04 ಮೇ 2008

ನೆನಪಾದವರು....




ಇದು ಚುನಾವಣಾ ಸಮಯ.ನೆನಪಾಗದವರೆಲ್ಲಾ ನೆನಪಾಗಿ ಬಿಡುತ್ತಾರೆ.ಕೆಲವರಿಗೆ ನೆನಪು ಮಾಡಿಸುವುದೇ ಕೆಲಸ.ಇನ್ನೂ ಕೆಲವರಿಗೆ ನೆನಪು ಬಾರದಂತೆ ತಡೆಯುವ ಕೆಲಸ.ಒಟ್ಟಿನಲ್ಲಿ ಈಗ ರಂಗು ರಂಗಾದ ಮಾತಿನ ಮೋಡಿಗಳು.... ಕಣ್ಣೀರ ಕೋಡಿಗಳು....

ಹೀಗೆ ಚುನಾವಣಾ ಕಣ ಸಿದ್ದವಾದಾಗ ದೂರದಲ್ಲಿ ಕಣ್ಣಿಗೆ ಕಾಣಿಸಿದ್ದು ಮಾಜಿ ಶಾಸಕ "ಬಾಕಿಲ ಹುಕ್ರಪ್ಪ".ಒಮ್ಮೆ ಸುಳ್ಯ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು.ಅವರದೇ ಪಕ್ಷದ ಕೆಲವರು ಆ ಪ್ರಯತ್ನ ಮಾಡಿದ್ದರು.ಆದರೆ ಏನೋ ಗೊತ್ತಿಲ್ಲ ಅವರಿಗೆ ಟಿಕೆಟ್ ಇಲ್ಲ.ಕಣದಿಂದ ಹಿಂದೆ ಸರಿದಿದ್ದಾರೆ.ಆದರೆ ಅವರ ನೆನಪು ಮಾತ್ರಾ ಇಡೀ ತಾಲೂಕಿನಲ್ಲಾಯಿತು.

ಆದರೆ ನನಗೇಕೆ ಅವರ ನೆನಪು ಸದಾ ಕಾಡುತ್ತೆ ಅಂದರೆ, ಅವರು ನನಗೆ ಯಾವಾಗಲೂ ಕಾಣಸಿಗುತ್ತಾರೆ.ಸುಮ್ಮನೆ ಮಾತನಾಡಿ ಹೋಗುತ್ತಾರೆ.

ಅಂದಿನ ಘಟನೆ...

ಆಗ ನಾನು ಉಷಾಕಿರಣ ದಿನ ಪತ್ರಿಕೆಯ ವರದಿಗಾರನಾಗಿದ್ದೆ.ಯಾವುದೋ ಕಾರಣಕ್ಕೆ ನಾನು ಮತ್ತು ನನ್ನ ಛಾಯಾಗ್ರಾಹಕ ಮಿತ್ರ ಬಾಕಿಲ ಹುಕ್ರಪ್ಪರ ಮನೆಯ ಹತ್ತಿರದಲ್ಲೇ ಹೋಗುತ್ತಿರುವಾಗ ಹುಕ್ರಪ್ಪರು ಸೌದೆ ಹೊತ್ತು ಸಾಗುತ್ತಿದ್ದರು.ಆಗಲೂ ಸುಮ್ಮನೆ ಅವರಲ್ಲಿ ಮಾತನಾಡಿ ಹೋಗಿದ್ದೆವು.ನಂತರ ತಿಳಿಯಿತು ಅವರ ಬದುಕಿನ ಸ್ಥಿತಿ.ಕೂಡಲೇ ನಾವು ಅವರ ಮನೆಯ ಚಿತ್ರ ತೆಗೆದುಕೊಂಡೆವು,ಅವರು ಶಾಸಕರಾಗಿದ್ದಾಗ ವಿದೇಶಕ್ಕೆ ಹೋಗಿದ್ದ ಚಿತ್ರವೂ ನಮ್ಮ ಬಳಿಗೆ ಬಂತು,ಮಾತನಾಡಿದೆವು,ನಂತರ ಅವರ ಆಗಿನ ಬದುಕಿನ ಸ್ಥಿತಿ ಕೇಳಿದಾಗ..ಸರಕಾರದಿಂದ ಬರುವ ಗೌರವಧನ ಸಾಲುವುದಿಲ್ಲ ಹಾಗಾಗಿ ಕೆಲಸಕ್ಕೂ ಹೋಗುತ್ತೇನೆ ಎಂದರು.ಸರಿ ಪತ್ರಿಕೆಯಲ್ಲಿ ಅದು ವರದಿಯಾಯಿತು.ಮಾಜಿ ಶಾಸಕರ ಬದುಕಿನ ಚಿತ್ರಣ ಹೊರಜಗತ್ತಿಗೆ ಅರಿವಾಯಿತು.ಕೂಡಲೇ ನನ್ನ ಮಿತ್ರ ವಿನಾಯಕ ಬಂದು ETVಗೂ ವರದಿ ಮಾಡಿದ.ಅದು ಇನ್ನೂ ಹೆಚ್ಚಿನ ಪರಿಣಾಮ ನೀಡಿತು.ನಂತರ ಎಲ್ಲಾ ಪತ್ರಿಕೆಯಲ್ಲೂ ಬಂತು.ರಾಜ್ಯದಲ್ಲೇ ದೊಡ್ಡ ಸುದ್ದಿಯಾಯಿತು.ಹುಕ್ರಪ್ಪರಿಗೆ ಗೌರವಧನವೂ ಹೆಚ್ಚಿತು. ಆ ಖುಷಿಯಲ್ಲಿ ಇಂದಿಗೂ ಹುಕ್ರಪ್ಪರು ಮಾತನಾಡುತ್ತಾರೆ.ಅವರು ನನಗೆ ನೀಡಿದ್ದ ವಿದೇಶ ಯಾತ್ರೆಯ ಚಿತ್ರವನ್ನೂ ಇಂದಿಗೂ ನಾನು ಪುನ: ಹಿಂದಿರುಗಿಸಿಲ್ಲ.ಸಿಕ್ಕಾಗ "ಇಂದೇ ಆ ಫೋಟೋ ಕೊರ್ಲೆ "[ಇಕೊಳಿ ಆ ಚಿತ್ರ ಕೊಡಿ]ಅಂತ ಹೇಳುತ್ತಾರೆ.ನನ್ನ ಮನೆಯಲ್ಲೇ ಆ ಚಿತ್ರ ಬೆಚ್ಚನೆ ಕುಳಿತಿದೆ.[ಇನ್ನೊಮ್ಮೆ ಬೇಕಾದೀತು].

ಆದರೆ ನನಗೆ ಅನಿಸಿದ್ದು ಅದಲ್ಲ.ನಾನು ಮತ್ತು ನನ್ನ ಮಿತ್ರ ವಿನಾಯಕ ಹುಕ್ರಪ್ಪರ ಬದುಕಿನ ಬಗ್ಗೆ ಮಾಡಿದ್ದ ಆ ವರದಿ ಇಂದು ಯಾವೆಲ್ಲ ತಿರುವು ಪಡೆಯಿತು.ಅಚ್ಚರಿಯಾಯಿತು.!!.ನಿಜವಾಗಲೂ ಅವರ ಆ ಸ್ಥಿತಿಗೆ ಕಾರಣರಾರು?.ಅನೇಕರಿಗೆ ಗೊತ್ತಿಲ್ಲ.

ಅವರ ಪಕ್ಷಾಂತರವೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ.ಮೊದಲು ಬಿಜೆಪಿಯಲ್ಲಿದ್ದ ಅವರೊ MLA ಆದ ಬಳಿಕ ಮುಂದಿನ ಚುನಾವಣೆಗೆ ಇನ್ನೊಂದು ಪಕ್ಷಕ್ಕೆ ಹಾರಿದರು.ಹಾಗೆ ಹಾರುತ್ತಾ ಸಾಗಿದ ಅವರು ತಮ್ಮ ರಾಜಕೀಯ ಬದುಕನ್ನೇ ಕಳೆದುಕೊಂಡು ಇಂದು ಒರ್ವ ಗ್ರಾಮಪಂಚಾಯತ್ ಸದಸ್ಯನಾಗಿ ಮುಂದುವರಿಯಬೇಕಾಯಿತು.ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸುತ್ತಿದ್ದ ಬಾಕಿಲ ಹುಕ್ರಪ್ಪ MLA ಆದದ್ದು ಗುತ್ತಿಗಾರಿನ [ಅವರ ಊರು] ಕೆಲ ಮಂದಿಯ ಕೈವಾಡ,ಸಹಾಯವೂ ಇತ್ತು.ಆದರೆ ಹುಕ್ರಪ್ಪರು ತಮ್ಮ ರಾಜಕೀಯ ಬದುಕನ್ನು ರೂಪಿಸಿಕೊಳ್ಳಲು ಅಸಮರ್ಥರಾದರು.ಒಂದು ವೇಳೆ ಅವರು ಇಂದಿಗೂ ಬಿಜೆಪಿಯಲ್ಲಿದ್ದರೆ ಶಾಸಕರಾಗಿಯೇ ಇರುತ್ತಿದ್ದರು.ಆದರೆ ವಿಧಿಯಾಟ ಬೇರೆಯೇ ಆಗಿದೆ.ಇನ್ನು ಅವರ ಆರ್ಥಿಕ ಸಂಕಷ್ಟಕ್ಕೂ ಅವರೇ ಕಾರಣರು.ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ.

ಒಂದು ಸಂಗತಿಯಲ್ಲಿ ಮಾತ್ರಾ ಅವರು ಅನುಕರಣೀಯರು.ಶಾಸಕರಾಗಿದ್ದಾಗ ಚಿಕ್ಕಾಸನ್ನೂ ಸ್ವಂತಕ್ಕಾಗಿ ಮಾಡಿಕೊಂಡಿರಲಿಲ್ಲ.ತಾಲೂಕಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದರು.ಅದರಲ್ಲಿ ಕಮಿಷನ್ ಪಡೆದುಕೊಂಡಿರಲಿಲ್ಲ.ಹಾಗಾಗಿ ಅವರು ಇತರ ಶಾಸಕರುಗಳಿಗೆಲ್ಲಾ ಮಾದರಿ.ಪ್ರಾಮಾಣಿಕವಾಗಿ ದುಡಿದಿದ್ದಾರೆ.ಆದರೆ ಇಂದು ಪ್ರಚಾರವಾಗುತ್ತಿರುವುದು ನೋಡಿದರೆ ಅವರು "ಹಣ" ಮಾಡದ್ದೇ ಒಂದು ಅಪರಾಧ...!!?.ಹಾಗಾಗಿಯೇ ಅವರಿಂದು ಕೂಲಿ ಕೆಲಸಕ್ಕೆ ಹೋಗಬೇಕಾಗಿದೆ..?.

ಇಂತಹ ಪ್ರಚಾರವನ್ನು ನೋಡಿದ ವ್ಯಕ್ತಿಯೊಬ್ಬರು ಹೇಳಿದ್ದು ಹೀಗೆ, ಮಾಜಿ ಶಾಸಕರುಗಳು ,ಶಾಸಕರುಗಳು, ಜನಪ್ರತಿನಿಧಿಗಳು ಕೆಲಸವನ್ನೇ ಮಾಡಬಾರದೇ?ಮಾತ್ರವಲ್ಲ ಪ್ರಾಮಾಣಿಕರಾದದ್ದೇ ತಪ್ಪೇ?ಮಾಜಿಯಾದ ಬಳಿಕ ಹಿಂದಿನ ಕೆಲಸವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿದ್ದಾರೆ ಅದರಲ್ಲೇನು ತಪ್ಪು ಅಂತಾರೆ.

ಏನಿದ್ದರೂ ಮಾಜಿ ಶಾಸಕರಲ್ವಾ.....

ಹಾಗಾದ್ರೆ ಮಾಜಿಯಾದ ಮೇಲೆ ಹೀಗೇನಾ.....?


ಕಾಮೆಂಟ್‌ಗಳಿಲ್ಲ: