01 ಏಪ್ರಿಲ್ 2008

ದೇವನಿಗೆ "ಕೋಟಿ" ನಮನ...



ಕುಕ್ಕೆಯ ದೇವನಿಗೆ "ಕೋಟಿ" ನಮನ...!.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಈಗ 24 ಕೋಟಿ ರೂಪಾಯಿ ಮೀರುತ್ತಿದೆ.ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಕುಕ್ಕೆಯು ಮೊದಲನೇ ಸಾಲಿನಲ್ಲಿ ಈಗ ನಿಲ್ಲಲು ಸಿದ್ಧವಾಗುತ್ತಿದೆ.ಅದಕ್ಕೆ ತಕ್ಕಂತೆ ಇಲ್ಲಿನ ವ್ಯವಸ್ಥೆಗಳು ಸಾಗುತ್ತಿವೆ.ಆದರೂ ಇನ್ನೂ ಹಲವಾರು ಲೋಪಗಳು ಕಂಡುಬರುತ್ತಿವೆ.ಅವೆಲ್ಲವೂ ಸಹಜವೇ ಎಂದು ಅಂದುಕೊಂಡರೂ ಪರವಾಗಿಲ್ಲ.

ಈಗ ದೇವಸ್ಥಾನದ ವಿಷಯಕ್ಕೆ ಬಂದರೆ ಇಲ್ಲಿನ ಆದಾಯ 2006-07 ರಲ್ಲಿ 19.76 ಕೋಟಿ ರೂಪಾಯಿಇದ್ದರೆ 2007-08 ರಲ್ಲಿ ಈಗಾಗಲೇ 23 ಕೋಟಿ ರೂಪಾಯಿ ದಾಟಿದೆ.ಮುಂದೆ ಈ ವರ್ಷದ ಅಂತ್ಯಕ್ಕೆ ಕಳೆದ ವರ್ಷದಿಂದ 4 ಕೋಟಿ ರೂ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ.

ಇದಕ್ಕೆ ಸರಿಯಾಗಿ ಇಲ್ಲಿನ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಗಳ ಮಾಸ್ಟರ್ ಪ್ಲಾನ್ ಯೋಜನೆಯನ್ನು ಇಲ್ಲಿನ ಆಡಳಿತವು ತಯಾರಿಸಿ ಸರಕಾರಕ್ಕೆ ಕಳುಹಿಸಿದೆ.ಅದಕ್ಕೆ ಈವರೆಗೆ ಅನುಮೋದನೆ ದೊರೆತಿಲ್ಲ. ಹಾಗೆಂದು ಸರಕಾರವು ಈ ರಾಜ್ಯದ ಕೆಲವೇ ಕೆಲವು ದೇವಸ್ಥಾನಗಳಿಗೆ ಮಾತ್ರಾ ಇಂತಹ ಯೋಜನೆಗಳಿಗೆ ಅನುಮೋದನೆ ನೀಡಿದ ಉದಾಹರಣೆ ಇದೆ.ಹಾಗಾಗಿ ಕುಕ್ಕೆಗೆ ಮಾಸ್ಟರ್ ಪ್ಲಾನ್ ಅನುಷ್ಠಾನಗೊಳಿಸುವ ಯೋಗವಿದೆಯೇ ಎಂದು ಕಾದು ನೋಡಬೇಕಾಗಿದೆ.

ಹಾಗೆ ನೋಡಿದರೆ ಇಲ್ಲಿನ ಆದಾಯಗಳೆಲ್ಲ ಈಗ ಸರಕಾರದ ಪಾಲಾಗುತ್ತಿಲ್ಲ.ಬಹುತೇಕ ಆದಾಯವನ್ನು ತಾಲೂಕಿನ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇರಿಸಬೇಕಾಗಿದೆ. ಇಲ್ಲಿ ಸರಕಾರಕ್ಕೆ ತೆರಿಗೆಯನ್ನು ಮಾತ್ರಾ ಪಾವತಿಸುವ ವ್ಯವಸ್ಥೆಯಿದೆ. ದೇವಸ್ಥಾನವು ಇರಿಸಿದ ಠೇವಣಿಯನ್ನು ಸರಕಾರದ ಅನುಮತಿ ಪಡೆದು ದೇವಸ್ಥಾನದ ಆಸುಪಾಸಿನ ಅಭಿವೃದ್ಧಿಗೆ ಬಳಸಬಹುದಾಗಿದೆ.ಇನ್ನೊಂದು ಅಂಶವೆಂದರೆ ಕೇಂದ್ರ ಸರಕಾರದಿಂದ ಹಿಂದೂಗಳಿಗೂ [ಹಜ್ ಯಾತ್ರೆಗಿದ್ದಂತೆ] ಯಾತ್ರೆಗೆಂದು ಸಬ್ಸೀಡಿ ನೀಡುತ್ತದೆ.ಆಸಕ್ತರು ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದುದರಿಂದ ಈಗ ಹಿಂದೂಗಳಿಗೆ ಆತಂಕದ ಅಗತ್ಯವಿಲ್ಲ.ತಾವು ದೇವಸ್ಥಾನಗಳಿಗೆ ಹಾಕಿದ ಕಾಣಿಕೆಯು ಇಲ್ಲಿಯೆ ಸದ್ವಿನಿಯೋಗವಾಗಬಲ್ಲುದು ಎಂಬ ಧೈರ್ಯವಿದೆ.

ಧರ್ಮ ಧಾರ್ಮಿಕತೆ ಬಗ್ಗೆ....

ಯಾವುದೇ ಪ್ರಾರ್ಥನಾ ಮಂದಿರಗಳು ಆ ಧರ್ಮದ ಜನರಿಗೆ ಶ್ರದ್ಧೆಯ ಕೇಂದ್ರ. ಅರ್ಥಾತ್ ನೆಮ್ಮದಿ ನೀಡುವ ಕೇಂದ್ರಗಳು.ಅಲ್ಲಿ ಶುಭ್ರವಾದ ವಾತಾವರಣ ಇದ್ದರೆ ಮಾತ್ರಾ ಅದರಿಂದ ನೆಮ್ಮದಿ ಸಿಗಲು ಸಾಧ್ಯ. ಅಲ್ಲಿನ ತೀರ್ಮಾನವೇ ಅಂತಿಮವಾಗಲು ಸಾಧ್ಯ. ಆದರೆ ಇಂದು ಹಾಗಾಗುತ್ತಾ.? ದೇವಸ್ಥಾನದ ಒಳಗಡೆ ಕಚ್ಚಾಟ, ಮಸೀದಿಯೊಳಗೆ ಹೊಡೆದಾಟ...... ಹೀಗೆಯೇ ಸಮಾಜದ ವ್ಯವಸ್ಥೆಯು ಇಂದು ಹಾಳಾಗುತ್ತಾ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೂರದ ಜನ ಭಾರತದ ಒಳಗೆ ಶಾಂತಿಯನ್ನು,ನೆಮ್ಮದಿಯನ್ನು ಕಾಣುತ್ತಾರೆ.ಇಲ್ಲಿನ ಆಚರಣೆಯಲ್ಲಿ ನೆಮ್ಮದಿ ತುಂಬುತ್ತವೆ.ಅದಕ್ಕೆ ಸಾಕ್ಷಿ ಎಂಬಂತೆ ವಿದೇಶೀ ಜೋಡಿಗಳಿಬ್ಬರು ಪ್ರೀತಿಸಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗಲು ಹಿಂದೂಗಳಾಗಿ ಹಿಂದೂ ಸಂಪ್ರದಾಯದಂತೆ ಧರ್ಮಸ್ಥಳದಲ್ಲಿ ಇತ್ತೀಚೆಗೆ ಮದುವೆಯಾದರು. ಇಂತಹ ಘಟನೆಗಳು ಮತ್ತೆ ಭಾರತೀಯ ಸಂಪ್ರದಾಯಗಳನ್ನು "ನಮ್ಮವರಿಗೆ" ನೆನಪಿಸುತ್ತದೆ ಶಾಂತಿ, ನೆಮ್ಮದಿ ಇಲ್ಲೇ ಇದೆ ಅಂತ ಮತ್ತೆ ಪ್ರತಿಪಾದಿಸುತ್ತದೆ.ಅದು ಅರ್ಥವಾದರೆ "ಈ" ಹುಡುಕಾಟವೆಲ್ಲಾ ನಿಲ್ಲಬಹುದಲ್ವೇ....?

ಹಾಗಾಗಿ ನಮ್ಮ ಧರ್ಮ ,ಸಂಪ್ರದಾಯಗಳೊಂದಿಗೆ " ಮಾನವ ಧರ್ಮವೂ" ಬೆಳೆಯಲಿ, ಅದರಿಂದ ದೇವಾಲಗಳೂ ವಿಶಾಲವಾಗಲಿ , ಹೃದಯವು ಕೂಡಾ....





ಈ ಚಿತ್ರ ಟಿ.ವಿಯಿಂದ ಕದ್ದದ್ದು...

ಕಾಮೆಂಟ್‌ಗಳಿಲ್ಲ: