29 ಸೆಪ್ಟೆಂಬರ್ 2008

ಸಕತ್ ಶಿರಾಡಿ ........!




ಶಿರಾಡಿ ಈಗಲೂ ಸಕತ್ ಆಗಿದೆ. ಹೇಗೆ ಅಂತನಾ?. ಅಯ್ಯೋ ಅದು ಒಂದು ಕತೆ ರೀ. ಶಿರಾಡಿ 8 ತಿಂಗಳ ನಂತರ ಪ್ರಸಗೊಂಡಾಗ ಅಬ್ಬಾ.. ಎನ್ನುವ ನೆಮ್ಮದಿ. ಅದು "ಆ" ಪ್ರಸಗೊಂಡಾಗ ಆದ ಸಂತಸದಷ್ಟೇ.ಅದುವರೆಗಿನ ನೋವುಗಳೆಲ್ಲಾ ಆ ಕ್ಷಣದಲ್ಲಿ ಮಾಯವಾಗಿತ್ತು.ಆದರೆ ಈಗ ಕತೆ ಅದಲ್ಲ. ಹಾಗೆ ಪ್ರವಸಗೊಂಡು ಇನ್ನೂ 3 ತಿಂಗಳಲಾಗಿಲ್ಲ. ಅದಾಗಲೆ ಇನ್ನೊಂದಕ್ಕೆ ಸಿದ್ಧವಾಗಿ ಬಿಟ್ಟಿದೆ ರೀ...!!!??. ಮತ್ತೊಂದು ನೋವಿಗೆ ಕಾರಣವಾಗುತ್ತಲಿದೆ. ಗಮ್ಮತ್ತು ಗೊತ್ತಾ. ನಾನು ಮತ್ತು ಮಿತ್ರ ಲೋಕೇಶ ಆ ಕಡೆ ಹೋಗಿದ್ದೆವು. ಘಾಟಿಯ ಪೂರ್ತಿಯಲ್ಲ ಮುಕ್ಕಾಲು ಭಾಗ ಹೋಗಿ ಸಂಪೂಣ ವೀಕ್ಷಿಸಿ ಬಂದು ಇನ್ನೇನು ವರದಿಗೆ ಅಂತಿಮ ರೂಪ ಕೊಡಬೇಕಲ್ಲ ಅಂತ ಕ್ಯಾಮಾರಾದ ಮುಂದೆ ನಿಂತಾಗ ಶರ್ಟ್ ಸಂಪೂರ್ಣ ಬಿಳಿ... ಮೀಸೆ .... ತಲೆಗೂದಲೂ ಹಾಗೇ ಬಿಳಿ ಆಗಿತ್ತು. ಆ ನಡುವೆಯೇ ವರದಿಗೆ ಅಂತಿಮ ರೂಪ ನೀಡಿ ಹೊರಟದ್ದೇ. ಮನೆಗೆ ಬಂದು ಸ್ನಾನ ಮಾಡಿ ಮಲಗಿದ ಮೇಲೆ ಎಚ್ಚರವಾದದ್ದು ಬೆಳಗ್ಗೆ 8 ಕ್ಕೆ....


ಶಿರಾಡಿ. ಯಾರಿಗೆ ಗೊತ್ತಿಲ್ಲ ಹೇಳಿ. ಅಂದು ಸುಮಾರು 8 ತಿಂಗಳುಗಳ ಕಾಲ ವಾಹನ ಸಂಚಾರ ಬಂದ್ ಆದ ಸಂದರ್ಭದಲ್ಲಿ ಶಿರಾಡಿಯು ಅತ್ಯಂತ ಹೆಚ್ಚು ಪ್ರಚಾರ ಪಡೆಯಿತು. ಅಂದ ಹಾಗೆ ಶಿರಾಡಿಯು ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುಂಡ್ಯದಿಂದ ಮುಂದಿನ ಘಾಟಿ ಪ್ರದೇಶ. ಕಳೆದ ವರ್ಷ ಈ ರಸ್ತೆಯು ತೀರಾ ಹದಗೆಟ್ಟು ಸಂಚಾರವೇ ಕಡಿದು ಹೋಗುವ ವೇಳೆ ಎಚ್ಚೆತ್ತ ಸರಕಾರ ಹಾಗೂ ಜನಪ್ರತಿನಿಧಿಗಳು ದುರಸ್ಥಿಗೆ ಮುಂದಾದರು. ಈ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಸುವ್ಯವಸ್ಥಿತವನ್ನಾಗಿಸಲು ಎರಡು ಹಂತಗಳಲ್ಲಿ ಅನುದಾನವನ್ನು ಹೆಚ್ಚಿಸಲಾಯಿತು. ಹಾಗೆ ಒಟ್ಟು ಅನುದನ 46.42 ಕೋಟಿ ರೂಗಳ ಬೃಹತ್ ಹಣವನ್ನು ಶಿರಾಡಿಯಲ್ಲಿ ಸುರಿಯಲಾಯಿತು. ಅದರಂತೆ ಶಿರಾಡಿಯ 34 ಕಿಮೀ ರಸ್ತೆಯ ಪೂರ್ತಿ ದುರಸ್ಥಿಗೆ ಸಂಬಂಧಿತ ಇಲಾಖೆ ಮುಂದಾಯಿತು. ಆ ಪ್ರಕಾರ ಈ ರಸ್ತೆಯ 13 ತಿರುವುಗಳು, 54 ಮೋರಿಗಳು , ಹಾಗೂ 2 ಸೇತುವೆಗಳನ್ನು ದುರಸ್ಥಿಗೆ ಮುಂದಾಗಿತ್ತು. 13 ಕಾಂಕ್ರೀಟ್ ರಸ್ತೆಗಳ ದುರಸ್ಥಿಯ ಗುತ್ತಿಗೆಯನ್ನು ದಕ್ಷಿಣ ಕನ್ನಡದ ಉಜಿರೆಯ ಭಂಡಾರ್ಕರ್ ಕಂನ್ಟ್ರಕ್ಷನ್ ಅವರಿಗೆ 8.42 ಕೋಟಿ ರೂಗಳಿಗೆ ನೀಡಲಾಗಿತ್ತು. ಮತ್ತು ಇನ್ನೂ ಅನುದಾನಗಳಿಂದ ಚರಂಡಿ ವ್ಯವಸ್ಥೆಗೂ ಇದೇ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿತ್ತು. ಈ ಕಾಂಕ್ರೀಟ್ ರಸ್ತೆಯು 60 ಸೆಂಟೀಮೀಟರ್ ನಷ್ಟು ದಪ್ಪವಾಗಿದೆ.ಒಟ್ಟು 13 ತಿರುವುಗಳು 108 ಕೀ ಮೀ ಅಳತೆಯಾಗುತ್ತದೆ. ಆದರೆ ರಸ್ತೆಯ ಡಾಮರೀಕರಣವನ್ನು ತಮಿಳುನಾಡು ಮೂಲದ ದುರ್ಗಾ ಕಂನ್ಟ್ರಕ್ಷನ್ ನವರಿಗೆ 24 ಕೋಟಿ ರೂಗಳ ವೆಚ್ಚದಲ್ಲಿ ಗುತ್ತಿಗೆಯನ್ನು ನೀಡಲಾಗಿತ್ತು.ಇನ್ನೊಂದು ಕಾಮಗಾರಿಯನ್ನು ರಮೇಶ್ ಕೊಟ್ಟಾರಿ ಕಂನ್ಟ್ರಕ್ಷನ್ ನವರಿಗೆ 5.37ಕೋಟಿ ರೂಗಳ ವೆಚ್ಚದಲ್ಲಿ ನೀಡಲಾಗಿತ್ತು. ಹೀಗಾಗಿ ಈ ಶಿರಾಡಿ ರಸ್ತೆಯ ಸಂಪೂರ್ಣ ದುರಸ್ಥಿ ಮಾಡುವ ಸಲುವಾಗು 2007 ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಗೊಳಿಸಿ ಕಾಮಗಾರಿಯನ್ನು ಶುರುಮಾಡಲಾಗಿತ್ತು. ಸುಮಾರು 8 ತಿಂಗಳ ಬಳಿಕ ಅಂದರೆ 2008 ಎಪ್ರಿಲ್ 30 ರೊಳಗಾಗಿ ಶಿರಾಡಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಗಾಗಿ ವಿಳಂಬಗೊಂಡು ಜೂನ್ ಮೊದಲವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಏಕಾ‌ಏಕಿ ಶಿರಾಡಿಗೆ ಆಗಮಿಸಿದ ಕೇಂದ್ರ ಭೂ ಸಾರಿಗೆ ಸಚಿವರು ರಸ್ತೆಯನ್ನು ಮುಕ್ತಗೊಳಿಸಲು ಸೂಚನೆ ನೀಡಿದರು .ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು ಶಿರಾಡಿಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಮಳೆಬೀಳುವ ಪ್ರದೇಶವಾದ್ದರಿಂದ ಮುತುವರ್ಜಿಯಿಂದ ಕೆಲಸ ಮಾದಲಾಗಿದೆ ಎಂದೂ ಹೇಳಿದ್ದರು.ಗುಂಡ್ಯ ಬಿ ಸಿ ರೋಡ್ ರಸ್ತೆಯೂ ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಅಂತಲೂ ಹೇಳಿದ್ದರು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಶಿರಾಡಿಯ ಕತೆ ಮತ್ತದೇ. ಎಲ್ಲೆಲ್ಲೂ ರಾಡಿ ಎದ್ದಿದೆ. ಡಾಮರು ರಸ್ತೆಯೆ ಕಾಣುತ್ತಿಲ್ಲ. ಸರ್ವಂ ಧೂಳು ಮಯಂ.

ಇಂದು ಶಿರಾಡಿಯ ಕೆತೆ ಎನು?. ಎನ್ನುವ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಗುಂಡ್ಯದಿಂದಲೇ ರಸ್ತೆ ಹದಗೆಡಲು ಆರಂಬಗೊಂಡಿದೆ. ಎಲ್ಲಾ ತಿರುವುಗಳಲ್ಲಿ ಡಾಮರನ್ನು ಹುಡುಕಿತೆಗೆಯಬೇಕಾಗಿದೆ. ಒಂದು ವೇಳೆ ಘನ ವಾಹನಗಳ ಹಿಂದೆ ನಾವೇನಾದರೂ ಹೋದರೆ ಘಾಟಿ ಪ್ರಯಾನ ಮುಗಿದೊಡನೆ ನಮ್ಮ ಬಣ್ಣವೂ ಬದಲಾಗಿರುತ್ತದೆ. ಅಷ್ಟೂ ಧೂಳು ಎದ್ದು ಬರುತ್ತದೆ. ಸುತ್ತಲಿನ ಮರ ಗಿಡಗಳು ತಮ್ಮ ಬಣ್ಣವನೇ ಬದಲಾಯಿಸಿ ಬಿಟ್ಟಿವೆ. ಈವರೆಗೆ ಕಾಂಕ್ರೀಟ್ ರಸ್ತೆಗಳು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ. ಸುಲಭದಲ್ಲಿ ಹೇಳುವುದಾದರೆ ಗುಂಡ್ಯದಿಂದ ಆರಂಭಿಸಿ ಶಿರಾಡಿ ಘಾಟಿ ಪೂರ್ತಿ ಡಾಮರು ರಸ್ತೆಯ ಎಡ್ರೆಸ್ಸೇ ಇಲ್ಲ. ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ ಕೆಂಪುಹೊಳೆಯಿಂದ ಮೇಲಿನ ಪ್ರದೇಶದಲ್ಲಿ ಇನ್ನೂ ರಸ್ತೆಗೆ ಇಂಟರ್ಲಾಕ್ ಅಳವಡಿಸುವ ಕಾರ್ಯ ಮುಗಿದಿಲ್ಲ. ದುರಂತವೆಂದರೆ ಶಿರಾಡಿ ರಸ್ತೆಯು ವಾಹನ ಸಂಚಾರಕ್ಕೆ ಮುಕ್ತಗೊಂಡು ಇನ್ನೂ 3 ತಿಂಗಳು ಮುಗಿದಿಲ್ಲ ಈ ಮೊದಲೇ ರಸ್ತೆ ಎಕ್ಕುಟ್ಟಿ ಹೋಗಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟು ಶಿರಾಡಿ ದುರಸ್ಥಿಗಾಗಿ ವಿನಿಯೋಗಿಸಿದ್ದ 46.42 ಕೋಟಿ ಎಲ್ಲಿ ಹೋಯಿತು ಎನ್ನುವುದೇ ಒಂದು ಪ್ರಶ್ನೆಯಾದರೆ ಅಂದು ಮಳೆ ಆರಂಭದಲ್ಲೇ ಮಾಡಿದ ಕಾಮಗಾರಿ ಈ ಅವ್ಯವಸ್ಥೆಗೆ ಕಾರಣವೇ ಎಂಬುದು ಇನ್ನೊಂದು ಸಂಶಯ. ಈ ಎಲ್ಲದರ ನಡುವೆ ಸಚಿವರೇ ಈ ಕಾಮಗಾರಿಗೆ ಸರ್ಟಿಫಿಕೇಟ್ ನೀಡಿರುವುದು ಇನ್ನೊಂದು ಸಂಶಯಕ್ಕೆ ಕಾರಣವಾಗಿದೆ.

ಇಲ್ಲಿ ಇನ್ನೂ ಒಂದು ಅಂಶ ಬೆಳಕಿಗೆ ಬರುವುದು ಅದಿರು ಲಾರಿಗಳ ಓಡಾಟ. ಅತ್ಯಧಿಕ ಭಾರದ ಲಾರಿಗಳು ಈ ರಸ್ತೆಯಲ್ಲಿ ಸಾಗುವ ಕಾರಣದಿಂದಾಗಿ ಶಿರಾಡಿ ಇಷ್ಟು ಹದಗೆಡಲು ಕಾರಣವೇ?. ಆದರೆ ಅಧಿಕಾರಿಗಳೇ ಹೇಳಿರುವಂತೆ ಅತ್ಯಂತ ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಿರುವ ಕಾರಣ ಯಾವುದೇ ತೊಂದರೆಯಿಲ್ಲ. ಈ ರಸ್ತೆಯಲ್ಲಿ ಸರಿಸುಮಾರು ಪ್ರತಿನಿತ್ಯ 35 ಸಾವಿರ ವಾಹನಗಳು ಓಡಾಡುತ್ತವೆ.ಈ ಪೈಕಿ ಅದಿರು ಲಾರಿಗಳು 5 ರಿಂದ 10 ಸಾವಿರ ಓಡಾಡುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಿರು ಲಾರಿಗಳ ಸಂಖ್ಯೆ ಕಡಿಮೆಯಾಗಿರುವುದು ಕೂಡಾ ತಿಳಿದುಬರುತ್ತದೆ. ಕಾನೂನು ಪ್ರಕಾರ ಈ ಲಾರಿಗಳೆಲ್ಲಾ ನಿಯಮಿತವಾದ ಭಾರಗಳನ್ನೇ ಹೇರಬೇಕು. 6 ಚಕ್ರದ ಲಾರಿಗಳು 16.2 ಮೆಟ್ರಿಕ್ ಟನ್ , 10 ಚಕ್ರದ ಲಾರಿಯಲ್ಲಿ 25 ಮೆತ್ರಿಕ್ ಟನ್, 22 ಚಕ್ರದ ಲಾರಿಯಲ್ಲಿ 44 ಮೆಟ್ರಿಕ್ ಟನ್ ಭಾರವನ್ನು ಹೇರಿಕೊಂಡು ರಸ್ತೆಯಲ್ಲಿ ಸಾಗಬಹುದಾಗಿದೆ. ಈ ಭಾರಕ್ಕೆ ತಕ್ಕಂತೆ ರಸ್ತೆಯನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಆದರೆ ಈ ಭಾರಕ್ಕಿಂತ ಹೆಚ್ಚಿನ ಭಾರವು ಲಾರಿಯಲ್ಲಿ ಹಾಕಿದಾಗ ಅದು ರಸ್ತೆಯ ಮೇಲೂ ಪರಿಣಾಮ ಬೀರುತ್ತದೆ.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಯಾವುದೇ ರಸ್ತೆಯನ್ನು ಆಯಾ ಪ್ರದೇಶ ಮಳೆಯನ್ನು ಆಧರಿಸಿಕೊಂಡು ಅದಕ್ಕೆ ಅನುಗುಣವಾಗಿ ರಸ್ತೆಯನ್ನುವಿನ್ಯಾಸಗೊಳಿಸಿ ಅನುದಾನವನ್ನು ಪಡೆಯಬೇಕು. ಆದರೆ ಶಿರಾಡೀಯಂತಹ ಪ್ರದೇಶದಲ್ಲಿ ವಾರ್ಷಿಕವಾಗಿ ಸರಾಸರಿ 250 ರಿಂದ 400 ಇಂಚು ಮಳೆ ಬೀಳುತ್ತದೆ. ಆದರೆ ಈ ಲೆಕ್ಕವನ್ನು ಮಾಡದೆ ದೂರದಲ್ಲೆಲ್ಲೋ ಎ ಸಿ ಕಚೇರಿಯಲ್ಲಿ ಕುಳಿತು ಲೆಕ್ಕ ಹಾಕಿ ಮಾಡುವ ರಸ್ತೆಗಳು ಶಿರಾಡಿಯಂತಾಗದೇ ಉಳಿದೀತೇ?.ಎನ್ನುವುದು ಕೂಡಾ ಚರ್ಚೆಯಾಗಬೇಕಾದ ವಿಷಯವಾಗಬೇಕಾಗಿದೆ.

ಒಟ್ಟಿನಲ್ಲಿ ಸುಮಾರು 8 ತಿಂಗಳುಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಶಿರಾಡಿಯನ್ನು ದುರಸ್ಥಿ ಪಡಿಸಿ ಅತ್ತ ಚಾರ್ಮಾಡಿಯನ್ನೂ ದುಸ್ಥಿತಿಗೆ ತಳ್ಳಿ ಇತ್ತ ಮಡಿಕೇರಿಯ ಸಂಪಾಜೆ ಘಾಟಿಯನ್ನೂ ಹಾಳುಗೆಡಹಿ ಇದೀಗ ಮಾಡಿದ ಉದ್ಘಾಟನೆಗೊಂಡು 3 ತಿಂಗಳಲ್ಲೇ ಹಾಳಾಗಿರುವ ಶೀರಾಡಿಯನ್ನು ಇನ್ನೂ ಕೆಲ ತಿಂಗಳುಗಳ ಬಂದ್ ಗೊಳಿಸ ಬೇಕಾದ ದಿನ ದೂರವಿಲ್ಲ. ಆದರೆ ಈಗಾಗಲೆ ಶಿರಾಡಿಯಲ್ಲಿ ವಿನಿಯೋಗಿಸಿದ ಆ ಕೋಟಿ ಹಣ ನೀರಮೇಲಿನ ಹೋಮವೇ? ಎಂಬ ಪ್ರಶ್ನೆಗೆ ಉತ್ತರ ನೀಡುವವರಾರು?.

25 ಸೆಪ್ಟೆಂಬರ್ 2008

ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??




ಇವರೆಲ್ಲಾ ಎಲ್ಲಿದ್ರು ಅಂತ. ಇತ್ತೀಚೆಗೆ ಭೇಟಿ ನೀಡಿದ ಒಬ್ಬ ರಾಜಕೀಯ ಪ್ರಮುಖರು ನಾವು ಇನ್ನೂ ಜೀವ ಇದ್ದೇವೆ ಅಂತ ಒದರಿದರು. ಅವರು ಹಾಗೆ ಹೇಳಲು ಕಾರವೇನು ಗೊತ್ತಾ?. ಇತ್ತೀಚೆಗೆ ಕರಾವಳಿ ಹಾಗೂ ರಾಜ್ಯದಲ್ಲಿ ನಡೆದ ದಾಳಿ ಪ್ರಕರಣ.ಅದನ್ನು ನಾನು ಬಿಡಿಸಿ ಹೇಳಬೇಕೆಂದೇನಿಲ್ಲ. ಅಲ್ಲಾ ಸ್ವಾಮಿ ನೀವು ಬದುಕಿದ್ದೀರಿ ಅಂತ ನಾವು ಅಂದುಕೊಂಡಿರಲೇ ಇಲ್ಲ.ಯಾಕೆಂದ್ರೆ ನೀವು ಜೀವವಾಗೋದೇ ಈಗ ಮಾತ್ರಾ ಅಲ್ವಾ ಅಂತ ಬೀದಿ ಬೀದಿಯಲ್ಲಿ ಜನಮಾತನಾಡಿಕೊಂಡಿದ್ದು ಸತ್ಯ. ಅದು ಯಾಕೆ ಗೊತ್ತಾ?.

ಇದುವರೆಗೆ ಎಲ್ಲೂ ಕಾಣಿಸಿಕೊಳ್ಳದವರೂ ಈಗ ಕಾಣಿಸಿಕೊಂಡಿದ್ದಾರೆ. ಒಂದು ಧರ್ಮದ ಮೇಲೆ ಮತ್ತು ಅವರ ನಂಬಿಕೆಯ ಮೇಲೆ ಅವರ ಆಚರಣೆಯ ಮೇಲೆ, ಅವರ ಶ್ರದ್ಧಾ ಕೆಂದ್ರದ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ ಬಿಡಿ. ಹಾಗೆ ಮಾಡಿದ್ದಾರೆ ಎಂದರೆ ಅದು ಪರಮ ತಪ್ಪು. "ಅಲ್ಲಿ" ಲೋಪಗಳು ಉಭಯ ಕಡೆಗಳಿಂದಲೂ ಆಗಿದೆ ಅಂತ ಅಂದುಕೊಳ್ಳೋಣ.ಅಂತಹವರಿಗೆ ಶಿಕ್ಷೆಯಾಗಲೆಬೇಕು. ಅದರಲ್ಲಿ ಎರಡು ಮಾತಿಲ್ಲ.

ಆದರೆ ಇದನ್ನು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡವರು ಯಾರು ಗೊತ್ತಾ?. ರಾಜಕೀಯದ ನಾಯಕರು. ತಮ್ಮ ರಾಜಕೀಯದ ಭವಿಷ್ಯಕ್ಕಾಗಿ ಸಮಾಜದಲ್ಲಿ ಮತ್ತೆ ಮತ್ತೆ ಅಶಾಂತಿಯನ್ನು ಸೃಷ್ಠಿಸಿಕೊಂಡು ತಮ್ಮ ಸ್ಥಾನವನ್ನು ಭದ್ರ ಪಡಿಸುವ ಯತ್ನದಲ್ಲಿ ಇಂದಿಗೂ ತೊಡಗಿಕೊಂಡಿದ್ದಾರೆ. ಅತ್ತ ಓಟ್ ಬ್ಯಾಂಕನ್ನು ಎಲ್ಲಿ ಇನ್ನೊಂದು ಪಕ್ಷ ಕಸಿದು ಬಿಡುತ್ತದೋ ಎಂಬ ಭಯದಿಂದ ಒಂದಲ್ಲ ಎರಡೆರಡು ಬಾರಿ ಪ್ರಾರ್ಥನಾ ಮಂದಿರಗಳಿಗೆ ಭೇಟಿ ಮಾಡಿ ಸಾಂತ್ವನವೇನು.... ಕಣ್ಣೀರೇನು.... ಪತ್ರಿಕಾಗೋಷ್ಠಿಗಳೇನು..., ನಾವು ಬದುಕಿದ್ದೇವೆ ಎಂದು ಏನು ಹೇಳಿಕೆಗಳೇ ಹೇಳಿಕೆಗಳು. ದುರಂತದ ಸಂಗತಿಯೆಂದರೆ ಅವರು ಬದುಕಿರುವುದನ್ನು ಈಗಲ್ಲ ಅಂದೇ ತೋರಿಸಿಕೊಡಬೇಕಿತ್ತು. ನಮ್ಮ ರಾಜ್ಯದಲ್ಲಿ ಕುಡಿಯಲು ಇಂದಿಗೂ ನೀರಿಲ್ಲದ ಊರುಗಳೆಷ್ಟಿಲ್ಲ, ಸಮರ್ಪಕ ರಸ್ತೆಗಳಿಲ್ಲದ ಊರುಗಳು ಎಷ್ಠಿಲ್ಲ?, ಮನೆಗಳಿಲ್ಲದ ಮಂದಿ ಎಷ್ಠಿಲ್ಲ? ಅವರಿಗೆಲ್ಲಾ ಯಾರು ಬದುಕಿರುವವರು ಯಾರು?. ಸರಕಾರ ಆ ಕಡೆ ಕಣ್ಣೆತ್ತಿಯೂ ನೋಡಿಲ್ಲ. ಅಂತಹ ಜನರ ಬಳಿಗೆ ಹೋಗದ ಇಂದಿನ ರಾಜ್ಯ,ಕೇಂದ್ರ ಸರಕಾರವಿರಬಹುದು, ಸರಕಾರದ ಕಮಿಶನ್ಗಳಿರಬಹುದು , ವಿಶೇಷ ತಂಡಗಳಿರಬಹುದು ರಾಜಕೀಯ ನಾಯಕರಿರಬಹುದು ಎಲ್ಲಿದ್ದಾರೆ.. ಎಲ್ಲಿದೆ ಕಮಿಶನ್. ಜನರ ಸಮಸ್ಯೆಗೆ ಸ್ಪಂದಿಸದ ಇಂತಹ ನಾಚಿಕೆಗೇಡಿನ ರಾಜಕಾರಣಗಳು ಅನಗತ್ಯವಾಗಿ ಸಮಾಜದಲ್ಲಿ ಮತ್ತೆ ಮತ್ತೆ ಅಶಾಂತಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡಿ,. ಅದೇ ಸ್ಥಳಗಳಿಗೆ ಮತ್ತೆ ಮತ್ತೆ ಭೇಟಿ ನೀಡಿ ಜನರ ಮನಸ್ಸನ್ನು ಮತ್ತೆ ಮತ್ತೆ ಘಾಸಿಗೊಳಿಸುವ ಪ್ರಯತ್ನ ನಡೆಸುತ್ತಾರಲ್ಲಾ ಇವರು ಲಜ್ಜೆಗೇಡಿನ ನಾಯಕರು. ದೇಶ ಉದ್ದಾರವಾದೀತಾ???

ಇದು ಹಲವು ದಿನಗಳ ಮನಸ್ಸಿನ ಭಾವನೆಗಳನ್ನು ತಡೆಯಲಾರದೆ ಬರೆಯಬೇಕಾಯಿತು.

22 ಸೆಪ್ಟೆಂಬರ್ 2008

ಗಣಿ .. ಗನಿ..

ಗಣಿ ಕಾಟ ರಾಜ್ಯದ ಎಲ್ಲೆಲ್ಲೂ ನಡೆಯುತ್ತಿದೆ.ಅಮೂಲ್ಯ ಸಂಪತ್ತುಗಳು ನಾಶವಾಗುತ್ತಿವೆ.ಪರಿಹಾರವೇ ಕಾಣದೆ ದಾರಿ ಕಾಣದಾಗಿದೆ... ಅದಕ್ಕೆ ತಕ್ಕ ನಮ್ಮ ವ್ಯವಸ್ಥೆಗಳು.ಒಬ್ಬ ಉತ್ತಮ ಅಧಿಕಾರಿಯಿದ್ದರೆ ಆತನಿಗೆ ಎತ್ತಂಗಡಿ ಕಾದಿಟ್ಟ ಬುತ್ತಿ.ಯಾವಾಗಬೆಕಾದರೂ ಎಲ್ಲಿಗೆ ಬೇಕಾದರೂ. ಈ ದೇಶ ಹೀಗಾದರೆ ಉದ್ದಾರವಾದಿತಾ ಅಮ್ತ ಮಿತ್ರರೊಂದಿಗೆ ಹರಟುವಾಗ ಅದೆಷ್ಟೋ ಬಾರಿ ಹೇಳಿದ್ದಕ್ಕೆ ಪುಷ್ಟಿ ನೀಡಿದೆ.

ಅತ್ತ ಬಳ್ಳಾರಿಯಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಇತ್ತ ಕರಾವಳಿ ಜಿಲ್ಲೆಯಲ್ಲಿ ಕಲ್ಲಿನ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲಿ ಬಹುತೇಕವುಗಳು ಅಕ್ರಮವಾಗಿ ನಡೆಸಲಾಗುತ್ತಿದೆ. ಇದನ್ನು ರೈಡ್ ಮಾಡಿದ ದಿಟ್ಟ ಅಧಿಕಾರಿಗಳಿಗೆ ವರ್ಗಾವಣೆ ಕಾದುನಿಂತರೆ ಗಣಿಗಾರಿಕೆಯನ್ನು ನಿಲ್ಲಿಸಬೇಕಾದ ಭೂವಿಜ್ಞಾನ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ.ಇದಕ್ಕೆ ಒಂದು ಉದಾಹಣೆ ಪುತ್ತೂರು ಸಮೀಪದ ಕಬಕದಲ್ಲಿದೆ. ಈ ಬಗ್ಗೆ ಅಲ್ಲಿಗೆ ಹೋಗಿದ್ದಾಗ ಸಿಕ್ಕ ಮಾಹಿತಿ ಇಲ್ಲಿದೆ

ಯಾವುದೇ ಒಂದು ಬಂಡೆಯನ್ನು ಅಥವಾ ಗಣಿಗಾರಿಕೆ ನಡೆಸಲು ಅಲ್ಲಿ ನುರಿತ ಹಾಗೂ ಅದಕ್ಕೆ ಸಂಬಂಧಿಸಿದ ಇಲಾಖೆಯಿಂದ ತರಬೇತಾದ ಕಾರ್ಮಿಕರೇ ದುಡಿಯಬೇಕು. ಆದರೆ ಅಲ್ಲೆಲ್ಲೂ ಅಂತಹ ಕಾರ್ಮಿಕರು ಕಾಣಿಸುವುದೇಯಿಲ್ಲ.ಮಾತ್ರವಲ್ಲ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಂತಹ ಗಣಿಗಾರಿಕೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾದಬೇಕು. ಆದರೆ ದುರಂತವೆಂದರೆ ಅಲ್ಲಿಗೆ ಅವರಾರೂ ಬಾರದೆ ಅನುಮತಿ ನೀಡಿರುತ್ತಾರೆ. ಹಾಗೆ ಅನುಮತಿ ನೀಡುವ ಮೊದಲು ಗಣಿಗಾರಿಕೆಯ 200 ಮೀಟರ್ ದುರ ಯಾವುದೇ ಮನೆಗಳು, ರಸ್ತೆಗಳು ,ಶಾಲೆಳನ್ನು ಗಮನಿಸಬೇಕು ಆದರೆ ಇಂದು ಅಂತಹ ಕಾನೂನುಗಳೆಲ್ಲವೂ ಗಾಳಿಗೆ ತೂರಲಾಗಿದೆ. ಇಂತಹುದೇ ಘಟನೆ ಪುತ್ತೂರಿನ ಕಬಕದಲ್ಲಿಒ ನಡೆದಿದೆ. ಅಲ್ಲಿನ ಕಾಯರ್ ಬಳ್ಳಿ ಎಂಬ ಗುಡ್ಡದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ. ಯಾವೊಬ್ಬ ಅಧಿಕಾರಿಯೂ ಇಲ್ಲಿನ ಮನೆಗಳ ಬಗ್ಗೆ ಗಮನಹರಿಸಿಲ್ಲ. ಇತ್ತೀಚೆಗೆ ಸಾರ್ವಜನಿಕರ ದೂರುಗಳನ್ನು ಗಮನಿಸಿದ ಪುತ್ತೂರು ತಹಶೀಲ್ದಾರರು ಇಂತಹ ಗಣಿಕಾರಿಕೆಗಳ ಪ್ರದೇಶಕ್ಕೆ ದಾಳಿ ನಡೆಸಿದ್ದರು. ಆದರೆ ದಾಳಿ ನಡೆಸಿದ ಬಳಿಕ ರಾಜಕೀಯ ಹಾಗೂ ಹಣ ಬಲದಿಂದ ಮತ್ತೆ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸ. ತಹಶೀಲ್ದಾರರು ದಾಳಿ ನಡೆಸಿದ ಪರಿಶೀಲಿಸಿದಾಗ ಕೆವಲ 50 ಸೆಂಟ್ಸ್ ಗೆ ಅನುಮತಿ ಪಡೆದು 1.87 ಎಕ್ರೆ ಪ್ರದೇಶದಲ್ಲಿ ಕಲ್ಲಿನ ಗಣಿಗಾರಿಕೆ ಮಾಡುತ್ತಿರುವುದು ಮತ್ತು ಇಂತಹ ಸ್ಫೋಟದಿಂದ ಸಮೀಪದ ಮನೆಗಳಿಗೆ ಹಾನಿಯಾದುದನ್ನು ಗಮನಿಸಿದ ತಹಶೀಲ್ದಾರರು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಹೀಗಾಗಿ ಮತ್ತೆ ಗಣಿ ಇಲಾಖೆಯು ತನಿಖೆ ನಡೆಸಿ ಮುಂದೆ ಪ್ರಬಲ ಸ್ಫೋಟಕ ಬಳಸದೆ ಕಂಟ್ರೋಲ್ಡ್ ಬ್ಲಾಸ್ಟ್ ಮಾಡುವಂತೆ ಗಣಿದಣಿಗಳಿಗೆ ನಿರ್ದೇಶನ ಹಾಗೂ ಅನುಮತಿಯನ್ನೂ ನೀಡಿತು.ಆದರೆ ಸಾಮಾನ್ಯ ಜನರಿಗೆ ಈ ಬ್ಲಾಸ್ಟ್ ಅರ್ಥವಾಗುವುದು ಹೇಗೆ ಎನ್ನುವುದರ ಬಗ್ಗೆ ವಿವರವೇ ಇಲ್ಲ.


ಪುತ್ತೂರಿನ ಕಬಕದ ಸರ್ವೆ ನಂಬ್ರ 26-1A ಯಲ್ಲಿ ಈ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್ ಗೂ ಮಾಹಿತಿಯಿದ್ದರೂ ಜನರ ಮನವಿಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಅದಲ್ಲದೆ ಇಲ್ಲಿನ ಗಣಿಗಾರಿಕೆಯೊಂದಿಗೆ ಕ್ರಶರ್ ಹುಡಿ ಅಣ್ದರೆ ಕಲ್ಲಿನ ಹುಡಿಯನ್ನೂ ಮಾಡಲಾಗುತ್ತದೆ.ಇದರಿಂದ ಅಪರಿಮಿತವಾದ ಕಲ್ಲಿನ ಧೂಳು ಊರಿನ ಸುತ್ತೆಲ್ಲಾ ಹಬ್ಬುತ್ತದೆ.ಕಾನೂನು ಪ್ರಕಾರ ಈ ಕ್ರಶರ್ ತಯಾರಿಕಾ ಘಟಕಕ್ಕೆ ೯ ಮೀಟರ್ ಎತ್ತರದ ಗೋಡೆಯನ್ನೂ ಕಟ್ಟಬೇಕು ಆದರೆ ಅದನ್ನೂ ಗಾಳಿಗೆ ತೂರಲಾಗಿದೆ.ಆದರೆ ಗನಿ ಮತ್ತು ಭೂವಿಜ್ಞಾನ ಇಲಾಖೆಯು 1998 ರಲ್ಲಿ ಹೇಳಿದ ಪ್ರಕಾರ ಕರ್ನಾಟಕ ಉಪ ಖಲಿಜ 94 ರ ನಿಯಮ ಪ್ರಕಾರ ಸ್ಫೋಟಕಗಳನ್ನು ಉಪಯೋಗಿಸದೇ ಕಲ್ಲುಗಣಿಗಳ ಕಾರ್ಯವನ್ನು ಮಾಡಬೇಕಲ್ಲದೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಕಲ್ಲಗಣಿಯನ್ನು ನಿಷೇಧಿಸಬೇಕು ಆದರೆ ಇದೇ ಇಲಾಖೆಯು 2006 ರಲ್ಲಿ ಹೇಳುತ್ತದೆ ಕಲ್ಲುಗಣಿಯನ್ನು ನೆಲಮಿತಿಯಿಂದ 6 ಮೀಟರ್ ಆಳ ಮತ್ತು ಸಾರ್ವಜನಿಕ ರೈಲ್ವೇ ಕಟ್ಟಡಗಳು ಇತ್ಯಾದಿಗಳ ರಚನೆಗಳೊಂದಿಗೆ ಇಲದೇ ಇದ್ದಲ್ಲಿ ಕಲ್ಲುಗಣಿಯನ್ನು ಸ್ಫೋಟಿಸಬಹುದು ಎನ್ನುತ್ತದೆ.ಹೀಗಾಗಿ ಒಂದು ದ್ಚಂದದಲ್ಲಿರುವ್ ಈ ಇಲಾಖೆಯ ಬಗ್ಗೆಯೇ ಸಂಸಯ ಹಿಟ್ಟಿಸುತ್ತದೆ.ಇಂತಹುಗಳ ಮಧ್ಯೆಯೇ ಇಂದಿಗೂ ಕಬಕದಲ್ಲಿ ಸ್ಫೋಟ ನಡೆಸಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಅನೆಕ ಮನೆಗಳು, ಅಂಗಡಿಗಳ ಗೋಡೆಗಳು ಬಿರುಕು ಬಿಟ್ಟಿವೆ, ಕಲ್ಲಿನ ಧೂಳು ಮನೆಯಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದೆ, ಮನೆಯಲ್ಲಿರುವ ಮಕ್ಕಳು , ಹೆಂಗಸರು ಈ ಸ್ಫೋಟದ ಸಂದರ್ಭದಲ್ಲಿ ಬೆಚ್ಚಿಬೀಳುತ್ತಾರೆ. ಆದರೂ ಈ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಈ ಜನರ ಸಮಸ್ಯೆಯನ್ನು ಕೇಳುವ ಅಧಿಕಾರಿಗಳು ಬಂದರೆ ವರ್ಗಾವಣೆ ತಕ್ಷಣವೇ ನಡೆಯುತ್ತದೆ.

ಹಾಗೆಂದು ಇವರ ನಿಲುವು ಇದು...

ಗಣಿಗಾರಿಕೆಯೇ ಬೇಡ ಅಂತಲ್ಲ ಎಲ್ಲವೂ ನಿಯಂತ್ರಣದಲ್ಲಿ ನಡೆಯಲಿ

21 ಸೆಪ್ಟೆಂಬರ್ 2008

ಕಳಚುವ ಕೊಂಡಿ....



ಜೋರಾಗಿ ಮಳೆ ಬಂತು ರೈನ್ ಕೋಟ್ ಬೇರೆ ಇದ್ದಿರಲಿಲ್ಲ. ಕೆಲಸ ತುರ್ತಾಗಿದ್ದರೂ ಪರಿಚಯಸ್ಥರ ಮನೆಗೆ ಹೋಗಲೇಬೇಕಾಯಿತು.ಅದು ಅಷ್ಟೊಂದು ಶ್ರೀಮಂತರ ಮನೆಯಲ್ಲ.ಬಡತನದಲ್ಲಿರುವ ವೃದ್ಧ ದಂಪತಿಗಳಿರುವ ಮನೆ. ಅವರೊಂದಿಗೆ ಮದುವೆಯಾದ ಮಗಳು ಹಾಗೂ ಅಳಿಯ ವಾಸವಾಗಿದ್ದಾರೆ.ವೃದ್ಧರ ವಯಸ್ಸು ಸುಮಾರು 70 ರಿಂದ 80 ಇರಬಹುದು. ನನಗೆ ಯಾಕೋ ಇನ್ನೊಮ್ಮೆ ಈ ಮನೆ ನೆನಪಾಯಿತು. ಯಾಕೆ ಗೊತ್ತಾ?. ಆ ವೃದ್ದ ದ0ಪತಿಗೆ "ಸುಪುತ್ರ" ಕುಲಸಂಜಾತ , ಕುಲೋದ್ಧಾರಕ, ವಂಶೋದ್ಧಾರಕ ... ಹೀಗೆ ಏನು ಬೇಕಾದರೂ ವಿಶೇಷಣಗಳನ್ನು ಕೊಡಬಲ್ಲ ಏಕೈಕ ಪುತ್ರನಿದ್ದಾನೆ. ಆತನಿಗೆ ಮಾತ್ರಾ ಈ ವ್ರುದ್ಧರ ಬಗ್ಗೆ ಗೊಡವೆಯೇಯಿಲ್ಲ. ಇರುವುದು "ಮಹಾ"ನಗರಿಯಲ್ಲಿ. "ದೊಡ್ಡ" ಉದ್ಯೋಗದಲ್ಲಿ. ಆದರೆ ಹಳ್ಳಿಯಲ್ಲಿ ತಾಯಿ ತಂದೆ ಮಗನ ನಿರೀಕ್ಷೆಯಲ್ಲಿದ್ದಾರೆ, ಫೋನು ನಂಬ್ರದ ಹುಡುಕಾಟದಲ್ಲಿದ್ದಾರೆ, ಹಾಗಿದ್ದರೂ ಆತನ ಬಗ್ಗೆ ಇವರಿಗೆ ಹೆಮ್ಮೆಯಿದೆ...!!!. ಹೆತ್ತವರಿಗೆ ಹೆಗ್ಗಣ ಮುದ್ದು ಅಂದರೆ ಇದೇ ಅಲ್ಲವೇ..?

ಏನು ಗೊತ್ತಾ ವಿಷ್ಯ.?. ನಾನು ಹಾಗೆ ಆ ಮನೆಗೆ ಹೋದಾಗ ವೃದ್ಧರು ಕೇಳಿದ್ದು ನಿನಗೆ "......" ಗೊತ್ತಾ? ". ....." ಅದರ ಕಚೇರಿ ಬೆಂಗಳೂರಿನಲ್ಲಿದೆಯಂತೆ , ಆತ [ಅಂದರೆ ಮಗ] ಆ ಶಾಖೆಯಲ್ಲಿದ್ದಾನಂತೆ ನನ್ನಲ್ಲಿ ಫೋನು ನಂಬ್ರವೂ ಇಲ್ಲ . [ಇವರ ಮನೆಗೆ ಫೋನಿಲ್ಲ].ನಿನಗೆ ಹೇಗಾದ್ರೂ ಮಾಡಿ ಆ ನಂಬ್ರವನ್ನು ಸಂಗ್ರಹ ಮಾಡಿಕೋಡುವೆಯಾ?. ಎಲ್ಲಾದರೂ ನಿನಗೆ ಫೋನಿಗೆ ಸಿಕ್ಕರೆ ಒಂದು ಫೋನು ಮಾಡಬೇಕಂತೆ ಅಂತ ಹೇಳು... ಎಂದು ಹೇಳಿದರು. ಸರಿ.. ಸರಿ ಅಂದೆ. ನನಗೆ ತಿಳಿದಂತೆ ಆ ವೃದ್ಧ ಮಗನ ಓದಿಗೆ ಸಾಲ ಮಾಡಿ ತುಂಬಾ ಖರ್ಚು ಮಾದಿದ್ದರು. ಉಳಿದ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಅಷ್ಟೊಂದು ನೀಡದೆ "ವಂಶೋದ್ಧಾರಕ"ನಿಗೆ ಹೆಚ್ಚು ಓದಿಸಿದರು ,ಅದೂ ಕಷ್ಟ ಪಟ್ಟು . ಹಾಗಾಗೇ ಆತನಿಗೆ ಒಳ್ಳೆಯ ಉದ್ಯೋಗವೂ ಸಿಕ್ಕಿತು. ನಂತರ ಮದುವೆಯೂ ಆಯಿತು. ವಾಸ್ತವ್ಯ ಬದಲೂ ಆಯಿತು. ಆ ಬಳಿಕ ಈಗ ತಂದೆಯೇ ಎಲ್ಲಿರುವೆ ... ಹೇಗಿರುವೆ ಎಂದು ಕೇಳಲೂ ಆಗದ ಸ್ಥಿತಿ... ,ತಂದೆಗೆ ಮಗನೇ..... ಎನ್ನಲಾಗದ ಸ್ಥಿತಿ.... ಅಂದು ಅಷ್ಟು ಕಷ್ಟಪಟ್ಟದ್ದಕ್ಕೆ ಈಗ ವೃದ್ಧರಿಗೆ ಸಿಗುವ "ಪ್ರತಿಫಲ".

ಏನ್ರಿ ಇದು ಸಮಾಜ.?.ಒಂದು ತಂದೆ ಒಂದು ತಾಯಿಯನ್ನು ನೋಡಿಕೊಳ್ಳಲಾಗದವನೂ ಈ ಭೂಮಿಯ ಮೇಲೆ ಇದ್ದಾನಲ್ಲಾ. ಆತ ಎಂತಹ ಮೂರ್ಖ.ಅದೇ ಹಾದಿಯು ಮುಂದೆ ಈತನಿಗೂ ಲಭ್ಯವಾಗಬೆಕು ಆಗ ಮಾತ್ರಾ ತನ್ನ ತಪ್ಪಿನ ಅರಿವಾದೀತು. ಅಲ್ಲಿ A C ಕಚೇರಿಯೊಳಗೆ ಕುಳಿತು ಲಕ್ಷಗಟ್ಟಲೆ ಸಂಪಾದಿಸುವ ಈ "ಮೂರ್ಖ" ಇಲ್ಲಿ ತನ್ನ ತಂದೆ ತಾಯಿ ಹರಕಲು ಮನೆಯಲ್ಲಿ ಪರದಾಡುತ್ತಿರುತಾರಲ್ಲಾ ಆತನಿಗೆ ನಿಜವಾಗಲೂ ಮನುಷ್ಯತ್ವ ಇದೆಯಾ?. ಒಂದು ವೇಳೆ ಅಂದು ಅಷ್ಟು ಓದಿಸದೇ ಇರುತ್ತಿದ್ದರೆ ಇಂದು ಉನ್ನತಿಗೆರುವ ಅವಕಾಶವಿತ್ತಾ?.ಒಂದು ರೀತಿಯಲ್ಲಿ ಓದಿಸಿದ್ದೇ ತಪ್ಪು.

ಇದು ಒಬ್ಬನ ಕತೆಯಾಗಿರದು.ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇರಬಹುದು. ಅಲ್ಲಿ ಇಲ್ಲಿ ಸುತ್ತಿದಾಗ ಇಂತಹ ಪ್ರಕರಣಗಳು ನಮ್ಮ ಮುಂದೆ ಕಾಣಸಿಗುತ್ತವೆ ಆಗಿನ ತಕ್ಷಣದ ಅಭಿಪ್ರಾಯವನ್ನು ದಾಖಲಿಸಿಡಬೆಕು ಅಂದುಕೊಂಡಿದ್ದೇನೆ.

19 ಸೆಪ್ಟೆಂಬರ್ 2008

ಟಾಪ್ ಸಿ ಎಂ...!!??






ಏನ್ರಿ ಕತೆಯಿದು.?.ಅತ್ತ ನಮ್ಮ ಸಿ ಎಂ , ಸರಕಾರ ವಿವಿಧ ಸಮಸ್ಯೆಯಲ್ಲಿದೆ. ಒಂದಿಲ್ಲೊಂದು ತೂಗುಕತ್ತಿ ಬರುತ್ತಿದೆ. ಒಂದರ್ಥದಲ್ಲಿ ಸರಕಾರಕ್ಕೆ , ಮುಖ್ಯಮಂತ್ರಿಗಳಿಗೆ "ಬಂಧನ". ನಾನು ಕಂಡದ್ದು ಅದನ್ನೇ. ಹಾಗೇ ಸುತ್ತಾಡುತ್ತಾಯಿದ್ದಾಗ ವಾಹನವೊಂದರ ಟಾಪ್ ಗೆ ಕಟ್ಟಿದ ಬ್ಯಾನರ್ ನಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಕಾಣಿಸಿಕೊಂಡದ್ದು ಹೀಗೆ.

ಅಲ್ಲಾರೀ, ನಾವು ಹೇಗೆ ಬೇಕಾದರೂ ಯಡಿಯೂರಪ್ಪರನ್ನ ನೋಡಿಕೊಳ್ಳೋಣ. ಅದೆಲ್ಲವೂ ರಾಜಕೀಯವಾಗಿಯೇ ಇರಲಿ. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವವಿದೆಯಲ್ಲಾ ಅದನ್ನು ಪ್ರಜೆಗಳು ಸ್ವಲ್ಪವಾದರೂ ಉಳಿಸಿಕೊಳ್ಳಬೇಡವೇ?.ಅವರು ಮುಖ್ಯಮಂತ್ರಿಯಾಗಿರುವಷ್ಟು ಕಾಲವಾದರೂ ಆ ಬ್ಯಾನರ್ ನ್ನು ಹಾಗೆ ಕಟ್ಟಬಾರದಾಗಿತ್ತು. ಆದರೆ ಅಣಕವೆಂಬಂತೆ ಇಂದು ಯಡಿಯೂರಪ್ಪನವರ ಸ್ಥಿತಿಯೂ ಹಾಗೆಯೇ ಇದೆ.ಅಧಿಕಾರ ವಹಿಸಿಕೊಂಡಾಗಿನಿಂದ ಗಲಾಟೆಗಳೇ ಗಲಾಟೆಗಳೂ. ಗೊಬ್ಬರ ಗಲಾಟೆಯಿಂದ ಆರಂಭಿಸಿ ನಿನ್ನೆಯವರೆಗೆ ನಡೆದ ಗಲಭೆಯವರೆಗೆ ಎಲ್ಲವೂ ಸಿ ಎಂ ಅವರನ್ನು ಬಂಧನದಲ್ಲಿರುವಂತೆ ಮಾಡಿದೆ.ಅದಕ್ಕೆ ಪರಿಗಾರವೇನು ಎಂಬುದರ ಬಗ್ಗೆ ಚಿಂತನೆ ನಡೆಸುವ ಹೊತ್ತಿಗೆ ಇಲ್ಲಿ ವಾಹನದಲ್ಲಿ ಕಾಣಿಸಿಕೊಂಡದ್ದು ಹೀಗೆ.

ಇದು ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಂಡ ಬ್ಯಾನರ್ ಈಗ ವಾಹನದ ಟಾಪ್ ಗೆ ಬಳಕೆಯಾಗಿದೆ ನಿಜ. ಆದರೆ ರಾಜ್ಯದ ಮುಖ್ಯಮಂತ್ರಿಯವರನ್ನು ಹೀಗೆ "ಬಂಧಿಸುವುದು" ಸರಿಯಲ್ಲ ಎಂಬುದು ನನ್ನ ಭಾವನೆ. ರಾಜಕೀಯವಾಗಿ ಎಷ್ಟೇ ಟೀಕೆಗಳು ಇರಲಿ. ದುರದೃಷ್ಟವಶಾತ್ ಅದೇ ಪಕ್ಷದ ಯಾರೊಬ್ಬರೂ ಮಾತನಾಡುತ್ತಿಲ್ಲ.

ಬಹುಶ: ನನಗೆ ಅನ್ನಿಸುವ ಹಾಗೆ ಸಿಂದು ಅಷ್ಟು ಬೇಗನೆ ಜನ ಮರೆತುಬಿಡುತ್ತಾರೆ. ಚುನಾವಣೆಯ ನಂತರ ಎಲ್ಲವನ್ನೂ ಮರೆತು ಅಲ್ಲಿ ಸಿಕ್ಕಿದ್ದನ್ನು ಬಳಸಿಕೊಂಡು ತಮ್ಮ ಪಾಡಿಗೆ ತಾವಿರುತ್ತಾರೆ. ಅಲ್ಲಿ ಜನಪ್ರತಿನಿಧಿಗಳು ಅಯ್ಯೋ "ಅವರಿಗೆ" ಅನ್ಯಾಯವಾಗಿದೆ , ಇವರಿಗೆ " ಅನ್ಯಾಯವಾಗಿದೆ" ಎಂದು ಕೂಗುತ್ತಾರ್‍ಎ. ಹಾಗಾಗಿ ಯಡಿಯೂರಪ್ಪನವರಿಗೂ ಈ ಅವಸ್ಥೆ ಬಂದಿದೆಯೋ ಗೊತ್ತಿಲ್ಲ. ಕಾರಣ ಕೇಳಲು ಆ ವಾಹನ ಚಾಲಕ ಸಿಕ್ಕಿಲ್ಲ.

16 ಸೆಪ್ಟೆಂಬರ್ 2008

ಶಾಂತಿಯ ನಾಡಲ್ಲಿ..


ಇದು ನ್ಯಾಯವೇ..? ಇದೆಲ್ಲವೂ ಕ್ಯಾಮಾರದಿಂದಾದ ಅನಾಹುತಗಳು....! ಇತ್ತೀಚೆಗೆ ಯಾಕ್ರೀ ಹೀಗಾಗುತ್ತೇ?. ಜನ ಇದನ್ನು ಒಪ್ಕೊಳ್ತಾರ್ರೇನ್ರಿ..?

ಇದೇನು ಪ್ರಶ್ನೆಗಳೇ ಪ್ರಶ್ನೆಗಳು ಅಂತ ಯೋಚಿಸಬೇಡಿ. ಇಂದು ಕಲ್ಲಡ್ಕದಲ್ಲಿ ಎಸ್.ಐ.ಯೊಬ್ಬರು ಕೇಳುವ ಪ್ರಶ್ನೆ. ಕಳೆದ 2 ದಿನಗಳಿಂದ ಮಂಗಳೂರು ಜಿಲ್ಲೆ ಪ್ರಕ್ಷುಬ್ದ ವಾತಾವರಣದಿಂದ ಕೂಡಿತ್ತು. ಇದು ಒಮ್ಮೆ ತಣ್ಣಗಾದರೂ ಮತ್ತೆ ಮತ್ತೆ ಮರುಕಳಿಸಿತು. ಇದಕ್ಕೆ ಕ್ಯಾಮಾರಗಳೇ ಕಾರಣ ಎನ್ನುವುದನ್ನು ಆ ಎಸ್.ಐ ಹಾಗೆ ವಿಶ್ಲೇಷಿದರು. ಅದು ಹೌದಾ ಅಥವಾ ಬೇರೆಯೇ ಕಾರಣಾನಾ ಅಂತ ವಿಶ್ಲೇಷಿಸುವ ಅಗತ್ಯವಿಲ್ಲ. ಈಗ ಆ ಬಗ್ಗೆ ಎಲ್ಲರಿಗೂ ಅರಿವಿದೆ.

ಮೊನ್ನೆಯ ಘಟನೆಯನ್ನೇ ನೋಡಿದರೆ. ಕಾರಣ ಕ್ಷುಲ್ಲಕ ಅಂತ ಅನ್ನಿಸಿ ಬಿಡಬಹುದು. ಧರ್ಮದ ಹೆಸರಿನಲ್ಲಿ ಕಚ್ಚಾಟ ಬೇಕೇ ಬೇಡವೇ ಎನ್ನುವ ಪ್ರಶ್ನೆಗಳು, ವೈರುಧ್ಯಗಳು ಕಾನಿಸಿಕೊಳ್ಳಬಹುದು. ಯಾರೇ ಒಬ್ಬ ವ್ಯಕ್ತಿಗೆ ತನ್ನ ಧರ್ಮ , ಜಾತಿ , ಮಠ , ಮಂದಿರ ಅಥವಾ ತನ್ನ ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ವಿಷಯದಲ್ಲಿ ಘಾಸಿಯಾದಾಗ ಮನಸ್ಸು ರೊಚ್ಚಿಗೇಳುವುದು ಸಹಜ. ಆ ಕ್ಷಣದಲ್ಲಾಗುವ ಅನಾಹುತಗಳು ಏನು ಬೇಕಾದರೂ ಮಾಡಿಸಬಹುದು ಅಥವಾ ನಡೆದು ಹೋಗಬಹುದು.ಇದನ್ನೇ ಒಂದು ವಿಷಯವನ್ನಾಗಿಸಿಕೊಂಡು ದಿನವಿಡೀ ಕ್ಯುದು ವಿಷವಾಗಿಸಿದರೆ ಹೇಗೆ?. ಅಲ್ಲಿ ಕಲ್ಲು .. ಇಲ್ಲಿ ಕಲ್ಲು ಇಷ್ಟೇ ಆರಂಭದ ವಿಷಯ. ಇಂತಹ ವಿಷಯಗಳು ದೂರದಲ್ಲಿರುವ ಅಂತಹುದೇ ಭಾವನಾತ್ಮಕ ತೊಳಲಾಟದ ವ್ಯಕ್ತಿ ಇಲ್ಲಿಯೂ ಕೂಡಲೇ ಏನಾದರೊಂದು ಅನಾಹುತವನ್ನು ನಡೆಸುತ್ತಾನೆ. ತನ್ನೊಂದಿಗೆ ಇತರರನ್ನೂ ಸೇರಿಸಿಕೊಳ್ಳುತ್ತಾನೆ. ಗಲಭೆ ಹಬ್ಬಿಬಿಡುತ್ತದೆ. ಇಂದು ನಾವು ಹೇಳುವುದು ಸುಲಭ.ಒಂದು ಧರ್ಮದ ಹೆಸರಿನಲ್ಲಿ ಯಾಕೆ ಕಚ್ಚಾಡಬೇಕು?. ಜಾತಿ ಮತ ಬೇದವನ್ನು ಮರೆತು ಏಕೆ ಬದುಕಬಾರದು ಅಂತೆಲ್ಲಾ ಹೇಳಬಹುದು. ಆದರೆ ಅದು ಸುಲಭದ ಮಾತಾ?. ಯಾವುದೇ ಧರ್ಮದವನಾಗಿರಲಿ ಆತನಿಗೆ ತನ್ನ ಧರ್ಮದ ಬಗ್ಗೆ ಒಂದಿಷ್ಟಾದರೂ ಮಮತೆ ಇದ್ದೇ ಇರುತ್ತದೆ. ಅದನ್ನು ನಾವು ಹೊರಪ್ರಪಂಚಕ್ಕೆ ಹಾಗೇನಿಲ್ಲಾ ಅಂತ ಅಂದರೂ ಒಳಮನಸ್ಸು ಅದನ್ನೇ ಹೇಳುತ್ತದೆ.ಹಾಗಾಗಿ ಇಂತಹ ಧರ್ಮ ಸಂಬಂಧಿ, ಭಾವನಾತ್ಮಕವಾದ ಸಂಗತಿಗಳ ಬಗ್ಗೆ ಎಚ್ಚರದಿಂದ ಇರಬೇಕಾದುದೇ ಮಾನವಧರ್ಮ ಅಂತ ನಾನು ಭಾವಿಸಿಕೊಂಡಿದ್ದೇನೆ.

ಇಂದು ನಾವು ಕೂಡಾ ಕಲ್ಲಡ್ಕದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿಗಾಗಿ ತೆರಳಿದ್ದಾಗ ಇಡೀ ಪೇಟೆ ಬಿಕೋ ಎನ್ನುತ್ತಿತ್ತು. ಜನ ಬೀದಿಗೆ ಇಳಿಯುತ್ತಿರಲಿಲ್ಲ. ಸಾಲಾ ಮಕ್ಕಳು ಮನೆಗೆ ತೆರಳುತ್ತಿದ್ದರು. ಕೆಲವು ಮಂದಿ ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಮಾತನಾಡಲು ಸಿಕ್ಕ ಆ ಎಸ್.ಐ. ಮಾತಿಗೆ ಆರಂಬಿಸಿದ್ದೇ ಹಾಗೆ. ಆ ಬಳಿಕ ನಮ್ಮ ಉತ್ತರದಿಂದಾಗಿ ಎಸ್,ಐ,ಗೂ ಸಮಾಧಾನವಾದಂತೆ ಕಂಡುಬಂದಿರಲಿಲ್ಲ.

ಇನ್ನಾದರೂ ಗಲಭೆ ನಡೆಯದಿರಲಿ. ಸಹಜ ಸ್ಥಿತಿ ಏರ್ಪಡಲಿ ... ಶಾಂತ ಸ್ಥಿತಿಯಿರಲಿ ಅಂತ ಪ್ರಾರ್ಥಿಸೋಣ..