07 ಮಾರ್ಚ್ 2008

ಇವರು ರೈತರನ್ನು ಮಂಗ ಮಾಡುವ ಸಚಿವರು ಸ್ವಾಮಿ..!



ಮೊನ್ನೆ ಕೇಂದ್ರದ ಆರ್ಥಿಕ ಬಜೆಟಲ್ಲಿ ರೈತರ ಸಾಲಮನ್ನಾಕ್ಕೆಂದು 64 ಸಾವಿರ ಕೋಟಿ ರೂ ವನ್ನು ನಿಗದಿಪಡಿಸಲಾಗಿದೆ.ಆ ಬಗ್ಗೆ ಈಗ ಚರ್ಚೆ ನಡೆಯುತ್ತಿರುವುದು ಬಯಲಾಗಿರುವ ಸತ್ಯ.ಸಾಲ ಮನ್ನಾ ಆಗುತ್ತಾ ಇಲ್ಲವೋ ಮತ್ತಿನ ವಿಷಯ.ರೈತರನ್ನು ಒಮ್ಮೆ ನಂಬುವಂತೆ ಮಾಡಲಾಗಿದೆ.ಆದರೆ ಕೇಂದ್ರ ಸರಕಾರದ ನಮ್ಮ ಕೃಷಿ ಸಚಿವರು ಎಂತಹ ಹೇಳಿಕೆ ನೀಡುತ್ತಾರೆ ನೋಡಿ.ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ ಎನ್ನುತ್ತಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ,ಅದುವೇ ಸರಕಾರದಲ್ಲಿರುವ ಸಚಿವರೊಬ್ಬರು ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ ಎಂದು ಹೇಳುವುದಾದರೆ ಅವರು ರೈತ ಪರವೇ ಅಂತ ಚಿಂತಿಸಬೇಕು.ಹಾಗಾದರೆ ಸಾಲಮನ್ನಾ ಆದೀತೇ?.ಇದೆಲ್ಲಾ ಬೋಗಸ್ ಅಲ್ಲವೇ?.ಹಾಗಾದರೆ ಮತ್ತೆ ಹೇಗೆ ರೈತರ ಆತ್ಮಹತ್ಯೆಯನ್ನು ನಿಲ್ಲಿಸುತ್ತಾರೆ ಎನ್ನುವುದನ್ನು ಸಚಿವರು ಹೇಳಬೇಕಲ್ಲಾ.ಅದುವರೆಗೆ ರೈತರ ಬಗ್ಗೆ ಕಾಳಜಿ ತೋರಿಸದ ಸಚಿವರು ಸಾಲ ಮನ್ನಾದ ಸಮಯದಲ್ಲಿ ಎಚ್ಚರವಾಗುತ್ತಾರೆ.ರೈತರಿಗಾಗಿ ಒಂದೇ ಒಂದು ಉತ್ತಮ ಕಾರ್ಯ ಮಾಡದ "ಕೃಷಿ" ಸಚಿವರು ಇಂತಹ "ಅಧಿಕ ಪ್ರಸಂಗ " ಹೇಳಿಕೆ ನೀಡಿ ರಾಜಕೀಯಕ್ಕಾಗಿ ದೇಶದ ಜನರ ಗಮನ ಸೆಳೆದು ಜೀವಂತಿಕೆಯನ್ನು ತೋರಿಸಿ ತಾನು"ದೊಡ್ಡ ಜನ" ಆಗಿ ರೈತರನ್ನು ಮಂಗ ಮಾಡಿ ಅವರ ಮಾನಸಿಕ ಸ್ಥೈರ್ಯವನ್ನು ಬಲಹೀನಗೊಳಿಸುವ ಸಚಿವರಿದ್ದೇನು ಫಲ. ನಾಚಿಕೆಯಾಗಬೇಕು.

ಸಾಲ ಮನ್ನಾದಿಂದ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ ಅವರ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ ಎಂದುದನ್ನು ಒಪ್ಪೋಣ.ಆದರೆ ಮತ್ತೆ ಹೇಗೆ ಸಮಸ್ಯೆಗಳನ್ನು ಬಗೆಹರಿಸುವುದು?.ಕೃಷಿಯುತ್ಪನ್ನಗಳ ಬೆಲೆ ಏರಿಕೆಯೇ? ಹಾಲಿನ ಬೆಲೆ ಏರಿದಾಗಲೇ ನಮಗೆ "ಹುಳಿ"ಯಾಗುತ್ತದೆ...!.ಗೋಧಿಯ ದಾಸ್ತಾನು ದೇಶದಲ್ಲಿ ಕುಂಠಿತವಾವಾಗಿ ಬೆಲೆ ಏರಿಕೆಯಾದಾಗ ಆತಂಕವಾಗುತ್ತದೆ...... ಹೀಗಿರುವಾಗ ಹೇಗೆ ಸಮಸ್ಯೆ ಬಗೆಹರಿಸುತ್ತಾರೆಂದು ಹೇಳುತ್ತಾರಾ ಇವರು?.

ಈ ಸಾಲಮನ್ನಾದಲ್ಲೂ ಇನ್ನೊಂದು ಗೊಂದಲ ಶುರುವಾಗಿದೆ. ಕೃಷಿ ಪ್ರದಾನವಾದ , ರೈತರೇ ಈ ದೇಶದ ಬೆನ್ನೆಲುಬು ಎಂದು ಹೇಳುವ ನಮ್ಮ ದೇಶದಲ್ಲಿ ರೈತರನ್ನು ಯಾವಾಗಲೂ ಗೊಂದಲಕ್ಕೆ ಸಿಲುಕಿಸಿ ಹಾಕಿಬಿಡುತ್ತಾರೆ. ಸಾಲ ಮನ್ನಾಕ್ಕೆ 2 ಹೆಕ್ಟೇರ್ [ 5 ಎಕ್ರೆ] ಮಿತಿಯಿದೆ. ಹಾಗಾದರೆ ಮಹಾರಾಷ್ಟ್ರದಂತಹ ಕೆಲವು ಪ್ರದೇಶಗಳಲ್ಲಿ ಈ ಸಾಲಮನ್ನಾ ಕೈಗೆಟಕುವುದಿಲ್ಲ.ಏಕೆಂದರೆ ಅಲ್ಲಿನ ಬಹುತೇಕ ರೈತರಿಗೆ 2 ಹೆಕ್ಟೇರಿಗಿಂತ ಹೆಚ್ಚಿನ ಜಮೀನಿದೆ.ಆದರೆ ಅಲ್ಲಿನ ಯಾವೊಬ್ಬ ರೈತನು ಕೂಡಾ ಸಿರಿವಂತನಲ್ಲ.ಅವರಿಗೆ ಏನು ಲಾಭ?.ಇನ್ನು ಕರ್ನಾಟಕದಲ್ಲೂ ಈ ಗೊಂದಲವಿದೆ.ಇನ್ನೊಂದು ಅಂಶವೆಂದರೆ ಈ ಸಾಲ ಮನ್ನಾಕ್ಕೆ ಬಜೆಟ್ ಆರ್ಥಿಕ ಮೂಲವನ್ನು ತೋರಿಸದ ಕಾರಣ ಇದೊಂದು ಬೊಗಸ್ ಎಂತಲೂ ಹೇಳಲಾಗುತ್ತಿದೆ.ಅದಕ್ಕಾಗಿ ನ್ಯಾಯಾಲದ ಮೊರೆ ಹೋಗಲಾಗಿದೆ ಎಂದು ತಿಳಿದುಬಂದಿದೆ.

ಕೃಷಿ ಸಚಿವರು ಕ್ರಿಕೆಟ್ ಮಂಡಳಿಯಲ್ಲೂ ಇದ್ದಾರೆ.ಮೊನ್ನೆ ಆಸ್ಟ್ರೇಲಿಯಾದ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದಾಗ ತಕ್ಷಣವೇ 10 ಕೋಟಿ ಬಿಡುಗಡೆಗೊಳಿಸುವ ಉತ್ಸಾಹ ತೋರಿಸಿದರು.ಅದೇ ಗೋಧಿಯ ಆಮದು ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಸಚಿವರ ಸುದ್ದಿಯೇ ಇರುವುದಿಲ್ಲ.ಕ್ರಿಕೆಟಿಗರಿಗೆ ಬಹುಮಾನವನ್ನು ನೀಡಲಿ ಆ ಬಗ್ಗೆ ಹಳ್ಳಿಯ ರೈತರಿಗೆ "ಹುಳುಕು" ಇಲ್ಲ.ಕ್ರಿಕೆಟಿಗರೆಲ್ಲಾ ದೇಶದ ಕಣ್ಮಣಿಗಳು.ಆದರೆ ಕೃಷಿ ಸಚಿವರಾಗಿ ರೈತರನ್ನು ಏಕೆ ಈ ದೇಶದ ಕಣ್ಮಣಿಗಳಂತೆ ನೋಡುತ್ತಿಲ್ಲ.?.

ಇನ್ನೊಂದು ಮೋಸ ಶುರುವಾಗಿದೆ.ರೈತರಿಗೆ ಉಚಿತ ವಿದ್ಯುತ್ ಎಂಬ ಹೇಳಿಕೆ. ಗ್ರಾಮೀಣ ಪ್ರದೇಶದಲ್ಲಿ ಈಗಲೇ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ.ಸರಿಯಾಗಿ ದಿನಕ್ಕೆ 8 ಗಂಟೆ ವಿದ್ಯುತ್ ಇದ್ದರೆ ಪುಣ್ಯ. ಈ ನಡುವೆಯೇ ರೈತರ ಪಂಪುಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡುವ ಹೇಳಿಕೆ ನಂಬಲು ಸಾಧ್ಯವೇ?.

ಇವರಿಗೆಲ್ಲಾ ಉತ್ತರ ನೀಡಲು ರೈತರೇ ಒಟ್ಟಾಗ ಬೇಕು.ನಾಚಿಕೆಗೆಟ್ಟ ಸಚಿವರಿರುವ ದೇಶದಲ್ಲಿ ಏನು ಅಭಿವೃದ್ಧಿ ಸಾಧ್ಯ... ರೈತರ ಮನ ನೋಯಿಸಿದವರು ಉದ್ಧಾರವಾದಾರಾ..?

ಕಾಮೆಂಟ್‌ಗಳಿಲ್ಲ: