31 ಮಾರ್ಚ್ 2008

ಮಳೆ ಬಂತು ಇಳೆ ತಂಪಾಯ್ತು... ಆದ್ರೆ...?



ಮಳೆಯಿಂದ ಇಳೆ ತಂಪಾಯಿತು... ಮತ್ತೆ ಕಾದು ಕೆಂಪಾಯಿತು...... ಮತ್ತೆ ಮಣ್ಣಿನ ಕಂಪು ಪಸರಿಸಿತು........

ಈಗ ಒಂದು ಪ್ರಶ್ನೆ ಉದ್ಭವಿಸಿದೆ.

ಅಂದು ಮಳೆ ಬಿತ್ತನೆಯ ಮೂಲಕ ಮಳೆ ಬರಿಸಿದವರು ಈಗ ಮಳೆಯನ್ನು ನಿಲ್ಲಿಸಬಲ್ಲರೇ?

ಯಾಕೆಂದರೆ ಈಗಲೇ ಮಳೆಗಾಲದ ಅಬ್ಬರ ಆರಂಭವಾಗಿದೆ.ರೈತರು ಬೆಳೆದ ಬೆಳೆಗಳೆಲ್ಲಾ ನಾಶವಾಗುತ್ತಿದೆ.ಹಾಗಾಗಿ ಈಗ ಮಳೆ ನಿಲ್ಲಿಸಲು ತಂತ್ರವಿದೆಯೇ ಅಂತ ಹಳ್ಳಿಯ ರೈತರು ಪ್ರಶ್ನಿಸುತ್ತಿದ್ದಾರೆ. ಅಂದು ಪ್ರಕೃತಿಯೊಂದಿಗೆ ಆಟವಾಡಿದ ವಿಜ್ಞಾನವು ಈಗ ಕಟ್ಟುಕತೆಯನ್ನು ಹೇಳುತ್ತಾ ಈ ಬಾರಿ ಮಳೆ ಬೇಗವಿದೆ , ಹವಾಮಾನದ ವೈಪರೀತ್ಯವೇ ಮಳೆಗೆ ಕಾರಣ ಮಳೆ ಇನ್ನು ಎರಡು ದಿನದಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ ಮರುದಿನವೇ ಧಾರಾಕಾರ ಮಳೆ ಸುರಿಯುತ್ತದೆ.ಇದು ಪ್ರಕೃತಿ ಮತ್ತು ವಿಜ್ಞಾನದ ವೈರುಧ್ಯ. ಹಾಗಾಗಿ ಇಂದು ಹಳ್ಳಿಯ ಮಂದಿ ವಿಜ್ಞಾನದ ಕಡೆಗೆ ಒಲವಿದ್ದರೂ ವಿಜ್ಞಾನಿಗಳ ಮಾತಿಗೆ ಆಸಕ್ತಿ ತೋರುತ್ತಿಲ್ಲ. ಅದು ಕೃಷಿ ವಿಜ್ಞಾನಿಗಳನ್ನೂ ಹೊರತಾಗಿಲ್ಲ.

ಇಂದು ಪರಿಸರದ ತೀರಾ ಹದಗೆಟ್ಟಿದೆ ಅನ್ನುವುದಕ್ಕೆ ಈಗಿನ ಅಕಾಲ ಮಳೆಯೇ ಸಾಕ್ಷಿ. ಇದಕ್ಕೆ ತಕ್ಕಂತೆ ಕೆಲವು ಯೋಜನೆಗಳು ಪ್ರಾಕೃತಿವಾಗಿ ರಚನೆಗೊಂಡ ಕೆಲವು ಅಡ್ಡಗೋಡೆಗಳನ್ನು ಸರಕಾರವು ರಾಜಕೀಯ ಉದ್ದೇಶಕ್ಕಾಗಿ ಬಲಿತೆಗೆದುಕೊಳ್ಳತ್ತಿದೆ. ಇದೆಲ್ಲದರ ಪರಿಣಾಮವಾಗಿ ಇಂದು ಅಕಾಲ ಮಳೆಯಂತಹ ಪರಿಸ್ಥಿತಿ ಕಂಡುಬಂದಿದೆ.ಹಳ್ಳಿಯಲ್ಲಿ ಪಶ್ಚಿಮದಿಂದ ಮೋಡ ಕವಿದು ಮಳೆ ಆರಂಭವಾಯಿತೆಂದರೆ ಮಳೆಗಾಲವೆಂದೇ ಅರ್ಥ ಎಂದು ಭಾವಿಸಿಕೊಳ್ಳುತ್ತಾರೆ. ಇದುವರೆಗಿನ ಕಾಲ ಪದ್ದತಿಯಲ್ಲಿ ಇದು ನಿಜವಾಗಿತ್ತು. ಆದರೆ ಈ ವರ್ಷ ಹೇಗೆ ಎಂಬುದು ಇದುವರೆಗೆ ಗೊತ್ತಿಲ್ಲ.ಯಾರೇ ಒಬ್ಬ ಅಜ್ಜಿಯಲ್ಲಿ ಕೇಳಿ ಇದುವರೆಗಿನ ಅವರ ನೆನಪಲ್ಲಿ ಮಾರ್ಚ್ ವೇಳೆಗೆ ಹೀಗೆ ಸತತ ಮಳೆ ಸುರಿದ ಬಗ್ಗೆ ತಿಳಿದಿದೆಯಾ? ಎಂದರೆ ಅವರು ಸ್ಪಷ್ಟವಾಗಿ ಇಲ್ಲ ಅಂತಲೇ ಹೇಳುತ್ತಾರೆ.

ಹಾಗಾದ್ರೆ ಇದೇನು ಈ ಬಾರಿ ಮಳೆ.ಗ್ಲೋಬಲ್ ವಾರ್ಮಿಂಗ್ ಪರಿಣಾಮವಾ?.ಹೆಸರು ಯಾವುದಾದರೂ ಕೊಡೋಣ. ನಮ್ಮ ಪರಿಸರ ಈಗ ಮೊದಲಿನಂತಿಲ್ಲ ಅಂತ ಹೇಳಲು ನಾವೇ ಸಾಕಲ್ವೆ.ಹೀಗೆ ಮಳೆ ಸುರಿದರೆ ಮುಂದಿನ ಪರಿಣಾಮವೇನು? ಅಂತ ಯೋಚಿಸುತ್ತಿರುವಾಗಲೇ ಒಂದು ಸುದ್ದಿ ಬಂದಿದೆ. ಸದ್ಯದಲ್ಲೇ ಅಕ್ಕಿಯ ಬೆಲೆ 20 ರೂ ದಾಟಲಿದೆ.

ಈಗ ಹೀಗೆ ಮಳೆ ಸುರಿದರೆ ರೈತರು ಬೆಳೆದ ಭತ್ತವೂ ನಾಶವಾದರೆ.ಅಕ್ಕಿಯ ಬೆಲೆಯ ಬಗ್ಗೆ ಯೋಚಿಸಬೇಕಾಗಬಹುದು.ಮೊನ್ನೆ ಮಿತ್ರರೊಬ್ಬರು ಹೇಳುತ್ತಿದ್ದರು ಈಗ ಭತ್ತವನ್ನು ಇತರ ರಾಜ್ಯಗಳಿಂದ ಹೇರಳವಾಗಿ ತರಿಸಿಕೊಳ್ಳುತ್ತೊದ್ದಾರಂತೆ .ಯಾಕಂದ್ರೆ ಇಲ್ಲಿ ಭತ್ತದ ಉತ್ಪಾದನೆ ಕುಂಟಿತವಾಗಿ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲವೆಂದು ಅವರು ವಿವರಿಸುತ್ತಿದ್ದರು.ಇಂತಹ ಸಮಯದಲ್ಲಿ ಮಳೆಯ ಕಾಟದಿಂದಾಗಿ ಇದ್ದ ಭತ್ತದ ಪೈರು ನಾಶವಾದರೆ ಮುಂದಿನ ಭವಿಷ್ಯದ "ವಿಷ್ಯ" ಏನು ಎಂಬುದರ ಬಗ್ಗೆ ಚಿಂತಿಸಬೇಕಾಗಬಹುದು.

ಮಳೆಯೇ ಏನು ನಿನ್ನ ಲೀಲೆ....!!!?

29 ಮಾರ್ಚ್ 2008

ಇದು "ಬಾಳಿನ" ಆಯ್ಕೆ...!?



ಇದು ನನ್ನ ಕಲ್ಪನಾಲೋಕ....

ಹಲವು ಮದುವೆಯ ಸಮಾರಂಭಕ್ಕೆ ಹೋಗಿರುತ್ತೇವೆ.ಭರ್ಜರಿ ಊಟ ಮಾಡಿರುತ್ತೇವೆ.ಒಂದು ಸ್ವಲ್ಪ ಸಮಯದ ನಂತರ ಸುದ್ದಿ ಬರುತ್ತದೆ.. ಏ.. ವಿಷಯ ಗೊತ್ತಾಯ್ತಾ.. .. ಅವರು ಡೈವೋರ್ಸ್ ತಗೊಂಡ್ರಂತೆ...!!! ಏನಂತೆ ಕಾರಣ ...ನಿಂಗೇನಾದ್ರೂ ಗೊತ್ತಾ.........? .ಹೀಗೇ ಮುಂದುವರಿಯುವ ಸುದ್ದಿ ನಂತರ ಹಾಗಂತೆ... ಹೀಗಂತೆ ಎಂದು ರಾದ್ದಾಂತವಾಗುವುದು ಇಂದು ಸಾಮಾನ್ಯದ ಸಂಗತಿ. ಇದು ಇಂದಿನ ಸಮಾಜದಲ್ಲಿ, ಇಂದಿನ ಆಧುನಿಕ ಬದುಕಿನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಗಮನಿಸಿ ನೋಡಿ. ಒಂದು ಹತ್ತು ವರ್ಷದ ಹಿಂದಿನ ದಾರಿಗಳನ್ನು ನೋಡಿದರೆ ಇಂತಹ ಒಂದೇ ಒಂದು ಪ್ರಸಂಗಗಳು ಕಾಣುತ್ತಿರಲಿಲ್ಲ ಅಂತ ಹಿರಿಯರು ಮಾತನಾಡಿಕೊಳ್ಳುತ್ತಾರೆ. ಅಂದಿನ ಕಾಲದಲ್ಲಿ ಮನೆಯವರೇ [ತಂದೆ-ತಾಯಿ, ಮಾವಂದಿರು, ಬಂಧುಗಳು] ಹುಡುಗ/ಹುಡುಗಿಯನ್ನು ನೋಡಿ ಮದುವೆಯನ್ನು ಏರ್ಪಡಿಸುತ್ತಿದ್ದರಂತೆ[ನನಗೆ ಗೊತ್ತಿಲ್ಲ.] ಈಗ ಹಾಗಲ್ಲ. ಕಾಲ ಬದಲಾಗಿದೆ.ಹೇಗೆಂದು ಮತ್ತೆ ಹೇಳುವುದಕ್ಕೆ ಹೋಗುವುದಿಲ್ಲ.ನನಗೂ ಆ ಅನುಭವವಿಲ್ಲ.

ನನ್ನ ಯೋಚನೆ ಹೀಗೆ ಹರಿಯಿತು....

"ಮದುವೆ ಯಾಕಾಗಬೇಕು" ಎನ್ನುವ ಪ್ರಶ್ನೆ ಮೊದಲು ಮನಸ್ಸಿನಲ್ಲಿ ಹುಟ್ಟಲು ಶುರುವಾಗಬೇಕು. ಅದು ಕೇವಲ ದೈಹಿಕ ಹಿತಕ್ಕಾಗಿ ಎನ್ನುವ ಮದುವೆಗಳು ಯಾವತ್ತೂ ಶ್ವಾಶ್ವತವಾಗಲಾರದು ಎನ್ನುವ ಸತ್ಯ ಮೊದಲು ಕಂಡುಕೊಳ್ಳಬೇಕು. ಆಸ್ಥಿ ಅಂತಸ್ಥುಗಳನ್ನು ಅರಸುವ ಮದುವೆಗಳಲ್ಲಿ ಬಹು ಬೇಗನೆ ಹುಳಿ ಸೇರಿಕೊಳ್ಳುವುದನ್ನು ನಾವೆಲ್ಲ ಕಂಡುಕೊಂಡಿದ್ದೇವೆ.ಇನ್ನೂ ಕೆಲವರು ಇನ್ನಿಲ್ಲದ ಕಲ್ಪನೆಗಳನ್ನಿಟ್ಟು ಸಂಗಾತಿಯ ಹುಡುಕಾಟದಲ್ಲಿ ತೊಡಗುತ್ತಾರೆ.ಅನೇಕ ಬಾರಿ ಹೀಗೆ ಬಾಳ ಸಂಗಾತಿಯ ಹುಡುಕಾಟದಲ್ಲಿ ಅತಿಯಾದ ಕಲ್ಪನೆಗಳಿಗೆ ಪೂರ್ಣವಿರಾಮವಿಲ್ಲದೆ ಜೀವನವೇ ಮುಗಿದುಬಿಡುತ್ತದೆ. ಹಾಗಾದರೆ ಮತ್ತೆ ಪ್ರಶ್ನೆ ಮದುವೆ ಅಂದರೇನು?.

ನನ್ನ ಅರ್ಥದಲ್ಲಿ ಮದುವೆಯೆಂಬುದು ಎರಡು ಶುದ್ಧ ಮನಸ್ಸುಗಳ ಮಿಲನ... ಅಲ್ಲಿ ನಂಬಿಕೆ,ಸ್ನೇಹ,ಸಹಕಾರ .... ಹೀಗೆ ಎಲ್ಲವೂ ಕಾಣಸಿಗಬೇಕು. ಮಾತ್ರವಲ್ಲ ನಾಲ್ಕು ಗೋಡೆಗಳ ಮಧ್ಯದಿಂದ ಹೊರಬಂದು ಅವರದೇ ಆದ ಬದುಕಿಗೆ, ಲೋಕಕ್ಕೆ ಅವಕಾಶವೂ ಇರಬೇಕು.ಅಲ್ಲಿನ ಅನುಬಂಧವು ಸೋಲು-ಗೆಲುವುಗಳಲ್ಲಿ ಇಬ್ಬರೂ ಭಾಗಿಯಾಗಬೇಕು. ಅದಕ್ಕಾಗಿಯೇ ಸಪ್ತಪದಿಯನ್ನು ತುಳಿದು ಹೊಸಬಾಳಿಗೆ ಪ್ರವೇಶಿಸುವುದು. ಅಂದ ಹಾಗೆ ಈ ಸಪ್ತಪದಿಯ ಬಗ್ಗೆ ಇಂದು ಹುಡುಗ-ಹುಡುಗಿಗೆ ಬಿಡಿ [ನನ್ನನ್ನೂ ಸೇರಿಸಿ] ಕೆಲ ಪುರೋಹಿತರಿಗೂ ಗೊತ್ತಿಲ್ಲ....!?.

ಎಷ್ಟೋ ಸಾರಿ ನಡೆಯುವುದುಂಟು.ಕೆಲ ಕುಟುಂಬಗಳಲ್ಲಿ ಮದುವೆಯ ಸಮಯ ಬಂದಾಗ "ಜಾತಕ"ಗಳು ಹೊರಬರುತ್ತವೆ.ಆಗ ಅವುಗಳಲ್ಲಿ ದೋಷ ಇತ್ಯಾದಿಗಳು ಕಂಡು ಬರುತ್ತೆವೆ.ಹಾಗಾಗಿ ಹುಡುಗ/ಹುಡುಗಿಯ ಜಾತಕದ ಹೊಂದಾಣಿಕೆಯನ್ನು ಎರಡೆರಡು ಬಾರಿ ತೋರಿಸಿ ಸರಿಯಾಗಿ ಹೊಂದಿಗೆಯಾದ ನಂತರವೇ ಮುಂದಿನ ಕಾರ್ಯಕ್ರಮ.ಕೆಲವೊಮ್ಮೆ ಹುಡುಗ-ಹುಡುಗಿಗೆ ಆ ಮದುವೆ ಒಪ್ಪಿಗೆಯಾಗಿರುವುದಿಲ್ಲ. ಅವರಿಬ್ಬರ ವಯಸ್ಸಿನ ಅಂತರವೂ ಹೆಚ್ಚಿರುತ್ತದೆ. ಆದರೆ ಜಾತಕ ಚೆನ್ನಾಗಿ ಕೂಡಿಬರುತ್ತದೆ ಎನ್ನುವ ಒಂದೇ ಕಾರಣಕ್ಕಾಗಿ ಮದುವೆ...!! ಎಂತಹ ಮೂರ್ಖ ಕೆಲಸ....! ಏಕೆಂದು ನೀವು ನನ್ನನ್ನು ಹುಲುಬಬೇಡಿ.ಎಷ್ಟೋ ಮಂದಿ ಹೀಗೆ ಮದುವೆಯಾಗಿ ಇಂದಿಗೂ ಸಮಸ್ಯೆಯ ಸುಳಿಯಲ್ಲೇ ಬದುಕುತ್ತಿದ್ದಾರೆ. ಕೆಲವರ ದಾಂಪತ್ಯವೂ ಮುರಿದು ಬಿದ್ದಿದೆ. ಅವರೆಲ್ಲರ ಜಾತಕ ಸರಿಯಿರಲಿಲ್ಲವೇ?. ಇನ್ನೂ ಕೆಲವರು ಜಾತಕವನ್ನು ಟ್ರಂಪ್ ಕಾರ್ಡ್ ತರ ಬಳಸುವವರು ಇದ್ದಾರೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಮದುವೆಯಾಗುವ ಯುವ ಜೋಡಿಗಳ ಕನಸುಗಳು, ಮನಸ್ಸುಗಳು , ದಾರಿಗಳು, ಒಂದೇ ಆಗಿದ್ದರೆ ಅವರಿಗೆ ಹೊದಿಕೆಯಾದರೆ ಅದು ಪರಿಪೂರ್ಣವಾಗಬಹುದೇನೋ..?. ಮದುವೆಗಳು ಶಾಶ್ವತವಾಗಿ ಗಟ್ಟಿಯಾಗಿಬಿಡಬಹುದೇನೋ...?. ಹೀಗೆ ಅರ್ಥ ಮಾಡಿಕೊಳ್ಳದ ಮದುವೆಗಳು ವರ್ಷದೊಳಗೆ ಕಾರಣವಿಲ್ಲದೆ ಮುರಿದು ಬಿಡಬಹುದೇನೋ...!? ಅಥವಾ ಪ್ರತಿದಿನ ಗುದ್ದಾಟ-ಕೀರಲು ಧ್ವನಿಗಳು ಮನೆ ತುಂಬೆಲ್ಲಾ ಕೇಳಬಹುದೇನೋ..!?

ಇದೆಲ್ಲವೂ ನನ್ನ ಕಲ್ಪನೆ .... ಯೋಚನೆ..... ! ನನ್ನ "ಈ" ಬದುಕು ಹೇಗಾಗುತ್ತೋ ಗೊತ್ತಿಲ್ಲ. ಅದಕ್ಕೇ ಮೊದಲು ನಾನು ಅಂದಿದ್ದು ಇದು ಕಲ್ಪನಾ ಲೋಕ... ಮುಂದೆ ಈ ಕಲ್ಪನೆಗಳು ....ಕನಸುಗಳಾಗಿ.... ನನಸಾಗಲು ದಿನಗಳಿವೆಯಲ್ಲಾ.....!!!

23 ಮಾರ್ಚ್ 2008

"ಈ ಊರು...." ಆ ಊರು...





ಮೊನ್ನೆ ಏಷಿಯಾನೆಟ್ ನ್ಯೂಸ್ ಚಾನೆಲ್ಲಿನಲ್ಲಿ "ಈ ಊರು" ಕಾರ್ಯಕ್ರಮ ನೋಡುತ್ತಿದ್ದೆ.

ಮನೆ ಮಂದಿಗೆಲ್ಲಾ ಖುಷಿಯಾಗಿತ್ತು.ಇದು ನಿಜವಾಗಲೂ ಮಹತ್ವದ ಕಾರ್ಯಕ್ರಮ ಅಂತ ಅನಿಸಿತು.ಇಂದು ನಗರ ಕೇಂದ್ರೀಕೃತ ಸುದ್ದಿಗಳೇ ಹೆಚ್ಚು ರಾರಾಜಿಸುತ್ತಿರುವಾಗ ಈ ಚಾನೆಲ್ ಹಳ್ಳಿಗರತ್ತಲೂ ,ಅಲ್ಲಿನ ಸೊಬಗಿಗೂ ಮಹತ್ವ ನೀಡಿ ನಗರದ ಮಂದಿಗೂ ತೋರಿಸುತ್ತಲ್ಲಾ ಅದು ಹಳ್ಳಿಗರಿಗೆ ಖುಷಿಕೊಡುವ ಸಂಗತಿ. ನನಗೆ ಆ ಕಾರಣಕ್ಕಾಗಿ ಏಷಿಯಾನೆಟ್ ಚಾನೆಲ್ ಮೆಚ್ಚುಗೆಯಾಗಿತ್ತು.

ಇಂದು ಗ್ಲಾಮರ್ ಜಗತ್ತು ಹೆಚ್ಚು ಜನಪ್ರಿಯವಾಗುತ್ತಿದೆ.ಹಾಗಾಗಿ ಚಾನೆಲ್ ಗಳು ಕೂಡಾ ಹಳ್ಳಿಯ ಸೊಬಗನ್ನು ಅತ್ಯಂತ ಚೆನ್ನಾಗಿ ಚಿತ್ರೀಕರಿಸಿ ಬಿತ್ತರಿಸುವ ವೇಳೆ ನಗರದ ಮಂದಿಗೆ ಅದನ್ನು ನೋಡಿ ಅಸೂಯೆಯಾದದ್ದೂ ಇದೆಯಂತೆ.ಹಾಗೆಂದು ನನ್ನ ಮಿತ್ರನೊಬ್ಬ ಪದೇ ಪದೇ ಹೇಳುತ್ತಾನೆ.ಏಕೆ ಗೊತ್ತಾ ಅಂತಹ ಸೊಬಗು ನಗರದಲ್ಲಿ ಕಾಣುತ್ತಿಲ್ಲವಲ್ಲಾ? ಅಲ್ಲೇನಿದ್ದರೂ ವಾಹನಗಳ ಸದ್ದು ... ಟ್ರಾಫಿಕ್ಕು...

ಇಂದು ಪತ್ರಿಕೆಗಳಂತೆ ಅನೇಕ ಕನ್ನಡ ಚಾನೆಲ್ಲುಗಳು ರಾಜ್ಯದಲ್ಲಿ ಬೆಳೆಯುತ್ತಿವೆ.ಅವುಗಳಲ್ಲಿ ಕೆಲವು ಮಾತ್ರಾ ಹಳ್ಳಿಯ ಸಮಸ್ಯೆಗಳನ್ನು,ಅಲ್ಲಿನ ಸೊಬಗನ್ನು ಜಗತ್ತಿಗೆ ತಿಳಿಸುವ ಕೆಲಸ ಮಾಡುತ್ತಿವೆ. ಹಾಗಾಗಿ ಅಂತಹ ಚಾನೆಲ್ಲುಗಳು ಇನ್ನೂ ಹೆಚ್ಚಲಿ ಅವುಗಳೂ ಬೆಳೆಯಲಿ.

ಇದು ಹಳ್ಳಿಗರ ಹಾರೈಕೆಯೂ ಹೌದು. ಅಂತಹ ಚಾನೆಲ್ಲನ್ನು ಹಳ್ಳಿಯಲ್ಲೂ ಹೆಚ್ಚಾಗಿ ನೋಡುತ್ತಾರೆ.

21 ಮಾರ್ಚ್ 2008

"ಕಾರ್ಯ"ದರ್ಶಿಯವರ "ಪ್ರವಾಸ".....



ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಶುಕ್ರವಾರದಂದು ಆಗಮಿಸಿದರು.

ಈ ಸಂದರ್ಭದಲ್ಲಿ ಅವರನ್ನು ಪೆರೇಡ್ ಮೂಲಕ ಸ್ವಾಗತಿಸಲಾಯಿತು.ನಂತರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಭಟ್ ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಕಾರ್ಯದರ್ಶಿಯವರನ್ನು ಬರಮಾಡಿಕೊಂಡರು.

ದೇವಳದಲ್ಲಿ ಪೂಜೆ ಸಲ್ಲಿಸಿದ ನಂತರ ಧರ್ಮಸ್ಥಳ ,ಕಟೀಲು ದೇವಸ್ಥಾನಗಳಿಗೆ ತೆರಳುವರೆಂದು ಕಾರ್ಯದರ್ಶಿಯವರ ಆಪ್ತವಲಯ ಹೇಳಿದೆ.ಆದರೆ ರಾಜ್ಯ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ದೇವಳದ ದರ್ಶನದೊಂದಿಗೆ ಪುತ್ತೂರು ತಾಲೂಕಿನ ಕೊಯಿಲ ಎಂಬಲ್ಲಿರುವ ಪಶುಸಂಗೋಪನಾ ಇಲಾಖೆಗೆ ಸೇರಿದ ಸುಮಾರು 700 ಎಕ್ರೆ ಭೂಮಿಯನ್ನು ಐಟಿ ಕಂಪೆನಿಗಳಿಗೆ ವಹಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಬಗ್ಗೆ ಜಿಲ್ಲೆ ಆಗಮಿಸಿದ್ದಾರೆಂಬ ಊಹಾಪೋಹಗಳು ಕೇಳಿಬಂದಿದೆ.ಆದರೆ ಕಾರ್ಯದರ್ಶಿಯವರ ಆಪ್ತ ವಲಯವು ಈ ಬಗ್ಗೆ ಏನನ್ನೂ ಹೇಳಿಲ್ಲ.

ಇನ್ನೊಂದು ಮಾಹಿತಿಯಂತೆ ಇತ್ತೀಚೆಗೆ ಸಂಪುಟದ ಅನುಮತಿ ದೊರಕಿದ ಕರ್ನಾಟಕ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಬೃಹತ್ ಕೇಶಿಪ್ ಯೋಜನೆಯ ಪೈಕಿ ಬಿಸಲೆ-ಉಪ್ಪಿಂಗಡಿ ರಸ್ತೆ ಸಮೀಕ್ಷೆ ಹಾಗೂ ಬಜ್ಪೆ ವಿಮಾನ ನಿಲ್ದಾಣ ಆಧುನೀಕರಣದ ವೀಕ್ಷಣೆಗಾಗಿ ಜಿಲ್ಲೆಗೆ ಆಗಮಿಸಿದ್ದಾರೆ ಎಂಬ ಅಧಿಕೃತ ಮಾಹಿತಿಯೂ ಇದೆ.ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾಗುತ್ತಿರುವ ಮಾಸ್ಟರ್ ಪ್ಲಾನ್ ಬಗ್ಗೆ ಧರ್ಮದರ್ಶಿ ಮಂಡಳಿ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡಕೊಂಡರು ಎಂದು ಅಧಿಕೃತ ಮಾಹಿತಿ.


ಕೊಯಿಲದಲ್ಲಿ ಈಗ ಪಶು ಸಂಗೋಪನಾ ಇಲಾಖೆಗೆ ಸೇರಿದ ಆಸ್ಥಿಯಿದೆ.ಅದರಲ್ಲಿ ಯಾವುದೇ ಲಾಭವಿಲ್ಲದ ಕಾರಣ ಸರಕಾರವು ಐ.ಟಿ ಕಂಪೆನಿಗಳಿಗೆ ನೀಡಲು ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಇದೆ.

ಅಂತೂ ರಾಜ್ಯ ಕಾರ್ಯದರ್ಶಿಯವರು ಸುಬ್ರಹ್ಮಣ್ಯಕ್ಕೆ ಆಗಮಿಸಿದರು.ದೇವರಲ್ಲಿ ಪ್ರಾರ್ಥಿಸಿದರು. ಏನೆಂದು ಗೊತ್ತಿಲ್ಲ. ಕೊಯಿಲದ ಕೆಲಸ ಸುಲಭವಾಗಲೋ....?. ಮುಂದೆ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಸಾಂಗವಾಗಲೋ...? ಉತ್ತಮ ಸರಕಾರ ಬರಲೋ....? ಅಥವಾ ಕುಟುಂಬದ ಹಿತಕ್ಕೋ.....?

20 ಮಾರ್ಚ್ 2008

ಶಿ'ರಾಡಿ' ಯಾವಾಗ ಸ್ವಾಮಿ 'ರೆಡಿ'....?





ಶಿರಾಡಿ...!. ಮತ್ತೆ ನೆನಪಾಯಿತು.

ಶಿರಾಡಿ ನೆನಪಾದಾಗಲೆಲ್ಲಾ "ರಾಡಿ"ಯ ಕತೆ ನೆನಪಾಗುತ್ತದೆ.ನಾವು ಶಿರಾಡಿಯ ಕಡೆಗೆ ಹೋಗಿ ಆ "ರಾಡಿ"ಯ ಬಗ್ಗೆ ಬರೆದ ಸಂಗತಿಗಳು ನೆನಪಿನಂಗಳಕ್ಕೆ ಬರುತ್ತದೆ.ಆದರೆ ಈಗಲೂ "ರಾಡಿ"ಯದ್ದೇ ಕತೆ.ಅದು ಏ.30 ರ ಒಳಗೆ ಮುಗಿದೀತೇ?. ಈ ನಡುವೆ ರಾತ್ರಿ ಲಾರಿಗಳೂ ಸಂಚರಿಸುತ್ತಿದೆ.....

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಶಿರಾಡಿಯ ಅವ್ಯವಸ್ಥೆಯಿಂದಾಗಿ ಸದ್ದಿಲ್ಲದಾಗಿದೆ ವಾಹನಗಳ ಸದ್ದು ಆಗೊಮ್ಮೆ ಈಗೊಮ್ಮೆ "ಗುಯ್ಯ್" ಎನ್ನುವುದು ಬಿಟ್ಟರೆ ಹಕ್ಕಿಗಳ ಕಲರವ ಜನರ ಬೊಬ್ಬೆ ಗದ್ದಲ ಮಾತ್ರಾ ಕೇಳುತ್ತಿತ್ತು.ಮೊನ್ನೆ ಬೆಂಗಳೂರಿಗೆ ಹೋಗಿ ಬರುತ್ತಿದ್ದಾಗ ಶಿರಾಡಿ ಹಾದಿಯಲ್ಲಿ ಇಳಿಯುವ ವೇಳೆ ರಾತ್ರಿ 11 ಕಳೆದಿತ್ತು.ಲಾರಿಗಳು ಪ್ರಖರವಾದ ಬೆಳಕನ್ನು ಚೆಲ್ಲುತ್ತಾ ಮುಂದೆ ಬರುತ್ತಿದ್ದಾಗ ಶಿರಾಡಿಯಲ್ಲೀಗ ಲಾರಿಗಳ ಕಲರವವೂ ಶುರುವಾಗಿದೆ ಎಂದು ಅನಿಸಿತು.

ಶಿರಾಡಿಯ ಕಾಮಗಾರಿಗಳನ್ನು ಏ.30 ರ ಒಳಗಾಗಿ ಪೂರ್ತಿಗೊಳಿಸುವ ಬಗ್ಗೆ ಅಧಿಕಾರಿಗಳು, ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅದು ಪೂರ್ತಿಗೊಳ್ಳುವುದೇ ಎಂಬ ಆತಂಕವಿದೆ.

ಶಿರಾಡಿ ಘಾಟ್ ರಸ್ತೆಯು ಅತ್ಯಂತ ಶೋಚನೀಯ ಪರಿಸ್ಥಿತಿಗೆ ತಲಪಿದ ಬಳಿಕ ಮಂಗಳೂರು-ಬೆಂಗಳೂರು ಸಂಚಾರವನ್ನು ನಿಲುಗಡೆಗೊಳಿಸಿ ಕಾಮಗಾರಿಯನ್ನು ಆರಂಭಗೊಳಿಸಲಾಯಿತು.ಆ ನಂತರ ವಿಘ್ನಗಳೇ ಶುರುವಾಯಿತು.ಹಲವು ತೊಂದರೆಗಳ ಬಳಿಕ ಕಾಮಗಾರಿಯು ವೇಗವನ್ನು ಪಡೆಯಿತಾದರೂ ವರುಣದ ಅವಕೃಪೆಯು ಕಾಮಗಾರಿಗೆ ಬ್ರೇಕ್ ಹಾಕಿತು.ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಕಾರಣದಿಂದ ಕಾಮಗಾರಿಯನ್ನು ಒಂದೆರಡು ದಿನ ಸ್ಥಗಿತಗೊಳಿಸಬೇಕಾಯಿತು.ಲಾರಿಗಳು ಅಥವಾ ಘನ ವಾಹನಳು ಈ ರಸ್ತೆಯಲ್ಲಿ ನಿಷೇಧವಿದ್ದರೂ ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಕಾನೂನು ಹಾಗೂ ಬಂದೋಬಸ್ತುಗಳೆಲ್ಲಾ ಗಾಳಿಗೆ ತೂರಿದಂತಾಗಿದೆ.

ಶಿರಾಡಿಯಲ್ಲಿನ ರಸ್ತೆ ತಿರುವುಗಳನ್ನೆಲ್ಲಾ ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುತ್ತಿದ್ದು ಈಗಾಗಲೇ 3 ತಿರುವುಗಳ ಕಾಂಕ್ರೀಟೀಕರಣ ಪೂರ್ತಿಗೊಂಡಿದ್ದು ಉಳಿದ 14 ತಿರುವುಗಳ ಕಾಮಗಾರಿ ನಡೆಯುತ್ತಿದ್ದು ಇನ್ನೂ ಹಲವು ತಿರುವುಗಳ ಕಾಮಗಾರಿ ಆರಂಭವಾಗಬೇಕಾಗಿದೆ. ಉಳಿದಂತೆ ರಸ್ತೆಯ ಡಾಮರೀಕರಣವು ಕೆಲವೆಡೆ ಪೂರ್ತಿಗೊಂಡಿದೆ.ಹೀಗಾಗಿ ಏಪ್ರಿಲ್ ಒಳಗಾಗಿ ಈ ಕಾಮಗಾರಿಗಳೆಲ್ಲ ಪೂರ್ತಿಗೊಳ್ಳಬಹುದೆಂಬ ವಿಶ್ವಾಸವನ್ನು ಸಾರ್ವಜನಿಕರಾರು ಹೊಂದಿಲ್ಲ. ಕಾಮಗಾರಿಯ ವೇಗಕ್ಕೆ ಇತ್ತೀಚೆಗೆ ಸುರಿಯುತ್ತಿರುವ ಮಳೆ ಅಡ್ಡಿಯಾಗಿತ್ತಿದೆ.ಆದರೂ ರಾತ್ರಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದು ಕಾಮಗಾರಿಯ ಪೂರ್ತಿಗೆ ಶ್ರಮಿಸುತ್ತಿದ್ದಾರೆ. ಇದೇ ಸಮಯಲ್ಲಿ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಕಾಮಗಾರಿಯ ಗುಣಮಟ್ಟ ಉಳಿಯಬಹುದೇ ಎಂಬುದು ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಅನೇಕ ಸಮಯಗಳಿಂದ ಶಿರಾಡಿಯ ಸಂಚಾರದಿಂದ ಬೇಸತ್ತಿದ್ದ ಪ್ರಯಾಣಿಕರಿಗೆ ಹಾಗೂ ವಾಹನ ಚಾಲಕರಿಗೆ ಏ.30ರ ಒಳಗಾಗಿ ಸುಗಮ ಸಂಚಾರಕ್ಕೆ ಸಾಧ್ಯವಾದೀತೇ ಎಂಬ ಪ್ರಶ್ನೆ ಈಗ ಕಾಡುತ್ತಿದಯಲ್ಲದೆ ಶಿರಾಡಿಯಲ್ಲಿ ಕಾಮಗಾರಿ ಪೂರ್ತಿಗೊಳ್ಳುವವರೆಗೆ ಘನವಾಹನಗಳ ನಿಷೇಧವಿದ್ದರೂ ಲಾರಿಗಳ ಸಂಚಾರವು ಹಲವು ಸಂಶಯಗಳಿಗೆ ಕಾರಣವಾಗಿದೆ.

ಕೊನೆಯ ಮಾತು : "ಇಷ್ಟುದಿನ ಕಾದವರಿಗೆ ಇನ್ನೊದಿಷ್ಟುದಿನ ಕಾಯೋಕಾಗಲ್ವಾ...." ಅಂತ ಈಗ ಅಧಿಕಾರಿಗಳು ಕೇಳುತ್ತಿದ್ದಾರಂತೆ ..! [ಅಂದರೆ ಮಳೆಗಾಲದ ನಂತರವೇ ರಸ್ತೆ...?]

14 ಮಾರ್ಚ್ 2008

"ಮೊಬೈಲ್" ಪ್ರತಿಭಟನೆ..!




ಮೊಬೈಲ್ ಸೇವೆ ಒದಗಿಸುವಂತೆ ಪ್ರತಿಭಟನೆ...!.

ನಿಜ... ಹಳ್ಳಿಗಳಲ್ಲಿಂದು ಮೊಬೈಲ್ ಸೇವೆಯ ಜರೂರು ಇದೆ.ಇಡೀ "ಜಗತ್ತೇ ಈಗ ಕೈಯೊಳಗಿರುವ" ವೇಳೆ ಹಳ್ಳಿಗಳೂ ಮುಂದುವರಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಾ 'ನಗರ'ವಾಗಿ ಪರಿವರ್ತನೆಯಾಗುತ್ತಿದೆ.ಈ ಸಂದರ್ಭದಲ್ಲಿ ಅಲ್ಲಿ ಮೊಬೈಲ್ ಸೇವೆಗಳ ಅಗತ್ಯವಿದೆ.ದಿನನಿತ್ಯದ ಸಂಶೋಧನೆಗಳ ಪ್ರಕಾರ ಮೊಬೈಲ್ ಸಿಗ್ನಲ್ ಅಥವಾ ರೇಡಿಯೇಶನ್ ಜೀವಕ್ಕೆ ಹಾನಿ ಎಂಬ ಸಂದೇಶಗಳು ಬರುತ್ತಿದ್ದರೂ ಅದನ್ನು ಬದಿಗಿಟ್ಟು ಮೊಬೈಲ್ ಸೇವೆಯೇ ತುರ್ತು ಎಂಬುದು ಇಂದಿನ ವಿದ್ಯಮಾನದ ಸಂದೇಶ.ಅನೇಕ ಜೀವರಾಶಿಗಳಿಗೆ ತೊಂದರೆಯಿದೆ ಎಂದರೂ ಈಗ ಅದು ಲೆಕ್ಕಕ್ಕಿಲ್ಲ.

ಮೊಬೈಲ್ ಈಗ ಯಾರಿಗೆ ಬೇಡ ಹೇಳಿ.ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಮೊಬೈಲ್ ಅನಿವಾರ್ಯವಾಗಿ ಬಿಟ್ಟಿದೆ.ಇನ್ನು ವರ್ಷ ತುಂಬಿರದ ಮಗು ಅಳುವುದನ್ನು ನಿಲ್ಲಿಸಲು ಮೊಬೈಲ್ ಹಾಡು ಪರಿಣಾಮ ಬೀರುತ್ತದೆ.ಬಾಲಕರಿಗೆ ಆಟದ ವಸ್ತುವಾದರೆ ಯುವಕರಿಗೆ ಹರಟುವುದಕ್ಕೆ ಸುಲಭ ಮಾರ್ಗವಾಗುತ್ತದೆ.ವೃದ್ಧರಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಹೀಗೆಯೇ ಈಗ ಮೊಬೈಲ್ ಯುಗವಾಗಿ ಪರಿವರ್ತನೆಯಾಗಿದೆ,ಸುಮಾರು 10 ವರ್ಷಗಳ ಹಿಂದೆ ದೂರದಲ್ಲಿ ಮೊಬೈಲ್ ಸದ್ದು ಕೇಳಿಸುತ್ತಿತ್ತು.ಮೊಬೈಲ್ ಇದ್ದವರು "ದೊಡ್ಡ' ಜನ.ಆಗ ಒಳ ಬರುವ ಕರೆಗಳಿಗೂ ಶುಲ್ಕವಿತ್ತು. ದಿನಗಳೆದಂತೆ ಹಳ್ಳಿಯತ್ತಲೂ ಮೊಬೈಲ್ ದಾಪುಗಾಲು ಹಾಕಿತು.ಇಂದು ಮೊಬೈಲ್ ಇಲ್ಲದವ ಬರೀ "ಸಣ್ಣವ" ಎಂಬ ಭಾವನೆ ಬೆಳೆದಿದೆ. ಅದರಲ್ಲೂ ಇಂದು ಕಲರ್ ಮೊಬೈಲ್ ಸೆಟ್ಟು ಹೋಗಿ ಕ್ಯಾಮಾರಾ ಇರುವ ಸೆಟ್ಟಾದರೆ ಮಾತ್ರಾ ಮರಿಯಾದೆ.ಇಲ್ಲಾಂದ್ರೆ ಆತನದು ಮೊಬೈಲೇ ಅಲ್ಲ ಎಂಬ ಮಟ್ಟಕ್ಕೆ ಬೆಳೆದಿದೆ.ಮೊನ್ನೆ ಮೊನ್ನೆ ಹಳ್ಳಿಯಲ್ಲೂ ಬೆಟ್ಟಗಳ ಮೇಲೆ ಹತ್ತಿ ಮೊಬೈಲ್ ಮೂಲಕ ಮಾತನಾಡುತ್ತಿದ್ದರು.ಈಗ ಹಳ್ಳಿ ಹಳ್ಳಿಯಲ್ಲಿ "ಟವರ್" ಆಗಿದೆ ಸಂಪರ್ಕವಾಗಿಲ್ಲ.ಹಾಗಾಗಿ ಪ್ರತಿಭಟನೆಗಳು ಶುರುವಾಯಿತು.

ಮೊಬೈಲ್ "ಜೀವನ"ದಿಂದ ಒಳಿತಾದವುಗಳು ಕೆಲವೇ ಕೆಲವು ಸಂಗತಿಗಳಿರಬಹುದು.ಆದರೆ ಅದೆಷ್ಟೋ ಅನಾಹುತಗಳು ನಡೆದು ಹೋಗಿದೆ.ಅದರಲ್ಲೂ ಯುವಕರು "ಮೊಬೈಲ್" ಬದುಕಿಗೆ ಹೊಂದಿಕೊಂಡ ಪರಿಣಾಮವಾಗಿ ಈಗಾಗಲೇ ಅನೇಕ ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದೆ.ಕೆಲವು ಅತ್ಯಂತ ಭಯ ಹುಟ್ಟಿಸುತ್ತದೆ.

ಅಂತಹ ಕೆಲ ಘಟನೆಗಳು ಇಲ್ಲಿವೆ...

ಪ್ರಕರಣ - 1

ಶಾಲಾ ಅಧ್ಯಾಪರು ವಿವರಿಸಿದ ಘಟನೆ.
ಬಾಲಕ 6 ನೇ ತರಗತಿ.ಶಾಲೆಯಲ್ಲಿ ಮೊಬೈಲ್ ಕಡ್ಡಾಯವಾಗಿ ನಿಷೇಧವಿದೆ.ಆದರೂ ಬಾಲಕ ಮೊಬೈಲ್ ಮೂಲಕ ಹುಡುಗಿಯೊಬ್ಬಳ ಮನೆಗೆ ಆಗಾಗ ಫೋನ್ ಮಾಡತೊಡಗಿದ. ಹುಡುಗಿಯ ಮನೆಯಿಂದ ಪೊಲೀಸ್ ದೂರು ಹೋಯಿತು.ನಂಬರ್ ಪತ್ತೆ ಹಚ್ಚಿ ಬಂಧಿಸಲು ಹೋದಾಗ ಮೊಬೈಲ್ 40 ವರ್ಷದ ವ್ಯಕ್ತಿಯೊಬ್ಬರಲ್ಲಿತ್ತು.ನಂತರ ವಿಚಾರಿಸಿದಾಗ ಬಾಲಕ ಮನೆಯಲ್ಲಿದ್ದ ಮೊಬೈಲ್ ಆಗಾಗ ಶಾಲೆಗೆ ತರುತ್ತಿದ್ದ.ಅದೂ ಚಡ್ಡಿಯೊಳಗೆ ಇರಿಸಿ ಶಾಲೆಗೆ ತರುತ್ತಿದ್ದ ವಿಷಯ ಬಹಿರಂಗವಾಯಿತು.

ಪ್ರಕರಣ - 2

ಆತ ಇನ್ನೂ 4 ನೇ ತರಗತಿ.ತಂದೆಯ ಬಳಿ ಮೊಬೈಲ್ ಇತ್ತು.ಆದರೆ ಕಲರ್ ಅಲ್ಲ ಕ್ಯಾಮಾರಾ ಇಲ್ಲ.ಬಾಲಕ ತಂದೆಯನ್ನು ಒತ್ತಾಯಿಸಿದ್ದು ಕಲರ್ ಮತ್ತು ಕ್ಯಾಮಾರ ಇರುವ ಮೊಬೈಲ್ ಸೆಟ್ಟು ಬೇಕೆಂದು. ತಂದೆ ಈ ಬಗ್ಗೆ ಗಮನ ಹರಿಸಿಲ್ಲ. ಬಾಲಕ ಊಟ, ಓದು ಬಿಟ್ಟ.ಕೊನೆಗೆ ತಂದೆ ಸೋತು ನೂತನ ಸೆಟ್ಟು ಕರೀದಿಸಿಯೇ ಬಿಟ್ಟರು.

ಪ್ರಕರಣ -3

ಅದು ಡಿಗ್ರಿ ಕಾಲೇಜು.ಕಾಲೇಜಿನ ಹುಡುಗ - ಹುಡುಗಿಯರಲ್ಲಿ ಮೊಬೈಲ್ ಇದೆ.ಎಲ್ಲವೂ ಕ್ಯಾಮಾರಾ ಸೆಟ್ಟು.ಬಾಲಕರು ವಿದ್ಯಾರ್ಥಿನಿಯರ ಚಿತ್ರಗಳನ್ನು ಸೆರೆ ಹಿಡಿದು ಇನ್ನಿತರ ಕಾರ್ಯಗಳಲ್ಲಿ ದುರುಪಯೋಗಪಡಿಸಿಕೊಡರು.ವಿಷಯ ತಿಳಿದು ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದರು.
ಹೀಗೇ ಅನೇಕ ಸಂಗತಿಗಳು ಯುವಕ ಯುವತಿಯರಿಂದ ನಡೆದು ಹೋಗುತ್ತವೆ

ಎಳೆಯ ಮಕ್ಕಳು ಅನುಕರಣೆ ಮಾಡುವುದರಲ್ಲಿ ಮುಂದಿದ್ದಾರೆ.ಅಮ್ಮ-ಅಪ್ಪ ಹೇಳುವ ಎಂದು ಮೊದಲು "ಹಲೋ" ಎನ್ನುತ್ತಾರೆ.ತಂದೆ ಮೊಬೈಲ್ ನ್ನು ಒಂದು ಕಿವಿಯಲ್ಲಿರಿಸಿ ಮಾತನಾಡುತ್ತಾ ಆ ಕಡೆ ಈ ಕಡೆ ಹೋಗುವುದನ್ನು ನೋಡುವ ಎಳೆಯ ಮಕ್ಕಳು ನಂತರ ಹಾಗೆಯೇ ತಾವೂ ಮಾಡುತ್ತಾರೆ.ಆಗ ಮೊಬೈಲ್ ಬೇಕೇ ಬೇಕು.

ಹೀಗೆಯೇ ಮೊಬೈಲ್ ಜಗತ್ತು ಮುಂದುವರಿಯುತ್ತಾ ಇತ್ತೀಚೆಗೆ ಸ್ಪೋಟದ ಸಂದರ್ಭದಲ್ಲೂ ಉಗ್ರರು ಬಳಸಿಕೊಳ್ಳುತ್ತಾರೆ ಎಂಬುದನ್ನು ಪೊಲೀಸ್ ಮೂಲಗಳು ಹೇಳುತ್ತಿರುವುದನ್ನು ನೋಡಿದರೆ ಆತಂಕವಾಗುತ್ತದೆ.

ಅಂತೂ ಅನೇಕ ಅವಘಡಗಳಿಗೆ ,ಮುಂದಿನ ಭವಿಷ್ಯಕ್ಕೆ ಮೊಬೈಲ್ ಅಪಾಯಕಾರಿ ಅಂತ ನಮಗೆ ತಿಳಿದಿದ್ದರೂ ಇಂದು ಮೊಬೈಲ್ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ.ಜೀವನದ ಭಾಗವೇ ಆಗಿ ಹೋಗಿದೆ.ಅದನ್ನು ಬಿಟ್ಟಿರಲು ಸಾಧ್ಯವಾ?.

ಕೊನೆಯ ಮಾತು : ಮೊಬೈಲ್ನಿಂದ ಅಪಾಯವಿದೆ ಅಂತ ಅರಿದ್ದರೂ ನಮಗೆ ಹಾನಿಯಿದೆ ಎಂದರೂ ನಾವು ಮೊಬೈಲ್ "ಬಿಡೆವು". ಮೂರ್ಖರು ನಾವೇನಾ...!?.

09 ಮಾರ್ಚ್ 2008

ನಿನ್ನೆಯ ಮತ್ತು ಇಂದಿನ ಮಹಿಳೆ...



ಮಹಿಳಾ ದಿನಾಚರಣೆ ಮುಗಿಯಿತು.

ಅನೇಕ ಪತ್ರಿಕೆಗಳಲ್ಲಿ,ದೂರದರ್ಶನಗಳಲ್ಲಿ ಮಹಿಳೆಯರಿಗಾದ ಅನ್ಯಾಯ,ಶೋಷಣೆಗಳದ್ದೇ ಮಾತು.ಈ ನಡುವೆ ಕೆಲ ಸಾಧನೆಗಳ ವಿಶ್ಲೇಷಣೆಯೂ ನಡೆಯುತ್ತಲಿತ್ತು.ಇದೆಲ್ಲದರ ಬಳಿಕ ಇಂದು ... ನಾಳೆ...?

ಮಹಿಳಾ ದಿನಾಚರಣೆಯಂದು ಮಾತ್ರಾ ಇಡೀ ಜಗತ್ತು ಮಹಿಳೆಯರತ್ತ ಚಿತ್ತ ಹರಿಸಿದರೆ ಮತ್ತೆ ನೆನಪಾಗುವುದು ಮುಂದಿನ ವರ್ಷವೇ.ಬೇಕಾದರೆ ನೀವು ಗಮನಿಸಿ ನೋಡಿ.. ಒಂದು ನೆಮ್ಮದಿಯೆಂದರೆ ಅಂದಾದರೂ ನೆನಪಿಸಿಕೊಳ್ಳುತ್ತಾರಲ್ಲಾ.ಇಂದು ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುತ್ತವೆ.ಅದರಲ್ಲಿ ಕೆಲವೇ ಕೆಲವು ಮಾತ್ರಾ ಹೊರಪ್ರಪಂಚಕ್ಕೆ ಬರುತ್ತಿದೆ.ಉಳಿದವೆಲ್ಲಾ ಮಾನ ,ಮರ್ಯಾದೆಯ ಹೆಸರಲ್ಲಿ ಮನೆ - ಮನದೊಳಗೇ ಬತ್ತಿ ಹೋಗುತ್ತಿದೆ. ಪ್ರತಿಯೊಬ್ಬ ಮಹಿಳೆ ಕೂಡಾ ಇಂದು ಸಾಮಾಜಿಕ ಜವಾಬ್ದಾರಿಗಳನ್ನು ಹೊರುವಷ್ಟು ಶಕ್ತಿವಂತಳಾಗಿದ್ದಾಳೆ.ಆದರೂ ಅನ್ಯಾಯಗಳನ್ನು ಪ್ರತಿಭಟಿಸುವ ದೊಡ್ಡ ಶಕ್ತಿ ಅವಳಲ್ಲಿ ಬೆಳೆದಾಗ ಮಾತ್ರಾ ಮಹಿಳಾ ದಿನಾಚರಣೆಯಂತಹುಗಳು ಅರ್ಥ ತರಬಲ್ಲುದು.

ಭಾರತವು ಮಹಿಳೆಗೆ ಅಂದಿನಿಂದಲೇ ಉನ್ನತ ಸ್ಥಾನ ನೀಡಿದೆ.ಇಲ್ಲಿ "ಮಾತೃ ದೇವೋ ಭವ" ಅತ್ಯಂತ ಶಕ್ತಿಶಾಲಿಯಾಗಿದೆ. ಆದರೂ ಅದನ್ನು ಆಚರಿಸುವವರಾರು ಎಂದು ಪ್ರಶ್ನಿಸುವವರಿರಬಹುದು.ಅದಕ್ಕೆ ಇಂದಿನ ಸಮಾಜ ,ಮಾಧ್ಯಮ ,ಪರಿಸರವೇ ಕಾರಣ. ಅಂದು ಹೇಳಿದ ಮಾತು ನೆನಪಾಯಿತು. ಯಾವಾಗ ಮಹಿಳೆ ನಡು ರಾತ್ರಿಯಲ್ಲಿ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆದಾಡುವ ದಿನ ಬರುತ್ತೋ ಅಂದು ನಿಜವಾದ ಸ್ವಾತಂತ್ರ್ಯ ಬಂದಂತಾಗುತ್ತದೆ , ಮಹಿಳಾದಿನಾಚರಣೆಗೆ ಅರ್ಥ ಬರುತ್ತದೆ. ಇದಲ್ಲದೆ ಪ್ರತೀ ವರ್ಷ ಮಹಿಳಾ ದಿನಾಚರಣೆಯಂದು ಮಹಿಳೆಯರಿಗಾದ ಅನ್ಯಾಯವನ್ನು ಹಂಚಿ ಕೊಂಡು ಸುಮ್ಮನಾಗಬೇಕಾಗಬಹುದು. ಅನುದಿನವೂ ಮಹಿಳಾ ದಿನಾಚರಣೆಯಾದಾಗ ಮಹಿಳೆಯ ದಾರಿ ಸುಗಮವಾಗಬಹುದು.

07 ಮಾರ್ಚ್ 2008

ಇವರು ರೈತರನ್ನು ಮಂಗ ಮಾಡುವ ಸಚಿವರು ಸ್ವಾಮಿ..!



ಮೊನ್ನೆ ಕೇಂದ್ರದ ಆರ್ಥಿಕ ಬಜೆಟಲ್ಲಿ ರೈತರ ಸಾಲಮನ್ನಾಕ್ಕೆಂದು 64 ಸಾವಿರ ಕೋಟಿ ರೂ ವನ್ನು ನಿಗದಿಪಡಿಸಲಾಗಿದೆ.ಆ ಬಗ್ಗೆ ಈಗ ಚರ್ಚೆ ನಡೆಯುತ್ತಿರುವುದು ಬಯಲಾಗಿರುವ ಸತ್ಯ.ಸಾಲ ಮನ್ನಾ ಆಗುತ್ತಾ ಇಲ್ಲವೋ ಮತ್ತಿನ ವಿಷಯ.ರೈತರನ್ನು ಒಮ್ಮೆ ನಂಬುವಂತೆ ಮಾಡಲಾಗಿದೆ.ಆದರೆ ಕೇಂದ್ರ ಸರಕಾರದ ನಮ್ಮ ಕೃಷಿ ಸಚಿವರು ಎಂತಹ ಹೇಳಿಕೆ ನೀಡುತ್ತಾರೆ ನೋಡಿ.ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ ಎನ್ನುತ್ತಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ,ಅದುವೇ ಸರಕಾರದಲ್ಲಿರುವ ಸಚಿವರೊಬ್ಬರು ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ ಎಂದು ಹೇಳುವುದಾದರೆ ಅವರು ರೈತ ಪರವೇ ಅಂತ ಚಿಂತಿಸಬೇಕು.ಹಾಗಾದರೆ ಸಾಲಮನ್ನಾ ಆದೀತೇ?.ಇದೆಲ್ಲಾ ಬೋಗಸ್ ಅಲ್ಲವೇ?.ಹಾಗಾದರೆ ಮತ್ತೆ ಹೇಗೆ ರೈತರ ಆತ್ಮಹತ್ಯೆಯನ್ನು ನಿಲ್ಲಿಸುತ್ತಾರೆ ಎನ್ನುವುದನ್ನು ಸಚಿವರು ಹೇಳಬೇಕಲ್ಲಾ.ಅದುವರೆಗೆ ರೈತರ ಬಗ್ಗೆ ಕಾಳಜಿ ತೋರಿಸದ ಸಚಿವರು ಸಾಲ ಮನ್ನಾದ ಸಮಯದಲ್ಲಿ ಎಚ್ಚರವಾಗುತ್ತಾರೆ.ರೈತರಿಗಾಗಿ ಒಂದೇ ಒಂದು ಉತ್ತಮ ಕಾರ್ಯ ಮಾಡದ "ಕೃಷಿ" ಸಚಿವರು ಇಂತಹ "ಅಧಿಕ ಪ್ರಸಂಗ " ಹೇಳಿಕೆ ನೀಡಿ ರಾಜಕೀಯಕ್ಕಾಗಿ ದೇಶದ ಜನರ ಗಮನ ಸೆಳೆದು ಜೀವಂತಿಕೆಯನ್ನು ತೋರಿಸಿ ತಾನು"ದೊಡ್ಡ ಜನ" ಆಗಿ ರೈತರನ್ನು ಮಂಗ ಮಾಡಿ ಅವರ ಮಾನಸಿಕ ಸ್ಥೈರ್ಯವನ್ನು ಬಲಹೀನಗೊಳಿಸುವ ಸಚಿವರಿದ್ದೇನು ಫಲ. ನಾಚಿಕೆಯಾಗಬೇಕು.

ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ ಅವರ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ ಎಂದುದನ್ನು ಒಪ್ಪೋಣ.ಆದರೆ ಮತ್ತೆ ಹೇಗೆ ಸಮಸ್ಯೆಗಳನ್ನು ಬಗೆಹರಿಸುವುದು?.ಕೃಷಿಯುತ್ಪನ್ನಗಳ ಬೆಲೆ ಏರಿಕೆಯೇ? ಹಾಲಿನ ಬೆಲೆ ಏರಿದಾಗಲೇ ನಮಗೆ "ಹುಳಿ"ಯಾಗುತ್ತದೆ...!.ಗೋಧಿಯ ದಾಸ್ತಾನು ದೇಶದಲ್ಲಿ ಕುಂಠಿತವಾವಾಗಿ ಬೆಲೆ ಏರಿಕೆಯಾದಾಗ ಆತಂಕವಾಗುತ್ತದೆ...... ಹೀಗಿರುವಾಗ ಹೇಗೆ ಸಮಸ್ಯೆ ಬಗೆಹರಿಸುತ್ತಾರೆಂದು ಹೇಳುತ್ತಾರಾ ಇವರು?.

ಈ ಸಾಲಮನ್ನಾದಲ್ಲೂ ಇನ್ನೊಂದು ಗೊಂದಲ ಶುರುವಾಗಿದೆ. ಕೃಷಿ ಪ್ರದಾನವಾದ , ರೈತರೇ ಈ ದೇಶದ ಬೆನ್ನೆಲುಬು ಎಂದು ಹೇಳುವ ನಮ್ಮ ದೇಶದಲ್ಲಿ ರೈತರನ್ನು ಯಾವಾಗಲೂ ಗೊಂದಲಕ್ಕೆ ಸಿಲುಕಿಸಿ ಹಾಕಿಬಿಡುತ್ತಾರೆ. ಸಾಲ ಮನ್ನಾಕ್ಕೆ 2 ಹೆಕ್ಟೇರ್ [ 5 ಎಕ್ರೆ] ಮಿತಿಯಿದೆ. ಹಾಗಾದರೆ ಮಹಾರಾಷ್ಟ್ರದಂತಹ ಕೆಲವು ಪ್ರದೇಶಗಳಲ್ಲಿ ಈ ಸಾಲಮನ್ನಾ ಕೈಗೆಟಕುವುದಿಲ್ಲ.ಏಕೆಂದರೆ ಅಲ್ಲಿನ ಬಹುತೇಕ ರೈತರಿಗೆ 2 ಹೆಕ್ಟೇರಿಗಿಂತ ಹೆಚ್ಚಿನ ಜಮೀನಿದೆ.ಆದರೆ ಅಲ್ಲಿನ ಯಾವೊಬ್ಬ ರೈತನು ಕೂಡಾ ಸಿರಿವಂತನಲ್ಲ.ಅವರಿಗೆ ಏನು ಲಾಭ?.ಇನ್ನು ಕರ್ನಾಟಕದಲ್ಲೂ ಈ ಗೊಂದಲವಿದೆ.ಇನ್ನೊಂದು ಅಂಶವೆಂದರೆ ಈ ಸಾಲ ಮನ್ನಾಕ್ಕೆ ಬಜೆಟ್ ಆರ್ಥಿಕ ಮೂಲವನ್ನು ತೋರಿಸದ ಕಾರಣ ಇದೊಂದು ಬೊಗಸ್ ಎಂತಲೂ ಹೇಳಲಾಗುತ್ತಿದೆ.ಅದಕ್ಕಾಗಿ ನ್ಯಾಯಾಲದ ಮೊರೆ ಹೋಗಲಾಗಿದೆ ಎಂದು ತಿಳಿದುಬಂದಿದೆ.

ಕೃಷಿ ಸಚಿವರು ಕ್ರಿಕೆಟ್ ಮಂಡಳಿಯಲ್ಲೂ ಇದ್ದಾರೆ.ಮೊನ್ನೆ ಆಸ್ಟ್ರೇಲಿಯಾದ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದಾಗ ತಕ್ಷಣವೇ 10 ಕೋಟಿ ಬಿಡುಗಡೆಗೊಳಿಸುವ ಉತ್ಸಾಹ ತೋರಿಸಿದರು.ಅದೇ ಗೋಧಿಯ ಆಮದು ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಸಚಿವರ ಸುದ್ದಿಯೇ ಇರುವುದಿಲ್ಲ.ಕ್ರಿಕೆಟಿಗರಿಗೆ ಬಹುಮಾನವನ್ನು ನೀಡಲಿ ಆ ಬಗ್ಗೆ ಹಳ್ಳಿಯ ರೈತರಿಗೆ "ಹುಳುಕು" ಇಲ್ಲ.ಕ್ರಿಕೆಟಿಗರೆಲ್ಲಾ ದೇಶದ ಕಣ್ಮಣಿಗಳು.ಆದರೆ ಕೃಷಿ ಸಚಿವರಾಗಿ ರೈತರನ್ನು ಏಕೆ ಈ ದೇಶದ ಕಣ್ಮಣಿಗಳಂತೆ ನೋಡುತ್ತಿಲ್ಲ.?.

ಇನ್ನೊಂದು ಮೋಸ ಶುರುವಾಗಿದೆ.ರೈತರಿಗೆ ಉಚಿತ ವಿದ್ಯುತ್ ಎಂಬ ಹೇಳಿಕೆ. ಗ್ರಾಮೀಣ ಪ್ರದೇಶದಲ್ಲಿ ಈಗಲೇ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ.ಸರಿಯಾಗಿ ದಿನಕ್ಕೆ 8 ಗಂಟೆ ವಿದ್ಯುತ್ ಇದ್ದರೆ ಪುಣ್ಯ. ಈ ನಡುವೆಯೇ ರೈತರ ಪಂಪುಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡುವ ಹೇಳಿಕೆ ನಂಬಲು ಸಾಧ್ಯವೇ?.

ಇವರಿಗೆಲ್ಲಾ ಉತ್ತರ ನೀಡಲು ರೈತರೇ ಒಟ್ಟಾಗ ಬೇಕು.ನಾಚಿಕೆಗೆಟ್ಟ ಸಚಿವರಿರುವ ದೇಶದಲ್ಲಿ ಏನು ಅಭಿವೃದ್ಧಿ ಸಾಧ್ಯ... ರೈತರ ಮನ ನೋಯಿಸಿದವರು ಉದ್ಧಾರವಾದಾರಾ..?

06 ಮಾರ್ಚ್ 2008

"ರಾಜ್ಯ"ಪಾಲನೆಗೆ "ಕೃಷ್ಣಾ"ರ್ಪಣ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೃಷ್ಣ ದಂಪತಿಗಳು..




ಹೈಟೆಕ್ ಮುಖ್ಯ ಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಮತ್ತೆ ರಾಜ್ಯ ರಾಜಕೀಯ ಪ್ರವೇಶಕ್ಕೆ ಅಣಿಯಾಗಿದ್ದಾರೆ.ಈಗಾಗಲೇ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯದ ಕೆಲ ರಾಜಕೀಯ ಮುಖಂಡಜಿಗೆ ಇದು ನುಂಗಲಾರದ ತುತ್ತಾಗಿದೆ.

ಮುಖ್ಯಮಂತ್ರಿಯಾಗಿದ್ದಾಗ ಹಳ್ಳಿಗರ ,ರೈತರ ಮನಗೆಲ್ಲದ ಕೃಷ್ಣ ನಗರದ ಅಭಿವೃದ್ಧಿಗೆ ದುಡಿದರು.ನಗರವನ್ನು ಸಿಂಗಾಪುರವನ್ನಾಗಿಸಲು ಪ್ರಯತ್ನಿಸಿದರು. ಮತ್ತೆ ಅವರ ಸರಕಾರವು ಸಂಪೂರ್ಣ ಬಲದಿಂದ ಅಧಿಕಾರಕ್ಕೆ ಬರಲಿಲ್ಲ.ಸಮ್ಮಿಶ್ರ ಪರ್ವ ಆರಂಭವಾಯಿತು. ಪರೋಕ್ಷವಾಗಿ ರೈತರನ್ನು ಅವಗಣಿಸಿದ್ದೇ ಅವರ ಅಧಿಕಾರ ಮುಗಿಯಲು ಕಾರಣವಾಯಿತು ಎಂದರೆ ತಪ್ಪಾಗದು.ಬಳಿಕ ಕಾಂಗ್ರೇಸಿನ "ಹೈಕಮಾಂಡ್" ರಾಜಕೀಯದಿಂದ ರಾಜ್ಯಪಾಲರಾಗಿ ಕರ್ನಾಟಕದ ಸಕ್ರಿಯ ರಾಜಕಾರಣದಿಂದ ಮರೆಯಾದರು.

ನಂತರವೂ ಅವರ ಕನಸು ರಾಜ್ಯದತ್ತಲೇ ಇತ್ತು.ಇದಕ್ಕೆ ಸಾಕ್ಷಿ ಎಂಬಂತೆ ಕೃಷ್ಣ ದಂಪತಿಗಳು ೨೦೦೭ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ವೇಳೆ ದೇವಸ್ಥಾನದಲ್ಲೂ ಅವರು ಪ್ರಾರ್ಥಿಸಿದ್ದು ಸಕ್ರಿಯ ರಾಜಕಾರಣಕ್ಕೆ ಮರಳುವ ಬಗ್ಗೆಯೇ. ಆಗಲೇ ದೇವರ ಮೊರೆ ಹೋಗಿದ್ದ ಕೃಷ್ಣ ನಂತರ ಹೋಮ ಹವನಾದಿಗಳನ್ನೂ ನೆರವೇರಿಸಿದ್ದರು.ಈಗ ಅವರ ಕನಸು ನನಸಾಗಿದೆ ಮುಂದಿನ ರಾಜಕೀಯದ ಹಾದಿ ಹೇಗಿದೆ ಎನ್ನುವುದು ಕಾದು ನೋಡಬೇಕು.
ರೈತರು ಅವರ ಹಿಂದಿನ ಆಡಳಿತದ ಬಗ್ಗೆ ಈಗ ಯಾವ ನಿಲುವು ತಾಳಿದ್ದಾರೆ ಎನ್ನುವುದರ ಮೇಲೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ ಎಂದರೆ ತಪ್ಪಾದೀತೇ..?.

04 ಮಾರ್ಚ್ 2008

ಮಿತ್ರನ ಮನೆಯಂಗಳದಿ ಒಂದು ಸಂಜೆ



ಮಾರ್ಚ್ ಮೊದಲ ಭಾನುವಾರ.

ವಿಶಿಷ್ಠವೆನಿಸಿದ ಕಾರ್ಯಕ್ರಮಕ್ಕೆ ಮಿತ್ರ ಹರೀಶ ಆದೂರರ ಮನೆಗೆ ಹೋಗಿದ್ದೆ.ಅಂದು ಅಲ್ಲಿ "ಮನೆಯಂಗಳದಲ್ಲೊಂದು ಸಾಹಿತ್ಯ " ಎಂಬ ಕಾರ್ಯಕ್ರಮ ನಡೆಯತ್ತಿತ್ತು.

ಪ್ರಸಾರಭಾರತಿಯ ಮಾಜಿ ಅಧ್ಯಕ್ಷ ಎಂ.ವಿ.ಕಾಮತ್ ಅವರು "ಭಾರತಾಯಣ"ದ ಬಗ್ಗೆ ಉಪನ್ಯಾಸ ನೀಡುವವರಿದ್ದರು.ಆಳ್ವಾಸ್ ನ ಮೋಹನ್ ಆಳ್ವಾ ಸಭಾಧ್ಯಕ್ಷತೆ ವಹಿಸಿದ್ದರು.ಮಿತ್ರ ಹರೀಶಣ್ಣ ವೇದಿಕೆಯಲ್ಲಿದ್ದರು. ಮನೆಯಂಗಳವಿಡೀ ತುಂಬಿ ಹೋಗಿತ್ತು. ಕಾಲೇಜು ವಿಧ್ಯಾರ್ಥಿಗಳೂ ಇದ್ದರು.

ಸಮಯ ಅಪರಾಹ್ನ ೨.೩೦.

ಕಾರ್ಯಕ್ರಮ ಆರಂಭಗೊಂಡಿತು.ಸಭಾ ಮರಿಯಾದೆಗಳ ಬಳಿಕ ಎಂ.ವಿ.ಕಾಮತ್ "ಭಾರತಾಯಣ" ಶುರುಮಾಡಿದರು.ಅವರು ಮಾತನಾಡುತ್ತಿದ್ದಂತೆಯೇ ಆಸಕ್ತಿ, ಕುತೂಹಲ ಹೆಚ್ಚಾಗುತ್ತಿತ್ತು.ಅದರ ಕೆಲವು ಸಾರಾಂಶಗಳು ಹೀಗಿವೆ.....


1947 ರ ವರೆಗೆ ಭಾರತ ಹಾಗೂ ನಾವು ಸ್ವತಂತ್ರರಾಗುವೆವೆಂಬ ಕಲ್ಪನೆ ಕೂಡಾ ಇದ್ದಿರಲಿಲ್ಲವಂತೆ. 1947 ರ ಆಗಸ್ಟ್ 14 ರ ಮಧ್ಯರಾತ್ರಿ ಇಡೀ ದೇಶದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದನ್ನು ಅವರು ಅತ್ಯಂತ ಭಾವುಕರಾಗಿ ವಿವರಿಸಿದರು.ಆಗ ಅವರು ಮಾಡಿದ್ದ ವರದಿಯನ್ನು ನೆನಪಿಸಿ ಗಾಂಧೀಜಿ ,ಅಂಬೆಡ್ಕರ್ ಸೇರಿದಂತೆ ಹಲವಾರು ಮುಖಂಡರ ಸಂದರ್ಶನದ ಬಗ್ಗೆಯೂ ಅವರು ತಿಳಿಸಿದರು.

ಅಖಂಡ ಭಾರತವನ್ನು ಸ್ಥಾಪಿಸಲು ಶಂಕರಾಚಾರ್ಯರು ಕಾಲ್ನಡಿಗೆಯ ಮೂಲಕ ಸಾಗಿದ್ದನ್ನು ನೆನಪಿಸಿಕೊಂಡ ಎಂ.ವಿ.ಕಾಮತ್ ಇಂದಿನ ಮೆಕಾಲೆ ಶಿಕ್ಷಣ ಪದ್ದತಿಯು ಶಂಕರಾಚಾರ್ಯರಂತಹ ಮಹಾನುಭಾವರ ಹೆಸರನ್ನು ನಮ್ಮ ವಿಧ್ಯಾರ್ಥಿಗಳಿಗೆ ತಿಳಿಸುವಂತೆ ಮಾಡಿಲ್ಲ ಎಂದು ವಿಷಾದಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯಷ್ಟೇ ಇನ್ನೂ ಅನೇಕರು ಭಾಗಿಯಾಗಿದ್ದರು ಆದರೆ ಬಹುತೇಕ ಮಂದಿಯ ಹೆಸರು ಇತಿಹಾಸದಲ್ಲಿ ದಾಖಲಿಸದೆ ಈಗಿನ ಯುವ ಪೀಳಿಗೆಗೆ ಅದರ ಅರಿವೆಯೇ ಇಲ್ಲ ಎಂದರು.ಇತಿಹಾಸ ಅರಿವು ಕೂಡಾ ಇಲ್ಲ ಹೆಚ್ಚೇಕೆ ಎಂ.ಕೆ.ಗಾಂಧಿ ಯಾರು ಎಂದು ಕೇಳಿದರೆ ಹೆಚ್ಚಿನ ಯುವ ಜನತೆಗೆ ಗೊತ್ತಿಲ್ಲ ಎಂಬುದನ್ನು ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದರು.

ಭಾರತದ ಇಂದಿನ ಸಾಮಾಜಿಕ ವ್ಯವಸ್ಥೆಗೂ ಹಿಂದಿನ ವ್ಯವಸ್ಥೆಗೂ ಅಜಗಜಾಂತರವಿದೆ.ಇಂದು ಸುಧಾರಿತ ಸಮಾಜವಿದೆ ಎಂದರು.

ಮೋಹನ್ ಆಳ್ವ ಮಾತನಾಡಿ ನಾವು ಆಶಾವಾದಿಗಳಾಗಬೇಕು ಸಂಘರ್ಷದ ಬದುಕಿನಲ್ಲಿ ಧನಾತ್ಮಕ ಅಂಶಗಳಿಗೆ ಒತ್ತು ನೀಡಿದಾಗ ಅಬಿವೃದ್ಧಿ ಸಾಧ್ಯ ಎಂದ ಅವರು ನಂಬಿಕೆ ಮೂಢನಂಬಿಕೆಗಳ ವ್ಯತ್ಯಾಸವನ್ನು ಅರಿತಾಗ ದಾರಿ ಸುಗಮವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಎಂ.ವಿ.ಕಾಮತ್ ಅವರೊಂದಿಗೆ ಸಂವಾದ ನಡೆಯಿತು.ಸಂವಾದದಲ್ಲಿ ಗಂಭೀರ ಪ್ರಶ್ನೆಗಳಿದ್ದವು.ಇಷ್ಟೊಂದು ಸಮಸ್ಯೆಗಳ ನಡುವೆಯೂ ಭಾರತ ಮುಂದುವರಿಯಬಹುದೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದಾಗ ಕಾಮತ್ ಅವರು ಖಂಡಿತಾ ಭಾರತ ಬೆಳೆಯಬಲ್ಲುದು ಎಂದು ಹೇಳಿದರು.ನಮ್ಮ ಪರಂಪರೆ , ಪೂರ್ವಜರ ದಾರಿಗಳು ಚೆನ್ನಾಗಿವೆ ಹಾಗಾಗಿ ಭಾರತಕ್ಕೆ ಹೆದರಿಕೆಯ ಅವಶ್ಯಕತೆಯಿಲ್ಲ.ನಮ್ಮ ಬದುಕಿನ ದಾರಿಯನ್ನು ನಾವು ಆ ದಿಸೆಯಲ್ಲೇ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

01 ಮಾರ್ಚ್ 2008

ರೈತರ ಬಾಳಿಗೆ ಸಿಹಿ... ಈಗ ದಿಲ್ ಗೂ ಖುಷಿ...



ರೈತರ ಸಾಲ ಮನ್ನಾ...!?. ನೇಗಿಲ ಯೋಗಿಗೆ ನಿಟ್ಟುಸಿರು ಬಿಡುವ ಸಮಯ....?

ಯಾಕೆ ಅಚ್ಚರಿ ಅಂತ ಕೇಳುವಿರಾ?.ಈಗಲಾದರೂ ಸರಕಾರಗಳಿಗೆ ರೈತರೇ ದೇಶದ ಆಸ್ಥಿ ಅಂತ ಅರಿವಾಯಿತಲ್ಲಾ.ಇದರ ಹಿಂದೆ ವೋಟ್ ಬ್ಯಾಂಕ್ ತಂತ್ರವಿರಬಹುದು.ಇರಲಿ ಪರವಾಗಿಲ್ಲ. ರೈತರೇ ರಾಜಕೀಯ ಪಕ್ಷಗಳ ,ರಾಜಕೀಯ ನಾಯಕರುಗಳ ಭವಿಷ್ಯವನ್ನು ನಿರ್ಧರಿಸುವವರು ಎಂಬುದು ಈಗಲಾದರೂ ಸಾಬೀತಾಯಿತಲ್ಲ.

ಈಗ ಹಳ್ಳಿ ಹಳ್ಳಿಯೊಳಗಿನ ರೈತರಿಗೆ ಸಿಹಿ ಸುದ್ದಿಯದ್ದೇ ಮಾತು.ತರಕಾರಿ ,ದಿನಸಿ ಅಂಗಡಿಗಳಲ್ಲಿ ,ಪತ್ರಿಕೆಯ ಅಂಗಡಿಯ ಮುಂದೆ ಹೀಗೆ ಎಲ್ಲೆಡೆ ಸಾಲ ಮನ್ನಾದ್ದೇ ಚರ್ಚೆ.ಸಾಲ ಮನ್ನಾ ನಮಗೂ ಇದೆಯಾ.. ಅದು ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಮಾಡಿದವರಿ ಮಾತ್ರವಂತೆ... ಅಲ್ಲಾ ವಾಣಿಜ್ಯ ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೂ ಇದೆಯಂತೆ ನಿಮಗೇನಾದರೂ ಗೊತ್ತಾ?.. ಹೀಗೇ ಚರ್ಚೆ ನಡೆಯುತ್ತಿತ್ತು.ಅಂತೂ ನಮ್ಮ ಸಾಲ ಮುಗಿಯುತ್ತಲ್ಲಾ ಎಂಬ ಹರ್ಷ ಹಳ್ಳಿಯ ರೈತರದ್ದು.

ಶುಕ್ರವಾರ ಪ್ರಕಟವಾದ ಕೇಂದ್ರ ಆರ್ಥಿಕ ಬಜೆಟ್ ನಲ್ಲಿ ಮಂಡಿಸಲಾದ ಅಂಶಗಳಲ್ಲಿ ರೈತರ ಸಾಲ ಮನ್ನಾ ಅತ್ಯಂತ ಗಮನ ಸೆಳೆದಿದೆ.ಅದಕ್ಕೆ 64 ಸಾವಿರ ಕೋಟಿ ರೂ ಗಳನ್ನು ಮೀಸಲಿಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.ಇದರ ಪ್ರಕಾರ 5 ಎಕ್ರೆಗಿಂತ ಕಡಿಮೆ ಹಿಡುವಳಿದಾರರಿಗೆ ಸಾಲಮನ್ನಾ ಹಾಗೂ ಉಳಿದ ರೈತರು ಏಕಕಾಲದಲ್ಲಿ ಸಾಲದ ಶೇ 75 ನ್ನು ಬ್ಯಾಂಕ್ ಗೆ ಪಾವತಿಸಿದರೆ ಶೇ 25 ಸಾಲ ಮನ್ನಾವೆಂಬ ವಿಷಯ ಮಂಡಿಸಲಾಗಿತ್ತು.ಹಾಗಾಗಿ ಹಲವು ವರ್ಷಗಳಿಂದ ಸಾಲದಿಂದ ಬಳಲುತ್ತಿದ್ದ ದೇಶದ ರೈತರಿಗೆ ಖುಷಿಯಾಗಿದೆ.ಇನ್ನಾದರೂ ನೆಮ್ಮದಿ ಸಿಗಬಹುದಾ?

ಆದರೆ ಇದು ಚುನಾವಣಾ ಬಜೆಟ್ ಎಂಬುದಕ್ಕೆ ಬೇರೆ ಮಾತೇ ಇಲ್ಲ.ಈಗ ಇಡೀ ರಾಜಕಾರಣಿಗಳ ಭವಿಷ್ಯ ರೈತರ ಕೈಯಲ್ಲಿದೆ ಎಂಬ ಸತ್ಯ ರಾಜಕಾರಣಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಅರ್ಥವಾಗಿದೆ.ಹಾಗಾಗಿ ಇನ್ನು ದೇಶದ ರೈತರು ಹೆದರಬೇಕಿಲ್ಲ ಎಂಬುದು ಹಳ್ಳಿಯಲ್ಲಿ ತಿಳಿಯಬೇಕಾಗಿರುವ ಸಂಗತಿ.
ಈ ಸಾಲಮನ್ನಾದಿಂದ ದೇಶದ ಆರ್ಥಿಕ ಸ್ಥಿತಿಗೆ ಧಕ್ಕೆಯಾಗಲಿದೆಯೇ,ಬ್ಯಾಂಕ್ ಗಳಿಗೆ ಹೊರೆಯಾಗಲಿದೆಯೇ ಎಂಬದನ್ನು ತಜ್ಞರು ನಿರ್ಧರಿಸಿ ವಿವರಿಸಲಿದ್ದಾರೆ.ಆದರೆ ಅನೇಕ ವರ್ಷಗಳಿಂದ ಸಾಲದಿಂದ ಕಂಗಾಲಾಗಿರುವ ರೈತರು ಬೆಳೆಗಳಿಗೆ ಉತ್ತಮ ಧಾರಣೆಯೂ ಸಿಗದೆ ಪರಿತಪಿಸುತ್ತುರುವ ವೇಳೆ ಇಂದಿನ ಸಾಲಮನ್ನಾ ರೈತರಿಗೆ ವರದಾನವೇ ಸರಿ.ಮೊನ್ನೆ ಕರ್ನಾಟಕದಲ್ಲೂ ಕೂಡಾ ರೈತರಿಗೆ ಸಾಲಮನ್ನಾದ ಖುಷಿ ಸಿಕ್ಕಿತ್ತು.

ರೈತರ ಸಾಲಮನ್ನಾಕ್ಕೂ ಆತ್ಮಹತ್ಯೆಗೂ ಸಂಬಂಧವಿದೆಯಾ ಎಂಬುದನ್ನು ಇನ್ನು ನೋಡಬೇಕಷ್ಟೆ.ಸಾಲದ ಶೂಲಕ್ಕೆ ಸಿಕ್ಕು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಾದರೆ ಮುಂದೆ ಅದು ಗಣನೀಯವಾಗಿ ಕಡಿಮೆಯಾಗಬೇಕು.

ಇನ್ನೊಂದು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂತಹ ಸಾಲಮನ್ನಾ ಯೋಜನೆಗಳಿಂದ ಕೆಲವು ಶ್ರೀಮಂತ ರೈತರು ಇನ್ನಷ್ಟು ಸಿರಿವಂತರಾಗಿದ್ದಾರೆ.ಕೆಲವು ರೈತರು ತಾವು ಬ್ಯಾಂಕ್ ಗಳಿಂದ ಶೇ 4 ಅಥವಾ ಶೇ 9 ಬಡ್ಡಿದರದಲ್ಲಿ ಸಾಲವನ್ನು ಮಾಡಿ ಉಳಿತಾಯ ಖಾತೆ ಅಥವಾ ನಿರಖು ಠೇವಣಿಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.ಅಂತಹವರಿಗೆ ಈಗ ಬಂಪರ್ ಲಾಭ..! ಹಾಗಾಗಿ ಸರಕಾರವು ಭೂಮಿ ಆಧಾರದಲ್ಲಿ ಸಾಲಮನ್ನಾ ಮಾಡುವ ಬದಲು ಇತರ ಆಧಾರದಲ್ಲಿ ಸಾಧ್ಯವಿದ್ದರೆ ಸಾಲಮನ್ನಾ ಮಾಡಬೇಕಾಗಿದೆ.ಆಗ ನಿಜವಾದ ಬಡ ರೈತನಿಗೆ ಸಾಲದ ಹೊರೆ ತಪ್ಪಬಹುದು, ಸರಕಾರವೂ ಪ್ರಾಮಾಣಿಕವಾದ ಕಾರ್ಯ ನಡೆಸಿದಂತಾಗಬಹುದೇ ಎಂದು ಚರ್ಚೆ ನಡೆಯಬೇಕು.ಒಟ್ಟಿನಲ್ಲಿ ಈಗ ರೈತರ ದಿಲ್ ಕುಶ್... ಎಷ್ಟು ದಿನ.. ಅಂತ ಸಾಲ ಮನ್ನಾ ಆದ ಬಳಿಕವೇ ನಿಜವಾದ ಸಂಗತಿ ತಿಳಿಯಬೇಕು.

ಕೊನೆಯ ಮಾತು : ಈ ಸಾಲಮನ್ನಾ ಯೋಜನೆಯ ಪ್ರಸ್ತಾಪ ಬರುತ್ತಿದ್ದಂತೆಯೇ ಬ್ಯಾಂಕ್ ನೌಕರರೊಬ್ಬರು ಆತಂಕ ತೋಡಿಕೊಳ್ಳುತ್ತಿದ್ದರು. ಇನ್ನು ಬ್ಯಾಂಕ್ ಗತಿ ಏನಪ್ಪಾ?.ಹಿಂದೆ ಹೀಗೇ ಸಾಲಮನ್ನಾ ಆಗಿ ಬ್ಯಾಂಕ್ ಈಗ ಸುಧಾರಿಸುತ್ತಿದೆ ಮತ್ತೆ ಹೀಗಾದರೆ ಬ್ಯಾಂಕ್....? ಸರಕಾರದಿಂದ ಸಹಾಯಧನ ಬರುವಾಗ ಬ್ಯಾಂಕ್ ಮುಳುಗುತ್ತದೆ ಎನ್ನುತ್ತಾರೆ.ಅದು ಹೇಗೆ ಎಂದು ವಿವರವಾಗಿ ಹೇಳುವ ತಾಳ್ಮೆ ಅವರಿಗಿರಲಿಲ್ಲ.