29 ಮಾರ್ಚ್ 2008

ಇದು "ಬಾಳಿನ" ಆಯ್ಕೆ...!?



ಇದು ನನ್ನ ಕಲ್ಪನಾಲೋಕ....

ಹಲವು ಮದುವೆಯ ಸಮಾರಂಭಕ್ಕೆ ಹೋಗಿರುತ್ತೇವೆ.ಭರ್ಜರಿ ಊಟ ಮಾಡಿರುತ್ತೇವೆ.ಒಂದು ಸ್ವಲ್ಪ ಸಮಯದ ನಂತರ ಸುದ್ದಿ ಬರುತ್ತದೆ.. ಏ.. ವಿಷಯ ಗೊತ್ತಾಯ್ತಾ.. .. ಅವರು ಡೈವೋರ್ಸ್ ತಗೊಂಡ್ರಂತೆ...!!! ಏನಂತೆ ಕಾರಣ ...ನಿಂಗೇನಾದ್ರೂ ಗೊತ್ತಾ.........? .ಹೀಗೇ ಮುಂದುವರಿಯುವ ಸುದ್ದಿ ನಂತರ ಹಾಗಂತೆ... ಹೀಗಂತೆ ಎಂದು ರಾದ್ದಾಂತವಾಗುವುದು ಇಂದು ಸಾಮಾನ್ಯದ ಸಂಗತಿ. ಇದು ಇಂದಿನ ಸಮಾಜದಲ್ಲಿ, ಇಂದಿನ ಆಧುನಿಕ ಬದುಕಿನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಗಮನಿಸಿ ನೋಡಿ. ಒಂದು ಹತ್ತು ವರ್ಷದ ಹಿಂದಿನ ದಾರಿಗಳನ್ನು ನೋಡಿದರೆ ಇಂತಹ ಒಂದೇ ಒಂದು ಪ್ರಸಂಗಗಳು ಕಾಣುತ್ತಿರಲಿಲ್ಲ ಅಂತ ಹಿರಿಯರು ಮಾತನಾಡಿಕೊಳ್ಳುತ್ತಾರೆ. ಅಂದಿನ ಕಾಲದಲ್ಲಿ ಮನೆಯವರೇ [ತಂದೆ-ತಾಯಿ, ಮಾವಂದಿರು, ಬಂಧುಗಳು] ಹುಡುಗ/ಹುಡುಗಿಯನ್ನು ನೋಡಿ ಮದುವೆಯನ್ನು ಏರ್ಪಡಿಸುತ್ತಿದ್ದರಂತೆ[ನನಗೆ ಗೊತ್ತಿಲ್ಲ.] ಈಗ ಹಾಗಲ್ಲ. ಕಾಲ ಬದಲಾಗಿದೆ.ಹೇಗೆಂದು ಮತ್ತೆ ಹೇಳುವುದಕ್ಕೆ ಹೋಗುವುದಿಲ್ಲ.ನನಗೂ ಆ ಅನುಭವವಿಲ್ಲ.

ನನ್ನ ಯೋಚನೆ ಹೀಗೆ ಹರಿಯಿತು....

"ಮದುವೆ ಯಾಕಾಗಬೇಕು" ಎನ್ನುವ ಪ್ರಶ್ನೆ ಮೊದಲು ಮನಸ್ಸಿನಲ್ಲಿ ಹುಟ್ಟಲು ಶುರುವಾಗಬೇಕು. ಅದು ಕೇವಲ ದೈಹಿಕ ಹಿತಕ್ಕಾಗಿ ಎನ್ನುವ ಮದುವೆಗಳು ಯಾವತ್ತೂ ಶ್ವಾಶ್ವತವಾಗಲಾರದು ಎನ್ನುವ ಸತ್ಯ ಮೊದಲು ಕಂಡುಕೊಳ್ಳಬೇಕು. ಆಸ್ಥಿ ಅಂತಸ್ಥುಗಳನ್ನು ಅರಸುವ ಮದುವೆಗಳಲ್ಲಿ ಬಹು ಬೇಗನೆ ಹುಳಿ ಸೇರಿಕೊಳ್ಳುವುದನ್ನು ನಾವೆಲ್ಲ ಕಂಡುಕೊಂಡಿದ್ದೇವೆ.ಇನ್ನೂ ಕೆಲವರು ಇನ್ನಿಲ್ಲದ ಕಲ್ಪನೆಗಳನ್ನಿಟ್ಟು ಸಂಗಾತಿಯ ಹುಡುಕಾಟದಲ್ಲಿ ತೊಡಗುತ್ತಾರೆ.ಅನೇಕ ಬಾರಿ ಹೀಗೆ ಬಾಳ ಸಂಗಾತಿಯ ಹುಡುಕಾಟದಲ್ಲಿ ಅತಿಯಾದ ಕಲ್ಪನೆಗಳಿಗೆ ಪೂರ್ಣವಿರಾಮವಿಲ್ಲದೆ ಜೀವನವೇ ಮುಗಿದುಬಿಡುತ್ತದೆ. ಹಾಗಾದರೆ ಮತ್ತೆ ಪ್ರಶ್ನೆ ಮದುವೆ ಅಂದರೇನು?.

ನನ್ನ ಅರ್ಥದಲ್ಲಿ ಮದುವೆಯೆಂಬುದು ಎರಡು ಶುದ್ಧ ಮನಸ್ಸುಗಳ ಮಿಲನ... ಅಲ್ಲಿ ನಂಬಿಕೆ,ಸ್ನೇಹ,ಸಹಕಾರ .... ಹೀಗೆ ಎಲ್ಲವೂ ಕಾಣಸಿಗಬೇಕು. ಮಾತ್ರವಲ್ಲ ನಾಲ್ಕು ಗೋಡೆಗಳ ಮಧ್ಯದಿಂದ ಹೊರಬಂದು ಅವರದೇ ಆದ ಬದುಕಿಗೆ, ಲೋಕಕ್ಕೆ ಅವಕಾಶವೂ ಇರಬೇಕು.ಅಲ್ಲಿನ ಅನುಬಂಧವು ಸೋಲು-ಗೆಲುವುಗಳಲ್ಲಿ ಇಬ್ಬರೂ ಭಾಗಿಯಾಗಬೇಕು. ಅದಕ್ಕಾಗಿಯೇ ಸಪ್ತಪದಿಯನ್ನು ತುಳಿದು ಹೊಸಬಾಳಿಗೆ ಪ್ರವೇಶಿಸುವುದು. ಅಂದ ಹಾಗೆ ಈ ಸಪ್ತಪದಿಯ ಬಗ್ಗೆ ಇಂದು ಹುಡುಗ-ಹುಡುಗಿಗೆ ಬಿಡಿ [ನನ್ನನ್ನೂ ಸೇರಿಸಿ] ಕೆಲ ಪುರೋಹಿತರಿಗೂ ಗೊತ್ತಿಲ್ಲ....!?.

ಎಷ್ಟೋ ಸಾರಿ ನಡೆಯುವುದುಂಟು.ಕೆಲ ಕುಟುಂಬಗಳಲ್ಲಿ ಮದುವೆಯ ಸಮಯ ಬಂದಾಗ "ಜಾತಕ"ಗಳು ಹೊರಬರುತ್ತವೆ.ಆಗ ಅವುಗಳಲ್ಲಿ ದೋಷ ಇತ್ಯಾದಿಗಳು ಕಂಡು ಬರುತ್ತೆವೆ.ಹಾಗಾಗಿ ಹುಡುಗ/ಹುಡುಗಿಯ ಜಾತಕದ ಹೊಂದಾಣಿಕೆಯನ್ನು ಎರಡೆರಡು ಬಾರಿ ತೋರಿಸಿ ಸರಿಯಾಗಿ ಹೊಂದಿಗೆಯಾದ ನಂತರವೇ ಮುಂದಿನ ಕಾರ್ಯಕ್ರಮ.ಕೆಲವೊಮ್ಮೆ ಹುಡುಗ-ಹುಡುಗಿಗೆ ಆ ಮದುವೆ ಒಪ್ಪಿಗೆಯಾಗಿರುವುದಿಲ್ಲ. ಅವರಿಬ್ಬರ ವಯಸ್ಸಿನ ಅಂತರವೂ ಹೆಚ್ಚಿರುತ್ತದೆ. ಆದರೆ ಜಾತಕ ಚೆನ್ನಾಗಿ ಕೂಡಿಬರುತ್ತದೆ ಎನ್ನುವ ಒಂದೇ ಕಾರಣಕ್ಕಾಗಿ ಮದುವೆ...!! ಎಂತಹ ಮೂರ್ಖ ಕೆಲಸ....! ಏಕೆಂದು ನೀವು ನನ್ನನ್ನು ಹುಲುಬಬೇಡಿ.ಎಷ್ಟೋ ಮಂದಿ ಹೀಗೆ ಮದುವೆಯಾಗಿ ಇಂದಿಗೂ ಸಮಸ್ಯೆಯ ಸುಳಿಯಲ್ಲೇ ಬದುಕುತ್ತಿದ್ದಾರೆ. ಕೆಲವರ ದಾಂಪತ್ಯವೂ ಮುರಿದು ಬಿದ್ದಿದೆ. ಅವರೆಲ್ಲರ ಜಾತಕ ಸರಿಯಿರಲಿಲ್ಲವೇ?. ಇನ್ನೂ ಕೆಲವರು ಜಾತಕವನ್ನು ಟ್ರಂಪ್ ಕಾರ್ಡ್ ತರ ಬಳಸುವವರು ಇದ್ದಾರೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಮದುವೆಯಾಗುವ ಯುವ ಜೋಡಿಗಳ ಕನಸುಗಳು, ಮನಸ್ಸುಗಳು , ದಾರಿಗಳು, ಒಂದೇ ಆಗಿದ್ದರೆ ಅವರಿಗೆ ಹೊದಿಕೆಯಾದರೆ ಅದು ಪರಿಪೂರ್ಣವಾಗಬಹುದೇನೋ..?. ಮದುವೆಗಳು ಶಾಶ್ವತವಾಗಿ ಗಟ್ಟಿಯಾಗಿಬಿಡಬಹುದೇನೋ...?. ಹೀಗೆ ಅರ್ಥ ಮಾಡಿಕೊಳ್ಳದ ಮದುವೆಗಳು ವರ್ಷದೊಳಗೆ ಕಾರಣವಿಲ್ಲದೆ ಮುರಿದು ಬಿಡಬಹುದೇನೋ...!? ಅಥವಾ ಪ್ರತಿದಿನ ಗುದ್ದಾಟ-ಕೀರಲು ಧ್ವನಿಗಳು ಮನೆ ತುಂಬೆಲ್ಲಾ ಕೇಳಬಹುದೇನೋ..!?

ಇದೆಲ್ಲವೂ ನನ್ನ ಕಲ್ಪನೆ .... ಯೋಚನೆ..... ! ನನ್ನ "ಈ" ಬದುಕು ಹೇಗಾಗುತ್ತೋ ಗೊತ್ತಿಲ್ಲ. ಅದಕ್ಕೇ ಮೊದಲು ನಾನು ಅಂದಿದ್ದು ಇದು ಕಲ್ಪನಾ ಲೋಕ... ಮುಂದೆ ಈ ಕಲ್ಪನೆಗಳು ....ಕನಸುಗಳಾಗಿ.... ನನಸಾಗಲು ದಿನಗಳಿವೆಯಲ್ಲಾ.....!!!

ಕಾಮೆಂಟ್‌ಗಳಿಲ್ಲ: