28 ಜನವರಿ 2009

ಬದುಕಿನ ದಾಳಿಗಳು...



ನಿನ್ನೆ ಮಿತ್ರನೊಂದಿಗೆ ಮಾತನಾಡುತ್ತಿದ್ದಾಗ ಆತ ಹೇಳಿದ ವಿಚಾರವೊಂದು ನನ್ನ ತಲೆಯಲ್ಲಿ ಸುತ್ತಾಡುತ್ತಲೇ ಇತ್ತು. ಒಂದರ್ಥದಲ್ಲಿ ಆ ವಿಷಯ ಗಂಭಿರವಲ್ಲ, ಆದರೆ ಇಂದಿನ ವಿದ್ಯಮಾನಕ್ಕೆ ಅದನ್ನು ತಾಳೆ ಮಾಡಿದರೆ..... ಗಂಭೀರ ಎನಿಸುತ್ತದೆ. ಅಷ್ಟಕ್ಕೂ ಅದೊಂದು ಆತ್ಯಹತ್ಯೆ ಪ್ರಕರಣ... ದೇಶದಲ್ಲಿ ದಿನವೊಂದಕ್ಕೆ ನಡೆಯುವ 100 ಆತ್ಯಹತ್ಯೆ ಪ್ರಕರಣಗಳಲ್ಲಿ ಇದು 101 ನೆಯದ್ದು ಅಷ್ಟೇ. ಆದರೆ ಈ 101 ನೇ ಪ್ರಕರಣದ ಒಳಗೆ ಇಣುಕಿದಾಗ ... , ಆತ ವಿದೇಶದಲ್ಲಿ ಉದ್ಯೋಗದಲ್ಲಿದ್ದ... ಆ ಕಂಪನಿಯವರು ಇಂದಿನ ಆರ್ಥಿಕ ಮುಗ್ಗಟ್ಟಿನ ಕಾರಣ ಕೆಲಸದಿಂದ ವಜಾಗೊಳಿಸಿದರು. ಹೀಗಾಗಿ ಭಾರತದ ವಿಮಾನವೇರಿ ಕೇರಳದ ತನ್ನೂರಿಗೆ ಬಂದಿಳಿದು ವಾರವಾಗಿತ್ತು. ಇಲ್ಲೇನಾದರೂ ಇನ್ನೊಂದು ಉದ್ಯೋಗ ಅಂತ ಅರಸುತ್ತಿರಬೇಕಾದರೆ ಆತನಿಗೆ ಇಲ್ಲಿನ ಕೆಲ ವಿದ್ಯಮಾನಗಳನ್ನು ಗಮನಿಸಿ ಇಲ್ಲಿ ಉದ್ಯೋಗ ಲಭ್ಯವಾಗಬಹುದೇ ಅಂತ ಭಯ ಕಾಡಿತ್ತು.. ಹಾಗೆಂದು ಆತ ಆಪ್ತರಲ್ಲಿ ಹೇಳಿದ್ದನಂತೆ. ಅದಾಗಿ 2 ದಿನ ಆತ ನಾಪತ್ತೆ. ಮತ್ತೆ ಪತ್ತೆಯಾಗಿದ್ದೇ ಆತನ ಶವ.. ಆತನಿಗಿನ್ನೂ ವರ್ಷ 28...!!.

ಪೀಠಿಕೆ ಯಾಕೆ ಹೇಳಬೇಕೆಂದರೆ , ಇಂದು ನಡೆಯುತ್ತಿರುವ ವಿದ್ಯಮಾನಗಳು ಯುವಕರಿಗೆ ಯಾವ ದಾರಿಯನ್ನು,ದಿಕ್ಕನ್ನು ತೋರಿಸುತ್ತದೆ ಎನ್ನುವುದು ಗಮನಿಸಬೇಕು.ಮೊನ್ನೆಯ ಸುದ್ದಿಯನ್ನೇ ಗಮನಿಸಿ.. ಅದರ ಸುತ್ತ ಒಂದು ಗಿರಕಿ ಹೊಡೆದರೆ ಅರಿವಾಗುತ್ತದೆ. ಏನೋ ಬಂದರು ನಗರಿಯಲ್ಲಿ ಕೆಲ ಪುಂಡಾಟಿಕೆಯ ಹುಡುಗರಿಂದ ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ದಾಳಿ ನಡೆಯಿತು. ನಿಜ.ಅಲ್ಲಿ ತಪ್ಪಾಗಿದೆ ಅಂತ ಒಪ್ಪಿಕೊಳ್ಳೋಣ. ತಪ್ಪಾಗಿದೆ ಅಂದರೆ ಎಲ್ಲರದ್ದೂ.... ಮದ್ಯ ಸೇವಿಸಿ ಕುಣಿದು ಕುಪ್ಪಳಿಸುವ ಸಂಸ್ಕೃತಿಯಿಂದ ಹಿಡಿದು, ಕಾನೂನು ಕೈಗೆತ್ತಿಕೊಂಡವರವರೆಗೆ ಹಾಗೂ ಮಹಿಳೆಯರಿಗೆ ದೌರ್ಜನ್ಯ ಮಾಡಿದ್ದರೆ ಅದೂ ಸೇರಿಸಿ ಎಲ್ಲವೂ ತಪ್ಪಾಗಿದೆ. ಮಾಧ್ಯಮಗಳ ಪಾಲೂ ಇದೆ ಅಂತಲೂ ಮಾತಿದೆ. ಇರಲಿ. ಎಲ್ಲವೂ ತಪ್ಪಾಗಿದೆ ಅಂತ ಅರಿವಾಗಿ ಮರುದಿನ ಮಧ್ಯಾಹ್ನದವರೆಗೆ ಸದ್ದಿಲ್ಲದ ಆ ಸುದ್ದಿ ಇದ್ದಕ್ಕಿದ್ದಂತೆ ಮತ್ತೆ ಜೀವ ತಳೆಯಿತು.ಮತ್ತೆ ಆದ ತಪ್ಪು ಮರುಕಳಿಸಿತು.ಮಂಗಳೂರು ತಾಲಿಬಾನ್ ... ಆಗಿ ಬಿಟ್ಟಿತು. ........ ಅವರಿಗೆಲ್ಲಾ 5 ಸ್ಟಾರ್ ಹೋಟೇಲ್‌ಗಳೂ ಸಿಕ್ಕವು... ಸದ್ದಿಲ್ಲದೆ ದೇಶದ ಸುದ್ದಿಯಾಯಿತು. ಆಗ ಮತ್ತೆ ಮಾತನಾಡಲು ಆರಂಭಿಸಿದರು. ವಿಷಯವೇ ಗೊತ್ತಿಲ್ಲದ ಅನೆಕ ಯುವಕ ಮಿತ್ರರು ಫೋನ್ ಮಾಡಿ ವಿಚಾರ ಕೇಳಿದರು.... ಕೆಲವರಂತೂ ಹೊತ್ತಿ ಉರಿಯುತ್ತಿದೆಯೇ ಅಂತ ದೂರದೂರಿನಿಂದ ಕೇಳಿದರು... ಅವರಿಗೆ ಉತ್ತರ ಏನು ಹೇಳಲಿ ಅಂತ ತಡಕಾಡಬೇಕಾಯಿತು. ವಾಸ್ತವ ವಿವರಿಸಬೇಕಾಯಿತು. ಈಗಷ್ಟೇ ಬೆಳೆಯುತ್ತಿರುವ ಈ ನಗರಕ್ಕೆ ಇದೆಲ್ಲಾ ಬೇಕಿತ್ತಾ.. ಹುಡುಗರು ಇದೇ ನಗರಕ್ಕೆ ಉದ್ಯೋಗ ಅರಸಿ ಒಳಗೆ ಕಾಲಿಡುವ ವೇಳೆ ಇಂತಹ ಘಟನೆ ಭಯ ಹುಟ್ಟಿಸಿದ್ದಂತೂ ಸತ್ಯ.

ಆದರೆ ನನಗೆ ಅನ್ನಿಸಿದ್ದು ಅದಲ್ಲ.
ಇಂದು ನಡೆದ ದಾಳಿಯ ಬಗ್ಗೆ ರಾಜ್ಯ ಮಾತ್ರವಲ್ಲ ದೇಶದಲ್ಲಿ ಮಾತುಗಳು , ಪ್ರತಿಭಟನೆಗಳು ಕೇಳಿಬರುತ್ತಿವೆ... ನಿಮಗೆ ಹೊಡೆಯಲು ಅಧಿಕಾರ ನೀಡಿದವರು ಯಾರು..? ಎಂಬ ಬೋರ್ಡ್‌ನೊಂದಿಗೆ ಪ್ರತಿಭಟನೆ ಮಾಡಲಾಗುತ್ತದೆ. ಒಂದೆರಡು ವರ್ಷದ ಹಿಂದೆ ಇದೇ ಬಂದರು ನಗರಿಯಲ್ಲಿ ಅಕ್ಷತಾ ಎನ್ನುವ ಯುವತಿ ಕೊಲೆಯಾಗಿದ್ದಳು, ಸೌಮ್ಯ ಕೊಲೆಯಾಗಿದ್ದಳು, ಬಂಟ್ವಾಳದಲ್ಲಿ ಇನ್ನೊಬ್ಬಳು ಕೊಲೆಯಾಗಿದ್ದಳು, ಮುಸ್ಲಿಂ ಹೆಣ್ಣು ಮಗಳೊಬ್ಬಳು ಅಮಾನುಷವಾಗಿ ಬಲಿಯಾಗಿದ್ದಳು,ಉಡುಪಿಯಲ್ಲಿ ವಂಶಿ ಕೊಲೆಯಾಗಿದ್ದಳು ........... ಹೀಗೆ ಇಲ್ಲಿ ಹತ್ತಾರು ಅಮಾಯಕ ಹೆಣ್ಣು ಜೀವಗಳು ಬಲಿಯಾಗಿವೆ . ಅದು ಎಲ್ಲವೂ ಸಂಸ್ಕೃತಿಯ ಹೆಸರಿಗಾಗಿ ನಡೆದಿಲ್ಲ..... ಕಾಮದ ಹೆಸರಿನಲಿ ನಡೆದಿವೆ. ಆಗ ಯಾವುದೇ ಸಂಘಟನೆಗಳಾಗಲಿ , ಮಾದ್ಯಮಗಳು ಈ ಕಡೆ ಗಮನಹರಿಸಿರಲೇ [ಒಂದೆರಡನ್ನು ಹೊರತುಪಡಿಸಿ] ಇಲ್ಲ .. ತಾಲೀಬಾನೀಕರಣವಾಗಿದೆ ಎಂದು ಬೊಬ್ಬಿಡಲಿಲ್ಲ..... ಕೊಲೆ ಮಾಡಲು ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಲಿಲ್ಲ.. .ಇಂದಿಗೂ ಈ ಎಲ್ಲಾ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯೂ ಆಗಿಲ್ಲ.ರಾಜಕಾರಣಿಗಳಂತೂ ಹಾಗೆ... ಹೀಗೆ... ಅಂತ ಬೊಬ್ಬೆ ಹೊಡೆದಿದ್ದರು.. ಅಷ್ಟು ಮಾತ್ರಾ ಆಗಿತ್ತು. ಆದರೆ ಈಗ ಇದೊಂದು ಏನು...? ಅಂತ ಪ್ರಶ್ನಿಸಬೇಕಾಗುತ್ತದೆ. ಇದಕ್ಕೆ ಕಾರಣರು ಯಾರು..?.ಹಾಗಾದರೆ ಒಂದು ಜೀವಕ್ಕಿಂತ ಚಿಕ್ಕ ಹಲ್ಲೆ ದೊಡ್ದದಾಗಿ ಬಿಟ್ಟಿತಾ..?? ಆಗ ಕಾಣದ ದೌರ್ಜನ್ಯ ಈಗ ಎಲ್ಲಿಂದ ಬಂತು..?

ಇಂತಹ ಘಟನೆಗಳು , ತಾರತಮ್ಯಗಳು, ನಮ್ಮ ಹುಡುಗರಿಗೆ , ಇನ್ನೂ ಬೆಳೆಯಬೇಕಾಗಿರುವವರಿಗೆ [ನನ್ನನ್ನೂ ಸೇರಿಸಿ] ಯಾವ ಸಂದೇಶ ಸಿಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ.ಎಲ್ಲವೂ ರಾಜಕೀಯ ಮಯವೇ..? ಹಾಗಾದರೆ ಅದು ಎಂತಹ ರಾಜಕೀಯ ಮಾರಾಯ್ರೆ..??

ಇದು ನನ್ನ ವೈಯಕ್ತಿಕ ಭಾವನೆ... ಅದನ್ನು ಎಲ್ಲರೂ ಒಪ್ಪಬೇಕು ಎಂದಿಲ್ಲ. ಒಪ್ಪಬೇಕು ಎಂಬ ಕಾರಣಕ್ಕಾಗಿಯೂ ನಾನಿಲ್ಲ ದಾಖಲಿಸಿಟ್ಟಿಲ್ಲ.

ದೊಡ್ಡವರು ಅಂದ್ರೆ...



ಕಾಸರಗೋಡಿನ ಕುಂಬ್ಳೆ ನೆನಪಾದಾಗಲೆಲ್ಲಾ ಕ್ರಿಕೆಟ್ ನೆನಪಾಗುತ್ತದೆ , ಅನಿಲ್ ನೆನಪಾಗುತ್ತಾರೆ. ಆದರೆ ಆ ಅನಿಲ್ ಇಂದು ಮಾಜಿ. ಇಂತಹ ಕುಂಬ್ಳೆ ಮೊನ್ನೆ ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ವಿವಿದೆಡೆ ಪ್ರಯಾಣ ಬೆಳೆಸಿದ್ದರು.ಜೊತೆಗೆ ಅವ್ರ ಪತ್ನಿಯೂ ಇದ್ದರು. ಸಹಜವಾಗಿಯೇ ಅವ್ರ ಅಭಿಮಾನಿಗಳಿಗೆ ಖುಷಿಯೋ ಖುಷಿ.. ಅನಿಲ್ ಬಂದಿದ್ದಾರೆ ಅವರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳಬೇಕು, ಆಟೋಗ್ರಾಫ್ ಕೇಳಬೇಕು... ಹೀಗೆ ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ಅವರಾರಿಗೂ ಇದು ಕೈಗೂಡಲಿಲ್ಲ. ಕಾರಣ ಅದಾವುದಕ್ಕೂ ಅವರು ಸಮ್ಮತಿಸಲೇ ಇಲ್ಲ. ಫೋಟೋ ತೆಗಿತಾರೆ ನೋಡ್ರಿ ಅಂತ ಅವರ ಪತ್ನಿ ಅವರಿಗೆ ಆಗಾಗ ಹೇಳುತ್ತಿದ್ದರು. ಬೇಡ ಅಂದ್ರೂ ಅಭಿಮಾನಿಗಳು ಕೇಳಬೇಕೇ ಫೋಟೋ ತೆಗಿತಾನೇ ಇದ್ರು.

ಹೀಗೆ ಅಭಿಮಾನಿಗಳ ಕಾಟದ ನಡುವೆ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ತೆರಳಿದರು. ಮತ್ತೆ ಜನ ಹೇಳುತ್ತಿದ್ದದು ಹೇಳಲು ದೊಡ್ಡ ಜನ ಒಂದು ಫೋಟೋಕ್ಕೂ ಅವಕಾಶ ಕೊಟ್ಟಿಲ್ಲ...!!. ಅದಲ್ಲದೆ ಆತ ಈಗ ಮಾಜಿ .. ಆದ್ರೂ ಏನು ಗತ್ತು.. ಅಂದು ಸಚಿನ್ ಬಂದಿದ್ದಾಗಲೂ ಹೀಗೆ ಮಾಡಿಲ್ಲಪ್ಪ... ಇನ್ನೇನಿದ್ರೂ ಕುಂಬ್ಳೆ ಮಾಜಿಯಲ್ವಾ.. ಅವರ ಆಟ ನೋಡಲು ಇಲ್ಲ ಬಿಡಿ.. ಫೋಟೋ ಕೊಟ್ಟೀಲ್ಲಾಂದ್ರೆ ಅಷ್ಟೇ ಹೋಯ್ತು... ಅಂತ ಗೊಣಗುಟ್ಟಿದರು.

ಮಾಜಿಯಾದ್ರೆ ಇಷ್ಟೇನಾ ಬೆಲೆ..!! . ಹಾಗಾದ್ರೆ , ಅಷ್ಟು ಗೊತ್ತಿದ್ದ ಮೇಲೆ ಗತ್ತು ಯಾಕೆ ??..

ದೊಡ್ಡವರ ಸಣ್ಣತನ ಅಂದ್ರೆ ಇದೇನಾ..??

15 ಜನವರಿ 2009

ಇದು ಮನಸ್ವಗತ...




ಅದು ಮೂಡಣದಿ ನೇಸರನು ಕೆಂಪಗೆ ನೆತ್ತರನು ಚೆಲ್ಲುವ ಹೊತ್ತು,ಹಕ್ಕಿಗಳ ಚಿಲಿಪಿಲಿ ಹಾಡು ಕೇಳುವ ಹೊತ್ತು....

ಬೈಕ್ ಮುಂದೆ ಸಾಗುತ್ತಲಿತ್ತು.. .

. . ದಿಗಂತದಲ್ಲಿದ್ದ ಕೆಂಪನೆಯ ನೇಸರನು ನನ್ನನ್ನು ಅಣಕಿಸುವಂತೆ ಓಡೋಡಿ ಬರುತ್ತಿದ್ದಾನಾ..?. ಅನ್ನುವ ಭಾವನೆ ಮನದಲ್ಲಿ ಏಳಲಾರಂಭಿಸಿತು. ಹೌದು, ಬಾಲ್ಯದಲ್ಲಿ ಬಸ್ಸಲ್ಲಿ ಕಿಟಕಿಯ ಬಳಿ ಕುಳಿತು ಅನಂತದಲ್ಲಿ ದೃಷ್ಠಿಯನ್ನು ನೆಟ್ಟು ಅಮ್ಮನಲ್ಲಿ ಕೇಳಿದ್ದು ನೆನಪಿದೆ... ಸೂರ್ಯ ನಮ್ಮೊಂದಿಗೇ ಬರುತ್ತಾನಾ..?. ಅಗೋ ನೋಡು ಎಷ್ಟು ವೇಗವಾಗಿ ಆತ ಇಲ್ಲಿಗೂ ಬಂದ ... ಅಲ್ಲ ... ಅಲ್ಲ ಆತ ನಿಂತಿದ್ದಾನೆ.... ಇಲ್ಲ ಆತ ಓಡುತ್ತಿದ್ದಾನೆ.. ಇಂತಹ ದ್ವಂದ್ವಗಳು ಮನದಲ್ಲಿ ಎದ್ದಾಗ ಅಮ್ಮನಲ್ಲಿ ಕೇಳಿದ್ದು ,ಸೂರ್ಯ ಓಡುತ್ತಾನಾ...? ನಮ್ಮೊಂದಿಗೆ ಬರುತ್ತಲೇ ಇದ್ದಾನಾ...?. ಈ ಎಲ್ಲಾ ಪ್ರಶ್ನೆಗೆ ಉತ್ತರ ಅಂದೇ ಅಮ್ಮ ನೀಡಿದ್ದರು.

ಆದರೂ ಯಾಕೋ ಈಗ ಮತ್ತೆ ಆ ದಿನಗಳು ನೆನಪಾಗಿ ಬಿಟ್ಟಿತ್ತು...

ಮೊನ್ನೆ ಬೆಳಗ್ಗೆ ಯಾವುದೇ ಯೋಚನೆಯಿಲ್ಲದೆ, ರಸ್ತೆಯಿಡೀ ನನ್ನದೇ ಎಂಬ ಖುಷಿಯಲ್ಲಿ ಚಳಿಯನ್ನು ತೂರಿಕೊಂಡು ಮುಂದೆ ಸಾಗುತ್ತಿರುವಾಗ ಮೂಡಣದಿ ನೇಸರನು ಬಾನಲ್ಲಿ ತೇಲಾಡುತ್ತಲಿದ್ದ...ಕೆಂಪನೆಯ ಚಿತ್ತಾರವನ್ನು ಬಿಡಿಸಿದ್ದ... ಆತನ ಬೆಳಕು ಪ್ರಪಂಚದ ಮೇಲೆ ಬೀಳಲು ಆರಂಭಿಸಿತ್ತು. ಆತನಿಗೆ ಅದರಲ್ಲಿ ಯಾವುದೇ ತುರ್ತು ಇದ್ದಂತೆ ಕಂಡುಬಂದಿರಲಿಲ್ಲ.. ಮಾತ್ರವಲ್ಲ ಹಾಗೆ ಬೆಳಕು ನೀಡಲು ಏನೂ ಸ್ವಾರ್ಥವೂ ಕಾಣಲಿಲ್ಲ.

ಆಗೊಮ್ಮೆ ಈಗೊಮ್ಮೆ ವಾಹನಗಳು ರಸ್ತೆಯಲ್ಲಿ ವೇಗವಾಗಿ ಬರುತ್ತಿತ್ತು. ರಸ್ತೆ ನನ್ನದು ಮಾತ್ರವಲ್ಲ ಇತರರಿಗೂ ಇದೆ ಎನ್ನುವ ಭಾವನೆ ನನ್ನಲ್ಲಿ ಬೆಳೆಯಿತು.

ಮುಂದೆ ಸಾಗಿತು..

ಮಬ್ಬು ಸರಿಯಿತು,ಸೂರ್ಯ ಮೇಲೇರಿದ ಚೆನ್ನಾದ ಬೆಳಕು ನೀಡಿದ.. ಎಲ್ಲರಿಗೂ ಸರಿಯಾದ ಬೆಳಕನ್ನೇ ನೀಡಿದ , ಚಳಿಯನ್ನು ಓಡಿಸಿದ.

ಬೈಕ್ ಹಿಂದಿನಷ್ಟು ವೇಗವಾಗಿ ಸಾಗುತ್ತಿರಲಿಲ್ಲ.. ಆಗೊಂದು .. ಈಗೋಂದು ಬರುತ್ತಿದ್ದ ವಾಹನಗಳ ಸಂಖ್ಯೆ ಹೆಚ್ಚಾಯಿತು. ಮನಸ್ಸು ಇನ್ನಷ್ಟು ಜಾಗೃತವಾಯಿತು. ನನ್ನ ಸುರಕ್ಷತೆಯ ಬಗ್ಗೆ ಹೆಚ್ಚು ಯೋಚನೆ ಬಂತು ಅಗಲವಾಗಿದ್ದ ರಸ್ತೆ ಕಿರಿದಾಯಿತು.ಆ ಕಿರಿದಾದ ರಸ್ತೆಯಿಡೀ ನನಗೇ ಬೇಕೆನಿಸಿತು. ಆದರೆ ಹಾಗೆ ಆಗಲು ಸಾದ್ಯವಿರಲಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಆಗ ನನಗೆ ಬ0ದಿರಲಿಲ್ಲ.

ಸೂರ್ಯ ನೆತ್ತಿಯ ಮೇಲೆ ಬಂದಿದ್ದ..

ಆತ ಸಾಗಲೂ ಎಲ್ಲರಿಗೂ ಒಂದೇ ರೀತಿಯ ಬೆಳಕನ್ನು ನೀಡುತ್ತಲೇ ಸಾಗುತ್ತಿದ್ದ... ಸಾಗುತ್ತಾ ಗುರಿಯತ್ತ ಹೆಜ್ಜೆ ಇಡುತ್ತಿದ್ದ.. ಆತನ ಗುರಿ ಸ್ಫಷ್ಟವಾಗಿತ್ತು.

ಆದರೆ ನಾನು ಮಾತ್ರಾ ಇನ್ನೂ ಅದೇ ಕಿರುದಾರಿಯಲ್ಲಿದ್ದೆ.. ಹೆದ್ದಾರಿ ಸಿಕ್ಕಿರಲಿಲ್ಲ. ಅದುವರೆಗೂ ನಾನು ಚಿಂತಿಸುತ್ತಿದ್ದುದು ನನ್ನ ದಾರಿಯ ಬಗ್ಗೆ ಮಾತ್ರಾ ಗುರಿಯ ಬಗ್ಗೆ ಅಲ್ಲ ಎಂಬುದು ಅರಿವಾಯಿತು. ಮುಗ್ಗರಿಸಿ ಸಾಗಿದೆ.. ಅಲ್ಲಿ ದೊಡ್ಡ ಪೇಟೆಯೇ ಸಿಕ್ಕಿತು... ನನ್ನಂತೆ ಅಲ್ಲಿ ಎಲ್ಲರೂ ಕಿರಿದಾದ ರಸ್ತೆಯಲ್ಲಿ ಸಿಲಿಕಿಕೊಂಡಿದ್ದರು ,ಮುಂದೆ ಸಾಗಲು ದಾರಿ ಇರಲಿಲ್ಲ. .. ನಾನೂ ಅದರಿಂದ ಹೊರಬರಲು ಒದ್ದಾಡಿದೆ... ಪ್ರಯತ್ನಿಸಿದೆ... ಆದರೆ ಅದಾಗಲೇ ನನ್ನ ಹಿಂದೆ-ಮುಂದೆ ಹಲವಾರು ಅಡ್ಡಗಳು ಬಂದು ನಿಂತಿದ್ದವು, ಅವುಗಳು ನನಗೆ ಅಡ್ಡವಾದವು...ಕೊನೆಗೆ ಒಂದೆರಡು ಅಡ್ಡಗಳ ದಾಟಿ ಕೊಂಚ ಮುಂದೆ ಬಂದಾಗ ಅಲ್ಲಿ "ಏಡಿ"ಗಳು ಇದ್ದವು.ಅವು ಅಪಾಯಕಾರಿ ಅಂತ ಅರಿವಿದೆ, ಹಾಗಾಗಿ ನನ್ನ ಬೈಕ್ ಪಂಕ್ಚರ್ ಆಗದಂತೆ ಓಡಿಸಬೇಕಾಗಿದೆ. ಈಗ ದೂರದ ಗುರಿ ಕಾಣುತ್ತಿದೆ ಆದರೂ ಆ ದಾರಿಯಲ್ಲೂ ಚಳಿ ಇದೆ ಅಲ್ಲಿ ಮುಸುಕು ,ಮಬ್ಬು ಕಾಣುತ್ತಿದೆ ಅದೆಲ್ಲವನ್ನೂ ಸರಿಸಲು ಮತ್ತೆ ನೇಸರ ಬರುವನೇ..?? ಅಂತ ಯೋಚಿಸುತ್ತಿರುವಷ್ಟರಲ್ಲೇ ಎಚ್ಚರವಾಯಿತು.

ಹೌದು ಇಂದು ನಮ್ಮ ಸುತ್ತಲೂ ನಡೆಯುತ್ತಿರುವುದು ಅದೇ ಅಲ್ವಾ, ಸ್ವಾರ್ಥದ ಅಡ್ಡಗಳು....,ಕಾಲೆಳೆಯುವ ಏಡಿಗಳು , ಎಲ್ಲಿ ಲಾಭವಿದೆ ಎನ್ನುವ ಮನಸ್ಥಿತಿ..., ಇನ್ನೊಬ್ಬನ ಉನ್ನತಿಯ ಸಹಿಸದ ಮಂದಿ..., ಅದಕ್ಕೆ ನನಗನ್ನಿಸಿದ್ದು ,ಸೂರ್ಯ ಒಂದು ಕ್ಷಣ ಹಾಗೇನಾದರೂ ಯೋಚಿಸಿದ್ದರೆ , ಆತನಿಗೆ ಬೆಳಕು ನೀಡಿದರೆ ಏನು ಲಾಭವಿದೆ...?????.

ಆದರೂ ಆತ ಬೆಳಕು ನೀಡುತ್ತಾನೆ ಜಗವ ಬೆಳಗಲು...

13 ಜನವರಿ 2009

ಒಂದು ವರ್ಷದ ಪಯಣ..




ಜನವರಿ 14. . .

ಇಂದಿಗೆ ನಾನು ಬ್ಲಾಗ್ ಲೋಕದಲ್ಲಿ ವಿಹರಿಸುತ್ತಿರುವುದು ಒಂದು ವರ್ಷವಾಗುತ್ತದೆ.

ಈ ಒಂದು ವರ್ಷದಲ್ಲಿ ನಾನು ಬ್ಲಾಗ್ ಪಯಣದಲ್ಲಿ ಅನೇಕ ಸಂಗತಿಗಳನ್ನು ಪಡೆದಿದ್ದೇನೆ.ನನ್ನ ಮನಸ್ಸಿನ ಒಂದಿಷ್ಟು ವಿಚಾರಗಳನ್ನು ಇಲ್ಲಿ ದಾಖಲಿಸಿರಿಸಿದ್ದೇನೆ.ಮುಂದೆಂದಾದರೂ ಇದು ಉಪಯೋಗಕ್ಕೆ ಬರಬಹುದು ಅಂತ ನಂಬಿದ್ದೇನೆ. ನನಗೆ ಈ ಲೋಕದಲಿ ವಿಹರಿಸುವಾಗ ಬೆಂಬಲಿಸಿದವರು , ಬ್ಲಾಗ್ ಓದಿ "ಏ ಅದು ಹೀಗಲ್ಲಾ ಮಹೇಶ್ , "ಅದು ತಪ್ಪು..", ನಿನ್ನ ಬರಹ ಚೆನ್ನಾಗಿತ್ತು ಅಂತಲೂ ಅನೇಕ ನನ್ನ ಮಿತ್ರರು, ಹಿತೈಷಿಗಳು ಹೇಳಿದ್ದಾರೆ.ಅವರ ಈ ಎಲ್ಲಾ ಮಾತನ್ನು ನನ್ನ ಬದುಕಿನಲ್ಲಿ ಅಳವಡಿಸಲು ಪ್ರಯತ್ನಿಸಿದ್ದೇನೆ.ಒಂದಿಬ್ಬರ ಜೊತೆಯಂತೂ ನಾನು ದೂರವಾಣಿಯಲ್ಲಿ ಮಾತನಾಡಿದಷ್ಟೂ ಬಾರಿಯೂ ಬ್ಲಾಗ್ ಬಗ್ಗೆ ಪ್ರಸ್ತಾಪ ಮಾಡಿಯೇ ಮಾಡುತ್ತಿದ್ದೆ.ಅವರು ನನಗೆ ಅನೇಕ ಸಲಹೆಗಳನ್ನು ಮಾಡಿದ್ದಾರ್

ನನಗೆ ಒಂದು ವರ್ಷದಿಂದ ಅನೇಕ ಹೊಸ ವಿಚಾರಗಳು ಸಿಕ್ಕಿವೆ.

ಆದರೆ ಸದಾ ಈ ಲೋಕವನ್ನು ಗಮನಿಸುತ್ತಿದ್ದ ನನಗೆ ಇತ್ತೀಚೆಗಿನ ಕೆಲ ಸಮಯಗಳಿಂದ ಈ ಲೋಕದಲ್ಲಿ ವಿಹರಿಸುವಾಗ ಅಲ್ಲಿ ಕಾಣಿಸುತ್ತಿರುವುದು ಕೆಸರೆರಚಾಟಗಳು , ದೂಷಣೆಗಳು, ಅನಾಮಧೇಯ ಕಮೆಂಟ್ ಗಳು... . ಇವುಗಳ ನಡುವೆಯೇ ಗುಂಪುಗಳು ಹುಟ್ಟಿಕೊಂಡಿವೆ. ಕಾಮೆಂಟ್ ಗಳು ತುಂಬಿಸಿಕೊಳ್ಳಲೇ ಕೆಲವೊಂದು ಬ್ಲಾಗ್ ಗಳು ತೆರೆದುಕೊಂಡಿವೆ ...

ಇವೆಲ್ಲದರ ನಡುವೆ ಈಗಲೂ ಕೆಲ ಬ್ಲಾಗ್ ಗಳಲ್ಲಿ ಉತ್ತಮ ಚರ್ಚೆ ನಡೆಯುತ್ತದೆ, ಮಾಹಿತಿ ಲಭ್ಯವಿದೆ. ಅದೇ ನೆಮ್ಮದಿ.. ಹಾಗಾಗಿ ಇನ್ನೊಂದಿಷ್ಟು ದಿನ ಈ ಲೋಕದಲ್ಲಿ ಕಾಣಿಸಿಕೊಳ್ಳುವೆ. . ..

12 ಜನವರಿ 2009

ಧೋನಿಯ ಹಿಂದೆ. . .

ರಾತ್ರಿ ಗಂಟೆ 9 ಕಳೆದಿತ್ತು.ಮಾಹಿತಿಯೊಂದು ಬಂತು..

ನಾಳೆ ಸುಬ್ರಹ್ಮಣ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಬರ್ತಾರಂತೆ ... ಏನಾದರೂ ಗೊತ್ತಾ?.

ನನಗಂತೂ ಆ ಬಗ್ಗೆ ಗೊತ್ತಿರಲಿಲ್ಲ.

ವಿಚಾರಿಸಿ ಹೇಳುವೆ ಅಂದವನೆ ಕೆಲವು ಮಿತ್ರರಿಗೆ ವಿಚಾರಿಸಿದೆ, ಪೊಲೀಸರಲ್ಲಿ ಕೇಳಿದೆ, ನನ್ನೊಂದಿಗೆ ಇದ್ದ ಇನ್ನೊಬ್ಬ ಮಿತ್ರನೂ ಆತನ ಪರಿಚಿತರಲ್ಲಿ ದೂರವಾಣಿಯಲ್ಲಿ ವಿಚಾರಿಸಿದಾಗ ಹೌದು, ನಾಳೆ ಕುಕ್ಕೆ ಧೋನಿ, ಉತ್ತಪ್ಪ ಬರುತ್ತಾರೆ ಅಂದ. ನಮಗಂತೂ ಖುಷಿಯಾಯಿತು.ನಾಳೆ ಒಂದು ಒಳ್ಳೆಯ ಸುದ್ದಿ ಮಾಡಬಹುದು.ಹೇಗೆಲ್ಲಾ ಚಿತ್ರೀಕರಣ ಮಾಡಬಹುದು..?. ವಿವಾದಗಳಿಗೆ ಆಸ್ಪದ ಕೊಡದೆ ಹೀರೋಗಳ ಖಾಸಗೀ ಬದುಕಿಗೆ ಅಡ್ಡಿಯಾಗದೆ ಒಂದು ಉತ್ತಮ ಸುದ್ದಿ ನಮ್ಮದಾಗಬೇಕು ಎಂದು ರಾತ್ರಿಯೇ ಬೇರೆ ಕಾರ್ಯಕ್ರಮದಿಂದ ಬಂದು ನಮ್ಮ ಪ್ರೆಸ್ ಕ್ಲಬ್ ನಲ್ಲಿ ಮಲಗಿ, ಬೆಳಗ್ಗೆ ಬೇಗನೆ ಎದ್ದು ನನ್ನ ಮನೆಗೆ ಹೋಗಿ, ಕುಕ್ಕೆ ಗೆ ಹೋಗಿ ಕಾದು ಕುಳಿತದ್ದೇ ಕುಳಿತದ್ದು.... ಈ ನಡುವೆ ಆಗಾಗ ಅಲ್ಲಿಗೆ .. ಇಲ್ಲಿಗೆ... ಫೋನು... ಎಲ್ಲಿದ್ದಾರೆ.... ಹೊರಟರಾ... ಒಂದೆಡೆ ಪ್ರಶ್ನೆಯಾದರೆ ಇನ್ನೊಂದೆಡೆ ಪೊಲೀಸರ ಜೊತೆ ವಿಚಾರಣೆ , ದೇವಸ್ಥಾನದಲ್ಲಿ ವಿಚಾರಣೆ ಎಲ್ಲವೂ ನಡೆಯಿತು.ಯಾರಲ್ಲೂ ಖಚಿತವಾದ ಮಾಹಿತಿ ಇಲ್ಲ.ಬರುತ್ತೇನೆಂದು ಹೇಳಿದ್ದಾರ್‍ಎ ಎಂಬುದನ್ನು ಬಿಟ್ಟು. ಅಷ್ಟಾಗುವ ಹೊತ್ತಿಗೆ ಮಧ್ಯಾಹ್ನ ಆಗಿತ್ತು. ನಂತರ ನಮ್ಮ ತಾಳ್ಮೆಯ ಕಟ್ಟೆ ಒಡೆಯುವ ಹೊತ್ತು ಬರುತ್ತಿದ್ದಂತೆಯೇ ನೇರ್‍ಅವಾಗಿ ಉತ್ತಪ್ಪ ಮನೆಗೆ ದೂರವಾಣಿ ಮೂಲಕ ಮಾತನಾಡಿದಾಗ ವಿಚಾರ ತಿಳಿಯಿತು. ಕುಕ್ಕೆ ಬರುವ ಪ್ರೋಗ್ರಾಂ ಇದ್ದದ್ದು ನಿಜ.ಆದರೆ ಕಾರಣಾಂತರಗಳಿಂದ ಅದನ್ನು ರದ್ದು ಮಾಡಿದ್ದೇವೆ ಮುಂದಿನ ದಿನದಲ್ಲಿ ಬರುತ್ತೇವೆ ಅಂತ ಅಂದು ಬಿಟ್ಟರು. ನ್

ಸತ್ಯ ತಿಳಿಯಿತು.. ಹೊರಡಲು ಅನುವಾದೆವು. ಆದರೂ ನನಗೊಂದು ಅನುಮಾನ ಎಲ್ಲಾದರು ಬಂದರೆ..??. ಕೊನೆಗೂ ಅವರು ಬರಲಿಲ್ಲ. ಕಾದದ್ದೇ ಕಾದದ್ದು.. ಧೋನಿ ಬರುವನೆಂದು....

ಈ ನಡುವೆ ಕುಕ್ಕೆಯಲ್ಲಿ ಎಷ್ಟು ಪ್ರಚಾರವಾಗಿತ್ತೆಂದರೆ ಧೋನಿ ಬರುತ್ತಾನೆ ಎಂಬ ಮೊಬೈಲ್ ಸಂದೇಶ ಎಲ್ಲೆಡೆ ಹರಡಿತ್ತು. ಅಕಸ್ಮಾತ್ ಆತ ಬಂದಿದ್ದರೆ ಜನ ಜಾತ್ರೆಯೇ ಸೇರುತ್ತಿತ್ತು.ಅದಲ್ಲದೆ ಅಂದು ಕುಕ್ಕೆ ಪೊಲೀಸ್ ಠಾಣೆಯಲ್ಲಿದ್ದು ೩ ಜನ ಪೊಲೀಸರು..!!!

ಒಟ್ಟಿನಲ್ಲಿ ಧೋನಿಗಾಗಿ ಕಾದ ನಾವು ಪೆಚ್ಚು ಮುಖದಲ್ಲಿ ಹಿಂತಿರುಗಿದೆವು... ಆಶಾ ಗೋಪುರವು ಕುಸಿದಿತ್ತು....

09 ಜನವರಿ 2009

ಅಯ್ಯೋ. . ಏನೊಂದು ಗಲಾಟೆ...

ಅಯ್ಯೋ. . ಏನೊಂದು ಗಲಾಟೆ. . ಏನೊಂದು ಚರ್ಚೆ...!!!

ಹೌದು ಇದೆಲ್ಲಾ ನಡೆದದ್ದು ಇಂಧನಕ್ಕಾಗಿ. . .!!!.

ಕೇವಲ ಒಂದು ದಿನ ಮಾತ್ರಾ ಇಂಧನದ ಕೊರತೆ ಕಂಡುಬಂದಿತ್ತು. ಅದಾಗಲೇ ಎಲ್ಲೆಡೆ ಹಾಹಾಕಾರ!!. ಇದು ನಮ್ಮಲ್ಲಿ ಮಾತ್ರವಲ್ಲ ಬಹುತೇಕ ಕಡೆಗಳಲ್ಲಿ ಇದೇ ರಗಳೆಯಿತ್ತು. ಒಂದು ಲೀಟರ್ ಡೀಸಲ್, ಪೆಟ್ರೋಲ್ ಗಾಗಿ ಪರಿಪರಿಯಾಗಿ ಬೇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗೆ ಇಂಧನ ಕೊರತೆಯಾದಾಗ ಅದರ ಕಾರಣಗಳನ್ನು ಹುಡುಕಿ ಸರಕಾರ ಸ್ಪಂದಿಸಬೇಕು ಅಂತ ನಾವೆಲ್ಲಾ ಬೊಬ್ಬಿಡುವುದು ಸಹಜವೇ. ನಮ್ಮ ಆಕ್ರೋಶವನ್ನು ಹೇಗಾದರೂ ಮಾಡಿ ವ್ಯಕ್ತ ಪಡಿಸುತ್ತೇವೆ.

ಇನ್ನೊಂದು ವಿಷಯ ಹೀಗೆ ಇಂಧನದ ಕೊರತೆಯಾದಾಗ ಅನೇಕರು ಕಾಡುವುದು ಇನ್ನೊಬ್ಬರನ್ನು , ಕೊನೆಗೆ ಅವರಿಗೂ ಇಲ್ಲ ಇವರಿಗೂ ಇಲ್ಲ.
ಅದು ಬಿಡಿ ನಾನೂ ಇಂದೊಂದು ಕಾರ್ಯಕ್ರಮವನ್ನು ರದ್ದು ಮಾಡಬೇಕಾಯಿತು.ಅದಕ್ಕೆ ಕಾರಣವಾದದ್ದು ಪೆಟ್ರೋಲ್. ನನ್ನ ಬೈಕ್ ನಲ್ಲೂ ಇನ್ನೊ೦ದು ವಾಹನದಲ್ಲೂ ಪೆಟ್ರೋಲ್ ಬರಿದಾಗುವ ಸನಿಹದಲ್ಲಿತ್ತು. ಹಾಗಾಗಿ ಅಷ್ಟೊಂದು ಅನಿವಾರ್ಯವಲ್ಲದ ಕಾರ್ಯಕ್ರಮವನ್ನು ರದ್ದು ಮಾಡಬೇಕಾಯಿತು.ಇದು ನನ್ನದೊಬ್ಬನದೇ ಅಲ್ಲ ಅನೇಕರ ಪಾಡು ಹೀಗೆಯೇ ಇತ್ತು.

ನನಗನ್ನಿಸಿದ್ದು ಅದಲ್ಲ.

ಇಂದು ಇಂಧನ ಅಷ್ಟು ಅನಿವಾರ್ಯವಾಗಿ ಬಿಟ್ಟಿದೆ. ಒಂದು ವೇಳೆ ಇಡೀ ದೇಶದಲ್ಲಿ ಮುಂದೊಂದು ದಿನ ಇಂಧನವೆ ಇಲ್ಲ ಎಂದಾದರೇ ಜನ ಬದುಕುವುದು ಹೇಗೆ?. ಈಗಲೇ ಇಂಧನದ ಕೊರತೆ ದೇಶದಲ್ಲಿ ಕಾಡುತ್ತಿದೆ. ಸ್ವಂತ ಇಂಧನ ನಿಕ್ಷೇಪಗಳು ಹೆಚ್ಚೇನು ಇಲ್ಲ.ವಿದೇಶಗಳಿಂದ ಆಮದಾಗಬೇಕು. ಒಂದು ವೇಳೆ ಅದು ನಿಂತರೆ ಪರ್ಯಾಯವೇನು?. ಬೆಂಗಳೂರಿನಂತಹ , ಮಂಗಳೂರಿನಂತಹ ನಗರಗಳು ಚಲಿಸುವುದೇ ಈ ಇಂಧನದಿಂದ.ಒಂದು ವೇಳೆ ಅದೇ ಇಲ್ಲವಾದರೆ ಬದುಕೂ ಇಲ್ಲವಾಗುವುದರಲ್ಲಿ ಸಂದೇಹವೇ ಇಲ್ಲ. ಮನೆಯಿಂದ ಕಾಲಿಡುವುದೇ ಕಾರಿನೊಳಗೆ ಆಗ ಏನು ಗತಿ..? ಇನ್ನೂ ಸ್ವಲ್ಪ ಹಿಂದಕ್ಕೆ ಹೋದರೆ ನನ್ನ ನೆನಪು ಆಗ ನೋಡಿದರೆ ಪೆಟ್ರೋಲ್ ಗೆ 8 ರೂ ಇತ್ತು. ಡೀಸಲ್ ಗೆ 3 ರೂ ಇತ್ತು. ಆದರೆ ಈಗ ...?.ಹೀಗೆಯೇ ಮುಂದುವರಿದರೆ ಮುಂದೆ...??

ಮೊನ್ನೆ ಹೀಗೆಯೇ ನಾನು ಮತ್ತು ಅಮ್ಮ ಬೇರೊಂದು ಕಾರ್ಯಕ್ರಮಕ್ಕೆ ಹೋಗಿ ಬರುತ್ತಲಿರುವಾಗ ಮುಳ್ಳೇರಿಯಾದಿಂದ ಮುಂದೆ ಬರುವಾಗ ಪರಪ್ಪೆಯ ಹತ್ತಿರ ಸಾಗುವಾಗ ಅಂದು ನಾವೆಲ್ಲಾ ಮನೆಯಿಂದ [ ತಾಯಿಯ ಮನೆ] ಬರುತ್ತಿದ್ದು ದು ಇಲ್ಲೇ , ಅದೂ ಹೊಳೆಯನ್ನು ದೋಣಿಯಲ್ಲಿ ದಾಟಿ ಮುಂದೆ ಸುಮಾರು 2 ರಿಂದ 3 ಗಂಟೆಗಳ ಕಾಲ್ನಡಿಗೆ ಪಯಣ. ನಾನು ಚಿಕ್ಕವನಿದ್ದಾಗಲೂ ನಡೆದು ಅಜ್ಜನ ಮನೆಗೆ ಹೋದ ಘಟನೆ ಆಗ ನೆನಪಾಯಿತು. ಆದರೆ ಇಂದು ಹಾಗೆ ನಡೆಯುದು ಕನಸಿನ ಮಾತು. ಹಾಗೆಂದು ನಾನು ಯೋಚಿಸುತ್ತಿದ್ದದ್ದು ಅದೇ ಅಜ್ಜನ ಮನೆಯಿಂದ ಕಾರಿನಲ್ಲಿ ಬರುವಾಗ. ಎಂತಹ ತುರ್ತಿನಲ್ಲಿ ನಾವು ಇದ್ದೇವೆ ಅಂತ ನನಗನ್ನಿಸಿತು. ಆದರೆ ಅದು ಇಂದು ಅನಿವಾರ್ಯ ಕೂಡಾ ಹೌದು.

ಇಷ್ಟೆಲ್ಲಾ ನೆನಪಾದದ್ದು ಇಂಧನಕಾರಣಕ್ಕೆ. ಇಂಧನ ಇಂದು ಎಷ್ಟು ಅನಿವಾರ್ಯ ಅಲ್ವಾ...???

04 ಜನವರಿ 2009

ಸಹಾಯಕ್ಕಾಗಿ ...

ತುಂಬಾ ವಿಳಂಬವಾಯಿತು ಎನ್ನುವ ಬೇಸರದೊಂದಿಗೆ ಪುತ್ತೂರಿನ್ ವಸಂತ ಕುಟುಂಬದ ವಿಳಾಸವನ್ನು ಇಲ್ಲಿ ನೀಡುತ್ತೇನೆ.ಅನೇಕ ಸಹೃದಯರು ಸಹಾಯಕ್ಕಾಗಿ ಮುಂದೆ ಬಂದಿದ್ದಾರೆ., ಇನ್ನೂ ಅನೇಕ ಮಿಂಚಂಚೆ ಬಂದಿದೆ ... ಸಹಾಯ ಮಾಡುವವರು ಈ ವಿಳಾಸಕ್ಕೆ ಡಿ.ಡಿ.ಅಥವಾ ಎಂ.ಒ ಕಳುಹಿಸಬಹುದು. ಬ್ಯಾಂಕ್ ಖಾತೆಯಿದೆ.ಆದರೆ ಅದರ ಬಗ್ಗೆ ನನಗೆ ಅಷ್ಟು ಸರಿಯಾದ ಮಾಹಿತಿಗಳು ಲಭ್ಯವಾಗದ ಕಾರಣ ಆ ಬಗ್ಗೆ ಯೋಚಿಸದೇ ಇರುವುದು ಒಳಿತು.
ಅವರ ವಿಳಾಸ ಹೀಗಿದೆ...

Vasantha Gowda
Kumballi House,
Kuttigadde[Near Kallame]
Mundoor village & Post
Puttur T Q 574202

Ph - 08251 - 312201 or
PP Phone - 08251 - 271320