24 ಜನವರಿ 2017

ಈಗ ಕನಸುಗಳಿಗೆ ಜೀವ ತುಂಬುವ ಸಮಯ . . .


ಕಾರು ನಿಧಾನವಾಗಿ ಸಾಗುತ್ತಿತ್ತು.........

 ಒಂದು ಕೈಯಲ್ಲಿ ಸ್ಟೇರಿಂಗ್, ಮತ್ತೊಂದು ಕೈಯಲ್ಲಿ ಗೇರ್ ಲಿವರ್. ಕಿವಿಯಲ್ಲಿ ಇಯರ್ ಫೋನ್. ಕಿಸೆಯಲ್ಲಿ ಮೊಬೈಲ್ ಫೋನು. ಪಕ್ಕದಲ್ಲಿ ನನ್ನ ಮಗು. ಕಾರು ಕಿಲೋ ಮೀಟರ್ ಕಲ್ಲುಗಳನ್ನು ದಾಟಿ ಮುಂದೆ ಸಾಗುತ್ತಿತ್ತು. ಆಗಾಗ ಮೊಬೈಲ್ ರಿಂಗಾಗುತ್ತಿತ್ತು, ಕೆಲವು ಕಾಲ್ ಮಾಡುತ್ತಿದ್ದೆ. ಪಕ್ಕದಲ್ಲೇ ಇದ್ದ ಮಗು ತನ್ನದೇ ಕೆಲವು ಕತೆ ಹೇಳುತ್ತಿತ್ತು.
ಸುಮಾರು 15 ಕಿಮೀ ದೂರ ಕ್ರಮಿಸಿತು. ಇನ್ನು  ನಾನು ಕತೆ ಹೇಳಲ್ಲ, ನೀನು ಕತೆಯೇ ಕೇಳಲ್ಲ, ಯಾರಲ್ಲೋ ಮಾತಾಡುತ್ತಿ, ಮತ್ಯಾರಿಗೆ ನಾನು ಕತೆ ಹೇಳಲಿ ಅಂತ ಮಗು ಹೇಳಿತು . .
ಇಲ್ಲ ಹೇಳು,  ಅಂದಾಗ.......  ಮಗು ಅಂದಿತು , ಮೊಬೈಲ್ ಪಕ್ಕಕ್ಕಿಡು. .
ಸರಿ ಅದೂ ಆಯಿತು. .
ಕತೆ ಶುರು ಮಾಡಿತು. .
ಅದು ಕತೆಯಲ್ಲ ಪ್ರಶ್ನೆಗಳು. .  ಮಗುವಿನ ಪ್ರಶ್ನೆ.  . ಕನಸು ಸೃಷ್ಟಿಸುವ ಪ್ರಶ್ನೆ. . ಆ ಪ್ರಶ್ನೆಗಳ  ಒಳಗೆ ನಾನೂ ಮಗುವಾಗಿ   ಹೋಗಬೇಕಿತ್ತು. .  ಪ್ರಶ್ನೆಯ ಆಳ ಅರಿವಾಗುತ್ತಿತ್ತು, ಯಾರಿಗೆ ಗೊತ್ತು .. ಮುಂದೆ, ಮಗುವಿಗೆ ಅದೇ ಅಧ್ಯಯನದ ವಸ್ತುವಾಗಿ ಬಿಡಬಹುದು.
ಆ ಪ್ರಶ್ನೆಗಳ ಒಳಗೆ ನಾನೂ ಹೋಗುತ್ತಿದ್ದಂತೆ , ಉತ್ತರ ನೀಡುತ್ತಿದ್ದಂತೆ ಹೊಸ ಹೊಸ ಪ್ರಶ್ನೆಗಳು, ಉತ್ತರಗಳ ಮೇಲೆ ಮತ್ತೆ ಪ್ರಶ್ನೆ ಮುಂದುರಿಯುತ್ತಾ , ಸುಮಾರು 15 ಕಿಲೋ ಮೀಟರ್ ಸಾಗಿತು. ಕನಸು ತೆರೆದುಕೊಂಡಿತು. . ಸಂದೇಹಗಳಿಗೆ ಕೆಲವೊಮ್ಮೆ ಉತ್ತರವೇ ಇಲ್ಲ ಎನಿಸಿತು.., ಮಗುವಿನ ಜೊತೆ ಆ ಕ್ಷಣ ಮಗುವಾದೆ , ಕುತೂಹಲದ  ಆ ಕಣ್ಣುಗಳು ಮತ್ತೇನೋ ನಿರೀಕ್ಷೆ ಮಾಡುತ್ತಿತ್ತು. . ಎಳೆಯ ಮನಸ್ಸು ಅರ್ಥವಾಯಿತು.

                                         ****

ಅನೇಕ ದಿನಗಳಿಂದ ಮನೆಗೆ ತಲಪುವಾಗ ರಾತ್ರಿಯಾಗುತ್ತಿತ್ತು. ಮಗು ಅದಾಗಲೇ ಮಲಗುತ್ತಿತ್ತು. ಅಂದು ಮನೆಯಲ್ಲಿದ್ದೆ. ಸಂಜೆಯವರೆಗೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ಮನೆಯೊಳಗೆ ಸೇರಿದಾಕ್ಷಣ ನಾನೂ ಮಗುವಾದೆ. ಕಳ್ಳ ಪೊಲೀಸ್, ಮರ ಗಿಡ  ಸೇರಿದಂತೆ ಅನೇಕ ಆಟ ಆಡಿದೆ. ಅಂದು ಮಗು ಅಂದಿತು. .  ದಿನವೂ ಇದೇ ಹೊತ್ತಿಗೆ ಮನೆಯಲ್ಲಿರು. . .
ಎಳೆಯ ಮನಸ್ಸು ಅರ್ಥವಾಯಿತು.

                                 *****

ಪ್ರತೀ ದಿನ ಶಾಲೆಗೆ ಹೋಗಿ ಬರುವ ಮಗು , ಶಾಲೆಯ ಕೆಲಸ ಸಂಜೆಯೇ ಮಾಡಿ ಮುಗಿಸಿತ್ತು. ಅಂದು ನಾನೂ ಮಗುವಿನ ಜೊತೆ ಬರೆಯುವ ವೇಳೆ ಕುಳಿತೆ. ಇದು ಅದಲ್ಲ, ಇದು ಹಾಗೆಯೇ  , ಟೀಚರ್ ಹೇಳಿದ್ದಾರೆ ಎಂದು ವಾದ ಮಾಡಿತು.
ಮಗುವಿನ ಮನಸ್ಸು ಅರ್ಥವಾಯಿತು.

                          ******

ಮಗುವಿನ ಮನಸ್ಸಿನಲ್ಲಿ  ಅದೆಷ್ಟು ಕನಸುಗಳು ಇವೆ. ನನಗದು ಅರ್ಥವೇ ಆಗಿರಲಿಲ್ಲ. ನನಗೆ ಸಂಬಂಧವೇ ಪಡದ ಅನೇಕ ವಿಚಾರಗಳಲ್ಲೇ ಮನಸ್ಸು ಓಡಿಸುತ್ತಿದ್ದೆ. ಮಗುವಿನ ಜೊತೆ ಮಗುವಾಗದೇ ಇದ್ದ ನನಗೆ, ಆ ಕನಸುಗಳು ಅರ್ಥವೇ ಆಗಿರಲಿಲ್ಲ. ಈಗ ಅರ್ಥವಾಯಿತು.. . ! ಆ ಕನಸುಗಳಿಗೆ , ಆ ಪ್ರಶ್ನೆಗಳಿಗೆ ಉತ್ತರ ನೀಡದೇ ಹೋದರೆ ಕನಸುಗಳೇ ಬೆಳೆಯಲಾರದು, ಕನಸು ಬೆಳೆಯದೇ ಇದ್ದರೆ ಮನಸ್ಸು ಅರಳದು.
ಈಗ ಅರ್ಥವಾಯಿತು, ಎಲ್ಲೆಲ್ಲೋ ನನ್ನ ಬಗ್ಗೆ ಯಾರೋ ಮಾತನಾಡುತ್ತಿದ್ದರೆ, ನಾನೂ ಯಾರ್ಯಾರೋ ಜೊತೆ ಮಾತನಾಡುತ್ತಿದ್ದರೂ , ಇಲ್ಲಿ  ನನ್ನ ಮಗುವಿನ  ಜೊತೆ  ನಾನು ಮಾತನಾಡದೇ ಇದ್ದರೆ ಕನಸುಗಳು ಅರಳದು.