23 ಏಪ್ರಿಲ್ 2008

ಪ್ರಶಸ್ತಿ ಪ್ರದಾನ ....




ಜೀವನದಲ್ಲಿ ನಿರಾಸೆ,ಹತಾಶೆಗಳು ತುಂಬಿಕೊಂಡಾಗ ಕವಿತೆ ,ವಚನ,ಕಾವ್ಯಗಳು ಬದುಕಿಗೆ ನವಚೈತನ್ಯ,ಸ್ಫೂರ್ತಿ ತಂದುಕೊಡಬಲ್ಲವು ಆದುದರಿಂದ ಕವಿಗಳಾದವರಿಗೆ ಎಲ್ಲರ ಬದುಕಿನಲ್ಲಿ ಹುಮ್ಮಸ್ಸು ತರಬಲ್ಲ ಶಕ್ತಿಯಿದೆ ಎಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಅವರು ಸುಳ್ಯ ತಾಲೂಕಿನ ಕರಿಕಳದ ಪೆರಿಯಪ್ಪುವಿನಲ್ಲಿ ನಡೆದ ಪಂಜ ಸೀಮಾ ಸಮ್ಮಿಲನ ಮತ್ತು ವೇ|ಮೂ|ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ - 2007 ಪ್ರದಾನ ಸಮಾರಂಭದಲ್ಲಿ ಕವಿ ಕೆ.ಪರಮೇಶ್ವರ ಭಟ್ಟ ಬಾಳಿಲ ಇವರಿಗೆ ಪ್ರದಾನ ಮಾಡಿದ ಬಳಿಕ ಆಶೀರ್ವಚನ ನೀಡುತ್ತಿದ್ದರು.

ಸಮಾಜದಲ್ಲಿ ಬದಲಾವಣೆಗಳು ಸಕಾರಾತ್ಮಕವಾಗಿರಬೇಕು ಬದಲಾವಣೆಗಳಿಗಾಗಿ ಬದಲಾವಣೆಗಳು ಬೇಡ ಎಂದ ಶ್ರೀಗಳು ಎಲ್ಲರ ಗುರಿ ರಾಮರಾಜ್ಯವಾಗಿರಲಿ ಅದಕ್ಕಾಗಿ ಸಾತ್ವಿಕತೆಯ ಶಕ್ತಿಯ ಸಂಚಾರ ಎಲ್ಲೆಡೆಯಾಗಲಿ ಎಂದು ಶ್ರೀಗಳು ಹೇಳಿದರು.

ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಭಾಷಾರಕ್ಷಣೆಯ ಉದ್ದೇಶದಿಂದ ಮಾತ್ರಾ ಪರಮೇಶ್ವರ ಭಟ್ಟರು ಮಹಾಕಾವ್ಯಗಳನ್ನು ಬರೆದರೆಂದು ಯಾರೂ ಪಕ್ಕನೆ ಭಾವಿಸಬಾರದು ಇದು ಅನನ್ಯ ಸುಂದರ ಸಂಸ್ಕೃತಿಯೊಂದರ ಉಳಿವಿಗಾಗಿ ಕೈಗೊಂಡಿರುವ ಮಹಾಕಾಯಕ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಹಿತ್ಯ - ಸುಬ್ರಾಯ ಚೊಕ್ಕಾಡಿ, ಯಕ್ಷಗಾನ-ಪದ್ಯಾಣ ಗಣಪತಿ ಭಟ್, ವೇದ- ಪುರೋಹಿತ ನಾಗರಾಜ ಭಟ್, ಶಿಲ್ಪಶಾಸ್ತ್ರ - ಮಹೇಶ ಮುನಿಯಂಗಳ ಹಾಗೂ ಎಸ್.ಎಂ.ಪ್ರಸಾದ ಮುನಿಯಂಗಳ, ಕಲೆ-ಬೇರ್ಯ ನಾರಾಯಣ ಭಟ್ಟ, ಸಾಮಾಜಿಕ - ಎನ್.ಎಸ್.ಸುವರ್ಣಿನಿಯವರನ್ನು ಗುರುತಿಸಲಾಯಿತು.ನಂತರ ಆತ್ರತ್ರಾಣ ನಿಧಿಯನ್ನು ಬಾಳಿಲದ ಕೃಷ್ಣಪ್ಪ ಮೂಲ್ಯರ ಪುತ್ರ ಪ್ರತಿಭಾವಂತ ವಿದ್ಯಾರ್ಥಿ ಅಮಿತ್ ನಿಗೆ ನೀಡಲಾಯಿತು.

ಸನ್ಮಾನಿತರ ಪರವಾಗಿ ಪರಮೇಶ್ವರ ಭಟ್ಟ ಬಾಳಿಲ ಹಾಗೂ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.

ಪಂಜ ಸೀಮಾ ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಕೋಟೆ ಸ್ವಾಗತಿಸಿ ಸೀಮಾ ಕಾರ್ಯದರ್ಶಿ ಸುರೇಶ್ಚಂದ್ರ ವರದಿ ವಾಚಿಸಿದರು.ವಸಂತ ಭೀಮಗುಳಿ ವಂದಿಸಿದರು.ಮುರಳೀಕೃಷ್ಣ ಚಳ್ಳಂಗಾರು ಕಾರ್ಯಕ್ರಮ ನಿರ್ವಹಿಸಿದರು.

ಫೋಟೋ - ನಾನೇ ತೆಗೆದದ್ದು.

ಕಾಮೆಂಟ್‌ಗಳಿಲ್ಲ: