17 ನವೆಂಬರ್ 2016

ದೇಶದ ಹೈಸ್ಪೀಡ್ ಚಾಲಕನೂ . . . ಹಳ್ಳಿಯ ಎತ್ತಿನ ಗಾಡಿಯೂ. . .


ನಮ್ಮ ದೇಶದ ಚಾಲಕ ಸೂಪರ್ ಫಾಸ್ಟ್. ಅವರಿಗೆ ಬುಲೆಟ್ ರೈಲು ಕೂಡಾ ವೇಗವಾಗಿದೆ ಅಂತ ಅನಿಸೋಲ್ಲ. ಆದರೆ ಅದೇ ವಾಹನದಲ್ಲಿರೋ ಇತರೇ ಮಂದಿ ಇನ್ನೂ ಡ್ರೈವ್ ಕಲಿತಿಲ್ಲ. ಹೀಗಾಗಿ ಅಡ್ಡಾದಿಡ್ಡಿಯಾಗಿದ್ದಾರೆ. ಇಡೀ ದೇಶವನ್ನೇ ಅದೇ ಚಾಲಕ ಕೊಂಡೊಯ್ಯಬೇಕು. ಅವರ ವೇಗಕ್ಕೆ ಯಾರೂ ಸ್ಪಂದಿಸಲೇ ಆಗುತ್ತಿಲ್ಲ. ಅದರ ಸ್ಥಿತಿ ಇಂದಿನದು.

ಮೊನ್ನೆ ಮೊನ್ನೆಯವರೆಗ ಒಂದು ಪರಿಸ್ಥಿತಿ ಇತ್ತು. ನಮ್ಮ ಚಾಲಕ ನಿಧಾನವಾಗಿ ಹೋಗುತ್ತಿದ್ದರು, ಎಲ್ಲರೂ ಅವರನ್ನೇ ಅನುಸರಿಸುತ್ತಿದ್ದರು. ನಿಧಾನವಾಗಿ ಸಾಗುತ್ತಲೇ ಇತ್ತು. ಹೀಗಾಗಿ ಯಾರಿಗೂ ಕಷ್ಟ ಅನಿಸಲೇ ಇಲ್ಲ. ಇದರಿಂದ ಇಂಧನ ಹೆಚ್ಚುವರಿ, ಸಮಯವೂ ಹೆಚ್ಚು. . ಹೀಗೇ ವಿವಿಧ ಸಮಸ್ಯೆ ಇತ್ತು. ಆದರೆ ಈಗ ಹೊಸ ಚಾಲಕ.ಆರಂಭದಿಂದಲೇ ಹೇಳಿದರು, ಗಟ್ಟಿ ಹಿಡಿದುಕೊಳ್ಳಿ, ಹಿಡಿದುಕೊಳ್ಳಿ, ವೇಗ ಪಡೆಯುತ್ತದೆ ಅಂತ. ಆದರೆ ಜನ ಅಂದುಕೊಂಡರು, ಇದೆಲ್ಲಾ ಸಾಧ್ಯನಾ? ಇಲ್ಲಿ ರಸ್ತೆನೇ ಸರಿ ಇಲ್ಲ ಅಂತ ಅಂದು ಕೊಂಡರು. ಚಾಲಕನ ಜೊತೆ ಇರುವವರೂ ಸಿದ್ದವಾಗಲಿಲ್ಲ. ಅಷ್ಟು ಹೊತ್ತಿಗೆ ವೇಗ ಪಡೆಯಿತು, ಚಾಲನೆ. ಈಗ ಇದ್ದದ್ದಿದ್ದಂತೆ ಗೇರ್ ಬದಲಾವಣೆಯಾಯಿತು. ಚಾಲಕನ ಜೊತೆಗೆ ಇರುವವರಿಗೂ ಗೊತ್ತೇ ಆಗಿಲ್ಲ. .!. ಅವರು ಅಲ್ಲೇ ಬಿದ್ದರು, ಅವರ ಜೊತೆಗೆ ಹಿಂಬದಿಯಿಂದ ಬರುವವರೂ ಸಾಲು. .  ಸಾಲು. .  ಗುದ್ದಿ ನಿಂತರು. .!. ಇನ್ನಿರುವುದು  ಕತೆ. . ! ಸಮಸ್ಯೆ ಆರಂಭವಾಗಿದ್ದೇ ಇಲ್ಲಿಂದ. ಇದುವರೆಗೆ ಕತೆ ಕೇಳಲು ಶುಷಿಯಾಗಿತ್ತು. ಮಾತನಾಡಲೂ ಖುಷಿಯಾಯಿತು. ಆದರೆ ಸಮಸ್ಯೆ ಗಂಭೀರವಾಗುತ್ತಿದೆ. ಹಳ್ಳಿಯ ಜನ ಇಂದಿಗೂ ಎತ್ತಿನಗಾಡಿಯಲ್ಲೇ ಇದ್ದಾರೆ. ಇನ್ನು  ಬುಲೆಟ್ ರೈಲು ಮಾತು ಹೇಗೆ ?. ಇದೇ ಈಗ ಸಮಸ್ಯೆಗೆ ಮೂಲ.

                                        **************

ಇದು ದೇಶದ ಕತೆ,
ಈಗ ಕಹಿ ಇದೆ, ಸಿಹಿ ಮುಂದಿದೆ ಎಂಬ ಆಶಾಭಾವ. .

ಪ್ರಧಾನಿಯವರು 500 ಹಾಗೂ 1000 ರೂಪಾಯಿ ನೋಟು ಹಿಂಪಡೆಯುವ ನಿರ್ಧಾರ  ಪ್ರಕಟಿಸಿದರು.
ಇಡೀ ದೇಶವೇ ಒಮ್ಮೆ ಸ್ಥಬ್ದವಾಯಿತು.
ಕಾಳಧನಿಕರಿಗೆ ಇದು  ಪಾಠ ಎಂದೇ ಹೇಳಿಕೊಂಡರು. ಕಷ್ಟವಾದರೂ ಪರವಾಗಿಲ್ಲ ಇದೊಳ್ಳೆ ನಿರ್ಧಾರ ಎಂದರು.
ಇದೀಗ 7 ದಿನ ಕಳೆಯಿತು. ದೇಶದ ಹಳ್ಳಿಯಲ್ಲಿ ಇಂದಿಗೂ ಬ್ಯಾಂಕ್ ಮುಂದೆ ಸಾಲು ಕಡಿಮೆಯಾಗಿಲ್ಲ. ಹಣವಿಲ್ಲದ ಪರದಾಟ ಶುರುವಾಗಿದೆ.

ಆರಂಭದಲ್ಲಿ  ಬ್ಯಾಂಕ್ ಮುಂದೆ ಕ್ಯೂ ನಿಲ್ಲುವುದು, ಎಟಿಎಂ ಮುಂದೆ ಕ್ಯೂ ನಿಲ್ಲುವುದು ಕಷ್ಟ ಎನಿಸಲಿಲ್ಲ. ಈಗಲೂ ಕಷ್ಟ ಎನಿಸದು. ಏಕೆಂದರೆ ದೇಶದ ಬಗ್ಗೆ ಚಿಂತಿಸುವಾಗ, ಭವಿಷ್ಯದ ಬಗ್ಗೆ ಯೋಚನೆ ಮಾಡೋವಾಗ ಇದು ಉತ್ತಮ ನಿರ್ಧಾರವೇ. ಪ್ರಧಾನಿ ಕೈಗೊಂಡ ನಿರ್ಧಾರ ಇಂದಲ್ಲ ಎಂದೋ ಆಗಬೇಕಾದ ಕೆಲಸ. ಆದರೆ ಅವರು ಎಣಿಸಿದಷ್ಟು ಸುಲಭ ಆಗಲಿಲ್ಲ, ಸಂಕಷ್ಟ ನಿವಾರಣೆಗೆ ಕೈಗೊಂಡ ನಿರ್ಧಾರ ಇನ್ನೂ ಸರಿಯಾಗಿ ಜಾರಿಯಾಗಿಲ್ಲ.
ಕಾರಣ ಇಷ್ಟೇ, ಅವರಷ್ಟು ವೇಗದಲ್ಲಿ  ಅಧಿಕಾರಿಗಳು ಓಡಲಿಲ್ಲ, ಚಿಂತಿಸಲಿಲ್ಲ. ಬ್ಯಾಂಕ್ ಸಿಬಂದಿಗಳು, ಅಧಿಕಾರಿಗಳು ಚಿಂತಿಸಲಿಲ್ಲ ಎಂಬುದು ಗೊತ್ತಾಗುತ್ತದೆ. ಹೀಗಾಗಿ, ಈಗ ನಮಗೂ ಎಷ್ಟು ದಿನ ಹೀಗೆ ಬ್ಯಾಂಕ್ ಮುಂದೆ, ಎಟಿಎಂ ಮುಂದೆ ಕ್ಯೂ ಅಂತ ಅನಿಸುವ ದಿನ ಬರುತ್ತದೆ. ಹಾಗಂತ ಈ ನಿರ್ಧಾರವೇ ತಪ್ಪು ಅಂತಲ್ಲ.

ಇಡೀ ದೇಶದ ಅರ್ಥವ್ಯವಸ್ಥೆಯ ಶೇ 84 ರಷ್ಟು ಭಾಗ 500 ಹಾಗೂ 1000 ರೂಪಾಯಿ ನೋಟುಗಳು ಚಲಾಣೆಯಲ್ಲಿತ್ತು ಎನ್ನುತ್ತದೆ ವರದಿ. ಈಗ ಒಮ್ಮೆಲೇ ಈ 84 ಶೇಕಡಾದಷ್ಟು ಹಣ ಪುನ: ಬಂದು ಆ ಜಾಗವನ್ನು  10 ರೂಪಾಯಿಯಿಂದ 2000 ರೂಪಾಯಿವರೆಗಿನ ನೋಟು ತುಂಬಿಕೊಳ್ಳಬೇಕು,. ಇದಕ್ಕೆ ತಗಲುವ ಸಮಯ ಎಷ್ಟು?.

ಈ ದೇಶದ ಗ್ರಾಮೀಣ ಭಾಗದ ಶೇ 60 ರಷ್ಟು ಕೃಷಿಕರು ಸಹಕಾರಿ ಸಂಘವನ್ನು  ಅಲಂಬಿಸಿದ್ದಾರೆ. ಅವರಿಗೆ ಎಟಿಎಂ ಅಂದರೆ ಗೊತ್ತಿಲ್ಲ, ಸೈಪ್ ಅಂದರೆ ತಿಳಿದಿಲ್ಲ, ಆನ್‍ಲೈನ್ ವ್ಯವಹಾರ ಗೊತ್ತಿಲ್ಲ. ಏಕೆಂದರೆ, ಇಂದಿಗೂ ಹಳ್ಳಿಯಲ್ಲಿ ಮೊಬೈಲ್ ಸಿಗ್ನಲ್ ಸರಿಯಾಗಿ ಸಿಗುತ್ತಿಲ್ಲ, 2ಜಿ ಸರಿಯಾಗೇ ಸಿಕ್ತಿಲ್ಲ, ಇನ್ನು ಮೊಬೈಲ್ ಬ್ಯಾಂಕಿಂಗ್ ಹೇಗೆ ಸಾದ್ಯ..ಅವರೆಲ್ಲಾ ಸಹಕಾರಿ ಸಂಘವನ್ನೇ ನೆಚ್ಚಿದವರು.  ಇಂದು ಸಹಕಾರಿ ಸಂಘಗಳಿಗೆ ಹಣ ಬರುತ್ತಿಲ್ಲ. ಅವರಿಗೆ ದುಡ್ಡು ಎಲ್ಲಿಂದ?. ಅವರು ಎಷ್ಟು ದಿನ ಅಂತ ಸಹಿಸಿಕೊಳ್ಳಲು ಸಾದ್ಯ. ಹಿಂದೊಮ್ಮೆ ಆರ್ಥಿಕ ಸಂಕಷ್ಟ ಬಂದಾಗ ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ನೀಡಿದ್ದವು. ಇಂದು ಅದೇ ಸಹಕಾರಿ ಸಂಘಗಳು ಆಚೀಚೆ ನೋಡುತ್ತಿವೆ.
ಆದರೆ ಮತ್ತೊಂದು ಸಂಗತಿ ಎಂದರೆ ಸಹಕಾರಿ ಸಂಘಗಳ ಸ್ಥಾಪಿಸಿ ಕೋಟಿ ಕೋಟಿ ಹಣ ತೊಡಗಿಸಿದ ದೊಡ್ಡ ದೊಡ್ಡ ಕುಳಗಳು ಸಹಕಾರಿ ಹೆಸರಿಗೆ ಕಳಂಕ ತಂದಿವೆ ಎಂಬುದೂ ಸತ್ಯ.
ಈಗಿನ ಸ್ಥಿತಿ ನೋಡಿದರೆ ಮುಂದೆ ಕೃಷಿಕರು ಬ್ಯಾಂಕ್‍ನಿಂದ ಪಡೆದುಕೊಂಡ ಸಾಲಮರುಪಾವತಿ ಹೇಗೆ? ಇದಕ್ಕೊಂದು ಪರ್ಯಾಯ ವ್ಯವಸ್ಥೆಯೂ ಬೇಕಾಗುತ್ತದೆ. ಸಾಲ ಬಿಡಿ , ಬಡ್ಡಿಕಟ್ಟುವುದಾದರೂ ಹೇಗೆ?. ಮುಂದೆ 6 ತಿಂಗಳಲ್ಲಿ  ಈ ವ್ಯವಸ್ಥೆ ಸರಿಯಾಗುವುದಾದರೆ ಮುಂದಿನ ಮಳೆಗಾಲದ ಹೊತ್ತಿಗೆ ವ್ಯವಸ್ಥೆ ಸರಿಯಾಬಹುದು. ಅದುವರೆಗೆ ಕಾಯುತ್ತಾ ಕೂರಲು ಗ್ರಾಮೀಣ ಭಾಗದ ಆ ಕೃಷಿಕನಿಗೆ ಸಾಧ್ಯವಿದೆಯಾ ?. ಬಡ ಕಾರ್ಮಿಕನಿಗೆ ಸಾಧ್ಯವಿದೆಯಾ ?. ಗ್ರಾಮೀಣ ಭಾಗದ ಕೃಷಿಕ ವಸ್ತುಗಳನ್ನು ಮಾರಿ ಹಣ ಪಡೆಯುವುದು ಹೇಗೆ.? ಆತ ಕಾರ್ಮಿಕನಿಗೆ ಹಣ ನೀಡುವುದು ಹೇಗೆ ? ಆತನಿಗೂ ಚೆಕ್ ನೀಡುವುದು  ಸಾಧ್ಯವೇ ?.
ಇದೆಲ್ಲಾ ಪ್ರಶ್ನೆಗಳೇ ವಿನ: ಉತ್ತರಗಳಿಲ್ಲ.

                                        *******

ಈಗೇನಾಯಿತು ಅಂದರೆ,

ಈ ದೇಶದ ಪ್ರತಿಯೊಬ್ಬನೂ  ಹೊಂದಿದ್ದು ಕಪ್ಪಹಣ. ಏಕೆಂದರೆ ಕೃಷಿಕರು ತಮ್ಮ ವಸ್ತು ಮಾರಾಟ ಮಾಡುವಾಗಲೂ ತೆರಿಗೆ ತಪ್ಪಿಸಿ ವ್ಯವಹಾರ ಮಾಡಿದರು. ಕೃಷಿ ವಸ್ತು ಮಾರಾಟದ ವೇಳೆ ಬಿಲ್ ರಹಿತ ವ್ಯವಹಾರ ಮಾಡಿ ಅಂತಹವರಿಗೇ ಬೆಂಬಲ ವ್ಯಕ್ತಪಡಿಸಿದರು.
ಇತ್ತ ನೌಕರರು ಸಂಬಳ ಪಡೆಯುವಾಗ ಹೆಚ್ಚು ಮೊತ್ತಕ್ಕೆ ಸಹಿ ಮಾಡಿ ಕಡಿಮೆ ಸಂಬಳ ಪಡೆದರು. ದಾಖಲೆಯ ಪ್ರಕಾರ ಹೆಚ್ಚು ಪಡೆದು ಉದ್ಯಮಿಯಲ್ಲಿ  ಕಪ್ಪು ಹಣ ತುಂಬಿಸಿದರು.
ಇಲ್ಲಿ  ವ್ಯವಹಾರ ಮಾಡುವಾಗ ಬಿಲ್ ನೀಡದೇ , ತೆರಿಗೆ ಪಾವತಿ ಮಾಡದೆಯೇ  ವ್ಯವಹಾರ ಮಾಡಿದರು.
ತಾನು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಈ ಕಂಪನಿಯು ಕಪ್ಪುಹಣದಲ್ಲೇ ನಡೆಯುತ್ತಾ ಎಂದೂ ಯೋಚಿಸಲಿಲ್ಲ.
ಬದಲಾಗಿ ಎಲ್ಲರಿಗೂ ಬೇಕಾಗಿದ್ದು ಹಣ ಮಾತ್ರಾ. ತನ್ನ ದೈನಂದಿನ ಬದುಕು ಶ್ರೀಮಂತವಾಗಬೇಕು, ತನಗೂ ತನ್ನ ಕುಟುಂಬಕ್ಕೂ, ಮುಂದಿನ ಪೀಳಿಗೆಗೂ ಹಣ ಬೇಕೆಂದು ಸಂಗ್ರಹಿಸಿದ್ದು, ಅದಕ್ಕಾಗಿಯೇ ಕಂಪನಿ ಬದಲಾಯಿಸಿದ್ದು, ಹೆಚ್ಚು ಕೃಷಿ ಮಾಡಿದ್ದು, ಹೆಚ್ಚು ವ್ಯಾಪಾರ ಮಾಡಿದ್ದು ತಾನೆ..  .!