27 ಅಕ್ಟೋಬರ್ 2022

ಅಮ್ಮನಿಲ್ಲದ ದೀಪಾವಳಿ |

 


ಈ ಬಾರಿ ನಮಗೆ ದೀಪಾವಳಿ ಇಲ್ಲ. ಅಮ್ಮನಿಲ್ಲದ ಈ ದೀಪಾವಳಿ ಆಚರಿಸುವುದಾದರೂ ಹೇಗೆ? ಹಾಗಿದ್ದರೂ ಕೆಲವು ಜವಾಬ್ದಾರಿಗಳ ದೀಪ ಬೆಳಗಬೇಕಿತ್ತು. 

ಪ್ರತೀ ವರ್ಷ ಅಮ್ಮನೇ ನನಗೆ ದೀಪಾವಳಿ. ಅಮ್ಮನೇ ನನಗೆ ಬೆಳಕು. ದೀಪಾವಳಿ ಹಾಗೂ ಇತರ ಎಲ್ಲಾ ಹಬ್ಬಗಳಲ್ಲೂ ಅಮ್ಮನೇ ಹಾಗೆ ಮಾಡು, ಹೀಗೆ ಮಾಡು ಎನ್ನುತ್ತಿದ್ದರು. ಈ ಬಾರಿ ಹಾಗೆ ಮಾಡು .. ಹೀಗೆ ಮಾಡು ಎಂದು ಹೇಳುವ ಮಾತುಗಳಿಲ್ಲ.ಅಮ್ಮನಿಲ್ಲ ದೀಪಾವಳಿ ಮಾತ್ರವಲ್ಲ ಯಾವ ಹಬ್ಬವೂ ಈ ವರ್ಷ ನನಗಿಲ್ಲ.

ಮಕ್ಕಳಿಗೆ ದೀಪಾವಳಿ ಖುಷಿ. ಈ ಖುಷಿಗೆ ಬೆಳಕಾಗಬೇಕಲ್ಲ. ಅಪ್ಪನೂ ಇಲ್ಲದ .. ಅಮ್ಮನೂ ಇಲ್ಲದ ದೀಪಾವಳಿ ನನಗೆ. ಆದರೆ ಮಕ್ಕಳಿಗೆ ಕತ್ತಲು ಕಳೆದು ಬೆಳಕಾಗುವ ದೀಪಾವಳಿ. ಪಟಾಕಿ ಸಿಡಿಸುವ ದೀಪಾವಳಿ....  ನನಗಿಲ್ಲದ ದೀಪಾವಳಿ,.... ಮಕ್ಕಳಿಗೆ ಸಂಭ್ರಮದ ದೀಪಾವಳಿ.... ಈ ಎರಡನ್ನೂ ಹೊಂದಿಸಿಕೊಳ್ಳುವುದು ಹೇಗೆ?. ಒಂದು ಇಡೀ ಕೊಂಡಿ ಕಳಚಿ ಇನ್ನೊಂದು ಕೊಂಡಿಯನ್ನು ಹಿಡಿಯುವ , ಮುನ್ನಡೆಸುವ ಜವಾಬ್ದಾರಿ. ಹೇಳಿದಷ್ಟು, ಬರೆದಷ್ಟು ಸುಲಭವಲ್ಲ. ಎಚ್ಚರಿಸುವವ ಇಲ್ಲದೆಯೇ ಎಚ್ಚರವಾಗಿರಬೇಕು. ಎಚ್ಚರಿಸುವವನು ಇಲ್ಲದೆ ಬಾಳ ನೌಕೆಯ ಸಾರಥಿಯಾಗಬೇಕು.

