12 ಮೇ 2016

ಮಲೆಯ ಮೇಲೆ ಕುಳಿತು ಮಳೆಯ ಹುಡುಕಾಟ. .!



ಅಂದು ಸಂಜೆ, ಮೂಡಣದಿ ಆಗಸವೆಲ್ಲಾ ಕಪ್ಪಾಗಿತ್ತು.ಇನ್ನೇನು ಗುಡುಗು ಸಹಿತ ಮಳೆಯಾಗುತ್ತೆ ಅಂತ ಕಾದು ಕುಳಿತಿದ್ದೆವು. , ದೊಡ್ಡದಾದ ತಣ್ಣನೆಯ ಗಾಳಿಯೊಂದು ಅದೇ ವೇಳೆ ಬಂತು, ಮೈಯೆಲ್ಲಾ ತಂಪಾಯಿತು.  . ಖುಷಿ ಮತ್ತಷ್ಟು ಹೆಚ್ಚಾಯಿತು.  .ಮಳೆ ಹತ್ತಿರದಲ್ಲಿಯೇ ಬಂತು.  . ಕೆಲವೇ ಹೊತ್ತಲ್ಲೂ ಇಲ್ಲೇ ಬರುತ್ತದೆ ಎಂದು ಸಂಭ್ರಮಿಸಿದ್ದೂ ಆಯಿತು. .  .!, ಮತ್ತೆ ಬಾನು ಬೆಳ್ಳಗಾಯಿತು. ., ಮಳೆ ದೂರವಾಯಿತು. . !. ನಿರೀಕ್ಷೆ ಹುಸಿಯಾಯಿತು. ಮಳೆಯ ಹುಡುಕಾಡುತ್ತಾ ಸಾಗುತ್ತಲೇ ಇದ್ದ ನಮಗೆ ಕಂಡದ್ದು ಆ ಮಲೆಯ ಮೇಲೆ ಅಣಕಿಸುತ್ತಿರುವ ಮುಗಿಲು. ಮಲೆಯ ಒಳಗಿದ್ದ ಬಾಡಿದ ಗಿಡ.



ನಮಗೆಂದೂ ಆ ಗಿಡ ಬಾಡಿದ ನೆನಪೇ ಇಲ್ಲ.  .!. ಆದರೆ ಇಂದು ಬಾಡಿತ್ತು. ಯಾರನ್ನೋ ಕಳಕೊಂಡ ಭಾವ ಅಲ್ಲಿ ಮನೆ ಮಾಡಿತ್ತು.ಇಡೀ ಕಾಡೇ ಸೂತಕಾಚರಣೆಯಲ್ಲಿತ್ತು. ಹಕ್ಕಿಗಳು ಸದ್ದೇ ಮಾಡುತ್ತಿರಲಿಲ್ಲ. ಆ ಜೀರುಂಡೆಗಳು ನಮ್ಮನ್ನು ಕರೆಯುತ್ತಲೇ ಇರಲಿಲ್ಲ. ಆ ಮರದ ಕೆಳಗೆ ಅಂದಿದ್ದ ಜೇನು ಗೂಡು ಕಾಣಿಸಲೇ ಇಲ್ಲ. .!. ನಿಜ ನಾವು ಅಲ್ಲಿ ಹುಡುಕಲು ಹೊರಟಿದ್ದು ಮಳೆಯನ್ನು. .  .!.

ಮಳೆಯ ಹುಡುಕಾಡುತ್ತಾ ಮತ್ತೆ ಮಲೆ ಏರಿದಾಗ , ಅಂದು ನಾವು ಕುಳಿತಿದ್ದ ದೊಡ್ಡ ಮರ ಕಂಡಿತು. ಆ ಮರವೂ ನಮ್ಮನ್ನು  ಎಂದಿನಂತೆ ಸ್ವಾಗತಿಸಲೇ ಇಲ್ಲ. .!. ಮರದ ಕೆಳಗೆ ಇದ್ದ ಎಲೆಗಳು ದೊಡ್ಡ ಸದ್ದು ಮಾಡುತ್ತಿದ್ದವು. ನಮ್ಮ ಹೆಜ್ಜೆ ಬಿದ್ದೊಡನೆಯೇ ಪರ್. .  ಪರ್ ಅನ್ನುತ್ತಿದ್ದವು. ಅಂದೆಲ್ಲಾ ಹಾಗೆ ಹೇಳಿದ್ದೇ ಇಲ್ಲ. ಆ ಮರದ ಎಲೆಗಳು ನಮಗೆ ತಂಪು ಕೊಟ್ಟಿದ್ದವು,ಸುಸ್ತಾಗಿ ಬಂದ ನಮಗೆ ತಂಪಾಗಿ ಮಲಗಲು ಆಶ್ರಯ ಕೊಟ್ಟಿತ್ತು.ಆದರೆ ಈ ಬಾರಿ ಹಾಗೆ ಅವಕಾಶ ಕೊಟ್ಟಿಲ್ಲ, ಅದೇನೋ ನೋವು ಹೊತ್ತು ಕುಳಿತಿತ್ತು ಆ ಮರ. ಜೊತೆಗೆ ಆ ಮರವೂ ಹೇಳುತ್ತಿತ್ತು, ಮಳೆಯನ್ನು ಕರೆತನ್ನಿ  ಎಂದು ನಮಗೇ ಹೇಳಿತ್ತು, ನಾವು ಕೇಳಿದೆವು, ನಾವಲ್ಲ  ನೀನೇ ಅದರ ಮಿತ್ರ , ನೀನು ಕರೆದರೆ ಈಗಲೇ ಬಂದೀತು ಎಂದಾಗ , ನಕ್ಕಿತು ಮತ್ತು ಒಂದೇ ಮಾತಿನಲ್ಲಿ ಆಗಸ ನೋಡುತ್ತಾ ಹೇಳಿತು, ಆ ಕಾಲ ಕಳೆದು ಹೋಗಿದೆ. . !.

ನಮಗಂತೂ ಅಚ್ಚರಿಯಾಯಿತು.  .! ಆ ಕಾಲ ಕಳೆದು ಹೋಗಿದೆ ಎಂದರೆ ಈಗ ಮತ್ಯಾವುದು ?.

ಮರ ಆಗಸದ ಕಡೆಗೇ ಬಾಡಿದ ಮುಖದೊಂದಿಗೆ ನೋಡುತ್ತಾ ಇದ್ದರೆ, ಇತ್ತ ಕಡೆ ಇದ್ದ ಸಣ್ಣ ಸಣ್ಣ ಗಿಡಗಳೂ ಮೌನವಾಗಿದ್ದವು, ಅವುಗಳೂ ಬಾಡಿ ಮಾತನಾಡುವ ಸ್ಥಿತಿಯಲ್ಲಿರಲೇ ಇಲ್ಲ. ಹಾಗಿದ್ದರೂ ಗಿಡವೊಂದು ಹೇಳಿತು, ಈಚೆಗೆ ನಾವೆಲ್ಲಾ ಬದುಕುವ ಸ್ಥಿತಿಯಲ್ಲಿ ಇಲ್ಲ. . .!, ನೀವೆಲ್ಲಾ ಬದುಕಬಲ್ಲಿರಿ. .!.ಮತ್ತೆ ಬದುಕು ಕಟ್ಟಬಲ್ಲಿರಿ. .!.ನಮಗೊಂದೇ ಬದುಕು, ಅದೆಲ್ಲಾ ಇನ್ನೂ ಅಭದ್ರ, ಹಾಗಿದ್ದರೂ ನಮ್ಮ ಪ್ರಯತ್ನ ನಿರಂತರ ಎನ್ನುತ್ತಾ ಆಗಸ ನೋಡಿತು.

ಆ ಮಾತು ಕೇಳಿ ಮತ್ತಷ್ಟು ಪ್ರಶ್ನೆಗಳೇ ಹೆಚ್ಚಾದವು ಹೊರತು , ಉತ್ತರ ಸಿಕ್ಕಿಲ್ಲ. .  ಮತ್ತೆ ಮಲೆಯ ಏರಿದೆವು. . ಮಳೆಯ ಹುಡುಕಾಡುತ್ತಾ.  .

ಇನ್ನೇನು ಮಲೆಯ ತುದಿ ತಲಪುವವರಿದ್ದೆವು, ಆಗೊಂದು ಸದ್ದು ಕೇಳಿತು. ನೋಡಿದಾಗ, ಅಳಿಲು. ಚೀಂವ್. .ಚೀಂವ್ ಎಂದು ಅತ್ತಿತ್ತ ಓಡಾಡುತ್ತಾ ನಮ್ಮನ್ನು ಕಂಡೊಡನೆ ಮರ ಏರಿತು ಕುಳಿತು ನೋಡಿತು. ಆಗ ಆ ಮರ ಹೇಳಿತು, ಅದು ನೀರಿಗಾಗಿ ಓಡಾಟ ನಡೆಸುತ್ತಿದೆ. ನೀರಿಲ್ಲ, ಆದರೂ ಅದು ಸಣ್ಣದೊಂದು ಪ್ರಯತ್ನ ಮಾಡುತ್ತಿದೆ. . !, ಅಂದೆಲ್ಲಾ ಹೀಗಾಗಲೇ ಇಲ್ಲ, ನಮ್ಮ ಕಾಡಿನಲ್ಲಿ  ನಮ್ಮವರಿಗೆ ಬೇಕಾದ ನೀರು ಸಂಗ್ರಹಿಸುತ್ತಿದ್ದೆವು, ಆದರೆ ಈಗ ಹಾಗಿಲ್ಲ. . !.ಅದ್ಯಾಕೆ ಹೀಗೆ ಎಂದರೆ , ಮತ್ತೆ ಆ ಮರ ಮೌನವಾಯಿತು, ಆಗಸ ನೋಡಿತು. .ಏಕೆಂದರೆ ಅದೂ ಬಾಡಿದೆ. .! ಶಕ್ತಿ ಇಲ್ಲ. .!. ಆದರೆ ಆ ಅಳಿಲಿಗೆ ಆಶ್ರಯ ನೀಡಬೇಕು ಎನ್ನುವ ಹಾಗೂ ಅಳಿಲಿನ ವೇದನೆ ಹೇಳುವ ಮನಸ್ಸು ಅದಕ್ಕಿದೆ ಅಷ್ಟೇ. .!. ನಮ್ಮೊಂದಿಗೆ ಮಾತನಾಡುವ ಶಕ್ತಿ ಆ ಮರಕ್ಕಿಲ್ಲ. . !.

ಮತ್ತೆ ನಮಗೆ ಪ್ರಶ್ನೆಗಳೇ ಹೆಚ್ಚಾದವು ಹೊರತು  ಉತ್ತರ ಸಿಕ್ಕಿಲ್ಲ. .!

ಮಲೆ ಏರಿ ಸುಸ್ತಾಯಿತು, ಮಳೆಯೇ ಸಿಕ್ಕಿಲ್ಲ. .! ಶಾಖದ ಪರಿಣಾಮ ಮೈಯೆಲ್ಲಾ ಸೋತಿತ್ತು. ತಂದಿದ್ದ ಬಾಟಲಿ ನೀರೆಲ್ಲಾ ಖಾಲಿಯಾಯಿತು. .!. ಅಂದು ಬಂದಾಗ , ಅಲ್ಲೊಂದು ಕಡೆ ನೀರಿತ್ತು, ಹುಡುಕಾಡುವ ಪ್ರಯತ್ನ ಮಾಡಿದಾಗ ಅಲ್ಲೂ ನೀರು ಖಾಲಿಯಾಗಿತ್ತು. .!.

ಆಗ ಅಲ್ಲೊಂದು ಕಪ್ಪೆ ಕೂಗುತ್ತಿತ್ತು, ಜೊತೆಗೆ ಹೇಳಿತ್ತು, ನಾನೂ ಮಳೆಯ ಕರೆಯುತ್ತಲೇ ಇದ್ದೇನೆ, ಆತ ಬರುತ್ತಲೇ ಇಲ್ಲ. .!. ಇದುವರೆಗೆ ಆತ ಹೀಗೆ ಮಾಡಿದ್ದೇ ಇಲ್ಲ.ಕರೆದಾಗ ಬರುತ್ತಿದ್ದ. ಇನ್ನೂ ನಾನು ಜಾಗ ಬದಲಿಸುವೆ, ಅಲ್ಲೊಂದು ಕಡೆ ನೀರಿದೆ ಎಂದು  ಹೇಳಿತು.

ನಾವು ತಡ ಮಾಡಿಲ್ಲ , ಆ ಕಡೆ ಹೋದೆವು. .!. ಕಪ್ಪೆಗಿಂತ ಮೊದಲೇ ಅಲ್ಲಿಗೂ ಭೇಟಿ ಇತ್ತಾಯಿತು. .!

ನೀರಿನ ಹುಡುಕಾಟ ಮಲೆಯ ಮೇಲೆ ನಡೆಯಿತು. .!. ಎಲೆಲ್ಲೂ ನೀರಿಲ್ಲ. .!. ಬಾಯಾರಿದೆ.. . ನೀರು ಬೇಕು. .!.

ಅಲೆದಾಟ ಮುಂದುವರಿಯುತ್ತಾ ಮಲೆಯ ಕೆಳಗೆ ಬಂದಾಯಿತು. .!. ಮಳೆ ಸಿಕ್ಕಿಲ್ಲ.  .ನೀರೂ ಸಿಕ್ಕಿಲ್ಲ.  .!.ಉತ್ತರವೂ ಸಿಕ್ಕಿಲ್ಲ.  .!

ಇಲ್ಲಿ ಬಂದಾಗ ಭಾರೀ ಯಂತ್ರವೊಂದು ಭೂಮಿಯ ಕೊರೆಯುತ್ತಿತ್ತು, ನೀರಿಗಾಗಿ ಹೋರಾಟ ಮಾಡುತ್ತಿತ್ತು. .!.ಭೂಮಿ ನಲುಗುತ್ತಿತ್ತು. .! ಮರ ನಗುತ್ತಿತ್ತು. . ! ಮಳೆ ಓಡುತ್ತಿತ್ತು.  .!. ನಾವು ಮಾತ್ರಾ ನೋಡುತ್ತಾ ನಿಂತಿದ್ದೆವು. .!. ಏನೂ ಮಾಡಿಲ್ಲ. .! ಮಾಡುತ್ತಲೂ ಇಲ್ಲ.  .!.ಗಿಡ-ಮರ-ಪ್ರಾಣಿ-ಪಕ್ಷಿಗಳೆಲ್ಲಾ ಮಳೆಗಾಗಿ ಒಂದೊಂದು ಪ್ರಯತ್ನ ಮಾಡುತ್ತಿದ್ದರೆ. . . ನಾವು ಆ ಪ್ರಯತ್ನದಲ್ಲಿ ಮೊದಲ ಪಾಲುದಾರಿಕೆಗೆ ಓಡುತ್ತಿದ್ದೆವು ಅಷ್ಟೆ.. .!

ನನಗನ್ನಿಸಿತು. . .,  ಮಳೆ ಹುಡುಕಾಡಲು ನಾನ್ಯಾರು.  .?. ದಿನ-ವಾರ-ತಿಂಗಳು ಕಾದರೂ ಮಳೆ ಬರಬೇಕಲ್ಲಾ. . !.ಮಳೆ ನನಗಾಗಿ ಕೊಟ್ಟದ್ದು ಎಷ್ಟು. . ! ನಾನು ಮಳೆಗಾಗಿ ಮಾಡಿದ್ದೇನು. . ?

09 ಮೇ 2016

ನಿಮ್ಮ ಊರು ಹಳ್ಳಿಯಲ್ಲಿದೆ ಎನ್ನುವುದೂ ತಾಂತ್ರಿಕತೆಯ ಮೂಲಕ. . .!



ನಿಮ್ಮ  ಊರು ಹಳ್ಳಿಯಲ್ಲಿದೆ.  . ನಿಮಗೆ ಸೌಲಭ್ಯ ನೀಡಲು ಸಾಧ್ಯವಿಲ್ಲ.  .!. ಹೀಗೆಂದು  ಎಸಿ ಕಚೇರಿಯಲ್ಲಿ ತಣ್ಣಗೆ ಕುಳಿತು ಹೇಳಿರುವುದು. . . ಹೇಳುವುದು . .  ಹೇಳುತ್ತಲೇ ಇರುವುದು ಅಧಿಕಾರಿಗಳು . ..!.
ಇದೆಲ್ಲಾ ತಾಂತ್ರಿಕತೆ ಮೂಲಕ ನಗರದಲ್ಲಿ  ಕೂತು ಸಾಧ್ಯವಿದೆ.ಆದರೆ ಹಳ್ಳಿಯ ಮಂದಿ ಇದನ್ನೆಲ್ಲಾ ಅಚ್ಚರಿ ಎಂಬಂತೆ ಕಣ್ ಕಣ್ ಬಿಟ್ಟು ನೋಡುತ್ತಲೇ ಇಂದಿಗೂ ಕೂರಬೇಕಿದೆ ಎಂದರೆ, ಇದು  ಬದಲಾಗುತ್ತಿರುವ ಕಾಲ. . !

