15 ಜನವರಿ 2009

ಇದು ಮನಸ್ವಗತ...




ಅದು ಮೂಡಣದಿ ನೇಸರನು ಕೆಂಪಗೆ ನೆತ್ತರನು ಚೆಲ್ಲುವ ಹೊತ್ತು,ಹಕ್ಕಿಗಳ ಚಿಲಿಪಿಲಿ ಹಾಡು ಕೇಳುವ ಹೊತ್ತು....

ಬೈಕ್ ಮುಂದೆ ಸಾಗುತ್ತಲಿತ್ತು.. .

. . ದಿಗಂತದಲ್ಲಿದ್ದ ಕೆಂಪನೆಯ ನೇಸರನು ನನ್ನನ್ನು ಅಣಕಿಸುವಂತೆ ಓಡೋಡಿ ಬರುತ್ತಿದ್ದಾನಾ..?. ಅನ್ನುವ ಭಾವನೆ ಮನದಲ್ಲಿ ಏಳಲಾರಂಭಿಸಿತು. ಹೌದು, ಬಾಲ್ಯದಲ್ಲಿ ಬಸ್ಸಲ್ಲಿ ಕಿಟಕಿಯ ಬಳಿ ಕುಳಿತು ಅನಂತದಲ್ಲಿ ದೃಷ್ಠಿಯನ್ನು ನೆಟ್ಟು ಅಮ್ಮನಲ್ಲಿ ಕೇಳಿದ್ದು ನೆನಪಿದೆ... ಸೂರ್ಯ ನಮ್ಮೊಂದಿಗೇ ಬರುತ್ತಾನಾ..?. ಅಗೋ ನೋಡು ಎಷ್ಟು ವೇಗವಾಗಿ ಆತ ಇಲ್ಲಿಗೂ ಬಂದ ... ಅಲ್ಲ ... ಅಲ್ಲ ಆತ ನಿಂತಿದ್ದಾನೆ.... ಇಲ್ಲ ಆತ ಓಡುತ್ತಿದ್ದಾನೆ.. ಇಂತಹ ದ್ವಂದ್ವಗಳು ಮನದಲ್ಲಿ ಎದ್ದಾಗ ಅಮ್ಮನಲ್ಲಿ ಕೇಳಿದ್ದು ,ಸೂರ್ಯ ಓಡುತ್ತಾನಾ...? ನಮ್ಮೊಂದಿಗೆ ಬರುತ್ತಲೇ ಇದ್ದಾನಾ...?. ಈ ಎಲ್ಲಾ ಪ್ರಶ್ನೆಗೆ ಉತ್ತರ ಅಂದೇ ಅಮ್ಮ ನೀಡಿದ್ದರು.

ಆದರೂ ಯಾಕೋ ಈಗ ಮತ್ತೆ ಆ ದಿನಗಳು ನೆನಪಾಗಿ ಬಿಟ್ಟಿತ್ತು...

ಮೊನ್ನೆ ಬೆಳಗ್ಗೆ ಯಾವುದೇ ಯೋಚನೆಯಿಲ್ಲದೆ, ರಸ್ತೆಯಿಡೀ ನನ್ನದೇ ಎಂಬ ಖುಷಿಯಲ್ಲಿ ಚಳಿಯನ್ನು ತೂರಿಕೊಂಡು ಮುಂದೆ ಸಾಗುತ್ತಿರುವಾಗ ಮೂಡಣದಿ ನೇಸರನು ಬಾನಲ್ಲಿ ತೇಲಾಡುತ್ತಲಿದ್ದ...ಕೆಂಪನೆಯ ಚಿತ್ತಾರವನ್ನು ಬಿಡಿಸಿದ್ದ... ಆತನ ಬೆಳಕು ಪ್ರಪಂಚದ ಮೇಲೆ ಬೀಳಲು ಆರಂಭಿಸಿತ್ತು. ಆತನಿಗೆ ಅದರಲ್ಲಿ ಯಾವುದೇ ತುರ್ತು ಇದ್ದಂತೆ ಕಂಡುಬಂದಿರಲಿಲ್ಲ.. ಮಾತ್ರವಲ್ಲ ಹಾಗೆ ಬೆಳಕು ನೀಡಲು ಏನೂ ಸ್ವಾರ್ಥವೂ ಕಾಣಲಿಲ್ಲ.

ಆಗೊಮ್ಮೆ ಈಗೊಮ್ಮೆ ವಾಹನಗಳು ರಸ್ತೆಯಲ್ಲಿ ವೇಗವಾಗಿ ಬರುತ್ತಿತ್ತು. ರಸ್ತೆ ನನ್ನದು ಮಾತ್ರವಲ್ಲ ಇತರರಿಗೂ ಇದೆ ಎನ್ನುವ ಭಾವನೆ ನನ್ನಲ್ಲಿ ಬೆಳೆಯಿತು.

ಮುಂದೆ ಸಾಗಿತು..

ಮಬ್ಬು ಸರಿಯಿತು,ಸೂರ್ಯ ಮೇಲೇರಿದ ಚೆನ್ನಾದ ಬೆಳಕು ನೀಡಿದ.. ಎಲ್ಲರಿಗೂ ಸರಿಯಾದ ಬೆಳಕನ್ನೇ ನೀಡಿದ , ಚಳಿಯನ್ನು ಓಡಿಸಿದ.

ಬೈಕ್ ಹಿಂದಿನಷ್ಟು ವೇಗವಾಗಿ ಸಾಗುತ್ತಿರಲಿಲ್ಲ.. ಆಗೊಂದು .. ಈಗೋಂದು ಬರುತ್ತಿದ್ದ ವಾಹನಗಳ ಸಂಖ್ಯೆ ಹೆಚ್ಚಾಯಿತು. ಮನಸ್ಸು ಇನ್ನಷ್ಟು ಜಾಗೃತವಾಯಿತು. ನನ್ನ ಸುರಕ್ಷತೆಯ ಬಗ್ಗೆ ಹೆಚ್ಚು ಯೋಚನೆ ಬಂತು ಅಗಲವಾಗಿದ್ದ ರಸ್ತೆ ಕಿರಿದಾಯಿತು.ಆ ಕಿರಿದಾದ ರಸ್ತೆಯಿಡೀ ನನಗೇ ಬೇಕೆನಿಸಿತು. ಆದರೆ ಹಾಗೆ ಆಗಲು ಸಾದ್ಯವಿರಲಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಆಗ ನನಗೆ ಬ0ದಿರಲಿಲ್ಲ.

ಸೂರ್ಯ ನೆತ್ತಿಯ ಮೇಲೆ ಬಂದಿದ್ದ..

ಆತ ಸಾಗಲೂ ಎಲ್ಲರಿಗೂ ಒಂದೇ ರೀತಿಯ ಬೆಳಕನ್ನು ನೀಡುತ್ತಲೇ ಸಾಗುತ್ತಿದ್ದ... ಸಾಗುತ್ತಾ ಗುರಿಯತ್ತ ಹೆಜ್ಜೆ ಇಡುತ್ತಿದ್ದ.. ಆತನ ಗುರಿ ಸ್ಫಷ್ಟವಾಗಿತ್ತು.

ಆದರೆ ನಾನು ಮಾತ್ರಾ ಇನ್ನೂ ಅದೇ ಕಿರುದಾರಿಯಲ್ಲಿದ್ದೆ.. ಹೆದ್ದಾರಿ ಸಿಕ್ಕಿರಲಿಲ್ಲ. ಅದುವರೆಗೂ ನಾನು ಚಿಂತಿಸುತ್ತಿದ್ದುದು ನನ್ನ ದಾರಿಯ ಬಗ್ಗೆ ಮಾತ್ರಾ ಗುರಿಯ ಬಗ್ಗೆ ಅಲ್ಲ ಎಂಬುದು ಅರಿವಾಯಿತು. ಮುಗ್ಗರಿಸಿ ಸಾಗಿದೆ.. ಅಲ್ಲಿ ದೊಡ್ಡ ಪೇಟೆಯೇ ಸಿಕ್ಕಿತು... ನನ್ನಂತೆ ಅಲ್ಲಿ ಎಲ್ಲರೂ ಕಿರಿದಾದ ರಸ್ತೆಯಲ್ಲಿ ಸಿಲಿಕಿಕೊಂಡಿದ್ದರು ,ಮುಂದೆ ಸಾಗಲು ದಾರಿ ಇರಲಿಲ್ಲ. .. ನಾನೂ ಅದರಿಂದ ಹೊರಬರಲು ಒದ್ದಾಡಿದೆ... ಪ್ರಯತ್ನಿಸಿದೆ... ಆದರೆ ಅದಾಗಲೇ ನನ್ನ ಹಿಂದೆ-ಮುಂದೆ ಹಲವಾರು ಅಡ್ಡಗಳು ಬಂದು ನಿಂತಿದ್ದವು, ಅವುಗಳು ನನಗೆ ಅಡ್ಡವಾದವು...ಕೊನೆಗೆ ಒಂದೆರಡು ಅಡ್ಡಗಳ ದಾಟಿ ಕೊಂಚ ಮುಂದೆ ಬಂದಾಗ ಅಲ್ಲಿ "ಏಡಿ"ಗಳು ಇದ್ದವು.ಅವು ಅಪಾಯಕಾರಿ ಅಂತ ಅರಿವಿದೆ, ಹಾಗಾಗಿ ನನ್ನ ಬೈಕ್ ಪಂಕ್ಚರ್ ಆಗದಂತೆ ಓಡಿಸಬೇಕಾಗಿದೆ. ಈಗ ದೂರದ ಗುರಿ ಕಾಣುತ್ತಿದೆ ಆದರೂ ಆ ದಾರಿಯಲ್ಲೂ ಚಳಿ ಇದೆ ಅಲ್ಲಿ ಮುಸುಕು ,ಮಬ್ಬು ಕಾಣುತ್ತಿದೆ ಅದೆಲ್ಲವನ್ನೂ ಸರಿಸಲು ಮತ್ತೆ ನೇಸರ ಬರುವನೇ..?? ಅಂತ ಯೋಚಿಸುತ್ತಿರುವಷ್ಟರಲ್ಲೇ ಎಚ್ಚರವಾಯಿತು.

ಹೌದು ಇಂದು ನಮ್ಮ ಸುತ್ತಲೂ ನಡೆಯುತ್ತಿರುವುದು ಅದೇ ಅಲ್ವಾ, ಸ್ವಾರ್ಥದ ಅಡ್ಡಗಳು....,ಕಾಲೆಳೆಯುವ ಏಡಿಗಳು , ಎಲ್ಲಿ ಲಾಭವಿದೆ ಎನ್ನುವ ಮನಸ್ಥಿತಿ..., ಇನ್ನೊಬ್ಬನ ಉನ್ನತಿಯ ಸಹಿಸದ ಮಂದಿ..., ಅದಕ್ಕೆ ನನಗನ್ನಿಸಿದ್ದು ,ಸೂರ್ಯ ಒಂದು ಕ್ಷಣ ಹಾಗೇನಾದರೂ ಯೋಚಿಸಿದ್ದರೆ , ಆತನಿಗೆ ಬೆಳಕು ನೀಡಿದರೆ ಏನು ಲಾಭವಿದೆ...?????.

ಆದರೂ ಆತ ಬೆಳಕು ನೀಡುತ್ತಾನೆ ಜಗವ ಬೆಳಗಲು...

2 ಕಾಮೆಂಟ್‌ಗಳು:

shivu.k ಹೇಳಿದರು...

ಮಹೇಶಣ್ಣ,

ನಿಮ್ಮ ಕನಸು ತುಂಬಾ ಚೆನ್ನಾಗಿದೆ....ಕನಸಿನ ರಸ್ತೆಯಲ್ಲಿ ನಡೆಯುವ ಎಲ್ಲಾ ಘಟನೆಗಳನ್ನೂ ತುಂಭಾ ಚೆನ್ನಾಗಿ ಚಿತ್ರಿಸಿದ್ದೀರಿ......

ಸಿರಿರಮಣ ಹೇಳಿದರು...
ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.