12 ಏಪ್ರಿಲ್ 2008

ಒಂದು "ಬದುಕಿ"ನ ಕತೆ....



ಆತನಿಗೆ ಕನಸುಗಳಿದ್ದಿದ್ದರೆ ಅದೆಲ್ಲವೂ ನುಚ್ಚು ನೂರು.... ಆತನಿಗೂ ಅದರ ಅರಿವಿದ್ದಿರಲಿಕ್ಕಿಲ್ಲ.... ಆತನ ಬದುಕು ದುರಂತ ಅಂತ್ಯ ಕಂಡು ಇಂದಿಗೆ ಸರಿಯಾಗಿ ಒಂದು ವಾರ ಸಂದಿದೆ .ಕಾರಣ ನೋಡಿದರೆ ಅಷ್ಟೊಂದು ಕಾಣುತ್ತಿಲ್ಲ.ಆದರೂ ಒಂದು ಬದುಕು ಅಂತ್ಯ ಕಂಡಿದೆ.ಹಾಗೆ ಸೂಕ್ಷ್ಮವಾಗಿ ವಿವಿಧ ಆಯಾಮಗಳ ಮೂಲಕ ನೋಡಿದರೆ ಹಲವು ವಿಚಾರಗಳಿರಬಹುದು.

ಮೊನ್ನೆ ಕಾಡಿನ ಮಧ್ಯೆ ರುಂಡವಿಲ್ಲದ ದೇಹವೊಂದು ಸಿಕ್ಕಿತು.ನಂತರ ಅದರ ಬೆನ್ನ ಹಿಂದೆ ಬಿದ್ದ ಪೊಲೀಸರಿಗೆ ಕೊಲೆಯ ಪ್ರಕರಣ ಕಂಡಿತು.ಆರೋಪಿಗಳನ್ನು ಬಂಧಿಸಿದರು.ಇಷ್ಟಕ್ಕೂ ಇದೊಂದು ಯಾಕೆ ಸುದ್ದಿ ಅಂತೀರಾ?.ಮತ್ತೇನಲ್ಲ ಕೊಲ್ಲಿಸಿದ್ದು "ಸ್ವಂತ" ಪತ್ನಿಯೇ..!!.ಹಾಗಾಗಿ ಈ ಸುದ್ದಿ ಶಾಂತ - ನೆಮ್ಮದಿಯ ಊರಿನಲ್ಲಿ ಕ್ರೂರತೆಯ ಲವಲೇಶವೂ ಇಲ್ಲದ ಊರಿನಲ್ಲಿ ಇದು ದೊಡ್ಡ ಸುದ್ದಿಯಾಯಿತು.ಇಂದದ್ದೊಂದು ಕಲ್ಪನೆಯೇ ಬರಲು ಸಾಧ್ಯವಿಲ್ಲದ ಮನಸ್ಸುಗಳ ಪರಿಸ್ಥಿತಿ ಹೇಗಾಗಬೇಡ..?. ಪಾಪ ಆ ಮುಗ್ದ ಜನರಿಗೇನು ಗೊತ್ತು ಇಡೀ ಜಗತ್ತಿನ ಕತೆ.?.

ಅನೇಕ ಕಡೆಗಳಲ್ಲಿ ನಡೆಯುತ್ತದೆ...ಪತಿಯಿಂದಲೇ ಪತ್ನಿಯ ಕೊಲೆ ಅಥವಾ ಪತ್ನಿಯಿಂದಲೇ ಪತಿಯ ಕೊಲೆ.ಅಂತಹ ಘಟನೆಗಳನ್ನೆಲ್ಲಾ ಒಮ್ಮೆ ನೋಡಿದರೆ ಕಾರಣವೆಲ್ಲಾ ಅತ್ಯಂತ ಕ್ಷುಲ್ಲಕ.ಇಲ್ಲಿನ ಪ್ರಕರಣವೂ ಹಾಗೆ.ಗಂಡ -ಹೆಂಡತಿ ನಡುವಿನ ಜಗಳ.

ಇಲ್ಲಿಯೂ ತನಿಖೆಯಿಂದ ಬಂದ ಸಂಗತಿಯೆಂದರೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತಂತೆ ಹಾಗಾಗಿ ಪತ್ನಿಯಾದವಳು ತನ್ನ ಸಂಬಂಧಿಕರಿಗೆ ದೂರು ನೀಡಿದಳು.ಪತ್ನಿ ಕಡೆಯವರು ಬಂದು ವಿಚಾರಿಸಿದಾಗ ಮಾತು ಬೆಳೆಯಿತು.ಅಲ್ಲಿಗೆ ಒಂದು ಬದುಕು ಅಂತ್ಯ ಕಂಡಿತು.ಹೀಗಾಗಿ ಗಂಡ - ಹೆಂಡತಿಯರ ಸಾಮಾನ್ಯ ಜಗಳ ಒಂದು ಬದುಕನ್ನು ಕಸಿದುಕೊಳ್ಳುವ ಮೂಲಕ ಕೊನೆಗೊಂಡಿತು.ಹೀಗೆ ಅಂತ್ಯಗೊಂಡ ಮೇಲೆಯೇ ಅವರಿಗೆ ಭಯ ಶುರುವಾಯಿತು.ನಂತರ ಮತ್ತೂ ಭೀಭತ್ಸಕ್ಕೆ ಕೈ ಹಾಕಿದರು.ದೇಹವನ್ನು ರುಂಡದಿಂದ ಬೇರ್ಪಡಿಸಿ ಕಾಡಿನಲ್ಲಿ ತಂದು ಹಾಕಿದರೆ ರುಂಡವನ್ನು 10 ಕಿಮೀ ದೂರದ ಇನ್ನೊಂದು ಕಾಡಿನಲ್ಲಿ ಬೀಸಾಡಿದ್ದರು. ದೇಹದಲ್ಲಿ ದೊರೆತ ಒಂದು ವಿಳಾಸದಿಂದ ಕೊಲೆ ಪ್ರಕರಣ ಹೊರಬಂತು.ಆರೋಪಿಗಳ ಬಂಧನವೂ ಆಯಿತು.ಮುಂದೆ ನಮಗೆಲ್ಲಾ ಗೊತ್ತೇ ಇದೆ ಅವರಿಗೆ ಜಾಮೀನು ಸಿಗಲಿದೆ.ಹೊರಬಂದು ರಾಜಾರೋಷವಾಗಿ ಸುತ್ತಾಡುತ್ತಾರೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕೇವಲ ಗಂಡ - ಹೆಂಡತಿ ನಡುವೆ ನಡೆಯುವ ಸಾಮಾನ್ಯವಾದ ಜಗಳವು ಒಂದು ಕೊಲೆಯಲ್ಲಿ ಅಂತ್ಯವಾಯಿತಲ್ಲಾ?ಅದು ಅತ್ಯಂತ ಭಯಾನಕ. ಈ ದೇಶ "ಪತಿವೃತೆ"ಯ ಕತೆಯನ್ನು ಹೇಳುತ್ತದೆ.ಶ್ರೀ ರಾಮನ "ಆದರ್ಶ"ವನ್ನು ಹೇಳುತ್ತದೆ. ಆದರೆ ಇವೆಲ್ಲಾ ಇದ್ದರೂ ನಮ್ಮಲ್ಲಿ ನಡೆಯುತ್ತಿರುವ ಸಂಗತಿಯನ್ನು ನೋಡಿದರೆ ನಮ್ಮೊಳಗಿನ "ಭಯಾನಕ" ಮನಸ್ಸುಗಳ ರೂಪವು ಗೋಚರವಾಗುತ್ತದೆ.ಇವೆಲ್ಲವೂ ರಿಪೇರಿಯಾಗಬಹುದಾ?.

ಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಕುಟುಂಬದ ಸಂಬಂಧದ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು.ಹೆಚ್ಚು ಜನ ಭಾಗವಹಿಸಿರಲಿಲ್ಲ.ಅಲ್ಲಿ ಒಂದು ಪ್ರಶ್ನೆ ಕೇಳಲಾಯಿತು.ಕುಟುಂಬದಲ್ಲಿ ಗಂಡ- ಹೆಂಡತಿ ನಡುವಿನ ಜಗಳಕ್ಕೆ ವಿಶೇಷವಾದ ಅರ್ಥ ಬೇಕಾ?.ಅಲ್ಲಿದ್ದವರೆಲ್ಲಾ ಒಂದೊಂದು ಉತ್ತರ ನೀಡಿದ್ದರು. ಕೊನೆಗೆ ಇಂತಹ ವಿಚಾರಗಳೆಲ್ಲಾ ಸಾಮಾನ್ಯ.ಅದು ಇದ್ದರೇನೇ ಕುಟುಂಬ ಖುಶಿಯಾಗಿರುತ್ತೆ ಅಂತ ಮಹಿಳೆಯೊಬ್ಬರು ಹೇಳಿದ್ದು ಈಗ ಮತ್ತೊಮ್ಮೆ ನೆನಪಿಸಿತು. ಗಮನಿಸಿ ನೋಡಿ ಮನೆಯಲ್ಲಿ ಪ್ರತಿಯೊಬ್ಬ ಗಂಡಸು ತನ್ನ ಕಚೇರಿಗೆ ಹೋಗುವ ವೇಳೆ "ಎಲ್ಲಿ ನನ್ನ ಶೂ.." 'ಎಲ್ಲಿ ನನ್ನ ಫೈಲ್".... ಅದು ಎಲ್ಲಿ.... ಇದು ಎಲ್ಲಿ.... ಅಂತ ತನ್ನ ಹೆಂಡತಿಯನ್ನು ಬೈದು ... ನೀನು ಹಾಗೇ.... ಬೇಜವಾಬ್ದಾರಿ ಅಂತೆಲ್ಲಾ ಬೈದು ಹೋಗುತ್ತಾನೆ. ಸಂಜೆ ಬಂದು ಮತ್ತೆ ಹೆಂದತಿಯಲ್ಲಿ ಆ ವಿಚಾರಗಳನ್ನು ನೆನಪಿಸದೇ ಕಾಫಿಯನ್ನು ಜೊತೆಯಾಗೇ ಕುಡಿಯುತ್ತಾನೆ. ಒಂದು ವೇಳೆ ಅಲ್ಲಿ ಇಬ್ಬರೂ ಜಗಳಕ್ಕಿಳಿದರೆ ಸಂಜೆಯೂ ಅದೇ ಚಾಳಿ ಮುಂದುವರಿಸಿದರೆ ಕುಟುಂಬ ಹೇಗಿದ್ದೀತು..?. ಹಾಗಾಗಿ ಕುಟುಂಬದಲ್ಲಿ "ಜಗಳ" ಸಾಮಾನ್ಯ. ಆದರೆ ಅದು ತಾರಕಕ್ಕೇರಿದರೆ ಮಾತ್ರಾ ಅಪಾಯ. ಹಾಗಾದರೆ ಅದು ಕೊಲೆಯಲ್ಲೋ ಅಥವಾ ಇನ್ನಾವುದೋ ವಿಚಾರದಲ್ಲಿ ಅಂತ್ಯವಾಗುತ್ತದೆ.ಒಂದು ಸುಂದರ ಬದುಕು ದುರಂತ ಅಂತ್ಯಕ್ಕೂ ಕಾರಣವಾಗಬಹುದು. ಹಾಗಾಗಿ ನಮ್ಮ ಬದುಕನ್ನು ಹೇಗೆ ಸುಂದರಗೊಳಿಸಬಹುದು ಅಂತ ಚಿ0ತಿಸಬೇಕೇ ಹೊರತು ಕತ್ತಲೆಗೆ ದೂಡದಿರುವುದು ಒಳಿತಲ್ಲವೇ?

ಕೊನೆಯ ಮಾತು ;ಬದುಕಿದ್ದಷ್ಟು ಸಮಯ ಖುಷಿಯಲ್ಲಿ, ಪರರಿಗೆ ಕಿರುಕುಳ ನೀಡದೇ ,ಇನ್ನೊಂದು ಬದುಕಿಗೆ ನೋವು ಮಾಡದೇ ಬದುಕಿದರೆ ಅದಕ್ಕಿಂತ ಕೋಟಿ"ಪುಣ್ಯ" ಇನ್ನೊಂದಿರದು......

1 ಕಾಮೆಂಟ್‌:

Hari ಹೇಳಿದರು...

Dear Mahesh,

Is it really? I can t belive. Where? Such a horrible news. Is it in our place or what? Is that wife is mad or what?