08 ಜೂನ್ 2016

ನಾವು ಮಾಡಿದ್ದೇ ಸರಿಯಲ್ಲ. . ಟೀಕೆ ಮಾಡುವುದೇ ತಪ್ಪಲ್ಲ. .!



ಇಂದು ಬೆಳಗ್ಗೆ ಗೆಳೆಯ ಕರೆ ಮಾಡಿದ.ಅನೇಕ ದಿನಗಳ ಬಳಿಕ ಬೆಳಗ್ಗೆಯೇ ಆತ ಕಾಲ್ ಮಾಡಿರುವುದರಿಂದ ಖುಷಿಯಲ್ಲಿದ್ದೆ. ಅವನ ಪತ್ತೆ ಇಲ್ಲದೆ,  ಕರೆ ಮಾಡಿದರೂ ಸ್ವೀಕರಿಸದೇ  ಹಲವು ಸಮಯಗಳೇ ಆಗಿತ್ತು. ಆತನೂ ಬ್ಯುಸಿ , ಜೊತೆಗೆ ನಾನೂ.. . ಆದರೆ ಇಂದು ಬೆಳಗ್ಗೆಯೇ ಕರೆ ಮಾಡಿದ್ದರಿಂದ ಸಂತೋಷದಿಂದ ಕರೆ ಸ್ವೀಕರಿಸಿದೆ.
ಆತ ಮಾತನಾಡುತ್ತಾ ಹೇಳಿದ, ನಾನು ಪತ್ರಿಕೆಗಳಲ್ಲಿ  ಕೆಲಸ ಮಾಡುವುದು  13 ವರ್ಷವಾಯಿತು. . ಇಂತಹ ಅವಸ್ಥೆ ನೋಡಿಲ್ಲಪ್ಪ. .  ಜನರೂ ಹೇಳುತ್ತಾರೆ. .  ಮಾತನಾಡುತ್ತಾರೆ. .  ಸಾಕಪ್ಪ. .  !. ಇಂದೆಂತಹದ್ದು. .  ಪರ್ಯಾಯ ಇಲ್ಲವಲ್ಲಾ.  . ,! ನೀನಾದರೋ ಯಾಕೆ ಮಾತನಾಡುತ್ತಿ. . ಏನಾದರೂ ಪ್ರಯೋಜನ ಆಗಬೇಕಲ್ಲ.  .. ಹೀಗೇ ಆತ ಸುಮಾರು 20 ನಿಮಿಷ ವಿಷಯ ಮಂಡಿಸಿದ. .
ಆತ ಮಾತನಾಡಿದ ಪ್ರತೀ ವಿಷಯದ ಹಿಂದೆ ಸಾಮಾಜಿಕ ಕಳಕಳಿ ಇತ್ತು.ಏಕೆಂದರೆ ಆತ 13 ವರ್ಷಗಳ ಕಾಲ ಪತ್ರಿಕೆಗಳಲ್ಲಿ  ಕೆಲಸ ಮಾಡಿದ್ದಾನೆ. ಆತ ಮಾತನಾಡಿದ 20 ನಿಮಿಷಗಳ ಬಹುಪಾಲು ಭಾಗವೂ, ಮಾತನಾಡಿದ್ದು ಸೋಶಿಯಲ್ ಮೀಡಿಯಾದ ಬಗ್ಗೆಯೇ. .!.










                                                                                ( ಚಿತ್ರ - ಅಂತರ್ಜಾಲ)
ನಾನೂ ಪತ್ರಿಕೆಗಳಲ್ಲಿ  ಬರೆಯುವುದಕ್ಕೆ ಶುರುಮಾಡಿ ಸುಮಾರು 10 ವರ್ಷಗಳು ಕಳೆದುಹೋದವು.ಈ ನಡುವೆ ಟಿವಿ ವಾಹಿನಿಯಲ್ಲಿ,ಆನ್‍ಲೈನ್‍ಗಳಲ್ಲಿ  ಕೆಲಸ ಮಾಡಿದ್ದೂ ಆಗಿದೆ.ಈ ವರ್ಷದಷ್ಟು ಕೆಟ್ಟ ಸ್ಥಿತಿ ನೋಡಿರಲಿಲ್ಲ.ರಾಜ್ಯದ ನಂಬರ್ ವನ್ ಎನಿಸಿಕೊಂಡಿರುವ ಮೀಡಿಯಾಗಳಲ್ಲೂ ಕೆಲಸ ಮಾಡಿದ್ದೆ.ಆದರೆ ಅಲ್ಲಿನ ಹಿರಿಯರಲ್ಲಿ ದರ್ಪ ನೋಡಿರಲಿಲ್ಲ. .!. ಜನರು ಟೀಕೆ ಮಾಡಿದ್ದಾರೆ, ಎಲ್ಲೆಲ್ಲೋ ಏನೇನೋ ಮಾತನಾಡಿದ್ದಾರೆ. . ಆದರೆ ಯಾರಲ್ಲೂ ಜಗಳ ಮಾಡಿಲ್ಲ. . !. ಆ ಟೀಕೆಯನ್ನು  ಸ್ವೀಕರಿಸಿದ್ದಾರೆ. ಸರಿ ಮಾಡಿದ್ದಾರೆ. ಸಮಾಜವನ್ನೂ ಸುಧಾರಿಸಿದ್ದಾರೆ.ಸಮಾಜದ ತಪ್ಪುಗಳನ್ನು  ಎತ್ತಿ ಹೇಳಿದ್ದಾರೆ. ಪದೇ ಪದೇ ಹೇಳಿ ಕಿರಿಕಿರಿ ಎನಿಸಿಕೊಳ್ಳಲಿಲ್ಲ.ತಮ್ಮ ಸಿಬಂದಿಗಳಲ್ಲಿ  ಕೆಲಸ ಮಾಡಿಸಿದ್ದಾರೆ, ಅದಕ್ಕಾಗಿ ಜಗಳವಾಡಿದ್ದಾರೆ.ಆದರೆ ಸಮಾಜದ ಮುಂದೆ ಒಂದಾಗಿ ನಿಂತು ಜನರು ಮಾತನಾಡುವುದನ್ನು  ಕೇಳಿಸಿಕೊಂಡಿದ್ದಾರೆ, ಬೈಗುಳ, ಹೊಡೆತವನ್ನೂ ತಿಂದಿದ್ದಾರೆ.ಮರುದಿನ ಮತ್ತೆ ಅಲ್ಲೇ ನಿಂತು ತಿದ್ದಿದ್ದಾರೆ, ಆಗ ಸಮಾಜಕ್ಕೂ ಅರಿವಾಗಿದೆ, ಸಮಾಜವೂ ಬದಲಾಗಿದೆ.

ಪತ್ರಿಕೆ ಎಂದರೆ ಹೀಗಿರಬೇಕು ಅಂತ ಮಿತ್ರ ಹೇಳುತ್ತಿದ್ದ, 
ಕೃಷಿ ಪತ್ರಿಕೆಯೊಂದು  ಅಂದು ಜಲಾಂದೋಲನ ಮಾಡಿತು.ಆಗ ಜನ ಇದೊಂದು ಹುಚ್ಚು ಎಂದರು.ಜಲದ ಬಗ್ಗೆ ಯಶೋಗಾಥೆಗಳನ್ನು  ನಿರಂತರವಾಗಿ ಬರೆದರು.ಆಗಲೂ ಇದು ನೀರು ಪತ್ರಿಕೆ ಎಂದರೆ.ಆದರೂ ಆ ಪತ್ರಿಕೆ ಸಿಬಂದಿ ಜಗ್ಗಲಿಲ್ಲ, ಬೈಯಲಿಲ್ಲ. .!. ಆ ಟೀಕೆ ಸ್ವೀಕರಿಸಿದರು. ಆದರೆ, ಈಗ ಜನರಿಗೆ ಅಂದು ಹೇಳಿರುವುದು ಸತ್ಯ ಎನಿಸಿದೆ. 10 ವರ್ಷಗಳ ನಂತರ ಜನರು ನೆನಪಿಸಿಕೊಳ್ಳುತ್ತಾರೆ, ಇಂದು ನೀರಿಲ್ಲ. ಅಂದು ಮಾಡಿದ್ದರೆ, ಈಗ ಸಮಸ್ಯೆ ಇರುತ್ತಿರಲಿಲ್ಲ ಅಂತ ಈಗ ಹೇಳುತ್ತಾರೆ. ಜೊತೆಗೆ ಸಿಕ್ಕ ಸಿಕ್ಕಲ್ಲಿ  ಅವರನ್ನು  ಕರೆಯುತ್ತಾರೆ, ನೀರಿನ ಬಗ್ಗೆ ಮಾತನಾಡಿ ಅಂತ ಹೇಳುತ್ತಾರೆ. ಈಗ ಆ ಪತ್ರಿಕೆಯನ್ನು  ಜನ ಪ್ರೀತಿಸುತ್ತಾರೆ.ಬೇರೊಂದು ಕಾರಣಕ್ಕೆ ಪತ್ರಿಕೆ ವಿರೋಧಿಸಿ ಎಂದು ಕರೆ ನೀಡಿದರೂ ಜನ ಮಾತ್ರಾ ಒಪ್ಪುತ್ತಿಲ್ಲ.ಇಂದು ಒಂದು ಪತ್ರಿಕೆ ಮಾಡುವ ಆಂದೋಲನ.ಈಗ ಅದೇ ಪತ್ರಿಕೆ ಹಲಸಿನ ಬಗ್ಗೆ ಆಂದೋಲನ ಮಾಡುತ್ತಿದೆ, ದೇಶದ ವಿವಿದೆಡೆಯಿಂದ ಹಲಸಿನ ಬಗ್ಗೆ ಯಶಸ್ವಿ ಕಥೆಗಳನ್ನು  ಬರೆಯುತ್ತಿದ್ದಾರೆ.ಇದಕ್ಕಾಗಿ ಸಂಪಾದಕರು  ದೇಶ ಸುತ್ತುತ್ತಿದ್ದಾರೆ, ವಿದೇಶಕ್ಕೂ ತೆರಳಿದ್ದಾರೆ. ಅಂದು ಅದೇ ಜನರು  ಹಲಸು-ಹೊಲಸು ಎಂದು ಜರೆದರು,.ಹಾಗಿದ್ದರೂ ಜಗ್ಗಲಿಲ್ಲ.ಇಂದು ಜನರಿಗೆ ಅನಿಸಿದೆ, ಹಲಸು ಕೂಡಾ ಮೌಲ್ಯವರ್ಧನೆ ಮಾಡಿದರೆ ತೀರಾ ಲಾಭದಾಯಕ ಅಂತ.ಕಳೆದ ವರ್ಷ 2 ಲಕ್ಷ ಹಲಸಿನ ಗಿಡ ದೇಶದ ವಿವಿದೆಡೆ ನೆಡುವ ಕೆಲಸವಾಯಿತು. ಮಿತ್ರ ಮುಂದುವರಿಸುತ್ತಾ ಹೇಳಿದ, ಇದಲ್ವಾ ಒಂದು ಪತ್ರಿಕೆ ಮಾಡಬೇಕಿರುವುದು. .!.ಇದಲ್ವಾ ಆಂದೋಲನ. .!.

ಈಗಂತೂ ಸೋಶಿಯಲ್ ಮೀಡಿಯಾ ತೀರಾ ಚುರುಕಾಗಿದೆ.ಇಂದು ಪತ್ರಿಕೆಯಲ್ಲಿ ಬರುವ ಸಂಗತಿಗಳು ನಿನ್ನೆಯೇ ಚರ್ಚೆಯಾಗಿ ಬಿಡುತ್ತದೆ.ವೈಭವೀಕರಣ ಸಾಧ್ಯವೇ ಇಲ್ಲ.ಏಕೆಂದರೆ ಅಂತಹ ವರದಿಗಳನ್ನು  ನೋಡಲು ಪುರುಸೊತ್ತಿಲ್ಲ,ಏಕೆಂದರೆ ಆತ ನಿನ್ನೆಯೇ ಅದನ್ನು  ಸೋಶಿಯಲ್ ಮೀಡಿಯಾದಲ್ಲಿ  ಓದಿ ಮುಗಿಸಿರುತ್ತಾನೆ ಅದೂ ವಿಡಿಯೋ ಸಹಿತ.
ಮೊನ್ನೆ ಮೊನ್ನೆ ಗೆಳೆಯ ಭಾಷಣದಲ್ಲಿ  ಹೇಳುತ್ತಿದ್ದ, ಈಗ ಸೋಶಿಯಲ್ ಮೀಡಿಯಾಗಳೇ ಪವರ್‍ಫುಲ್, ಒಂದೋ ನಾವು ಅದಕ್ಕೆ ಹೊಂದಿಕೊಳ್ಳಬೇಕು, ಅಲ್ಲೇ ಖಂಡಿಸಬೇಕು, ಉತ್ತರಿಸಬೇಕು, ಸ್ವೀಕರಿಸಬೇಕು.ಇಲ್ಲಾ ನಾವು ಅದರ ಬಗ್ಗೆ ಮಾತನಾಡಬಾರದು. .!. ಹೌದು, ಈ ಮಾತು ನಿಜವೇ.ಮೊನ್ನೆ ಹಾಗೆಯೇ ಆಗಿತ್ತು, ನನ್ನ ತೀರಾ ಆಪ್ತರೊಬ್ಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ  ಗಾಳಿಸುದ್ದಿ ಹರಿಯಬಿಟ್ಟರು, ಅಪಪ್ರಚಾರ ಮಾಡಿದರು.ಅದಕ್ಕೆ ಅವರು ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲೇ ಉತ್ತರಿಸಿದರು.ಮರುದಿನವೇ ಆ ಗಾಳಿಸುದ್ದಿ ತಣ್ಣಗಾಯಿತು. .!.
ಏಕೆಂದರೆ, ಈಗಂತೂ ಯುವಸಮೂಹವೆಲ್ಲಾ ಸೋಶಿಯಲ್ ಮೀಡಿಯಾ ಬಳಕೆಯಲ್ಲಿದೆ.ಮುಂದೆ ಮತ್ತಷ್ಟು ಹೆಚ್ಚಾಗುವುದೂ ನಿಶ್ಚಿತ.ಕ್ಲಾಸ್‍ಗೆ ಒಂದರಂತೆ ಗ್ರೂಪ್‍ಗಳು ಇರುತ್ತದೆ, ಅಲ್ಲೇ ತರಗತಿಯ ಬಗ್ಗೆ ಚರ್ಚೆ ನಡೆಯುತ್ತದೆ, ಶಿಕ್ಷಕರೂ ಅಲ್ಲಿಯೇ ಪರಿಹಾರ, ಉತ್ತರವನ್ನೂ ನೀಡುತ್ತಾರೆ.ಪರಿಸ್ಥಿತಿ ಹೀಗಿರುವಾಗ ನೀವು ಅದನ್ನೆಲ್ಲಾ ಬಳಕೆ ಮಾಡಬಾರದು ಅಂತ ಹೇಳಲು ಆಗುತ್ತಾ ?. ಅದರ ದುರ್ಬಳಕೆ ಮಾಡಬಾರದು ಅಂತ ನಾವು ಹೋರಾಟ ಮಾಡೋಕಾಗುತ್ತಾ ?.ಏಕೆಂದರೆ ಸಿಹಿ-ಕಹಿ ಇದ್ದೇ ಇರುತ್ತೆ. ಜಾಗೃತಿ ಮಾತ್ರಾ ಮಾಡಬಹುದೇ ಹೊರತು , ನಿಷೇಧ ಮಾಡೋಕಾಗುತ್ತಾ ?. ಅದೆಲ್ಲಾ ಕಷ್ಟದ ಮಾತು. ಹಾಸ್ಯಾಸ್ಪದ ಅಷ್ಟೇ.
ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ , ಉತ್ತರ ಅದೆಲ್ಲಾ ಕ್ಷಣಿಕದ್ದು ಮಾತ್ರಾ.ಅದೆಲ್ಲಾ ತಕ್ಷಣದ ಪ್ರತಿಕ್ರಿಯೆ ಅಷ್ಟೇ.ಅದೇ ಉತ್ತರ ಶಾಶ್ವತವೂ ಆಗಿರಲು ಸಾಧ್ಯವಿಲ್ಲ.ಏಕೆಂದರೆ ಆ ಕ್ಷಣದಲ್ಲಿ ಸರಿ ಅಂತ ಅನಿಸಿದ್ದ ನಂತರ ಯೋಚಿಸಿದಾಗ ಅದು ಸರಿಯಲ್ಲ ಅಂತ ಅನಿಸಬಹುದು.ಆ ವಿಷಯದ ಬಗ್ಗೆ ಸುಮ್ಮನಾಗಬಹುದು. ಹಾಗಾಗಿ ಅದರ ಪಾಡಿಗೆ ಬಿಡಬೇಕು ಅಷ್ಟೇ.ಆ ಬಗ್ಗೆ ಚರ್ಚೆ ಮಾಡಿದರೆ ಆತನಿಗೆ ಸರಿ ಅನಿಸದೇ ಇದ್ದರೂ ಕೂಡಾ ಮತ್ತೆ ಸಮರ್ಥನೆಯೇ ಇರುತ್ತದೆ.ಹೀಗಾಗಿ ತಪ್ಪುಗಳೇ ಬೆಳೆಯುತ್ತದೆ .ಆಗ ಸಮಾಜವನ್ನೇ ತಪ್ಪುದಾರಿಗೆ ಎಳೆದಂತಾಗುತ್ತದೆ ಅಂತ ಗೆಳೆಯ ಹೇಳುತ್ತಿದ್ದ.

ಇನ್ನೊಂದು ವಿಷಯ ಎಂದರೆ , ಟ್ವಿಟ್ಟರ್ ಹೊರತುಪಡಿಸಿ ಇತರ ಸೋಶಿಯಲ್ ಮೀಡಿಯಾಗಳಲ್ಲಿ  ಚರ್ಚೆಯಾಗುವ ಬಹುತೇಕ ಸಂಗತಿಗಳು ಪ್ರಬುದ್ಧವಾಗಿರುವುದಿಲ್ಲ. ಒಬ್ಬರು  ಒಂದು ವಿಷಯದ ಬಗ್ಗೆ ಹೇಳಿದರೆ, ಅದೇ ಸಮಯದಲ್ಲಿ  ಮತ್ತೊಬ್ಬರು  ಇನ್ನೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಅದೇ ವೇಳೆ ಇನ್ನೊಬ್ಬ ಲೈಕ್ ಮಾಡುತ್ತಾನೆ.ಆದರೆ ಆತ ಲೈಕ್ ಮಾಡುವುದು  ಮತ್ಯಾವುದೋ ವಿಷಯಕ್ಕೆ.ಹೀಗಾಗಿ ಅಲ್ಲಿ ನಡೆಯುವ ಯಾವುದೇ ಚರ್ಚೆಗಳು ಪ್ರಬುದ್ಧವಾಗಿರುವುದಿಲ್ಲ. ಟ್ವಿಟ್ಟರ್ ಹೊರತುಪಡಿಸಿ ಇತರ ಸೋಶಿಯಲ್ ಮೀಡಿಯಾಗಳಲ್ಲಿ ನೀಡುವ ಪ್ರತಿಕ್ರಿಯೆಯೇ ಪತ್ರಿಕೆಯ ಹೇಳಿಕೆ ಆಗುವುದು  ಸಾಧ್ಯವೇ ಇಲ್ಲ.ಹಾಗೆಂದು ನಾವು ಭಾವಿಸಿದ್ದೇವೆ ಎಂದರೆ ನಮ್ಮ ಮಾನಸಿಕ ಮಟ್ಟವನ್ನು  ಅದು ತಿಳಿಸುತ್ತದೆ.ಹೀಗಾಗಿ ಇದನ್ನು ಒಂದು ವಿಷಯದ ಮಾಧ್ಯಮವಾಗಿ ಸ್ವೀಕರಿಸಬೇಕಷ್ಟೇ ಹೊರತು.ಸತ್ಯಾಸತ್ಯತೆ ಬಗ್ಗೆ ಮರುದಿನದ ಪತ್ರಿಕೆಯ ಮಾಹಿತಿ ಖಚಿತ ಪಡಿಸುತ್ತದೆ ಅಷ್ಟೇ.ಹಾಗಾಗಿ ಒಂದು ಪತ್ರಿಕೆಯೇ ಪ್ರಬುದ್ಧವಾಗಿರುತ್ತದೆ ಎಂದು ಗೆಳೆಯ ಹೇಳುತ್ತಾನೆ.ಆದರೆ ಪತ್ರಿಕೆಯೂ ಸೋಶಿಯಲ್ ಮೀಡಿಯಾದ ಮಟ್ಟಕ್ಕೆ ಇಳಿದರೆ ?

ನಾನು ಸೋಶಿಯಲ್ ಮೀಡಿಯಾ ಬಳಗೆ ಮಾಡುತ್ತೇನೆ.ಹಾಗಂತ ನಾನು ಟೀಕೆ ಮಾಡಲೇ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿಲ್ಲ.ನನಗೆ ಹೇಳಬೇಕು ಅನಿಸಿದ್ದನ್ನು ಹೇಳುತ್ತೇನೆ, ಬೇಕಾದ್ದನ್ನು  ಪಡೆಯುತ್ತೇನೆ. ಪ್ರಬುದ್ದವಾದ ಸಂಗತಿಗಳನ್ನು  ಸ್ವೀಕರಿಸುತ್ತೇನೆ. ಬೇಡದೇ ಇದ್ದ ಸಂಗತಿಗಳನ್ನು  ಅಲ್ಲೇ ಬಿಡುತ್ತೇನೆ. ಆದರೆ ಸೋಶಿಯಲ್ ಮೀಡಿಯಾದ್ದೇ ಸರಿ ಆಗಬೇಕು ಎಂದೇನಿಲ್ಲ.ಅಥವಾ ಅದಕ್ಕೆ ಟೀಕೆಗಳು, ವಿರೋಧವೂ ಇರಬಹುದು.ಅದನ್ನು  ಸ್ವೀಕರಿಸುವ ಮನೋಸ್ಥಿತಿ ನನ್ನಲ್ಲಿದೆ.ನನ್ನ ಬಗ್ಗೆ ಯಾರು ಬೇಕಾದರೂ ಮಾತನಾಡಬಹುದು, ಹೇಗೆ ಬೇಕಾದರೂ ಮಾತನಾಡಬಹುದು.ಮಾತನಾಡಿದರೆ ಮುಗಿಬೀಳುವುದಿಲ್ಲ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ನಾನು ಹೇಗೆಂದು ನನಗೆ ತಿಳಿದಿದೆಯಲ್ಲಾ.  ., ಅಂತ ಗೆಳೆಯ ಹೇಳುತ್ತಾ, ಕೊನೆಗೊಂದು ಮಾತು  ಹೇಳಿದ, ಅಷ್ಟಕ್ಕೂ, ನಿಮಗೆ ಸ್ವಾತಂತ್ರ್ಯ ಇದೆಯಲ್ಲಾ. .  .!