ಸಾಧ್ಯವೇ?.

ಸರಕಾರಗಳು ಯಾವುದೇ ಸರಕಾರಿ ನೌಕರರಿಗೆ ನಿವೃತ್ತ ವೇತನ ನೀಡುತ್ತದೆ.ಅಂತಹ ವೇತನ ಸುಮಾರು 5000 ಕೋಟಿ ರೂ ಆದರೆ ಸರಕಾರವು ಕೃಷಿಗೆ ನೀಡುವ ಸಹಾಯಧನ ಎಷ್ಟು ಗೊತ್ತೇ? ಕೇವಲ 10 ಸಾವಿರ ಕೋಟಿ.ಅದು ದೇಶದ ಸುಮಾರು 75 ಕೋಟಿ ರೈತರಿಗೆ..!?

ಆದರೂ ರೈತರು ಧೃತಿಗೆಡಲಿಲ್ಲ.ಈಗ ನಮ್ಮ ರೈತರ ಮೇಲೆ ಅಭಿವೃದ್ಧಿ ಹೆಸರಲ್ಲಿ ನಿರಂತರ ಧಾಳಿ ನಡೆಯುತ್ತಿದೆ.ಹೀಗಾಗಿ ಅವರು ದಿಕ್ಕೆಟ್ಟಿದ್ದಾರೆ. ಸರಕಾರಗಳು ಸುಮ್ಮನಾಗಿವೆ.ನೂರಾರು ವರ್ಷಗಳಿಂದ ಅದೇ ಹೊಲದಲ್ಲಿ,ತೋಟದಲ್ಲಿ ದುಡಿದು ಏಕಾಏಕಿ ಹೊಲವನ್ನು ಇನ್ನಾವುದೋ ಅಭಿವೃದ್ಧಿ ಕಾರ್ಯಗಳಿಗೆ ಬಿಡಬೇಕು ಎನ್ನುವುದು ಯಾವ ನ್ಯಾಯ?ಇನ್ನೊಂದಡೆ ಸರಕಾರಗಳು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ನೀಡಲು ಪ್ರಯತ್ನಿಸದೆ ಇನ್ನಾವುದೋ ತಂತ್ರದಲ್ಲಿ ಮುಳುಗುತ್ತದೆ.ಅದಕ್ಕೆಲ್ಲಾ ಉತ್ತರವಾಗಿ ಇಂದು ಚಿಕ್ಕ ಶಾಕ್ ರೈತರು ನೀಡಲಾರಂಭಿಸಿದ್ದಾರೆ.ಸರಕಾರ, ಈ ದೇಶ ಅವರಿಗೆ ಏನು ಉತ್ತರ ನೀಡೀತು?.

ಅದಕ್ಕೆ ಸರಿಯಾಗಿ ನಮ್ಮ ಕೃಷಿ ಸಚಿವರುಗಳು ಇರುತ್ತಾರೆ ರೈತರನ್ನು ಉದ್ಧರಿಸಲು ಅಲ್ಲ.... ಮುಗಿಸಲು ... ಮಾನಗೆಟ್ಟವರು...

04 ಫೆಬ್ರವರಿ 2008

ಸಕಲೇಶಪುರ - ಬಿ ಸಿ ರೋಡ್ ರಸ್ತೆಗೆ 61 ಕೋಟಿ ರೂ



ಮುನಿಯಪ್ಪರಿಂದ ಆನೆಯ ದರ್ಶನ



ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೇಂದ್ರ ಭೂ ಸಾರಿಗೆ ಸಚಿವ ಕೆ.ಎಚ್.ಮುನಿಯಪ್ಪ ಸೋಮವಾರದಂದು ಆಗಮಿಸಿ ಪೂಜೆ ಸಲ್ಲಿಸಿದರು.ಇದೇ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಾಂಶ ಇಲ್ಲಿದೆ.

* ಸಿ ಆರ್ ಎಫ್ ನಿಂದ ಸಕಲೇಶಪುರ - ಶಿರಾಡಿ-ಬಿ ಸಿ ರೋಡ್ ರಸ್ತೆಗೆ 61 ಕೋಟಿ ಬಿಡುಗಡೆ.ಇದರಲ್ಲಿ ಪೂರ್ತಿ ಡಾಮರೀಕರಣ,ಅಗತ್ಯವಿದ್ದೆಡೆ ಕಾಂಕ್ರೀಟ್ ರಸ್ತೆಯೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವುದು.ಈ ಕಾಮಗಾರಿಯನ್ನು ರಾಜ್ಯದ ಎನ್.ಎಚ್.ಇಲಾಖೆಯ ವತಿಯಿಂದ ಮಾಡಲಾಗುತ್ತದೆ.

* ಶಿರಾಡಿ ಘಾಟಿ ರಸ್ತೆಯನ್ನು ಮಳೆಗಾಲದ ಮುನ್ನ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಸೂಚನೆ. ವಿಳಂಬಕ್ಕೆ ಮಳೆಗಾಲದ ಅವಧಿ ಕಾರಣ.

*ಶಿರಾಡಿ ಘಾಟಿಯಲ್ಲಿ ಘನ ವಾಹನ ಇನ್ನೂ 2 ತಿಂಗಳ ಓಡಾಟ ನಿಲುಗಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಹಾಸನ ಮತ್ತು ಮಂಗಳೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ.ಲಘು ವಾಹನಗಳಿಗೆ ಪ್ರವೇಶದ ಅವಕಾಶ.

* ಸುಬ್ರಹ್ಮಣ್ಯ ಸಂಪರ್ಕ ರಸ್ತೆಗಳ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆದು ಚರ್ಚೆ.

* ರಸ್ತೆ ವಿಚಾರದಲ್ಲಿ ರಾಜ್ಯಕ್ಕೆ ಅನುದಾನ ಕಡಿಮೆಯಾಗದಂತೆ ತರಿಸಲಾಗಿದೆ.ಅತ್ಯಂತ ಮುತುವರ್ಜಿಯಿಂದ ಕೆಲಸ.

*ರೈಲ್ವೇಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿರುವುದು ನಿಜ.ಈ ಬಗ್ಗೆ ಲಾಲೂ ,ವೇಲು ಅವರಿಗೆ ಹೇಳಿದ್ದೇನೆ.ಸರಿಪಡಿಸಲು ಒತ್ತಾಯಿಸಿದ್ದೆನೆ.

*ರೈಲ್ವೇ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ

* ಮಳೆಗಾಲದ ನಂತರ ಬೆಂಗಳೂರು-ಮಂಗಳುರು ರೈಲು ಓಡಾಟ.ಅದುವರೆಗೆ ಈಗಿನಂತೆ ಮಂಗಳೂರು-ಬೆಂಗಳೂರು ರೈಲು ಓಡಾಟ.

ಈ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಇಲಾಖಾ ಮುಖ್ಯ ಅಭಿಯಂತರ ಬಿಸ್ಸೇ ಗೌಡ ,ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು

ಕೊನೆಯ ಮಾತು : ಮಾಧ್ಯಮದ ಮಿತ್ರರೊಬ್ಬರು ಸಚಿವರಲ್ಲಿ ರಾಜ್ಯಕ್ಕೆ ರಸ್ತೆಯ ಬಗ್ಗೆ ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂದು ಕೇಳಿದರು.ಸಚಿವರು ಮೆಲ್ಲನೆ ಹೇಳಿದ್ದು ಈಗ ಲೆಕ್ಕ ಇಲ್ಲ ಅದನ್ನು ಬೆಂಗಳೂರಲ್ಲಿ ಪ್ರೆಸ್ ನಲ್ಲಿ ಹೇಳ್ತೇನೆ ಎಂದರು.
ಮಿತ್ರರೊಂದಿಗೆ ಮತ್ತೆ ನಾವು ಮಾತನಾಡಿದೆವು ಅಷ್ಟೂ ಅನುದಾನ ಬಂದಿದೆಯಂತೆ....! ಹಾಗಾಗಿಯೇ ರಾಜ್ಯದ ರಸ್ತೆ ಇಷ್ಟೂ ಸೂಪರ್....!?

03 ಫೆಬ್ರವರಿ 2008

ಅಪ್ಪ - ಮಕ್ಕಳ ರಾಜಕೀಯ...!



ಇದು ನಮ್ಮಲ್ಲಿ ಮಾತ್ರವಲ್ಲ... ಅಲ್ಲೂ ಇದೆ..!

ರಾಜಕೀಯದ "ರಣ"ರಂಗ... ಎಲ್ಲರೂ ಇಲ್ಲಿ ಸಮಾನರು.ಈಗ ಹೊಲಸು ..ಗಬ್ಬೆದ್ದು ಹೋಗಿದೆ.

ಇಲ್ಲಿ ತಂದೆಯನ್ನು ಮಗ ಹೀಯಾಳಿಸಲೂ ಬಹುದು ಮಗನನ್ನು ತಂದೆ ಜರಿಯಲೂ ಬಹುದು.ಆದರೆ "ತನ್ನ ತಂದೆಯನ್ನೇ ಒಪ್ಪಿಕೊಳ್ಳದಿರುವುದು" ಎಂತಹ ರಾಜಕೀಯ.. ಅದರ ಅರ್ಥವೇನು.?.ತಾಯಿಯ ಮಾತಿನ ಮೇಲೆ ಅಂಬಿಕೆ ಇಲ್ಲ ಅಂತಲೇ ಅಲ್ವಾ.?ಇಂಥವರೂ ರಾಜಕೀಯದಲ್ಲಿ ಇರುತ್ತಾರಾ..!?.ಈ ಮಟ್ಟಕ್ಕೆ ರಾಜಕೀಯ ಇಳಿದು ಬಿಟ್ಟಿತಾ..!?.

ಘಟನೆ ಇದು...

ಇತ್ತೀಚೆಗೆ ಕೇರಳದಲ್ಲಿ ನ್ಯಾಶನಲ್ ಕಾಂಗ್ರೇಸ್ (NCP)ಪಾರ್ಟಿಯ ‍ ಸಭೆ ನಡೆಯಿತು.ಅದರಲ್ಲಿ ಆ ಪಕ್ಷದ ಮುಖಂಡ ಮುರಳೀಧರನ್ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹೇಳಿದರು " ನಾನು ಅವರನ್ನು(ಕರುಣಾಕರನ್) ತಂದೆ ಎಂದು ಒಪ್ಪಿಕೊಳ್ಳಲಾರೆ" ಎಂದಿದ್ದರು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

ಕರುಣಾಕರನ್ ಅವರದ್ದು ಕೇರಳದ ರಾಜಕೀಯದಲ್ಲಿ ಚಾಲ್ತಿಯಲ್ಲಿರುವ ಹೆಸರು.ಅವರ ಪುತ್ರ ಮುರಳೀಧರನ್.ಕಾಂಗ್ರೇಸ್ ಪಕ್ಷದಲ್ಲೇ ಇದ್ದ ಕರುಣಾಕರನ್ ತಮ್ಮ ಪುತ್ರನನ್ನೂ ಅದೇ ಪಕ್ಷದಲ್ಲಿ ಬೆಳೆಸಿದರು.ಕೆಲವೊಂದು ಬದಲಾವಣೆಗಳಿಂದ ಎನ್ ಸಿ ಪಿ (NCP)ಎಂಬ ಪಕ್ಷವನ್ನು ಸೇರಿ ಕೇರಳದಲ್ಲಿ ಮತ್ತೆ ಮಿಂಚಿದರು.ಆ ಬಳಿಕ ವೈಯಕ್ತಿಕ ವಿಚಾರದಲ್ಲಿ ಅವರ ಪುತ್ರ ಮುರಳೀಧರನ್ ಅವರೊಂದಿಗೆ ಜಗಳ ಏರ್ಪಟ್ಟಿತು.ಕೊನೆಗೆ ಮತ್ತೆ ಕಾಂಗ್ರೇಸ್ ಪಕ್ಷಕ್ಕೆ ಸೇರಿದರು.ಈಗ ಕರುಣಾಕರನ್ ಪುತ್ರ ಮುರಳೀಧರನ್ NCP ಮುಖ್ಯ ನಾಯಕ.ಈ ಹಿನ್ನೆಲೆಯಲ್ಲಿ ಮುರಳೀಧರನ್ ಅವರು ಇತ್ತೀಚೆಗೆ ನಡೆದ ಪಕ್ಷದ ಸಭೆಯನ್ನುದ್ದೇಶಿಸಿ ಕರುಣಾಕರನ್ ಅವರು ನಮ್ಮ ಪಕ್ಷದಲ್ಲಿ ಸಮಾಲೋಚಿಸದೇ ಕಾಂಗ್ರೇಸ್ ಸೇರಿದರು ಅದರಿಂದ ನಮಗೇನು ನಷ್ಟವಿಲ್ಲ, ಕಾಂಗ್ರೇಸಿಗೂ ಲಾಭವಿಲ್ಲ.ಈಗ ನಾನು ಅವರನ್ನು ತಂದೆ ಎಂದೂ ಒಪ್ಪಿಕೊಳ್ಳಲಾರೆ" ಎಂದು ಹೇಳಿದರು.

ಇದು ವಿವಾದ....

ಈಗ ವಿವಾದದ ಹೊರಗೆ ಬಂದು ನೋಡೋಣ...

ನಮ್ಮಲ್ಲೂ ತಂದೆ - ಮಕ್ಕಳ ರಾಜಕೀಯವಿದೆ.ಆದರೆ ಆ ಥರದ್ದಲ್ಲ.ಮಗನನ್ನೇ ಅಧಿಕಾರಕ್ಕೆ ತರಬೇಕೆನ್ನುವ ಒಂದೇ ಒಂದು ಆಸೆ.ತಂದೆಗೆ ಅಧಿಕಾರ ಚಲಾಯಿಸುವ ಬಯಕೆ.ಮಗನನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕೆಂಬ ಬಯಕೆ.ಈಗ ಅದು ಬಯಲಾಗಿ ಬಿಟ್ಟಿದೆ.ಇದೊಂದು ಸಾರ್ವಕಾಲಿಕ ಸತ್ಯ.ಅದು ತಪ್ಪೂ ಅಲ್ಲ ಬಿಡಿ. ಆ ಅಧಿಕಾರದ ಆಸೆಗಾಗಿ ತಂದೆಯನ್ನು ಮಗ... ಮಗನನ್ನು ತಂದೆ ಸಾರ್ವಜನಿಕವಾಗಿ ಹಾಗೆ...ಹೀಗೆ.. ಅಂತ ಹೇಳುವುದಿದೆ .. ಆದರೆ ಇದು ಹಾಗಲ್ಲ ತಂದೆಯನ್ನೇ ಒಪ್ಪಿಕೊಳ್ಳುವುದಿಲ್ಲ ಅಂತ ಹೇಳುವುದರ ಅರ್ಥವೇವೇನು..? ಅದರ ಹಿಂದೆ ಹತ್ತಾರು ಪ್ರಶ್ನೆ ಹುಟ್ಟುತ್ತವೆ ಉತ್ತರಕ್ಕಾಗಿ ತಡಕಾಡಬೇಕಾಗಬಹುದು..!.

ಜಗತ್ತಿನ ಇತರೆಲ್ಲೆಡೆ ನೋಡಿದರೂ ಭಾರತದಷ್ಟು ಹೀನ ರಾಜಕೀಯ ಸಿಗಲಾರದೇನೋ?.ಇಲ್ಲಿ ಮಾಡಬೇಕಾದ್ದನ್ನೆಲ್ಲಾ ಬಿಟ್ಟು ಮಾಡಬಾರದ್ದನ್ನೆಲ್ಲಾ ರಾಜಕಾರಣಿಗಳು ಮಾಡಿಬಿಡುತ್ತಾರೆ..!ಅಭಿವೃದ್ಧಿಯ ಕಡೆಗೆ ವಾಲಿ ಕಮಿಶನ್ ಹೊಡೆದುಬಿಡುತ್ತಾರೆ.ಇದೆಲ್ಲಾ ರಾಜಕೀಯ ಸ್ವಾಮಿ.... ರಾಜಕೀಯ... ಅದೆಲ್ಲವೂ ಅಧಿಕಾರಕ್ಕಾಗಿ...!!

ಇತ್ತೀಚೆಗೆ ಕೇರಳದ ಜನ ಪತ್ರಿಕೆಯಲ್ಲಿ ಅಪ್ಪ-ಮಕ್ಕಳ ರಾಜಕೀಯದ ಸುದ್ದಿ ಓದುವುದನ್ನು ಬಿಟ್ಟಿದ್ದಾರಂತೆ..! ಟಿ.ವಿಯಲ್ಲಿ ಧಾರವಾಹಿಯಂತೆ ಬರುತ್ತಿದೆಯಂತೆ ಹಾಗಾಗಿ ಅದು Common ಎನ್ನುತ್ತಾರೆ.ಮೊನ್ನೆ ಮೊನ್ನೆ ನಮ್ಮಲ್ಲೂ ಆಗಿತ್ತಲ್ಲಾ ಹಾಗೆ...!!

ಈಗ ಹೊಸ ಮಾತು : "ರಾಜಕೀಯವನ್ನು ನಂಬಿದವ ಕೋಡಂಗಿ : ಮಾಡಿದವನ 'ಪಟ್ಟ'(ಅ)ಭದ್ರ..."!

02 ಫೆಬ್ರವರಿ 2008

ವೀರಪ್ಪ ಮೊಯಿಲಿಯವರಿಂದ "ಪುಣ್ಯ"ಕೋಟಿಯ "ಕತೆ".....




ಇದು ದ.ಕ ಜಿಲ್ಲಾ ಮಟ್ಟದ ಯುವಜನ ಮೇಳ 2007-08 ರ ಉದ್ಘಾಟನಾ ಸಮಾರಂಭ.

ನಡೆದದ್ದು ಸುಳ್ಯ ತಾಲೂಕಿನ ದುಗ್ಗಲಡ್ಕದ ಸರಕಾರಿ ಪ್ರೌಢಶಾಲಾ ವಠಾರ.ಫೆ.2 ರಂದು ಶನಿವಾರ.ಸಮಯ ಬೆಳಗ್ಗೆ 11 ರ ಹೊತ್ತು.

ಯುವಜನ ಮೇಳವನ್ನು ಉದ್ಘಾಟಿಸಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ,ಭಾರತ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ವೀರಪ್ಪ ಮೊಯಿಲಿಯವರು.ನಂತರ ಅತ್ಯಂತ ಮೋಡಿಯ ಮಾತುಗಳನ್ನಾಡಿದರು.ಹೌದು..ಹೌದು.. ಎಂಬಂತೆ ಜನ ತಲೆದೂಗಿದರು.ಇಡೀ ಭಾಷಣ ಇದ್ದದ್ದು 13 ನಿಮಿಷ.ಭಾಷಣದುದ್ದಕ್ಕೂ ಅವರ ಮಾತಿನಲ್ಲಿ ಶಬ್ದಗಳೊಂದಿಗಿನ ಚೆಲ್ಲಾಟ ಖುಷಿಯಾಗಿತ್ತು.ನಡು ನಡುವೆ ಕೆಲವು ತತ್ತ್ವಗಳನ್ನು ಹೇಳಿದರು.ಕೊನೆಗೆ ಅವರು ಸಭೆಯ ಮುಂದೆ ತೆರೆದಿಟ್ಟದ್ದು "ಪುಣ್ಯ"ಕೋಟಿಯ "ಕತೆ".... ಗೋವಿನ ಕತೆ... ಅದರ ಸಾರಾಂಶ ಹೀಗೆ... ಅದನ್ನು ಅವರ ಮಾತಿನಲ್ಲೇ ಹೇಳುವುದಾದರೆ....

ನಾನು ಓದುತ್ತಿದ್ದಾಗ ಪುಣ್ಯಕೋಟಿಯ ಕತೆ ಇತ್ತು.ಈಗ ಉಂಟಾ ಇಲ್ವಾ ಗೊತ್ತಿಲ್ಲ.. ನಾನು ಕತೆಯನ್ನು ಹೀಗೆ ಕಂಡುಕೊಂಡೆ....

ಹುಲಿ - ಆಕಳನ್ನು ಹಿಡಿದು ತಿನ್ನುವುದು ಪ್ರಕೃತಿ : ಆಕಳ ಸತ್ಯವನ್ನು ಹುಲಿ ಮೆಚ್ಚಿರುವುದು ಸಂಸ್ಕೃತಿ

ಆಕಳು ತನ್ನ ಕರುವಿನ ಬಗ್ಗೆ ಹೇಳಿಕೊಂಡದ್ದು ಪ್ರಕೃತಿ ; ಹುಲಿ ಕನಿಕರಿಸಿದ್ದು ಸಂಸ್ಕೃತಿ

ಒಂದನ್ನೊಂದು ತಾನು ತಿಂದು ಬದುಕುವುದು ಸಾವು - ಇದು ನಾಗರೀಕತೆಯ ಸಾವು,ಸಂಸ್ಕೃತಿಯ ನಾಶ

ಒಂದನ್ನೊಂದು ತಿಳಿದು ಬದುಕುವುದು ನಿಜವಾದ ಬದುಕು.........

ಹೀಗೆ ವ್ಯಾಖ್ಯಾನಿಸಿದ ಅವರು ಇಂದು ಕತೆಗಳನ್ನು ಕತೆಗಳಾಗಿ ಅನುಭವಿಸುವುದಲ್ಲ ಅದರಾಚೆಗಿನ ಸತ್ಯವನ್ನು ತಿಳಿಯಬೇಕು.ತಪ್ಪನ್ನು ಮಾಡುವುದು ವಿಕೃತಿ.. ನಾವು ಇದ್ದದ್ದೇ ಸರಿಯಲ್ಲ .. ತಿದ್ದುವುದು ಸಂಸ್ಕೃತಿ.. ಅದು ಇಂತಹ ಸಮಾರಂಭದ ಮೂಲಕ ಯುವಕರು ಅರಿತುಕೊಳ್ಳಬೇಕು ಎನ್ನುತ್ತಾ ಕೊನೆಯಲ್ಲಿ ಭರವಸೆಯೊoದನ್ನು ನೀಡಿ ಭಾಷಣ ಮುಗಿಸಿದರು.ನಂತರ ಸಮಾರಂಭದಿಂದ ನಿರ್ಗಮಿಸಿದರು ಕೂಡಾ.....!

ಮೊಯಿಲಿಯವರಿಗಿಂತ ಮೊದಲು ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಸ್ಥಾಪಕಾಧ್ಯಕ್ಷ ಡಾ.ಕುರುಂಜಿ ವೆಂಕಟ್ರಮಣ ಗೌಡ ಯುವಜನಮೇಳದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ನಂತರ ಮಾತನಾಡಿ ಪಂಚಸೂತ್ರಗಳಿಂದ ಆರಂಭಿಸಿ ವಿದ್ಯೆಯ ಮಹತ್ವವನ್ನು ಹೇಳಿ ತಮ್ಮ ಸಾಧನೆಯನ್ನು ಹೇಳಿದರು.

ಸಭಾಧ್ಯಕ್ಷತೆಯನ್ನು ಜಿ.ಪಂ ಉಪಾಧ್ಯಕ್ಷೆ ಜಯಶ್ರೀ ಕೋಡಂದೂರು ವಹಿಸಿದ್ದರು .ವೇದಿಕೆಯಲ್ಲಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ,ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್ ಸದಸ್ಯ ಚಂದ್ರಕುಮಾರ್,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ,ಸುಳ್ಯದ ಮೀನಾಕ್ಷಿ ಗೌಡ,ರಾಜ್ಯ ಯುವಪ್ರಶಸ್ತಿ ವಿಜೇತ ಟಿ.ಎಂ.ಶಹೀದ್,ಸುಳ್ಯ ತಾ.ಪಂ ಅಧ್ಯಕ್ಷ ಶಂಕರ್ ಪೆರಾಜೆ,ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ವಿಶ್ವನಾಥ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ಸಿ.ರಮೇಶ್, ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮವು ಭಾನುವಾರವೂ ನಡೆಯುತ್ತದೆ.

ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯತ್,ಯುವಜನ ಸೇವಾ ಕ್ರೀಡಾ ಇಲಾಖೆ,ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಸುಳ್ಯ,ಮಿತ್ರ ಯುವಕ ಮಂಡಲ ಕೊಯಿಕುಳಿ,ನವೋದಯ ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ನಡೆಸಿದ್ದವು.

ವಳಲಂಬೆ ಜಾತ್ರೆ..

ದೇವರ ಬಲಿ ಉತ್ಸವ



ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.೧ ರಂದು ವಾರ್ಷಿಕ ಜಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ ನಡೆಯಿತು.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡರು.

ಈ ದೇವಸ್ಥಾನವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ನಾಗ ದೋಷ ನಿವಾರಣೆಗೆ ಪ್ರಸಕ್ತವಾದ ಸ್ಥಳವಾಗಿದೆ.ಇಲ್ಲಿ ಆಶ್ಲೇಷ ಬಲಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ.ಸದ್ಯ ಈ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಮುಂದೆ ನೂತನ ಸಭಾಭವನ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಭಕ್ತಾಭಿಮಾನಿಗಳ ಸಹಕಾರವನ್ನು ಆಡಳಿತವು ಕೋರಿದೆ.

ದೇವಳದ ಸಂಪರ್ಕಕ್ಕೆ : 08257-282600

01 ಫೆಬ್ರವರಿ 2008

ಮೂಕ ಪ್ರಾಣಿಯ ವೇದನೆ....

ನೀನಾರಿಗಾದೆಯೋ ಎಲೆ ಮಾನವ....





ಸಮಯ ಸಂಜೆ ಗಂಟೆ 5.30 ಕಳೆದಿತ್ತು.

ಕೆಲಸದವರು ಮನೆಗೆ ತೆರಳುವ ಹೊತ್ತಾಗಿತ್ತಾದರೂ ನಿಂತಿದ್ದರು.ಯಾವುದೇ ಪಶುವೈದ್ಯರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ.ಅಂತೂ 5.35 ಕ್ಕೆ ಒಬ್ಬರು ವೈದ್ಯರು ಸಿಕ್ಕರು."ಸರ್ ..... ಕೂಡಲೇ ಬನ್ನಿ ಹಸುವಿಗೆ ಹುಷಾರಿಲ್ಲ ........ "ಎಂದು ದೂರವಾಣಿಯಲ್ಲಿ ಹೇಳಿ ಫೋನು ಕುಕ್ಕಿಯಾಯಿಗಿತ್ತು. ಮತ್ತೆ ನೆನಪಾಯಿತು.ಡಾಕ್ಟರ್ ಅವರ ಬೈಕ್ ಇಂದಿಲ್ಲ...! ಕೂಡಲೇ ಮತ್ತೆ ದೂರವಾಣಿ ರಿಂಗಿಸಿದಾಗ ಅತ್ತ ಕಡೆಯಿಂದ ಉತ್ತರವಿರಲಿಲ್ಲ.ಹಾಗಾಗಿ ಬೈಕ್ ಏರಿ ಹೊರಟಾಯಿತು.ಶಾಪಿಗೆ ತಲಪಿದಾಗ ಅವರು ಇನ್ನೊಂದು ಕಡೆ ಹೋಗಿಯಾಗಿತ್ತು...!?.ಅಂತೂ 5 ನಿಮಿಷ ಉದ್ವೇಗದಿಂದ ನಿಂತಿದ್ದಾಗ ವೈದ್ಯರು ಬಂದರು.ತಕ್ಷಣವೇ ಡಾಕ್ಟರ್ ಬೇರೆಯವರ ಬೈಕಲ್ಲಿ ಹೊರಟರು.ಹಸು ಆಗಲೂ ಮಲಗಿಕೊಂಡೆ ಇತ್ತು.ಹಟ್ಟಿಗೆ ಬಂದ ಡಾಕ್ಟರ್ ಟ್ರೀಟ್ ಮಾಡಲು ಆರಂಭಿಸಿದರು.ಒಂದು 5 ನಿಮಿಷವಾಗಿರಬಹುದು,ಕ್ಯಾಲ್ಸಿಯಂ ನೀಡುತ್ತಲೇ ಇದ್ದರು ಹಸು ಒಮ್ಮೆ ಅಂಬಾ..... ಎಂದಿತು.....!!. ವೈದ್ಯರು ಆಗಲೂ ಇನ್ನೊಂದು ಔಷಧಿಗೆ ತಯಾರಿ ನಡೆಸುತ್ತಿದ್ದರು.ನಮ್ಮ ಆಪ್ತ [ಕಾರ್ಯದರ್ಶಿ] ಕೆಲಸಗಾರ ಶ್ರೀಧರ ಕಣ್ಣ ಸನ್ನೆ ಮಾಡಿದ. ವೈದ್ಯರು ಹಸುವಿನ ಹೊಟ್ಟೆ,ಎದೆಯನ್ನು ಅಲುಗಾಡಿಸಿದರು...... ಮುಖ ನೋಡಿ ಛೆ....!! ಅಂದರು. ಮತ್ತೆ ಹೇಳಿದರು no more..! ಇಲ್ಲಿಗೆ ಹಸುವಿನ ಜೀವ ಹಾರಿಯಾಗಿತ್ತು. ವೈದ್ಯರ ಮುಖದಲ್ಲಿ ನೋವಿನ ಛಾಯೆ ... ತಂದೆಯವರು ಆಗ ತಾನೆ ಹೇಳಿದ್ದರು "ಹಸು ಈಗ ಎದ್ದು ನಿಲ್ಲುತ್ತೆ..." ಅಷ್ಟೂ ವಿಶ್ವಾಸವಿತ್ತು.. ಮನೆಮಂದಿಗೆ, ಕೆಲಸಗಾರರ ಮುಖದಲ್ಲೂ ವಿಷಾದದ ಛಾಯೆ.

ನಾನು ಇಷ್ಟೆಲ್ಲಾ ಹೇಳಿದ್ದು ಒಂದು "ಮೂಕ ಪ್ರಾಣಿ"ಯ ವೇದನೆಯೊಂದರ ಕತೆ.ನಮ್ಮ ಮನೆಯಲ್ಲೇ ಈ ಘಟನೆ ನಡೆದಿತ್ತು.ಆ ನೋವು ಈಗಲೂ ಮನಸ್ಸಿನಲ್ಲಿದೆ.ಏಕೆಂದರೆ ನಾವೆಲ್ಲಾ ಮಾತನಾಡುವ ಪ್ರಾಣಿಗಳು... ಅವುಗಳು ಪಾಪ ....! ಎಷ್ಟು ನೋವು ಅವುಭವಿಸಿರ ಬಹುದಲ್ವಾ..? ಅದು pregnent ಹಸು ಬೇರೆ. ಆ ಹಸು ಸತ್ತಾಗ ನಮಗೆಲ್ಲಾ ಅನಿಸಿದ್ದು .. ಛೆ ಅದು ಇದ್ದಿದ್ದರೆ .. ಅಷ್ಟು ಹಾಲು ಸಿಗುತ್ತಿತ್ತು..... ಇಷ್ಟು ಲಾಭ ಆಗುತ್ತಿತ್ತು... ಅಂತ ... ಅದು ಸಹಜವೇ. ನಾವು ಮನುಷ್ಯರಲ್ವಾ.!. ಆದ್ರೆ ಆ ದನದ ನೋವಿನ ಬಗ್ಗೆ....!?.

ಆ ಮೂಕ ಪ್ರಾಣಿಗೆ ಸಾಯುವ 3 ದಿನದ ಹಿಂದೆ ಜ್ವರ ಕಾಣಿಸಿಕೊಡಿತು.ತಕ್ಷಣವೇ ಪ್ರಮುಖ ಪಶು ವೈದ್ಯರೊಬ್ಬರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿತ್ತು.ನಂತರ ಜ್ವರ ಕಡಿಮೆಯಾಗಿತ್ತಾದರೂ ತುಂಬಾ ನಿಶ್ಯಕ್ತಿಯಿಂದ ಬಳಲುತ್ತಿತ್ತು. ಆದರೂ ಚಿಕಿತ್ಸೆ ನೀಡುತ್ತಲೇ ಇತ್ತು.ಹಾಗೇ ದಿನ 3 ಆಗಿತ್ತು.ಕೊನೆಗೆ ಸಾವು ಸಂಭವಿಸಿತು.ಆಗ ತಿಳಿದದ್ದು ಅದಕ್ಕೆ "ಬೆಬಿಸಿಯಾ" ಎನ್ನುವ ಜ್ವರ.ಇದು ಉಣ್ಣಿಯಿಂದ ಹರಡುವ ಜ್ವರ.ಮಲೆನಾಡಿನ ಭಾಗದಲ್ಲಿ ಈ ಜ್ವರವಿದೆ ಅಂತ ನಮಗೂ ತಿಳಿದಿತ್ತು. ಈ ಮೊದಲು ನಮ್ಮಲ್ಲೆಲ್ಲಾ ಹಸುಗಳಿಗೆ ಬಂದಿತ್ತು... ನಾನೂ ಆ ಬಗ್ಗೆ ಲೇಖನವನ್ನೂ ಬರೆದಿದ್ದೆ. ಆದರೆ ಏನು ಈ ಬಾರಿ ನಮಗೆ ಆ ಜ್ವರದ ಲಕ್ಷಣಗಳೇ ತಿಳಿಯಲಿಲ್ಲ...!?.

ಪಾಪ ಹಸುಗಳು..!ಮೂಕಪ್ರಾಣಿಗಳ ವೇದನೆ ಏನಿರಬಹುದು?.ತಮ್ಮ ನೋವು ನಲಿವುಗಳನ್ನು ಅವು ಹಂಚಿಕೊಳ್ಳುವ ರೀತಿ.... ನೋವು ಅವುಭವಿಸುವ ರೀತಿ ..? ಅವುಗಳು ಪಡುವ ಯಾತನೆ..?.ವೈದ್ಯರುಗಳು Trail and error method ನಲ್ಲಿ ಔಷಧಿಯನ್ನು ನೀಡಬೇಕು.ಅವರ ಪ್ರತಿದಿನದ ಅನುಭವವನ್ನು ಪ್ರಯೋಗಿಸಿ ನೋಡಬೇಕು..!ಕೊನೆಗೆ ಯಾವುದಾದರೊಂದು ಔಷಧಿಯಲ್ಲಿ ಗುಣವಾಗುತ್ತದೆ.ಗೋವುಗಳು ನಮಗೆ ಮಾತೃಸಮಾನ ಅವಳು "ದೇವತೆ" ಅವಳಿಗೆ ಹೀಗೆ ನೋವುಗಳು ಬರಬಾರದು ಅಂತ ನಾವೆಲ್ಲಾ ಮನಸ್ಸಿನಲ್ಲಿ ಧ್ಯಾನಿಸುತ್ತೇವೆ... ಆದರೂ ಹೀಗೆಲ್ಲಾ ಒಮ್ಮೊಮ್ಮೆ ಆಗಿ ಬಿಡುತ್ತದೆ...?

ನಾವಾದರೂ ಮಾನವರು ನಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳಲು ಭಗವಂತ ಎಷ್ಟೊಂದು ಮಾಧ್ಯಮಗಳನ್ನು ,ಅವಕಾಶಗಳನ್ನು ಒದಗಿಸಿದ್ದಾನೆ...! ಆದರೂ ನಾವೇಕೆ ಹೀಗೆ..? ಆ ನೋವು-ನಲಿವುಗಳ ಅಭಿವ್ಯಕ್ತದ ನಡುವೆ ಮದ-ಮತ್ಸರಗಳು ನಮ್ಮ ನಡುವೆಯೇ ತಾಂಡವವಾಡುತ್ತವೆ..?ಇನ್ನೊಬ್ಬನ ಅವನತಿಯಲ್ಲೇ ಏಕೆ ಸಂತೋಷ ಪಡುತ್ತೇವೆ.. ಏಕೆ ಅವನ ಕಾಲೆಳೆಯುವ ಪ್ರಯತ್ನ ನಡೆಸುತ್ತೆವೆ.ಇದನ್ನೆಲ್ಲಾವೀಕ್ಷಿಸುವ ಭಗವಂತ ಅಂದರೆ"ಸೃಷ್ಠಿ" ನಮ್ಮನ್ನೆಲ್ಲಾ "ಗೋವು"ಗಳಂತೆ ಮೂಕರನ್ನಾಗಿಸಿದರೆ..?ಗೋವುಗಳಿಗೆ ಮಾತು ನೀಡಿದರೆ..?ಹೀಗೆ ನನ್ನಲ್ಲಿ ಚಿಂತನೆ ಹುಟ್ಟಿದ್ದು ನಮ್ಮನೆಯ ಗೋವೊಂದು ಸತ್ತಾಗ.ಆದರೆ ಆ ಚಿಂತನೆ ಕಾರ್ಯರೂಪಕ್ಕೆ ಬರದು ಎನ್ನುವ ಕಲ್ಪನೆ ನನಗಿದೆ.ಆದರೂ ಅತ್ಯಂತ ಶ್ರೇಷ್ಠ ಜೀವಿಯಾಗಿರುವ ಮನುಷ್ಯ ಏಕೆ ಹೀಗೆ ಎನ್ನುವ ನನ್ನ ಏಕಾಂತದ ಧ್ಯಾನಕ್ಕೆ ಉತ್ತರವೇ ಸಿಕ್ಕಿಲ್ಲ.

ನನಗಂತೂ ನನ್ನ ಕುಟುಂಬದವರು,ನನ್ನ ಮಿತ್ರರು,ನನ್ನ ಬಂಧುಗಳು ಎತ್ತರೆಕ್ಕೆ ಬೆಳೆದಷ್ಟು ,ಉನ್ನತ ಹುದ್ದೆಯಲ್ಲಿ ಸಾಗಿದಷ್ಟು ಖುಷಿಯಾಗ್ತಿದೆ.ಅವರೆಲ್ಲಾ "ನನ್ನವರಲ್ಲಾ" ಎನ್ನುವ ಅವ್ಯಕ್ತ ಭಾವನೆ ನನ್ನಲ್ಲಿದೆ.ಆದರೆ ಅದುವೇ ದೂರವಾದಾಗ ವೇದನೆಯಾಗುತ್ತದೆ.ಗೋವಿನ ವಿಚಾರದಲ್ಲೂ ನನಗಾದದ್ದೂ ಅದೇ.. ಛೇ ಹಾಗಾಗಬಾರದಿತ್ತು.ಆದರೆ ಇನ್ನೇನು....!?