ಅಪ್ಪನೂ ಇಲ್ಲದ ಮೇಲೆ ದೀಪಾವಳಿ ಇತ್ತು. ಆದರೆ ಎಚ್ಚರಿಸುವ ಅಮ್ಮ ಇದ್ದರು. ಆಗಾಗ ಎಚ್ಚರಿಸುತ್ತಿದ್ದರು. ಎಲ್ಲಿ ಹಳಿ ತಪ್ಪುತ್ತದೋ ನೋಡಿ ಎಚ್ಚರಿಸುತ್ತಿದ್ದರು. ಹೆಚ್ಚು ಬರೆದರೂ ಅದೇನು ಅಂತ ಕೇಳುತ್ತಿದ್ದರು.  ಆಗಾಗ ನನ್ನ ಲೆಕ್ಕ ಪುಸ್ತಕವನ್ನು ನೋಡಿ ಹೇಳುತ್ತಿದ್ದರು.. ಕೇಳುತ್ತಿದ್ದರು. "ಈ ಲೋಕದಲ್ಲಿ ಇರುವುದೆಲ್ಲಾ ಉಪಯೋಗಕ್ಕೆ ಇರುವುದು , ಆದರೆ ನಮಗೆ ಯಾವುದು ಅಗತ್ಯ ಎನ್ನುವುದು ನಮಗೆ ತಿಳಿದಿರಬೇಕು" ಎಂದು ಆಗಾಗ ಎಚ್ಚರಿಸುತ್ತಿದ್ದರು. ದೀಪಾವಳಿಯ ಪಟಾಕಿಯ ಭರಾಟೆಗೆ ನನಗೆ ನೆನಪಾದ್ದು ಈ ಮಾತು. ಇದೇ ಪಾಠ ಮಕ್ಕಳಿಗೂ ಹೇಳಿದೆ, ಪಟಾಕಿ ಬೇಕು.. ಸಂಭ್ರಮಕ್ಕೆ, ಆದರೆ ಎಷ್ಟು ಬೇಕು... ಅಂತ ಅಮ್ಮನ ಮಾತನ್ನು ಸ್ವಲ್ಪ ಡೈಲ್ಯೂಟ್‌ ಮಾಡಿ ಹೇಳುತ್ತಿದ್ದೆ. ಈಗ ನನಗೆ ಹೇಳುವವರು ಯಾರು ? ಕೇಳುವವರು ಯಾರು ?. ಅಮ್ಮ ಇಲ್ಲದ ಮೇಲೆ  ಮನಸ್ಸಿನ ಓಟದಲ್ಲಿ ಅನೇಕ ಬಾರಿ ಎಡವಿದ್ದೇನೆ,  ನಿಧಾನವಾಗಿ ಕುಳಿತು, ಅಮ್ಮ ಹೇಳಿದ್ದು ನೆನಪಿಸಿಕೊಳ್ಳುತ್ತಾ ಸಾವರಿಸಿಕೊಂಡು ತಪ್ಪನ್ನು ಸರಿ ಮಾಡುತ್ತೇನೆ. 

ಈಚೆಗೆ ಯಾರಿಗೂ ಹೆಚ್ಚು ಕರೆ ಮಾಡುತ್ತಿಲ್ಲ, ಆದರೂ ಆಗಾಗ ವಾಟ್ಸಪ್‌ ನನ್ನನ್ನು ಕೆಣಕಿಸುತ್ತದೆ, ಯಾವುದೋ ಪೋಸ್ಟ್‌ ನೋಡಿದಾಗ ಕೆರಳಿಸುತ್ತದೆ, ವಿಷಾದವಾಗುತ್ತದೆ, ಪ್ರತಿಕ್ರಿಯೆ ನೀಡಲೇಬೇಕು ಎಂದು ಅನಿಸಿ ಬಿಡುತ್ತದೆ. ಅದನ್ನು ಹಾಕಿಯೂ ಆದ ಮೇಲೆ ಚರ್ಚೆಯೂ ಆಗುತ್ತದೆ... ಇದೆಲ್ಲಾ ಬೇಕಿತ್ತಾ ಅಂತ ಅಮ್ಮನ ಮಾತುಗಳು ನೆನಪಾಗುತ್ತದೆ, "ಜಗಳ ಯಾಕೆ, ಚರ್ಚೆ ಯಾಕೆ, ಆಗದಿದ್ದರೆ ಸುಮ್ಮನೆ ಇದ್ದು ಬಿಡು. "

ಅಮ್ಮನ ನೆನಪುಗಳು ಸದಾ ಕಾಡುತ್ತದೆ. ಅಪ್ಪನೂ ಆಗಾಗ ಎಚ್ಚರಿಸುತ್ತಾರೆ. ಅಪ್ಪ ಇಲ್ಲವಾದ ಮೇಲೆ ಅಮ್ಮ ಹಾಗಲ್ಲ ಹೀಗೆ ಎಂದರು. ಅನೇಕ ಬಾರಿ ನಮಗೆಷ್ಟೇ ಮಾಹಿತಿ ಇದ್ದರೂ ಅದರ ಪ್ರಾಕ್ಟಿಕಲ್‌ ಅನುಭವ ಬೇರೆಯೇ. ಅದು ಅಮ್ಮನೇ ಕೊಡುತ್ತಿದ್ದರು.

ಈಗೀಗ ಕೆಲವು ಸಮಯ ತಲೆಯೊಳಗೆ ಖಾಲಿಯಾಗಿ ಬಿಡುತ್ತದೆ, ಬ್ಲಾಂಕ್‌ ಆಗಿಬಿಡುತ್ತದೆ. ಕೃಷಿಯಲ್ಲಿ ಸಾಕಷ್ಟು ಕೆಲಸ ಇದ್ದರೂ ಮುಂದೆ ಯಾವುದು ಅಂತ ತಿಳಿದಿದ್ದರೂ ತಕ್ಷಣಕ್ಕೆ ಖಾಲಿಯಾಗಿಬಿಡುತ್ತದೆ. ಈಗ ಅದೆಲ್ಲಾ ಸುಧಾರಿಸುವ ಹಂತಕ್ಕೆ ಬಂದಿದೆ. ದೀಪಾವಳಿಯ ಸಮಯದಲ್ಲಿ ಅಮ್ಮ ನೆನಪಾದರು.

ದೀಪಾವಳಿಯ ಸಡಗರ ಎಲ್ಲೆಡೆಯೂ ಕೇಳಿತ್ತು. ಮಕ್ಕಳಿಗೂ ಖುಷಿಯಾಗಿತ್ತು. ಸದ್ದಿಲ್ಲದೆ ಮಧ್ಯಾಹ್ನ ಪತ್ನಿ, ಮಕ್ಕಳ ಜೊತೆ ತಂಗಿಯ ಮನೆಗೆ ಹೋದೆ, ಊಟ ಮಾಡಿದೆ, ನಿದ್ದೆ ಮಾಡಿದೆ ಸುಖಾ ಸುಮ್ಮನೆ ಬಂದೆ. ಮಕ್ಕಳು ಆಟವಾಡಿದರು, ಖುಷಿ ಪಟ್ಟರು. ಎಲ್ಲಾ ಕೆಲಸಗಳ ನಡುವೆಯೇ ಖಾಲಿಯಾಗುವ ಮನಸ್ಸುಗಳನ್ನು ಮರುಭರ್ತಿ ಹೇಗೆ ? ಎಂದು ಯೋಚಿಸುವ ಕಾಲ ಇದಲ್ಲ. ಮುಂದಿನ ಕೊಂಡಿಗಳಿಗೆ ದಾರಿದೀಪವಾಗಬೇಕು. ಅದು ಈ ಬಾರಿ ಆಚರಣೆಯೇ ಇಲ್ಲದ ದೀಪಾವಳಿಯ ನಡುವೆ ದೀಪವಾಗಬೇಕು. ಸುಲಭ ಇಲ್ಲ........

13 ಅಕ್ಟೋಬರ್ 2022

#ಅಮ್ಮ ಹೇಳಿದ ಸತ್ಯ | ಈ ಜಗತ್ತಿನೊಳಗೆ ಎಲ್ಲವೂ ಬಹಳ ನಿಗೂಢ |

ಕಾಕತಾಳೀಯ ಎನ್ನುವುದೋ ಅಥವಾ ಏನೋ ಸೂಕ್ಷ್ಮವಾದ ಸಂಗತಿ ಇದೆಯೋ? ಮೌನವಾಗಿ ಕುಳಿತಾಗ ಯೋಚನೆಗಳು ಸಾಗುತ್ತವೆ... 



ನನ್ನ ಅಪ್ಪನನ್ನು 2018 ಆಗಸ್ಟ್ 4 ರಂದು‌ ಹೃದಯಾಘಾತದಿಂದ ಕಳೆದುಕೊಂಡೆ. ಅಪ್ಪ ಇಲ್ಲವಾಗುವ ಸುಮಾರು ಒಂದು ವರ್ಷದ ಹಿಂದೆ‌ ಹೀಗೇ ಜಾತಕ ನೋಡುತ್ತಾ ಅಪ್ಪ ಹೇಳಿದ್ದರು," ನನಗೆ ಇನ್ನು ಒಂದೇ ವರ್ಷ ಆಯಸ್ಸು, ಅದಾಗಿ ಸರಿಯಾಗಿ 4 ವರ್ಷಕ್ಕೆ ಅಮ್ಮನೂ ಬರುತ್ತಾರೆ. ನೀನು ಎಚ್ಚರವಾಗಿರು" ಎಂದಿದ್ದರು. ಆಗ ನಾನು ಅಮ್ಮನ ಜೊತೆ  ಹೇಳಿದ್ದೆ," ಇದೆಲ್ಲಾ ಮರ್ಲು, ಸುಮ್ಮನಿರಿ, ಅಪ್ಪ ಯಾಕೆ ಹೀಗೆ ಹೇಳುತ್ತಾರೆ" ಎಂದಿದ್ದೆ. ಅಮ್ಮನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 

ಹಾಗಿದ್ದರೂ ನಮ್ಮ ಪ್ಯಾಮಿಲಿ ವೈದ್ಯರ ಬಳಿ ಅಪ್ಪನ ಚೆಕ್ ಅಪ್ ಮಾಡುತ್ತಾ ಹೆಚ್ಚಿನ ಚೆಕ್ ಅಪ್  ಮಾಡಿಸಲು ಆಸಕ್ತನಾಗಿದ್ದೆ, ಇದಕ್ಕಾಗಿಯೇ ಪ್ಯಾಮಿಲಿ ವೈದ್ಯರೇ ಅಪ್ಪನಿಗೆ ಹೇಳಿಸುವ ವ್ಯವಸ್ಥೆ ಮಾಡಿದ್ದೆ. ನಮ್ಮ ವೈದ್ಯರು ಹೇಳಿದ್ದಕ್ಕೆ, ಅಪ್ಪ ನಮ್ಮ ವೈದ್ಯರಿಗೆ ಹೇಳಿದ್ದು, "ಇಲ್ಲಿಯೇ ಸಾಕು, ಇದಕ್ಕಿಂತ ಆ ಕಡೆ ಹೋದರೆ ವಾಪಾಸ್ ಬರಲು ಇಲ್ಲ. ಬರುವುದು ತಪ್ಪಿಸಲು ಆಗದು ಎಂದಿದ್ದರು." ಅದಾಗಿ ಒಂದು ವರ್ಷದೊಳಗಡೆ ಅಪ್ಪ ಹೃದಯಾಘಾತದಿಂದ ಇಲ್ಲವಾದರು.

ಅಮ್ಮನ ಧೈರ್ಯ ಇತ್ತು. ಅಮ್ಮನ ಆರೋಗ್ಯ ಸುಧಾರಣೆಗೆ ನಿರಂತರ ಓಡಾಟ ಇದ್ದೇ ಇತ್ತು. ಏನು ಬೇಕೋ ಅದು, ಹೇಗೆ ಬೇಕೋ ಹಾಗೆ. ಪ್ರತೀ ತಿಂಗಳ ರಕ್ತಪರೀಕ್ಷೆ ಪುತ್ತೂರಿನ ಐಡಿಯಲ್ ಲ್ಯಾಬ್ ನಲ್ಲಿ. ಒಮ್ಮೆ ಅಮ್ಮ ಹೇಳಿದ್ದರು, "ಇದೆಲ್ಲಾ ಯಾಕೆ ಅಂತ ಗೊತ್ತಾಗುವುದಿಲ್ಲ,‌ ಸುಮ್ಮನೆ ಖರ್ಚು ಎಂದಿದ್ದರು" ಇದಕ್ಕೆ ಐಡಿಯಲ್ ಲ್ಯಾಬ್ ನ ಸುಚೀಂದ್ರ ಪ್ರಭು ಅವರು ಹೇಳಿದ್ದು,"ಅದು ಮಕ್ಕಳ ಕರ್ತವ್ಯ, ನೀವು ಹಾಗೆ ಹೇಳಬಾರದು "ಎಂದಿದ್ದರು. ಅಂದಿನಿಂದ ಅಮ್ಮ ಯಾವ ಚಿಕಿತ್ಸೆಗೂ ಮಾತನಾಡಿಲ್ಲ. ನೀವು ಹೇಳಿದ ಹಾಗೆ ಎಂದಿದ್ದರು.ಕಾರಿನಲ್ಲಿ ನಾನು, ತಂಗಿ, ಅಮ್ಮ ಎಲ್ಲಾ ಕಡೆಗೂ ಯಾವಾಗ ಬೇಕೋ ಆವಾಗ ಚಿಕಿತ್ಸೆಗೆ ಹೋದದ್ದಾಯಿತು.ಯಾವ ವೈದ್ಯರು ಬೇಕೋ ಆ‌ ವೈದ್ಯರು.

ಹಾಗಿದ್ದರೂ, ಅಪ್ಪ ಹೇಳಿದ ದಿನ ಬಂದೇ ಬಿಟ್ಟಿತು. ಸರಿಯಾಗಿ 4 ವರ್ಷ. 2022 ಆಗಸ್ಟ್ 4  ಅಮ್ಮ ಇಲ್ಲವಾದರು. ನೋಡುತ್ತಾ ಇದ್ದಂತೆಯೇ, ಕೈಲಾಗದಂತೆ ನೋಡಬೇಕಾಯಿತೇ ಹೊರತು ಆ ದಿನವನ್ನು ಇಲ್ಲವಾಗಿಸಲು ಆಗಲೇ ಇಲ್ಲ. ಅದಕ್ಕಿಂತ ಮುಂದೆ ಹೋದರೆ, ಅಪ್ಪ ಇಲ್ಲವಾದ ನಕ್ಷತ್ರ, ತಿಥಿ, ಮಾಸ. ಅಮ್ಮ ಇಲ್ಲವಾದ ನಕ್ಷತ್ರ, ತಿಥಿ, ಮಾಸ. ಎರಡೂ ಒಂದೇ...! ಅಪ್ಪ ಕೃಷ್ಣ ಪಕ್ಷ , ಅಮ್ಮ ಶುಕ್ಲ ಪಕ್ಷ. ಅಂದರೆ 15 ದಿನಗಳ ವ್ಯತ್ಯಾಸ.

ಈ ಜಗತ್ತು ಬಹಳ ಕುತೂಹಲ. ಅನೇಕ ಬಾರಿ ಅನಿಸಿದ್ದಿದೆ, ಇದೆಲ್ಲಾ ಏನು? ಅಂತ. ಅಪ್ಪ ಹೇಗೆ ಹೇಳಿದರು ಹೀಗೆ? ಅಪ್ಪ ಯಾಕೆ ಹೇಳಿದರು ಹೀಗೆ? ಹೀಗೂ ಅನಿಸುತ್ತದೆ. ಇದ್ದಾಗ ಅಪ್ಪನ ಜೊತೆ ಅದನ್ನು ಕೇಳಲಿಲ್ಲ. ಅಮ್ಮನಲ್ಲೂ ಕೇಳಲಿಲ್ಲ. 

ಈಗ ಅದರೊಳಗಿನ ಸತ್ಯದ ಹುಡುಕಾಟದಲ್ಲಿ ಸೋಲು ಖಚಿತವೇ ಆಗಿದೆ.‌ಅದಕ್ಕಾಗಿಯೇ ಅಪ್ಪ ಅಮ್ಮ ಇಬ್ಬರಿಗೂ ಈಗ ನನ್ನ ಪಾಲಿನ ಕರ್ತವ್ಯವನ್ನು ಪಾಲಿಸುವುದು, ಮುಗಿಸುವುದು. ಅವರ ಕನಸುಗಳನ್ನು ಬೆಳೆಸುವುದು, ಮುಂದೆ ದಾಟಿಸುವುದು. ಇದು ನನಗೆ ಮಾತ್ರಾ ಸಂಬಂಧಿಸಿದ್ದು ಅಂತ‌ ತಿಳಿದಿದ್ದರೂ ಹಂಚಿಕೊಳ್ಳುವುದಕ್ಕೆ, ದಾಖಲಿಸುವುದಕ್ಕೆ ಕಾರಣವಿದೆ. ಆ ಕಾರಣವೇ ಮನಸ್ಸು. ಆಗಾಗ ಕಾಡುವ ನೆನಪುಗಳಿಗೆ ಉತ್ತರವಿಲ್ಲ. ಒಮ್ಮೊಮ್ಮೆ‌ ಕೆಲಸವಿಲ್ಲ, ಮಾತುಗಳಿಲ್ಲ,‌ ನಿದ್ರೆಯೂ ಇಲ್ಲ.


ಮತ್ತೆ ಮತ್ತೆ ಕಾಡುವ ನೆನಪಲ್ಲಿ ಅಮ್ಮನೇ ಬರುತ್ತಾರೆ.ಮತ್ತೆ ಮತ್ತೆ ಬರುತ್ತಾರೆ. ಈ ಜಗದೊಳಗಿನ ನಿಗೂಢತೆಯ ಒಳಗೆ ಸಾಗಿದಾಗ ಉತ್ತರ ಸಿಗದ ಪ್ರಶ್ನೆಗಳೇ ಅವು.! ಅದೆಲ್ಲಾ ಕಾಕತಾಳೀಯವೇ ? ಆಥವಾ ನಿಗೂಢವಾದ ಸತ್ಯವೇ....?

ಅಮ್ಮನ ಆರೋಗ್ಯ ಹದಗೆಡುತ್ತಾ ಸಾಗಿತು. ಸತತ ಪ್ರಯತ್ನದ ನಡುವೆಯೇ ನೋಡುತ್ತಾ ಇರಬೇಕಾಯಿತೇ ಹೊರತು ,ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಆಗಾಗ ಇಂಜೆಕ್ಷನ್ ಇತ್ತು. ಕೊನೆಗೆ ಅಮ್ಮನಿಗೂ ಅನಿಸಿತ್ತು ,‌ಈ ಚಿಕಿತ್ಸೆಗಳು ಪ್ರಯೋಜನವಿಲ್ಲ ಅಂತ. ಆದರೆ ನಮ್ಮ ಪ್ರಯತ್ನ, ಕಾಳಜಿಯ ಕಾರಣದಿಂದ ಅದನ್ನು ಜೊತೆಗೇ ಇರುವ ನಮ್ಮಲ್ಲಿ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಅದನ್ನು ಪರೋಕ್ಷವಾಗಿ ಹೇಳುತ್ತಿದ್ದರು ಅಮ್ಮ.

ಅಮ್ಮ ಇಲ್ಲವಾಗುವ ವಾರದ ಹಿಂದೆ,  ತಂಗಿಯ ಜೊತೆ ಅಮ್ಮ
 ಹೇಳಿದ್ದರು,"ನಾನು ಉಸಿರು ನಿಲ್ಲಿಸುವ ಸಮಯವನ್ನು ನಿಮಗೆ ನೋಡಲಾಗದು, ನೀವು ಅಳುತ್ತಾ ಇರಬಾರದು" ಎಂದು. ಅದನ್ನು ಗಂಭೀರವಾಗಿ ಪರಿಗಣಿಸದ ನಾವು ಅದೊಂದು ಹೇಳಿಕೆಯಾಗಿ ಭಾವಿಸಿ ಸುಮ್ಮನಾದೆವು.

ಅಂದು ಆ.4. ಬೆಳಗ್ಗೆ ಅಮ್ಮ ಅರ್ಧ ಚಹಾ ಕುಡಿದದ್ದು ಬಿಟ್ಟರೆ ಇನ್ನೇನು ಇರಲಿಲ್ಲ. ನಾನು ಆಗ ಕೆಲ ದಿನಗಳಿಂದ ಮನೆಯಿಂದ ಹೊರಗೆ‌ ಹೋಗುತ್ತಿರಲಿಲ್ಲ. ಕಾರಣ ಅಮ್ಮನ ಸೇವೆ. ಅಂದೂ ಮನೆಯಲ್ಲಿದ್ದೆ. ಬೆಳಗ್ಗೆ ಚಿಕ್ಕಪ್ಪ ಕರೆ ಮಾಡಿದ್ದರು, ಆರೋಗ್ಯ ಏರುಪೇರು ಇದೆ ಸ್ವಲ್ಪ ಚೆಕ್ ಅಪ್ ಮಾಡಿಸಬೇಕಿತ್ತು, ಪುತ್ತೂರಿಗೆ ತೆರಳಬೇಕು ಎಂದರು. ತಕ್ಷಣ ನನಗೆ ಬರುವ ಸ್ಥಿತಿಯಲ್ಲಿಲ್ಲ ಎಂದೆ. ಆದರೆ ನಮ್ಮ ಪ್ಯಾಮಿಲಿ ಡಾಕ್ಟರ್ ಜೊತೆ ಮಾತನಾಡಿ ಅವರ ಮನೆಗೇ ಹೋಗುವ ವ್ಯವಸ್ಥೆ ಮಾಡಿಸಿದೆ. ತಂಗಿ‌ ಮನೆಯಲ್ಲಿದ್ದಳು , ಒಮ್ಮೆ ಚಿಕ್ಕಪ್ಪನಲ್ಲಿಗೆ  ಹೋಗಿ ಬಾ ಎಂದೆ.

ಮನೆಯಲ್ಲಿದ್ದ ನಾನು ಅಮ್ಮನ ನೋಡಿದೆ. ಆಗಿನ್ನು ಮಾತನಾಡುತ್ತಿರಲಿಲ್ಲ.‌ ನಿದ್ರೆ ಮಾಡಿದ್ದಾರೆ ಎಂದು ಅಂದುಕೊಂಡು ಎರಡು ದಿನದ ಹಿಂದೆ  ನನ್ನ ಸಹೋದರ ಸಿಸಿ ಕ್ಯಾಮರಾ‌ ವೀಕ್ಷಿಸಲು ಹೇಳಿದ್ದರಿಂದ ಎರಡೂ ದಿನ ಹೋಗದ ನಾನು ತಕ್ಷಣ ನೋಡಿ ಬರುವೆ ಎಂದು ಹೋರಟೆ,‌ ಜೊತೆಗೆ ಮಗನೂ‌ ಬಂದ.ಅಲ್ಲಿಗೆ ತಲಪಿದ‌ ಎರಡೇ ನಿಮಿಷಕ್ಕೆ ಮನೆಯಿಂದ  ಮಡದಿಯ  ಕರೆ ಬಂತು ತಕ್ಷಣವೇ ಬನ್ನಿ ಅಂತ.

 ಚಿಕ್ಕಪ್ಪನಲ್ಲಿಗೆ ಹೋಗಿದ್ದ ತಂಗಿಗೂ ಕರೆ ಹೋಗಿತ್ತು. ಇಬ್ಬರೂ ಓಡೋಡಿ ಬಂದೆವು. ಇಬ್ಬರೂ ಹೆಚ್ಚು ಕಮ್ಮಿ ಒಂದೇ ಸಮಯಕ್ಕೆ ತಲಪಿದೆವು. ಅಮ್ಮ ಹೇಳಿದಂತೆಯೇ ಆಗಿತ್ತು. ನಾವು ತಲಪುವಷ್ಟರಲ್ಲಿ ಅಮ್ಮನ ಉಸಿರು ನಿಂತಿತ್ತು.  ಇಬ್ಬರೂ ಗಂಗಾಜಲ ಬಿಟ್ಟಾಗ ಗುಟುಕು ನೀರು ಕುಡಿದ ಅಮ್ಮ ಸ್ತಬ್ಧವಾದರು. ಆಗ ಗಂಟೆ‌ ಸುಮಾರು 12.
ನಾನು ಭಾವುಕನಾಗಿ ಒಬ್ಬಂಟಿಯಾದೆ.ಅಮ್ಮ ಹೇಳಿದ ಮಾತು ನಿಜವಾಯಿತು. ಅಮ್ಮನ ಉಸಿರು‌‌ ನಿಲ್ಲುವಾಗ ನಾವಿಬ್ಬರೂ ಇರಲಿಲ್ಲ. ನನ್ನ ಮಡದಿ ಇದ್ದಳು. ನಾನು ಹಾಗೂ ತಂಗಿ ಇದ್ದೆವು, ಆದರೆ ಆ ಕ್ಷಣದಲ್ಲಿ ಇರಲಿಲ್ಲ. 

ಈ ಜಗತ್ತು ಬಹಳ ನಿಗೂಢ ಅಂತ ಅನಿಸಿದ್ದು ಈ ಕಾರಣಕ್ಕೆ. ಅಮ್ಮ ಏಕೆ ಹಾಗೆ ಹೇಳಿದರು? ಹೇಗೆ ಹೇಳಿದರು. ಅಷ್ಟೂ ಸಮಯ‌ ಜೊತೆಯೇ ಇದ್ದ ನಾವಿಬ್ಬರೂ ಅದೇ ಸಮಯಕ್ಕೆ ಏಕೆ ಅಲ್ಲೇ ಆ ಕಡೆ ಇದ್ದೆವು? ನಾವು ಇದ್ದರೂ ಏನೂ ಮಾಡಲಾಗುತ್ತಿರಲಿಲ್ಲ‌ ಎನ್ನುವುದೂ ಸತ್ಯವೇ. ಆದರೂ ಅಮ್ಮ ಹೇಳಿದಂತೆ ಹೇಗಾಯಿತು? ಯಾರಿಗೆ ಗೊತ್ತು ಈ ಜಗದ ನಿಗೂಢತೆ?

ನನಗೆ ಗೊತ್ತು, ಹೀಗೆ ಹೇಳುವುದರಿಂದ, ಬರೆಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಇಲ್ಲವಾದ ಅಮ್ಮ ಬರಲಾರಳು. ಆದರೆ ಈ‌‌ ಪ್ರಶ್ನೆಗಳನ್ನು ನಾನು ಯಾರಿಗೆ ಕೇಳಲಿ? ಯಾರಿಗೆ ಹೇಳಲಿ? ಅಮ್ಮನಿಲ್ಲದ ಈ ಲೋಕದಲ್ಲಿ ಅಮ್ಮನಿಗೇ ಕೇಳುವ ಹಾಗೆ ಬರೆಯಬೇಕು, ಆದರೂ ಉತ್ತರವಿಲ್ಲ ನಿಜ. ಆದರೆ ಸಮಾಧಾನ ತರುತ್ತದೆ.ಬರಹಕ್ಕೆ ಆ ಶಕ್ತಿ ಇದೆ. ಮೌನವಾಗುತ್ತಾ ನಾಳಿನ ಕಡೆಗೆ ಯೋಚಿಸಬೇಕು.