30 ಅಕ್ಟೋಬರ್ 2017

ಗಿಡ ಸಹವಾಸದಿಂದ "ಸಮೃದ್ಧ" ಕೃಷಿ....!, ಗಿಡಗೆಳೆತನದಿಂದ ಸಸ್ಯವೈವಿಧ್ಯ...!




"ಮನುಷ್ಯರ ಗೆಳೆತನಕ್ಕಿಂತ ಗಿಡಗೆಳೆತನ ಎಷ್ಟೂ ನೆಮ್ಮದಿ" ಅಂತ ಹಿಂದೊಮ್ಮೆ ಕೀರ್ತಿಶೇಷ ಕಾಂತಿಲ ವೆಂಕಟ್ರಮಣ ಜೋಯಿಸರು ನೆನಪಿಸಿಕೊಳ್ಳುತ್ತಿದ್ದರು. ಹಾಗೆ ನೋಡಿದರೆ ವೆಂಕಟ್ರಮಣ ಜೋಯಿಸರ ಮನೆಯಲ್ಲಿ ನೂರಾರು ಬಗೆಯ ಸಸ್ಯ ವೈವಿಧ್ಯವಿತ್ತು, ಸಮೃದ್ಧ ಕೃಷಿ ಇತ್ತು. ಹೊಸ ಹೊಸ ಬಗೆಯ ಹಣ್ಣಿನ ಗಿಡಗಳು, ವಿನೂತನ ಬಗೆಯ ಸಸ್ಯಗಳು ಕಾಣಸಿಗುತ್ತಿತ್ತು. ಇದೆಲ್ಲಾ"ಸಮೃದ್ಧಿ"ಯಿಂದ ತಂದದ್ದು ಎಂದು ಅವರು ಆಗಾಗ ಹೇಳುತ್ತಿದ್ದರು. ಆದರೆ ಸಮೃದ್ಧಿ ಎಂದರೆ ಏನು ಎಂದು ತಿಳಿಯಲು ಅನೇಕ ವರ್ಷಗಳೇ ಬೇಕಾದವು. ಈಗ ಆ ಸಮೃದ್ಧಿಗೆ ರಜತ ಸಂಭ್ರಮ. 

"ಕೃಷಿ ಎಂದರೆ ಮಣ್ಣು ಹದ ಮಾಡುವುದು  ಮಾತ್ರವಲ್ಲ. ವೈವಿಧ್ಯತೆಯ ಕೃಷಿ, ಗಿಡಗಳ ಬೆಳೆಸುವುದೂ ಇರಬೇಕು. ಇದೆಲ್ಲಾ ಕೃಷಿಗೆ ಪೂರಕ" ಎಂದು ಸುಬ್ರಾಯ ಭಟ್ಟರು ಹೇಳುತ್ತಿದ್ದರು. ಈ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಇದಕ್ಕಾಗಿಯೇ ಒಂದು ತಂಡ , ಒಂದೇ ರೀತಿಯ ಮನಸ್ಸು ಇರಬೇಕು. ಆಗ ಮಾತ್ರವೇ ವೈವಿಧ್ಯತೆಯ ಕೃಷಿಗೆ ಪೂರಕ ವಾತಾವರಣ ಸೃಷ್ಠಿಯಾಗಬಲ್ಲುದು. ಇಂತಹ ಮನಸ್ಸುಗಳನ್ನು ಕಟ್ಟಿದ್ದು 1993 ರಲ್ಲಿ. ಪುತ್ತೂರಿನಿಂದ ಪ್ರಕಟವಾಗುವ ಕೃಷಿಕ ಪರ ಮಾಧ್ಯಮ ಅಡಿಕೆ ಪತ್ರಿಕೆ ಇದಕ್ಕೆ ದಾರಿ ತೋರಿಸಿತು. ಅದುವೇ "ಸಮೃದ್ಧಿ". ಅಂದಿನಿಂದ ಇಂದಿನವರೆಗೂ ಗಿಡಗೆಳೆತನವನ್ನು ಸಮೃದ್ಧಿ ಹೇಳಿಕೊಟ್ಟಿದೆ. ವಿವಿಧ ಹೊಸ ಹೊಸ ಗಿಡಗಳನ್ನು ಮಲೆನಾಡಿಗೆ ಪರಿಚಯಿಸಿದೆ. ಸಮೃದ್ಧಿ ಬಳಗದ ಸದಸ್ಯರ ನಡುವೆ ಯಾವಾಗಲೂ ಹೊಸ ಸಸ್ಯಗಳ ವಿವರ, ಇನ್ನೂ ಹೊಸದರ ಶೋಧ, ಈ ಗಿಡಗಳ ಗುಣವಿಶೇಷಗಳ ಈ ಬಗ್ಗೆಯೇ ಚರ್ಚೆ. ಹೊಸ ತೋಟಗಳ ವೀಕ್ಷಣೆ. 
"ಸಾವಯವ ಕೃಷಿಯ ಬಗ್ಗೆ ಮಾತ್ರ ಆಸಕ್ತಿಯಿದ್ದ ನನಗೆ ಸಮೃದ್ಧಿಯ ಸಂಪರ್ಕದಿಂದ ಸಸ್ಯವೈವಿಧ್ಯದ ಬಗ್ಗೆಯೂ ಆಸಕ್ತಿ ಮೂಡಿತು, ವಿನಿಮಯವಾಗಿ ಬಂದ ಹಲವು ಗಿಡಗಳು ಈಗ ನನ್ನ ತೋಟದಲ್ಲಿ ಬೆಳೆದಿವೆ. ತರಕಾರಿಯಲ್ಲೂ ಸ್ವಾವಲಂಬಿ ಯಾಗಿದ್ದೇನೆ ಎಂದು ಪುತ್ತೂರಿನ ಕೃಷಿಕ ಎ.ಪಿ.ಸದಾಶಿವ ನೆನೆದರೆ, ಕರಿಂಗಾಣದ ಡಾ.ಕೆ.ಎಸ್.ಕಾಮತ್‍ರ ತೋಟದಲ್ಲಿ ಅವರೊಂದಿಗೆ ಸುತ್ತಿದರೆ ಆಗಾಗ ಸಮೃದ್ಧಿಯ ಬಗ್ಗೆ ಹೇಳುತ್ತಲೇ ಇರುತ್ತಾರೆ. ಬನಾರಸ್ ನೆಲ್ಲಿ,  ಹುಣಸೆ, ಪಾಲೂರ್ - ವನ್ ಹಲಸು, ಇದು ಕಾಂಚಿಕೇಳ ಬಾಳೆ.. ಇವೆಲ್ಲಾ ಸಮೃದ್ಧಿ ಮೂಲಕವೇ ಬಂದಿವೆ ಎಂದು ನೆನಪಿಸಿಕೊಳ್ಳುತ್ತಾರೆ.

ಹಾಗಿದ್ದರೆ ಸಮೃದ್ಧಿಯ ಬಗ್ಗೆ ಈಗ ಆಸಕ್ತಿ ಮೂಡುತ್ತದೆ. ಇದು ಗಿಡ ಗೆಳೆತನದ ಒಂದು ಪುಟ್ಟ ಕೂಟ ಅಷ್ಟೇ. ಚಿಂತನೆ ಮಾತ್ರಾ ದೊಡ್ಡದು. ವೆನಿಲ್ಲಾದ ಕಾಲ ಅದು, ಎಲ್ಲಾ ಕಡೆ ವೆನಿಲ್ಲಾ ಬಗ್ಗೆ ಭಾರೀ ಬೇಡಿಕೆ ಬಂದಿದ್ದರೆ ಸಮೃದ್ಧಿಯ ಸದಸ್ಯರಿಗೆ ಈ ಚಿಂತೆ ಅಂದು ಇದ್ದಿರಲಿಲ್ಲ. ಅವರೆಲ್ಲಾ ಅದಕ್ಕೂ ಮುನ್ನವೇ ಗಿಡ ನೆಟ್ಟಿದ್ದರು. ಆದರೆ ಗೆಳೆತನಕ್ಕಾಗಿ. ಹಣಕ್ಕಾಗಿ ಆಗಿರಲಿಲ್ಲ...!. ಇದರ ಉದ್ದೇಶವೇ ಅದು, ತರಕಾರಿ, ಅಲಂಕಾರಿಕ ಹೂವಿನ ಸಸ್ಯಗಳು, ಹಣ್ಣಿನ ಮರಗಳು ಮತ್ತು ಔಷಧೀಯ ಗಿಡಗಳ ಬಗ್ಗೆ ಅರಿವು, ವಿನಿಮಯ ಮಾಡಿಕೊಂಡು ಸಂರಕ್ಷಿಸಿ, ಹವ್ಯಾಸಕ್ಕಾಗಿ ಬೆಳೆಸುವುದು ಮುಖ್ಯ ಲಕ್ಷ್ಯ. ಕಳೆದ 25 ವರ್ಷಗಳಿಂದಲೂ ಇದೇ ಕೆಲಸ ಮಾಡಿಕೊಂಡು ಸಮೃದ್ಧಿ ಬರುತ್ತಿದೆ. 
ಇದು ಹುಟ್ಟಿಕೊಳ್ಳುವುದಕ್ಕೂ ಕಾರಣವಿದೆ, ಸುಮಾರು 1990 ರ ಕಾಲದಲ್ಲಿ ಅಡಿಕೆ ಧಾರಣೆ ಏರಿಕೆ ಕಂಡಿತು, ತೋಟಗಳು ಬೆಳೆಯತೊಡಗಿತು. ಇಂತಹ ಸಂದರ್ಭದಲ್ಲೂ ತರಕಾರಿ, ಹಣ್ಣು, ಗಿಡಗಳ ಬಗ್ಗೆ ಆಸಕ್ತಿಹೊಂದಿದ್ದ ಸಾಕಷ್ಟು ಕೃಷಿಕರಿದ್ದರು. ಇವರದೇ ಒಂದು ಕೂಟ ಏಕೆಮಾಡಬಾರದು ಎಂದು ಅಡಿಕೆ ಪತ್ರಿಕೆ ಚಿಂತಿಸಿತು. ಸಸ್ಯಪ್ರೇಮಿಗಳನ್ನು ಒಗ್ಗೂಡಿಸುವ ಗಿಡಗೆಳೆತನದ 'ಸಮೃದ್ಧಿ' ಹುಟ್ಟಿತು. ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳ ಹಲವು ಕೃಷಿಕರು ಸಮೃದ್ಧಿಯ ಅಡಿಯಲ್ಲಿ ಸೇರಿಕೊಂಡರು. ತಮ್ಮ ತೋಟದ ಅಪರೂಪದ ಸಸ್ಯಗಳೋ, ಬೀಜಗಳ ಕುರಿತಾಗಿ ಮಾತ್ರ  ಕಾಳಜಿ ವಹಿಸಿದವರು ವಿನಿಮಯಕ್ಕೂ ಶುರು ಮಾಡಿದರು. ತಮಗೆ ಪರಿಚಯವಿಲ್ಲದ ಬೀಜ, ಸಸ್ಯಗಳನ್ನು ಅನುಭವಿಗಳಿಗೆ ತೋರಿಸಿ ಅದರ ಪರಿಚಯ ಮಾಡಿಕೊಳ್ಳುವುದು, ಅಪರೂಪದವುಗಳನ್ನು ಸಮೃದ್ಧಿ ಸಭೆಗೆ ತಂದು ಇತರರಿಗೆ ವಿವರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯ ರೂಪದಿಂದ ವಿಶೇಷ ಜಾತಿಯ ಗಿಡಗಳು ಹರಡಿಕೊಂಡಿತು. ಇದರ ಜೊತೆಗೆ ಮಾಸಿಕ ಪ್ರವಾಸ, ವಿಶೇಷ ಕೃಷಿಕರ ಭೇಟಿ ಇತ್ಯಾದಿ ಕಾರ್ಯಕ್ರಮ ಆರಂಭವಾದವು. ಈ ಸಂದರ್ಭ ಕೃಷಿ ಮಾಹಿತಿ ವಿನಿಮಯ, ಹೊಸಪ್ರಯೋಗ, ಶ್ರಮ ಉಳಿಸಲು ಮಾಡಿದ ಜಾಣ್ಮೆಗಳ ಬಗ್ಗೆ ಚರ್ಚಿಸುತ್ತಾರೆ. ಈಗಲೂ ಅದು ಮುಂದುವರಿದಿದೆ. ಆರಂಭದ ದಿನಗಳಲ್ಲಿ ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳುಸೀತಾಫಲ, ಹಾವು ಬದನೆ, ಬಂಟಕೇಪುಳು, ರುದ್ರಾಕ್ಷಿಯಂತಹ ಅಪರೂಪದ ಗಿಡಗಳನ್ನು ಕಾಂತಿಲ ವೆಂಕಟ್ರಮಣ ಜೋಯಿಸರು ಪರಿಚಯಿಸಿದ್ದನ್ನು ಇಂದಿಗೂ ಹಲವಾರು ಮಂದಿ ನೆನಪಿಸಿಕೊಳ್ಳುತ್ತಾರೆ. ಅನಂತ ಭಟ್ಟನ ಅಪ್ಪೆಮಿಡಿ ತಳಿಯು ಸಮೃದ್ಧಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿನಿಮಯವಾಗಿದೆ. ಸಿಹಿಹುಣಸೆ, ರುದ್ರಾಕ್ಷಿ, ಚಳ್ಳೇಹಣ್ಣು, ಕನಕಚಂಪಕ, ಅಗರ್, ಕರ್ಪೂರ ಗಿಡ, ಜಂಬುನೇರಳೆ, ಆಫ್ರಿಕನ್ ಚಿಕ್ಕು, ಎಗ್‍ಫ್ರುಟ್, ರೆಕ್ಕೆಬದನೆ, ಕಾಂಚಿಕೇಳ ಬಾಳೆ, ನೀರುಹಲಸು, ಏಲಕ್ಕಿ ತುಳಸಿ. ಹೀಗೆ ಅಸಂಖ್ಯ ತಳಿಗಳು ಸಮೃದ್ಧಿಯ ಮೂಲಕ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯ ರೂಪದಿಂದ ವಿಶೇಷ ಜಾತಿಯ ಅಸಂಖ್ಯ ಗಿಡಗಳು ಹರಡಿ ಹೋಗಿವೆ. 
ಈಗ ಪ್ರತೀ ತಿಂಗಳ ಎರಡನೇ ಅಥವಾ ಮೂರನೇ ಶನಿವಾರ ಸಭೆ. ಸದಸ್ಯರು ಬರುವಾಗ ತಮ್ಮಲ್ಲಿಂದ ಗಿಡ, ಬೀಜಗಳನ್ನು ವಿನಿಮಯಕ್ಕಾಗಿ ತರುತ್ತಾರೆ. ಹಂಚಿಕೊಳ್ಳುತ್ತಾರೆ. ಈಗ ಸುಮಾರು ಐವತ್ತಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಈಚೆಗೆ ಬೇರೆ ಜಿಲ್ಲೆಗಳ ಕೃಷಿಕರಲ್ಲಿಗೆ ಪ್ರವಾಸವನ್ನು ಸೇರಿಸಿಕೊಂಡಿದೆ. ಇದರಿಂದಾಗಿ ಹೊರ ಊರಿನ ಕೃಷಿಕರೊಂದಿಗೆ ಸಂವಹನ ಬೆಳೆದುಕೊಂಡಿದೆ. ವರ್ಷಕ್ಕೊಮ್ಮೆ ಸಮಿತಿ ಬದಲಾಗುತ್ತದೆ. ಸದ್ಯ ಸಂಘದ ಅಧ್ಯಕ್ಷರಾಗಿ ಭಾಸ್ಕರ ಆರ್. ಕೆ  ಹಾಗೂ ಕಾರ್ಯದರ್ಶಿಯಾಗಿ ರಾಮ್‍ಪ್ರತೀಕ್ ಕರಿಯಾಲ ಮತ್ತು ಕೋಶಾಧಿಕಾರಿಯಾಗಿ ಎ ಪಿ ಸದಾಶಿವ ಸಮೃದ್ಧಿಯನ್ನು ನಡೆಸುತ್ತಿದ್ದಾರೆ. ಈ ಬಾರಿ ರಜತ ಸಂಭ್ರಮವನ್ನು ಅ.29 ರಂದು ಸುಳ್ಯ ತಾಲೂಕು ಕೋಟೆಮುಂಡುಗಾರಿನ ಕಳಂಜ-ಬಾಳಿಲ ಪಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆ ನಾಲ್ಕರ ತನಕ ಆಚರಿಸಲಿದೆ.
ಆಸಕ್ತಿಯೇ ಒಂದು ಸಂಘವಾಗಿ ಗಿಡಗೆಳೆತನದ ಮೂಲಕ ಕೃಷಿ ಸಮೃದ್ಧಗೊಳಿಸುವ ಹಾಗೂ ಬೆಳೆಸುವ ಕಾರ್ಯದಿಂದ ಮಣ್ಣನ್ನು ಹಸಿರಾಗಿಸುವ ಹಾಗೂ ಹಸಿರು ಹಸಿರಾಗಿಯೇ ಇರಿಸುವ ಇಂತಹ ಸಂಘ ಗ್ರಾಮ ಗ್ರಾಮಗಳಲ್ಲಿ ಮೊಳಕೆಯೊಡಬೇಕು ಎಂದು ಅಂದು ಕಾಂತಿಲ ವೆಂಟಕ್ರಮಣ ಜೋಯಿಸರು ಹೇಳುತ್ತಿದ್ದುದು ಇಂದಿಗೂ ಪ್ರಸ್ತುತವಾಗಿದೆ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

17 ಅಕ್ಟೋಬರ್ 2017

ಹಸಿರಿನ ಉಸಿರಿಗೆ ಬಣ್ಣದ ಲೇಪನ .....!

ಸರಕಾರಿ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮ.......

ಈ ಸಡಗರವನ್ನು ಹಸಿರಿನ ಮೂಲಕ ಸಾರಬೇಕು, ಶಾಲೆಯ ಚರಿತ್ರೆಯಲ್ಲಿ ಹಸಿರೇ ದಾಖಲಾಗಬೇಕು ಎಂದು ಸರಕಾರಿ ಶಾಲೆಯ ಶಿಕ್ಷಕ ರಮೇಶ್ ಉಳಯ ಹೇಳುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ಆ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರೂ ಸೇರಿದಂತೆ ಊರಿನ ಮಂದಿ ಯೋಚನೆ ಮಾಡಿದ್ದರು. ಸರಕಾರಿ ಶಾಲೆಯಲ್ಲಿ ಇದೆಲ್ಲಾ ಸಾಧ್ಯವೇ ? ಎಂದೂ ಪ್ರಶ್ನೆ ಮಾಡಿದರು. ಎಲ್ಲಾ ಪ್ರಶ್ನೆಗಳ ನಡುವೆಯೂ ವಿವಿದೆಡೆಯ 40 ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರು ಶಾಲೆಗೆ ಬಂದರು. ಹಸಿರಿಗೆ ಬಣ್ಣದ ಹೊಳಪು ನೀಡಿದರು...!.



ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತೀರಾ ಗ್ರಾಮೀಣ ಭಾಗದಲ್ಲಿದೆ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ವರ್ಷ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿದೆ. ಸುವರ್ಣ ಮಹೋತ್ಸವ ಎಂದಾಗ ಕಾಂಕ್ರೀಟು ಕಟ್ಟಡಗಳು ಸೇರಿದಂತೆ ವಿವಿಧ ಯೋಜನೆ ಸಿದ್ದವಾಗುತ್ತದೆ. ಆದರೆ ಇಲ್ಲಿ ಅಂತಹ ಯೋಜನೆಯ ಬದಲಾಗಿ ಹಸಿರು ಉಳಿಸುವ ಹಾಗೂ ಬೆಳೆಸಲು ಮತ್ತು ಸಂದೇಶ ಸಾರುವ ಯೋಜನೆ ಸಿದ್ದವಾಯಿತು. ಶಾಲೆಯ ಸುತ್ತಲೂ ಸುಮಾರು 2.5 ಎಕ್ರೆ ಜಾಗ ಇದೆ. ಇದರಲ್ಲಿ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಕೃಷಿ ಸಿದ್ದವಾಯಿತು. ಮಕ್ಕಳಿಗೆ ಮಣ್ಣಿನ ಪಾಠವನ್ನು ಹೇಳಿಕೊಡುತ್ತಾ ಊರಿನ ಮಂದಿ ಈ ಜಾಗದಲ್ಲಿ ಅಡಿಕೆ ಗಿಡ ನೆಟ್ಟರು, ಶಾಲೆಗಾಗಿ ಕೃಷಿ ಮಾಡಿದರು. ಉಳಿದ ಜಾಗದಲ್ಲಿ ಕಾಡು ಇದೆ, ಅದರ ಸಂರಕ್ಷಣೆ ನಡೆಯುತ್ತದೆ. ಇದರ ಜೊತೆಗೆ, ಇಡೀ ನಾಡಿಗೆ ಹಸಿರು ಉಳಿಸುವ ಸಂದೇಶ ನೀಡಲು "ಪರ್ಣದ ಉಳಿವಿಗೆ ವರ್ಣದ ಕಾಣಿಕೆ" ಎಂಬ ಯೋಜನೆ ಸಿದ್ದವಾಯಿತು. ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 40 ಚಿತ್ರಕಲಾ ಶಿಕ್ಷಕರನ್ನು ತೆಗ್ಗು ಶಾಲೆಗೆ ಕರೆಯಿಸಿ ಶಾಲೆಯಲ್ಲೇ ಪರಿಸರ ಜಾಗೃತಿ ಸಂದೇಶ ನೀಡುವ ಹಾಗೂ ಕೃಷಿ ಉಳಿಸುವ ಸಂದೇಶದ ಉತ್ತಮ ಚಿತ್ರವನ್ನು ರಚನೆ ಮಾಡಿಸಲಾಯಿತು. ಈ ಎಲ್ಲಾ ಚಿತ್ರಗಳನ್ನು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರದರ್ಶನ ಮಾಡಿ "ಹಸಿರು" ಸಂದೇಶವನ್ನು ಶಾಲೆಗಳ ಮೂಲಕ, ಮಕ್ಕಳ ಮೂಲಕ ಸಮಾಜಕ್ಕೆ ನೀಡುವ ಕೆಲಸ ತೆಗ್ಗು ಶಾಲೆಯ ಸುವರ್ಣ ಮಹೋತ್ಸವ ವರ್ಷದ ಪೂರ್ತಿ ಮಾಡುತ್ತದೆ.

ದೇಶದ ತುಂಬೆಲ್ಲಾ ಇಂದು ಕೇಳಿಬರುತ್ತಿರುವ ಮಾತು ಪರಿಸರ ಸಂರಕ್ಷಣೆ.....ಪರಿಸರ ಸಂರಕ್ಷಣೆ. ಆದರೆ ಹೇಗೆ ? ಎಲ್ಲಿ ಎಂಬ ಪ್ರಶ್ನೆಗೆ ಮಾತ್ರಾ ಉತ್ತರವೇ ಇಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ ನಡೆಯುತ್ತಿದೆ ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಯ ಸಂದರ್ಭ ಸುಮಾರು 10 ಸಾವಿರ ಮರಗಳ ನಾಶವಾಗಲಿದೆ. ಇಡೀ ಹೆದ್ದಾರಿ ಅಭಿವೃದ್ಧಿಯಾಗುವ ವೇಳೆಗೆ ಸುಮಾರು 15 ಸಾವಿರ ಮರಗಳ ಹನನವಾಗುತ್ತದೆ. ರಸ್ತೆ ಅಭಿವೃದ್ಧಿಯ ಸಂದರ್ಭ ಇದೆಲ್ಲಾ ಅನಿವಾರ್ಯವೇ ಆದರೂ ಮುಂದೆ ಇರುವ ಬಗ್ಗೆ ಯೋಚಿಸಿದವರು ಯಾರು? ಇಷ್ಟೂ 15 ಸಾವಿರ ಮರಗಳು ಒಮ್ಮೆಲೇ ಹನನವಾಗುವ ಹೊತ್ತಿಗೆ ಪರಿಸರದ ಮೇಲಾಗುವ ದೊಡ್ಡ ಪರಿಣಾಮದ ಬಗ್ಗೆ ಯೋಚಿಸಿದವರು ಯಾರು?. 15 ಸಾವಿರ ಮರಗಳು ಇನ್ನು ಅದೇ ಪ್ರಮಾಣದಲ್ಲಿ ಬೆಳೆಯಬೇಕಾದರೆ ತಗಲುವ ಸಮಯ ಎಷ್ಟು ?. ಮತ್ತೊಂದು ಕಡೆ ಎತ್ತಿನ ಹೊಳೆ ಯೋಜನೆಯ ಕಾರಣಕ್ಕಾಗಿ ಇನ್ನೂ 10 ಸಾವಿರ ಮರಗಳ ನಾಶವಾಗುತ್ತಿದೆ. ಇಷ್ಟೆಲ್ಲಾ ದೊಡ್ಡ ಹೊಡೆತ ಪಶ್ಚಿಮ ಘಟ್ಟದ ಮೇಲಾಗುವ ಸಂದರ್ಭದಲ್ಲೇ ಹವಾಮಾನದಲ್ಲಿ ವೈಪರೀತ್ಯ ಕಾಣುತ್ತಿದೆ. ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ. ಎಲ್ಲಿ ಮಳೆ ಬೇಕೋ, ಅಲ್ಲಿ ಮಳೆಯಾಗದೇ ಎಲ್ಲಿ ಅಗತ್ಯವಾಗಿ ಬೇಡವೋ ಅಲ್ಲಿ ಮಳೆಯಾಗುತ್ತಿದೆ. ಅದಕ್ಕಿಂತ ದೊಡ್ಡ ಪ್ರಶ್ನೆ ಎಂದರೆ, ವರ್ಷದ ಮಳೆ ದಾಖಲೆ ಪ್ರಕಾರ ಸಾಕಷ್ಟು ಮಳೆಯಾಗಿದೆ ಎಂದು ದಾಖಲೆ ಇದ್ದರೂ ಈಗಾಗಲೇ ಹವಾಮಾನದ ವೈಪರೀತ್ಯದ ಕಾರಣಕ್ಕೆ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ ಎಂಬುದು ಈಗಾಗಲೇ ತಿಳಿದ ಸತ್ಯ. ಹೀಗಾಗಿ ಕೋಟಿಕೋಟಿ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಮೂಲಕ ನೀರಿನ ಪಥ ಬದಲಾಯಿಸಿ ತಲಪುವಲ್ಲಿಗೆ ತಲಪೀತೇ ? ಇಷ್ಟೂ ಪ್ರಮಾಣದಲ್ಲಿ ಮರಗಳ ಹನನವಾಗಿ, ಪರಿಸರ ನಾಶವಾಗಿ ಕೋಟಿಕೋಟಿ ಯೋಜನೆ ವ್ಯರ್ಥವಾಗದೇ ಎಂಬ ಬಹುದೊಡ್ಡ ಪ್ರಶ್ನೆ ಇದೆ.
ಇಷ್ಟೆಲ್ಲಾ ಪರಿಸರ ನಾಶವಾಗುತ್ತಿದ್ದರೂ ಕೃಷಿಕರು ಒಂದಷ್ಟು ಅರಣ್ಯ ಉಳಿಸುವ, ಪರಿಸರ ಸಂರಕ್ಷಿಸುವ ಕೆಲಸವನ್ನು ತಮ್ಮ ಜಮೀನಿಗೆ ಹೊಂದಿಕೊಂಡಿದ್ದ ಕಾನ, ಬಾಣೆ, ಕುಮ್ಕಿ, ಜುಮ್ಮಾ ಇತ್ಯಾದಿಗಳ ಮೂಲಕ ಮಾಡುತ್ತಿದ್ದರು. ತಲೆತಲಾಂತರದಿಂದ ಈ ಕಾಡುಗಳ ರಕ್ಷಣೆಯಾಗುತ್ತಲೇ ಬಂದಿತ್ತು. ಆದರೆ ಈಗ ಅದರ ಮೇಲೂ ಕಣ್ಣು ಬಿದ್ದ ಪರಿಣಾಮ ಅತ್ತ ಕೃಷಿಕರಿಗೂ ಕಾಡು ಉಳಿಸಲು ಬಿಡದ ವ್ಯವಸ್ಥೆ ಕಂಡು ಬಂದಿದೆ. ಇರುವ ಅರಣ್ಯ ಅಭಿವೃದ್ಧಿಗೆ ನಾಶವಾದರೆ ಕೃಷಿಕರ ಬಳಿಯಿದ್ದ ಕಾಡೂ ಇನ್ನೊಂದಷ್ಟು ಅಭಿವೃದ್ಧಿಗೆ ಬಳಸಿಕೊಳ್ಳುವ ಯೋಚನೆ ನಡೆಯುತ್ತಿದೆ ಎಂಬುದು ಇನ್ನೊಂದು ಮಾರಕ ಹೊಡೆತ.
ನಿಜವಾಗೂ ಆಗಬೇಕಿರುವುದು ಪರಿಸರ ಸಂರಕ್ಷಣೆಯ ಕಾರ್ಯ ಎಂಬುದು ಮತ್ತೆ ಮತ್ತೆ ಹೇಳುವ ಸಂಗತಿ. ಅದಕ್ಕಿಂತಲೂ ಮೊದಲ ಈಗ ಆಗಬೇಕಾದ್ದು ಜಾಗೃತಿ. ಇರುವ ಪರಿಸರ ನಾಶ ಮಾಡಿ ನೀರನ್ನು ಸಾಗಿಸುವ ಬದಲಾಗಿ, ಎಲ್ಲಿ ಮಳೆ ಬೇಕೋ, ನೀರು ಬೇಕೋ ಅಲ್ಲಿ ಹಸಿರು ಮಾಡಿ ಉಸಿರು ನೀಡುವ ಕೆಲಸ ಮಾಡಬೇಕಾಗಿತ್ತು. ಇದಕ್ಕಾಗಿ ಯೋಜನೆ ಸಿದ್ದವಾಗಬೇಕಿತ್ತು. ಇದಕ್ಕಾಗಿ ಜಾಗೃತಿಯಾಗಬೇಕಿತ್ತು. ತಕ್ಷಣದ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಮುಖ್ಯವಾಗಿತ್ತು.

ಇದೆಲ್ಲದರ ಪರಿಣಾಮ ಭವಿಷ್ಯದಲ್ಲಿ ನೀರು, ಗಾಳಿ ಎರಡೂ ವಿಚಾರದಲ್ಲಿ ರಾಜ್ಯ ಸಂಕಷ್ಟಕ್ಕೆ ಒಳಗಾಗಲಿದೆ. ಇಂತಹ ಕಾಲಘಟ್ಟದಲ್ಲಿ  ಪರಿಸರ ಉಳಿವಿನ ಹಾಗೂ ಕೃಷಿ ಉಳಿವಿನ ಕಡೆಗೆ ಜಾಗೃತಿ ಆಗಬೇಕಾಗಿತ್ತು. ಇದು ನಡೆಯಬೇಕಾದ್ದು ಯುವಪೀಳಿಗೆಯ ನಡುವೆ ಎಂಬುದು ಅರಿವಿನ ಸಂಗತಿ. ಭವಿಷ್ಯದಲ್ಲಿ ಹಸಿರಿಗೆ ಭಾಷ್ಯ ಬರೆಯುವ ಮಂದಿ ಪುಟಾಣಿಗಳೇ ಆದ್ದರಿಂದ ಒಂದು ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭ ಹಸಿರಿಗೆ ಉಸಿರುವ ನೀಡುವ , ಮಕ್ಕಳಿಗೆ ಮಣ್ಣಿನ ಪಾಠ ಹೇಳುವ ಕಾರ್ಯವೊಂದು ಆರಂಭವಾಗಿದೆ. ಇಡೀ ಜಿಲ್ಲೆಯಲ್ಲಿ ಹಸಿರು ಹಸಿರಾಗಿಯೇ ಉಳಿಯಲು ಜೀವ ತುಂಬುವ ಕೆಲಸಕ್ಕೆ ಹಳ್ಳಿಯ ಶಾಲೆಯೊಂದು ದೊಡ್ಡ ಕೊಡುಗೆ ನೀಡುತ್ತಿದೆ. ಇದಕ್ಕಾಗಿ ಈ ಕಾರ್ಯ ರಾಜ್ಯಕ್ಕೆ ಮಾದರಿ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು)


06 ಅಕ್ಟೋಬರ್ 2017

ಕೆಸರು ಮೆತ್ತುವಷ್ಟೇ ಉಳಿಸಿಕೊಳ್ಳುವುದೂ ಸುಲಭವಾಗಬೇಕಲ್ಲ...



ಅಂದು ಬೆಂಗಳೂರು ಬಸ್ಸು ಏರುವ ತವಕ. ಅದೇ ಸಮಯಕ್ಕೆ ಇಬ್ಬರು ಯುವಕರು ಬಸ್ಸಿನ ಬಾಗಿಲ ಬಳಿ ಚರ್ಚೆ ಮಾಡುತ್ತಿದ್ದರು. ಸಾಕಾಗಿ ಹೋಯ್ತು. ನಾಳೆ ಇನ್ನು ಅದೇ ಟ್ರಾಫಿಕ್, ಅದೇ ಆಫೀಸು, ಅದೇ ಒತ್ತಡ. ಸಾಕಾಗಿ ಹೋಯ್ತು, ಒಮ್ಮೆ ಈ ಕಡೆ ಬಂದರೆ ಸಾಗಿತ್ತು. ಅವರಿಬ್ಬರ ಚರ್ಚೆಯ ಸಾರಾಂಶ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಇಬ್ಬರದೂ ಒಂದೇ ವಿಚಾರ, ನಗರದ ಬದುಕು ಸಾಕಾಯ್ತು. ಹಳ್ಳಿ ಬದುಕು ಇಷ್ಟವಾಯ್ತು...!. ಆದರೆ ಇಲ್ಲೊಂದು ಅಪಾಯವೂ ಜೊತೆ ಜೊತೆಗೇ ಕಂಡಿತು. ಇದು ಇಷ್ಟ ಪಟ್ಟ ಹಳ್ಳಿ ಬದುಕಲ್ಲ...!. ಅಲ್ಲಿನ ಒತ್ತಡಕ್ಕೆ ಕೃಷಿ, ಹಳ್ಳಿ ಬದುಕು ಈಗಷ್ಟೇ ಖುಷಿ.

ಇಂದು ಹಳ್ಳಿಯಿಂದ ಹೋದ, ಪಾರಂಪರಿಕ ಕೃಷಿ ಬದುಕಿನಿಂದ ದೂರವಾದ ಬಹುತೇಕ ಕುಟುಂಬಗಳ ಯುವಕರಲ್ಲಿ ಈಗ ಕೃಷಿ ಹಾಗೂ ನಗರದ ಬದುಕಿನ ನಡುವೆ ತೊಳಲಾಟ ಇದೆ. ಅದೋ.. ಇದೋ ಎಂಬ ಗೊಂದಲ ಇದೆ. ಇನ್ನೂ ಕೆಲವು ಯುವಕರು  ಏಕಾಏಕಿ ನಗರದ ಉದ್ಯೋಗ ಬಿಟ್ಟು ಕೃಷಿ ಬದುಕು ಆರಂಭ ಮಾಡುತ್ತಾರೆ. ಮಣ್ಣು ಮೆತ್ತಿಕೊಂಡು ಕೆಲಸ ಮಾಡುತ್ತಾರೆ, ಸತತ ದುಡಿಯುತ್ತಾರೆ. ಆದರೆ ಇಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ ಭಿನ್ನವಾಗಿರುತ್ತದೆ. ಮತ್ತೆ ಮಣ್ಣು ತೊಳೆದು ಹೊರಟು ಬಿಡುತ್ತಾರೆ. ಇದಕ್ಕೆ ಅಪವಾದವಾಗಿ ಕೆಲವರು ಇದ್ದಾರೆ. ಹಾಗಂತ ಈ ಪ್ರಮಾಣ ಕಡಿಮೆಯಾಗಿದೆಯಷ್ಟೇ. ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದು ಬಳಿಕ ಬೆಂಗಳೂರಲ್ಲಿ ಉನ್ನತ ಉದ್ಯೋಗದಲ್ಲಿದ್ದ ಯುವಕನೊಬ್ಬ ತನ್ನೂರಿಗೆ ಬಂದು ಕೃಷಿ ಮಾಡಿದ. ಎಲ್ಲಾ ಮೀಡಿಯಗಳೂ ಸೇರಿದಂತೆ ಅವನ ಮಿತ್ರರು ಶ್ಲಾಘಿಸಿದರು. ಆತನ ಕನಸುಗಳು ದೊಡ್ಡದೇ ಇದ್ದವು. ಕೈಯಲ್ಲಿ ಹಣವೂ ಇತ್ತು. ತನ್ನ ಕನಸುಗಳನ್ನು ಹಳ್ಳಿ ತನ್ನ ತೋಟದ ಮಣ್ಣಿನಲ್ಲಿ ಬಿತ್ತಿದ. ಊರ ಇತರ ಕೃಷಿಕರು ಸಹಕರಿಸಿಲ್ಲ, ಅನುಭವದ ಮಾತು ಹೇಳಿಲ್ಲ. ಆತ ಸೋಲುವುದನ್ನು ಅವರಿಗೆ ನೋಡಬೇಕಿತ್ತು. ನಿಧಾನವಾಗಿ ಅವನ ಯೋಜನೆ ಕುಸಿಯ ತೊಡಗಿತು. ಕೈಯಲ್ಲಿದ್ದ ಕಾಸು ಕರಗಿತು. ಕೃಷಿಯ ಆದಾಯ ಕಡಿಮೆಯಾಯಿತು. ಮತ್ತೆ ಬೆಂಗಳೂರು ಬಸ್ಸು ಏರಿ ಅಲ್ಲಿಂದ ವಿಮಾನವನ್ನೂ ಹಿಡಿದು ಒಂದು ವರ್ಷಗಳ ಕಾಲ ಕೃಷಿ ಬದುಕಿನಿಂದ ದೂರ ಇರಬೇಕಾಯಿತು. ವರ್ಷ ದುಡಿದು ಒಂದಷ್ಟು ಸಂಪಾದನೆ ಮಾಡಿ ಮತ್ತೆ ಮಣ್ಣು ಮೆತ್ತಿಕೊಂಡ , ಈಗ ಸವಾಲು ಸ್ವೀಕರಿಸಿ, ಸೋಲಿನ ಪಾಠ ಕಲಿತು ಭೂಮಿಯಲ್ಲಿ ಬೆಳೆ ಬಿತ್ತಿದ್ದಾನೆ ಯಶಸ್ಸಿನ ಫಸಲು ಸಿಗಬೇಕಿದೆ. ಹಾಗಂತ ಆತ ಸೋಲನ್ನು ಹೇಳಿಕೊಂಡಿಲ್ಲ,  ಸೋಲನ್ನು ಸವಾಲಾಗಿ ಸ್ವೀಕರಿಸಿದ ಮತ್ತೆ ಮಣ್ಣಿಗೇ ಬಂದ. ಆದರೆ ಇದೂ ಅಪವಾದವಷ್ಟೇ. ಮಣ್ಣು ತೊಳೆದು ಹೊರಟವರು  ಮತ್ತೆ ಬರುವರೇ ಎಂಬ ಪ್ರಶ್ನೆಯೂ ಮುಂದೆ ಇದೆ. ಹಾಗಿದ್ದರೆ ಏನು?.

ಕೃಷಿ ಬದುಕು ನೆಮ್ಮದಿ ನಿಜ. ಹಾಗಂತ ಸವಾಲುಗಳೇ ಇಲ್ಲ, ಸಮಸ್ಯೆಗಳೇ ಇಲ್ಲ ಎಂದಲ್ಲ. ನಿತ್ಯವೂ ಸವಾಲು, ಅನುಭವಗಳೇ ಇಲ್ಲಿ ಪಾಠ. ಮಣ್ಣಿನ ನಂಟು ಬಿಟ್ಟು ಬೆಂಗಳೂರು ಬಸ್ಸು ಏರಿ ಮತ್ತೆ ಮಣ್ಣು ಮೆತ್ತಿಕೊಳ್ಳುವೆಂಬ ಭ್ರಮೆ ಮೊದಲು ಬಿಡಬೇಕು. ಅದರ ಬದಲಾಗಿ ಮಣ್ಣಿನ ನಂಟಿನ ಜೊತೆಗೆ ಸಣ್ಣ ನೌಕರಿ ಮಾಡಿಕೊಂಡು ಸವಾಲು ಎದುರಿಸಲು ಕಷ್ಟವೇನಲ್ಲ. ಕೃಷಿ ಬದುಕೆಂದರೆ ನಿತ್ಯವೂ ಗಿಡದ ಜೊತೆ ಮಾತನಾಡಬೇಕಾದ ಬದುಕು. ಇಂತಹ ಬದುಕು ಹೊಸಪೀಳಿಗೆ ಬೆಳೆಸಿಕೊಂಡರೆ ಕೃಷಿಗೆ ಆಕ್ಸಿಜನ್ ಸಿಗುವುದರಲ್ಲಿ ಸಂದೇಹ ಇಲ್ಲ. ಇಂದು ಆಸಕ್ತರಿದ್ದಾರೆ ನಿಜ, ಆದರೆ ಯಶಸ್ಸು ಕಂಡವರು ಎಷ್ಟು ಮಂದಿ ಎಂಬ ಪ್ರಶ್ನೆಯನ್ನೂ ಜೊತೆಗೇ ಹಾಕಿಕೊಳ್ಳಬೇಕು. ನಗರದ ಉದ್ಯೋಗ ಹೋಗುವ ಮುನ್ನವೇ ಯೋಚನೆ ಬೇಕು, ಕೃಷಿ ಉಳಿವಿಗೆ ಸಣ್ಣ ನೌಕರಿ ಇಲ್ಲೇ ಏಕೆ ಮಾಡಲಾಗದು ?. ಈ ಒಂದು ಪ್ರಶ್ನೆ ಕೃಷಿ ಉಳಿವಿಗೆ, ದೇಶದ ಕೇಷಿ ಬೆಳವಣಿಗೆಗೆ ಸಹಕಾರಿ. ಇಂದು ಕೃಷಿ ಕಷ್ಟವೇನಲ್ಲ, ಎಲ್ಲವೂ ಯಾಂತ್ರೀಕರಣವಾಗುತ್ತಿರುವ ವೇಳೆ ಕೃಷಿಯೂ ಅದನ್ನು ಹೊರತಾಗಿಲ್ಲದ ಕಾರಣ ಶ್ರಮಕ್ಕಿಂತ ಐಡಿಯಾ ಇಲ್ಲಿ ಮುಖ್ಯವಾಗುತ್ತದೆ. ಯಶೋಗಾಥೆಗಿಂತ ಅನುಭವದ ಪಾಠವೇ ಇಲ್ಲಿ ಮುಖ್ಯವಾಗುತ್ತದೆ. ಆತ ಯಶಸ್ವಿಯಾದರೂ ಅದೇ ತಂತ್ರ ಇಲ್ಲಿ ಯಶಸ್ವಿಯಾಗದೇ ಇರಬಹುದು. ಹೀಗಾಗಿ ಅನುಭವದ ಪಾಠ ಕೃಷಿಗೆ ಹೆಚ್ಚು ಸೂಕ್ತವಾಗಿದೆ. ಇದಿಲ್ಲದೇ ಹೋದರೆ ಮಣ್ಣಿಗೆ ಬಂದಾಗ ನಗರದ ಕಚೇರಿ ಬದುಕು ಅಂದವಾಗುತ್ತದೆ , ನಗರದ ಬದುಕಿಗೆ ಹೋದಾಗ ಕೃಷಿ ಬದುಕು ಇಷ್ಟವಾಗುತ್ತದೆ ಅಷ್ಟೇ.

ಇತ್ತೀಚೆಗಿನ ಅಧ್ಯಯನದ ಪ್ರಕಾರ ನಗರದ ಬಹುತೇಕ ಯುವಕರು  ಕೃಷಿಯತ್ತ ಆಸಕ್ತರಾಗಿದ್ದಾರೆ. ಪೇಸ್‍ಬುಕ್‍ನ  ಅಗ್ರಿಕಲ್ಚರಿಸ್ಟ್ ಎಂಬ ಗ್ರೂಪಿನ ಮಾಹಿತಿ ಪ್ರಕಾರ, ಈ ಗುಂಪಿನ ಸುಮಾರು 1.10 ಲಕ್ಷ ಸದಸ್ಯರ ಪೈಕಿ ಶೇ.86 ರಷ್ಟು ಗಂಡಸರು ಹಾಗೂ ಶೇ.14 ರಷ್ಟು ಮಹಿಳೆಯರು ಇಲ್ಲಿ ಚರ್ಚೆ ಮಾಡುತ್ತಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶೇ.36 ರಷ್ಟು ಮಂದಿ 25 ರಿಂದ 34 ವಯೋಮಾನದ ಯುವಕರು ಈ ಗುಂಪಿನ ಸಕ್ರಿಯ ವೀಕ್ಷಕರು ಹಾಗೂ ಕೃಷಿಯ ಬಗ್ಗೆ ಮಾತನಾಡುವ ಸದಸ್ಯರು. ಶೇ.20 ರಷ್ಟು 18 ರಿಂದ 24 ವಯೋಮಾನದವರು. ಇನ್ನೂ ಒಂದು ಗಮನಿಸುವ ಅಂಶವೆಂದರೆ ಶೇ.60 ರಷ್ಟು ಅಂದರೆ ಈ ಗುಂಪಿನ ಸುಮಾರು 65 ಸಾವಿರ ಬೆಂಗಳೂರ ನಗರವಾಸಿಗಳು...!. ಇದರ ಅರ್ಥ ಇಷ್ಟೂ ಮಂದಿ ಕೃಷಿ ಕಡೆಗೆ ಆಸಕ್ತರಾಗಿದ್ದಾರೆ ಎಂಬುದು ಇಲ್ಲಿ ತಿಳಿಯಲ್ಪಡುತ್ತದೆ.

ಅಂದರೆ ಈಗಿನ ಯುವ ಸಮೂಹ ಕೃಷಿಯತ್ತ ಆಸಕ್ತವಾಗಿದೆ. ಇದಕ್ಕೆ ಒತ್ತಡದ ನಡುವಿನ ಉದ್ಯೋಗವೂ ಕಾರಣವಾಗಿದೆ. ಇದೆಲ್ಲಾ ಇಷ್ಟ ಪಟ್ಟು ಕೃಷಿಯತ್ತ ಬರುವವರಲ್ಲ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಉನ್ನತ ವ್ಯಾಸಾಂಗ ಮಾಡಿದವರೂ ಕಾಣಲಿ, ಹಳ್ಳಿ ಬದುಕಿನ ಜೊತೆಗೆ ಇಲ್ಲೇ ಸಣ್ಣದೊಂದು ಉದ್ಯೋಗ, ಉದ್ಯಮ ಮಾಡಲಿ. ಕೆಸರು ಮೆತ್ತುವಷ್ಟೇ ಉಳಿಸಿಕೊಳ್ಳುವುದೂ ಸುಲಭವಾಗಬೇಕು.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು -1 )