30 ಅಕ್ಟೋಬರ್ 2017

ಗಿಡ ಸಹವಾಸದಿಂದ "ಸಮೃದ್ಧ" ಕೃಷಿ....!, ಗಿಡಗೆಳೆತನದಿಂದ ಸಸ್ಯವೈವಿಧ್ಯ...!




"ಮನುಷ್ಯರ ಗೆಳೆತನಕ್ಕಿಂತ ಗಿಡಗೆಳೆತನ ಎಷ್ಟೂ ನೆಮ್ಮದಿ" ಅಂತ ಹಿಂದೊಮ್ಮೆ ಕೀರ್ತಿಶೇಷ ಕಾಂತಿಲ ವೆಂಕಟ್ರಮಣ ಜೋಯಿಸರು ನೆನಪಿಸಿಕೊಳ್ಳುತ್ತಿದ್ದರು. ಹಾಗೆ ನೋಡಿದರೆ ವೆಂಕಟ್ರಮಣ ಜೋಯಿಸರ ಮನೆಯಲ್ಲಿ ನೂರಾರು ಬಗೆಯ ಸಸ್ಯ ವೈವಿಧ್ಯವಿತ್ತು, ಸಮೃದ್ಧ ಕೃಷಿ ಇತ್ತು. ಹೊಸ ಹೊಸ ಬಗೆಯ ಹಣ್ಣಿನ ಗಿಡಗಳು, ವಿನೂತನ ಬಗೆಯ ಸಸ್ಯಗಳು ಕಾಣಸಿಗುತ್ತಿತ್ತು. ಇದೆಲ್ಲಾ"ಸಮೃದ್ಧಿ"ಯಿಂದ ತಂದದ್ದು ಎಂದು ಅವರು ಆಗಾಗ ಹೇಳುತ್ತಿದ್ದರು. ಆದರೆ ಸಮೃದ್ಧಿ ಎಂದರೆ ಏನು ಎಂದು ತಿಳಿಯಲು ಅನೇಕ ವರ್ಷಗಳೇ ಬೇಕಾದವು. ಈಗ ಆ ಸಮೃದ್ಧಿಗೆ ರಜತ ಸಂಭ್ರಮ. 

"ಕೃಷಿ ಎಂದರೆ ಮಣ್ಣು ಹದ ಮಾಡುವುದು  ಮಾತ್ರವಲ್ಲ. ವೈವಿಧ್ಯತೆಯ ಕೃಷಿ, ಗಿಡಗಳ ಬೆಳೆಸುವುದೂ ಇರಬೇಕು. ಇದೆಲ್ಲಾ ಕೃಷಿಗೆ ಪೂರಕ" ಎಂದು ಸುಬ್ರಾಯ ಭಟ್ಟರು ಹೇಳುತ್ತಿದ್ದರು. ಈ ವೈವಿಧ್ಯತೆ ತರುವುದು ಅಷ್ಟು ಸುಲಭವಲ್ಲ. ಇದಕ್ಕಾಗಿಯೇ ಒಂದು ತಂಡ , ಒಂದೇ ರೀತಿಯ ಮನಸ್ಸು ಇರಬೇಕು. ಆಗ ಮಾತ್ರವೇ ವೈವಿಧ್ಯತೆಯ ಕೃಷಿಗೆ ಪೂರಕ ವಾತಾವರಣ ಸೃಷ್ಠಿಯಾಗಬಲ್ಲುದು. ಇಂತಹ ಮನಸ್ಸುಗಳನ್ನು ಕಟ್ಟಿದ್ದು 1993 ರಲ್ಲಿ. ಪುತ್ತೂರಿನಿಂದ ಪ್ರಕಟವಾಗುವ ಕೃಷಿಕ ಪರ ಮಾಧ್ಯಮ ಅಡಿಕೆ ಪತ್ರಿಕೆ ಇದಕ್ಕೆ ದಾರಿ ತೋರಿಸಿತು. ಅದುವೇ "ಸಮೃದ್ಧಿ". ಅಂದಿನಿಂದ ಇಂದಿನವರೆಗೂ ಗಿಡಗೆಳೆತನವನ್ನು ಸಮೃದ್ಧಿ ಹೇಳಿಕೊಟ್ಟಿದೆ. ವಿವಿಧ ಹೊಸ ಹೊಸ ಗಿಡಗಳನ್ನು ಮಲೆನಾಡಿಗೆ ಪರಿಚಯಿಸಿದೆ. ಸಮೃದ್ಧಿ ಬಳಗದ ಸದಸ್ಯರ ನಡುವೆ ಯಾವಾಗಲೂ ಹೊಸ ಸಸ್ಯಗಳ ವಿವರ, ಇನ್ನೂ ಹೊಸದರ ಶೋಧ, ಈ ಗಿಡಗಳ ಗುಣವಿಶೇಷಗಳ ಈ ಬಗ್ಗೆಯೇ ಚರ್ಚೆ. ಹೊಸ ತೋಟಗಳ ವೀಕ್ಷಣೆ. 
"ಸಾವಯವ ಕೃಷಿಯ ಬಗ್ಗೆ ಮಾತ್ರ ಆಸಕ್ತಿಯಿದ್ದ ನನಗೆ ಸಮೃದ್ಧಿಯ ಸಂಪರ್ಕದಿಂದ ಸಸ್ಯವೈವಿಧ್ಯದ ಬಗ್ಗೆಯೂ ಆಸಕ್ತಿ ಮೂಡಿತು, ವಿನಿಮಯವಾಗಿ ಬಂದ ಹಲವು ಗಿಡಗಳು ಈಗ ನನ್ನ ತೋಟದಲ್ಲಿ ಬೆಳೆದಿವೆ. ತರಕಾರಿಯಲ್ಲೂ ಸ್ವಾವಲಂಬಿ ಯಾಗಿದ್ದೇನೆ ಎಂದು ಪುತ್ತೂರಿನ ಕೃಷಿಕ ಎ.ಪಿ.ಸದಾಶಿವ ನೆನೆದರೆ, ಕರಿಂಗಾಣದ ಡಾ.ಕೆ.ಎಸ್.ಕಾಮತ್‍ರ ತೋಟದಲ್ಲಿ ಅವರೊಂದಿಗೆ ಸುತ್ತಿದರೆ ಆಗಾಗ ಸಮೃದ್ಧಿಯ ಬಗ್ಗೆ ಹೇಳುತ್ತಲೇ ಇರುತ್ತಾರೆ. ಬನಾರಸ್ ನೆಲ್ಲಿ,  ಹುಣಸೆ, ಪಾಲೂರ್ - ವನ್ ಹಲಸು, ಇದು ಕಾಂಚಿಕೇಳ ಬಾಳೆ.. ಇವೆಲ್ಲಾ ಸಮೃದ್ಧಿ ಮೂಲಕವೇ ಬಂದಿವೆ ಎಂದು ನೆನಪಿಸಿಕೊಳ್ಳುತ್ತಾರೆ.

ಹಾಗಿದ್ದರೆ ಸಮೃದ್ಧಿಯ ಬಗ್ಗೆ ಈಗ ಆಸಕ್ತಿ ಮೂಡುತ್ತದೆ. ಇದು ಗಿಡ ಗೆಳೆತನದ ಒಂದು ಪುಟ್ಟ ಕೂಟ ಅಷ್ಟೇ. ಚಿಂತನೆ ಮಾತ್ರಾ ದೊಡ್ಡದು. ವೆನಿಲ್ಲಾದ ಕಾಲ ಅದು, ಎಲ್ಲಾ ಕಡೆ ವೆನಿಲ್ಲಾ ಬಗ್ಗೆ ಭಾರೀ ಬೇಡಿಕೆ ಬಂದಿದ್ದರೆ ಸಮೃದ್ಧಿಯ ಸದಸ್ಯರಿಗೆ ಈ ಚಿಂತೆ ಅಂದು ಇದ್ದಿರಲಿಲ್ಲ. ಅವರೆಲ್ಲಾ ಅದಕ್ಕೂ ಮುನ್ನವೇ ಗಿಡ ನೆಟ್ಟಿದ್ದರು. ಆದರೆ ಗೆಳೆತನಕ್ಕಾಗಿ. ಹಣಕ್ಕಾಗಿ ಆಗಿರಲಿಲ್ಲ...!. ಇದರ ಉದ್ದೇಶವೇ ಅದು, ತರಕಾರಿ, ಅಲಂಕಾರಿಕ ಹೂವಿನ ಸಸ್ಯಗಳು, ಹಣ್ಣಿನ ಮರಗಳು ಮತ್ತು ಔಷಧೀಯ ಗಿಡಗಳ ಬಗ್ಗೆ ಅರಿವು, ವಿನಿಮಯ ಮಾಡಿಕೊಂಡು ಸಂರಕ್ಷಿಸಿ, ಹವ್ಯಾಸಕ್ಕಾಗಿ ಬೆಳೆಸುವುದು ಮುಖ್ಯ ಲಕ್ಷ್ಯ. ಕಳೆದ 25 ವರ್ಷಗಳಿಂದಲೂ ಇದೇ ಕೆಲಸ ಮಾಡಿಕೊಂಡು ಸಮೃದ್ಧಿ ಬರುತ್ತಿದೆ. 
ಇದು ಹುಟ್ಟಿಕೊಳ್ಳುವುದಕ್ಕೂ ಕಾರಣವಿದೆ, ಸುಮಾರು 1990 ರ ಕಾಲದಲ್ಲಿ ಅಡಿಕೆ ಧಾರಣೆ ಏರಿಕೆ ಕಂಡಿತು, ತೋಟಗಳು ಬೆಳೆಯತೊಡಗಿತು. ಇಂತಹ ಸಂದರ್ಭದಲ್ಲೂ ತರಕಾರಿ, ಹಣ್ಣು, ಗಿಡಗಳ ಬಗ್ಗೆ ಆಸಕ್ತಿಹೊಂದಿದ್ದ ಸಾಕಷ್ಟು ಕೃಷಿಕರಿದ್ದರು. ಇವರದೇ ಒಂದು ಕೂಟ ಏಕೆಮಾಡಬಾರದು ಎಂದು ಅಡಿಕೆ ಪತ್ರಿಕೆ ಚಿಂತಿಸಿತು. ಸಸ್ಯಪ್ರೇಮಿಗಳನ್ನು ಒಗ್ಗೂಡಿಸುವ ಗಿಡಗೆಳೆತನದ 'ಸಮೃದ್ಧಿ' ಹುಟ್ಟಿತು. ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳ ಹಲವು ಕೃಷಿಕರು ಸಮೃದ್ಧಿಯ ಅಡಿಯಲ್ಲಿ ಸೇರಿಕೊಂಡರು. ತಮ್ಮ ತೋಟದ ಅಪರೂಪದ ಸಸ್ಯಗಳೋ, ಬೀಜಗಳ ಕುರಿತಾಗಿ ಮಾತ್ರ  ಕಾಳಜಿ ವಹಿಸಿದವರು ವಿನಿಮಯಕ್ಕೂ ಶುರು ಮಾಡಿದರು. ತಮಗೆ ಪರಿಚಯವಿಲ್ಲದ ಬೀಜ, ಸಸ್ಯಗಳನ್ನು ಅನುಭವಿಗಳಿಗೆ ತೋರಿಸಿ ಅದರ ಪರಿಚಯ ಮಾಡಿಕೊಳ್ಳುವುದು, ಅಪರೂಪದವುಗಳನ್ನು ಸಮೃದ್ಧಿ ಸಭೆಗೆ ತಂದು ಇತರರಿಗೆ ವಿವರಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯ ರೂಪದಿಂದ ವಿಶೇಷ ಜಾತಿಯ ಗಿಡಗಳು ಹರಡಿಕೊಂಡಿತು. ಇದರ ಜೊತೆಗೆ ಮಾಸಿಕ ಪ್ರವಾಸ, ವಿಶೇಷ ಕೃಷಿಕರ ಭೇಟಿ ಇತ್ಯಾದಿ ಕಾರ್ಯಕ್ರಮ ಆರಂಭವಾದವು. ಈ ಸಂದರ್ಭ ಕೃಷಿ ಮಾಹಿತಿ ವಿನಿಮಯ, ಹೊಸಪ್ರಯೋಗ, ಶ್ರಮ ಉಳಿಸಲು ಮಾಡಿದ ಜಾಣ್ಮೆಗಳ ಬಗ್ಗೆ ಚರ್ಚಿಸುತ್ತಾರೆ. ಈಗಲೂ ಅದು ಮುಂದುವರಿದಿದೆ. ಆರಂಭದ ದಿನಗಳಲ್ಲಿ ಅಮ್ಚಿಕಾಯಿ, ಹನುಮಫಲ, ಭೀಮಫಲ, ಮುಳ್ಳುಸೀತಾಫಲ, ಹಾವು ಬದನೆ, ಬಂಟಕೇಪುಳು, ರುದ್ರಾಕ್ಷಿಯಂತಹ ಅಪರೂಪದ ಗಿಡಗಳನ್ನು ಕಾಂತಿಲ ವೆಂಕಟ್ರಮಣ ಜೋಯಿಸರು ಪರಿಚಯಿಸಿದ್ದನ್ನು ಇಂದಿಗೂ ಹಲವಾರು ಮಂದಿ ನೆನಪಿಸಿಕೊಳ್ಳುತ್ತಾರೆ. ಅನಂತ ಭಟ್ಟನ ಅಪ್ಪೆಮಿಡಿ ತಳಿಯು ಸಮೃದ್ಧಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿನಿಮಯವಾಗಿದೆ. ಸಿಹಿಹುಣಸೆ, ರುದ್ರಾಕ್ಷಿ, ಚಳ್ಳೇಹಣ್ಣು, ಕನಕಚಂಪಕ, ಅಗರ್, ಕರ್ಪೂರ ಗಿಡ, ಜಂಬುನೇರಳೆ, ಆಫ್ರಿಕನ್ ಚಿಕ್ಕು, ಎಗ್‍ಫ್ರುಟ್, ರೆಕ್ಕೆಬದನೆ, ಕಾಂಚಿಕೇಳ ಬಾಳೆ, ನೀರುಹಲಸು, ಏಲಕ್ಕಿ ತುಳಸಿ. ಹೀಗೆ ಅಸಂಖ್ಯ ತಳಿಗಳು ಸಮೃದ್ಧಿಯ ಮೂಲಕ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ರೀತಿ ವಿನಿಮಯ ರೂಪದಿಂದ ವಿಶೇಷ ಜಾತಿಯ ಅಸಂಖ್ಯ ಗಿಡಗಳು ಹರಡಿ ಹೋಗಿವೆ. 
ಈಗ ಪ್ರತೀ ತಿಂಗಳ ಎರಡನೇ ಅಥವಾ ಮೂರನೇ ಶನಿವಾರ ಸಭೆ. ಸದಸ್ಯರು ಬರುವಾಗ ತಮ್ಮಲ್ಲಿಂದ ಗಿಡ, ಬೀಜಗಳನ್ನು ವಿನಿಮಯಕ್ಕಾಗಿ ತರುತ್ತಾರೆ. ಹಂಚಿಕೊಳ್ಳುತ್ತಾರೆ. ಈಗ ಸುಮಾರು ಐವತ್ತಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಈಚೆಗೆ ಬೇರೆ ಜಿಲ್ಲೆಗಳ ಕೃಷಿಕರಲ್ಲಿಗೆ ಪ್ರವಾಸವನ್ನು ಸೇರಿಸಿಕೊಂಡಿದೆ. ಇದರಿಂದಾಗಿ ಹೊರ ಊರಿನ ಕೃಷಿಕರೊಂದಿಗೆ ಸಂವಹನ ಬೆಳೆದುಕೊಂಡಿದೆ. ವರ್ಷಕ್ಕೊಮ್ಮೆ ಸಮಿತಿ ಬದಲಾಗುತ್ತದೆ. ಸದ್ಯ ಸಂಘದ ಅಧ್ಯಕ್ಷರಾಗಿ ಭಾಸ್ಕರ ಆರ್. ಕೆ  ಹಾಗೂ ಕಾರ್ಯದರ್ಶಿಯಾಗಿ ರಾಮ್‍ಪ್ರತೀಕ್ ಕರಿಯಾಲ ಮತ್ತು ಕೋಶಾಧಿಕಾರಿಯಾಗಿ ಎ ಪಿ ಸದಾಶಿವ ಸಮೃದ್ಧಿಯನ್ನು ನಡೆಸುತ್ತಿದ್ದಾರೆ. ಈ ಬಾರಿ ರಜತ ಸಂಭ್ರಮವನ್ನು ಅ.29 ರಂದು ಸುಳ್ಯ ತಾಲೂಕು ಕೋಟೆಮುಂಡುಗಾರಿನ ಕಳಂಜ-ಬಾಳಿಲ ಪಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆ ನಾಲ್ಕರ ತನಕ ಆಚರಿಸಲಿದೆ.
ಆಸಕ್ತಿಯೇ ಒಂದು ಸಂಘವಾಗಿ ಗಿಡಗೆಳೆತನದ ಮೂಲಕ ಕೃಷಿ ಸಮೃದ್ಧಗೊಳಿಸುವ ಹಾಗೂ ಬೆಳೆಸುವ ಕಾರ್ಯದಿಂದ ಮಣ್ಣನ್ನು ಹಸಿರಾಗಿಸುವ ಹಾಗೂ ಹಸಿರು ಹಸಿರಾಗಿಯೇ ಇರಿಸುವ ಇಂತಹ ಸಂಘ ಗ್ರಾಮ ಗ್ರಾಮಗಳಲ್ಲಿ ಮೊಳಕೆಯೊಡಬೇಕು ಎಂದು ಅಂದು ಕಾಂತಿಲ ವೆಂಟಕ್ರಮಣ ಜೋಯಿಸರು ಹೇಳುತ್ತಿದ್ದುದು ಇಂದಿಗೂ ಪ್ರಸ್ತುತವಾಗಿದೆ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು )

ಕಾಮೆಂಟ್‌ಗಳಿಲ್ಲ: