24 ನವೆಂಬರ್ 2017

ದೇಸೀ ಗೋವು ಬದಲಿಸಿದ ಕೃಷಿ......




ಗೋವು....!. ಈ ಎರಡಕ್ಷರ ಇಂದು ಸಂಚಲನದ ವಿಷಯ. ವಾಸ್ತವಾಗಿ ಇದು ಮಣ್ಣಿನ ಉಳಿವಿನ ಪ್ರಶ್ನೆ. ಗೋವು ಇದ್ದರೆ ಮಣ್ಣಿನ ಉಸಿರು, ಮಣ್ಣಿನ ಉಸಿರಿದ್ದರೆ ಹಸಿರು. ಎಲ್ಲರೂ ಗೋವಿನ ಹಾಲಿನ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಗೋವಿನ ಸೆಗಣಿ ಬಗ್ಗೆಯೂ ಮಾತನಾಡುವವರು ಇದ್ದಾರೆ. ಈ ಮೂಲಕವೇ ಮಣ್ಣನ್ನು ಹಸನಾಗಿಸಿದವರು ಇದ್ದಾರೆ. ನಳನಳಿಸುವ ಕೃಷಿಯನ್ನು ಕಂಡು ಖುಷಿಪಟ್ಟವರಿದ್ದಾರೆ.

ಎಲ್ಲಾ ಕೃಷಿಕರು, ಗೋಸಾಕಾಣಿಕೆ ಮಾಡುವ ಮಂದಿಯೂ ಮಾತನಾಡುವುದು ದನದ ಹಾಲಿನ ಬಗ್ಗೆಯೇ. ದನ ಹಾಲೆಷ್ಟು ನೀಡುತ್ತದೆ? ಲಾಭವೋ ನಷ್ಟವೋ?, ದನದ ಖರ್ಚು ಸರಿದೂಗಿಸುವುದೇ ಕಷ್ಟ... ಇದೆರಡೇ ಪ್ರಶ್ನೆ. ಆದರೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಬಳಿಯಲ್ಲಿರುವ ಮಹಾಬಲೇಶ್ವರ ಭಟ್ಟರು ದನದ ಹಾಲಿನ ಬಗ್ಗೆ ಮಾತನಾಡುವುದು ,ಈ ಬಗ್ಗೆ ಕೇಳುವುದು ಎರಡನೇ ಪ್ರಶ್ನೆ. ಅವರ ಮೊದಲ ಪ್ರಶ್ನೆ, ದನ ಎಷ್ಟು ಸೆಗಣಿ ಹಾಕುತ್ತದೆ? ನಮ್ಮ ಮನೆಯ ಎರಡು ದನ ದಿನಕ್ಕೆ ಹಾಕುವ ಸೆಗಣಿ 17 ಕೆಜಿ..!. ಇಲ್ಲಿಂದಲೇ ಅವರ ಮಾತು ಶುರುವಾಗುತ್ತದೆ. ಹಾಗೆ ಮಾತನಾಡುತ್ತಾ ಸಾಗಿದಂತೆ ಅಲ್ಲಿ ಮಣ್ಣು ಉಸಿರಾಡುವುದು ಗೊತ್ತಾಗುತ್ತದೆ  ಎದುರಲ್ಲೇ ನಳನಳಿಸುವ ಕಾಳುಮೆಣಸಿನ ಬಳ್ಳಿ ಸಿಗುತ್ತದೆ, ಅಡಿಕೆ ಮರದ ಸೋಗೆ ಆರೋಗ್ಯವಾಗಿರುವುದು ಕಾಣುತ್ತದೆ. ಮಹಾಬಲೇಶ್ವರ ಭಟ್ಟ ಮುಖದಲ್ಲಿ ಮಂದಹಾಸ, ಸಂತೃಪ್ತ ಭಾವ.

ದೇವಸ್ಥಾನದ ಅರ್ಚಕರಾದ ಮಹಾಬಲೇಶ್ವರ ಭಟ್ಟರು ಅನೇಕ ವರ್ಷಗಳಿಂದಲೂ ಸಾವಯವ ಕೃಷಿಕರೇ ಆಗಿದ್ದರು. ಅರ್ಚಕ ವೃತ್ತಿಯ ಜೊತೆಗೆ ಅಡಿಕೆಯೇ ಪ್ರಮುಖ ಬೆಳೆ. ಅದರ ಜೊತೆಗೆ ಕೊಕೋ, ಕಾಳುಮೆಣಸು, ಬಾಳೆ. ಇದೆಲ್ಲಾ ಕೃಷಿ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ಮಣ್ಣಿನಲ್ಲೂ ಅಂತದ್ದೇನೂ ಬದಲಾವಣೆ ಇದ್ದಿರಲಿಲ್ಲ. ತೋಟದ ನಡುನಡುವೆ ಅಡಿಕೆ ಮರದ ಸೋಗೆ ಕೆಂಪಾಗಿದ್ದು ಕಾಣುತ್ತಿತ್ತು. ಪರಿಹಾರ ಎಲ್ಲೆಲ್ಲೂ ಸಿಕ್ಕಿರಲಿಲ್ಲ. ಈಗ ನೋಡಿದರೆ ಅದೇ ತೋಟದ ಮಣ್ಣಿನಲ್ಲಿ ಬದಲಾವಣೆ ಕಂಡಿತು, ಹಸಿರು ನಳನಳಿಸುತ್ತಿದೆ. ಇಡೀ ತೋಟದಲ್ಲಿ ಕಾಳುಮೆಣಸು ಸಹಿತ ಇತರೆಲ್ಲಾ ಕೃಷಿಗಳಿಗೆ ಮರುಜೀವ ಬಂದಿದೆ. ಇಂತಹ ಬದಲಾವಣೆ ಕಂಡದ್ದು, ಮಣ್ಣು ಉಸಿರಾಡಿದ್ದು ಗೋವಿನ ಮೂಲಕ. ಅದೂ ದೇಸೀ ಗೋವಿನ ಕಾರಣದಿಂದ.

ತಮ್ಮ ಅಡಿಕೆ ತೋಟದ ಸುಮಾರು 380 ಅಡಿಕೆ ಮರಗಳಿಗೆ ಅನೇಕ ವರ್ಷಗಳಿಂದ ಕಂಪನಿಗಳಿಂದ ಸಾವಯವ ಗೊಬ್ಬರ ಖರೀದಿ ಮಾಡಿ ಹಾಕುತ್ತಿದ್ದರು. 17 ವರ್ಷಗಳಿಂದ ಇದೇ ರೀತಿ ಮಾಡುತ್ತಲೇ ಬಂದಿದ್ದರೂ ಸಮಾಧಾನ ಇರಲಿಲ್ಲ, ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಅದೊಂದು ದಿನ ಕೃಷಿ ಋಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿಂದ ನಂತರ ವಿವಿಧ ಪ್ರಯೋಗ ಮಾಡುತ್ತಲೇ ಇದ್ದರು. ಬಳಿಕ ನೆಕ್ಕರಕಳೆಯ ಸುಬ್ರಹ್ಮಣ್ಯ ಪ್ರಸಾದ್ ಎಂಬ ಕೃಷಿಕರು  ನೀಡಿದ ಮಾಹಿತಿ ಆಧಾರದಲ್ಲಿ ತಾವೇ ಸ್ವತ: ಗೊಬ್ಬರ ತಯಾರು ಮಾಡಲು ಶುರು ಮಾಡಿದರು. ಅದಕ್ಕಾಗಿಯೇ ದೇಸೀ ಗೋವನ್ನು ಸಾಕಲು ಆರಂಭಿಸಿದರು. ಅದುವರೆಗೆ ಇದ್ದ ವಿವಿಧ ತಳಿಯ ಗೋವುಗಳ ಸಾಕಾಣಿಗೆ ದೂರ ಮಾಡಿ ದೇಸೀ ತಳಿಯ ಗೋವನ್ನು ಸಾಕಿದರು. ಅದುವರೆಗೆ ಇದ್ದ ಗೋಬರ್ ಗ್ಯಾಸ್ , ಸ್ಲರಿ ಪದ್ದತಿ ಬಿಟ್ಟರು. ಕೇವಲ ದೇಸೀ ಗೋವಿನ ಸೆಗಣಿ ಸಂಗ್ರಹಿಸಿ ಅದರ ಮೂಲಕವೇ ಗೊಬ್ಬರ ತಯಾರು ಮಾಡಿ ಅಡಿಕೆ ಮರ ಸಹಿತ ತಮ್ಮೆಲ್ಲಾ ಕೃಷಿಗೆ ಹಾಕಿದರು. ಕೆಲವೇ ಸಮಯದಲ್ಲಿ ಬದಲಾವಣೆ ಕಂಡರು. ಈಗ ಹಾಲಿಗಾಗಿ ಅಲ್ಲ ಸೆಗಣಿಗಾಗಿಯೇ ಗೋವನ್ನು ಸಾಕಲು ಶುರು ಮಾಡಿದ್ದಾರೆ. ದನ ಹಾಲು ಕೊಡುವುದಕ್ಕಾಗಿಯೇ ಇರುವುದು ಎಂಬ ಭಾವವೇ ಇಲ್ಲ. ಹಾಲಿನಿಂದಲೇ ಲಾಭ ಅಲ್ಲ ಎಂಬ ಮನೋಭಾವ ಬೆಳೆಸಿದ್ದಾರೆ. ಹಾಗಂತ ತುಂಬಾ ನಿರೀಕ್ಷೆ ಇರಿಸಿ ಅವರ ತೋಟಕ್ಕೆ, ಗೋವುಗಳನ್ನು ನೋಡಲು ಹೋದರೆ ನಿಮಗೇನೂ ಕಾಣಲು ಸಿಗದು. ಜ್ಞಾನದ, ಅನುಭವದ ಮಾತುಗಳ ಸರಕು ಲಬ್ಯವಾದೀತು, ಪ್ರತೀ ಗಿಡದಲ್ಲಿನ ಬದಲಾವಣೆಯನ್ನು ಅವರು ವಿವರಣೆ ನೀಡಲು ಶಕ್ತರು.

ಹಾಗಿದ್ದರೆ ದನದ ಸೆಗಣಿ ಹೇಗೆ ಲಾಭ ಎಂಬುದನ್ನೂ ಅವರೇ ವಿವರಿಸುತ್ತಾರೆ, ಅವರ 2 ದನಗಳು ದಿನಕ್ಕೆ 17 ಕೆಜಿ ಸೆಗಣಿ ಹಾಕುತ್ತದೆ. ಇದೆಲ್ಲಾ ಸಂಗ್ರಹ ಮಾಡುತ್ತಾ ಸುಮಾರು 700 ಕೆಜಿ ಸೆಗಣಿ ಸಂಗ್ರಹವಾದ ಬಳಿಕ ಅದಕ್ಕೆ ಜೀವಾಮೃತ ಸಿಂಪಡಣೆ ನಂತರ 2 ತಿಂಗಳ ಕಾಲ ಮುಚ್ಚಿಡುತ್ತಾರೆ. ನಂತರ 700 ಕೆಜಿಗೆ ತಲಾ ಶೇ30 ರಂತೆ ಹೊಂಗೆ, ಹರಳಿಂಡಿ, ಬೇವಿನಹಿಂಡಿ ಹಾಗೂ ರಾಕ್‍ಪಾಸ್ಪೇಟ್‍ನೊಂದಿಗೆ ಮಿಶ್ರಣ ಮಾಡಿ ಗೋಣಿಯಲ್ಲಿ ತುಂಬಿ ಕೃಷಿಗೆ ಅಳವಡಿಸುತ್ತಿದ್ದಾರೆ. ಇದರ ಪರಿಣಾಮ ಮಣ್ಣಿಗೆ ಉಸಿರು ಸಿಕ್ಕಿತು. ಹಸಿರು ನಳನಳಿಸಿತು. ಈಗ ಅಡಿಕೆ ಮರದ ಸೋಗೆ ಉದ್ದ ಬರುತ್ತಿದೆ, ಹಿಂಗಾರ ಉದ್ದ ಬರುತ್ತಿದೆ, ಹಳದಿಯಾಗಿಯೇ ಇರುತ್ತಿದ್ದ ಅಡಿಕೆ ಮರದ ಸೋಗೆ ಹಸಿರಾಗಿದೆ. ಇನ್ನೊಂದು ಪ್ರಮುಖವಾದ ಅಂಶವೆಂದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಇವರ ತೋಟಕ್ಕೆ ಇದೆ.ಆದರೆ ಈ ಬಾರಿ ನೀರು ಕಡಿಮೆಯಾದರೂ ತೊಂದರೆಯಾಗಿಲ್ಲ. ಕಳೆದ 8 ವರ್ಷಗಳಿಂದ ಅಡಿಕೆ ನಳ್ಳಿ ಬೀಳುತ್ತಿತ್ತು, ಈಗ ನಳ್ಳಿ ಬೀಳುವುದು ಕಡಿಮೆಯಾಗಿದೆ ಎಂದು ಹೇಳುವಾಗ ಮಹಾಬಲೇಶ್ವರ ಭಟ್ಟ ಮುಖದಲ್ಲಿ ಸಾರ್ಥಕತೆ ಕಾಣುತ್ತದೆ. ಈಗ 2 ಗೋವಿನ ಮೂಲಕ ವರ್ಷಕ್ಕೆ 2 ಬಾರಿ 4 ಕೆಜಿ ಗೊಬ್ಬರ ನೀಡಲು ಸಾಧ್ಯವಾಗುತ್ತದೆ. ಈಗ ಮಣ್ಣಿನಲ್ಲಿ ಬದಲಾವಣೆ ಕಂಡಿದೆ. ಎರೆಹುಳಗಳು ಸಾಕಷ್ಟು ಇವೆ. ಕಾಳುಮೆಣಸು ಬಳ್ಳಿಗೆ ಬರುವ ರೋಗ ನಿಯಂತ್ರಣದಲ್ಲಿದೆ ಎನ್ನುತ್ತಾ ಗೋವಿನ ಮೂಲಕ ಆದ ಕೃಷಿ ಬದಲಾವಣೆ, ಮಣ್ಣು ಜೀವ ಪಡೆದ ಬಗೆಯನ್ನು ಹೇಳುತ್ತಾರೆ.
ಗೋವು ಬರಿಯ ಹಾಲಿಗೆ ಮಾತ್ರಾ, ಹೋರಿ ಯಾಕಾಗಿ ಸಾಕುವುದು  ಎಂಬ ಕೂಗು, ಕೊರಗು ಅನೇಕರಲ್ಲಿದೆ. ಆದರೆ ಮಹಾಬಲೇಶ್ವರ ಭಟ್ಟರು ಹೇಳುವುದು ಕೇವಲ ಹಾಲಿಗಾಗಿ ದೇಸೀ ದನ ಸಾಕುವುದಲ್ಲ, ಆ ಭಾವವೇ ಬೇಡ. ನಾವು ಸೆಗಣಿಗಾಗಿ ಸಾಕುವುದು, ಮಣ್ಣು ಉಳಿಸಲು ಗೋವು ಸಾಕುವುದು  ಎನ್ನುವ ಮನೋಭಾವ ಬೆಳೆಸಿದ್ದಾರೆ. ಹಾಗಾಗಿ ದೇಸೀ ಗೋವು ಅವರಿಗೆ ಮಣ್ಣಿನ ಸಂರಕ್ಷಕ...!.

ಕೃಷಿ ಕ್ಷೇತ್ರದಲ್ಲಿ, ಬಹುತೇಕ ತೋಟದಲ್ಲಿ ಇಂದು ಮಣ್ಣು ಉಸಿರಾಡುವುದು ಕಡಿಮೆಯಾಗಿದೆ. ರಾಸಾಯನಿಕದ ಪರಿಣಾಮ ಫಲವತ್ತತೆ ಕಡಿಮೆಯಾಗುತ್ತಿದೆ. ಹೀಗಾಗಿ ಭೂಮಿಯ ಮೇಲಿನ ಹಸಿರೂ ಸತ್ವ ಕಳೆದಕೊಂಡಿದೆ. ಇಂತ ಸಂದರ್ಭದಲ್ಲಿ ಅವುಗಳಿಗೆಲ್ಲಾ ಪರಿಹಾರವಾಗಿ , ಮಣ್ಣಿಗೆ ಮೆಟ್ಟಿಲಾಗಿ ಗೋವು ನಿಂತಿದೆ. ಹಾಲಿಗಾಗಿಯೇ ಅಲ್ಲ, ಸೆಗಣಿಗಾಗಿಯಾದರೂ ಗೋವು ಸಾಕಾಣಿಗೆ ನಡೆಯಲಿ.ಸೆಗಣಿಗೂ ಈಗ ಬೆಲೆ ಇದೆ...!. ( ಮಹಾಬಲೇಶ್ವರ ಭಟ್ ಸಂಪರ್ಕಕ್ಕೆ - 9448659751 )







ಕಾಮೆಂಟ್‌ಗಳಿಲ್ಲ: