27 ಮಾರ್ಚ್ 2010

ಇನ್ನು ಮುಕ್ತ . . ಮುಕ್ತ . . !!





ಸೆಕ್ಸ್ ಎನ್ನುವುದು ವ್ಯಕ್ತಿಯ ಇಚ್ಚೆಗೆ ಬಿಟ್ಟ ವಿಚಾರ.ಅದನ್ನು ಇನ್ನೊಬ್ಬ ಹೇರಿದರೆ ಅದು ಅತ್ಯಾಚಾರ.ಅದು ಮುಕ್ತವಾದರೆ ಸಹಜಕ್ರಿಯೆ.ಇಂತಹ ಸೆಕ್ಸ್ ಬಗ್ಗೆ ಆಗೊಮ್ಮೆ ಈಗೊಮ್ಮೆ ಚರ್ಚೆಯಾಗುತ್ತದೆ.ಅದೆಲ್ಲವನ್ನೂ ಟೀನೇಜ್ ಗಂಬೀರವಾಗಿ ಕೇಳಿಸಿಕೊಳ್ಳುತ್ತದೆ.ಈ ವಿಚಾರಗಳಿಗೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಒಳಗೊಳಗೇ ಮಾತನಾಡಿಕೊಳ್ಳುತ್ತದೆ.ಹೊರಗೆ ಮಾತನಾಡುವುದದಕ್ಕಾಗದೇ ಸಮಾಧಾನದ ಮಾತುಗಳಿಗೆ ಹೃದಯ ತೆರೆದಿರುತ್ತದೆ.ಈಗಲೂ ಅಂತಹದ್ದೇ ಚರ್ಚೆಯೊಂದು ಎದ್ದಿದೆ.ವಿವಾಹಪೂರ್ವ ಲೈಂಗಿಕತೆ ಅಪರಾಧವಲ್ಲ ಎಂಬ .. ಸಂಗತಿಯ ಬಗ್ಗೆ..

ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ . . . ಹೀಗೆಂಬ ತೀರ್ಪೊಂದು ಸುಪ್ರೀಂಕೋರ್ಟ್‌ನಿಂದ ಹೊರಬರುತ್ತಿದ್ದಂತೆಯೇ ಸಂಪ್ರದಾಯಸ್ಥ ಸಮಾಜದಲ್ಲಿ ತೀವ್ರ ಸಂಚಲನ ಮೂಡಿಸಿದೆ.ಇದೊಂದು ತಪ್ಪು ದಾರಿಗೆ ಕಾರಣವಾಗಲಿದೆ ಎಂಬ ವ್ಯಾಖ್ಯಾನ ಈಗ ಎಲ್ಲೆಡೆ ಕೇಳಿಬರುತ್ತಿದೆ.ಯಾವ ಹೆತ್ತವರು ತಾನೆ ಭಾರತದಲ್ಲಿ ತನ್ನ ಮಗ-ಮಗಳು ಮುಕ್ತ ಸೆಕ್ಸ್‌ನಲ್ಲಿ ಭಾಗಿಯಾಗಲಿ ಅಂತ ಆಶಿಸಬಹುದು ಹೇಳಿ.ಸೆಕ್ಸ್ ಎನ್ನುವುದು ಮೆಜೋರಿಟಿಗೆ ಬಂದ ಮನುಷ್ಯನ ಆಯ್ಕೆಯಾದರೂ ಕೂಡಾ ಹೆತ್ತವರಿಗೆ ಅದೊಂದು ಮುಜುಗರದ ಸಂಗತಿ.ಹಾಗಾಗಿ ಈ ಸಂಗತಿ ಮಾತನಾಡುವುದೇ ಒಂದು ಅಪಚಾರವಾಗುವ ಈ ಕಾಲದಲ್ಲಿ ವಿವಾಹಪೂರ್ವ ಸೆಕ್ಸ್ ತಪ್ಪಲ್ಲ ಎಂಬುದು ಮನೆಮಂದಿಯ ಒಳ ಆತಂಕ್ಕೆ ಕಾರಣವಾಗಿದೆ.

ನೀವು ಒಪ್ತಿರೋ ಬಿಡ್ತಿರೋ ಗೊತ್ತಿಲ್ಲ.ಕಾಲೇಜು ವಿದ್ಯಾರ್ಥಿಗಳಿಬ್ಬರು ದಿನಪತ್ರಿಕೆ ನೋಡಿ ಇನ್ನೇನು ಪರವಾಗಿಲ್ಲ ಯಾವುದೇ ಕಾರಲ್ಲಿ ಎಲ್ಲಿಗೂ ಹೋದರೂ ಕೇಳೋರ್‍ಯಾರು ಇಲ್ಲ ಎಂಬರ್ಥದಲ್ಲಿ ಹರಟುತ್ತಿದ್ದರು. ಇಂತಹ ಪರಿಸ್ಥಿತಿಗಾಗಿ ಭಾರತದ ಸಂಪ್ರದಾಯಸ್ಥ ಸಮಾಜ ಇಂತಹ ಲೈಂಗಿಕತೆಯನ್ನು ವಿರೋಧಿಸುತ್ತದೆ.ಇಷ್ಟಕ್ಕೂ ಈ ತೀರ್ಪು ಬರುವುದಕ್ಕೆ ಒಂದೆರಡು ವರ್ಷಗಳ ಹಿಂದೆ ಚಿತ್ರ ನಟಿ ಖುಷ್ಬೂ ನೀಡಿದ ಹೇಳಿಕೆಯೇ ಇಂದು ಈ ಹೊಸ ಇಶ್ಯೂ ಆರಂಭವಾಗಲು ಕಾರಣವಾಗಿದೆ.

ಹಾಗೆ ನೋಡಿದರೆ ವಿದೇಶಗಳಲ್ಲಿ ವಿವಾಹ ಪೂರ್ವ ಸೆಕ್ಸ್‌ನ್ನು “ಲಿವಿಂಗ್ ಟುಗೆದರ್” ಎಂಬ ಹೆಸರಲ್ಲಿ ಕರೆಯುತ್ತಿದ್ದರು.ಈ ಕೂಡಾ ಸಂಪ್ರದಾಯ ಹಿಂದೆಯೇ ಬೆಳೆದುಕೊಂಡು ಬಂದಿತ್ತು.ಹಾಗಾಗಿ ಸಂಗಾತಿಗಳು ಬದಲಾಗುತ್ತಲೇ ಇದ್ದರು. ಆದರೆ ಭಾರತದಲ್ಲಿ ಹಾಗಲ್ಲ.ಇಲ್ಲಿ ಕುಟುಂಬ ಪದ್ದತಿ.ಒಬ್ಬನೇ ಸಂಗಾತಿ.ನೋವು ನಲಿವು ಎಲ್ಲವೂ ಅದೇ ಕುಟುಂಬದಲ್ಲಿ.ಆದರೆ ಈ “ಲಿವಿಂಗ್ ಟುಗೆದರ್” ಸಂಪ್ರದಾಯ
ಇತ್ತೀಚೆಗೆ ನಗರ ಕೇಂದ್ರಿತವಾಗಿ ನಮ್ಮಲ್ಲೂ ಅದು ಕಾಣಿಸಿಕೊಂಡಿದೆ.ಹಾಗೆ ನೋಡಿದರೆ ಈ ಸಿಸ್ಟಂ ಒಪ್ಪಿಕೊಂಡವರು ಕೇವಲ ಶೇಕಡಾ 5 ರಿಂದ ಶೇಕಡಾ 10 ರಷ್ಟು ಜನ ನಮ್ಮಲ್ಲಿದ್ದಾರೆ.ಇದೆಲ್ಲವೂ ಕೂಡಾ ತಾತ್ಕಾಲಿಕವಾದ ದೈಹಿಕ ಸಂಬಂಧಗಳು ಮಾತ್ರಾ.ಯಾವುದೇ ಕಾರಣಕ್ಕೂ ಅವುಗಳು ಮಾನಸಿಕವಾದ ಸಂಬಂಧಗಳಿಗೆ ಕಾರಣವಾಗುವುದಿಲ್ಲ.ಇಂತಹ ಪರಿಸ್ಥಿತಿ ಬಹುಕಾಲ ಮುಂದುವರಿದರೆ ಜೀವನ ಪೂರ್ತಿ ಒಂಟಿಯಾದರೂ ಅಚ್ಚರಿ ಪಡಬೇಕಿಲ್ಲ.ಅದರಲ್ಲಿ ಮಹಿಳೆ ತೀರಾ ಕೊರಗಬೇಕಾದ ಸಂದರ್ಭವೇ ಇರುತ್ತದೆ. ಅದಕ್ಕೂ ಕಾರಣವಿದೆ.ಸುಮಾರು 20 ವರ್ಷದಿಂದ 30 - 35 ವರ್ಷದ ಕಾಲ “ಲಿವಿಂಗ್ ಟುಗೆದರ್” ಅಥವಾ ವಿವಾಹವಾಗದೇ ಇದ್ದರೆ ಒಬ್ಬ ಮಹಿಳೆಯ ನಿಜವಾದ ಮೌಲ್ಯಯುತವಾದ ದಿನಗಳು ಮುಗಿಯುವ ಹಂತಕ್ಕೆ ಬಂದಿರುತ್ತದೆ.ಆಗ ನಿಜವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗುವುದಿಲ್ಲ , ಭಾರತೀಯ ಸಂಸ್ಕೃತಿಯಲ್ಲಿ ಅದಕ್ಕೆ ಅವಕಾಶವೂ ಇರುವುದಿಲ್ಲ.ಒಂದು ವೇಳೆ ಈ ಸಂಪ್ರದಾಯವನ್ನು ಧಿಕ್ಕರಿಸಿ ಮದುವೆಯಾದರೂ ಮಾನಸಿಕವಾಗಿ ಗಂಡುಹೆಣ್ಣು ಹತ್ತಿರವಾಗುವುದಕ್ಕೆ ಕಷ್ಟ. ಹಾಗಾಗಿ ಅವರು ಒಂಟಿಯಾಗಿಬಿಡುತ್ತಾರೆ. ವಯಸ್ಸಾದಂತೆ ಒಂಟಿತನ ಸಹಿಸುವುದು ಕಷ್ಟ.ಇಂದಿನ ಸಮಾಜ “ನಾನು” ಕೇಂದ್ರಿತವಾಗಿರುವಾಗ ಈ “ಲಿವಿಂಗ್ ಟುಗೆದರ್” ಕೂಡಾ ಸ್ವಾರ್ಥದಿಂದಲೇ ಕೂಡಿರುತ್ತದೆ.ಹಾಗಾಗಿ ಅದೊಂದು ಟೈಂಪಾಸ್‌ಗೆ ಅವಕಾಶವಾಗಿ ಬಿಡುತ್ತದೆ.ವಿದ್ಯಾರ್ಥಿಗಳಿಗೆ ಇಂತಹ ಟೈಂಪಾಸ್‌ಗಳತ್ತಲೇ ಹೆಚ್ಚು ಆಸಕ್ತಿ ಇದೆ ಎಂಬುದನ್ನು ಮೊರಲ್ ಪೊಲೀಸಿಂಗ್ ತೋರಿಸಿಕೊಡುತ್ತದೆ.ಇದೆಲ್ಲವೂ ಕೂಡಾ ವಿದೇಶಿ ಕೇಂದ್ರಿತವಾದ ಸಂಸ್ಕ್ರತಿಯ ಬಳುವಳಿ.ಇದರ ಜೊತೆಗೆ ಇಂದು ಭಾರತದಲ್ಲಾಗುತ್ತಿರುವ ವಿವಾಹ ವಿಚ್ಚೇದನ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕವೇ ಸರಿ.

ಇದಕ್ಕೆ ಇಂದು ಭಾರತದ ಬದಲಾದ ಕುಟುಂಬ ಪದ್ದತಿ ಕೂಡಾ ಕಾರಣವಾಗಬಹುದು.ಮನೆಯಲ್ಲಿ ಆಲೋಚನೆಗಳನ್ನು , ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ವ್ಯಕ್ತಿಗಳು ಸಿಗದೇ ಇದ್ದಾಗ ಇಂತಹ ಅಭ್ಯಾಸಗಳು ಹೆಚ್ಚು ಮಾನಸಿಕವಾದ ನೆಮ್ಮದಿಯನ್ನು ಕೊಡುತ್ತದೆ.ಹಾಗಾಗಿ ಇಲ್ಲಿನ ಮೌಲ್ಯಗಳ ಬದಲಾವಣೆಗಳಿಗೆ ಕಾರಣವಾಗಿದೆ.ಹಾಗಾಗಿ ಎಚ್ಚರಿಕೆ ಅಗತ್ಯ.

17 ಮಾರ್ಚ್ 2010

ಕೆಂಪು ಸಂಕ - 1 . . .



ಕೆಂಪು ಸಂಕ . . . .!!!.

ಇಲ್ಲಿ ನಡೆಯುತ್ತಿರುವ ವಿಚಿತ್ರ ಆಟಗಳಾದರೂ ಯಾವುದು..?. ಜನ ದಿನನಿತ್ಯ ಮಾತನಾಡಿಕೊಳ್ಳುತ್ತಿರುವ ಸಂಗತಿಗಳಾದರೂ ಹೌದೇ?. ಇಂದಲ್ಲ .. ಅಂದಿನಿಂದಲೇ ಬಾಯಿಯಿಂದ ಬಾಯಿಗೆ ಸುದ್ದಿಗಳು ಹರಿದಾಡುತ್ತಲೇ ಇದೆ.ಆದರೆ ಕಣ್ಣಾರೆ ಕಂಡವರಿಲ್ಲ .. ಅನುಭವವಗಳನ್ನು ಹೇಳಿಕೊಳ್ಳುವವರಿದ್ದಾರೆ.ಹಾಗಿದ್ದರೆ ಆ “ಕೆಂಪುಸಂಕ”ದ ಮಹಾತ್ಮೆ ಎಂತಹದ್ದು . .?. ಇದು ಏನು ....??. ನಿಜಕ್ಕೂ ಹೌದೇ ..? ಎಂಬ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಉಂಟೇ . . .?

* * * * * * * * * * * * * * * * * * * * ** * * * *

ಅದು ಬಳ್ಪದ ಕಾಡು...

ಸುತ್ತಲೂ ಹಸಿರು ಮುಡಿ ಹಿಡಿದಿಟ್ಟಿರುವ ಪ್ರಕೃತಿ.ಕಾಡಿನ ಒಳಗೆ ಇರಿಂಟಿ ಸದ್ದು ,ಹಕ್ಕಿಯ ಇಂಚರ ಬಿಟ್ಟರೆ ಬೇರಾವ ಸದ್ದೂ ಅಲ್ಲಿಲ್ಲ.ಈ ಕಾಡನ್ನು ಸುಮಾರು 3 ಕಿಲೋಮೀಟರ್ ಸೀಳಿಕೊಂಡು ಗುತ್ತಿಗಾರಿನಿಂದ ಪಂಜಕ್ಕೆ ಹಾದುಹೋಗುವ “ಸಿಂಗಲ್” ರೋಡ್. ಈ ಕಾಡಿನ ನಡುವೆ ಕೆಂಪು ಬಣ್ಣ ಬಳಿದಿರುವ ಒಂದು ಸಂಕ “ಕೆಂಪು ಸಂಕ” . . !!. ಈ ರಸ್ತೆಗೆ ಆ ಕಾಲದಲ್ಲಿ ಡಾಮರು ಬೇರೆ ಇದ್ದಿರಲಿಲ್ಲ . ಇಂತಹ ರಸ್ತೆಯಲ್ಲಿ ಜನ ಓಡಾಡ್ತಾರೆ, ಪೇಟೆಗೆ ಹೋಗ್ತಾರೆ. ಬಸ್ಸು ಇಲ್ಲದ ಆ ಕಾಲದಲ್ಲೂ ಇದೇ ಕಾಡಲ್ಲಿ ಜನ ಒಡಾಡಬೇಕಾದ ಅನಿವಾರ್ಯತೆ ಇತ್ತು.. ಆದರೆ ರಾತ್ರಿಯಾಗುತ್ತಿದ್ದಂತೆ ಜನ ಸಂಚಾರ ಸಂಪೂರ್ಣ ಸ್ಥಬ್ಥ. . . ಒಂದೇ ಒಂದು ಮನುಷ್ಯ ವಾಸನೆ ಈ ಕಾಡಲ್ಲಿ ಇರುವುದೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಅನಿವಾರ್ಯವಾದರೆ ಜನ ಒಬ್ಬೊಬ್ಬನೇ ಹೋಗೋದೇ ಇಲ್ಲ.ಇನ್ನೊಬ್ಬ ಬೇಕೇ ಬೇಕು.ಯಾಕೆಂದ್ರೆ ಅದು ಕಾಡು. ಪರಿಸ್ಥಿತಿ ಹೀಗಿರುವಾಗ ಮನೆಯಲ್ಲಿ ಯಾರಿಗಾದ್ರೂ ಮೈಗೆ ಹುಷಾರಿಲ್ಲ , ಗರ್ಭಿಣಿ ಮಹಿಳೆಯರಿದ್ದಾರೆ ಅಂದರೆ ದಿನಾಲೂ ತಲೆನೋವು. ವಾಹನಗಳು ಇಲ್ಲದ ಕಾಲವದು.ಎಷ್ಟೇ ದೂರವಾದ್ರೂ ನಡೆದುಕೊಂಡೇ ಹೋಗಬೇಕು.ಈ ಕಾಡಲ್ಲಿ ಹೋಗೋದೆಂದ್ರೆ ಭಯ. ಕಾಡು ಪ್ರಾಣಿಗಳ ಗರ್ಜನೆ ಒಂದು ಕಡೆಯಾದ್ರೆ ಅಲ್ಲಿರುವ "ಕೆಂಪುಸಂಕ"ದ ಭಯ ಇನ್ನೊಂದು ಕಡೆ.ಈ ಕೆಂಪು ಸಂಕದ ಬಗ್ಗೆ ದಿನಕ್ಕೊಂದರಂತೆ ಜನ ಕತೆಯನ್ನು ಹೇಳುತ್ತಿದ್ದರು.ಹೀಗಾಗಿ ಎಲ್ಲರ ಪ್ರಾರ್ಥನೆ ರಾತ್ರಿ ಯಾವುದೇ ಸಂಕಷ್ಠ ಬರದಿರಲಿ ಅಂತ. ಇನ್ನೂ ಹಗಲು ವೇಳೆ ಕಾಡುದಾರಿಯಲ್ಲಿ ನಡೆಯಲು ಆರಂಭವಾಗುವಾಗಲೇ ದೇವರಿಗೊಂದು ಸಲಾಂ.ಮುಂದೆ ಯಾವುದೇ ಆಪತ್ತು, ಭಯವಾಗದಿರಲಿ ಅಂತ ನಿವೇದನೆ.

ಹೀಗೆಲ್ಲಾ ಇದ್ದರೂ ಒಂದು ದಿನ ನಮ್ಮ ಚಂದ್ರ ಭಟ್ಟರಿಗೆ ಒಮ್ಮೆ ರಾತ್ರಿ ವೇಳೆ ಅದೇ ಕಾಡಲ್ಲಿ ಹೋಗಬೇಕಾಗಿ ಬಂತು.ಅನಿವಾರ್ಯ . ., ಹೋಗದೆ ವಿಧಿಯಿಲ್ಲ.ಅಣ್ಣನ ಹೆಂಡತಿಯ ಹೆರಿಗೆಯ ಸಮಯ. ಆಗೆಲ್ಲಾ ಯಾರೂ ಕೂಡಾ ಹೆರಿಗೆಗೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ.ಎಲ್ಲಾ ಮನೆಯಲ್ಲೇ.ವೈದ್ಯರೂ ಕೂಡಾ ಬೇಕಾದ್ರೆ ಮನೆಗೆ ಬರುತ್ತಿದ್ರು.ಹಾಗೆಯೇ ಚಂದ್ರ ಭಟ್ಟರಿಗೆ ಪಂಜಕ್ಕೆ ಆಸ್ಪತ್ರೆಗೆ ಹೋಗಬೇಕಾಗಿತ್ತು. ಪಂಜಕ್ಕೆ ಏನಿಲ್ಲವೆಂದರೂ 9 ಕಿಲೋ ಮೀಟರ್ ದೂರವಿದೆ. ಅಷ್ಟೂ ದೂರಾ ನಡೆದೇ ಹೋಗಲೇಬೇಕು.ಸರಿ .. ಒಬ್ಬನೇ ಅಷ್ಟೂ ದೂರ ಹೋಗುವುದಕ್ಕೆ ಒಬ್ಬ ಸಾತ್ ಬೇಕು ಅಂತ ಅನ್ನಿಸಿತು.ಅದಕ್ಕಾಗಿ ತಮ್ಮ ಗಂಗ ಭಟ್ಟರನ್ನು ಕರೆದುಕೊಂಡು ರಾತ್ರಿಯೇ ಮನೆಯಿಂದ ಹೆಜ್ಜೆ ಹಾಕಿದರು.ಕೈಯಲ್ಲಿ ಬ್ಯಾಟರಿಯ ಟಾರ್ಚ್ ಹಿಡಿದಿಕೊಂಡು ಹೆಜ್ಜೆ ಹಾಕುತ್ತಾ ಕಮಿಲ ಕಳೆದು ಬಳ್ಪ ಕಾಡು ಆರಂಭವಾಯಿತು.ಬಿಲ್ಲಮರದ ಚಡವು ಕಳೆದು ಮುಂದೆ ನಡೆದುಕೊಂಡು ಇಬ್ಬರು ಹೋಗುತ್ತಿದ್ದರು.ದೂರದಲ್ಲಿ ಅದೇನೋ ಓಡಾಡುತ್ತಿರುವುದು ಕಂಡಿತು. ಅದೇ ಕೆಂಪುಸಂಕದ ಬಳಿ . . . ಇಬ್ಬರಿಗೂ ಅದೇನೋ ಕಾಣುತ್ತಿದೆ. ಕೈಯಲಿದ್ದ ಟಾರ್ಚ್‌ನ ಬೆಳಕು ದೂರಕ್ಕೆ ಬಿತ್ತು. . ಮತ್ತೆ ಕಾಲ ಕೆಳಗೆ ಬೆಳಕು ಚೆಲ್ಲಿತು . . ಆದ್ರೆ ಇಬ್ಬರೂ ಆ ಬಗ್ಗೆ ಮಾತನಾಡಿಕೊಳ್ಳಲಿಲ್ಲ. ಸ್ವಲ್ಪ ದೂರ ನಡೆದಾಗ ಮತ್ತೆ ಅದೇ ಯಾವುದೋ ಒಂದು ಆಕೃತಿ ಕಂಡಂತಾಯಿತು. ಜೊತೆಗೆ ಸದ್ದೂ ಕೇಳಿತು.ಆಗ ಇಬ್ಬರೂ ಅದೇನೋ ಗೊಣಗಿಕೊಂಡರು.ಎದೆಯೊಳಗೆ ಅವಲಕ್ಕಿ ಕುಟ್ಟಲಾರಂಭಿಸಿತು. ಹೋಗದೆ ವಿಧಿಯಿಲ್ಲ. . ಇತ್ತ ಹೆಜ್ಜೆಯೂ ನಿಧಾನವಾಗುತ್ತಿದೆ.ಒಬ್ಬನ ಹೆಜ್ಜೆ ಹಿಂದೆ ಸರಿಯುತ್ತಿದ್ದರೂ 4 ಹೆಜ್ಜೆಗಳೂ ಕ್ಷಣಾರ್ಧದಲ್ಲಿ ಕಮಿಲಕ್ಕೆ ತಲಪುತ್ತಿತ್ತು.ಆದರೂ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಹೋಯಿತು.ಕೆಂಪುಸಂಕ ಹತ್ತಿರಕ್ಕೆ ಬಂತು . .. ಇಬ್ಬರಿಗೂ ಎದೆಯೊಳಗಡೆ ಢವ . .ಢವ .. ಇದ್ದಕ್ಕಿದ್ದಂತೆ ಕಪ್ಪುನಾಯೊಂದು ಸಂಕದ ಬಳಿಯಿಂದ ರೋಯ್ ಎಂದು ಓಡಿತು . . ಒಮ್ಮೆ ಎದೆ ಧಸಕ್ಕ ಎಂದರೂ ಅದು ನಾಯಿ . .. ಎಂದು ಇಬ್ಬರೂ ಸುಮ್ಮನಾಗಿ ಕೆಂಪುಸಂಕ ಕಳೆಯಿತು . . ವೇಗವಾಗಿ ಹೆಜ್ಜೆ ಪಂಜದ ಕಡೆಗೆ ಹೋಯಿತು.ಬೆಳಗಿನ ಜಾವ ಪಂಜದ ಡಾಕ್ಟರ ಜೀಪಲ್ಲಿ ಮನೆಗೂ ಬಂದರು.

* * * * * * * * * * * * * * * * * * * * * * * * * * * * * *

ಸಂಶಯ ಶುರುವಗಿದ್ದೇ ಮತ್ತೆ. ಅಲ್ಲಿ ಕಂಡ ಆಕೃತಿ ಯಾವುದು . .?. ಅದುವರೆಗೂ
ಅಲ್ಲೆಲ್ಲೂ ಕಾಣದ ನಾಯಿ ರೋಯ್ ಎಂದು ಸಂಕದ ಬಳಿಯಿಂದ ಓಡಿದ್ದು ಹೇಗೆ..?.ಅಲ್ಲಿ ಕೇಳಿದ ಸದ್ದಾದರೂ ಯಾವುದು...? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಲಾರಂಭಿಸಿತು.ಉತ್ತರ ಮಾತ್ರಾ ಸಿಕ್ಕಿರಲಿಲ್ಲ.ಇದು ಇಡೀ ಕಮಿಲಕ್ಕೆ ಒಂದು ವಾರಕ್ಕೆ ಸುದ್ದಿಯ ಆಹಾರವಾಯಿತು.ಇಷ್ಟಕ್ಕೇ ಆದ್ರೆ ಮುಗೀತಲ್ಲಾ.. ಇನ್ನೂ ಇಲ್ಲಿ ಇಂತಹದ್ದೇ ಘಟನೆ ಮತ್ತೆ ಮರುಕಳಿಸಿತು. . ಅದು ಇನ್ನಷ್ಟು ಭಯಾನಕ . . .

12 ಮಾರ್ಚ್ 2010

ಬರೀ 5 ರುಪಾಯಿ ಊಟ . . .! !

ಕೊಳ್ಳುವ ಬೇಳೆ ಕಾಳುಗಳಿಂದ ಹಿಡಿದು ಎಲ್ಲವೂ ಈಗ ದುಬಾರಿ. ಆದ್ರೆ ಸುಳ್ಯದಲ್ಲಿರೋ ಹೋಟೆಲೊಂದಕ್ಕೆ ಬೆಲೆ ಏರಿಕೆ ಏನೆಂಬುದೇ ಗೊತ್ತಿಲ್ಲ.ಯಾಕ್ ಗೊತ್ತಾ ಇಲ್ಲಿ ಒಂದು ಊಟಕ್ಕೆ ಕೇವಲ .ಹೊಟ್ಟೆ ತುಂಬಾ ಊಟ ಮಾಡಿ 5 ರುಪಾಯಿ ಮಾತ್ರಾ ಕೊಟ್ರೆ ಸಾಕು.ಈ ಹೋಟೆಲ್ ಹೆಸ್ರು ರಾಮ್‌ಪ್ರಸಾದ್ .

ಸುಳ್ಯದ ಶ್ರೀರಾಮ ಪೇಟೆಯಲ್ಲಿದೆ ರಾಮ್‌ಪ್ರಸಾದ್ ಹೋಟೆಲ್‌. ಹೋಟೆಲ್ ಮಾಲಿಕ ಸುಂದರ ಸರಳಾಯ. .ಇಲ್ಲಿ ಮಧ್ಯಾಹ್ನದ ಭೋಜನಕ್ಕೆ ಕೇವಲ 5 ರುಪಾಯಿ ಮಾತ್ರಾ..ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಏನಿಲ್ಲವೆಂದರೂ 15 ರುಪಾಯಿಯಿಂದ 20 ರುಪಾಯಿವರೆಗೆ ಸಾಮಾನ್ಯ ಊಟಕ್ಕೂ ನೀಡಲೇಬೇಕು.ಆದ್ರೆ ರಾಮ್‌ಪ್ರಸಾದ್ ಹೋಟೆಲ್ ಮಾತ್ರಾ ಈಗಲೂ 5 ರುಪಾಯಿಗೆ ಊಟ ಕೊಡುತ್ತದೆ. ಹಾಗೆಂದು ಇಲ್ಲಿಯ ಮೆನುವಿನಲ್ಲಿ ಏನೂ ಬದಲಾವಣೆ ಇಲ್ಲ.ಅನ್ನ , ಸಾಂಬಾರ್, ಗಸಿ , ಪಲ್ಯ, ಮಜ್ಜಿಗೆ , ಉಪ್ಪಿನಕಾಯಿ ಇದೆಲ್ಲವೂ ಇದೆ.ಒಂದು ವೇಳೆ ಮೊಸ್ರು ಬೇಕಂದ್ರೆ 2 ರುಪಾಯಿ ಜಾಸ್ತಿ.ಬದುಕಿಗೆ ಬೇಕಾಗುವ ಊಟಕ್ಕೆ 5 ರುಪಾಯಿ.ಹಾಗೆಂದು ನಿಮ್ಗೆ ಇನ್ನೂ ಹೆಚ್ಚಿನ ಊಟ ಬೇಕಂದ್ರೆ 10 ರುಪಾಯಿಯದ್ದೂ ಇದೆ.ಈ ಹೋಟೆಲ್‌ಗೆ 72 ವರ್ಷಗಳ ಇತಿಹಾಸವಿದೆ.1938 ರಲ್ಲಿ ಸುಂದರ ಸರಳಾಯರ ತಂದೆ ವೆಂಕಟ್ರಮಣ ಸರಳಾಯರು ಆರಂಭಿಸಿದ ಹೋಟೆಲ್ ಅನೇಕ ಜನರ ಹೊಟ್ಟೆ ತುಂಬಿಸಿದೆ.ಮೊದಲು ಕೇವಲ 25 ಪೈಸೆ ಊಟ ಇಲ್ಲಿ ಸಿಗುತ್ತಿತ್ತು.ನಂತರ 1 ರುಪಾಯಿ , 2 ರುಪಾಯಿ ಈಗ 5 ರುಪಾಯಿಯವರೆಗೆ ಇದೆ ಎನ್ನುತ್ತಾರೆ ಸುಂದರ ಸರಳಾಯರು.

ಸುಳ್ಯದ ಈ ರಾಮ್‌ಪ್ರಸಾದ್ ಹೋಟೆಲ್‌ಗೆ ನಗರದ ವಿವಿದೆಡೆಯಿಂದ ಶಾಲಾ ಕಾಲೇಜು ವಿದ್ಯಾಥಿಗಳು ಆಗಮಿಸುತ್ತಾರೆ. ವಿದ್ಯಾರ್ಥಿಗಳಿಗಂತೂ ಇದೊಂದು ವರದಾನವಾಗಿದೆ.ಇಂದಿನ ದಿನದಲ್ಲಿ ಹೀಗೆ 5 ರುಪಾಯಿಗೆ ಊಟ ನೀಡುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆಗೆ ಸರಳಾಯರು ಸರಳವಾಗಿ ಉತ್ತರಿಸೋದು ಹೇಗಂದ್ರೆ ಹೋಟೆಲ್‌ನಲ್ಲಿ ಕಡಿಮೆ ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೇನೆ ಕುಟುಂಬದ ಸದಸ್ಯರೂ ಸಸಹಕರಿಸುತ್ತಾರೆ.ಇದರ ಜೊತೆಗೆ ಕ್ಯಾಟರಿಂಗ್ ವ್ಯವಸ್ಥೆಯೂ ಇರುವುದರಿಂದ ಹೇಗೋ ನಡೀತದೆ.ಜನ್ರಿಗೆ ಉಪಯೋಗವಾಗುತ್ತಲ್ಲಾ.. ಹಸಿದವರ ಹೊಟ್ಟೆ ತುಂಬುತ್ತಲ್ಲಾ ಅದೇ ನೆಮ್ಮದಿ ಅಂತಾರೆ ಅವರು. ಇನ್ನು ಜನ್ರೂ ಹಾಗೇ ಸುಳ್ಯದ ಬೇರೆ ಬೇರೆ ಕಡೆಯಿಂದ ಆಗಮಿಸಿ ಇಲ್ಲಿ ಊಟ ಮಾಡ್ತಾರೆ.ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ ಅಧ್ಯಾಪಕರೂ ಆಗಮಿಸ್ತಾರೆ.ಇನ್ನೂ ಕೆಲವರು ಕಳೆದ 50 - 60 ವರ್ಷಗಳಿಂದ ಈ ಹೋಟೆಲ್‌ಗೆ ಊಟಕ್ಕೆ ಬರ್‍ತಾರೆ.ಒಳ್ಳೆಯ ಊಟ ಕೊಡ್ತಾರೆ ಅಂತಾರೆ ಜನ. .


ಇಂದಿನ ಬೆಲೆ ಏರಿಕೆಯ ಈ ಕಾಲದಲ್ಲೂ ಕೇವಲ 5 ರುಪಾಯಿಗೆ ಊಟ ನೀಡಿ ಊರ ಜನರ ಹೊಟ್ಟೆ ತುಂಬುವ ಈ ಹೋಟೆಲ್ ಉದ್ಯಮಿಯ ಸೇವೆ ಗುರುತರವಾದ್ದು.

10 ಮಾರ್ಚ್ 2010

ಮೊಬೈಲ್ ಮಾಯೆ . . .




ನೀನು ಎಲ್ಲಿದ್ದರೂ ನಂಜೊತೆ .. .!! ನೀನೇನಿದ್ದರೂ ನನ್ನವನೇ . . . !! ಎಂಬ ಡೈಲಾಗ್ ಹೊಡೆಯಲು ಈಗ ಅಡ್ಡಿಯಿಲ್ಲ.ಯಾಕ್ ಗೊತ್ತಾ ನಮ್ಮ ತಂತ್ರಜ್ಞಾನ ಅಷ್ಟೊಂದು ಬೆಳೆದು ಬಿಟ್ಟಿದೆ. ಅದು ಸಾಧ್ಯವಾಗಿದ್ದು ಮೊಬೈಲ್‌ನಿಂದ .

ಕೈಯಲ್ಲೊಂದು ಮೊಬೈಲ್ ಕಾಲ ಈಗ ಹೋಗಿದೆ.. ಈಗೇನಿದ್ದರೂ ಒಂದೇ ಕೈಯಲ್ಲಿ ಎರಡೆರಡು ಮೊಬೈಲ್. ಈಗಂತೂ 3 ಜಿ ಟೆಕ್ನಾಲಜಿ ಬಂದಿದೆ. ನಿಮ್ಮ ಮುಖ ಅಲ್ಲೂ ಕಾಣಬಹುದು . . . ಇಲ್ಲೂ ಕಾಣಬಹುದು. ಆದ್ರೆ ಅದಕ್ಕಿಂತ ದೊಡ್ಡದಾದ ಅಪಾಯ ಇನ್ನೊಂದಿದೆ.

ಮೊನ್ನೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಹಾಗೇ ನೆಮ್ಮದಿಯಿಂದ ಕುಳಿತು ಆಲೋಚಿಸುತ್ತಿದ್ದಾಗ ನನ್ನ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದವರ ಸಂಭಾಷಣೆ ಚಿಂತನೆಗೆ ಹಚ್ಚಿತು. . .

ಮೊಬೈಲ್ ಬಂದ ಮೇಲಂತೂ ಸಂಪರ್ಕ ಸುಲಭವಾಗಿದೆ.ಎಲ್ಲಿದ್ದರೂ ಹತ್ತಿರವಾಗಿ ಬಿಡುತ್ತೇವೆ.ಒಂದಷ್ಟು ಮಿತ್ರರೂ ಹೆಚ್ಚಾಗಿದ್ದಾರೆ.ಒಂಟಿಯಾಗಲು ಮೊಬೈಲು ಬಿಡುವುದಿಲ್ಲ... ಆದ್ರೆ ಅದಕ್ಕಿಂತಲೂ ಹೆಚ್ಚಾಗಿ ಕ್ಯಾಮಾರ ಇರುವ ಮೊಬೈಲ್ ಬಂದ ಮೇಲೆ ನೆಮ್ಮದಿಯಂತೂ ಇಲ್ವೇ ಇಲ್ಲ. ಆ ಕ್ಯಾಮಾರ, ಅದೇನೇ ಫಂಕ್ಚನ್ ಇರಲಿ ಅಲ್ಲಿ ಮೊಬೈಲ್ ರೆಕಾರ್ಡಿಂಗ್.. ಅದ್ಯಾವುದೇ ಚಿತ್ರ ಇರಲಿ ಕೂಡಲೇ ಫೋಟೋ ಸ್ನಾಪ್ . . ಬೇಕೆಂದರಲ್ಲಿ ಫೋಟೋ . . . ವಿಡಿಯೋ ರೆಕಾರ್ಡ್ ಆಗಿ ಬಿಡುತ್ತದೆ.ಅದೊಂದು ರೀತಿಯಲ್ಲಿ ಮಾಹಿತಿದಾರ. . . ದಾಖಲೆಕಾರನೂ ಆಗಿ ಬಿಡುತ್ತದೆ. ಆದ್ರೆ ಅದಕ್ಕಿಂತಲೂ ಹೆಚ್ಚು ಅಪಾಯವೇ ಜಾಸ್ತಿ.ಬಸ್ಸಿನಲ್ಲಿ ಅದ್ಯಾವುದೋ ಸುಂದರಿ ಒಂದು ಸೀಟಲ್ಲಿ ಕುಳಿತುಕೊಂಡಿದ್ದಳು.ಪಕ್ಕದ ಸೀಟಲ್ಲಿ ಕುಳಿತ ಪಡ್ಡೆ ಹುಡುಗ ಹೇಗಾದರೂ ಮಾಡಿ ಅವಳ ಚಿತ್ರ ತೆಗೆಯಲು ಹವಣಿಸುತ್ತಿದ್ದ.ಮೊಬೈಲಲ್ಲಿ ಅವಳ ಮುಖ ಬರುವಂತೆ ಪ್ರಯತ್ನಿಸುತ್ತಿದ್ದ.ಕೊನೆಗೂ ಕ್ಲಿಕ್ಕಿಸಿದ.. ಗೆಳೆಯನೊಂದಿಗೆ ಹಲ್ಲು ಕಿರಿದ . . . . .

* * * * * * * * * * * * * * * * * * * * * *

ಹಾಗೆ ಚಿತ್ರಿಸಿದ ಮಾತ್ರಕ್ಕೆ ಮುಗಿದಿಲ್ಲ.ಆ ಫೋಟೋವನ್ನ ಎಡಿಟ್ ಮಾಡಿ ಇನ್ಯಾವುದೋ ಸಿನಿಮಾಕ್ಕೆ ಜೋಡಿಸಿ ಮಜಾ ಮಾಡುತ್ತಾರೆ.ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತದೆ.ಕೊನೆಗೊಮ್ಮೆ ರಾದ್ದಾಂತವಾಗುತ್ತದೆ. ನಿಜಕ್ಕೂ ಆ ಹುಡುಗಿ ಬಲಿಪಶು. . . .!! ಇದಕ್ಕೆ ಕಾರಣವಾದ್ದು ಈ ಕ್ಯಾಮಾರಾ ಇರುವ ಮೊಬೈಲ್. .

* * * * * * * * * * * * * * * * * * * * * *


ಈಗಂತೂ ದೇಶದ ಭದ್ರತೆ , ದೇವಸ್ಥಾನದ ಗರ್ಭಗುಡಿಯ ಚಿತ್ರ ತೆಗೀಬಾರದು ಅಂತೆಲ್ಲಾ ಹೇಳಿಯೂ ಪ್ರಯೋಜನವಿಲ್ಲ.ಒಮ್ಮೆ ಸದ್ದಿಲ್ಲದೆ ಕ್ಲಿಕ್ಕಿಸಿದರೂ ಸಾಕು.ಅಥವಾ ಹಾಗೇ ಸುಮ್ಮನೆ ರೆಕಾರ್ಡ್ ಒತ್ತಿ ಸುಮ್ಮನೆ ಸುತ್ತಿದರೂ ಸಾಕು.ಬೇಕಾದಷ್ಟು ಚಿತ್ರಗಳು ಸಿಕ್ಕಿ ಬಿಡುತ್ತದೆ.ಉಗ್ರಗಾಮಿಗಳಿಗೂ ತೊಂದರೆ ಇಲ್ಲ .. ಚಿತ್ರ ಕಳ್ಳರಿಗೂ ತೊಂದರೆ ಇಲ್ಲ . . . ವಿಕೃತಕಾಮಿಗಳಿಗೂ ತೊಂದರೆ ಇಲ್ಲ . . ಇದು ಮೊಬೈಲ್ ಮಾಯೆ. . . !!


ಹಾಗಾಗಿ ಇಂತಹ ಕ್ಯಾಮಾರಾ ಮೊಬೈಲ್‌ಗಳ ಬಗ್ಗೆ ಚರ್ಚೆಯಾಗಬೇಡ್ವೇ , . .? ಬ್ಯಾನ್ ಆಗಬೇಡ್ವೇ . .? ಈ ಬಗ್ಗೆ ಯಾಕೆ ಯಾರೂ ಮಾತಾಡ್ತಿಲ್ಲ..?. ಅರ್ಥನೇ ಆಗ್ತಿಲ್ಲ .. . . .