26 ಏಪ್ರಿಲ್ 2008

ಹತ್ತೂರು ಮರೆತರೂ ಹುಟ್ಟೂರು ಮರೆಯಲ್ಲ...





ಇದು ಮಣ್ಣಿನ ಋಣ.. ಎಲ್ಲಿಯ ಉಡುಪಿ...ಎಲ್ಲಿಯ ಪಂಜ....! ಸರಿ ಸುಮಾರು 200 ಕಿಲೋಮೀಟರ್ ಅಂತರ.

ಇದು ಮಣ್ಣಿನ ಸಂಬಂಧ.ದೂರದೂರಿಗೆ ಹೊರಟು ಹೋದರೂ ಹುಟ್ಟಿದ ಮಣ್ಣಿನ ಋಣ ತೀರಿಸಲು ಅಸಾಧ್ಯ.ಇದು ಹಳ್ಳಿಹಳ್ಳಿಯೊಳಗಿನ ರೈತರ ಬಹು ದಿನದ ಸತ್ಯದ ಮಾತು.ಆದರೆ ರಾಜಕಾರಣಿಗಳ ಬದುಕಿನಲ್ಲೂ ಈಗ ಅದು "ಸತ್ಯ"ವಾಗಿದೆ.ಹತ್ತೂರು ಸುತ್ತಿದರೂ ಮತ್ತೆ ಹುಟ್ಟಿದೂರಿಗೆ ಬರುವಂತೆ ಮಾಡಿದೆ.ಹಾಗಾಗಿ ಉಡುಪಿಯಿಂದ ಪಂಜದವರೆಗೆ ಬರಲೇಬೇಕಾಯಿತು.ಅದಕ್ಕೆ ಕಾರಣವಾದದು ಮಣ್ಣು.[ಇದು ಚುನಾವಣೆಯ ಕಾಲವಾದ್ದರಿಂದಲೂ ಇರಬಹುದು.]

ಉಡುಪಿಯ ಮಾಜಿ ಶಾಸಕ ಬಿಜೆಪಿಯ ಅಭ್ಯರ್ಥಿ ರಘುಪತಿ ಭಟ್ ಸದ್ಯ ಉಡುಪಿಯಲ್ಲಿ ವಿರಾಜಮಾನರಾಗಿದ್ದಾರೆ.ಅವರ ಮೂಲ ಮನೆತನ ಇದ್ದದ್ದು ಸುಳ್ಯ ತಾಲೂಕಿನ ಪಂಜ ಬಳಿಯ ಕೂತ್ಕುಂಜ ಗ್ರಾಮದ ಕರ್ಮಜೆ.ಹಾಗಾಗಿ "ಕರ್ಮಜೆ ರಘಪತಿ ಭಟ್ "ಮತ್ತೆ ಕರ್ಮಜೆಯನ್ನು ಅರಸಿಕೊಂಡು ಬರಬೇಕಾಯಿತು. ಭಟ್ ಅವರ ಹಿರಿಯರು ಮೂಲ ಮನೆ ಹಾಗೂ ಭೂಮಿಯನ್ನು ಸುಮಾರು 60 ವರ್ಷಗಳ ಹಿಂದೆಯೇ ಮಾರಾಟ ಮಾಡಿ ಉಡುಪಿಯಲ್ಲಿ ಜೀವನ ಮಾಡುತ್ತಿದ್ದರು.ಆದರೆ ಈಗ ಮತ್ತೆ ಮೂಲಮನೆತನದ ಭೂಮಿಯಲ್ಲಿರುವ ನಾಗ ಸಾನಿಧ್ಯದ ಆರಾಧನೆಯ ಕಾರಣದಿಂದ ಸುಮಾರು 60 ವರ್ಷಗಳ ಬಳಿಕ ಬಂದಿದ್ದಾರೆ.ಹಾಗಾಗಿ ಅವರು ಮತ್ತೆ ಪಂಜದ ಸಂಪರ್ಕಕ್ಕೆ ಬರುವಂತೆ ಮಾಡಿದ್ದು ಮೂಲ ಮಣ್ಣು.

ಸರಿಸುಮಾರು 60 ವರ್ಷಗಳ ಹಿಂದೆ ರಘುಪತಿ ಭಟ್ಟರ ತಂದೆ ಶ್ರೀನಿವಾಸ ಬಾರಿತ್ತಾಯರ ತಾಯಿಯವರ ಹೆಸರಿದ್ದ ಅಡಿಕೆ ಹಾಗೂ ಬೇಸಾಯದಿಂದ ತುಂಬಿದ್ದ ಸುಮಾರು 5-6 ಎಕ್ರೆ ಭೂಮಿಯನ್ನು ಹಾಸನಡ್ಕ ತಿಮ್ಮಪ್ಪಯ್ಯ ಎಂಬರಿಗೆ ಮಾರಾಟ ಮಾಡಿದ್ದರು.ಆ ಬಳಿಕ ಅವರ ಮಗ ವೆಂಕಪ್ಪಯ್ಯನವರು ಸಂಪದ್ಭರಿತ ಕೃಷಿಯನ್ನು ಬೆಳೆಸಿಕೊಂಡು ಬಂದು ಈಗ ಅವರ ಪುತ್ರ ಶಿವರಾಮಯ್ಯನವರು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಇತ್ತೀಚೆಗೆ, 13 ವರ್ಷದ ಹಿಂದೆ ರಘುಪತಿ ಭಟ್ಟರ ತಂದೆ,ಸಹೋದರರ ಸಹಿತ ಇದೇ ಕರ್ಮಜೆಗೆ ಆಗಮಿಸಿ ದೈವಜ್ಞರು ತಿಳಿಸಿದಂತೆ ಕರ್ಮಜೆಯಲ್ಲಿರುವ ನಾಗ ಸಾನಿಧ್ಯದಲ್ಲಿ ಪೂಜೆ ನಡೆಸಿ ಅಲ್ಲಿಂದ ಒಂದು ಹಿಡಿ ,ತುಳಸಿಕಟ್ಟೆಯಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಉಡುಪಿಯಲ್ಲಿ ಅವರು ಖರೀದಿಸಿರುವ ಭೂಮಿಯಲ್ಲಿರಿಸಿದ ನಂತರ ಅವರ ಕುಟುಂಬ ಏಳಿಗೆಯನ್ನು ಕಂಡಿತು ಎಂದು ಹೇಳಲಾಗುತ್ತಿದೆ.ಅದಾದ ಬಳಿಕ ಪ್ರತೀ ವರ್ಷ ಇವರ ಕುಟುಂಬವು ಇದೇ ನಾಗಬನದಲ್ಲಿ ಪೂಜೆ ಸಲ್ಲಿಸಿ ಪ್ರಸಾದವನ್ನು ತರಿಸಿಕೊಳ್ಳುತ್ತಿದೆ.

ಆದರೆ ಈಗ ರಘುಪತಿ ಭಟ್ಟರು ೨ನೇ ಬಾರಿ ಚುನಾವಣೆಗೆ ಸ್ಫರ್ಧಿಸಿದ್ದಾರೆ.ಹಾಗಾಗಿ ಮಣ್ಣಿನ ಋಣ ಭಾರ ತೀರಿಸಲು ಮತ್ತೆ ಹುಟ್ಟೂರ "ನೆಲ" ನೆನಪಾಯಿತು. "ದೈವಜ್ಞರೂ" ತಿಳಿಸಿದರು.ಹಾಗಾಗಿ ಇತ್ತೀಚೆಗೆ ಕರ್ಮಜೆಗೆ ಆಗಮಿಸಿ ಅವರ ಕುಟುಂಬ ಸೇವೆ ನಡೆಸಿತು.ಆರಂಭದಲ್ಲಿ ಭಟ್ಟರ ಅಣ್ಣ ಆಗಮಿಸಿದ್ದರು.ಮರುದಿನ ರಘುಪತಿ ಭಟ್ಟರು ಆಗಮಿಸಿ ಪ್ರಾರ್ಥಿಸಿದರು.ಜೊತೆಗೆ ಹಿಡಿ ಮಣ್ಣನ್ನೂ ಜೊತೆಯಲ್ಲಿರಿಸಿಕೊಂಡರು.ಇನ್ನೊಂದು ಅಚ್ಚರಿಯೆಂದರೆ ರಘುಪತಿ ಭಟ್ಟರ ತಂದೆಯವರಿಗೆ ಇತ್ತೀಚೆಗೆ ಅಸೌಖ್ಯವಿದ್ದಾಗ ಇದೇ ನಾಗಬನದಲ್ಲಿ ಪೂಜೆ ಸಲ್ಲಿಸಿದಾಗ ಆರೋಗ್ಯ ಸುಧಾರಿಸಿದೆಯಂತೆ.

ಇದೆಲ್ಲವೂ ಮಣ್ಣಿನ ಋಣಭಾರ ಎಂದರೆ ತಪ್ಪಾದೀತೇ? ಇಂದು ಹಳ್ಳಿಯಿಂದ ರೈತರು ಭೂಮಿ ಮಾರಾಟ ಮಾಡಿ ನಗರದತ್ತ ಸಾಗುತ್ತಿರುವ ವೇಳೆ ಇಂತಹ ಭಾವನಾತ್ಮಕ ಸಂಬಂಧಗಳು ಮತ್ತೆ ಮತ್ತೆ ಹಳ್ಳಿಯ ಕಡೆಗೆ ಒಯ್ಯುತ್ತವೆ.ಆದರೆ ಒಂದು ವೇಳೆ ಅಂತಹ ಭೂಮಿಯನ್ನು ಅನ್ಯಮತೀಯರಿಗೆ ಅಥವಾ ಧಾರ್ಮಿಕ ಪ್ರಜ್ಞೆಯಿಲ್ಲದ ವ್ಯಕ್ತಿಗಳಿಗೆ ಮಾರಾಟ ಮಾಡಿದರೆ..?.ಆ ಭಾವನಾತ್ಮಕ ಸಂಬಂಧಗಳಿಗೆ ನೆಲೆಯಿರುತ್ತಿತ್ತೇ?.ಹಾಗಾಗಿ ಮಣ್ಣಿನ ಋಣ ಭಾರ ಎಂದೆಂದಿಗೂ ತೀರಿಸಲು ಅಸಾಧ್ಯ ಎಂಬುದಂತೂ ಮತ್ತೆ ಮತ್ತೆ ನೆನಪಾಗಿಸುತ್ತದೆ.





ಕರ್ಮಜೆಯ ಮನೆಯ ಒಂದು ನೋಟ.

ಕಾಮೆಂಟ್‌ಗಳಿಲ್ಲ: