12 ಮಾರ್ಚ್ 2011

ಸುನಾಮಿ ಎಂದರೆ ಇವರು ನಡುಗುತ್ತಾರೆ

ಮತ್ತೆ ನೆನಪಾಯಿತು 2004 ಡಿಸೆಂಬರ್ 26.




ಅನೇಕ ಘಟನೆಗಳು ಓಡೋಡಿ ಬಂದವು. ಅಂದು ಸುನಾಮಿಯನ್ನು ಗೆದ್ದವರು ಯಾರಿದ್ದಾರೆ ಎಂದು ನೋಡಿದಾಗ ಅವರು ಸಿಕ್ಕಿದರು. ಮನೆಗೆ ಹೋದಾಗ ಅವರು ವಿವರಿಸಿದ್ದು ಹೀಗೆ. .

“ಅಲ್ಲಿ ನಾನು ಹೆಣಗಳ ರಾಶಿಯಲ್ಲಿ ಜೀವಚ್ಚವವಾಗಿ ಬಿದ್ದಿದ್ದೆ.ಯಾರೂ ಒಬ್ಬ ಪುಣ್ಯಾತ್ಮ ನನ್ನನ್ನು ಗಮನಿಸಿ ಬದುಕಿಸಿದ , ಅಬ್ಬಾ . . ಬದುಕೇ ಮುಗಿದು ಹೋಯಿತು ಅಂದುಕೊಂಡಿದ್ದ ನಾನೀಗ ಮತ್ತೆ ಬದುಕು ಕಟ್ಟಿಕೊಂಡಿದ್ದೇನೆ . .” ಇದು ಪುತ್ತೂರಿನ ಹಾರಾಡಿಯ ನಂಜಮ್ಮ ಸುನಾಮಿ ಬಗ್ಗೆ ಹೇಳುವ ಭಯ ಮಿಶ್ರಿತ ಮಾತು. ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಘೋರ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸುತ್ತಾ ನಂಜಮ್ಮಳ ಕಣ್ಣಂಚಿನಲ್ಲಿ ಈಗಲೂ ನೀರು ಹರಿಯುತ್ತದೆ.

ನಿನ್ನೆ ಉತ್ತರ ಜಪಾನ್ ಮತ್ತು ಆಸುಪಾಸಿನ ದೇಶಗಳು ಸುನಾಮಿ ಹಾಗೂ ಭೂಕಂಪದಿಂದ ತತ್ತರಿಸಿ ಅದೆಷ್ಟೋ ಜನರನ್ನು ಆಪೋಶನ ತೆಗೆದುಕೊಂಡಿದ್ದರೆ , ಅಂದು 26 ಡಿಸೆಂಬರ್ 2004 ಭಾನುವಾರ. ಬೆಂಗಳೂರಿನಂತಹ ನಗರದಲ್ಲಿ ಕೆಲ ಜನರೆಲ್ಲಾ ವೀಕೆಂಡ್ ಮಜಾದಲ್ಲಿದ್ದರೆ , ಇನ್ನೂ ಕೆಲವರು ನಗರ ಪ್ರದಕ್ಷಿಣೆ , ಪ್ರವಾಸಕ್ಕೆ ಹೋಗಿದ್ದರು , ಕ್ರಿಸ್‌ಮಸ್ ರಜಾವೂ ಇದ್ದರಿಂದ ಬೇರೆ ಬೇರೆ ಕಡೆ ಜನ ಪ್ರವಾಸ ಹೋಗಿದ್ದರು.ಆದರೆ ಅಂದು ಸಂಜೆಯ ಹೊತ್ತಿಗೆ ತಮಿಳುನಾಡು ಸೇರಿದಂತೆ ದೇಶದ ಕರಾವಳಿ ತೀರಕ್ಕೆ ಹೋದ ಜನರಿಗೆ ಅದೊಂದು ದುರ್ದಿನ.ಈ ಘಟನೆಯಿಂದ ಮಾನಸಿಕವಾಗಿ ನೊಂದವರು ಅದೆಷ್ಟೋ ಜನ. ಈ ಎಲ್ಲಾ ಘಟನೆಯನ್ನು ಕಂಡಾರೆ ಕಂಡು ಸ್ವತ: ನೋವು ಅನುಭವಿಸಿ ಮರುಜನ್ಮ ಪಡೆದ ಪುತ್ತೂರಿನ ಹಾರಾಡಿಯ ನಂಜಮ್ಮ ಇಂದಿಗೂ ಸುನಾಮಿ ಎಂಬ ಹೆಸರು ಕೇಳಿದೊಡನೆಯೇ ಎಲ್ಲಾ ಭಯಾನಕ ನೆನಪುಗಳನ್ನು ಹೀಗೆ ಬಿಚ್ಚಿಡುತ್ತಾರೆ. .

ಪುತ್ತೂರಿನ ಮೆಸ್ಕಾಂನಲ್ಲಿ ಗುಮಾಸ್ತೆಯಾಗಿರುವ ನಂಜಮ್ಮ ಅಂದು ತನ್ನ ಕುಟುಂಬದವರೊಂದಿಗೆ ತಮಿಳುನಾಡಿನ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದು ಎರಡೇ ಎರಡು ಹೆಜ್ಜೆ ಹಾಕಿದ್ದರು. ಅಷ್ಟರಲ್ಲಿ ಹಿಂದಿನಿಂದ ಏನೋ ಹೊಡೆದಂತಾಯಿತು. ಅಲ್ಲೇ ಕುಸಿದು ಬಿದ್ದು ಅದೆಷ್ಟೂ ದೂರ ನೀರಲ್ಲಿ ಹೋಗಿದ್ದಾರೆ. ಆಗ ಯಾರೋ ಪುಣ್ಯಾತ್ಮರು ಬಂದು ನಂಜಮ್ಮರನ್ನು ಎತ್ತಿ ಕೂರಿಸಿ ವಾಹನ ತರುವುದಾಗಿ ಹೋಗಿದ್ದಾರೆ.ಅಷ್ಟರಲ್ಲಿ ಎರಡನೇ ಬಾರಿ ನೀರಿನ ಅಲೆ ಬಂದು ನಂಜಮ್ಮ ಮತ್ತೆ ಒಂದಷ್ಟು ದೂರ ನೀರಲ್ಲಿ ಸಾಗಿ ಅದ್ಯಾವುದೋ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸೃತಿಯೂ ತಪ್ಪಿತ್ತು. ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ದೇಹಗಳು ಕಾಣುತ್ತಿವೆ , ಮಕ್ಕಳು , ವೃದ್ದರು ಹೀಗೆ ಅತ್ಯಂತ ವಿಕಾರವಾದ ದೇಹಗಳ ನಡುವೆ ಬಿದ್ದರುವ ನಂಜಮ್ಮಗೆ ಬದುಕೇ ಮುಗಿದುಹೋಯಿತು ಅಂತ ಅನ್ನಿಸಿತ್ತಂತೆ ಅತ್ತಿತ್ತ ಕಣ್ಣು ಹಾಯಿಸಿದರೆ ತನ್ನೊಂದಿಗೆ ಬಂದ ಯಾರನ್ನೂ ಕಾಣುತ್ತಿಲ್ಲ.ಏಕಾಂಗಿಯಾಗಿದ್ದರು ಆಗ. ಆದರೆ ಅಲ್ಲಿ ಮಿಸುಕಾಡುತ್ತಿರುವ ನಂಜಮ್ಮರನ್ನು ಯಾರೋ ಪುಣ್ಯಾತ್ಮರು ನೋಡಿದರು , ಹೀಗಾಗಿ ಮತ್ತೆ ಬದುಕುವ ಆಸೆಗೆ ಜೀವ ಸಿಕ್ಕಿತು.ಇವರನ್ನು ಆಸ್ಪತ್ರೆಗೆ ಸೇರಿಸಿದರಂತೆ.ಆಗಲೇ ನಂಜಮ್ಮ ದೇಹ ಜರ್ಝರಿತವಾಗಿತ್ತು , ದೇಹದಲ್ಲೆಲ್ಲಾ ಗಾಯಗಳಾಗಿತ್ತು ಆಸ್ಪತ್ರೆ ನಂಜಮ್ಮರನ್ನು ಸಾಗಿಸಿದಾ ಇಲ್ಲಾಗುವುದಿಲ್ಲ ಎಂದು ಹೇಳಿದ್ದಾರೆ.ಹೀಗೆ 3 ಆಸ್ಪತ್ರೆಗೆ ತೆರಳಿದ ಅವರಿಗೆ ಭಾಷಾ ಸಮಸ್ಯೆಯೂ ಕಾಡಿತು.ನಂತರ ಕನ್ನಡ ಬಲ್ಲವರನ್ನು ಕರೆತಂದು ನಂಜಮ್ಮರನ್ನು ಪುತ್ತೂರು ಕಡೆಗೆ ಕಳುಹಿಸಿದರು. ಅದ್ಯಾವುದೋ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು.ಆದರೆ ಹಣವಿಲ್ಲದ ಕಾರಣ ಅವರನ್ನು ಪುತ್ತೂರಿಗೆ ಕರೆತರಲು ಅಸಾಧ್ಯ ಎಂದು ಅವರ ಕಾರಿನ ಚಾಲಕರು ಹೇಳಿದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಅವರಿಗೆ ನೀಡಿ ಪುತ್ತೂರಿಗೆ ಬಿಡುವಂತೆ ಮನವಿ ಮಾಡಿದರು. ಆ ಚಿನ್ನದ ಬಳೆಯನ್ನು ಮಾರಾಟ ಮಾಡಿ ಪುತ್ತೂರಿಗೆ ಬಂದರು. ಆ ಬಳಿಕ ಪುತ್ತೂರಿನ ವೈದ್ಯರು ಚಿಕಿತ್ಸೆ ನೀಡಿ ಗುಣಮುಖವಾಗಿದ್ದಾರೆ. ಆದರೆ ದೇಹದ ಮೇಲಿನ ಗಾಯಗಳು ಇಂದೂ ಕಾಣುತ್ತಿವೆ. ಈ ಸಂದರ್ಭಲ್ಲಿ ಇವರಿಗೆ ಪರಿಹಾರ ನೀಡುತ್ತೇವೆ ಎಂದು ಬಂದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಅಂತಾರೆ ನಂಜಮ್ಮ.

ನಿನ್ನೆ ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ತೀವ್ರತೆ ಹಾಗೂ ಅಲ್ಲಿನ ಸಾವು ನೋವುಗಳನ್ನು ಕಂಡ ನಂಜಮ್ಮರಿಗೆ ಈ ಎಲ್ಲಾ ಘಟನೆಗಳನ್ನು ನೆನಪಿಸುವಂತೆ ಮಾಡಿತ್ತು. ಇದು ನಿಜಕ್ಕೂ ಒಂದು ಭಯಾನಕ ಸನ್ನಿವೇಶ ಎಂದು ನೆನಪಿಸಿಕೊಳ್ಳುತ್ತಾರೆ ನಂಜಮ್ಮ.

ಒಂದು ಸುನಾಮಿಯ ಹೊಡೆತಕ್ಕೆ ಸಿಕ್ಕಿ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ನಂಜಮ್ಮ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವೆಂಬ ಸುನಾಮಿಯನ್ನೂ ಗೆದ್ದಿದ್ದಾರೆ.ನಿನ್ನೆಯೂ ಸಂಭವಿಸಿದ ಘಟನೆಯಲ್ಲಿ ನಂಜಮ್ಮರಂತೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು ಗೆದ್ದುಬರಲಿ ಎಂದು ಆಶಿಸೋಣ.

01 ಮಾರ್ಚ್ 2011

ಇದೇನು ಹಗರಣವಾ ?

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಸಿಗುತ್ತಿತ್ತು.ಇದ್ಯಾಕೆ ಅಂತ ಯಾರಿಗೂ ಗೊತ್ತಿಲ್ಲ.ಇದರ ಬೆನ್ನಿಗೇ ಒಂದೊಂದು ಸಂಗತಿ ಬಿಚ್ಚತೊಡಗಿತು. ಸ್ವಲ್ಪ ಹುಡುಕಾಡಿದಾಗ ಸಿಕ್ಕಿದ್ದು ಹೀಗೆ . .


ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.

ಏನಿದು ?

ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್‌ಗಳು ನಡೆಯುತ್ತಾ ಇದೆ.




ಇತ್ತೀಚೆಗೆ ಕೃಷಿಕರೊಬ್ಬರು ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.

ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.

ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.