24 ನವೆಂಬರ್ 2017

ದೇಸೀ ಗೋವು ಬದಲಿಸಿದ ಕೃಷಿ......




ಗೋವು....!. ಈ ಎರಡಕ್ಷರ ಇಂದು ಸಂಚಲನದ ವಿಷಯ. ವಾಸ್ತವಾಗಿ ಇದು ಮಣ್ಣಿನ ಉಳಿವಿನ ಪ್ರಶ್ನೆ. ಗೋವು ಇದ್ದರೆ ಮಣ್ಣಿನ ಉಸಿರು, ಮಣ್ಣಿನ ಉಸಿರಿದ್ದರೆ ಹಸಿರು. ಎಲ್ಲರೂ ಗೋವಿನ ಹಾಲಿನ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಗೋವಿನ ಸೆಗಣಿ ಬಗ್ಗೆಯೂ ಮಾತನಾಡುವವರು ಇದ್ದಾರೆ. ಈ ಮೂಲಕವೇ ಮಣ್ಣನ್ನು ಹಸನಾಗಿಸಿದವರು ಇದ್ದಾರೆ. ನಳನಳಿಸುವ ಕೃಷಿಯನ್ನು ಕಂಡು ಖುಷಿಪಟ್ಟವರಿದ್ದಾರೆ.

ಎಲ್ಲಾ ಕೃಷಿಕರು, ಗೋಸಾಕಾಣಿಕೆ ಮಾಡುವ ಮಂದಿಯೂ ಮಾತನಾಡುವುದು ದನದ ಹಾಲಿನ ಬಗ್ಗೆಯೇ. ದನ ಹಾಲೆಷ್ಟು ನೀಡುತ್ತದೆ? ಲಾಭವೋ ನಷ್ಟವೋ?, ದನದ ಖರ್ಚು ಸರಿದೂಗಿಸುವುದೇ ಕಷ್ಟ... ಇದೆರಡೇ ಪ್ರಶ್ನೆ. ಆದರೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಬಳಿಯಲ್ಲಿರುವ ಮಹಾಬಲೇಶ್ವರ ಭಟ್ಟರು ದನದ ಹಾಲಿನ ಬಗ್ಗೆ ಮಾತನಾಡುವುದು ,ಈ ಬಗ್ಗೆ ಕೇಳುವುದು ಎರಡನೇ ಪ್ರಶ್ನೆ. ಅವರ ಮೊದಲ ಪ್ರಶ್ನೆ, ದನ ಎಷ್ಟು ಸೆಗಣಿ ಹಾಕುತ್ತದೆ? ನಮ್ಮ ಮನೆಯ ಎರಡು ದನ ದಿನಕ್ಕೆ ಹಾಕುವ ಸೆಗಣಿ 17 ಕೆಜಿ..!. ಇಲ್ಲಿಂದಲೇ ಅವರ ಮಾತು ಶುರುವಾಗುತ್ತದೆ. ಹಾಗೆ ಮಾತನಾಡುತ್ತಾ ಸಾಗಿದಂತೆ ಅಲ್ಲಿ ಮಣ್ಣು ಉಸಿರಾಡುವುದು ಗೊತ್ತಾಗುತ್ತದೆ  ಎದುರಲ್ಲೇ ನಳನಳಿಸುವ ಕಾಳುಮೆಣಸಿನ ಬಳ್ಳಿ ಸಿಗುತ್ತದೆ, ಅಡಿಕೆ ಮರದ ಸೋಗೆ ಆರೋಗ್ಯವಾಗಿರುವುದು ಕಾಣುತ್ತದೆ. ಮಹಾಬಲೇಶ್ವರ ಭಟ್ಟ ಮುಖದಲ್ಲಿ ಮಂದಹಾಸ, ಸಂತೃಪ್ತ ಭಾವ.

ದೇವಸ್ಥಾನದ ಅರ್ಚಕರಾದ ಮಹಾಬಲೇಶ್ವರ ಭಟ್ಟರು ಅನೇಕ ವರ್ಷಗಳಿಂದಲೂ ಸಾವಯವ ಕೃಷಿಕರೇ ಆಗಿದ್ದರು. ಅರ್ಚಕ ವೃತ್ತಿಯ ಜೊತೆಗೆ ಅಡಿಕೆಯೇ ಪ್ರಮುಖ ಬೆಳೆ. ಅದರ ಜೊತೆಗೆ ಕೊಕೋ, ಕಾಳುಮೆಣಸು, ಬಾಳೆ. ಇದೆಲ್ಲಾ ಕೃಷಿ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಮಣ್ಣಿನಲ್ಲೂ ಅಂತದ್ದೇನೂ ಬದಲಾವಣೆ ಇದ್ದಿರಲಿಲ್ಲ. ತೋಟದ ನಡುನಡುವೆ ಅಡಿಕೆ ಮರದ ಸೋಗೆ ಕೆಂಪಾಗಿದ್ದು ಕಾಣುತ್ತಿತ್ತು. ಪರಿಹಾರ ಎಲ್ಲೆಲ್ಲೂ ಸಿಕ್ಕಿರಲಿಲ್ಲ. ಈಗ ನೋಡಿದರೆ ಅದೇ ತೋಟದ ಮಣ್ಣಿನಲ್ಲಿ ಬದಲಾವಣೆ ಕಂಡಿತು, ಹಸಿರು ನಳನಳಿಸುತ್ತಿದೆ. ಇಡೀ ತೋಟದಲ್ಲಿ ಕಾಳುಮೆಣಸು ಸಹಿತ ಇತರೆಲ್ಲಾ ಕೃಷಿಗಳಿಗೆ ಮರುಜೀವ ಬಂದಿದೆ. ಇಂತಹ ಬದಲಾವಣೆ ಕಂಡದ್ದು, ಮಣ್ಣು ಉಸಿರಾಡಿದ್ದು ಗೋವಿನ ಮೂಲಕ. ಅದೂ ದೇಸೀ ಗೋವಿನ ಕಾರಣದಿಂದ.

ತಮ್ಮ ಅಡಿಕೆ ತೋಟದ ಸುಮಾರು 380 ಅಡಿಕೆ ಮರಗಳಿಗೆ ಅನೇಕ ವರ್ಷಗಳಿಂದ ಕಂಪನಿಗಳಿಂದ ಸಾವಯವ ಗೊಬ್ಬರ ಖರೀದಿ ಮಾಡಿ ಹಾಕುತ್ತಿದ್ದರು. 17 ವರ್ಷಗಳಿಂದ ಇದೇ ರೀತಿ ಮಾಡುತ್ತಲೇ ಬಂದಿದ್ದರೂ ಸಮಾಧಾನ ಇರಲಿಲ್ಲ, ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಅದೊಂದು ದಿನ ಕೃಷಿ ಋಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿಂದ ನಂತರ ವಿವಿಧ ಪ್ರಯೋಗ ಮಾಡುತ್ತಲೇ ಇದ್ದರು. ಬಳಿಕ ನೆಕ್ಕರಕಳೆಯ ಸುಬ್ರಹ್ಮಣ್ಯ ಪ್ರಸಾದ್ ಎಂಬ ಕೃಷಿಕರು  ನೀಡಿದ ಮಾಹಿತಿ ಆಧಾರದಲ್ಲಿ ತಾವೇ ಸ್ವತ: ಗೊಬ್ಬರ ತಯಾರು ಮಾಡಲು ಶುರು ಮಾಡಿದರು. ಅದಕ್ಕಾಗಿಯೇ ದೇಸೀ ಗೋವನ್ನು ಸಾಕಲು ಆರಂಭಿಸಿದರು. ಅದುವರೆಗೆ ಇದ್ದ ವಿವಿಧ ತಳಿಯ ಗೋವುಗಳ ಸಾಕಾಣಿಗೆ ದೂರ ಮಾಡಿ ದೇಸೀ ತಳಿಯ ಗೋವನ್ನು ಸಾಕಿದರು. ಅದುವರೆಗೆ ಇದ್ದ ಗೋಬರ್ ಗ್ಯಾಸ್ , ಸ್ಲರಿ ಪದ್ದತಿ ಬಿಟ್ಟರು. ಕೇವಲ ದೇಸೀ ಗೋವಿನ ಸೆಗಣಿ ಸಂಗ್ರಹಿಸಿ ಅದರ ಮೂಲಕವೇ ಗೊಬ್ಬರ ತಯಾರು ಮಾಡಿ ಅಡಿಕೆ ಮರ ಸಹಿತ ತಮ್ಮೆಲ್ಲಾ ಕೃಷಿಗೆ ಹಾಕಿದರು. ಕೆಲವೇ ಸಮಯದಲ್ಲಿ ಬದಲಾವಣೆ ಕಂಡರು. ಈಗ ಹಾಲಿಗಾಗಿ ಅಲ್ಲ ಸೆಗಣಿಗಾಗಿಯೇ ಗೋವನ್ನು ಸಾಕಲು ಶುರು ಮಾಡಿದ್ದಾರೆ. ದನ ಹಾಲು ಕೊಡುವುದಕ್ಕಾಗಿಯೇ ಇರುವುದು ಎಂಬ ಭಾವವೇ ಇಲ್ಲ. ಹಾಲಿನಿಂದಲೇ ಲಾಭ ಅಲ್ಲ ಎಂಬ ಮನೋಭಾವ ಬೆಳೆಸಿದ್ದಾರೆ. ಹಾಗಂತ ತುಂಬಾ ನಿರೀಕ್ಷೆ ಇರಿಸಿ ಅವರ ತೋಟಕ್ಕೆ, ಗೋವುಗಳನ್ನು ನೋಡಲು ಹೋದರೆ ನಿಮಗೇನೂ ಕಾಣಲು ಸಿಗದು. ಜ್ಞಾನದ, ಅನುಭವದ ಮಾತುಗಳ ಸರಕು ಲಬ್ಯವಾದೀತು, ಪ್ರತೀ ಗಿಡದಲ್ಲಿನ ಬದಲಾವಣೆಯನ್ನು ಅವರು ವಿವರಣೆ ನೀಡಲು ಶಕ್ತರು.

ಹಾಗಿದ್ದರೆ ದನದ ಸೆಗಣಿ ಹೇಗೆ ಲಾಭ ಎಂಬುದನ್ನೂ ಅವರೇ ವಿವರಿಸುತ್ತಾರೆ, ಅವರ 2 ದನಗಳು ದಿನಕ್ಕೆ 17 ಕೆಜಿ ಸೆಗಣಿ ಹಾಕುತ್ತದೆ. ಇದೆಲ್ಲಾ ಸಂಗ್ರಹ ಮಾಡುತ್ತಾ ಸುಮಾರು 700 ಕೆಜಿ ಸೆಗಣಿ ಸಂಗ್ರಹವಾದ ಬಳಿಕ ಅದಕ್ಕೆ ಜೀವಾಮೃತ ಸಿಂಪಡಣೆ ನಂತರ 2 ತಿಂಗಳ ಕಾಲ ಮುಚ್ಚಿಡುತ್ತಾರೆ. ನಂತರ 700 ಕೆಜಿಗೆ ತಲಾ ಶೇ30 ರಂತೆ ಹೊಂಗೆ, ಹರಳಿಂಡಿ, ಬೇವಿನಹಿಂಡಿ ಹಾಗೂ ರಾಕ್‍ಪಾಸ್ಪೇಟ್‍ನೊಂದಿಗೆ ಮಿಶ್ರಣ ಮಾಡಿ ಗೋಣಿಯಲ್ಲಿ ತುಂಬಿ ಕೃಷಿಗೆ ಅಳವಡಿಸುತ್ತಿದ್ದಾರೆ. ಇದರ ಪರಿಣಾಮ ಮಣ್ಣಿಗೆ ಉಸಿರು ಸಿಕ್ಕಿತು. ಹಸಿರು ನಳನಳಿಸಿತು. ಈಗ ಅಡಿಕೆ ಮರದ ಸೋಗೆ ಉದ್ದ ಬರುತ್ತಿದೆ, ಹಿಂಗಾರ ಉದ್ದ ಬರುತ್ತಿದೆ, ಹಳದಿಯಾಗಿಯೇ ಇರುತ್ತಿದ್ದ ಅಡಿಕೆ ಮರದ ಸೋಗೆ ಹಸಿರಾಗಿದೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಇವರ ತೋಟಕ್ಕೆ ಇದೆ.ಆದರೆ ಈ ಬಾರಿ ನೀರು ಕಡಿಮೆಯಾದರೂ ತೊಂದರೆಯಾಗಿಲ್ಲ. ಕಳೆದ 8 ವರ್ಷಗಳಿಂದ ಅಡಿಕೆ ನಳ್ಳಿ ಬೀಳುತ್ತಿತ್ತು, ಈಗ ನಳ್ಳಿ ಬೀಳುವುದು ಕಡಿಮೆಯಾಗಿದೆ ಎಂದು ಹೇಳುವಾಗ ಮಹಾಬಲೇಶ್ವರ ಭಟ್ಟ ಮುಖದಲ್ಲಿ ಸಾರ್ಥಕತೆ ಕಾಣುತ್ತದೆ. ಈಗ 2 ಗೋವಿನ ಮೂಲಕ ವರ್ಷಕ್ಕೆ 2 ಬಾರಿ 4 ಕೆಜಿ ಗೊಬ್ಬರ ನೀಡಲು ಸಾಧ್ಯವಾಗುತ್ತದೆ. ಈಗ ಮಣ್ಣಿನಲ್ಲಿ ಬದಲಾವಣೆ ಕಂಡಿದೆ. ಎರೆಹುಳಗಳು ಸಾಕಷ್ಟು ಇವೆ. ಕಾಳುಮೆಣಸು ಬಳ್ಳಿಗೆ ಬರುವ ರೋಗ ನಿಯಂತ್ರಣದಲ್ಲಿದೆ ಎನ್ನುತ್ತಾ ಗೋವಿನ ಮೂಲಕ ಆದ ಕೃಷಿ ಬದಲಾವಣೆ, ಮಣ್ಣು ಜೀವ ಪಡೆದ ಬಗೆಯನ್ನು ಹೇಳುತ್ತಾರೆ.
ಗೋವು ಬರಿಯ ಹಾಲಿಗೆ ಮಾತ್ರಾ, ಹೋರಿ ಯಾಕಾಗಿ ಸಾಕುವುದು  ಎಂಬ ಕೂಗು, ಕೊರಗು ಅನೇಕರಲ್ಲಿದೆ. ಆದರೆ ಮಹಾಬಲೇಶ್ವರ ಭಟ್ಟರು ಹೇಳುವುದು ಕೇವಲ ಹಾಲಿಗಾಗಿ ದೇಸೀ ದನ ಸಾಕುವುದಲ್ಲ, ಆ ಭಾವವೇ ಬೇಡ. ನಾವು ಸೆಗಣಿಗಾಗಿ ಸಾಕುವುದು, ಮಣ್ಣು ಉಳಿಸಲು ಗೋವು ಸಾಕುವುದು  ಎನ್ನುವ ಮನೋಭಾವ ಬೆಳೆಸಿದ್ದಾರೆ. ಹಾಗಾಗಿ ದೇಸೀ ಗೋವು ಅವರಿಗೆ ಮಣ್ಣಿನ ಸಂರಕ್ಷಕ...!.

ಕೃಷಿ ಕ್ಷೇತ್ರದಲ್ಲಿ, ಬಹುತೇಕ ತೋಟದಲ್ಲಿ ಇಂದು ಮಣ್ಣು ಉಸಿರಾಡುವುದು ಕಡಿಮೆಯಾಗಿದೆ. ರಾಸಾಯನಿಕದ ಪರಿಣಾಮ ಫಲವತ್ತತೆ ಕಡಿಮೆಯಾಗುತ್ತಿದೆ. ಹೀಗಾಗಿ ಭೂಮಿಯ ಮೇಲಿನ ಹಸಿರೂ ಸತ್ವ ಕಳೆದಕೊಂಡಿದೆ. ಇಂತ ಸಂದರ್ಭದಲ್ಲಿ ಅವುಗಳಿಗೆಲ್ಲಾ ಪರಿಹಾರವಾಗಿ , ಮಣ್ಣಿಗೆ ಮೆಟ್ಟಿಲಾಗಿ ಗೋವು ನಿಂತಿದೆ. ಹಾಲಿಗಾಗಿಯೇ ಅಲ್ಲ, ಸೆಗಣಿಗಾಗಿಯಾದರೂ ಗೋವು ಸಾಕಾಣಿಗೆ ನಡೆಯಲಿ.ಸೆಗಣಿಗೂ ಈಗ ಬೆಲೆ ಇದೆ...!. ( ಮಹಾಬಲೇಶ್ವರ ಭಟ್ ಸಂಪರ್ಕಕ್ಕೆ - 9448659751 )







20 ನವೆಂಬರ್ 2017

ಏರುವ ಬಿಪಿ..... ಕಾಣುವ ಸತ್ಯ.....





ಸುಮಾರು 35 ವರ್ಷ. ಇದ್ದಕ್ಕಿದ್ದಂತೆ ಆರೋಗ್ಯದ ತಪಾಸಣೆ ಮಾಡಬೇಕು ಎನಿಸಿತು. ವೈದ್ಯಕೀಯ ತಪಾಸಣೆಗೆ ಮುನ್ನ ಸಾಮಾನ್ಯ ವ್ಯಕ್ತಿಯಾಗಿದ್ದರೆ  ಬರುವಾಗ ಸ್ವಲ್ಪ ಬಿಪಿ ಹೆಚ್ಚಿದೆ....!. ಹಾಗಂತ ಯಾವುದೇ ಟ್ಯಾಬ್ಲೆಟ್ ಬೇಡ, ಸುಧಾರಿಸಿಕೊಳ್ಳಬೇಕು...

ಬೆಳಗ್ಗೆ ನನ್ನ ಪುಟಾಣಿಗಳನ್ನು ಶಾಲೆಗೆ ಬಿಡುವ ಹೊತ್ತು. ದೈನಂದಿನ ತುರ್ತು ಕೆಲಸಗಳ ಮುಗಿಸಿ ಬೈಕ್ ಹತ್ತಿ ಹೋಗುವಾಗ ಪುಟಾಣಿ ಹೇಳುತ್ತಾನೆ, ಇಂದು ಎಲ್ಲೂ ಹೋಗಬೇಡ, ಶಾಲೆ ಬಿಟ್ಟು ಬರೋವಾಗ ನೀನಿರಬೇಕು. ಆಟವಾಡಲು ಇದೆ...!. ಸರಿ.. ಸರಿ...... ಅಂದರೂ ಆ ಹೊತ್ತು "ಕಾಣೆ...".

ಇಂದು ತೋಟದ ನಡುವೆ ಹಲವು ಕೆಲಸಗಳು ಇವೆ. ಅದೆಲ್ಲಾ ಇಂದೇ ಮುಗಿಸಬೇಕು. ನಾಳೆ ಹೊಸದೊಂದು ಗಿಡ ನೆಡುವುದಕ್ಕೆ ಇದೆ, ಕೃಷಿ ಕಾರ್ಯದ ಸಹಾಯಕ್ಕೆ ಇಂದು 5 ಜನ ಬರುವರು ಎಂದು ಅಪ್ಪ ಹೇಳಿದಾಗಲೂ, ಸರಿ ಸರಿ ಎನ್ನುತ್ತಾ ಜನ ಬರುವ ಹೊತ್ತಿಗೆ "ನಾಪತ್ತೆ...."

ಬೇಗನೆ ಕಾಫಿ ಕುಡಿಯಬೇಕು. ಒಬ್ಬೊಬ್ಬರೇ ಬಂದರೆ ಆಗದು. ಬೇರೆ ಕೆಲಸವೂ ಇದೆ. ಬೇಗ ಊಟ ಮುಗಿಸಬೇಕು,... ಸರಿ ಸರಿ ಎನ್ನುತ್ತಾ ಸಂಗಾತಿಯ ಮುಂದೆಯೂ "ಕಾಣೆ..."

ಹೊಸ ಹೊಸ ವಿಷಯದ ಕಸನು ಹೊತ್ತು, ಅದ್ಯಾವುದೋ ಗ್ರಾಮದ ಸಮಸ್ಯೆಗೆ ಬೆಳಕು ನೀಡಬೇಕು, ಆ ಊರಿನ ಜನರಿಗೆ ನೆಮ್ಮದಿ ಸಿಗಬೇಕು. ಅದ್ಯಾರೋ ಬಡವನಿಗೆ ಆದ ಸಂಕಷ್ಟ ರಾಜ್ಯದ ದೊರೆಯ ಗಮನಕ್ಕೆ ಬರಬೇಕು, ಪರಿಹಾರ ಸಿಗಬೇಕು ಎಂದು ಕಂಪ್ಯೂಟರ್ ಮುಂದೆ ಕುಳಿತು ಮಾಡಿದ ಸುದ್ದಿಯೂ ಮರುದಿನ ಕಾಣೆ....!. ಕಾರಣ ಇನ್ನೇನೋ....!. ಹಾಗೊಂದು ವೇಳೆ ಬಂದರೂ, ವಾಸ್ತವವಾದರೂ  ಅದಕ್ಕೆ ಇನ್ನೊಂದಿಷ್ಟು "ಉಪ್ಪು-ಹುಳಿ-ಖಾರ".

ಇಡೀ ದಿನ ಹೀಗೇ ಕಳೆಯುತ್ತಾ ಸುಮಾರು 10 ವರ್ಷ ಕಳೆದು ಹೋದವು....!. ಈಗ ಸಾಧನೆಯ ಕಾರ್ಡ್ ನೋಡಿದರೆ "ಬಿಪಿ".

ಇತ್ತೀಚೆಗೆ ದೇಹಕ್ಕೆ ಶಕ್ತಿ ನೀಡುವ , ಚೈತನ್ಯ ತುಂಬುವ, ಮೆದುಳನ್ನು  ರಿಲ್ಯಾಕ್ಸ್ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಾಗ ಅನಿಸಿದ್ದು , ಭೂತಕಾಲದ ಎಲ್ಲಾ ಸನ್ನಿವೇಶಗಳು, ಘಟನೆಗಳು ಅನುಭವಗಳಾದರೆ. ವ್ಯಕ್ತಿಗಳಿಂದ ತೊಡಗಿ ವಸ್ತುಗಳವರೆಗೆ, ಆಹಾರದಿಂದ ತೊಡಗಿ ವಿಹಾರದವರಗೆ , ಎಲ್ಲದರ ಒಂದು ಮುಖ ತಿಳಿದಿದೆ.  ಭವಿಷ್ಯದ ಬದಲಾವಣೆ, ಘಟನೆಗಳು ತಿಳಿದಿಲ್ಲ. ಹಾಗಾಗಿ ವರ್ತಮಾನದಲ್ಲಿ ಬದುಕುವ ಪ್ರಯತ್ನ ನಡೆಯುತ್ತಿದೆ. ಒಮ್ಮಿದೊಮ್ಮೆಲೇ ಇದೆಲ್ಲಾ ಕಷ್ಟ, ಆದರೂ ಸುಲಭ..!.

ಈಗ ಹೇಳಲು ಹೊರಟದ್ದು, ಬದುಕಿನ ಅನಗತ್ಯ ಒತ್ತಡ.
ಬೆಳಗ್ಗೆ ಪುಟಾಣಿಗಳ ಜೊತೆ ಶಾಲೆಗೆ ಹೊರಡುವ, ಅವರನ್ನು ಶಾಲೆಗೆ ಬಿಡುವ ಖುಷಿ, ಉಲ್ಲಾಸ ,ನಂತರ ಸಮಯ ಏರುತ್ತಿದ್ದಂತೇ ಬದಲಾಗುತ್ತಾ ಹೋಗುತ್ತದೆ. ಅದೇ ಒತ್ತಡ. ಸಂಜೆ ಪುಟಾಣಿ ಬಂದು ಆಟಕ್ಕೆ ಕರೆದಾಗ ಬೆಳಗಿನ ಖುಷಿಯೇ ಸಿಟ್ಟಾಗಿರುತ್ತದೆ, ಆ ಪುಟಾಣಿಗೆ ಇದೆಲ್ಲಾ ಹೇಗೆ ಗೊತ್ತು...? . ಹೀಗಾಗಿ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಒತ್ತಡ ಅದು. ಇದುವೇ ಆರೋಗ್ಯದ ಮೇಲೆ ಪರಿಣಾಮ. ಸವಾಲುಗಳು ಬೇಕು ನಿಜ, ಸವಾಲು ಇಲ್ಲದ ಬದುಕು ಇಲ್ಲ.  ಆದರೆ ಅದರ ಪರಿಣಾಮ ಹಾಗೂ ಅದರಿಂದ ಸ್ವಂತಕ್ಕಾಗಿ ಸಿಗುವ ಸುಖ  ಎಷ್ಟು ಎಂಬುದರ ಮೇಲೆ ಸವಾಲು ಸ್ವೀಕಾರವಾಗಬೇಕು.  ಹೆಚ್ಚಿನ ಸಂದರ್ಭ ಅಂತಹ ಸವಾಲು ಅನಗತ್ಯ. ವ್ಯರ್ಥವಾದ ಹೋರಾಟ..!. ಇದಕ್ಕಾಗಿ ಇಂತಹ ಹೋರಾಟಗಳಿಂದ ಹಿಂದೆ ಬರುವ ಬದಲು ತಟಸ್ಥವಾಗುವ ಮೂಲಕ ದೇಹದ ಆರೋಗ್ಯ ಸುಧಾರಣೆ. ಮಾತನಡುವ ಬದಲು ಮೌನವಾಗುವುದು ಹೆಚ್ಚು ಸೂಕ್ತ. ಇದು ನಮ್ಮೊಳಗಿನ ದೊಡ್ಡ ಗೆಲುವು. ನಮ್ಮೊಳಗಿನ ಖುಷಿ.

ಒಂದು ಶಕ್ತಿಯ, ಒಂದು ಸತ್ಯವ, ಒಂದು ಸಿದ್ದಾಂತವನ್ನು ನಂಬುವ ಕಾರಣದಿಂದ ಅನೇಕ ಬಾರಿ ಈ ನಂಬಿಕೆಯೇ ದಾರಿ ತೋರಿಸುತ್ತದೆ. ಸತ್ಯ ಎತ್ತಿ ಹೇಳುತ್ತದೆ, ಅರಿವು ಮೂಡಿಸುತ್ತದೆ. ಘಟನೆಯ ಹಿಂದೆ ಇರುವ ಮತ್ತೊಂದು ಮುಖದ ಅನಾವರಣ ಮಾಡಿಸುತ್ತದೆ. ಆಗ ಬೆಳಕು ಕಾಣುತ್ತದೆ. ದಾರಿ ಸ್ಪಷ್ಟವಾಗುತ್ತದೆ.
ಈಗಲೂ ಕಾಣುವುದು ಸ್ಪಷ್ಟವಾದ ದಾರಿ. ಈಗ ಮಬ್ಬು ಕವಿದಿದೆ. ವರ್ತಮಾನದಲ್ಲಿ ಯೋಚನೆ ನಡೆದಿದೆ. ಮುಂದೆ ಸಾಗುತ್ತಿದ್ದಾಗ, ದೂರದಲ್ಲಿ ಇನ್ನೊಂದು ಬೆಳಕು ಕಾಣಿಸುತ್ತಿದೆ. ಹತ್ತಿರವಾಗುತ್ತಿದೆ.  ಅದು ಯಶಸ್ಸು. ಅದು ಗುರಿ.
ಈಗ ಪುಟಾಣಿ ಜೊತೆ ಹರಟಲು ಖುಷಿಯಾಗುತ್ತಿದೆ, ನಿತ್ಯವೂ ಆಟವಾಡಲು ಖುಷಿಯಾಗುತ್ತಿದೆ...!.


16 ನವೆಂಬರ್ 2017

ಕೃಷಿ ಸುಲಭಕ್ಕೆ "ಯಂತ್ರ" ಕಟ್ಟುವ ನಮ್ಮೂರ ತಂತ್ರಜ್ಞರು...!



                                                              ( ಸಾಂದರ್ಭಿಕ ಚಿತ್ರ)


ಕೃಷಿಕ ಗೋವಿಂದ ರಾವ್ ಸುಮಾರು 10 ವರ್ಷಗಳ ಹಿಂದೆ ರಿಕ್ಷಾವನ್ನು ವಿನ್ಯಾಸಗೊಳಿಸಿ ಅಡಿಕೆ ತೋಟದ ಒಳಗೆ ಹೋಗುವಂತೆ ಮಾಡಿಕೊಂಡರು. ಇದಕ್ಕಾಗಿ ಪ್ರತ್ಯೇಕ ರಸ್ತೆಯೂ ತೋಟದಲ್ಲಿ ಸಿದ್ದವಾಯಿತು. ಈ ವ್ಯವಸ್ಥೆ ಬಗ್ಗೆ ಅಂದು ಚರ್ಚೆಯಾಯಿತು. ಬಹುತೇಕ ಕೃಷಿಕರು "ಇದಾಗದು" ಎಂದರು...!. ಗೋವಿಂದ ರಾವ್ ಸೊಪ್ಪು ಸಾಕಲಿಲ್ಲ. ಅವರು 10 ವರ್ಷಗಳ ನಂತರದ ಸ್ಥಿತಿಯ ಬಗ್ಗೆಯೇ ಯೋಚನೆ ಮಾಡಿದ್ದರು.
ವಿದೇಶಗಳಲ್ಲಿ ಕಾಣುತ್ತಿದ್ದ ,ಟಿವಿಗಳಲ್ಲಿ  ನೋಡುತ್ತಿದ್ದ ಕಳೆ ಕೊಚ್ಚುವ ಯಂತ್ರ ಭಾರತದಲ್ಲಿ ಕಾಣಿಸಿತು. ಕೃಷಿಕರ ತೋಟಕ್ಕೂ ಇಳಿಯಿತು. ಆಗಲೂ ಚರ್ಚೆಯಾಯಿತು. ಅನೇಕರು ಕೃಷಿಕರು "ಇದು ನಮಗೆ ಆಗದು" ಎಂದರು...!. ಹೊಸ ಸಮಸ್ಯೆಗಳನ್ನೇ ಹೇಳಿಕೊಂಡರು, ಸವಾಲು ಸ್ವೀಕರಿಸಲು ಒಪ್ಪಲಿಲ್ಲ.

ಇಂದು ಬಹುತೇಕ ಎಲ್ಲಾ ಕೃಷಿಕರ ತೋಟದಲ್ಲಿ ಇಣುಕಿದರೆ ಯಂತ್ರಗಳ ಸದ್ದು ಕೇಳುತ್ತದೆ. ತೋಟದ ಒಳಗಡೆ ಅಟೋದ ಬದಲಾಗಿ ಸುಧಾರಿತ ಯಂತ್ರಗಳು ಕಾಣುತ್ತದೆ, ಮಿನಿ ಜೆಸಿಬಿ ಮಣ್ಣು ಅಗೆಯುತ್ತದೆ, ಮಣ್ಣನ್ನು ಹೊನ್ನು ಮಾಡುವುದು  ಕಾಣುತ್ತದೆ. ಇದೆಲ್ಲಾ ಕೇವಲ 10 ವರ್ಷದ ಬದಲಾವಣೆಯಷ್ಟೇ...! ಇಲ್ಲಿ ಸವಾಲುಗಳನ್ನು ಸ್ವೀಕರಿಸಲೇಬೇಕಾದ ಅನಿವಾರ್ಯತೆ ಬಂದಿತು. ಹಾಗಿದ್ದರೂ ಸವಾಲುಗಳಿಗೆ ಉತ್ತರ ನೀಡುವಷ್ಟು ಯಂತ್ರಗಳ ಬಳಕೆ, ಆವಿಷ್ಕಾರದ ವೇಗ ಕಾಣುತ್ತಿಲ್ಲ. ನಿರೀಕ್ಷೆಗಳು ಮಾತ್ರವೇ ಹೆಚ್ಚಾಗುತ್ತಿದೆ.

ಈ ಬದಲಾವಣೆಯ ಹಿಂದೆ, ಯಂತ್ರಗಳ ಆವಿಷ್ಕಾರದ ಹಿಂದೆ ನಮ್ಮದೇ ಊರಿನ ತಂತ್ರಜ್ಞರ ಕೈವಾಡ ಇರುತ್ತದೆ. ನಮ್ಮದೇ ತೋಟದ ನಡುವೆ ಓಡಾಡಿದ ಹುಡುಗರ ಶ್ರಮ ಇರುತ್ತದೆ. ಯುವಕರ ಪ್ರಯತ್ನ ಇರುತ್ತದೆ. ಬಹುತೇಕ ಕೃಷಿಕರ ಮಕ್ಕಳು ಓದುತ್ತಾ ಓದುತ್ತಾ ಕೃಷಿ ಬಿಡುತ್ತಾರೆ, ಹಳ್ಳಿ ಬಿಟ್ಟು, ಕೃಷಿ ಬಿಟ್ಟು ರಾಜಧಾನಿ ಸೇರುತ್ತಾರೆ ಎಂದೇ ಚರ್ಚೆಯಾಗುತ್ತದೆ. ಆದರೆ ಇಲ್ಲೂ ಮಣ್ಣಿನ ಮೇಲೆ ಪ್ರೀತಿ ಇರುವ, ಕೃಷಿ ಮೇಲೆ ಬದುಕು ಕಟ್ಟುವ ಆಸೆಯುಳ್ಳ ಯುವ ಮನಸ್ಸುಗಳು ಸದ್ದಿಲ್ಲದೆ ಪ್ರಯತ್ನ ಮಾಡುತ್ತಿದ್ದಾರೆ. ಕೃಷಿ ಸಮಸ್ಯೆಯನ್ನ ಸ್ವತ: ಮನಗಂಡು ಅವುಗಳ ನಿವಾರಣೆಗೆ ನಗರದಲ್ಲೋ, ಹಳ್ಳಿಯಲ್ಲೂ ಕುಳಿತು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಸುಲಭ ಯಂತ್ರಗಳನ್ನು ಕಟ್ಟುವ ಕೆಲಸ ನಮ್ಮೂರಿನ ತಂತ್ರಜ್ಞರು ಮಾಡುತ್ತಿದ್ದಾರೆ. ಆದರೆ ಇಲ್ಲಿಯ ಕೊರತೆ ಎಂದರೆ ಪ್ರೋತ್ಸಾಹ...!.
ಯಂತ್ರಮೇಳ ಅಥವಾ ಕೃಷಿ ಮೇಳಗಳಲ್ಲಿ ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಥವಾ ಕೃಷಿಕರೇ ಅಭಿವೃದ್ಧಿ ಪಡಿಸಿದ ವಿವಿಧ ಯಂತ್ರಗಳು ಇರುತ್ತದೆ. ಮೇಳದಲ್ಲಿ ಹೊಸ ಆವಿಷ್ಕಾರದ ಬಳಿ ಬಂದಾಗ, ಎರಡೇ ಸಿದ್ಧ ಪ್ರಶ್ನೆ ಇರುತ್ತದೆ. "ಇದೆಲ್ಲಿ ಸಿಗುತ್ತದೆ" , "ಇದು ಹೇಗೆ ಕೆಲಸ ಮಾಡುತ್ತದೆ...?" ಇದರ ಜೊತೆಗೇ "ಇದು ನಮಗೆ ಆಗದು...." , "ಮಾರ್ಕೆಟ್‍ನಲ್ಲಿ ಸಿಗದ ಮೇಲೆ ಏಕೆ ನೋಡುವುದು...."...!.ಇಂತಹ ಮನಸ್ಥಿತಿಯಿಂದಲೇ ಬಹುತೇಕ ಯುವಕರ ಕೃಷಿ ಸಂಶೋಧನೆಗಳು ಅರ್ಧಕ್ಕೆ ನಿಂತಿದೆ. ಕೃಷಿಕರೇ ಅಭಿವೃದ್ಧಿಪಡಿಸಿದ ವಿವಿಧ ಯಂತ್ರಗಳು ಮೂಲೆಗುಂಪಾಗಿದೆ. ಹೀಗಾಗಿ ಆಗಬೇಕಾದ್ದು ಎರಡೇ ಎರಡು ಪ್ರೋತ್ಸಾಹದ ಮಾತು, ಜೊತೆಗೆ ನಮಗೆ ಹೇಗೆ ಬೇಕು ಎಂಬುದರ ಸಲಹೆ. ಇದೆರಡು ಸಿಕ್ಕಿದರೆ ಸಂಶೋಧನೆಗಳೇ ಮುಂದೆ ಯಂತ್ರಗಳಾಗಿ ಸಿಗುತ್ತದೆ. ಅಂತಹದ್ದು ಒಂದಲ್ಲ, ಎರಡಲ್ಲ..!

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆಯೇ ಪ್ರಮುಖ ಕೃಷಿ. ಇಲ್ಲಿ ಸಮಸ್ಯೆಯೇ ಹೆಚ್ಚು.ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಪಡನೆ, ಕೊಯ್ಲು ಮಾಡುವುದು , ಮರ ಏರುವುದು  ಇತ್ಯಾದಿಗಳು ಇಲ್ಲಿ ದೊಡ್ಡ ತಲೆನೋವು. ಕಾರ್ಮಿಕರದ್ದೇ ಸಮಸ್ಯೆ. ಇದಕ್ಕಾಗಿ ವಿವಿಧ ಯಂತ್ರಗಳ ಅಭಿವೃದ್ಧಿಯಾಗಿದೆ.

ಶಿವಮೊಗ್ಗದ ಗಾಜನೂರು ಪ್ರದೇಶದಲ್ಲಿರುವ ಶೆರ್ವಿನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಧರ. ಇವರ ಕುಟುಂಬಕ್ಕೆ ಅಡಿಕೆ ಕೃಷಿಯೇ ಆಧಾರ. ಕೃಷಿ ಸಮಸ್ಯೆ ಹತ್ತಿರದಿಂದ ಬಲ್ಲ ಇವರು ಅಡಿಕೆ ಕೊಯ್ಲು ಮಾಡಲು ಯಂತ್ರವೊಂದನ್ನು ಸಿದ್ದಪಡಿಸಿದರು. ಅದಕ್ಕೆ ಬೀಟಲ್‍ನಟ್ ರ್ಯಾಪರ್ ಅಂತ ಕರೆದರು. ಈ ಯಂತ್ರಕ್ಕೆ ಚಿಕ್ಕ ಇಂಜಿನ್ ಅಳವಡಿಸಲಾಗಿದೆ. ಎರಡು ಚಕ್ರಗಳ ಮೂಲಕ ಅಡಿಕೆ ಮರವನ್ನು ಏರಿ ಯಂತ್ರದ ಮುಂಭಾಗದಲ್ಲಿ ಅಳವಡಿಸುವ ಬ್ಲೇಡ್ ಮೂಲಕ ಅಡಿಕೆ ಗೊನೆ ಕತ್ತರಿಸಿ ಅಡಿಕೆ ಸಹಿತ ಕೆಳಗೆ ಇಳಿಯುತ್ತದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ  ಯಲ್ಲಪ್ಪರವಿ ಎಂಬ ಎಂಟೆಕ್ ವಿದ್ಯಾರ್ಥಿ ಭತ್ತದ ಗದ್ದೆಗೆ ಔಷಧಿ ಸಿಂಪಡಣೆಗೆ ಡ್ರೋನ್ ಮಾದರಿಯ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ. ವಿದೇಶಗಳಲ್ಲಿ ಇಂತಹ ಯಂತ್ರ ಕಂಡುಬಂದರೂ ದೇಶದಲ್ಲಿ ಇದರ ಅಭಿವೃದ್ಧಿ ಆಗಿರಲಿಲ್ಲ. ಈ ವಿದ್ಯಾರ್ಥಿ ಭತ್ತದ ಬೆಳೆಗೆ ಉಪಯೋಗವಾಗುವ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಪ್ರಾಯೋಗಿಕ ಯಶಸ್ಸು ಕಂಡಿದ್ದಾರೆ. ಇವರಿಗೆ ಕಾಲೇಜು ಹಾಗೂ ಕೃಷಿಕರು ಪ್ರೋತ್ಸಾಹ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಡಪಣೆಗೆ ಧರ್ಮಸ್ಥಳ ಬಳಿಯ ನಿಡ್ಲೆಯ ಅಡಿಕೆ ಬೆಳೆಗಾರ ಕುಟುಂಬದಿಂದ ಬಂದ ಇಂಜಿನಿಯರ್ ಅವಿನಾಶ್ ರಾವ್ ಎಂಬವರು ಡ್ರೋನ್ ಮಾದರಿಯ ಯಂತ್ರ ತಯಾರು ಮಾಡಿದ್ದಾರೆ. ಈಗ ಬಹುತೇಕ ಯಶಸ್ಸು ಕಂಡಿದೆ. ಕೊಳೆರೋಗಕ್ಕೆ ಔಷಧಿ ಸಿಂಪಡಣೆ ಇನ್ನು ಸಿಲಭವಾಗಲಿದೆ. ಈಗಾಗಲೇ ಅಂತಿಮ ಹಂತ ತಲಪಿದ ಈ ಯಂತ್ರವನ್ನು ನವೆಂಬರ್ ತಿಂಗಳಲ್ಲಿ  ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡು ಉದ್ಘಾಟನೆಗೊಳ್ಳಲಿದೆ. 2008 ರಿಂದ ಈ ಪ್ರಯತ್ನ ಮಾಡುತ್ತಿದ್ದ ಅವರಿಗೆ ಕ್ಯಾಂಪ್ಕೋ ಪ್ರೋತ್ಸಾಹ ನೀಡಿತ್ತು.
ಇನ್ನು ಶಿವಮೊಗ್ಗದ ಯುವಕರ ತಂಡ, ತಮಿಳುನಾಡಿನ ಕೃಷಿಕ, ಸುಳ್ಯದ ಕೃಷಿಕ ಗಣಪ್ಪಯ್ಯ ಅವರ ಪ್ರಯೋಗ..... ಹೀಗೇ ವಿವಿಧ ಕೃಷಿ ಯಂತ್ರಗಳ ಅಭಿವೃದ್ಧಿಯಾಗಿದೆ.
ಇದನ್ನೆಲ್ಲಾ ಪಾಸಿಟಿವ್ ಆಗಿ ತೆಗೆದುಕೊಂಡು ಪ್ರೋತ್ಸಾಹ ನೀಡಬೇಕಾದ್ದು ಅಗತ್ಯ. ಇಂದಲ್ಲ, ಮುಂದಿನ 10 ವರ್ಷಗಳ ನಂತರದ ಕೃಷಿಯ ಸ್ಥಿತಿಯ ಬಗ್ಗೆ ಯೋಚನೆ ನಡೆಯಬೇಕು. ಲೋಪಗಳೇ ಯಂತ್ರದ ಸೋಲಿನ ಕಾರಣವಾಗಬಾರದು, ಆ ಲೋಪಗಳೇ ಸುಧಾರಣೆಯಾಗಿ ಭವಿಷ್ಯದ ಸುಭದ್ರ ಕೃಷಿಗೆ ನಾಂದಿಯಾಗಬೇಕು. ನಮ್ಮದೇ ಊರಿನ ಯಂತ್ರ ಕಟ್ಟುವ ತಂಡಕ್ಕೆ ನಾವೇ ಬೆಂಗಾವಲಾಗಬೇಕು. ಅಂದು ಕೃಷಿಕ ಗೋವಿಂದ ರಾವ್ ರಿಕ್ಷಾವನ್ನು ವಿನ್ಯಾಸಗೊಳಿಸಿ ಮುಂದಡಿ ಇರಿಸಿದ್ದರಿಂದ ಅವರಿಗೆ ಇಂದು ಕಾರ್ಮಿಕರ ಸಮಸ್ಯೆ ತಲೆದೋರಿಲ್ಲ, ಕಳೆಕೊಚ್ಚುವ ಯಂತ್ರ ಬಳಕೆ ಮಾಡಿದ್ದರ ಪರಿಣಾಮ ನಿಗದಿತ ಸಮಯದಲ್ಲೇ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಂದು ಅವರೂ ಹಿಂದೇಟು ಹಾಕುತ್ತಿದ್ದರೆ ಇಂದಿಗೂ ಕೃಷಿ ಯಂತ್ರಗಳು ಅವರತ್ತ ಬರುತ್ತಿರಲಿಲ್ಲ...!. ಮಣ್ಣು ಹಸನಾಗುತ್ತಿರಲಿಲ್ಲ...ಸಮಸ್ಯೆಗಳಿಗೆ ಉತ್ತರ ಸಿಗುತ್ತಿರಲಿಲ್ಲ.

(  ಮಣ್ಣಿಗೆ ಮೆಟ್ಟಿಲು - ಹೊಸದಿಗಂತ - 8-11-2017 )