29 ಆಗಸ್ಟ್ 2009

ಒಂದು ಘಟನೆಯ ಹಿಂದೆ. . . .

ನಿಜಕ್ಕೂ ಈ ಘಟನೆ ನನ್ನನ್ನು ಒಂದು ಕ್ಷಣ ವಿಚಲಿತನಾಗುವಂತೆ ಮಾಡಿತ್ತು.ಮತ್ತು ಹತ್ತಾರು ಅನುಭವಕ್ಕೆ ಕಾರಣವಾಯಿತು. ಅಷ್ಟಕ್ಕೂ ಈ ಘಟನೆ ಒಂದರ್ಥದಲ್ಲಿ ಕ್ಷುಲ್ಲಕ. ಆದರೆ ಅಲ್ಲಿಯ ವರ್ತನೆ ಮಾತ್ರಾ ಹಾಗೆ ಹೇಳಲು ಸಾಧ್ಯವರಲಿಲ್ಲ. ಯಾಕೆಂದರೆ ಆತ ಒಬ್ಬ ಸೆಕ್ಯುರಿಟಿ ಗಾರ್ಡ್. ಆತನ ಕೆಲಸ ನಿಜಕ್ಕೂ ಸೆಕ್ಯರಿಟಿಯೇ. ಆದರೆ ಎಲ್ಲಿ ಎಚ್ಚರ ವಹಿಸಬೇಕಾಗಿತ್ತೋ ಅಲ್ಲಿ ವಹಿಸಿಲ್ಲ.ಮತ್ತ ಹೇಗೆ ಆತ ನಡೆದುಕೊಳ್ಳಬೇಕಿತ್ತೋ ಹಾಗೆ ಆತ ನಡೆದುಕೊಳ್ಳಲಿಲ್ಲ.

ಇಂದು ನಮ್ಮ ರಾಜ್ಯದ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ದ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿತ್ತು.ಬಹುಶ: ಇಂತಹ ಕಾರ್ಯಕ್ರಮ ಇತರ ಯಾವ ದೇವಸ್ಥಾನದಲ್ಲೂ ನಡೆಯುವುದಿಲ್ಲ.ಹಾಗಾಗಿ ಈ ಬಗ್ಗೆ ಸಾರ್ವಜನಿಕರ ಮಾಹಿತಿ ಮತ್ತು ಅವರ ಕರೆಯ ಮೇರೆಗೆ ಆಸಕ್ತಿಯಿಂದ ವಿಶೇಷವಾದ ವರದಿಯನ್ನು ತಯಾರಿಸುದಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 7.30 ರ ಸುಮಾರಿಗೆ ಹೋಗಿದ್ದೆ ಅವಾಗಿನಿಂದಲೇ ದೇವಸ್ಥಾನದ ಹೊರ ಆವರಣದಲ್ಲಿ ಅಗತ್ಯ ಚಿತ್ರಗಳ್ನು ದಾಖಲಿಸುತ್ತಲಿದ್ದೆ.ಹಾಗೇ ಸುಮಾರು 9.30 - 10 ರ ಸುಮಾರಿಗೆ ಅಲ್ಲೇ ಹೊರ ಆವರಣಕ್ಕೆ ಬಂದಂತಹ ಒಬ್ಬ ಸೆಕ್ಯುರಿಟಿ ಗಾರ್ಡ್ ಪ್ರಶ್ನಿಸಿದ್ದೇ ಹೀಗೆ ... ನೀವ್ಯಾರು...? ನೀವ್ಯಾಕೆ ... ಫೋಟೋ ತೆಗೀತೀರಿ...?? ನಿಮ್ಗೆ ಪರ್ಮಿಶನ್ ಕೊಟ್ಟೋರ್‍ಯಾರು...?? ಹಾಗೆಲ್ಲ ಇಲ್ಲಿ ಆಗಲ್ಲ... ಎಂದು ಹೇಳುತ್ತಾ ದರ್ಪದಿಂದ ಬಂದ ... ನಾನು ಎಲ್ಲದಕ್ಕೂ ಒಂದೇ ಉತ್ತರ ಕೊಟ್ಟೆ ನಾನು ಪರ್ಮೀಶನ್ ತೆಗೆದೇ ಚಿತ್ರೀಕರಣ ಮಾಡುತ್ತಿದ್ದೇನೆ... ಅಷ್ಟಕ್ಕೂ 15 ವರ್ಷಗಳಿಂದ ಕುಕ್ಕೆಗೆ ಆಗಮಿಸುತ್ತಿದ್ದೇನೆ.. ದೇವಳದ ಹೊರಾಂಗಣದಲ್ಲಿ ಯಾರು ಬೇಕಾದ್ರೂ ಫೋಟೋ ತೆಗೀ ಬಹುದಲ್ಲಾ ಎಂದು ಹೇಳಿದೆ ಮಾತ್ರವಲ್ಲ ಇಲ್ಲೂ ತೆಗೀಬಾರ್‍ದು ಅಂತಾದ್ರೆ ಇಲ್ಲೊಂದು ಬೋರ್ಡ್ ಹಾಕ್ಬೇಕು ಎಂದೆ... ಆತ ಅಷ್ಟರಲ್ಲಿ ನನ್ನ ಕ್ಯಾಮಾರಾ ಕಸಿದುಕೊಂಡ... ನಂತರ ನಾನು ಮಾಧ್ಯಮದ ಪ್ರತಿನಿಧಿ ಅಂತ ಆತನಿಗೂ ತಿಳೀತು ಕ್ಯಾಮಾರ ಕೊಟ್ಟ.... ಆ ಬಳಿಕ ನಾನು ಆತ ಕ್ಯಾಮಾರ ಕಸಿದುಕೊಂಡ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡಿದೆ.

ನೋಡಿ ಆತ ಕೆಲಸ ಮಾಡುವುದು ದೇವಸ್ಥಾನದಲ್ಲಿ ಆತನೇ ಪೊಲೀಸರ ಮುಂದೆ ಒದರಿದ್ದು ಸುಳ್ಳುಗಳ ಕಂತೆ.... ಆತನ ವಿರುದ್ದ ನಾನೇ ರ್‍ಯಾಶ್ ಆದೆನಂತೆ... ಆತನ ಮೈಮೇಲೆ ಕೈಮಾಡಿದೆನಂತೆ... ನಾನು ದೇವಳದ ಒಳಾಂಗಣಕ್ಕೆ ನುಗ್ಗಲು ಯತ್ನಿಸಿದೆನಂತೆ..... ಕಳೆದ ಒಂದೂವರೆ ವರ್ಷಗಳಿಂದ ಅಲ್ಲಿ ಕೆಲಸ ಮಾಡುವ ಆತನಿಗೆ ನನ್ನ ಪರಿಚಯವೇ ಇಲ್ಲವಂತೆ... ಹೀಗೆ ಹೇಳುತ ಸಾಗಿದ... ಆದರೆ ನನ್ನ ಆತ್ಮಸಾಕ್ಷಿ ಹೇಳಿದ್ದೇನೆಂದರೆ ಇಂದು ಸತ್ಯಕ್ಕೆ ಬೆಲೆ ಇಲ್ಲದ ... ನಮ್ಮ ಮೌನಕ್ಕೆ ಬೆಲೆ ಇಲ್ಲದ ಇದನ್ನೇ ದೌರ್ಬಲ್ಯ ಎಂದು ತಿಳಿಯುವ ಈ ಸಮಾಜದಲ್ಲಿ ಇದನ್ನೆಲ್ಲಾ ಸಮರ್ಥಿಸ ಹೊರಟರೆ ಹೇಗೆ..? ನಮ್ಮ ಆಯಸ್ಸಿನ ಬಹುಪಾಲು ಇಲ್ಲೇ ಕಳೆದುಹೋಗಬಹುದು. ಅದೂ ಯಾವನೋ ಒಬ್ಬ ದೇವರ ಹಣವನ್ನು ರಕ್ಷಣೆಯ ಹೆಸರಿನಲ್ಲಿ ಹೊಟ್ಟೆಯುರೆಯಲು ಉಪಯೋಗಿಸಿಕೊಳ್ಳುತ್ತಿರುವವನ ಜೊತೆ ಕಾಲಹರಣ ಮಾಡಿದರೆ ಹೇಗೆ ಆಂತ ಅನಿಸಿತು. ಇಂತಹ ಕ್ಷೇತ್ರಕ್ಕೆ ಹೆಚ್ಚು ಪ್ರಚಾರವನ್ನು ನೀಡಿ ಇನ್ನಷ್ಟು ಜನ ಇಲ್ಲಿಗೆ ಬರುವಂತಾಗಿ ಹೊಟ್ಟೆ ಹೊರೆಯುವ ಮಂದಿ ಅಮಾಯಕ ಭಕ್ತರನು ವಂಚಿಸಿ ಅವರಿಗೂ ದರ್ಪ ತೋರಿ ತಮ್ಮ ಪೌರುಷವನ್ನು ತೋರುವಂತೆ ಮಾಡುತ್ತೇವಲ್ಲಾ ನಿಜಕ್ಕೂ ನಾವು ಮೂರ್ಖರು ಅಂತ ನನಗೆ ಅನ್ನಿಸಿದ್ದು ಸತ್ಯ. ದೇವರ ಮುಂದೆ ನಾವೆಲ್ಲಾ ಸಣ್ಣವರು ಅಂತ ಹಿರಿಯರು ಹೇಳಿದ್ದನು ನಾವು ಕೇಳಿದರೆ ಇವರಿಗೆಲ್ಲಾ ದೇವರಿಗಿಂತ ನಾವೇ ದೊಡ್ಡವರು ಎಂಬುದನ್ನು ಕಲಿಯಬೇಕಾಗಿದೆ. ಹಾಗಾಗಿ ದೇವರು ಸರ್ವಾಂತರ್ಯಾಮಿ ಅಂತಲೂ ನಮಗೆ ಹಿರಿಯರು ಹೇಳಿದ್ದಾರಲ್ಲಾ ನಿಜಕ್ಕೂ ಇಂದು ಇದುವೇ ಸತ್ಯ.ಇಂದಿಗೆ ಇದುವೇ ಉತ್ತಮ.

ಕುಕ್ಕೆಯಲ್ಲಿ ನಿಜ್ಕಕೂ ಸೆಕ್ಯರಿಟಿ ಗಾರ್ಡ್‌ಗಳು ಬೇಕಾ ಬೇಡವಾ ಅಂತ ಯೋಚಿಸುವುದು ಇಂದಿನ ಅನಿವಾರ್ಯತೆ. ನಿಜಕ್ಕೂ ಅಲ್ಲಿ ಆ ಬಗ್ಗೆ ಜನ ಮಾತನಾಡುತ್ತಿದ್ದರು, ಅಲ್ಲಿ ಅಮಾಯಕ ಭಕ್ತರನ್ನು ಗದರಿಸುವುದಕ್ಕೆ ಮಾತ್ರಾ ಈ ಸೆಕ್ಯರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದಂತಾಗಿದೆ... ಭದ್ರತೆ ಹೆಸರಿಗೆ ಮಾತ್ರಾ ಎಂಬ ಮಾತು ಇಲ್ಲಿ ಕೇಳುತ್ತಿತ್ತು...

ಅದಿರಲಿ ದೇವಸ್ಥಾನಗಳೆಲ್ಲವೂ ಹೀಗೆಯಾ...?? ಅಲ್ಲಿ ದೇವರ ಹೆಸರಿನಲ್ಲಿ ದೇವರಾಗುವವರೇ ಹೆಚ್ಚಾ ಅಲ್ಲ ಭೂತಗಳಾಗುವವರು ಹೆಚ್ಚಾ ಎಂಬುದೇ ಒಂದು ಪ್ರಶ್ನೆ..??. ನಿಜಕ್ಕೂ ದೇವರಿದ್ದರೆ ಇದೆಲ್ಲಾ ಆತನಿಗೆ ಏಕೆ ಗೊತ್ತಾಗುತ್ತಿಲ್ಲ. ..?

23 ಆಗಸ್ಟ್ 2009

ಗುಹೆಯೊಳಗೆ ಜಲಪಾತ .......




ಪ್ರಕೃತಿಯೊಳಗಿನ ವೈಚಿತ್ರ್ಯವನ್ನು ಬಲ್ಲವರು ಯಾರೂ ಇಲ್ಲ. ಅದರೊಳಗೆ ಏನೆಲ್ಲಾ ಹುದುಗಿರಬಹುದು ಎಂಬುದು ಕಲ್ಪನೆಗೂ ನಿಲುಕುವುದಿಲ್ಲ. ಅಂತಹ ವೈಚಿತ್ರ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಅನಂತಾಡಿಯಲ್ಲಿದೆ . ಇಲ್ಲಿನ ಗುಹೆಯೊಳಗೆ ಜಲಪಾತವೊಂದಿದೆ. ಇದನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಈ ಗುಹೆಯೊಳಗೆ ಭಕ್ತರು ತೀರ್ಥ ಸ್ನಾನ ಮಾಡಿ ಪಾವನರಾಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿ ಅನಂತಾಡಿಯ ಸನಿಹದಲ್ಲಿ ಸುಳ್ಳಮಲೆ ಎಂಬ ಪ್ರದೇಶವಿದೆ. ದಟ್ಟ ಕಾನನದ ನಡುವೆ ಇರುವ ಈ ಪ್ರದೇಶವು ಈಗ ಜನರ ಆಕರ್ಷಣೆಯ ಮತ್ತು ಪೂಜ್ಯ ಭಾವನೆಯ ಪ್ರದೇಶವಾಗಿದೆ. ಇಲ್ಲಿರುವ ಗುಹೆಯೇ ಈ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ. ಮನುಷ್ಯ ಯಾವಾಗಲೂ ನಂಬಿಕೆ, ವಿಶ್ವಾಸದ ಮೇಲೆಯೇ ಬದುಕುತ್ತಾನೆ.ಹಾಗಾಗಿ ಅಲ್ಲಿ ಪರಿಶುದ್ದತೆ ಇರುತ್ತದೆ.ಕೆಲವೊಮ್ಮೆ ಆ ನಂಬಿಕೆಗಳು ಹುಸಿಯಾಗುವುದೂ ಇದೆ. ಆದರೆ ಇಲ್ಲಿ ಹಾಗಾಗುವುದಿಲ್ಲ. ಅಂತಹ ನಂಬಿಕೆಗಳು ಇಲ್ಲಿ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಬೆಳೆದಿದೆ. ಅದು ಇಲ್ಲಿ ಗುಹೆಯ ರೂಪದಲ್ಲಿ ಕಾಣಿಸುತ್ತದೆ. ಸುಳ್ಳ ಮಲೆಯ ಈ ಪ್ರದೇಶದಲ್ಲಿರುವ ಗುಹೆಯ ಒಳಗಡೆ ಕಿರು ಜಲಪಾತವೊಂದು ಧಮುಕುತ್ತದೆ. ಈ ಜಲಪಾತದಲ್ಲಿ ಸ್ನಾನ ಮಾಡಿದರೆ ಎಲ್ಲಾ ವ್ಯಾಧಿಗಳು ನಿವಾರಣೆಯಾಗಿ ಪಾವನವಾಗುತ್ತದೆ ಎಂಬ ನಂಬಿಕೆ ಇದೆ. ವರ್ಷದಲ್ಲಿ ಕೇವಲ 4 ದಿನ ಮಾತ್ರಾ ಇಲ್ಲಿ ತೀರ್ಥ ಸ್ನಾನ ಮಾಡಬಹುದಾಗಿದೆ. ಉಳಿದ ಸಮಯದಲ್ಲಿ ಇಲ್ಲಿಗೆ ಪ್ರವೇಶವಿರುವುದಿಲ್ಲ. ಶ್ರಾವಣ ಮಾಸದ ಅಮವಾಸ್ಯೆಯಿಂದ ಆರಂಭಗೊಂಡು ಗಣೇಶ ಚೌತಿಯವರೆಗೆ ಇಲ್ಲಿ ಗುಹೆಯೊಳಗಡೆ ಪ್ರವೇಶವಿರುತ್ತದೆ. ದಕ್ಷಿಣ ಭಾರತದ ಏಕೈಕ ಮತ್ತು ಅತ್ಯಂತ ಹೆಸರುವಾಸಿಯಾದ ಈ ಪ್ರದೇಶದಲ್ಲಿ ಕಾರಣಿಕ ಪುರುಷರು ವಾಸಿಸುತ್ತಿದ್ದರು ಎಂದು ನಂಬಲಾಗಿದೆ.ಅನೇಕ ಪವಾಡಗಳು ಇಲ್ಲಿ ನಡೆದಿದೆ ಎಂದೂ ಹೇಳಲಾಗುತ್ತದೆ. ಶ್ರಾವಣ ಮಾಸದ ಅಮವಾಸ್ಯೆಯಂದು ಇಲ್ಲಿ ಸ್ಥಳಿಯ ಮನೆತನದವರು ಬಂದು ಪೂಜೆ ಮಾಡುತ್ತಾರೆ. ಮಾತ್ರವಲ್ಲ ಅಂದು ಇನ್ನೊಂದು ಮನೆತನದವರು 16 ಗಂಟಿನ ಬಿದಿರಿನ ಏಣಿಯನ್ನೂ ಕೂಡಾ ತಯಾರಿಸುತ್ತಾರೆ. ಇದರ ಮೂಲಕ ಗುಹೆಯೊಳಗಡೆ ಇಳಿಬೇಕಾಗುತ್ತದೆ.ಈ ಗುಹೆಯೊಳಗಡೆ “ಗೋವಿಂದಾ...” ಎನ್ನುವ ಘೋಷಣೆಯೊಂದಿಗೆ ಇಳಿಯುತ್ತಾರೆ.

ಈ ಗುಹೆಯೊಳಗಡೆ ತೀರಾ ಕತ್ತಲು ಆವರಿಸಿರುತ್ತದೆ. ಕೃತಕವಾಗಿ ವ್ಯವಸ್ಥೆ ಮಾಡಿಕೊಂಡ ಬೆಳಕೇ ದಾರಿ ದೀಪವಾಗುತ್ತದೆ. ಗುಹೆಯುದ್ದಕ್ಕೂ ನೀರಿನ ಹನಿಗಳು ಮುತ್ತಿಕ್ಕುವ ಇಲ್ಲಿ ಬೆನ್ನು ಬಗ್ಗಿಸಿಕೊಂಡೇ ಸಾಗಬೇಕು. ಅರ್ಧ ದಾರಿಯಲ್ಲಿ 16 ಗಂಟಿನ ಬಿದಿರಿನ ಏಣಿ ಸಿಗುತ್ತದೆ ಅದರಲ್ಲಿ ಇಳಿದು ಕೆಳಗಡೆ ಇಳಿದ ಬಳಿಕ ಅತ್ಯಂತ ಕಿರು ದಾರಿಯಲ್ಲಿ ಅಂದರೆ ಒಬ್ಬ ಮಾತ್ರಾ ಹೋಗಬಹುದಾದ ಹಾದಿಯಲ್ಲಿ ಒಳಸಾಗಿದಾಗ ಅಲ್ಲಿ ಜಲಪಾತ ಬೀಳುತ್ತಿರುತ್ತದೆ. ಅದರೊಳಗಡೆ ಸ್ನಾನ ಮಾಡಿದಾಗ ಪಾವನರಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿದೆಡೆ ತೀರ್ಥ ಸ್ನಾನದ ಕ್ಷೇತ್ರಗಳಿವೆ. ಆದರೆ ಈ ಪ್ರದೇಶವು ಅದೆಲ್ಲಕ್ಕ್ಕಿಂತ ಭಿನ್ನವಾಗಿದೆ ಪ್ರಕೃತಿಯ ನಡುವೆ ಇರುವ ಈ ಪ್ರದೇಶಕ್ಕೆ ದುರ್ಗಮವಾದ ಹಾದಿಯಿದೆ. ಅದೆಲ್ಲವನ್ನೂ ಕ್ರಮಿಸಿ ಮುಂದೆ ಸಾಗಿದಾಗ ಗುಹೆಯಿರುವ ಪ್ರದೇಶ ಸಿಗುತದೆ. ಇಲ್ಲಿಗೆ ಮಹಿಳೆಯರು - ಪುರುಷರೆನ್ನದೆ ಅನೇಕರು ಈ ೪ ದಿನಗಳ ಕಾಲ ಆಗಮಿಸಿ ಗುಹೆಯೊಳಗಡೆ ಸಾಗಿ ಸ್ನಾನವನ್ನು ಮಾಡುತ್ತಾರೆ. ಈ ತೀರ್ಥವು ಉತ್ತರದ ಕಾಶಿಯಿಂದ ಇಳಿದು ಬರುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.ಗುಹೆಯ ಬಳಿಯಿರುವ ಬಿಳಿ ಬಣ್ಣದ ಹೂವುಗಳು ಕೂಡಾ ಆಕರ್ಷಕವಾಗಿ ಕಾಣುತ್ತದೆ.ಈ ಪ್ರದೇಶವು ಗುಡ್ಡ ಪ್ರದೆಶದಲ್ಲಿದೆ. ಆದರೆ ಇಲ್ಲಿ ಗುಹೆಯೊಳಗೆ ಇರುವ ಜಲಪಾತ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇಲ್ಲಿನ ಜಲಪಾತದ ನೀರು ಈ ಪ್ರದೆಶದಲ್ಲಿ ಎಲ್ಲೂ ಹರಿಯದೆ ಸುಮಾರು 3ಕಿಲೋ ಮೀಟರ್ ದೂರದಲ್ಲಿ ಮೇಲೇಳುತ್ತದೆ. ಈ ನಡುವೆ ಇಲ್ಲಿ ತೀರ್ಥ ಸ್ನಾನ ಮಾಡುವ ಭಕ್ತರು ಗೋವಿಂದಾ.. ಎನ್ನುವ ಘೋಷಣೆ ಜೋರಾಗಿ ಹಾಕಿದರೆ ನೀರು ಕೂಡಾ ಹೆಚ್ಚಾಗಿ ಬರುತ್ತದೆ ಎನ್ನುತ್ತಾರೆ ಮಾತ್ರವಲ್ಲ ಇಲ್ಲಿ ಸ್ನಾನದ ವೇಳೆ ಭಕ್ತರು ಬಿಡುವ ವೀಳ್ಯದೆಲೆ ಹಾಗೂ ಅಡಕೆಯನ್ನು ಜಲಪಾತದ ಬಳಿ ಬಿಟ್ಟು ಬರುತ್ತಾರೆ. ಈ ವಸ್ತುಗಳೂ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ನೀರಿನಿಂದ ಮೇಲೆ ಬರುತ್ತದೆ ಎಂದು ಹೇಳುತ್ತಾರೆ ಸ್ಥಳೀಯರು. ಹೀಗೆ ತೀರ್ಥ ಸ್ನಾನ ಮಾಡಿದ ಬಳಿಕ ಇಲ್ಲಿರುವ ದೇವರ ಕಲ್ಲುಗಳಿಗೆ ಪೂಜೆಯನ್ನು , ಪ್ರಾರ್ಥನೆಯನ್ನು ಮಾಡುತ್ತಾರೆ.

ಮೊನ್ನೆ ನಾವು ಕೂಡಾ ಈ ಪ್ರದೇಶಕ್ಕೆ ಹೋಗಿದ್ದೆವು. ಅತ್ಯಂತ ಉತ್ಸಾಹದಲ್ಲಿ ಹೋಗಿದ್ದೆವು.ಅಲ್ಲಿ ತಲಪಿದ ಬಳಿಕ ಒಂದಷ್ಟು ಜನರ ತಂಡ ಆ ಗುಹೆಯೊಳಗಡೆ ಹೋಗಿ ಬಂದರ. ನಂತರ ನಮ್ಮನ್ನೂ ಅಲ್ಲಿಯ ಜನ ಒಳಹೋಗಲು ಒತ್ತಾಯಿಸಿದರ.ಹಾಗೆ ನಾವು ಸ್ವಲ್ಪ ಆತಂಕದ ನಡುವೆಯೇ... ಮುಂದಡಿ ಇಟ್ಟೆವು... ಮುಂದೆ ಸಾಗಿ... ಏಣಿ ಇಳಿದು ಕೊಂಚ ಸಾಗಿದಾಗ ಕಡಿದಾದ ದಾರಿ... ಅಲ್ಲೂ ಸಾಗಿ ಒಳಹೋಗಾದ ಜಲಪಾತ ಕಂಡಿತು... ಅದರೊಳಗೆ ಆಮ್ಲಜನಕದ ಕೊರತೆ ಆಗ ಕಾಣುತ್ತಿತ್ತು... ಆದರೂ ನಮ್ಮೊಂದಿಗೆ ಇದ್ದವರು ಮಾತ್ರಾ ಬಿಡಲಿಲ್ಲ.. ನಾವೂ ತೀರ್ಥ ಸ್ನಾನ ಮಾಡುವಂತೆ ಮಾಡಿದರು... ಹಾಗೆ ಆಮ್ಲಜನಕದ ಕೊರತೆಯ ಪರಿಣಾಮ ..ನಮ್ಮನ್ನೂ ಗೋವಿಂದಾ...ಗೋವಿಂದಾ ಎನ್ನುವಂತೆ ಮಾಡಿತು... ಬೇಗ ಬೇಗ ಗೋವಿಂದ ಹಾಕಿ ಹೊರಬಂದಾಗ ಅಬ್ಬಾ..ಗೋವಿಂದಾ ಎಂದೆನಿಸಿತು... ಅದುವರೆಗೆ ನೆನಪಾಗದ ಗೋವಿಂದರುಗಳೆಲ್ಲಾ ಆಗ ನೆನಪಾದ್ದು ನಂತರ ನಮಗೆ ನಾವೇ ಹೇಳಿಕೊಂಡು ನಗುವಂತೆ ಮಾಡಿತು. ಆದರೆ ಆ ಕಾರ್ಯಕ್ರಮ ಮಾತ್ರಾ ಖುಷಿ ನೀಡಿತ್ತು. ಹೊಸತೊಂದು ಅನುಭವ ನೀಡಿತ್ತು. ಪ್ರಕೃತಿಯ ಅಚ್ಚರಿಯನ್ನು ಕಾಣುವಂತೆ ಮಾಡಿತ್ತು,......


ಇಲ್ಲಿ ಕಾಲೆಳೆಯುವುದೇ ಸರಿಯಂತೆ...!!



ಮೊನ್ನೆ ಹಾಗೇ ಸುಮ್ಮನೆ ಯೋಚಿಸುತ್ತಿದೆ. ನಿನ್ನೆಯವರೆಗೆ ಅದಾವ ರೀತಿಯಲ್ಲಿ ಮಾತನಾಡುತ್ತಿದ್ದವ ಇಂದು ಬದಲಾಗಿದ್ದಾನೆ. ಆತ ಅದೇನೋ "ದೊಡ್ಡ " ಹುದ್ದೆಯಲಿದ್ದ. ಆದರೆ ನಾನು ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುದೂ ನನಗೆ ತಿಳಿದಿತ್ತು. ಒಂದಂತೂ ಸತ್ಯವಾಗಿತ್ತು. ನನ್ನ ಹುದ್ದೆ "ದೊಡ್ಡ"ದಲ್ಲದಿದ್ದರೂ ವ್ಯಾಪ್ತಿ ದೊಡ್ಡದಾಗಿತ್ತು ಹೀಗಾಗಿ ಅನೇಕ ಕೆಲಸಗಳು ಕೆಲವೊಮ್ಮೆ ಸಲೀಸಾಗಿ ಬಿಡುತ್ತಿತ್ತು. ಈ ಕಾರಣಕ್ಕಾಗಿ ಅನೇಕರು ನನ್ನ ಸಹಾಯ ಪಡೆಯುತ್ತಿದ್ದರು. ಅಲ್ಲೂ ಹಾಗೆತೇ ಆಯಿತು. ಆತ ದಿನಂಪ್ರತಿ ನನಗೆ ಫೋನಾಯಿಸುತ್ತಿದ್ದ . ಅದೇನಾಯಿತು.. ಅದು ಹೀಗೆ.. ಇದು ಹೀಗೆ ಅಂತ ವಿವಿದ ಲೋಕಾಭಿರಾಮ ಬಿಡುತ್ತಲಿದ್ದ. ಹಾಗೇ ಆತನ ಕೆಲಸವೂ ಮುಗಿಯಿತು. ಕೆಲ ಸಮಯದ ಬಳಿಕ ನನಗೂ ಆತನಿರುವಲ್ಲಿ ಕೆಲವೊಂದು ಆಗಬೇಕಿತ್ತು. ಆತ ಫೋನೇ ತೇಗೀಲಿಲ್ಲ. ಒಂದಷ್ಟು ಸಮಯದ ಬಳಿಕ ಆತ ಫೋನು ಮಾಡಿವನೇ ಹೇಳಿದ ನಾನು ಸ್ವಲ್ಪ ಬ್ಯುಸಿ...!!. ಕೆಲಸದ ಬಗ್ಗೆ ಹೇಳಿದಾಗ ಇಲ್ಲ ನನಗೆ ಅವರನ್ನು ಪರಿಚಯವೇ ಇಲ್ಲ. ಅಂದ...!! ಅದು ಬಿಡಿ ಕೆಲಸ ಆಗುತ್ತಾ ಎಂದಾಗ ಇಲ್ಲ ಆಗಲ್ಲ ಎಂದು ಹೇಳಿಯೇ ಬಿಟ್ಟ.....!! ಇಲ್ಲೂ ಒಂದು ವಿಷಯ ಇತ್ತು. ಏನೆಂದರೆ ಆತ ಅನೇಕ ಬಾರಿ ಇಲ್ಲಿ ಆತನ ಕೆಲಸಕ್ಕಾಗಿ ಓಡಾಡಿದ್ದ. ಆದರೆ ಕೆಲಸ ಆಗಿರಲಿಲ್ಲ. ಆದರೆ ನಾನು ಮಾತನಾಡಿದ ಆ ಕೆಲಸ ತಕ್ಷಣವೇ ಆಗಿತ್ತು. ಹಾಗಾಗಿ ಆತನಲ್ಲಿ ಒಳಗಿನ ಮತ್ಸರ ಹೆಚ್ಚುತ್ತಿತ್ತು ಎಂದು ಆತನ ಮಾತುಗಳೇ ಹೇಳುತ್ತಿತ್ತು. ಅದರ ಪ್ರತೀಕಾರ ನನಗೆ ಸಿಕ್ಕಿದ್ದು ಇಲ್ಲಿ.ಸರಿ ಯಾಕೆಂದರೆ ನಾವು ಯಾವ ಕೆಲಸವನ್ನೂ ಸ್ವಾರ್ಥದ ದೃಷ್ಠಿಯಿಂದ ಮಾಡಬಾರದು ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಬೇಕು ಎಂಬ ಮಾತನ್ನು ನಂಬಿದವರು. ಮತ್ತು ಆ ವಾಕ್ಯವನ್ನು ಆವಾಗ‌ಆವಾಗ ನೆನಪಿಸಿಕೊಳ್ಳುತ್ತಲೇ ಇರುವವರು. ಮತ್ತು ಓದುತ್ತಲೂ ಇರುವವರು. ಹಾಗಾಗಿ ತಲೆಕೆಡಿಸಿಕೊಂಡಿಲ್ಲ. ಮತ್ತು ಬೇರೆ ದಾರಿ ಹಿಡಿಯುವುದು ಅನಿವಾರ್ಯವೂ ಆಗಿತ್ತು. ಕೆಲಸವೂ ಆಗಿತ್ತು. ಅದಲ್ಲ ನಾನು ಯೋಚಿಸುತ್ತ ಸಾಗಿದ್ದು ಮತ್ತು ಈ ಸಮಾಜದ ಅನೇಕ ಸಂಗತಿಗಳನ್ನು ನೋಡಿದಾಗ ಮತ್ತು ಪುಸ್ತಕ ಓದಿದಾಗ ತಿಳಿಯುವುದು ಏನೆಂದರೆ ಏಕೆ ಮನುಷ್ಯ ಹೀಗೆ.. ಮತ್ಸರದಲ್ಲೇ ಮತ್ತು ಕಾಲೆಳೆಯುವದರಲ್ಲೇ ಕಾಲ ಕಳೆಯುವುದೇತಕ್ಕೆ...???

ಇದು ನನ್ನ ಒಬ್ಬನ ಮಾತಲ್ಲ.ಇತ್ತೀಚೆಗೆ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಮಿತ್ರರೊಬ್ಬರು ಈ ಮಾತನ್ನು ಉಲ್ಲೇಖಿಸಿದ್ದರು. ಮನುಷ್ಯನ ಗುಣ ಹುಟ್ಟಿನಿಂದಲೇ ಬರುತ್ತದೆ. ಮೊನ್ನೆ ಬಬ್ರು ಹೇಳುತ್ತಲಿದ್ದರು. ಮಗು ಬೆಳೆಯುತ್ತಾ ಅದಕ್ಕೆ ಜೇಬು ಇರುವ ಅಂಗಿ ಹಾಕುತ್ತಲೇ ಅದಕ್ಕೆ ಮತ್ಸರಗಳು ಆರಂಭಗೊಳ್ಳುತ್ತದೆ. ಆ ಜೇಬಿನಲ್ಲಿ ಏನೆಲ್ಲ ಆ ಹಾಕಿಕೊಳ್ಳಬಹುದು ಮತ್ತು ಇನ್ನೊಂದು ಮಗು ಏನನ್ನೆಲ್ಲಾ ಹಾಕಿಕೊಳ್ಳುತ್ತದೆ ಎನ್ನುವುದನ್ನು ಅದು ನೋಡುತ್ತಲೇ ಇರುತ್ತದೆ. ಮತ್ತು ಅದಕ್ಕಿಂತ ಹೆಚ್ಚಿನದನು ಆ ಜೇಬಲ್ಲಿ ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಹಾಗಾಗಿ ಆ ಜೇಬಿನ ಬದಲಾವಣೆಗೆ ಸಾಧ್ಯವಿಲ್ಲ. ಏಕೆಂದರೆ ಜೂಬು ಬೇಕಲ್ಲ... ಅದು ತಿಳಿದಿದ್ದರೂ ಇಲ್ಲಿ ದಾಖಲಿಸುವುದು ನನ್ನ ಸಮಾಧಾನಕ್ಕಾಗಿ ಮಾತ್ರವೇ..

ನಾವು ಮಾಡುವ ಎಲ್ಲಾ ಹೆಲ್ಪ್‌ಗಳು ಮತ್ತೆ ಸಿಗುತ್ತವೆ ಎಂದಲ್ಲ. ಅದು ಮಿತ್ರತ್ವದ ಕಾರಣಕ್ಕಾಗಿ ಮತ್ತು ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ. ಆದರೆ ಇಂದು ಅದೇನೋ ದೊಡ್ಡ ಹುದ್ದೆ ಸಿಕ್ಕ ತಕ್ಷಣ ತನಗೆ ಎಲ್ಲವೂ ಆಯಿತು ಎನ್ನುವ ಹುಂಬತನಕ್ಕೆ ಯಾರು ಏನೂ ಹೇಳಲಾಗದು. ಮತ್ತು ಅಂತಹವರು ಕೇವಲ ಸ್ವಂತ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಾರೆಯೇ ಹೊರತು ಸಂಬಂಧಗಳು ಅವರಿಗೆ ಬೇಕಾಗಿಲ್ಲ. ನಾವಾದರೂ ನಮ್ಮ ಕೆಲಸ ಬಿಟ್ಟು ಆ ಮಿತ್ರತ್ವಕ್ಕಾಗಿ ಸಂಬಂದಕ್ಕಾಗಿ ಏನಾದರೂ ಮಾಡಿ ಬಿಡುತ್ತವೆ. ಆದರೆ ಅದರ ನೆನಪಾದರೂ ಇರಬೇಕಿತ್ತು ಅಂತ ನಾವು ಯೋಚಿಸುತ್ತೇವೆ. ಹಾಗೆಂದು ಆತ ನಮ್ಮ ಗುಲಾಮನಾಗಿರ ಬೇಕು ಎಂಬುದೂ ಅಲ್ಲ.

ಅದಕ್ಕಿಂಲೂ ಇನ್ನೊಂದು ನೋವಿನ ಸಂಗತಿ ಎಂದರೆ ನಮ್ಮಿಂದ ಪ್ರಯೋಜನ ಪಡೆದ ಮಂದಿಯೇ ಮತ್ತೆ ನಮ್ಮನ್ನು ಅಪಹಾಸ್ಯ ಮಾಡುವುದು.. ನಮ್ಮ ಬಗ್ಗೆ ಇನ್ನಿಲ್ಲದ ಪ್ರಚಾರ ಹಬ್ಬಿಸಿಬಿಡುವುದು ಮತ್ತು ಹಾಸ್ಯ ವಸ್ತುವಾಗಿ ಕಾಣುವುದು. ನಿಜಕ್ಕೂ ಇಂತಹವರ್‍ನ ಕಂಡಾಗ ಮೈಯಿಡೀ ಉರಿಯುತ್ತದೆ. ಇನ್ನೂ ಕೆಲವರು ಬೇರೊಬ್ಬರ ಮೂಲಕ ನಮ್ಮ ದಾರಿಗೆ ಅಡ್ಡಗಾಲು ಹಾಕುವುದು.. ಇನ್ನೊಂದರ್ಥದಲ್ಲಿ ಕಾಲೆಳೆಯುವುದು...!!
ಬೇಕಿತ್ತಾ ಮನಗೆ ವಿಷ ಸರ್ಪಗಳೆಗೆ ಹಾಲೆರೆಯುವ ಕೆಲಸ ಅಂತ ನನಗೂ ಒಂದೊಂದು ಸಾರಿ ಅನಿಸಿದ್ದಿದೆ... ಆದೆರೆ ಅವುಗಳೆಲ್ಲಾ ಮೊದಲು ಇಲಿಯಾಗಿ ಬಂದು ಹಾವಿನ ರೂಪ ಪಡೆಯುವುದೇ ಒಂದು ವಿಚಿತ್ರ. ಈ ಸಮಾಜವೇ ಹಾಗೆ. ನಮ್ಮಲ್ಲೂ ಒಂದು ಶಕ್ತಿಯಿದೆ, ನಮ್ಮ ಸಾಧನೆಯಲ್ಲೂ ಶಕ್ತಿಯಿದೆ ಎಂದು ಅರಿಯುವುದೇ ತಡ ಅಲ್ಲಿಗೆ ಜನ ಬರಲು ಆರಂಭಿಸುತ್ತಾರೆ.. ಕೊನೆಗೆ ನಮ್ಮದೇ ಕಾಲೆಳೆಯಲು ಪ್ರಯತ್ನಿಸುತ್ತಾರೆ. ಕೆಲವರು ಅದರಲ್ಲಿ ಸಫಲರಾಗುತ್ತಾರೆ. ಖುಷಿ ಪಡುತ್ತಾರೆ..ಇದಕ್ಕೆ ಉದಾಹರಣೆಗಳು ಒಂದಲ್ಲ. ನೂರಾರು ಇದೆ ಈ ಸಮಾದಲ್ಲಿ.. ಹಾಗಾಗಿ ಮೊನ್ನೆ ಒಬ್ರು ಹೇಳುತ್ತಿದ್ದರು.. ಮನುಷ್ಯರೆಂದರೆ ಉಣ್ಣಿಯ ಹಾಗೆ ..ಏಕೆ ಗೊತ್ತಾ..? ದನದ ಅಥವಾ ಒಂದು ಪ್ರಾಣಿ ಜೀವಂತವಿದ್ದಾಗ ಅದರ ದೇಹದಲ್ಲಿರುವ ರಕ್ತ ಹೀರಲು ಸಾಲು ಸಾಲಗಿ ಬರುತ್ತವೆ.. ಒಂದು ವೇಳೆ ಆ ಪ್ರಾಣಿ ಸತ್ತರೆ ಎಲ್ಲವೂ ಹಾಗೇ ಸಾಲು ಸಾಲಾಗಿ ಇಳಿದು ಹೋಗುತ್ತದೆ....!!! ಇನ್ನೊಂದು ಪ್ರಾಣಿಯ ಅರಸಿಕೊಂಡು....!! ಮನುಷ್ಯನೂ ಹಾಗಂತೆ...!!.

ಇದು ವಿಷಾದವಲ್ಲ...ಇಲ್ಲಿ ಕಾಲ್ಪನಿಕ ...ಆದರೆ ಸತ್ಯ ಘಟನೆ....!!!

15 ಆಗಸ್ಟ್ 2009

ಹಳ್ಳಿಯಿಂದ ರಾಜಧಾನಿವರೆಗೆ ಗಿಡ ಬೆಳೆಸುವ ರಾಷ್ಟ್ರೀಯ ಹಬ್ಬ. . . .




ಸ್ವಾತಂತ್ರ್ಯದ ದಿನ ಎಲ್ಲೆಡೆ ಧ್ವಜಾರೋಹಣ ... ಸಿಹಿ ಹಂಚುವುದು ..ಒಂದಷ್ಟು ಭಾಷಣ... ಕೊನೆಗೆ ಜನಗಣ ಮನ ... ವಂದನಾರ್ಪಣೆ.... ಡಿಸ್‌ಪಸ್... ಇದಿಷ್ಟು ದಿನದ ಕಾರ್ಯಕ್ರಮ.ಇಂದಲ್ಲ ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಸಂಗತಿ.ಅದರ ಹೊರತಾಗಿ ಏನೋ ಯಾವುದೂ ಆಗುವುದೂ ಇಲ್ಲ. ಆದರೆ ಇಲ್ಲೊಂದು ಶಾಲೆಯಿದೆ ಇದು ಮಾತ್ರಾ ಇದಕ್ಕಿಂತ ಭಿನ್ನವಾಗಿ ಯೋಚಿಸಿದೆ.ರಾಷ್ಟ್ರೀಯ ಹಬ್ಬವೆಂದರೆ ಅದು ಸಿಹಿ ಹಂಚುವುದಕ್ಕೆ ಮಾತ್ರಾ ಸೀಮಿತವಲ್ಲ. ಅದರಾಚೆಗೂ ಆಲೋಚಿಸಿದೆ ಮತ್ತು ಅನುಷ್ಠಾನಕ್ಕೆ ಕೂಡ ತಂದಿದೆ.ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿದೆ.ರಾಷ್ಟ್ರೀಯ ಹಬ್ಬದಂದು ಇಡೀ ಊರನ್ನೇ ಸ್ವಚ್ಚಗೊಳಿಸುವ ಕೆಲಸಕ್ಕೆ ಮುಂದಾಗಿದೆ ಮಾತ್ರವಲ್ಲ ರಾಜಧಾನಿಯವರೆಗೆ ಗಿಡ ಬೆಳೆಸಬೇಕು ಎನ್ನುವ ಯೋಜನೆ ಹಾಕಿಕೊಂಡಿದೆ. ಹಾಗೆಂದ ಕೂಡಲೇ ಇದು ಖಾಸಗೀ ಶಾಲೆಯಲ್ಲ. 1 ನೇ ತರಗತಿಯಿಂದ 1o ನೇ ತರಗತಿಯವರೆಗೆ ಕ್ಲಾಸ್‌ಗಳಿರುವ ಕೊಠಡಿಗಳು ಸರಿಯಾಗಿಲ್ಲದ ಸರಕಾರಿ ಶಾಲೆ. ಈ ಶಾಲೆಯ ಹೆಸರು “ಸೂರ್ಯ”. ನಿಜಕ್ಕೂ ಇಲ್ಲಿ ಹೊಸ ಚಿಂತನೆಯ “ಸೂರ್ಯ” ಉದಯಿಸಿದ್ದಾನೆ. ಆದರೆ ಅದರ ಬೆಳಕು ಇನ್ನಷ್ಟೇ ಹರಿಯಬೇಕಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಚಿಕ್ಕ ಹಳ್ಳಿ ಸೂರ್ಯ. ಊರು ಚಿಕ್ಕದಾಧರೂ ಸೂರ್ಯನಷ್ಟೇ ಪ್ರಖರವಾದ ಬೆಳಕು ಚೆಲ್ಲಬಹುದಾದ ಸಂಗತಿ ಇಲ್ಲಿದೆ.ಇಲ್ಲಿನ ಸರಕಾರಿ ಶಾಲೆಯೊಂದು ಇಡೀ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಸೂರ್ಯದ ಈ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬದಂದು ಶಾಲಾ ಮಕ್ಕಳು ಊರ ತುಂಬೆಲ್ಲ ತುಂಬಿಕೊಂಡಿರುವ ಕಸಗಳನ್ನು , ಪ್ಲಾಸ್ಟಿಕ್‌ಗಳನ್ನು ಹೆಕ್ಕುತ್ತಾರೆ ಮತ್ತು ಇಡೀ ಊರನ್ನು ಸ್ವಚ್ಛಗೊಳಿಸುತ್ತಾರೆ.ಮಾತ್ರವಲ್ಲ ಊರ ಜನ ಸಂಗ್ರಹಿಸಿಡುವ ಪ್ಲಾಸ್ಟಿಕ್‌ಗಳನ್ನು ವಿದ್ಯಾರ್ಥಿಗಳು ಹೆಕ್ಕಿ ತರುತ್ತಾರೆ.ಊರ ಜನ ಕೂಡಾ ಶಾಲೆಯನ್ನು ಪ್ರೀತಿಯಿಂದ ಕಾಣುತ್ತಾರೆ.ಅದಕ್ಕಾಗಿ ಶಾಲೆಯ ಎದುರೇ “ ಇದು ನಮ್ಮ ಶಾಲೆ, ನಮ್ಮೂರ ಸೂರ್ಯ ಶಾಲೆ” ಎಂದೇ ಸ್ವಾಗತಿಸಲಾಗುತ್ತದೆ. ಹಾಗಾಗಿ ಮಕ್ಕಳಿಗೂ ಊರ ಜನರಿಗೂ ನಂಟು ಬೆಳೆದಿದೆ.ಊರ ಜನ ಕೂಡಾ ಈ ಪ್ಲಾಸ್ಟಿಕ್ ಅಭಿಯಾನದಲ್ಲಿ ಸಹಕರಿಸುತ್ತಾರೆ. ಮಕ್ಕಳು ಹೀಗೆ ಊರಿನಿಂದ ತಂದ ಪ್ಲಾಸ್ಟಿಕ್‌ಗಳನ್ನು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ದಾಖಲಿಸಲಾಗುತ್ತದೆ. ಆ ಬಳಿಕ ಅತೀ ಹೆಚ್ಚು ಪ್ಲಾಸ್ಟಿಕ್ ಹೆಕ್ಕಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುವ ಮೂಲಕ ಮಕ್ಕಳ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತದೆ.ಶಾಲಾ ಅಭಿವೃದ್ದಿ ಸಮಿತಿಯು ಹೀಗೆ ಸಂಗ್ರಹವಾದ ತ್ಯಾಜ್ಯವನ್ನು ಮಂಗಳೂರಿನ ತ್ಯಾಜ್ಯ ಘಟಕ್ಕೆ ನೀಡಿ ಮರು ಬಳಕೆಗೆ ಉಪಯೋಗಿಸಲಾಗುತ್ತದೆ. ಹೀಗಾಗಿ ಇಂದು ಸೂರ್ಯ ಎನ್ನುವ ಪುಟ್ಟ ಊರು ಸ್ವಚ್ಚವಾಗಿ ಕಂಗೊಳಿಸುತ್ತಿದೆ. ಸರಕಾರವು ನಿರ್ಮಲ ನಗರ ಯೋಜನೆ ಅನುಷ್ಠಾನಕ್ಕಾಗಿ ಕೋಟ್ಯಂತರ ರುಪಾಯಿ ವ್ಯಯಿಸಿದರೆ ಇಲ್ಲಿ ಖರ್ಚಿಲ್ಲದೆ ಹಮ್ಮಿಕೊಂಡಿರುವ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ಸಿನ ಹಾದಿಯಲ್ಲಿದೆ.




ಇದೇ ಸಂದರ್ಭದಲ್ಲಿ ಇನ್ನೊಂದು ಯೋಜನೆಯನ್ನು ಇದೇ ಶಾಲೆ ಹಮ್ಮಿಕೊಂಡಿದೆ.ಇದು ಕೂಡಾ ಅದೇ ರಾಷ್ಟ್ರೀಯ ಹಬ್ಬದಂದು ಗಿಡ ನೆಡುವ ಯೋಜನೆ. ಅಂದರೆ ಕಾಟಾಚಾರಕ್ಕಾಗಿ ಇಲ್ಲಿ ಗಿಡ ನೆಡುವುದಲ್ಲ. ಪ್ರತೀ ತರಗತಿಯ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಡುತ್ತಾರೆ. ಅಂದರೆ ಒಂದು ರಾಷ್ಟ್ರೀಯ ಹಬ್ಬಕ್ಕೆ ೧೦ ಗಿಡ ನೆಡುತ್ತಾರೆ.ವರ್ಷದಲ್ಲಿ ಕನಿಷ್ಠ ೪ ಹಬ್ಬಗಳನ್ನು ಆಚರಿಸುತ್ತಾರೆ. ಹೀಗೆ ನೆಡುವ ಗಿಡ ರಾಜಧಾನಿಯವರೆಗೂ ತಲುಪಬೇಕು ಎನ್ನುವುದು ಈ ಶಾಲೆಯ ಸಂಕಲ್ಪ. ಅಂದರೆ ಇವರ ಯೋಜನೆಗೆ ಉಳಿದ ಶಾಲೆಗಳು, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎನ್ನುವುದು ಶಾಲಾಭಿವೃದ್ದಿ ಸಮಿತಿಯ ಆಶಯ. ಹೀಗೆ ನೆಡುವ ಗಿಡವನ್ನು ಶಾಲಾ ಮಕ್ಕಳೇ ಆರೈಕೆ ಮಾಡುತ್ತಾರೆ. ಹಾಗೆಂದು ಇಲ್ಲಿ ಉಪಯೋಗಕ್ಕೆ ಬಾರದ ಗಿಡ ನೆಡಲಾಗುವುದಿಲ್ಲ. ಯಾವುದಾದರೂ ಹಣ್ಣಿನ ಗಿಡವನ್ನು ನೆಡಲಾಗುತ್ತದೆ. ಇದರಿಂದ ಮಕ್ಕಳಿಗೂ ಮುಂದೆ ಬಾಯಿ ಸಿಹಿ ಮಾಡಬಹುದಾಗಿದೆ ಎನ್ನವುದು ಯೋಜನೆಯ ಉದ್ದೇಶ.




ಇಲ್ಲಿ ಶಾಲಾ ಪಾಠದೊಂದಿಗೆ ಬಿಡುವಿನ ವೇಳೆಯಲ್ಲಿ ಪಾಠೇತರ ಚಟುವಟಿಕೆ , ಪರಿಸರದ ಬಗ್ಗೆಯೂ ಮಕ್ಕಳಿಗೆ ಹೇಳಲಾಗುತ್ತದೆ. ಇನ್ನು ರಾಷ್ಟ್ರೀಯ ಹಬ್ಬದಂದು ಪರಿಸರ , ವಿಜ್ಞಾನ ಇನ್ನಿತರ ವಿಚಾರಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಕೂಡಾ ಆಯೋಜಿಸಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ಇನ್ನಷ್ಟು ಪರಿಸರ ಜಾಗೃತಿ ಮತ್ತು ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶಾಲಾ ಮುಖ್ಯೋಪಾಧ್ಯಾಯ.

ಶಾಲೆಯ ಇಂತಹ ಚಟುವಟಿಕೆಯಿಂದಾಗಿ ವಿದ್ಯಾರ್ಥಿಗಳು ಈಗ ಪರಿಸರದ ಜಾಗೃತಿ ಬಗ್ಗೆ ಹಾಗೂ ಪರಿಸರ ಉಳಿಸುವ ಬಗ್ಗೆ ಹಿರಿಯರನ್ನೂ ನಾಚಿಸುವ ಹಾಗೆ ಮಾತನಾಡಬಲ್ಲರು. ಒಂದೇ ಉಸಿರಿನಲ್ಲಿ ನಮಗೆ ಇಂತಹ ಯೋಜನೆಗಳು ಬೇಕು ಎನ್ನುತ್ತಾರೆ. ಈ ಶಾಲೆಯಿಂದ ತುಂಬಾ ಕಲಿತಿದ್ದೇವೆ ಎನ್ನುತ್ತಾರೆ ಮಕ್ಕಳು.

ಒಟ್ಟಿನಲ್ಲಿ ಇಂದು ಪರಿಸರ ಜಾಗೃತಿ ಮತ್ತು ಪರಿಸರದ ಉಳಿವಿಗಾಗಿ ಎಳವೆಯಿಂದಲೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಸೂರ್ಯದ ಈ ಸರಕಾರಿ ಶಾಲೆಯಲ್ಲಿ ಸ್ಥಳೀಯರ ಮುಂದಾಳುತ್ವದಲ್ಲಿ ಆಯೋಜಿಸುವ ಇಂತಹ ಕಾರ್ಯಕ್ರಮಗಳೂ ಇಡೀ ರಾಜ್ಯಕ್ಕೆ ವ್ಯಾಪಿಸಬೇಕಾದ ಅಗತ್ಯವಿದೆ. ಆ ಮೂಲಕ ರಾಷ್ಟ್ರೀಯ ಹಬ್ಬಗಳು ಸಾರ್ಥಕತೆಯನ್ನು ಪಡೆಯಬೇಕಾಗಿದೆ. ಸೂರ್ಯದಂತಹ ಶಾಲೆಯಲ್ಲಿ ಉದಯಗೊಂಡ ಇಂತಹ ಯೋಜನೆಯ ಬೆಳಕು ಇಡೀ ರಾಜ್ಯಕ್ಕೆ ವ್ಯಾಪಿಸಲು ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಗುರುತಿಸಬೇಕಾದ ಅಗತ್ಯವೂ ಇದೆ.

03 ಆಗಸ್ಟ್ 2009

ಹರಳು ಕಲ್ಲೆಂಬ ಕುಲ ನಾಶಕ . . . .

ಮನುಷ್ಯನ ಅತಿಯಾಸೆಗೆ ಬಲಿಯಾಗದ್ದು ಯಾವುದು ಹೇಳಿ. ಹೆಣ್ಣಿನಿಂದ ಹಿಡಿದು ಮಣ್ಣಿನವರೆಗೆ ಎಲ್ಲವೂ ಅದರೊಳಗೆ ಬೀಳುತ್ತದೆ.ಇಲ್ಲೊಂದು ಅಂತಹುದೇ ಘಟನೆ ಇದೆ. ನೂರಾರು ಎಕ್ರೆ ಪ್ರದೇಶದ ಅರಣ್ಯ ಬರಿದಾಗುವ ಎಲ್ಲಾ ಸೂಚನೆಗಳು ಇವೆ. ಆದರೂ ಕೂಡಾ ಇಲಾಖೆ , ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರೆ ಇದರ ಅರ್ಥ ಎಲ್ಲರಿಗೂ ಆಗೇ ಆಗುತ್ತದೆ. ಅಲ್ಲಿ ಮಾಮೂಲು ನಡೆಯುತ್ತೆ ಅಂತ. ಆಧರೂ ನಾವು ನಿಸ್ಸಾಹಕರು ಎಂದರೆ ಏನಿದರ ಅರ್ಥ...???

ಅದು ಸುಳ್ಯ ತಾಲೂಕಿನ ಗಡಿಭಾಗ. ಕೊಲ್ಲಮೊಗ್ರ ಪ್ರದೇಶ. ಇಲ್ಲಿ ಬೆಲೆಬಾಳುವ ಹರಳು ಇದೆ ಎನ್ನುವ ಸಂಗತಿ ಇಂದು ನಿನ್ನೆಯಲ್ಲ ಸರಿಸುಮಾರು 20 ವರ್ಷಗಳಿಂದ ಪ್ರಚಲಿತದಲ್ಲಿದೆ. ಆ ಹರಳು ಕಲ್ಲಿಗೆ ಬೆಲೆಯೂ ಇದೆ ಅಂತ ಊರ ಮಂದಿಯೆಲ್ಲಾ ಹೇಳುತ್ತಾರೆ. ಹಾಗಾಗಿ ಅದರ ಉತ್ಖನನಕ್ಕೂ ತಂಡೋಪ ತಂಡವಾಗಿ ಜನ ಹೋಗುತ್ತಾರೆ. ಎಲ್ಲಿಗೆ ಹೋಗುತ್ತಾರೆ..? ಅದೇ ಮೀಸಲು ಅರಣ್ಯಕ್ಕೆ. ಅಲ್ಲಿನ ಒಂದು ಹುಲ್ಲು ಕಡ್ಡಿ ಅಲುಗಾಡುವುದಕ್ಕೂ ಅರಣ್ಯು ಇಲಾಖೆಯ ಪರ್ಮೀಶನ್ ಬೇಕು ಎನ್ನುವಾಗ ಇಲಿನ ಜನ ಅದ್ಹೇಗೆ ಅದರೊಳಗೆ ಗಂಟೆ ಗಟ್ಟಲೆ ಅಲ್ಲಿ ಹರಳು ಕಲ್ಲಿಗಾಗಿ ಅಗೆಯುತ್ತಾರೆ.? ಅದರಲ್ಲೇ ಇರುವುದು ಕುತೂಹಲ. ನನಗೆ ಆ ಪ್ರದೇಶಕ್ಕೆ ಹೋದಾಗ ಅಲ್ಲಿನ ಗಾಳೀ ಸುದ್ದಿಯ ಮೂಲಕ ತಿಳಿದ ವಿಷಯವೆಂದರೆ ಈ ಹರಳು ಕಲ್ಲಿನ ಪ್ರಮುಖ ದಂಧೆಕೋರರು ಇಲಾಖೆಗೆ ಮತ್ತು ಅಧಿಕಾರಿ ವರ್ಗಕ್ಕೆ 17 ಲಕ್ಷ ರುಪಾಯಿಯನ್ನು ನೀಡಿದ್ದರಂತೆ. ಹಾಗಗಿ ಅಧಿಕಾರಿಗಳು ಕಣ್ಣು ಈಗ ಕುರುಡಾಗಿದೆ ಅಂತ ಸುದ್ದಿಯ ಮೇಲೆ ಸುದ್ದಿ ಬರುತ್ತಿತ್ತು. ವಿಷಯದ ಒಳಹೊಕ್ಕಾಗ ಆ ಗಾಳಿ ಸುದ್ದಿಗೆ ಜೀವ ಬಂದದ್ದಂತೂ ಸತ್ಯ. ಹೀಗೆ ಹರಳು ಕಲ್ಲು ದಂದೆ ನಡೆಯುತ್ತಿರುವುದು ಸರಿ ಸುಮಾರು 20 ವರ್ಷಗಳಾಗಬಹುದು. ಆದರೂ ಇದುವರೆಗಿನ ಸರಕಾರ ಯಾವುದೇ ರೀತಿಯಲ್ಲಿ ಅದನ್ನು ಉಳಿಸಿಕೊಳ್ಲುವ ಪ್ರಯತ್ನ ಮಾಡಿಲ್ಲ. ಅದಕ್ಕೂ ಕಾರಣವಿದೆ.ಸರಕಾರದ ಪ್ರಕಾರ ಅದು ಬೆಲೆಬಾಳುವ ಕಲ್ಲು ಅಲ್ಲವಂತೆ. ಹಾಗಾಗಿ ಈ ಪ್ರದೇಶದತ್ತ ಗಮನ ಹರಿಸಿಲಲ್ಲ. ದುರಂತವೆಂದರೆ ಈಗ ಇಲ್ಲಿ ಕಲ್ಲು ಅಗೆಯುವ ಜನಕ್ಕೆ ಪ್ರತೀ ಕೆಜಿಗೆ 2 ರಿಂದ 3 ಸಾವಿರ ಸಿಗುತ್ತಂತೆ. ಅದರಾಚೆಗೆ ಈ ಕಲ್ಲು ತಲುಪಿದರೆ 15 ಸಾವಿರದವರೆಗೆ ಸಿಗುತ್ತಂತೆ.

ಈಗಾಗಲೇ ಕಲ್ಲು ಅಗೆತದಿಂದ ನೂರಾರು ಎಕ್ರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ.ಕಾಡಿನ ನಡುವೆ ಅಲ್ಲಲ್ಲಿ ಹೊಂಡಗಳು ಇದೆ.ಆ ಹೊಂಡಗಳು ಮಳೆಗಾಲದಲ್ಲಿ ಕುಸಿತಗೊಂಡು ಮರಗಳೂ ನಾಶವಾಗುತ್ತದೆ.ಇದು ಹೀಗೆ ಇನ್ನು ಒಂದು ೫ ವರ್ಷ ನಡೆದರೆ ಇಡೀ ಕಾಡು ನಾಶವಾದರೆ ಅಚ್ಚರಿಯಿಲ್ಲ. ಆದರೂ ನಮ್ಮ ಸರಕಾರಗಳು ಇತ್ತ ಗಮನಹರಿಸಿಲ್ಲ ಎನ್ನುವುದೇ ದುರಂತದ ಸಂಗತಿಯಾಗಿದೆ.

ಇಲ್ಲಿನ ಪತ್ರಿಕೆಗಳು ಅದೆಷ್ಟೋ ಬಾರಿ ಈ ಕರ್ಮಕಾಂಡಗಳ ಬಗ್ಗೆ ವರದಿ ಪ್ರಕಟಿಸಿದೆ. ಆದರೂ ಕೂಡಾ ಎಲುಬಿಲ್ಲದೆ ಇಲಾಖೆಗಳು ಒಂದೇ ಒಂದು ಬಾರಿ ಕೂಡಾ ಈ ದಂಧೆಯನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲ. ಇನ್ನೂ ಒಂದು ಅಂಶವೆಂದರೆ ಇಲ್ಲಿರುವ ಅಧಿಕಾರಿಗಳೆಲ್ಲರೂ ನಿವೃತ್ತಿ ಅಂಚಿನಲ್ಲಿರುವವರು. ಸರಿಯಾದ , ದಕ್ಷ ಅಧಿಕಾರಿಯೂ ಇಲ್ಲಿಗೆ ವರ್ಗ ಮಾಡದೇ ಇರುವುದು ಕೂಡಾ ಇಲಾಖೆಯ ಇನ್ನೊಂದು ಗಟ್ಟಿನತ. ಆದುದರಿಂದ ಈ ಕಲ್ಲಿನ ದಂದೆ ಹೇಗೆ ತಡೆಯಲು ಸಾಧ್ಯವಾದೀತು..?.