23 ಏಪ್ರಿಲ್ 2010

ಎಲ್ಲವೂ ಕಲುಷಿತ . . .!




ಬೇಸಗೆಯ ಈ ಸಮಯದಲ್ಲಿ ಎಲ್ಲೆಲ್ಲೂ ಕುಡಿಯುವ ನೀರಿಗೆ ತತ್ವಾರ.ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆಯು ಇದ್ದಕ್ಕಿದ್ದಂತೆ ಕಲುಷಿತವಾಗಿ ಹರಿಯುವುದಕ್ಕೆ ಶುರುವಾಗಿದೆ.ಜನ ನೀರಿಗಾಗಿ ಪರದಾಟ ನಡೆಸುವಂತಾಗಿದೆ.ಈ ತೊಂದರೆಗೆ ಕಾರಣರದವರು ಗುಂಡ್ಯ ವಿದ್ಯುತ್ ಯೋಜನೆಯವರು.ಇದೀಗ ಈ ಸಮಸ್ಯೆಗೆ ಮುಕ್ತಿಯೇ ಇಲ್ಲವಾಗಿದೆ.

ಇಲ್ಲಿನ ನದಿಯಲ್ಲಿ ನೀರು ಹೀಗೆ ಕೆಂಪು ಕೆಂಪಾಗಿ ಹರೀತಾ ಇದೆ.ಇದು ಮಳೆ ಬಂದ ಕಾರಣದಿಂದಾಗಿ ಅಂತ ನೀವು ಭಾವಿಸಿದ್ರೆ ತಪ್ಪಾದೀತು.ಈ ಬಿರು ಬೇಸಗೆಯಲ್ಲಿ ಹೀಗೆ ಕೃತಕವಾಗಿ ಮಳೆ ಲಕ್ಷಣ ಸೃಷ್ಢಿಯಾಗೋದಿಕ್ಕೂ ಕಾರಣಾನೂ ಇದೆ.ಅಷ್ಟಕ್ಕೂ ಇಂತಹ ಕಲುಷಿತ ನೀರು ಹರೀತಾ ಇರೋದು ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆಯಲ್ಲಿ. ಪಶ್ಚಿಮ ಘಟ್ಟದ ಸಾಲಿನಿಂದ ಶುಭ್ರವಾಗಿ ಜಲಧಾರೆಯಾಗಿ ಹರಿದು ಬರೋ ಗುಂಡ್ಯ ನದಿಗೆ ನಿರ್ಮಿಸಿರೋ ಗುಂಡ್ಯ ವಿದ್ಯುತ್ ಯೋಜನೆಯ ಕೆಂಪುಹೊಳೆ ಹಾಗೂ ಐಪಿಸಿ‌ಎಲ್ ಕಂಪನೆಯ ವಿದ್ಯುತ್ ಯೋಜನೆಯಗಳು ಈ ಅವಾಂತರವನ್ನು ಮಾಡ್ತಿವೆ. ಸಾರ್ವಜನಿಕರಿಗೆ ಕಿರುಕುಳವನ್ನು ಕೊಡ್ತಿವೆ.ಸದ್ಯ ಡ್ಯಾಂ ಬರಿದಾಗಿರೋ ಕಾರಣದಿಂದ ಕಾಡಿನಿಂದ ಬರೋ ಶುಭ್ರ ನೀರನ್ನು ಬಳಸಿಕೊಂಡು ವಿದ್ಯುತ್ ಯೋಜನೆಯ ಡ್ಯಾಂನಲ್ಲಿ ಅಪಾರವಾಗಿ ತುಂಬಿರೋ ಹೂಳನ್ನು ತೆಗೆಯೋ ಕೆಲ್ಸ ಮಾಡ್ತಿವೆ.ಇದಕ್ಕಾಗಿ ಹಿಟಾಚಿ ಯಂತ್ರವನ್ನು ಬಳಸಲಾಗಿದೆ.ಡ್ಯಾಂನಲ್ಲಿರೋ ಹೂಳನ್ನು ನೀರಿನೊಂದಿಗೆ ಮಿಶ್ರ ಮಾಡಿ ಕಳೆದ ಇಪ್ಪತ್ತು ದಿನಗಳಿಂದ ನದಿಯಲ್ಲಿ ಬಿಡಲಾಗುತ್ತಿದೆ.ಹೀಗಾಗಿ ಇಡೀ ನೀರು ಕಲುಷಿತಗೊಂಡಿದೆ. ಹೀಗಾಗಿ ಕುಡಿಯುವ ನೀರಿಗೆ , ಕೃಷಿಗೆ ಇದೇ ನದಿಯನ್ನು ಆಶ್ರಯಿಸಿರೋ ಗುಂಡ್ಯದ ಜನ ಪರದಾಟ ನಡೆಸುವಂತಾಗಿದೆ. ಈ ಕಲುಷಿತ ನೀರು ಗುಂಡ್ಯದಿಂದ ಆರಂಭಗೊಂಡು ಸುಮಾರು 25 ಕಿಲೋ ಮೀಟರ್ ದೂರದವರೆಗೆ ಸಾಗುತ್ತಿದೆ.ಇಡೀ ನೀರು ಮಣ್ಣು ಹಾಗು ಕೆಸರಿನಿಂದ ಕೂಡಿದೆ.ಕಳೆದ ವರ್ಷವೂ ಇದೇ ರೀತಿ ಈ ವಿದ್ಯುತ್ ಯೋಜನೆಯ ಸಿಬ್ಬಂದಿಗಳು ಮಾಡಿದ್ದಾರೆ.ಹೀಗಾಗಿ ಆಕ್ರೋಶಿತರಾದ ಜನ ಒಂದೋ ಡ್ಯಾಂನವರು ಹೀಗೆ ಉಪದ್ರ ಕೊಡಬಾರದು.ಇನ್ನೂ ಹೀಗೇನೇ ಮಾಡಿದ್ರೆ ಡ್ಯಾಂಗೆ ಡ್ಯಾಮೇಜ್ ಮಾಡುವುದಾಗಿ ಹೇಳಿದ್ದಾರೆ.


ಇಲ್ಲಿನ ಅಣೆಕಟ್ಟಿನದ್ದು ಒಂದೆರಡು ಸಮಸ್ಯೆಯಲ್ಲ.ಪದೇ ಪದೇ ಇಂತಹ ಕಿರುಕುಳ ಇಲ್ಲಿನ ಜನ್ರಿಗೆ ಆಗ್ತಾ ಇರುತ್ತೆ.ಇತ್ತೀಚೆಗೆ ಹೀಗೆ ಕಲುಷಿತ ನೀರನ್ನು ಬಿಟ್ಟಾಗ ಇದು ಕುಡಿಯೋ ನೀರು ಎಂದು ಜನ ಎಚ್ಚರಿಕೆ ಮನವಿ ಮಾಡಿದ್ರು.ಆದ್ರೂ ಯೋಜನೆಯವ್ರು ಕ್ಯಾರೇ ಅಂದಿಲ್ಲ.ಇನ್ನು ನೀರನ್ನು ಮಳೆಗಾಲದಲ್ಲಿ ಹಠಾತ್ ಆಗಿ ಡ್ಯಾಂನಿಂದ ಬಿಡೋದು ಕೂಡಾ ನಡೆಯುತ್ತಿದೆ.ಇದರಿಂದಾಗಿ ಜನರಿಗೆ ತೊಂದರೆಯಾಗುತ್ತದೆ. ಒಂದೆರಡು ಜೀವಹಾನಿಕೂಡಾ ಇಲ್ಲಿ ನಡೆದಿದೆಯಂತೆ.ಆದ್ರೆ ಈಗ ನೀರನ್ನು ಕಲುಷಿತ ಮಾಡಿ ಬಿಡೋದ್ರಿಂದ ಕುಡಿಯೋಕೆ ಮಾತ್ರವಲ್ಲ ಜಲಚರಗಳಿಗೂ ತೊಂದರೆಯಾಗಿದೆ.ಮೀನು , ಕಪ್ಪೆಗಳು ಕೂಡಾ ಸಾಯ್ತಾ ಇವೆ. ಕಾಡು ಪ್ರಾಣಿಗಳಿಗೂ ಕುಡಿಯಲು ನೀರಿಲ್ಲದೆ ಸಾಯುವ ಸ್ಥಿತಿಗೆ ಬರುತ್ತಿದೆ.

ಒಟ್ಟಿನಲ್ಲಿ ಗುಂಡ್ಯ ಈ ಪ್ರದೇಶದ ಜನ್ರಿಗೆ ಈಗ ಕಲುಷಿತ ನೀರು ಕುಡಿಯೋದು ಅನಿವಾರ್ಯವಾಗಿದೆ. ಮತ್ತೆ ಮತ್ತೆ ನೀರನ್ನು ಕಲುಷಿತ ಮಾಡಿ ಗುಂಡ್ಯ ಯೋಜನೆಯಿಂದ ಕೆಳಗಡೆ ಬಿಡಲಾಗುತ್ತಿದೆ.ಇದರಿಂದಾಗಿ ಕೆಲವೆಡೆ ಜ್ವರ ಬಾಧೆ ಸೇರಿದಂತೆ ಇನ್ನಿತರ ರೋಗ ಬಾಧೆಯ ಭೀತಿ ಎದುರಾಗಿದೆ.ಹೀಗಾಗಿ ಸಂಬಂಧಿತರು ಎಚ್ಚೆತ್ತುಕೊಳ್ಳಬೇಕಾಗಿದೆ.

07 ಏಪ್ರಿಲ್ 2010

ಕ್ಷೀರ ಸಾಗರದ ನಾಡಲ್ಲಿ ಹಾಲಿಗೆ ತತ್ತ್ವಾರ . . . . .

ಹಾಲಿನ ದರ ಏರಿಕೆ ಕಂಡಿದೆ. ಅದು ಅನಿವಾರ್ಯ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.ಬೆಲೆ ಏರಿಕೆಯ ಹಣದಲ್ಲಿ ರೈತರಿಗೆ ಸಿಂಹಪಾಲು ಅಂತಲೂ ಹೇಳಿದ್ದಾರೆ.ಈಗ ಶುರುವಾಗಿದೆ ಚರ್ಚೆಯ ಮೇಲೆ ಚರ್ಚೆಗಳು.ಈ ಸಂದರ್ಭದಲ್ಲಿ ವಾಸ್ತವದ , ಹಳ್ಳಿಯಲ್ಲಿನ ಹೈನುಗಾರಿಕೆ ಕಡೆಗೆ ನೋಡಲೇ ಬೇಕು..

ಇತ್ತೀಚೆಗೆ ರೈತ ಹೋರಾಟಗಾರರೊಬ್ಬರು ರಾಜಧಾನಿಯಲ್ಲಿರೋ ರಾಜಕಾರಣಿ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಾ ಹಾಲಿನ ದರ ಏರಿಕೆ ಮಾಡಿ ಅಂತ ಹೇಳುತ್ತಿದ್ದರಂತೆ.ಅವರ ಮಾತು ಪೂರ್ತಿಯಾದ ಬಳಿಕ ರೈತರಿಗೆ ಸಿಕ್ಕ ಉತ್ತರ ಅಚ್ಚರಿಯಾಗಿತ್ತು. ಸಾರ್ ನೀವ್ ರೈತರುಗಳೆಲ್ಲಾ ನಗರಕ್ಕೇ ಬಂದ್ಬುಡಿ.. ಇಲ್ಲಿ ಕಂಡ್ಲೆಕಾಯಿನಾದ್ರೂ ಮಾರಾಟ ಮಾಡಿ ಬದಕು ಸಾಗಿಸ್ಕೋಬಹುದು.ಅಲ್ಲಿ ಹೈನುಗಾರಿಕೇನ ಮಾಡಿ ಹೇಗ್ ಸ್ವಾಮಿ ಬದ್ಕೋತೀರಾ..?. ನೀವ್ ಹೇಳ್ತೀರಾ ಹಾಲಿನ ಬೆಲೆ ಏರಿಕೆ ಮಾಡಿ ನಮ್ಗೂ ಸರಿಯಾದ ರೇಟು ಕೊಡಿ ಅಂತ ಮನವಿ ಮೇಲೆ ಮನವಿ ಕೊಡ್ತೀರಾ.. ನಾವ್ ಏನ್ ಮಾಡ್ಲಿ ಸ್ವಾಮಿ.. ನೀವ್ ಹೈನುಗಾರರಿರೋದು 100 ಜನ ಆದ್ರೆ ಹಾಲು ಕೊಳ್ಳೋರು 10 ಸಾವಿರ ಜನ ಇದಾರೆ. ಒಂದು ಪೈಸೆ ಏರಿದ್ರೂ 10 ಸಾವಿರ ಜನ ಬೊಬ್ಬೆ ಹೊಡೀತಾರೆ, ಆ ಸದ್ದಿನ ನಡುವೆ ನಿಮ್ ಅಳಲು ಎಲ್ಲಿ ಕೇಳುತ್ತೆ ಹೇಳಿ ಸ್ವಾಮಿ??. ನಮ್ಗೆ ಆ 10 ಸಾವಿರ ಜನ್ರೂ ಮುಖ್ಯ ಅಲ್ವಾ ಅಂದ್ರಂತೆ. ಈ ಉತ್ತರ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಾದರೂ ಇಂದಿನ ವಾಸ್ತವ ಸಂಗತಿ.ಇದ್ಯಾಕೆ ಹೀಗಾಯ್ತು.ಹಾಲು ಉತ್ಪಾದನೆಯಲ್ಲಿ ರಾಜ್ಯದ ಸಾಧನೆ ಇದ್ರೂ ಕೂಡಾ ಇತ್ತೀಚೆಗಿನ ಬೆಳವಣಿಗೆಯಲ್ಲಿ ವ್ಯತ್ಯಾಸವಾಗತೊಡಗಿದೆ.1 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದ್ದ ಡೈರಿಯಲ್ಲಿ 100 ಲೀಟರ್ ಸಂಗ್ರಹವಾಗುವ ಸ್ಥಿತಿಗೆ ಬಂದಿದೆ.ಹೈನುಗಾರಿಕೆ ರೈತರಿಗೆ ಸಾಕಾಗಿಹೋಗಿದೆ.ಕ್ಷೀರಸಾಗರ ಭಟ್ಟರ ಮನೆಯಲ್ಲಿ ಈಗ ಹಾಲಿಗೇ ತತ್ತ್ವಾರ ಉಂಟಾಗಿದೆ.

ಈ ಹಳ್ಳಿಹಳ್ಳಿಗಳಲ್ಲಿ ಹಾಲು ಸಂಗ್ರಹಕ್ಕೆಂದು ವ್ಯಾನ್ , ಒಮ್ನಿ , ರಿಕ್ಷಾ ಹೀಗೇ ವಿವಿದ ವಾಹನಗಳು ಬೆಳಗ್ಗೆ ಓಡಾಡುತ್ತದೆ.ಅದಕ್ಕೆ ರೈತರು ಹಾಲು ಕೊಡುತ್ತಿದ್ದರು.ಅಂತಹ ಚಿಕ್ಕ ವಾಹನಗಳಲ್ಲೇ ಸುಮಾರು 200 ಲೀಟರ್ ಹಾಲು ಇರುತ್ತಿತ್ತು.ಆದ್ರೆ ಇಂದು ನೋಡಿದ್ರೆ ಕೆಲವೆಡೆ ಹಾಲಿನ ರಿಕ್ಷಾವೇ ನಾಪತ್ತೆ.ಇದ್ರೂ 10 ಲೀಟರ್ 20 ಲೀಟರ್ ಹಾಲು.ಅಂದ್ರೆ ಹಳ್ಳಿಲೀ ಹಾಲು ಉತ್ಪಾದಕರು ಇಳಿಮುಖವಾಗಿದ್ದಾರೆ ಅಂತ ಸ್ಪಷ್ಠವಾಗಿದೆ. ನಿಜಕ್ಕೂ ಇದು ಸತ್ಯ.ಹೈನುಗಾರಿಕೆ ಹಳ್ಳಿಗರಿಗೆ ಬೇಡವಾಗಿದೆ.ಹಸುವಿದ್ದರೂ ಮನೆಗೆ ಬೇಕಾದಷ್ಟು ಮಾತ್ರಾ ಹಾಲು ಉತ್ಪಾದಿಸುತ್ತಾರೆ.

ಹೌದು ನನಗೆ ನೆನಪಿದೆ ನಮ್ಮಲ್ಲೂ 5-6 ದನಗಳು ಇದ್ದವು.ಒಂದೆರಡು ವರ್ಷದ ಹಿಂದೆ ಹಾಲು ಡೈರಿಗೆ ಹೋಗಲೆಂದು ಸ್ಕೂಟರ್ ತೆಗೆದು ನಾನೇ ಸ್ಕೂಟರ್‌ನಲ್ಲಿ ಹಾಲು ಡೈರಿಗೆ 8 ರಿಂದ 10 ಲೀಟರ್ ನೀಡುತ್ತಿದೆ.ಆದ್ರೆ ಈಗ ನಮ್ಮ ಮನೆ ಬಳಕೆಗೆ ಎಷು ಬೇಕು ಅಷ್ಟು ಮಾತ್ರಾ ಹಾಲು ಸಾಕು ಎನ್ನುವ ಕಾರಣಕ್ಕೆ ಒಂದೇ ದನ ಇದೆ. ಹಾಗೆಯೇ ಇಡೀ ನಮ್ಮ ಆಸುಪಾಸಿನಲ್ಲಿ ದನ ಸಾಕುವವರೇ ಕಡಿಮೆಯಾಗಿದ್ದಾರೆ.ಕೆಲವರು ಎಲ್ಲಾ ದನಗಳನ್ನು ಮಾರಾಟ ಮಾಡಿದ್ದಾರೆ.ಇನ್ನೂ ಕೆಲವರು ಗೋಶಾಲೆ ಹುಡುಕಿದ್ದಾರೆ.ಇದ್ಯಾಕೆ ಹೀಗಾಯ್ತು ನೋಡಿ... . ಮೊದಲನೆಯದಾಗಿ ಕಾರ್ಮಿಕರ ಕೊರತೆ.ಇನ್ನು ದರ ಏರಿಕೆ.ಒಂದು ಲೀಟರ್ ಹಾಲು ಮಾರಾಟ ಮಾಡಿದ್ರೆ ಸಿಗೋದು 12 ರುಪಾಯಿ 13 ರುಪಾಯಿ 15 ರುಪಾಯಿ.ಆದ್ರೆ ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚಕ್ಕಿಂತ ಸಿಗೋದು ಕಡಿಮೆ.ಹಾಗಾಗಿ ರೈತ ಲಾಸ್‌ನಲ್ಲೇ ಹಾಲು ಉತ್ಪಾದಿಸುತ್ತಾನೆ. ಉಪ ಉತ್ಪನ್ನಗಳು ಸಿಗುತ್ತವಾದರೂ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ಇಂದು ಅದೇ ಉತ್ಪನ್ನಗಳು ಮಾರಿಕಟ್ಟೆಯಲ್ಲಿ ಸಿಗುವುದರಿಂದ ರೈತರು ಲಾಭ ನಷ್ಠದ ಲೆಕ್ಕ ಹಾಕಿ ಹೈನುಗಾರಿಕೆಗೆ ಟಾ ಟಾ ಹೇಳತೊಡಗಿದರು. ನಮ್ಮೂರಿನ ಒಂದು ಕಡೆ 18 ದನಗಳು ಇದ್ದವು.ಕ್ಷೀರ ಕ್ರಾಂತಿಯೇ ಅಲ್ಲಾಗಿತ್ತು.ಇಂದು ಅಲ್ಲಿ ನೋಡಿದ್ರೆ ಕೇವಲ 2 ದನಗಳು ಇವೆ.ಹಟ್ಟಿಗಳೆಲ್ಲಾ ರೂಮ್‌ಗಳಾಗಿವೆ. ಹೀಗೆಯೇ ಎಲ್ಲೆಡೆ ಹೈನುಗಾರಿಕೆಯಿಂದ ಹೊರಬರುತ್ತಿರಬೇಕಾದರೆ ಇನ್ನು ಏನು ಮಾಡಿದರೂ ರೈತರು ಮಾನಸಿಕವಾಗಿ ಹೈನುಗಾರಿಕೆಯಿಂದ ಹೊರಬರಲು ನಿರ್ಧರಿಸಿಯಾಗಿದೆ.ಒಂದಷ್ಟು ದಿನ ಹೀಗೆ ಬೆಲೆ ಏರಿಕೆಯಂತಹ ಗಿಮಿಕ್ ಮಾಡಿ ಉಳಿಸಿಕೊಳ್ಳಬಹುದೇ ವಿನ: ಇದುವೇ ಶಾಶ್ವತ ಪರಿಹಾರ ಅಲ್ಲ.ಇದೊಂದು ತಾತ್ಕಾಲಿಕ ಟಾನಿಕ್ ಅಷ್ಟೆ.ಯಾಕೆಂದ್ರೆ ರೈತರಿಗೆ ಸರಕಾರದ ಬಳಿ ದುಂಬಾಲು ಬಿದ್ದು ಸಾಕಾಗಿದೆ.ಹಾಗಾಗಿ ಇಂದು ಬೆಂಗಳೂರು ನಗರವೊಂದರಲ್ಲೇ ಸುಮಾರು ೨ ಲಕ್ಷ ಲೀಟರ್ ಹಾಲಿನ ಕೊರತೆ ಇದೆ.ಮುಂದೆ ಇದಕ್ಕೆ ಸೇರಿಕೊಂಡು ಹೋಗುತ್ತದೇ ವಿನ: ಕಡಿಮೆಯಾಗದು.ಇನ್ನಷ್ಟು ನಗರಕ್ಕೆ ಇದೇ ಸಮಸ್ಯೆ ವ್ಯಾಪಿಸುವ ದಿನಗಳು ದೂರವಿಲ್ಲ.ಹಾಗಾಗು ಗ್ರಾಹಕರು ಕೂಡಾ ಮಾನಸಿಕವಾಗಿ ಪರ್ಯಾಯ ಮಾರ್ಗದತ್ತ ಯೋಚಿಸುವುದು ನಿಜಕ್ಕೂ ಒಳ್ಳೆಯದು ಅಲ್ವಾ. . . ?.

ಅದಕ್ಕೂ ಮನಸ್ಸು ಒಪ್ಪೋದದಿಲ್ಲ.ಯಾಕ್ ಗೊತ್ತಾ.ಕೆಲ ಹಾಲುಗಳನ್ನು ದಿನನಿತ್ಯ ಕುಡಿದ್ರೆ ಓವರ್ ಹಾರ್ಮೊನ್‌ಗಳ ಸೆಕ್ರೀಶನ್ ಆಗುತ್ತೆ ಅಂತಾರೆ ಡಾಕ್ಟ್ರು.ಹಾಗಾಗಿ ಹುಡುಗಿಯರು ಬೇಗನೇ ಪ್ರಾಯಕ್ಕೆ ಬರೋದು , ಹುಡುಗ್ರು ತೀರಾ ದಪ್ಪ ಆಗೋದು ಇನ್ನಿತರ ಸಮಸ್ಯೆಗಳು ಕಾಡುತ್ತದೆ ಅಂತಾರೆ.ಹಾಗಾಗಿ ಅದೂ ಇಲ್ಲ . . ಇದೂ ಭಯ ಎಂಬ ಸ್ಥಿತಿಯಲ್ಲಿರೋರ ಸಂಖ್ಯೆ ಹೆಚ್ಚಾಗಿದೆ.ಅದಕ್ಕಾಗಿ ಈಗ್ಲೇ ಯೋಚ್ನೆ ಮಾಡ್ಬೇಕಾಗಿದೆ.

04 ಏಪ್ರಿಲ್ 2010

ಹಾವಂತೆ ಹಾವು . . . . . !!




ಖ್ಯಾತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ 5 ತಲೆಯ ನಾಗರಹಾವು ಕಾಣಿಸಿಕೊಂಡಿದೆಯಂತೆ.ಹೀಗೆಂಬ ವದಂತಿಯೊಂದು ಇಂಟರ್ನೆಟ್ ಮೂಲಕ ಇ ಮೈಲ್‌ನಲ್ಲಿ ಕಳೆದ ಕೆಲವಾರು ದಿನಗಳಿಂದ ಹರಿದಾಡ್ತಾ ಇದೆ. ಆದ್ರೆ ಜನ್ರಿಗೆ ಈ ಬಗ್ಗೆ ಹೌದೋ ಅಲ್ವೋ ಎಂಬ ಅನುಮಾನ.ಕೆಲವ್ರಂತೂ ಇದೆ .. ಇದೆ ಅಂತಾರೆ.ಯಾಕಂದ್ರೆ ಹಿಂದೆ ಕೃಷ್ಣ ಪರಮಾತ್ಮನನ್ನು ಕೊಂಡೊಯ್ಯುವಾಗ ಕಾಳಿಂಗ ಸರ್ಪ ಮಳೆಗೆ ರಕ್ಷಣೆ ನೀಡಿತ್ತು.. ಅದ್ರ ತಲೆ 7 ಇತ್ತು. . . . ಹೀಗೆಲ್ಲಾ ಜನ ಮಾತಾಡ್ಕೋತಾರೆ.ಆದ್ರೆ ಅಂತಹ ಜಾವು ಇದೆಯೋ ಇಲ್ವೋ ಅಂತ ಯೋಚ್ನೇನೇ ಮಾಡಲ್ಲ ಬಿಡಿ.ಅದು ನಂಬಿಕೆ . . . . ದೇವರ ಹಾಗೆ.

ನಿಜಕ್ಕೂ ಅದು ಏನು ಅಂತ ಹಿಂದೆ ಬಿದ್ರೆ .. ಕುಕ್ಕೆ ಸುಬ್ರಹ್ಮಣ್ಯದ ಬಳಿ ಬಿಲದ್ವಾರ ಅಂತ ಒಂದು ಪ್ರದೇಶವಿದೆ.ಇಲ್ಲಿ 5 ತಲೆಯ ನಾಗರಹಾವಿನ ಪ್ರತಿಮೆ ಇದೆ.ಯಾವನೋ ಒಬ್ಬ ಭಕ್ತ ಇದರ ಫೋಟೋ ತೆಗ್ದು ಅದನ್ನು ಫೋಟೋ ಶಾಪ್‌ನಲ್ಲಿ ವಿಕಾರಗೊಳಿಸಿ 5 ತಲೆಯ ನಿಜವಾದ ಹಾವಿನಂತೆ ಬಿಂಬಿಸಿ ಮೈಲ್ ಮಾಡಿದ.ಇದು ಪಸರಿಸುತ್ತಾ ಸಾಗಿದೆ.ಪಕ್ಕನೆ ನೋಡೋವಾಗ ಒದೊಂದು ನಿಜವಾದ ಹಾವು ಎಂದು ಭಾಸವಾಗುತ್ತದೆ.ಜನ ಮಾತ್ರ ಭ್ರಮೆಯೇ ಸತ್ಯ ಅಂತ ನಂಬಿದ್ದಾರೆ.ಒಬ್ಬೊಬ್ಬರು ಒಂದೋಂದು ವ್ಯಾಕ್ಯಾನ ನೀಡಿದ್ದಾರೆ.ಸುಳ್ಳನ್ನೇ ಸತ್ಯ ಅಂತ ನಂಬಿದ್ದಾರೆ.ಇನ್ನಷ್ಟು ನಂಬಿಕೆಯ ಲೋಕಕ್ಕೆ ಇಳಿದಿದ್ದಾರೆ ಅಷ್ಟೇ.

ನಿಜಕ್ಕೂ ಫೋಟೋ ಶಾಪ್‌ನಲ್ಲಿ ಏನು ಬೇಕಾದ್ರೂ ಮಾಡ್ಬಹುದು ಎಂಬುದಕ್ಕೆ ಇದೊಂದು ಒಳ್ಳೇ ಉದಾಹರಣೆ.ಜನ್ರನ್ನು ಹೀಗೂ ನಂಬಿಸಬಹುದು ಅಲ್ವಾ..? ಇನ್ನು ಇತ್ತೀಚೆಗೆ ಇಶ್ಯೂ ಆಗಿದ್ದ ಆ ಸ್ವಾಮೀಜಿಯ ಕತೆಯೂ ಹೀಗೇನಾ ಇರ‍ಬಹುದಾ..?.ಹಾಗೆಂಬ ವದಂತಿಯೂ ಇದೆಯಲ್ವಾ..?.ಏನೋ ಗೊತ್ತಿಲ್ಲ.