31 ಜನವರಿ 2008

ವಳಲಂಬೆ ದೇವಸ್ಥಾನ... ನಾಗದೋಷ ನಿವಾರಣೆಯ ತಾಣ..



ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ಇದು ನಾಗ ದೋಷನಿವಾರಣೆಯ ಇನ್ನೊಂದು ತಾಣ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಈ ದೇವಸ್ಥಾನವಿದೆ.ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ವಳಲಂಬೆ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲೇ ಈ ದೇವಸ್ಥಾನ ಸಿಗುತ್ತದೆ.ಸುಬ್ರಹ್ಮಣ್ಯದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ.

ಇಂದು ನಾಡಿನೆಲ್ಲೆಡೆಯ ಜನರಿಗೆ ಮತಭೇದವಿಲ್ಲದೆ ನಾಗದೋಷದ ತೀವ್ರತೆ ಅರಿವಾಗುತ್ತಿದೆ.ಅನೇಕರು ಈ ದೋಷದ ಪ್ರಭಾವದಿಂದ ಮಾನಸಿಕ ಕುಗ್ಗಿ ಹೋಗಿದ್ದೂ ಇದೆ.ವ್ಯಾಪಾರ ವ್ಯವಹಾರದಲ್ಲಿ ಸೋಲು,ಸಂಸಾರದಲ್ಲಿ ವೇದನೆ ಅನುಭವಿಸಿದವರೂ ಅನೇಕ.ಈ ದೋಷವು ಖ್ಯಾತನಾಮರನ್ನೂ ಬಿಟ್ಟಿಲ್ಲ.ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಕೂಡಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸರ್ಪ ಸೇವೆ ಮಾಡಿಸಿದ ನಂತರದ ಅವರ ಕ್ರಿಕೆಟ್ ಜೀವನ ನಿಮಗೆಲ್ಲಾ ಗೊತ್ತೇ ಇದೆ.ಈ ದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯವು ಅತ್ಯಂತ ಪ್ರಸಿದ್ಧ ಸ್ಥಳ.ಇದರ ಜೊತೆಗೆ ಇಲ್ಲಿಗೆ ಸಮೀಪದ ವಳಲಂಬೆಯ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನವೂ ಇತ್ತೀಚೆಗೆ ಪ್ರಸಿದ್ದಿಯನ್ನು ಹೊಂದಿದೆ.ಈಗ ಈ ದೇವಸ್ಥಾನದಲ್ಲಿ ಜಾತ್ರೆಯ ಸಡಗರ.

ವಳಲಂಬೆಯ ಈ ದೇವಸ್ಥಾನದಲ್ಲಿ ಜೀವಂತ ದೇವರು ಎಂದು ಭಕ್ತರು ಪೂಜಿಸುತ್ತಾರೆ.ನಾಗನ ಹಲವು ಅವತಾರಗಳಲ್ಲಿ "ಶಂಖಪಾಲ"ವೂ ಒಂದು ಎಂಬುದು ಪುರಾಣಗಳಲ್ಲಿದೆ.ಇಲ್ಲಿನ ಆಸುಪಾಸಿನಲ್ಲಿ ಶಂಖಪಾಲನ ನಿಜರೂಪ ದರ್ಶನವಾಗುತ್ತಿರುವುದು ಭಕ್ತರ ನಂಬಿಕೆಗೆ ಇಂಬು ನೀಡಿದೆ.ಇದಲ್ಲದೆ ಇಲ್ಲಿನ ದೇವಸ್ಥಾನದ ಗರ್ಭಗುಡಿಯೊಳಗೆ ವಲ್ಮೀಕವು ಉದ್ಭವಿಸಿರುವುದರಿಂದ ಅದರಲ್ಲಿ ಶಂಖಪಾಲನು ವಾಸವಾಗಿರುವನೆಂಬ ನಂಬಿಕೆ ಇದೆ.ಹೀಗೆಯೇ ಇಲ್ಲಿ ಸರ್ಪ ಸೇವೆ ಮಾಡಿಸಿದರೆ ತಮ್ಮ ದೋಷಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೊಂಡು ಬಂದಿರುವ ಸತ್ಯ.ಸದ್ಯ ಬೆಂಗಳೂರು ,ಮಂಗಳೂರು ಸೇರಿದಂತೆ ಆಸುಪಾಸಿನ ಭಕ್ತರು ಆಗಮಿಸಿ ದೋಷಗಳನ್ನು ನಿವಾರಿಸಿಕೊಳ್ಳುತ್ತಾರೆ.

ಫೆ.೧ ಹಾಗೂ ೨ ರಂದು ಇಲ್ಲಿ ವಾರ್ಷಿಕ ಜಾತ್ರೆಯ ಸಡಗರ.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಆಗಮಿಸಿ ತಮ್ಮ ನೋವನ್ನು ಭಗವಂತನಲ್ಲಿ ನಿವೇದಿಸಿಕೊಳ್ಳುತ್ತಾರೆ. ಸೇವೆಗಳು ಪ್ರತಿದಿನವೂ ನಡೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿಯನ್ನು ಸಂಪರ್ಕಿಸಬಹುದು. --- 08257-282600

30 ಜನವರಿ 2008

ದಾರಿ.... ಇದು ದಾರಿ.....



ದಾರಿ.........!!?

"ದಾರಿ"ಗಾಗಿ ಧ್ವನಿಮಾಡಿ.....!

"ನಿಮ್ಮ ಬದುಕಿನ ದಾರಿಯು ಹುಲ್ಲು ಹಾಸಿನಂತಿರಲಿ,ಅಷ್ಟೂ ಮೃದುವಾಗಿರಲಿ,ನಯವಾಗಿರಲಿ,ಕಲ್ಲು-ಮುಳ್ಳು ಇಲ್ಲದಿರಲಿ........ ಪ್ರತಿದಿನವೂ ಪ್ರೀತಿ ಎಂಬ ನೀರಿನ ಸಿಂಚನ ಅಲ್ಲಿರಲಿ......"

ಇದು ನಿಮ್ಮ ಬದುಕಿನ "ದಾರಿ"ಗೆ ನನ್ನ ಹಾರೈಕೆ.

ಆ "ದಾರಿ" ವಿಸ್ತಾರವಾದದ್ದು.ಅದನ್ನು ಒಂದೇ ದಾರಿಯಲ್ಲಿ ವಿವರಿಸುವುದಾದರೂ ಹೇಗೆ?.ಹಾಗಿದ್ದರೂ ಒಂದು ಪ್ರಯತ್ನ.

ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ...! ಆದರೂ ಸದ್ಯ ಈ ದಾರಿ "ಒಂದು ದಾರಿ"ಯ ಕಡೆಗೆ ಸಾಗಿ ಕವಲು ದಾರಿಯಲ್ಲಿ ಹೋಗಿ ಅಂತ್ಯ ಕಾಣಲೂಬಹುದು.ಅಥವಾ ಹೊಸತೊಂದು ದಾರಿಗೆ ಕಾರಣವಾಗಲೂಬಹುದು..!?

ಹಾ... ನಾನು ಹೇಳಲು ಹೊರಟಿರುವುದು,ನಿಮ್ಮೊಂದಿಗೆ ಮಾತನಾಡಲು ಹೊರಟಿದ್ದು, ಏಕಾಂತದ ಆಲೋಚನೆಗೆ ಅಕ್ಷರ ರೂಪ ನೀಡಲು ಹೊರಟಿರುವುದು ಅದೇ.... "ದಾರಿ"ಯ ಬಗ್ಗೆ ..... ಕವಲು ದಾರಿಗಳ ಬಗ್ಗೆ...

ದಾರಿ...

ದಾರಿಯ ಹಲವು ರೂಪಗಳು ನೆನಪಿಗೆ ಬರುತ್ತದೆ.ಮಾತು ಮಾತಿಗೂ ದಾರಿ ಬಂದೇ ಬರುತ್ತದೆ.ದಿನಕ್ಕೆ ಒಮ್ಮೆಯಾದರೂ ದಾರಿಯ ಬಗ್ಗೆ ಮಾತನಾಡದವರು ಇರಲಾರರು.ರಸ್ತೆಯಲ್ಲಿ ಹೋಗುತ್ತಿದ್ದರಂತೂ ಹಾದಿಯುದ್ದಕ್ಕೂ "ದಾರಿ"ಯ ನೆನಪಾಗುತ್ತದೆ.ಏಕೆಂದ್ರೆ ರಸ್ತೆ ಅಷ್ಟೂ ಕೆಟ್ಟಿದೆ.ನಗರದಲ್ಲಾದ್ರೆ "ಎಂಥಾ ಟ್ರಾಫಿಕ್" ಮಾರಾಯ.ಹಳ್ಳಿಯಲ್ಲಾದ್ರೆ : ಎಂಥಾ ರಸ್ತೆ ಮಾರಾಯ"....!. ಇಲ್ಲಿ ಸರಕಾರ ಇದೆಯಾ ಎನಿಸುವಷ್ಟು ದಾರಿ ನೆನಪಾಗಿ ಬಿಡುತ್ತದೆ.ಇದು ನಮ್ಮ ಪ್ರಯಾಣದ ದಾರಿಯಾದ್ರೆ ಅಲ್ಲೂ ಹಲವು ಕವಲುಗಳಿರುತ್ತಲ್ವಾ.. ಆಗ ನಾವು ನಡುದಾರಿಯಲ್ಲಿ ನಿಲ್ಲಿಸಿ "ಸರ್ ಈ ದಾರಿ ಎಲ್ಲೋಗುತ್ತೆ" ಅಂತ ದಾರಿಯಲ್ಲಿ ಸಿಕ್ಕವರನ್ನು ಕೇಳುತ್ತೇವಲ್ಲಾ ಆಗ ಕೆಲವರು "ನಿಮ್ಗೆ ಎಲ್ಲಿಗೆ ಹೋಗ್ಬೇಕು" ಅಂತ ಪ್ರಶ್ನಿಸುತ್ತಾರೆ. ಹಾ.... ಆಗ ನಮಗೆ ನೆನಪಿಗೆ ಬರೋದು ...ನಾವು ಕೇಳಿದ್ದು ಎಡವತ್ತಾಯಿತೆಂದು.ಕವಲು ದಾರಿಯನ್ನು ಬಿಟ್ಟು ಮುಂದೆ ಹೋದರೆ ಮುಖ್ಯ ದಾರಿಗೆ ಎಲ್ಲಾದರೂ ಕೊನೆ ಇದೆಯಾ..!.ಇದು "ಕೊನೆ ಇಲ್ಲದ ದಾರಿ....."

ಇನ್ನು ಒಂದಿದೆ ಯಾರಾದ್ರೂ ದಾರಿ ಕೇಳಿದ್ರೆ ಸುಮ್ಮನೆ ಗೊತ್ತಿದ್ದರೂ "ಈ ದಾರಿ" ಅಲ್ಲಿಗೇ ಹೋಗುತ್ತೆ ಅಂತ ದಾರಿ ಕೇಳಿದ ಆಗಂತುಕನಿಗೆ ಊರಿನ ಹೆಸರು ಹೇಳಿ ಇಲ್ಲೇ ಹೋಗಿ ಅಂತ "ದಾರಿಯಲ್ಲಿ ಸಿಕ್ಕವರು" ದಾರಿ ತಪ್ಪಿಸಿ ಬಿಡುವುದೂ ಇದೆ.ಹಾಗೆ ಹೋದಾಗ ಅದು ತಪ್ಪು ದಾರಿಯಾದಾಗ ಶಫಿಸುವುದು ನಾವೇ ಅಲ್ವಾ...ಇದೆಲ್ಲಾ ದಾರಿಯ ಕತೆಗಳು..

ಇನ್ನು ಮುಖ್ಯ ದಾರಿಯಿಂದ ಕವಲೊಡೆದು ಮನೆಮನೆಗೆ,ಹಳ್ಳಿಗಳಿಗೆ ಸಾಗುವ ದಾರಿಯನ್ನು "ಕವಲು ದಾರಿ"ಎನ್ನಬಹುದೇ? ಈ ಕವಲು ದಾರಿಗಳ ಬಗ್ಗೆ ಹೇಳುವುದೇ ಒಂದು ಮರುಕ.ಅಲ್ಲಲ್ಲಿ ಹೊಂಡ,ಸರಿಯಾದ ಮಾರ್ಗವಿಲ್ಲ ನಗರಗಳ ಕವಲು ದಾರಿಗಳ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ.ಅಲ್ಲಾ ಈ ದಾರಿಗಾಗಿ ಏನೆಲ್ಲಾ ನಡೆಯುತ್ತೆ.ಅಣ್ಣ-ತಮ್ಮಂದಿರೊಳಗೆ ಜಗಳ, ನ್ಯಾಯಾಲಯದ ಮೆಟ್ಟಿಲೇರಿದ ಘಟನೆಗಳು,ಕತ್ತಿಯೇಟು,ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ ಇದೇ ರಸ್ತೆಗಾಗಿ ಆಲ್ವಾ...ಇದೆಲ್ಲಾ ನಡೆದದ್ದು ಕವಲು ದಾರಿಯಲ್ಲಿ ಅಲ್ವಾ?

ದಾರಿಗೆ ಎಂತಹ ಮಹತ್ವ ......!

ಇದು ಬದುಕಿನ ದಾರಿ...

ನಮ್ಮ ಬದುಕಲ್ಲೂ ಅಂತಹ ದಾರಿಯೊಂದಿದೆ ಅಲ್ವಾ? ಜೀವನದ ಪಥದಲ್ಲೂ ಈ ದಾರಿ ಮುಖ್ಯ ಎನಿಸಿದೆ.ಪುಟ್ಟ ಮಗುವಿನ ಶೈಕ್ಷಣಿಕ ದಾರಿಯಿಂದ ಆರಂಭಿಸಿ ಇತರೆಲ್ಲಾ ವಿಚಾರಗಳು ಉತ್ತಮವಾಗಿದ್ದರೆ ಆತನ ಮುಂದಿನ "ಹಾದಿ"ಯೂ ಉತ್ತಮವಾಗಿರುತ್ತದೆ.ಅಂದರೆ ಮುಖ್ಯ ದಾರಿ ಉತ್ತಮವಾಗಿದ್ದರೆ (ಹೊಂಡ-ಗುಂಡಿಗಳಿಲ್ಲದಿದ್ದರೆ) ಆತನ ಕವಲು ದಾರಿಗಳೂ (ಉದ್ಯೋಗ ,ಕೃಷಿ,ಇತ್ಯಾದಿ) ಉತ್ತಮವಾಗಿರುತ್ತದಲ್ವಾ..?.ಇಲ್ಲೋಂದು ಖುಷಿ ಇದೆ ನಿಧಾನವಾಗಿ ಯೋಚಿಸಿದಾಗ ತಿಳಿಯುತ್ತೆ...!. ಇಲ್ಲಿ ಹೇಳಿದ ಎಲ್ಲಾ ದಾರಿಗೂ ಒಂದು ಅಂತ್ಯ ಇದ್ದೇ ಇದೆ.ಬದುಕಿನ ದಾರಿಯೂ ಅದರಲ್ಲಿ ಸೇರಿ ಹೋಗಿದೆ. ಆದರೆ ವಿದ್ಯೆಯ ದಾರಿಗೆ.....!? ನಿಜಕ್ಕೂ ಇದು ಮುಖ್ಯ.

ಹಾಗಾಗಿ ನಾವು ಬದುಕಿನ ದಾರಿಯಲ್ಲಿ ಸಾಗುತ್ತಿರುವಂತೆಯೇ ಅದು ಕೊನೆಗೊಂದು ದಿನ ಮಂಜಾಗಿ ದಾರಿ ಮಸುಕಾಗುವ ವೇಳೆ ನಾವು ಆವರೆಗೆ ನಡೆದುಕೊಂಡ ದಾರಿ ಮುಖ್ಯವಾಗಿಬಿಡುತ್ತದೆ.ನಮ್ಮ ದಾರಿ ಉತ್ತಮವಾಗಿದ್ದರೆ ನಮ್ಮದೇ ಹಾದಿಯಲ್ಲಿ ಇನ್ನೂ ಹತ್ತಾರು ಮಂದಿ ಬರುತ್ತಾರೆ.ಇಲ್ಲವಾದರೆ ಒಂಟಿ ದಾರಿ...! ಕಾಡಿನ ಮಧ್ಯೆ ಇರುವ ಹಾದಿಯಂತೆ...! ಹೀಗಾದರೆ ಒಂದೆರಡು ವರ್ಷದ ನಂತರ ಆ ದಾರಿಯ ನೆನಪೂ ಇರೋದಿಲ್ಲ...! ಎಂತಹ ಅಚ್ಚರಿ ಅಲ್ವಾ..!?

ಹಳ್ಳಿಯೊಳಗೆ ಒಂದು ಮನೆ.ಅಲ್ಲಿ ಇನ್ನೊಂದು ಮನೆಗೆ ಹೋಗಲು ಕಾಲು ದಾರಿ.. ನಗರದಲ್ಲಿ ರಸ್ತೆಯ ಪಕ್ಕದಲ್ಲಿ ಹೋಗಲು ಫುಟ್ ಪಾತ್ ಇರುತ್ತಲ್ವಾ ಇದು ನನಗೆ ಇಷ್ಟವಾಗುತ್ತೆ.ಏಕೆ ಗೊತ್ತಾ ಎಲ್ಲರಿಗೂ ಒಂದೇ ದಾರಿ... ಬಡವ... ಶ್ರೀಮಂತ ... ಎಂಬುದು ಅಲ್ಲಿಲ್ಲ.ದಾರಿ ಎಲ್ಲರಿಗೂ ಒಂದೇ..ಬೀದಿಯ ಪಕ್ಕದಲ್ಲಿ ಅಂಗಡಿಗಳಿವೆ. ಆದ್ರೆ ನೋಡಿ ಮುಖ್ಯ ರಸ್ತೆಯಲ್ಲಿ ಬಡವನಿಗೆ ಜಾಗವೇ ಇಲ್ಲ.!.ಸಾರ್ವಜನಿಕ ಬಸ್ಸೇ ಆತನ "ದಾರಿ"ಯಲ್ಲಿ ಮುಖ್ಯವಾದರೆ ಶ್ರೀಮಂತನಿಗೆ ಲಕ್ಷ ಲಕ್ಷ ಬೆಲೆ ಬಾಳುವ ಕಾರು "ದಾರಿ"ಯ ಮಾರ್ಗದರ್ಶಕವಾಗಿರುತ್ತೆ ಅಲ್ವಾ.?

ಮತ್ತೆ ಮತ್ತೆ ನನಗನ್ನಿಸುವುದು ನಮ್ಮ ಬದುಕಿನ ದಾರಿ ಫುಟ್ "ಪಾತ್"ನಂತಹ ಓಣಿ ಆಗಿದ್ರೆ, ಅಲ್ಲಿ ಎಲ್ಲರೂ ಸಿಕ್ತಾರೆ...ಅಕ್ಕಪಕ್ಕದಲ್ಲಿ ನೆಂಟ್ರು.. ಫ್ರೆಂಡ್ಸ್... ಉದ್ಯೋಗ.. ಸಿಹಿ... ಕಹಿ... ಕಷ್ಟ.... ಸುಖ... ಮಾತನಾಡಲು ಜನ.... ಚರ್ಚಿಸಲು ಒಂದಿಷ್ಟು ಮಂದಿ.... ಹೀಗೆ ಎಲ್ಲವೂ ಸಿಕ್ರೆ, ಮುಖ್ಯ ದಾರಿಯಲ್ಲಿ ಸಾಗಿದ್ರೆ ಇವರಾರೂ ಸಿಗಲ್ಲ. ಒಂದೇ ದಾರಿ. ಅದೇ ಮುಖ. ಅದು ಬಿಟ್ರೆ ಬೇರೆ ಮಾತೇ ಇಲ್ಲ...! ಅಂತೂ ಇದ್ರೆ ಒಂದೆರಡು ಮಂದಿ ಮಾತ್ರಾ... ನಮ್ಮ ಬದುಕಿನ ದಾರಿಯ ಮಧ್ಯೆ ನಾವೆಲ್ಲಾದ್ರು ನಿಂತ್ರೆ ಅವರಾರೂ ನಮ್ಮೊಂದಿಗೆ ನಿಂತು ಮಾತೂ ಆಡಲ್ಲ.. ನಮ್ಮನ್ನು ನೋಡೋದೂ ಇಲ್ಲ, ಮುಂದೆ ಹೋಗಿಯೇ ಬಿಡುತ್ತಾರೆ ಏಕೆ ಗೊತ್ತಾ ಇಂದು ಸ್ಪರ್ಧೆ ಇದೆ...!

ಬದುಕಿನ ದಾರಿಯಲ್ಲಿ ಎಲ್ರೂ ಬೇಕಲ್ವಾ.... ನಮ್ಮ ಪ್ರಯಾಣದ ದಾರಿ ಹಾಗಲ್ಲ ಬೇಗ ಬೇಗನೆ ತಲಪಿಬಿಡಬೇಕು.ಹಾಗಾಗಿ ಈ ಎರಡೂ ದಾರಿಗಳೂ ನಮಗೆ ಮುಖ್ಯ ದಾರಿಗಾಳಾಗಿ ಬಿಟ್ಟಿವೆ ಉಳಿದವೆಲ್ಲಾ ಇವೆಯಲ್ಲಾ ಅದೆಲ್ಲಾ ಕವಲುದಾರಿಗಳು ಅದಕ್ಕೆಲ್ಲಾ ಒಂದು ಕೊನೆ ಇದೆ... .! ಹಾಗೇ ಪ್ರಯಾಣದ "ದಾರಿ" ಹಾಗಲ್ಲ ಉತ್ತಮವಾದ ದಾರಿಯಲ್ಲಿ ಸಾವಿರಾರು ಮಂದಿ ಪ್ರತಿದಿನ ಪ್ರಯಾಣಿಸುತ್ತಾರೆ. ನಿತ್ಯವೂ ಆ ದಾರಿ ನೆನಪಾಗುತ್ತದೆ.ನಮ್ಮ ಬದುಕಿನ ದಾರಿಯೂ ಉತ್ತಮವಾಗಬೇಕು ಎನ್ನುವ ಪ್ರಯತ್ನ ನಮ್ಮದಾಗಿರಬೇಕಲ್ವಾ..? ಆಗ ನಾವು ಬದುಕಿದ ದಾರಿ ,ನಮ್ಮ ನಡತೆಯ ದಾರಿಯಲ್ಲಿ ಹತ್ತಾರು ಮಂದಿ ಸಾಗುತ್ತಾರೆ..... ಆದರ್ಶವಾಗಿ ಬಿಡುತ್ತದೆ.. ಹೇಗೆ ಇಂದು ಅಬ್ದುಲ್ ಕಲಾಂ , ವಾಜಪೇಯಿ, ಸಚಿನ್ ತೆಂಡೂಲ್ಕರ್, ರತನ್ ಟಾಟಾ, ಅಂಬಾನಿ....... ಇವರೆಲ್ಲರ ದಾರಿ ಮಾದರಿಯಾಗಿ ಬಿಡುತ್ತೋ ಹಾಗೆ.....

ಏನ0ತೀರಿ...? ಇದೇ ಅಲ್ವಾ ನಮ್ಮ ವಿವಿಧ ದಾರಿಗಳ .... ಕವಲು ದಾರಿಗಳ ಒಳನೋಟಗಳು....

26 ಜನವರಿ 2008

ರಾಮ - ರಾಮಾಯಣ - ಸೇತುಸಮುದ್ರಂ





ಹೇ ರಾಮ್....

ಎಷ್ಟೆಲ್ಲಾ ವಿವಾದಗಳು ನಡೆದು ಹೋಯಿತು.ನಿಜವಾಗಲೂ ಬೇಕಿತ್ತಾ?.ಐತಿಹಾಸಿಕ ಸತ್ಯವೊಂದನ್ನು ತಿರುಚುವ ಪ್ರಯತ್ನ ನಡೆಯಬೇಕಿತ್ತಾ?.
ಭಾವನಾತ್ಮಕ ಮನಸ್ಸುಗಳಂತೂ ಹೋರಾಡಿದವು... ಕೆಲವರು ಮೌನವಾಗಿ ಪ್ರತಿಭಟಿಸಿದರು.ನಮ್ಮ ದೇಶದ ರಾಜಕೀಯ ಮುಖಂಡರು ಅದಕ್ಕೆ ಏನೆಲ್ಲಾ ವ್ಯಾಖ್ಯಾನ ನೀಡಿದರು.ಅದರಲ್ಲೂ ರಾಜಕೀಯ ಹುಡುಕಿದರು.ಇದೆಲ್ಲಾ ನಡೆದ ಬಳಿಕ ಶ್ರೀಲಂಕಾದಿಂದ ಒಂದು ನಿಜವಾದ ಸತ್ಯವು ಮತ್ತೊಮ್ಮೆ ಜಗಜ್ಜಾಹೀರಾಯಿತು... "ರಾಮಾಯಣ ಸುಳ್ಳಲ್ಲ ನಮ್ಮಲ್ಲಿ ಅದಕ್ಕೆ ಬೇಕಾದ ಪುರಾವೆಗಳಿವೆ.. ೫೦ ಕ್ಕೂ ಹೆಚ್ಚು ತಾಣಗಳಲ್ಲಿ ರಾಮಾಯಣದ ಐತಿಹ್ಯವಿದೆ." ಎಂದಿತು.ನಮ್ಮ ಪೂರ್ಣಕಾಲಿಕ ಸತ್ಯಗಳನ್ನು "ಅವರಿಂದಲೇ" ನಂಬುವವರಲ್ಲ್ವೇ..ನಾವು.?.

ನಮ್ಮಲ್ಲಿ ಇಷ್ಟೆಲ್ಲಾ ವಿವಾದಗಳು ನಡೆಯುತ್ತಿದ್ದಾಗಲೂ 'ಶ್ರೀಲಂಕಾ'ದಿಂದ ಏಕೆ ಪ್ರಿತಿಕ್ರಿಯೆ ಇಲ್ಲ ಅಂತ ನಾನಂತೂ ಯೋಚಿಸುತ್ತಲೇ ಇದ್ದೆ.ಅಲ್ಲೇನಾದರೂ ಪುರಾವೆ ಇರಬಹುದಾ ಸತ್ಯ ಕಟು ಸತ್ಯವಾದರೇ ಚೆನ್ನ ಅಂತ ಧ್ಯಾನಿಸುತ್ತಿದ್ದೆ.ಈಗ ನನ್ನ ಯೋಚನೆಯ ದಾರಿಯಲ್ಲಿ "ಕುರುಹು"ಗಳು ಪತ್ತೆಯಾಗಿವೆ. ಖುಷಿಯಾಗ್ತಿದೆ.

"ಸೇತು ಸಮುದ್ರಂ" ಹೆಸರು ಕೇಳಿದಾಗಲೇ ಅಷ್ಟೋಂದು ವಿವಾದಗಳು ಮನಸ್ಸಿನ ಪಟಲದಲ್ಲಿ ಹಾದು ಹೋಯಿತು.ಈಗ ಮತ್ತೆ ಅದನ್ನೇ ಕೆದಕುವ ಅಗತ್ಯವಿಲ್ಲ.ಆದರೂ ಒಂದು ವಿಚಾರ .ಇತ್ತೀಚೆಗೆ ನನ್ನ ಮಿತ್ರ ಹೇಳುತ್ತಿದ್ದ "ಸೇತು ಸಮುದ್ರಂ ಯೋಜನೆ ಏಕೆ ಗೊತ್ತಾ? ತಮಿಳ್ನಾಡಿನ ಮಂತ್ರಿಯೊಬ್ಬರಿಗೆ ಹಡಗುಗಳಿವೆ ಪ್ರಸ್ತುತ ಅವುಗಳೆಲ್ಲಾ ಸುತ್ತು ಬಳಸಿ ಬರುತ್ತಿದೆ ....ಅದು ಸಲೀಸಾಗಿ ಬರಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ..."ಎಂದು ವಿವರಿಸುತ್ತಲೇ ಇದ್ದ. ನನಗೆ ದಿಗಿಲಾಯಿತು..

ಸ್ವಂತ ಹಿತಕ್ಕಾಗಿ ರಾಷ್ಟ್ರೀಯ ಸ್ಮಾರಕವೊಂದನ್ನು ಬಲಿ ತೆಗೆದುಕೊಳ್ಳುತ್ತಾರಾ?ಅದಕ್ಕೊಂದು ಅಭಿವೃದ್ಧಿಯ ಚಿಂತನೆ-ಕಲ್ಪನೆ ಬೇರೆ.ಬೇಡ ಆ ಬಗ್ಗೆ ಮತ್ತೆ ಚರ್ಚಿಸುವ ಮನಸ್ಸು ನನಗೀಗಿಲ್ಲ.

ಶ್ರೀಲಂಕಾ ಸರಕಾರವು ಮೊನ್ನೆ ಮೊನ್ನೆ ಹೇಳಿತು ರಾಮಾಯಣ ಒಂದು ಕಾಲ್ಪನಿಕ ಕಥೆಯಲ್ಲ ಅದೊಂದು ಐತಿಹಾಸಿಕ ಸತ್ಯ.ಅದನ್ನು ಸಾರುವ ಕುರುಹುಗಳು,ಸಾಕ್ಷ್ಯಗಳು ಶ್ರೀಲಂಕಾದಲ್ಲಿದೆ ರಾವಣನ ಆಸ್ಥಾನ,ಪುಷ್ಪಕ ವಿಮಾನದ ನಿಲ್ದಾಣ,ಲಂಕಾದಹನದಿಂದ ಕರಕಲಾದ ಮಣ್ಣು, ....ಹೀಗೆ ಅನೇಕ ಸಂಗತಿಗಳನ್ನು ಅದು ಬಹಿರಂಗಪಡಿಸಿತು.ಅಷ್ಟೇ ಅಲ್ಲ ತಾಣಗಳ ಭೇಟಿಗೆ ವಿಶೇಷ ಪ್ಯಾಕೇಜ್ ಘೋಷಿಸಿತು.

ಮತ್ತೆ ವಿವರಿಸುತ್ತಿದ್ದ ಶ್ರೀಲಂಕಾ ಸರಕಾರ "ರಾಮಾಯಣ"ವು ಸಿಂಹಳೀಯರಿಗೂ ಪವಿತ್ರ.ಅದೊಂದು ಸತ್ಯ ಎಂದು ಕರೆಯಿತು.ಇಡೀ ದೇಶದ ಜನತೆಯ ಪರವಾಗಿ.ನಮಗೆ ಇದಕ್ಕಿಂತ ದೊಡ್ಡ ಮುಖಭಂಗ ಬೇಕಾ?.ದುರಂತ ಎಂದರೆ ,ನಮ್ಮಲ್ಲಿ ಹಾಗೆ ಹೇಳಬೇಕಾದ ಬದಲು ರಾಮ ಎಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ಪ್ರಶ್ನಿಸುತ್ತೇವೆ..?.ಎಂಜಿನಿಯರಿಂಗ್ ಓದಿದವರು ಮಾತ್ರಾ ಸೇತುವೆ ಕಟ್ಟುತ್ತಾರೆಂಬ ಭ್ರಮೆಯಲ್ಲಿದ್ದವರೇ ನಮ್ಮ ಮುಖಂಡರಾಗಿ ಬರುತ್ತಾರಲ್ಲ ಅದು ಕೂಡಾ ನಮ್ಮ ದುರಂತವಲ್ಲದೆ ಮತ್ತಿನ್ನೇನು?

ಆದರೆ ಸಿಂಹಳೀಯರು ಬಿಡಿ ಇಡೀ ಜಗತ್ತೇ ನಮ್ಮ "ರಾಮಾಯಣ"ವನ್ನು ಒಪ್ಪಿತ್ತು.ನಾಸಾ ಅದಕ್ಕೊಂದು ಪುರಾವೆಯನ್ನು ನೀಡಿತು.ಬಳಿಕ ವಿವಾದಕ್ಕಾಗಿ ನಮ್ಮ ಶ್ರಮವನ್ನು ಬಳಸಿಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿತ್ತು.ಹಾಗಾಗಿ ನಾಸಾದಂತಹ ಸಂಶೋಧನಾ ತಂಡಕ್ಕೆ ತಮ್ಮ ಸಂಶೋಧನೆಯಲ್ಲಿ ಸತ್ಯದ ಬಗ್ಗೆ ನಿಖರತೆಯಿತ್ತು.ಆದರೆ ನಮ್ಮ ಮಂದಿಯ ಕಣ್ಣಲ್ಲಿ ರಾಮ-ರಾಮಯಣ ಕಂಡದ್ದು ರಾಜಕೀಯ ದೃಷ್ಟಿಯಿಂದ....

ಒಟ್ಟಿನಲ್ಲಿ ಈಗ ಶ್ರೀಲಂಕಾದ ಹೊಸ ಹಾಗು ಸತ್ಯದ ಬಯಲಾಗಿದೆ.ಇನ್ನು ನಮ್ಮ ರಾಜಕೀಯ ನಾಯಕರ ಪ್ರತಿಕ್ರಿಯೆ ಹೇಗಿದೆ ಕಾದು ನೋಡಬೇಕಾಗಿದೆ. ಈಗಾಗಲೇ ಈ ಹೇಳಿಕೆ ಬರುತ್ತಿದ್ದಂತೆಯೇ ಅಂದು ಸೇತುಸಮುದ್ರಂ ಬೆಂಬಲಿಸಿದವರು "ಡ್ರಾಪ್" ಬಗ್ಗೆ ಮಾತನಾಡಿದ್ದಾರೆ.ಮುಂದೇನೋ ಗೊತ್ತಿಲ್ಲ...

ದೇಶದ ಅಷ್ಟೂ ಮಂದಿ ನಡೆಸಿದ ಹೋರಾಟಕ್ಕೆ ಶ್ರೀಲಂಕಾದಿಂದ ತಾತ್ವಿಕವಾದ ನೆಲೆ ಸಿಕ್ಕಿದೆ.ಇನ್ನು ಈ ನೆಲೆಯನ್ನು ಭದ್ರಪಡಿಸುವ ಕೆಲಸ ಆಗಬೇಕು.ಆದರೆ ನಾವು ಇನ್ನೂ MNC ಶೈಲಿಯಲ್ಲೇ ಚಿಂತಿಸುತ್ತಿದ್ದರೆ ಹೇಗೆ?.ಸ್ವಲ್ಪ ನಮ್ಮ ತನ,ಸ್ವಂತಿಕೆಯಲ್ಲಿ ಆಲೋಚಿಸೋಣ , ಭಾರತೀಯ ದೃಷ್ಟಿಯಿಂದಲೂ ರಾಮ-ರಾಮಾಯಣದ ಬಗ್ಗೆ ಏಕೆ ಚಿಂತಿಸಬಾರದು..? "ಅವರು" ಹೇಳುವುದನ್ನೇ ಏಕೆ ಒಪ್ಪಿಕೊಳ್ಳಬೇಕು ನಮ್ಮಲ್ಲೂ ಚಿಂತನೆಗಳಿಲ್ವಾ.. ನಮಗೂ ಬೆಲೆ ಇಲ್ವಾ..? ಚಿಂತಿಸಿ ನೋಡೋಣ... ಉತ್ತರ ಸಿಗುತ್ತಾ ನೋಡೋಣ......

ಶ್ರೀಲಂಕಾ ಸರಕಾರ ಹೇಳಿದ ರಾಮಯಣದ ಪುರಾವೆಗಳು:

- ರಾಮ ,ಸೀತೆ, ರಾವಣರ ಕುರುಹು
- ಲಂಕಾದಹನದಿಂದ ಕರಕಲಾದ ಮಣ್ಣು
- ಪುಷ್ಪಕ ವಿಮಾದ ನಿಲ್ದಾಣ
- ರಾವಣನ ಗುಡಿ
- ರಾಮಾಯಣದ ರಣರಂಗದ ಕುರುಹು
- ಹೀಗೆ ೫೦ ವಿವಿಧ ಪ್ರದೇಶಗಳು.


ಹರೇ ರಾಮ.....

24 ಜನವರಿ 2008

ನನ್ನಜ್ಜಿಯೂ.... ಸ್ವಾಭಿಮಾನವೂ...



ನನ್ನ ಅಜ್ಜಿ ಚಿಕ್ಕಪ್ಪನಲ್ಲಿರುವುದು.

ಮೊನ್ನೆ ಸುಮ್ಮನೆ ಅಜ್ಜಿಯೊಂದಿಗೆ ಹರಟಲು ಹೋಗಿದ್ದೆ.ಈಗ ಅವರಿಗೆ ೮೩ ವರ್ಷ.ಸಂಸಾರದಲ್ಲಿ ೬೩ ಜನರಿದ್ದಾರೆ.ಹೇಗೆ ಗೊತ್ತಾ? ೫ ಜನ ಗಂಡು ೫ ಜನ ಸೊಸೆಯಂದಿರು ,೩ ಜನ ಮಗಳು ೩ ಜನ ಅಳಿಯಂದಿರು ಅವರಲ್ಲಿ ಒಬ್ಬರು ಈಗಿಲ್ಲ.೨೬ ಜನ ಮೊಮ್ಮಕ್ಕಳು ೨೨ ಜನ ಮರುಮಕ್ಕಳು(ಪುಳ್ಳಿಯ ಮಕ್ಕಳು).ಹೀಗೆ ೬೩ ಜನರ ಭವ ಬಂಧನ.

ನನಗೀಗಲೂ ಅಜ್ಜಿ ಏಕೆ ಅನುಕರಣೀಯರು ಎಂದರೆ ಸ್ವಾಭಿಮಾನಕ್ಕಾಗಿ.ಅವರ ಸ್ವಾಭಿಮಾನದ ಬದುಕಿಗಾಗಿ.ಯಾವತ್ತೂ ಕೂಡಾ ಇನ್ನೊಬ್ಬರಿಗೆ ತೊಂದರೆ ನೀಡಿದವರಲ್ಲ.ಇಷ್ಟು ಬೃಹತ್ ಸಂಸಾರದ ಕೊಂಡಿಗಳಿರುವಾಗಲೂ ಯಾರೊಬ್ಬರಿಂದಲೂ ತನ್ನ ಸೇವೆಯನ್ನು ನೀನು ಮಾಡು ಎಂದು ಹೇಳಿದ್ದಿರರಲಿಕ್ಕಿಲ್ಲ. ಹಾ.. ಚೆನ್ನಾಗಿರು ಅಂತಲೇ ಪ್ರತೀ ದಿನವೂ ಅಂತಲೇ ಹಾರೈಸುವ ಅಜ್ಜಿ ಚಿಕ್ಕಪ್ಪ-ಚಿಕ್ಕಮ್ಮನಲ್ಲೂ ಸೇವೆ ಮಾಡಿಸಿಕೊಳ್ಳದೆ ತನ್ನ ಕಾರ್ಯಗಳನ್ನು ತಾನೇ ಮಾಡಿಕೊಳ್ಳುತ್ತಾರೆ.ಉಪಕಾರಕ್ಕೆ ಹೋದ್ರೆ ಬೇಡ...ಬೇಡ ಅಂತಾನೇ ಹೇಳ್ತಾರೆ.

ಕೆಲವು ಸಮಯಗಳ ಹಿಂದೆ ಒಂದು ಘಟನೆ ನಡೆಯಿತು.ಅಜ್ಜಿಗೆ ಪ್ರಾಯ ಆಗಿತ್ತಲ್ಲಾ ಕಂಬಳಿ ಬೇಕೇ ಬೇಕು.ಮಲಗುವಾಗ ಕಂಬಳಿ ಹೊದ್ದೇ ಮಲಗುತ್ತಾರೆ. ಅವರಲ್ಲಿರುವ ಕಂಬಳಿ ಹರಿದಿತ್ತು.ಆದ್ರೂ ಅದುವೇ ಆಗಬೇಕೆನ್ನುವ ಹಠ.ಒಮ್ಮೆ ಅದನ್ನು ನೋಡಿದ ಅತ್ತೆ (ಅಜ್ಜಿಯ ಮಗಳು) ಕಂಬಳಿ ಕೊಡುವ ಯೋಚನೆ ಮಾಡಿ ಚಿಕ್ಕಪ್ಪನಲ್ಲಿ ಕಳುಹಿಸಿಕೊಟ್ಟರು.ಅಜ್ಜಿ ಅದನ್ನು ನೋಡಿ ಅಚ್ಚರಿಪಟ್ಟ್ರು.ನಾನು ಹೇಳ್ಲಿಲ್ಲಲ್ವಾ ಮತ್ಯಾಕೆ? ಅಂತ ಚಿಕ್ಕಪ್ಪನಲ್ಲಿ ಕೇಳಿದ್ರು.ನಂತರ ಅದನ್ನು ನೋಡಿ ಬೇಡ ಇದು ನಂಗೆ ಬೇಡ ವಾಪಾಸು ಅದನ್ನು ಕೊಡು ಬೇಕಿದ್ರೆ ನಾವು ಅಂಗಡಿಯಿಂದ ತರೋಣ ಅಂದೇ ಬಿಟ್ರು.ಯಾಕೆ ಗೊತ್ತಾ ಅದು ನಮ್ಮದಲ್ಲ... ಪುಕ್ಕಟೆ ಬೇಡ..ಎಂಬ ಸ್ವಾಭಿಮಾನ. ಮತ್ತೆ ದಿನವಿಡೀ ಚಿಕ್ಕಪ್ಪನನ್ನು ಕರೆದು "ನೋಡು ಗಂಗಾಧರ ಅದು ಕೊಡು...." ಎಂದು ಹೇಳುತ್ತಲೇ ಇದ್ದರು. ಚಿಕ್ಕಪ್ಪನಿಗೆ ಹೇಗೆ ಅಕ್ಕನಲ್ಲಿ ಹೇಳುವುದು ಎನ್ನುವ ಚಿಂತೆ.ಆದ್ರೆ ಅಜ್ಜಿಗೆ ಅದು ಬೇಡ.ಚಿಕ್ಕಪ್ಪ ಆಯಿತು ಕೊಡೋಣ ಅಂದ್ರು...ಆ ದಿನಕ್ಕೆ ಅದು ಹಾಗೆ ಮುಗಿದಿತ್ತು.ಮರುದಿನ ಮತ್ತೆ ಅದೇ ಪ್ರಶ್ನೆ ಅಜ್ಜಿ ಕೇಳಿದರೆ ಕೊಟ್ಟಾಗಿದೆ ಅಂದು ಬಿಟ್ಟರು ಚಿಕ್ಕಪ್ಪ.ಹಾಗಾಗಿ ಅಜ್ಜಿಗೆ ನೆಮ್ಮದಿಯಾಗಿತ್ತು.

ಅಜ್ಜಿಯ ಸ್ವಾಭಿಮಾನಕ್ಕೆ ಇದೊಂದು ಉದಾಹರಣೆ ಮಾತ್ರ.

ನನಗೆ ಅನಿಸಿದ್ದು ಅದಲ್ಲ.ಅಜ್ಜಿಯ ಈ ಸ್ವಾಭಿಮಾನದ ಅಂಶಗಳು ನನ್ನಲ್ಲಿ,ಆಸುಪಾಸಿನ ಜನರಲ್ಲಿ.ದೇಶದ ಮಂದಿಯಲ್ಲಿ ಇದ್ದಿದ್ದರೆ?.ನಾವು ಈ ಮಣ್ಣಿನ ಮಕ್ಕಳು ಅದರ ಋಣ ತೀರಿಸಬೇಕೆನ್ನುವ ಸ್ವಾಭಿಮಾನ ನಮಗೆ ಇರಬೇಕಿತ್ತಲ್ವಾ...?.ನಮ್ಮ ದೇಶದ ಮೇಲೆ ಇಂದಿಗೂ ಅಷ್ಟೊಂದು ಆಕ್ರಮಣಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಆದ್ರೂ ನಮ್ಮಲ್ಲಿ ಸ್ವಾಭಿಮಾನ ಕಿಡಿ ಬೆಳಗಿಲ್ಲಲ್ವಾ? ನಾವೆಲ್ಲಾ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಸುಮ್ಮನೆ ಹರಟುವುದನ್ನು ಬಿಟ್ಟು ಗಂಭೀರವಾಗಿ ಚಿಂತಿಸಿದ್ದು ಇದೆಯಾ.

ಮೊನ್ನೆ ಪ್ರತಾಪ್ ಸಿಂಹ ಇಸ್ರೇಲ್ ದೇಶದ ಬಗ್ಗೆ ತುಲನೆ ಮಾಡುತ್ತಾ ಹೇಳಿದ್ದೂ ಅದನ್ನೇ.ಆ ದೇಶದ ಮಂದಿಯ ಸ್ವಾಭಿಮಾನ,ದೇಶದ ಮೇಲಿನ ಅಭಿಮಾನವನ್ನು ಎಳೆ ಎಳೆಯಾಗಿ ಬಿಡಿಸಿದ್ದರು.ಇಲ್ಲಿ ಈಗ ಎಲ್ಲದಕ್ಕೂ ರಾಜಕೀಯದ ದೃಷ್ಠಿ ,ಲಾಭದ ದೃಷ್ಠಿಯನ್ನೇ ಗಮನಿಸುವ ಮಂದಿ ಹೆಚ್ಚುತ್ತಿರುವ ಕಾರಣದಿಂದಲೇ.ಆತ "ನಮಸ್ಕಾರ" ಎಂದರೂ ಇದರಲ್ಲೇನಾದರೂ ಇದೆಯಾ ಎಂದು ವಾಸ್ತವನ್ನು ಅರಿಯಬೇಕಾದ ಕಾಲದಲ್ಲಿ ನಾವಿದ್ದೇವೆ ಎಂದು ಅನಿಸುತ್ತಿದೆ.ಇದು ಬದಲಾಗಿ ನಿರ್ಮಲ ಮನಸ್ಸುಗಳು ಇಂದು ಬೆಳೆಯಬೇಕು.

ನಮ್ಮಲ್ಲಿ ಹೇಗಾಗಿದೆ ಅಂದ್ರೆ ಒಂದು ಸಂಸ್ಥೆಯಲ್ಲಿ ದುಡಿಯುವ ವ್ಯಕ್ತಿ ಆ ಸಂಸ್ಥೆಗೆ ಉತ್ತಮವಾದ್ದನ್ನು ಕೊಡದಿದ್ದರೆ ಪರವಾಗಿಲ್ಲ ಕೆಟ್ಟದ್ದನ್ನು ಬಯಸುವ, ಹೇಗಾದ್ರು ಮಾಡಿ ನನ್ನ ಹೆಸರು ಬರಬೇಕು ಆದ್ರೆ ಅನ್ನ ಕೊಟ್ಟ ಸಂಸ್ಥೆಗೆ ಮಸಿ ಬಳಿಯಬೇಕು ಎಂದು ಯೋಚಿಸುವ ಮಂದಿಯೇ ಬೆಳೆಯುತ್ತಿದ್ದಾರೆ.ಇತ್ತೀಚೆಗೆ ಅದೇ ನಡೆಯಿತು ಗೌರವಾನ್ವಿತರೆನಿಸಿಕೊಂಡವರೊಬ್ಬರು ತಾನು ದುಡಿಯುವ ಸಂಸ್ಥೆಯನ್ನು ನಡೆಸುವ ದೇವಸ್ಥಾನದ ಹೆಸರನ್ನು ಕೆಡಿಸುವ ದಾರಿಗೆ ಮಾರ್ಗದರ್ಶಕರಾದರು.ಅಲ್ಲಿ ಇಲ್ಲದ್ದನ್ನು ಇದೆ ಎಂದರು.ಆಗ ನನಗಂತೂ ಅನ್ನಿಸಿತು ನಿಜವಾಗಲೂ ನಾವು ಎಲ್ಲಿದ್ದೇವೆ.ಎಷ್ಟು ಕೃತಜ್ನರು ಅಲ್ವಾ?.ಸ್ವಾಭಿಮಾನದ ಚಿಕ್ಕ ಕಿಡಿ ಇದ್ದಿದ್ದರೆ ಅಂತಹ ಮನಸ್ಥಿತಿ ಇರುತ್ತಿತ್ತಾ?.

ಹಾಗೇ ಇನ್ನೊಬ್ಬರು ನೋಡಿ.ತನಗೆ ಉದ್ಯೋಗ ದೊರಕಿಸಿಕೊಟ್ಟು ಇಂಗ್ಲಿಷ್ನಲ್ಲಿ ಸುಲಲಿಲವಾಗಿ ಮಾತನಾಡಲಾಗದೇ ಇದ್ದಾಗಲೂ ಉಪನ್ಯಾಸಕರಾಗಿ ಬೆಳೆಯಲು ಸಹಾಯ ಮಾಡಿದವರನ್ನು ಟೀಕಿಸುತ್ತಾರೆ ,ಮತ್ತೆ ಅದೇ ಸಂಸ್ಥೆಯನ್ನು ದೂರುತ್ತಾರೆ.!?.ಹೇಗಿದೆ ಸಂಸ್ಥೆಯ ಮೇಲೇ ಅಭಿಮಾನ. ಇವೆರಡು ಸಂಗತಿಗಳು ನಾನು ಅತ್ಯಂತ ಗೌರವಿಸುವ ಫೀಲ್ಡ್ ನಿಂದಲೇ ಕಂಡು ಬಂದದ್ದು ನನಗೆ ಬೇಸರವೆನಿಸಿದ ಕಾರಣಕ್ಕಾಗಿ ಅಜ್ಜಿ ನೆನಪಾದರು.ಅಜ್ಜಿಯ ಸ್ವಾಭಿಮಾನ ನೆನಪಾಯಿತು.

ಇವರನ್ನೆಲ್ಲಾ ಗಮನಿಸಿದರೆ ಇಂದು ಹೊಲದಲ್ಲಿ ಬೆಳೆ ಬೆಳೆಸುವ ರೈತ ಹಾಗು ಅವನೊಂದಿಗೆ ದುಡಿಯುವ ಕೂಲಿಯಾಳುಗಳಿಗೆ ಈ ದೇಶದ ಮೇಲೆ , ಯಜಮಾನನ ಮೇಲೆ ,ದೇಶದ ಮೇಲೆ ಎಷ್ಟೊಂದು ಅಭಿಮಾನ.ಅದೆಲ್ಲಾ ಬಿಡಿ ಈ ಮಣ್ಣಿನ ಮೇಲೂ ಕೂಡಾ..!.ಏಕೆಂದ್ರೆ ನಾನು ನನ್ನ ದೇಶದ ಜನರಿಗೆ ಅನ್ನವನ್ನು ನೀಡಬೆಕು ಎನ್ನುವ ಕನಿಷ್ಟ ಚಿಂತನೆಯಾದ್ರು ಇದೆಯಲ್ಲಾ.ಒಂದು ವೇಳೆ ಆತನೂ ಇವರಂತೆ ಚಿಂತಿಸಿದ್ದರೆ ಹೇಗಿರುತ್ತಿತ್ತು..?
ಒಮ್ಮೊಮ್ಮೆ ನನಗೆ ಅನಿಸುವುದಿದೆ ನಾವು ವಿದ್ಯಾವಂತರಾದಷ್ಟು ಕುಬ್ಜರಾಗಿ ಬಿಡುತ್ತಿದ್ದೆವಾ? ಹಳ್ಳಿ ರೈತ ಅಷ್ಟೊಂದು ವಿದ್ಯಾವಂತನಲ್ಲದಿದ್ದರೂ ಆತನಿಗೆ ನಾವು-ನಮ್ಮವರು ಎಂಬ ಭಾವನೆಯೊಂದಿಗೆ ಸ್ವಾಭಿಮಾನವೂ ಇದೆ.ನಾವು ನಿಜವಾಗಲೂ ವಿದ್ಯಾವಂತರಾದಂತೆ ಬಾಗುವುದನ್ನು ಕಲಿಯಬೇಕಲ್ವೇ..ಭತ್ತದ ಪೈರಿನಂತೆ.. ಮಾಗಿದ ಹಣ್ಣಿನಂತೆ... ಅದೆಲ್ಲವನ್ನೂ ಅರಿಯಲು ಹಳ್ಳಿಯ ನಿಷ್ಕಲ್ಮಶ ಹೃದಯ ,ಗಾಳಿ ವಾತಾವರಣದಿಂದ ಮಾತ್ರ ಸಾಧ್ಯ.
ಅಂತಹ ಜನರಿಗೆಲ್ಲಾ ನನ್ನ ಅಜ್ಜಿ ಸಾಟಿಯಲ್ಲ ಬಿಡಿ.ನನ್ನ ಅಜ್ಜಿಯು ಸ್ವಾಭಿಮಾನದ ಬಗ್ಗೆ ನೆನಪಿಸುವಾಗ ಕಂಬಳಿಯ ವಿಚಾರ ನೆನಪಿಗೆ ಬಂತು. ಅಜ್ಜಿಯಂತಹ ಅನೇಕರು ಸಮಾಜದಲ್ಲಿದ್ದಾರೆ.ಅವರೆಲ್ಲಾ ಹಳೆಬೇರುಗಳಾಗಿದ್ದರೆ ಹೊಸಚಿಗುರುಗಳು...? ಎಲ್ಲಿದೆ.ನಾವು ನಮ್ಮತನವನ್ನು ಕಳೆದುಕೊಂಡು "ಎಲೆ ಉದುರಿದ" ಮರದಂತಾಗುತ್ತಿದ್ದೇವಾ ಅಂತ ನಿಮಗೆ ಅನ್ಸಲ್ವಾ..?

22 ಜನವರಿ 2008

ಪುಟ್ಟ ಪುಟ್ಟ ಕತೆಗಳು...

ಯುವಮೇಳ..

ಯುವ ಮೇಳವು ಅದ್ದೂರಿಯಗಿ ನಡೆಯುತ್ತಿತ್ತು.ಅನೇಕ ಯುವಕ,ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎರಡು ದಿನಗಳ ಕಾಲ ನಿರಂತರ ಕಾರ್ಯಕ್ರಮ ನಡೆದಿತ್ತು.ಯುವಕ,ಯುವತಿಯರಿಗೆ ಕಾರ್ಯಕ್ರಮ ಅತ್ಯಂತ ಸ್ಫೂರ್ತಿ ಕೊಟ್ಟಿತು.ಅಲ್ಲೇ ಪಕ್ಕದಲ್ಲಿ ತೊಟ್ಟಿಲೂ ಇತ್ತು...!.

ಕಾಡಿದ ನೆನಪು..

ವೃದ್ಧರಿಬ್ಬರು ತಮ್ಮ ಬಾಲ್ಯದ ಬಗ್ಗೆ ಹಾಗು ತಾವು ಮದುವೆಯಾದ ಸಂಗತಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.ಆಗಲೇ ಅವರ ಮಗಳು ಪರಾರಿಯಾಗಿ ಮದುವೆಯಾದ ಸುದ್ದಿಬಂದಿತ್ತು.

ಉ'ಚಿತ' ವಿದ್ಯುತ್

ರಾಜಕೀಯ ನಾಯಕರು ಆಗಾಗ ಹೇಳುತ್ತಿದ್ದರು ಉಚಿತ ವಿದ್ಯುತ್ ನೀಡುತ್ತೇವೆ ನಾವು ಗೆದ್ದು ಬಂದರೆ ಎಂದು.ಜನರೆಲ್ಲಾ ಓಟು ನೀಡಿದರು.ಗೆದ್ದು ಬಂದರು ಅವರು.ಕೊನೆಗೊಂದು ದಿನ ರೈತನೊಬ್ಬ ತೀರಿಕೊಡಾಗ ವಿದ್ಯುತ್ ಚಿತಾಗಾರದಲ್ಲಿ ಶವ ಸುಡಲಾಯಿತು.


ಮೊಬೈಲ್...ಬಸ್

ಬಸ್ಸು ಸಮಯಕ್ಕೆ ಸರಿಯಾಗಿ ಆ ದಿನ ಬರಬೇಕೇ.ಆತನ ಕೈಯಲ್ಲಿ ಮೊಬೈಲಿತ್ತು.ಬಸ್ಸು ಮುಂದಕ್ಕೆ ಸಾಗಿಯಾಗಿತ್ತು.

ತೀರ್ಪು..

ಗಂಡ-ಹೆಂಡಿರ ನಡುವೆ ತೀವ್ರ ವಾಗ್ವಾದ ನಡೆಯುತ್ತಿತ್ತು.ನೂತನ ಸೀರೆ ವಿಚಾರವು ಈ ವಾಗ್ವಾದಕ್ಕೆ ಕಾರಣವಾಗಿತ್ತು.ಮರುದಿನ ನ್ಯಾಯಾಲಯದಲ್ಲಿ ವಿಚ್ಚೇದನದ ತೀರ್ಪು ಬಂದಿತ್ತು.

ಪ್ರೇಮದ ಬಿಲ್....

ಪ್ರೇಮಿಗಳಿಬ್ಬರು ದೂರವಾಣಿಯಲ್ಲಿ ಗಂಟೆಗಟ್ಟಲೆ ಹರಟುತ್ತಲೇ ಇದ್ದರು.ಬಿ ಎಸ್ ಎನ್ ಎಲ್ ನವರಿಗೆ ತಲೆನೋವಾಗಿತ್ತು.ಮುಂದಿನ ತಿಂಗಳು ದೂರವಾಣಿ ಸಂಪರ್ಕ ಕಡಿತಗೊಂಡಿತ್ತು.

19 ಜನವರಿ 2008

ಸುಳ್ಯ ತಾಲೂಕು ಯುವಜನ ಮೇಳ ...





ಶನಿವಾರ ೧೯ ನೇ ತಾರೀಕು ಬೆಳಗ್ಗೆ ೧೧ ಗಂಟೆ ಸಮಯ..

ಸುಳ್ಯ ತಾಲೂಕು ಯುವಜನ ಮೇಳವು ಕೊಲ್ಲಮೊಗ್ರದಲ್ಲಿಉದ್ಘಾಟನೆಗೊಂಡಿತು. .
ಕಾರ್ಯಕ್ರಮವನ್ನು ಸುಳ್ಯ ಮಾಜಿ ಶಾಸಕ ಅಂಗಾರ ಉದ್ಘಾಟಿಸಿ ಯುವಜನ ಮೇಳಗಳ ಮೂಲಕ ಗ್ರಾಮೀಣ ಸಂಸ್ಕೃತಿ ಬೆಳೆಯಬಲ್ಲುದು ಎಂದು ತಮ್ಮದೇ ಎಂದಿನ ಧಾಟಿಯಲ್ಲಿ ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ.ಅಧ್ಯಕ್ಷ ಶಂಕರ್ ಪೆರಾಜೆ ಇದು ಯುವಜನರ ಹಬ್ಬ ಎಂಬುದನ್ನು ವಿವರಿಸಲು ಕೆಲವು ವಿಚಾರಗಳನ್ನು ಹೇಳಲು ಪ್ರಯತ್ನಿಸುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಕೊಲ್ಲಮೊಗ್ರ ಗ್ರಾ.ಪಂ.ಅಧ್ಯಕ್ಷೆ ಭಾರತಿ ಕಟ್ಟ, ಕೊಲ್ಲಮೊಗ್ರ ಬ್ಯಾಂಕ್ ಅಧ್ಯಕ್ಷ ಸೀತಾರಾಮ ಕೊಪ್ಪಡ್ಕ,ಯುವಜನ ಇಲಾಖೆಯ ಎಂ.ಸಿ.ರಮೇಶ್,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ,ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಪ್ರಕಾಶ್ ಕೂಜುಗೋಡು,ಯುವಜನ ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಅಂಬೆಕಲ್,ಕೊಲ್ಲಮೊಗ್ರ ಮಯೂರವಾಹನ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣಯ್ಯ ಕಟ್ಟ, ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಕಿರಿಭಾಗ ಭಾಗವಹಿಸಿದ್ದರು.ವೇದಿಕೆಯಲ್ಲಿ ಯುವಜನ ಒಕ್ಕೂಟದ ಅಧ್ಯಕ್ಷ ಹರೀಶ್ ಬೈಕಂಪಾಡಿ,ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಶ್ವನಾಥ ಕೆ.ಟಿ, ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ,ಯುವಜನ ಮೇಳ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ, ಯುವಜನ ಮೇಳ ಸ್ವಾಗತ ಸಮಿತಿ ಕಾರ್ಯದರ್ಶಿ ಕೃಷ್ಣ ಪ್ರಸಾದ್, ಕಾರ್ಯಾಧ್ಯಕ್ಶ ಹಮೀದ್ ಇಡ್ನೂರ್, ಮೊದಲಾದವರು ಉಪಸ್ಥಿತರಿದ್ದರು.

ಮರುದಿನ ನಡೆದ ಸಮಾರೋಪ ಸಮಾರಂಭದಲ್ಲಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಿನ ೧೩ ಯುವಕ ಮಂಡಲ, ೯ ಯುವತಿ ಮಂಡಲಗಳ ಒಟ್ಟು ೩೦೯ ಮಂದಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

೨ ದಿನಗಳ ಒಟ್ಟು ಕಾರ್ಯಕ್ರಮದಲ್ಲಿ ಯುವಕ ಮಂಡಲ ವಿಭಾಗದಲ್ಲಿ ಮಿತ್ರ ಬಳಗ ಕಾಯರ್ತೋಡಿ ಸಮಗ್ರ ಪ್ರಶಸ್ತಿ ಪಡೆದರೆ , ವನಶ್ರೀ ಯುವತಿ ಮಂಡಲ ಯುವತಿ ಮಂಡಲ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದವು.

18 ಜನವರಿ 2008

ಸುಬ್ರಹ್ಮಣ್ಯದಲ್ಲಿ 'ನವ್ಯ'ಕಲೆಯ ಬಗ್ಗೆ ಮಾಹಿತಿ...



ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜೇಸೀಐ ಸುಬ್ರಹ್ಮಣ್ಯ ಕುಕ್ಕೇಶ್ರೀಯ ಜೂನಿಯರ್ ಜೇಸೀ ವತಿಯಿಯಿಂದ ನವ್ಯ ಕಲೆಯ ಮಾಹಿತಿ ಕಾರ್ಯಾಗಾರವು ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಸಿಕಂದರಾಬಾದ್ ನ ಲೋಕಜಿತ್ ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ , ಜೇಸೀಐ ಸುಬ್ರಹ್ಮಣ್ಯ ಕುಕ್ಕೇಶ್ರೀಯ ಅಧ್ಯಕ್ಷ ಚಂದ್ರಶೇಖರ ನಾಯರ್, ಜೂನಿಯರ್ ಜೇಸೀ ಅಧ್ಯಕ್ಷೆ ಅಲಕಾ ಎಂ.ಸಿ , ವಿಮಲಾರಂಗಯ್ಯ, ಸ್ವಪ್ನಾ ವೆಂಕಟೇಶ್, ಕಾರ್ಯದರ್ಶಿ ಪ್ರೀತಂ ಭಾಗವಹಿಸಿದ್ದರು.

ಒಂದು ದಾರಿಯ ಕತೆಯಲ್ಲಿ....




೨೦೦೭ ಡಿ.೨೯ ಶನಿವಾರ.ಮಧ್ಯಾಹ್ನ ೨.೩೦ ರ ಸಮಯ.

ಕುಕ್ಕೆ ಸುಬ್ರಹ್ಮಣ್ಯದ ಡಿಗ್ರಿ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ.

ಪುಸ್ತಕ ಬರೆದವರು ಸುಬ್ರಹ್ಮಣ್ಯದ ಡಿಗ್ರಿ ಕಾಲೇಜಿನ ಉಪನ್ಯಾಸಕ ಎನ್.ಎಸ್.ಗೋವಿಂದ. ಕೃತಿ-"ಒಂದು ದಾರಿಯ ವೃತ್ತಾಂತ.."

ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಖ್ಯಾತ ಸಾಹಿತಿ, ಕವಿ ಸುಬ್ರಾಯ ಚೊಕ್ಕಾಡಿ

ಉಪಸ್ಥಿತರಿದ್ದವರು ಮಾಧವ ಗೌಡ ಜಾಕೆ,ಸಾಹಿತಿ ಅನಂತ ನಲ್ಲೂರಾಯ, ಕಾಲೇಜಿನ ಪ್ರಾಂಶುಪಾಲ ದಿನೇಶ್ ಕಾಮತ್,ಉಪನ್ಯಾಸಕ ಮಂಜುನಾಥ್ ಭಟ್.ಈ ಕ್ಷಣಕ್ಕೆ ಸಾಕ್ಷಿಯಾದವರು ಅನೇಕರು.

ಕೃತಿಯ ಬಗ್ಗೆ ಇಷ್ಟು ತಡವಾಗಿ ಬರೆಯಬೇಕಾಯಿತು.ಕೃತಿಯನ್ನು ಸಂಪೂರ್ಣ ಓದಿ ಮುಗಿಸಿದೆ.ಈಗ ಅದೇ ವಿಚಾರಗಳನ್ನು ಮೆಲುಕು ಹಾಕುವುದು ಸಕಾಲಿಕ ಎಂದು ಭಾವಿಸಿದ್ದೇನೆ.

ಇದು ಕೃತಿಯ ವಿಶ್ಲೇಷಣೆಯಲ್ಲ.ನಾನು ಗೋವಿಂದರ ಕೃತಿಯನ್ನು ವಿಶ್ಲೇಷಿಸುವಷುವಷ್ಟು ಬೆಳೆದಿಲ್ಲ ಎಂದು ನನಗೆ ತಿಳಿದಿದೆ.

ಈ ಕೃತಿಯಲ್ಲಿ ಗೋವಿಂದರು, ಸುಮಾರು ೧೦ ವರ್ಷಗಳ ಕಾಲ ವರದಿಗಾರರಾಗಿ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವಿದೆ.ಅವರು ಪತ್ರಕರ್ತರಾಗಿದ್ದಾಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.ಅದು ನಿಜಕ್ಕೂ ಓದಲೇಬೇಕಾದ ವಿಚಾರ ಅಂತ ನನಗೆ ಅನ್ನಿಸಿದೆ.ಉಳಿದ ಲೇಖನಗಳೂ ಉತ್ತಮವಾಗಿದೆ.

ಗೋವಿಂದರು ಬರೆದ ದಾರಿಯಲ್ಲಿ ಒಂದೆಡೆ ತಮ್ಮ ಅನುಭವ ಹೇಳಿಕೊಳ್ಳುತ್ತಾ ಅರೆಕಾಲಿಕ ಸುದ್ದಿಗಾರರೊಬ್ಬರು ಸುದ್ದಿ ಇಲ್ಲದೆ ಸುದ್ದಿ ಮಾಡಿದ ಘಟನೆಯನ್ನು ವಿವರಿಸಿದ್ದು ಹೀಗೆ. ಅಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಬೇಟಿ ನೀಡಿದ ಸಂದರ್ಭದಲ್ಲಿ ದೊಡ್ಡ ಸುದ್ದಿ ಮಾಡಬೇಕೆಂಬ ಹಂಬಲವಿದ್ದ ವರದಿಗಾರ ಮಹಾಶಯರೊಬ್ಬರು ಪ್ರಕಟಿಸಿದ ಸುಳ್ಳು ಸುದ್ದಿ ಹಾಗು ಅದರಿಂದಾಗಿ ಆದ ಆವಾಂತರಗಳು ಮತ್ತೆ ಅದಕ್ಕೆ ಸಚಿನ್ ಮುಂಬಯಿಯಲ್ಲಿ ಸ್ಪಷ್ಟನೆ ನೀಡಿದ್ದು ಇತ್ಯಾದಿಗಳ ಬಗ್ಗೆ ಹೇಳುತ್ತಾ ಏನಾದರೂ ಸುದ್ದಿ ಮಾಡಬೇಕೆಂಬ ಹಪಹಪಿಕೆಯಲ್ಲಿ ಸುದ್ದಿ ಮಾಡಬಾರದು ಎಂದದ್ದು ಅತ್ಯಂತ ಮಾರ್ಮಿಕವಾಗಿತ್ತು.ಅದನ್ನು ನಿಜವಾದ ಪತ್ರತರ್ತರು ಅರಿತುಕೊಳ್ಳಬೇಕೆಗಿದೆ. ಒಬ್ಬ ಪತ್ರಕರ್ತರಾಗಿ ಗೋವಿಂದರು ಅನೇಕ ವಿಚಾರಗಳನ್ನು ಅಲ್ಲಿ ತಿಳಿಸಿದ್ದಾರೆ.ಅದು ಪತ್ರಕರ್ತರಿಗೆ, ಅದರಲ್ಲೂ ಬಿಡಿಸುದ್ದಿಗಾರರಿಗೆ ಸೂಕ್ತವಾಗಿದೆ.

ಹಾಗೇ ಗೋವಿಂದರ ಪುಸ್ತಕ ನೋಡಿ ನನ್ನ ಅನುಭವಕ್ಕೊಂದು ವೇದಿಕೆ ಸಿಕ್ಕಿದೆ. ಕೆಲವು ಪತ್ರಕರ್ತರಿದ್ದಾರೆ ಅವರು ಕೆಲವು ಸೂಕ್ಶ್ಮ ವಿಚಾರಗಳನ್ನು ಇನ್ನೊಬ್ಬ ಪತ್ರಕರ್ತನಿಗೆ ಹೇಳಿ ನಾಳೆಗೆ ಈ ವಿಚಾರ ಬರಲಿ ನಾನೂ ಮಾಡುತ್ತೇನೆ ಎಂದು ನಂಬಿಸಿ ತಾನು ಆ ಸೂಕ್ಶ್ಮ ವಿಚಾರಗಳನ್ನು ಸುದ್ದಿ ಮಾಡದೆ ಎಲ್ಲರ ಮುಂದೆ ಸುಬಗರಾಗುವ ಮಂದಿಯೂ ಇರುತ್ತಾರೆ. ಹಾಗಾಗಿ ಅಂತಹ ಮಂದಿಗೂ ಗೋವಿದರ ಕೃತಿಯಲ್ಲಿ ಉತ್ತರವಿದೆ.

ಒಟ್ಟಿನಲ್ಲಿ ಈ ಪುಸ್ತಕವು ಸಂಗ್ರಹ ಯೋಗ್ಯ.ಪತ್ರಕರ್ತರಾಗಬಯಸುವವರಿಗೆ,ವಿದ್ಯಾರ್ಥಿಗಳಿಗೆ "ದಾರಿ"ಯಾಗಬಲ್ಲುದು.ನನಗಂತೂ ಖುಷಿಯಾಗಿದೆ.

ಪುಸ್ತಕದ ಬೆಲೆ ೮೦ ರೂ.ಒಟ್ಟು ಪುಟಗಳು ೧೯೦.

ಪುಸ್ತಕವನ್ನು ಓದಬಹುದು.....

ಓದಲೇಬೇಕು.......

ಗೋವಿಂದರ ಸಂಪರ್ಕಕ್ಕೆ......
nsgovinda@rediffmail.com


16 ಜನವರಿ 2008

ಇದು ತಪ್ಪಲ್ವಾ....



ಮೊನ್ನೆ ಭಾನುವಾರ.

ಮದುವೆಯೊಂದಕ್ಕೆ ಹೋಗಿದ್ದೆ. ಅಲ್ಲಿಗೆ ಅಕ್ಕನ ಮಗನೂ ಬಂದಿದ್ದ.ಆತ ಇನ್ನೂ ೩ ನೇ ತರಗತಿ.ಮಕ್ಕಳಲ್ವಾ ನನಗೂ ಪ್ರೀತಿ.ಹಾಗಾಗಿ ಆತನಿಗೂ ನನ್ನಲ್ಲಿ ಹರಟುವುದೆಂದರೆ ಖುಷಿ.ಮೊನ್ನೆ ಆತ ಹರಟುತ್ತಾ ಕೇಳಿದ "ಮಾವ ಮೊನ್ನೆ ದೀಪಿಕಾ ಯುವರಾಜನೊಂದಿಗಿದ್ದಿರಬಹುದಾ?". ನನಗೆ ನಿಜವಾಗಲೂ ಆ ಬಗ್ಗೆ ಅಷ್ಟೊಂದು ಆಸಕ್ತಿಯಿದ್ದಿರಲಿಲ್ಲ. ಆದರೂ ಹುಡುಗ ಮತ್ತೆ ಮತ್ತೆ ಅದೇ ಸುದ್ದಿಗೇ ಬರುತ್ತಿದ್ದ.ನಾನು ಹಾರಿಕೆಯ,ಬಾಲಿಶವಾದ ಉತ್ತರ ನೀಡುತ್ತಲೇ ಬಂದೆ.ಮುಂದೆ ಆತನ ಪ್ರಶ್ನೆ ಹೀಗೆ ಬಂತು "ದೀಪಿಕಾ ಧೋನಿಗೆ ಮೋಸ ಮಾಡಿದ್ದು ಅಲ್ವಾ?".ಅದು ತಪ್ಪಲ್ವಾ? ಪೇಪರಲ್ಲಿ ಯಾಕೆ ಹೇಳುವುದಿಲ್ಲ ಅಂತ ನನ್ನಲ್ಲಿ ಕೇಳುತ್ತಲೇ ಹೋದ.ಆದರೆ ನಾನು ಇದಾವುದಕ್ಕೂ ಗಂಭೀರ ಉತ್ತರ ನೀಡುವ ಗೋಜಿಗೇ ಹೋಗಲಿಲ್ಲ. ಕೇವಲ ಹಾರಿಕೆಯ ಉತ್ತರ ನೀಡಿದೆ.

ಹುಡುಗನ ಈ ಪ್ರಶ್ನೆಯು ನನ್ನನ್ನು ಚಿಂತನೆಗೆ ಹಚ್ಚಿತು. ವಿಚಾರವನ್ನು ಮಂಥನ ನಡೆಸಿದಾಗ ೩ ನೇ ತರಗತಿಯ ಬಾಲಕನೊಬ್ಬ ಅಷ್ಟೊಂದು ಗಂಭೀರವಾಗಿ ಕ್ರಿಕೆಟ್ ಬಗ್ಗೆ,ಕ್ರಿಕೆಟ್ ತಾರೆಗಳ ಖಾಸಗೀ ಬದುಕಿನ ಬಗ್ಗೆ ಚಿಂತಿಸುತ್ತಾನೆಂದರೆ ಮಕ್ಕಳಿಗೆ ಕ್ರಿಕೆಟ್ ಬಗೆಗಿರುವ ನಂಟಿನ ಬಗ್ಗೆ ನಾವು ಗಂಭೀರವಾಗಿ ಗಮನಿಸಬೇಕಾಗಿದೆ.ಇಂದು ಕ್ರಿಕೆಟ್ ಜನಪ್ರಿಯ ಹಾಗೂ ಸಭ್ಯರ ಕ್ರೀಡೆ ಎಂಬ ಮಾತು ಸಮಾಜದಲ್ಲಿರುವುದು ಹೌದಾದರೂ ಮಕ್ಕಳ ಬಹುಪಾಲು ಸಮಯ ಕ್ರಿಕೇಟ್ ಮುಂದೆಯೇ ಕೆಟ್ಟು ಹೋಗುತ್ತಿದೆಯೇ? ಎಂದು ಚಿಂತಿಸಲು ಈಗ ಪರ್ವ ಕಾಲ.

ಈ ಮಾಂತ್ರಿಕ ಆಟದಿಂದಾಗಿ ಎಳೆಯ ಕಂದಮ್ಮಗಳ ಸಾಹಿತ್ಯದ , ಲವಲವಿಕೆಯ ದಾರಿ ಮುಚ್ಚಿಕೊಳ್ಳುತ್ತಿದೆಯೇ?. ಹಾಗೆಂದು ನನಗಂತೂ ಅನ್ನಿಸುತ್ತಿದೆ.ಬೆಳಗ್ಗೆದ್ದು ಕ್ರಿಕೇಟ್,ಕಾರ್ಟೂನ್ ನೆಟ್ ವರ್ಕ್ ಬಿಟ್ಟರೆ ಬೇರಾವುದೇ ಜಗತ್ತನ್ನು ಗಮನಿಸದ ಮಕ್ಕಳು ಮುಂದೆ ಈ ಸಮಾಜದಲ್ಲಿ ಕ್ರಿಕೇಟ್ ಭಾಷೆಯಲ್ಲೆ ಮಾತನಾಡಿಯಾರೇ ಎಂಬ ಆತಂಕ ನನ್ನಲ್ಲಿ ಮನೆ ಮಾಡಿದೆ. ಒಬ್ಬ ಚಿಕ್ಕ ಹುಡುಗ ಇಂದು ದೇಶ-ವಿದೇಶದ ಕ್ರಿಕೆಟ್ ತಾರೆಗಳ ಹೆಸರನ್ನು,ಅವರ ಖಾಸಗೀ ಬದುಕಿನ ಬಗ್ಗೆ ಹೇಳಿದಷ್ಟು ಸಲೀಸಾಗಿ ನಮ್ಮ ಆಸುಪಾಸಿನ ಸಂಗತಿಗಳ ಬಗ್ಗೆ ಹೇಳಲು ಶಕ್ತನಾಗುವುದಿಲ್ಲ ಅದೆಲ್ಲಾ ಬಿಡಿ ಪಾಠದ ಬಗ್ಗೆಯೂ ಹೇಳುದಿಲ್ಲ ಎಂದರೆ ನಮ್ಮ ಮಕ್ಕಳು ಎತ್ತ ಸಾಗುತ್ತಿದ್ದಾರೆ?.ಇದು ಮುಂದಿನ ಭವಿಷ್ಯಕ್ಕೆ ಸಹಕಾರಿಯಾದೀತೇ?.

ಭಾರತ ಸಂಸ್ಕೃತಿಯನ್ನು ನೋಡಿ. ಇಲ್ಲಿ ನಾಯಕರಾದವರು ಸರ್ವರಿಗೂ ಮಾರ್ಗದರ್ಶಕರಾಗಿರಬೇಕು.ಮಾರ್ಗದರ್ಶಕರಾಗಿದ್ದರು ಕೂಡಾ ಆದರೆ ಈಗ ಗಮನಿಸಿದರೆ ಬೆರಳೆಣಿಕೆಯ ನಾಯಕರ ದಾರಿಯನ್ನು ಬಿಟ್ಟರೆ ಬೇರೆ ಯವ ನಾಯಕರ ಹಾದಿ ಸರಿಯಾಗಿದೆ, ನಮ್ಮ ಎಳೆಯರಿಗೆ ಅವು ಹೇಗೆ ಮಾರ್ಗದರ್ಶಕವಾಗಿದೆ?. ಕ್ರಿಕೆಟ್ ತಾರೆಗಳನ್ನೆ ಗಮನಿಸಿ ಅವರ ಅಭಿಮಾನಿಗಳಿಗೆ ಅವರು ಹೇಗೆ ಮಾರ್ಗದರ್ಶಕರಾಗಿದ್ದಾರೆ? ಸಣ್ಣ ಹುಡುಗನಿಗೆ ಕೂಡ ತಾರೆಗಳ ಖಾಸಗಿ ಬದುಕು ಮುಖ್ಯವಾಗಿ ಬಿಡುತ್ತದೆ,ತಲೆ ಕೂದಲ ಅಲಂಕಾರದಿಂದ ಹಿಡಿದು ಪ್ರತಿಯೊಂದನ್ನು ಅನುಕರಿಸುವ ಅಭಿಮಾನಿಗಳಿರುವಾಗ ಸ್ವಲ್ಪ ಎಚ್ಚರವಿರಬೇಡವಾ?. ಸಾನಿಯಾ ಮಿರ್ಜಾ ಇರಬಹುದು, ತೆಂಡುಲ್ಕರ್ ,ಯುವರಾಜ್,ಧೋನಿ, ಅಥವಾ ಇನ್ನಾರೆ ಸ್ಟಾರ್ ಗಳಿರಬಹುದು ಎಳೆಯರಿಗೆ ಉತ್ತಮ ಮಾರ್ಗದರ್ಶರಾಗಿದ್ದರೆ ಚೆನ್ನಾಗಿತ್ತು.ಇಲ್ಲವಾದ್ರೆ ಚಿಕ್ಕ ಬಾಲಕರ ಮೇಲೂ ಪರಿಣಾಮ ಬೀರುವುದು ಅವರದೇ ಸಂಗತಿಗಳು.ಹಾಗಾಗಿ ನಾವು ಈಗಲೇ ಜಾಗೃತರಾಗಬೇಕು.

ನೋಡಿ ಕ್ರಿಕೆಟ್ ನಲ್ಲಿ ಎಷ್ಟೆಲ್ಲಾ ವಿವಾದಗಳು ನಡೆದವು.ಅದಕ್ಕೆಲ್ಲಾ ನಾವು ಎಷ್ಟು ಚರ್ಚಿಸಿದೆವು.ಏನಾದ್ರು ಫಲ ಸಿಕ್ಕಿತಾ?.ಆರಂಭದಲ್ಲಿ ಮ್ಯಾಚ್ ಬುಕ್ಕಿಂಗ್ ನಡೆದು ಹಲವು ವಿಚಾರಣೆಗಳು ನಡೆದ ನಂತರವೂ ಮತ್ತೆ ವಿವಿಧ ತಿರುವುಗಳು, ಮತ್ತೆ ವಿವಾದಗಳು,ಹೊಸ ಗೊಂದಲಗಳು ... ಬೇಡ.. ಮೊನ್ನೆ ಮೊನ್ನೆ ನಡೆದ ಮ್ಯಾಚ್ ನಲ್ಲಿ ಅಂಪೆರ್ರಿಂದಲೇ ಕೆಟ್ಟ ತೀರ್ಪು. ಅದಕ್ಕೆ ನಮ್ಮ ಜನ ರೊಚ್ಚಿಗೆದ್ದ ಪರಿ ನೋಡಿದರೆ ದಿಗಿಲು ಹುಟ್ಟಿಸುತ್ತದೆ.ಅಲ್ಲಿ ಅಂಪೆರ್ ಕೆಟ್ಟ ತೀರ್ಪು ನೀಡಿದ್ದು ತಪ್ಪು.ನಮ್ಮವರಿಗೆ ಮೋಸ ಆದದ್ದು ನಿಜ.ಅದಕ್ಕೆ ಹಾಗೆ ವಿರೋಧಿಸಬೇಕಾಗಿತ್ತಾ...? . ಅದೇ ನಮ್ಮ ದೇಶದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ , ಕಾಶ್ಮೀರದಲ್ಲಿ ನಡೆಯುವ ಮಾರಣ ಹೋಮಗಳ ಬಗ್ಗೆ ಬೇಡ ನಮ್ಮ ಆಸುಪಾಸಿನಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವಾ..?

ಇಷ್ಟೆಲ್ಲಾ ಸಂಗತಿಗಳು ಕ್ರಿಕೇಟ್ ನಲ್ಲಿನಡೆಯುತ್ತಿರುವಾಗ ನಾವೆಲ್ಲಾ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ .ಯಾರಾದ್ರು ಸಿಕ್ರೆ ಮಾತನಾಡಲು ವಿಶ್ಯ ಇಲ್ದಿದ್ರೆ ಒಂದೆರಡು ಮಾತನಾಡಿ ಸುಮ್ಮನಿರುತ್ತೇವೆ.ಆದ್ರೆ ಮಕ್ಕಳು ನೋಡಿ ದಿನವಿಡೀ ಶಾಲೆ,ಮನೆ, ಎಲ್ಲೆಂದರಲ್ಲಿ ಅದೇ ಕ್ರಿಕೇಟ್ ಸುದ್ದಿಯನ್ನೇ ಮಾತನಾಡುತ್ತಿರುತ್ತಾರಲ್ಲಾ ಮೋಡಿಯ ಆಟ......ಅದು ನೋಡಿ!?. ಇದೆಲ್ಲಾ ನೋಡಿದ್ರೆ ನಾವೇ ಎಲ್ಲೋ ತಪ್ಪು ಮಾಡುತ್ತಿದ್ದೇವೆ ಅಂತ ಅನ್ಸಲ್ವಾ ನಿಮ್ಗೆ....?. ಏನಂತೀರಿ.....

15 ಜನವರಿ 2008

ಸುಬ್ರಹ್ಮಣ್ಯದಲ್ಲಿ ಧರ್ಮಸಮ್ಮೇಳನ.....



ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರದಂದು ಸಂಜೆ 'ಧರ್ಮ ಸಮ್ಮೇಳನ ' ಕಾರ್ಯಕ್ರಮ ನಡೆಯಿತು.ಕಿರುಷಷ್ಟಿ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಾತ್ರೆ,ದೇವರ ಉತ್ಸವಗಳನ್ನು ಭಕ್ತರು ವೀಕ್ಷಿಸುತ್ತಿರುವಂತೆಯೇ ಧರ್ಮದ ಮರ್ಮವನ್ನು ಅರಿಯುವುದು,ಸಾಧು ಸಂತರ ಹಿತನುಡಿಗಳನ್ನು ಆಲಿಸುವುದು ಈ ಸಮ್ಮೇಳನದ ಉದ್ದೇಶ.

ಸೋಮವಾರದಂದು ನಡೆದ ಧರ್ಮಸಮ್ಮೇಳನದಲ್ಲಿ ಸಂಸ್ಕಾರ ಭಾರತಿಯ ಅಧ್ಯಕ್ಷ ಕುಂಬಳೆ ಸುಂದರ್ ರಾವ್ ಉಪನ್ಯಾಸ ನೀಡುತ್ತಾ ಎಲ್ಲವನ್ನೂ ಹಣದಿಂದಲೇ ಅಳೆಯುವ ಇಂದಿನ ಸಮಾಜದಲ್ಲಿ ಮನುಷ್ಯನ ಧಾರ್ಮಿಕ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮಟ- ಮಂದಿರಗಳು ನಮಗೆ ನ್ಯಾಯ,ಶಾಂತಿ ಒದಗಿಸುವ ಕೇಂದ್ರಗಳಾಗಿದ್ದವು ಇಂದು ಅದೇ ಮಟ-ಮಂದಿರಗಳೊಳಗೆ ಕಚ್ಚಾಟ ,ಅಧಿಕಾರಕ್ಕಾಗಿ ನ್ಯಾಯಾಲದ ಮೆಟ್ಟಿಲೇರುತ್ತಿರುವುದು ನಮ್ಮ ವಿಪರ್ಯಾಸ ಎಂದು ಹೇಳಿದ್ದು ಅತ್ಯಂತ ಸಕಾಲಿಕವಾಗಿತ್ತು.

ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಟದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭಾರತ ಕರ್ಮ ಭೂಮಿ ಏಕೆಂದರೆ ಇಲ್ಲಿ ಏಕೆಂದರೆ ಇಲ್ಲಿ ದೇಹ ನಿಷ್ಟ ಹಾಗೂ ಆತ್ಮ ನಿಷ್ಟ ಸಂಸ್ಕೃತಿಯಿಂದ ಜನಜೀವನ ಬೆಳೆದಿದೆ ಹಾಗಾಗಿಯೇ ಈ ದೇಶವು ಶಾಂತಿಯ ನೆಲ ಮಾತ್ರವಲ್ಲ ಇಡೀ ಪ್ರಪಂಚವು ಮನೆಯಾದರೆ ಭಾರತವು ದೇವರ ಮನೆ ಎಂದು ಹೇಳಿದ್ದು ಭಾರತದ ವೈಭವವನ್ನು ಮತ್ತೆ ನೆನಪಿಸಿತು.

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಭಟ್ ವಹಿಸಿದ್ದರು. ಯಥಾಪ್ರಕಾರ ನಾವು ...ನಮ್ಮದು...ಧರ್ಮ ...ಹಿಂದು ಎಂದು ವಿವರಿಸಿದರು.ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪರಮೇಶ್ವರಿ ಅಮ್ಮ,ದಾಸಪ್ಪ ಗೌಡ,ಸುಬ್ರಾಯ ಭಟ್, ಅಂಗಾರೆ, ಹಾಗು ಕೃಷ್ಣೇ ಗೌಡರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ ಸ್ವಾಗತಿಸಿದರು.ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ವರದಿ ವಾಚಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ದಿನೇಶ್ ಕಾಮತ್ ವಂದಿಸಿದರು.ಉಪನ್ಯಾಸಕ ಎನ್.ಎಸ್.ಗೋವಿಂದ ಕಾರ್ಯಕ್ರಮ ನಿರ್ವಹಿಸಿದರು.

ಸುಬ್ರಹ್ಮಣ್ಯದಲ್ಲಿ ಸಂಗೀತ ಕಾರ್ಯಕ್ರಮ..



ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಟಿ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ|ಶ್ಯಾಮಲಾ ಜಿ ಭಾವೆ
ಹಾಗು ಮ್ಯೆಸೂರು ನಾಗಮಣಿ ಶ್ರೀನಾಥ್ ರವರಿಂದ ಜುಗಲ್ ಬಂದಿ ಶಾಸ್ತ್ರೀಯ ಸಂಗೀತ್ ಕಾರ್ಯಕ್ರಮ ನಡೆಯಿತು.









ಇದೇ ಸಂದರ್ಭದಲ್ಲಿ ಕಿರುಷಷ್ಟಿ ರಥೋತ್ಸವ ನಡೆಯಿತು

14 ಜನವರಿ 2008

ಮೊದಲ ಮಾತು....

ನಲ್ಮೆಯ ನಮಸ್ಕಾರ...

ನನ್ನ ಬಹುದಿನದ ಕಲ್ಪನೆಯು ಮೊಳಕೆಯೊಡೆದಿದೆ.
ಇದನ್ನು ಪೋಷಿಸಿ ಬೆಳೆಸಬೇಕು.ನಾನು ಏನಾದರೂ ಬರೆಯಬೇಕು ಎನ್ನುವ ಒಂದು ಕಿಡಿ ಹೊತ್ತಿದ್ದು ಬಾಳಿಲದಲ್ಲಿ ೯ನೇ ತರಗತಿ ಓದುತ್ತಿದ್ದಾಗ. ಆಗ ನನಗೆ ತಕ್ಷಣ ದೊರೆತ ವೇದಿಕೆ ಶಾಲಾಭಿತ್ತಿಪತ್ರ. ಆ ಬಳಿಕ ಅದೇ ನನ್ನ ಬರಹದ ದಾರಿಗೆ ಮೆಟ್ಟಿಲಾಯಿತು.ಕಾಲೇಜು ದಿನಗಳಲ್ಲೂ ಭಿತ್ತಿಪತ್ರಿಕೆಗೆ ಬರೆದು ಆ ದಿನಗಳ ನಂತರ ಮತ್ತೆ ಪತ್ರಿಕೆಗಳಲ್ಲಿ ಬರೆಯುವ ಹಂಬಲವಿತ್ತು. ಅದಕ್ಕೆ ಸಕಾಲದಲ್ಲಿ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಆಗ ನನಗೆ ಮೊದಲು ಮಾರ್ಗದರ್ಶನವಿತ್ತವರು "ಕುಂಟಿನಿ ಗೋಪಾಲಣ್ಣ".ಆ ಬಳಿಕ ಪತ್ರಿಕಾ ಬರಹಗಾರನಾಗಿ, ಹವ್ಯಾಸಿ ಪತ್ರಕರ್ತನಾಗಿ ಬೆಳೆಯತೊಡಗಿದಾಗ ಸುಬ್ರಹ್ಮಣ್ಯದಲ್ಲಿ ಎನ್ ಎಸ್ ಗೋವಿಂದ, ಮಂಜುನಾಥ ಭಟ್, ನನ್ನ ಬೆಳವಣಿಗೆಗೆ ಸಹಕರಿಸಿದ್ದನ್ನು ಮರೆಯಲಾರೆ.

ನನಗೆ ಹೊಸತೊಂದು ಯೋಚಿಸುವ ಹುಚ್ಚು.ಆಗ ಕಾಣಿಸಿದ್ದು ಈ ಬ್ಲಾಗ್.ಮಧ್ಯರಾತ್ರಿಯವರೆಗೆ ಹುಡುಕಾಡಿದಾಗ ಸಿಕ್ಕಿದ್ದು "ಕುಂಟಿನಿ" ಬ್ಲಾಗ್,"ಹೊಳ್ಳರ" ಬ್ಲಾಗ್...... ಹೀಗೇ ..ಸಂಪರ್ಕಕ್ಕೆ ಸಿಕ್ಕಿದ್ದು ಕುಂಟಿನಿಯವರು.ಸುಬ್ರಹ್ಮಣ್ಯದ ವೆಂಕಟೇಶ್ ಅವರಿಂದ ಬ್ಲಾಗ್ ಬಗ್ಗೆ ಮಾಹಿತಿ ಪಡೆದು ರಚಿಸುವ ಮಾರ್ಗ ಕಂಡುಕೊಡೆ.ಕುಂಟಿನಿಯವರು ಅದಕ್ಕೆ ಕನ್ನಡದಲ್ಲಿ ಬರೆಯುವ ವಿಧಾನ ತಿಳಿಸಿದರು. ಮಂಜುನಾಥ ಭಟ್ "ಏನಾದರೂ ಮಾಡುತ್ತಲೇ ಇರುತ್ತಿಯ..." ಅಂದರು. ಗೋವಿಂದ " ಬ್ಲಾಗ್ ಮಾಡು .. ಮಾಡು " ಅಂದರು. ಮನೆಯಲ್ಲಿ "ರಾತ್ರಿ ಏಷ್ಟೋತ್ತಿರುತ್ತಿ" ಎಂದು ದಬಾಯಿಸಿದರು ಪ್ರೀತಿಯಿಂದ.... ಹೀಗೆ ಎಲ್ಲರ ಸಹಕಾರ,ಸಲಹೆಗಳು ನನಗೆ ಖುಷಿಕೊಟ್ಟಿತು.

ನಾನು ಬರಹಗಾರನಾಗಿ ಮೂಡಲು ನನ್ನ ಬರಹಗಳಿಗೆ ವೇದಿಕೆಯನ್ನು ಒದಗಿಸಿದ ಸುಳ್ಯದ ಪಯಸ್ವಿನಿ ಪತ್ರಿಕೆಗೂ , ಸುದ್ದಿಬಿಡುಗಡೆ ಪತ್ರಿಕೆಗೂ ನಾನು ಸದಾ ಋಣಿ. ನನಗೆ ಸಲಹೆ ಸೂಚನೆಗಳನ್ನಿತ್ತ ಸುಳ್ಯದ ನನ್ನೆಲ್ಲಾ ಪತ್ರಕರ್ತ ಮಿತ್ರರಿಗೆ ನನ್ನ ಹೃದಯಾಂತರಾಳದ ವಂದನೆಗಳು.ಪ್ರಸ್ತುತ ನನಗೆ ಅವಕಾಶ ಕಲ್ಪಿಸಿದ "ಹೊಸದಿಗಂತ"ಕ್ಕೂ ನಾನು ಋಣಿ.

ಈಗ ಇನ್ನೊಂದು ಮಜಲುನ್ನು ಕಂಡಿದ್ದೇನೆ ಅನುಭವವು ನಮ್ಮನ್ನು ಪರಿಪೂರ್ಣವಾಗಿಸುತ್ತವೆ ಎಂದು ನಂಬಿದವ ನಾನು.
ಈಗ ದಾರಿ ವಿಶಾಲವಾಗಿದೆ................. ಬದುಕಿನಲ್ಲಿ ಸಾಧಿಸುವುದು ಇನ್ನೂಯಿದೆ... ಅದಕ್ಕೆಲ್ಲಾ ಇದು ಸಹಕರಿಸ್ಬಬುದಲ್ವೇ...!? . ಇದರಲ್ಲಿ ಕಂಡ ಸತ್ಯಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ...
ಅಲ್ಲಿಯವರೆಗೆ... ನಮಸ್ಕಾರ....