ನಮ್ಮ ಊರಿಗೆ ಮೊಬೈಲ್ ಟವರ್ ರಚನೆಯಾಗಬೇಕು ಎಂದು ಮನವಿ-ಅಹವಾಲು ಶುರುವಾಯಿತು.ಬರೋಬ್ಬರಿ  6 ವರ್ಷಗಳ ಕಾಲ ಸತತ ಪ್ರಯತ್ನ ನಡೆಯಿತು.ಕೊನೆಗೊಂದು ದಿನ ಇಲಾಖೆಯಿಂದ ಲೆಟರ್ ಬಂತು, "ನಿಮ್ಮ ಊರು ತೀರಾ ಹಳ್ಳಿ. . ನಿಮಗೆ ಮೊಬೈಲ್ ಟವರ್ ನೀಡಲು ಆಗುವುದಿಲ್ಲ. ಇನ್ನೊಂದು ಊರಿನಲ್ಲಿ  ಹೊಸ ಟವರ್ ಆಗುತ್ತಿದೆ, ಅಲ್ಲಿಂದ ನಿಮಗೆ ಸಿಗ್ನಲ್ ಸಿಗುತ್ತದೆ"ಎಂದರು.
ಜನರು ಸುಮ್ಮನೆ ಇರಲಿಲ್ಲ, ಮತ್ತೆ ಜೋರಾದರು. ಇಲಾಖೆ ಮುಂದೆ ಹೋದರು ,ಇಲಾಖೆಯ ಪ್ರಮುಖರನ್ನು  ತಣ್ಣನೆಯ ಕೊಠಡಿಯಲ್ಲಿ  ಕುಂತು ಮಾತನಾಡಿದರು.
ಇಲಾಖೆಯ ಆ ಹಿರಿಯ ಅಧಿಕಾರಿ ಮುಂದೆ ,ತಮ್ಮೂರಿನ ಸಮಸ್ಯೆ ಎಳೆಎಳೆಯಾಗಿ ಹೇಳುತ್ತಾರೆ.ರಾತ್ರಿ ವೇಳೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೆ 108 ಕ್ಕೂ ಕರೆ ಮಾಡಲು ವ್ಯವಸ್ಥೆ ಇಲ್ಲ ಎನ್ನುತ್ತಾರೆ. .!,
ಆಗ, ಆ ಅಧಿಕಾರಿ ಹೇಳುತ್ತಾರೆ, ನಿಮ್ಮೂರಿನಲ್ಲಿ  ಟವರ್ ಹಾಕಿದರೆ "ನಮಗೆ ಲಾಭವಾಗಲ್ಲ". . !. ಒಂದು ಟವರ್‍ಗೆ 50 ರಿಂದ 60 ಲಕ್ಷ ರೂಪಾಯಿ ಬೇಕು, ಇಷ್ಟು ಖರ್ಚು ಮಾಡಿದರೆ ನಮಗೆ ಆದಾಯ ಹೇಗೆ? ಎಂದೂ ಕೇಳುತ್ತಾರೆ.
ನಮ್ಮೂರಿನ ಜನ ಇದೆಲ್ಲಾ ಯೋಚನೆ ಮಾಡೋಲ್ಲ, ಲಾಭವೋ ನಷ್ಟವೋ ಎಂದೂ ಯೋಚಿಸದರೆ ಉಪಕಾರ ಮಾಡೋರು."ನಮಗೆ ಲಾಭ ಆಗುತ್ತೆ" ಎಂದು ಯೋಚಿದೋರೇ ಅಲ್ಲ.
ಆದರೆ ಈಗ ಕುಳಿತಿರೋದು  ನಗರದ ತಣ್ಣನೆಯ ಕೊಠಡಿಯಲ್ಲಿ. .!. ನಿಜ, "ನಮಗೆ ಲಾಭ"ದ ಬಗ್ಗೆ ಇದುವರೆಗೆ ಯೋಚಿಸಿಲ್ಲ, ಈಗ ಅದೊಂದು ಯೋಚನೆಯೂ ಬಂತು. .!., ಆಗ ಹೇಳಿದ್ದು, ಈಗ ಮೊಬೈಲ್ ಅನ್ನೋದು  ಅತೀ ಅಗತ್ಯ ಸೇವೆಯಾಗಿದೆ. ಒಂದೇ ಟವರ್‍ನಿಂದ ಲಾಭ-ನಷ್ಟದ ಪ್ರಶ್ನೆ ಬೇಡ, ಇಡೀ ತಾಲೂಕಿನ ಪ್ರಶ್ನೆ ಬರಲಿ ಎಂದೂ ಒತ್ತಾಯಿಸಿದರು. ಮತ್ತೆ ಮೌನವಾದ ಅಧಿಕಾರಿ. . ಮೊಬೈಲ್ ಮೇಲೆ ತೆಗೆದರು,
ಅಂತೂ ಕೊನೆಗೆ ಅದೆಲ್ಲಾ ಮಾತುಕತೆಯಾಗಿ,ನೇರವಾಗಿ ರಾಜಧಾನಿಯಾಗಿ ಇನ್ನಷ್ಟು ತಣ್ಣನೆಯ ಕೊಠಡಿಯಲ್ಲಿ  ಕುಳಿತಿದ್ದ ಮತ್ತೊಬ್ಬರಿಗೆ ಕುಂತಲ್ಲಿಂದಲೇ ಕರೆ ಮಾಡಿದರು.ಅಲ್ಲೊಂದು ಮೊಬೈಲ್ ಅವರ್ ಆಗಬೇಕು ಎಂದರು..
ಬಳಿಕ ಇರೋದೇ ತಾಂತ್ರಿಕತೆಯ ಮೂಲಕ  ದಾರಿತಪ್ಪಿಸಿ-ದಾರಿ ಹುಡಕುವ ಪ್ರಯತ್ನ. .!.
ರಾಜಧಾನಿಯಲ್ಲಿದ್ದವರು  ನಮ್ಮೊಂದಿಗೆ ದೂರವಾಣಿಯಲ್ಲಿ  ಮಾತನಾಡುತ್ತಾ, ಸ್ಥಳ ಕೇಳುತ್ತಾರೆ,  ಅದಕ್ಕೆ ವಿವರಣೆ ಕೊಡುತ್ತಿದ್ದಂತೆ, ಅದು ಇಂತಾ ಕಡೆ, ಅಲ್ಲಿ  ಇಂತಹ ಸ್ಥಳ ಇದೆ, ಅಂಚೆ ಕಚೇರಿ ಇದೆ. .  ..  ..  ಅಲ್ಲಿಂದ ಹೇಳುತ್ತಿದ್ದರು. .  ಇಲ್ಲೆಲ್ಲಾ ಅಚ್ಚರಿ. . .!. ಇದು ಹೇಗಪ್ಪಾ ಸಾಧ್ಯ. . !. ಕೊನೆಗೆ ರಾಜಧಾನಿಯ ಅಧಿಕಾರಿ ತಣ್ಣಗೆ ಅಂದು ಬಿಟ್ಟರು " ನಿಮ್ಮಲ್ಲಿ  ಮನೆಯೇ ಇಲ್ಲಾರಿ . .ಅಲ್ಲೆಲ್ಲಾ ಕಾಡೇ ಇದೆ. . ಮತ್ತೆ ಹೇಗೆ ಟವರ್.  .".
ತಕ್ಷಣವೇ ನಮ್ಮೂರಿನ ಜನ ಹೇಳಿದ್ದು, "ನೀವು ಗೂಗಲ್ ನೋಡಿ ಏನನ್ನೂ ಹೇಳಬೇಡಿ ಇಲ್ಲಿಗೆ ಬನ್ನಿ . .ಸಾಕಷ್ಟು ಮನೆಗಳು ಇವೆ, ಗೂಗಲ್ ನೋಡಿ ದಾರಿ ತಪ್ಪಬೇಡಿ, ದಾರಿ ತಪ್ಪಿಸಬೇಡಿ, ಅಲ್ಲಿಗೇ ಬನ್ನಿ ದಾರಿ ಹುಡುಕಿ.  ."

 ಇಂದು ಆಗಿರುವುದು. . . ಆಗುತ್ತಿರುವುದು. . ಇದೇ. .!. ಎಲ್ಲವನ್ನೂ ಆ ತಣ್ಣನೆಯ ಕೊಠಡಿಯಲ್ಲಿ  ಕುಳಿತು ಮನೆಯೇ ಇಲ್ಲ, ವ್ಯವಸ್ಥೆಯೇ ಸಾಧ್ಯವಿಲ್ಲ ಎಂದು  ವರದಿ ನೀಡಿ ಬಿಟ್ಟರೆ ಓಕೆ ಎಂದೇ ಯೋಚಿಸಿರುವ ಇಂದಿನ ಕಾಲದಲ್ಲಿ  ಹಳ್ಳಿಗಳು ಬದಲಾಗೋದು ಹೇಗೆ ಸಾಧ್ಯ ?. ಇದುವರೆಗೆ ಎಲ್ಲಾ ಕಡೆಯೂ ಆಗಿರೋದು ಇದೆ, ಅದ್ಯಾವುದೋ ಸ್ಯಾಟಲೈಟ್ ಮೂಲಕ ಮೇಲಿನಿಂದಲೇ ನೋಡಿ ಮತ್ಯಾವುದೋ ಯೋಜನೆ ಹಾಕಿ ಕೊನೆಗೆ ಜನರನ್ನೇ ಓಡಿಸುವ ಕೆಲಸ ನಡೆದಿದೆ.
ತಾಂತ್ರಿಕತೆ ಎನ್ನುವುದು  ನಗರದಲ್ಲಿ  ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಹಳ್ಳಿಗಳಿಗೆ ಅದು  ತಲಪುವ ವೇಳೆ ಎಲ್ಲವೂ ಮುಗಿದಿರುತ್ತದೆ.ಮತ್ತೂ ಕೆಲವು ತಲಪುವುದೇ ಇಲ್ಲ. .!. ಎಂತಹ ಬದಲಾವಣೆ ಈ ದೇಶದಲ್ಲಿ.  .!

ಉದಾಹರಣೆಗೆ ಇಂದಿನ ಮೊಬೈಲ್ ವ್ಯವಸ್ಥೆಯನ್ನೇ ಗಮನಿಸಿ ನೋಡಿ, ಇಂದಿಗೂ ಅನೇಕ ಹಳ್ಳಿಗಳಿಗೆ, ಲಕ್ಷಾಂತರ ಜನರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ.ಆದರೆ ನಗರದ ಅದೆಷ್ಟೋ ಕಡೆಗೆ 3ಜಿ ಸೇವೆ ಬಂದು ಈಗ 4ಜಿ ಸೇವೆಯೂ ಬಂದಿದೆ.ಆದರೆ ಅದೆಷ್ಟೋ ಹಳ್ಳಿಗಳಲ್ಲಿ  ಇಂದಿಗೂ 2ಜಿ ಸೇವೆಯೇ ಬಂದಿಲ್ಲ. . !. ನಗರಕ್ಕೆ ಹಾಗೆ ಬಂದಿರುವ ಆಧುನಿಕ ಸೇವೆಗಳಿಂದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈಗ ಹೇಳುವುದು  "ಅಲ್ಲಿ  ಮನೆಗಳೇ ಇಲ್ಲ. .  ಕಾಡುಗಳೇ ಎಲ್ಲಾ. . !.". ಇಂತಹ ವಿಪರ್ಯಾಸಕ್ಕೆ ಏನೆನ್ನೋಣ.  . !.