06 ಡಿಸೆಂಬರ್ 2017

ಹಳ್ಳಿಯಲ್ಲಿ ಸೋಲು ಕಾಣುವುದಿಲ್ಲ , ಹೊಲದಲ್ಲಿ ಸಾಲವೂ ಇಲ್ಲ....!





ಅದು ಮಹಾರಾಷ್ಟ್ರದ ಪುಟ್ಟ ಹಳ್ಳಿ. ಬರಗಾಲದಿಂದ ತತ್ತರಿಸಿ ಹೋಗಿದ್ದ ಊರು ಅದು. ಯಾವುದೇ ಕೃಷಿ ಮಾಡಿದರೂ ಕೈಗೆ ಸಿಗದ ಕಾಲ. ಆದರೆ ಈಗ ಕೃಷಿ ಯಶಸ್ಸು ಕಂಡಿದೆ, ಅಲ್ಲಿನ ಯುವಕನೊಬ್ಬ ಮಾಡಿರುವ ಪ್ರಯತ್ನ ಇಂದು ಉಳಿದೆಲ್ಲಾ ಕೃಷಿಕರಿಗೆ ಮಾದರಿಯಾಗಿದೆ...!. ನಮ್ಮ ನಾಡಿನ ಹುಬ್ಬಳ್ಳಿ ಸಮೀಪದ ಹನುಮನಹಳ್ಳಿ, ರಾಮಪುರ ಮೊದಲಾದ ಪ್ರದೇಶದಲ್ಲಿ ಕೂಡಾ ಬರಗಾಲದಿಂದ ಕೃಷಿಯೇ ಸೋಲುತ್ತಿದೆ ಎನ್ನುವ ಕೂಗು. ಇಲ್ಲೂ ಈಗ ಕಾಲ ಬದಲಾಗಿದೆ. ಇಡೀ ನಾಡಿಗೆ ಮಾದರಿಯಾಗಿದೆ. ಕೃಷಿಗೆ , ಕೃಷಿಕನಿಗೆ ಸೋಲು ಇಲ್ಲ ಎಂಬ ಸಂದೇಶ ಇದೆರಡೂ ಹಳ್ಳಿಗಳು ನೀಡಿವೆ. ಇದೆರಡೂ ಹಳ್ಳಿಯಲ್ಲಿ ಬದಲಾವಣೆಗೆ ಕಾರಣವಾದ್ದು ಸಾವಯವ ಪದ್ಧತಿಯ ಕೃಷಿ ಹಾಗೂ ಬದಲಾವಣೆಯ ಕೃಷಿ ಪದ್ದತಿ.

ನಾಡಿನಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಮೇಲಿನಿಂದ ಮೇಲೆ ಕೇಳುತ್ತಿದೆ. ಇದಕ್ಕೆ ಕಾರಣ ಕೇಳಿದರೆ ಬೆಳೆ ನಷ್ಟ ಹಾಗೂ ಸಾಲವೇ ಉತ್ತರವಾಗಿ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಬರಗಾಲವನ್ನೂ ಮೆಟ್ಟಿ ನಿಂತ ಉದಾಹರಣೆಗಳು ಸಾಕಷ್ಟು ಬಂದರೂ ರೈತರ ಮಾನಸಿಕ ಸ್ಥಿತಿ ಬದಲಾಗುತ್ತಿಲ್ಲ. ಬರಗಾಲಕ್ಕೆ, ನೀರಿನ ಕೊರತೆಗೆ ಸರಿಹೊಂದುವ ಬೆಳೆಯತ್ತ, ಕೃಷಿ ಪದ್ದತಿಯಲ್ಲಿ ಬದಲಾವಣೆಯ ಬಗ್ಗೆ ಚಿಂತನೆ ನಡೆಸದೇ ಇರುವುದು ತಿಳಿಯುತ್ತದೆ. ಭವಿಷ್ಯದಲ್ಲಿ ಸಮಸ್ಯೆ ಇರಬಹುದಾದರೂ ಏಕಬೆಳೆಯನ್ನೇ ಬಹುತೇಕ ರೈತರು ನೆಚ್ಚಿಕೊಂಡಿದ್ದಾರೆ. ಅದು ಬದಲಾಗಬೇಕಿದೆ.
ಅದು 2012 ರ ಸಮಯ ಹುಬ್ಬಳ್ಳಿಯ ವಿವಿದೆಡೆ ಬರಗಾಲದ ಛಾಯೆ ಕಂಡುಬಂದಿತ್ತು. ಅನೇಕ ರೈತರು ಕಂಗಾಲಾಗಿದ್ದರು. ಅನೇಕ ವರ್ಷಗಳಿಂಲೂ ಪರಂಪರಾಗತವಾಗಿ ಬೆಳೆದುಕೊಂಡು ಬಂದಿದ್ದ ರಾಗಿಯನ್ನೇ ಬೆಳೆಯುತ್ತಿದ್ದರು. ಬಹುಪಾಲು ರೈತರು ಪ್ರತೀ ವರ್ಷವೂ ಸೋಲುತ್ತಿದ್ದರು. ಬೆಳೆ ನಷ್ಟ ಅನುಭವಿಸುತ್ತಿದ್ದರು. ಆದರೆ ಆ ಊರಿನ ಕೆಲ ರೈತ ಮಾತ್ರ ಅತ್ಯುತ್ತಮ ಇಳುವರಿಯನ್ನು ತಂದರು. ಇದು ಉಳಿದೆಲ್ಲಾ ರೈತರಿಗೆ ಅಚ್ಚರಿ ಕಾದಿತ್ತು, ಇದಕ್ಕೆ ಕಾರಣ ಹುಡುಕಲು ತೊಡಗಿದರು. ಆಗ ಸಿಕ್ಕಿದ ಉತ್ತರ ಉಳಿದ ರೈತರಿಗೂ ಸೋಲಿನಿಂದ  ಹೊರಬರಲು ಕಾರಣವಾಯಿತು. ಬರಗಾಲಕ್ಕೆ ಉತ್ತರ ನೀಡಲು ಸಾಧ್ಯವಾಯಿತು.
ಅದುವರೆಗೆ ಉತ್ತಮ ಇಳುವರಿ ಬರಲು ರೈತರು ಸಾಕಷ್ಟು ರಾಸಾಯನಿಕ ಬಳಸಿ ಇಳುವರಿ ಪಡೆಯಲು ಪ್ರಯತ್ನ ಮಾಡುತ್ತಿದ್ದರು. ಆದರೆ ಮಳೆಯ ಕೊರತೆಯಿಂದ ಸಾಕಷ್ಟು ಫಸಲು ಇದ್ದರೂ ಕೈಗೆ ಬಾರದೆ ನಷ್ಟ ಅನುಭವಿಸುವ ಸ್ಥಿತಿ ಅದಾಗಿತ್ತು. ಪರಿಸ್ಥಿತಿ ಹೀಗಿರುವಾಗ, ಆಗ ರಾಜ್ಯದಲ್ಲಿ ಸಾವಯವ ಕೃಷಿಯ ಬಗ್ಗೆ ಜೋರಾದ ಚಳುವಳಿ ಇತ್ತು, ಸರಕಾರವೇ ಇದಕ್ಕಾಗಿ ಯೋಜನೆಯನ್ನೂ ಮಾಡಿತ್ತು. ಈ ಯೋಜನೆ ಹುಬ್ಬಳ್ಳಿ ಪರಿಸರದಲ್ಲೂ ಜಾರಿಯಾಯಿತು. ಸಾವಯವ ಸಂಘಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ಅನೇಕ ರೈತರು ಸಂಪೂರ್ಣ ಸಾವಯವ ಕೃಷಿಯತ್ತ ಆಕರ್ಷಿತರಾದರು. ಸಾವಯವ ಕೃಷಿ ಕಡೆಗೆ ಬರುವ ರೈತರಿಗೆ ಆರ್ಥಿಕ ನೆರವು, ವರ್ಮಿ-ಕಾಂಪೆÇೀಸ್ಟ್ ಮಾಡುವ ವಿಧಾನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಾ ಮಣ್ಣನ್ನು ಸಂರಕ್ಷಿಸುವ ಕೆಲಸ ನಡೆಯಿತು. ಇದರ ಫಲವಾಗಿ ಸಹಜವಾದ, ಸಮೃದ್ಧವಾದ ಕೃಷಿಯಾಯಿತು. ಮಣ್ಣು ಫಲವತ್ತಾಯಿತು, ಬರಗಾಲದ ನಡುವೆಯೂ ಇಳುವರಿ ಉಳಿಯಿತು. ಹೊಲದಲ್ಲಿ ಸಾಲವಿಲ್ಲ, ಸೋಲೂ ಇಲ್ಲ ಎಂಬ ಮನವರಿಕೆಯಾಯಿತು. ಈಗ ಅವರು ಬೆಳೆಯುತ್ತಿರುವ ರಾಗಿ ಹೊಸದಾದ ಯಾವುದೇ ಬೆಳೆ ಅಲ್ಲ ಬದಲಾಗಿ ಸಹಜ, ರಾಸಾಯನಿಕ ಮುಕ್ತವಾದ ಕೃಷಿಗೆ ತಿರುಗಿದ್ದಾರೆ ಅಷ್ಟೇ. ಇದೊಂದೇ ಸಾಕಿತ್ತು, ಆ ಹಳ್ಳಿಯ ರೈತರ ಬದುಕಿಗೆ ಬೆಳಕು ನೀಡಲು. ಹಿಂದೆಲ್ಲಾ ಕೀಟನಾಶಕ ಮತ್ತು ಬಿಟಿ-ಹತ್ತಿ, ಸೋಯಾ ಮತ್ತು ಮೆಕ್ಕೆಜೋಳದಂತಹ ನೀರಿನ ಆಶ್ರಯದ ಬೆಳೆಯ ಕೇಂದೀೀಕರಿಸುವ ಬದಲಾಗಿ ರಾಗಿಯ ಕಡೆಗೇ ಮನಸ್ಸು ಹೊರಳಿದೆ ಎನ್ನುವುದು ಯಶಸ್ಸಿನ ಸಂಕೇತ. ಕಳೆದ ವರ್ಷ ಸುಮಾರು 50 ಟನ್‍ಗಳಷ್ಟು ಬೆಳೆ ಮಾರಾಟ ಮಾಡಿದರೆ ಈ ಬಾರಿ ಅದಕ್ಕಿಂತ 4 ಪಟ್ಟು ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಎಂದರೆ ಸಾವಯವ ಕೃಷಿಪದ್ದತಿ ಹಾಗೂ ಮಣ್ಣಿನ ಫಲವತ್ತತೆಯ ಬಗ್ಗೆ ಈಗ ಯೋಚಿಸಬೇಕಾದ ಸಮಯ.

ಮಹಾರಾಷ್ಟ್ರದ ಜಲ್ಗಾಂವ್ ಪ್ರದೇಶದ ವೈದ್ಯಕೀಯ ವಿಭಾಗದಲ್ಲಿ ಓದುತ್ತಿದ್ದ ಯುವಕ ಸಂದೇಶ್ ತನ್ನ ಓದು ನಿಲ್ಲಿಸಿ ಹೊಸಸವಾಲನ್ನು ತೆಗೆದುಕೊಂಡು ಕೃಷಿಗೆ ಇಳಿದ. ಅನೇಕ ವರ್ಷಗಳಿಂದ ಬರಗಾಲದಿಂದ ಈಗಾಗಲೇ ಬೆಳೆಯುತ್ತಿದ್ದ ಬಾಳೆಹಣ್ಣು ಮತ್ತು ಹತ್ತಿ  ಕೃಷಿಯಿಂದ ನಷ್ಟವಾಗುತ್ತಿರುವ ಕಾರಣ ಕೃಷಿ ಪದ್ದತಿ ಬದಲಾಗಬೇಕು ಹಾಗೂ ಹಣವೂ ಲಭ್ಯವಾಗಬೇಕು ಎಂದು ಅಂತರ್ಜಾಲದಲ್ಲಿ ತಡಕಾಡಿ ಮಾಹಿತಿ ಪಡೆದು ಕೊನೆಗೆ ಕಾಶ್ಮೀರದ ಹವಾಮಾನದಲ್ಲಿ ಬೆಳೆಯುವ ಕೇಸರಿ ಕೃಷಿಗೆ ಇಳಿದ. ಇದಕ್ಕಾಗಿ ವಿವಿಧ ಪ್ರಯೋಗ ಮಾಡಿದ. ಆರಂಭದಲ್ಲಿ ಅನೇಕರು ಈ ಯುವಕನ ಪ್ರಯತ್ನಕ್ಕೆ ತಣ್ಣೀರು ಎರಚಿದರು. ಹಾಗಿದ್ದರೂ ಪ್ರಯತ್ನ ಬಿಡದೆ ಯಶಸ್ಸು ಸಾಧಿಸಿದ. ಈ ಅಪರೂಪದ ಬೆಳೆಯಿಂದ ಉತ್ತಮ ಆದಾಯ ಗಳಿಸಿದ. ಈಗ ಆ ಇಡೀ ಊರಿಗೆ ಹೊಸ ಕೃಷಿಯೊಂದು ಸಿಕ್ಕಿದೆ, ಬರಗಾಲಕ್ಕೆ ಉತ್ತರವನ್ನೂ ನೀಡಿದ್ದಾರೆ.

ಮಲೆನಾಡು ಭಾಗದಲ್ಲೂ ಇಂತಹದ್ದೇ ಮತ್ತೊಂದು ಸಮಸ್ಯೆ ಅಡಿಕೆ ಬೆಳೆಗಾರರದ್ದು. ಅಡಿಕೆ ಬಗ್ಗೆ ವಿಶ್ವದಾದ್ಯಂತ ಅಪಪ್ರಚಾರವಾಗುತ್ತಿರುವಾಗಲೂ ಅಡಿಕೆಯ ಭವಿಷ್ಯದ ಬಗ್ಗೆ ಇನ್ನೂ ಚಿಂತನೆಯನ್ನೇ ಶುರು ಮಾಡಿಲ್ಲ. ಇದರ ಜೊತೆಗೆ ಪರ್ಯಾಯ ಏನು ಎಂಬುದರ ಬಗ್ಗೆಯೂ ಯೋಚನೆ ನಡೆದಿಲ್ಲ. ಇಂದಿಗೂ ಅಡಿಕೆ ಧಾರಣೆಯ ಸುತ್ತಲೇ ಸುತ್ತುತ್ತಿರುವಾಗಲೇ ಕೆಲವು ರೈತರು, ಯುವಕರು ಅಡಿಕೆಯ ಪರ್ಯಾಯ ಬಳಕೆಯತ್ತ ಹಾಗೂ ಇನ್ನೂ ಕೆಲವು ರೈತರು ಪರ್ಯಾಯ ಬೆಳೆಯತ್ತ ಯೋಚನೆ ಮಾಡುತ್ತಿರುವುದು ನಿರೀಕ್ಷೆಯ ಮೆಟ್ಟಿಲು. ಯಾವತ್ತೂ ಕೃಷಿ ಸೋಲುವುದಿಲ್ಲ, ಆದರೆ ಕೃಷಿ ಪದ್ದತಿ ಹಾಗೂ ಮಾರುಕಟ್ಟೆಯ ವಿಧಾನದಲ್ಲಿ ರೈತನಿಗೆ ಯಶಸ್ಸು ದೂರವಾಗುತ್ತದೆ ಎನ್ನುವುದನ್ನು ಹುಬ್ಬಳ್ಳಿಯ ಪಟ್ಟ ಊರು ಹಾಗೂ ಮಹಾರಾಷ್ಟ್ರದ ಯುವಕ ಸಂದೇಶ ನೀಡುತ್ತಾನೆ.



 ( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು - 6 - 12 - 2017 )



 


ಕಾಮೆಂಟ್‌ಗಳಿಲ್ಲ: