05 ನವೆಂಬರ್ 2022

ಅಡಿಕೆ ಹಳದಿ ಎಲೆರೋಗದ ಸಭೆ | ಕಾರಣಗಳನ್ನು ಹುಡುಕುತ್ತಲೇ ಹೋದರೆ ಹೇಗೆ ? | ಒಂದು ಹೆಜ್ಜೆ ಮುಂದೆ ಹೋಗುವುದು ಯಾವಾಗ ? |

 


ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ನಡೆದ ಸೆಮಿನಾರ್‌ನಲ್ಲಿ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ನೆಲೆಯಲ್ಲಿ ಭಾಗವಹಿಸಿದೆ. ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿ ಕೃಷಿ ತಜ್ಞರು, ಎಲ್ಲಾ ಇಲಾಖೆಯ ವಿಜ್ಞಾನಿಗಳು ಜೊತೆಯಾದರು. ಕೆಲವು ವಿಭಾಗವು ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್‌ ಕಾರಣ ಎಂದಿದ್ದರು, ಅದನ್ನೇ ಈಗಲೂ ಹೇಳಲಾಗುತ್ತಿದೆ. ಈ ನಡುವೆಯೇ ಫೈಟೋಪ್ಲಾಸ್ಮಾ ಒಂದೇ ಕಾರಣವಲ್ಲ, ಗೊಬ್ಬರ ನಿರ್ವಹಣೆ, ಕೃಷಿ ನಿರ್ವಹಣೆಯೂ ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೆರಡೂ ಅಭಿಪ್ರಾಯಗಳು ಇನ್ನು ಒಂದಾಗಿ ಮುಂದೆ ಸಾಗಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಫೈಟೋಪ್ಲಾಸ್ಮಾಕ್ಕೆ ಪರಿಹಾರ ರೋಗ ನಿರೋಧಕ ತಳಿ ಅಭಿವೃದ್ಧಿ ಮಾತ್ರಾ. ಇದರ ಜೊತೆಗೆ ಗೊಬ್ಬರ ನಿರ್ವಹಣೆಯೂ ಅಗತ್ಯವಾಗಿದೆ.  ಈ ದಿಕ್ಕಿನಲ್ಲಿ ಎಲ್ಲಾ ಚಿಂತನೆಗಳು ಒಂದೇ ವೇದಿಕೆ ಅಡಿಗೆ ಈಗ ಬಂದವು. ಇದಕ್ಕಾಗಿ ಕ್ಯಾಂಪ್ಕೋಗೆ ಧನ್ಯವಾದ ಹೇಳಬೇಕು.

ಈಗ ಇರುವ ಪ್ರಶ್ನೆ ಎಂದರೆ, ಅಡಿಕೆ ಎಲೆಚುಕ್ಕಿ ರೋಗದಲ್ಲಿಯೂ ವಿಜ್ಞಾನಿಗಳು ಕಾರಣ ಪತ್ತೆ ಮಾಡಿದ್ದಾರೆ, ಅದಕ್ಕೆ ಬೇಕಾದ ಔಷಧಿಯನ್ನೂ ಹೇಳಿದ್ದಾರೆ. ಹಳದಿ ಎಲೆರೋಗದಲ್ಲಿಯೂ ಈಗ ಕಾರಣ ಸಿಕ್ಕಿದೆ, ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳು ಇನ್ನೂ ಸಿಕ್ಕಿಲ್ಲ. ದಾರಿಗಳು ಇದೆ, ಅವು ದೀರ್ಘ ಕಾಲಿಕ.  ಆದರೆ ಇದುವರೆಗೂ ಈ ದಾರಿ ಚಾಲನೆಗೆ ಬಂದಿಲ್ಲ. ವಿಜ್ಞಾನಿಗಳ ಕೆಲಸ ರೋಗದ ಪತ್ತೆ ಹಾಗೂ ಅದಕ್ಕೆ ಪರಿಹಾರ ಮಾರ್ಗ. ಪರಿಹಾರಗಳನ್ನು ಅನುಷ್ಟಾನ ಮಾಡುವ ಕೆಲಸ ಸಂಸ್ಥೆಗಳಿಗೆ, ಸರ್ಕಾರಗಳಿಗೆ, ಆಡಳಿತಕ್ಕೆ.

ಅಡಿಕೆ ಬೆಳೆಗಾರರಿಗೆ ಈಗ ಬೇಕಾದ್ದು ಅಡಿಕೆ ಹಳದಿರೋಗಕ್ಕೆ ಪರಿಹಾರ ಇದೆಯೋ ಇಲ್ಲವೋ ? ಇದ್ದರೆ ಏನು ಮಾಡಬಹುದು ? ಇಲ್ಲದೇ ಇದ್ದರೆ ಬದುಕಿಗೆ ಪರ್ಯಾಯ ಏನು ? ಇದಿಷ್ಟೇ ಈಗ ರೈತರು ಬಯಸುವುದು. ಇದರಲ್ಲಿ ವಿಳಂಬ ಆದಷ್ಟು ಕೃಷಿಕರಿಗೇ ಸಮಸ್ಯೆಯಾಗುತ್ತದೆ. ಹೀಗಾಗಿ ಯಾವ ಸಭೆಗಳು ನಡೆದರೂ ಅತಿ ಶೀಘ್ರದಲ್ಲಿಯೇ ಉತ್ತರವೂ ಸಿಗಬೇಕಿದೆ. ಮುಂದೆ ಅಡಿಕೆ ಸಮಸ್ಯೆಯ ಬಗ್ಗೆ ಇಷ್ಟರಲ್ಲೇ ಚರ್ಚಿಸುತ್ತಾ, ಸಂಶೋಧನೆ ಮಾಡುತ್ತಾ ಕೂತರೆ ಹೇಗೆ ? ಅಡಿಕೆ ಹಾನಿಕಾರಕ, ಅಡಿಕೆ ಆಮದು, ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಭವಿಷ್ಯ ಹೀಗೇ ಹಲವಾರು ಸಂಗತಿಗಳು ಮುಂದಿನ ದಿನಗಳಲ್ಲಿ ಚರ್ಚೆಯ ವಿಷಯ ಆಗಲಿದೆ. ಈ ಬಗ್ಗೆ ಸಾಮಾಹಿಕ ಚಿಂತನೆ, ಚರ್ಚೆ ನಡೆಯಬೇಕಾಗುತ್ತದೆ. ಇದರ ಜೊತೆಗೇ ಅಡಿಕೆ ಭವಿಷ್ಯದ ಬಗ್ಗೆಯೇ ಗಂಭೀರವಾದ ಚಿಂತನೆ ಅಗತ್ಯ ಇದೆ. 

ನಾವು ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇದೆಲ್ಲಾ ಪಿಪಿಟಿ ನೋಡಿ, ಕೇಳಿ ಸಾಕಾಗಿದೆ. ಆದರೆ ಅದಕ್ಕಿಂತ ಆಚೆಗೆ ಯಾವ ಫಲಿತಾಂಶವೂ, ಪ್ರಯೋಗದ ಫಲಿತಾಂಶವೂ ಲಭ್ಯವಾಗುತ್ತಿಲ್ಲ. ಇನ್ನೂ ಸಂಶೋಧನೆಯ ಹಾದಿಯಲ್ಲಿಯೇ ಉಳಿದುಕೊಂಡರೆ ಹೇಗೆ? ಹಳದಿ ಎಲೆರೋಗ ಕಾಣಿಸಿಕೊಂಡು ವರ್ಷಗಳು ಅನೇಕ ಉರುಳಿದರೂ ಪರಿಹಾರ ಕಾಣದೇ ಇರುವುದು  ಈ ದೇಶ ಗಂಭೀರ ವಿಷಯ ಆಗಬೇಕು. ಪ್ರತೀ ಬಾರಿಯೂ ನಾವು ಹಳದಿ ಎಲೆರೋಗದ ಪಿಪಿಟಿ ನೋಡಿ, ಕಾರಣ ಪೈಟೋಪ್ಲಾಸ್ಮಾ ಎಂದು ತಿಳಿದುಕೊಂಡು ಬಂದರೆ ಹೇಗೆ? ಇನ್ನು ಒಂದು ಹೆಜ್ಜೆಯಾದರೂ ಮುಂದೆ ಹೋಗಬೇಕು. ನಿನ್ನೆಯ ಸಭೆಯಲ್ಲೂ ಕಾರಣಗಳನ್ನು ಎಲ್ಲರೂ ಹೇಳಿದರು. ಪರಿಹಾರದ ಕಡೆಗೆ ಬರುವಾಗ ಮೌನವಾಗುತ್ತದೆ, ಚರ್ಚೆ ಹೆಚ್ಚಾಗುತ್ತದೆ, ಟೀಕೆ, ವಿರೋಧ, ಅಸಮಾಧಾನಗಳು ಕಾಣುತ್ತದೆ. ಇನ್ನು ಅನುದಾನಗಳು ಸಿಗುತ್ತವೆ ಎಂದಾಗ ಇನ್ನೊಂದಿಷ್ಟು ಪ್ರಾಜೆಕ್ಟ್‌ ಗಳು ತಯಾರು ಮಾಡುವವರು ಇದ್ದಾರೆ. ಇದರಿಂದ ಕೃಷಿಕರಿಗೇ ಸಮಸ್ಯೆ ಹೊರತು ಬೇರೆ ಪ್ರಯೋಜನವೇ ಇಲ್ಲ. ಎಲ್ಲಾ ಪರಿಹಾರ ಮಾರ್ಗಗಳೂ ದೀರ್ಘ ಕಾಲಿಕ, ಕೊರೋನಾ ಮಾದರಿಯಲ್ಲಿ ತಕ್ಷಣದ ಪರಿಹಾರಗಳು ಇಲ್ಲವೇ ಇಲ್ಲ.  

ಅಡಿಕೆಯ ಹಳದಿ ಎಲೆರೋಗದ ಬಗ್ಗೆ 2000 ಇಸವಿಯ ನಂತರ ಯಾವ ಸಂಶೋಧನೆಗಳು ನಡೆದಿಲ್ಲ ಎನ್ನುವುದು ನಿನ್ನೆಯ ಸಭೆಯಲ್ಲಿ ಕೊಟ್ಟ ಮಾಹಿತಿ ಪತ್ರದಲ್ಲಿ ಉಲ್ಲೇಖ ಇತ್ತು. ಈಚೆಗೆ ಸರ್ಕಾರವೂ ಅಡಿಕೆ ಎಂದರೆ ಕಡತಗಳನ್ನು ಬದಿಗೆ ಸರಿಸುತ್ತಿದೆ.ಏಕೆಂದರೆ ಅಡಿಕೆ ಹಾನಿಕಾರಕ ಎಂಬ ಕಾರಣದಿಂದ. 

ಈಗ ನಡೆದ ಸಭೆಯಲ್ಲೂ ಎಲ್ಲಾ ವಿಜ್ಞಾನಿಗಳು ಪಿಪಿಟಿ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಇದುವರೆಗೆ ನೀಡಿದ ಎಲ್ಲಾ ಮಾಹಿತಿಗಳನ್ನೂ ಮತ್ತೆ ಹೇಳಿದ್ದಾರೆ.   ಇನ್ನು ಅದರ ಫಾಲೋಅಪ್‌ ಮಾಡುವ ಕೆಲಸ ಮಾತ್ರಾ. ಅದರ ನೇತೃತ್ವ ಇರುವುದು ಈಗ ಅಷ್ಟೇ.

ಇದರ ಜೊತೆಗೆ ಈಚೆಗೆ ನನಗೆ ಅನಿಸುತ್ತಿದೆ, ಅಡಿಕೆ ಹಳದಿ ಎಲೆರೋಗ, ಅಡಿಕೆ ಎಲೆಚುಕ್ಕಿ ರೋಗ ಸೇರಿದಂತೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೃಷಿಕರೆಲ್ಲಾ ಸಂಘಟಿತರಾಗಲೇಬೇಕಿದೆ. ಇಲ್ಲದಿದ್ದರೆ ಇನ್ನೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈಗಾಗಲೇ ಸಂಘಟನೆಯ ನೆಲೆಯಲ್ಲಿ ನಾವೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸುತ್ತಿದ್ದೇವೆ. ಎಲ್ಲರೂ ಜೊತೆಯಾದರೆ ಪರಿಹಾರ ಬೇಗನೆ ಸಾಧ್ಯವಿದೆ. ಚಿಂತನೆಗಳಲ್ಲಿ ವ್ಯತ್ಯಾಸ ಇರಬಹುದು, ಟೀಕೆಗಳು ಇರಬಹುದು, ಖಾರವಾಗಿ ಹೇಳುವವರೂ ಇದ್ದಾರೆ, ವಿಷಾದಿಸುವವರೂ ಇರುತ್ತಾರೆ, ಹತಾಶೆಗೆ ಒಳಗಾದವರೂ ಇದ್ದಾರೆ. ಇವರೆಲ್ಲರೂ ಜೊತೆ ಇದ್ದರೆ ಮಾತ್ರವೇ ಬಹುಬೇಗನೆ ಪರಿಹಾರದ ಮಾರ್ಗ ಸಾಧ್ಯವಿದೆ.




02 ನವೆಂಬರ್ 2022

100 ಕಿಮೀ ದೂರದಿಂದ "ಪ್ರೀತಿ"ಯ ಹೋಳಿಗೆ ಬಂತು...!

 

ಸುಮಾರು 100 ಕಿಮೀ ದೂರದಿಂದ ನಮ್ಮ ಮನೆಗೆ 20 ಹೋಳಿಗೆ ಹಾಗೂ 4 ತಿರುಪತಿ ಲಾಡು ಬಂತು..!.‌ , ವಿಷಯ ಹೋಳಿಗೆಯದ್ದು ಅಲ್ಲ ಲಾಡಿನದ್ದೂ ಅಲ್ಲ. ಅದು ಪ್ರೀತಿಯದ್ದು, ಸ್ನೇಹದ್ದು. ಹೀಗಾಗಿ ಈ ಸಂಬಂಧಗಳನ್ನು, ಸ್ನೇಹವನ್ನು ನಾವು ಯಾವ ಲೆಕ್ಕದಲ್ಲಿಯೂ ಅಳೆಯುವುದಕ್ಕೆ ಸಾಧ್ಯವಿಲ್ಲ.

ವಿಷಯ ಇಷ್ಟು....., ಇಂದು ಪತ್ನಿಯ ತವರು ಮನೆಯಿಂದ ಮಾವ ಹೋಳಿಗೆಯನ್ನು ಪ್ಯಾಕ್‌ ಮಾಡಿ ಕಳುಹಿಸಿದರು. ಇದು ವಿಷಯ ಅಲ್ಲ. ಎಲ್ಲರಿಗೂ ಇಂತಹ ಅನುಭವವಿದೆ. ನಾವೂ ಕೂಡಾ ಇದನ್ನೇ ಮಾಡುತ್ತೇವೆ, ಮಾಡಿದ್ದೇವೆ ಕೂಡಾ. ನನ್ನ ಅಮ್ಮನಿಗೂ ಇದೆಲ್ಲಾ ಬಹಳ ಅಚ್ಚುಮೆಚ್ಚು.  ಬಂದವರಿಗೆ ಹಪ್ಪಳ, ಜೇನು, ಹಲಸಿನ ಹಣ್ಣು, ರಂಬುಟಾನ್‌.... ಹೀಗೇ....!. ಮನೆಯಲ್ಲಿ ಏನಿದೆಯೋ ಅದು ಕೊಡುತ್ತಿದ್ದರು. ಕೆಲವು ಸಲ 4 ರಂಬುಟಾನ್‌ ನನ್ನ ತಂಗಿಯ ಮನೆಗೆ ನನ್ನ ಬಳಿ ಕೊಟ್ಟು ಕಳುಹಿಸಿದ್ದೂ ಇದೆ. ಅದು ಪ್ರೀತಿ ಅಷ್ಟೇ. ಇದರ ಹಿಂದಿರುವ ಭಾವದ ಬಗ್ಗೆ ಧ್ವನಿಸಬೇಕು.

ಇಲ್ಲಿ ಒಂದು ಸಂಬಂಧ, ಒಂದು ಪ್ರೀತಿ, ಒಂದು ಸ್ನೇಹದ‌  ವಿಷಯಗಳು ಹೆಚ್ಚು ಮಹತ್ವ ಪಡೆಯುತ್ತವೆ. ಇಲ್ಲಿ ಹೋಳಿಗೆ ದುಡ್ಡು ಕೊಟ್ಟರೆ ಖರೀದಿ ಮಾಡಬಹುದು, ಆದರೆ ಪ್ರೀತಿಯನ್ನು, ಸ್ನೇಹವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅರ್ಥವಾಗಬೇಕಾದ ವಿಷಯ ಅಷ್ಟೇ. 

ಕಳೆದ ಬಾರಿ ಪುತ್ತೂರಿಗೆ ಹೋಳಿಗೆಯನ್ನು ಮಾವ  ಕಳುಹಿಸಿದ್ದರು, ನಾನು  ಆ ದಿನ ಪುತ್ತೂರಿನಲ್ಲಿ ಯಾವ ಕೆಲಸ ಇಲ್ಲದಿದ್ದರೂ ಕಾರಿನಲ್ಲಿ ಹೋಗಿ 15 ಹೋಳಿಗೆಯ ಪಾರ್ಸೆಲ್ ಪಡೆದು ಹೋಟೆಲ್‌ನಲ್ಲಿ ಚಹಾ ಕುಡಿದು ವಾಪಾಸ್‌ ಮನೆಗೆ ಬಂದು ಹೋಳಿಗೆ ಸವಿದಿದ್ದೆವು. ಇದರ ಖರ್ಚು ಲೆಕ್ಕ ಹಾಕಿದರೆ ಒಂದು ಹೋಳಿಗೆಯ ಅಸಲು 50 ರೂಪಾಯಿಗಿಂತ ಹೆಚ್ಚು ಆದೀತು. ಆದರೆ ಆ ಹೋಳಿಗೆಯ ಹಿಂದೆ ಇರುವ ಭಾವ ಹಾಗೂ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 

ಅನೇಕ ಸಲ ಇಂತಹದ್ದಕ್ಕೆಲ್ಲಾ ಬೆಲೆ ಇಲ್ಲದೆಯೇ ಕೇವಲ ಹಣ ಹಾಗೂ ಹಣದ ಹಿಂದಿನ ದಾರಿಗಳ ಬಗ್ಗೆ ಮಾತ್ರವೇ ಯೋಚನೆ ಮಾಡಿದರೆ, ಯಾವ ಭಾವವೂ ಇಲ್ಲದೆ ಶುಷ್ಕವಾಗಿರಬೇಕಾಗುತ್ತದೆ. ಇದು ಇಡೀ ಸಂಬಂಧದಲ್ಲಿ ಸೃಷ್ಟಿ ಮಾಡುವ ತಲ್ಲಣ ಬಹುದೊಡ್ಡದು. ‌ಅನೇಕ ಸಲ ಈ ತಲ್ಲಣಗಳನ್ನು ಮೌನವಾಗಿ ಎದುರಿಸಬೇಕಾಗುತ್ತದೆ. ಏಕೆಂದರೆ ಭಾವವೇ ಇಲ್ಲದ ಶುಷ್ಕದ ಜೊತೆ ಗುದ್ದಾಡಿ ಏನು ಪ್ರಯೋಜನ?. 

ಅತೀ ಹತ್ತಿರದವರಿಂದ ಎಲ್ಲರೂ ಬಯಸುವುದು  ಸ್ನೇಹ ಹಾಗೂ ಪ್ರೀತಿ ಅಷ್ಟೇ. ಅದು ಶುಷ್ಕವಾಗುತ್ತಾ ಹೋದಂತೆಯೇ ಬದುಕು ಸಡಿಲವಾಗುತ್ತದೆ. ಒಂಟಿಯಾಗಬೇಕಾಗುತ್ತದೆ. ಸ್ನೇಹ, ಸಂಬಂಧ ಎಂಬುದು  ದಿನವೂ ಮಾತನಾಡಿಕೊಳ್ಳುವ ವಿಷಯವೂ ಅಲ್ಲ, ಆದರೆ ಆಪತ್ಕಾಲದಲ್ಲಿ ನೆರವಾಗುವ, ನೆರವಿಗೆ ಧ್ವನಿಯಾಗುವ , ಪ್ರತಿಧ್ವನಿಯಾಗುವ ವಿಷಯ ಅಷ್ಟೇ. ಎಲ್ಲಾ ಬಾರಿಯೂ ಎಲ್ಲಾ ಸಂದರ್ಭದಲ್ಲಿಯೂ ನೆರವಿಗೆ ಬಯಸುವುದೂ ಸರಿಯಲ್ಲ. ಅದು ಸಾಧ್ಯವೂ ಇಲ್ಲ. ಇದುವೇ ಪ್ರೀತಿ. ಪ್ರೀತಿ, ಸಂಬಂಧ ಎಂದರೆ ಅಧಿಕಾರವೂ ಅಲ್ಲ, ದುರ್ಬಳಕೆಯೂ ಅಲ್ಲ, ಬಳಕೆಯೂ ಅಲ್ಲ.

ಸ್ನೇಹ ಎಂದರೆ ಹೀಗೆ ಎಂದೂ ವಿವರಿಸುವುದು  ಕಷ್ಟ. ಆದರೆ ಹಣದ ನಡುವೆ, ಲೆಕ್ಕಾಚಾರದ ನಡುವೆ ಸಂಬಂಧ ಬೆಸೆಯದೆ ಎನ್ನುವುದನ್ನು  ಹೇಳಬಹುದು. ಯಾವ ಎಣಿಕೆಯೂ ಇಲ್ಲದೆಯೇ ಹೋಳಿಗೆ ತಲುಪಿಸಲೇ ಪುತ್ತೂರಿಗೆ ಬಂದ ಮಾವ, ಹೋಳಿಗೆ ತಲುಪಿಸಲು ಪಟ್ಟ ಸಾಹಸ... ಮನೆಯಲ್ಲಿ ಕಾತರದಿಂದ ಕಾಯುವ ಅವರ ಮಗಳು...ನನ್ನ ಪತ್ನಿ.....!  ಇದೆರಡೂ ಇರುವುದು  ಹಣದ ಮೇಲಲ್ಲ, ಪ್ರೀತಿಯ ಮೇಲೆ.... , ಮಗಳ ಮೇಲಿನ ಅವರ ಪ್ರೀತಿಗೆ ನಾನ್ಯಾಕೆ ಕೊಂಕು, ಅಡ್ಡಿ ಮಾಡಲಿ, ನಾನೂ ಸಹಕಾರಿಯಾದೆ. ಹೋಳಿಗೆಗೆ ಆಗುವ ಖರ್ಚು ನೋಡಲಿಲ್ಲ, ಪ್ರೀತಿಯನ್ನು ದಾಟಿಸಿದೆ ಅಷ್ಟೇ.

ಈ ಬಾರಿ 50 ಕಿಮೀ ದೂರ ಬಂದ ಮಾವ ಪುತ್ತೂರಿನಿಂದ ಪ್ಯಾಕ್‌ ಮಾಡಿ ಪಾರ್ಸೆಲ್‌ ಹಾಕಿದರು, ನಾನು ಬಸ್ಸಿನಿಂದ ಪಡೆದುಕೊಂಡೆ. ಈ ಹೋಳಿಗೆ ಒಂದು ಸಂಬಂಧ ಸ್ಥರವನ್ನು ಎತ್ತಿ ತೋರಿಸಿತು ಅಷ್ಟೇ. ಮನುಷ್ಯ ಬದುಕಿನಲ್ಲಿ ಬೇಕಾದ್ದು ಹಾಗೂ ಉಳಿಯುವುದು ಇದೇ ತಾನೆ..

ಪರಮಮಿತ್ರ ವೇಣುಗೋಪಾಲ ಶೇರ ಹೇಳುತ್ತಾರೆ, ಮಾರಾಯ  ಸ್ನೇಹ ಎನ್ನುವುದು ಬಳಕೆಗೂ ಅಲ್ಲ, ದುರ್ಬಳಕೆಗೂ ಅಲ್ಲ.. ಅದು ಅನುಭವಿಸಲು ಬದುಕಿನ ಸಂತಸ ಹೆಚ್ಚಿಸಲು...

 

27 ಅಕ್ಟೋಬರ್ 2022

ಅಮ್ಮನಿಲ್ಲದ ದೀಪಾವಳಿ |

 


ಈ ಬಾರಿ ನಮಗೆ ದೀಪಾವಳಿ ಇಲ್ಲ. ಅಮ್ಮನಿಲ್ಲದ ಈ ದೀಪಾವಳಿ ಆಚರಿಸುವುದಾದರೂ ಹೇಗೆ? ಹಾಗಿದ್ದರೂ ಕೆಲವು ಜವಾಬ್ದಾರಿಗಳ ದೀಪ ಬೆಳಗಬೇಕಿತ್ತು. 

ಪ್ರತೀ ವರ್ಷ ಅಮ್ಮನೇ ನನಗೆ ದೀಪಾವಳಿ. ಅಮ್ಮನೇ ನನಗೆ ಬೆಳಕು. ದೀಪಾವಳಿ ಹಾಗೂ ಇತರ ಎಲ್ಲಾ ಹಬ್ಬಗಳಲ್ಲೂ ಅಮ್ಮನೇ ಹಾಗೆ ಮಾಡು, ಹೀಗೆ ಮಾಡು ಎನ್ನುತ್ತಿದ್ದರು. ಈ ಬಾರಿ ಹಾಗೆ ಮಾಡು .. ಹೀಗೆ ಮಾಡು ಎಂದು ಹೇಳುವ ಮಾತುಗಳಿಲ್ಲ.ಅಮ್ಮನಿಲ್ಲ ದೀಪಾವಳಿ ಮಾತ್ರವಲ್ಲ ಯಾವ ಹಬ್ಬವೂ ಈ ವರ್ಷ ನನಗಿಲ್ಲ.

ಮಕ್ಕಳಿಗೆ ದೀಪಾವಳಿ ಖುಷಿ. ಈ ಖುಷಿಗೆ ಬೆಳಕಾಗಬೇಕಲ್ಲ. ಅಪ್ಪನೂ ಇಲ್ಲದ .. ಅಮ್ಮನೂ ಇಲ್ಲದ ದೀಪಾವಳಿ ನನಗೆ. ಆದರೆ ಮಕ್ಕಳಿಗೆ ಕತ್ತಲು ಕಳೆದು ಬೆಳಕಾಗುವ ದೀಪಾವಳಿ. ಪಟಾಕಿ ಸಿಡಿಸುವ ದೀಪಾವಳಿ....  ನನಗಿಲ್ಲದ ದೀಪಾವಳಿ,.... ಮಕ್ಕಳಿಗೆ ಸಂಭ್ರಮದ ದೀಪಾವಳಿ.... ಈ ಎರಡನ್ನೂ ಹೊಂದಿಸಿಕೊಳ್ಳುವುದು ಹೇಗೆ?. ಒಂದು ಇಡೀ ಕೊಂಡಿ ಕಳಚಿ ಇನ್ನೊಂದು ಕೊಂಡಿಯನ್ನು ಹಿಡಿಯುವ , ಮುನ್ನಡೆಸುವ ಜವಾಬ್ದಾರಿ. ಹೇಳಿದಷ್ಟು, ಬರೆದಷ್ಟು ಸುಲಭವಲ್ಲ. ಎಚ್ಚರಿಸುವವ ಇಲ್ಲದೆಯೇ ಎಚ್ಚರವಾಗಿರಬೇಕು. ಎಚ್ಚರಿಸುವವನು ಇಲ್ಲದೆ ಬಾಳ ನೌಕೆಯ ಸಾರಥಿಯಾಗಬೇಕು.

ಅಪ್ಪನೂ ಇಲ್ಲದ ಮೇಲೆ ದೀಪಾವಳಿ ಇತ್ತು. ಆದರೆ ಎಚ್ಚರಿಸುವ ಅಮ್ಮ ಇದ್ದರು. ಆಗಾಗ ಎಚ್ಚರಿಸುತ್ತಿದ್ದರು. ಎಲ್ಲಿ ಹಳಿ ತಪ್ಪುತ್ತದೋ ನೋಡಿ ಎಚ್ಚರಿಸುತ್ತಿದ್ದರು. ಹೆಚ್ಚು ಬರೆದರೂ ಅದೇನು ಅಂತ ಕೇಳುತ್ತಿದ್ದರು.  ಆಗಾಗ ನನ್ನ ಲೆಕ್ಕ ಪುಸ್ತಕವನ್ನು ನೋಡಿ ಹೇಳುತ್ತಿದ್ದರು.. ಕೇಳುತ್ತಿದ್ದರು. "ಈ ಲೋಕದಲ್ಲಿ ಇರುವುದೆಲ್ಲಾ ಉಪಯೋಗಕ್ಕೆ ಇರುವುದು , ಆದರೆ ನಮಗೆ ಯಾವುದು ಅಗತ್ಯ ಎನ್ನುವುದು ನಮಗೆ ತಿಳಿದಿರಬೇಕು" ಎಂದು ಆಗಾಗ ಎಚ್ಚರಿಸುತ್ತಿದ್ದರು. ದೀಪಾವಳಿಯ ಪಟಾಕಿಯ ಭರಾಟೆಗೆ ನನಗೆ ನೆನಪಾದ್ದು ಈ ಮಾತು. ಇದೇ ಪಾಠ ಮಕ್ಕಳಿಗೂ ಹೇಳಿದೆ, ಪಟಾಕಿ ಬೇಕು.. ಸಂಭ್ರಮಕ್ಕೆ, ಆದರೆ ಎಷ್ಟು ಬೇಕು... ಅಂತ ಅಮ್ಮನ ಮಾತನ್ನು ಸ್ವಲ್ಪ ಡೈಲ್ಯೂಟ್‌ ಮಾಡಿ ಹೇಳುತ್ತಿದ್ದೆ. ಈಗ ನನಗೆ ಹೇಳುವವರು ಯಾರು ? ಕೇಳುವವರು ಯಾರು ?. ಅಮ್ಮ ಇಲ್ಲದ ಮೇಲೆ  ಮನಸ್ಸಿನ ಓಟದಲ್ಲಿ ಅನೇಕ ಬಾರಿ ಎಡವಿದ್ದೇನೆ,  ನಿಧಾನವಾಗಿ ಕುಳಿತು, ಅಮ್ಮ ಹೇಳಿದ್ದು ನೆನಪಿಸಿಕೊಳ್ಳುತ್ತಾ ಸಾವರಿಸಿಕೊಂಡು ತಪ್ಪನ್ನು ಸರಿ ಮಾಡುತ್ತೇನೆ. 

ಈಚೆಗೆ ಯಾರಿಗೂ ಹೆಚ್ಚು ಕರೆ ಮಾಡುತ್ತಿಲ್ಲ, ಆದರೂ ಆಗಾಗ ವಾಟ್ಸಪ್‌ ನನ್ನನ್ನು ಕೆಣಕಿಸುತ್ತದೆ, ಯಾವುದೋ ಪೋಸ್ಟ್‌ ನೋಡಿದಾಗ ಕೆರಳಿಸುತ್ತದೆ, ವಿಷಾದವಾಗುತ್ತದೆ, ಪ್ರತಿಕ್ರಿಯೆ ನೀಡಲೇಬೇಕು ಎಂದು ಅನಿಸಿ ಬಿಡುತ್ತದೆ. ಅದನ್ನು ಹಾಕಿಯೂ ಆದ ಮೇಲೆ ಚರ್ಚೆಯೂ ಆಗುತ್ತದೆ... ಇದೆಲ್ಲಾ ಬೇಕಿತ್ತಾ ಅಂತ ಅಮ್ಮನ ಮಾತುಗಳು ನೆನಪಾಗುತ್ತದೆ, "ಜಗಳ ಯಾಕೆ, ಚರ್ಚೆ ಯಾಕೆ, ಆಗದಿದ್ದರೆ ಸುಮ್ಮನೆ ಇದ್ದು ಬಿಡು. "

ಅಮ್ಮನ ನೆನಪುಗಳು ಸದಾ ಕಾಡುತ್ತದೆ. ಅಪ್ಪನೂ ಆಗಾಗ ಎಚ್ಚರಿಸುತ್ತಾರೆ. ಅಪ್ಪ ಇಲ್ಲವಾದ ಮೇಲೆ ಅಮ್ಮ ಹಾಗಲ್ಲ ಹೀಗೆ ಎಂದರು. ಅನೇಕ ಬಾರಿ ನಮಗೆಷ್ಟೇ ಮಾಹಿತಿ ಇದ್ದರೂ ಅದರ ಪ್ರಾಕ್ಟಿಕಲ್‌ ಅನುಭವ ಬೇರೆಯೇ. ಅದು ಅಮ್ಮನೇ ಕೊಡುತ್ತಿದ್ದರು.

ಈಗೀಗ ಕೆಲವು ಸಮಯ ತಲೆಯೊಳಗೆ ಖಾಲಿಯಾಗಿ ಬಿಡುತ್ತದೆ, ಬ್ಲಾಂಕ್‌ ಆಗಿಬಿಡುತ್ತದೆ. ಕೃಷಿಯಲ್ಲಿ ಸಾಕಷ್ಟು ಕೆಲಸ ಇದ್ದರೂ ಮುಂದೆ ಯಾವುದು ಅಂತ ತಿಳಿದಿದ್ದರೂ ತಕ್ಷಣಕ್ಕೆ ಖಾಲಿಯಾಗಿಬಿಡುತ್ತದೆ. ಈಗ ಅದೆಲ್ಲಾ ಸುಧಾರಿಸುವ ಹಂತಕ್ಕೆ ಬಂದಿದೆ. ದೀಪಾವಳಿಯ ಸಮಯದಲ್ಲಿ ಅಮ್ಮ ನೆನಪಾದರು.

ದೀಪಾವಳಿಯ ಸಡಗರ ಎಲ್ಲೆಡೆಯೂ ಕೇಳಿತ್ತು. ಮಕ್ಕಳಿಗೂ ಖುಷಿಯಾಗಿತ್ತು. ಸದ್ದಿಲ್ಲದೆ ಮಧ್ಯಾಹ್ನ ಪತ್ನಿ, ಮಕ್ಕಳ ಜೊತೆ ತಂಗಿಯ ಮನೆಗೆ ಹೋದೆ, ಊಟ ಮಾಡಿದೆ, ನಿದ್ದೆ ಮಾಡಿದೆ ಸುಖಾ ಸುಮ್ಮನೆ ಬಂದೆ. ಮಕ್ಕಳು ಆಟವಾಡಿದರು, ಖುಷಿ ಪಟ್ಟರು. ಎಲ್ಲಾ ಕೆಲಸಗಳ ನಡುವೆಯೇ ಖಾಲಿಯಾಗುವ ಮನಸ್ಸುಗಳನ್ನು ಮರುಭರ್ತಿ ಹೇಗೆ ? ಎಂದು ಯೋಚಿಸುವ ಕಾಲ ಇದಲ್ಲ. ಮುಂದಿನ ಕೊಂಡಿಗಳಿಗೆ ದಾರಿದೀಪವಾಗಬೇಕು. ಅದು ಈ ಬಾರಿ ಆಚರಣೆಯೇ ಇಲ್ಲದ ದೀಪಾವಳಿಯ ನಡುವೆ ದೀಪವಾಗಬೇಕು. ಸುಲಭ ಇಲ್ಲ........

13 ಅಕ್ಟೋಬರ್ 2022

#ಅಮ್ಮ ಹೇಳಿದ ಸತ್ಯ | ಈ ಜಗತ್ತಿನೊಳಗೆ ಎಲ್ಲವೂ ಬಹಳ ನಿಗೂಢ |

ಕಾಕತಾಳೀಯ ಎನ್ನುವುದೋ ಅಥವಾ ಏನೋ ಸೂಕ್ಷ್ಮವಾದ ಸಂಗತಿ ಇದೆಯೋ? ಮೌನವಾಗಿ ಕುಳಿತಾಗ ಯೋಚನೆಗಳು ಸಾಗುತ್ತವೆ... 



ನನ್ನ ಅಪ್ಪನನ್ನು 2018 ಆಗಸ್ಟ್ 4 ರಂದು‌ ಹೃದಯಾಘಾತದಿಂದ ಕಳೆದುಕೊಂಡೆ. ಅಪ್ಪ ಇಲ್ಲವಾಗುವ ಸುಮಾರು ಒಂದು ವರ್ಷದ ಹಿಂದೆ‌ ಹೀಗೇ ಜಾತಕ ನೋಡುತ್ತಾ ಅಪ್ಪ ಹೇಳಿದ್ದರು," ನನಗೆ ಇನ್ನು ಒಂದೇ ವರ್ಷ ಆಯಸ್ಸು, ಅದಾಗಿ ಸರಿಯಾಗಿ 4 ವರ್ಷಕ್ಕೆ ಅಮ್ಮನೂ ಬರುತ್ತಾರೆ. ನೀನು ಎಚ್ಚರವಾಗಿರು" ಎಂದಿದ್ದರು. ಆಗ ನಾನು ಅಮ್ಮನ ಜೊತೆ  ಹೇಳಿದ್ದೆ," ಇದೆಲ್ಲಾ ಮರ್ಲು, ಸುಮ್ಮನಿರಿ, ಅಪ್ಪ ಯಾಕೆ ಹೀಗೆ ಹೇಳುತ್ತಾರೆ" ಎಂದಿದ್ದೆ. ಅಮ್ಮನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 

ಹಾಗಿದ್ದರೂ ನಮ್ಮ ಪ್ಯಾಮಿಲಿ ವೈದ್ಯರ ಬಳಿ ಅಪ್ಪನ ಚೆಕ್ ಅಪ್ ಮಾಡುತ್ತಾ ಹೆಚ್ಚಿನ ಚೆಕ್ ಅಪ್  ಮಾಡಿಸಲು ಆಸಕ್ತನಾಗಿದ್ದೆ, ಇದಕ್ಕಾಗಿಯೇ ಪ್ಯಾಮಿಲಿ ವೈದ್ಯರೇ ಅಪ್ಪನಿಗೆ ಹೇಳಿಸುವ ವ್ಯವಸ್ಥೆ ಮಾಡಿದ್ದೆ. ನಮ್ಮ ವೈದ್ಯರು ಹೇಳಿದ್ದಕ್ಕೆ, ಅಪ್ಪ ನಮ್ಮ ವೈದ್ಯರಿಗೆ ಹೇಳಿದ್ದು, "ಇಲ್ಲಿಯೇ ಸಾಕು, ಇದಕ್ಕಿಂತ ಆ ಕಡೆ ಹೋದರೆ ವಾಪಾಸ್ ಬರಲು ಇಲ್ಲ. ಬರುವುದು ತಪ್ಪಿಸಲು ಆಗದು ಎಂದಿದ್ದರು." ಅದಾಗಿ ಒಂದು ವರ್ಷದೊಳಗಡೆ ಅಪ್ಪ ಹೃದಯಾಘಾತದಿಂದ ಇಲ್ಲವಾದರು.

ಅಮ್ಮನ ಧೈರ್ಯ ಇತ್ತು. ಅಮ್ಮನ ಆರೋಗ್ಯ ಸುಧಾರಣೆಗೆ ನಿರಂತರ ಓಡಾಟ ಇದ್ದೇ ಇತ್ತು. ಏನು ಬೇಕೋ ಅದು, ಹೇಗೆ ಬೇಕೋ ಹಾಗೆ. ಪ್ರತೀ ತಿಂಗಳ ರಕ್ತಪರೀಕ್ಷೆ ಪುತ್ತೂರಿನ ಐಡಿಯಲ್ ಲ್ಯಾಬ್ ನಲ್ಲಿ. ಒಮ್ಮೆ ಅಮ್ಮ ಹೇಳಿದ್ದರು, "ಇದೆಲ್ಲಾ ಯಾಕೆ ಅಂತ ಗೊತ್ತಾಗುವುದಿಲ್ಲ,‌ ಸುಮ್ಮನೆ ಖರ್ಚು ಎಂದಿದ್ದರು" ಇದಕ್ಕೆ ಐಡಿಯಲ್ ಲ್ಯಾಬ್ ನ ಸುಚೀಂದ್ರ ಪ್ರಭು ಅವರು ಹೇಳಿದ್ದು,"ಅದು ಮಕ್ಕಳ ಕರ್ತವ್ಯ, ನೀವು ಹಾಗೆ ಹೇಳಬಾರದು "ಎಂದಿದ್ದರು. ಅಂದಿನಿಂದ ಅಮ್ಮ ಯಾವ ಚಿಕಿತ್ಸೆಗೂ ಮಾತನಾಡಿಲ್ಲ. ನೀವು ಹೇಳಿದ ಹಾಗೆ ಎಂದಿದ್ದರು.ಕಾರಿನಲ್ಲಿ ನಾನು, ತಂಗಿ, ಅಮ್ಮ ಎಲ್ಲಾ ಕಡೆಗೂ ಯಾವಾಗ ಬೇಕೋ ಆವಾಗ ಚಿಕಿತ್ಸೆಗೆ ಹೋದದ್ದಾಯಿತು.ಯಾವ ವೈದ್ಯರು ಬೇಕೋ ಆ‌ ವೈದ್ಯರು.

ಹಾಗಿದ್ದರೂ, ಅಪ್ಪ ಹೇಳಿದ ದಿನ ಬಂದೇ ಬಿಟ್ಟಿತು. ಸರಿಯಾಗಿ 4 ವರ್ಷ. 2022 ಆಗಸ್ಟ್ 4  ಅಮ್ಮ ಇಲ್ಲವಾದರು. ನೋಡುತ್ತಾ ಇದ್ದಂತೆಯೇ, ಕೈಲಾಗದಂತೆ ನೋಡಬೇಕಾಯಿತೇ ಹೊರತು ಆ ದಿನವನ್ನು ಇಲ್ಲವಾಗಿಸಲು ಆಗಲೇ ಇಲ್ಲ. ಅದಕ್ಕಿಂತ ಮುಂದೆ ಹೋದರೆ, ಅಪ್ಪ ಇಲ್ಲವಾದ ನಕ್ಷತ್ರ, ತಿಥಿ, ಮಾಸ. ಅಮ್ಮ ಇಲ್ಲವಾದ ನಕ್ಷತ್ರ, ತಿಥಿ, ಮಾಸ. ಎರಡೂ ಒಂದೇ...! ಅಪ್ಪ ಕೃಷ್ಣ ಪಕ್ಷ , ಅಮ್ಮ ಶುಕ್ಲ ಪಕ್ಷ. ಅಂದರೆ 15 ದಿನಗಳ ವ್ಯತ್ಯಾಸ.

ಈ ಜಗತ್ತು ಬಹಳ ಕುತೂಹಲ. ಅನೇಕ ಬಾರಿ ಅನಿಸಿದ್ದಿದೆ, ಇದೆಲ್ಲಾ ಏನು? ಅಂತ. ಅಪ್ಪ ಹೇಗೆ ಹೇಳಿದರು ಹೀಗೆ? ಅಪ್ಪ ಯಾಕೆ ಹೇಳಿದರು ಹೀಗೆ? ಹೀಗೂ ಅನಿಸುತ್ತದೆ. ಇದ್ದಾಗ ಅಪ್ಪನ ಜೊತೆ ಅದನ್ನು ಕೇಳಲಿಲ್ಲ. ಅಮ್ಮನಲ್ಲೂ ಕೇಳಲಿಲ್ಲ. 

ಈಗ ಅದರೊಳಗಿನ ಸತ್ಯದ ಹುಡುಕಾಟದಲ್ಲಿ ಸೋಲು ಖಚಿತವೇ ಆಗಿದೆ.‌ಅದಕ್ಕಾಗಿಯೇ ಅಪ್ಪ ಅಮ್ಮ ಇಬ್ಬರಿಗೂ ಈಗ ನನ್ನ ಪಾಲಿನ ಕರ್ತವ್ಯವನ್ನು ಪಾಲಿಸುವುದು, ಮುಗಿಸುವುದು. ಅವರ ಕನಸುಗಳನ್ನು ಬೆಳೆಸುವುದು, ಮುಂದೆ ದಾಟಿಸುವುದು. ಇದು ನನಗೆ ಮಾತ್ರಾ ಸಂಬಂಧಿಸಿದ್ದು ಅಂತ‌ ತಿಳಿದಿದ್ದರೂ ಹಂಚಿಕೊಳ್ಳುವುದಕ್ಕೆ, ದಾಖಲಿಸುವುದಕ್ಕೆ ಕಾರಣವಿದೆ. ಆ ಕಾರಣವೇ ಮನಸ್ಸು. ಆಗಾಗ ಕಾಡುವ ನೆನಪುಗಳಿಗೆ ಉತ್ತರವಿಲ್ಲ. ಒಮ್ಮೊಮ್ಮೆ‌ ಕೆಲಸವಿಲ್ಲ, ಮಾತುಗಳಿಲ್ಲ,‌ ನಿದ್ರೆಯೂ ಇಲ್ಲ.


ಮತ್ತೆ ಮತ್ತೆ ಕಾಡುವ ನೆನಪಲ್ಲಿ ಅಮ್ಮನೇ ಬರುತ್ತಾರೆ.ಮತ್ತೆ ಮತ್ತೆ ಬರುತ್ತಾರೆ. ಈ ಜಗದೊಳಗಿನ ನಿಗೂಢತೆಯ ಒಳಗೆ ಸಾಗಿದಾಗ ಉತ್ತರ ಸಿಗದ ಪ್ರಶ್ನೆಗಳೇ ಅವು.! ಅದೆಲ್ಲಾ ಕಾಕತಾಳೀಯವೇ ? ಆಥವಾ ನಿಗೂಢವಾದ ಸತ್ಯವೇ....?

ಅಮ್ಮನ ಆರೋಗ್ಯ ಹದಗೆಡುತ್ತಾ ಸಾಗಿತು. ಸತತ ಪ್ರಯತ್ನದ ನಡುವೆಯೇ ನೋಡುತ್ತಾ ಇರಬೇಕಾಯಿತೇ ಹೊರತು ,ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಆಗಾಗ ಇಂಜೆಕ್ಷನ್ ಇತ್ತು. ಕೊನೆಗೆ ಅಮ್ಮನಿಗೂ ಅನಿಸಿತ್ತು ,‌ಈ ಚಿಕಿತ್ಸೆಗಳು ಪ್ರಯೋಜನವಿಲ್ಲ ಅಂತ. ಆದರೆ ನಮ್ಮ ಪ್ರಯತ್ನ, ಕಾಳಜಿಯ ಕಾರಣದಿಂದ ಅದನ್ನು ಜೊತೆಗೇ ಇರುವ ನಮ್ಮಲ್ಲಿ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಅದನ್ನು ಪರೋಕ್ಷವಾಗಿ ಹೇಳುತ್ತಿದ್ದರು ಅಮ್ಮ.

ಅಮ್ಮ ಇಲ್ಲವಾಗುವ ವಾರದ ಹಿಂದೆ,  ತಂಗಿಯ ಜೊತೆ ಅಮ್ಮ
 ಹೇಳಿದ್ದರು,"ನಾನು ಉಸಿರು ನಿಲ್ಲಿಸುವ ಸಮಯವನ್ನು ನಿಮಗೆ ನೋಡಲಾಗದು, ನೀವು ಅಳುತ್ತಾ ಇರಬಾರದು" ಎಂದು. ಅದನ್ನು ಗಂಭೀರವಾಗಿ ಪರಿಗಣಿಸದ ನಾವು ಅದೊಂದು ಹೇಳಿಕೆಯಾಗಿ ಭಾವಿಸಿ ಸುಮ್ಮನಾದೆವು.

ಅಂದು ಆ.4. ಬೆಳಗ್ಗೆ ಅಮ್ಮ ಅರ್ಧ ಚಹಾ ಕುಡಿದದ್ದು ಬಿಟ್ಟರೆ ಇನ್ನೇನು ಇರಲಿಲ್ಲ. ನಾನು ಆಗ ಕೆಲ ದಿನಗಳಿಂದ ಮನೆಯಿಂದ ಹೊರಗೆ‌ ಹೋಗುತ್ತಿರಲಿಲ್ಲ. ಕಾರಣ ಅಮ್ಮನ ಸೇವೆ. ಅಂದೂ ಮನೆಯಲ್ಲಿದ್ದೆ. ಬೆಳಗ್ಗೆ ಚಿಕ್ಕಪ್ಪ ಕರೆ ಮಾಡಿದ್ದರು, ಆರೋಗ್ಯ ಏರುಪೇರು ಇದೆ ಸ್ವಲ್ಪ ಚೆಕ್ ಅಪ್ ಮಾಡಿಸಬೇಕಿತ್ತು, ಪುತ್ತೂರಿಗೆ ತೆರಳಬೇಕು ಎಂದರು. ತಕ್ಷಣ ನನಗೆ ಬರುವ ಸ್ಥಿತಿಯಲ್ಲಿಲ್ಲ ಎಂದೆ. ಆದರೆ ನಮ್ಮ ಪ್ಯಾಮಿಲಿ ಡಾಕ್ಟರ್ ಜೊತೆ ಮಾತನಾಡಿ ಅವರ ಮನೆಗೇ ಹೋಗುವ ವ್ಯವಸ್ಥೆ ಮಾಡಿಸಿದೆ. ತಂಗಿ‌ ಮನೆಯಲ್ಲಿದ್ದಳು , ಒಮ್ಮೆ ಚಿಕ್ಕಪ್ಪನಲ್ಲಿಗೆ  ಹೋಗಿ ಬಾ ಎಂದೆ.

ಮನೆಯಲ್ಲಿದ್ದ ನಾನು ಅಮ್ಮನ ನೋಡಿದೆ. ಆಗಿನ್ನು ಮಾತನಾಡುತ್ತಿರಲಿಲ್ಲ.‌ ನಿದ್ರೆ ಮಾಡಿದ್ದಾರೆ ಎಂದು ಅಂದುಕೊಂಡು ಎರಡು ದಿನದ ಹಿಂದೆ  ನನ್ನ ಸಹೋದರ ಸಿಸಿ ಕ್ಯಾಮರಾ‌ ವೀಕ್ಷಿಸಲು ಹೇಳಿದ್ದರಿಂದ ಎರಡೂ ದಿನ ಹೋಗದ ನಾನು ತಕ್ಷಣ ನೋಡಿ ಬರುವೆ ಎಂದು ಹೋರಟೆ,‌ ಜೊತೆಗೆ ಮಗನೂ‌ ಬಂದ.ಅಲ್ಲಿಗೆ ತಲಪಿದ‌ ಎರಡೇ ನಿಮಿಷಕ್ಕೆ ಮನೆಯಿಂದ  ಮಡದಿಯ  ಕರೆ ಬಂತು ತಕ್ಷಣವೇ ಬನ್ನಿ ಅಂತ.

 ಚಿಕ್ಕಪ್ಪನಲ್ಲಿಗೆ ಹೋಗಿದ್ದ ತಂಗಿಗೂ ಕರೆ ಹೋಗಿತ್ತು. ಇಬ್ಬರೂ ಓಡೋಡಿ ಬಂದೆವು. ಇಬ್ಬರೂ ಹೆಚ್ಚು ಕಮ್ಮಿ ಒಂದೇ ಸಮಯಕ್ಕೆ ತಲಪಿದೆವು. ಅಮ್ಮ ಹೇಳಿದಂತೆಯೇ ಆಗಿತ್ತು. ನಾವು ತಲಪುವಷ್ಟರಲ್ಲಿ ಅಮ್ಮನ ಉಸಿರು ನಿಂತಿತ್ತು.  ಇಬ್ಬರೂ ಗಂಗಾಜಲ ಬಿಟ್ಟಾಗ ಗುಟುಕು ನೀರು ಕುಡಿದ ಅಮ್ಮ ಸ್ತಬ್ಧವಾದರು. ಆಗ ಗಂಟೆ‌ ಸುಮಾರು 12.
ನಾನು ಭಾವುಕನಾಗಿ ಒಬ್ಬಂಟಿಯಾದೆ.ಅಮ್ಮ ಹೇಳಿದ ಮಾತು ನಿಜವಾಯಿತು. ಅಮ್ಮನ ಉಸಿರು‌‌ ನಿಲ್ಲುವಾಗ ನಾವಿಬ್ಬರೂ ಇರಲಿಲ್ಲ. ನನ್ನ ಮಡದಿ ಇದ್ದಳು. ನಾನು ಹಾಗೂ ತಂಗಿ ಇದ್ದೆವು, ಆದರೆ ಆ ಕ್ಷಣದಲ್ಲಿ ಇರಲಿಲ್ಲ. 

ಈ ಜಗತ್ತು ಬಹಳ ನಿಗೂಢ ಅಂತ ಅನಿಸಿದ್ದು ಈ ಕಾರಣಕ್ಕೆ. ಅಮ್ಮ ಏಕೆ ಹಾಗೆ ಹೇಳಿದರು? ಹೇಗೆ ಹೇಳಿದರು. ಅಷ್ಟೂ ಸಮಯ‌ ಜೊತೆಯೇ ಇದ್ದ ನಾವಿಬ್ಬರೂ ಅದೇ ಸಮಯಕ್ಕೆ ಏಕೆ ಅಲ್ಲೇ ಆ ಕಡೆ ಇದ್ದೆವು? ನಾವು ಇದ್ದರೂ ಏನೂ ಮಾಡಲಾಗುತ್ತಿರಲಿಲ್ಲ‌ ಎನ್ನುವುದೂ ಸತ್ಯವೇ. ಆದರೂ ಅಮ್ಮ ಹೇಳಿದಂತೆ ಹೇಗಾಯಿತು? ಯಾರಿಗೆ ಗೊತ್ತು ಈ ಜಗದ ನಿಗೂಢತೆ?

ನನಗೆ ಗೊತ್ತು, ಹೀಗೆ ಹೇಳುವುದರಿಂದ, ಬರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಇಲ್ಲವಾದ ಅಮ್ಮ ಬರಲಾರಳು. ಆದರೆ ಈ‌‌ ಪ್ರಶ್ನೆಗಳನ್ನು ನಾನು ಯಾರಿಗೆ ಕೇಳಲಿ? ಯಾರಿಗೆ ಹೇಳಲಿ? ಅಮ್ಮನಿಲ್ಲದ ಈ ಲೋಕದಲ್ಲಿ ಅಮ್ಮನಿಗೇ ಕೇಳುವ ಹಾಗೆ ಬರೆಯಬೇಕು, ಆದರೂ ಉತ್ತರವಿಲ್ಲ ನಿಜ. ಆದರೆ ಸಮಾಧಾನ ತರುತ್ತದೆ.ಬರಹಕ್ಕೆ ಆ ಶಕ್ತಿ ಇದೆ. ಮೌನವಾಗುತ್ತಾ ನಾಳಿನ ಕಡೆಗೆ ಯೋಚಿಸಬೇಕು.




06 ಮೇ 2022

ನುಡಿಯಲ್ಲೂ.... ನಡೆಯಲ್ಲೂ... ಒಂದೇ ಆಗಿರುವುದು ಸುಲಭವಾ ?



ಇವರ ಬಗ್ಗೆ ಬರೆಯಲೇಬೇಕು. ಏಕೆಂದರೆ ಅಪರೂಪದ ವ್ಯಕ್ತಿತ್ವ. ಅದು ಹಿಂದುತ್ವದ ವ್ಯಕ್ತಿತ್ವ.  ಹಿಂದುವಾಗಿ ಕಾಣುತ್ತಾ ಜಾತಿವಾದಿಗಳಾಗುವ  ಕಾಲದಲ್ಲಿ ಇಂತಹವರ ಪರಿಚಯವಾಗಬೇಕು ಹಾಗೂ . ನನ್ನ ಮನಸ್ಸಿನಲ್ಲಿ  ಇದು ದಾಖಲಾದ್ದನ್ನು ಅಕ್ಷರ ರೂಪಕ್ಕೆ ಇಳಿಸಬೇಕು. ಈ ವ್ಯಕ್ತಿತ್ವ ಶ್ರೀನಿವಾಸ ಉಬರಡ್ಕ. 

ಶ್ರೀನಿವಾಸ ಉಬರಡ್ಕ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ನನಗೆ ಪರಿಚಯ. ಪರಿಚಯ ಅನೇಕ ಸಮಯಗಳಿಂದ ಇದ್ದರೂ ಬಹಳ ಹತ್ತಿರ ಏನೂ ಇರಲಿಲ್ಲ. ಎಲ್ಲರಂತೆ ಅವರೂ ಒಬ್ಬರು ಪರಿಚಯಸ್ಥರು ಅಷ್ಟೇ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನನ್ನ ಪರಿಚಯಿಸಿದವರು  ಲಕ್ಷ್ಮೀಶ ಗಬ್ಲಡ್ಕ ಹಾಗೂ ವೇಣುಗೋಪಾಲ ಮುರುಳ್ಯ. ಆರ್‌ ಎಸ್‌ ಎಸ್‌ ಪರಿಚಯದ ನಂತರ  ಅವರಿಬ್ಬರೂ ನನಗೆ ಅಂದು ಸ್ಫೂರ್ತಿಯಾದ್ದು ಹಿಂದುತ್ವದ ಕಾರಣಕ್ಕೆ. ಜಾತಿಯ ಗೋಡೆಯನ್ನು ಬಿಟ್ಟು ದಾಟಿರುವುದಕ್ಕೆ. ಆ ಕಾರಣದಿಂದಲೇ ಅನೇಕರ ಮನೆಗೆ ಹಿಂದುವಾಗಿ ಹೋಗಿದ್ದೆ, ನಮ್ಮ ಮನೆಯಲ್ಲೂ ಹಿಂದೂಗಳಾಗಿಯೇ ಎಲ್ಲರೂ ಕಂಡಿದ್ದೆವು.  ಈಗ ಶ್ರೀನಿವಾಸ ಅವರು ಕೂಡಾ ಹಿಂದುತ್ವದ ಕಾರಣದಿಂದ ಹೆಚ್ಚು ಆಪ್ತರಾಗುತ್ತಾ ಹೋದರು. ಅದಕ್ಕೆ ಈಚೆಗಿನ ಅವರ ಮನೆಯ ಖಾಸಗಿ ಕಾರ್ಯಕ್ರಮವೂ ಕಾರಣವಾಯಿತು. ಅದಕ್ಕಿಂತಲೂ ಮೊದಲು ಪರಿಚಯವು ಹೆಚ್ಚು ಪರಿಚಯವಾಗಲು ಕಾರಣವಿದೆ...

ಆಗ ಶ್ರೀನಿವಾಸ ಉಬರಡ್ಕ ಅವರಿಗೆ ಸಂಘದ ಜವಾಬ್ದಾರಿ ಇತ್ತು. ಚುನಾವಣೆಯ ಹೊತ್ತಿನಲ್ಲಿ ಸಂಘವು ಒಂದಿಷ್ಟು ಕೆಲಸ ಮಾಡಬೇಕು ಎಂಬ ಸೂಚನೆ ಇತ್ತು. ಅದನ್ನು ಶಿರಸಾ ಪಾಲಿಸಬೇಕಾಗಿತ್ತು ಅಲ್ಲಿನ ಜವಾಬ್ದಾರಿ ಇದ್ದವರಿಗೆ. 

ಆ ಚುನಾವಣೆಯ ಹೊತ್ತಿನಲ್ಲಿ ನಾವು ನಮ್ಮ ಊರಿನ ಮೂಲಭೂತ ವ್ಯವಸ್ಥೆಗಳ ಬಗ್ಗೆ ಹೋರಾಟ ನಡೆಯುತ್ತಿದ್ದ ಕಾಲ. ಅನೇಕ ಸಮಯಗಳಿಂದ ಓಟು ಮಾಡಿ, ಅವರ ಜೊತೆಗೇ ವಿವಿಧ ಸ್ಥರದಲ್ಲಿ  ಗುಪ್ತವಾಗಿ ಕೆಲಸ ಮಾಡಿಯೂ ನಾವು ಬೇಡಿಕೆಯೇ ಸಲ್ಲಿಸಬಾರದು ಎಂದು ಅರ್ಥವಾಗಿದ್ದ ಸಮಯ ಅದು. ಪತ್ರಿಕೆಯಲ್ಲಿ ಬರೆಯಬಾರದು ಎಂದು ಹೇಳಿದ್ದ ಸಮಯ ಅದು, ಉದ್ಘಾಟನೆಗೆ ಎಂದು ಕರೆಯಿಸಿ ಪರೋಕ್ಷವಾಗಿ ನಮಗೇ ಬೈದ ಸಮಯ ಅದು. ಇದೆಲ್ಲಾ ಆದ ಬಳಿಕ  ಅಷ್ಟೂ ಸಮಯವೂ ಜೊತೆಯಾಗಿದ್ದರೂ ನಾವೆಲ್ಲರೂ ಪರಕೀಯರಂತೆ ಇರಬೇಕಾಗಿ ಬಂದಾಗ ನಾವೆಲ್ಲಾ ಜೊತೆಯಾಗಿ ನಮ್ಮೂರಿನ ಮೂಲಭೂತ ಸಮಸ್ಯೆ ನಿವಾರಣೆಗೆ ಯಾವ ಪಕ್ಷಗಳಿಗೂ ಮತ ನೀಡದೇ ಇರಲು ನಾವು ಒಂದಷ್ಟು ಜನ ಯೋಚನೆ ಮಾಡಿದ್ದೆವು. ಏಕೆಂದರೆ ಅದುವರೆಗೂ ನಾವು ಸಿದ್ಧಾಂತದ ಆಧಾರದಲ್ಲಿಯೇ ಮತ ಚಲಾಯಿಸುತ್ತಿದ್ದ ಹಾಗೂ ಅದೇ ಪಕ್ಷದ ಗಣ್ಯ ವ್ಯಕ್ತಿಗಳು ಆ ಸಿದ್ಧಾಂತಗಳಿಗೆ ಬೆಲೆ ಕೊಡಲಿಲ್ಲ. ಉಳಿದ ಪಕ್ಷಗಳಂತೆಯೇ ಮಾಡಿದ್ದರು ಕೂಡಾ.  ನಮಗೂ ನೈತಿಕವಾಗಿ ಯಾವ ಪಕ್ಷಗಳಲ್ಲೂ ಕೇಳಲು ಆಗದೇ ಇರುವ ಸ್ಥಿತಿ ಇದ್ದುದರಿಂದ   ಎಲ್ಲವೂ ಸಮಾನ ಎಂದು ತಿಳಿದು  ಯಾವ ಸಿದ್ದಾಂತಗಳೂ ಇಲ್ಲವೆಂದು ನಮ್ಮ ನಿರ್ಧಾರ ಬದಲಾಯಿಸಲು ಯೋಚಿಸುತ್ತಿದ್ದೆವು. ಮತ ಬಹಿಷ್ಕಾರ ಅಥವಾ ನೋಟದ ಯೋಚನೆಯಲ್ಲಿ ಇದ್ದೆವು. ಆಗ ಶ್ರೀನಿವಾಸ ಉಬರಡ್ಕ ಅವರು ಮನೆಗೆ ಆಗಮಿಸಿ, ಆ ಪಕ್ಷಕ್ಕೆ ಏಕೆ ಮತ ನೀಡಬೇಕು ಹಾಗೂ ಸಿದ್ಧಾಂತಗಳನ್ನು ಏಕೆ ಬದಲಿಸಬಾರದು ಎಂದು  ಹೇಳಿದ್ದರು. ಅದರ ಜೊತೆಗೆ ನಿಮ್ಮ ಮೂಲಭೂತ ವ್ಯವಸ್ಥೆಯ ಬಗ್ಗೆ ಚುನಾವಣೆಯ ನಂತರ ಮಾತಾಡೋಣ ಎಂದಿದ್ದರು. ಅವರ ಮಾತಿಗೆ ಬೆಲೆ ನೀಡಿದ್ದೆವು, ಏಕೆಂದರೆ ಶ್ರೀನಿವಾಸ ಉಬರಡ್ಕ ಅವರು ನೇರ ನಡೆ ನುಡಿಯವರು. ಅವರು ಪಕ್ಷದ ಹಿಂದೆ ಹೋದವರಲ್ಲ, ಆದರೆ ಸಂಘಟನೆಯ ಸೂಚನೆಯಂತೆ ಪಕ್ಷದ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರು ಎನ್ನುವುದು  ನಮಗೆ ತಿಳಿದಿತ್ತು. 

ಅದಾಗಿ ಚುನಾವಣೆ ಮುಗಿದು ಕೆಲವು ಸಮಯವಾದರೂ ನಮ್ಮ ಬೇಡಿಕೆಗಳಿಗೆ ಯಾವ ಪ್ರತಿಕ್ರಿಯೆಯೂ ಇಲ್ಲದಾಗ ಮತ್ತೆ ಶ್ರೀನಿವಾಸ ಅವರಲ್ಲಿ  ಕೇಳಿದಾಗ ನಾನು ಮಾತು ತಪ್ಪಿದ್ದೇನೆ, ಈಗ ಪಕ್ಷದವರು ಈ ಬಗ್ಗೆ ಮಾತು ಎತ್ತುತ್ತಿಲ್ಲ, ಅಂದು ಗಮನಕ್ಕೆ ತಂದಿದ್ದೇನೆ ಎಂದರು. ಆ ಬಳಿಕ ಶ್ರೀನಿವಾಸ ಉಬರಡ್ಕ ಅವರ ಜೊತೆ ಈ ಬಗ್ಗೆ ಮಾತನಾಡಲಿಲ್ಲ. ಅವರ ಜೊತೆಗಿನ ನನ್ನ ಸ್ನೇಹ ಹೀಗೇ ಮುಂದುವರಿಯುತ್ತದೆ, ಆದರೆ ಇನ್ನು ನೀವು ನಮ್ಮ ಯಾವುದೇ ಹೋರಾಟದಲ್ಲಿ ನಮ್ಮ ರಾಜಿಗೆ ಬರಬಾರದು ಎಂದು ಹೇಳಿದ್ದೆವು. ಮೌನವಾಗಿ ನಗಾಡಿದ ಅವರು ಸುಮ್ಮನಾದರು. ಅದಾದ ಬಳಿಕದ ಯೋಚನೆ ಆರಂಭಿಸುತ್ತಿದ್ದಾಗ ಕೇಂದ್ರ ಸರಕಾರದ ಚುನಾವಣೆ ಬಂದಿತ್ತು. ಮೋದಿ ಅವರ ಹೆಸರಿಗಾಗಿ ಆ ಬಾರಿ ಮೌನ ವಹಿಸಿದೆವು. ಪಂಚಾಯತ್‌ ಚುನಾವಣೆಯ ವೇಳೆಗೆ ಯಾರ ಮಾತನ್ನೂ ಕೇಳದೆ ನಾವು ಹೋರಾಟಕ್ಕೆ ಸಿದ್ಧರಾದೆವು. ಅಂದಿನಿಂದ ಇಂದಿನವರೆಗೆ ಹೀಗೇ ಮಾತುಕತೆಗಳಾದರೂ ನಮ್ಮ ಹೋರಾಟಕ್ಕೂ ಅವರಿಗೂ ವಿರೋಧ ಇದೆ. ಆದರೆ ಇತರ ಸಾಮಾಜಿಕ ಕೆಲಸಗಳ ಬಗ್ಗೆ ಸದಾ ಚರ್ಚೆ ಇದೆ. 

ಅದಾದ ಬಳಿಕ ನನ್ನ ತಂದೆಯವರು ನಿಧನರಾದಾಗ ಕರೆ ಮಾಡಿ ಸಾಂತ್ವನ ಹೇಳಿದ, ಸಹಾಯ ಕೇಳಿದ, ಮನೆಗೆ ಬಂದು ಮಾತುಕತೆ ನಡೆಸಿ ಧೈರ್ಯ ತುಂಬಿದವರಲ್ಲಿ  ಶ್ರೀನಿವಾಸ ಉಬರಡ್ಕ ಹಾಗೂ ತಳೂರು ಚಂದ್ರಣ್ಣನೂ ಇದ್ದರು. 

ಇದೆಲ್ಲಾ ಘಟನೆಗಳ ನಂತರವೂ ಸ್ನೇಹ ಮುಂದುವರಿಯಿತು. ಸಾಮಾಜಿಕ ಸಂಗತಿಯನ್ನು ಬಿಟ್ಟು.

ಈಚೆಗೆ ಶ್ರೀನಿವಾಸ ಉಬರಡ್ಕ ಅವರ ಮಗಳ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು. ಸಹಜವಾಗಿಯೇ ನನಗೆ ಕುತೂಹಲ ಇತ್ತು. ಹಿಂದುತ್ವದ ಪ್ರತಿಪಾದಕ, ಜಾತಿ ವ್ಯವಸ್ಥೆಯನ್ನು ಯಾವ ಕಾರ್ಯಕ್ರಮದಲ್ಲೂ ತಾರದ ವ್ಯಕ್ತಿ, ಇಡೀ ಕುಟುಂಬದ ಸದಸ್ಯರ, ಇನ್ನೊಂದು ಕುಟುಂಬದ ಮಂದಿಯನ್ನು ಮನವೊಲಿಸಿ ತಾವು ನಂಬಿದ ಸಿದ್ದಾಂತವನ್ನು  ಹೇಗೆ ಅನುಷ್ಟಾನ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೆ. ಆದರೆ ನನ್ನ ಯೋಚನೆ, ನಿರೀಕ್ಷೆಗೂ ಮೀರಿ ಅವರು ಕಾರ್ಯಕ್ರಮ ನಡೆಸಿದರು. ಈ ಮೂಲಕ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿಕೊಂಡರು ಎಂಬುದು ನನ್ನ ಭಾವನೆ. ಹೀಗಾಗಿ ಅಕ್ಷರದ ಮೂಲಕ ದಾಖಲಿಸಬೇಕಾಯಿತು. 

ಈ ವಿವಾಹ ಕಾರ್ಯಕ್ರಮಕ್ಕೆ ಪೂರ್ವಯೋಜಿತವಾಗಿ ಬೆಳಗ್ಗೆಯೇ ಇರಬೇಕಾಗಿತ್ತು. ಆದರೆ ಖಾಸಗಿ ಕಾರಣಗಳಿಂದ ಕೊಂಚ ತಡವಾಗಿ ಭಾಗವಹಿಸಬೇಕಾಯಿತು.  ಜಾತಿಯಲ್ಲಿ ಬ್ರಾಹ್ಮಣ. ಆಚರಣೆಯಲ್ಲಿ ಹಿಂದುವಾಗಿದ್ದ ಶ್ರೀನಿವಾಸ ಅವರು ತಮ್ಮ ಮಗಳ ಮದುವೆಯಲ್ಲೂ ಸಂಪ್ರದಾಯಗಳೊಂದಿಗೆ ಹಿಂದುತ್ವವನ್ನು ಎತ್ತಿ ಹಿಡಿದರು. ಅದು ಸುಲಭದ ಕೆಲಸ ಅಲ್ಲ. ಮಾತು ಹಾಗೂ ಕೃತಿಯಲ್ಲಿ,  ನೇರ ನಡೆನುಡಿ ಇದ್ದರೆ ಮಾತ್ರವೇ ಈ ರೀತಿ ನಡೆಯಲು ಸಾಧ್ಯ. ನನ್ನ ಅಜ್ಜನೂ ಒಬ್ಬರು ಇದ್ದರು. ಅವರಿಗೂ ಈ ರೀತಿ ನಡೆದುಕೊಳ್ಳಲು ಆಗಿತ್ತು. ಉಳಿದ ಎಲ್ಲೆಡೆಯೂ ಆಚರಣೆಯಲ್ಲೂ ವ್ಯತ್ಯಾಸ ಇದ್ದುದನ್ನು ಕಂಡಿದ್ದೇನೆ. 

ಮದುವೆಯಲ್ಲಿ ಎರಡು ಕುಟುಂಬಗಳು, ಅದರಲ್ಲಿ ಇರುವ ಸಂಪ್ರದಾಯವಾದಿಗಳು, ಅವರ  ಮನವೊಲಿಸುವುದು  ಹಾಗೂ ಖಡಕ್‌ ಆಗಿ ಹೇಳುವುದು ಇದೆಲ್ಲಾ ಮದುವೆಯ ಕಾರ್ಯಕ್ರಮದಲ್ಲಿ ಸುಲಭದ ಕೆಲಸ ಅಲ್ಲ. ಸಂಘಟನೆ ಯಾವುದೇ ಇದ್ದರೂ ಅದೆಲ್ಲಾ ಬದಿಗಿರಲಿ ಎಂದು ಪುರೋಹಿತರಿಂದ ತೊಡಗಿ ಎಲ್ಲರೂ ಹೇಳುವ ಕಾಲದಲ್ಲಿ ಶ್ರೀನಿವಾಸರು ಮಗಳ ಮದುವೆಯಲ್ಲಿ  ಸಮಾಜದಲ್ಲಿ ಉಪೇಕ್ಷಿತ ಸಮಾಜ ಎಂದು ಯಾವುದನ್ನು ಗುರುತಿಸುತ್ತದೋ ಅದೇ ಸಮುದಾಯದ ಯುವಕ ವೈಯಕ್ತಿಕ ಗೀತೆ ಹಾಡಿದರು, ಅಕ್ಷತೆ ಹಾಕಿದರು. ಮಂಟಪಕ್ಕೆ ಬಂದರು. ಅಂದರೆ  ಇಡೀ ಹಿಂದೂ ಸಮಾಜವೇ ಬಂದಿದೆ ಎಂದೇ ಅರ್ಥವಾಯಿತು ಇಲ್ಲಿ. ಎಲ್ಲೂ ಯಾವ ತಾರತಮ್ಯ ಇಲ್ಲ. ಹಿಂದುತ್ವ ಎನ್ನುವುದು  ಓಟಿಗಾಗಿಯೋ,  ಉಪದೇಶಕ್ಕಾಗಿಯೋ ಇರುವ ಈ ಕಾಲದಲ್ಲಿ ನಾವೆಲ್ಲಾ ಇಂತಹವರಿಂದ ಪ್ರೇರಣೆಗೆ ಒಳಗಾದವರೇ.  

ಅಂತಹ ಜನರು ಈಗಿಲ್ಲ...  ಮಾತಿಗೂ ಕೃತಿಗೂ ವ್ಯತ್ಯಾಸ ಇದೆ ಎಂದು ಭ್ರಮನಿರಸನಗೊಂಡಿದ್ದೆ. ಓಟಿಗಾಗಿ ಮಾತ್ರವೇ ಹಿಂದುತ್ವ ಎಂದು ಭಾವಿಸಿಕೊಂಡಿದ್ದೆ. ಆದರೆ ಶ್ರೀನಿವಾಸ ಉಬರಡ್ಕ ಅವರ ಮೇಲಿದ್ದ ಗೌರವ ಇಮ್ಮಡಿಯಾಯಿತು. ಅವರ ಹಿಂದುತ್ವದ ಉದ್ದೇಶವೂ ಸಮಾನತೆಯೇ ಆಗಿದೆ ಎಂದು ಭಾವಿಸಿಕೊಂಡೆ. ಇಂತಹವರು ಯಾವತ್ತೂ ಪ್ರೇರಣೆಯೇ. ಇಂದು ನಾನು ಅನೇಕರಿಗೆ ವಿರೋಧಿ ಎಂದು ಅನಿಸಬಹುದು.ಅಭಿವೃದ್ಧಿ ಪರವಾಗಿ ಯೋಚಿಸುವುದು  ನಿರಂತರ.   ಆದರೆ ನಾನು ಇದುವರೆಗೂ ಕಲಿತ ಪಾಠ ಹಾಗೂ ಸ್ಫೂರ್ತಿಯಾದ  ಹಿಂದುತ್ವ ಆಚರಿಸಿದ್ದೇನೆ. ಆದರೆ ಈಗ ಹೊಡಿ, ಬಡಿಯ ಕಡೆಗೆ ಮನಸ್ಸಿಲ್ಲ. ಹಿಂದುವಾಗಿ ದೇಶದ ಕಡೆಗೆ ಸಂಸ್ಕೃತಿ ಉಳಿಸುವ, ಬೆಳೆಸುವ ಯೋಚನೆಯನ್ನು ಎಂದಿಗೂ ಬಿಡದೇ ಇರಲು ಶ್ರೀನಿವಾಸ, ವೇಣುವಣ್ಣ ಅಂತಹವರು ಮುಖ್ಯ ಕಾರಣ. 

ವಧೂವರರಿಗೆ ಶುಭಾಶಯ. ಅವರ ಮಗಳ ಬದುಕು ಸುಂದರವಾಗಲಿ. ಶುಭವಾಗಲಿ.