31 ಮೇ 2008

ಇದು ಜೀವ ಹಿಂಡುತಿದೆ....



ಆಸ್ಪತ್ರೆ ಹೊರಗೆ ಜನ... ಚಿಂತಾಕ್ರಾಂತರಾಗಿ...





ಚಿಕೂನ್ ಗುನ್ಯಾ....!

ನಮ್ಮ ವೈರಿಗೂ ಬರಬಾರದು ಅಂತ ವೈದ್ಯರೊಬ್ಬರು ಹೇಳುತ್ತಾರೆ.ಅಂದರೆ ಆ ಜ್ವರದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಬಹುದು.ಸುಳ್ಯ ತಾಲೂಕು ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆ ಈಗ ಅದೇ ಜ್ವರದಿಂದ ಕಂಗೆಟ್ಟಿದೆ.ಕೇಳುವ ಮಂದಿಯೇ ಇಲ್ಲ.!.ಆರೋಗ್ಯ ಇಲಾಖೆ ಕೈಚೆಲ್ಲಿ ಕುಳಿತಿದೆ.ಮಳೆ ಬಂದಾಗ ಕಡಿಮೆಯಾಗುತ್ತದೆ ಎನ್ನುತ್ತಿದೆ, ಹೊಸ ರೋಗಿಗಳಿಲ್ಲ ಅಂತ ಹೇಳುತ್ತದೆ, ನಿಯಂತ್ರಣದಲ್ಲಿದೆ ಅಂತ ಬಡಬಡಾಯಿಸುತ್ತದೆ. ಆದರೂ ಪ್ರತಿದಿನ ಸರಕಾರಿ ಆಶತ್ರೆಯಲ್ಲಿ ಜನ ಸಾಲು ಸಾಲಾಗಿ ನಿಂತಿರುತ್ತಾರೆ . ಕೆಲವರು ಏಳಲಾಗದೆ - ಕೂರಲೂ ಆಗದೆ ಆಸ್ಪತ್ರೆಯಲ್ಲೇ ಮಲಗಿ ,ಎದ್ದು ಔಷಧಿ ಪಡೆದು ಮನೆಗೆ ಹೋಗುತ್ತಾರೆ.ಇನ್ನು ಖಾಸಗಿ ಆಸ್ಪತ್ರೆಯಲ್ಲೂ ಜನ ನಿಂತಿರುತ್ತಾರೆ ಎಲ್ಲರ ಬಾಯಲ್ಲೂ ಜ್ವರ... ಗಂಟು ನೋವು.....

ಈಗಲೇ ಚಿಕೂನ್ ಗುನ್ಯಾ ರಾಜ್ಯದಲ್ಲೆ ಗಮನ ಸೆಳೆದಿದೆ.ದ ಕ ಜಿಲ್ಲೆಗೆ ಎಂಟ್ರಿ ನೀಡಿದ್ದು ಸುಳ್ಯ ತಾಲೂಕಿನಿಂದ.ಕಳೆದ ಜನವರಿ ತಿಂಗಳ ಅಂತ್ಯದಲ್ಲಿ ಈ ಜ್ವರ, ಗಂಟು ನೋವು ಕಾಣಿಸಿಕೊಂಡಿತು.ನಂತರ ವಿಪರೀತವಾಗಿ ಬಾಧಿಸತೊಡಗಿ ಈಗ ಜಿಲ್ಲೆಯಾದ್ಯಂತ ಪಸರಿಸಿದೆ.ಹಾಗೆ ನೋಡಿದ್ರೆ ಇಲಾಖೆ ಎಚ್ಚರವಾದದ್ದು ಇತ್ತೀಚಿನ ಒಂದು ತಿಂಗಳಿನಿಂದ.ಈಗ ಮಳೆ ಬಂದ್ರೆ ನಿಲ್ಲುತ್ತೆ ಅಂತ ಬಡಿಕೊಳ್ಳುತ್ತೆ. ಸದ್ಯಕ್ಕೆ ಕ್ರಮವೂ ಕೈಗೊಂಡಿದೆ, ಇಲ್ಲ ಅಂತಲ್ಲ. ಈ ಜ್ವರ ಈಡಿಸ್ ಇಜಿಪ್ಟೀ ಎಂಬ ಸೊಳ್ಳೆಯಿಂದ ಹರಡುತ್ತೆ ಅಂತ ಇಲಾಖೆ ಹೇಳುತ್ತದೆ.ಕೆಲವು ದಾಖಲೆಗಳಲ್ಲೂ ಹಾಗೆಯೇ ಇದೆ.1952 ರಲ್ಲಿ ಆಫ್ರಿಕಾದಲ್ಲಿ ಈ ಚಿಕೂನ್ ಗುನ್ಯಾ ಆರಂಭವಾಯಿತು ಎಂಬ ಮಾಹಿತಿಯೂ ಇದೆ.ಈ ಜ್ವರ ಬಾಧಿಸಿದವರಿಗೆ ವಿಪರೀತ ಜ್ವರ ,ಕೀಲುನೋವು ಬಾಧಿಸುತ್ತದೆ.ನಡೆದಾಡಲು ಹರಸಾಹಸ ಪಡಬೇಕಾಗುತ್ತದೆ.ಹೀಗಾಗಿ ಎಲ್ಲಾ ಕೆಲಸ ಕಾರ್ಯಗಳಿಗೆ ಬ್ರೇಕ್ ಬೀಳುತ್ತದೆ. ಅಂದಾಜಿನ ಪ್ರಕಾರ ಸುಳ್ಯ ತಾಲೂಕಿನ ಶೇ.70 ರಷ್ಟು ಮಂದಿಗೆ ಚಿಕೂನ್ ಗುನ್ಯಾ ಅಂಟಿಕೊಂಡಿದೆ. ಸದ್ಯದ ಪ್ರಕಾರ ಚಿಕೂನ್ ಗುನ್ಯಾಕ್ಕೆ ಯಾವುದೇ ನಿಖರವಾದ ಔಷಧಿಯಿಲ್ಲ, ತಡೆಗಟ್ಟುವ ಔಷಧಿಯೂ ಇಲ್ಲ.ಹಾಗಾಗಿ ಜನ ಕಂಗಾಲು.
ಈ ಜ್ವರದಿಂದ ಈಗಾಗಲೇ ಜಿಲ್ಲೆಗೆ ಸಾಕಷ್ಟು ಆರ್ಥಿಕವಾದ ಹೊಡೆತ ಬಿದ್ದಿದೆ.

ಈ ಎಲ್ಲದರ ನಡುವೆ ಗ್ರಾಮೀಣ ಜನರ ಚಿಂತನೆ ಬೇರೇಯೆ ಇದೆ. ಚಿಕೂನ್ ಗುನ್ಯಾ ಒಂದು ಮಾಟ ಇದ್ದಂತೆ.ಬಹುಬೇಗನೇ ಜಿಲ್ಲೆಯಾದ್ಯಂತ ಪಸರಿಸಿದೆ. ಇದು ಯಾಕೆ ಭಯೋತ್ಪಾದಕರ ಕೃತ್ಯವಾಗಿರಬಾರದು?. ಹಿಂದೆ ಅಂತ್ರಾಕ್ಸ್, ಸೂರತ್ ನಲ್ಲಿ ಪ್ಲೇಗ್ ಇದ್ದಂತೆ ಇದೂ ಒಂದು ಪ್ರಯೋಗ ಯಾಕಿರಬಾರದು. ಇಂದಿನ ಪರಿಸ್ಥಿತಿ ಹಾಗಿದೆ ಅಂತಾರೆ ಹಳ್ಳಿಯ ಜನ.ಯಾಕೆಂದ್ರೆ ಇದು ಸೊಳ್ಳೆಯಿಂದ ಹರಡುವ ರೋಗ ಅಂತ ಇಲಾಖೆ ಹೇಳುತ್ತದೆ.ಸೊಳ್ಳೆಯಿಂದ ಇಷ್ಟು ಬೇಗನೆ ಸಾಧ್ಯವಾ?... ಹಾಗೆಯೇ ಕೆಲವು ವೈದ್ಯರೂಗಳೂ ಹಳ್ಳಿಗರ ಕೆಲವು ಪ್ರಶ್ನೆಗಳನ್ನು ಪುಷ್ಠೀಕರಿಸುತ್ತಾರೆ.ಭಯೋತ್ಪಾದಕರ ಕೆಲಸವಲ್ಲದಿದ್ದರೂ ಇದು ಭಯ ಹುಟ್ಟಿಸುವುದಂತು ಸತ್ಯ ಅನ್ನುತ್ತಾರೆ.ಜನ ನೋವು ನಿವಾರಣೆಗಾಗಿ ಸದಾ ನೋವು ನಿವಾರಕ ಮಾತ್ರೆಯನ್ನು ತಿನ್ನುತ್ತಾರೆ ಇದರ ಅಡ್ಡಪರಿಣಾಮಗಳ ಬಗ್ಗೆ ಜನ ಈಗ ನೋಡುವುದೇ ಇಲ್ಲ.ಹಾಗಾಗಿ ಈ ಜ್ವರದ ಪರಿಣಾಮ ಮುಂದೆ ಕಾದಿದೆ ಎನ್ನುತ್ತಾರೆ ವೈದ್ಯರುಗಳು.

ಹಾಗಾಗಿ ಚಿಕೂನ್ ಗುನ್ಯಾವು ಒಂದು ಶಂಕಿತ "ಭಯೋತ್ಪಾದಕನೇ" ಅಂತ ಹಳ್ಳಿ ಜನ ಹೇಳುವುದರಲ್ಲಿ ಅರ್ಥವಿದೆ.

ಮುಂದೆ ಏನು ಅಂತ ಗೊತ್ತಿಲ್ಲ. ಈಗಂತೂ ಊರಿಡೀ ಚಿಕೂನ್ ಗುನ್ಯಾದ್ದೇ ಮಾತು.ತೋಟ ,ರಾಜಕೀಯ,ಮೊದಲಾದ ಸುದ್ದಿಳೆಗಲ್ಲಾ ಸ್ವಲ್ಪ ನಂತರದ ಸ್ಥಾನ.ಮೊದಲೇನಿದ್ದರೂ ಗಂಟು ನೋವಿಗೆ ಒಳ್ಳೆಯ ಡಾಕ್ಟ್ರನ್ನು ಹೇಳಿ..........!!?

ಇದು ಸುಳ್ಯ ಮತ್ತು ದಕ್ಷಿಣ ಕನ್ನಡದ ಸ್ಥಿತಿ ......

ಹೇಳುವವರಾರು .....? ಕೇಳುವವರ್ಯಾರು....? ಇಲ್ಲಿಯ ಕತೆಯ?





21 ಮೇ 2008

ಇದು ಒಡಲ ನುಡಿ....



ನಿಜಕ್ಕೂ ನನಗೆ ಆ ವಿಷಯ ಅಂತರಂಗದೊಳಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು.ಮನಸ್ಸಿನೊಳಗೆ ಮಂಥನ ನಡೆಸಿತು.ಕೊನೆಗೆ ಅವರು ಹೇಳಿದ್ದು ಹೌದು ಅಂತ ಅನಿಸಿತು. ಆ ವಿಷ್ಯ ಏನು ಅಂತ ಒಂದ್ಚೂರು ಇಲ್ಲಿ ದಾಖಲಿಸಿಡಬೇಕು ಅಂತ ಅನ್ನಿಸಿತು.

ಮೊನ್ನೆ ನಾನು ನಮ್ಮೂರಿನ ಹಿರಿಯ ಕೃಷಿಕರೊಬ್ಬರ ಮನೆಗೆ ಹೋಗಿದ್ದೆ.ಕಾರಣ ಅವರಿಗೊಂದು ಕೃಷಿ ವಿಭಾಗದಲ್ಲಿ ಸನ್ಮಾನವನ್ನು ನೀಡುವ ಬಗ್ಗೆ ಸುದ್ದಿ ಪ್ರಸ್ತಾಪವಾಗಿತ್ತು. ಆ ಬಗ್ಗೆ ಅವರಲ್ಲಿ ಮಾತನಾಡಿ ಒಂದಿಷ್ಟು ಆಹಾರವಾದೀತು ಅಂತ ನಂಬಿಕೊಂಡು ಅವರ ಮನೆಗೆ ಹೋಗಿದ್ದೆ.ಆದರೆ ಅವರು ಪ್ರಶಸ್ತಿಗೆ ಒಪ್ಪಲಿಲ್ಲ.ಕಾರಣ ಹಲವಾರು ಹೇಳಿದ್ದರು.ಯುವಕರಿಗೆ ಕೊಡಿ ಅವರನ್ನು ಪ್ರೋತ್ಸಾಹಿಸಲು ಅನ್ನುವುದು ಅವರ ಹಲವು ಕಾರಣಗಳಲ್ಲಿ ಒಂದು.ಮತ್ತೆ ಅವರು ಹೇಳಿದ ಮಾತುಗಳನ್ನು ಇಲ್ಲಿ ಹಾಗೆಯೇ ದಾಖಲಿಸುತ್ತೇನೆ.

ಇಂದು ಕೃಷಿಯಲ್ಲಿ ವಿದ್ಯಾವಂತರು ತೊಡಗಿಕೊಳ್ಳಬೇಕಾಗಿದೆ.ಅಂತಹ ಅನಿವಾರ್ಯತೆ ನಮಗೆ ಬಂದಿದೆ.ಒಂದು ವೇಳೆ ವಿದ್ಯಾವಂತರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ ಎಂದಾರೆ ದೇಶದ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ ಎನ್ನುತ್ತಾ ಪೀಠಿಕೆ ಹಾಕಿದ ಅವರು ಇಲ್ಲಿ ಸಮಸ್ಯೆ ಇದೆ ಅಂತ ಪಲಾಯನವಾದ ಮಾಡುವುದಲ್ಲ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಸಮಸ್ಯೆಯನ್ನು ಮುನ್ನುಗ್ಗಬೇಕು ಹಾಗಾದ್ರೆ ಮಾತ್ರಾ ಭವಿಷ್ಯ ಗಟ್ಟಿ.ನೀವು ಗಮನಿಸಿ ಯಾವುದೇ ಒಬ್ಬ ವಿದ್ಯಾರ್ಥಿಯಿರಲಿ ಅಥವಾ ಇಂಜಿನಿಯರೇ ಇರಲಿ ಅವರು ಉತ್ತೀರ್ಣರಾಗಲು ಕೇವಲ 35-40 ಅಂಕ ಪಡೆದರೆ ಸಾಕು.ಆದರೆ ಕೃಷಿಕ 100 ರಲ್ಲಿ 99 ಅಂಕ ಪಡೆದಿರಬೇಕು .ಏಕೆ ಗೊತ್ತಾ ಇಂದು ಯಾವುದೇ ವಿಭಾಗದವರನ್ನು ಗಮನಿಸಿ ಸಾಫ್ಟವೇರ್ ಇಂಜಿನಿಯರ್ ,ಮೆನೇಜರ್ ,ಡಾಕ್ಟರ್ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವರ ವಿಭಾದಲ್ಲಿ ಮಾತ್ರಾ ಪರಿಪೂರ್ಣರಾದರೆ ಸಾಕು.ಆದರೆ ಕೃಷಿಕ?.ಕೇವಲ ಕೃಷಿಯಲ್ಲಿ ಮಾತ್ರಾ ಪರಿಪೂರ್ಣನಾದರೆ ಸಾಕಾಗುವುದಿಲ್ಲ.ಆತ ವಿಜ್ಞಾನಿಯಾಗಿಯೂ ,ವೈದ್ಯನಾಗಿಯೂ ,ಮೆನೇಜರನಾಗಿಯೂ,ಇಂಜಿನಿಯರನಾಗಿಯೂ,ಚಿಂತಕನಾಗಿಯೂ ಇರಬೇಕಾಗುತ್ತದೆ ಹಾಗಾಗಿ ಆತ ಎಲ್ಲಾ ಕ್ಷೇತ್ರಗಳನ್ನೂ ಅಭ್ಯಸಿಸಿರಬೆಕಾಗುತ್ತದೆ.ನೀವು ಗಮನಿಸಿ ಕೃಷಿಕನಿಗೆ ಗೋಸಾಕಾಣೆ ಅನಿವಾರ್ಯ ಹಾಗಾಗಿ ಒಂದು ವೇಳೆ ಹಸುವಿಗೆ ಅನಾರೋಗ್ಯ ಕಾಡಿದರೆ ತಕ್ಷಣದ ಔಷಧದ ಮಾಹಿತಿ ಆತನಿಗೆ ಗೊತ್ತಿರಬೇಕಾಗುತ್ತದೆ ,ಮನೆಯ ವಿದ್ಯುತ್ ಅಥವಾ ಪಂಪಿನ ವಿದ್ಯುತ್ ದೋಷವಾದರೆ ಕೊಂಚ ದುರಸ್ಥಿ ತಿಳಿದಿರಲೇಬೇಕು,ಮನೆಯ ವ್ಯವಹಾರವನ್ನು [ವಿವಿಧ ಕ್ಷೇತ್ರಗಳನ್ನು ಸರಿದೂಗಿಸಿ] ಸುಸಜ್ಜಿತವಾಗಿ ಮಾಡಿಕೊಳ್ಳಬೇಕು,ಮನೆಗೆ ಅಗತ್ಯವಾಗಿರುವ ಕಟ್ಟಡಗಳ ಬಗ್ಗೆ ಆತನೇ ರೂಪರೇಷೆ ತಯಾರಿಸಬೇಕು..... ಮಾತ್ರವಲ್ಲ ತನ್ನ ಜಮೀನಿನಲ್ಲಿರುವ ಗಿಡಗಳ ಬಗ್ಗೆ ಕೊಂಚವಾದರೂ ಮಾಹಿತಿ ಇರಲೇಬೇಕು ಅವುಗಳ ಫಸಲು ಇತ್ಯಾದಿಗಳ ಬಗ್ಗೆ ಗೊತ್ತಿರಬೇಕು.ಇದೆಲ್ಲದರ ನಡುವೆಯೂ ಆತ ಭಾವನಾತ್ಮಕವಾದ ಸಂಬಂಧಗಳ ನಡುವೆ ಇರಬೇಕಾಗುತ್ತದೆ.ಅದಕ್ಕಾಗಿಯೇ ಕೃಷಿಕರು ಪಾಸಾಗಲು ಅಷ್ಟು ಅಂಕ ಬೇಕೇ ಬೇಕು .. ಕೇವಲ ಉದ್ಯೋಗವಿಲ್ಲದ ಉದ್ಯೋಗ ಅದಲ್ಲ.ಹಾಗಾಗಿ ಇನ್ನು ಅಲ್ಲಿ ವಿದ್ಯಾವಂತರೇ ಬೇಕು ಎಂದು ಮಾತನಾಡುತ್ತಾ ಸಾಗಿದರು. ನಾನು ಸುಮ್ಮನೆ ಕೇಳಿದೆ , ಆದರೆ ಇಂದು.....?. ತಕ್ಷಣವೆ ಅವರು ಹೇಳಿದ್ದು ಇಂದಿನ ಪರಿಸ್ಥಿತಿ ಬಿಡಿ .ಅದು ಹಣದ ಹಿಂದಿನ ಓಟ... ಹಾಗಾಗಿ ಆ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯವಿಲ್ಲ ಅಂದರು.

ಮತ್ತೆ ನನಗೆ ನೆನಪಾಯಿತು.

ಅಂದು ನನ್ನ ಸಂಬಂಧಿಕರೊಬ್ಬರು ಹೇಳಿದ್ದರು.ಅವರು ಕಂಪೆನಿಯೊಂದರಲ್ಲಿ ಹಲವು ವರ್ಷಗಳಿಂದ ಉದ್ಯೋಗಿಯಾಗಿದ್ದರಂತೆ.ಅವರಿಗೆ ಎ.ಟಿ.ಎಂ ಸೆಂಟರಿನಿಂದ ಹಣ ಡ್ರಾ ಮಾಡುವ ಸಂಗತಿಯೇ ತಿಳಿದಿರಲಿಲ್ಲವಂತೆ.ಹಣ ಬೇಕಿದ್ದರೆ ಬ್ಯಾಂಕಿಗೆ ಹೋಗಿ ಅಲ್ಲಿಯೇ ಡ್ರಾ ಮಾಡುತ್ತಿದ್ದರಂತೆ....!. ಇನ್ನು ಬ್ಯಾಂಕ್ ವ್ಯವಹಾರದಲ್ಲಿ ಅವರಿಗೆ ಗೊತ್ತಿದ್ದದ್ದು ಹಣ ಡ್ರಾ ಮಾಡಲು ಮತ್ತು ಡಿಪೊಸಿಟ್ ಮಾಡಲು ಮಾತ್ರವಂತೆ.

ನಿಜವಾಗಲೂ ಎಂಥಾ ಅವಸ್ಥೆ ಮಾರಾಯ್ರೆ...? ಅಂತ ನನಗೆ ಅನ್ನಿಸಿತು.

18 ಮೇ 2008

ರಜಾ ಅಂದರೆ ಮಜಾ.......!?



ಓಹ್ ಏನು ರಜಾ ಎಂಥಾ ಖುಷಿ...!!

ಈಗ ಶಾಲೆಗಳಿಗೆಲ್ಲಾ ರಜಾ ... ಮಕ್ಕಳಿಗೆಲ್ಲಾ ರಜೆಯ ಮಜಾ.... ಆದರೆ ಎಲ್ಲೆಡೆ ಈಗ ಮುಂಬರುವ ಕ್ಲಾಸ್ ಬಗ್ಗೆಯೇ ಪೂರ್ವ ತಯಾರಿ ನಡೆಯುತ್ತಿದೆ.!. ಮಕ್ಕಳಿಗೆ ಅವರದೇ ಆದ ಯಾವುದೇ ಆಟಗಳಿಗೆ ಅಲ್ಲಿ ಅವಕಾಶವೆ ಇಲ್ಲ.ಇದ್ದರೂ ಇಂದಿನ ಅನೇಕ ಮಕ್ಕಳಿಗೆ ಮೊಬೈಲ್ , ಕಂಪ್ಯೂಟರ್ , ವೀಡಿಯೋ ಗೇಮ್ ಗಳನ್ನು ಬಿಟ್ಟರೆ ಮತ್ತಾವ ಸೃಜನಶೀಲ ಆಟಗಳು ಕಾಣಿಸುವುದಿಲ್ಲ.ಇದಕ್ಕೆ ಹೆತ್ತವರೂ ಕಾರಣವಾಗುತ್ತಾರೆ ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.ಕೊನೆಗೆ ನೆಂಟರ ಮನೆಗೆ ಬಿಡಿ ಆಪ್ತರ ಮನೆಗೂ ಹೋಗಲಾಗುವುದೇ ಇಲ್ಲ.ಅಷ್ಟೂ ಬ್ಯುಸಿಯಾಗಿರುತ್ತಾರೆ ಇಂದಿನ ಮಕ್ಕಳು.!

ಇಂತಹ ಪರಿಸ್ಥಿತಿಯಲ್ಲಿ ಒಮ್ಮೆ ನಮ್ಮ ಬಾಲ್ಯಗಳನ್ನು ನೆನಪಿಸಿದರೆ....

ಖುಷಿಯಾಗುತ್ತದೆ....

ಆಗ ರಜೆಯಲ್ಲಿ ನೆಂಟರ ಮನೆಗೆ ಪಯಣ, ಅಲ್ಲಿ ಒಂದಿಷ್ಟು ಉಪಟಳ, ಇತರ ಮಕ್ಕಳೊಂದಿಗೆ ಹೊಳೆ , ನದಿಯಲ್ಲಿ ಆಟ , ಮರಳಿನ ರಾಶಿಯಲ್ಲಿ ಕುಣಿದಾಟ, ಬೈಸಿಕಲ್ ಕಲಿಯುವ, ಕಲಿಸುವ ಹುಮ್ಮಸ್ಸು..... ಹೀಗೆ ಒಂದಿಲ್ಲೊಂದು ಆಟಗಳಲ್ಲಿ ತೊಡಗಿಕೊಂಡು ಶಾಲೆ ಮತ್ತೆ ಪುನ: ಆರಂಭವಾದ ಬಳಿಕ ನಾವು ಮಾಡಿದ ಖುಸ್ತಿಗಳನ್ನು ಮಿತ್ರರಲ್ಲಿ ಹೇಳಿಕೊಳ್ಳುವ ಸಂಭ್ರಮವಿತ್ತು.ಒಮ್ಮೊಮ್ಮೆ ಅಧ್ಯಾಪಕರುಗಳೂ ರಜೆಯಲ್ಲೇನು ಮಾಡಿದ್ದೀರಿ ಎಂದು ಕೇಳುತ್ತಿದ್ದರು.

ಆದರೆ ಈಗೆಲ್ಲಿದೆ ಆ ಸಂಭ್ರಮ .... ಸಡಗರ....?.ಈಗೇನಿದದರೂ ಒಂದು ಮೊಬೈಲ್ ಇದ್ದರೆ ರಜಾ ಕಾಲವಿಡೀ ಕಳೆದು ಬಿಡುತ್ತದೆ.ಹೊಸತೇನೂ ಇಲ್ಲ.

ಒಮ್ಮೊಮ್ಮೆ ಅನಿಸುತ್ತದೆ ಮೊಬೈಲ್, ಮಕ್ಕಳ ಸೃಜನಶೀಲತೆಯನ್ನೇ ಕಸಿದುಕೊಂಡಿತೇ...!?.





ನಮ್ಮ ಮನೆಗೆ ಬಂದಿದ್ದ ಮಕ್ಕಳು ಹೊಳೆಯಲ್ಲಿ ಆಟವಾಡಿದ್ದು ನೋಡಿದಾಗ ಈ ಎಲ್ಲಾ ಸಂಗತಿಗಳೊಮ್ಮೆ ನೆನಪಾಯಿತು.

15 ಮೇ 2008

ಜಾನಪದ ಮಕ್ಕಳ ಮೇಳ...




ಸುಳ್ಯ ತಾಲೂಕಿನಲ್ಲಿ ಈ ಬಾರಿ ಮಕ್ಕಳ ವಿಶೇಷ ಬೇಸಿಗೆ ಶಿಬಿರವೊಂದು ನಡೆಯಿತು. ರಾಜ್ಯದಲ್ಲಿ ಬಹುಶ: ಅಂತಹ ಶಿಬಿರ ನಡೆದಿರಲಿಕ್ಕಿಲ್ಲ.ಅಲ್ಲಿ ಸುಮಾರು 20 ರಿಂದ 30 ಮಕ್ಕಳಿದ್ದರು.ಮಕ್ಕಳಿಗೆ ಜಾನಪದ ಕಲೆ - ಸಂಸ್ಕೃತಿಯ ಅರಿವು ಮೂಡಿಸುವುದು, ಜಾನಪದೀಯ ವಸ್ತುಗಳ ಮತ್ತು ಔಷಧೀಯ ಸಸ್ಯಗಳ ಪರಿಚಯ,ಪರಿಸರದ ಸಂರಕ್ಷಣೆಯ ಅರಿವು,ಸ್ವಚ್ಛತೆ,ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ಸೇರಿದಂತೆ ಸೃಜನಾತ್ಮಕ ಕಲೆಗಳ ಜಾನಪದೀಯ ಆಟಗಳನ್ನು ಕಲಿಸಲಾಗುತ್ತಿತ್ತು.ಇದರ ಜೊತೆಗೆ ಮಕ್ಕಳಿಗೆ ಜಾನಪದ ಹಾಡು ,ಕುಣಿತ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತಿತ್ತು.

ಇದರ ಜೊತೆಗೆ ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಾನಪದ ಶಿಬಿರವಾದ್ದರಿಂದ ಇತರ ಎಲ್ಲಾ ಮಕ್ಕಳ ಶಿಬಿರಕ್ಕಿಂತ ಇದು ಭಿನ್ನವಾಗಿತ್ತು.ಮಕ್ಕಳ ಸೃಜನಶೀಲತೆ ಬೆಳೆಸಲು ಇಂತಹ ಕಾರ್ಯಕ್ರಮಗಳು ಇಂದು ಅನಿವಾರ್ಯ.ಕೇವಲ ಪುಸ್ತಕದ "ಹುಳ"ಗಳು ಸಾಲದು.ಆಂತರಿಕವಾಗಿ ಬೆಳೆಯಲು ಮಕ್ಕಳಿಗೆ ಇಂತಹ ಶಿಬಿರಗಳು ಸಹಕಾರಿ.ಇಂದಿನ ಶಿಕ್ಷಣ ಪದ್ಧತಿಯಲ್ಲಿ ಇಂತಹ ಶಿಬಿರಗಳು ಅನಿವಾರ್ಯ ಕೂಡಾ...



ಶಿಬಿರದಲ್ಲಿ...




ಕಂಸಾಳೆ ನೃತ್ಯ ತರಬೇತಿಯಲ್ಲಿ ವಿದ್ಯಾರ್ಥಿಗಳು...




ವಿರಾಮದ ವೇಳೆಯ ಆಟ....

14 ಮೇ 2008

"ಜಾತಿ" ರಾಜ"ಕಾರಣ".....!



ಎಂಥಾ ರಾಜಕೀಯ...!?.

ಇಂದಿನ ಪರಿಸ್ಥಿತಿಯಲ್ಲಿ ಉತ್ತಮ ರಾಜಕಾರಣ ನಿರೀಕ್ಷಿಸುವುದು ದೊಡ್ಡ ತಪ್ಪು.ಯಾಕೆಂದ್ರೆ ಈಗಿರುವುದು ಜಾತಿ ರಾಜಕಾರಣ.ಹೀಗಾಗಿ ಅಭಿವೃದ್ಧಿ ರಾಜಕಾರಣ ಎಂದೋ ದೂರವಾಗಿಬಿಟ್ಟಿದೆ.ಇದರಿಂದಾಗಿ ಮುಂದೆ ಸಮಾಜದಲ್ಲಿ ಅಶಾಂತಿ ಉಂಟಾದರೂ ಅಚ್ಚರಿಯಿಲ್ಲ.

ಈ ದೇಶದಲ್ಲಿ ಸ್ವಾತಂತ್ರ್ಯ ಲಭ್ಯವಾಗುವವರೆಗೆ ಇದ್ದದ್ದು ಒಂದು ಗುರಿಯೆಡೆಗಿನ ಹೋರಾಟ.ನಂತರ ನಮ್ಮ ದೇಶದ ಸರಕಾರ ಬಂದ ಬಳಿಕ ಅಭಿವೃದ್ಧಿ ಕಾರ್ಯ ಆರಂಭವಾಯಿತು. ಬಳಿಕ ವಿವಿಧ ಪಕ್ಷಗಳ ಉದಯವಾಯಿತು.ಆಗಲೇ ಆರಂಭವಾದದ್ದು ತಮ್ಮ ಪಕ್ಷ ಅಧಿಕಾರರಕ್ಕೆ ಬರಬೇಕೆಂಬ ಒಂದೇ ಗುರಿಯ ಹೋರಾಟ.ಆರಂಭದ ಗುರಿಯ ದಾರಿ ಬದಲಾಯಿತು.ಗುರಿ ಕವಲೊಡೆಯಿತು. ಹೀಗಾಗಿ ದೇಶದ ಸಿದ್ದಾಂತದ ಹಳಿ ತಪ್ಪಿತು. ತಮ್ಮದೇ ಆದ ಪಕ್ಷದ ಸಿದ್ದಾಂತ ಬಂತು. ಅದರ ಬಳಕೆ ಇತ್ತೀಚಿನವರೆಗೂ ಕೆಲ ಪಕ್ಷಗಳು ಅನುಸರಿಸಿಕೊಂಡು ಬರುತ್ತಿದ್ದವು.ಇನ್ನೂ ಕೆಲವು ಓಲೈಕೆಗೆ ತೊಡಗಿಕೊಂಡಿದ್ದವು.ತಮ್ಮ ಪಕ್ಷ ಗೆಲ್ಲಬೇಕೆಂಬ ಉದ್ದೇಶದಿಂದಲೂ ಕೆಲ ಓಲೈಕೆ ತಂತ್ರಗಳ ಬಳಕೆಯಾಯಿತು.

ಸರಿ ಇದೆಲ್ಲವೂ ತೊಂದರೆಯಿರಲಿಲ್ಲ.ತಮ್ಮ ಪಕ್ಷಕ್ಕಾಗಿ ನಡೆಯುತ್ತಿತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ರಾಜಕಾರಣ ನಡೆಯುತ್ತಿದೆ.ತಮ್ಮ ಪಕ್ಷ ಗೆಲ್ಲಬೇಕೆಂಬ ಉದ್ದೇಶದಿಂದ ಜಾತಿಯೆಂಬ ಭಾವನಾತ್ಮಕವಾದ ಸಂಗತಿಯನ್ನು ಮುಂದಿಟ್ಟುಕೊಂಡು ಓಟು ಗಳಿಸುವ ಪ್ರಯತ್ನ ನಡೆಸುತ್ತಿದೆ. ಪಕ್ಷದಿಂದ ಟಿಕೆಟ್ ಕೊಡುವಾಗಲೂ ಜಾತಿ ಪ್ರಮುಖ ಪಾತ್ರ ವಹಿಸುತ್ತಿದೆ.ಹೀಗಾಗಿ ಒಂದು ಜಾತಿಗೆ ಪಕ್ಷದಿಂದ ಟಿಕೆಟ್ ಸಿಕ್ಕಿ ಇನ್ನೊಂದು ಜಾತಿಗೆ ಸಿಕ್ಕಿಲ್ಲವಾದರೆ ಆ ಪಕ್ಷದ ಇನ್ನೊಂದು ಜಾತಿಯ ನಾಯಕ ತನ್ನ ಜಾತಿಯವರನ್ನು ಹಾಗೂ ತನಗೆ ಬೆಂಬಲಿಸುವವರೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಾನೆ. ಆದರೆ ಎಲ್ಲೂ ತಾನು ಜಾತಿಯರನ್ನುಸೇರಿಸಿಕೊಂಡಿದ್ದೇನೆಂದು ಹೇಳುವುದಿಲ್ಲ.ನನಗೆ ಟಿಕೆಟ್ ಕೊಡದ ಕಾರಣ ಬಂಡಾಯ ಅಂತಾನೆ.

ಹೀಗಾಗಿ ಜಾತಿ ಜಾತಿಯೊಳಗೆ ಸಂಘರ್ಷಕ್ಕೆ ಇದುವೇ ನಾಂದಿಯಾಗಬಲ್ಲುದು ಎಂಬ ಸಂಗತಿ ಈಗ ಗಂಬೀರವಾಗಿ ಚಿಂತಿಸಬೇಕಾದ ಸಂಗತಿ.ಏಕೆಂದರೆ ಇದುವರೆಗೆ ಇಂತಹ ರಾಜಕಾರಣ ನಡೆದಿಲ್ಲ ಅಂತ ಹಿರಿಯರು ಹೇಳುತ್ತಾರೆ.ಆದುದರಿಂದ ಮುಂದಿನ ರಾಜಕೀಯದ ದಾರಿಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗಬಲ್ಲುದು ಎಂಬ ಸಂದೇಶ ಈಗಲೇ ರವಾನೆಯಾಗುತ್ತಿದೆಯೇ?.

13 ಮೇ 2008

ಇನ್ನಿಲ್ಲವಾದಳು "ಇಂದುಮತಿ...".












ಕುಕ್ಕೆ ಸುಬ್ರಹ್ಮಣ್ಯದ ಆನೆ 52 ರ ಹರೆಯದ ಇಂದುಮತಿಯು ಸೋಮವಾರದಂದು ತಡ ರಾತ್ರಿ ಅಸುನೀಗಿತು.ಮಂಗಳವಾರದಂದು ಅಪರಾಹ್ನ 3.15ರ ಸುಮಾರಿಗೆ ಇಂದುಮತಿಯ ದೇಹವನ್ನು ಸುಬ್ರಹ್ಮಣ್ಯದ ನಕ್ಷತ್ರವನದಲ್ಲಿ ದಹಿಸಲಾಯಿತು.

1969 ರಲ್ಲಿ ತಿತಿಮತಿಯಿಂದ ಕುಕ್ಕೆಗೆ ಆಗಮಿಸಿದ ಇಂದುಮತಿಗೆ ಆಗ 12ರ ಹರೆಯ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಡತಗಳ ಪ್ರಕಾರ ಇದು ಮೊದಲ ಆನೆ.ಈ ಮೊದಲು ಸುಬ್ರಹ್ಮಣ್ಯದಲ್ಲಿ ಆನೆ ಇತ್ತಾದರೂ ಅದು ಮಠದಿಂದ ಸಾಕಲ್ಪಟ್ಟಿತ್ತು ಎಂದು ತಿಳಿದುಬರುತ್ತದೆ.

1969 ರಲ್ಲಿ ಅಂದಿನ ಕರ್ನಾಟಕ ಸರಕಾರದ ಅರಣ್ಯ ಸಚಿವ ಹನುಮಂತಪ್ಪ ಮತ್ತು ಅರಣ್ಯ ಇಲಾಖಾ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಇಂದುಮತಿಯನ್ನು ದೇವಳಕ್ಕೆ ಹಸ್ತಾಂತರಿಸಿದ್ದರು.

ಇಂದುಮತಿಯು ಅತ್ಯಂತ ಸೌಮ್ಯ ಸ್ವಭಾವದಿಂದ ಜನ ಮಾನಸದ ಹೃದಯ ಗೆದ್ದಿದ್ದಳು.ಹೀಗಾಗಿ ಆನೆಯ ಸಾವಿನಿಂದ ಅನೇಕ ಭಕ್ತಾದಿಗಳು ತೀರಾ ವಿಷಾದ ವ್ಯಕ್ತಪಡಿಸಿದರು.

ಕುಕ್ಕೆಯಲ್ಲಿ ಜಾತ್ರಾ ಸಮಯ ಹಾಗೂ ಅತಿಥಿಗಳ ಆಗಮನದ ವೇಳೆ ಆನೆಗೆ ವಿಶೇಷ ಮೆರುಗು ಇದೆ.

ಇತ್ತೀಚೆಗೆ ಇಂದುಮತಿಗೆ ಕಾಲಿನಲ್ಲಿ ವೃಣ ಕಂಡು ಬಂದು ನಡೆದಾಡಲು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ನಡೆದು ಕೊಂಚ ಸುಧಾರಿಸಿತ್ತು.ಆದರೆ ದೇವಳದ ಒಳಾಂಗಣದಲ್ಲಿ ನಡೆದಾಡುತ್ತಿರಲಿಲ್ಲ.ಮೊನ್ನೆ ಭಾನುವಾರದಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿತು.ತಕ್ಷಣವೇ ಸಂಬಂಧಿತರು ಹಾಗೂ ಸ್ಥಳೀಯರು ವೈದ್ಯರನ್ನು ಕರೆಸಿದರು ಚಿಕಿತ್ಸೆ ನೀಡಲು ಆರಂಭಿಸಿ ಹಾಸನದಿಂದ ಕ್ರೇನ್ ತರಿಸುವ ಕೆಲಸ ನಡೆಯಿತು.ಇದರೊಂದಿಗೆ ಇನ್ನೊಂದು ಆನೆಯನ್ನು ಸಕಲೇಶಹುರದಿಂದ ತರಿಸಿ ಇಂದುಮತಿಯನ್ನು ಮೇಲೆತ್ತುವ ಪ್ರಯತ್ನ ನಡೆಸಲಾಯಿತು.ಆದರೆ ಇದೆಲ್ಲಾ ಸಿದ್ಧತೆ ನಡೆಯುವ ಹೊತ್ತಿಗೆ ಸೋಮವಾರ ತಡರಾತ್ರಿ ಇಹಲೋಕ ಸೇರಿತು. ಬಳಿಕ ಮರುದಿನ ಮಂಗಳವಾರದಂದು ಇಂದುಮತಿಯನ್ನು ಕ್ರೇನ್ ಬಳಸಿ ವಿಶೇಷ ಲಾರಿಯಲ್ಲಿ ಶವವನ್ನಿರಿಸಿ ಸುಬ್ರಹ್ಮಣ್ಯದ ರಥಬೀದಿಯಲ್ಲಿ ವಾಲಗದೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಕ್ಷತ್ರವನದಲ್ಲಿ ಅರಣ್ಯ ಇಲಾಖಾ ಕಾನೂನು ಪ್ರಕಾರ ದಹಿಸುವ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪರವಾಗಿ ಗಂಧದ ಕೊರಡನ್ನು ಚಿತೆಗೆ ಸಮರ್ಪಿಸಲಾಯಿತು.ಆನೆಯ ದಹನದ ಸಂದರ್ಭದಲ್ಲಿ ಸಾವಿರಾರು ಜನ ಸಾಕ್ಷಿಯಾದರು.
ಇಂದುಮತಿಯ ಜಾಗಕ್ಕೆ ನೂತನ ಆನೆ ಈ ಮೊದಲೇ ತರಲಾಗಿತ್ತು.ಇನ್ನು ಸಂಪೂರ್ಣ ಜವಾಬ್ದಾರಿ ನೂತನ ಆನೆ "ಯಶಸ್ವಿ"ಯ ಮೇಲಿದೆ.

11 ಮೇ 2008

ಪ್ರಚಾರದ ಅಬ್ಬರದಲ್ಲಿ "ಮೋದಿ" ಮೋಡಿ...




ಚುನಾವಣಾ ಕಣ ಸಿದ್ಧವಾಗಿದೆ.

ಚುನಾವಣಾ ಪ್ರಚಾರಕ್ಕೆ ವಿವಿಧ ನಾಯಕರು ಆಗಮಿಸುತ್ತಿದ್ದಾರೆ.ಕರಾವಳಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದು ಬಿ ಜೆ ಪಿ ಪ್ರಯತ್ನಿಸಿದರೆ ಕಾಂಗ್ರೇಸ್ ತನ್ನ ಪ್ರಾಬಲ್ಯವನ್ನು ಮೆರೆಯಲು ಹವಣಿಸುತ್ತಿದೆ, ಜೆಡಿಎಸ್ ಕೂಡಾ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ.

ಹಾಗಾಗಿ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರೂ ಆಗಮಿಸುತ್ತಿದ್ದಾರೆ.ಇಂದು ಸುಳ್ಯ ತಾಲೂಕಿಗೆ ಮಾಜಿ ಪ್ರದಾನಿ ದೇವೇ ಗೌಡ ಮತ್ತು ಗುಜರಾತ್ "ಸಿಎಂ" ನರೇಂದ್ರ ಮೋದಿ ಆಗಮಿಸಿದ್ದಾರೆ.

ಇಂದಿನ ಅಬ್ಬರದ ಚುನಾವಣಾ ಪ್ರಚಾರದಲ್ಲಿ ಕೆಲ ನಾಯಕರು ಏನನ್ನು ಹೇಳುತ್ತಾರೆ ಎಂಬುದೇ ಸ್ಪಷ್ಟವಿರುವುದಿಲ್ಲ. ಕಾರ್ಯಕರ್ತರಿಗೆ ,ಮತದಾರರಿಗೆ ಗೊಂದಲವೋ ಗೊಂದಲ..

ಆದರೆ ಮೋದಿಯವರ ಮಾತುಗಳಲ್ಲಿ ಅದೇನೋ ಸತ್ಯ ಕಂಡುಬಂದಿತ್ತು.ಕೇವಲ ಮಾತನಾಡಿದರೆ ಸಾಲದು ಕೆಲಸವೂ ಆಗಬೇಕು ಎಂಬುದು ಅವರ ನಿಲುವು ಅಂತ ಅಂತರಾಳದಲ್ಲಿ ಗುಡುಗುಟ್ಟುತ್ತಿತ್ತು.ಅವರ ಭಾಷಣವನ್ನು ಅವರ ರೀತಿಯಲ್ಲೇ ಹೇಳಿವುದಾದರೆ....

ನನ್ನ ಗುಜರಾತಿನಲ್ಲಿ ಅಡಿಕೆ ಬೆಳೆಗಾರರಿಲ್ಲ ,ರಬ್ಬರ್ ಬೆಳೆಗಾರರಿಲ್ಲ ಆದರೂ ನನ್ನಲ್ಲಿ ಅಡಿಕೆ ಉತ್ಪನ್ನಗಳ ಮಳಿಗೆಗಳಿವೆ, ರಬ್ಬರ್ ಕಾರ್ಖಾನೆಗಳಿವೆ. ಆ ಮೂಲಕ ನನ್ನ ಜನರಿಗೆ ಉದ್ಯೋಗ ದೊರಕಿಸಿ ಕೊಟ್ಟಿದ್ದೇನೆ ನಿಮ್ಮಲ್ಲಿಯ ಉತ್ಪನ್ನಗಳಿಗೆ ಬೆಲೆ ದೊರಕಿಸಲು ಅದು ಕಾರಣವು ಆಗಿರಬಹುದು.ಆದರೆ ಕಳೆದ 50 ವರ್ಷಗಳಿಂದ ಇಲ್ಲಿ ಕಾಂಗ್ರೇಸ್ ಆಡಳಿತವಿದೆ, ಕರಾವಳಿ ಜಿಲ್ಲೆಯಲ್ಲಿ ,ರಾಜ್ಯದಲ್ಲಿ, ಅಡಿಕೆ ,ರಬ್ಬರ್ ಬೆಳೆಯುತ್ತಿದೆ ಇಲ್ಲಿನದ್ದೇ ಆದ ಅಡಿಕೆ ,ರಬ್ಬರ್ ಕಾರ್ಖಾನೆಗಳು ಏಕಿಲ್ಲ?.ಒಂದು ವೇಳೆ ಅದು ಇದ್ದಿದ್ದರೆ ಇಲ್ಲಿನ ಅದೆಷ್ಟೋ ಜನರಿಗೆ ಉದ್ಯೋಗ ಸಿಗುತ್ತಿತ್ತು ,ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿತ್ತು.ರೈತರು ನೆಮ್ಮದಿಯಿಂದಿರುತ್ತಿದ್ದರು. ಪರಿಸ್ಥಿತಿ ಹಾಗಿಲ್ಲ. ಇಲ್ಲಿನ ಕಾಂಗ್ರೇಸ್ ಗುಜರಾತ್ ಬಗ್ಗೆ ಮಾತನಾಡುತ್ತಾ ಕರ್ನಾಟಕವನ್ನು ಗುಜರಾತನ್ನಾಗಿಸಬೇಡಿ ಎನ್ನುತ್ತಲ್ಲಾ ಅದಕ್ಕೆ ಈಗ ಏಕೆ ಗುಜರಾತ್ ನೆನಪಾಗುತ್ತದೆ.ಕರ್ನಾಟಕದ ಅಭಿವೃದ್ಧಿ ನೆನಪಾಗಬೇಕಾದ ಈ ಸಂದರ್ಭದಲ್ಲಿ ಗುಜರಾತ್ ಏಕೆ ನೆನಪಾಗುತ್ತದೆ. ಅದಕ್ಕೆ ಬೇಕಾಗಿರುವುದು ಅಭಿವೃದ್ಧಿಯಲ್ಲ ಕೇವಲ ಗಲಭೆಗಳು ಮಾತ್ರಾ.ತಾಕತ್ತಿದ್ದರೆ ಕರ್ನಾಟಕವನ್ನು ಗುಜರಾತನ್ನಾಗಿಸಿ ಇಡೀ ದೇಶಕ್ಕೆ ಮಾದರಿಯಾಗಿಸಿ ಎನ್ನುವಾಗ ಮೋದಿಯವರ ಮಾತಿನಲ್ಲಿ ದೃಢತೆಯಿತ್ತು.ಇಂದು ಗುಜರಾತ್ ಅಭಿವೃದ್ಧಿಯಾಗಲು ಕಾರಣ ಅಲ್ಲಿನ ರೈತರಿಗೆ ಅಗತ್ಯವಾದ ಎಲ್ಲಾ ಕೆಲಸಗಳನ್ನು ಮಾಡಲಾಗಿದೆ ಎನ್ನುವ ಮೋದಿಯವರ ಮಾತಿನಲ್ಲಿ ಎಲ್ಲೋ ಒಂದು ಸತ್ಯ ಕಂಡುಬಂತು... ಹೀಗೆಯೇ ಅವರ ಮಾತಿನ ಮೋಡಿ ಹರಿಯುತ್ತಲೇ ಇತ್ತು...

ಇದೆಲ್ಲವನ್ನು ಕೇಳಿದ ಮೇಲೆ ಕೊನೆಗೆ ಮತ್ತೆ ಉದ್ಭವಿಸುವ ಪ್ರಶ್ನೆ ಕರ್ನಾಟಕದಲ್ಲಿ ಗುಜರಾತ್ ನಂತೆ ಅಭಿವೃದ್ಧಿ ಸಾಧ್ಯವಾ....? ಅಂಥ ಯೋಜನೆಗಳು ಇಲ್ಲಿ ಬರಬಹುದೇ...? ಅನುಷ್ಠಾನಗೊಂಡಾವೇ....?

ಉತ್ತರ ಈಗ ದೊರಕಲಾರದು ಅಲ್ಲವೇ.... ಹಾಗಾಗಿ ಒಮ್ಮೆ ಬದಲಾವಣೆಯಾಗಲಿ .... ನೋಡೋಣ...... ಮತ್ತೆ ಇಳಿಸೋಣ......



ಮೋದಿ ಹೀಗೆ ಮಾತನಾಡಿದರೆ ...
ಇನ್ನೊಂದು ಕಡೆ ಮಾತನಾಡಿದ ಮಾಜಿ ಪ್ರದಾನಿಗಳ ಮಾತಿನಲ್ಲಿ ಯಾವುದೇ ಉತ್ಸಾಹ ಇದ್ದಂತೆ ಕಂಡುಬರಲಿಲ್ಲ.ಅವರು ಎಂದಿನ ಶೈಲಿಯಲ್ಲೇ ವರಸೆ ಮಾಡಿದರು.ಕೆಲವೊಮ್ಮೆ ಕಂಡದ್ದು ಹೀಗೆ....

06 ಮೇ 2008

ಚುನಾವಣಾ "ಕಣ್ಣೀರು".....!!




ಚುನಾವಣಾ ಕಣ ಸಿದ್ಧವಾಗಿದೆ.ಕಣ್ಣೀರ ಕೋಡಿಗಳು ಹರಿದಿವೆ.ಜನರನ್ನು ಮರುಳು ಮಾಡುವ ತಂತ್ರಗಳು ನಡೆಯುತ್ತಿದೆ.ಜನ ನಂಬುತ್ತಾರೋ.... ಮತ್ತೆ ಮೋಸ ಹೋಗುತ್ತಾರೋ.... ಫಲಿತಾಂಶದ ನಂತರವೇ ತಿಳಿಯಬೇಕಷ್ಟೆ.

ಇತ್ತೀಚೆಗೆ ಒಂದು ಟ್ರೆಂಡ್ ಶುರುವಾಗಿದೆ.ಜನರೆದುರು ಅಳುವುದು.ಅವರು ಹೀಗೆ ಮಾಡಿದರು,ನನ್ನ ಕಾರ್ಯಕರ್ತ ದೇವರೇ ನೀವೇ ಅವರಿಗೆ ಪಾಠ ಕಲಿಸಿ ಎಂದೆಲ್ಲಾ ಹೇಳುವುದುಂಟು..... ಜನ ಮರುಳಾಗುತ್ತಾರೆ ಅಂತ ರಾಜಕಾರಣಿ ಅಂದುಕೊಂಡು ಬಿಡುತ್ತಾನೆ.ಆದರೆ ಈಗ ಜನರು ಬುದ್ಧಿವಂತರಾಗಿದ್ದಾರೆ. ಹಾಗಿರುವ "ಮೊಸಳೆ" ಕಣ್ಣೀರಿನ ಮಂದಿಗೇ ಸರಿಯಾದ ಪಾಠ ಕಲಿಸುತ್ತಾರೆ.

ಗಮನಿಸಿ ನೋಡೋಣ...

ಒಂದು ಪಕ್ಷ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದರೆ ಇನ್ನೊಂದು ಪಕ್ಷ ನಾವು 24 ಗಂಟೆ ವಿದ್ಯುತ್ ನೀಡುತ್ತೇವೆ ಎನ್ನುತ್ತಾರೆ.ಮತ್ತೊಂದು ಪಕ್ಷ ನಾವು ಗ್ಯಾಸ್,ಸ್ಟವ್ ನೀಡುತ್ತೇವೆ ಎನ್ನುತ್ತಾರೆ.ಹಾಗಿದ್ರೆ ನಿಜವಾಗಲೂ ಇದೊಂದು ಸ್ಫರ್ದೆಯೇ?.ಜನರನ್ನು ಮರುಳು ಮಾಡುವ ತಂತ್ರವಲ್ಲವೇ?.ಈಗಿನ ಪರಿಸ್ಥಿತಿ ನೋಡಿದರೆ ಉಚಿತ ವಿದ್ಯುತ್ ನೀಡಲು ಸಾಧ್ಯವೇ.ಹಾಗಿರುವ ಉಚಿತಗಳು ರೈತರಿಗೆ ಬೇಕೇ?..ಅವು ಯಾವತ್ತೂ ಬೇಡ.ಇರುವಷ್ಟು ವಿದ್ಯುತ್ ಗುಣಮಟ್ಟದ್ದು ನೀಡಲಿ.ಗ್ಯಾಸ್ ಸಮರ್ಪಕವಾಗಿ ಸಿಗುವಂತಾಗಲಿ.ಪುಕ್ಕಟೆ ಯಾವುದೂ ಅಗತ್ಯವಿಲ್ಲ.ಅಷ್ಟು ಬಡವರು ನಮ್ಮಲ್ಲಿಲ್ಲ.ಗುಜರಾತ್ ಮಾದರಿಯಾನ್ನಾಗಿಸುವವರು ಅಂತಹ ಪುಕ್ಕಟೆಯನ್ನು ನೀಡುವುದರ ಬದಲು ಗುಣಮಟ್ಟದ್ದನ್ನು ನೀಡಲಿ.

ಇತ್ತೀಚೆಗೆ ಟಿ.ವಿ ಸಂದರ್ಶನದಲ್ಲಿ ಸಂದರ್ಶನಕಾರರು [ಸುವರ್ಣದಲ್ಲಿ ಶಶಿಧರ ಭಟ್] ರಾಜ್ಯದ ಜನಪ್ರತಿನಿಧಿಯೋರ್ವರಲ್ಲಿ ಪ್ರಶ್ನಿಸಿದರು ನಿಮ್ಮ ಚುನಾವಣಾ ಪ್ರನಾಳಿಕೆಯಲ್ಲಿ ಯಾವುದಾದರೂ ಈ ರಾಜ್ಯದ ಜನರ ಬದುಕನ್ನು ಎತ್ತರಕ್ಕೇರಿಸಬಲ್ಲ ಅಂಶಗಳಿವೆಯಾ? ಎಂದು ಕೇಳಿದಾಗ,ಜನಪ್ರತಿನಿಧಿ ಹೇಳಿದ್ದು ಹೌದು ಇದೆ ಅದು ಬೆಂಗಳೂರಿನ ಸಮಗ್ರ ಅಭಿವೃಧಿಗೆ ಸಾವಿರ [ಲೆಕ್ಕಕ್ಕೆ ನಿಲುಕದ್ದು] ಕೋಟಿ ರೂ ಮೀಸಲಿಡಲಾಗಿದೆ ಎಂದರು......!!. ಇಡೀ ರಾಜ್ಯದ ಜನರ ಬದುಕನ್ನು ಎತ್ತರಕ್ಕೇರಿಸುವುದು ಬೆಂಗಳೂರು ಮಾತ್ರವೇ?.ಹಳ್ಳಿಗಳ ಅಭಿವೃಧಿ ಯಾವಾಗ?.ಇದು ಕನಸೇ?.ಇಂತಹ ಹತ್ತಾರು ಪ್ರಶ್ನೆಗಳು ಮೂಡುತ್ತವೆ.ಇದಕ್ಕೆಲ್ಲಾ ಪರಿಹಾರ ಏನು?.

ಎಲ್ಲಾ ಕ್ಷೇತ್ರಗಳತ್ತ ಗಮನಹರಿಸುವ ಸರಕಾರ ಬರಲಿ.... ರಾಜ್ಯದಲ್ಲಿ ಏಕೈಕ ಪಕ್ಷ ತನ್ನ ಬಲದಿಂದ ಸರಕಾರ ನಡೆಸುವಂತಾಗಲಿ, ಆಡಳಿತಕ್ಕೆ ಬರಲಿ.... ಹೊಸ ಸರಕಾರವಿರಲಿ..... ಬದಲಾವಣೆಯಿರಲಿ...... ಇದೊಂದೇ ಪರಿಹಾರ.....

04 ಮೇ 2008

ನೆನಪಾದವರು....




ಇದು ಚುನಾವಣಾ ಸಮಯ.ನೆನಪಾಗದವರೆಲ್ಲಾ ನೆನಪಾಗಿ ಬಿಡುತ್ತಾರೆ.ಕೆಲವರಿಗೆ ನೆನಪು ಮಾಡಿಸುವುದೇ ಕೆಲಸ.ಇನ್ನೂ ಕೆಲವರಿಗೆ ನೆನಪು ಬಾರದಂತೆ ತಡೆಯುವ ಕೆಲಸ.ಒಟ್ಟಿನಲ್ಲಿ ಈಗ ರಂಗು ರಂಗಾದ ಮಾತಿನ ಮೋಡಿಗಳು.... ಕಣ್ಣೀರ ಕೋಡಿಗಳು....

ಹೀಗೆ ಚುನಾವಣಾ ಕಣ ಸಿದ್ದವಾದಾಗ ದೂರದಲ್ಲಿ ಕಣ್ಣಿಗೆ ಕಾಣಿಸಿದ್ದು ಮಾಜಿ ಶಾಸಕ "ಬಾಕಿಲ ಹುಕ್ರಪ್ಪ".ಒಮ್ಮೆ ಸುಳ್ಯ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು.ಅವರದೇ ಪಕ್ಷದ ಕೆಲವರು ಆ ಪ್ರಯತ್ನ ಮಾಡಿದ್ದರು.ಆದರೆ ಏನೋ ಗೊತ್ತಿಲ್ಲ ಅವರಿಗೆ ಟಿಕೆಟ್ ಇಲ್ಲ.ಕಣದಿಂದ ಹಿಂದೆ ಸರಿದಿದ್ದಾರೆ.ಆದರೆ ಅವರ ನೆನಪು ಮಾತ್ರಾ ಇಡೀ ತಾಲೂಕಿನಲ್ಲಾಯಿತು.

ಆದರೆ ನನಗೇಕೆ ಅವರ ನೆನಪು ಸದಾ ಕಾಡುತ್ತೆ ಅಂದರೆ, ಅವರು ನನಗೆ ಯಾವಾಗಲೂ ಕಾಣಸಿಗುತ್ತಾರೆ.ಸುಮ್ಮನೆ ಮಾತನಾಡಿ ಹೋಗುತ್ತಾರೆ.

ಅಂದಿನ ಘಟನೆ...

ಆಗ ನಾನು ಉಷಾಕಿರಣ ದಿನ ಪತ್ರಿಕೆಯ ವರದಿಗಾರನಾಗಿದ್ದೆ.ಯಾವುದೋ ಕಾರಣಕ್ಕೆ ನಾನು ಮತ್ತು ನನ್ನ ಛಾಯಾಗ್ರಾಹಕ ಮಿತ್ರ ಬಾಕಿಲ ಹುಕ್ರಪ್ಪರ ಮನೆಯ ಹತ್ತಿರದಲ್ಲೇ ಹೋಗುತ್ತಿರುವಾಗ ಹುಕ್ರಪ್ಪರು ಸೌದೆ ಹೊತ್ತು ಸಾಗುತ್ತಿದ್ದರು.ಆಗಲೂ ಸುಮ್ಮನೆ ಅವರಲ್ಲಿ ಮಾತನಾಡಿ ಹೋಗಿದ್ದೆವು.ನಂತರ ತಿಳಿಯಿತು ಅವರ ಬದುಕಿನ ಸ್ಥಿತಿ.ಕೂಡಲೇ ನಾವು ಅವರ ಮನೆಯ ಚಿತ್ರ ತೆಗೆದುಕೊಂಡೆವು,ಅವರು ಶಾಸಕರಾಗಿದ್ದಾಗ ವಿದೇಶಕ್ಕೆ ಹೋಗಿದ್ದ ಚಿತ್ರವೂ ನಮ್ಮ ಬಳಿಗೆ ಬಂತು,ಮಾತನಾಡಿದೆವು,ನಂತರ ಅವರ ಆಗಿನ ಬದುಕಿನ ಸ್ಥಿತಿ ಕೇಳಿದಾಗ..ಸರಕಾರದಿಂದ ಬರುವ ಗೌರವಧನ ಸಾಲುವುದಿಲ್ಲ ಹಾಗಾಗಿ ಕೆಲಸಕ್ಕೂ ಹೋಗುತ್ತೇನೆ ಎಂದರು.ಸರಿ ಪತ್ರಿಕೆಯಲ್ಲಿ ಅದು ವರದಿಯಾಯಿತು.ಮಾಜಿ ಶಾಸಕರ ಬದುಕಿನ ಚಿತ್ರಣ ಹೊರಜಗತ್ತಿಗೆ ಅರಿವಾಯಿತು.ಕೂಡಲೇ ನನ್ನ ಮಿತ್ರ ವಿನಾಯಕ ಬಂದು ETVಗೂ ವರದಿ ಮಾಡಿದ.ಅದು ಇನ್ನೂ ಹೆಚ್ಚಿನ ಪರಿಣಾಮ ನೀಡಿತು.ನಂತರ ಎಲ್ಲಾ ಪತ್ರಿಕೆಯಲ್ಲೂ ಬಂತು.ರಾಜ್ಯದಲ್ಲೇ ದೊಡ್ಡ ಸುದ್ದಿಯಾಯಿತು.ಹುಕ್ರಪ್ಪರಿಗೆ ಗೌರವಧನವೂ ಹೆಚ್ಚಿತು. ಆ ಖುಷಿಯಲ್ಲಿ ಇಂದಿಗೂ ಹುಕ್ರಪ್ಪರು ಮಾತನಾಡುತ್ತಾರೆ.ಅವರು ನನಗೆ ನೀಡಿದ್ದ ವಿದೇಶ ಯಾತ್ರೆಯ ಚಿತ್ರವನ್ನೂ ಇಂದಿಗೂ ನಾನು ಪುನ: ಹಿಂದಿರುಗಿಸಿಲ್ಲ.ಸಿಕ್ಕಾಗ "ಇಂದೇ ಆ ಫೋಟೋ ಕೊರ್ಲೆ "[ಇಕೊಳಿ ಆ ಚಿತ್ರ ಕೊಡಿ]ಅಂತ ಹೇಳುತ್ತಾರೆ.ನನ್ನ ಮನೆಯಲ್ಲೇ ಆ ಚಿತ್ರ ಬೆಚ್ಚನೆ ಕುಳಿತಿದೆ.[ಇನ್ನೊಮ್ಮೆ ಬೇಕಾದೀತು].

ಆದರೆ ನನಗೆ ಅನಿಸಿದ್ದು ಅದಲ್ಲ.ನಾನು ಮತ್ತು ನನ್ನ ಮಿತ್ರ ವಿನಾಯಕ ಹುಕ್ರಪ್ಪರ ಬದುಕಿನ ಬಗ್ಗೆ ಮಾಡಿದ್ದ ಆ ವರದಿ ಇಂದು ಯಾವೆಲ್ಲ ತಿರುವು ಪಡೆಯಿತು.ಅಚ್ಚರಿಯಾಯಿತು.!!.ನಿಜವಾಗಲೂ ಅವರ ಆ ಸ್ಥಿತಿಗೆ ಕಾರಣರಾರು?.ಅನೇಕರಿಗೆ ಗೊತ್ತಿಲ್ಲ.

ಅವರ ಪಕ್ಷಾಂತರವೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ.ಮೊದಲು ಬಿಜೆಪಿಯಲ್ಲಿದ್ದ ಅವರೊ MLA ಆದ ಬಳಿಕ ಮುಂದಿನ ಚುನಾವಣೆಗೆ ಇನ್ನೊಂದು ಪಕ್ಷಕ್ಕೆ ಹಾರಿದರು.ಹಾಗೆ ಹಾರುತ್ತಾ ಸಾಗಿದ ಅವರು ತಮ್ಮ ರಾಜಕೀಯ ಬದುಕನ್ನೇ ಕಳೆದುಕೊಂಡು ಇಂದು ಒರ್ವ ಗ್ರಾಮಪಂಚಾಯತ್ ಸದಸ್ಯನಾಗಿ ಮುಂದುವರಿಯಬೇಕಾಯಿತು.ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸುತ್ತಿದ್ದ ಬಾಕಿಲ ಹುಕ್ರಪ್ಪ MLA ಆದದ್ದು ಗುತ್ತಿಗಾರಿನ [ಅವರ ಊರು] ಕೆಲ ಮಂದಿಯ ಕೈವಾಡ,ಸಹಾಯವೂ ಇತ್ತು.ಆದರೆ ಹುಕ್ರಪ್ಪರು ತಮ್ಮ ರಾಜಕೀಯ ಬದುಕನ್ನು ರೂಪಿಸಿಕೊಳ್ಳಲು ಅಸಮರ್ಥರಾದರು.ಒಂದು ವೇಳೆ ಅವರು ಇಂದಿಗೂ ಬಿಜೆಪಿಯಲ್ಲಿದ್ದರೆ ಶಾಸಕರಾಗಿಯೇ ಇರುತ್ತಿದ್ದರು.ಆದರೆ ವಿಧಿಯಾಟ ಬೇರೆಯೇ ಆಗಿದೆ.ಇನ್ನು ಅವರ ಆರ್ಥಿಕ ಸಂಕಷ್ಟಕ್ಕೂ ಅವರೇ ಕಾರಣರು.ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ.

ಒಂದು ಸಂಗತಿಯಲ್ಲಿ ಮಾತ್ರಾ ಅವರು ಅನುಕರಣೀಯರು.ಶಾಸಕರಾಗಿದ್ದಾಗ ಚಿಕ್ಕಾಸನ್ನೂ ಸ್ವಂತಕ್ಕಾಗಿ ಮಾಡಿಕೊಂಡಿರಲಿಲ್ಲ.ತಾಲೂಕಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದರು.ಅದರಲ್ಲಿ ಕಮಿಷನ್ ಪಡೆದುಕೊಂಡಿರಲಿಲ್ಲ.ಹಾಗಾಗಿ ಅವರು ಇತರ ಶಾಸಕರುಗಳಿಗೆಲ್ಲಾ ಮಾದರಿ.ಪ್ರಾಮಾಣಿಕವಾಗಿ ದುಡಿದಿದ್ದಾರೆ.ಆದರೆ ಇಂದು ಪ್ರಚಾರವಾಗುತ್ತಿರುವುದು ನೋಡಿದರೆ ಅವರು "ಹಣ" ಮಾಡದ್ದೇ ಒಂದು ಅಪರಾಧ...!!?.ಹಾಗಾಗಿಯೇ ಅವರಿಂದು ಕೂಲಿ ಕೆಲಸಕ್ಕೆ ಹೋಗಬೇಕಾಗಿದೆ..?.

ಇಂತಹ ಪ್ರಚಾರವನ್ನು ನೋಡಿದ ವ್ಯಕ್ತಿಯೊಬ್ಬರು ಹೇಳಿದ್ದು ಹೀಗೆ, ಮಾಜಿ ಶಾಸಕರುಗಳು ,ಶಾಸಕರುಗಳು, ಜನಪ್ರತಿನಿಧಿಗಳು ಕೆಲಸವನ್ನೇ ಮಾಡಬಾರದೇ?ಮಾತ್ರವಲ್ಲ ಪ್ರಾಮಾಣಿಕರಾದದ್ದೇ ತಪ್ಪೇ?ಮಾಜಿಯಾದ ಬಳಿಕ ಹಿಂದಿನ ಕೆಲಸವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿದ್ದಾರೆ ಅದರಲ್ಲೇನು ತಪ್ಪು ಅಂತಾರೆ.

ಏನಿದ್ದರೂ ಮಾಜಿ ಶಾಸಕರಲ್ವಾ.....

ಹಾಗಾದ್ರೆ ಮಾಜಿಯಾದ ಮೇಲೆ ಹೀಗೇನಾ.....?