17 ಅಕ್ಟೋಬರ್ 2017

ಹಸಿರಿನ ಉಸಿರಿಗೆ ಬಣ್ಣದ ಲೇಪನ .....!

ಸರಕಾರಿ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮ.......

ಈ ಸಡಗರವನ್ನು ಹಸಿರಿನ ಮೂಲಕ ಸಾರಬೇಕು, ಶಾಲೆಯ ಚರಿತ್ರೆಯಲ್ಲಿ ಹಸಿರೇ ದಾಖಲಾಗಬೇಕು ಎಂದು ಸರಕಾರಿ ಶಾಲೆಯ ಶಿಕ್ಷಕ ರಮೇಶ್ ಉಳಯ ಹೇಳುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ಆ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರೂ ಸೇರಿದಂತೆ ಊರಿನ ಮಂದಿ ಯೋಚನೆ ಮಾಡಿದ್ದರು. ಸರಕಾರಿ ಶಾಲೆಯಲ್ಲಿ ಇದೆಲ್ಲಾ ಸಾಧ್ಯವೇ ? ಎಂದೂ ಪ್ರಶ್ನೆ ಮಾಡಿದರು. ಎಲ್ಲಾ ಪ್ರಶ್ನೆಗಳ ನಡುವೆಯೂ ವಿವಿದೆಡೆಯ 40 ಕ್ಕೂ ಹೆಚ್ಚು ಚಿತ್ರಕಲಾ ಶಿಕ್ಷಕರು ಶಾಲೆಗೆ ಬಂದರು. ಹಸಿರಿಗೆ ಬಣ್ಣದ ಹೊಳಪು ನೀಡಿದರು...!.



ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತೀರಾ ಗ್ರಾಮೀಣ ಭಾಗದಲ್ಲಿದೆ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ವರ್ಷ ಸುವರ್ಣ ಮಹೋತ್ಸವ ಆಚರಣೆ ಮಾಡುತ್ತಿದೆ. ಸುವರ್ಣ ಮಹೋತ್ಸವ ಎಂದಾಗ ಕಾಂಕ್ರೀಟು ಕಟ್ಟಡಗಳು ಸೇರಿದಂತೆ ವಿವಿಧ ಯೋಜನೆ ಸಿದ್ದವಾಗುತ್ತದೆ. ಆದರೆ ಇಲ್ಲಿ ಅಂತಹ ಯೋಜನೆಯ ಬದಲಾಗಿ ಹಸಿರು ಉಳಿಸುವ ಹಾಗೂ ಬೆಳೆಸಲು ಮತ್ತು ಸಂದೇಶ ಸಾರುವ ಯೋಜನೆ ಸಿದ್ದವಾಯಿತು. ಶಾಲೆಯ ಸುತ್ತಲೂ ಸುಮಾರು 2.5 ಎಕ್ರೆ ಜಾಗ ಇದೆ. ಇದರಲ್ಲಿ ಸುಮಾರು ಒಂದೂವರೆ ಎಕರೆ ಜಾಗದಲ್ಲಿ ಕೃಷಿ ಸಿದ್ದವಾಯಿತು. ಮಕ್ಕಳಿಗೆ ಮಣ್ಣಿನ ಪಾಠವನ್ನು ಹೇಳಿಕೊಡುತ್ತಾ ಊರಿನ ಮಂದಿ ಈ ಜಾಗದಲ್ಲಿ ಅಡಿಕೆ ಗಿಡ ನೆಟ್ಟರು, ಶಾಲೆಗಾಗಿ ಕೃಷಿ ಮಾಡಿದರು. ಉಳಿದ ಜಾಗದಲ್ಲಿ ಕಾಡು ಇದೆ, ಅದರ ಸಂರಕ್ಷಣೆ ನಡೆಯುತ್ತದೆ. ಇದರ ಜೊತೆಗೆ, ಇಡೀ ನಾಡಿಗೆ ಹಸಿರು ಉಳಿಸುವ ಸಂದೇಶ ನೀಡಲು "ಪರ್ಣದ ಉಳಿವಿಗೆ ವರ್ಣದ ಕಾಣಿಕೆ" ಎಂಬ ಯೋಜನೆ ಸಿದ್ದವಾಯಿತು. ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 40 ಚಿತ್ರಕಲಾ ಶಿಕ್ಷಕರನ್ನು ತೆಗ್ಗು ಶಾಲೆಗೆ ಕರೆಯಿಸಿ ಶಾಲೆಯಲ್ಲೇ ಪರಿಸರ ಜಾಗೃತಿ ಸಂದೇಶ ನೀಡುವ ಹಾಗೂ ಕೃಷಿ ಉಳಿಸುವ ಸಂದೇಶದ ಉತ್ತಮ ಚಿತ್ರವನ್ನು ರಚನೆ ಮಾಡಿಸಲಾಯಿತು. ಈ ಎಲ್ಲಾ ಚಿತ್ರಗಳನ್ನು ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರದರ್ಶನ ಮಾಡಿ "ಹಸಿರು" ಸಂದೇಶವನ್ನು ಶಾಲೆಗಳ ಮೂಲಕ, ಮಕ್ಕಳ ಮೂಲಕ ಸಮಾಜಕ್ಕೆ ನೀಡುವ ಕೆಲಸ ತೆಗ್ಗು ಶಾಲೆಯ ಸುವರ್ಣ ಮಹೋತ್ಸವ ವರ್ಷದ ಪೂರ್ತಿ ಮಾಡುತ್ತದೆ.

ದೇಶದ ತುಂಬೆಲ್ಲಾ ಇಂದು ಕೇಳಿಬರುತ್ತಿರುವ ಮಾತು ಪರಿಸರ ಸಂರಕ್ಷಣೆ.....ಪರಿಸರ ಸಂರಕ್ಷಣೆ. ಆದರೆ ಹೇಗೆ ? ಎಲ್ಲಿ ಎಂಬ ಪ್ರಶ್ನೆಗೆ ಮಾತ್ರಾ ಉತ್ತರವೇ ಇಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ ನಡೆಯುತ್ತಿದೆ ಎಂದು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿಯ ಸಂದರ್ಭ ಸುಮಾರು 10 ಸಾವಿರ ಮರಗಳ ನಾಶವಾಗಲಿದೆ. ಇಡೀ ಹೆದ್ದಾರಿ ಅಭಿವೃದ್ಧಿಯಾಗುವ ವೇಳೆಗೆ ಸುಮಾರು 15 ಸಾವಿರ ಮರಗಳ ಹನನವಾಗುತ್ತದೆ. ರಸ್ತೆ ಅಭಿವೃದ್ಧಿಯ ಸಂದರ್ಭ ಇದೆಲ್ಲಾ ಅನಿವಾರ್ಯವೇ ಆದರೂ ಮುಂದೆ ಇರುವ ಬಗ್ಗೆ ಯೋಚಿಸಿದವರು ಯಾರು? ಇಷ್ಟೂ 15 ಸಾವಿರ ಮರಗಳು ಒಮ್ಮೆಲೇ ಹನನವಾಗುವ ಹೊತ್ತಿಗೆ ಪರಿಸರದ ಮೇಲಾಗುವ ದೊಡ್ಡ ಪರಿಣಾಮದ ಬಗ್ಗೆ ಯೋಚಿಸಿದವರು ಯಾರು?. 15 ಸಾವಿರ ಮರಗಳು ಇನ್ನು ಅದೇ ಪ್ರಮಾಣದಲ್ಲಿ ಬೆಳೆಯಬೇಕಾದರೆ ತಗಲುವ ಸಮಯ ಎಷ್ಟು ?. ಮತ್ತೊಂದು ಕಡೆ ಎತ್ತಿನ ಹೊಳೆ ಯೋಜನೆಯ ಕಾರಣಕ್ಕಾಗಿ ಇನ್ನೂ 10 ಸಾವಿರ ಮರಗಳ ನಾಶವಾಗುತ್ತಿದೆ. ಇಷ್ಟೆಲ್ಲಾ ದೊಡ್ಡ ಹೊಡೆತ ಪಶ್ಚಿಮ ಘಟ್ಟದ ಮೇಲಾಗುವ ಸಂದರ್ಭದಲ್ಲೇ ಹವಾಮಾನದಲ್ಲಿ ವೈಪರೀತ್ಯ ಕಾಣುತ್ತಿದೆ. ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ. ಎಲ್ಲಿ ಮಳೆ ಬೇಕೋ, ಅಲ್ಲಿ ಮಳೆಯಾಗದೇ ಎಲ್ಲಿ ಅಗತ್ಯವಾಗಿ ಬೇಡವೋ ಅಲ್ಲಿ ಮಳೆಯಾಗುತ್ತಿದೆ. ಅದಕ್ಕಿಂತ ದೊಡ್ಡ ಪ್ರಶ್ನೆ ಎಂದರೆ, ವರ್ಷದ ಮಳೆ ದಾಖಲೆ ಪ್ರಕಾರ ಸಾಕಷ್ಟು ಮಳೆಯಾಗಿದೆ ಎಂದು ದಾಖಲೆ ಇದ್ದರೂ ಈಗಾಗಲೇ ಹವಾಮಾನದ ವೈಪರೀತ್ಯದ ಕಾರಣಕ್ಕೆ ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ ಎಂಬುದು ಈಗಾಗಲೇ ತಿಳಿದ ಸತ್ಯ. ಹೀಗಾಗಿ ಕೋಟಿಕೋಟಿ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಮೂಲಕ ನೀರಿನ ಪಥ ಬದಲಾಯಿಸಿ ತಲಪುವಲ್ಲಿಗೆ ತಲಪೀತೇ ? ಇಷ್ಟೂ ಪ್ರಮಾಣದಲ್ಲಿ ಮರಗಳ ಹನನವಾಗಿ, ಪರಿಸರ ನಾಶವಾಗಿ ಕೋಟಿಕೋಟಿ ಯೋಜನೆ ವ್ಯರ್ಥವಾಗದೇ ಎಂಬ ಬಹುದೊಡ್ಡ ಪ್ರಶ್ನೆ ಇದೆ.
ಇಷ್ಟೆಲ್ಲಾ ಪರಿಸರ ನಾಶವಾಗುತ್ತಿದ್ದರೂ ಕೃಷಿಕರು ಒಂದಷ್ಟು ಅರಣ್ಯ ಉಳಿಸುವ, ಪರಿಸರ ಸಂರಕ್ಷಿಸುವ ಕೆಲಸವನ್ನು ತಮ್ಮ ಜಮೀನಿಗೆ ಹೊಂದಿಕೊಂಡಿದ್ದ ಕಾನ, ಬಾಣೆ, ಕುಮ್ಕಿ, ಜುಮ್ಮಾ ಇತ್ಯಾದಿಗಳ ಮೂಲಕ ಮಾಡುತ್ತಿದ್ದರು. ತಲೆತಲಾಂತರದಿಂದ ಈ ಕಾಡುಗಳ ರಕ್ಷಣೆಯಾಗುತ್ತಲೇ ಬಂದಿತ್ತು. ಆದರೆ ಈಗ ಅದರ ಮೇಲೂ ಕಣ್ಣು ಬಿದ್ದ ಪರಿಣಾಮ ಅತ್ತ ಕೃಷಿಕರಿಗೂ ಕಾಡು ಉಳಿಸಲು ಬಿಡದ ವ್ಯವಸ್ಥೆ ಕಂಡು ಬಂದಿದೆ. ಇರುವ ಅರಣ್ಯ ಅಭಿವೃದ್ಧಿಗೆ ನಾಶವಾದರೆ ಕೃಷಿಕರ ಬಳಿಯಿದ್ದ ಕಾಡೂ ಇನ್ನೊಂದಷ್ಟು ಅಭಿವೃದ್ಧಿಗೆ ಬಳಸಿಕೊಳ್ಳುವ ಯೋಚನೆ ನಡೆಯುತ್ತಿದೆ ಎಂಬುದು ಇನ್ನೊಂದು ಮಾರಕ ಹೊಡೆತ.
ನಿಜವಾಗೂ ಆಗಬೇಕಿರುವುದು ಪರಿಸರ ಸಂರಕ್ಷಣೆಯ ಕಾರ್ಯ ಎಂಬುದು ಮತ್ತೆ ಮತ್ತೆ ಹೇಳುವ ಸಂಗತಿ. ಅದಕ್ಕಿಂತಲೂ ಮೊದಲ ಈಗ ಆಗಬೇಕಾದ್ದು ಜಾಗೃತಿ. ಇರುವ ಪರಿಸರ ನಾಶ ಮಾಡಿ ನೀರನ್ನು ಸಾಗಿಸುವ ಬದಲಾಗಿ, ಎಲ್ಲಿ ಮಳೆ ಬೇಕೋ, ನೀರು ಬೇಕೋ ಅಲ್ಲಿ ಹಸಿರು ಮಾಡಿ ಉಸಿರು ನೀಡುವ ಕೆಲಸ ಮಾಡಬೇಕಾಗಿತ್ತು. ಇದಕ್ಕಾಗಿ ಯೋಜನೆ ಸಿದ್ದವಾಗಬೇಕಿತ್ತು. ಇದಕ್ಕಾಗಿ ಜಾಗೃತಿಯಾಗಬೇಕಿತ್ತು. ತಕ್ಷಣದ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಮುಖ್ಯವಾಗಿತ್ತು.

ಇದೆಲ್ಲದರ ಪರಿಣಾಮ ಭವಿಷ್ಯದಲ್ಲಿ ನೀರು, ಗಾಳಿ ಎರಡೂ ವಿಚಾರದಲ್ಲಿ ರಾಜ್ಯ ಸಂಕಷ್ಟಕ್ಕೆ ಒಳಗಾಗಲಿದೆ. ಇಂತಹ ಕಾಲಘಟ್ಟದಲ್ಲಿ  ಪರಿಸರ ಉಳಿವಿನ ಹಾಗೂ ಕೃಷಿ ಉಳಿವಿನ ಕಡೆಗೆ ಜಾಗೃತಿ ಆಗಬೇಕಾಗಿತ್ತು. ಇದು ನಡೆಯಬೇಕಾದ್ದು ಯುವಪೀಳಿಗೆಯ ನಡುವೆ ಎಂಬುದು ಅರಿವಿನ ಸಂಗತಿ. ಭವಿಷ್ಯದಲ್ಲಿ ಹಸಿರಿಗೆ ಭಾಷ್ಯ ಬರೆಯುವ ಮಂದಿ ಪುಟಾಣಿಗಳೇ ಆದ್ದರಿಂದ ಒಂದು ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭ ಹಸಿರಿಗೆ ಉಸಿರುವ ನೀಡುವ , ಮಕ್ಕಳಿಗೆ ಮಣ್ಣಿನ ಪಾಠ ಹೇಳುವ ಕಾರ್ಯವೊಂದು ಆರಂಭವಾಗಿದೆ. ಇಡೀ ಜಿಲ್ಲೆಯಲ್ಲಿ ಹಸಿರು ಹಸಿರಾಗಿಯೇ ಉಳಿಯಲು ಜೀವ ತುಂಬುವ ಕೆಲಸಕ್ಕೆ ಹಳ್ಳಿಯ ಶಾಲೆಯೊಂದು ದೊಡ್ಡ ಕೊಡುಗೆ ನೀಡುತ್ತಿದೆ. ಇದಕ್ಕಾಗಿ ಈ ಕಾರ್ಯ ರಾಜ್ಯಕ್ಕೆ ಮಾದರಿ.

( ಹೊಸದಿಗಂತ - ಮಣ್ಣಿಗೆ ಮೆಟ್ಟಿಲು)


ಕಾಮೆಂಟ್‌ಗಳಿಲ್ಲ: