08 ಏಪ್ರಿಲ್ 2008

ಎಟಿಎಂ ಮತ್ತು "ಖುರ್ಚಿ"...!



ಕುಕ್ಕೆ ಸುಬ್ರಹ್ಮಣ್ಯದಲ್ಲಿ ATM ಸೌಲಭ್ಯ ಶುರುವಾಗಿದೆ.

ಇದು ಇಂದು ಅವಶ್ಯಕ ಸೇವೆ ಅಂತ ಹೇಳಿದರೆ ತಪ್ಪಲ್ಲ.ಕುಕ್ಕೆಗೆ ಸಾವಿರಾರು ಅಲ್ಲ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.ಆದರೆ ದೂರದಿಂದ ಬರುವ ಭಕ್ತರಲ್ಲಿ ಖಾತೆಯಲ್ಲಿ ಎಷ್ಟು ಹಣವಿದ್ದರೂ ಇಲ್ಲಿ ತುರ್ತಾಗಿ ಹಣ ಬೇಕಾದರೆ ವ್ಯವಸ್ಥೆ ಇದ್ದಿರಲಿಲ್ಲ.ಒಮ್ಮೆ ಈ ಬಗ್ಗೆ ಬ್ಯಾಂಕ್ ಪ್ರಬಂಧಕರೊಬ್ಬರಲ್ಲಿ ಮಾತನಾಡಿದಾಗ "ಅಲ್ಲಿ ಅಸಲಾಗದು" ಅಂತ ಹೇಳಿದ್ದರು.ಆದರೆ ಇಂದು Corporation ಬ್ಯಾಂಕಿನವರು ಸೌಲಭ್ಯವನ್ನು ಉದ್ಘಾಟಿಸಿಯೇಬಿಟ್ಟರು.ಇನ್ನು ಭಕ್ತರಿಗೆ ತೊಂದರೆಯಿಲ್ಲ.ಇದಕ್ಕೆ ಉದಾಹರಣೆ ಎಂಬಂತೆ ಇನ್ನೇನು ATM ಉದ್ಘಾಟನೆಗೊಂಡಿತ್ತು ಚೆನ್ನೈ ಮೂಲದ ವ್ಯಕ್ತಿಯೊಬ್ಬರಿಗೆ ಹಣದ ಅಗತ್ಯ ಬಂದು ಕೂಡಲೇ ಎಟಿಎಂಗೆ ಬಂದು ಹಣ ಡ್ರಾ ಮಾಡಿಕೊಂಡರು. ಈ ಮೊದಲು 30-40 ಕಿಮೀ ಹೋಗಬೇಕಿತ್ತು.

ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.ಬ್ಯಾಂಕಿನ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

ಇನ್ನೊಂದು ವಿಷ್ಯ "ಇದು ಖುರ್ಚಿ ಮಹಿಮೆ"........

ಯಾವಾಗಲೂ ಖುರ್ಚಿಯ ವಿಷ್ಯ ಬಂದಾಗಲೆಲ್ಲಾ ರಾಜಕೀಯ ನೆನಪಾಗುತ್ತದೆ. ಆದರೆ ಇದು ರಾಜಕೀಯದ ಖುರ್ಚಿ ಅಲ್ಲ. ಉದ್ಘಾಟನಾ ಕಾರ್ಯಕ್ರಮದಲ್ಲಿನ ಖುರ್ಚಿ ಮಹಿಮೆ.ಸ್ವಾಮೀಜಿಯವರು ATMನ್ನು ಉದ್ಘಾಟಿಸಿ ಆಶೀರ್ವಚನಕ್ಕೆ ಆಗಮಿಸಿ ಖುರ್ಚಿಯಲ್ಲಿ ಆಸೀನರಾದರು.ತಕ್ಷಣ ಖುರ್ಚಿಯ ಆಸನ ಬಿತ್ತು. ನೋಡಿದರೆ ಸ್ವಾಮೀಜಿ ಬಿದ್ದು ಮೇಲೆದ್ದರು.ನಂತರ ಖುರ್ಚಿ ಸರಿಪಡಿಸಲಾಯಿತು.ಮತ್ತೆ ಕಾರಣ ನೋಡಿದರೆ, ಅದು ಬೇರೆ ಬೇರೆ ಸೇರಿಸುವ ಖುರ್ಚಿಯಾಗಿತ್ತು.ಹಾಗಾಗಿ ಆ ಖುರ್ಚಿಯನ್ನು ಸೇರಿಸಿದ್ದು ಸರಿಯಾಗಿರಲಿಲ್ಲ. ಸಂಘಟಕರು ಅದನ್ನು ಸರಿಯಾಗಿ ನೋಡಿರಲೂ ಇಲ್ಲ. ಆದರೆ ಸ್ವಾಮೀಜಿ ಪರವಾಗಿಲ್ಲ... ಪರವಾಗಿಲ್ಲ ಅಂದರು ಬಿಡಿ..! ನಂತರ ಆಶೀರ್ವಚನದಲ್ಲೂ ಶುಭ ಹಾರೈಸಿದರು.

ಆದರೆ ಮುಂದೆ ಒಂದು ಎಚ್ಚರಿಕೆ !.ಯಾವಾಗಲಾದರೂ ನೀವು ಯಾರೇ ಸ್ವಾಮೀಜಿಗಳನ್ನು ಬಹಿರಂಗ ಸಭೆಗೆ ಕರೆದರೆ ಮೊದಲು ಖುರ್ಚಿ ಸರಿಯಾಗಿದೆಯೇ ಗಮನಿಸಿ... ಯಾರಾದ್ರೂ ಸಿಟ್ಟಿನ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಬಂದ್ರೆ ನಿಮಗೆ ಬಹಿರಂಗವಾಗಿ "ಸನ್ಮಾನ" ಗ್ಯಾರಂಟಿ....!!!!

ಇದು ಖುರ್ಚಿ ಪುರಾಣ.....



ಇನ್ನು ಖುರ್ಚಿ ಪುರಾಣ ನೆನಪಾಗದೇ ಇದ್ದೀತೇ..?

ಖುರ್ಚಿ ಯಾರಿಗೆ ಬೇಡಹೇಳಿ ? ರಾಜಕಾರಣಿಗಳನ್ನು ಬಿಡಿ.

ನಮ್ಮನ್ನೇ ನೋಡಿದರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಖುರ್ಚಿ ಇಲ್ಲದೇ ಕುಳಿತಿಕೊಳ್ಳಲು ಸಾಧ್ಯವೇ?.ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯನಾ? ಕೆಲವು ಕಡೆ ಈ ಖುರ್ಚಿಗಾಗಿಯೆ ಹೊಂಚು ಹಾಕುವವರೂ ಇರುತ್ತಾರೆ.ಈಗೀಗ ಮನುಷ್ಯರು ಬಿಡಿ "ಅತಿಮಾನುಷರು" ,ತಮ್ಮ ಜೀವಿತದ "ಕರ್ಮ" ಫಲವನ್ನು ಮುಗಿಸಿದವರಿಗೂ ಅದರ ಮೇಲೆ ಒಂದು ಕಣ್ಣಿರುತ್ತದೆ.ತಮ್ಮದೇ ಪ್ರಾಬಲ್ಯವನ್ನು ಮೆರೆಯಲು ಪ್ರಯತ್ನಿಸುತ್ತಾರೆ.ಇನ್ನು ಹೇಗೂ ಈಗ ಚುನಾವಣಾ ಸಮಯವಲ್ಲ. ನನಗೆ ಅರ್ಥವಾಗದ ಒಂದು ಸಂಗತಿಯೆಂದರೆ ಈ ಮಠ-ಮಂದಿರಗಳ ಪ್ರಮುಖರು ಏಕೆ "ರಾಜಕೀಯ"ದ ಖುರ್ಚಿಯ ಮೇಲೆ ಕಣ್ಣಿಟ್ಟಿರುತ್ತಾರೆ.ಅಲ್ಲಿಗೆ ಬರುವವರು ತಮ್ಮರಾಗಬೇಕೆಂಬ ಮಹದಾಸೆಯನ್ನು "ಕಾವಿಗಳು-ವಿರಾಗಿಗಳು" ಇಟ್ಟುಕೊಳ್ಳುತ್ತಾರೆ? ಮಾತ್ರವಲ್ಲ ಅವರು ಧರ್ಮವನ್ನು ರಕ್ಷಿಸಬೇಕಾದವರಲ್ಲವೇ? ಅದಕ್ಕೆ ರಾಜಕೀಯದ ಅಗತ್ಯವಿದೆಯೇ?.

ಇನ್ನು ಈ ಖುರ್ಚಿಯು ಹಲವೆಡೆ ಜನರನ್ನು "ಲೆಕ್ಕ" ಹಾಕಲೂ ಕಾರಣವಾಗುತ್ತದೆ.

ಇನ್ನು ರಾಜಕೀಯದಲ್ಲಿ ಖುರ್ಚಿಯ ಸಂಗತಿಯನ್ನು ಬಿಡಿ.ಅದರಲ್ಲಿ ಬಗ್ಗೆ ವಿಸ್ತಾರವಾದ "ಕಿತ್ತಾಟ-ಅಲುಗಾಟ-ಕಂದಕ"ಗಳು ಕಂಡುಬರುತ್ತವೆ. ಮಾತ್ರವಲ್ಲ ಜಾತಿಯ ಖುರ್ಚಿಗಳೂ ಅಲ್ಲಿ ಪ್ರಮುಖವೆನಿಸಿಬಿಡುತ್ತವೆ.ಮೊನ್ನೆ ಮೊನ್ನೆ ನೋಡಿ ನಮ್ಮ "ದೊಡ್ಡ" ಖುರ್ಚಿ [ಮುಖ್ಯಮಂತ್ರಿ] ಹೇಗೆಲ್ಲಾ ಅಲುಗಾಡಿತು. ಸಂಗೀತ ಖುರ್ಚಿಯಂತೆ ಅವರಿವರಿಗೆ ಸಿಕ್ಕಿತು.ಕೆಲವರು ಒಂದು ವಾರಕ್ಕಾದರೂ ಹೇಗೆ ತಮ್ಮದಾಗಿಸಿಕೊಂಡರು.!?.ಅದಕ್ಕಾಗಿ ಏನೆಲ್ಲಾ "ನಾಟಕ"ಗಳು ನಡೆಯಿತು?. ಮತ್ತೆ ಹೇಗೆ ವಿರಸವಾಯಿತು.? ಯಾತ್ರೆಗಳು ನಡೆದವು?. ಈಗ ಮತ್ತೆ ಅದೇ ಖುರ್ಚಿಗಾಗಿ "ಹೋರಾಟ" ಶುರುವಾಗಿದೆ.

ಯಾರ ಪಾಲಾಗುತ್ತೋ ಈಗಲೇ ಹೇಳೋಕಾಗಲ್ಲ. ಅದಕ್ಕೆ ಈಗಲೇ ಆರಂಭವಾಗಿದೆ ಪೈಪೋಟಿ....!.ಹಾಗಾಗಿ ಖುರ್ಚಿಗೆ ತಾತ್ಕಾಲಿಕವಾಗಿ ಯಾವಾಗಲೂ ಒಂದು ಸ್ಥಾನ "ಮಾನ" ಇದ್ದೇ ಇದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಆ ಖುರ್ಚಿಗಾಗಿ ಬಿಡುವ ಭಾಷಣವು " ಮಂಗಳೂರು - ಬೆಂಗಳೂರು" ಪಟ್ಟಿಯಲ್ಲಿ ಸಂಚರಿಸುವುದಕ್ಕಿಂತಲೂ ವೇಗವಾಗಿರುತ್ತದೆ.ಹಾಗೆ ಖುರ್ಚಿಗಾಗಿ "ವೇಗ"ದಿಂದ ಸಾಗುವ ಮಂದಿ ಅಚಾನಕ್ ಖುರ್ಚಿ ಸಿಗದೆ ಸೋತು ಬಿಡುತ್ತಾರೆ.ಹಾಗಾಗಿ ಯಾವತ್ತೂ "ಖುರ್ಚಿ"ಗಳು ಶಾಶ್ವತವಲ್ಲ...... ಅವುಗಳನ್ನು ನಂಬಿ ಧೈರ್ಯವಾಗಿ ಕುಳಿತರೆ ಒಂದಿಲ್ಲೊಂದು ದಿನ ಬೀಳುವುದುದು ಗ್ಯಾರಂಟಿ.....!!!!

ಕಾಮೆಂಟ್‌ಗಳಿಲ್ಲ: