29 ಡಿಸೆಂಬರ್ 2010

ಹಳ್ಳಿ ಚುನಾವಣೆ

ಈಗಂತೂ ಹಳ್ಳಿಯಲ್ಲಿ ಸ್ವಲ್ಪ ನೆಮ್ಮದಿ. ಮೈಕಾಸುರುನ ಅಬ್ಬರ ಇಲ್ಲ.ಕಣ್ಣಿಗೆ ಕುಕ್ಕುವ ಬ್ಯಾನರುಗಳು ಇಲ್ಲವೇ ಇಲ್ಲ.ರಸ್ತೆಯಲ್ಲಿ ಚಿತ್ತಾರಗಳು ಕಾಣೋದೇ ಇಲ್ಲ. ಹೀಗಾಗಿ ಈಗ ಚುನಾವಣೆ ನಡೆಯುತ್ತೋ ಇಲ್ಲವೋ ಅಂತಾನೇ ಗೊತ್ತಾಗಲ್ಲ. ಒಳ್ಳೇದೇ ಆಯ್ತು ಬಿಡಿ ಅಂತ ರಸ್ತೆ ಬದಿಯಲ್ಲಿ ಒಂದಷ್ಟು ಜನ ಮಾತಾಡ್ತಾ ಇರಬೇಕಾದ್ರೆ ,ಅಲ್ಲಾರೀ , ಕೇರಳದಷ್ಟು ಇಲೆಕ್ಷನ್ ಅಬ್ಬರ ಇಲ್ಲಿ ಇಲ್ಲಾರೀ , ಇದೆಂತಾ ಇಲೆಕ್ಷನ್ ಬರೀ ಸಪ್ಪೆ ಸಪ್ಪೆ ಅನ್ನೋರೂ ಅದೇ ರಸ್ತೆ ಬದಿಯಲ್ಲಿ ಕಾಣ್ತಾರೆ.

ಅದೇನೇ ಇರ್‍ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ ಹೀಗೆ. ಆ ಪಕ್ಷದ ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್‍ತಾನೆ. ಇದು ಹಳ್ಳಿ ಕತೆ.

ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್‍ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.

ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.

ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು ಇಂಥವರು ನಮ್ಮ ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . . ಸಮಾಧಾನ . . ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ. ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.

ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?.

ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.

26 ಡಿಸೆಂಬರ್ 2010

ನಂಬಿಕೆಯ ಪಾಠ . .

ಈ ವಿಶಾಲವಾದ ಆಗಸ , ಹರಿಯುವ ನೀರು , ಜಗದ ಸತ್ಯ, ಮನುಷ್ಯನ ಆದಿ-ಅಂತ್ಯ, ಸೂರ್ಯ-ಚಂದ್ರರ ಉದಯ, . . . ಹೀಗೇ ಎಲ್ಲದಕ್ಕೂ ಕೂಡಾ ಒಂದು ನಾಶ ಅಂತ ಇದೆಯಾ?.ಅಂತ್ಯ ಅಂತ ಇದೆಯಾ?. ಇದನ್ನು ಕಂಡವರಿದ್ದಾರಾ?,ಇದಕ್ಕೆಲ್ಲಾ ಸಾವು ಅಂತ ಇದೆಯಾ?,ಇದೆಲ್ಲಾ ಹೇಗೆ ಸೃಷ್ಠಿಯಾಯಿತು ?. ಹೀಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಾ ಸಾಗಿದಂತೆ ಉತ್ತರವಿಲ್ಲ. ಮೌನವೇ ಕೊನೆಗೆ ಉತ್ತರ. ಆ ಮೌನದ ಹಿಂದೆ ನಿಂತಿರುವುದೇ ಆ ನಂಬಿಕೆ. ನಾವು ಎಲ್ಲಾ ವಾದಗಳನ್ನು ಮಾಡುತ್ತಾ ಹೋಗುವುದರ ಹಿಂದೆ ಕೂಡಾ ಅದೇ ನಂಬಿಕೆ ಇದೆ. ನಾವು ಈಗ ಹೇಳುತ್ತಿರುವ ವೈಜ್ಞಾನಿಕ ಸತ್ಯಗಳನ್ನು ನಾವು ಕಂಡಿಲ್ಲ.ನಮ್ಮ ಹಿಂದಿನ ಅದ್ಯಾರೋ ಕಂಡುಹಿಡಿದರಂತೆ , ಅದನ್ನು ದಾಖಲಿಸಿದ್ದಾರಂತೆ ಅನ್ನುವುದು ಬಿಟ್ಟು ಬೇರೇನನ್ನು ಹೇಳುವುದಕ್ಕೆ ನಾವು ಈಗ ಅಸಮರ್ಥರು. ಯಾಕೆಂದರೆ ನಾವು ನೋಡಿಲ್ಲ , ಕಂಡಿಲ್ಲ. ಹೀಗಂತೆ ಎನ್ನವುದರ ಹಿಂದೊಂದು ನಂಬಿಕೆ ಮಾತ್ರಾ. ಹಾಗಾಗಿ ಆ ನಂಬಿಕೆ ಅನ್ನೋದೇ ಮನುಷ್ಯನನ್ನು ಇಷ್ಟು ಬೆಳೆಸಿದೆ.ಬೆಳೆಸುತ್ತಿದೆ.

ಅಂತಹ ನಂಬಿಕೆಗಳು ಇರುವವರೆಗೆ ಈ ಜಗತ್ತು ಇರುತ್ತದೆ.ಅದೇನೇ ಆಗಲಿ “ಆ ಶಕ್ತಿ” ನಮ್ಮ ಜೀವಕ್ಕೆ ಧೈರ್ಯ ತುಂಬುತ್ತದೆ.ಬದುಕಿಗೆ ಸ್ಪೂರ್ತಿ ನೀಡುತ್ತದೆ. ಒಂದು ಆಸ್ಪತ್ರೆ ಹೋಗೋವಾಗಲೂ ಅಲ್ಲಿ ನಂಬಿಕೆ ಮುಖ್ಯ. ದೇವರು ಅನ್ನೋ ಒಂದು ನಂಬಿಕೆ ಮತ್ತು ವೈದ್ಯ ಅನ್ನೋ ಮನುಷ್ಯನ ಮೇಲಿನ ನಂಬಿಕೆ. ಇದೆರಡೂ ಇಲ್ಲದೇ ಹೋದರೆ ಆ ಕಾಯಿಲೆ ವಾಸಿಯಾಗೋದೂ ಕಡಿಮೆ.

ಇಂತಹ ಸನ್ನಿವೇಶದಲ್ಲಿ ದೇವರು ಅನ್ನೋ ನಂಬಿಕೆಯ ಮೇಲೆ ಹೊಡೆತ ನೀಡೋ ಮಂದಿ ಈ ಮನುಷ್ಯ ಕುಲದ ಮೇಲೆ ಹೊಡೆತ ಕೊಡುತ್ತಿದ್ದಾರೆ ಅಂತಾನೇ ಅರ್ಥ ಅಂತ ಹಿರಿಯರೊಬ್ಬರು ಮೊನ್ನೆ ಮೊನ್ನೆ ಉಸುರುತ್ತಿದ್ದರು. ಅದು ನಿಜಾನೂ ಹೌದು.ಯಾಕಂದ್ರೆ ಇಲ್ಲಿ ನಂಬಿಕೆಯೇ ಅಡಗಿಯೋಯಿತೆಂದರೆ ಕುರುಡು ಬದುಕಾಗುತ್ತದೆ.ಅಂತಹ ಕುರುಡು ಪ್ರಪಂಚ ಏನು ಮಾಡಬಲ್ಲುದು ಮತ್ತು ಏನನ್ನು ಸಾಧಿಸಬಲ್ಲುದು?. ಹಾಗಾಗಿ ಒಂದು ನಂಬಿಕೆಯ ಮೇಲೆ ಅಟ್ಯಾಕ್ ಮಾಡೋವಾಗ ಯೋಚಿಸಬೇಕಲ್ಲಾ?. ಹಾಗಂತ ಮನುಷ್ಯನೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳು , ಅದರ ಹಿಂದಿರುವ ದುರುದ್ದೇಶಪೂರಿತ ಯೋಜನೆಗಳು , ಹಿಡನ್‌ಅಜೆಂಡಾಗಳ ಬಗ್ಗೆ ಯಾವತ್ತೂ ಜಾಗೃತವಾಗಿರಬೇಕಾಗುತ್ತದೆ.ಆದರೆ ಇವತ್ತು ಇಂತಹವುಗಳ ಬಗ್ಗೆ ನಾವು ಮಾತಾಡೊಲ್ಲ.ನಮ್ಮದೇ ದೃಷ್ಠಿಕೋನವನ್ನು ಇನ್ನೊಬ್ಬನ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದೇವೆ.

ಹೀಗೇ ನಂಬಿಕೆಯ ಬಗ್ಗೆ ಮಾತಾಡೋವಾಗ ನನಗೆ ನನ್ನ ಆತ್ಮೀಯರೊಬ್ಬರು ನೆನಪಾಗುತ್ತಾರೆ.ಅವರು ಉದ್ಯೋಗ ಮಾಡುತ್ತಿರುವ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಕಂಡವರು.ಅಲ್ಲಿ ಸೇವೆ ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಂಡವರು , ಎಲ್ಲರಲ್ಲೂ ನಂಬಿಕೆ ಇರಿಸಿದವರು.ಆದರೆ ಯಾಕೋ ಏನೋ ಅವರು ನಂಬಿಕೆ ಇರಿಸಿಕೊಂಡ ಮನುಷ್ಯರೇ ಅವರಿಗೇ ತಿರುಗುಬಾಣವಾದರು.ನಂಬಿದ ಮನುಷ್ಯರೇ ಒಳಗೊಳಗೇ ಕತ್ತಿ ಮಸೆದರು. ಕೊನೆಗೆ ಅವರು ಅಲ್ಲಿಂದ ಹೊರಬರಲೇಬೇಕಾಯಿತು. ಆದರೂ ತನ್ನ ಕ್ಷೇತ್ರದ ಮೇಲಿನ ನಂಬಿಕೆ ಬಿಟ್ಟಿರಲಿಲ್ಲ, ಪ್ರೀತಿ ಇತ್ತು ಆ ಕ್ಷೇತ್ರದಲ್ಲಿ. ಸತ್ಯ , ಪ್ರಾಮಾಣಿಕರಾಗಿಯೇ ಉಳಿದರು.

ಆ ನಂಬಿಕೆ ಅನ್ನೋ ಶಕ್ತಿ ಮತ್ತೆ ಕಣ್ತೆರೆಯಿತು , ಸತ್ಯಕ್ಕೆ ಗೆಲುವಾಯಿತು.ಈಗ ಮತ್ತೆ ಅವರು ಅದೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಪ್ರಕಾರ ಇದೂ ಕೂಡಾ ನಂಬಿಕೆಗೆ ಸಿಕ್ಕ ಜಯ. ಒಂದು ವೇಳೆ ಈ “ಮನುಷ್ಯ” ಬುದ್ದಿಯಿಂದಾಗಿ ಅವರು ಆ ಕ್ಷೇತ್ರದ ಮೇಲೆ ನಂಬಿಕೆಯೇ ಕಳಕೊಂಡಿದ್ದರೆ? , ಅವರಲ್ಲಿ ದ್ವೇಷ ಹುಟ್ಟಿಕೊಂಡಿದ್ದರೆ?. ಆದರೆ ಹಾಗಾಗಿಲ್ಲ ಪ್ರೀತಿ ಮತ್ತು ನಂಬಿಕೆ ಇವೆರಡೂ ಕೂಡಾ ಇಂದು ಅವರನ್ನು ಮತ್ತೆ ಕರೆಯಿಸಿಕೊಂಡಿದೆ. ಹೀಗಾಗಿ ನಂಬಿಕೆ ಅನ್ನೋ ಶಕ್ತಿ ನಿಜಕ್ಕೂ ಶಕ್ತಿಶಾಲಿ.

ಬೆಲೆ ಬಿಸಿ . . ತಲೆ ಬಿಸಿ .

ಒಂದು ಕೇಜಿ ಈರುಳ್ಳಿ ಕೊಳ್ಳೋ ಹಾಗಿಲ್ಲ.ಏನು ರೇಟು. .?. ಈ ಕಡೆ ಬಂದು ಬೇಳೆ ರೇಟು ನೋಡಿದ್ರೆ ಅಬ್ಬಾ. . !. ಅದೆಲ್ಲಾ ಇರ್ಲಿ ಗಾಡಿಗೆ ಒಂದು ಲೀಟರ್ ಪೆಟ್ರೋಲ್ ಹಾಕೋಣವೆಂದ್ರೆ ಬರೋಬ್ಬರಿ 62 ರುಪಾಯಿ , ಡೀಸೆಲ್‌ಗೆ 42 ರುಪಾಯಿ . ಸದೂ ಅಲ್ಲ ಇನ್ನೂ ಏರುತ್ತಂತೆ ರೇಟು . . ಹೀಗೆ ರೋಡಿಗಿಳಿದ್ರೆ ಬೆಲೆ ಏರಿಕೆಯ ಮಾತು ಕೇಳಿಬರುತ್ತಲೇ ಇದೆ.

ಇದೆಲ್ಲಾ ಮೊನ್ನೆ ಮೊನ್ನೆ ಎಲ್ಲಾ ಮೀಡಿಯಾದಲ್ಲೂ , ಎಲ್ಲಾ ಜನರ ಬಾಯಲ್ಲೂ ಇಶ್ಯೂ ಆಗಿತ್ತು, ಆಗುತ್ತಲೇ ಇತ್ತು. ಇದೇ ವೇಳೆ ಅಲ್ಲಿ ಒಂದು ಕಡೆ ರೈತರು ಕೂಡಾ ಬೊಬ್ಬೆ ಹಾಕಿದ್ರು.ನಮ್ಗೆ ಬೆಲೆನೇ ಸಿಕ್ತಿಲ್ಲ , ಈರುಳ್ಳಿ ಎಲ್ಲಾ ನಾಶ ಆಯ್ತು , ಬೆಳೆನೇ ಇಲ್ಲಾ ಅಂತೆಲ್ಲಾ ಬೊಬ್ಬೆ ಹಾಕ್ತಿದ್ದಂತೇ ದೂರದ ಪಾಕಿಸ್ತಾನದಿಂದ ಈರುಳ್ಳಿ ಬಂತು. ನಮ್ಮಲ್ಲಿ ಈರುಳ್ಳಿ ಬೆಲೆ ಕೊಂಚ ಇಳೀತು. ಇಷ್ಟೆಲ್ಲಾ ಆಗುತ್ತಿರುವಾಗ ಅಲ್ಲಿ ರೈತರ ಕೂಗು ಕೇಳಿಸಲೇ ಇಲ್ಲ. ರೈತರು ಒಂದಿಷ್ಟು ಈರುಳ್ಳಿ ರಸ್ತೆಗೆ ಚೆಲ್ಲಿ ನಷ್ಠ ಮಾಡಿದ್ದು ಮಾತ್ರಾ ಬಂತು. ಬೆಲೆ ಏರಿಕೆಯ ಸುದ್ದಿಯಾದಷ್ಟು ದೊಡ್ಡ ಸುದ್ದಿಯೇ ಆಗಿಲ್ಲ , ಇಶ್ಯೂ ಕೂಡಾ ಆಗಿಲ್ಲ. ರೈತ ಬೆಳೆದ್ರೆ ಮಾತ್ರಾ ಅದು ನಗರದ ಗೂಡಂಗಡಿಯಲ್ಲೋ , ಮಾಲ್‌ಗಳಲ್ಲೋ ಸಿಗೋದು ಅಂತ ಗೊತ್ತಿಲ್ವೋ ಏನೋ. .?.ಇವತ್ತು ಸಮಸ್ಯೆ ಆಗಿರೋದೇ ಇಲ್ಲಿ.ಎಲ್ಲಿಯ ಸಮಸ್ಯೆ ಇಶ್ಯೂ ಆಗಬೇಕಿತ್ತೋ ಅದು ಆಗಿಲ್ಲ.ಅನಾವಶ್ಯಕವಾದ ಕೆಲ ಸಂಗತಿಗಳು ದೊಡ್ಡ ಸುದ್ದಿಯಾಗುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಈ ಮೊದಲೇ ಸುದ್ದಿಯಾಗುತ್ತಿದ್ದರೆ ಈರುಳ್ಳಿ ಬೆಲೆ ಏರಿಕೆಯಂತಹ ಸಮಸ್ಯೆಗಳು ಆಗುತ್ತಿರಲಿಲ್ಲ. ಇಲ್ಲಿ ಆದದ್ದು ಅದೇ. ಈರುಳ್ಳಿ ಬೆಳೆದ ರೈತರು ಕಡಿಮೆ ಬೆಲೆಗೆ ಮಾರಾಟಮಾಡಿಯಾಗಿತ್ತು.ಆದರೆ ಅಲ್ಲಿ ಲಾಭ ಮಾಡಿಕೊಂಡದ್ದು ಮಧ್ಯವರ್ತಿಗಳು.ರೈತರಿಗೆ ಮಾತ್ರಾ ಪಂಗನಾಮ. ಇಂತಹ ಸಂಗತಿಗಳು ಹೊರಬರುವಾಗ ಬೆಲೆ ಗಗನಕ್ಕೇರಿತ್ತು.ಯಾರಿಂದಲೂ ಏನೂ ಮಾಡಲಾಗದ ಸ್ಥಿತಿ.

ಹೀಗೇ ಇಂದು ರೈತರೆಲ್ಲಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ ತಡೀಬೇಕು ನೀವು ಇಲ್ಲೇ ಇರಿ ಎಂದೆಲ್ಲಾ ಭಾಷಣ ಮಾಡೋ ಜನರಿದ್ದಾರೆ. ಆದರೆ ಹೇಗೆ ತಡೆಯೋದು , ಸಮಸ್ಯೆಗೆ ಪರಿಹಾರ ಹೇಗೆ?. ಉತ್ತರವಿಲ್ಲ. ಇಂತಹ ಭಾಷಣ ಮಾಡಿದ ವ್ಯಕ್ತಿಯೊಬ್ಬರು ಅಂದು ನನಗೊಮ್ಮೆ ಸಿಕ್ಕಿದ್ದರು. ಆಗ ಇದೇ ಬೆಲೆ ಏರಿಕೆ ಬಗ್ಗೆ ಸ
ಅವರು ಮಾತನಾಡಿದ್ದರು. ಭಾಷಣದಲ್ಲಿ ರೈತರ ಬೆಳೆಗಳಿಗೆ ಬೆಲೆ ಸಿಗಲೇಬೇಕು ಎಂದೆಲ್ಲಾ ಹೆಳಿದ್ದರು. ಆ ಬಳಿಕ ಖಾಸಗಿಯಾಗಿ ಮಾತನಾಡಿದ ಅವರು, ಕೊಳ್ಳೋ ಕೈಗಳು ಹೆಚ್ಚಿವೆ , ಬೆಳೆಯೋ ಕೈಗಳು ಕಡಿಮೆ ಇವೆ. ಕೊಳ್ಳೋರ ಓಟು ಹೆಚ್ಚಿದೆ , ಕೊಡೋರ ಓಟು ಕಡಿಮೆ ಇದೆ. ಹೀಗಾಗಿ ಬೆಳೆಯೋರ ನಡುವೆ ಮತ್ತು ಕೊಳ್ಳೋರ ನಡುವೆ ವ್ಯತ್ಯಾಸ ಕಂಡುಬರುತ್ತಿದೆ ಅಂತಾರೆ ಅವರು. ಉದಾಹರಣೆಗೆ , ಹಳ್ಳಿಗಳಲ್ಲಿ ಈಗ ಹೈನುಗಾರರ ಸಂಖ್ಯೆ ಕಡಿಮೆ ಇದೆ.ಅದಕ್ಕಾಗಿ ಹೈನುಗಾರರ ಸಂಖ್ಯೆ ಹೆಚ್ಚಾಗಬೇಕೆಂದು ಹಾಲಿನ ದರ ಏರಿಕೆ ಮಾಡಬೇಕು ಅಂತ ಸಲಹೆ ಕೊಡಬಹುದು.ಆದ್ರೆ ಅದು ಸಾಧ್ಯಾನಾ?.ಒಂದು ಲೀಟರ್‌ಗೆ ಹಾಲು ಖರೀದಿಗೆ ಒಂದು ರುಪಾಯಿ ಹೆಚ್ಚು ಮಾಡಿದ್ರೆ , ಮಾರಾಟದ ಬೆಲೆಯಲ್ಲಿ ಎರಡು ರುಪಾಯಿ ಏರಿಕೆಯಾಗುತ್ತೆ. ಹೈನುಗಾರರು ಇರೋದು ಒಂದು ಲಕ್ಷವಾದರೆ ಕೊಳ್ಳೋರು ಹತ್ತು ಲಕ್ಷ ಜನ ಇದ್ದಾರೆ. ಆಗ ಧ್ವನಿ ಯಾರದ್ದು ಕೇಳಿಸುತ್ತೆ?. ಹಾಲಿನ ದರ ಏರಿಕೆಯ ಬಿಸಿ . . , ಹಾಲು ದುಬಾರಿ . . , ನಿಮ್ಗೆ ಏನ್ಸತ್ತೆ . .? ಎಂದೆಲ್ಲಾ ನಾಳೆ ಬರುತ್ತೆ. ಅದೇ ಹೈನುಗಾರನಿಗೆ ಒಂದು ಲೀಟರ್ ಹಾಲಿನ ಖರ್ಚು ಎಷ್ಟು ಅಂತ ಎಲ್ಲಾದರೂ , ಯಾರಾದರೂ ಕೇಳಿದ್ದು. .?.

ಹಾಗಾಗಿ ಈಗ ಇದೇ ಸಮಸ್ಯೆ ಕೊಡೋನು ಯಾವತ್ತೂ ಕೋಡಂಗಿಯೇ. ಕೊಳ್ಳೋನು ಮಾತ್ರಾ ಜಾಣ.

ಇದು ಬದಲಾಗಿ ಕೊಳ್ಳೋನು ಕೊಡೋನು ಇಬ್ಬರೂ ಜಾಣರಾಗಬೇಕು ಅಷ್ಟಾದರೆ ಪುಣ್ಯ.

21 ಡಿಸೆಂಬರ್ 2010

ಚಳಿ ಚಳಿ. . . .

ಚಳಿ ಶುರುವಾಯ್ತು ಮಾರಾಯ್ರೆ ಚಳಿ ಏನು ಚಳಿ. ಮನೆಗಿಂದ ಹೊರಗಡೆ ಇಳಿಯೋದಿಕ್ಕಾಗಲ್ಲ.ಏನು ಅವಸ್ಥೆ . ಮಾರಾಯ್ರೆ?.

ಮೊನ್ನೆ ಮೊನ್ನೆ ಏನು ಬಿಸಿಲು ಅಂತ ಹೇಳಿದ್ದವರು , ಅಯ್ಯೋ ಮಳೆ ಮಳೆ ಅಂತ ಕೂಗಿದರು ಈಗ ಏನು ಚಳಿ ಮಾರಾಯ್ರೆ ಅಂತಿದಾರಲ್ಲಾ?. ಹಾಗಿದ್ರೆ ಯಾವುದು ಬೇಕು ಮಾರಾಯ್ರೆ?, ಚಳಿಯೋ , ಮಳೆಯೋ , ಬಿಸಿಲೋ. ಅದೆಲ್ಲಾ ನಮ್ಮ ಅನುಕೂಲಕ್ಕೆ ತಕ್ಕಂತೆ ಬಿಡಿ ಮಾರಾಯ್ರೆ ಅಂತಾರೆ ಅವ್ರು. ಅದಲ್ಲ ಈ ಚಳಿ ಎಷ್ಟು ಜೋರು ಗೊತ್ತಾ?. ಗಡಗಡ ಅಂತ ಎದೆಯನ್ನೇ ನಲುಗಿಸಿ ಬಿಡುತ್ತೇರಿ ಅದು. ಅದ್ಕೇ ಬೆಚ್ಚನೆ ಬೇಕು ಅನ್ಸುತ್ತೆ. ಆ ಬಿಸಿ ಸಿಕ್ಕಾಗ್ಲೆ ಚಳಿ ಮೈ ಕೊಡವಿಕೊಂಡು ಆಚೆ ಮನೆಗೆ ಹೋಗುತ್ತಂತೆ ಮಾರಾಯ್ರೆ..!.

ಈ ಚಳಿಯ ಸುತ್ತ ಏನೆಲ್ಲಾ ಇದೆ . .!

ಅಜ್ಜಿ , ಅಜ್ಜಂದಿರ ಕತೆ ಏನು ಮಜಾ ಇದೆ ನೋಡ್ರಿ. ಅವ್ರು ಮಾಡೋ ಸ್ಟೈಲ್ ಸಕತ್ ಮಜಾ. ಅಯ್ಯೋ ಈ ಚಳಿಗಾಗಿ ಅವ್ರು ಒಂದೆರಡು ರಗ್ಗು , ಕಂಬಳಿ ಪರ್ಚೇಸ್ ಮಾಡಿ ತಂದಿರ್ತಾರೆ. ಈ ಕಂಬಳೀ ಅನ್ನೋವಾಗ ನೆನಪಾಗೋದು ನಮ್ಮೂರು ಮತ್ತು ಸುಬ್ರಹ್ಮಣ್ಯ. ಯಾಕೆ ಗೊತ್ತಾ ಇಲ್ಲಿ ಷಷ್ಠಿ ಜಾತ್ರೆಗೆ ಬಂತೆಂದರೆ ಅಲ್ಲಿಗೆ ಕಂಬಳಿಯೂ ಬರುತ್ತೆ. ಒಳ್ಳೆ ವ್ಯಾಪಾರನೂ ನಡೆಯುತ್ತೆ.ಕಂಬಳಿ ಬೇಕೇ ಕಂಬಳಿ ಅಂತ ಕೂಗುತ್ತಾರೆ. ಕೊನೆಗೆ ಕಿರುಷಷ್ಠಿ ಮುಗಿದು ಅವ್ರ ಊರಿಗೆ ಹೋಗ್ತಾರೆ.

ಈ ಕಂಬಳಿ ವ್ಯಾಪಾರಿಗಳು ದೂರದ ಶಿರಾದಿಂದ ಸುಬ್ರಹ್ಮಣ್ಯಕ್ಕೆ ಬರ್ತಾರೆ. ಯಾವಾಗ?. ಕುಲ್ಕುಂದ ಜಾತ್ರೆ ಶುರುವಾದಾಗ. ಅಲ್ಲಿ ಬಂದು ಟೆಂಟ್ ಹಾಕ್ತಾರೆ. ಆ ನಂತ್ರ ಹಾಗೇ ಸುಬ್ರಹ್ಮಣ್ಯ ಪೇಟೆಗೆ ಶಿಫ್ಟ್ ಆಗ್ತಾರೆ.ಷಷ್ಠಿ ಬರುತ್ತೆ ವ್ಯಾಪಾರ ಆಗುತ್ತೆ ಮತ್ತೂ ಒಂದು ತಿಂಗಳೂ ‍ಇರ್ತಾರೆ ಕಿರುಷಷ್ಠಿ ಬರುತ್ತೆ ಇದೆಲ್ಲಾ ಮುಗಿದ ನಂತ್ರ ಅವ್ರ ಊರಿಗೆ ಹೋಗ್ತಾರೆ.ಇಲ್ಲಿ ಕಂಬಳಿ ವ್ಯಾಪಾರ ಜೋರಾಗೇ ಇರುತ್ತೆ. ಹಿಂದೆಲ್ಲಾ ಈ ಕಂಬಳಿ ಖರೀದಿ ಮಾಡೋಕೆ ಕೇರಳದಿಂದ ಅನೇಕ ಜನ ಬರ್ತಾ ಇದ್ರು.ಆಗೆಲ್ಲಾ ಒಂದು ಕಂಬಳಿಗೆ 200 ರಿಂದ ಒಂದು ಸಾವಿರದವರೆಗೆಗೂ ಇರ್‍ತಾ ಇತ್ತಂತೆ. ನನ್ನ ಅಜ್ಜಿಯೂ ಒಂದೆರಡು ಕಂಬಳಿ ಖರೀದಿ ಮಾಡಿದ್ದು ನನಗಿನ್ನೂ ನೆನಪಿದೆ. ಆದ್ರೆ ಈಗ ನೋಡಿ ಯಾರಿಗೂ ಕಂಬಳಿ ಬೇಡ.ಎಲ್ಲ ರಗ್ಗು ಹಾಕೊತ್ತಾರೆ. ಹಾಗಾಗಿ ಕಂಬಳಿ ವ್ಯಾಪಾರಿ ಸೋಮಣ್ಣ ಮೊನ್ನೆ ಬೊಬ್ಬೆ ಹೋಡೀತಾ ಇದ್ದ, ಇಲ್ಲಿ ರಥಬೀದಿ ತುಂಬಾ ನಾವೇ ಇದ್ದೀವಿ ಸಾರ್ ಆವತ್ತು.ಇಂದು ನೋಡಿದ್ದದ್ರೆ ನಾವು ಎರಡೇ ಪಾರ್ಟಿ ಇಲ್ಲಿಗೆ ಬರೋದು.ಜನಾನೇ ಬರ್ತಾ ಇಲ್ಲ. ಯಾರಿಗೂ ಕಂಬಳಿ ಬೇಡ. 300 ರುಪಾಯಿ ಹೇಳಿದರೆ ಅಬ್ಬ ಅಂತಾರೆ. ನಾವೇನೋ ಈಗ ಬರ್ತಾ ಇದ್ದೀವಿ ಅಂತ ಹೇಳ್ತಾನೆ ಆತ. ಹೀಗೇ ಆಗಿ ಆಗಿ ಇನ್ನೋ ಕೆಲ ಕಾಲ ಕಳೆಯುವ ಹೊತ್ತಿಗೆ ಇಲ್ಲಿ ಕಂಬಳೀ ವ್ಯಾಪಾರಾನೇ ನಿಂತ್ರೂ ನಿಲ್ಲಬಹುದು. ಮತ್ತೆ ಕಂಬಳಿ ಬೇಕಂದ್ರೂ ಎಲ್ಲಿಗೆ ಹೋಗೋಣ. ಆ ದೂರದ ಶಿರಾಕ್ಕೋ ಅಥವಾ ಬೇರೆಲ್ಲಿಗೋ?. ಕಂಬಳಿ ಕೂಡಾ ಹಾಗೆನೇ ದೇಹಕ್ಕೆ ಒಳ್ಳೆದಂತೆ. ವಾತ ಕಡಿಮೆಯಾಗುತ್ತಂತೆ.ನನ್ನಜ್ಜಿ ಕಂಬಳಿ ಹೊದೆಯಲು ಹಾಸಲೂ ಬಳಸುತ್ತಿದ್ದದ್ದು ನನಗೆ ನೆನಪಿದೆ. ಹೀಗೆಲ್ಲಾ ಔಷಧಿಯುಕ್ತ ಕಂಬಳಿ ಈಗ ನೆನಪಾಗುತ್ತೆ.ಮುಂದೆ ಇದೇ ನೆನಪಾಗಿ ಉಳಿಯಲೂ ಬಹುದು. ಚಳಿ ಬಂತಲ್ಲಾ ಚಳಿ.

ಇಷ್ಟಲ್ಲಾ ಚಳಿ ಇದ್ರೂ ನಾನು ಮಾತ್ರಾ ಕಂಬಳೀ ಹೊದೆಯೋದೇ ಇಲ್ಲ . .! ಹೇಗೂ ರಗ್ಗು ಇದೆಯಲ್ಲಾ. . !.

20 ಡಿಸೆಂಬರ್ 2010

ನಂಬಿಕೆಗೆ ಪೆಟ್ಟು . !

ಜಗತ್ತು ಪ್ರಳಯವಾಗಿ ಮುಳುಗುತ್ತಂತೆ , ಅದ್ಯಾವುದೋ ಒಂದು ಆಕಾಶ ಕಾಯ ಭೂಮಿಗೆ ಅಪ್ಪಳಿಸಿ ಇಲ್ಲಿರೋ ಜನರೆಲ್ಲಾ ಸಾಯುತ್ತಾರಂತೆ. . . ಹೀಗೇ ಅಂತೆ ಕಂತೆಗಳ ನಡುವೆಯೂ ಇಲ್ಲಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆದರೆ ಅಲ್ಲಿ ಧೈರ್ಯ ನೀಡೋದು ನಂಬಿಕೆ.ಇದು ಪರಶುರಾಮ ಸೃಷ್ಠಿ, ಇಲ್ಲಿಗೇನು ಆಗದು ಅನ್ನೋ ಬಲವಾದ ನಂಬಿಕೆ.ಹಾಗಾಗಿ ಇಲ್ಲಿ ಎಷ್ಟೇ ಮಳೆ ಬರಲಿ , ಬಿಸಿಲಿರಲಿ, ಗಾಳಿ ಇರಲಿ ಮನಸಿನ ಮೂಲೆಯಲ್ಲಿರೋ ಆ ನಂಬಿಕೆ ಊರನ್ನೇ ಗಟ್ಟಿಯಾಗಿಸಿದೆ. ಅಂತಹದ್ದೊಂದು ಸೃಷ್ಠಿ ಇತ್ತಾ , ಇಲ್ವಾ ಅನ್ನೋದು ಮತ್ತಿನ ಪ್ರಶ್ನೆ. ಆದರೆ ಆ ಒಂದು ನಂಬಿಕೆ ಮನಸ್ಸನ್ನು ಗಟ್ಟಿಗೊಳಿಸಿದೆ.ಧೈರ್ಯ ತುಂಬಿದೆ.ಅಂತಹ ನಂಬಿಕೆಗಳು ಅದೆಷ್ಟೋ ಇಲ್ಲಿ ಇವೆ.ಈ ಭೂಮಿಯಲ್ಲಿರೋ ಸಮಸ್ತ ಜೀವಿಗಳೂ ಅದೇ ನಂಬಿಕೆಯ ತಳಹದಿಯಲ್ಲಿ ಬದುಕಿವೆ. ಆದರೆ ಆ ನಂಬಿಕೆಯನ್ನೇ ಬುಡಮೇಲು ಮಾಡಹೊರಟರೆ ಹೇಗೆ?. ಅಂತಹುದರ ಬಗ್ಗೆ ಯೋಚಿಸಬೇಕಾಗುತ್ತದೆ. ಯೋಚಿಸಲೇಬೇಕಾಗಿದೆ.ಯಾಕೆಂದರೆ ಇದು ಇಂದಿನ ಪ್ರಶ್ನೆಯಲ್ಲ ನಾಳೆಯ ಪ್ರಶ್ನೆ.

ನಂಬಿಕೆ ಅನ್ನೋದು ಹುಟ್ಟಿನಿಂದಲೇ ಆರಂಭವಾಗುತ್ತದೆ.ಅದು ಅಪ್ಪ ಎಂದು ಕರೆಯುವಲ್ಲಿಂದ ತೊಡಗಿ ಇಂದು ಮಾಡುವ ಎಲ್ಲಾ ಕೆಲಸಗಳ ಹಿಂದೆಯೂ ಅದೇ ನಂಬಿಕೆ ಅಡಗಿಕೊಂಡಿದೆ. ಅದೇ ನಂಬಿಕೆ ಕಳೆದುಕೊಂಡೆವೆಂದರೆ ನಮ್ಮೊಳಗೇ ಅಪಧೈರ್ಯ, ಅದರ ಜೊತೆಗೆ ಹೆದರಿಕೆ ಹೋಗಿ ವಂಚನೆಯ ಮುಖವಾಡ ಬೆಳೆದುಕೊಳ್ಳುತ್ತದೆ.ಆತ್ಮವಂಚನೆ ಹೆಚ್ಚಾಗುತ್ತದೆ. ಹಾಗೆಂದು ಇಂದು ಎಲ್ಲಾ ಕಡೆ ನಾವು ಸ್ವತಂತ್ರರು. ಅಷ್ಟು ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನು ಇನ್ನೊಬ್ಬನ ಮೇಲೆ ಹೇರುವ ಹಕ್ಕು ನಮಗಿಲ್ಲ. ಆದರೆ ಇಂದು ಇದೆಲ್ಲಾ ನಡೆಯುತ್ತದೆ.ಅಂತಹ ನಂಬಿಕೆಗಳ ವಿರುದ್ದ ಕತೆ ಕಟ್ಟಿ ಮಸಾಲೆ ಹಾಕಿ ಒಂದು ಇಶ್ಯೂ ಮಾಡಿ ದೊಡ್ಡ ಸಂಗತಿಯಾಗಿ ಲೋಕದ ಮುಂದೆ ಪ್ರಚುರ ಪಡಿಸಲಾಗುತ್ತದೆ.ನಂಬಿಕೆಯ ಮೇಲೆ ಹೊಡೆತ ಕೊಡಲಾಗುತ್ತಿದೆ.ಅನವಶ್ಯಕವಾಗಿ ತಲೆತಲಾಂತರದ ಕೊಂಡಿಗಳನ್ನು ಕಳಚುವ ಪ್ರಯತ್ನವಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದಲೂ ಇದು ಯೋಚಿಸಲೇಬೇಕಾಗುತ್ತದೆ.

ದೇವರಿದ್ದಾನಾ ಇಲ್ಲವೋ ಅನ್ನೋದು ಸೆಕಂಡರಿ. ಆದರೆ ಅದರ ಹೆಸರಿನ ನಂಬಿಕೆ ಜನರನ್ನು ಗಟ್ಟಿಗೊಳಿಸಿದೆ, ಆತ್ಮವಿಶ್ವಾಸ ತುಂಬಿಸಿದೆ.ಅದೊಂದು ಥರಾ ಪೆಟ್ರೋಲ್ ಇದ್ದ ಹಾಗೆ.ಮನುಷ್ಯನ ಮನಸ್ಸಿಗೆ ಆಗಾಗ ಆತ್ಮವಿಶ್ವಾಸ ತುಂಬಿಸುತ್ತದೆ. ಆದರೆ ದೇವರು , ನಂಬಿಕೆಗಳ ಹೆಸರಿನಲ್ಲಿ ಇನ್ನೊಬ್ಬರಿಗೆ ಹಾನಿ ಇಲ್ಲದ ಕೆಲವೊಂದು ಮೌಢ್ಯಗಳು ಇರಬಹುದು. ಒಂದು ವೇಳೆ ಅಂತಹ ಮೌಢ್ಯದಿಂದ ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆಯೇ ?, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆಯೇ ಎಂದಾದರೆ ಅದೊಂದು ನಿಷೇಧಕ್ಕೆ ಒಳಗಾಗಬೇಕು.ಆದರೆ ಅಂತಹ ಅದ್ಯಾವುದೇ ತೊಂದರೆಯಾಗದೆ ಇದ್ದರೂ ಆ ನಂಬಿಕೆಯ ಮೇಲೆ ಪ್ರಹಾರ ಏಕೆ?. ಆ ನಂಬಿಕೆ ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂದಾದರೆ ಅದರ ವಿರುದ್ದ ದನಿ ಯಾಕೆ?. ಇದರಲ್ಲಿ ಮೀಡಿಯಾಗಳು ಮೂಗು ತೂರಿಸುವುದೇಕೆ?. ಅದು ಹಾಗಲ್ಲ ಹೀಗೆ, ಕಂದಾಚಾರ , ಮೌಢ್ಯ ಅಂತ ಮೀಡಿಯಾ ಯಾಕೆ ತೀರ್ಪು ಕೊಡಬೇಕು?. ಅದ್ಯಾರು ಬೇಕಾದರೂ ಪ್ರತಿಭಟಿಸಲು ಅದರ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ.ಅದು ಬಿಟ್ಟು ಒಂದು ಇಶ್ಯೂ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುವುದು ಯಾವ ಕಾರಣಕ್ಕೆ?. ಇದೆಲ್ಲವೂ ಕೂಡಾ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಉಳಿದುಕೊಳ್ಳಬೇಕು ಹಾಗೂ ಜಾತಿಗಳ ನಡುವೆ ಇನ್ನಷ್ಟು ದ್ವೇಷ ಉಂಟುಮಾಡೋ ಕುತಂತ್ರ. ಒಂದು ವೇಳೆ ಜನರ ನಂಬಿಕೆಯ ಮೇಲೆ ಹೊಡೆತ ಕೊಟ್ಟರೆ ಭವಿಷ್ಯದ ಜನ ಹೇಗಿರಬಹುದೆಂದು ಯೋಚಿಸಿ ನೋಡಿ. ಹುಟ್ಟಿಸಿದಾತನ ಮೇಲೇ ಅನುಮಾನ ಬಂದರೂ ಬರಬಹುದು.ಇಂದು ಕೆಲ ಜನರು ಮತ್ತು ಅವರಿಗೆ ಸಾತ್ ನೀಡುವ ಕೆಲವು ಮೀಡಿಯಾಗಳು ಅದನ್ನೇ ಮಾಡಹೊರಟಿವೆ ಅಂತ ಅನ್ನಿಸುತ್ತಿದೆ.

ಇತ್ತೀಚೆಗೆ ಕರಾವಳಿಯಲ್ಲಿ ಅಂತಹ ನಂಬಿಕೆಗಳ ಮೇಲೆ ಪ್ರಹಾರ ಶುರುವಾಗಿದೆ.ಅದು ಕಂದಾಚಾರ ಅಂತ ತಾವೇ ಸ್ವಯಂಘೋಷಿತವಾಗಿ ಹೇಳುವ ಬುದ್ದಿಗೇಡಿಗಳು ಮತ್ತು ಅವರಿಗೆ ಬೆಂಬಲ ನೀಡುತ್ತಾ ಒಂದು ಇಶ್ಯೂ ಸೃಷ್ಠಿ ಮಡುವ ಬೆರಳೆಣಿಕೆಯ ಮೀಡಿಯಾದ ಮಂದಿಗಳಿಂದಾಗಿ ಭವಿಷ್ಯದ ದಾರಿ ತಪ್ಪುತ್ತಿದೆ , ಸಮಾಜವನ್ನು ಅತಂತ್ರ ಮಾಡುವ ಪ್ರಯತ್ನ ನಡೀತಾ ಅಂತ ಒಂದು ಯೋಚನೆ ಶುರುವಾಗಿದೆ.ಈ ಬಗ್ಗೆ ಚರ್ಚೆಯೂ ಆಗುತ್ತಿದೆ.ನಿಜಕ್ಕೂ ಒಂದೊಳ್ಳೇ ಅಂತ್ಯವಾಗಲಿ ಅನ್ನೋದೇ ಹಾರೈಕೆ.ದುರಂತ ಅಂದರೆ ಅದೇ ಮಂದಿ ಒಂದೊಳ್ಳೇ ಇಶ್ಯೂ ಕ್ರಿಯೇಟ್ ಮಾಡೋದಿಲ್ಲ.ಒಳ್ಳೆಯ ಚರ್ಚೆಗೆ ಅವಕಾಶ ಸೃಷ್ಠಿ ಮಾಡೋದೇ ಇಲ್ಲ.

ವೆರಿ ಸ್ಯಾಡ್. .