20 ಮಾರ್ಚ್ 2008

ಶಿ'ರಾಡಿ' ಯಾವಾಗ ಸ್ವಾಮಿ 'ರೆಡಿ'....?





ಶಿರಾಡಿ...!. ಮತ್ತೆ ನೆನಪಾಯಿತು.

ಶಿರಾಡಿ ನೆನಪಾದಾಗಲೆಲ್ಲಾ "ರಾಡಿ"ಯ ಕತೆ ನೆನಪಾಗುತ್ತದೆ.ನಾವು ಶಿರಾಡಿಯ ಕಡೆಗೆ ಹೋಗಿ ಆ "ರಾಡಿ"ಯ ಬಗ್ಗೆ ಬರೆದ ಸಂಗತಿಗಳು ನೆನಪಿನಂಗಳಕ್ಕೆ ಬರುತ್ತದೆ.ಆದರೆ ಈಗಲೂ "ರಾಡಿ"ಯದ್ದೇ ಕತೆ.ಅದು ಏ.30 ರ ಒಳಗೆ ಮುಗಿದೀತೇ?. ಈ ನಡುವೆ ರಾತ್ರಿ ಲಾರಿಗಳೂ ಸಂಚರಿಸುತ್ತಿದೆ.....

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಶಿರಾಡಿಯ ಅವ್ಯವಸ್ಥೆಯಿಂದಾಗಿ ಸದ್ದಿಲ್ಲದಾಗಿದೆ ವಾಹನಗಳ ಸದ್ದು ಆಗೊಮ್ಮೆ ಈಗೊಮ್ಮೆ "ಗುಯ್ಯ್" ಎನ್ನುವುದು ಬಿಟ್ಟರೆ ಹಕ್ಕಿಗಳ ಕಲರವ ಜನರ ಬೊಬ್ಬೆ ಗದ್ದಲ ಮಾತ್ರಾ ಕೇಳುತ್ತಿತ್ತು.ಮೊನ್ನೆ ಬೆಂಗಳೂರಿಗೆ ಹೋಗಿ ಬರುತ್ತಿದ್ದಾಗ ಶಿರಾಡಿ ಹಾದಿಯಲ್ಲಿ ಇಳಿಯುವ ವೇಳೆ ರಾತ್ರಿ 11 ಕಳೆದಿತ್ತು.ಲಾರಿಗಳು ಪ್ರಖರವಾದ ಬೆಳಕನ್ನು ಚೆಲ್ಲುತ್ತಾ ಮುಂದೆ ಬರುತ್ತಿದ್ದಾಗ ಶಿರಾಡಿಯಲ್ಲೀಗ ಲಾರಿಗಳ ಕಲರವವೂ ಶುರುವಾಗಿದೆ ಎಂದು ಅನಿಸಿತು.

ಶಿರಾಡಿಯ ಕಾಮಗಾರಿಗಳನ್ನು ಏ.30 ರ ಒಳಗಾಗಿ ಪೂರ್ತಿಗೊಳಿಸುವ ಬಗ್ಗೆ ಅಧಿಕಾರಿಗಳು, ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ.ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅದು ಪೂರ್ತಿಗೊಳ್ಳುವುದೇ ಎಂಬ ಆತಂಕವಿದೆ.

ಶಿರಾಡಿ ಘಾಟ್ ರಸ್ತೆಯು ಅತ್ಯಂತ ಶೋಚನೀಯ ಪರಿಸ್ಥಿತಿಗೆ ತಲಪಿದ ಬಳಿಕ ಮಂಗಳೂರು-ಬೆಂಗಳೂರು ಸಂಚಾರವನ್ನು ನಿಲುಗಡೆಗೊಳಿಸಿ ಕಾಮಗಾರಿಯನ್ನು ಆರಂಭಗೊಳಿಸಲಾಯಿತು.ಆ ನಂತರ ವಿಘ್ನಗಳೇ ಶುರುವಾಯಿತು.ಹಲವು ತೊಂದರೆಗಳ ಬಳಿಕ ಕಾಮಗಾರಿಯು ವೇಗವನ್ನು ಪಡೆಯಿತಾದರೂ ವರುಣದ ಅವಕೃಪೆಯು ಕಾಮಗಾರಿಗೆ ಬ್ರೇಕ್ ಹಾಕಿತು.ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಕಾರಣದಿಂದ ಕಾಮಗಾರಿಯನ್ನು ಒಂದೆರಡು ದಿನ ಸ್ಥಗಿತಗೊಳಿಸಬೇಕಾಯಿತು.ಲಾರಿಗಳು ಅಥವಾ ಘನ ವಾಹನಳು ಈ ರಸ್ತೆಯಲ್ಲಿ ನಿಷೇಧವಿದ್ದರೂ ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಕಾನೂನು ಹಾಗೂ ಬಂದೋಬಸ್ತುಗಳೆಲ್ಲಾ ಗಾಳಿಗೆ ತೂರಿದಂತಾಗಿದೆ.

ಶಿರಾಡಿಯಲ್ಲಿನ ರಸ್ತೆ ತಿರುವುಗಳನ್ನೆಲ್ಲಾ ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುತ್ತಿದ್ದು ಈಗಾಗಲೇ 3 ತಿರುವುಗಳ ಕಾಂಕ್ರೀಟೀಕರಣ ಪೂರ್ತಿಗೊಂಡಿದ್ದು ಉಳಿದ 14 ತಿರುವುಗಳ ಕಾಮಗಾರಿ ನಡೆಯುತ್ತಿದ್ದು ಇನ್ನೂ ಹಲವು ತಿರುವುಗಳ ಕಾಮಗಾರಿ ಆರಂಭವಾಗಬೇಕಾಗಿದೆ. ಉಳಿದಂತೆ ರಸ್ತೆಯ ಡಾಮರೀಕರಣವು ಕೆಲವೆಡೆ ಪೂರ್ತಿಗೊಂಡಿದೆ.ಹೀಗಾಗಿ ಏಪ್ರಿಲ್ ಒಳಗಾಗಿ ಈ ಕಾಮಗಾರಿಗಳೆಲ್ಲ ಪೂರ್ತಿಗೊಳ್ಳಬಹುದೆಂಬ ವಿಶ್ವಾಸವನ್ನು ಸಾರ್ವಜನಿಕರಾರು ಹೊಂದಿಲ್ಲ. ಕಾಮಗಾರಿಯ ವೇಗಕ್ಕೆ ಇತ್ತೀಚೆಗೆ ಸುರಿಯುತ್ತಿರುವ ಮಳೆ ಅಡ್ಡಿಯಾಗಿತ್ತಿದೆ.ಆದರೂ ರಾತ್ರಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದು ಕಾಮಗಾರಿಯ ಪೂರ್ತಿಗೆ ಶ್ರಮಿಸುತ್ತಿದ್ದಾರೆ. ಇದೇ ಸಮಯಲ್ಲಿ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಕಾಮಗಾರಿಯ ಗುಣಮಟ್ಟ ಉಳಿಯಬಹುದೇ ಎಂಬುದು ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಅನೇಕ ಸಮಯಗಳಿಂದ ಶಿರಾಡಿಯ ಸಂಚಾರದಿಂದ ಬೇಸತ್ತಿದ್ದ ಪ್ರಯಾಣಿಕರಿಗೆ ಹಾಗೂ ವಾಹನ ಚಾಲಕರಿಗೆ ಏ.30ರ ಒಳಗಾಗಿ ಸುಗಮ ಸಂಚಾರಕ್ಕೆ ಸಾಧ್ಯವಾದೀತೇ ಎಂಬ ಪ್ರಶ್ನೆ ಈಗ ಕಾಡುತ್ತಿದಯಲ್ಲದೆ ಶಿರಾಡಿಯಲ್ಲಿ ಕಾಮಗಾರಿ ಪೂರ್ತಿಗೊಳ್ಳುವವರೆಗೆ ಘನವಾಹನಗಳ ನಿಷೇಧವಿದ್ದರೂ ಲಾರಿಗಳ ಸಂಚಾರವು ಹಲವು ಸಂಶಯಗಳಿಗೆ ಕಾರಣವಾಗಿದೆ.

ಕೊನೆಯ ಮಾತು : "ಇಷ್ಟುದಿನ ಕಾದವರಿಗೆ ಇನ್ನೊದಿಷ್ಟುದಿನ ಕಾಯೋಕಾಗಲ್ವಾ...." ಅಂತ ಈಗ ಅಧಿಕಾರಿಗಳು ಕೇಳುತ್ತಿದ್ದಾರಂತೆ ..! [ಅಂದರೆ ಮಳೆಗಾಲದ ನಂತರವೇ ರಸ್ತೆ...?]

ಕಾಮೆಂಟ್‌ಗಳಿಲ್ಲ: