29 ಡಿಸೆಂಬರ್ 2008

ಇಲ್ಲಿ ನೋವಿದೆ....




ಇದು ನಾವಿಬ್ಬರೇ ನಮಗಿಬ್ಬರೇ ಯ ಜಾಹೀರಾತಲ್ಲ... ಈ ಚಿತ್ರದ ಹಿಂದೆ ಆಳವದ ನೋವಿದೆ... ದು:ಖವಿದೆ... ನಗುವೆಂಬ ಅಕ್ಷರ ಇಲ್ಲಿ ಸಿಗದು... ಏನಿದು..?

ಅಬ್ಬಾ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ.


ನಮಗೆ ದಿನ ಬೆಳಗಾದರೆ ,ನಮ್ಮ ಪ್ರತಿಷ್ಠೆ, ದುಡ್ಡು ... ಬಿಟ್ಟರೆ ಅದರಾಚೆಗೆ ಗೊತ್ತಿಲ್ಲ. ಈ ಜಗತ್ತಿನಲ್ಲಿ ಏನೆಲ್ಲ ಸಂಕಟವನ್ನು ಅನುಭವಿಸುವ ಜನ ಇದ್ದಾರೆ..? ನನಗೆ ಅನ್ನಿಸುತ್ತದೆ ,ನಾವು ಅನುದಿನವೂ ನಮ್ಮ ಬಗ್ಗೆಯೇ ಚಿಂತಿಸಿವುದರ ಜೊತೆಗೆ ಇನ್ನೊಬ್ಬನನ್ನು ದೂರುವುದರ ಬದಲು ನಮ್ಮ ನಡುವಿನ ಆರ್ತರಿಗೆ ಸ್ವಲ್ಪ ಸ್ಪಂದಿಸಿದರೆ ಏನು ಕಮ್ಮಿಯಾಗುತ್ತದೆ. ?? ಆದರೆ ಹಾಗೆ ಮಾಡುತ್ತಿಲ್ಲ.. ..ಮಾಡುವುದೂ ಇಲ್ಲ. ..


ನನಗೆ ಹೀಗೆ ಅನ್ನಿಸಲು ಕಾರಣವಿದೆ. ಈ ಚಿತ್ರದಲ್ಲಿ ಕಾಣಿಸುತ್ತಿದ್ದಾರಲ್ಲಾ.. ಇವರು ಪುತ್ತೂರು ಬಳಿಯ ಕಲ್ಲಮೆ ಪ್ರದೇಶದ ಬಡ , ಕೂಲಿ ಮಾಡಿ ಬದುಕುವ ಕುಟುಂಬ. ದಿನಕ್ಕೆ ಹೆಚ್ಚೆಂದರೆ 200 ರೂ ಸಂಬಳ.. ಇವರಿಗೆ 4 ಜನ ಮಕ್ಕಳು ಇದ್ದರು. ಆದರೆ ಈಗ ಇರುವುದು 2 ಮಂದಿ ಮಾತ್ರಾ. ಇಬ್ಬರು ಮಕ್ಕಳು ತೀರಿಕೊಂಡದ್ದು ತಲಸ್ತೇನಿಯಾ ಎನ್ನುವ ರೋಗದಿಂದ. ಅಂದರೆ ದೇಹದಲ್ಲಿ ಕೆಂಪನೆಯು ರಕ್ತ ಕಡಮೆಯಾಗುವುದು. ಇದಕ್ಕಾಗಿ ತಿಂಗಳಿಗೋ ಅಥವಾ ಎರಡು ತಿಂಗಳಿಗೊಮ್ಮೆ ಹೊಸ ರಕ್ತ ನೀಡಬೇಕು.ಅದಲ್ಲದೆ ಆ ಮಕ್ಕಳ ರಕ್ತವು ಅಪರೂಪದ್ದು.ಹೀಗಾಗಿ 2 ಜನ ಮಕ್ಕಳು ಸತ್ತಿದ್ದಾರ್. ಉಳಿದ 2 ಜನರಿಗೆ ಆ ಕಾಯಿಲೆ ಇದೆ. ತುಂಬ ನಿತ್ರಾಣ, ವಾಂತಿ.. ,ನಿಲ್ಲಲಾಗದೇ ಇರುವುದು ,ಈ ರೋಗದ ಪ್ರಾರಂಭದ ಕ್ಷಣ. ಒಮ್ಮೆ ರಕ್ತ ನೀಡಿದರೆ ಕೆಲ ಸಮಯದವರೆಗೆ ನೆಮ್ಮದಿ ಆದರೆ ಯಾವಾಗ ಬೇಕಾದರೂ ಮತ್ತೆ ಕಾಣಿಸಬಹುದು. ಇಲ್ಲಿ ಒಬ್ಬ ಅಜ್ಜಿಯೂ ಮಕ್ಕಳ ಆರೈಕೆಗೆ ಇದ್ದಾರೆ. ತಂದೆ ತಾಯಿ ಕೂಲಿಗೆ ಹೋದರೆ ಮಕ್ಕಳ ಆರೈಕೆ ಅಜ್ಜಿಗೆ. ಹಾಗೆಂದು ಹೆತ್ತವರು ಕೂಲಿಗೆ ಹೋದರೂ ಮಕ್ಕಳ ಚಿಂತೆ. ಯಾವಾಗ ಬೇಕಾದರೂ ರೋಗ ಉಲ್ಪಣಿಸಬಹುದು.ಈಗಾಗಲೇ ಲಕ್ಷಗಟ್ಟಲೆ ವ್ಯಯಿಸಿದ್ದಾರೆ. ಅದೂ ಸಾಲ ಮಾಡಿ. ಆದರೂ ಮಕ್ಕಳಿಬ್ಬರೂ ಬದುಕುಳಿದಿಲ್ಲ. ಈಗ ಇರುವ ಮಕ್ಕಳ ಜೀವ ಉಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಭವಿಷ್ಯ ಬಲ್ಲವರಾರು?.

ಈ ವಿಚಾರ ತಿಳಿದ ನಮ್ಮ ಜನಪ್ರತಿನಿಧಿಗಳು ಅಲ್ಲಿಗೆ ತೆರಳಿ ಕಿಂಚಿತ್ ಪರಿಹಾರ ನೀಡಿದರು.ಭರವಸೆಗಳ ಮಹಾಪೂರ ಹರಿಸಿ ಬಡವನಿಗೆ ಆಶಾಗೋಪುರವನ್ನು ಕಟ್ಟಿಸಿದರು. ಈ ಬಡ ಕುಟುಂಬಕ್ಕೆ ಈ ಭರವಸೆ ಭಗವಂತನೇ ಒಲಿದಂತೆ ಕಂಡುಬಂತು.. ಮಾಧ್ಯಮಗಳಲ್ಲೂ ಅದು ಪ್ರಕಟವಾಯಿತು. ಆದರೆ ಜನ ನೋಡಿ ಎಂಥಾ ಕುತ್ಸಿತರಿರುತ್ತಾರೆ ಅಂತ . ಪತ್ರಿಕೆಗಳಲ್ಲಿ ಜನಪ್ರತಿನಿಧಿಗಳು ಸಹಾಯ ಮಾಡಿದ್ದು ಸುದ್ದಿ ಬಂದದ್ದು ಅರಿತದ್ದೇ ತಡ ಸಾಲ ಹಿಂದಿರುಗಿಸಲು ಒತ್ತಾತಿಸಿದರು. ಅವರು ನೀಡಿದ್ದು ಕಿಂಚಿತ್.. ಆದರೆ ಜನ ನಂಬಿದ್ದು ತುಂಬಾ...!!. ಸರಿ .. ಜನಪ್ರತಿನಿಧಿಗಳಾದರೂ ಸರಿಯಾಗಿ ಸ್ಪಂದಿಸಿದ್ದಾರಾ?. ಅದೂ ಇಲ್ಲ. ಆಸ್ಪತ್ರೆಗೆ ಕರೆದೊಯ್ದಿಲ್ಲ...ಔಷಧಿಯೂ ಆಗಿಲ್ಲ. ..ಈಗ ಪರದಾಟ ನಡೆಸುತ್ತಿದೆ ಈ ಕುಟುಂಬ.
ನಾವೂ ಅವರ ಭೇಟಿಗೆ ಹೋಗಿದ್ದೆವು. ಅದೂ ಬೇರೆ ಬೇರೆಯಾಗಿ. ಆ ಅಳುವಿನ , ನೋವಿನ ನಡುವೆ ನಮ್ಮ ಲೋಗೋ ನಿಂತಿತು.. ಮನಕಲಕುವ ಮಾತುಗಳು ... ಮಹಿಳೆಯ ... ಹೆತ್ತಕರುಳಿನಿಂದ ಬಂದಿತ್ತು.... ಒಂದೆರಡು ಮಾತು ಬಂದಾಕ್ಷಣ ನನ್ನ ಕ್ಯಾಮಾರಾ ಬಂದ್ ಆಗಿತ್ತು. ಕೊನೆಗೆ ಬರುವ ವೇಳೆ ನಾನು ಹಾಗೂ ನನ್ನ ಮಿತ್ರ ಜೊತೆಯಾಗಿ ಒಂದಿಷ್ಟು ಸಹಾಯವನ್ನು ನೀಡಿಬಂದೆವು. ಆದರೆ ಅದು ಅವರ ಮಟ್ಟಿಗೆ ಅಂದರೆ ಅವರು ಮಾಡಿದ ಖರ್ಚಿಗೆ ಪುಡಿಗಾಸು ... ಆದರೆ ನಮ್ಮ ಕೈಲಾದ ಸಹಾಯ ಮಾಡಿದ್ದೇವಲ್ಲಾ ಎನ್ನುವ ಸಂತೃಪ್ತಿ ನಮಗಿತ್ತು. ಎಲ್ಲೋ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಕ್ಕಿಂತ ಹೆಚ್ಚಿನ ನೆಮ್ಮದಿ ಇಲ್ಲಿ ಸಿಕ್ಕಿತ್ತು..

ಆ ಮಕ್ಕಳು ಬದುಕಲಿ.... ರೋಗ ವಾಸಿಯಾಗಲಿ... ಎಂದು ಕಾಣದ ದೇವರಲ್ಲಿ ಬೇಡುವೆ.

ನಿಮಗೆಲ್ಲಾದರೂ ಇವರಿಗೆ ಸಹಾಯ ಮಾಡಬೇಕು ಅನ್ನಿಸಿದರೆ ನನಗೆ Email ಮಾಡಿ ನಾನು ವಿಳಾಸ ನೀಡುವೆ. ಅಥವಾ ಸಾಂತ್ವಾನವನ್ನಾದರೂ ಹೇಳಿ... ನೊಂದ ಹೃದಯಗಳಿಗೆ ಅದುವೇ ದೊಡ್ಡ ಗ್ಲುಕೋಸ್....


puchhappady@yahoo.co.in

25 ಡಿಸೆಂಬರ್ 2008

ಜೀವಕ್ಕೆ ಬೆಲೆ ....??



ಇದು ನ್ಯಾಯವೇ....?. ಇಂತಹ ಸಾವಿಗೆ ನ್ಯಾಯವಿದೆಯೇ..?.. ಜೀವಗಳಿಗೆ ಬೆಲೆಯೇ ಇಲ್ಲವೇ...?. ಇಂತಹದ್ದೊಂದು ಪ್ರಶ್ನೆ ನನಗೆ ಕಾಡಲು ಶುರುವಾದದ್ದು ನಿನ್ನೆಯಿಂದ . ಕಾರಣ ಕೇಳಿ....

ಒಂದು ಹೊಸ ಚಿಂತನೆ ನಡೆದಿದೆ.. ಗೋವು ಇಂದು ವಿವಾದದ ವಸ್ತುವಾಗಿದೆ. ಕಾರಣ ಗೊತ್ತೇ ಇದೆ. ಅದನ್ನು ಭಕ್ಷಣೆ ಮಾಡುವುದಕ್ಕಾಗಿ ಕೊಲ್ಲಲಾಗುತ್ತಿದೆ.ಹಾಗಾಗಿ ಇಂದು ವಿವಾದಗಳು ಹೆಚ್ಚಾಗಿವೆ.ಕೆಲವೊಮ್ಮೆ ಅಶಾಂತಿಗೂ ಕಾರಣವಾಗಿದೆ. ಇದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಆದರೆ ಇಲ್ಲೊಂದು ಸಂಘಟನೆ ಹೊಸತೊಂದು ಯೋಚನೆ ನಡೆಸಿದೆ.ಗೋ ಮಾಂಸ ಭಕ್ಷಣೆ ಮಾಡುತ್ತಿರುವುದು ಇಂದು ಅದು ಕಡಿಮೆ ದರದಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ಅದನ್ನು ಹೆಚ್ಚಾಗಿ ತಿನ್ನುವವರು ಮುಸ್ಲಿಂಮರು , ಹಾಗಾಗಿ ಆ ಮಾಂಸಕ್ಕೆ ಪರ್ಯಾಯವಾಗಿ ಆಡಿನ ಮಾಂಸವನ್ನು ತರಬೇಕು ಎನ್ನುವುದು ಸಂಘಟನೆಯ ಉದ್ದೇಶ. ಆ ಕಾರಣಕ್ಕಾಗಿ ಇಂದು ಕೆಲ ಶರ್ತಗಳ ಮೂಲಕ ಮುಸ್ಲಿಂ ಕುಟುಂಬಗಳಿಗೆ 2 ಆಡನ್ನು ನೀಡುವುದು ಸಂಘಟನೆಯ ಚಿಂತನೆ. ಇದರಿಂದಾಗಿ ಈಗ ಆಡಿನ ಮಾಂಸಕ್ಕೆ 2೦೦ ರೂಗಳವರೆಗೆ ಇದೆ. ಅದು ಕಡಿಮೆಯಾಗಬಹುದು ದನ ತಿನ್ನುವವರೆಲ್ಲಾ ಆಡನ್ನು ತಿನ್ನುತ್ತಾರೆ ಎಂದು ಸಂಘಟಕರು ನಂಬಿದ್ದಾರೆ.ಅಲ್ಲದೆ ಇದಕ್ಕೀಂತಲೂ ಒಂದು ಹೆಜ್ಜೆ ಮುಂದೆ ಬಂದು ಮುಸ್ಲಿಂಮರಿಗೆ ಬರ್ಕತ್ ನಲ್ಲಿ ಆಡನ್ನೇ ತಿಳಿಸಿದ್ದಾರೆ ಹಾಗಾಗಿ ಆಡು ಅವರ ಆಹಾರ ಎನ್ನುತ್ತದೆ ಈ ಸಂಘಟನೆ. ಇದಿಷ್ಟು ವಿಷಯ.

ಗೋವಿಗೆ ಇಂದು ಪೂಜ್ಯ ಭಾವನೆ ಇದೆ ನಿಜ, ಎಲ್ಲರೂ ಅದನ್ನು ಒಪ್ಪಬಹುದು ಅಂತನೇ ಇಟ್ಟುಕೊಳ್ಳೋಣ. ಹಾಗಾಗಿ ಅದನ್ನು ಕೊಲ್ಲಬಾರದು ಎನ್ನುವ ಭಾವನೆ ಇರುವುದೂ ನಿಜವೇ. ಆದರೆ ಇಂದು ಗೋಹತ್ಯೆ ನಿಲ್ಲಬೇಕು ಎನ್ನುವ ಕಾರಣಕ್ಕೆ ಇನ್ನೊಂದು ಪ್ರಾಣಿಯನ್ನು ಬೆಳೆಸುವುದು ಎಷ್ಟು ಸರಿ. ಅದೂ ಒಂದು ಜೀವವಿರುವ ಪ್ರಾಣಿಯಲ್ಲವೇ?. ಅದರಲ್ಲೂ ಔಷಧೀಯ ಗುಣವಿದೆಯಲ್ಲಾ?.ಗೋವು ಪೂಜ್ಯ ಎನ್ನುವ ಒಂದೇ ಕಾರಣಕ್ಕೆ ಅದನ್ನು ಹತ್ಯೆ ಮಾಡಬಾರದು ಎನ್ನುವುದರ ಜೊತೆಗೆ ಇನ್ನೊಂದು ಪ್ರಾಣಿಯ ಹತ್ಯೆಯೂ ಆಗಬಾರದು ಎನ್ನುವ ಬಾವನೆಯನ್ನು ಇಂದು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಗೋಹತ್ಯೆ ನಿಷೇಧಕ್ಕೆ ಸರಿಯಾದ ದಾರಿಯಲ್ಲಿ ಪ್ರಯತ್ನಿಸಬೇಕು.

ಒಂದು ಪ್ರಾಣಿ ಇನ್ನೊಂದು ಪ್ರಾಣಿಯ ಆಹಾರದ ವಸ್ತುವಾಗುವುದು ಪ್ರಕೃತಿ ನಿಯಮ.

ಆದರೆ ಬುದ್ದಿವಂತನಿಗೂ ಜೀವಂತ ಪ್ರಾಣಿ ಆಹಾರಕ್ಕೆ ಬೇಕಾದರೆ ಆತ ಯಾವುದಕ್ಕೆ ಸಮಾನ.? ಈ ಬುದ್ದಿವಂತನಿಗೆ ಬದುಕಲು ಅದುವೇ ಆಗಬೇಕು ಎಂದಿಲ್ಲವಲ್ಲ. ಅದೆಲ್ಲವೂ ಬಾಯಿ ಚಪಲ ಮತ್ತು ನಾಲಗೆಯನ್ನು ತಣಿಸಲು ಎಂಬುದು ನನ್ನ ಚಿಂತನೆ.

ಎಲ್ಲರೂ ಇದನ್ನು ಒಪ್ಪಬೇಕು ಎಂದಿಲ್ಲ.


22 ಡಿಸೆಂಬರ್ 2008

ನಾನು ಮಾಡಿದ ಒಳ್ಳೆಯ ಕೆಲಸಗಳು...




ಇದೇನು, ನಾವು ಯಾರಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದಿದೆಯಾ?. ಅವರವರ ಮಟ್ಟಿಗೆ ಅವರು ಮಾಡುವ ಎಲ್ಲಾ ಕೆಲಸಗಳು ಒಳ್ಳೆಯ ಕೆಲಸಗಳೇ.ಇನ್ನೊಬ್ಬ ಮಾಡುವ ಕೆಲಸಗಳು ಮಾತ್ರಾ ಕೆಟ್ಟ ಕೆಲಸಗಳಾಗಿರುತ್ತದೆ.ನಮ್ಮ ದೃಷ್ಠಿ ಹಾಗಿರುತ್ತದೆ, ನಮ್ಮ ಕಣ್ಣಿನ ನೇರಕ್ಕೆ ಮಾತ್ರಾ ಯೋಚಿಸುವುದು.ಅದೇ ಸರಿ ಎನ್ನುವುದು ನಮ್ಮ ಹಕ್ಕು ಅಂತ ಭಾವಿಸಿದ್ದೇವೆ. ಸೂಕ್ಷವಾಗಿ ನಮ್ಮ ಅಂತರ್ಯವನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ. ಆತ ಹೇಳುವುದನ್ನು ಕೇಳುವುದಿಲ. ನಮ್ಮ ನಿರ್ಧಾರವನ್ನು ಅದಕ್ಕೂ ಮೊದಲೇ ಪ್ರಕಟಿಸಿಯಾಗಿರುತ್ತದೆ.ಹಾಗಾಗಿ ಅಲ್ಲಿ , ಆತನ ಕೆಲಸಗಳೆಲ್ಲವೂ ಕೆಟ್ಟದ್ದಾಗಿಯೇ ಕಾಣುತ್ತದೆ. ಅಥವಾ ನನ್ನ ನೇರಕ್ಕೆ ಆತ ಇಲ್ಲ ಎಂದಾದಲ್ಲಿ ಆತನ ಬರಹ , ಆತನ ಕೆಲಸ ಎಲ್ಲವೂ ತಪ್ಪು.ಅದೊಂದು ಪೂರ್ವಾಗ್ರಹ ಪೀಡಿತವಾದ ಯೋಚನೆ.

ಇಷ್ಟಕ್ಕೂ ಈ ಒಳ್ಳೆಯ ಕೆಲಸಗಳು ನನಗೆ ನೆನಪಾದದ್ದು ಯಾಕೆ ಗೊತ್ತಾ?.ಮೊನ್ನೆ ಮನೆಯಲ್ಲಿ ಯಾವುದೋ ಪುಸ್ತಕವನ್ನು ಹುಡುಕಾಡುತ್ತಿದ್ದೆ. ಅದು ನನ್ನ ಮೆಚ್ಚಿನ ಪುಸ್ತವಾಗಿತ್ತು. ಆಗ ನನಗೆ ಇನ್ನೊಂದು ನನ್ನ ಕೈಬರಹದ ಪುಸ್ತಕ ಸಿಕ್ಕಿತ್ತು. ಅದು ನಾನು ೪ ನೇ ತರಗತಿಯಲ್ಲಿ ಬರೆಯುತ್ತಿದ್ದ ಹೋಂವರ್ಕ್ ಪುಸ್ತಕ ಅದರ ಮೊದಲ ಪುಟದಲ್ಲಿ ಬರೆದಿತ್ತು . ನಾನು ಮಾಡಿದ ಒಳ್ಳೆಯ ಕೆಲಸಗಳು. ಇದರ ಶೀರ್ಷಿಕೆ ನೋಡಿದಾಗ ನನಗೆ ಆಸಕ್ತಿ ಹೆಚ್ಚಿತು. ನನ್ನ ನೆನಪುಗಳೆಲ್ಲವೂ ಬಾಲ್ಯದ ಕಡೆಗೆ ಓಡಿತು. ಆಗ ನಮಗೆ ಪ್ರತಿದಿನ ಹೋಂವರ್ಕ್ ನೊಂದಿಗೆ ಆ ದಿನ ಮಾಡಿದ ಒಂದು ಒಳ್ಳೆಯ ಕೆಲಸದ ಬಗ್ಗೆ ಆ ಪುಸ್ತಕದಲ್ಲಿ ಬರೆಯಬೇಕಾಗಿತ್ತು. ಹಾಗೆ ದಾಖಲಿಸಿದ್ದ ಪುಸ್ತಕ ಅದು. ಅಬ್ಬಾ ೩೬೦ ಒಳ್ಳೆಯ ಕೆಲಸ ನಾನು ಮಾಡಿದ್ದೆ... ನಾನು ಮಾತ್ರವಲ್ಲ ನನ್ನ ಅಂದಿನ ಎಲ್ಲಾ ಮಿತ್ರರು ಮಾಡಿದ್ದಾರೆ. ಬಹುಶ: ಈಗ ಆ ಒಳ್ಳೆಯ ಕೆಲಸಗಳನ್ನು ದಾಖಲಿಸುವ ಪರಿಪಾಠವಿಲ್ಲ. ಆಗಲೇ ಸುಮ್ಮ ಸುಮ್ಮನೆ ಒಳ್ಳೆಯ ಕೆಲಸ ನಾವು ಮಾಡುತ್ತಿದ್ದೆವು..ಈಗ ಕತೆ ಕೇಳುವುದೇ ಬೇಡ. ಶ್ರೀರಾಮಚಂದ್ರ ಮಾಡದ್ದನ್ನು ಮಾಡುತ್ತಾರೆ. ಅದಿರಲಿ ನಾವು ಪ್ರತಿದಿನ ಬರೆಯುತ್ತಿದ್ದ ಒಳ್ಳೆಯ ಕೆಲಸದ ಒಂದು ಸ್ಯಾಂಪಲ್ ಹೇಳುತ್ತೇನೆ . ನಾನು ಇಂದು ರಸ್ತೆಯಲ್ಲಿದ್ದ ಮುಳ್ಳನ್ನು ಹೆಕ್ಕಿದ್ದೇನೆ , ನಾನು ಇಂದು ಮನೆಯಲ್ಲಿ ಕಸ ಗುಡಿಸಿದ್ದೇನೆ , ನಾನು ಇಂದು ನೀರು ತಂದಿದ್ದೇನೆ... ನಾನು ಇಂದು ಪಾಠ ಓದಿದ್ದೇನೆ ...... ಹೀಗೆ ಮುಂದುವರಿಯುತ್ತದೆ. ಆಗ ಅದುವೇ ದೊಡ್ದ ಕೆಲಸ ಅಂತ ನಮ್ಮ ತಲೆಯಲ್ಲಿ. ಆದರೆ ಅದನ್ನೂ ಮಾಡುತ್ತಿದ್ದೆವಾ ಅನ್ನುವುದು ಮತ್ತಿನ ಪ್ರಶ್ನೆ. ಆದರೂ ಪುಸ್ತಕದಲ್ಲಿ ಒಳ್ಳೆಯ ಕೆಲಸವಾಗುತ್ತಲೇ ಇತ್ತು. ಇಂತಹ ಒಳ್ಳೆಯ ಕೆಲಸಗಳ ದಾಖಲಾತಿ ಕೆಲ ಅವಾಂತರಕ್ಕೂ ಕಾರಣವಾಗುತ್ತಿತ್ತು. ಎರಡು ದಿನಕ್ಕೊಮ್ಮೆ ಅದೇ ಕೆಲಸ. ಒಮ್ಮೆ ನನ್ನ ಮಿತ್ರನ ತಂದೆ ಶಾಲೆಗೆ ಬಂದಿದ್ದರು ಶಾಲೆ ಟೀಚರ್ ಮಿತ್ರನ ತಂದೆಯಲ್ಲಿಕೇಳಿದರು ನಿಮ್ಮ ಮಗ ಇವತ್ತು ಮನೆಯನ್ನು ಗುಡಿಸಿದ್ದಾನಾ? ತಕ್ಷಣ ಇಲ್ಲ ಎನ್ನುವ ಉತ್ತರ ಮಿತ್ರನ ತಂದೆಯದ್ದು. ಟೀಚರ್ ಒಳ್ಳೆಯ ಕೆಲಸದ ಪುಸ್ತಕವನ್ನು ತೋರಿಸಿ ನೋಡಿ ನಿಮ್ಮ ಮಗ ಏನೆಲ್ಲಾ ಕೆಲಸ ಮಾಡಿದ್ದಾನೆ ಎನ್ನಬೇಕೇ... ಇದೆಲ್ಲಾ ಶುದ್ದ ಸುಳ್ಳು ಅಂತಲೂ ಮಿತ್ರನ ತಂದೆ ಹೇಳಿದರು. ಮಾತ್ರವಲ್ಲ ಹೀಗೆ ಸುಳ್ಳು ಬರೆದರೆ ಎರಡೆರಡು ಕೊಡಿ ಟೀಚರ್ ಎಂದರು. ನಂತರ ನಮಗೆಲ್ಲಾ ಗಡ .. ಗಡ... ಕೆಲಸ ಒಳ್ಳೆಯದೇ... ಆದರೆ ,,,?? ಒಳ್ಳೆಯ್ ಕೆಲಸ ಮಾಡಲು, ಬರೆಯಲು ಹೆದರಿಕೆ. ಮನೆಯಿಂದ ಆಕಸ್ಮಿಕವಾಗಿ ಶಾಲೆಗೆ ಬಂದರೆ ...? ಎಂಬ ಭಯ ಅನುದಿನವೂ ಕಾಡುತ್ತಿತ್ತು. ಅಂತೂ ೪ ನೆ ತರಗತಿ ಕಳೆದಿತ್ತು.. ನಾನಂತೂ ಬಚಾವ್ ಆಗಿದ್ದೆ. ಒಳ್ಳೆಯ ಕೆಲಸಗಳನ್ನೇ ಮಾಡಿದ್ದೆ....!!!!????. ಈಗ ಅಂತಹ ಒಳ್ಳೆಯ ಕೆಲಸಗಳಿಲ್ಲ ... ಒಳ್ಳೆಯದೇ ಆಯಿತು....

ಒಂದು ವೇಳೆ ಅಂತಹ ಹೋಂವರ್ಕ್ ಇರುತ್ತಿದ್ದರೆ ಇಂದಿನ ಪುಟಾಣಿಗಳು ಏನನ್ನು ಬರೆಯುತ್ತಿದ್ದರು ಎನ್ನುವುದಕ್ಕೆ ಸ್ಯಾಂಪಲ್ .. ನಾನು ಇಂದು ಮೊಬೈಲ್ ಚಾರ್ಜ್ ಮಾಡಿದೆ , ನಾನು ಇಂದು ಟಿ.ವಿಯನ್ನು ಆನ್ ಮಾಡಿದೆ , ನಾನು ಇಂದು ಫೋನ್ ರಿಸೀವ್ ಮಾಡಿದೆ, ನಾನು ಇಂದು ಕಾರಿನ ಡೋರ್ ತೆಗೆದೆ , ನಾನು ಇಂದು ಹೋಂವರ್ಕ್ ಮಾಡಿದೆ ....... ... ಹೀಗೆ ದಾಖಲಾಗುತ್ತಿತ್ತೋ ಏನೋ..?? ಅಥವಾ ಹಿರಿಯರೇ ಅವರು ಮಾಡಿದ ಕೆಲಸಗಳನ್ನು ಬರೆದುಕೊಡುತ್ತಿದ್ದರೋ ಗೊತ್ತಿಲ್ಲ....

ಅಂತೂ ಒಮ್ಮೆ ನನ್ನ ಬಾಲ್ಯದ ಒಳ್ಳೆಯ ಕೆಲಸಗಳು ನೆನಪಾಯಿತು.

21 ಡಿಸೆಂಬರ್ 2008

ನಾಗದೋಷವಂತೆ....





ರಾಹುಲ್ ದ್ರಾವಿಡ್‌ಗೆ ನಾಗದೋಷವಿದೆಯೇ?.ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವಂತೆ ದ್ರಾವಿಡ್ ಕುಟುಂಬವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಪೂಜೆ ಸಲ್ಲಿಸಿದ್ದಾರೆ.ಸದ್ದಿಲ್ಲದೆ ಆಗಮಿಸಿದ ದ್ರಾವಿಡ್ ಕುಟುಂಬವು ಪೂಜೆ ನಡೆಸಿ ತೆರಳಿದೆ.

ಟೀಂ ಇಂಡಿಯಾದ ಆಟಗಾರ ರಾಜ್ಯದ ಹೆಮ್ಮೆಯ ಕ್ರೀಡಾಪಟು ರಾಹುಲ್ ದ್ರಾವಿಡ್ ಅವರಿಗೆ ನಾಗದೋಷವಿದೆಯೇ ಎನ್ನುವ ಪ್ರಶ್ನೆ ಈಗ ಎದ್ದಿದೆ. ರಾಹುಲ್ ಅವರಿಗೆ ಕ್ರಿಕೆಟ್ ರಂಗದಲ್ಲಿನ ಸಾಧನೆಗೆ ನಾಗದೋಷ ಅಡ್ಡಿಯಾಗಿದೆಯಂತೆ.ಈ ನಾಗದೋಷ ನಿವಾರಣೆಗೆ ರಾಹುಲ್ ಕುಟುಂಬವು ಕುಕ್ಕೆಗೆ ಆಗಮಿಸಿದ ಶ್ರೀ ದೇವಳದಲ್ಲಿ ತುಲಾಭಾರ ಸೇವೆ , ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಯನ್ನು ನಡೆಸಿದೆ.1 ದಿನದ ಕಾಲ ಸುಬ್ರಹ್ಮಣ್ಯದಲ್ಲೆ ಉಳಿದಿದ್ದ ರಾಹುಲ್ ಕುಟುಂಬವು ಈ ವಿಚಾರವನ್ನು ಗುಪ್ತವಾಗಿಟ್ಟಿತ್ತು.ಮುಂದೆ ರಾಹುಲ್ ದ್ರಾವಿಡ್ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಖುದ್ದಾಗಿ ಆಗಮಿಸಿ ಇನ್ನೊಮ್ಮೆ ಸೇವೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಹಿಂದೆ ಸಚಿನ್ ತೆಂಡೂಲ್ಕರ್ ಅವರಿಗೆ ನಾಗದೋಷವಿದ್ದಾ ಗ ಅವರು ಕುಟುಂಬ ಸಮೇತರಾಗಿ ಕುಕ್ಕೆಗೆ ಆಗಮಿಸಿ ಸರ್ಪಂಸ್ಕಾರ ಸೇವೆಯನ್ನು ಮಾಡಿದ್ದರು.ಹೀಗಾಗಿ ನಂತರದ ಅವರ ಕ್ರಿಕೆಟ್ ಜೀವನವು ಉತ್ತಮವಾಗಿತ್ತು ಎನ್ನುವ ನಂಬಿಕೆಯಿದೆ.ಅಂತೆಯೇ ರಾಬಿನ್ ಉತ್ತಪ್ಪ ಕೂಡಾ ಕುಕ್ಕೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದರು.ಅದೇ ರೀತಿ ಈಗ ರಾಹುಲ್ ಅವರಿಗೂ ನಾಗದೋಷದ ಕಾಟ ಆರಂಭವಾದ ಹಿನ್ನೆಲೆಂiಲ್ಲಿ ಅವರ ಕುಟುಂಬವು ಈಗ ಪ್ರಾರಂಭಿಕ ಹಂತದಲ್ಲಿ ಆಗಮಿಸಿ ಸೇವೆ ಸಲ್ಲಿಸಿದೆ.ಬೆಂಗಳೂರಿನ ಜ್ಯೊತಿಷಿಯೊಬ್ಬರ ಅಣತಿಯಂತೆ ಅವರ ಕುಟುಂಬ ಸುಬ್ರಹ್ಮಣ್ಯಕ್ಕೆ ಆಗಮಿಸಿದೆ.

ಇನ್ನು ಇನ್ನೊಂದು ಪ್ರಶ್ನೆ ಎದ್ದಿದೆ.ಯಾಕೆ ಈ ನಾಗದೊಷ ಪ್ರಸಿದ್ಧ ಕ್ರೀಡಾಪಟುಗಳನ್ನು ಹಿಡಿದುಕೊಳ್ಳುತ್ತದೆ. ಇನ್ನೊಂದು ಸಮಾಧಾನ. ಬಡವರಿಗೆ ಮಾತ್ರವಲ್ಲ ದಿಗ್ಗಜರನ್ನೂ ಕಾಡುತ್ತದೆ ಇಂತಹ ಸಮಸ್ಯೆಗಳು ಅಂತಾಯಿತು.ಇಂತಹ ಸಮಸ್ಯೆಗಳನ್ನು ಹೇಳಲು ಅಂತಲೇ ಜನ ಇರುತ್ತಾರೆ. ಅವರಿಗೆ ಕೆಲಸವೇ ಅದು. ನಿಮಗೆ ಆ ದೋಷ ... ಈ ದೊಷ... ಅಂತ ಹೇಳುತ್ತಾ.... ಎಣಿಸುತ್ತಾರ್‍.ಜನಕ್ಕೆ ಮೊದಲೇ ಮಾನಸಿಕವಾದ ನೆಮ್ಮದಿಯಿಲ್ಲ. ಅತ್ತಿಂದಿತ್ತ ಇನ್ನಿಲ್ಲದ ಕ್ಷೇತ್ರಗಳಿಗೆ ಅಲೆದಾಟ ಮಾಡುತ್ತಾರೆ.ಹರಕೆಯನ್ನು ತೀರಿಸುತ್ತಾರೆ.ಅಲ್ಲಿಯೂ ವ್ಯಾಪಾರ ನಡೆಯುತ್ತದೆ. ಅದಕ್ಕೆಂದೇ ಅಲ್ಲಿ ಇರುವವರು ದೋಚುತ್ತಾರೆ.

ಈಗ ಇಂತಹ ಕ್ಷೇತ್ರಗಳಿಗೆ ವಿವಿಐಪಿಗಳು ಬಂದರೆ ಅವರ ಕುಟುಂಬವು ಬಂದರೆ ಅನೇಕರಿಗೆ ಲಾಭವಿದೆ. ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ , ಮುಖಪುಟ ವರದಿ, ಅಲ್ಲಿನ ಅರ್ಚಕರಿಗೆ ದುಡ್ಡಿನ ಮರ, ಇತರರಿಗೆ ಕಾಣಿಕೆ, ಹೋಟೇಲ್ ಗಳಿಗೆ ಹೊಸರುಚಿ, ಅಭಿಮಾನಿಗಳಿಗೆ ಮುಖ ದರ್ಶನ......

19 ಡಿಸೆಂಬರ್ 2008

ನೀ ನಿಲ್ಲದೆ ....



ನೀ ನಿಲ್ಲದೆ .... ಮನಸೆಲ್ಲಾ ಕಲ್ಲಾಗಿದೆ.... ಇದು ಹಾಡಿನ ಒಂದು ಸಾಲು... ಆದರೆ ಇದೇನು ನನ್ನ ವಿಷಾದ ಗೀತೆಯಲ್ಲ...

ಮೊನ್ನೆ ಹುಣ್ಣಿಮೆಯ ರಾತ್ರಿ.ಮನೆಯ ಅಂಗಳಕ್ಕೆ ಇಳಿದಾಗ ಬಾನಿನಲ್ಲಿ ಚಂದಿರ ಚಿತ್ತಾರವನ್ನು ಬಿಡಿಸಿಟ್ಟಿದ್ದ.ಮೋಡಗಳ ಸಂದಿನಲ್ಲಿ ಕಣ್ಣರೆಪ್ಪೆ ಮಿಟುಕಿಸುವಂತೆ ಆಗೊಮ್ಮೆ ಈಗೊಮ್ಮೆ ಕಾಣುತ್ತಲಿದ್ದ.ನಕ್ಷತ್ರಗಳು ಮೋಡದ ಒಳಗೆ ಅತ್ತಿಂದಿತ್ತ ಓಡಾಡುತ್ತಿದ್ದ್ವು. ನಾನು ನಿಜ ಹೇಳಬೇಕೆಂದರೆ ಚಿಕ್ಕವನಿದ್ದಾಗ ಚಂದಿರನನ್ನು ನೋಡಿದ್ದು ಬಿಟ್ಟರೆ ಚಂದಿರನನ್ನು ಸೂಕ್ಷವಾಗಿ ಅದರಲ್ಲೇ ಲೀನವಾಗಿ ಚಂದಿರನಂಗಳಕ್ಕೆ ಇಳಿದದ್ದಿಲ್ಲ. ಆದರೆ ಮೊನ್ನೆ ಏನೆನೆನಿತೋ ಏನೋ ಅಂಗಳಕ್ಕೆ ಇಳಿದಾಗ ಚಂದಿರನ ಬೆಳಕು ಕಂಡಿತು. ಆ ಪ್ರಕಾಶವನ್ನೇ ದಿಟ್ಟಿಸಿ ನೋಡಬೇಕು ಎನಿಸಿತು.ತೋಟಕ್ಕೆ ಇಳಿಯದೆ ವಾರಗಳೇ ಕಳೆದಿತ್ತು.ಹಾಗಾಗಿ ರನ್ ಅಂಗಳಕ್ಕೆ ಇಳಿಯಲು ಮನಸ್ಸು ರೆಡಿಯಾಗಿತ್ತು. ಪ್ರತಿದಿನ ರಾತ್ರಿ ಕಂಪ್ಯೂಟರ್ ಪರದೆಯ ಮುಂದೆ ಗಂಟಗಟ್ಟಲೆ ಕುಳಿತು ಹುಡುಕಾಡುವುದು ಮತ್ತು ಕೆಲಸದ ದಾರಿಗೆ ರೂಪು ಕೊಡುವುದರಲ್ಲೇ ಮಗ್ನನಾದಾಗಿ ಗಂಟೆ ನೋಡುವ ಹೊತ್ತಿಗೆ ೧೧ ಕಳೆದಿರುತ್ತದೆ ಹಾಗಾಗಿ ಅಂದು ಯಾವುದೇ ಲೆಕ್ಕಾಚಾರವಿಲ್ಲದೆ ಸುಮ್ಮನೆ ಮನೆಯಂಗಳದಲ್ಲಿ ಆಗಸಕ್ಕೆ ನೋಡುತ್ತಾ ನಿಂತಿದ್ದಂತೆ ಒಮ್ಮೆ ಶುಭ್ರ ಆಗಸದಲ್ಲಿ ಹೊಳೆಯುವ ಚಂದಿರ ಇನ್ನೊಮ್ಮೆ ಮೋಡಗಳೆಂಬ ಮೋಡಗಳು ಚಂದಿರನ ಪ್ರಕಾಶಕ್ಕೆ ಅಡ್ಡ ಬರುತ್ತಿತ್ತು. ನಕ್ಷತ್ರಗಳು ಬಲುದೂರ ಸಾಗುತ್ತಿದ್ದವು. ಆಗ ಸೊಯ್ ಎಂಬ ಚಳಿಗಾಳಿ ಸುತ್ತಲೂ ಬೀಸುತ್ತಲಿತ್ತು. ಮನಸ್ಸು ಎಲ್ಲೋ ದೇಹವೆಲ್ಲೂ ಸುತ್ತುತ್ತಾ ಆ ಚಂದಿರನ ಪ್ರಕಾಶದ ಭ್ರಮೆಯಲ್ಲಿ ತೇಲುತ್ತಲೇ ಇತ್ತು. ಮನಸ್ಸಿಗೆ ಆಹ್ಲಾದ ಒದಗುತ್ತಿತ್ತು. ಆಗ ದೂರದಲ್ಲಿ ಎಲ್ಲೋ ಕರ್ಕಶವಾದ ಸದ್ದು , ನಾಯಿಯ ಕೂಗಿನ ಸದ್ದು, ಮರದಿಂದ ನೀರ ಹನಿ ಬೀಳುವ ಟಪ್ ಸದ್ದು ಎಲ್ಲವೂ ಸೂಕ್ಷ ಮನಸ್ಸಿನ ಒಳಗೆ ಕೇಳಲಾರಂಭಿಸಿತು.ಜಾಗೃತವಾದ ಮನಸ್ಸು ಆ ಕಡೆಗೂ ಹಮನಹರಿಸಿತು. ಸದ್ದುಗಳು ಹತ್ತಿರ ಹತ್ತಿರವಾದಂತೆ ಅನಿಸತೊಡಗಿತು..... ಅದೇನು ಅನ್ನುವ ಕುತೂಹಲ ಬರತೊಡಗಿತು. ಆಗ ಆ ಸತ್ಯದ ಅನ್ವೇಷಣೆಯಲ್ಲಿ ಸಿಕ್ಕಿದ್ದು ಅಂತಹ ಸದ್ದುಗಳೆಲ್ಲವೂ ನಮ್ಮ ಭ್ರಮೆಯಲ್ಲ ಸತ್ಯವೂ ಅಲ್ಲ ನಂಬುವಂತಹುದೂ ಅಲ್ಲ. ಆದರೆ ಅದರ ಬಗ್ಗೆ ನಿಗಾ ಇರಬೇಕು.ಅದೆಲ್ಲವೂ ಪ್ರಕಾಶದ ಹಿಂದಿರುವ ಮೋಡಗಳು. ಆ ಮೋಡಗಳು ಪಕ್ಕದಲ್ಲಿರುವ ನಕ್ಷತ್ರಗಳನ್ನು ಓಡಿಸುತ್ತಾ ಸಾಗುತ್ತದೆ. ಇದೆಲ್ಲವನ್ನೂ ಸಮಾಜದೊಂದಿಗೆ ಸಮೀಕರಿಸುತ್ತಾ ಸಾಗಿದಾಗ ರಾತ್ರಿ ಪಂಪ್ ಚಾಲೂ ಮಾಡುವ ಹೊತ್ತು ಬಂದಿತ್ತು. ಆಗ ರಾತ್ರಿ ಗಂಟೆ ೧೨. ಪಂಪ್ ಚಾಲೂ ಮಾಡಿ ಬಂದು ಹಾಸಿಗೆ ಬಿಡಿಸುವ ವೇಳೆಗೆ ನಿದ್ರೆಯು ಕಣ್ಣನ್ನು ಆವರಿಸಿತ್ತು.

ಇದೆಲ್ಲವೂ ಇಂದಿನ ಸಮಾಜದಲ್ಲಿ ಕಾಣುತ್ತೇವೆ ನಾವು?. ಚಂದಿರ , ಅವನ ಪ್ರಕಾಶ , ಆ ಪ್ರಕಾಶವನ್ನು ಅಡ್ಡಗಟ್ಟುವ ಮೋಡಗಳು, ಓಡುವ ನಕ್ಷತ್ರಗಳು, ಮತ್ತೆ ಬೆಳಕು ಕಾಣುವ ಚಂದಿರ ಹತ್ತಿರ ಕಾಣುವ ನಕ್ಷತ್ರಗಳು.... ಇದೆಲ್ಲವೂ ನಿಜವಾ?. ಅಷ್ಟಕ್ಕೂ ಚಂದಿರನೇ ಪರಾವಲಂಬಿಯಲ್ವೇ?. ಆತನು ಬೆಳಕು ನೀಡುವುದು ಸೂರ್ಯನಿಂದ ತಾನೆ?.

ಅದಕ್ಕಾಗಿ ನೀ ನಿಲ್ಲದೆ ಮನಸಿಲ್ಲ... ಮನಸೇ ಎಲ್ಲಾ

ಎಲ್ಲವೂ ಗೋಜಲು.... ಗೋಜಲು....

08 ಡಿಸೆಂಬರ್ 2008

ಸಂಸ್ಕೃತ ಮತ್ತು ಪುನರುತ್ಥಾನ....

ನನಗೆ ಪಾಠಕ್ಕೆ ಇರಲಿಲ್ಲ ಆದರೆ ಗುರುಗಳು ಅಂತ ಹೇಳಬಹುದು .. ಹಿತೈಷಿ ಅಂತಅನ್ನಲೂ ಬಹುದು ... ಮಿತ್ರ ಅಂತ ಹೇಳಲೂಬಹುದಾದ , ನಾನು ಅತ್ಯಂತ ಹೆಚ್ಚು ಗೌರವಿಸುವ ಮತ್ತು ಪ್ರೀತಿಸುವವರಲ್ಲಿ ಒಬ್ಬರಾದ ಸುಬ್ರಹ್ಮಣ್ಯದ ಮಂಜುನಾಥ ಭಟ್ ಸಂಸ್ಕೃತದ ಬಗ್ಗೆ ಲೇಖನವೊಂದನ್ನು ಯಾವುದೋ ಸಂಚಿಕೆಗೆ ಬರೆದಿದ್ದರು. ಅದು ನನಗೆ ಹೆಚ್ಚು ಆಪ್ಯಾಯಮಾನವೆನಿಸಿತ್ತು. ಅದರ ಪಡಿಯಚ್ಚು ಇಲ್ಲಿದೆ....

ಭಾರತದ ಇತಿಹಾಸದಲ್ಲಿ ಸಂಸ್ಕೃತವು ಒಂದು ಭಾಷೆಯಾಗಿ, ದೇಶದ ಸಮಗ್ರತೆಯ ಬಹುದೊಡ್ಡ ಸಂಕೇತವಾಗಿ ಕಾರ್ಯನಿರ್ವಹಿಸಿದೆ. ಋಷಿಮುನಿಗಳ ಧ್ವನಿಯಾಗಿ, ಮಾನವನ ಬದುಕಿನ ಉನ್ನತಿಯ ಮೌಲ್ಯಗಳ ರೂವಾರಿಯಾಗಿ ಸಂಸ್ಕೃತ ಈ ದೇಶದ ಜೀವನಾಡಿಯಾಗಿತ್ತು. ಬುದ್ಧಿಜೀವಿಗಳ ಹಾಗು ವಿದ್ವಾಂಸರ ಆಧ್ಯಾತ್ಮಿಕ ಸಂವಾದ ಸಂಸ್ಕೃತದಲ್ಲಿಯೇ ನಡೆಯುತ್ತಿತ್ತು. ಅದು ಜವಸಾಮಾನ್ಯರ ಆಡುಮಾತಿನ ಮಾಧ್ಯಮವಾಗಿ ದೇಶದ ಉದ್ದಗಲಕ್ಕೂ ಅಪಾರ ಪ್ರಭಾವ ಬೀರಿದೆ. ಭಾರತದ ಎಲ್ಲ ಭಾಷೆಗಳ ಬೆಳವಣಿಗೆಯಲ್ಲಿ ಸಂಸ್ಕೃತದ ಕೊಡುಗೆ ಗಣನೀಯವಾಗಿದೆ. ಹೊಸ ಪದಗಳ ಸೃಷ್ಟಿಗೆ ಹಾಗು ವಿಜ್ಞಾನ ಸಾಹಿತ್ಯ ನಿರ್ಮಾಣಕ್ಕೆ ಇಂದಿಗೂ ಸಂಸ್ಕೃತ ಸ್ಪೂರ್ತಿಯಾಗಿದೆ.

ಐದಾರು ಸಾವಿರ ವರ್ಷಗಳ ಅಸ್ತಿತ್ವವಿರುವ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಭಾರತೀಯರ ಜೀವನ ಪರಂಪರೆಯಲ್ಲಿ ಹಾಸುಹೊಕ್ಕಾಗಿ ಸೇರಿಹೋಗಿದೆ. ಅದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ಭಾರತೀಯತೆಗೆ ಪೂರಕ ಸಂಸ್ಕೃತ ಜ್ಞಾನ ಮತ್ತು ಸಂಸ್ಕೃತ ಶಿಕ್ಷಣ ಎಂಬುದು ನಿರ್ವಿವಾದ. ಈ ಕುರಿತು ಕನ್ನಡ ವಿದ್ವಾಂಸರು, ದೇಶದ ನೇತಾರರು ಹಾಗು ಪಾಶ್ಚಾತ್ಯ ವಿದ್ವಾಂಸರು ಅಲ್ಲಲ್ಲಿ ಕಾಲಾನುಕಾಲಕ್ಕೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಉದಾ;- ಸಂಸ್ಕೃತ ಬಲ್ಲವನೇ ಸುಸಂಸ್ಕೃತ ಎನ್ನುವಷ್ಟರ ಮಟ್ಟಿಗೆ ಆ ಭಾಷೆಯಲ್ಲಿ ಜ್ಞಾನನಿಧಿಯಡಗಿದೆ - ದ.ರಾ.ಬೇಂದ್ರೆ.

ಭಾರತವರ್ಷದ ಸಂಸ್ಕೃತಿಗೆ ಸಂಸ್ಕೃತವು ತಾಯಿಬೇರು. ಇತರ ಭಾಷೆಗಳಿಗೆ ಹೇಗೋ ಹಾಗೆಯೇ ಕನ್ನಡದ ಬೆಳವಣಿಗೆಗೆ ಸಂಸ್ಕೃತವು ಕೇವಲ ಅವಶ್ಯಕ.-ಮಾಸ್ತಿ ವೆಂಕಟೇಶ ಅಯ್ಯಂಗಾರ.

The eduction of any Hindu child is incomplete, unless he has got some knowledge of Sanskrit. — Gandiji. ಇತ್ಯಾದಿ.

ಆದ್ದರಿಂದಲೇ ಭಾರತಸ್ಯ ಪ್ರತಿಷ್ಠೇ ದ್ವೇ, ಸಂಸ್ಕೃತಂ ಸಂಸ್ಕೃತಿಸ್ತಥಾಸಂಸ್ಕೃತ ಭಾಷೆ ಮತ್ತು ಭಾರತೀಯ ಸಂಸ್ಕೃತಿ ಭಾರತದ ಎರಡು ಪ್ರತಿಷ್ಠೆಗಳು ಎಂಬ ಮಾತು ಜನಜನಿತವಾಗಿದೆ.
ಸಂಸ್ಕೃತ ಪಾಣಿನಿಯ ವ್ಯಾಕರಣದಿಂದ ಸಂಸ್ಕಾರಗೊಂಡ ಮೇಲೆ ಇದಕ್ಕೆ ಸಂಸ್ಕೃತ ಎಂಬ ಹೆಸರು ಬಂದಿದ್ದಾಗಿ ತಿಳಿದುಬರುತ್ತದೆ. ವಿಸ್ತೃತವಾದ ವ್ಯಾಕರಣದಿಂದಲೇ ಅತ್ಯಂತ ಕಡಿಮೆ ವಿಕಾರಕ್ಕೊಳಗಾದ ಭಾಷೆ ಎಂಬುದೂ ಅಷ್ಟೆ ಸತ್ಯ.ಇಂದಿನ ಅವಸರದ ಯುಗದಲ್ಲಿ ಈ ವ್ಯಾಕರಣವೇ ಸಂಸ್ಕೃತ ಕಲಿಕೆ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.

ಸಂಸ್ಕೃತಿ ಎಂಬ ಶಬ್ದದ ಅರ್ಥಕೂಡಾ ಬಹುಮುಖವಾದದ್ದು ಮತ್ತು ನಮ್ಮ ಜೀವನಕ್ಕೆ ಬಹುಮುಖ್ಯ ವಾದದ್ದು. ನಿಘಂಟಾಗಲಿ, ವಿಶ್ವಕೋಶವಾಗಲಿ ಪ್ರಾಚೀನ ಸಾಹಿತ್ಯಕೃತಿಗಳಾಗಲಿ ಸಂಸ್ಕೃತಿ ಎಂಬ ಶಬ್ದದ ಅರ್ಥ ವಿವರಣೆಯನ್ನ ಪೂರ್ತಿಯಾಗಿ ನೀಡಿಲ್ಲ. ಬದಲಾಗಿ ಇದಕ್ಕೆ ಸಂವಾದಿಯಾದ ಸಂಸ್ಕಾರ ಎಂಬ ಪದ ನಮ್ಮ ಪೂರ್ವಿಕರ ಪ್ರಯೋಗದಲ್ಲಿದೆ. ಷೋಡಷ ಸಂಸ್ಕಾರ, ಬುದ್ದಿಸಂಸ್ಕಾರ ಇತ್ಯಾದಿಯಾಗಿ. ಈ ಶಬ್ದಕ್ಕೆ ಪರಿಭಾಷೆ ನೀಡುವಾಗ ಸಂಸ್ಕಾರೋ ನಾಮ ಸ ಭವತಿ, ಯಸ್ಮಿನ್ ಜಾತೇ ಪದಾರ್ಥೋ ಭವತಿ ಯೋಗ್ಯಃ ಕಸ್ಯಚಿದರ್ಥಸ್ಯ ಯಾವುದರಿಂದ ಒಂದು ಪದಾರ್ಥಕ್ಕೆ ಅಥವಾ ವ್ಯಕ್ತಿಗೆ ಯೋಗ್ಯತೆ ಅಥವಾ ಅರ್ಹತೆ ಒದಗಿ ಬರುತ್ತದೋ ಅದು ಸಂಸ್ಕಾರ ಎಂದರು. ಇಂತಹ ಒಳ್ಳೆಯ ಸಂಸ್ಕಾರ ಪಡೆದವ ಸುಸಂಸ್ಕೃತ. ಈ ಸುಸಂಸ್ಕೃತನ ಗುಣಸಂಪತ್ತು ಸಂಸ್ಕೃತಿ.
ಸಂಸ್ಕೃತಿ ಎಂಬ ಪದಕ್ಕೆ ಸಮನಾರ್ಥಕ ಪದ ಲ್ಯಾಟಿನ್ ಮೂಲದ ಕಲ್ಟ್ (cult) ಕಲ್ಟಸ್(cultus)
ನಿಂದಾದ ಕಲ್ಚರ್. ಇದು ಕೃಷಿ ಅಥವಾ ಉಳುಮೆ ಎಂಬರ್ಥ ಕೊಡುವ ಭೂವಾಚಕ ಶಬ್ದ (ಅಗ್ರಿಕಲ್ಚರ್, ಹಾರ್ಟಿಕಲ್ಚರ್) ಈ ಅರ್ಥದಿಂದ ನೋಡಿದಾಗ ಸಂಸ್ಕೃತಿ ನಮ್ಮ ಮನಸ್ಸಿನ ಕೃಷಿ, ಬುದ್ಧಿಯ ವ್ಯವಸಾಯ, ಅಂತರಂಗದ ಸಂಸ್ಕಾರ, ಸಾಹಿತ್ಯ, ಸಂಗೀತ, ಶಿಲ್ಪ, ಚಿತ್ರ, ಮೊದಲಾದ ಕಲೆಗಳ ಮೂಲಕ ಉಂಟಾಗುವ ಉತ್ತಮ ಸಂಸ್ಕಾರವೇ ಕಲ್ಚರ್ ಅಥವಾ ಸಂಸ್ಕೃತಿ. ಒಬ್ಬ ವ್ಯಕ್ತಿಗೆ, ಸಮಾಜಕ್ಕೆ ಒಂದು ಸಂಸ್ಕೃತಿ ಇರುವಂತೆ, ದೇಶಕ್ಕೂ ಒಂದು ಸಂಸ್ಕೃತಿ ಇರುತ್ತದೆ. ಭಾರತಕ್ಕೆ ಅಂತಹ ಸಂಸ್ಕೃತಿಯನ್ನು ಒದಗಿಸಿದ ಭಾಷೆ ಸಂಸ್ಕೃತ. ಈ ಸಂಸ್ಕೃತಿಯನ್ನು ಉಳಿಸಿ ಬಳಸಿ ಬೆಳೆಸಬೇಕಾದರೆ ಅದರ ಕುರಿತು ಸರಿಯಾದ ಅರಿವು ಬೇಕು. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ಸಂಸ್ಕೃತದ ಹೂರಣದ ಕುರಿತು ಸ್ವಲ್ಪ ಮಾಹಿತಿ.

ಸಂಸ್ಕೃತ ಎಂದೊಡನೆ ದೇವರ ಪೂಜೆ, ಯಜ್ಞ ಹವನಗಳಿಗೆ ಬೇಕಾದ ಮಂತ್ರದ ಭಾಷೆಯೆಂದೋ, ಕಾಳಿದಾಸ ಭಾಸಾದಿಗಳ ಸಾಹಿತ್ಯದ ಭಾಷೆಯೆಂದೋ ಅಥವಾ ದೇವ ಭಾಷೆಯೆಂದೊ ಭಾವಿಸುವ ಪರಿ ಸಾಮಾನ್ಯವಾಗಿ ಕಾಣುತ್ತೇವೆ. ಸಂಸ್ಕೃತದಲಿ ಗಣಿತ, ಖಗೋಲ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ಶಾಸ್ತ್ರ ಹಾಗು ಪ್ರಕೃತಿ ವಿಜ್ಞಾನದೊಂದಿಗೆ ಸಾಮರಸ್ಯದ ಬದುಕಿಗೆ ಬೇಕಾದ ವಿಚಾರದ ಧಾರ್ಮಿಕೇತರ ಸಾಹಿತ್ಯವು ಸಾಕಷ್ಟಿವೆ.

ವಸುಧೈವ ಕುಟುಂಬಕಂ ಎಂಬ ಭಾವವನ್ನ ನಿಜವಾದ ಅರ್ಥದಲ್ಲಿ ಬೆಳೆಸುವ ಈ ಭಾಷೆಯ ಅಧ್ಯಯನ, ಅಧ್ಯಾಪನ ಹಾಗು ಸಂಶೋಧನೆಗಳು ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಪ್ರಾರಂಭವಾಗುತ್ತಿದೆ. ಇತ್ತೀಚಿನ ಕೆಲವು ವಿಶ್ವ ಸಂಸ್ಕೃತ ಸಮ್ಮೇಳನಗಳು ಟೊರಿನೋ, ಪ್ಯಾರಿಸ್, ಫಿಲಿಡಲ್ಫಿಯಾ, ಲೈಡನ್, ವಿಯನ್ನ ಗಳಲ್ಲಿ ನಡೆದಾಗ ಅಲ್ಲಿ ಭಾರತೀಯ ವಿದ್ವಾಂಸರಿಗಿಂತ ವಿದೇಶಿ ವಿದ್ವಾಂಸರೇ ಹೆಚ್ಚಿದ್ದದ್ದು ಅದಕ್ಕೊಂದು ಉದಾಹರಣೆ. ಆದರೆ ಸಂಸ್ಕೃತದ ಜನ್ಮಭೂಮಿಯಾದ ಭಾರತದಲ್ಲಿ ಜಾತಿ, ಮತ, ಓಟ್ ಬ್ಯಾಂಕ್ ಹಾಗು ರಾಜಕೀಯ ಒತ್ತಡಗಳ ಕಾರಣದಿಂದ ಸಿಗಬೇಕಾದ ಪ್ರಾಶಸ್ತ್ಯ ಸಿಗದಿರುವುದು ಬೇಸರದ ಸಂಗತಿ.

ಇಂದಿನ ವೈಜ್ಞಾನಿಕ ಯುಗಕ್ಕೂ ಉಪಯುಕ್ತವೆನಿಸುವ ಗ್ರಂಥಗಳು ಸಂಸ್ಕೃತದಲ್ಲಿವೆ. ರಾಮಾಯಣ, ಮಹಾಭಾರತಗಳು ಜಾಗತಿಕ ಸಾಹಿತ್ಯದಲ್ಲಿ ಮುನ್ನಡೆ ಪಡೆದ ಮೇರುಕೃತಿಗಳು. ಭUವದ್ಗೀತೆ ಧಾರ್ಮಿಕ ಅಂಶದೊಂದಿಗೆ ಇಂದಿನ ಕಾರ್ಯನಿರ್ವಹಣಾ ಕೌಶಲ್ಯವನ್ನು ತಿಳಿಸುತ್ತದೆ. ಪಾಣಿನಿ, ಪತಂಜಲಿಯಂತಹ ಭಾಷಾವಿಜ್ಞಾನಿಗಳು ಜಗತ್ತಿನಲ್ಲಿ ಬೇರಿಲ್ಲ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ದೇವಲಸ್ಮೃತಿಗಳು ಧರ್ಮದ ಜೊತೆಗೆ ಸಮಯೋಚಿತ ಪರಿವರ್ತನೆಯಬಗೆಗೆ ಭಾರತೀಯರ ಕಾಳಜಿಗೆ ಸಾಕ್ಷಿ. ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕಿ ನೀತಿಶಾಸ್ತ್ರಗಳು ರಾಜಕೀಯ, ಆಡಳಿತ, ಕಲೆ, ಸಂಸ್ಕೃತಿಗಳಿಗೆ ಮಾರ್ಗದರ್ಶಕ. ವಾಸ್ಸ್ಯಾಯನನ ಕಾಮಸೂತ್ರಕ್ಕೆ ಸರಿಯಾದ ವೈಜ್ಞಾನಿಕ ಕಾಮಶಾಸ್ತ್ರ ಇನ್ನೊಂದಿಲ್ಲ. ಕಾವ್ಯನಾಟಕಾದಿಗಳಲ್ಲಿ ಭರತನ ನಾಟ್ಯಶಾಸ್ತ್ರ, ಕಾಳಿದಾಸ, ಭಾಸ, ಭವಬೂತಿ ಮುಂತಾದವರ ಸಾಹಿತ್ಯ ಕೃತಿಗಳು ಗಮನಾರ್ಹ. ಪಂಚತಂತ್ರ, ಹಿತೋಪದೇಶಗಳಂತಹ ಶಿಶುಸಾಹಿತ್ಯಗಳು ಅನ್ಯತ್ರ ದುರ್ಲಭ.

ವೈಜ್ಞಾನಿಕ ತಳಹದಿ ಹೊಂದಿದ ಈ ಭಾಷೆಯ ಶಬ್ದ ಸಂಪತ್ತು, ವ್ಯಾಕರಣ ತೀರಾ ವಿಶಿಷ್ಟವಾದದ್ದು. ಇಡೀ ಶಬ್ದಕೋಶವನ್ನ ಕಂಠಪಾಠ ಮಾಡುವ ವ್ಯವಸ್ಥೆ ಸಂಸ್ಕೃತದಲ್ಲಿದೆ. ವ್ಯಾಕರಣದಲ್ಲಿ ಸ್ವರ, ವ್ಯಂಜನ, ಅನುನಾಸಿಕ, ಅನುಸ್ವಾರ ಮತ್ತು ವಿಸರ್ಗಗಳ ಉತ್ಪತ್ತಿ ಸ್ಥಾನ ಮತ್ತು ಉಚ್ಚರಿಸಲು ಮಾಡಬೇಕದ ಪ್ರಯತ್ನವನ್ನು ಕ್ರಿಸ್ತಪೂರ್ವ ದಲ್ಲಿಯೇ ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿ ನಿಖರವಾಗಿ ಹೇಳಿದ್ದಾನೆ. ಇದು ಉಚ್ಚಾರದೋಷ ನಿವಾರಣೆಗೆ ಅತ್ಯಂತ ಸಹಾಯಕ. ವೈಜ್ಞಾನಿಕ ಕ್ರಮಾನುಸಾರ ಭಾಷೆಯೊಂದರ ಒಂದು ರೀತಿಯ ರಾಸಾಯನಿಕ ವಿಶ್ಲೇಷಣೆ ಯನ್ನ ನಾವಿಲ್ಲಿ ಕಾಣುತ್ತೆವೆ.
ಭಾರತದ ವೈಜ್ಞಾನಿಕ ಇತಿಹಾಸದಲ್ಲಿ ಅಗ್ರಸ್ಥಾನ ವರಹಾಮಿಹಿರನದು. ಸೂರ್ಯ ನಮ್ಮ ಗ್ರಹಮಾಲೆಯ ಮತ್ತು ಚರಾಚರಸೃಷ್ಟಿಯ ಆಧಾರ ಎಂಬ ವೈಜ್ಞಾನಿಕ ಸಿದ್ಧಾಂತವನ್ನು ಕೋಪರ್ನಿಕಸ್‌ಗಿಂತ ಸಾವಿರಾರು ವರ್ಷ ಮೊದಲೇ ಪ್ರತಿಪಾದಿಸಿದಾತ. ಅವನ ಬೃಹತ್ ಸಂಹಿತೆಯು ಖಗೋಳ, ಸಸ್ಯ, ಪ್ರಾಣಿ, ಕೃಷಿ, ರಸಾಯನ, ಭೂಗೋಳ, ಛಂದಸ್ಸು, ಶಿಲ್ಪ, ಶರೀರ, ಔಷಧ, ಮನಃಶಾಸ್ತ್ರಾದಿ ಸಕಲ ವಿದ್ಯೆಗಳನ್ನೊಳಗೊಂಡ ಒಂದು ವಿಶ್ವಕೋಶ. ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ ಎಂಬ ಮಂತ್ರ ಇದನ್ನೇ ದೃಢೀಕರಿಸುತ್ತದೆ. ಖಗೋಳಶಾಸ್ತ್ರಜ್ಞರು ಆಕಾಶಗಂಗೆಯ ಪರಿಘವಾಗಿಯೂ ಸೌರಮಾಲೆಯ ಕೇಂದ್ರವಾಗಿ ಇರುವುದು ಒಂದು ಗೆಲೆಕ್ಸಿ. ಇಂತಹ ಅಸಂಖ್ಯಾತ ಗೆಕ್ಸಿಗಳಿವೆ ಎಂದಿರುವುದನ್ನು ಹಿಂದೆಯೆ ಅನೇಕ ಕೋಟಿ ಬ್ರಹ್ಮಾಂಡ ಭಗವಂತ ಇದರ ನಾಯಕ ಎಂದ ಹಿರಿಯರು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳನ್ನು ನಿಖರವಾಗಿ ಹೇಳುತ್ತಾ ಬಂದಿರುವುದು ಸಂಸ್ಕೃತದಲ್ಲಿರುವ ಖಗೋಳಜ್ಞಾನದ ಹರಹನ್ನು ತಿಳಿಸುತ್ತದೆ.

ವಿಜ್ಞಾನದ ಮೂಲವಾದ ಗಣಿತದ ಬೆಳವಣಿಗೆಗೆ ಸಂಸ್ಕೃತದ ಕೊಡುಗೆ ಅಪಾರವಾದದ್ದು. ಇಂದು ಪ್ರಪಂಚದಲ್ಲಿ ಉಪಯೋಗಿಸುವ ಅಂಕಿಗಳು (೧,೨,೩) ಹಾಗು ಶೂನ್ಯ (೦),ದಶಮಾನ ಪದ್ದತಿ ಭಾರತೀಯರ ಅನ್ವೇಷಣೆ. ಈ ಪದ್ದತಿ ಅರಬರ ಮೂಲಕ ಯೂರೋಪ್ ತಲುಪಿದ್ದರಿಂದ ಅದನ್ನು ಅರೇಬಿಯ ಪದ್ದತಿ ಎನ್ನುತ್ತಾರೆ. ಈ ದಿಸೆಯಲ್ಲಿ ಖ್ಯಾತ ಗಣಿತ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟ, ಬ್ರಹ್ಮಸ್ಪುಟ ಸಿದ್ದಾಂತ ದ ಬ್ರಹ್ಮಗುಪ್ತ, ಲೀಲಾವತಿ ಮತ್ತು ಬೀಜಗಣಿತದ ಕೊಡುಗೆಯಿತ್ತ ಭಾಸ್ಕರಾಚಾರ್ಯ, ಸಮಕೋನ, ವೃತ್ತ ಮತ್ತು ಚತುರ್ಭುಜಗಳ ವಿವರಣೆ ನೀಡುವ ಶುಲ್ಪ ಸೂತ್ರ ಗಳನ್ನು ಗಮನಿಸಲೇ ಬೇಕು.

ವೇzಗಳ ಮೂಲವುಳ್ಳ ಆಯುರ್ವೇದ, ಯುದ್ದದಲ್ಲಿ ಕತ್ತರಿಸಿಹೋದ ಅವಯವಗಳನ್ನು ಪುನ: ಜೋಡಿಸುವ ಪ್ಲಾಸ್ಟಿಕ್ ಸರ್ಜರಿಯಂತಹ ಶಸ್ತ್ರಚಿಕಿತ್ಸೆಯ ಜೊತೆಗೆ ದೇಹ ಮತ್ತು ಮನ:ಸ್ವಾಸ್ಥ್ಯದೊಂದಿಗೆ ಆರೋಗ್ಯಪೂರ್ಣ ಸಾಮಾಜಿಕ ಬೆಳವಣಿಗೆಗೆ ಬೇಕಾದ ವ್ಯಕ್ತಿಗತ ವಿವರಗಳನ್ನು ನೀಡುವ ಚರಕ,ಸುಶ್ರುತ, ಹಾಗು ವಾಗ್ಭಟರ ಗ್ರಂಥಗಳಾಗಲಿ, ಪತಂಜಲಿಯ ಯೋಗ ಸೂತ್ರಗಳಾಗಲಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸರ್ವರೂ ಗಮನಿಸಬೇಕಾದ ಗ್ರಂಥಗಳು.

ಸಸ್ಯಶಾಸ್ತ್ರ ಮತ್ತು ಕೃಷಿವಿಜ್ಞಾನದ ಕುರಿತು ಪರಾಶರ ಮುನಿಗಳು ಬರೆದಿರುವ ಗ್ರಂಥಗಳು ಧಾರಾಳ ಇವೆ. ಅಗ್ನಿಪುರಾಣ ಮತ್ತು ಬೃಹತ್ಸಂಹಿತೆಯಲ್ಲಿ ವೃಕ್ಷಾಯುರ್ವೇದದ ಅಮುಲ್ಯ ವಿವರಗಳಿವೆ. ಮಾನಸಾರ, ಕಶ್ಯಪ ಶಿಲ್ಪಂ, ಪ್ರತಿಮಾಲಕ್ಷಣ, ಮಯಮಿತಂ, ಸಮರಾಂಗಣ ಸೂತ್ರಧಾರ ಇವೆಲ್ಲ ಬಗೆಬಗೆಯ ಕಟ್ಟಡಗಳು, ದೇವಸ್ಥಾನಗಳು, ಗ್ರಾಮ ಮತ್ತು ನಗರಗಳ ವಿನ್ಯಾಸಗಳ ತಾಂತ್ರಿಕತೆ ಮತ್ತು ಶಿಲ್ಪ ವೈಭವವನ್ನು ಕುರಿತು ವಿವರಿಸುತ್ತವೆ. ಅಭಿಲಷಿತಾರ್ಥ ಚಿಂತಾಮಣಿ, ತಿಲಕ ಮಂಜರಿ ಚಿತ್ರಕಲೆಯನ್ನು ತಿಳಿಸುತ್ತವೆ. ಶಾರ್ಙದೇವನ ಸಂಗೀತ ರತ್ನಾಕರ, ದಾಮೋದರನ ಸಂಗೀತ ದರ್ಪಣ, ಹರಪಾಲನ ಸಂಗೀತ ಸುಧಾ ಮೊದಲಾದವು ಸಂಗೀತ ಶಾಸ್ತ್ರದ ಪ್ರಸಿದ್ದ ಗ್ರಂಥಗಳು. ನಾರಾಯಣ ಪಂಡಿತನ ನವರತ್ನಪರೀಕ್ಷಾ ಪ್ರತಿಯೊಂದು ರತ್ನದ ಮೂಲಸ್ಥಾನ, ಅಪ್ಪಟತನ, ಬೆಲೆ, ಬಣ್ಣ ಮೊದಲಾದವನ್ನ ನಿರ್ಧರಿಸಲು ಬೇಕಾದ ಮಾಹಿತಿ ನೀಡುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರವು ಸಮಾಜಶಾಸ್ತ್ರ ಹಾಗು ರಾಜಕೀಯ ಶಾಸ್ತ್ರಗಳನ್ನೊಳಗೊಂಡ ಒಂದು ಮೇರು ಕೃತಿ. ಇವುಗಳ ಜೊತೆಗೆ ರಸಾಯನ ಶಾಸ್ತ್ರ, ಭೌತಶಾಸ್ತ್ರ, ಆಗಮಶಾಸ್ತ್ರ, ತಂತ್ರಶಾಸ್ತ್ರ ಮುಂತಾದ ವಿಜ್ಞಾನದ ಬೇರೆ ಬೇರೆ ಕವಲುಗಳಿಗೆ ಸಂಬಂಧಪಟ್ಟ ಗ್ರಂಥಗಳೂ ಸಂಸ್ಕೃತದಲ್ಲಿ ಹೇರಳವಾಗಿವೆ.

ಇಂತಹ ಒಂದು ಸಮೃದ್ಧ ಭಾಷೆ ಇಡೀ ಜಗತ್ತಿಗೇ ಪಸರಿಸಬೇಕಾದದ್ದು ಕೇವಲ ನಿರ್ಧಿಷ್ಟ ಜಾತಿ ಮತ್ತು ವೃತ್ತಿಗೆ ಸೀಮಿತವಾಗಿ ಪೌರೋಹಿತ್ಯ ಮತ್ತು ಪ್ರವಚನಗಳಿಗೆ ಮಾತ್ರ ಮಿತಿಗೊಂಡಿದೆ. ಕೇಂದ್ರ ಸರಕಾರ ಪಾರಂಪರಿಕ ಭಾಷೆ ಎಂಬ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ್ದರೂ ಮೃತಭಾಷೆ ಎಂಬ ಹಣೆಪಟ್ಟಿ ತೆಗೆಯಲು ಸಾಧ್ಯವಾಗಿಲ್ಲ. ಸಂಸ್ಕೃತಕ್ಕೆ ಎರಡನೆ ತವರುಮನೆಯಾದ ಜರ್ಮನಿಯಂತಹ ಪಾಶ್ಚಾತ್ಯ ದೇಶ ಈ ಭಾಷೆಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡಿದ್ದರೂ, ಕಂಪ್ಯೂಟರ್‌ಗೆ ಸೂಕ್ತಭಾಷೆ ಎಂಬ ಹೆಗ್ಗಳಿಕೆಯಿದ್ದರೂ ಭಾಷೆಯ ಬಗೆಗಿನ ಅಭಿಮಾನವನ್ನು ನಾವು ಕೇವಲ ಮೌಖಿಕವಾಗಿಯಷ್ಟೇ ವ್ಯಕ್ತಪಡಿಸುತ್ತಿದ್ದೆವೆ.

ಈ ಭಾಷೆಯಲ್ಲಿನ ಸತ್ವ ಜನೋಪಯೋಗಿಯಾಗಬೇಕಾದರೆ ಸರಳ ವಿಧದ ಕಲಿಕೆಯೊಂದಿಗೆ ಸಂಸ್ಕೃತ ಅಧ್ಯಯನ ಪ್ರಾಥಮಿಕ ಹಂತದಿಂದಲೇ ಪ್ರಾರಂಭವಾಗಬೇಕು. ಭಾಷೆಯ ಸಾಧ್ಯತೆ ವಿಸ್ತರಿಸಬೇಕು. ಸಾಕಷ್ಟು ಉದ್ಯೋಗಾವಕಾಶಗಳು ಹೆಚ್ಚಬೇಕು. ವ್ಯವಹಾರದಲ್ಲಿ ಬಳಕೆಯಾಗದ ಭಾಷೆಗಳಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಕಷ್ಟ. ಹಾಗಾಗಿ ಹೆಚ್ಚು ಹೆಚ್ಚು ವ್ಯವಹಾರದಲ್ಲಿ ಬಳಕೆಯಾಗಬೇಕು. ಯಾವುದೇ ಕ್ಷೇತ್ರದ ಅಧ್ಯಯನಕ್ಕೆ ಸಮರ್ಥವಾದ ಈ ಭಾಷೆಯನ್ನು ಬಳಸಿಕೊಂಡು ಬದುಕಿಗೆ ಬೇಕಾದ ಕ್ಷೇತ್ರವನ್ನು ಆಯ್ದುಕೊಳ್ಳುವ ಅವಕಾಶ ಸೃಷ್ಟಿಯಾಗಬೇಕು.ಸಂಸ್ಕೃತ ಮತ್ತು ಇತರ ವಿಭಾಗಗಳ ಅಂತರ್‌ವಿಷಯ ಅಧ್ಯಯನ ಕ್ರಮ (Inter disciplinary studies) ಸಂಸ್ಕೃತ ಕಲಿಯ ಬೇಕೆಂಬ ವಾತಾವರಣ ಸರಕಾರದಿಂದ ಸೃಷ್ಟಿ, ವೃತ್ತಿಯಾಧಾರಿತ ಉದ್ಯೋಗ ಕೈಗೊಳ್ಳಲು ಸಂಸ್ಕೃತ ಅಧ್ಯಯನ ಮಾಡಿದವರಿಗೆ ಹೆಚ್ಚಿನ ಅವಕಾಶಗಳು, ಭಾಷೆಯ ಬಗೆಗಿನ ಮಡಿವಂತಿಕೆ ದೂರವಾಗಿ ಬಳಸುವವರಿಗೆ ಅನಿರ್ಬಂಧಿತ ಪ್ರೋತ್ಸಾಹ ದೊರೆಯಬೇಕು.

ಸರಳ ಸಂಸ್ಕೃತ ಪ್ರಚಾರ ಮತ್ತು ಬೆಳವಣಿಗೆಗೆ ಸಂಸ್ಕೃತ ಭಾರತಿ ಸಾಕಷ್ಟು ಕೆಲಸ ಮಾಡುತ್ತಿದೆ. ಅದಕ್ಕೆ ಸರಕಾರದ ಹೆಚ್ಚಿನ ಬೆಂಬಲವೂ ದೊರೆಯಬೇಕು. ಹಾಗಾದಾಗ ನಮ್ಮ ದೃಷ್ಟಿಕೋನ ಬದಲಿಸಬಲ್ಲ ಅಪೂರ್ವ ಶಕ್ತಿಯಿರುವ, ಯೋಚನೆ, ಭಾವನೆ, ಹೃದಯ, ಮನಸ್ಸು ಎಲ್ಲ ಒಂದಾಗಲಿ ಎಂಬ ಆಶಯವಿರುವ ಸಂಸ್ಕೃತ ಭಾಷೆಯ ಪುನರುತ್ಥಾನವಾಗಿ ಜಗತ್ತು ಲವಲವಿಕೆಯಿಂದ ಕೂಡಿದ ಒಂದು ಹಕ್ಕಿಯ ಗೂಡಾಗುವುದರಲ್ಲಿ ಸಂಶಯವಿಲ್ಲ.

----ಶುಭಂ ಭವತು----

ಮಂಜುನಾಥ ಭಟ್, ಕುಕ್ಕೆಸುಬ್ರಹ್ಮಣ್ಯ

06 ಡಿಸೆಂಬರ್ 2008

ನಾವೆಷ್ಟು ಮುಂದುವರಿಯಬೇಕಿದೆ ..?




ಹದ್ದಿನ ಕಣ್ಣು ಅಂತ ನಾವು ಮೊನ್ನೆ ಮೊನ್ನೆಯವರೆಗೆ ಹೇಳಿಕೊಂಡು ಬಂದಿದ್ದೆವು.ಈಗ ನೋಡಿದರೆ ಹದ್ದೇ ನಮ್ಮ ದೇಶದ ಮೇಲೆ ಕಣ್ಣಿಟ್ಟ ಸುದ್ದಿ ಬಯಲಾಗಿದೆ.ಇದೇನು ಅಂತ ವಿವರಿಸಬೇಕಾಗಿಲ್ಲ. ಮೊನ್ನೆ ಕಾಶ್ಮೀರದಲ್ಲಿ ಹದ್ದೊಂದನ್ನು ನಮ್ಮ ಸೈನಿಕ ಬಳಗವು ಹಿಡಿದಾಗ ಅದರ ರೆಕ್ಕೆಯಲ್ಲಿ ಟ್ರಾನ್ಸ್ ಮಿಟರ್ ಅಳವಡಿಕೆಯಾದದ್ದು ತಿಳಿದಿದೆ.ಈ ಹಿಂದೆಯೂ ಇಂತಹ ಒಂದು ಸಂಗತಿ ಬೆಳಕಿಗೆ ಬಂದಿತ್ತು.ಆದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇಗ ಮಾತ್ರಾ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಅತ್ತ ಪಾಕ್ ನಿಂದ ಛೂ.... ಬಿಡುತ್ತಿರುವ ಭಯೋತ್ಪಾದನೆಯ ವಿಷ ಬೀಜ. ಇಲ್ಲಿ ಮತಾಂಧತೆಯ ಬಹುದೊಡ್ಡ ಹಾಸಿಗೆಯಿದೆ. ಇವುಗಳೆಲ್ಲದರ ನಡುವೆ ನಮ್ಮ ಹೆಮ್ಮೆಯ ಯೋಧರು ಹೋರಾಡಬೆಕಾದ ಅನಿವಾರ್ಯತೆಯಿದೆ. ಇದರೊಂದಿಗೆ ನಮ್ಮ ಆತಂರಿವಾಗಿ ನಡೆಯುವ ರಾಜಕೀಯದ ಭಯೋತ್ಪಾದಕರ ಕಾಟವು ನಿರಂತರವಿದೆ. ಹೀಗೆ ಸವಾಲುಗಳ ನಡುವೆ ಇರುವ ಭಾರತದಲ್ಲಿ ಈಗ ಹದ್ದುಗಳ ಮೂಲಕವೂ ಪಾಕ್ ಅಥವಾ ಉಗ್ರ ಸಂಘಟನೆಗಳು ಮಾಹಿತಿಯನ್ನು ಕಲೆಹಾಕುವ ಯತ್ನ ನಡೆಸುತ್ತಿವೆ ಎಂದರೆ ತಪ್ಪಾಗದು. ಆದುದರಿಂದ ಈ ದೇಶಕ್ಕೆ ಇನ್ನೂ ಭದ್ರತೆ ಬೇಕು. ಪ್ರತಿಯೊಬ್ಬನೂ ಕೂಡಾ ತನ್ನ ಭದ್ರತೆಯ ಬಗ್ಗೆ ಯೋಚಿಸದೆ ನಮ್ಮ ಮನೆಯ ಬಗ್ಗೆ ಚಿಂತಿಸಬೆಕಾದ ಅನಿವಾರ್ಯತೆಯಿದೆ. ಆದರೆ ನಮ್ಮ ರಾಜಕಾರಣಿಗಳ ಮನಸ್ಥಿತಿ ನೋಡಿದರೆ ಅಸಹ್ಯವೆನಿಸುತ್ತದೆ. " ನಮಗೆ ಭದ್ರತೆ ಕೊಡಿ" ಅಂತ ದುಂಬಾಲು ಬೀಳುತ್ತಾರಲ್ಲಾ. ಇತ್ತ ದೇಶಕ್ಕೆ ದೇಶವೇ ನಲುಗುತ್ತಿದೆ. ಭದ್ರತೆ ಸಾಕಾಗುವುದೇ ಇಲ್ಲ. ಕಟ್ಟೆಚ್ಚರ ವಹಿಸಿದಷ್ಟು ಕಣ್ಣು ತಪ್ಪಿಸುವ ಚತುರರಿದ್ದಾರೆ. ಆದರೆ ರಾಜಕಾರಣಿಗಳಿಗೆ ಚಿಂತೆ ಅವರದ್ದು ಮತ್ತು ಓಟಿನ ಲೆಕ್ಕ ಮಾತ್ರಾ.ಎಂತಹ ದುರಂತ ನಮ್ಮದು. ಅಂತಹ ರಾಜಕಾರಣಿಗಳಿಲ್ಲದೆ ಈ ದೇಶ ಬದುಕಬಲ್ಲದು. ಒಂದರ್ಥದಲ್ಲಿ ದೇಶ ಇನ್ನಷ್ಟು ಬಲಿಷ್ಠವೂ ಆದೀತು , ಸರ್ವಶಕ್ತವು ಆದೀತು. ಅಂತಹ ನಾಯಕರಿಲ್ಲದೆ ದೇಶವನ್ನು ಆಳುವ ಜನರು ಇದ್ದಾರೆ. ಮನೆಗೆ ಬೆಂಕಿ ಬಿದ್ದಾಗ ಹಾಸಿಗೆಯನ್ನು ರಕ್ಷಿಸಲು ಹೊರಟಂತೆ ನಮ್ಮ ನಾಯಕರು ಇಂದು ಹದ್ದುಗಳ ಮೂಲಕವೂ ಟ್ರಾನ್ಸ್ ಮಿಟರ್ ನಲ್ಲಿ ಇಲ್ಲಿನ ವ್ಯವಸ್ಥೆಗಳನ್ನು ಗಮನಿಸುವ ಹಂತಕ್ಕೆ ಬಂದು ನಿಂತಿದ್ದಾರೆ. ಆದರೆ ಅದೆಲ್ಲವನ್ನೂ ತಿಳಿಯದ ಅರಿಯದ ತಿಳಿಗೇಡಿ ನಾಯಕರು ಕಪಟ ರಾಜಕಾರಣಿಗಳು ತಮ್ಮ ಬಗ್ಗೆಯೆ ಚಿಂತಿಸುತ್ತಾರಲ್ಲಾ. ಅಲ್ಲಲ್ಲಿ ರಾಜಕೀಯ ಮಾಡುತ್ತಾರಲ್ಲಾ .. ಮನಸ್ಸು ರೋಷದಿಂದ ಕುದಿಯುತ್ತದೆ. ಆದರೆ ಏನು ಮಾಡೋಣ ... ಏನೂ ಮಾಡುವ ಹಾಗಿಲ್ಲ..... ಎನ್ನುವ ಬೇಸರವಿದೆ.

ಇಂದು ನಮ್ಮ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಬಹುತೇಕ ಎಲ್ಲಾ ನಾಯಕರು [ಕೆಲವರನ್ನು ಬಿಟ್ಟು] ಇಲ್ಲಿನ ಆಂತರಿಕ ಭದ್ರತೆ ಯ ಬಗ್ಗೆಯಾಗಲಿ ಅದೆಷ್ಟೋ ಅಮಾಯಕರು ಪ್ರತಿದಿನ ಬಾಂಬ್ ಸ್ಫೋಟದಲ್ಲಿ ಬದುಕು ಕಳಕೊಳ್ಳುವವರ ಬಗ್ಗೆಯಾಗಲಿ. ಜೀವದ ಹಂಗು ತೊರೆದು ದೇಶವನ್ನೇ ಕಾಪಾಡುವ ಯೋಧರ ಬಗ್ಗೆಯಾಗಲಿ ಇವರು ಒಂದು ಕ್ಷಣ ಚಿಂತಿಸಿದ್ದಾರಾ.? ಏನಿದ್ದರೂ ಓಟಿನ ಬೇಟೆ .. ಹಣದ ಹೊಳೆಯ ಬಗ್ಗೆಯೇ ಚಿಂತೆ. ಇನ್ನು ಚುನಾವಣೆ ಹತ್ತಿರ ಬಂತು. ಮೊನ್ನೆಯ ಸ್ಫೋಟಕ್ಕೆ ಬೇರೊಬ್ಬ ರಾಜಕಾರಣಿಯ ತಲೆದಂಡದ ಮೂಲಕ ಇಡೀ ಪ್ರಕರಣಕ್ಕೆ ತೆರೆ ಎಳೆಯುವ ಯತ್ನ ಮಾಡಿ ಮತ್ತೆ ಓಟನ್ನು ಪಡೆಯುವ ಹಪಾಹಪಿ ಇವರಿಗಿದೆಯಲ್ಲಾ... ... ಇವರು ಒಂದು ಕ್ಷಣವಾದರೂ ನಮ್ಮ ಯೋಧರಿಗೆ ಅತ್ಯುತ್ತಮವಾದ ಸಲಕರಣೆಗಳ ಒದಗಣೆಯ ಚಿಂತನೆ ಮಾಡಿದ್ದಾರೆ... ಅಲ್ಲಿ ಪಾಕ್ ನಿಂದ ಹದ್ದಿನ ಮೂಲಕವೂ ಇಲ್ಲಿನ ವಿಚಾರಗಳನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಏನಿಲ್ಲವೆಂದರೂ ೩ ರಿಂದ ೫ ಲಕ್ಷ ಖರ್ಚಾಗಬಹುದಾಗಿದೆ. ಇಂತಹ ಎಷ್ಟು ಹದ್ದುಗಳು ದೇಶದೊಳಕ್ಕೆ ಬಂದಿದೆಯೋ ಭಗವಂತನೆನ್ನುವ ಭಗವಂತನೇ ಬಲ್ಲ. ಇದುವರೆಗೆ ಉಗ್ರರ ನುಸುಳುವಿಕೆಯ ಬಗ್ಗೆ ಮಾತ್ರಾ ಎಚ್ಚರ ವಹಿಸಬೇಕಾಗಿದ್ದ ಯೋಧರು ಈಗ ಹದ್ದುಗಳು , ಹಕ್ಕಿಗಳ ಬಗ್ಗೆಯೂ ಎಚ್ಚರ ವಹಿಸಬೇಕು. ಇಂತಹ ಹಲವಾರು ಸಮಸ್ಯೆಗಳು ಅನುದಿನವೂ ಎದುರಾಗುತ್ತಲೇ ಇದೆ. ಅದಕ್ಕೆಲ್ಲಾ ಪರಿಹಾರವನ್ನು ರಾಜಕಾರಣಿಗಳು ಮಾಡಬೇಕೆನ್ನುವ ಪರಿಜ್ಞಾನವನ್ನು ಬೆಳೆಸಿಕೊಳ್ಳಲಿ.

ಇನ್ನು ಇದಕ್ಕೆ ಹೊರತಾಗಿ ಹೇಳುವುದಾದರೆ ನಮ್ಮ ಪೊಲೀಸ್ ವ್ಯವಸ್ಥೆ. ಇದು ನಮ್ಮ ರಾಜಕಾರಣಿಗಳ ತರನೇ ಇರುವ ಇನ್ನೊಂದು ವ್ಯವಸ್ಥೆ. ಚಿಕ್ಕ ಪುಟ್ಟ ಕಳ್ಳರನ್ನು ಹಿಡಿಯುವುದಕ್ಕೆ ಸೀಮಿತವೋ ಏನೋ. ಅವರಿಗೂ ಅಧಿಕಾರವಿಲ್ಲ. ಕೈಯಲ್ಲಿ ಗನ್ನು ಇದ್ದರೂ ಸುಮ್ಮನೆ ಅದು ಬೆದರುಗೊಂಬೆ.. ಕೆಲವು ಪೊಲೀಸರಿಗೆ ಪೊಲೀಸ್ ಎಂಬ ಅಹಂ ಬೇರೆ. ಅವರನ್ನು ಬಿಟ್ಟವರು ಬೇರೆ ಇಲ್ಲ ಎನ್ನುವ ದರ್ಪ. ಮಾತನಾಡಿದರೆ ಏರು ಸ್ವರವೇ. ಸೌಜನ್ಯದ ಪದವೇ ಅವರ ಡಿಕ್ಚನರಿಯಲ್ಲಿ ಇಲ್ಲ.ಖಾಕಿ ತೊಟ್ಟ ತಕ್ಷಣ ಅದರಲ್ಲೇನೋ ಇದೆ ಎನ್ನುವ ಮೆಂಟಾಲಿಟಿ. ಏಕೆಂದರೆ ನನಗೂ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ನಿಂದ ಅನುಭವವೊಂದು ಆಗಿತ್ತು. ಹಾಗೆಂದು ಎಲ್ಲರಿಗೂ ಆ ಪಟ್ಟ ಕಟ್ಟಲಾಗುವುದಿಲ್ಲ. ಹಾಗೆ ಅಹಂ ಇರುವ ಪೊಲೀಸರಿಂದಲೇ ಅನೇಕ ಘಟನೆಗಳು ಹಿಡಿಯಲಾಗುವುದಿಲ್ಲ. ಎಲ್ಲಾ ಮುಗಿದ ಬಳಿಕ ಆ ಜಾಗಕ್ಕೆ ತೆರಳುತ್ತಾರೆ. ಉದಾಹರಣೆಗೆ ಬಾಂಬ್ ಸ್ಪೋಟಗಳು. ಮೊದಲೆ ಸೂಚನೆ ಇದ್ದಿರುತ್ತದೆ ಆದರೆ ಪೊಲೀಸ್ ನಿಷ್ಕ್ರ್‍ಇಯವಾಗಿರುತ್ತದೆ. ಹಾಗಾಗಿ ಅಂತಹ ಇಲಾಖೆಗಳಿಂದಲೂ ಭದ್ರತೆ ಕನಸಿನ ಮಾತು.ತಮಾಷೆ ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು ಇದುವರೆಗಿನ ಎಲ್ಲಾ ಘಟನೆಗಳನ್ನು ನೋಡಿದರೆ ಅವರ [ಭಯೋತ್ಪಾದಕರ] ಅಂತ್ಯ ನಮ್ಮವರ [ ಪೊಲೀಸರ] ಆರಂಭ. ಅಂದರೆ ಅವರ ಕೆಲಸ ಮುಗಿದು ಸ್ಫೋಟದ ನಂತರ ಪೊಲೀಸರಿಗೆ ಕೆಲಸ ಆರಂಭವಾಗುತ್ತದೆ. ಅದು ಸತ್ಯವೂ ಆಗಿದೆ.

ಇದೆಲ್ಲವನ್ನೂ ಗಮನಿಸಿದಾಗ ನಾವೆಷ್ಟು ಮುಂದುವರಿಯಬೇಕಾಗಿದೆ... ಮುಂದುವರಿಯಲಿದೆ ....?. ಗುರಿ ತಲುಪಬಲ್ಲೆವೇ...??????. ಇಂದಿನ ಈ ಕಾಲಘಟ್ಟದಲ್ಲಿ ಇದು ಸಾಧ್ಯವೇ...??? ಏನೋ ಗೊತ್ತಿಲ್ಲ. ಅಂತೂ ನಮ್ಮ ಯೋಧರಿಗೆ ಎಲ್ಲಾ ಸೌಲಭ್ಯಗಳು ಸಿಗಲಿ... ಬಲಿದಾನವಾದೆ ಹೋರಾಡಿ ದೇಶದ ಗೌರವನ್ನು ಎತ್ತಿ ಹಿಡಿಯಲಿ...

ಜೈ ಜವಾನ್ ....

04 ಡಿಸೆಂಬರ್ 2008

ನಡೆದ ಹಾದಿಯ ನೆನಪು...



ನನ್ನ ಅಜ್ಜಿ ಇತ್ತೀಚೆಗೆ ತೀರಿಕೊಂಡರು.ಅವರಿಗೆ 83 ವರ್ಷ ಪ್ರಾಯವಾಗಿತ್ತು.ಸಾಯುವ ಪ್ರಾಯ ಅಂತ ಹೇಳಲಾಗದು. ಏಕೆಂದರೆ ಅವರು ಸಾಯುವ ಒಂದು ಕ್ಷಣ ಮುಂದೆ ಚೆನ್ನಾಗೇ ಇದ್ದರು. ಆರೋಗ್ಯವಾಗಿಯೇ ಇದ್ದರು. ಆದರೂ ಜವರಾಯ ಅಲ್ಲೆ ಬಂದು ಕಾದುಕುಳಿತಂತಿತ್ತು.

ಇರಲಿ ಸಾವು ನಿಶ್ಚಿತ. ಬದುಕು ಎಂದಾದರೂ ಒಂದು ದಿನ ಸ್ಕೊನೆ ಕಾಣಲೇಬೇಕು. ಇರುವಷ್ಟು ದಿನ ಹೇಗಿರುತ್ತೇವೋ ಅದು ಸ್ನಮ್ಮನ್ನು ಮತ್ತೆ ಜೀವಂತವಾಘಿರುಸುತ್ತದೆ.ಇಲ್ಲವಾದರೆ ಹತ್ತರಲ್ಲಿ ಒಬ್ಬ.ಅಥವಾ ಹನ್ನೊಂದನೆಯ ವ್ಯಕ್ತಿ. ಬದುಕಿನಲ್ಲಿ ಒಂದಿಷ್ಟಾದರೂ ಸೊಳ್ಳೆಯದನ್ನು ಮಾಡಿದರೆ ಜನ ನೆನಪಿಸಿಕೊಳ್ಳುತ್ಟಾರೆ. ಕೇವಲ ಹಣದ ಹಿಂದಿನ ಓಟವಾದರೆ ಉಸಿರು ನಿಂತ ಮೇಲೆ ಅದೆಲ್ಲವೂ ಮಾತಿಗೆ ಬರದು.ಹಾಗಾಗಿ ನಾವು ಇತರರಿಗೆ ಮಾದರಿಯಾಗಿ ಬದುಕ ಬೇಕೆಂದೇನೂ ಇಲ್ಲ ಆದರೆ ಬದುಕಿದ್ದಷ್ಟು ಕಾಲ ಇನ್ನೊಬರಿಗೆ ನೋವನ್ನು ಕೊಡದೆ ಹೀಯಾಳಿಸದೆ, ಅಹಂ ಪ್ರದರ್ಶಿಸದೆ ಬದುಕುವುದು ಮೇಲೆಂದು ನಾನಂದುಕೊಂಡಿದೇನೆ. ಈ ನನ್ನ ಚಿಂತನೆಗೆ ಮಾದರಿ ಎನಿಸಿದವರು ಅಜ್ಜಿ.ಮತ್ತು ಈ ವಿಚಾರದಲ್ಲಿ ನಾನು ಅಜ್ಜಿಯನ್ನು ಗೌರವಿಸುತ್ತಿದ್ದೆ. ಹಾಗಾಗಿ ನನಗೆ ಅಜ್ಜಿ ಸತ್ತಾಗ ತಕ್ಷಣ ಅವರ ವಿಚಾರಗಳು ಮೂದಿಬಂದಿತ್ತು. ಅವರ ಬದುಕಿನ ಹಾದಿ ಹೀಗಿತ್ತು ಅಂತ ಯೋಚಿಸಿದೆ......

ಅಜ್ಜ ಸಾಮಾಜಿಕ ಮುಂದಾಳುತ್ವ ವಹಿಸಿದವರು. ಆಗ ಮನೆಯ ಸ್ಥಿತಿ ಅಷ್ಟು ಚೆನ್ನಾಗಿದ್ದಿರಲಿಲ್ಲವಂತೆ. ಆರ್ಥಿಕವಾಗಿ ನಮ್ಮ ಕುಟುಂಬ ತೀರಾ ಸಂಕಷ್ಟದಲ್ಲಿತ್ತಂತೆ. ಈ ಸಂದರ್ಭದಲ್ಲಿ ಅಜ್ಜನಿಗೆ ಸಾಮಾಜಿಕವಾದ ಕಾರ್ಯದಲ್ಲಿ ಅನಿವಾರ್ಯವಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದಿನಂತೆ ಆಗ ಪ್ರಚಾರದ ಹುಚ್ಚು ಇದ್ದಿರಲಿಲ್ಲ. ಅಂತಹ ಸೇವೆಯಿಂದ ಅದೇನೋ ಮಾನಸಿಕ ನೆಮ್ಮದಿ ಇತ್ತು.ಇತ್ತ ನಮ್ಮದು ಕೃಷಿ ಕುಟುಂಬ. ಒಂದಷ್ಟು ಎಕ್ರೆ ಭೂಮಿ.ಇಲ್ಲಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಅಜ್ಜಿ ನಿಭಾಯಿಸಬೇಕಿತ್ತು. ಆ ಕಾಲದ ದಿನಗಳನ್ನು ಒಮ್ಮೆ ಅಜ್ಜಿ ಹೇಳುತ್ತಿದ್ದರು, ಕೈಯಲ್ಲಿ ಕಾಸಿಲ್ಲ.. ಸ್ವಂತ ದುಡಿಮೆ .., ಹುಲ್ಲಿನ ಹರಕಲು ಮನೆ... ದೂರದ ಊರಿಗೆ ಕಾಲ್ನಡಿಗೆಯ ಯಾತ್ರೆ... ಹೀಗೆ ಹಲವು ಸಮಸ್ಯೆಗಳು. ಇಂದು ನೋಡಿದರೆ ಇದೆಲ್ಲವೂ ಸಮಸ್ಯೆಯೆ ಅಲ್ಲ ಬಿಡಿ.. ಅಂದಿನ ಕಾಲದ ಸಂಗತಿಗಳೊಂದಿಗೆ ತಾಳೆ ಹಾಕುತ್ತಾ ಸಾಗಿದರೆ ನಾವಿಂದು ದೇವಲೋಕದಲ್ಲಿದ್ದೇವೆ. ತೀವ್ರ ಸಂಕಷ್ಟದ ದಿನಗಳ ನಂತರ ಇಡೀ ನಮ್ಮ ಕುಟುಂಬ ಚೇತರಿಕೆ ಕಂಡಿತು. ಅಂದರೆ ಆ ಹುಲ್ಲಿನ ಮನೆಗಳು,.. ಹಣಕ್ಕಾಗಿ ಪರದಾಟ.. ಇದೆಲ್ಲವೂ ನನಗೆ ನೆನಪು ಬರುವವ ಸಮಯದಲ್ಲೇ ನಡೆದೇ ಇತ್ತು. ಆದರೆ ಇಂದು ನಾವು ಮತ್ತು ನಮ್ಮ ಕುಟುಂಬ ಆ ಪರಿಸ್ಥಿತಿಯಲ್ಲಿಲ್ಲ. ಇದಕ್ಕೆಲ್ಲಾ ಕಾರಣ ನನ್ನ ಅಜ್ಜಿ , ಅಜ್ಜ ಹಾಗೂ ನಮ್ಮ ಹಿರಿಯರ, ಹೆತ್ತವರ ಶ್ರಮ.ಹಾಗಾಗಿ ನಾವಿಂದು ಈ ಪರದೆಯ ಮೇಲೆ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಅದಕ್ಕಾಗಿ ನಾನು ಇನ್ನೊಮ್ಮೆ ಅಜ್ಜಿಯನ್ನು ನೆನಪಿಸುತ್ತೇನೆ. ಹಿರಿಯರನ್ನು , ಹೆತ್ತವರು ನಡೆದ ದಾರಿಯನ್ನು ಗಮನಿಸುತ್ತೇನೆ.

ಯಾಕೆಂದರೆ ಇತ್ತೀಚೆಗೆ ಧರ್ಮಸ್ಥಳದಲ್ಲಿ ಮಿತ್ರರೊಂದಿಗೆ ಹೋಟೇಲ್ ಒಂದರಲ್ಲಿ ಬೆಳಗಿನ ಕಾಫಿ ಕುಡಿಯಲು ಕುಳಿತಿದ್ದೆವು.ಅಲ್ಲೆ ನಮ್ಮ ಪಕ್ಕದ ಇನ್ನೊಂದು ಟೇಬಲ್ ನಲ್ಲಿ 2 ಮಹಿಳೆಯರು ಮತ್ತು ಒಂದು ಚಿಕ್ಕ ಮಗು ಕುಳಿತಿತ್ತು. ಸಪ್ಲಯರ್ ಬಂದಾಗ ಆ ಮಹಿಳೆ ಕೇಳಿತು ನೋಡಣ್ಣಾ ನಮ್ಮಲ್ಲಿ ಹಣವಿರುವುದು ಇಷ್ಟು ಇದಕ್ಕಾಗುವ ಇಡ್ಲಿ ಕೊಡಿ ಅಂದಿತು. ಪಾಪ ಮತ್ತೆ ಲೆಕ್ಕ ಹಾಕುತ್ತಿತ್ತು ಆ ಹೆಂಗಸು ಇನ್ನು ಬಸ್ಸಿಗೆ ಇಷ್ಟು ಹಣಬೇಕು..... ಆದರೆ ಅವರ ಹೊಟ್ಟೆ ..???.
ಇಂತಹ ಬಡತನವೂ ಇಲ್ಲಿದೆ.ಅಂತಹುದರಲ್ಲಿ ನಾವೆಷ್ಟು ಸುಖಿಗಳು..? . ಬೆಳಗ್ಗಿನಿಂದ ಹಿಡಿದು ಸಂಜೆಯವರೆಗೆ ಏನು ಮಜಾ...? ಸಮಾಜದಲ್ಲಿ ಇನ್ನೊಂದು ಮುಖವಿರುತ್ತದೆ. ಅಂತಹ ಮುಖವನ್ನು ನನ್ನ ಅಜ್ಜಿ ನನ್ನ ಹಿರಿಯರು ಅನುಭವಿಸಿದ್ದರು. ಆದರೆ ಅವರು ಆ ನೋವುಗಳನ್ನು ಮರೆತು ಇಂದಿನ ಹೊಸ ಬದುಕಿನಲ್ಲಿದ್ದಾರೆ. ಕಾರು ಚಲಾಯಿಸಬಲ್ಲರು.. ಮೊಬೈಲ್ ನಲ್ಲಿ ಗಂಟೆಗಟ್ಟಲೆ ಮಾತನಾಡಬಲ್ಲರು... ಅದು ಬದಲಾವಣೆ...
ಆ ಎಲ್ಲಾ ಬದಲಾವಣೆಗಳ ಹಿಂದೆ ... ಇನ್ನೊಂದು ಕತೆಯಿರುತ್ತದೆ.

ಹಾಗಾಗಿ ನನಗೆ ಅಜ್ಜಿಯ ನಿಧನದ ಸುದ್ದಿ ದೂರದಲ್ಲಿದ್ದ ನನಗೆ ಕೇಳಿದ ನಂತರ ಮನೆಗೆ ಬರುವಾಗ ಈ ಎಲ್ಲಾ ನೋಟಗಳನ್ನು ತಿರುವುತ್ತಾ ಬಂದೆ. ಬದುಕಿನ ಮಜಲುಗಳನ್ನು ಅವಲೋಕಿಸುತ್ತಾ ಸಾಗಿದೆ. ಮನೆ ತಲಪಿತು... ಅಜ್ಜಿ ನೆನಪಾಗಿ ಉಳಿದರು... ದೇಹ ಮಣ್ಣಿನಲ್ಲಿ ಲೀನವಾಯಿತು.....

ಅಜ್ಜಿಯ ಬಗ್ಗೆ ಮಾತ್ರಾ ದಾಖಲಿಸಬೇಕು ಅಂದುಕೊಂಡಿದ್ದೆ ಆದರೆ ಎಲ್ಲೆಲ್ಲಿಗೋ ಹೋಗಿ ಬಂದಿತು

21 ನವೆಂಬರ್ 2008

ಚಳಿ ಚಳಿ ಚಳಿ .. ಆಹಾ .. ಏನು ಚಳಿ...


ಚಳಿ... ಇದು ಮೌನ ಧ್ಯಾನ...

ಸೂರ್ಯ ಮೂಡಣದಿ ಕೆಂಪಾಗಿ ಕಾಣುತ್ತಲೇ ಹಾಸಿಗೆಯು ಯಥಾಸ್ಥಾನವನ್ನು ಪಡೆಯುತ್ತದೆ.ರಗ್ಗು ಕಂಬಳಿಗಳು ಮಡಚಿಕೊಳ್ಳುತ್ತವೆ.ಅಬ್ಬಾ ಏನು ಚಳಿ... ಆದರೂ ಬೆಳಗ್ಗೆ 6 ರಿಂದ 7 ರ ನಡುವೆ ಉತ್ಥಾನವಾಗದೆ ವಿಧಿಯಿಲ್ಲ.ಇನ್ನೆರಡು ತಿಂಗಳುಗಳ ಕಾಲ ಈ ಚಳಿಯು ಹೊಸ ಲೋಕವನ್ನು ಸೃಷ್ಠಿಸಿಬಿಡುತ್ತದೆ.

ಬೆಳ್ಳಂಬೆಳಗ್ಗೆ ಸೊಂಯ್ ಬೀಸುವ ಗಾಳಿ... ತೆಂಗಿನ ಗರಿಯಿಂದ ಟಪ್.. ಟಪ್ ಬೀಳುವ ಮಂಜಿನ ಹನಿ.. ಈ ಹನಿಗಳ ನಡುವೆ ಹರಿದು ಬರುವ ಸೂರ್ಯನ ಕಿರಣ... ಅಲ್ಲಲ್ಲಿ ಎಳೆಯ ಬಿಸಿಲಿಗೆ ಮೈಯೊಡ್ಡಿ ನಿಲ್ಲುತ್ತಾ ಹರಟೆಯನ್ನು ಹೊಡೆಯುವ ತಂಡಗಳು... ಹೀಗೆ ಚಳಿ ಹತ್ತು ಹಲವು ಮಜಲಿನಲ್ಲಿ ತನ್ನದೇ ಆದ ಬೇರನ್ನು ಇಳಿಗೊಳಿಸುತ್ತದೆ.ನೋಡುಗನಿಗೆ ಒಂದೊಂದು ರೂಪದಲ್ಲಿ ಕಾಣಿಸುತ್ತದೆ. ದೂರದ ಅಲ್ಲೆಲ್ಲೋ ಅನುದಿನವೂ ಏನೊಂದು ಚಳಿ.. 0 ಡಿಗ್ರಿಗಿಂತ ಕಡಿಮೆಗೆ ಕೆಲವೊಮ್ಮೆ ಇಳಿದಿರುತ್ತದೆ ಆದರೆ ಅವರು ಹೇಗಪ್ಪಾ ಸಹಿಸುತ್ತಾರೆ..?? ಇಲ್ಲಿ ಒಂದು ದಿನ ಚಳಿ ಜೋರಾದರೆ ಬೆಚ್ಚನೆ ಮಲಗಿದರೆ ಏಳುವಾಗಲೇ ತಡವಾಗಿ ಬಿಡುತ್ತದೆ. ಆದರೆ ಅವರು ಹೇಗೆ ........... ?. ನಿಜಕ್ಕೂ ಅಚ್ಚರಿ. ಆದರೆ ಅದು ಅಲ್ಲಿನ ವಾತಾವರಣ ಬಿಡಿ. ನಾವಲ್ಲಿದ್ದರೂ ಸೆಟ್ ಆಗುತ್ತಿದೆವು ಅನ್ನಿ. ಹಾ.. ಅದೆಲ್ಲಾ ಬಿಡಿ ನಮ್ಮಲ್ಲಿದ್ದಷ್ಟು ಚಳಿ ಇಲ್ಲಿನ ಆಸುಪಾಸಿನಲ್ಲೆಲ್ಲೂ ಇಲ್ಲ. ಹಾಗಾಗಿ ನಮ್ಮೂರು ಬೆಳಗಿನ ಜಾವ ಈಗ ಕೊಂಚ ಸ್ಥಬ್ಧ. ಮೊನ್ನೆ ಮೊನ್ನೆ ಹಸಿರು ಹಸಿರಾಗಿದ್ದ ಗಿಡ ಗಂಟಿಗಳು ಇನ್ನು ಒಣಗಲು ಶುರುವಾಗುತ್ತವೆ. ಹೊಸ ಜೀವನಕ್ಕೆ ಅವುಗಳೂ ನಾಂದಿಯನ್ನು ಹಾಡುತ್ತವೆ. ಹಾಗೆಯೆ ಇತ್ತ ಚಳಿಯೂ ಮುದ ನೀಡುತ್ತದೆ. ಬೆಳಗ್ಗೆ ಆಗಿನ್ನೂ ಸೊಂಯ್ ಗಾಳಿ ಸುಳಿದಾಡುತ್ತಿರುವಾಗ ಎರಡೆರಡು ರಗ್ಗು ಹೊದ್ದಲ್ಲಿಂದ ಎದ್ದು ಹಾಗೆಯೇ ಬಂದು ಇಣುಕಿದಾಗ ಮನೆಯೆದುರು ಬೊಗ್ಗ ಕುಟುರು ಹಾಕುತ್ತಿರುತ್ತದೆ. ನಮ್ಮನ್ನು ಕಂಡಾಗ ಬಾಲವನ್ನು ಅಲ್ಲಾಡಿಸಿ ಟಪ ಟಪ್ ಎಂದು ಮೈಯ ಕೊಡವಿ ಎಲ್ಲೋ ಮಾಯವಾಗಿ ಬಿಡುತ್ತದೆ. ಅಲ್ಲಿ ಹಿರಿಯಜ್ಜಂದಿರು ಆಗಲೇ ಗದ್ದೆಯ ಕಡೆಗೆ ತೆರಳಿ ಒಂದು ಸುತ್ತು ಹಾಕಿ ಗಿಡಗಳಿಗೆ ನೀರು ಹಾಕಿ ಬಂದು ಬಿಸಿ ನೀರಿನ ಸ್ನಾನದಲ್ಲಿ ತೊಡಗುತ್ತಾರೆ. ಆ ನಂತರ ಬಿಸಿ ಬಿಸಿ ಚಾ... ಅಂಗಳದಲ್ಲಿ ಅಗ್ನಿಷ್ಠಿಕೆಯ ಮಜಾ... ಮಕ್ಕಳೆಲ್ಲಾ ಸೇರಿ ಆ ಅಗ್ನಿಷ್ಠಿಕೆ ಸುತ್ತಾ ಕುಟು ಕುಟು ಎನ್ನುತ್ತಾ ಕತೆಯ ಜ್ಞಾಪನ. ಹೋ ಅದು ಕತೆ, ಕೇಳಲು ಹೇಳಲು ಎಂಥ ಸುಂದರ ಜಾಗ. ಅಜ್ಜನಿಗೆ ಬೀಡಿ ಸೇದಲು ಎಂಥ್ ಆಒಳ್ಳೆ ಸಮಯ ಅದು. ಸ್ಪಕ್ಕದ ಮಬೆಯಾತನ ಬಗ್ಗೆ ಕಮೆಂಟ್ ಹೇಳಲು ಉತ್ತಮ ಅವಕಾಶ... ಹೀಗೆ ಎಲ್ಲರಿಗೂ ಆ ಚಳಿ ಆಪ್ಯಾಯಮಾನ... ಹೊಸದಾದ ಜೋಡಿಗಂತೂ ಹೇಳಿ ಮಾಡಿಸಿದ ಸಮಯವಂತೆ... ಅಜ್ಜಂದಿಗೆ ನೆನಪುಗಳನ್ನು ಕೆದಕುವ ಸಮಯವಂತೆ... ನಮ್ಮಂಥವರಿಗೆ ಚಳಿಯನ್ನು ಆಸ್ವಾದಿಸುವ ಸುಂದರ ಸಮಯ...

ಆಹಾ ಏನು ಚಳಿ... ಏನು ಚಳಿ... ಏನು ಖುಷಿ... ಕುಟು .. ಕುಟು.. ಕುಟು...

18 ನವೆಂಬರ್ 2008

ಹಳ್ಳಿಗಳನ್ನು ಬೆಸೆಯುವ ಸರದಾರ....




ಹಳ್ಳಿಗಳು ಸಂಪರ್ಕ ಪಡೆದರೆ ಮಾತ್ರಾ ಈ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ನಗ್ನ ಸತ್ಯ. ಹಾಗಾದರೆ ಇಂದು ಎಷ್ಟು ಹಳ್ಳಿಗಳು ಮುಕ್ತವಾಗಿ ವರ್ಷ ಪೂರ್ತಿ ನಗರವನ್ನು ಸಂಪರ್ಕಿಸುತ್ತದೆ. ಅಲ್ಲಿನ ಜನ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಾರೆ ಎನ್ನುವುದನ್ನು ನಾವು ಅನುದಿನವೂ ಗಮನಿಸುತ್ತಲೇ ಇರುತ್ತೇವೆ. ಅಂತಹ ಒಂದು ಅನುಭವ ಹಿಂದೊಮ್ಮೆ ಆಗಿತ್ತು.ಇತ್ತಿಚೆಗೆ ಹಳ್ಳಿಯೊಂದಕ್ಕೆ ಹೋಗಿದ್ದಾಗ ಅಲ್ಲಿನ ಜನರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ಸಮಸ್ಯೆಯನ್ನು ವರದಿ ಮಾಡಲಾಗಿತ್ತು.ಇಲ್ಲೂ ದಾಖಲಿಸಿದ್ದೆ.ಅಂತಹ ಪರಿಸ್ಥಿತಿಯಲ್ಲಿ ಹಳ್ಳಿಗರಿಗೆ ಸಂಪರ್ಕ ಸೇತುವಾಗಿ ಕಂಡುಬರುವವರು ಸುಳ್ಯದ ಗಿರೀಶ್ ಭಾರದ್ವಾಜ್. ಅವರ ಕುರಿತು ನಮ್ಮ ಚಾನೆಲ್ ಫೋಕಸ್ ನಲ್ಲಿ ಗುರುತಿಸಿತ್ತು. ಹಳ್ಳಿಗಳಿಂದ ಉತ್ತಮವಾದ ಅಭಿಪ್ರಾಯ ಬಂದಿತ್ತು. ಪತ್ರಕರ್ತ ವಲಯದಿಂದ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಆದರೆ ಅವರ ಕುರಿತು ಮಾಡಿದ ಸುದ್ದಿಯಿಂದ ರಾಜ್ಯದ ಹಲವಾರು ಗ್ರಾಮಿಣ ಪ್ರದೇಶದ ಜನರಿಗೆ ಇಂತಹದ್ದೊಂದು ಸಂಪರ್ಕ ಸೇತು ನಮಗೂ ಆದೀತು ಎನ್ನುವ ಭಾವನೆ ಮೂಡಿದ್ದಂತೂ ಸತ್ಯ.ಇನ್ನು ಏನಿದ್ದರೂ ಜನ ಮತ್ತು ಸರಕಾರದ ಕೆಲಸ. ಗಿರೀಶರ ಸಹಕಾರ. ಆದುದರಿಂದ ಗಿರೀಶರ ಬಗ್ಗೆ ಇಲ್ಲಿ ಒಂದಿಷ್ಟು....

ಇಂದು ಬಹುತೇಕ ಹಳ್ಳಿಗಳು ಮಳೆಗಾಲದ 6 ತಿಂಗಳುಗಳ ಕಾಲ ನಗರದ ಸಂಪರ್ಕವನ್ನೇ ಕಡಿದುಕೊಂಡಿರುತ್ತದೆ. ಕಾರಣ ಆ ಊರಿನಲ್ಲಿ ಹರಿಯುವ ನದಿ. ಹೀಗಾಗಿ ಅಲ್ಲಿನ ಜನ ಅತ್ಯಂತ ಬವಣೆಪಡುತ್ತಿರುತ್ತಾರ್. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಜನರ ಬದುಕಿಗೆ ಆಶಾಕಿರಣವಾಗಿ ಮೂಡಿಬರುವುದು ತೂಗುಸೇತುವೆಗಳು.ಸುಳ್ಯದ ಗಿರೀಶ್ ಭಾರಧ್ವಾಜರು ಅಂತಹ ತೂಗು ಸೇತುವೆಗಳ ನಿರ್ಮಾಣದ ಸರದಾರ ಎನಿಸಿಕೊಂಡಿದ್ದಾರೆ.

ಹಳ್ಳಿಯ ಬದುಕೆಂದರೆ ಗುಡ್ಡ, ಹೊಳೆ, ಹಳ್ಳಗಳಿಂದ ಕೂಡಿರುತ್ತದೆ.ಅಲ್ಲಿನ ಕೃಷಿಕರಿಗೆ ಇಂತಹ ಹೊಳೆಗಳು ಬೇಸಗೆಯ ಕಾಲದಲ್ಲಿ ವರದಾನವಾದರೆ ಮಳೆಗಾಲದ ಅವಧಿಯಲ್ಲಿ ಸಂಕಷ್ಟವನ್ನು ನೀಡುತ್ತದೆ.ನಗರವನ್ನು ಸಂಪರ್ಕಿಸದಂತೆ ಮಾಡಿಬಿಡುತ್ತದೆ.ಒಂದೇ ಸಮನೆ ಮಳೆಸುರಿದರೆ ನದಿಗಳು ತುಂಬಿಹರಿದು ತಿಂಗಳುಗಟ್ಟಲೆ ದ್ವೀಪದಂತಾಗುತ್ತದೆ.ಸರಕಾರಗಳು ಉದ್ದದ ನದಿಗಳಿಗೆ ಸೇತುವೆಯನ್ನು ನಿರ್ಮಿಸುವ ಗೋಜಿಗೆ ಹೋಗುವುದಿಲ್ಲ. ಹಾಗೊಂದು ವೇಳೆ ಹೇಳಿದರೂ ಅದು ಭರವಸೆಯಾಗಿಯೇ ಉಳಿದಿರುತ್ತದೆ. ಹಾಗಾಗಿ ಹಳ್ಳಿಗರಿಗೆ ತಾವು ಬೆಳೆದ ಕೃಷಿಯುತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲಪಿಸಲು ಸಾಧ್ಯವಾಗುವುದಿಲ್ಲ.ಹೀಗಾಗಿ ರೈತರು ಸಹಜವಾಗಿಯೇ ಹಿನ್ನಡೆಯನ್ನು ಅನುಭವಿಸುತ್ತಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಳ್ಳಿಗರಿಗೆ ವರದಾನವಾಗುವುದು ಕಡಿಮೆ ಖರ್ಚಿನ, ತಾವು ನಡೆದಾಡಿಕೊಂಡು ಸಾಗಬಹುದಾದ ತೂಗುಸೇತುವೆಗಳು.ಇದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದವರು , ನಿರ್ಮಾಣ ಮಾಡಿದವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಿರೀಶ್ ಭಾರದ್ವಾಜ್. ಇವರು ಇದುವರೆಗೆ ನಿರ್ಮಿಸಿದ ತೂಗು ಸೇತುವೆಗಳು 75 ...





ಗಿರೀಶ್ ಭಾರಧ್ವಾಜರು ಸುಳ್ಯದ ಅರಂಬೂರಿನ ನಿವಾಸಿ.1975ರಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದ ಬಳಿಕ ಸುಳ್ಯದಲ್ಲಿ ಆಯಶ್ಶಿಲ್ಪವೆಂಬ ಇಂಜಿನಿಯರಿಂಗ್ ವರ್ಕ್ ಶಾಪನ್ನು ತೆರೆದರು.ನಂತರ 1988 ರ ವೇಳೆಗೆ ಊರವರ ಬೇಡಿಕೆಯಂತೆ ಅವರು ಉಚಿತ ಶ್ರಮದ ಮೂಲಕ ಪ್ರಥಮವಾದ ತೂಗು ಸೇತುವೆಯನ್ನು ನಿರ್ಮಿಸಿದರು. ನಂತರ ವಿವಿಧ ಹಳ್ಳಿಗಳಿಂದ ಅಂತಹ ತೂಗು ಸೇತುವೆಗಳಿಗೆ ಬೇಡಿಕೆ ಬಂದಿತು. ಕರ್ನಾಟಕದ ವಿವಿದೆಡೆ ಇಂತಹ ತೂಗುಸೇತುವೆಗಳನು ಮಾಡಿದ ಇವರು ಆಂದ್ರ ಪ್ರದೇಶ, ಕೇರಳ, ಮೊದಲಾದೆಡೆ ಇಂತಹ ಸೇತುವೆಗಳನ್ನು ನಿರ್ಮಿಸಿರುವ ಗಿರೀಶರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಅವರಗೋಳ ಮತ್ತು ಘಟಗೇರಿ ಎಂಬ ಎರಡು ಹಳ್ಳಿಯನ್ನು ಸಂಪರ್ಕಿಸಲು ಘಟಪ್ರಭಾ ನದಿಗೆ 290 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ತೂಗು ಸೇತುವೆಯ ನಿರ್ಮಾಣದ ಮೊದಲು ವಿವಿಧ ಹಂತಗಳಿವೆ. ಎಲ್ಲಾ ಹಂತಗಳಲ್ಲೂ ಜಾಗ್ರತೆ ಅಗತ್ಯವಾಗಿದೆ. ಕೊನೆಯ ಹಂತದಲ್ಲಿ ಕಾರ್ಮಿಕರು ಅತ್ಯಂತ ಸಾಹಸದಿಂದ ಕೆಲಸ ನಿರ್ವಹಿಸುತ್ತಿರುತ್ತಾರೆ.ಇದೆಲ್ಲಾ ಶ್ರಮದ ಬಳಿಕ ಸಾರ್ವಜನಿಕರಿಗೆ ನಡೆದಾಡಲು ವ್ಯವಸ್ಥಿತವಾದ ಸೇತುವೆಯೊಂದು ಲೋಕಾರ್ಪಣಗೊಳ್ಳುತ್ತದೆ. ಇಂತಹ ತೂಗುಸೇತುವೆಗಳನ್ನು ನಿರ್ಮಿಸಲು ಅನೇಕ ಮಂದಿ ಪ್ರಯತ್ನಿಸಿದ್ದರು.ಆದರೆ ಗಿರೀಶರಷ್ಟು ಯಶಸ್ವಿಯಾಗಿ ಯಾರು ಕೂಡಾ ಮುಂದುವರಿದಿಲ್ಲ. ಈ ಕೆಲಸದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ ಎನ್ನುವ ಗಿರೀಶರು ಡಾಅಬ್ದುಲ್ ಕಲಾಮ್ ಅವರ ಚಿಂತನೆಯೇ ನನಗೆಸ್ಫೂರ್ತಿ ಎನ್ನುವ ಇವರು ಎರಡು ಹಳ್ಳಿಗಳನ್ನು ಸೇರಿಸಿದಾಗ ಸಿಗುವ ನೆಮ್ಮದಿಯೇ ಬೇರೆ ಎನ್ನುತ್ತಾರೆ. ಈ ನನ್ನ ವಿದ್ಯೆಯನ್ನು ಯಾರಿಗೆ ಬೇಕಾದರೂ ಧಾರೆ ಎರೆಯಬಲ್ಲೆ ಉರುವ ಆಸಕ್ತ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಬಲ್ಲೆ ಎನ್ನುತ್ತಾರೆ ಗಿರೀಶ್. ಆದರೆ ಆ ವಿದ್ಯಾರ್ಥಿಗಳೆಲ್ಲರೂ ನಿಸ್ವಾರ್ಥ ಸೇವೆ ಮಾದಬೇಕು ಎಂಬುದು ಇವರ ಅಭಿಲಾಷೆ.

ಹಳ್ಳಿಗಳನ್ನು ಬೆಸೆಯುವ ಇಂತಹ ಸೇತುವೆಗಳು ನಿರ್ಮಾಣವಾದರೆ ಜನ ಅತ್ಯಂತ ಸಂತಸ ಪಡುತ್ತಾರೆ. ಅದಾದ ಬಳಿಕ ತಮ್ಮ ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಸಿಕ್ಕಿದೆ , ಮನೆಯ ಅವಶ್ಯಕ ವಸ್ತುಗಳನ್ನು ತರಲು ಅನುಕೂಲವಾಗುತ್ತದೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ.ಇನ್ನೂ ಅನೇಕರು ಹೊಸತಾದ ತೂಗು ಸೇತುವೆಗಳ ನಿರ್ಮಾಣಕ್ಕೆ ಒತ್ತಡ ಹಾಕುತ್ತಾರ್. ಸರಕಾರವು ಇಂತಹ ಜನರಿಗೆ ಸಹಾಯವನ್ನು ನೀಡಬೇಕಾಗಿದೆ.

ಒಟ್ಟಿನಲ್ಲಿ ಇಂದು ಹಳ್ಳಿಗಳು ನಗರದ ಸಂಪರ್ಕವನ್ನು ನದಿಗಳು ಕಾಟಕೊಡುತ್ತವೆ ಎನ್ನುವ ಒಂದೇ ಕಾರಣಕ್ಕೆ ದೂರವಾಗಿ ಬೀಡುತ್ತವೆ.ಅಲ್ಲಿನ ಜನರ ಬದುಕೇ ಕಷ್ಟವಾಗಿ ಬೀಡುತ್ತದೆ.ಇಂತಹ ಪರಿಸ್ಥಿತಿಯಲ್ಲಿ ತೂಗು ಸೇತುವೆಗಳು ವರದಾನವಾಗಿದೆ.

11 ನವೆಂಬರ್ 2008

ಒಂದು ನಿಧಿಯ ಸುತ್ತ...



ಜೀವನದಲ್ಲಿ ಹೇಗಾದ್ರೂ ಸರಿ ಶ್ರೀಮಂತರಾಗಬೇಕು ಎನ್ನುವ ಯೋಚನೆ ಯಾವ ಮನುಷ್ಯನ ತಲೆಯೊಳಗೆ ಇಲ್ಲ ಹೇಳಿ. ಆ ಯೋಚನೆಯ ಹಿಂದೆ ಹಲವಾರು ದಾರಿಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆ ಹಾದಿಯಲ್ಲಿ ಸಾಗಲು ಮನಸ್ಸು ಪ್ರೇರೇಪಿಸುತ್ತಲೆ ಇರುತ್ತದೆ. ಅದು ನ್ಯಾಯವಾ ...ಅನ್ಯಾಯವಾ... ಧರ್ಮವಾ....ಅಧರ್ಮವ... ಸರಿಯಾ ... ತಪ್ಪಾ.... ಅಂತೆಲ್ಲಾ ಯೋಚಿಸುವ ತಾಳ್ಮೆಯನ್ನು ಮನಸ್ಸು ಮಾಡುವುದಿಲ್ಲ. ಕೊನ್ಗೆ ಮಾನ ಹರಾಜಾಗುತ್ತದೆ ಎನ್ನುವ ಜ್ಞಾನವೂ ಬಾರದೆ. ಕೆಲಸಕ್ಕೆ ಇಳಿದೇ ಬಿಡುತ್ತದೆ.. ಅದರ ಪರಿಣಾಮ ಗೊತ್ತಾದಾಗ ಅಯ್ಯೋ ದುಡ್ಡೇ.... ನೀ ಹೀಂಗೇನಾ ... ಅಂಥ ಪರಿತಪಿಸುವುದು ಇದ್ದದ್ದೇ... ಅಂತಹ ದುಡ್ಡು ಮಾಡುವ ಕೆಲಸವೊಂದಕ್ಕೆ, ಸುಬ್ರಹ್ಮಣ್ಯದ ಬಳಿಯಲ್ಲಿ ಒಂದೈದು ಮಂದಿ ಇಳಿದಿದ್ದರು. ಆದರೆ ಮತ್ತೆ ಸುದ್ದಿಯಾದದ್ದು ಇನ್ನೊಂದು ಬ್ರೇಕಿಂಗ್ ನ್ಯೂಸ್....!!. ಮೂಢತನವೇ..?? ಎಂದು ಯಾರಾದರೂ ಹೇಳಿಯಾರು.

ಕುಕ್ಕೆ ಸುಬ್ರಹ್ಮಣ್ಯದ ಬಳಿಯಲ್ಲಿ ಕುಲ್ಕುಂದ ಎನ್ನುವ ಹೆಸರಿನ ಚಿಕ್ಕ ಊರಿದೆ. ಊರು ಎನ್ನುವುದಕ್ಕಿಂತಲೂ ಐತಿಹಾಸಿಕ ಪ್ರದೆಶ. ಇಲ್ಲಿ ಇದ್ದಕ್ಕಿದ್ದಂತೆಯೇ ಒಂದು ಸುದ್ದಿ ಬಂದಿತ್ತು. ಆಗ ತಾನೆ ಕೋಳಿ ಕೂಗಿರಬಹುದು. ಫೋನು ರಿಂಗಾಯಿತು. ಶಿರಾಡಿಯ ರಾಡಿಯಲ್ಲಿ ಒಂದು ಗಂಟೆಗಳ ಟ್ರಾಫಿಕ್ ಜಾಮ್ ನಿಂದ ತತ್ತರಿಸಿ ಹೋಗಿ ಬೆಂಗಳುರಿನಿಂದ ಆಗ ತಾನೆ ಬಂದಿಳಿದದ್ದಷ್ಟೇ..! ಆದರೂ ಸುದ್ದಿಯ ವಾಸನೆ ಬಡಿದದ್ದೇ ಹೊರಡಬೇಕಾಯಿತು. ಬರೀ ಫೋನು ರಿಂಗಾದರೆ ಯಾರು ಹೋಗ್ತಾರೆ??. ನಾನು ಹೇಗೂ....... ಅಲ್ಲ. ಆ ಫೋನಲ್ಲಿ ಬಂದ ವಿಷ್ಯ ಕುಲ್ಕುಂದದಲ್ಲಿ ನಿಧಿ ತೆಗೆಯಲು ಬಂದಿದ್ದಾರೆ.. ಇಬ್ಬರನ್ನು ಹಿಡಿಯಲಾಗಿದೆ... ಈಗ ಅಲ್ಲಿ ಕಾಳಿಂಗ ಸರ್ಪ ಇದೆ. ಅಲ್ಲೆ ಸುತ್ತಾಡುತ್ತಲೇ ಇದೆ... ಎಂದಿತು ಮಾಹಿತಿ. ಆದರೆ ಅಲ್ಲಿ ಹಾವು [ಕಾಳಿಂಗ] ಇದೆ ಎಂದರೆ ಸ್ವಲ್ಪ ಕುತೂಹಲವೇ..! ಹೀಗೂ ಉಂಟೇ..!! ಎಂದೆಲ್ಲಾ ಯೋಚನೆಯ ಹಿನ್ನೆಲೆಯಲ್ಲಿ ಬೈಕ್ ಸ್ಟಾರ್ಟ್ ಆಯಿತು. ಹೋದಾಗ ಜನ ಸೇರಿದ್ದರು. ನನ್ನ ಮಿತ್ರ ಇದ್ದ. ಕ್ಯಾಮಾರ ಆನ್ ಆಯಿತು.ಸುತ್ತ ಮುಳ್ಳು ಗಂಟಿಗಳ ಪ್ರದೇಶ. ಅದರ ನಡುವೆ ಇದೆ ಎನ್ನಲಾಗುವ ನಿಧಿ. ಆ ನಿಧಿಯಲ್ಲಿ ಏನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.ಆದರೆ ಯಾರು ತೆಗೆಯುತ್ತಾರೆ ಅವರಿಗೇ ಗೊತ್ತು..!?. ಹಾಗೆ ಆ ಪೊದೆಯ ನಡುವೆ ಹಾವಿನ ಕೊಂಚ ಬಾಲ ಕಾಣುತ್ತದೆ. ಕ್ಯಾಮಾರ ಕಣ್ಣಲ್ಲಿ ಸೆರೆ ಹಿಡಿಯುವುದು ಅಸಾಧ್ಯವಾಗಿತ್ತು. ಆದರೂ ವಿಚಿತ್ರದ ಬಗ್ಗೆ ಇನ್ನೂ ಆಸಕ್ತಿ. ಈ ನಡುವೆ ಊಹಾ ಪೂಹಗಳು. ಇಲ್ಲಿ ಸ್ವಲ್ಪ ಸಮಯದ ಹಿ0ದೆ ಹೀಗೆಯೆ ಬಂದಿದ್ದರು, ಅದನ್ನು ಎಳ್ಳಲು ನೋಡಿದ್ದರು..ಆಗ ಅವರನ್ನು ಹಾವು ಓಡಿಸಿತ್ತು...ಹೀಗೆ ನಿಧಿ ಇರುವ ಜಾಗದಲ್ಲಿ ಕಾಳಿಂಗ ಸರ್ಪ ಇದ್ದೇ ಇರುತ್ತದೆ... ಕಳ್ಳರು ಇಲ್ಲಿಗೆ ಬಂದಿದ್ದಾಗ ನಾವು ಕೂಡಾ ಓಡಿಸಿದ್ದೆವು... ಅಲ್ಲಿ ಚಪ್ಪಲಿ ಹಾಕಬಾರದು... ಹಾವನ್ನು ನೋಡಬಾರದು... ಇಲ್ಲಿಗೆ ಬಂದವರು ಮಂತ್ರವಾದಿಗಳು ಅವರು ಹಾವನ್ನು ಮಂತ್ರದ ಮೂಲಕ ಕಟ್ಟಿ ಹಾಕಿದ್ದಾರೆ ಹಾಗೆ ಹಾವು ಓಡುವುದೇ ಇಲ್ಲ ಅಲ್ಲೇ ಇದೆ ಎನ್ನುವ ಮಾತುಗಳಿಗೆ ಕೊರತೆಯಿರಲಿಲ್ಲ. ಆದರೆ ಬಿಸಿಲಿನ ಪೆಟ್ಟು ಬೀಳುತ್ತಿದ್ದಂತೆಯೇ ಹಾವಿನ ಮಿಸುಕಾಟ ಆರಂಭವಾಯಿತು. ಹಾವು ಅತ್ತಿಂದಿತ್ತ ಚಲಿಸಿತು. ಕ್ಯಾಮಾರಕ್ಕೆ ಕಂಡಿತು.... ಅದು ಹೆಬ್ಬಾವು.....!!!. ಆದರೆ ಜನ ಅಲ್ಲ ಮಾರಾಯರ್ರೇ ಅದು ಕಾಳಿಂಗ ಸರ್ಪ... ಇಲ್ಲಿಗೆ ಹೆಬ್ಬಾವು ಬರಲು ಸಾಧ್ಯನೇ ಇಲ್ಲ. ಆಗ ಅದು ಕಾಳಿಂಗವಾಗಿತ್ತು.. ಈಗ ಅದುವೇ ಹೆಬ್ಬಾವಾಗಿದೆ.. ಅಲ್ಲ ಇನ್ನೊಂದು ಹಾವೂ ಇದೆ... ಅಂತೆಲ್ಲಾ ಮತ್ತೆ ಕಂತೆಗಳನ್ನು ಪೋಣಿಸಿದರು. ಆದರೆ ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಅಂತೂ ನಿಧಿ ಅಗೆಯಲು ಬಂದವರಲ್ಲಿ ಇಬ್ಬರಿಗೆ ಸಿಕ್ಕಿದ್ದು ಎರಡೆರಡು ಗೂಸಾ... ಮತ್ತೆ ಮೂವರು ಪರಾರಿ.

ಜನರಿಗೆ ನಂಬಿಕೆ ಅಲ್ಲಿ ನಿಧಿ ಇದೆ... ಕಾಳಿಂಗವಿದೆ... ಇಲ್ಲ ಅಲ್ಲಿ ಕಾಳಿಂಗವಿಲ್ಲ.. ಎಂದರೆ ಇದೆ ... ಎಂದು ವಾದಿಸುವಷ್ಟರ ಮಟ್ಟಿಗೆ ತಲೆಯೊಳಗೆ ತುಂಬಿಸಿಕೊಂದಿದ್ದಾರ್. ಕೊನೆಗೆ ಒಬ್ಬರು ಹೇಳಿದರು ಇದು ನಾಗ ನಿಧಿ ಇದನ್ನು ಬಲ್ಲಾಳ ಅರಸ ಹುಗಿದಿಟ್ಟದ್ದು ಹಾಗಾಗಿ ಇದು ಕಾರಣಿಕ. ಯಾವ ಬಲ್ಲಾಳ ಗೊತ್ತಿದೆಯೇ ಅಂತ ಮಿತ್ರ ಕೇಳಿದ.. ಇಲ್ಲ ಅದು ಬಲ್ಲಾಳ ಎಂದೇ ಪ್ರತ್ಯುತ್ತರ. ಆ ನಿಧಿಯಲ್ಲಿ ವಿಪರೀತ ಒಡವೆಗಳು , ಹಣ ಇರುತ್ತದೆ. ಹಾಗಾಗಿ ಕಳ್ಳರು ಅದನ್ನು ಎಳ್ಳಲು ಬರುತ್ತಾರೆ ಎನ್ನುತ್ತವೆ ಆಧ್ಯಾತ್ಮದ ಮನಸ್ಸುಗಳು.ಹಾಗಾಗಿ ಹಣ ಮಾಡುವ ಉದ್ದೇಶದಿಂದ ಎಳ್ಳುವ ಪ್ರಯತ್ನಕ್ಕೆ ಕೈಹಾಕಿದರು ಕಳ್ಳರು.

ಅತ್ಯಂತ ಸ್ವಾರಸ್ಯಕರ ಹಾಗೂ ತಿರುವು ಪಡೆಯಲಿದ್ದ ಸುದ್ದಿಯೊಂದು ಇನ್ನೊಂದು ರೂಪ ಪಡೆದುಕೊಂದಿತು.

06 ನವೆಂಬರ್ 2008

ಕಾನೂನು ..

ಎಲ್ಲವೂ ಇರುವುದು ಪರರಿಗಾಗಿ. ನನಗಿರುವುದು ಏನೂ ಇಲ್ಲ. ಯಾವುದೂ ಇಲ್ಲ, ಯಾವುದೂ ಅಲ್ಲ.ಇದೇನೂ ಆಧ್ಯಾತ್ಮವೂ ಅಲ್ಲ, ವೈರಾಗ್ಯವೂ ಅಲ್ಲ. ಒಂದು ಮಾಮೂಲು ಡೈಲಾಗ್. ಇದೆಲ್ಲವೂ ಹೇಳುವುದಕ್ಕೆ ಮಾತ್ರಾ ಅನುಸರಿಸಲು ಅಲ್ಲ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ. ಹಾಗಾಗಿ ,ಹೇಗೆ ಬೇಕಾದರೂ ಹೇಳಬಹುದು.

ಮೊನ್ನೆ ಇಂತಹುದ್ದೇ ಒಂದು ಕತೆ ನಡೆದಿತ್ತು. ಲಾರಿಯೊಂದರ ಹಿಂದೆ ದಾರಿಗಾಗಿ "ಧ್ವನಿ ಮಾಡಿ" ಎಂದು ಬರೆದಿತ್ತು. ಆದರೆ ದಾರಿ ಬೇಕೆಂದು ಧ್ವನಿ ಮಾಡಿದರೆ ದಾರಿಯೇ ಸಿಗಲ್ಲ. ಇನ್ನೊಂದು "ಅತಿ ವೇಗ ಆಪಘಾತಕ್ಕೆ ಕಾರಣ" ಎಂದಿರುತ್ತದೆ. ಆದರೆ ಆ ವಾಹನದ ವೇಗ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಆ ವಾಕ್ಯಗಳೆಲ್ಲೆವೂ ನನಗಲ್ಲ ನನ್ನ ಹಿಂದಿನವರಿಗೆ ಎಂಬುದನ್ನು ಇನ್ನೂ ಸಾರಿ ಹೇಳಬೇಕೆಂದೇನೂ ಇಲ್ಲವಲ್ಲ. ಇಂದಿನ ಪರಿಸ್ಥಿತಿಯೂ ಅದೇ. ನಾನು ಏನು ಮಾಡಿದರೂ ಸರಿ. ಆಗ ಕಾನೂನುಗಳಾವುದೂ ಅನ್ವಯಿಸುವುದಿಲ್ಲ. ಅದೇ ಇನ್ನೊಬ್ಬನ ಬಗ್ಗೆಯಾದರೆ ತಪ್ಪಿ ನಡೆದಿದ್ದಾನೆ ಎನ್ನುವ ಬೊಟ್ಟು..! ಹಾಗಾಗಿ ಕಾನೂನುಗಳೆಲ್ಲವೂ ಇರುವುದು, ಇನ್ನೊಬ್ಬರಿಗೆ ಹೇಳಲು ಹೊರತು ಅನುಸರಿಸಲ್ಲ ಎನ್ನುವ ಹೊಸತೊಂದು ಮಾತು ಹುಟ್ಟಿಕೊಳ್ಳಬೇಕಾಗಿದೆ.
ಅನೇಕ ಸಂದರ್ಭಗಳಲ್ಲಿ ನಡೆದಿರುತ್ತದೆ ..ನಡೆಯುತ್ತದೆ .. ಮತ್ತು ನಡೆಯುತ್ತಲೇ ಇರುತ್ತದೆ... ನಾವು ಇನ್ನೊಬ್ಬರನ್ನು ಅದು ತಪ್ಪು ಅಂತ ಹೇಳಿರುತ್ತೇವೆ. ಆದರೆ ಮತ್ತೆ ಹೇಗೆ ಮಾಡಬೇಕಿತ್ತು ಅಂತ ನಮ್ಮ ಮನಸ್ಸಿನೊಳಗಾದರೂ ಒಮ್ಮೆಯಾದರೂ ಯೋಚಿಸಿದ್ದೇವಾ? ಖಂಡಿತಾ ಇಲ್ಲ. [ಇದರಲ್ಲಿ ನಾನೂ ಸೇರಿಕೊಂಡಿದ್ದೇನೆ].ಇವತ್ತು ನೋಡಿ ಎಲ್ಲೆಲ್ಲೂ ನಮ್ಮ ಯುವಕರು ದಾರಿ ತಪ್ಪಿದ್ದಾರೆ .. ಅದು ಸರಿಯಾದ ದಾರಿಯಲ್ಲ.. ಎಂದು ಬೊಬ್ಬಿಡುತ್ತಲೇ ಇದ್ದಾರೆ. ಆದರೆ ಯಾವುದು ಸರಿಯಾದ ಹಾದಿ..? ಎನ್ನುವುದಕ್ಕೆ ಎಲ್ಲಿದೆ ಉತ್ತರ?. ಅವರು ನಿಮಗೆ ಮಾದರಿ ಎನ್ನುವ ಜನ ಯಾರಿದ್ದಾರ್ ನಮ್ಮ ಮುಂದೆ.?. ಯಾರೋ 50 - 60 ವರ್ಷಗಳ ಹಿಂದಿನ ಜನರನ್ನು ನಮಗೆ ಅವರು ಮಾದರಿ ಎನ್ನುವುದಕ್ಕಿಂತ, ಈಗ ಬದುಕಿ ನಮಗೆ ಹತ್ತಿರವಾದರು ಮಾದರಿ ಎನ್ನುವುದು ಹೆಚ್ಚು ಸೂಕ್ತ. ಹಾಗಾಗಿ ಇಂದು ಎಲ್ಲವೂ , ಕಾನೂನು ಇರಬಹುದು,ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳಿರಬಹುದು , ನಮಗಾಗುವ ಅನುಕ್ಷಣದ ಅನುಭವಗಳಿರಬಹುದು, ಹೇಳುವ ವಿಚಾರಗಳಿರಬಹುದು ಅದು ಹೇಳುವುದಕ್ಕೆ ಮಾತ್ರಾ ಅನುಸರಿಸುವುದಕ್ಕಲ್ಲ..... ಎಂದು ಇಂದು ದಾಖಲಿಸಿದರೆ ತಪ್ಪಾಗಲಾರದು ಅಲ್ವೇ...?

30 ಅಕ್ಟೋಬರ್ 2008

ಬಂದಿದೆ ಪ್ರಶಸ್ತಿ.....




ಮತ್ತೆ ಬರುತ್ತಿದೆ ಕನ್ನಡ ರಾಜ್ಯೋತ್ಸವ.ಸರಕಾರವು ಎಂದಿನಂತೆ ಭರವಸೆಗಳನ್ನು ಹೇಳಲಿದೆ. ಈ ನಡುವೆ ಮಾಮೂಲಿನಂತೆ ಹಾಗೂ ಅದಕ್ಕಿಂತ ಹೆಚ್ಚಾಗಿ ಪ್ರಶಸ್ತಿಯನ್ನು ಘೋಷಿಸಿದೆ. ಸಹಜವಾಗಿಯೇ ಪ್ರಶಸ್ತಿ ಪ್ರಕಟವಾದ ಸುದ್ದಿ ಕೇಳಿದೊಡನೆಯೇ ಟಿ ವಿ ಲೋಗೋಗಳು ಪ್ರಶಸ್ತಿ ಪುರಸ್ಕೃತರ ಮುಂದೆ ಬಂದಾಗ ಅವರಲ್ಲೊಬ್ಬರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇಂಗ್ಲಿಷ್ ನಲ್ಲಿ..!!!. ಇದು ಕನ್ನಡ ರಾಜ್ಯೋತ್ಸವಕ್ಕೆ ಸಿಕ್ಕ ಗೌರವವೇ ಎಂಬ ಪ್ರಶ್ನೆ ಮನದಾಳದಲ್ಲಿ ಎದ್ದೇಳುತ್ತಿದೆ.ಆದರೆ ಇದನ್ನು ಕೇಳುವುದು ಯಾರಲ್ಲಿ??..

ಪ್ರತೀ ಬಾರಿಯೂ ಈ ಪ್ರಶಸ್ತಿಗಾಗಿ ಲಾಬಿ ನಡೆಯುತ್ತದೆ ಎನ್ನುವುದು ನಮಗೆಲ್ಲಾ ಗೊತ್ತಿದ್ದ ವಿಚಾರ.ಆದರೆ ಪ್ರಶಸ್ತಿಗಳು ನಿಜವಾದ ಅರ್ಹತೆಯಿದ್ದವರಿಗೆ ಸಿಗಬೇಕು ಎನ್ನುವ ಚಿಂತನೆ ನಮ್ಮೆಲ್ಲರಲ್ಲಿದ್ದರೂ ಹಾಗೆ ಆಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಜ್ಞಾನ ಈಗ ಬರತೊಡಗಿದೆ.ದು:ಖದ ಸಂಗತಿಯೆಂದರೆ ಅರ್ಹರಿಗೆ ಪ್ರಶಸ್ತಿ ಸಿಗುತ್ತಿಲ್ಲ ಬಿಡಿ. ಪ್ರಶಸ್ತಿ ಬಂದವರಾದರೂ ಒಂದೆರದು ದಿನವಾದರೂ ಕನ್ನಡದಲ್ಲಿ ಮಾತನಾಡಬಾರದೇ?.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎನ್ನುವ ಸಾಮಾನ್ಯ ಜ್ಞಾನವಾದರೂ ಬೇಡವೇ?. ಎಂಥಾ ಅವಸ್ಥೆ ಬಂತು.!!. ಬೇರೆ ಜನ ಸಿಕ್ಕಿಲ್ಲವೇ ಇವರಿಗೆ. ಇಂಗ್ಲಿಷ್ ನಲ್ಲಿ ಮಾತನಾಡಲಿ ಯಾರು ಬೇಡ ಅನ್ನುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲಾ ಸಮಸ್ತ ಕನ್ನಡಿಗರ ಪರವಾಗಿ,ಕನ್ನಡಿಗರ ಸರಕಾರದ ಪರವಾಗಿ ಅದಕ್ಕಾದರೂ ಗೌರವ ಕೊಡಬೇಕಲ್ಲಾ....

ಅದಿರಲಿ ರಾಜ್ಯೋತ್ಸವ ಎಂದಾಗ ಗಡಿನಾಡು ನೆನಪಾಗುತ್ತದೆ. ಇತ್ತ ಕಾಸರಗೋಡು ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಯಾವುದೇ ಮಾಧ್ಯಮಗಳಲ್ಲಿ ಬರಲಿ ಸರಕಾರ ಈ ಬಗ್ಗೆ ಗಮನ ಹರಿಸಿದೆಯಾ?. ಕಾಸರಗೋಡಿನಲ್ಲಿ ಇತ್ತೀಚೆಗೆ ಕನ್ನಡ ಶಾಲೆ ,ಕಾಲೇಜುಗಳಲ್ಲಿ ಕನ್ನಡದ ಬಗ್ಗೆ ಅವಹೇಳನ ಮಾಡಲಾಗಿತ್ತು. ಆದರೆ ಧ್ವನಿ ಎತ್ತಿದವರಿಲ್ಲ. ಗಡಿನಾಡಿನ ಕೆಲವು ಸಾಹಿತಿಗಳು ಮಾತನಾಡಿದ್ದರು. ಆದರೆ ಫಲ ಶೂನ್ಯ. ಈ ಬಗ್ಗೆ ರಸ್ತೆ ಬದಿಯಲ್ಲಿ ಹೋಗುವ ಜನರನ್ನು ಮಾತನಾಡಿಸಿದರೆ " ಏ ನಮಗೆ ಯಾವುದಾದರೇನು.." ಅಂತಾರೆ. ಇನ್ನೂ ಒಳ ಹೋದರೆ ಕೇರಳವೇ ಸರಿ ಅಂತಾರೆ. ಇಲ್ಲಿ ಕೆಲ ಬಂದ್ ಗಳು ಬಿಟ್ಟರೆ ಉಳಿದೆಲ್ಲಾ ಸೌಲಭ್ಯ ಚೆನ್ನಾಗಿಯೇ ಇದೆ ಅಂತಾರೆ. ಇಲ್ಲಿ ಎರಡು ರೀತಿಯಲ್ಲಿ ಜನ ಬದುಕುತ್ತಾರೆ. ಸಾಂಸ್ಕೃತಿಕವಾಗಿ ಕರ್ನಾಟಕವನ್ನು ಅವಲಂಬಿಸಿದರೆ ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕೇರಳವನ್ನು ಅವಲಂಬಿಸುತ್ತಾರೆ. ಅತ್ತ ಕರ್ನಾಟಕವನ್ನೂ ಬಿಡಲಾಗದೆ ಇತ್ತ ಕೇರಳವನ್ನೂ ಅವಲಂಬಿಸಲಾಗದ ಸ್ಥಿತಿಯಲ್ಲಿ ಇಲ್ಲಿನ ಜನರಿದ್ದಾರೆ.ಇಂತಹ ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು.....

27 ಅಕ್ಟೋಬರ್ 2008

ಹಣತೆ ಹಚ್ಚುತ್ತೇನೆ .....




ದೀಪ ಹಚ್ಚುತ್ತೇನೆ ನಾನು.... ದೀಪ ಹಚ್ಚುತ್ತೇನೆ ನಾನು...

ಜಗದ ಕತ್ತಲೆ ಕಳೆಯುತ್ತೇನೆಂಬ ಭ್ರಮೆಯಿಂದಲ್ಲ....

ದೀಪ ಇರುವಷ್ಟು ಕಾಲ ನಾನು ನಿನ್ನ ಮುಖವ.... ನೀನು ನನ್ನ ಮುಖವ ನೋಡಲೆಂದು....

ಇದು ಕೇಳಿದಾಗಲೇ ಮೈಪುಳಕಗೊಳ್ಳುತ್ತದೆ... ಇಲ್ಲಿ ಎಷ್ಟೊಂದು ಅರ್ಥಗಳು... ಈ ಕವಿತೆಯನ್ನು ಬರೆದವರು ಯಾರೆಂದು ನಮಗೆಲ್ಲಾ ಗೊತ್ತೇ ಇದೆ... ನಾನು ಇಲ್ಲಿ ಕೊಂಚ ಅದಕ್ಕೆ ಬಣ್ಣ ಹಚ್ಚಿರಬಹುದು .. ಆದರೆ ರಾಷ್ಟ್ರಕವಿಗಳು ಎಷ್ಟೊಂದು ಅಂದವಾಗಿ ಅಲ್ಲಿ ದಾಖಲಿಸಿದ್ದಾರೆ....

ದೀಪಗಳ ಹಬ್ಬ ಮತ್ತೆ ಬಂದಿದೆ. ಪ್ರತೀ ಬಾರಿಯೂ ಪತ್ರಿಕೆಯಲ್ಲಿ ದೀಪಗಳ ಬಗ್ಗೆ ಬರೆಯುತ್ತಿದ್ದಾತ ಈಗ ಇಲ್ಲಿ ದಾಖಲಿಸಿದ್ದಾನೆ.ಇರಲಿ ಅದಲ್ಲ ವಿಷಯ. ದೀಪಗಳ ಹಬ್ಬದಲ್ಲಿ ಎಷ್ಟೊಂದು ಅರ್ಥವಿದೆ. ರೈತರಿಗೆ ತನಗೆ ಬದುಕು ರೂಪಿಸಲು ಅನುವು ಮಾಡಿಕೊಟ್ಟ ಭೂಮಿಗೆ ಕೃತಜ್ಞತೆ ಸಲ್ಲಿಸುವ ಕಾಲವಾದರೆ ತನ್ನೊಂದಿಗೆ ದುಡಿದವರಿಗೂ ಧನ್ಯತೆಯನ್ನು ಸಮರ್ಪಿಸುವ ಸಂದರ್ಭ. ಹಾಗೆ ನೋಡಿದರೆ ಎಳೆಯ ಮಕ್ಕಳಿಗೆ ಪಟಾಕಿ ಸಿಡಿಸುವ ಹಬ್ಬ , ಹುಡುಗರಿಗೆ "ತನ್ನವರಿಗೆ" ಕೊಡುಗೆಯನ್ನು ನೀಡುವ ಕಾಲವಾದರೆ, ನವವಿಹಾಹಿತರಿಗೆ ಹೊಸ ಹಬ್ಬದ ಕಾಲ. ಹಿರಿಯರಿಗೆ ಮಾಮೂಲು ಹಬ್ಬ, ಅಜ್ಜಂದಿರಿಗೆ ನೆನಪಿನ ಹಬ್ಬ..... ಹೀಗೆಯೇ ಹಬ್ಬ ವಿವಿಧ ಮಜಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂದು ಅವರಿಗೆ ಕಾಣಿಸಿಕೊಣಿಸಿಕೊಂಡ ಹಬ್ಬ ನಾಳೆ ನಮ್ಮದೂ ಆಗಿರುತ್ತದೆ. ಹಾಗಾಗಿ ಇಂದು ಸಂಭ್ರಮಿಸಿದ್ದು ನಾಳೆಗೆ ನೆನಪಾಗಿ ಬಿಡುತ್ತದೆ. ಅದೇ ಅಲ್ಲವೇ ನಮ್ಮ ಬದುಕಿನ ಅನುಕ್ಷಣದ ದೀಪಾವಳಿ.
ದೀಪದ ಹಬ್ಬ ಸುತ್ತಲಿನ ಜನರಿಗೆ ಹೊಸ ಬೆಳಕನ್ನು ಕೊಡುತ್ತದೆ.ಅಲ್ಲೊಂದು ಇಲ್ಲೊಂದು ಹಣತೆಯಲ್ಲ ಪ್ರತಿ ಮನದಲ್ಲಿ , ಪ್ರತಿ ಮನೆಯಲ್ಲಿ ಈ ಹಣತೆ ಬೆಳಗೆಬೇಕು. ಅದು ಪ್ರೀತಿ, ಪ್ರೇಮ, ವಾತ್ಸ್ಯಲ್ಯವನ್ನು ಜೊತೆಗೆ ನಂಬಿಕೆ , ವಿಶ್ವಾಸವನ್ನು ಚೆಲ್ಲುವ ಹಣತೆಯಾಗಿರಬೇಕು. ಆರದ "ನಂದಾದೀಪ"ವಾಗಲಿ... ಅದು ಇನ್ನೊಂದು ಅಷ್ಟು ಹಣತೆ ಬೆಳಗಲು ನೆರವಾಗಲಿ.

ಹಚ್ಚುತ್ತೇನೆ ನಾನು ಹಣತೆಯನ್ನು... ಇನ್ನೊಂದು ಹಣತೆಯಿಂದ...

ಹಚ್ಚುತ್ತೇನೆ ನಾನು ದೀಪವನ್ನು .... ಪ್ರೀತಿಯ ದೀಪವನ್ನು .....

ಎಲ್ಲವೂ ಮತ್ತೆ ಸಿಗುತ್ತದೆ ,.. ಮತ್ತೆ ಉರಿಯುತ್ತದೆ ಎಂಬ ಭ್ರಮೆಯಿಂದಲ್ಲ...

ಉರಿದಯ ದೀಪವನ್ನು ಮತ್ತೆ ಹಚ್ಚೋಣ .... ಮತ್ತೆ ಬೆಳಗೋಣ...


ದೀಪಾವಳಿ ಶುಭ ತರಲಿ....

25 ಅಕ್ಟೋಬರ್ 2008

ಇಲ್ಲಿ ನಾವೇ ಎಲ್ಲಾ....!!




ದೇವಸ್ಥಾನಗಳೆಂದರೆ ನಂಬಿಕೆಯ , ಮಾನಸಿಕ ನೋವನ್ನು ತಣಿಸುವ ಕ್ಷೇತ್ರಗಳು. ಅಲ್ಲಿಗೆ ಹೋದರೆ ನೆಮ್ಮದಿ ಸಿಗುತ್ತದೆ, ಅಲ್ಲಿ ಸೇವೆ ಮಾಡಿಸಿದರೆ ಖಂಡಿತಾ ಒಳ್ಳೆಯದಾಗುತ್ತದೆ.... ಇದು ಬಹುತೇಕ ಜನರ ಕಲ್ಪನೆ. ಇನ್ನೊಂದು ಅರ್ಥದಲ್ಲಿ ನಂಬಿಕೆ.
ನಾನು ಗಮನಿಸಿದಂತೆ ಇಂದು ಧಾರ್ಮಿಕ ಹುಚ್ಚುತನ ಹೆಚ್ಚಾಗುತ್ತಿದೆ.ಹಾಗಾಗಿ ಇಂದು ಎಲ್ಲೆಲ್ಲೂ ರಶ್... ಪುಣ್ಯ ಕ್ಷೇತ್ರಗಳ ಒಳಹೊಕ್ಕಿ ನೆಮ್ಮದಿಯಿಂದ ಬಂದರೇ ಪುಣ್ಯ.
ಯಾಕೆಂದ್ರೆ ಯಾವುದೇ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಹೊರಬರುವಾಗ ಇನ್ನೊಂದು ನೋವನ್ನು ಹೊತ್ತುಕೊಂಡೇಬರಬೇಕಾಗುತ್ತದೆ. ನಾವು ಕಳೆಯಲು ಹೋದ ನೋವಿನೊಂದಿಗೆ ಇನ್ನೊಂದು ಹೊಸತು ಸೇರಿಕೊಳ್ಳುತ್ತದೆ. ಬಹುಶ: ದೇವರಿಗೆ ಇದೆಲ್ಲಾ ಕಾಣಿಸುವುದಿಲ್ಲವೇ ಅಂತ ಅನ್ನಿಸುತ್ತದೆ. ನಾವು ಇಲ್ಲಿನ ಪ್ರಮುಖ ದೇವಸ್ಥಾಗಳಿಗೆ ಹೋಗಿ ಅಲ್ಲಿ ಭಕ್ತರ ಹರಿವು ಜಾಸ್ತಿಯೇ ಇರುತ್ತದೆ. ಹೇಗಿದ್ದರೂ ಪ್ರಮುಖ ದೇವಸ್ಥಾನವಲ್ವೇ. ಆದರೆ ಅಲ್ಲಿನ ಸಿಬ್ಬಂದಿಗಳು ಇರುತ್ತಾರಲ್ಲಾ ಅವರಿಗೆ ಮನುಷ್ಯತ್ವವೆಂಬುದೇ ಇರುವುದಿಲ್ಲ. ಯಾವುದಾದರೊಂದು ಕೇಳಿದರೆ ಅದಕ್ಕೆ ಸರಿಯಾದ ಮಾಹಿತಿಯೂ ಇಲ್ಲ. ಉದ್ದಟತನದ ಪರಮಾವಧಿ. ಒಮ್ಮೊಮ್ಮೆ ಅನಿಸುತ್ತದೆ ಆ ಕ್ಷೇತ್ರದ ಸುಪ್ರೀಂ ಅವರೇ ಏನೋ . ದೇವರಿಗೆ ಅಲ್ಲಿ ಎರಡನೇ ಸ್ಥಾನವೇನೋ ಅಂತ ಅನಿಸಿಬಿಡುತ್ತದೆ. ಅದು ಅಲ್ಲಿ ಇಲ್ಲಿ ಅಂತ ಅಲ್ಲ ಎಲ್ಲಾ ಕಡೆಗಳಲ್ಲೂ ಅದೇ ವ್ಯವಸ್ಥೆ. ಹಾಗೆಂದು ನೀವು ಒಂದು ಕಾನನದ ನಡುವಿನ ಪ್ರಶಾಂತವದ ದೇವಸ್ಥಾನಕ್ಕೆ ಹೋಗಿ.ಅಲ್ಲಿ ಜನವೂ ಇರುವುದಿಲ್ಲ. ಸುಂದರ ಪರಿಸರದ ಮಧ್ಯೆ ಕೇಳುವ ಇಂಪಾದ ಹಾಡುಗಳೇ , ಹಕ್ಕಿಗಳ ಕಲರವವೇ ನಮ್ಮ ಮನಸ್ಸಿಗೆ ಹೊಸ ದಾರಿಯನ್ನು ತೊರಿಸಿತು.ನೆಮ್ಮದಿ ಸಿಕ್ಕಿತು. ಅಲ್ಲ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗಬೇಕೆಂದೇನೂ ಇಲ್ಲವಲ್ಲ. ಸುಂದರ ಸೊಬಗಿನ ಕಾಡಿನ ನಡುವೆ ಸ್ವಲ್ಪ ಹೊತ್ತು ಏಕಾಂಗಿಯಾಗು ಕುಳಿತು ಮೌನವಾದರೆ, ಧ್ಯಾನಸ್ಥವಾದರೆ ಏನು ಖುಷಿ ದೇವಸ್ಥಾನಕ್ಕೆ ಹೋದದ್ದಕ್ಕಿಂತ ಎರಡು ಪಟ್ಟು ಪುಣ್ಯ. ನಾನಂತೂ ಇತ್ತೀಚೆಗೆ ದೇವಸ್ಥಾನಕ್ಕೆ ಸೇವೆ ಸಲ್ಲಿಸಲೆಂದು ಹೋಗುವುದು ಕೊಂಚ ಕಡಿಮೆ ಮಾಡಿ ಮನೆಯ ತೋಟದ ನಡುವೆ , ಕಾಡಿನ ಬಳಿಯೇ ಮನೆಯ ಮಾಡಿರುವ ನಾವು ಸಂಜೆಯ ವೇಳೆಗೆ ಪರಿಸರವನ್ನು ಆಸ್ವಾದಿಸುತ್ತಾ ಖುಷಿಯನ್ನು ಸ್ಪಡೆಯುತ್ತೇನೆ. ಯಾಕೆಂದರೆ ಪ್ರತಿಷ್ಠಿತ ಎನಿಸಿದ ,ಅನಗತ್ಯ ಪ್ರಚಾರ ನೀಡುವ ಕೆಲವು ದೇವಸ್ಥಾನಗಳ ಒಳಹೊಕ್ಕು ಹೊರಬಂದಾಗ ಅಲ್ಲಿನ ಹುಳುಕುಗಳು, ಸಿಬ್ಬಂದಿಗಳ ದರ್ಪ ಎಲ್ಲವೂ ನೋಡಿದಾಗ ಅಯ್ಯೋ ಅಲ್ಲಿ ನೆಮ್ಮದಿಯ ಅರಸಾಟದಲ್ಲಿ ಭಕ್ತರಿದ್ದಾರಾ ಅಂತ ಅನ್ನಿಸುತ್ತದೆ. ಹಾಗಾಗಿ ಭಗವಂತನಿಗೆ ಇಲ್ಲಿಂದಲೇ ಇನ್ನೊಮ್ಮೆ ನಮಸ್ಕಾರ.

22 ಅಕ್ಟೋಬರ್ 2008

ಮೌನದಿಂದ ....

ಇಂದು ಭಾರತ ಹೆಮ್ಮೆ ಪಡುವ ದಿನ.ನಮ್ಮ ವಿಜ್ಞಾನಿಗಳು ಚಂದ್ರನಂಗಳಕ್ಕೆ ಉಪಗ್ರಹದ ಮೂಲಕ ಇಳಿದಿದ್ದಾರೆ. ಮುಂದೆ ಮಾನವ ಸಹಿತವಾಗಿ ಇಳಿಯಲಿದ್ದಾರೆ. ಬೆಳಗ್ಗೆ 6.20 ಕ್ಕೆ ಬಹುತೇಕ ಮಂದಿ ಟಿ.ವಿ ಪರದೆಯ ಮೇಲೆ ಕಾತರದಿಂದ ನೋಡುತ್ತಿದ್ದರು.ಆಗಸಕ್ಕೆ ಉಪಗ್ರಹವು ಚಿಮ್ಮುತ್ತಿದ್ದಂತೆ ಮೇರಾ ಭಾರತ್ ಮಹಾನ್ ಎನ್ನುವ ಒಳಭಾವವು ಹೆಚ್ಚಿತ್ತು.

ನಮ್ಮ ವಿಜ್ಞಾನಿಗಳ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ಬಂದಿದೆ.
....................................................................................

ಮೌನಿಯಾದೆ...

ಹಾಗೇ ನನಗೆ ಯಾಕೋ ಮೌನಿಯಾಗಬೇಕು ಎನಿಸಿತು. ನನ್ನ ಪ್ರಕಾರ ಮೌನಿಯಾದಾಗ ಇನ್ನಷ್ಟು ಸಂಗ್ರಹ ಸಾಧ್ಯ. ಅಲ್ಲದೆ ಇಂದಿನ ಕಾಲೆಳೆಯುವ ಕಾಲದಲ್ಲಿ, ಅದೇ ಹೆಚ್ಚು ಸೂಕ್ತ. ಒಂದು ಸಂದರ್ಭದಲ್ಲಿ ಅಹಂ,ಮದ,ಮತ್ಸರಾದಿಗಳ ಬಗ್ಗೆ ನನಗದಾಗದು ,ಅದು ನನ್ನ ಬಳಿ ಸುಳಿಯುವುದೂ ಬೇಡ ಅಂತ ಅಂದುಕೊಂಡಿದ್ದೆ. ಅದು ನನ್ನ ಮಟ್ಟಿಗೆ ಯಶಸ್ವಿಯಾಗಿತ್ತು. ಒಂದೊಂದು ಸಂದರ್ಭವನ್ನು ಬಿಟ್ಟೂ. ಆದರೆ ನನಗೆ ಈಗ ಅನಿಸುತ್ತದೆ ಅಂತಹದಿಲ್ಲದ ಜೀವವೊಂದಿದೆಯಾ?. ಒಬ್ಬ ವ್ಯಕ್ತಿ ಕೊಂಚ ಮೇಲೆರಿದ ಅಥವಾ ಸ್ವಲ್ಪ ಹೆಚ್ಚು ಪರಿಣಿತನಾದ ಅಂದಾಕ್ಷಣ ಏನೆಲ್ಲಾ ಮಾಡುತ್ತಾರೆ ಆತನನ್ನು ಕೆಳಗಿಳಿಸಲು. ಏಡಿಗಳ ಸಾಲಿಗೆ ಈ ಮನುಷ್ಯ ಸೇರುತ್ತಾನಲ್ಲಾ. ಮತ್ಸರ ಅವನಲ್ಲಿ ತಾಂಡವವಾಡುತ್ತವಲ್ಲಾ?. ಹಾಗಾಗಿ ನನಗನಿಸಿದ್ದು ಇದೆಲ್ಲವೂ ಜಗದ ನಿಯಮ....

ಈಗ ನಾನು ಮೌನಿಯಾಗಿದ್ದೇನೆ. ಇದು ವಿಷಾದವಲ್ಲ ಹೊಸ ನೋಟ... ಭಾವನೆಗಳನ್ನು ಹಂಚಿಕೊಳ್ಳುತ್ತಾ ಮುಂದೆ ಸಾಗುವ..... ಹೊಸಲೋಕವ ಸೃಷ್ಟಿಸಲಾಗುತ್ತಾ ನೋಡೋಣ.....

21 ಅಕ್ಟೋಬರ್ 2008

ಸಮಸ್ಯೆಯಿಂದ ಹೊರಬಂದು..



ಮತ್ತೆ ಆರಂಭವಾಗಿದೆ ಕೃಷಿಯ ಸಮಸ್ಯೆ.....

ಅದು ಯಾರಿಗೆ?. ಎನ್ನುವುದೇ ಮೊದಲ ಪ್ರಶ್ನೆ. ಕೃಷಿಯ ನಿಜವಾದ ಸಮಸ್ಯೆಯ ಬಗ್ಗೆ ದನಿ ಎತ್ತಿದರೆ ಪರವಾಗಿಲ್ಲ.ಇದೆ ಸಮಸ್ಯೆಯಿದೆ ಎಂದು ದೂರ ಎಲ್ಲೋ ಮಾಯಾನಗರಿಯಲ್ಲಿರುವ ಒಬ್ಬ ವ್ಯಕ್ತಿ ಹೇಗೆ ಹೇಳುತ್ತಾನೆ?ಆತನಿಗೆ ಹಳ್ಳಿಯೊಳಗಿನ ಸಮಸ್ಯೆ ಅರಿವಾಗಲು ಹೇಗೆ ಸಾಧ್ಯ.? ಆತ ಅಲ್ಲಿಂದಲೇ ಹೋ... ಎಷ್ಟು ಚೆನ್ನಾಗಿದೆ ಹಳ್ಳಿ... ಅಂತ ಹೇಳಬಹುದು. ಅಥವಾ ಯಾರೋ ಹೇಳಿದ್ದನ್ನು ಕೇಳಿ ಕಂಠಪಾಠ ಮಾಡಿ ಮತ್ತೆ ಮತ್ತೆ ಅದೇ ರಾಗವನ್ನು ಹಾಡಿಕೊಂಡು "ಹೆಸರನ್ನು" ಗಿಟ್ಟಿಸಿಕೊಳ್ಳಬಹುದು. ಬಿಟ್ಟರೆ ಬೇರೇನೂ ಸಾದ್ಯವಿಲ್ಲ. ನನಗೆ ಇಷ್ಟುಕ್ಕೂ ಏಕೆ ಮೈ ಉರಿಯಿತೆಂದರೆ ಮೊನ್ನೆ ಒಂದು ಪತ್ರಿಕೆಯಲ್ಲಿ "ಒಬ್ಬರು", ರೈತರ ಸಮಸ್ಯೆ ... ಅಲ್ಲಿ ಹಾಗಿದೆ.. ಹೀಗಿದೆ... ಕೂಲಿಕಾರರ ಸಮಸ್ಯೆ... ಹೀಗೆ ಸಮಸ್ಯೆಗಳ ಸುರಿಮಳೆಯನ್ನೇ ಹೇಳುತ್ತಾ.. ಹುಡುಗರಾರು ಅಲ್ಲಿ ನಿಲ್ಲುತ್ತಿಲ್ಲ ಎಂದು ಪರಿಸಮಾಪ್ತಿ ಮಾಡುತ್ತಾರೆ. ಇದು ಹೆಸರನ್ನು ಗಳಿಸಿಕೊಳ್ಳುವ ರೈತ ಪರ ಎನ್ನಿಸಿಕೊಳ್ಳುವ ವ್ಯವಸ್ಥೆ ಅಂತ ಆಗಲೇ ಭಾವಿಸಿದೆ. ಏಕೆ ಗೊತ್ತಾ ?.ಅಲ್ಲೆ ಅವರು ಸಮಸ್ಯೆಗಳನ್ನು ಹೇಳುತ್ತಾ ಯುವಕರಾರು ಹಳ್ಳಿಯಲ್ಲಿ ನಿಲ್ಲುತ್ತಿಲ್ಲ ಎಂದು ಹೇಳುತ್ತಾರೆ. ಅಲ್ಲಾ ಸ್ವಾಮಿ .. ನೀವು ಹೀಗೆ ಸಮಸ್ಯೆಗಳನ್ನೇ ಹೇಳಿದರೆ ಯಾರು ತಾನೆ ಇಲ್ಲಿ ನಿಂತಾರು ಹೇಳಿ?. ಅಲ್ಲಿರುವ ಸಾಧನೆಗಳ ಬಗ್ಗೆ ಹೇಳಿ... ಕೂಲಿಕಾರರರು ಕಷ್ಟದಿಂದಲಾದರೂ ಸಿಗುತ್ತಾರಲ್ಲಾ ಅದನ್ನು ಹೇಳಿ... ಎಲ್ಲೋ ಕೆಲವು ಇಲಾಖೆಗಳು ಕೃಷಿಕರಿಗೆ ಸಮಸ್ಯೆ ಕೊಡುತ್ತಾರಲ್ಲಾ ಆಗ ಅವರ ಪರ ನಿಲ್ಲಿ. ಅದು ಬಿಟ್ಟು ಸಮಸ್ಯೆ ಇದೆ ಎಂದು ಹೇಳಿದರೆ ಏನು ಪ್ರಯೋಜನ. ಏನಾದರೂ ಇದೆಯಾ?. ಹಳ್ಳಿಯನ್ನು ಇನ್ನಷ್ಟು ದೂರವಾಗಿಸುವ ಪ್ರಯತ್ನ ಇದಲ್ಲದೆ ಮತ್ತಿನ್ನೇನು?.

ನಿಜಕ್ಕೂ ಹಳ್ಳಿಯ ಸೊಬಗು ಚೆನ್ನಾಗಿದೆ... ಇಲ್ಲಿ ಸಮಸ್ಯೆ ಇದೆ. ಇಲ್ಲವೇ ಇಲ್ಲ ಅಂತಲ್ಲ. ಈಗ ಅದೆನ್ನೆಲಾ ಎದುರಿಸಲು ಪ್ರಯತ್ನಗಳು ನಡೆಯುತ್ತಿದೆ. ಸಮಸ್ಯೆ ಇದೆ ಎಂದು ಪಲಾಯನ ಮಾಡುವುದು ಸರಿನಾ ಅಂತ ರೈತರಿಗೆ ಧೈರ್ಯ ಹೇಳುವುದು ಬಿಟ್ಟೂ ಅಯ್ಯೋ ಅಲ್ಲಿ ಸಮಸ್ಯೆ ಇದೆ... ಇದೆ ಅಂತ ಹೆದರಿಸಿ ಮತ್ತೆ ಅವರ ಮಾನಸಿಕ ಧೈರ್ಯವನ್ನು ಕುಸಿತಮಾಡುವುದಾ?. ಸಮಸ್ಯೆಯ ಹಿಂದೆ ನಿಂತಾಗ ಸಹಜವಾಗಿಯೇ ರೈತರಿಗೆ ಧೈರ್ಯ ಬರುತ್ತೆ. ಒಂದಷ್ಟು ಜನ ಹಳ್ಳಿಯಲ್ಲೆ ಉಳಿಯುತ್ತಾರೆ. ಇಲ್ಲಾಂದ್ರೆ ಜನ ಮಾಯಾನಗರಿಯನ್ನೆ ಅರಸುತ್ತಾರೆ.

ಈಗ ಇನ್ನೊಂದು ಬೆಳವಣಿಗೆ ಆರಂಬವಾಗುತ್ತಿದೆ. ಇಂದಿನ ಆರ್ಥಿಕ ಅಸ್ಥಿರತೆಯ ,ಆರ್ಥಿಕ ಅಲ್ಲೋಲ ಕಲ್ಲೋಲದಿಂದಾಗಿ ಮಾಯಾನಗರಿಯಲ್ಲಿ ಜೀವನ ಮಟ್ಟವನ್ನು ಸುಧಾರಿಸುವುದು ಕಷ್ಟ ಹಾಗಾಗಿ ಹಳ್ಳಿಯೇ ವಾಸಿ ಎನ್ನುವ ಚರ್ಚೆಗಳು ಹಳ್ಳಿಯಲ್ಲಿ ಆರಂಭವಾಗುತಿದೆ.ಬಹುತೇಕ ಯಾಂತ್ರಿಕ ಕೃಷಿಯಲ್ಲಿ ತೊಡಗಿಕೊಂಡು ನೆಮ್ಮದಿಯ ಬದುಕನ್ನು ಅರಸುವಂತಾಗಿದೆ. ಚಿಕ್ಕದೊಂದು ಉದ್ಯೋಗ ಹಳ್ಳಿಯಲ್ಲೇ ಕೃಷಿಯೊಂದಿಗೆ ಇದ್ದರೆ ಚೆನ್ನ ಎಂಬಂತಾಗಿದೆ. ಹಾಗಾಗಿ ಇದುವರೆಗೆ ಶಾಲಾ ಮೇಷ್ಟುಗಳಾಗಲು ಹಿಂಜರಿಯುತ್ತಿದ್ದವರು ಈಗ ಅದರತ್ತಲೂ ಕಣ್ಣು ಹಾಯಿಸಿದ್ದಾರೆ.

ಹೊಸ ಬದಲಾವಣೆ ಆರಂಭವಾಗಲಿ. ಇದು ಹೆಚ್ಚು ಪ್ರಚಾರವಾಗಲಿ. ಸಮಸ್ಯೆ ಜೊತೆ ಸಾಗಿ ಪರಿಹಾರ ಕಾಣಲಿ. ಪರಿಹಾರ ಕಾಣದ ಸಮಸ್ಯೆಗಳನ್ನೇ ಮತ್ತೆ ಮತ್ತೆ ಕೆದಕುವುದು, ಸಮಸ್ಯೇ .. ಇದು ಸಮಸ್ಯೆ... ಅಂತ ರೈತರಿಗೆ ಹೇರುವುದು ಬೇಡ.

11 ಅಕ್ಟೋಬರ್ 2008

ತಪ್ಪಿದ ಬದುಕಿಗೆ ಕೊನೆ..???



ಇದು 2008 ರಲ್ಲೂ ಇರುವ ಜ್ವಲಂತ ಸಮಸ್ಯೆ.

ಸರಕಾರ ಯಾವುದೇ ಬರಲಿ , ಯಾರೇ ಮುಖ್ಯಮಂತ್ರಿಗಳಾಗಲಿ, ಏನೇ ಆದರೂ ಕೂಡಾ ಈ ಜನರ ಸಮಸ್ಯೆಗೆ ಪರಿಹಾರವೇ ಇಲ್ಲ. ಅವರ ಅಳಲನ್ನು ಕೇಳುವ ಮಂದಿಯೆ ಇಲ್ಲ. ನಗರದ ಕನಸನ್ನು ಹೊತ್ತ ಈ ಮಂದಿಯ ಪಾಡನ್ನು ನೋಡಿ ನಗರದಲ್ಲೆ ಕುಳಿತಿರುವ ಮಂದಿಗೆ ಅರ್ಥವಾದೀತೇ?.

ಸ್ವಾಮಿ ನಾವು ಯಾವಾಗ "ಮುಂದುವರಿದ"ವರಾಗುವುದು?. ಮುಂದುವರಿದ ದೇಶ ಎಂದರೆ ಈ ಹಳ್ಳೀಗೆ ಸೇತುವೆ ಮಾಡಿದರೆ ಮಾತ್ರಾ ಅಂತ ಅರ್ಥ ಅಲ್ಲ. ಆದರೆ ಈ ಸಮಸ್ಯೆ ಇರುವುದು ಇಂದು ನಿನ್ನೆಯದಲ್ಲ ಯಾವಾಗ ನಾಗರಿಕತೆ ಆರಂಭವಾಯೊತೋ ಅಂದಿನಿಂದ. ಹಾಗಾಗಿ ಈ ಜನರ ಪಾದು ನನಗೆ ಸುದ್ದಿಯೆನಿಸಿತು. ಜಗತ್ತಿಗೆ ಅರಿವಾಗಬೆಕು ಎನ್ನಿಸಿತು.

ಇದು ಬೆಳ್ತಂಗಡಿ ಸಮೀಪದ ನಿಟ್ಟೋಡಿ ಎಂಬ ಊರು.ಎಲ್ಲಾ ಊರುಗಳಂತೆಯೇ ಮಾನವ ಸಂಬಂಧದ ಮೇಲೆ ಪ್ರೀತಿ,ನಂಬಿಕೆಯನ್ನು ಉಳಿಸಿಕೊಂಡಿರುವ ಊರು. ಕಾರಣ, ಸುಮಾರು 50 ವರ್ಶಗಳಿಂದ ದ್ವೀಪವಾಗುತ್ತಿರುವ ಈ ಊರಿಗೆ ಸೇತುವೆಯನ್ನು ನಿರ್ಮಿಸಿಕೊಡುತ್ತೇವೆ ಅಂತ ಜನನಾಯಕರು ಹೇಳುತ್ತಲೇ ಬಂದಿದ್ದರು. ಇದುವರೆಗೆ ಕೈಗೂಡಲಿಲ್ಲ.ಆದರೂ ಅವರ ಮಾತನ್ನು ನಂಬಿದ್ದರು. ಓಟು ಬಂದಾಗ ಅಣ್ಣಾ "ನಮಸ್ಕಾರ" ಎನ್ನುತ್ತಾ ಬರುವ ನಾಯಕರು ಓಟು ಮಗಿದ ಬಳಿಕ ಅಲ್ಲಿಂದಲೇ ನಮಸ್ಕಾರ... ಹಾಗೆನ್ನುತ್ತಾ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾ ಮಾತಿಗೆ ಆರಂಬಿಸಿತ್ತಾರೆ. ಅಂದು ಇಂದಿರಾ ಗಾಂಧಿ ಕಾಲದಲ್ಲಿ ಒಮ್ಮೆ ಸೇತುವೆಗೆ ಸಿದ್ದತೆ ನಡೆದಿದ್ದಂತೆ ನಂತರ ಅದೆಲ್ಲವೂ ಮಂಗ ಮಾಯ...! ಆ ಬಳಿಕ ಯಾವುದೇ ಕೆಲಸಗಳು ನಡೆದಿಲ್ಲ. . ಈ ಪುಟ್ಟ ಹಳ್ಳಿಯಲ್ಲಿ 4000 ಜನರಿದ್ದಾರೆ. ಎರಡು ನದಿಗಳು ಈ ಹಳ್ಳಿಯನ್ನು ದ್ವೀಪವನ್ನಾಗಿಸುತ್ತದೆ. ಹಾಗಾಗಿ ಇವರಿಗೆ ನದಿ ದಾಟಲು ದೋಣಿಯ ಬದುಕೇ ಗತಿ. ಮಳೆ ಜೋರಾಗಿ ಬಂದರೆ ನದಿಯಲ್ಲಿ ದೋಣಿ ಸಾಗದು. ಹೀಗಾಗಿ ಜೀವಗಳು ಅತ್ತ.. ಇತ್ತ ...ಇದು ಕಳೆದ 50 ವರ್ಷಗಳ ಸಮಸ್ಯೆ. ನಮಗೆ ಯಾವುದೋ ಮೂಲಗಳಿಂದ ಈ ಸಮಸ್ಯೆ ತಿಳಿದಿತ್ತು. ಆದರೆ ಇದುವರೆಗೆ ಯಾವುದೇ ಮಾಧ್ಯಮಗಳು ಈ ಬಗ್ಗೆ ಬೆಳಕು ಚೆಲ್ಲಿರಲಿಲ್ಲ. ಹೀಗಾಗಿ ನಾವು ಹೋದಾಕ್ಷಣ ನಾವೇ ಅವರಿಗೆ ಸೇತುವೆಯನ್ನು ನಿರ್ಮಿಸಿಕೊಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಜನ ಖುಷಿಯಾದಂತಿತ್ತು.ಹೀಗಾಗಿ ಅವರ ನಿರೀಕ್ಷೆ ಸುಳ್ಳಾಗದಿರಲಿ ಸರಕಾರ ಈ ಬಗ್ಗೆ ಗಮನ ಹರಿಸಲಿ ಅಂತ "ಜೀವವಿರುವ" ಭಗವಂತನಲ್ಲಿ ಪ್ರಾರ್ಥಿಸಿದೆವು.ಕೊನೆಗೊಮ್ಮೆ ಸೇತುವೆ ಬೇಡ ತೂಗುಸೇತುವೆಯಾದರೂ ಆಗಲಿ.

ತಪ್ಪದ ತೆಪ್ಪದ ಬದುಕಿಗೆ ಕೊನೆಯಾಗಲಿ...

ತಪ್ಪಲಿ ಅವರ ದೋಣಿಯ ಬದುಕು...


ನಾಯಿ ಕೂಡಾ ದೋಣಿಗಾಗಿ ಕಾಯುತ್ತಿದೆಯೇ..??

05 ಅಕ್ಟೋಬರ್ 2008

ಬಸ್ ಯಾನ ....




ಬಸ್ ಪ್ರಯಾಣ.ಅನೇಕ ದಿನಗಳ ಬಳಿಕ ಅನುಭವವಾಯಿತು.ಅದರಲ್ಲೂ ಲೋಕಲ್ ಬಸ್ ಗಳಲ್ಲಿ ಪ್ರಯಾಣಿಸುವ ಅನುಭವ ಇದೆಯಲ್ಲ ಅದು ಒಂದು ರೀತಿಯಲ್ಲಿ ಖುಷಿ...ಸುದ್ದಿಯ ಮೂಲ.... ಇನ್ನೊಂದು ರೀತಿಯಲ್ಲಿ ಮಾನಸಿಕ ಕಿರಿ ಕಿರಿ. ನೈಟ್ ಬಸ್ ಗಳ ಪ್ರಯಾಣವಾದರೆ ಹಾಗಲ್ಲ. ರಾತ್ರಿ ಬಸ್ ಹತ್ತಿದರೆ ಬೆಳೆಗ್ಗೆ ಎಲ್ಲಿ ಬೇಕೋ ಅಲ್ಲಿ. ವಾಹನದ ಸದ್ದು ಬಿಟ್ಟರೆ ಮತ್ತೇನೂ ಇಲ್ಲ. ರಾತ್ರಿ ಬಸ್ ಗಳ ಪ್ರಯಾಣದ ಅನುಭವಕ್ಕಿಂತ ಲೋಕಲ್ ಬಸ್ ಪ್ರಯಾಣ ವಿಶಾಲ ಅನುಭವ ನೀಡುತ್ತದೆ.

ನಾನು ಲೋ(ಸ್ಲೋ)ಕಲ್ ಬಸ್ ನಲ್ಲಿ ಪ್ರಯಾಣಿಸದೆ ಅನೇಕ ಸಮಯಗಳಾಗಿತ್ತು.ಅನಿವಾರ್ಯವಾಗಿ ಕೆಲ ದಿನಗಳು ಬಸ್ ನಲ್ಲಿ ಪ್ರಯಾಣಿಸಬೇಕಾದ ಸಂದರ್ಭ ಬಂದಿತ್ತು. ಬಹುಶ: ಕಾಲೇಜು ದಿನಗಳ ಬಳಿಕ ಸ್ಕೂಟರ್ , ಬೈಕ್ , ಕಾರುಗಳಲ್ಲೆ ಪಯಾಣಿಸುತ್ತಿದ್ದ ಸಂದರ್ಭದಲ್ಲಿ ಆಗುತ್ತಿರುವ ಅನುಭವಕ್ಕಿಂತ ಇದು ಎಷ್ಟೋ ಭಿನ್ನ. ಪುತ್ತೂರಿಗೆ ತೆರಳಲು ಹಳ್ಳಿಯಿಂದ ಅಂದರೆ ನಮ್ಮಂತ ದೂರದ ಮಂದಿಗೆ ಬೆಳಗ್ಗೆ 7 ಗಂಟೆಗೆ ಹೊರದಬೇಕು. ಆ ಬಸ್ಸು ಬಿಟ್ತರೆ ಮತ್ತೆ ಬೇರೆ ಬಸ್ಸಿಲ್ಲ.ಹಾಗಾಗಿ 45 ಕಿ ಮೀ ದೂರದ ಪುತ್ತೂರಿಗೆ ಹೋಗಲು ಬೆಳಗ್ಗೆ ಬೆಗನೆ ಎದ್ದು ನಿತ್ಯ ಕರ್ಮವನ್ನು ಮುಗಿಸಿ ಬಸ್ಸಿಗೆ ಹೊರಡಲು ಅನುವಾಗಬೆಕು. ಅಂತೂ ಹೊರಟು ಬಂದಾಗ ಬಸ್ಸು ತಪ್ಪಿತೆಂದರೆ ಮತ್ತೆ 4-5 ಕಿ ಮೀ ದೂರ ಕಾಲ್ನಡಿಗೆ. ಆಗ ಬೈಯುವುದು ಮನೆಯಲ್ಲಿರುವ ಅಮ್ಮನನ್ನ ಅಥವಾ ಇನ್ನಾರನ್ನದರೂ. ಯಾಕೆಂದರೆ ಬೇಗನೆ ಸಿದ್ದ ಪಡಿಸಿಕೊಡಲಿಲ್ಲ, ಈಗ ನಾನು ನಡಿಯುವ ಹಾಗಾಯಿತಲ್ಲಾ ಅಂತ ಕೋಪ.ಒಂದು ವೇಳೆ ಬಸ್ಸು ಸಿಕ್ಕಿತು ಎನ್ನಿ.ಸೋಮವಾರವಾದರಂತೂ ಬಸ್ ರಶ್. ಸೀಟು ಸಿಗಲಾರದು. ಪುತ್ತೂರಿನವರೆಗೂ ಸ್ಟ್ಯಾಂಡಿಂಗ್..!.ಉಳಿದ ದಿನಗಳಲ್ಲಿ ಪರವಾಗಿಲ್ಲ ಎನ್ನುಬಹುದು. ಇಷ್ಟೆಲ್ಲಾ ಆದ ಬಳಿಕ ಪುತ್ತೂರಿಗೆ ತಲಪಿದರೆ. ಮತ್ತೆ ಕೆಲಸದ ಜೊತೆಗೆ ನೆನಪಾಗುವುದು ಸಮಯ. ಸಂಜೆ ಲಾಸ್ಟ್ ಬಸ್ 4.30ಕ್ಕೆ. ಅದಕ್ಕೂ ಮುನ್ನ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕು. ನಮಗೆಲ್ಲಾ ಎಲ್ಲಾಗುತ್ತೆ ಹಾಗೆ. ಅಲ್ಲಿ ಒಬ್ಬ ಮಿತ್ರ ಸಿಕ್ಕರೆ ಮಾತು... ಅಂತೂ ಇಂತೂ ಹಾಗೂ ಹೀಗೂ ಸಂಜೆಯಾಗಿ ಬಿಡುತ್ತೆ. ಬಸ್ ಗೆ ಸಮಯವೂ ಆಗಿ ಬಿಡುತ್ತೆ. ಇದು ನಮ್ಮಂಥವರ ಪಾಡಾದರೆ. ಹಳ್ಳಿಗರದ್ದು ಅಂದರೆ ಕೃಷಿಯಲ್ಲಿ ತೊಡಗಿಕೊಂಡಿರುವ ಮಂದಿಯದ್ದು ಹಾಗಲ್ಲ. ಅವರದ್ದು ಪೂರ್ವಯೋಜಿತವಾದ ಕೆಲಸಗಳು.ಇಂಥವಾರ ಪುತ್ತೂರಿಗೆ ಹೋಗುವುದು ಅಂತ ಸಿದ್ದತೆ ಮಾಡಿರುತ್ತಾರೆ. ಅಂದರೆ ಹಳ್ಳಿಯಲ್ಲಿ ದೊಡ್ಡ ಸಿಟಿ ಅಂದರೆ ಪುತ್ತೂರೆ. ಹಾಗಾಗಿ ಮೊದಲೆ ಸಿದ್ದತೆ. ಬೆಳಗ್ಗೆ ಬೇಗನೆ ಹೊರಟು ಅಷ್ಟೂ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ನಿಜವಾಗಲೂ ಪುತ್ತೂರಿಗೆ ನಮ್ಮೂರಿಂದ ಇರುವುದು 40 ರಿಂದ 45 ಕಿ ಮೀ. ಕೇವಲ 0.45 ರಿಂದ 1 ಗಂಟೆ ಪ್ರಯಾಣ..!! ಆದರೆ ವಾಹನಗಳ ಓಡಾಟ ಹಾಗೂ ರಸ್ತೆಯ ಕಾರಣದಿಂದಾಗಿ ಇದೆಲ್ಲಾ ಸಮಸ್ಯೆ.

ಇನ್ನು ಬಸ್ ಎಂದರೆ ಅಲ್ಲಿ ಮಾತನಾಡದ ವಿಷಯಗಳಿರುವುದಿಲ್ಲ. ಏನೆಲ್ಲಾ ಚರ್ಚೆಗಳಾಗುತ್ತವೆ. ಅದು ಹಾಗಲ್ಲವಂತೆ .. ಹೀಗಂತೆ... ಅಲ್ಲಿ ಹೀಗೊಂದು ಘಟನೆಯಾಗಿದೆಯಂತೆ... ಏನಂತೆ ಅದು ... ಹೀಗೆಯೆ ಅನೆಕ ಚರ್ಚೆಗಳು ನಡೆಯುತ್ತದೆ. ಕೆಲವೊಮ್ಮೆ ಕಂಡೆಕ್ಟರೊಂದಿಗೆ ಚಿಲ್ಲರೆಗಾಗಿ "ಚಿಲ್ಲರೆ" ಜಗಳ. "ನೋಡಿಕೊಳ್ಳು"ವ ಹಂತಕ್ಕೂ ಬರುತ್ತೆ ಬಿಡಿ. ಇಂತಹ ಹಲವು ಮಜಲುಗಳನ್ನು ದಾಟಿ ನೂರೆಂಟು ಕಡೆ ನಿಲ್ಲುವ ಬಸ್ಸು ಪುತ್ತೂರಿಗೆ ತಲಪುವಾಗ ಬರೊಬ್ಬರಿ 9 ಗಂಟೆ.ಅಂದರೆ ಭರ್ತಿ 2 ತಾಸು ಬಸ್ ಪ್ರಯಾಣ.


ಮತ್ತೆ ಬಸ್ ಯಾನದ ಅದರಲ್ಲೂ ಹಳ್ಳಿಯೊಳಗೆ , ನನ್ನೂರಲ್ಲೇ ಇರುವ , ನನ್ನೂರಿಗೇ ಬರುವ ಅದೇ ಬಾಳುಗೋಡು ಬಸ್ ನಲ್ಲಿ ಪ್ರಯಾಣಿಸುವ ಅನುವವಂತೂ ಖುಷಿಯಾಗಿತ್ತು. ಆದರೆ ಮತ್ತೆ ಮತ್ತೆ ಅಂತಹ ಅವಕಾಶ ಸಿಗದಿರಲಿ ಅಂತ ಮನದೊಳಗೆ ಹೇಳಿಕೊಳ್ಳುತ್ತಿರುತ್ತೇನೆ. ಯಾಕೆಂದರೆ 2 ಗಂಟೆ ಬಸ್ ನಲ್ಲಿ ಕುಳಿತುಕೊಳ್ಳುವುದೇ ಒಂದು ಸಜೆ.

29 ಸೆಪ್ಟೆಂಬರ್ 2008

ಸಕತ್ ಶಿರಾಡಿ ........!




ಶಿರಾಡಿ ಈಗಲೂ ಸಕತ್ ಆಗಿದೆ. ಹೇಗೆ ಅಂತನಾ?. ಅಯ್ಯೋ ಅದು ಒಂದು ಕತೆ ರೀ. ಶಿರಾಡಿ 8 ತಿಂಗಳ ನಂತರ ಪ್ರಸಗೊಂಡಾಗ ಅಬ್ಬಾ.. ಎನ್ನುವ ನೆಮ್ಮದಿ. ಅದು "ಆ" ಪ್ರಸಗೊಂಡಾಗ ಆದ ಸಂತಸದಷ್ಟೇ.ಅದುವರೆಗಿನ ನೋವುಗಳೆಲ್ಲಾ ಆ ಕ್ಷಣದಲ್ಲಿ ಮಾಯವಾಗಿತ್ತು.ಆದರೆ ಈಗ ಕತೆ ಅದಲ್ಲ. ಹಾಗೆ ಪ್ರವಸಗೊಂಡು ಇನ್ನೂ 3 ತಿಂಗಳಲಾಗಿಲ್ಲ. ಅದಾಗಲೆ ಇನ್ನೊಂದಕ್ಕೆ ಸಿದ್ಧವಾಗಿ ಬಿಟ್ಟಿದೆ ರೀ...!!!??. ಮತ್ತೊಂದು ನೋವಿಗೆ ಕಾರಣವಾಗುತ್ತಲಿದೆ. ಗಮ್ಮತ್ತು ಗೊತ್ತಾ. ನಾನು ಮತ್ತು ಮಿತ್ರ ಲೋಕೇಶ ಆ ಕಡೆ ಹೋಗಿದ್ದೆವು. ಘಾಟಿಯ ಪೂರ್ತಿಯಲ್ಲ ಮುಕ್ಕಾಲು ಭಾಗ ಹೋಗಿ ಸಂಪೂಣ ವೀಕ್ಷಿಸಿ ಬಂದು ಇನ್ನೇನು ವರದಿಗೆ ಅಂತಿಮ ರೂಪ ಕೊಡಬೇಕಲ್ಲ ಅಂತ ಕ್ಯಾಮಾರಾದ ಮುಂದೆ ನಿಂತಾಗ ಶರ್ಟ್ ಸಂಪೂರ್ಣ ಬಿಳಿ... ಮೀಸೆ .... ತಲೆಗೂದಲೂ ಹಾಗೇ ಬಿಳಿ ಆಗಿತ್ತು. ಆ ನಡುವೆಯೇ ವರದಿಗೆ ಅಂತಿಮ ರೂಪ ನೀಡಿ ಹೊರಟದ್ದೇ. ಮನೆಗೆ ಬಂದು ಸ್ನಾನ ಮಾಡಿ ಮಲಗಿದ ಮೇಲೆ ಎಚ್ಚರವಾದದ್ದು ಬೆಳಗ್ಗೆ 8 ಕ್ಕೆ....


ಶಿರಾಡಿ. ಯಾರಿಗೆ ಗೊತ್ತಿಲ್ಲ ಹೇಳಿ. ಅಂದು ಸುಮಾರು 8 ತಿಂಗಳುಗಳ ಕಾಲ ವಾಹನ ಸಂಚಾರ ಬಂದ್ ಆದ ಸಂದರ್ಭದಲ್ಲಿ ಶಿರಾಡಿಯು ಅತ್ಯಂತ ಹೆಚ್ಚು ಪ್ರಚಾರ ಪಡೆಯಿತು. ಅಂದ ಹಾಗೆ ಶಿರಾಡಿಯು ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುಂಡ್ಯದಿಂದ ಮುಂದಿನ ಘಾಟಿ ಪ್ರದೇಶ. ಕಳೆದ ವರ್ಷ ಈ ರಸ್ತೆಯು ತೀರಾ ಹದಗೆಟ್ಟು ಸಂಚಾರವೇ ಕಡಿದು ಹೋಗುವ ವೇಳೆ ಎಚ್ಚೆತ್ತ ಸರಕಾರ ಹಾಗೂ ಜನಪ್ರತಿನಿಧಿಗಳು ದುರಸ್ಥಿಗೆ ಮುಂದಾದರು. ಈ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಸುವ್ಯವಸ್ಥಿತವನ್ನಾಗಿಸಲು ಎರಡು ಹಂತಗಳಲ್ಲಿ ಅನುದಾನವನ್ನು ಹೆಚ್ಚಿಸಲಾಯಿತು. ಹಾಗೆ ಒಟ್ಟು ಅನುದನ 46.42 ಕೋಟಿ ರೂಗಳ ಬೃಹತ್ ಹಣವನ್ನು ಶಿರಾಡಿಯಲ್ಲಿ ಸುರಿಯಲಾಯಿತು. ಅದರಂತೆ ಶಿರಾಡಿಯ 34 ಕಿಮೀ ರಸ್ತೆಯ ಪೂರ್ತಿ ದುರಸ್ಥಿಗೆ ಸಂಬಂಧಿತ ಇಲಾಖೆ ಮುಂದಾಯಿತು. ಆ ಪ್ರಕಾರ ಈ ರಸ್ತೆಯ 13 ತಿರುವುಗಳು, 54 ಮೋರಿಗಳು , ಹಾಗೂ 2 ಸೇತುವೆಗಳನ್ನು ದುರಸ್ಥಿಗೆ ಮುಂದಾಗಿತ್ತು. 13 ಕಾಂಕ್ರೀಟ್ ರಸ್ತೆಗಳ ದುರಸ್ಥಿಯ ಗುತ್ತಿಗೆಯನ್ನು ದಕ್ಷಿಣ ಕನ್ನಡದ ಉಜಿರೆಯ ಭಂಡಾರ್ಕರ್ ಕಂನ್ಟ್ರಕ್ಷನ್ ಅವರಿಗೆ 8.42 ಕೋಟಿ ರೂಗಳಿಗೆ ನೀಡಲಾಗಿತ್ತು. ಮತ್ತು ಇನ್ನೂ ಅನುದಾನಗಳಿಂದ ಚರಂಡಿ ವ್ಯವಸ್ಥೆಗೂ ಇದೇ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿತ್ತು. ಈ ಕಾಂಕ್ರೀಟ್ ರಸ್ತೆಯು 60 ಸೆಂಟೀಮೀಟರ್ ನಷ್ಟು ದಪ್ಪವಾಗಿದೆ.ಒಟ್ಟು 13 ತಿರುವುಗಳು 108 ಕೀ ಮೀ ಅಳತೆಯಾಗುತ್ತದೆ. ಆದರೆ ರಸ್ತೆಯ ಡಾಮರೀಕರಣವನ್ನು ತಮಿಳುನಾಡು ಮೂಲದ ದುರ್ಗಾ ಕಂನ್ಟ್ರಕ್ಷನ್ ನವರಿಗೆ 24 ಕೋಟಿ ರೂಗಳ ವೆಚ್ಚದಲ್ಲಿ ಗುತ್ತಿಗೆಯನ್ನು ನೀಡಲಾಗಿತ್ತು.ಇನ್ನೊಂದು ಕಾಮಗಾರಿಯನ್ನು ರಮೇಶ್ ಕೊಟ್ಟಾರಿ ಕಂನ್ಟ್ರಕ್ಷನ್ ನವರಿಗೆ 5.37ಕೋಟಿ ರೂಗಳ ವೆಚ್ಚದಲ್ಲಿ ನೀಡಲಾಗಿತ್ತು. ಹೀಗಾಗಿ ಈ ಶಿರಾಡಿ ರಸ್ತೆಯ ಸಂಪೂರ್ಣ ದುರಸ್ಥಿ ಮಾಡುವ ಸಲುವಾಗು 2007 ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಗೊಳಿಸಿ ಕಾಮಗಾರಿಯನ್ನು ಶುರುಮಾಡಲಾಗಿತ್ತು. ಸುಮಾರು 8 ತಿಂಗಳ ಬಳಿಕ ಅಂದರೆ 2008 ಎಪ್ರಿಲ್ 30 ರೊಳಗಾಗಿ ಶಿರಾಡಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಗಾಗಿ ವಿಳಂಬಗೊಂಡು ಜೂನ್ ಮೊದಲವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಏಕಾ‌ಏಕಿ ಶಿರಾಡಿಗೆ ಆಗಮಿಸಿದ ಕೇಂದ್ರ ಭೂ ಸಾರಿಗೆ ಸಚಿವರು ರಸ್ತೆಯನ್ನು ಮುಕ್ತಗೊಳಿಸಲು ಸೂಚನೆ ನೀಡಿದರು .ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು ಶಿರಾಡಿಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಮಳೆಬೀಳುವ ಪ್ರದೇಶವಾದ್ದರಿಂದ ಮುತುವರ್ಜಿಯಿಂದ ಕೆಲಸ ಮಾದಲಾಗಿದೆ ಎಂದೂ ಹೇಳಿದ್ದರು.ಗುಂಡ್ಯ ಬಿ ಸಿ ರೋಡ್ ರಸ್ತೆಯೂ ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಅಂತಲೂ ಹೇಳಿದ್ದರು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಶಿರಾಡಿಯ ಕತೆ ಮತ್ತದೇ. ಎಲ್ಲೆಲ್ಲೂ ರಾಡಿ ಎದ್ದಿದೆ. ಡಾಮರು ರಸ್ತೆಯೆ ಕಾಣುತ್ತಿಲ್ಲ. ಸರ್ವಂ ಧೂಳು ಮಯಂ.

ಇಂದು ಶಿರಾಡಿಯ ಕೆತೆ ಎನು?. ಎನ್ನುವ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಗುಂಡ್ಯದಿಂದಲೇ ರಸ್ತೆ ಹದಗೆಡಲು ಆರಂಬಗೊಂಡಿದೆ. ಎಲ್ಲಾ ತಿರುವುಗಳಲ್ಲಿ ಡಾಮರನ್ನು ಹುಡುಕಿತೆಗೆಯಬೇಕಾಗಿದೆ. ಒಂದು ವೇಳೆ ಘನ ವಾಹನಗಳ ಹಿಂದೆ ನಾವೇನಾದರೂ ಹೋದರೆ ಘಾಟಿ ಪ್ರಯಾನ ಮುಗಿದೊಡನೆ ನಮ್ಮ ಬಣ್ಣವೂ ಬದಲಾಗಿರುತ್ತದೆ. ಅಷ್ಟೂ ಧೂಳು ಎದ್ದು ಬರುತ್ತದೆ. ಸುತ್ತಲಿನ ಮರ ಗಿಡಗಳು ತಮ್ಮ ಬಣ್ಣವನೇ ಬದಲಾಯಿಸಿ ಬಿಟ್ಟಿವೆ. ಈವರೆಗೆ ಕಾಂಕ್ರೀಟ್ ರಸ್ತೆಗಳು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ. ಸುಲಭದಲ್ಲಿ ಹೇಳುವುದಾದರೆ ಗುಂಡ್ಯದಿಂದ ಆರಂಭಿಸಿ ಶಿರಾಡಿ ಘಾಟಿ ಪೂರ್ತಿ ಡಾಮರು ರಸ್ತೆಯ ಎಡ್ರೆಸ್ಸೇ ಇಲ್ಲ. ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ ಕೆಂಪುಹೊಳೆಯಿಂದ ಮೇಲಿನ ಪ್ರದೇಶದಲ್ಲಿ ಇನ್ನೂ ರಸ್ತೆಗೆ ಇಂಟರ್ಲಾಕ್ ಅಳವಡಿಸುವ ಕಾರ್ಯ ಮುಗಿದಿಲ್ಲ. ದುರಂತವೆಂದರೆ ಶಿರಾಡಿ ರಸ್ತೆಯು ವಾಹನ ಸಂಚಾರಕ್ಕೆ ಮುಕ್ತಗೊಂಡು ಇನ್ನೂ 3 ತಿಂಗಳು ಮುಗಿದಿಲ್ಲ ಈ ಮೊದಲೇ ರಸ್ತೆ ಎಕ್ಕುಟ್ಟಿ ಹೋಗಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟು ಶಿರಾಡಿ ದುರಸ್ಥಿಗಾಗಿ ವಿನಿಯೋಗಿಸಿದ್ದ 46.42 ಕೋಟಿ ಎಲ್ಲಿ ಹೋಯಿತು ಎನ್ನುವುದೇ ಒಂದು ಪ್ರಶ್ನೆಯಾದರೆ ಅಂದು ಮಳೆ ಆರಂಭದಲ್ಲೇ ಮಾಡಿದ ಕಾಮಗಾರಿ ಈ ಅವ್ಯವಸ್ಥೆಗೆ ಕಾರಣವೇ ಎಂಬುದು ಇನ್ನೊಂದು ಸಂಶಯ. ಈ ಎಲ್ಲದರ ನಡುವೆ ಸಚಿವರೇ ಈ ಕಾಮಗಾರಿಗೆ ಸರ್ಟಿಫಿಕೇಟ್ ನೀಡಿರುವುದು ಇನ್ನೊಂದು ಸಂಶಯಕ್ಕೆ ಕಾರಣವಾಗಿದೆ.

ಇಲ್ಲಿ ಇನ್ನೂ ಒಂದು ಅಂಶ ಬೆಳಕಿಗೆ ಬರುವುದು ಅದಿರು ಲಾರಿಗಳ ಓಡಾಟ. ಅತ್ಯಧಿಕ ಭಾರದ ಲಾರಿಗಳು ಈ ರಸ್ತೆಯಲ್ಲಿ ಸಾಗುವ ಕಾರಣದಿಂದಾಗಿ ಶಿರಾಡಿ ಇಷ್ಟು ಹದಗೆಡಲು ಕಾರಣವೇ?. ಆದರೆ ಅಧಿಕಾರಿಗಳೇ ಹೇಳಿರುವಂತೆ ಅತ್ಯಂತ ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಿರುವ ಕಾರಣ ಯಾವುದೇ ತೊಂದರೆಯಿಲ್ಲ. ಈ ರಸ್ತೆಯಲ್ಲಿ ಸರಿಸುಮಾರು ಪ್ರತಿನಿತ್ಯ 35 ಸಾವಿರ ವಾಹನಗಳು ಓಡಾಡುತ್ತವೆ.ಈ ಪೈಕಿ ಅದಿರು ಲಾರಿಗಳು 5 ರಿಂದ 10 ಸಾವಿರ ಓಡಾಡುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಿರು ಲಾರಿಗಳ ಸಂಖ್ಯೆ ಕಡಿಮೆಯಾಗಿರುವುದು ಕೂಡಾ ತಿಳಿದುಬರುತ್ತದೆ. ಕಾನೂನು ಪ್ರಕಾರ ಈ ಲಾರಿಗಳೆಲ್ಲಾ ನಿಯಮಿತವಾದ ಭಾರಗಳನ್ನೇ ಹೇರಬೇಕು. 6 ಚಕ್ರದ ಲಾರಿಗಳು 16.2 ಮೆಟ್ರಿಕ್ ಟನ್ , 10 ಚಕ್ರದ ಲಾರಿಯಲ್ಲಿ 25 ಮೆತ್ರಿಕ್ ಟನ್, 22 ಚಕ್ರದ ಲಾರಿಯಲ್ಲಿ 44 ಮೆಟ್ರಿಕ್ ಟನ್ ಭಾರವನ್ನು ಹೇರಿಕೊಂಡು ರಸ್ತೆಯಲ್ಲಿ ಸಾಗಬಹುದಾಗಿದೆ. ಈ ಭಾರಕ್ಕೆ ತಕ್ಕಂತೆ ರಸ್ತೆಯನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಆದರೆ ಈ ಭಾರಕ್ಕಿಂತ ಹೆಚ್ಚಿನ ಭಾರವು ಲಾರಿಯಲ್ಲಿ ಹಾಕಿದಾಗ ಅದು ರಸ್ತೆಯ ಮೇಲೂ ಪರಿಣಾಮ ಬೀರುತ್ತದೆ.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಯಾವುದೇ ರಸ್ತೆಯನ್ನು ಆಯಾ ಪ್ರದೇಶ ಮಳೆಯನ್ನು ಆಧರಿಸಿಕೊಂಡು ಅದಕ್ಕೆ ಅನುಗುಣವಾಗಿ ರಸ್ತೆಯನ್ನುವಿನ್ಯಾಸಗೊಳಿಸಿ ಅನುದಾನವನ್ನು ಪಡೆಯಬೇಕು. ಆದರೆ ಶಿರಾಡೀಯಂತಹ ಪ್ರದೇಶದಲ್ಲಿ ವಾರ್ಷಿಕವಾಗಿ ಸರಾಸರಿ 250 ರಿಂದ 400 ಇಂಚು ಮಳೆ ಬೀಳುತ್ತದೆ. ಆದರೆ ಈ ಲೆಕ್ಕವನ್ನು ಮಾಡದೆ ದೂರದಲ್ಲೆಲ್ಲೋ ಎ ಸಿ ಕಚೇರಿಯಲ್ಲಿ ಕುಳಿತು ಲೆಕ್ಕ ಹಾಕಿ ಮಾಡುವ ರಸ್ತೆಗಳು ಶಿರಾಡಿಯಂತಾಗದೇ ಉಳಿದೀತೇ?.ಎನ್ನುವುದು ಕೂಡಾ ಚರ್ಚೆಯಾಗಬೇಕಾದ ವಿಷಯವಾಗಬೇಕಾಗಿದೆ.

ಒಟ್ಟಿನಲ್ಲಿ ಸುಮಾರು 8 ತಿಂಗಳುಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಶಿರಾಡಿಯನ್ನು ದುರಸ್ಥಿ ಪಡಿಸಿ ಅತ್ತ ಚಾರ್ಮಾಡಿಯನ್ನೂ ದುಸ್ಥಿತಿಗೆ ತಳ್ಳಿ ಇತ್ತ ಮಡಿಕೇರಿಯ ಸಂಪಾಜೆ ಘಾಟಿಯನ್ನೂ ಹಾಳುಗೆಡಹಿ ಇದೀಗ ಮಾಡಿದ ಉದ್ಘಾಟನೆಗೊಂಡು 3 ತಿಂಗಳಲ್ಲೇ ಹಾಳಾಗಿರುವ ಶೀರಾಡಿಯನ್ನು ಇನ್ನೂ ಕೆಲ ತಿಂಗಳುಗಳ ಬಂದ್ ಗೊಳಿಸ ಬೇಕಾದ ದಿನ ದೂರವಿಲ್ಲ. ಆದರೆ ಈಗಾಗಲೆ ಶಿರಾಡಿಯಲ್ಲಿ ವಿನಿಯೋಗಿಸಿದ ಆ ಕೋಟಿ ಹಣ ನೀರಮೇಲಿನ ಹೋಮವೇ? ಎಂಬ ಪ್ರಶ್ನೆಗೆ ಉತ್ತರ ನೀಡುವವರಾರು?.

25 ಸೆಪ್ಟೆಂಬರ್ 2008

ಆಗಾಗ ಬದುಕಿ ಬರುವವರು...!! ಸಮಾಜವ ಹಿಂಡಲು..??




ಇವರೆಲ್ಲಾ ಎಲ್ಲಿದ್ರು ಅಂತ. ಇತ್ತೀಚೆಗೆ ಭೇಟಿ ನೀಡಿದ ಒಬ್ಬ ರಾಜಕೀಯ ಪ್ರಮುಖರು ನಾವು ಇನ್ನೂ ಜೀವ ಇದ್ದೇವೆ ಅಂತ ಒದರಿದರು. ಅವರು ಹಾಗೆ ಹೇಳಲು ಕಾರವೇನು ಗೊತ್ತಾ?. ಇತ್ತೀಚೆಗೆ ಕರಾವಳಿ ಹಾಗೂ ರಾಜ್ಯದಲ್ಲಿ ನಡೆದ ದಾಳಿ ಪ್ರಕರಣ.ಅದನ್ನು ನಾನು ಬಿಡಿಸಿ ಹೇಳಬೇಕೆಂದೇನಿಲ್ಲ. ಅಲ್ಲಾ ಸ್ವಾಮಿ ನೀವು ಬದುಕಿದ್ದೀರಿ ಅಂತ ನಾವು ಅಂದುಕೊಂಡಿರಲೇ ಇಲ್ಲ.ಯಾಕೆಂದ್ರೆ ನೀವು ಜೀವವಾಗೋದೇ ಈಗ ಮಾತ್ರಾ ಅಲ್ವಾ ಅಂತ ಬೀದಿ ಬೀದಿಯಲ್ಲಿ ಜನಮಾತನಾಡಿಕೊಂಡಿದ್ದು ಸತ್ಯ. ಅದು ಯಾಕೆ ಗೊತ್ತಾ?.

ಇದುವರೆಗೆ ಎಲ್ಲೂ ಕಾಣಿಸಿಕೊಳ್ಳದವರೂ ಈಗ ಕಾಣಿಸಿಕೊಂಡಿದ್ದಾರೆ. ಒಂದು ಧರ್ಮದ ಮೇಲೆ ಮತ್ತು ಅವರ ನಂಬಿಕೆಯ ಮೇಲೆ ಅವರ ಆಚರಣೆಯ ಮೇಲೆ, ಅವರ ಶ್ರದ್ಧಾ ಕೆಂದ್ರದ ಮೇಲೆ ದಾಳಿ ಮಾಡುವ ಹಕ್ಕು ಯಾರಿಗೂ ಇಲ್ಲ ಬಿಡಿ. ಹಾಗೆ ಮಾಡಿದ್ದಾರೆ ಎಂದರೆ ಅದು ಪರಮ ತಪ್ಪು. "ಅಲ್ಲಿ" ಲೋಪಗಳು ಉಭಯ ಕಡೆಗಳಿಂದಲೂ ಆಗಿದೆ ಅಂತ ಅಂದುಕೊಳ್ಳೋಣ.ಅಂತಹವರಿಗೆ ಶಿಕ್ಷೆಯಾಗಲೆಬೇಕು. ಅದರಲ್ಲಿ ಎರಡು ಮಾತಿಲ್ಲ.

ಆದರೆ ಇದನ್ನು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡವರು ಯಾರು ಗೊತ್ತಾ?. ರಾಜಕೀಯದ ನಾಯಕರು. ತಮ್ಮ ರಾಜಕೀಯದ ಭವಿಷ್ಯಕ್ಕಾಗಿ ಸಮಾಜದಲ್ಲಿ ಮತ್ತೆ ಮತ್ತೆ ಅಶಾಂತಿಯನ್ನು ಸೃಷ್ಠಿಸಿಕೊಂಡು ತಮ್ಮ ಸ್ಥಾನವನ್ನು ಭದ್ರ ಪಡಿಸುವ ಯತ್ನದಲ್ಲಿ ಇಂದಿಗೂ ತೊಡಗಿಕೊಂಡಿದ್ದಾರೆ. ಅತ್ತ ಓಟ್ ಬ್ಯಾಂಕನ್ನು ಎಲ್ಲಿ ಇನ್ನೊಂದು ಪಕ್ಷ ಕಸಿದು ಬಿಡುತ್ತದೋ ಎಂಬ ಭಯದಿಂದ ಒಂದಲ್ಲ ಎರಡೆರಡು ಬಾರಿ ಪ್ರಾರ್ಥನಾ ಮಂದಿರಗಳಿಗೆ ಭೇಟಿ ಮಾಡಿ ಸಾಂತ್ವನವೇನು.... ಕಣ್ಣೀರೇನು.... ಪತ್ರಿಕಾಗೋಷ್ಠಿಗಳೇನು..., ನಾವು ಬದುಕಿದ್ದೇವೆ ಎಂದು ಏನು ಹೇಳಿಕೆಗಳೇ ಹೇಳಿಕೆಗಳು. ದುರಂತದ ಸಂಗತಿಯೆಂದರೆ ಅವರು ಬದುಕಿರುವುದನ್ನು ಈಗಲ್ಲ ಅಂದೇ ತೋರಿಸಿಕೊಡಬೇಕಿತ್ತು. ನಮ್ಮ ರಾಜ್ಯದಲ್ಲಿ ಕುಡಿಯಲು ಇಂದಿಗೂ ನೀರಿಲ್ಲದ ಊರುಗಳೆಷ್ಟಿಲ್ಲ, ಸಮರ್ಪಕ ರಸ್ತೆಗಳಿಲ್ಲದ ಊರುಗಳು ಎಷ್ಠಿಲ್ಲ?, ಮನೆಗಳಿಲ್ಲದ ಮಂದಿ ಎಷ್ಠಿಲ್ಲ? ಅವರಿಗೆಲ್ಲಾ ಯಾರು ಬದುಕಿರುವವರು ಯಾರು?. ಸರಕಾರ ಆ ಕಡೆ ಕಣ್ಣೆತ್ತಿಯೂ ನೋಡಿಲ್ಲ. ಅಂತಹ ಜನರ ಬಳಿಗೆ ಹೋಗದ ಇಂದಿನ ರಾಜ್ಯ,ಕೇಂದ್ರ ಸರಕಾರವಿರಬಹುದು, ಸರಕಾರದ ಕಮಿಶನ್ಗಳಿರಬಹುದು , ವಿಶೇಷ ತಂಡಗಳಿರಬಹುದು ರಾಜಕೀಯ ನಾಯಕರಿರಬಹುದು ಎಲ್ಲಿದ್ದಾರೆ.. ಎಲ್ಲಿದೆ ಕಮಿಶನ್. ಜನರ ಸಮಸ್ಯೆಗೆ ಸ್ಪಂದಿಸದ ಇಂತಹ ನಾಚಿಕೆಗೇಡಿನ ರಾಜಕಾರಣಗಳು ಅನಗತ್ಯವಾಗಿ ಸಮಾಜದಲ್ಲಿ ಮತ್ತೆ ಮತ್ತೆ ಅಶಾಂತಿಗೆ ಕಾರಣವಾಗುವ ಹೇಳಿಕೆಗಳನ್ನು ನೀಡಿ,. ಅದೇ ಸ್ಥಳಗಳಿಗೆ ಮತ್ತೆ ಮತ್ತೆ ಭೇಟಿ ನೀಡಿ ಜನರ ಮನಸ್ಸನ್ನು ಮತ್ತೆ ಮತ್ತೆ ಘಾಸಿಗೊಳಿಸುವ ಪ್ರಯತ್ನ ನಡೆಸುತ್ತಾರಲ್ಲಾ ಇವರು ಲಜ್ಜೆಗೇಡಿನ ನಾಯಕರು. ದೇಶ ಉದ್ದಾರವಾದೀತಾ???

ಇದು ಹಲವು ದಿನಗಳ ಮನಸ್ಸಿನ ಭಾವನೆಗಳನ್ನು ತಡೆಯಲಾರದೆ ಬರೆಯಬೇಕಾಯಿತು.

22 ಸೆಪ್ಟೆಂಬರ್ 2008

ಗಣಿ .. ಗನಿ..

ಗಣಿ ಕಾಟ ರಾಜ್ಯದ ಎಲ್ಲೆಲ್ಲೂ ನಡೆಯುತ್ತಿದೆ.ಅಮೂಲ್ಯ ಸಂಪತ್ತುಗಳು ನಾಶವಾಗುತ್ತಿವೆ.ಪರಿಹಾರವೇ ಕಾಣದೆ ದಾರಿ ಕಾಣದಾಗಿದೆ... ಅದಕ್ಕೆ ತಕ್ಕ ನಮ್ಮ ವ್ಯವಸ್ಥೆಗಳು.ಒಬ್ಬ ಉತ್ತಮ ಅಧಿಕಾರಿಯಿದ್ದರೆ ಆತನಿಗೆ ಎತ್ತಂಗಡಿ ಕಾದಿಟ್ಟ ಬುತ್ತಿ.ಯಾವಾಗಬೆಕಾದರೂ ಎಲ್ಲಿಗೆ ಬೇಕಾದರೂ. ಈ ದೇಶ ಹೀಗಾದರೆ ಉದ್ದಾರವಾದಿತಾ ಅಮ್ತ ಮಿತ್ರರೊಂದಿಗೆ ಹರಟುವಾಗ ಅದೆಷ್ಟೋ ಬಾರಿ ಹೇಳಿದ್ದಕ್ಕೆ ಪುಷ್ಟಿ ನೀಡಿದೆ.

ಅತ್ತ ಬಳ್ಳಾರಿಯಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಇತ್ತ ಕರಾವಳಿ ಜಿಲ್ಲೆಯಲ್ಲಿ ಕಲ್ಲಿನ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲಿ ಬಹುತೇಕವುಗಳು ಅಕ್ರಮವಾಗಿ ನಡೆಸಲಾಗುತ್ತಿದೆ. ಇದನ್ನು ರೈಡ್ ಮಾಡಿದ ದಿಟ್ಟ ಅಧಿಕಾರಿಗಳಿಗೆ ವರ್ಗಾವಣೆ ಕಾದುನಿಂತರೆ ಗಣಿಗಾರಿಕೆಯನ್ನು ನಿಲ್ಲಿಸಬೇಕಾದ ಭೂವಿಜ್ಞಾನ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ.ಇದಕ್ಕೆ ಒಂದು ಉದಾಹಣೆ ಪುತ್ತೂರು ಸಮೀಪದ ಕಬಕದಲ್ಲಿದೆ. ಈ ಬಗ್ಗೆ ಅಲ್ಲಿಗೆ ಹೋಗಿದ್ದಾಗ ಸಿಕ್ಕ ಮಾಹಿತಿ ಇಲ್ಲಿದೆ

ಯಾವುದೇ ಒಂದು ಬಂಡೆಯನ್ನು ಅಥವಾ ಗಣಿಗಾರಿಕೆ ನಡೆಸಲು ಅಲ್ಲಿ ನುರಿತ ಹಾಗೂ ಅದಕ್ಕೆ ಸಂಬಂಧಿಸಿದ ಇಲಾಖೆಯಿಂದ ತರಬೇತಾದ ಕಾರ್ಮಿಕರೇ ದುಡಿಯಬೇಕು. ಆದರೆ ಅಲ್ಲೆಲ್ಲೂ ಅಂತಹ ಕಾರ್ಮಿಕರು ಕಾಣಿಸುವುದೇಯಿಲ್ಲ.ಮಾತ್ರವಲ್ಲ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಂತಹ ಗಣಿಗಾರಿಕೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾದಬೇಕು. ಆದರೆ ದುರಂತವೆಂದರೆ ಅಲ್ಲಿಗೆ ಅವರಾರೂ ಬಾರದೆ ಅನುಮತಿ ನೀಡಿರುತ್ತಾರೆ. ಹಾಗೆ ಅನುಮತಿ ನೀಡುವ ಮೊದಲು ಗಣಿಗಾರಿಕೆಯ 200 ಮೀಟರ್ ದುರ ಯಾವುದೇ ಮನೆಗಳು, ರಸ್ತೆಗಳು ,ಶಾಲೆಳನ್ನು ಗಮನಿಸಬೇಕು ಆದರೆ ಇಂದು ಅಂತಹ ಕಾನೂನುಗಳೆಲ್ಲವೂ ಗಾಳಿಗೆ ತೂರಲಾಗಿದೆ. ಇಂತಹುದೇ ಘಟನೆ ಪುತ್ತೂರಿನ ಕಬಕದಲ್ಲಿಒ ನಡೆದಿದೆ. ಅಲ್ಲಿನ ಕಾಯರ್ ಬಳ್ಳಿ ಎಂಬ ಗುಡ್ಡದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಗಣಿಗಾರಿಕೆ ನಡೆಯುತ್ತಿದೆ. ಯಾವೊಬ್ಬ ಅಧಿಕಾರಿಯೂ ಇಲ್ಲಿನ ಮನೆಗಳ ಬಗ್ಗೆ ಗಮನಹರಿಸಿಲ್ಲ. ಇತ್ತೀಚೆಗೆ ಸಾರ್ವಜನಿಕರ ದೂರುಗಳನ್ನು ಗಮನಿಸಿದ ಪುತ್ತೂರು ತಹಶೀಲ್ದಾರರು ಇಂತಹ ಗಣಿಕಾರಿಕೆಗಳ ಪ್ರದೇಶಕ್ಕೆ ದಾಳಿ ನಡೆಸಿದ್ದರು. ಆದರೆ ದಾಳಿ ನಡೆಸಿದ ಬಳಿಕ ರಾಜಕೀಯ ಹಾಗೂ ಹಣ ಬಲದಿಂದ ಮತ್ತೆ ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸ. ತಹಶೀಲ್ದಾರರು ದಾಳಿ ನಡೆಸಿದ ಪರಿಶೀಲಿಸಿದಾಗ ಕೆವಲ 50 ಸೆಂಟ್ಸ್ ಗೆ ಅನುಮತಿ ಪಡೆದು 1.87 ಎಕ್ರೆ ಪ್ರದೇಶದಲ್ಲಿ ಕಲ್ಲಿನ ಗಣಿಗಾರಿಕೆ ಮಾಡುತ್ತಿರುವುದು ಮತ್ತು ಇಂತಹ ಸ್ಫೋಟದಿಂದ ಸಮೀಪದ ಮನೆಗಳಿಗೆ ಹಾನಿಯಾದುದನ್ನು ಗಮನಿಸಿದ ತಹಶೀಲ್ದಾರರು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಹೀಗಾಗಿ ಮತ್ತೆ ಗಣಿ ಇಲಾಖೆಯು ತನಿಖೆ ನಡೆಸಿ ಮುಂದೆ ಪ್ರಬಲ ಸ್ಫೋಟಕ ಬಳಸದೆ ಕಂಟ್ರೋಲ್ಡ್ ಬ್ಲಾಸ್ಟ್ ಮಾಡುವಂತೆ ಗಣಿದಣಿಗಳಿಗೆ ನಿರ್ದೇಶನ ಹಾಗೂ ಅನುಮತಿಯನ್ನೂ ನೀಡಿತು.ಆದರೆ ಸಾಮಾನ್ಯ ಜನರಿಗೆ ಈ ಬ್ಲಾಸ್ಟ್ ಅರ್ಥವಾಗುವುದು ಹೇಗೆ ಎನ್ನುವುದರ ಬಗ್ಗೆ ವಿವರವೇ ಇಲ್ಲ.


ಪುತ್ತೂರಿನ ಕಬಕದ ಸರ್ವೆ ನಂಬ್ರ 26-1A ಯಲ್ಲಿ ಈ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್ ಗೂ ಮಾಹಿತಿಯಿದ್ದರೂ ಜನರ ಮನವಿಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಅದಲ್ಲದೆ ಇಲ್ಲಿನ ಗಣಿಗಾರಿಕೆಯೊಂದಿಗೆ ಕ್ರಶರ್ ಹುಡಿ ಅಣ್ದರೆ ಕಲ್ಲಿನ ಹುಡಿಯನ್ನೂ ಮಾಡಲಾಗುತ್ತದೆ.ಇದರಿಂದ ಅಪರಿಮಿತವಾದ ಕಲ್ಲಿನ ಧೂಳು ಊರಿನ ಸುತ್ತೆಲ್ಲಾ ಹಬ್ಬುತ್ತದೆ.ಕಾನೂನು ಪ್ರಕಾರ ಈ ಕ್ರಶರ್ ತಯಾರಿಕಾ ಘಟಕಕ್ಕೆ ೯ ಮೀಟರ್ ಎತ್ತರದ ಗೋಡೆಯನ್ನೂ ಕಟ್ಟಬೇಕು ಆದರೆ ಅದನ್ನೂ ಗಾಳಿಗೆ ತೂರಲಾಗಿದೆ.ಆದರೆ ಗನಿ ಮತ್ತು ಭೂವಿಜ್ಞಾನ ಇಲಾಖೆಯು 1998 ರಲ್ಲಿ ಹೇಳಿದ ಪ್ರಕಾರ ಕರ್ನಾಟಕ ಉಪ ಖಲಿಜ 94 ರ ನಿಯಮ ಪ್ರಕಾರ ಸ್ಫೋಟಕಗಳನ್ನು ಉಪಯೋಗಿಸದೇ ಕಲ್ಲುಗಣಿಗಳ ಕಾರ್ಯವನ್ನು ಮಾಡಬೇಕಲ್ಲದೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಕಲ್ಲಗಣಿಯನ್ನು ನಿಷೇಧಿಸಬೇಕು ಆದರೆ ಇದೇ ಇಲಾಖೆಯು 2006 ರಲ್ಲಿ ಹೇಳುತ್ತದೆ ಕಲ್ಲುಗಣಿಯನ್ನು ನೆಲಮಿತಿಯಿಂದ 6 ಮೀಟರ್ ಆಳ ಮತ್ತು ಸಾರ್ವಜನಿಕ ರೈಲ್ವೇ ಕಟ್ಟಡಗಳು ಇತ್ಯಾದಿಗಳ ರಚನೆಗಳೊಂದಿಗೆ ಇಲದೇ ಇದ್ದಲ್ಲಿ ಕಲ್ಲುಗಣಿಯನ್ನು ಸ್ಫೋಟಿಸಬಹುದು ಎನ್ನುತ್ತದೆ.ಹೀಗಾಗಿ ಒಂದು ದ್ಚಂದದಲ್ಲಿರುವ್ ಈ ಇಲಾಖೆಯ ಬಗ್ಗೆಯೇ ಸಂಸಯ ಹಿಟ್ಟಿಸುತ್ತದೆ.ಇಂತಹುಗಳ ಮಧ್ಯೆಯೇ ಇಂದಿಗೂ ಕಬಕದಲ್ಲಿ ಸ್ಫೋಟ ನಡೆಸಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಅನೆಕ ಮನೆಗಳು, ಅಂಗಡಿಗಳ ಗೋಡೆಗಳು ಬಿರುಕು ಬಿಟ್ಟಿವೆ, ಕಲ್ಲಿನ ಧೂಳು ಮನೆಯಲ್ಲೆಲ್ಲಾ ಕಾಣಿಸಿಕೊಳ್ಳುತ್ತಿದೆ, ಮನೆಯಲ್ಲಿರುವ ಮಕ್ಕಳು , ಹೆಂಗಸರು ಈ ಸ್ಫೋಟದ ಸಂದರ್ಭದಲ್ಲಿ ಬೆಚ್ಚಿಬೀಳುತ್ತಾರೆ. ಆದರೂ ಈ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಈ ಜನರ ಸಮಸ್ಯೆಯನ್ನು ಕೇಳುವ ಅಧಿಕಾರಿಗಳು ಬಂದರೆ ವರ್ಗಾವಣೆ ತಕ್ಷಣವೇ ನಡೆಯುತ್ತದೆ.

ಹಾಗೆಂದು ಇವರ ನಿಲುವು ಇದು...

ಗಣಿಗಾರಿಕೆಯೇ ಬೇಡ ಅಂತಲ್ಲ ಎಲ್ಲವೂ ನಿಯಂತ್ರಣದಲ್ಲಿ ನಡೆಯಲಿ

21 ಸೆಪ್ಟೆಂಬರ್ 2008

ಕಳಚುವ ಕೊಂಡಿ....



ಜೋರಾಗಿ ಮಳೆ ಬಂತು ರೈನ್ ಕೋಟ್ ಬೇರೆ ಇದ್ದಿರಲಿಲ್ಲ. ಕೆಲಸ ತುರ್ತಾಗಿದ್ದರೂ ಪರಿಚಯಸ್ಥರ ಮನೆಗೆ ಹೋಗಲೇಬೇಕಾಯಿತು.ಅದು ಅಷ್ಟೊಂದು ಶ್ರೀಮಂತರ ಮನೆಯಲ್ಲ.ಬಡತನದಲ್ಲಿರುವ ವೃದ್ಧ ದಂಪತಿಗಳಿರುವ ಮನೆ. ಅವರೊಂದಿಗೆ ಮದುವೆಯಾದ ಮಗಳು ಹಾಗೂ ಅಳಿಯ ವಾಸವಾಗಿದ್ದಾರೆ.ವೃದ್ಧರ ವಯಸ್ಸು ಸುಮಾರು 70 ರಿಂದ 80 ಇರಬಹುದು. ನನಗೆ ಯಾಕೋ ಇನ್ನೊಮ್ಮೆ ಈ ಮನೆ ನೆನಪಾಯಿತು. ಯಾಕೆ ಗೊತ್ತಾ?. ಆ ವೃದ್ದ ದ0ಪತಿಗೆ "ಸುಪುತ್ರ" ಕುಲಸಂಜಾತ , ಕುಲೋದ್ಧಾರಕ, ವಂಶೋದ್ಧಾರಕ ... ಹೀಗೆ ಏನು ಬೇಕಾದರೂ ವಿಶೇಷಣಗಳನ್ನು ಕೊಡಬಲ್ಲ ಏಕೈಕ ಪುತ್ರನಿದ್ದಾನೆ. ಆತನಿಗೆ ಮಾತ್ರಾ ಈ ವ್ರುದ್ಧರ ಬಗ್ಗೆ ಗೊಡವೆಯೇಯಿಲ್ಲ. ಇರುವುದು "ಮಹಾ"ನಗರಿಯಲ್ಲಿ. "ದೊಡ್ಡ" ಉದ್ಯೋಗದಲ್ಲಿ. ಆದರೆ ಹಳ್ಳಿಯಲ್ಲಿ ತಾಯಿ ತಂದೆ ಮಗನ ನಿರೀಕ್ಷೆಯಲ್ಲಿದ್ದಾರೆ, ಫೋನು ನಂಬ್ರದ ಹುಡುಕಾಟದಲ್ಲಿದ್ದಾರೆ, ಹಾಗಿದ್ದರೂ ಆತನ ಬಗ್ಗೆ ಇವರಿಗೆ ಹೆಮ್ಮೆಯಿದೆ...!!!. ಹೆತ್ತವರಿಗೆ ಹೆಗ್ಗಣ ಮುದ್ದು ಅಂದರೆ ಇದೇ ಅಲ್ಲವೇ..?

ಏನು ಗೊತ್ತಾ ವಿಷ್ಯ.?. ನಾನು ಹಾಗೆ ಆ ಮನೆಗೆ ಹೋದಾಗ ವೃದ್ಧರು ಕೇಳಿದ್ದು ನಿನಗೆ "......" ಗೊತ್ತಾ? ". ....." ಅದರ ಕಚೇರಿ ಬೆಂಗಳೂರಿನಲ್ಲಿದೆಯಂತೆ , ಆತ [ಅಂದರೆ ಮಗ] ಆ ಶಾಖೆಯಲ್ಲಿದ್ದಾನಂತೆ ನನ್ನಲ್ಲಿ ಫೋನು ನಂಬ್ರವೂ ಇಲ್ಲ . [ಇವರ ಮನೆಗೆ ಫೋನಿಲ್ಲ].ನಿನಗೆ ಹೇಗಾದ್ರೂ ಮಾಡಿ ಆ ನಂಬ್ರವನ್ನು ಸಂಗ್ರಹ ಮಾಡಿಕೋಡುವೆಯಾ?. ಎಲ್ಲಾದರೂ ನಿನಗೆ ಫೋನಿಗೆ ಸಿಕ್ಕರೆ ಒಂದು ಫೋನು ಮಾಡಬೇಕಂತೆ ಅಂತ ಹೇಳು... ಎಂದು ಹೇಳಿದರು. ಸರಿ.. ಸರಿ ಅಂದೆ. ನನಗೆ ತಿಳಿದಂತೆ ಆ ವೃದ್ಧ ಮಗನ ಓದಿಗೆ ಸಾಲ ಮಾಡಿ ತುಂಬಾ ಖರ್ಚು ಮಾದಿದ್ದರು. ಉಳಿದ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಅಷ್ಟೊಂದು ನೀಡದೆ "ವಂಶೋದ್ಧಾರಕ"ನಿಗೆ ಹೆಚ್ಚು ಓದಿಸಿದರು ,ಅದೂ ಕಷ್ಟ ಪಟ್ಟು . ಹಾಗಾಗೇ ಆತನಿಗೆ ಒಳ್ಳೆಯ ಉದ್ಯೋಗವೂ ಸಿಕ್ಕಿತು. ನಂತರ ಮದುವೆಯೂ ಆಯಿತು. ವಾಸ್ತವ್ಯ ಬದಲೂ ಆಯಿತು. ಆ ಬಳಿಕ ಈಗ ತಂದೆಯೇ ಎಲ್ಲಿರುವೆ ... ಹೇಗಿರುವೆ ಎಂದು ಕೇಳಲೂ ಆಗದ ಸ್ಥಿತಿ... ,ತಂದೆಗೆ ಮಗನೇ..... ಎನ್ನಲಾಗದ ಸ್ಥಿತಿ.... ಅಂದು ಅಷ್ಟು ಕಷ್ಟಪಟ್ಟದ್ದಕ್ಕೆ ಈಗ ವೃದ್ಧರಿಗೆ ಸಿಗುವ "ಪ್ರತಿಫಲ".

ಏನ್ರಿ ಇದು ಸಮಾಜ.?.ಒಂದು ತಂದೆ ಒಂದು ತಾಯಿಯನ್ನು ನೋಡಿಕೊಳ್ಳಲಾಗದವನೂ ಈ ಭೂಮಿಯ ಮೇಲೆ ಇದ್ದಾನಲ್ಲಾ. ಆತ ಎಂತಹ ಮೂರ್ಖ.ಅದೇ ಹಾದಿಯು ಮುಂದೆ ಈತನಿಗೂ ಲಭ್ಯವಾಗಬೆಕು ಆಗ ಮಾತ್ರಾ ತನ್ನ ತಪ್ಪಿನ ಅರಿವಾದೀತು. ಅಲ್ಲಿ A C ಕಚೇರಿಯೊಳಗೆ ಕುಳಿತು ಲಕ್ಷಗಟ್ಟಲೆ ಸಂಪಾದಿಸುವ ಈ "ಮೂರ್ಖ" ಇಲ್ಲಿ ತನ್ನ ತಂದೆ ತಾಯಿ ಹರಕಲು ಮನೆಯಲ್ಲಿ ಪರದಾಡುತ್ತಿರುತಾರಲ್ಲಾ ಆತನಿಗೆ ನಿಜವಾಗಲೂ ಮನುಷ್ಯತ್ವ ಇದೆಯಾ?. ಒಂದು ವೇಳೆ ಅಂದು ಅಷ್ಟು ಓದಿಸದೇ ಇರುತ್ತಿದ್ದರೆ ಇಂದು ಉನ್ನತಿಗೆರುವ ಅವಕಾಶವಿತ್ತಾ?.ಒಂದು ರೀತಿಯಲ್ಲಿ ಓದಿಸಿದ್ದೇ ತಪ್ಪು.

ಇದು ಒಬ್ಬನ ಕತೆಯಾಗಿರದು.ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇರಬಹುದು. ಅಲ್ಲಿ ಇಲ್ಲಿ ಸುತ್ತಿದಾಗ ಇಂತಹ ಪ್ರಕರಣಗಳು ನಮ್ಮ ಮುಂದೆ ಕಾಣಸಿಗುತ್ತವೆ ಆಗಿನ ತಕ್ಷಣದ ಅಭಿಪ್ರಾಯವನ್ನು ದಾಖಲಿಸಿಡಬೆಕು ಅಂದುಕೊಂಡಿದ್ದೇನೆ.

19 ಸೆಪ್ಟೆಂಬರ್ 2008

ಟಾಪ್ ಸಿ ಎಂ...!!??






ಏನ್ರಿ ಕತೆಯಿದು.?.ಅತ್ತ ನಮ್ಮ ಸಿ ಎಂ , ಸರಕಾರ ವಿವಿಧ ಸಮಸ್ಯೆಯಲ್ಲಿದೆ. ಒಂದಿಲ್ಲೊಂದು ತೂಗುಕತ್ತಿ ಬರುತ್ತಿದೆ. ಒಂದರ್ಥದಲ್ಲಿ ಸರಕಾರಕ್ಕೆ , ಮುಖ್ಯಮಂತ್ರಿಗಳಿಗೆ "ಬಂಧನ". ನಾನು ಕಂಡದ್ದು ಅದನ್ನೇ. ಹಾಗೇ ಸುತ್ತಾಡುತ್ತಾಯಿದ್ದಾಗ ವಾಹನವೊಂದರ ಟಾಪ್ ಗೆ ಕಟ್ಟಿದ ಬ್ಯಾನರ್ ನಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಕಾಣಿಸಿಕೊಂಡದ್ದು ಹೀಗೆ.

ಅಲ್ಲಾರೀ, ನಾವು ಹೇಗೆ ಬೇಕಾದರೂ ಯಡಿಯೂರಪ್ಪರನ್ನ ನೋಡಿಕೊಳ್ಳೋಣ. ಅದೆಲ್ಲವೂ ರಾಜಕೀಯವಾಗಿಯೇ ಇರಲಿ. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವವಿದೆಯಲ್ಲಾ ಅದನ್ನು ಪ್ರಜೆಗಳು ಸ್ವಲ್ಪವಾದರೂ ಉಳಿಸಿಕೊಳ್ಳಬೇಡವೇ?.ಅವರು ಮುಖ್ಯಮಂತ್ರಿಯಾಗಿರುವಷ್ಟು ಕಾಲವಾದರೂ ಆ ಬ್ಯಾನರ್ ನ್ನು ಹಾಗೆ ಕಟ್ಟಬಾರದಾಗಿತ್ತು. ಆದರೆ ಅಣಕವೆಂಬಂತೆ ಇಂದು ಯಡಿಯೂರಪ್ಪನವರ ಸ್ಥಿತಿಯೂ ಹಾಗೆಯೇ ಇದೆ.ಅಧಿಕಾರ ವಹಿಸಿಕೊಂಡಾಗಿನಿಂದ ಗಲಾಟೆಗಳೇ ಗಲಾಟೆಗಳೂ. ಗೊಬ್ಬರ ಗಲಾಟೆಯಿಂದ ಆರಂಭಿಸಿ ನಿನ್ನೆಯವರೆಗೆ ನಡೆದ ಗಲಭೆಯವರೆಗೆ ಎಲ್ಲವೂ ಸಿ ಎಂ ಅವರನ್ನು ಬಂಧನದಲ್ಲಿರುವಂತೆ ಮಾಡಿದೆ.ಅದಕ್ಕೆ ಪರಿಗಾರವೇನು ಎಂಬುದರ ಬಗ್ಗೆ ಚಿಂತನೆ ನಡೆಸುವ ಹೊತ್ತಿಗೆ ಇಲ್ಲಿ ವಾಹನದಲ್ಲಿ ಕಾಣಿಸಿಕೊಂಡದ್ದು ಹೀಗೆ.

ಇದು ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಂಡ ಬ್ಯಾನರ್ ಈಗ ವಾಹನದ ಟಾಪ್ ಗೆ ಬಳಕೆಯಾಗಿದೆ ನಿಜ. ಆದರೆ ರಾಜ್ಯದ ಮುಖ್ಯಮಂತ್ರಿಯವರನ್ನು ಹೀಗೆ "ಬಂಧಿಸುವುದು" ಸರಿಯಲ್ಲ ಎಂಬುದು ನನ್ನ ಭಾವನೆ. ರಾಜಕೀಯವಾಗಿ ಎಷ್ಟೇ ಟೀಕೆಗಳು ಇರಲಿ. ದುರದೃಷ್ಟವಶಾತ್ ಅದೇ ಪಕ್ಷದ ಯಾರೊಬ್ಬರೂ ಮಾತನಾಡುತ್ತಿಲ್ಲ.

ಬಹುಶ: ನನಗೆ ಅನ್ನಿಸುವ ಹಾಗೆ ಸಿಂದು ಅಷ್ಟು ಬೇಗನೆ ಜನ ಮರೆತುಬಿಡುತ್ತಾರೆ. ಚುನಾವಣೆಯ ನಂತರ ಎಲ್ಲವನ್ನೂ ಮರೆತು ಅಲ್ಲಿ ಸಿಕ್ಕಿದ್ದನ್ನು ಬಳಸಿಕೊಂಡು ತಮ್ಮ ಪಾಡಿಗೆ ತಾವಿರುತ್ತಾರೆ. ಅಲ್ಲಿ ಜನಪ್ರತಿನಿಧಿಗಳು ಅಯ್ಯೋ "ಅವರಿಗೆ" ಅನ್ಯಾಯವಾಗಿದೆ , ಇವರಿಗೆ " ಅನ್ಯಾಯವಾಗಿದೆ" ಎಂದು ಕೂಗುತ್ತಾರ್‍ಎ. ಹಾಗಾಗಿ ಯಡಿಯೂರಪ್ಪನವರಿಗೂ ಈ ಅವಸ್ಥೆ ಬಂದಿದೆಯೋ ಗೊತ್ತಿಲ್ಲ. ಕಾರಣ ಕೇಳಲು ಆ ವಾಹನ ಚಾಲಕ ಸಿಕ್ಕಿಲ್ಲ.

16 ಸೆಪ್ಟೆಂಬರ್ 2008

ಶಾಂತಿಯ ನಾಡಲ್ಲಿ..


ಇದು ನ್ಯಾಯವೇ..? ಇದೆಲ್ಲವೂ ಕ್ಯಾಮಾರದಿಂದಾದ ಅನಾಹುತಗಳು....! ಇತ್ತೀಚೆಗೆ ಯಾಕ್ರೀ ಹೀಗಾಗುತ್ತೇ?. ಜನ ಇದನ್ನು ಒಪ್ಕೊಳ್ತಾರ್ರೇನ್ರಿ..?

ಇದೇನು ಪ್ರಶ್ನೆಗಳೇ ಪ್ರಶ್ನೆಗಳು ಅಂತ ಯೋಚಿಸಬೇಡಿ. ಇಂದು ಕಲ್ಲಡ್ಕದಲ್ಲಿ ಎಸ್.ಐ.ಯೊಬ್ಬರು ಕೇಳುವ ಪ್ರಶ್ನೆ. ಕಳೆದ 2 ದಿನಗಳಿಂದ ಮಂಗಳೂರು ಜಿಲ್ಲೆ ಪ್ರಕ್ಷುಬ್ದ ವಾತಾವರಣದಿಂದ ಕೂಡಿತ್ತು. ಇದು ಒಮ್ಮೆ ತಣ್ಣಗಾದರೂ ಮತ್ತೆ ಮತ್ತೆ ಮರುಕಳಿಸಿತು. ಇದಕ್ಕೆ ಕ್ಯಾಮಾರಗಳೇ ಕಾರಣ ಎನ್ನುವುದನ್ನು ಆ ಎಸ್.ಐ ಹಾಗೆ ವಿಶ್ಲೇಷಿದರು. ಅದು ಹೌದಾ ಅಥವಾ ಬೇರೆಯೇ ಕಾರಣಾನಾ ಅಂತ ವಿಶ್ಲೇಷಿಸುವ ಅಗತ್ಯವಿಲ್ಲ. ಈಗ ಆ ಬಗ್ಗೆ ಎಲ್ಲರಿಗೂ ಅರಿವಿದೆ.

ಮೊನ್ನೆಯ ಘಟನೆಯನ್ನೇ ನೋಡಿದರೆ. ಕಾರಣ ಕ್ಷುಲ್ಲಕ ಅಂತ ಅನ್ನಿಸಿ ಬಿಡಬಹುದು. ಧರ್ಮದ ಹೆಸರಿನಲ್ಲಿ ಕಚ್ಚಾಟ ಬೇಕೇ ಬೇಡವೇ ಎನ್ನುವ ಪ್ರಶ್ನೆಗಳು, ವೈರುಧ್ಯಗಳು ಕಾನಿಸಿಕೊಳ್ಳಬಹುದು. ಯಾರೇ ಒಬ್ಬ ವ್ಯಕ್ತಿಗೆ ತನ್ನ ಧರ್ಮ , ಜಾತಿ , ಮಠ , ಮಂದಿರ ಅಥವಾ ತನ್ನ ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ವಿಷಯದಲ್ಲಿ ಘಾಸಿಯಾದಾಗ ಮನಸ್ಸು ರೊಚ್ಚಿಗೇಳುವುದು ಸಹಜ. ಆ ಕ್ಷಣದಲ್ಲಾಗುವ ಅನಾಹುತಗಳು ಏನು ಬೇಕಾದರೂ ಮಾಡಿಸಬಹುದು ಅಥವಾ ನಡೆದು ಹೋಗಬಹುದು.ಇದನ್ನೇ ಒಂದು ವಿಷಯವನ್ನಾಗಿಸಿಕೊಂಡು ದಿನವಿಡೀ ಕ್ಯುದು ವಿಷವಾಗಿಸಿದರೆ ಹೇಗೆ?. ಅಲ್ಲಿ ಕಲ್ಲು .. ಇಲ್ಲಿ ಕಲ್ಲು ಇಷ್ಟೇ ಆರಂಭದ ವಿಷಯ. ಇಂತಹ ವಿಷಯಗಳು ದೂರದಲ್ಲಿರುವ ಅಂತಹುದೇ ಭಾವನಾತ್ಮಕ ತೊಳಲಾಟದ ವ್ಯಕ್ತಿ ಇಲ್ಲಿಯೂ ಕೂಡಲೇ ಏನಾದರೊಂದು ಅನಾಹುತವನ್ನು ನಡೆಸುತ್ತಾನೆ. ತನ್ನೊಂದಿಗೆ ಇತರರನ್ನೂ ಸೇರಿಸಿಕೊಳ್ಳುತ್ತಾನೆ. ಗಲಭೆ ಹಬ್ಬಿಬಿಡುತ್ತದೆ. ಇಂದು ನಾವು ಹೇಳುವುದು ಸುಲಭ.ಒಂದು ಧರ್ಮದ ಹೆಸರಿನಲ್ಲಿ ಯಾಕೆ ಕಚ್ಚಾಡಬೇಕು?. ಜಾತಿ ಮತ ಬೇದವನ್ನು ಮರೆತು ಏಕೆ ಬದುಕಬಾರದು ಅಂತೆಲ್ಲಾ ಹೇಳಬಹುದು. ಆದರೆ ಅದು ಸುಲಭದ ಮಾತಾ?. ಯಾವುದೇ ಧರ್ಮದವನಾಗಿರಲಿ ಆತನಿಗೆ ತನ್ನ ಧರ್ಮದ ಬಗ್ಗೆ ಒಂದಿಷ್ಟಾದರೂ ಮಮತೆ ಇದ್ದೇ ಇರುತ್ತದೆ. ಅದನ್ನು ನಾವು ಹೊರಪ್ರಪಂಚಕ್ಕೆ ಹಾಗೇನಿಲ್ಲಾ ಅಂತ ಅಂದರೂ ಒಳಮನಸ್ಸು ಅದನ್ನೇ ಹೇಳುತ್ತದೆ.ಹಾಗಾಗಿ ಇಂತಹ ಧರ್ಮ ಸಂಬಂಧಿ, ಭಾವನಾತ್ಮಕವಾದ ಸಂಗತಿಗಳ ಬಗ್ಗೆ ಎಚ್ಚರದಿಂದ ಇರಬೇಕಾದುದೇ ಮಾನವಧರ್ಮ ಅಂತ ನಾನು ಭಾವಿಸಿಕೊಂಡಿದ್ದೇನೆ.

ಇಂದು ನಾವು ಕೂಡಾ ಕಲ್ಲಡ್ಕದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿಗಾಗಿ ತೆರಳಿದ್ದಾಗ ಇಡೀ ಪೇಟೆ ಬಿಕೋ ಎನ್ನುತ್ತಿತ್ತು. ಜನ ಬೀದಿಗೆ ಇಳಿಯುತ್ತಿರಲಿಲ್ಲ. ಸಾಲಾ ಮಕ್ಕಳು ಮನೆಗೆ ತೆರಳುತ್ತಿದ್ದರು. ಕೆಲವು ಮಂದಿ ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಮಾತನಾಡಲು ಸಿಕ್ಕ ಆ ಎಸ್.ಐ. ಮಾತಿಗೆ ಆರಂಬಿಸಿದ್ದೇ ಹಾಗೆ. ಆ ಬಳಿಕ ನಮ್ಮ ಉತ್ತರದಿಂದಾಗಿ ಎಸ್,ಐ,ಗೂ ಸಮಾಧಾನವಾದಂತೆ ಕಂಡುಬಂದಿರಲಿಲ್ಲ.

ಇನ್ನಾದರೂ ಗಲಭೆ ನಡೆಯದಿರಲಿ. ಸಹಜ ಸ್ಥಿತಿ ಏರ್ಪಡಲಿ ... ಶಾಂತ ಸ್ಥಿತಿಯಿರಲಿ ಅಂತ ಪ್ರಾರ್ಥಿಸೋಣ..

28 ಆಗಸ್ಟ್ 2008

ಹೆಕ್ಕಿಕೋ ಪ್ಲಾಸ್ಟಿಕ್.. ಹೆಕ್ಕಿಕೋ.!!.




ಇಂದು ಬಹುತೇಕ ಪಟ್ಟಣಗಳಲ್ಲಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ.ಎಲ್ಲಾ ಸಂಘಟನೆಗಳದ್ದು ಉದ್ದೇಶ ಒಂದೇ. ಸಮಾಜ ಸೇವೆ.ಆದರೆ ಅದರಲ್ಲಿ ಎಲ್ಲೋ ಒಂದು ಪ್ರಚಾರ ಗಿಟ್ಟಿಸಿಕೊಳ್ಳುವ ಅಂಶ ಕಂದುಬರುತ್ತದೆ. ಇತ್ತೀಚೆಗೆ ಅದು ಬಹಿರಂಗವಾಗಿಯೇ ಕಂಡುಬರುತ್ತದೆ.ಗಮನಿಸುತ್ತಾ ನೋಡಿ.. ಕೆಲವು ಸಂಘಟನೆಗಳು ವಿವಿಧ ಕಾರ್ಯಕಮಗಳನ್ನು ಹಮ್ಮಿಕೊಳ್ಳುತ್ತವೆ.ಅದರಿಂದ ಜನರಿಗೆ ಪರಿಸರಕ್ಕೆ ಎಷ್ಟು ಪ್ರಯೋಜನ ಅಂತ ಲೆಕ್ಕಹಾಕುವ ಗೋಜಿಗೆ ಹೋಗುವುದಿಲ್ಲ.ಕಾರ್ಯಕ್ರಮಗಳು ನಡೆಯುತ್ತಲೆ ಇರುತ್ತದೆ. ಹಳ್ಳಿಗಳಲ್ಲಿರುವ ಅನೇಕ ಸಂಘಟನೆಗಳು ಏನಿಲ್ಲವೆಂದರೂ ಜನಸಾಮಾನ್ಯರಿಗೆ ಬೇಕಾಗುವ ಕೆಲವು ಕಾರ್ಯಕ್ರಮಗಳನ್ನಾದರೂ ಮಾಡುತ್ತವೆ.ನಗರದಲ್ಲಿ ಹಾಗಲ್ಲ. ಅದಕ್ಕೊಂದು ಉದಾಹರಣೆ ಕೊಡಬಲ್ಲೆ..

ಇತ್ತೀಚೆಗೆ ಸಂಘಟನೆಯೊಂದರಿಂದ ಪ್ಲಾಸ್ಟಿಕ್ ಹೆಕ್ಕಿಕೋ ಅಭಿಯಾನ ನಡೆಯಿತು.ಅದರಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಲು ಶಾಲಾ ಮಕ್ಕಳ ಸಹಯೋಗ ಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯರನ್ನೂ ಕೇಳಲಾಯಿತು. ಸರಿ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಬೇಕು ಎಂಬ ದೃಷ್ಠಿಯಿಂದ ಶಾಲಾ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲಾಯಿತು. ಅಲ್ಲಿ ಆಗಿದ್ದೇ ಬೇರೆ ಸಂಘಟನೆಯವರು ಅಲ್ಲಿ ಇಲ್ಲಿ ನಿಂತದ್ದು ಬಿಟ್ಟರೆ ಪೇಟೆಯಿಂದ ಸಂಪೂರ್ಣ ಪ್ಲಾಸ್ಟಿಕ್ ಹೆಕ್ಕಿದ್ದು ಮಕ್ಕಳು.ನಂತರ ಫೋಟೋಕ್ಕೆ ಪ್ಲಾಸ್ಟಿಕ್ ಹಿಡಿದುಕೊಂಡು ಫೋಸು ಕೊಟ್ಟದ್ದು ಸಂಘಟನೆಯ ಸದಸ್ಯರು. ಅಲ್ಲಿ ನಿಜವಾಗಲೂ ಕಾಳಜಿ ಇದ್ದದ್ದು ಯಾರಿಗೆ ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ಹೀಗೆ ಅನೇಕ ಸಂಘಟನೆಗಳು , ಸಮಾಜ ಸುಧಾರಕರು ನಿಜವಾಗಲೂ ಕಾಳಜಿಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆಯೇ ಅಥವಾ ತಾವು ಪ್ರಚಾರ ಗಿಟ್ಟಿಸಿಕೊಳ್ಳಲು ತಮ್ಮ ಫೋಟೋ ಪತ್ರಿಕೆಯಲ್ಲಿ ಬರಲು ಇಂತಹ ಪುಟಗೋಸಿ ಕಾರ್ಯಕ್ರವನ್ನು ಮಾಡುತ್ತಾರೆಯೇ ಅಥವಾ ಮಕ್ಕಳಿಗೆ ಉತ್ತೇಜನ ನೀಡಲು ಇಂತಹ ಕಾರ್ಯಕ್ರವನ್ನು ಮಾಡುತ್ತಾರೆಯೇ ಎಂಬ ನನ್ನ ಪ್ರಶ್ನೆಗೆ ಉತ್ತರ ಹಲವಾರು ಸಮಯಗಳಿಂದ ಸಿಕ್ಕಿಯೇ ಇಲ್ಲ. ಹಲವು ಕಡೆ ಹಲವು ಸಮಯಗಳಿಂದ ಇಂತಹ ಕಾರ್ಯಕ್ರಮಗಳನ್ನು ನೋಡಿದ ನನಗೆ ಇಲ್ಲಿ ಅದನ್ನು ವ್ಯಕ್ತಪಡಿಸಲೇ ಬೇಕು ಎಂದು ಅನಿಸಿತು.

ನಿಜವಾದ ಕಾಳಜಿಯುಳ್ಳ ಕಾರ್ಯಕ್ರಮಗಳು ಸಂಘಟನೆಗಳಿಂದ ಬರಲಿ ಎಂಬುದು ನನ್ನ ಬಯಕೆ.

26 ಆಗಸ್ಟ್ 2008

ಇದು epsilon....



ಇದೊಂದು ತರದ ವಾದ ಎನ್ನಬಹುದೋ ಅಥವಾ ನವೋಲ್ಲಾಸದ ಕಿಡಿ ಅನ್ನಬಹುದೋ ಅಂತ ಗೊತ್ತಿಲ್ಲ.ಅಂತೂ ನನಗೆ ಇಷ್ಟವಾದ ನಾಲ್ಕು ವಾಕ್ಯಗಳು.

ನಾವು ಒಂದು ತೂಗುಸೇತುವೆಯ ವರದಿಯನ್ನು ಮಾಡುವುದಕ್ಕಾಗಿ ತೆರಳಿದ್ದ ಸಂದರ್ಭ. ತೂಗು ಸೇತುವೆಗಳು ದೂರದ ನಗರದಲ್ಲಿ ನಿಂತು ನೋಡಿದರೆ ಅದೊಂದು ಸಾಮಾನ್ಯವಾದ ವ್ಯವಸ್ಥೆ. ಆದರೆ ಅದರ ಒಳಗೆ ಹೋದಾಗಲೇ ಅಲ್ಲಿನ ಸಮಸ್ಯೆಯ ಆಳ ... ಅಗಾಧತೆ ಅರಿವಾಗುವುದು. ಒಂದು ತೂಗು ಸೇತುವೆ ಏನನ್ನೆಲ್ಲಾ ಮಾಡಬಹುದು? ಕಲ್ಪಿಸಲೂ ಅಸಾಧ್ಯ!. ತುಂಬಾ ಅಗಲವಾದ ನದಿ , ಅದರಾಚೆಗೆ ಹತ್ತಾರು ಮನೆಗಳು. ಮಳೆಗಾಲದ ಅವಧಿಯಲ್ಲಿ ಅಲ್ಲಿನ ಜನ ದಡ ಸೆರುವುದು ಹೇಗೆ?. ನಗರದಿಂದ ಕೂಳನ್ನು ತರುವುದು ಹೇಗೆ? ನಗರಕ್ಕೆ ತಾವು ಬೆಳೆದ ಉತ್ಪನ್ನಗಳನ್ನು ತಲಪಿಸುವುದು ಹೇಗೆ?. ಸರಕಾರಗಳು ತುಂಬಾ ಅಗಲವಾದ ನದಿಗಳಿಗೆ ಸೇತುವೆಯನ್ನು ರಚಿಸುವುದು ಕಷ್ಟದ ಮಾತು ಮತ್ತು ಅದು ಅಷ್ಟೊಂದು ಸುಲಭದಲ್ಲಿ ಆಗುವ ಮಾತೂ ಅಲ್ಲ.ಅಂತಹ ಪರಿಸ್ಥಿತಿಯಲ್ಲಿ ತೂಗು ಸೇತುವೆಗಳು ಹಳ್ಳಿಗರಿಗೆ ವರದಾನವಾಗಿಯೇ ಕಾಣುತ್ತದೆ ಮತ್ತು ಅದು ಹೌದು ಕೂಡಾ. ಅಂತಹ ತೂಗು ಸೇತುವೆಯನ್ನು ಯಶಸ್ವಿಯಾಗಿ ನಿರ್ವಹಿಸಿದ , ನಿರ್ಮಿಸಿದ ಗಿರೀಶ್ ಭಾರಧ್ವಾಜರ ಭೇಟಿಗೆ ಹೋಗಿದ್ದೆವು. ನಮ್ಮೆಲ್ಲಾ ಕಾರ್ಯ ಮುಗಿದ ಬಳಿಕ ಕಾರಿನ ಬಳಿ ಸಾಗುವ ವೇಳೆ ಅಲ್ಲಿ ಅವರ ಕಾರಿನ ಹಿಂದೆ ಒಂದು ವಾಕ್ಯ ಕಂಡಿತು . ಅದು" epsilon.."

ಆ ಬಗ್ಗೆ ಏನು ಅಂತ ಕೇಳಿದಾಗ ಅವರು ವಿವರಿಸಿದ್ದು ಹೀಗೆ ,

"ನವಗಣಿತದಲ್ಲೊಂದು ಮೂಲಕಲ್ಪನೆಯಲ್ಲಿ ಮಧುರ ಭಾವ ಎಷ್ಟೇ ಕಿರಿದಾದರೂ ಶೂನ್ಯವಲ್ಲವಂತೆ ಇದೆಂದು ಕೋವಿದದು ನುತಿಪರು ಈ ಪುಣ್ಯ ಧನವ
ನಮ್ಮ ಕಲ್ಪನೆಗೂ ಸಿಲುಕಿದಷ್ಟು ಸಣ್ಣದಹುದಂತೆ ಆದರೂ ಅದು ಶೂನ್ಯವಲ್ಲವಂತೆ ಈ ಮಹಾಪ್ರಜ್ಞೆಯ ಆಶ್ರಯದಲ್ಲಿರುವ ನಾನು ಶೂನ್ಯವಾಗುವ ತನಕ epsilon.."

ಈ ನಾಲ್ಕು ಸಾಲಿನ ಒಳಗಿನ ಅರ್ಥ ಎಷ್ಟು ಅಗಾಧ. ನಾವು "ಶೂನ್ಯ"ವಾಗುವ ತನಕ ಎನ್ನುವ ಮಾತೇ ಒಂದು ಅಗಾಧತೆಯನ್ನು ಉಂಟುಮಾಡುತ್ತದೆ. ನಾವೆಷ್ಟೇ ದೊಡ್ಡವರಾಗಲಿ, ಹಣ ಸಂಪಾದಿಸುವವರಾಗಲಿ ನಮ್ಮಲ್ಲಿ "ಅಹಂ" ನಲಿದಾಡಿದರೆ ಅದುವೇ ದೊಡ್ಡದಾದ ಶಾಪ ನಮಗೆ. ನಾನು ಎಷ್ಟೋ ಜನರನ್ನು ವೀಕ್ಷಿಸಿದಂತೆ ಜನ ಒಂದು ಹಂತದವರೆಗೆ "ಸಾಮಾನ್ಯರಂತೆ" ,ಕೊಂಚ ಸ್ಥಾನ ಮಾನ ದೊರಕಿದ ಬಳಿಕ ನಾನೇ "ರಾಜ" ಎಂಬ ಭಾವದಲ್ಲಿ ಮೆರೆಯುತ್ತಾರೆ. ಆರಂಭದಲ್ಲಿ ಹತ್ತಾರು ಬಾರಿ ಫೋನ್ ಮಾಡುತ್ತಿದ್ದವ ಮತ್ತೆ ತಿಂಗಳಿಗೊಮ್ಮೆಗೆ ತಲಪುತ್ತದೆ ಇನ್ನೊಮ್ಮೆ ಮರೆತೇ ಹೋಗಿರುತ್ತದೆ.ಅದಕ್ಕೆ ಕಾರಣ "ಬ್ಯುಸಿ". ಇದೆಲ್ಲವೂ ಮನುಷ್ಯನ ಗುಣ.

ಇಂತಹ ಸಂದರ್ಭದಲ್ಲಿ ಗಿರೀಶರ ಕಾರಿನಲ್ಲಿದ್ದ ಆ ವಾಕ್ಯ ನನಗೆ ಇಷ್ಟವಾಯಿತು.

ನನಗೂ epsilon ಅರ್ಥದಲ್ಲೇ ಬದುಕಬೇಕು ಎಂಬ ಕಲ್ಪನೆಯಿದೆ.ಆದರೆ ನಾನೂ ಮನುಷ್ಯನಲ್ಲವ್ವೇ ಒಮ್ಮೆಮ್ಮೆ "ಹಾಗೂ" ಆಗಿಬಿಡಬಹುದು, "ಹೀಗೂ" ಆಗಬಹುದು. ಆದರೆ ಉದ್ದೇಶ "ಅಹಂ" ಇಲ್ಲದ ಬದುಕು.

22 ಆಗಸ್ಟ್ 2008

ಒಂದು Accident....






ಘಟನೆಗಳು ಹೇಗೆಲ್ಲಾ ನಡೆಯಬಹುದು.?.ಬಹುಶ: ಅದು ಕಲ್ಪನೆಗೂ ನಿಲುಕದ್ದು. ಹಾಗಾಗೆ ಅದು "ಎಕ್ಸಿಡೆಂಡ್..."

ಅಂತದ್ದೆ ಒಂದು ಘಟನೆ ಇಂದು ಬೆಳಗ್ಗೆ ನಡೆಯಿತು.ಅದು ರಾಷ್ಟ್ರೀಯ ಹೆದ್ದಾರಿ 48.ಬಹಳಷ್ಟು ವಾಹನಗಳು ಓಡಾಡುವ ಮಂಗಳೂರು- ಬೆಂಗಳೂರು ರಸ್ತೆ. ಗುಂಡ್ಯದಿಂದ ಮುಂದೆ ನೆಲ್ಯಾಡಿಯಿಂದ ಕೊಂಚ ಹಿಂದೆ ಪೆರಿಯಶಾಂತಿ ಬಳಿಯ ವಾಲ್ತಾಜೆ ಎಂಬ ಪ್ರದೇಶ. ಅಲ್ಲಿ ಒಂದು ಅಪಘಾತ ನಡೆದಿತ್ತು.ಹೇಳುವುದಕ್ಕೆ ಮಾಮೂಲು ಅಪಘಾತ.ಆದರೆ ಅದರಾಚೆಗೆ ಇರುವುದು ಗಂಭೀರದ,ಆತಂಕದ ಸಂಗತಿ.ಕಾರು ಮತ್ತು ಗ್ಯಾಸ್ ಟ್ಯಾಂಕರ ಮಧ್ಯೆ ಅಪಘಾತ ನಡೆದು ಗ್ಯಾಸ್ ಸೋರಿಕೆಯಾಗಿ ಅಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು.ಅದು ಆತಂಕಕ್ಕೆ ಕಾರಣವಾಗಿತ್ತು. ಜನ ಬಂದು ನೋಡುವ ತವಕದಲ್ಲಿದ್ದರು. ಆದರೆ ಸುರಕ್ಷತೆಗಾಗಿ ಅವರನ್ನು ಬಿಡುತ್ತಿರಲಿಲ್ಲ.

ಸುಖ ನಿದ್ರೆಯಲ್ಲಿರುವಾಗಲೇ ಮೊಬೈಲ್ ರಿಂಗಿಣಿಸಿತು.ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ತೆರಳಿದಾಗ ಘಟನೆಯ ನಿಜ ಸ್ವರೂಪ ಸಿಕ್ಕಿತು. ಅಗ್ನಿಶಾಮಕ ದಳವು ಸವಾಲನ್ನು ಕೈಗೆ ತೆಗೆದುಕೊಂಡಿತ್ತು. ಸುಮಾರು 10 ಗಂಟೆಯ ವೇಳೆಗೆ ಅಲ್ಲಿ ನಿಂತಿದ್ದ ಸಿಬ್ಬಂದಿ, ಇನ್ನು ಹೆದರಿಕೆಯಿಲ್ಲ ನೀವು ಹತ್ತಿರಕ್ಕೆ ಹೋಗಬಹುದು. ಸ್ಫೋಟ ಆಗುವ ಸಂಭವವಿಲ್ಲ. ಆದರೆ ರಿಸ್ಕ್ ಇದೆ, ನಿಮಗೆ ಧೈರ್ಯವಿದ್ದರೆ ಹೋಗಿ ಎಂದ. ಕೂಡಲೆ ನಮ್ಮ ಕೈಗೆ ರಿಸ್ಕ್ ತೆಗೆದುಕೊಂಡು ಅಪಘಾತವಾದ ಸ್ಥಳಕ್ಕೆ ಅಂದರೆ ಟ್ಯಾಂಕರ್ ಉರಿಯುತ್ತಿರುವ ಪ್ರದೇಶಕ್ಕೆ ಹೋಗಿ ಚಿತ್ರ ತೆಗೆಯಲಾಯಿತು.

ಅಗ್ನಿ ಶಾಮಕದಳದ ಸಿಬ್ಬಂದಿಗಳು ಅವಿರತವಾದ ಶ್ರಮ ಮೆಚ್ಚುಗೆಗೆ ಪಾತ್ರವಾಯಿತು. ಒಂದು ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುತ್ತಿದ್ದರೆ ಇನ್ನೂ ಹೆಚ್ಚಿನ ಅಪಘಾತ , ಆತಂಕವಾಗುತ್ತಿತ್ತು.ಏಕೆಂದರೆ ಗ್ಯಾಸ್ ಸೋರಿಕೆ ಪರಿಸರದಲ್ಲಾಗುತ್ತಿತ್ತು. ಇದರಿಂದಾಗಿ ಪರಿಸರದಲ್ಲೆಲ್ಲಾ ಗ್ಯಾಸ್ ಹರಡಿ ಎಲ್ಲೋ ಒಂದೆಡೆ ಒಂದು ಕಿಡಿ ಬೆಂಕಿ ಬಿದ್ದರೂ ಊರಿಡೀ ಬೆಂಕಿ ಹಬ್ಬುವ ಸಾಧ್ಯತೆಯಿತ್ತು. ಹಾಗಾಗಿ ಅಲ್ಲಿ ಅಗ್ನಿಶಾಮಕ ದಳದ ಕಾರ್ಯ ಉತ್ತಮವಾಗಿತ್ತು. ಮಾತ್ರವಲ್ಲ ಸಿಬ್ಬಂದಿಗಳು ಅಲ್ಲಿ ಟ್ಯಾಂಕರ್ ಗೆ ನೀರನ್ನು ಹಾಕಿ ಹೊರಗಿನಿಂದ ತಂಪಾಗಿಸುತ್ತಿದ್ದರು.ಇದರಿಂದ ಟ್ಯಾಂಕರ್ ಸ್ಫೋಟವನ್ನು ತಡೆಯಲಾಗಿತ್ತು.ಒಟ್ಟಿನಲ್ಲಿ ಅಗ್ನಿಶಾಮಕ ದಳದ ಅವಿರತ ಶ್ರಮದಿಂದಾಗಿ ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡ ಬೆಂಕಿಯ ಜ್ವಾಲೆ ಸಂಜೆ 6 ಗಂಟೆಯ ವೇಳೆಗೆ ಸಂಪೂರ್ಣ ಕಡಿಮೆಗೊಂಡು ಆತಂಕವನ್ನು ದೂರ ಮಾಡಿತು. ಇಂತಹ ಒಂದು ರೋಚಕ ಮತ್ತು ಅಪರೂಪವಾದ ಸುದ್ದಿ ಮಾಡಲು ಖುಷಿಯಾಗಿತ್ತು.

ಆದರೆ ಆ ಸ್ಥಳದಲ್ಲಿರುವ ಪೊಲೀಸರು ಮಾತ್ರಾ ಮನುಷ್ಯತ್ವವಿಲ್ಲದವರಂತೆ ಇರುತ್ತಾರೆ ಎನ್ನುವುದು ಇಂದು ಮತ್ತೊಮ್ಮೆ ಸಾಬೀತಾಗಿತ್ತು. ಅವರು ನಿಜಕ್ಕೂ ಶತ ಮೂರ್ಖರು ಮತ್ತು ಅಹಂ ಭಾವದ ಪರಮಾವಧಿಯ ಪ್ರತಿರೂಪವಾಗಿದ್ದರು. ಇಂತಹ ಸಂದರ್ಭದಲ್ಲಿ ಪೊಲೀಸರು ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಪಾಠ ಅವರಿಗೆ ಬೇಕು.


19 ಆಗಸ್ಟ್ 2008

ತೀರ್ಥಯಾತ್ರೆಯ ಹಾದಿಯಲ್ಲಿ ದೇವೇ ಗೌಡ...




ದೇವೇ ಗೌಡರು ರಾಜಕೀಯ ಚಾಣಾಕ್ಷ ಎನ್ನುವುದರಲ್ಲಿ ಎರಡು ಮಾತಿಲ್ಲ.ಅವರು ಪರಿಸ್ಥಿತಿಯನ್ನು ಹೇಗೆ ಬೇಕಾದರೂ ನಿಭಾಯಿಸಬಲ್ಲರು. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ನಿದ್ದೆ ತೂಗುವಂತೆ ಮಾಡಿ ಎದುರಾಳಿಯನ್ನು ಕೆಡವಿ ಹಾಕಬಲ್ಲರು. ಅವರ ರಾಜಕೀಯ ಸಹವರ್ತಿ ರಾಮಕೃಷ್ಣ ಹೆಗಡೆಯವರಿಗೇ ತಿರುಗಿ ಮೆಟ್ಟಿಲ್ಲಲೇ?. ಈಗ ವಿಷಯ ಅದಲ್ಲ. ಅವರು ಕುಟುಂಬಿಕರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಹಾಗೆ ಬಂದವರು ದೇವಳದಲ್ಲಿ ಪೂಜೆಯನ್ನು ಸಲ್ಲಿಸಿ ದ್ರಾಕ್ಷೆಯಲ್ಲಿ ತುಲಾಭಾರವನ್ನೂ ಮಾಡಿಸಿದರು. ಆಗ ಚಿತ್ರ ತೆಗೆಯಲೂ ದೇವೇ ಗೌಡರ ಪರಮ ಪುತ್ರ ರೇವಣ್ಣ ಬಿಟ್ಟಿರಲೇ ಇಲ್ಲ.ಮಿತ್ರ ಅವರ ವಿರೋಧದ ನಡುವೆಯೂ ಒಮ್ಮೆ ಕ್ಲಿಕ್ಕಿಸಿದ್ದಾರೆ. ಆ ಚಿತ್ರವೂ ಇಲ್ಲಿದೆ. ಆ ಬಗ್ಗೆ ಅನುಭವವ ಇಲ್ಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಪ್ರದಾನಿ ದೇವೇ ಗೌಡ ಹಾಗೂ ಅವರ ಪುತ್ರ ರೇವಣ್ಣ ಮತ್ತವರ ಕುಟುಂಬ ವರ್ಗವು ಆಗಮಿಸಿದ ವೇಳೆ ವಿಶೇಷವಾಗಿ ತುಲಾಭಾರ ಸೇವೆಯನ್ನು ನಡೆಸಿದರು.ದಿನ ಮುಂದಾಗಿಯೇ ಆಗಮಿಸಿದ್ದ ಅವರ ಕುಟುಂಬವು ಅಲ್ಲೇ ವಸತಿಯನ್ನು ಮಾಡಿತ್ತು. ನಮಗೂ ಅವರು ಬರುತ್ತಿರುವ ವಿಚಾರ ಮಧ್ಯಾಹ್ನದ ವೇಳೆಗೆ ತಿಳಿದಿತ್ತು. ಹಾಗಾಗಿ ಸಂಜೆ ವೇಳೆಗೆ ಸುಬ್ರಹ್ಮಣ್ಯಕ್ಕೆ ನಮ್ಮ ತಂಡ ಪಯಣ ಬೆಳೆಸಿತ್ತು. ನಮಗೂ ರೂಂ ವ್ಯವಸ್ಥೆ ಆಗಿತ್ತು.ನನ್ನ ಮನೆ ಸಮೀಪದಲ್ಲೇ ಇದ್ದರೂ ಮಿತ್ರರೊಂದಿಗೆ ಕುಕ್ಕೆ ಯಲ್ಲಿ ವಸತಿ. ಸರಿ ಮುಂಜಾನೆ ದೇವೇ ಗೌಡ್ರ ದರ್ಶನವಾಯಿತು. ಆಗಲೇ ದೂರವಾಣಿಗೆ ಮಿತ್ರರೊಬ್ಬರ ಸೂಚನೆ ಬಂತು ಇವತ್ತು ಯಾವುದೇ ಮಾಧ್ಯಮದವರನ್ನು ಬಿಡುವುದಿಲ್ಲವಂತೆ. ನಾವು ಎಲರ್ಟ್ ಆದೆವು. ಯಾರೂ ದೇವೇಗೌಡ ಮತ್ತವರ ಸೆಕ್ಯುರಿಟಿಯವರ ಬಳಿಗೆ ಹೋಗಲಿಕ್ಕಿಲ್ಲ. ಚಿತ್ರವನ್ನು ತೆಗೆಯುವುದು ಗ್ಯಾರಂಟಿ.ಹಾಗೆಯೇ ಆಯಿತು.ಎಲ್ಲರಿಗೂ ಬೇಕಾದಷ್ಟು ವಿಷುವಲ್ಸ್ ಸಿಕ್ಕಿತು. ಕೊನೆಗೆ ತುಲಾಭಾರದ ಸಮಯ ಬಂತು. ರೇವಣ್ಣ ಬಂದು "ತೆಗಿಬೇಡ್ರಿ ತೆಗಿಬೇಡ್ರಿ" ಅಂತ ಹೇಳುತ್ತಾ ತುಲಾಭಾರದ ಅಡ್ಡವೇ ಬಂದು ನಿಂತರು. ಚಿತ್ರದ ಆಸೆ ಬಿಟ್ಟಾಯಿತು. ಆಗ ಅಲ್ಲೇ ಒಂದು ಕನ್ನಡಿಯಲ್ಲಿ ತುಲಾಭಾರದ ಚಿತ್ರದ ಪ್ರತಿಬಿಂಬ ಕಾಣುತ್ತಿತ್ತು.ನಮ್ಮ ಕ್ಯಾಮಾರಾ ಅತ್ತ ತಿರುಗಿತು. ಆಗಲೂ ಸರಿಯಾಗಿ ಸಿಗುತ್ತಿರಲಿಲ್ಲ.

ನಡುವೆ ಮಿತ್ರ ಒಮ್ಮೆ ಕ್ಲಿಕ್ಕಿಸಿಯೇ ಬಿಟ್ಟ. ಏ ... ಏ...ಅಂತ ಒಳಗಿನಿಂದ ಯಾವನೋ ಒಬ್ಬ ಸೆಕ್ಯುರಿಟಿ ಬಂದ. ಆದರೂ ನಾವು ಕದಲಿಲ್ಲ.ನಂತರ ವಿವಿಧೆಡೆ ಅವರನ್ನು ಬೆಂಬೆತ್ತಿದೆವು. ನಾವು ಚಿತ್ರವನ್ನು ತೆಗೆಯುವ ಗೋಜಿಗೇ ಹೋಗುತ್ತಿರಲಿಲ್ಲ. ಆದರೆ ಯಾಕೆ ಅಷ್ಟು ಉತ್ಸಾಹ ಬಂತೆಂದರೆ ಅವರು ಚಿತ್ರ ತೆಗೀಬೇಡಿ ಅಂತ ಮಾತ್ರಾ ಹೇಳಿದರೇ ಹೊರತು.ಯಾಕೆ ತೆಗೀಬಾರದು ಅಂತ ಹೇಳಿಲ್ಲ. ಹಾಗಾಗಿ ಒಂದು ಕ್ಯೂರಿಯಾಸಿಟಿ ಬಂತು. ಕೊನೆಗೆ ಊಟವೂ ಆಯಿತು. ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಗುಮುಖದಿಂದಲೆ ಮಾತನಾಡಿದ ದೇವೇಗೌಡ "ಇದು ಪುಣ್ಯ ಕ್ಷೇತ್ರ ರಾಜಕೀಯವನ್ನು ಇಲ್ಲಿ ಮಾತನಾಡುವುದು ಸರಿಯಲ್ಲ ಎನ್ನುವುದು ನನಗೆ ಗೊತ್ತಿದೆ ಎನ್ನುತ್ತಲೇ ಮಾತು ಆರಂಭಿಸಿದ ಅವರು ದೇವರು ಪರಿಕ್ಷೆಯನ್ನು ಮಾಡುತ್ತಿದ್ದಾನೆ ಕೊನೆಯವರೆಗೂ ತಾಳುವುದೇ ಒಂದು ತಪಸ್ಸು ಆ ಎಲ್ಲಾ ತೊಂದರೆಗಳನ್ನು ಸಹಿಸಿಕೊಂಡು ಕೊನೆಗೆ ಸತ್ಯ ಸತ್ಯವಾಗಿಯೇ ಇರುತ್ತದೆ.ಅಸತ್ಯ ಅಸತ್ಯವಾಗಿಯೇ ಇರುತ್ತದೆ ಎಂದರಲ್ಲದೆ ವಿಶ್ವಾಮಿತ್ರ ಋಷಿಗೂ ಸೋಲು ಬಂದಿದೆ. ಆತನೂ ಫೈಲ್ ಆಗಿದ್ದಾನೆ. ಇಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದ ದೇವೇ ಗೌಡ ತನ್ನ ರಾಜಕೀಯ ಚಾಣಾಕ್ಷತನವನ್ನು ಇಲ್ಲೂ ಮೆರೆದರು. ಆಧ್ಯಾತ್ಮ ಸಾಧಕನಂತೆ ವಿವರಿಸಿದರು. ರಾಜಕೀಯ ಸನ್ಯಾಸ ತೆಗೆದುಕೊಂಡವರಂತೆಯೂ ಮಾತನಾಡಿದರು. ಆದರೆ ಅದೆಲ್ಲವೂ ನಿನ್ನೆ ಅವರ ಪಕ್ಷದಿಂದ ವಲಸೆ ಹೋದವರ ಬಗ್ಗೆ ಮಾತನಾಡದಿರಲೆಂದು ಅವರೇ ಏನಾದರೂ ಹೇಳುತ್ತಾ ಕಾರಿನತ್ತ ತೆರಳಿದರು. ಆಗ ಸಮಯವೂ ಮೀರಿತ್ತು.

ಹಾಗೆ ಅವರು ಮಾತನಾಡಿದ ವಿಷಯದ ಸುತ್ತ ನೋಡಿದರೆ ರಾಜಕೀಯದಲ್ಲಿ ಸದ್ಯ ಸೋತಿದ್ದೇನೆ ಎಂದು ಪರೋಕ್ಷವಾಗಿಯೇ ವಿಶ್ವಾಮಿತ್ರನ ಕತೆಯ ಮೂಲಕ ಹೇಳಿದ ದೇವೇಗೌಡ ದೇವರು ಪರಿಕ್ಷೆಯನ್ನು ಮಾಡುತ್ತಿದಾನೆ ಅದನ್ನು ಎದುರಿಸಿ ಮತ್ತೆ ಬರುತ್ತೇನೆ ಎಂತಲೂ ಪರೋಕ್ಷವಾಗಿ ಉತ್ತರಿಸಿದ ಗೌಡರು ಪಕ್ಷ ಸಂಘಟನೆಗಾಗಿ ಮತ್ತೆ ಹೆಚ್ಚುಕಾಲ ಕಳೆಯುತ್ತೇನೆ ಎನ್ನುತ್ತಾ ಕೇವಲ ೨ ಶಾಸಕರಿಂದ ಪಕ್ಷ ಕಟ್ಟಿಲ್ಲವೇ ಎಂದು ನೆನಪಿಸಿಕೊಂಡರು.ಒಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದ ಗೌಡರು ಎಲ್ಲವನ್ನು ಒಗಟಾಗಿ ಆಧ್ಯಾತ್ಮದ ರೀತಿಯಲ್ಲಿ ಹೇಳಿದ್ದು ಸುಬ್ರಹ್ಮಣ್ಯ ಭೇಟಿಯ ಹೈಲೈಟ್ಸ್ ಆಗಿತ್ತು.

ಒಟ್ಟಿನಲ್ಲಿ ದಿನಮುಂದಾಗಿ ಹೋದ ಮನಗೂ ಅಷ್ಟೊಂದು ಒಳ್ಳೆಯ ಸುದ್ದಿಯೂ ಸಿಗಲಿಲ್ಲ ಮಾರಾಯ ಇಡೀ ದಿನ ವೇಷ್ಟ್ ಅಂತ ಮಿತ್ರ ಹೇಳಿದ ನನಗೂ ಹೌದು ಎನಿಸಿತು.

ಇನ್ನೊಂದು ಸುದ್ದಿ - ಈ ತುಲಾಭಾರ ಸೇವೆಯನ್ನು ರೇವಣ್ಣ ಹೇಳಿಕೊಂಡದ್ದಂತೆ.ಯಾಕೆಂದು ಎಲ್ಲರಿಗೂ ಗೊತ್ತು. ರೇವಣ್ಣ ಅವರ ಭಾಷೆಯಲ್ಲೇ ಹೇಳುವುದಾದರೆ " ಏನು ಮಾಡೋಣರೀ ನಮ್ಮ್ ಸರ್ಕಾರ ಇಲ್ವಲ್ಲರೀ... ನಿಮ್ಮ್ ಸಹಕಾರ ಇರ್ಲಿ...ಶಾಸಕ್ರೂ ಆ ಕಡೆ ಈ ಕಡೆ ಹೋಗ್ತಾರ್ರೀ..."



18 ಆಗಸ್ಟ್ 2008

ಹೀಗೊಬ್ಬ ಅಜ್ಜ...



ಕ್ಯಾಮಾರ ಕಂಡರೆ ಯಾರು ತಾನೆ ಎಲರ್ಟ್ ಆಗಲ್ಲ ಹೇಳಿ.ನಾಳೆ ಪೇಪರಲ್ಲಿ ಟೀವಿಯಲ್ಲಿ ಬರತ್ತೆ ಅಂತ ಹೇಳಿ ಮುಂದೆ ಬರುತ್ತಾರೆ.ಅಂತಹುದೇ ಒಂದು ಘಟನೆ ನಡೆಯಿತು. ಆತ 94ರ ಮುದುಕ ಅವನ ಬಳಿಗೆ ಒಂದು ವರದಿಯನ್ನು ಮಾಡುವುದಕ್ಕಾಗಿ ತೆರಳಿದ್ದೆವು. ಆತ ಯೋಗಿ, ಸಾಧು ಅಂತಲ್ಲೇ ನಮಗೆ ಬಂದ ಮಾಹಿತಿ ಆದರೆ ೯೪ರ ಮುದುಕನಿಗೂ ಕ್ಯಾಮಾರ ಕಂಡಾಗ ಯೋಗಿ ಅಂತ ಅನ್ನಿಸಲೇ ಇಲ್ಲ. ಪಕ್ಕಾ ರಾಜಕಾರಣಿಗಳ ಥರಾನೇ ಫೋಸು ನೀಡಿದ. ಬಟ್ಟೆ ಬೇರೆ ಹಾಕಿಕೊಂಡ. ಮುಂದೆ ನೋಡಿ....

ಹೊಟ್ಟೆ ಹೊರೆಯಲು ವಿವಿಧ ಅವತಾರಗಳನ್ನು ಮಾಡುವುದು ನೋಡಿದ್ದೇವೆ. ಅದಕ್ಕಾಗಿ ಜನರನ್ನು ಮೋಸಗೊಳಿಸಲೂ ಸಿದ್ಧರಿರುತ್ತಾರೆ. ಆದರೆ ಇಲ್ಲೊಬ್ಬ ಅಜ್ಜ ಹೊಟ್ಟೆ ಹೊರೆಯಲು ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಓಂ ನಮ: ಶಿವಾಯ ಅವರ ಮಂತ್ರ.ಹತ್ತಿರದ ಮಠ ನೀಡುವ ಆಹಾರವೇ ಜೀವನೋಪಾಯಕ್ಕೆ ದಾರಿ. ಇದು ಒಂದೆರಡು ವರ್ಷದ ಪುರಾಣವಲ್ಲ ಬರೊಬ್ಬರಿ ೬೪ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗತಿ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಲ್ಲಿರುವ ಅಗ್ರಹಾರ ದೇವಸ್ಥಾನದಲ್ಲಿರುವ ಕುಮಾರಸ್ವಾಮಿ ಎಂಬ 94 ವೃದ್ಧನ ಕತೆ. ಅಗ್ರಹಾರದಲ್ಲಿ ಹಿರಿಯ ಸ್ವಾಮೀಜಿಗಳ ಬೃಂದಾವನವೂ ಇದೆ. ಅಲ್ಲೇ ಸನಿಹದಲ್ಲಿ ವಾಸವಾಗಿರುವ ವ್ಯಕ್ತಿಯೇ ಕುಮಾರಸ್ವಾಮಿ.ಇವರು ಮೂಲತ: ಕೇರಳದ ಕೊಚ್ಚಿ ಪ್ರದೇಶದವರು. ತಮ್ಮ 16 ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಪಳನಿ ದೇವಾಲಯಕ್ಕೆ ಏಕಾಂಗಿಯಾಗಿ ತೆರಳಿದರು. ಅಲ್ಲಿದ ನೇಪಾಳಕ್ಕೆ ಹೋದರು. ಬಳಿಕ ಅಲ್ಲಿ ಯುದ್ಧ ಶುರುವಾದಾಗಾ ಹೊರಟೆ ಎನ್ನುವ ಕುಮಾಸ್ವಾಮಿ ನಂತರ ಬಂದದ್ದು ಕೊಲ್ಲೂರು ಅಲ್ಲಿಂದ ಮುಂದಿನ ಪಯಣವೇ ಸುಬ್ರಹ್ಮಣ್ಯದ ಅಗ್ರಹಾರ ದೇವಸ್ಥಾನ. ಸುಬ್ರಹ್ಮಣಕ್ಕೆ ಬಂದು ಇಂದಿಗೆ 64 ವರ್ಷಗಳಾದವು ಎನ್ನುವ ಈ ಅಜ್ಜ ನನಗೆ ಮನೆಗೆ ಹೋಗಲು ಮನಸ್ಸಿಲ್ಲ ಇಲ್ಲೇ ವಾಸವಾಗಿರುತ್ತೇನೆ ಎನ್ನುತ್ತಾನೆ. ಬೆಳಗ್ಗೆ ಎದ್ದು ದೇವರಿಗೆ ಹೂ ತುಳಸಿಯನ್ನು ಸಂಗ್ರಹಿಸಿದ ಬಳಿಕ ಅಲ್ಲಿ ಹಾಗೂ ಸನಿಹದ ಮನೆಯಲ್ಲಿ ಸಿಗುವ ಒಂದಿಷ್ಟು ಕೂಳನ್ನು ಪಡೆಯುತ್ತಾರೆ.ನಂತರ ಓಂ ನಮ: ಶಿವಾಯ ಜಪ ಮಾಡುತ್ತಾರೆ.

ಈ ಅಜ್ಜ ಸೂರಿನ ಎಲ್ಲರಿಗೂ ಪರಿಚಿತ. ಈ ಅಜ್ಜನ ಬಗ್ಗೆ ಆಧ್ಯಾತ್ಮಿಕ ಜನರನ್ನು ಕೇಳಿದರೆ ಮನುಷ್ಯನಿಗೆ 5 ಕೋಶಗಳು ಅನ್ನಮಯ , ಪ್ರಾಣಮಯ, ಜ್ಞಾನಮಯ, ಹೀಗೆ ಕೋಶಗಳು ಎಲ್ಲರಿಗೂ ಲಭ್ಯವಾಗುತ್ತದೆ. ಆದರೆ ಈ ಅಜ್ಜನಿಗೆ 5 ನೇ ಕೋಶ ಅಂದರೆ ಆನಂದಮಯ ಪ್ರಾಪ್ತಿಯಾಗಿದೆ ಎನ್ನುತ್ತಾರೆ. ಆದರೆ ನಿಜ ಸಂಗತಿಯನ್ನು ಏನು ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ.ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇಲ್ಲಿ ಆಧ್ಯಾತ್ಮದ ವೈಬ್ರೇಶನ್ ಇದೆ ಹಾಗಾಗಿ ಈ ಅಜ್ಜನಿಗೆ ಏನೋ ಒಂದು ಸಿದ್ಧಿಸಿದೆ ಅಂತ ಹೇಳುತ್ತಾರೆ. ನಿಜಕ್ಕೂ ಸಿದ್ಧಿಸಿದೆಯೋ ಅಂತ ಗೊತ್ತಿಲ್ಲ.

ಅಂತೂ ಕಳೆದ 64 ವರ್ಷಗಳಿಂದ ಇಲ್ಲೇ ವಾಸವಾಗಿರುವ ಈತನ ಮುಂದೆ ನಮ್ಮ ಕ್ಯಾಮಾರಾವು ಬೆಳಕು ಚೆಲ್ಲಬೇಕಿತ್ತಾ ಅಂತ ಮತ್ತೆ ಅನ್ನಿಸಿತು. ಆದರೆ ಇನ್ನೊಂದು ರೀತಿಯಲ್ಲಿ ಬೇಕು ಅಂತಲೂ ಅನಿಸಿತು.ಜನ ಹೇಗೆಲ್ಲಾ ಮೊಸ ಮಾಡಿ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ. ಕುಳಿತಲ್ಲಿಗೇ ಹೊಟ್ಟೆ ಹೊರೆಯುತ್ತಾರೆ. ಇದು ಜಗತ್ತಿಗೆ ಅರಿವಾಗಬೇಕು. ಆದರೆ ನಾವು ಯಾವಾಗ ಸ್ವಾಮಿ ಇಂತಹ ಮೋಸಗಳಿಂದ ಹೊರಬರೋದು. ಅಲ್ಲಾ ಜನಾ ಇನ್ನು ಕೂಡಾ ಅದು ಯಾವುದೋ ಸಿದ್ದಿ ಅಂತೆಲ್ಲಾ ನಂಬಿಕೊಂಡು ಅವರನ್ನು "ಪೂಜೆ" ಮಾಡುತ್ತಾರಲ್ಲಾ ಎನಿದು ಅವಸ್ಥೆ?.

17 ಆಗಸ್ಟ್ 2008

ಒಂದು ದೇಗುಲದ ಸುತ್ತ...



ಇದು ಧರ್ಮ , ಚರ್ಚೆ , ವಿರೋಧ ಮತ್ತು ಸ್ವಾಗತದ ವಿಷಯ. ಆದರೆ ಇದು ಎಷ್ಟು ಪ್ರಸ್ತುತ ಅಂತ ನನಗೆ ಗೊತ್ತಿಲ್ಲ. ಇಂದು ಮಾಧ್ಯಮಗಳಲ್ಲಿ ಬರುತ್ತಿರುವ ಸಂಗತಿಗಳ ಮೇಲೆ ಮತ್ತು ಆಗಿನ ನನ್ನ ಭಾವನೆಗಳ ಅಕ್ಷರ ರೂಪ.

ನಾನು ಆರಂಭದಲ್ಲಿ ಹೇಳಿದಂತೆ ಇದು ಪ್ರಸ್ತುತವಾ ಅಂತ ಗೊತ್ತಿಲ್ಲ ಮತ್ತು ಇತರ ಮಾಧ್ಯಮಗಳಂತೆಯೋ ಅಂತಲೂ ಗೊತ್ತಿಲ್ಲ. ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಒಂದು "ವಿವಾದ" ಎದ್ದಿದೆ. ಪ್ರತಿಭಟನೆಯೂ ನಡೆಯುತ್ತಿದೆ, ಮಾಧ್ಯಮಗಳಲ್ಲೂ ಕಾಣುತ್ತಿದೆ. ಅದು ಶ್ರೀ ರಾಮಚಂದ್ರಾಪುರ ಮಠಕ್ಕೆ ಗೋಕರ್ಣದ ದೇವಸ್ಥಾನವನ್ನು ಹಸ್ತಾಂತರ ಮಾಡಿದ್ದರ ಕುರಿತಾದ ವಿವಾದ ಎಂದು ಕರೆಯಬಹುದಾದ ಒಂದು ಸಂಗತಿ. ಬಹುಷ: ಇದು ಇಷ್ಟು ದೊಡ್ಡ ಮಟ್ಟದ ಸುದ್ದಿಯಾಗಬೇಕಾಗಿರಲಿಲ್ಲ.

ಒಂದು ಧಾರ್ಮಿಕ ಕೇಂದ್ರ ಸರಕಾರದ ಹಿಡಿತದಲ್ಲಿರುವುದಕ್ಕಿಂತ ಹೆಚ್ಚು ವ್ಯವಸ್ಥಿತವಾಗಿ ಒಂದು ಸಂಸ್ಥೆ ಅಥವಾ ಒಂದು ಮಠ ಅಧೀನದಲ್ಲಿದ್ದರೆ ಹೆಚ್ಚು ವ್ಯವಸ್ಥಿತವಾಗಿರುತ್ತದೆ. ಅದಕ್ಕೆ ಉದಾಹರಣೆ ಧರ್ಮಸ್ಥಳ. ಇಂದು ಗೋಕರ್ಣಕ್ಕೆ ಹೋದ ಬಹುತೇಕರಿಗೆ ಗೊತ್ತಿದೆ ಅಲ್ಲಿನ ಈಗಿನ ನಿಜರೂಪ. ಆದರೆ ಇದರ ಸುಧಾರಣೆ ಅಗತ್ಯವಾಗಿತ್ತು. ಸರಕಾರ ಯಾವ ಉದ್ದೇಶಕ್ಕಾಗಿ ರಾಮಚಂದ್ರಾಪುರ ಮಠಕ್ಕೆ ಈ ದೇಗುಲವನ್ನು ಹಸ್ತಾಂತರಿಸಿದೆ ಎನ್ನುವುದು ಗೊತ್ತಿಲ್ಲ. ಆದರೆ ಮಠದ ಪರಂಪರೆಯನ್ನು ಗಮನಿಸಿದಾಗಲು ಅದು ಗೋಕರ್ಣ ಮಂಡಲದ ಅಧೀನದಲ್ಲಿದೆ ಎನ್ನುವುದು ತಿಳಿಯುತ್ತದೆ ಹಾಗಾಗಿ ದೇಗುಲ ಹಸ್ತಾಂತರದ ಕ್ರಮ ಸರಿಯಾಗಿಯೇ ಇದೆ.

ಇನ್ನು ಸರಕಾರದ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಯಾವಾಗಲೂ ಸರಿಯಾದ ವ್ಯವಸ್ಥೆಗಳಿರುವ ಉದಾಹರಣೆಗಳಿಲ್ಲ. ಮಾತ್ರವಲ್ಲ ಎಲ್ಲಾ ದೇವಾಲಯಗಳನ್ನು ಖಾಸಗಿಯವರಿಗೆ ಅಥವಾ ಮಠ ಮಂದಿರಗಳೇ ಜವಾಬ್ದಾರಿ ನೀಡಬೇಕು. ಆಗ ಮಾತ್ರಾ ನಮ್ಮ ವ್ಯವಸ್ಥೆಗಳು ಸರಿಯಾದೀತು. ಇಲ್ಲವಾದಲ್ಲಿ ಆ ದೇಗುಲಗಳಲ್ಲಿರುವ ಕೆಲವು "ಕುಳ"ಗಳು ಹಣವನ್ನು ಮಾಡುತ್ತಾ ಸಿರಿವಂತರಾಗುತ್ತಾರೆ. ಹಾಗೆಂದು ಇಲ್ಲೂ ಒಂದು ಸಮಸ್ಯೆ ಏರ್ಪಡುತ್ತದೆ. ದೇಗುಲಗಳ ಆಡಳಿತವನ್ನು ಸಂಪೂರ್ಣವಾಗಿ ಖಾಸಗಿಯವರು ನಿರ್ವಹಿಸಿದರೆ ಅವರ "ಕಿಸೆ" ತುಂಬಬಲ್ಲುದಲ್ಲವೇ?. ಈಗಲೂ ಅತ್ಯಂತ ಜಾಗೃತ ಕೆಲಸವಾಗಬೇಕು. ಅದಕ್ಕೆ ಅಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಸಾರ್ವಜನಿಕರ ಸಮಿತಿಯೊಂದು ಲೆಕ್ಕ ಪತ್ರವನ್ನು ಗಮನಿಸಬೇಕು.

ಯಾವುದಕ್ಕೂ ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆ ಇರಬೇಕಲ್ಲಾ. ದೇವಸ್ಥಾನಗಳೆಂದರೆ ಹಣ ದೋಚುವ ಕೇಂದ್ರಗಳಲ್ಲ ಅಲ್ವಾ. ಅದು ಶ್ರದ್ಧಾ ಕೇಂದ್ರಗಳಲ್ವಾ. ಅದರಿಂದಲೇ ವಿವಾದಗಳನ್ನು ಮಾಡುವ ಜನ ಹೇಗೆ ನೆಮ್ಮದಿಯನ್ನು ಕಾಣಲು ಸಾಧ್ಯ. ಅಥವಾ ಹಾಗೆ ವಿವಾದಗಳನ್ನು ಮಾಡುವುದೇ ನೆಮ್ಮದಿ ಅಂತ ಅಂದುಕೊಂಡಿದ್ದಾರಾ?. ಗೊತ್ತಿಲ್ಲ. ಹಾಗಾಗಿ ಮತ್ತೆ ಕೆದಕುವುದು ಬೇಡ. ಆಗ ಮಾಧ್ಯಮದಲ್ಲಿ ಬಂದ ವರದಿಯೊಂದಕ್ಕೆ ತಕ್ಷಣದ ಅಭಿಪ್ರಾಯವನ್ನು ಇಲ್ಲಿ ಪೋಣಿಸಿದ್ದೇನೆ.ಅಭಿಪ್ರಾಯ ಬೇದವಿರಬಹುದು.ಎಲ್ಲರಲ್ಲೂ ಒಂದೇ ಅಭಿಪ್ರಾಯ ಇರಬೇಕು ಎಂದೇನೂ ಇಲ್ಲವಲ್ಲ.

Flash News...

ಹಾ.. ಈಗ ಗೋಕರ್ಣದ "ವಿವಾದ" ಬಗೆಹರಿದಿದೆಯಂತೆ.ದೇಗುಲದ ಕೀಲಿ ಹಸ್ತಾಂತರವಾಗಿದೆಯಂತೆ.

16 ಆಗಸ್ಟ್ 2008

ಬಾಳಿಗೆ ಶಾಪವಾದ "ಪ್ರಗತಿ ಪರ" ಕೃಷಿ..






ರಾಜ್ಯದಲ್ಲಿ ಕೆಲ ಸಮಯಗಳ ಹಿಂದೆ ರಸಗೊಬ್ಬರಕ್ಕಾಗಿ ಗಲಭೆ , ದೊಂಬಿ , ಸಾವು , ನೋವುಗಳು ಸಂಭವಿಸಿತ್ತು. ಜನ ವಿವಿಧ ಆಯಾಮಗಳಿಂದ ಚರ್ಚೆ ನಡೆಸುತ್ತಲೇ ಇದ್ದರು.ಮಾಧ್ಯಮಗಳೂ ಹಾಗೆಯೇ."ಗೊಬ್ಬರ ಗಲಾಟೆ"ಯನ್ನೇ ಬಿಂಬಿಸಿದ್ದವು. ಆದರೆ ಆ ರಸಗೊಬ್ಬರಕ್ಕೆ ಪರ್ಯಾಯವಾದ ಇನ್ನೊಂದು ಯಾವುದಿದೆ ಎನ್ನುವುದರ ಹಿಂದೆ ಕೃಷಿಕರು ಬಿದ್ದಿರಲಿಲ್ಲ. ಹೀಗೆ ತಲತಲಾಂತರದಿಂದ ರಸಗೊಬ್ಬರ ಕೃಮಿ ನಾಶಕವನ್ನು ಬಳಸಿ ಈಗ ಪಶ್ಚಾತ್ತಾಪ ಪಡುತ್ತಿರುವ ರೈತನೊಬ್ಬನ ಕತೆಯಿಲ್ಲಿದೆ. ಆ ಕಡೆ ಒಮ್ಮೆ ಹೋಗಿ ಬರೋಣ.

ಇತ್ತೀಚೆಗೆ ಮಿತ್ರ ದೂರವಾಣಿಯಲ್ಲಿ ಹೇಳಿದ "ಏ ಮಹೇಶ್ ನಾನು ಒಬ್ಬರನ್ನು ಮೊನ್ನೆ ಭೇಟಿಯಾಗಿದ್ದೆ ,ಅವರು ಕಳೆದ 15 ವರ್ಷದ ಹಿಂದಿನಿಂದ ಗದ್ದೆಗೆ [ಹೊಲಕ್ಕೆ] ಕೀಟಗಳ ನಿಯಂತ್ರಣಕ್ಕೆ ಎಂಡೋಸ್ಫಾನ್ ಸಿಂಪಡಿಸುತ್ತಿದ್ದರಂತೆ ಈಗ ಅದರ ಪರಿಣಾಮ ಗೊತ್ತಾಗಿದೆ.ಮೈ ಮೈಮೇಲೆಲ್ಲಾ ಒಂಥರಾ ಗುಳ್ಳೆಗಳಿವೆ...." ಅಂತ ವಿವರಿಸಿದ್ದರು. ಸರಿ ಅಂತ ಎರಡು ದಿನಗಳ ಬಳಿಕ ಅತ್ತ ಕಡೆ ಹೋಗುವ ವೇಳೆಗೆ ಆ ಮನೆಗೆ ಭೇಟಿ ನೀಡಿದೆವು.
ಇದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಮೊಯಿದು ಎಂಬ ಕೃಷಿಕರ ಕತೆ. ಹೈಸಿರು ಕ್ರಾಂತಿಯ ಫಲವಾಗಿ ಇವರು ತಮ್ಮ ಹೊಲದಲ್ಲಿ ವಿವಿಧ ತಳಿಗಳ ಭತ್ತವನ್ನು ಬೆಳೆದಿದ್ದರು ಮಾತ್ರವಲ್ಲ, ಭತ್ತದ ಕೃಷಿಯಲ್ಲಿ ಇವರು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿದ್ದರು. ಆದರೆ ಇದಕ್ಕೆ ಅವರು ಅನುಸರಿಸಿದ ಮಾರ್ಗ ಮಾತ್ರಾ ರಾಸಾಯನಿಕ ಕೃಷಿ. ಹೊಲಕ್ಕೆ ಯಥೇಚ್ಚವಾಗಿ ಗೊಬ್ಬರ ಸುರಿದರು ಸಾಲದೆಂಬಂತೆ ಕೀಟಗಳ ನಿವಾರಣೆಗೆ ಎಂಡೋಸಲ್ಫಾನ್ ಎರೆದರು. ಗರಿಷ್ಠ ಪ್ರಮಾಣದಲ್ಲಿ ಭತ್ತವನ್ನೂ ಪಡೆದರು.ಹೀಗೆಯೇ ಅವರು ಬೆಳೆದದ್ದು 15 ವರ್ಷಗಳ ಕಾಲ. ಆಮೇಲೆ ಅವರಿಗೆ ಅರಿವಾಯಿತು ಇದರ ದುಷ್ಪರಿಣಾಮ. ನಂತರ ಈ ಪರಂಪರೆಗೆ ವಿದಾಯ ಹೇಳಿ ಸಾವಯವ ಕೃಷಿಯತ್ತ ಬಂದರು. ಆದರೆ ಕಾಲ ಮಿಂಚಿತ್ತು. ನಂತರದ ಒಂದೆರಡು ವರ್ಷದಲ್ಲಿ ಅವರಿಗೆ ಕಾಣಿಸಿಕೊಂಡದ್ದು ಎಂಡೋಸಲ್ಫಾನ್ ಪರಿಣಾಮ. ಮೈ ಹಾಗೂ ಕೈಯಲ್ಲಿ ಒಂಥರಾ ಬೊಬ್ಬೆಗಳ ರೀತಿಯಲ್ಲಿ ಕಜ್ಜಿಗಳು ಕಾಣಿಸಿಕೊಂಡಿತು. ವೈದ್ಯರಲ್ಲಿಗೆ ಹೋದರೂ ಕಡಿಮೆಯಾಗಿಲ್ಲ. ನಂತರ ಅರಿವಾಯಿತು ಇದು ಎಂಡೋಸಲ್ಫಾನ್ ಪರಿಣಾಮ ಎಂದು. ಆದರೆ ಕಾಲ ಮಿಂಚಿತ್ತು.

ಇದು ಇವರ ಒಬ್ಬರ ಕತೆಯಲ್ಲ ಅನೆಕ ಕೃಷಿಕರು ಇಂದು ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಅದು ಮಾತ್ರವಲ್ಲ ಹೀಗೆ ರಾಸಾಯನಿಕ ಮತ್ತು ವಿಷಪೂರಿತ ಔಷಧಿಗಳನ್ನು ಹೊಲಗಳಿಗೆ ಸಿಂಪಡಿಸುವುದರಿಂದ ಆ ವಸ್ತುವನ್ನು ತಿನ್ನುವ ಜನರಿಗೂ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಇಂದು ಮಣ್ಣಿನ ಗುಣಮಟ್ಟ ಕಾಪಾಡಲು ಮತ್ತು ಇಡೀ ಜನರ ಬದುಕನ್ನು ಹಾಗೂ ತನ್ನ ಆರೋಗ್ಯವನ್ನು ಕಾಪಾಡಲು ರೈತರು ಸಾವಯವ ಕೃಷಿಯತ್ತ ಬರಬೇಕಾಗಿದೆ. ಗೊಬ್ಬರ ಗಲಾಟೆಗೆ ವಿದಾಯ ಹೇಳಬೇಕಾಗಿದೆ.