13 ಏಪ್ರಿಲ್ 2008

ಅದೇ ಖುಷಿ..... ಅದೇ ನೋವು....



ನಾಳೆ ಸೌರಮಾನ ಯುಗಾದಿ.

ಹಳ್ಳಿಗಳಲ್ಲಿ ಸಂಭ್ರಮದ ದಿನ.ಸಸ್ಯಶ್ಯಾಮಲೆಯನ್ನು ಮಗದೊಮ್ಮೆ ಪೂಜಿಸುವ ಸುಂದರ ಕ್ಷಣ.ತನ್ನ ಒಡೆಯನ ಮನೆಗೆ ಧಾನ್ಯ ,ತರಕಾರಿಗಳನ್ನು ತಂದೊಪ್ಪಿಸುವ ದಿನ.ಭಗವಂತನಿಗೆ ತನ್ನ ಭುವಿಯಲ್ಲಿ ಬೆಳೆದ ಹಣ್ಣು ಹಂಪಲುಗಳು,ತರಕಾರಿಗಳನ್ನು ಸಮರ್ಪಿಸಿ ಎಲ್ಲರೂ ಹಂಚಿ ತಿನ್ನುವ ಸಂಭ್ರಮದ ಕ್ಷಣ...... ಆದರೆ ಈಗ ಈ ಎಲ್ಲಾ ಸಂಭ್ರಮ ಇದೆಯಾ..?.

ಚಾಂದ್ರಮಾನ ಯುಗಾದಿಯಂದು ಬೇವು-ಬೆಲ್ಲ ಮೆಲ್ಲುತ್ತಾ ಹೊಸವರ್ಷವನ್ನು ಸ್ವಾಗತಿಸಿ ಮುಂದಿನ ಸಿಹಿ-ಕಹಿಗಳನ್ನು ಸಮವಾಗಿ ಹಂಚಿಕೊಂಡು ನೂತನ ಸಂವತ್ಸರವನ್ನು ಬರಮಾಡಿಕೊಂಡರೆ, ಸೌರಮಾನ ಯುಗಾದಿಯಂದು ಭುವಿಯಲ್ಲಿ ಬೆಳೆದ ಹಸಿರನ್ನು ಸಮರ್ಪಿಸುವ ಕಾಲ.ಅಂದಿನಿಂದ ತುಳು ತಿಂಗಳು ಅಥವಾ ಮೇಷ ತಿಂಗಳು ಆರಂಭವಾಗುತ್ತದೆ.ಇದನ್ನು "ವಿಷು" ಅಂತಲೂ ಕರೆಯಲಾಗುತ್ತದೆ.ತುಳು ನಾಡಿನಲ್ಲಿ ಈ ವಿಷುವಿಗೆ ಅತ್ಯಂತ ಮಹತ್ವವಿದೆ.
ಹಿಂದಿನ ಒಕ್ಕಲು ಪದ್ದತಿಯಲ್ಲಿ ತಾನು ಭುವಿಯಲ್ಲಿ ಬೆಳೆದ ಹಸಿರು ತರಕಾರಿಗಳನ್ನು ಒಡೆಯನಿಗೆ ಸಮರ್ಪಿಸಿ ಅವರ ಆಶೀರ್ವಾದವನ್ನು ಪಡೆಯುವ ರೂಢಿಯಿತ್ತು. ಭೂಮಾಲಿಕ ಅದೆಲ್ಲವನ್ನು ದೇವರಿಗೆ ಸಮರ್ಪಿಸಿ ಎಲ್ಲರೊಂದಿಗೆ ಹಂಚಿ ತಿನ್ನುತ್ತಿದ್ದ. ಆದರೆ ಇಂದು ಅಂತಹ ಸಂಬಂಧವನ್ನು ಕೃಷಿಯಲ್ಲಿ ಕಾಣಲು ಸಾಧ್ಯವಿಲ್ಲ. ಹಾಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.ಏಕೆಂದರೆ ಇಂದು ಕೃಷಿಯಲ್ಲಿ ಕಾರ್ಮಿಕರ ಕೊರತೆಯೂ ಒಂದೆಡೆ ಕಾಡುತ್ತಿದ್ದರೆ ಇನ್ನೊಂದೆಡೆ ಕೃಷಿಯೆಂಬುದು ಯಾರಿಗೂ ಬೇಡವಾದ ಉದ್ಯೋಗವಾಗುತ್ತಿದೆ.ಆ ಕಾರಣಗಳಿಂದಾಗಿ ಇಂದು ತಲೆತಲಾಂತರಗಳಿಂದ ನಡೆದುಕೊಂಡು ಬಂದ "ವಿಷು"ವಿನಂತಹ ಆಚರಣೆಗಳು ಎಲ್ಲೋ ಒಂದು ಕಡೆ ಅರ್ಥವನ್ನು ಕಳೆದುಕೊಳ್ಳುತ್ತಿವೆ.ಅದು ವಿಷು ಮಾತ್ರವಲ್ಲ ಅನೇಕ ಪ್ರಕೃತಿ ಸಂಬಂಧಿತ ಆಚರಣೆಗಳು ಮೂಲೆಗುಂಪಾಗುತ್ತಿವೆ.ಕೆಲವೊಮ್ಮೆ ಅಂತಹ ದಿನ ಇದೆಯೆಂದು ತಿಳಿಯುವುದೇ ಇಲ್ಲ.ಹಾಗಾಗಿ ರೈತನೇ ಎಲ್ಲಾ ಆಚರಣೆಗಳ ಮೂಲ.ಆತನು ಸಂಕಷ್ಟದಲ್ಲಿ ಸಿಲುಕಿದರೆ?.ಈಗಿನ ಪರಿಸ್ಥಿತಿಯನ್ನೇ ನೋಡಿದರೆ ಅರ್ಥವಾಗುತ್ತದೆ.ಅಕ್ಕಿಯ ಬೆಲೆ 20 ರ ಗಡಿದಾಟುತ್ತಿದೆ ,ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ,ಹಣದುಬ್ಬರದ ಮಾತು ಬರುತ್ತದೆ.ಇಲ್ಲಿ ಆಹಾರ ಧಾನ್ಯಗಳ ದಾಸ್ತಾನು ಕುಂಠಿತವಾದ ಬಗ್ಗೆ ಏನಾದರೂ ಚರ್ಚೆ ನಡೆಯುತ್ತದಾ?.ರೈತರಿಗೆ ಆಹಾರಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಏನಾದರೂ ಕಾರ್ಯಕ್ರಮ ನಡೆಯುತ್ತದಾ?.

ಈ ದೇಶವನ್ನು ಕೃಷಿಪ್ರದಾನವಾದ ದೇಶವೆಂದೂ ,ರೈತನೇ ಈ ದೇಶದ ಬೆನ್ನೆಲುಬು ಎಂತಲೂ ಹೇಳಿದ ಮಂದಿಗೆ ಆತನ ಸಂಕಷ್ಟಗಳ ಅರಿವಾಗುವುದೇ ಇಲ್ಲ. ಹಲವು ಬಾರಿ ತನ್ನ ಸಮಸ್ಯೆಗಳ ಬಗ್ಗೆ ರೈತ ಹೇಳಿಕೊಂಡರೂ ಅದಕ್ಕೆ ಪರಿಹಾರವೇ ಸಿಗುವುದಿಲ್ಲ.ಚುನಾವಣೆ ಬಂದಾಗ ಶೇ 4 ಕ್ಕೆ ಬಡ್ಡಿ ಅಂತ ಒಂದು ಪಕ್ಷ ಹೇಳಿದರೆ ಇನ್ನೊಂದು ತಾನು ಶೇ 3 ಕ್ಕೆ ಕೊಡುತ್ತೇನೆ ಎನ್ನುತ್ತದೆ.ಅಂತಹ ಮಂದಿ ಇದುವರೆಗೆ ಏನು ಮಾಡಿದ್ದಾರೆ ಅಂತ ರೈತರು ಯೋಚಿಸಲೇಬೇಕು.
ದೇಶದಲ್ಲಿಂದು ಕೃಷಿಯ ಕಡೆಗಿನ ನೋಟ ಕಡಿಮೆಯಾಗಿರುವುದಕ್ಕೆ ಒಂದು ಉದಾಹರಣೆ -- ಅಂದು ವಿದರ್ಭದಲ್ಲಿ ರೈತರ ಆತ್ಮಹತ್ಯೆಯಾಗುತ್ತಿದ್ದ ಸಮಯ. ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಆಗ ಒಬ್ಬ ಪತ್ರಕರ್ತ ಆ ಸಮಸ್ಯೆಗಳ ಬಗ್ಗೆ ವರದಿಯೊಂದನ್ನು ತಯಾರಿಸಿದ.ಅದು ಸರಕಾರದ ಕಣ್ಣು ತೆರೆಯಿಸಿತು.ನಂತರ ಸರಕಾರವೇ ದೇಶದ ವಿವಿಧ ಪತ್ರಕತ್ರರನ್ನು ವಿದರ್ಭಕ್ಕೆ ಆಹ್ವಾನಿಸಿ ಸಮಸ್ಯೆಗಳ ಬಗ್ಗೆ ವಿಶ್ಲೇಷಿಸಲು ಕರೆ ನೀಡಿತು.ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಫ್ಯಾಷನ್ ಶೋ ನಡೆಯುತ್ತಲಿತ್ತು.ಎಲ್ಲರ ಚಿತ್ತ ಅತ್ತ ಕಡೆಯಿತ್ತು.ದುರಂತವೆಂದರೆ ವಿದರ್ಭಕ್ಕೆ ಆಗಮಿಸಿದ ಪತ್ರಕರ್ತರು ಕೇವಲ ಬೆರಳೆಣೆಕೆಯಷ್ಟು ಮಾತ್ರಾ.ಫ್ಯಾಷನ್ ಶೋದಲ್ಲಿದ್ದ ಪತ್ರಕರ್ತರು ಸುಮಾರು 3000...!.ಯಾಕೆಂದರೆ ಅದು ಪತ್ರಕರ್ತರಿಗೂ ಇಕ್ಕಟ್ಟಿನ ಸ್ಥಿತಿ.ಫ್ಯಾಷನ್ ಶೋನ ಸುದ್ದಿಗಳು ಮರುದಿನ ಪತ್ರಿಕೆಯಲ್ಲಿ ಬಾರದೇ ಇದ್ದರೆ ಓದುಗರು ಪತ್ರಿಕಾ ಕಚೇರಿಯನ್ನು ವಿಚಾರಿಸುತ್ತಾರೆ,ಟಿ.ವಿ ಚಾನೆಲ್ಲಿನ ವೀಕ್ಷಕರ ಸಂಖ್ಯೆ ಇಳಿಯುತ್ತದೆ...!. ಅದೇ ರೀತಿ ಚಲನಚಿತ್ರ ನಟ-ನಟಿಯರ ವಿವಾಹವೂ ಕೂಡಾ..!.ಅದು ದೊಡ್ಡ ಸುದ್ದಿಯಾಗಲೇ ಬೇಕು..!. ಇಂತಹ ಸಂದರ್ಭದಲ್ಲಿ ದೇಶದ ಹೊಟ್ಟೆ ಹೊರೆಯುವ ರೈತನ ಸಮಸ್ಯೆಗಳು ಯಾರಿಗೂ ಬೇಡವಾಗಿದೆ.ಹೀಗಾದರೆ ದೇಶದಲ್ಲಿ ಕೃಷಿ ಉಳಿದೀತೇ? ಮುಂದೆ ರೈತರದ್ದೇ ಆದ ಹಬ್ಬಗಳು ಕಾಣಸಿಕ್ಕಾವೇ? ಹೀಗಾಗಿ ಮುಂದೆ ನಗರದವರು ಹೊಟ್ಟೆ ಹೊರೆಯಲು ಅಕ್ಕಿಗೆ 50 ರೂ ನೀಡಿದರೂ ಅಚ್ಚರಿಯಿಲ್ಲ.

1 ಕಾಮೆಂಟ್‌:

ಬಾನಾಡಿ ಹೇಳಿದರು...

ಕೃಷಿಯನ್ನು ಅವಗಣಿಸಿದ ಇಡೀ ಜಗತ್ತು ಇಂದು ಆಹಾರ ಸಮಸ್ಯೆಯನ್ನು ಎದುರಿಸುತ್ತಿದೆ. ಅದರ ಒಂದು ರೂಪ ಭಾರತದಲ್ಲೂ ಕಾಣುತಿದ್ದೇವೆ. ಈ ಎಲ್ಲಾ ದೃಷ್ಟಿಯಿಂದ ಮತ್ತೆ ಕೃಷಿಗೆ ಪ್ರಾಧಾನ್ಯತೆ ಬಂದು ಕೃಷಿಕರು ಸುಧಾರಿಸುವರೆಂದು ಆಶಿಸೋಣ.
ಒಲವಿನಿಂದ
ಬಾನಾಡಿ