21 ಏಪ್ರಿಲ್ 2008

ಆಹಾರದ ಕೊರತೆ....



ಈಗ ವಿಶ್ವ ಸಂಸ್ಥೆಯೇ ಎಚ್ಚರಿಕೆ ನೀಡಿದೆ..!!.

ಇನ್ನೊಮ್ಮೆ ಈ ಆತಂಕಕಾರಿ ಸುದ್ದಿಗೆ ಮರು ಜೀವಬಂತು.ಅನೇಕ ದಿನಗಳಿಂದ ಮಾತನಾಡುತ್ತಿದ್ದ ಸಂಗತಿಯನ್ನು ಈಗ ವಿಶ್ವಸಂಸ್ಥೆಯೂ ಹೇಳಿದೆ.ಅದು ನೀಡಿದ ಎಚ್ಚರಿಕೆ ಹೀಗಿದೆ "ಆಹಾರ ಕ್ಷಾಮವು ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಆಹಾರ ಧಾನ್ಯಗಳ ಕೊರತೆ ಮತ್ತು ಇದರಿಂದಾಗಿ ಉಂಟಾಗಿರುವ ವಿಪರೀತ ಬೆಲೆಯೇರಿಕೆಯಿಂದಾಗಿ ವಿಶ್ವದ ಹಲವಾರು ಬಡ ಮತ್ತು ಅಭಿವೃದ್ಧಿಶೀಲ ದೇಶಗಳು ಆಂತರಿಕ ಕ್ಷೋಭೆ ಎದುರಿಸಬೇಕಾಗಿದೆ" ಎಂದು ಸಾರಿ ಹೇಳಿದೆ.

ಆದರೆ ನಮಗೆ ಅರ್ಥವಾಗಬೇಕಲ್ಲ..?.ಈಗಾಗಲೇ ಬೆಲೆಯೇರಿಕೆ ಸಮಸ್ಯೆ ತಲೆನೋವಾಗಿದೆ.ಇನ್ನು ಆಹಾರ ಧಾನ್ಯದ ಸಮಸ್ಯೆಯೂ ಬಂದರೆ ಮುಂದಿನ ಗತಿಯೇನು?.ಈಗಾಗಲೇ ವರದಿಯಾಗಿರುವಂತೆ ಇಂತಹ ಸಮಸ್ಯೆಗಳಿಂದಾಗಿ ಈಜಿಪ್ಟ್ ,ಇಂಡೋನೇಷಿಯಾ,ಫಿಲಿಫೈನ್ಸ್ ಮೊದಲಾದ ದೇಶಗಳಲ್ಲಿ ಆಹಾರಕ್ಕಾಗಿ ಹಿಂಸಾಚಾರಗಳೂ ನಡೆದಿದೆ.ಇದಕ್ಕೆ ಕಾರಣವೂ ಇದೆ.ಭಾರತ ಸೇರಿದಂತೆ ಚೀನಾ ಮೊದಲಾದ ದೇಶಗಳು ಪ್ರಮುಖ ಅಕ್ಕಿ ರಪ್ತು ಮಾಡುವ ದೇಶಗಳು ಈಗ ಆಂತರಿಕವಾಗಿ ಅಕ್ಕಿ ಪೂರೈಕೆಗೆ ಸಾಧ್ಯವಾಗುತ್ತಿಲ್ಲವಾದ ಕಾರಣ ರಪ್ತು ನಿಲ್ಲಿಸಿದೆ.ಹೀಗಾಗಿ ಅಲ್ಲಿನ ದೇಶದ ಜನರಿಗೆ ಆಹಾರದ ಸಮಸ್ಯೆ ಕಾಡುತ್ತಿದೆ. ಆದರೆ ಭಾರತಕ್ಕೂ ತನ್ನ ದೇಶದ ಜನರಿಗೂ ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ,ಗೋಧಿ ಪೂರೈಕೆ ಸಾಧ್ಯವಾಗುತ್ತಿಲ್ಲ.ಗೋಧಿ ದಾಸ್ತಾನು ಕುಂಠಿತಗೊಂಡಿದೆ.ಮುಂದೆ ಭಾರತವೂ ಆಹಾರದ ಕ್ಷಾಮಕ್ಕೆಸಿಲುಕಿದರೆ ಅಚ್ಚರಿಯಿಲ್ಲ.

ಭಾರತವು ಕೃಷಿ ಪ್ರದಾನವಾದ ದೇಶ.ಇಲ್ಲಿ ಅಂತಹ ಕ್ಷಾಮ ಬಿಡಿ, ಚಿಂತನೆಯೂ ಬರಲೇ ಬಾರದಾಗಿತ್ತು.ಹಿಂದೆ ಅಂತಹ ಶೇಖರಣೆ ಭಾರತದಲ್ಲಿತ್ತು.ಆದರೆ ಇಂದು...?. ಇದು ಏಕೆ ಹೀಗೆ..?. ಮತ್ತೆ ಮತ್ತೆ ಅದೇ ರಾಗ ಅಗತ್ಯವಿಲ್ಲ. ಈ ಕೃಷಿ ಪ್ರದಾನವಾದ ದೇಶದೊಳಗೆ ಇನ್ನೂ ಅನೇಕ IT ಕಂಪನಿಗಳು ಬಂದು ರೈತರ ಜಮೀನನ್ನು ಖರೀದಿಸ ಹೊರಟರೆ ಇಂತಹ ಸಮಸ್ಯೆಯಾಗದೇ ಉಳಿದೀತೇ?.ಹಳ್ಳಿಯಲ್ಲಿ ರೈತ ದಿನನಿತ್ಯ ಅನುಭವಿಸುವ ವೇದನೆಯ ಒಂದು ಭಾಗವೇ ಆಹಾರದ ಕ್ಷಾಮ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಇಷ್ಟೆಲ್ಲಾ ಬೆಲೆಯೇರಿಕೆಯಾದಾಗಲೂ ರೈತರಿಗೆ ಹೇಳುವಷ್ಟು ಅದರ ಪ್ರಯೋಜನವಾಗುತ್ತಿಲ್ಲ.

ಈಗಾಗಲೇ ಅನೇಕ ಹೊಲಗಳು ಉದ್ಯಮವಾಗಿ ,ಕಟ್ಟಡಗಳಾಗಿ ಬದಲಾಗಿದೆ.ರೈತರು ಮತ್ತು ಅವರ ಮಕ್ಕಳು ನಗರ ಸೇರಿದ್ದಾರೆ.ಈಗ ಮತ್ತೆ ಅವರಿಗೆ ಸಮಸ್ಯೆಯಾಗಿದೆ. ಬೆಲೆಯೇರಿಕೆಯಿಂದಾಗಿ ಕಂಪನಿಗಳಲ್ಲಿ ಸಿಗುವ ಸಂಬಳ "ಊಟ"ಕ್ಕೆ ಸರಿಯಾದೀತು.ಕೆಲವರಿಗೆ ಅದೂ ಸಾಲುವುದಿಲ್ಲವಂತೆ.ಆದರೆ ಹಳ್ಳಿಯಲ್ಲಿ ಈಗಲೂ ಇರುವ ರೈತ ತನಗೆ ಅಗತ್ಯವಾದ ಅಕ್ಕಿ,ತರಕಾರಿ ,ಇನ್ನಿತರ ಧಾನ್ಯಗಳನ್ನು ಆತನೆ ಬೆಳೆದು ತನ್ನ ಹೊಟ್ಟೆಯನ್ನು ತುಂಬಿಸಿ ಆರಾಮದ ಬದುಕು ಸಾಗಿಸುತ್ತಿದ್ದಾನೆ.ಇದುವರೆಗೆ ಆತ್ಮಹತ್ಯೆಯ ಸರದಿ ರೈತರದ್ದಾಗಿತ್ತು..... ಮುಂದೆ...?. ಹಾಗಾಗಿ ಇನ್ನು ರೈತನ ಕಾಲಿಗೆ ಬೀಳಲೇ ಬೇಕಾದ ಅನಿವಾರ್ಯತೆಯಿದೆ.ಎಷ್ಟೇ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡರೂ ನಮ್ಮ ರೈತರು ಮನಸ್ಸು ಮಾಡದೇ ಹೋದರೆ ದೇಶಕ್ಕೆ ಮುಂದೆ ಭವಿಷ್ಯವಿರದು ಎನ್ನುವುದು ಸಾರ್ವಕಾಲಿಕ ಸತ್ಯ.


ಕೊನೆಯ ಮಾತು : ಇನ್ನು ಸರಕಾರಗಳು ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರುವ ದಿನ ದೂರವಿರದು.

ಕಾಮೆಂಟ್‌ಗಳಿಲ್ಲ: