20 ಏಪ್ರಿಲ್ 2009

ಅಫಘಾತ ಮತ್ತು ಮಾನವೀಯತೆ. . .

ಇಂದು ಮನೆಯ ದಾರಿಯತ್ತ ಬರುತ್ತಿರಬೇಕಾದರೆ ಸಕತ್ತಲು ಆವರಿಸಿತ್ತು.ಒಂದೆಡೆ ವಾಹನಗಳು ಸಾಲು ನಿಂತಿದ್ದವು. ಅವುಗಳನ್ನು ದಾಟಿ ಮುಂದಕ್ಕೆ ಬಂದಾಗ ಅಲ್ಲೊಂದು ಬೈಕ್ ಮಗುಚಿ ಬಿದ್ದಿತ್ತು.. ಯುವಕನೊಬ್ಬ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ. ಆಚೀಚೆ ನೋಡಿದಾಗ ಅಲ್ಲಿ ಯಾರೊಬ್ಬರೂ ಸುಳಿದಾಡುವುದು ಕಂಡುಬಂದಿರಲಿಲ್ಲ.ಪಕ್ಕದಲ್ಲಿ ಇನ್ನೊಬ್ಬ ಗಾಯಗಳೊಂದಿಗೆ ಸುಮ್ಮನೆ ನಿಂತಿದ್ದ .ವಾಹನಗಳ ಸಾಲು ಹೆಚ್ಚಿತು. ಒಬ್ಬೊಬ್ಬರೇ ಬಂದಿಳಿದು ನೋಡಿದಾಗ ಒಬ್ಬ ಅಂದ ಇವನ ನನಗೆ ಗುರುತಿದೆ.. ತಕ್ಷಣ ಆ ಯುವಕನ ಮೇಲೆತ್ತುವ ಪ್ರಯತ್ನ ನಡೆಯಿತು.ಮುಖ ತುಂಬಾ ಗಾಯಗಳಾಗಿತ್ತು. ಮತ್ತೆ ಮತ್ತೆ ವಿಚಾರಿಸಿದಾಗ ಆತ ಅಮಲು ಸೇವಿಸಿ ವಾಹನ ಚಲಾಯಿಸುತ್ತಿದ್ದ ವಿಷಯ ತಿಳಿಯಿತು.. ಹಾಗಾಗಿ ಒಬೊಬ್ಬರೇ ಹೊರಟರು.ಇನ್ನೊಬ್ಬರು ವಾಹನ ಗೊತ್ತು ಪಡಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಹೋದರು. ನಿಜವಾಗೂ ಅವರು ಹೋಗಬೇಕಾದ ದಾರಿ ಅದಾಗಿರಲಿಲ್ಲ. ಕುಡಿತದ ಅಮಲಿನಲಿ ಅವರು ಈ ದಾರಿಯಾಗಿ ಬಂದಿದ್ದರು.

ಈ ಘಟನೆಯ ನಂತರ ದಾರಿಯಲ್ಲಿ ಬರುವಾಗ ನೆನಪಾದ ಒಂದು ಘಟನೆ ..

ಒಂದು ಕಡೆ ದಂಪತಿಗಳು ಕಾರ್ಯಕ್ರಮವೊಂದಕ್ಕೆ ಹೊರಟಿದ್ದರು. ಅವರ ವಾಹನ ಹೆದ್ದಾರಿ ತಲಪಿ ಅಲ್ಲಿಂದ ಮುಂದೆ ಸಾಗುತ್ತಿತ್ತು. ಈ ರಕ್ಕಸ ಲಾರಿಗಳಿಗೆ ಜೀವಗಳ ಬೆಲೆಗೊತ್ತಿಲ್ಲ ಅದರ ಚಾಲಕರೂ ಹಾಗೆ ಯಾವಾಗಲೂ ಕುಡಿಯುತ್ತಲೇ ವಾಹನ ಚಲಾಯಿಸುವುದು ಎನ್ನುವ ರೂಢಿಯೂ ಇದೆ.ಇಲ್ಲಿ ಅದೇ ಆಯಿತು. ವಾಹನಕ್ಕೆ ಲಾರಿ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಇಬ್ಬರಿಗೂ ಗಾಯವಾಯಿತು.. ಹೆಂಡತಿ ವಾಹನದ ಅಡಿಯಲ್ಲಿ ಸಿಲುಕಿ ಚೀರಾಡುತ್ತಿದ್ದಾಳೆ.. ಗಂಡ ತೀವ್ರ ಗಾಯಗೊಂಡು ದೂರದಲ್ಲಿ ಬಿದ್ದಿದ್ದಾನೆ.. ಹೆಂಡತಿಯನ್ನು ರಕ್ಷಿಸಲಾಗದೆ ತೊಳಲಾಡುತ್ತಿದ್ದಾನೆ.. ಸಹಾಯಕ್ಕೆ ಕರೆದರೆ ಯಾರೊಬ್ಬರೂ ಬರುತ್ತಿಲ್ಲ.ಕಣ್ಣೆದುರೇ ಹೆಂಡತಿ ಸತ್ತು ಹೋದಳು..

ಇನ್ನೊಂದು ಘಟನೆ..

ಅವರು ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ರಾತ್ರಿ ತೆರಳಿದ್ದರು. ಒಂದೆಡೆ ವಾಹನದ ಚಾಲಕ ತೂಕಡಿಸಿದ ಕ್ಷಣಾರ್ಧದಲ್ಲಿ ವಾಹನ ಮರಕ್ಕೆ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಒಂದಿಬ್ಬರಿಗೆ ತೀವ್ರ ಗಾಯವಾಯಿತು.ಅದು ರಾತ್ರಿ ವೇಳೆ ಬೇರೆ ಯಾವುದೇ ಒಂದು ವಾಹನ ನಿಲ್ಲಿಸಿಲ್ಲ. ವಾಹನದಲ್ಲಿದ್ದ ಸಣ್ಣ ಪುಟ್ಟ ಗಾಯಳುಗಳೂ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ನಿಲ್ಲಿಸಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಹೆಣಗಾಡಿದರು.ಯಾವುದೊಂದು ವಾಹನವೂ ನಿಲ್ಲಿಸಿಲ್ಲ. ಹಾಗಾಗಿ ಸಕಾಲ ಚಿಕಿತ್ಸೆ ಕೊಡಿಸಲಾಗದೆ ಇಬ್ಬರು ಕಣ್ಣಮುಂದೆಯೇ ಸತ್ತು ಹೋದರು..

ಇವೆರಡು ಅಪಘಾತದ ಸ್ಯಾಂಪಲ್‌ಗಳು. ವಾಹನದಲ್ಲಿ ವೇಗವಾಗಿ ಹೋಗುವಾಗ ನಮಗೆ ಆನಂದವೋ ಆನಂದ .. ಆದರೆ ಅಲ್ಲೇನಾದರೂ ಆಕಸ್ಮಿಕ ನಡೆದರೆ ನಮ್ಮನ್ನು ನೋಡುವ ಜನರೇ ಇಲ್ಲ.ಎಲ್ಲಾದರೂ ನಮ್ಮ ಪರಿಚಿತರಿದ್ದರೆ ಬದುಕುಳಿಯ ಬಲ್ಲುದೋ ಏನೋ.. ಹಾಗಾಗಿ ಒಂದು ಅಪಘಾತದಲ್ಲಿ ಗಾಯಗೊಂಡವರಿದ್ದರೆ ಅವರಿಗೆ ಮಾನವೀಯ ನೆಲೆಯಲ್ಲಿ ನಾವು ಸಹಾಯ ಮಾಡಬೇಕು.. ನಾಳಿನ ನಮ್ಮ ಚಿಂತೆಯಲ್ಲಿ.. ಅದಕ್ಕೂ ಮುನ್ನ ಅಪಘಾತವಾಗದಂತೆ ಎಚ್ಚರ ವಹಿಸುವುದು ಸೂಕ್ತ ಅಲ್ವಾ..

19 ಏಪ್ರಿಲ್ 2009

ಇದು ಬದುಕಿನ ಶಿಬಿರ. . .



ಯಾವತ್ತೂ ಭಾವನಾತ್ಮಕ ವಿಚಾರ ಬಂದಾಗ ಅದರಲ್ಲೂ ಮನಸ್ಸಿಗೆ ಸಂಬಂಧಿಸಿದ ವಿಚಾರಗಳು ಬಂದಾಗ ನಾನು ಸಂಪೂರ್ಣವಾಗಿ ಸಣ್ಣವನಾಗಿ ಬಿಡುತ್ತೇನೆ. ಆದರೆ ಇವತ್ತು ನಾನು ದಾಖಲಿಸುವ ವಿಚಾರದಲ್ಲಿ ಸಂಪೂರ್ಣವಾಗಿ ಸೋತು ಹೊಗಿದ್ದೆ ಮನಸ್ಸು ಮತ್ತೆ ಮತ್ತೆ ಅದೇ ವಿಚಾರವನ್ನು ನೆನಪಿಸುತ್ತಿದೆ... ನಾನೂ ಕೂಡಾ ಹಾಗಾಗಬೇಕು ಅಂತ ಹೇಳುತ್ತದೆ.. ಆದರೆ ಆ ಕಾಲ ಮಿಂಚಿದೆ ಎನ್ನುವ ಸತ್ಯವೂ ನನಗೆ ತಿಳಿದಿದೆ..

ಮಧ್ಯಾಹ್ನದ ಸಮಯ.... ಸುಳ್ಯದ ಕಡೆಗೆ ಹೋಗಿದ್ದವನು ರಂಗ ನಿರ್ದೇಶಕ ಜೀವನ್ ರಾಂ ನೇತೃತ್ವದಲ್ಲಿ ನಡೆಯುವ ಮಕ್ಕಳ ಶಿಬಿರ ಅಂದರೆ ಸಮ್ಮರ್ ಕ್ಯಾಂಪ್‌ಗೆ ಹೋಗಿದ್ದೆ. ಜೀವನ್ ಹಾಗೂ ಮಿತ್ರ ಗಂಗಾಧರ ಶಿಬಿರದ ಬಗ್ಗೆ ಒಂದು ವಾರದಿಂದ ಹೇಳುತ್ತಿದ್ದರು .. ಒಂದು ದಿನ ಬನ್ನಿ ಸ್ಟೋರಿಗಾಗಿ ಅಲ್ಲ.. ಹೀಗೇ ಸುಮ್ಮನೆ ಬನ್ನಿ ಅಂತ ಹೇಳಿದ್ದರು.. ಇತರ ಕೆಲಸಗಳ ಮಧ್ಯೆ ಶಿಬಿರಕ್ಕೆ ಹೋಗಲು ಆಗಿರಲಿಲ್ಲ. ಹಾಗಾಗಿ ಕೊನೆಯ ದಿನ ಶಿಬಿರಕ್ಕೆ ಹೋದಾಗ ಅಲ್ಲಿ ಮಕ್ಕಳೆಲ್ಲಾ ಹಾಡಿ ಕುಣಿಯುತ್ತಿದ್ದರು.. ಅವರನ್ನು ನೋಡಿದಾಗ ಇದೇನು ಅಂತ ಅನ್ನಿಸಿತ್ತು.. ಆದರೆ ಜೀವನ್‌ರ ರಂಗಮನೆಯೊಳಗೆ ಹೋದ ಬಳಿಕ ಅಲ್ಲಿ ಜೀವನ್‌ರೊಂದಿಗೆ ಮಕ್ಕಳು ಹೆಜ್ಜೆ ಹಾಕಲು ಆರಂಭಿಸಿದಾಗ ನಿಜಕ್ಕೂ ನನ್ನ ಮನಸ್ಸು ಪುಳಕಿತಗೊಂಡಿತು... ಯಾಕೆಂದರೆ ನಾನು ಹಲವು ಶಿಬಿರಗಳಿಗೆ ಹೋಗಿದ್ದೆ ಅಲ್ಲೆಲ್ಲಾ ಕಾಣದ ಸಂಗತಿಗಳು ಕಂಡಿದೆ .. ಮತ್ತೂ ಸ್ವಲ್ಪ ಹೊತ್ತು ಕಳೆದಾಗ ಮಕ್ಕಳ ಕ್ರಿಯಾಶೀಲತೆಯನ್ನು ನೋಡಿ ನನ್ನ ಮನಸ್ಸು ನಿಜಕ್ಕೂ ಸೋತಿತು.. ನನ್ನ ಕಲ್ಪನೆಗೂ ಮೀರಿದ ಸಂತೋಷವನ್ನು ಆ ಶಿಬಿರದಲ್ಲಿ ಕಂಡಿದ್ದೆವು... ಒಟ್ಟು ೧೦೦ ಕ್ಕೂ ಅಧಿಕ ಮಕ್ಕಳ ಕೇಕೆ .. ಹಾಡು.. ವಿವಿಧ ಮುಖವರ್ಣಿಕೆಗಳ ತಯಾರಿ.. ನಾಟಕ .. ಹೀಗೆ ಎಲ್ಲದರಲ್ಲೂ ಅವರು ಎತ್ತಿದ ಕೈ..

ಇಲ್ಲಿ ನಾನು ಗಮನಿಸಿದಂತೆ , ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆ.. ಹಾಗಾಗಿ ಅವರೊಳಗಿರುವ ಕಲ್ಪನೆಗೆ , ಚಿಂತನೆಗೆ ರೂಪ ಸಿಕ್ಕಿದೆ.. ಆ ಕಾರಣದಿಂದಾಗಿಯೇ ಮಕ್ಕಳು ಅಷ್ಟೊಂದು ಕ್ರಿಯಾಶೀಲರಾಗಲು ಕಾರಣ.. ಅಸೂಯೆಯಾಗಬೇಕು ಅಂತಹ ಅಧ್ಘುತವಾದ ಪ್ರತಿಭೆ ಆ ಮಕ್ಕಳಲ್ಲಿದೆ.. ಯಾರನ್ನೇ ಅಲ್ಲಿ ಕೇಳಿದರೆ.. ಹೇಗೆ ಬೇಕಾದರೂ ಮಾತನಾಡಬಲ್ಲರು.. ವೇದಿಕೆಯಲ್ಲಿ ಪಟ ಪಟನೆ ಮಾತನಾಡುತ್ತಾರೆ.. ನಿಜಕ್ಕೂ ನಮಗೆ ನಾಚಿಕೆಯಾಗಬೇಕು.. ಇಂದಿಗೂ ವೇದಿಕೆಯಲ್ಲಿ ಮಾತನಾಡುವಾಗ ಹಿಂದೆ ಮುಂದೆ ನೋಡಬೇಕಾಗುತ್ತದೆ.. ಆದರೆ ಆ ಮಕ್ಕಳು..!!
ಜೀವನ್ ಅಲ್ಲೊಂದು ಸ್ಲೋಗನ್ ಹಾಕಿದ್ದರು “ ಯಾವ ಮಗು ಕೂಡಾ ದಡ್ಡನಲ್ಲ.. ಎಲ್ಲಾ ಮಗುವಿನಲ್ಲೂ ಪ್ರತಿಭೆಯಿದೆ..” ಬಹುಶ: ಅಲ್ಲಿ ಸೇರಿದ್ದ ಎಲ್ಲಾ ಮಕ್ಕಳ ಮನಸ್ಸಿಗೆ ಈ ಮಾತು ಚೈತನ್ಯ ತುಂಬಿರಬೇಕು... ಇಲ್ಲಿ ಜೀವನ್ ಉಚಿತವಾಗಿ ಈ ಶಿಬಿರವನ್ನು ಮಾಡುತ್ತಿಲ್ಲ . ಏಕೆಂದರೆ ಶಿಬಿರ ಎಂದಾಕ್ಷಣ ಖರ್ಚು ಇದ್ದೇ ಇದೆ.ಹಾಗಾಗಿ ಹೊರೆಯಾಗದಂತೆ ಶುಲ್ಕವನ್ನೂ ಇರಿಸಿದ್ದಾರೆ.ಇಲ್ಲಿ ಹಣವಲ್ಲ ಆ ಮಕ್ಕಳ ಮನಸ್ಸಿನೊಳಗೊಂದು ಪರಿವರ್ತನೆ, ಆತ್ಮವಿಶ್ವಾಸ ತುಂಬುತ್ತಲ್ಲಾ ಅದಕ್ಕೆ ಏನು ಬೆಲೆ ಕಟ್ಟೋಣ ಹೇಳಿ..? ಹಾಗಾಗಿ ಶುಲ್ಕದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.. ಅದರ ಔಟ್‌ಪುಟ್ ಬಗ್ಗೆ ಮಾತ್ರಾ ಆಲೋಚಿಸಬೇಕಾಗಿದೆ.

ಯಾವತ್ತೂ ನನಗೆ ಮಕ್ಳಳ ಮನಸ್ಸು ಇಷ್ಟ. ಅಂತಹ ಮನಸ್ಸು ನಮಗೇಕೆ ಇಲ್ಲ.. ಎನ್ನುವ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಲೇ ಇದೆ. ಆ ಮುಗ್ದ ಮಕ್ಕಳ ಮಾತುಗಳು.. ಅವರ ಪ್ರಶ್ನೆಗಳು.. ಮಾತನಾಡಿದ ತಕ್ಷಣದಿಂದ ನಾವು “ ಮಾಮ” ನಾಗುವುದು.. ಛೇ..!! ಅದನ್ನೆಲ್ಲಾ ಹೇಗೆ ವಿವರಿಸುವುದು ..?. ನಾನು ನಿಜಕ್ಕೂ ತಡಮಾಡಿದ್ದೆ ಯಾಕೆಂದರೆ ಒಂದು ದಿನವಿಡೀ ಆ ಮಕ್ಕಳ ಜೊತೆ ಕಳೆಯಬೇಕಿತ್ತು.. ಯಾಕೆಂದರೆ ಅವರಿಂದ ಕಲಿಯುವುದು ಸಾಕಷ್ಠಿದೆ.. ಆ ಮಕ್ಕಳ ಮುಂದೆ ನಾವೇನೂ ಅಲ್ಲ... ನನ್ನ ಮನಸ್ಸು ಕೂಡಾ ಮಕ್ಕಳ ಮನಸ್ಸಿನಂತೆ ಒಂದು ದಿನ ಇರುತ್ತಿತ್ತು.. ಮುಂದಿನ ಬಾರಿ ಜೀವನ್‌ಗೆ ನೆನಪಿಸಬೇಕು.. ನಾನೂ ಒಬ್ಬ ಶಿಬಿರಾರ್ಥಿ...!!!....

ಕಲಿಯುವ ಹುಡುಗ.. ಮನಸ್ಸು ಬದಲಾಗಲಿ..

18 ಏಪ್ರಿಲ್ 2009

ಇದು ಶಕ್ತಿ..!!

ಒಂದು ಚಾಕೋಲೇಟ್ ಇಬ್ಬರ ನಡುವೆ ಫ್ರೆಂಡ್‌ಶಿಪ್‌ಗೂ ಕಾರಣವಾಗಬಲ್ಲುದು.. ದ್ವೇಷಕ್ಕೂ ಕಾರಣವಾಗಬಲ್ಲುದು.. ಇದು ಒಂದು ಸೂಕ್ಷ್ಮ ವಿಷಯ ಅಂತ ಅನಿಸಬಹುದು.ಆದರೆ ಇದರ ಒಳನೋಟಗಳು ಅಧ್ಘುತವಾಗಿದೆ.... ಈ ವಿಷಯದ ಒಳಹೋದರೆ ಎಂತಹಾ ಲೋಕವಿದೆ... ಅಂತ ಸುಮ್ಮನೆ ಯೋಚಿಸುತ್ತಾ ನೋಡಿ.. ಅಬ್ಬಾ....ಆ ಲೋಕ ಎಂತಹ ಸುಂದರ .... ಅದು ಎರಡು ಜೀವಗಳನ್ನು ಹೇಗೆ ಹಿಡಿದಿಡುತ್ತದೆ....

ಒಂದು ಮನೆಗೆ ಸುಮ್ಮನೆ ಬೇಟಿ.. ಅಲ್ಲಿ ಪುಟ್ಟ ಮಗು.. ತುಂಬಾ ಚೂಟಿ.. ಆದರೆ ಮಗು ಕರೆದರೆ ಹತ್ತಿರ ಬರುವುದಿಲ್ಲ.. ದೂgದಲ್ಲೇ ನಿಂತು ಮಾತನಾಡುತ್ತೆ.. ಆಗ ಒಂದು ಚಾಕೋಲೇಟ್ ಕಿಸೆಯಿಂದ ತೆಗೆಯಿರಿ.. .. ಮಗು ತಾನಾಗೇ ಬರುತ್ತದೆ .. ಹತ್ತಿರವಾಗುತ್ತದೆ.. ನಾಳೆಯೂ ನೆನಪಿಸಿಕೊಳ್ಳುತ್ತದೆ ಒಂದು ಬಾಂದವ್ಯ ಬೆಸೆಯುತ್ತದೆ.. ಇದಕ್ಕೆ ಕಾರಣವಾದ್ದು ಒಂದು ಚಾಕೋಲೇಟ್ ಮಾತ್ರಾ.. ಹಾಗೆಂದು ಇದು ಆಮಿಷವಲ್ಲ.. ಪ್ರೀತಿಯ ದ್ಯೋತಕ ಅಷ್ಟೇ..

ಬೇಡ ಅದಕ್ಕಿಂತ ಆಚೆ ಬನ್ನಿ .. ನಾನಿಂದು ಮಿತ್ರನ ಮನೆಗೆ ಬರುತ್ತೇನೆ ಅದೂ ಮಧ್ಯಾಹ್ನ ಊಟಕ್ಕೆ ನಿಮ್ಮಲ್ಲಿಗೆ ಅಂತ ಹೇಳಿ ನೋಡಿ.. ಕೆಲಸದ ನಿಮಿತ್ತ ತಡವಾಗಿರುತ್ತದೆ. ಆದರೆ ಆ ಮನೆಯ ಮಂದಿಯೆಲ್ಲಾ ಕಾದುಕುಳಿತಿರುತ್ತಾರೆ. ಇಷ್ಟರು ಬಂದ ಬಳಿಕವೇ ಜೊತೆಯಾಗಿ ಊಟ.. ಕಾಫಿ.. ತಿಂಡಿ.. ಹಾಗಾದ್ರೆ ಇದಕ್ಕೆ ಕಾರಣ ಏನು..? ಸ್ನೆಹವಲ್ಲವೇ..? ಆ ಒಂದು ಊಟಕ್ಕೆ ಏನೊಂದು ಶಕ್ತಿ. ಉದರಕ್ಕೆ ಬೇಕಾಗಿರುವುದು ಒಂದು ಹಿಡಿ ಅನ್ನ.ಆದರೆ ಅದಕ್ಕಾಗಿ ಗಂಟೆಗಟ್ಟಲೆ ಮಿತ್ರನ ಬರುವಿಕೆಗೆ ಆತನ ಜೊತೆ ಊಟ ಮಾಡವುದಕ್ಕಾಗಿ ಕಾಯಲು ಸಿದ್ದರಿರುತ್ತವೆ.... ಅಂತಹ ಕಾಯಿಸುವ ಮತ್ತು ಪ್ರೀತಿಸುವ ಶಕ್ತಿಯೊಂದಿದ್ದರೆ ಅದು ಊಟಕ್ಕೆ ಮಾತ್ರಾ..

ಬೇಡ ಅದಕ್ಕಿಂತಲೂ ಆಚೆ ಬನ್ನಿ ಮಗನಿಗಾಗಿ ಕಾಯುವ ಅಮ್ಮ... ಪ್ರಿಯತಮನಿಗಾಗಿ ಕಾಯುವ ಪ್ರಿಯತಮೆ.... ಹುಡುಗಿಗಾಗಿ ಕಾಯುವ ಹುಡುಗ..... ಗಂಡನಿಗಾಗಿ ಕಾಯುವ ಹೆಂಡತಿ... ಹೀಗೆ ಕಾಯುವವರ ಸಂಖ್ಯೆ ಇದ್ದೇ ಇರುತ್ತದೆ. ಗಂಡ ಉದ್ಯೋಗಿ..ಹೆಂಡತಿ ಹೋ ಮಿನಿಷ್ಟ್ರು ಅಂತಾದರೆ .. ಅವರ ಊಟ , ಕಾಫಿ ಜೊತೆಯಲ್ಲೇ ಇರುತ್ತೆ ಬೇಕಾದ್ರೆ ನೋಡಿ.. ಗಂಡ ತುಸು ತಡವಾದರೂ ಹೆಂಡತಿ ಕಾಯುತ್ತಾಳೆ.. ಈಗ.. ಮತ್ತೆ .. ಅಂತ ದಾರಿ ನೋಡಿ ಕೊನೆಗೆ ಎಲ್ಲಿದ್ದೀರಿ ಅಂತ ಕೇಳೇ ಕೇಳುತ್ತಾಳೆ..ಅದು ಬಾಂಧವ್ಯ..

ನನ್ನ ಪರಿಚಯದವರೊಬ್ಬರು ಎಷ್ಡೇ ಗಮ್ಮತ್ತಿನ ಊಟವಿರಲಿ ಅವರು ಊಟ ಮಾಡುವುದು ಮಾತ್ರಾ ಮನೆಯಲ್ಲಿ ಕಾರಣ ಕೇಳಿದರೆ .. ಅಲ್ಲಿ ಹೆಂಡತಿ ಕಾಯುತ್ತಿರುತ್ತಾಳೆ ಅಂತಾರೆ.. ಇದೂರೀ ಊಟದ .. ಅನ್ನದ ಮಹಿಮೆ.. ಆ ಅನ್ನಕ್ಕೆ ಒಂದುಗೂಡಿಸುವ .. ಕಾಯಿಸುವ ಶಕ್ತಿಯಿದೆ..ಹಾಗಾಗಿ ಆ ಗೆಳೆತನ.. .. ಬಾಂಧವ್ಯವೆಂಬುದು ಕೇವಲ ಮಾತಿನಲ್ಲಿ ಅಲ್ಲ ಅದು ಇಂತಹ ಅವ್ಯಕ್ತ ಭಾವನೆಗಳಲ್ಲೂ ಇರುತ್ತದೆ....

16 ಏಪ್ರಿಲ್ 2009

ಸುಳ್ಯದಿಂದ ಕನ್ಯಾಕುಮಾರಿವರೆಗೆ...



ಅನೇಕ ದಿನಗಳ ಬಳಿಕ ನೆನಪಾಯಿತು.....

ಮೊನ್ನೆ ಇದ್ದಕ್ಕಿದ್ದಂತೆ ನಾನು ಮತ್ತು ನನ್ನ ಮಿತ್ರರ ತಂಡ ಕನ್ಯಾಕುಮಾರಿಗೆ ತೆರಳಿತ್ತು... ಕಾರಣ ಏನಿಲ್ಲಾ ಸುಮ್ಮನೆ ಟ್ರಿಪ್... ನಾನು ಮಿತ್ರರಿಗೆ ಮೊದಲೇ ಹೇಳಿದ್ದೆ ಬಿಡುವಿಲ್ಲ ಅಂತ... ತುರ್ತು ಕೆಲಸದ ಬೇರೆ... ಆದರೂ ಮಿತ್ರರು ರೈಲು ಟಿಕೆಟ್ ಮಾಡಿದ್ದರು... ಹಾಗಾಗಿ ನನಗೆ ಮಿತ್ರರ ನಂಟನ್ನು ಬಿಡಲಾಗಲಿಲ್ಲ... ಸರಿ ಸಂಜೆ 6.30ಕ್ಕೆ ಮಂಗಳೂರಿನಿಂದ ತಿರುವನಂತಪುರಂಗೆ ಹೋಗುವ "ಮಾವೇಲಿ ಎಕ್ಸ್‌ಪ್ರೆಸ್" ರೈಲಿಗೆ ಕಾಸರಗೋಡಿನಲ್ಲಿ ನಾವು 15 ಜನ ಮಿತ್ರರು ಜೊತೆಯಾದೆವು.

ಮುಂಜಾನೆ ತಿರುವನಂತಪುರಂ ಇಳಿದ ನಾವು ಅಲ್ಲೇ ಇದ್ದ ಪೇ ಬಾತ್ ರೂಂನೊಳಗೆ ಹೊಕ್ಕು ಫ್ರಶ್ ಆಗಿ ಗೆಳೆಯನೊಬ್ಬನ ಮೂಲಕ ವಾಹನವೊಂದನ್ನು ಗೊತ್ತು ಮಾಡಿ ಮುಂದಕ್ಕೆ ಹೋದದ್ದು ತಿರುವನಂತಪುರದ ಪ್ರಸಿದ್ದ ದೇವಸ್ಥಾನ ಪದ್ಮಣಾಭನ ಗುಡಿಗೆ.ನಂತರ ಅಲ್ಲೇ ಇರುವ ರಾಜ ರಾಮವರ್ಮನ ಪ್ಯಾಲೇಸ್‌ಗೆ. ಆಗಲೇ ಸೂರ್ಯ ನೆತ್ತಿಗೇರುವ ಹೊತ್ತು ಸನ್ನಿಹಿತವಾಗಿತ್ತು.ನಡೆ ಮುಂದಕ್ಕೆ.. ಎಂದು ಹೊರಟದ್ದು ಭಗವತೀ ದೇವಸ್ಥಾನಕ್ಕೆ... ಇದು ಕೇರಳದ ಮಹಿಳೆಯರ ಶಬರಿಮಲೆ ಎಂಬ ಪ್ರಸಿದ್ದಿಗೆ ಪಾತ್ರವಾಗಿದೆ. ಈ ದೇಗುಲವ ನೋಡಿದಾಗಲೇ ಸೂರ್ಯ ನೆತ್ತಿಗೇರಿದ್ದ... ಇಲ್ಲಿ ಚಿಕ್ಕ ಮಕ್ಕಳು ಅದು ಇದು ಅಂತ ಮಾರಾಟ ಮಾಡಿಕೊಂಡು ಬರುತ್ತಿದ್ದರು ಸಾರ್.. ಇದು ಎಡ್ಕಿ.. ಅದು ಎಡ್ಕಿ.. ಅಂತ ಮಲೆಯಾಳದಲ್ಲಿ ಹೇಳುತ್ತಾ ನಮ್ಮನ್ನು ಹಿಂಬಾಲಿಸುತ್ತಿದ್ದರೆ ನಾವು ಫೋಟೋ ತೆಗೆಯಲು ಮುಂದಾದಾಗ ಎಂದೆ ಸಾರ್ ಅಂತ ಮುಖ ಮುಚ್ಚಿಕೊಳ್ಳುತ್ತಿದ್ದರು ಈ ಬಾಲಕ/ಬಾಲಕಿಯರು...

ಸರಿ ನಮ್ಮ ತಂಡ ಮುಂದೆ ಸಾಗಿತು.... ನಂತರ ನೇರವಾಗಿ ಸಾಗಿದ್ದೇ ಕನ್ಯಾಕುಮಾರಿಯ ಕಡೆಗೆ... ಅಲ್ಲಿ ತಲಪುವಾಗ ಸಂಜೆಯಾಗಿತ್ತು..ಅದಾಗಲೇ ಸೂರ್ಯ ಸಮುದ್ರದಲ್ಲಿ ಲೀನವಾಗುವ ಹೊತ್ತು ಸನ್ನಿಹಿತವಾಗಿತ್ತು...ಅಬ್ಬಾ ಏನು ಆನಂದ.... ಅತ್ತ ಕಡೆ ಅರಬ್ಬೀ ಸಮುದ್ರ... ಇತ್ತ ಬಂಗಾಳಕೊಲ್ಲಿ.. ಅದೋ ಅಲ್ಲಿ ಹಿಂದೂಮಹಾಸಾಗರ... ಈ ಎಲ್ಲದರ ನಡುವೆ ಲೀನವಾಗುತ್ತಿರುವ ನೇಸರ... ಏನು ಆನಂದ.... .. ಅಬ್ಬಾ ದಿನ ಮುಗಿಯಿತೇ ಎನ್ನುವ ಸಂದೇಹ...!!

ಮುಂಜಾನೆ 5 ಗಂಟೆಯ ಹೊತ್ತು ಪಕ್ಕದ ಕೊಣೆಯಿಂದ ಗೆಳೆಯರು ಬಂದು ಬಾಗಿಲು ಬಡಿದು ಎಬ್ಬಸಿದರು ಬನ್ರೀ ಸನ್‌ರೈಸ್ ನೋಡೋಣ.. ಆದ್ರೆ ನಮ್ಮ ಕೋಣೆಯಲ್ಲಿದ್ದವರೆಲ್ಲಾ "ಸೂರ್ಯ ವಂಶ"ದವರಾದ್ದರಿಂದ ಆಗ ಸೂರ್ಯ ಉದಯವಾಗಿಲ್ಲದ ಕಾರಣ ಮಿತ್ರರಿಗೆ ಅರಿವಾಯಿತು...ಅವರು ಮುಂದೆ ಹೋದರು... ಸಂಜೆ ಸಮುದ್ರದಲ್ಲಿ ಲೀನವಾಗಿದ್ದ ನೇಸರನ ಉದಯದ ಸವಿಯನ್ನುಂಡರು... ಅದಾದ ಬಳಿಕ ನಾವು ಹೊರಟದ್ದು ದೇಶದ ನಿಜವಾದ ನಾಯಕ ಯುವಕರ ಸ್ಫೂರ್ತಿ "ವಿವೇಕಾನಂದ"ರ ಸ್ಮಾರಕಕ್ಕೆ. ಅಲ್ಲಿಗೆ ತೆರಳಲು ಬೋಟ್ ಮೂಲಕ ಪಯಣಿಸಬೇಕು.. ಈ ಅನುಭವ ಅವಿಸ್ಮರಣೀಯ.. ಅಬ್ಬಾ ..!! ಸ್ಮಾರಕದ ಬಳಿ ಬೋಟ್‌ನಿಂದ ಇಳಿದಾಗಲೇ ಒಂದು ರೋಮಾಂಚನ.. ಅದರೊಳಗೆ ನಡೆಯುತ್ತಾ ಸಾಗುವಾಗ ಏನೋ ಒಂದು ಅವ್ಯಕ್ತವಾದ ಸಂತಸ... ಹಾಗೇ ನಡೆದಾಡುತ್ತಾ ಅಲ್ಲಿರುವ ಧ್ಯಾನ ಮಂದಿರದೊಳಗೆ ಕುಳಿತು ಒಂದು ಕ್ಷಣ ಧ್ಯಾನಿಸಿದರೆ ಅಲ್ಲಿಂದ ಹೊರಡಲು ಮನಸ್ಸೇ ಬರುವುದಿಲ್ಲ.... ಆದರೆ ಸಮಯದ ಕೊರತೆಯಿದೆ... ಅಲ್ಲಿಂದ ನೆನಪಿನ ಬುತ್ತಿಯನ್ನು ಕಟ್ಟಿಕೊಂಡು ಮುಂದೆ ಬಂದದ್ದು ಸುಚೀಂದ್ರ ದೇವಸ್ಥಾನಕ್ಕೆ ಅದು ತಿರುವನಂತಪುರಂನ ಸನಿಹದಲ್ಲೇ ಇದೆ. ಈ ನಡುವೆ ದಣಿವಾರಿಸಲು ಕುಡಿಯುವ ಎಳನೀರು.. ನೀರು... ಕಾಫಿ, ... ಇತ್ಯಾದಿಗಳಿಗೆ ಲೆಕ್ಕವೇ ಇಲ್ಲ.. ಅಂತೂ ನಾವು ತಿರುವಂತಪುರಂಗೆ ತಲಪಿದೆವು.. ಅಲ್ಲಿಂದ ಮುಂದೆ ಹೋದದ್ದು ಕೋವಳಂ ಬೀಚ್‌ಗೆ .. ಬೀಚ್ ಸನಿಹಕ್ಕೆ ಹೋದಾಗಲೇ ಅಲ್ಲಿ ವಿದೇಶಿಯರೂ ಸುತ್ತಾಡುವುದು ಕಂಡಿತು.. ಇನ್ನು ಮುಂದೆ ವಿವರಿಸುವ ಅಗತ್ಯವಿಲ್ಲ ಎಂದು ಅಂದುಕೊಂಡಿದ್ದೇನೆ.. ನಮ್ಮಂತ ಪಡ್ಡೇ ಹುಡುಗರಿಗೆ ಮಜಾವೇ ಮಜ..!!..ಹಾಗೆ ಅಲ್ಲೆಲ್ಲಾ ಸುತ್ತಾಡಿದ ನಾವು ಊಟ ಮುಗಿಸಿ ಮತ್ತೆ "ಮಾವೇಲಿ ರೈಲು " ಹತ್ತಿದೆವು.. ಹೊರಡುವ ವೇಳೆ ತಿರುವನಂತಪುರಂನಲ್ಲಿ ಮಳೆರಾಯನ ಧೋ.. ಎಂದು ಸುರಿಯುತ್ತಿದ್ದ .. ದೂರದಲ್ಲಿದ್ದ ಸಿಡಿಲು ಹತ್ತಿರದಲ್ಲೇ ಕಾಣುತ್ತಿತ್ತು..... ರೈಲು.. ಸದ್ದು ಕೇಳುತ್ತಲಿತ್ತು.. ಒಂದು ಕ್ಷಣ ಗೆಳೆಯರೆಲ್ಲಾ ಒಂದಾಗಿ ಕುಳಿತು ನೆನಪುಗಳನ್ನು ಮರುಕಳಿಸಿಕೊಂಡೆವು.. ಹಾಗೇ ರೈಲು ಮುಂದೆ ಸಾಗುತ್ತಿತ್ತು.. ಒಬ್ಬೊಬ್ಬರೇ ಕಂಪಾರ್ಟ್ ಮೆಂಟ್ ಏರಿದರು.. ಮರುದಿನ ಬೆಳಗ್ಗೆ ಕಾಸರಗೋಡಿನಲಿ ಮತ್ತೆ ಬೇರೆ ಬೇರೆಯಾದ ಗೆಳೆಯರಿಗೆಲ್ಲಾ ಇಂದು ಅದೆಲ್ಲವೂ ನೆನಪು.. ಸವಿ ನೆನಪು.. ಮತ್ತೆ ಮುಂದಿನ ವರ್ಷ ಒಂದಾಗುವ ಹಂಬಲ...




ಇದೇ ಅಲ್ಲವೇ , ಗೆಳೆತನವೆಂಬ ಹೊಳೆಯಲ್ಲಿ ಪಯಣ...ಅದರೊಳಗಿದ್ದರೆ ಈ ಹನಿಯೂ ಕಡಲು ಸೇರಬಲ್ಲುದು ಇಲ್ಲದಿದ್ದಲ್ಲಿ ಆ ಹನಿ ಭುವಿಯೊಳಗೆ ಲೀನವಾಗಬಲ್ಲುದಲ್ಲವೇ...

ಇವಿಷ್ಟು 2 ದಿನದ ವಿಹಾರದ ನೆನಪುಗಳಾದರೆ ಇನ್ನೊಂದು ವಿಚಾರದ ಬಗ್ಗೆ ನನಗೆ ಆಗಾಗ ಕಾಡುತ್ತಲೇ ಇದೆ.. ಅದನ್ನು ನಾನು ಇಲ್ಲಿ ದಾಖಲಿಸಿಡಲೇ ಬೇಕು.. ಯಾಕೆಂದರೆ ನನ್ನನ್ನು ಹಲವು ಮಂದಿ ಆ ವಿಚಾರದಲ್ಲಿ ಪ್ರಶ್ನಿಸಿದ್ದರು.. ಅದಕ್ಕೆ ಕಾರಣ ಹೇಳಿದ್ದೆ..

ಯಾವತ್ತೂ ಒಂದು ವಿಷಯದ ಬಗ್ಗೆ .. "ಒಂದು ವಿಚಾರ"ದ ಬಗ್ಗೆ.... ಒಬ್ಬ ವ್ಯಕ್ತಿಯ ಬಗ್ಗೆ ನನಗೆ.. ನನಗೆ ಪೂರ್ವಾಗ್ರಹವಿಲ್ಲ.. ಹಾಗೆ ಇಟ್ಟುಕೊಂಡೇ ಬದುಕುವುದೂ ಇಲ್ಲ. ಇದನ್ನು ಹೇಳಲು....ಇಲ್ಲಿ ದಾಖಲಿಸಲು ಕಾರಣವಿದೆ.. ಇತ್ತೀಚೆಗೆ ನಾನು ಒಂದು ವಿಚಾರದ ಬಗ್ಗೆ ಮಾತನಾಡಿದ್ದೆ ಅದು ಸತ್ಯದ ಸಂಗತಿ.. ಮುಜುಗರದ ಸಂಗತಿ.. ಯಾಕೆಂದರೆ ಇಡೀ ಸಮಾಜ ಆ ವಿಚಾರವನ್ನು ನೋಡುತ್ತಿತ್ತು .. ಕೇಳುತ್ತಿತ್ತು.. ಹಾಗಾಗಿ ಆ ವಿಚಾರದ ಬಗ್ಗೆ ನನ್ನ ಮಿತ್ರ ಮಾತೊಂದನ್ನು ಹೇಳಿದ್ದ .. ನಾನು ಅದಕ್ಕೆ ಸಾಥ್ ನೀಡಿದ್ದೆ.... ಆ ಬಗ್ಗೆ ಭಾರೀ ಚರ್ಚೆ ನಡೆದಿತ್ತು.. ಆದರೆ ಆ ಸತ್ಯದ ವಿಚಾರವು ಅನೇಕರಿಗೆ ಕಹಿಯಾಗಿತ್ತು.. ಆದರೆ ನಾನು ಆ ವಿಚಾರದಲ್ಲಿ ಸ್ಫಷ್ಠವಾಗಿದ್ದೇನೆ.. ಅದು "ಆ " ವಿಚಾರಕ್ಕೆ ಮಾತ್ರವಲ್ಲ ಸತ್ಯದ ಎಲ್ಲಾ ವಿಚಾರದಲ್ಲೂ ನನ್ನ ನಿರ್ಧಾರ ಯಾವಾಗಲೂ ಅಚಲ.. ಯಾಕೆಂದರೆ ನಾನು ಸತ್ಯಕ್ಕೆ ಹತ್ತಿರವಾಗೇ ಇರಲು ಹೆಚ್ಚು ಇಚ್ಚಿಸುತ್ತೇನೆ....