16 ಏಪ್ರಿಲ್ 2008

ಬ್ರಹ್ಮಕಲಶದ ಸಂಭ್ರಮ...



"ಬ್ರಹ್ಮಕಲಶೋತ್ಸವ"..... ಇದು "ಬ್ರಹ್ಮ"ಕಲಶೋತ್ಸವ... ಭಕ್ತರಿಗೆ ಸಂಭ್ರಮದ ಕ್ಷಣ.....ಅವಿ"ಸ್ಮರಣೀಯ" ಕ್ಷಣ....,

ಸುಳ್ಯ ತಾಲೂಕಿನ ಏನೇಕಲ್ ಗ್ರಾಮದಲ್ಲಿರುವ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಬಚ್ಚನಾಯಕ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕ್ಷಣ.ಕುಕ್ಕೆ ಸುಬ್ರಹ್ಮಣ್ಯದಿಂದ 9 ಕಿಮೀ ದೂರದಲ್ಲಿ ಈ ಕ್ಷೇತ್ರವಿದೆ.ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ ಸ್ಥಳ.ಇಲ್ಲಿ ದೇವರು ಸ್ವಯಂಭೂ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ನಂಬಿಕೆಯಿದೆ.ಅಲ್ಲದೆ ಇಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ.ಹಾಗೆಯೇ ಬಚ್ಚನಾಯಕ ದೈವಸ್ಥಾನದ ಬಗ್ಗೆಯೂ ವಿವಿಧ ವ್ಯಾಖ್ಯಾನಗಳಿವೆ.ಗಟ್ಟ ಪ್ರದೇಶದಿಂದ ಇಳಿದು ಬಂದು ಏನೇಕಲ್ಲಿನಲ್ಲಿ ಮಾನುಷದಿಂದ ಅತಿಮಾನುಷಕ್ಕೇರಿದ ಸ್ಥಳ ಅಂತ ಸುಲಭದಲ್ಲಿ ಹೇಳಬಹುದು.ಈ ದೈವವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ.ಇಲ್ಲಿ ಉದ್ಯೋಗ ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳಿಗೆ ಹರಿಕೆ ಹೇಳಿಕೊಂಡರೆ ಈಡೇರುತ್ತದೆ ಅಂತ ಭಕ್ತರು ಹೇಳುತ್ತಾರೆ.ಇನ್ನೊಂದು ಇಲ್ಲಿಯ ವಿಶೇಷತೆಯೆಂದರೆ "ಕಾಪುಕಯ".ಅಂದರೆ ದೇವರ ಮೀನಿನ ಪ್ರದೇಶ.ಇಲ್ಲಿ ಸಾವಿರಾರು ವಿವಿಧ ಬಗೆಯ ಮೀಗುಗಳು ಇವೆ.ಇದು ಅನೇಕರನ್ನು ಆಕರ್ಷಿಸುತ್ತದೆ.

ಈ ಎಲ್ಲಾ ವಿಶೇಷತೆಯನ್ನು ಹೊಂದಿರುವ ಪ್ರದೇಶದಲ್ಲಿ ದೇವಸ್ಥಾನ ಹಾಗೂ ದೈವಸ್ಥಾನಗಳೆರಡೂ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.

ನಿನ್ನೆಯಿಂದ ಅಂದರೆ ಏ.15 ರಿಂದ "ಬ್ರಹ್ಮ"ಕಲಶ ಕಾರ್ಯಕ್ರಮ ಆರಂಭಗೊಂಡಿದ್ದು ಏ.20 ರಂದು "ಬ್ರಹ್ಮ"ಕಲಶಾಭಿಷೇಕ ನಡೆಯಲಿದೆ.ಈ ಅಂಗವಾಗಿ ಪ್ರತಿದಿನ [ಏ.19] "ಧಾರ್ಮಿಕ" ಸಭಾಕಾರ್ಯಕ್ರಮ ನಡೆಯುತ್ತದೆ.ಹಾಗಾಗಿ ಇಂದು ಅಂದರೆ ಬುಧವಾರದಂದು ಕೂಡಾ ಸಭಾಕಾರ್ಯಕ್ರಮ ನಡೆಯಿತು.
ಧಾರ್ಮಿಕ ಭಾಷಣ ಮಾಡಿದ ವೇದಮೂರ್ತಿ ಶ್ರೀವತ್ಸ ಶಿಬರ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿ ,ಅದು ಏಕೆ ಮತ್ತು ಏನು ಎಂದು ವಿವರಿಸುತ್ತಾ ಹೇಳಿದ್ದು ಇದು.....ಮಾನವನಾಗಿ ಹುಟ್ಟಿದವರೆಲ್ಲಾ ಧರ್ಮಕಾರ್ಯ ಮಾಡಲೇಬೇಕು.ಧರ್ಮ,ಜನನಿ,ಜನ್ಮಭೂಮಿಯ ರಕ್ಷಣೆ ಪ್ರತಿಯೊಬ್ಬನ ಕರ್ತವ್ಯವಾಗಿದೆ.ದೈವೀ ಶಕ್ತಿಯಿಂದ ಈ ದೇಹ ಪ್ರಕೃತಿಗೆ ಬಂದದ್ದೇ ಧರ್ಮ ರಕ್ಷಣೆ ಮಾಡಲು.ಹಾಗೆ ಧರ್ಮಕಾರ್ಯ ಮಾಡಿದರೆ ಮಾತ್ರಾ ಬದುಕು ಪರಿಪೂರ್ಣವಾಗಲು ಸಾಧ್ಯ.ಜೀವನ ಶೈಲಿ ಬದಲಾದಂತೆ ಧಾರ್ಮಿಕ ನಂಬಿಕೆಯೂ ಇಂದು ಬದಲಾಗಿದೆ.ಆದರೆ ಇತ್ತೀಚೆಗೆ ಹಿಂದುಗಳೆನಿಸಿಕೊಂಡವರಿಂದಲೇ ಧರ್ಮಕ್ಕೆ ಅಪಚಾರವಾಗುತ್ತಿದೆ ಎಂದು "ಒತ್ತಿ" ಹೇಳಿದರು.ಸಾರ್ವಜನಿಕರೆಲ್ಲರಿಗೂ ಭಗವಂತನನ್ನು ಪೂಜಿಸಲು ಅವಕಾಶ ಕಲ್ಪಿಸುವ ವಿಜ್ಞಾನವೇ ದೇವಾಲಯ.ಅದರ ವಿನ್ಯಾಸವು ವೈಜ್ಞಾನಿಕವಾಗಿಯೇ ಇರುತ್ತದೆ.ದೇವರ ಗರ್ಭ ಗುಡಿಯಲ್ಲಿ "ಶಿಖರ"[ಮುಗುಳಿ]ದ ಮೂಲಕ ಸಂಗ್ರಹವಾಗುವ ಶಕ್ತಿಯು ವಿಗ್ರಹದ ಮೂಲಕ ದೈವೀ ಶಕಿಯಾಗಿ ಭಕ್ತರಿಗೆ ಲಭ್ಯವಾಗುತ್ತದೆ .ಹಾಗಾಗಿಯೆ ಅಂತಹ ಶಕ್ತಿ ನಮ್ಮೊಳಗೆ ಸೇರಿಕೊಳ್ಳಲು ದೇವಸ್ಥಾನಕ್ಕೆ "ಶರ್ಟು ತೆಗೆದು" ಹೋಗಬೇಕೆಂಬ ನಿಯಮವಿರುತ್ತದೆ ಎಂದರು.

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ದೈವಜ್ಞ ಚೇಕೋಟು ಸುಬ್ರಹ್ಮಣ್ಯ ಭಟ್ , ಸುಬ್ರಹ್ಮಣ್ಯ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಕುಮಾರ್ ರುದ್ರಪಾದ,ಧಾರ್ಮಿಕ "ಚಿಂತಕ" ಗೋಪಾಲ ರಾವ್ ಬಿಳಿನೆಲೆ,ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೆಂಕಟ್ರಾಜ್,ದೇವಳದ ಅರ್ಚಕ ಸುಬ್ರಾಯ ಆಸ್ರಣ್ಣ ಭಾಗವಹಿಸಿದ್ದರು.

ಒಟ್ಟಿನಲ್ಲಿ ಊರಿನಲ್ಲೊಂದು ದೇವಾಲಯಕ್ಕೆ ಬ್ರಹ್ಮಕಲಶ.... ಊರಿಗೂ ಹೊಸ ಚೈತನ್ಯ.... ಅದು ಮತ್ತೊಂದು ರೀತಿಯ "ಬ್ರಹ್ಮಕಲಶ"


ಗರ್ಭಗುಡಿಯಲ್ಲಿರುವ ಹುತ್ತ...






ಗರ್ಭಗುಡಿಯ ಹೊರನೋಟ

ಕಾಮೆಂಟ್‌ಗಳಿಲ್ಲ: