23 ಜೂನ್ 2009

ಸಿಡಿಲಿನ ಮಾಯೆ.. .



ಒಂದು ಪ್ರದೇಶಕ್ಕೆ ಒಂದೆರಡು ಬಾರಿ ಸಿಡಿಲು ಬೀಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸಿಡಿಲು ಬೀಳುತ್ತಲೇ ಇದೆ.ಈಗಾಗಲೇ ಈ ಕೃಷಿ ಭೂಮಿಯಲ್ಲಿ 20 ಕ್ಕೂ ಅಧಿಕ ತೆಂಗಿನ ಮರಗಳು ಸಾವನ್ನಿಪ್ಪಿವೆ. ಮಾತ್ರವಲ್ಲ ಕಳೆದ ವರ್ಷ ಇಲ್ಲೇ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ ಕೂಡಾ. ಹಾಗಾದ್ರೆ ಇದೇ ಪ್ರದೇಶದಲ್ಲಿ ಏಕೆ ಸಿಡಿಲು ಬೀಳುತ್ತಿದೆ ಎನ್ನುವ ಕುತೂಹಲ ಇಲ್ಲಿನ ಗ್ರಾಮಸ್ಥರಲ್ಲಿದೆ.

ಕಳೆದ 10 ವರ್ಷಗಳಿಂದ ಒಂದೇ ಪ್ರದೇಶಕ್ಕೆ ಸಿಡಿಲು ಬೀಳುತ್ತಲೇ ಇದೆ ಕಾರಣವೇನು ಎಂಬ ಕುತೂಹಲದ ಪ್ರಶ್ನೆ ಇದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ಮೂಡಿಬಂದಿರುವ ಪ್ರಶ್ನೆ ಇದು.ಇಲ್ಲಿನ ಉಳಿಯಬೈಲಿನ ಅಜಿತ್ ಕುಮಾರ್ ಎಂಬವರಿಗೆ ಸೇರಿದ ಗದ್ದೆ ಹಾಗೂ ಅಡಿಕೆ ತೋಟದ ಪ್ರದೇಶದಲ್ಲಿ ನಿರಂತರವಾಗಿ ಸಿಡಿಲು ಬಡಿಯುತ್ತಿದೆ. ಹೀಗೆ ಸಿಡಿಲು ಬಡಿದ ಪರಿಣಾಮವಾಗಿ ವರ್ಷ ಕನಿಷ್ಠ ಒಂದು ತೆಂಗಿನಮರ ಸಾಯುತ್ತಿದೆ.ಇದುವರೆಗೆ 20 ಕ್ಕೂ ಅಧಿಕ ತೆಂಗಿನ ಮರ ಸತ್ತಿದೆ.ಹೀಗೆ ಸಿಡಿಲು ಬಡಿಯಲು ಕಾರಣವೇನು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.

ಕೆಲವರು ಈ ಪ್ರದೇಶದಲ್ಲಿ ಖನಿಜಾಂಶ ಇರಬಹುದು ಎಂದರೆ ಇನ್ನೂ ಕೆಲವರು ಇಲ್ಲಿ ನೀರಿನ ಓಳಹರಿವು ಹೆಚ್ಚಿರಬೇಕು ಎನ್ನುತ್ತಾರೆ.

ಕಳೆದ ವರ್ಷ ಇದೇ ಪ್ರದೇಶದಲ್ಲಿ ಜೊತೆಯಾಗಿ 5 ಜನ ಕೆಲಸ ಮಾಡುತ್ತಿರುವಾಗ ಜೋರಾಗಿ ಗುಡುಗು , ಸಿಡಿಲು, ಮಳೆ ಬಂದಾಗ ಆಶ್ರಯಕ್ಕಾಗಿ ಸಮೀಪದ ತೆಂಗಿನ ಮರದ ಬುಡದಲ್ಲಿ ನಿಂತಿರುವಾಗ ಹಠಾತ್ ಆಗಿ ಸಿಡಿಲು ಬಡಿದು 2 ಜನ ಮೃತ ಪಟ್ಟರೆ ಇತರ ೩ ಜನರಿಗೆ ಗಾಯವಾಗಿತ್ತು.

ಒಟ್ಟಿನಲ್ಲಿ ಇದೊಂದು ಕೌತುಕವೋ ಅಥವಾ ಪ್ರಕೃತಿಯ ಮುನಿಸೋ ಅಥವಾ ಖನಿಜಾಂಶದ ಪರಿಣಾವೋ ಎಂಬುದು ಇನ್ನಷ್ಠೇ ಪತ್ತೆಯಾಗಬೇಕಿದೆ.ಅದುವರೆಗೆ ಈ ತೋಟದ ಮಾಲಿಕರಿಗೆ ಪ್ರತೀ ವರ್ಷದ ಮಳೆಗಾಲವೆಂದರೆ ಆತಂಕವೇ ಆಗಿದೆ.

13 ಜೂನ್ 2009

ಇಲ್ಲಿ ಕಣ್ಣೀರು ಬತ್ತಿ ಹೋಗಿದೆ..



ಆ ತಾಯಿಯ ಕಣ್ಣೀರು ಬತ್ತಿ ಹೋಗಿತ್ತು.. ಮುಖದಲ್ಲಿ ಒಣ ನಗು.. ಹೃದಯದಲ್ಲಿ ಭಾರವಾದ ನೋವು... ಆದರೂ ಬದುಕು ಅನಿವಾರ್ಯ ಏಕೆಂದರೆ ಆ ಮಕ್ಕಳು ಇದ್ದಾರಲ್ಲ... ಇದು ಕತೆಯಲ್ಲ ನಿಜ ಜೀವನದ ಒಂದು ತುಣುಕು ಅಷ್ಟೇ.. ನಿಜಕ್ಕೂ ಭಯಾನಕವೆನಿಸುತ್ತದೆ... ಮನಸ್ಸು ಕರಗಿಹೋಗುತ್ತದೆ... ಆ ಎಲ್ಲಾ ಘಟನೆಗಳನ್ನು ಕೇಳುತ್ತಾ ಮನಸ್ಸಿಗಾದ ಅನುಭವವನ್ನು ಇಲ್ಲಿ ದಾಖಲಿಸಬೇಕು ಎಂದೆನಿಸಿತು....

ಪೂರ್ವ ನಿಗದಿಯಂತೆ ಇಂದು ಮುಂಜಾನೆ ಕೊಕ್ಕಡ ಬಳಿಯ ಪಡ್ರಮೆ ಕಡೆಗೆ ಹೋಗುವುದಕ್ಕಿತ್ತು. ಆಗಲೇ ಅಲ್ಲಿ ಎಂಡೋಸಲ್ಫಾನ್ ಇಲ್ಲಿಯ ಗೇರು ತೋಟಕ್ಕೆ ಕಳೆದ ೨೦ ವರ್ಷ ಹಿಂದೆ ಸಿಂಪಡಿಸಿದ್ದರ ಪರಿಣಾಮವನ್ನು ಇಂದು ಅಲ್ಲಿಯ ಜನ ಅನುಭವಿಸುತ್ತಿರುವುದರ ಬಗ್ಗೆ ಸ್ಥಳಿಯರು ಹಾಗೂ ಅಲ್ಲಿನ ಮಿತ್ರರು ಹೇಳಿದ್ದರು. ಹಾಗಾಗಿ ಆ ಬಗ್ಗೆ ಕುತೂಹಲವಿತ್ತು. ಈ ಮೊದಲು ಚಿತ್ರದಲ್ಲಿ ಅಂತಹವುಗಳನ್ನು ಓದಿದ್ದೆನೇ ಹೊರತು ನೋಡಿರಲಿಲ್ಲ.

ನಾವು ಮೊದಲಿಗೆ ಹೋದದ್ದು ಒಂದು ಶಾಲೆಗೆ.. ಅಲ್ಲಿ ಮಕ್ಕಳು ಕುಣಿದು ಕುಪ್ಪಳಿಸಬೇಕಾಗಿತ್ತು. ಆಧರೆ ಕೆಲವರಿಗೆ ಬುದ್ದಿ ಭ್ರಮಣೆ.. ಇನ್ನೂ ಕೆಲವರಿಗೆ ಗಂಭಿರತೆ ಇಲ್ಲ... ಮುಂದೆ ಸಾಗಿತು ನಮ್ಮ ತಂಡ.. ಅಲ್ಲಿನ ಪರಿಸ್ಥಿತಿ ಕಂಡಾಗ ಮನಸ್ಸು ಕರಗಿತು.. ಆತ ೨೧ ವರ್ಷದ ಹುಡುಗ... ಏಳಲಾಗದು.... ಕೂರಲಾಗದು... ಅದೂ ಬಿಡಿ ಅತ್ಯಂತ ವಿಕಾರವಾಗಿ ಮಲಗಿಕೊಂಡಿರುವ ಸ್ಥಿತಿ... ಆತನ ತಾಯಿಯಿಂದಲೇ ಎಲ್ಲಾ ಆರೈಕೆ.. ಸರಿಯಾಗಿ ನೋಡಿದರೆ ಮನೆಯವರ ಜವಾಬ್ದಾರಿಯನ್ನು ಹೊರಬೇಕಾದ ಪ್ರಾಯ.... ಇನ್ನೂ ಮುಂದೆ ಹೋದಾಗ ಅದು ಇನ್ನೂ ಭೀಕರ ಅಲ್ಲಿ ಮಾನಸಿಕ ಅಸ್ವಸ್ಥರಾದ ಮನೆ ಮಂದಿ... ಏನೇನೋ ಕತೆ.. ಅಲ್ಲಿಂದಲೂ ಮುಂದೆ ಹೋದಾಗ.... ಕರುಳು ಹಿಂಡುವ ದೃಶ್ಯ.. ಅದಿನ್ನೂ ಒಂದೂವರೆ ವರ್ಷದ ಬಾಲೆ.. ಅದರ ಬೆಳವಣಿಗೆ ಕುಂಠಿತ.. ಪಾಪ ಆ ಮುಗ್ದ ಬಾಲೆ ಈ ಲೋಕಕ್ಕೆ ಏನು ಅನ್ಯಾಯ ಮಾಡಿತ್ತು...? ಸರಿ ಅಲ್ಲಿಂದಲೂ ಮುಂದೆ ಹೋದಾಗ ವಿಕಾರವಾಗಿ ನಗುವ ಮುಖ ... ಮಲಗಿದಲ್ಲಿಂದ ಏಳಲಾಗದ ಸ್ಥಿತಿ... ಅಬ್ಬಾ ಇದಿಷ್ಟು ನೋಡಿದಾಗಲೇ ಸಾಕೆನಿಸಿತು.. ಆದರೆ ಇನ್ನೂ ಆ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಇಂತಹ ವಿವಿದ ಕಾಯಿಲೆಗಳಿಂದ ಇದ್ದರು.. ಆದರೆ ಮನಸ್ಸು ಆಗಲೇ ಸಂಪೂರ್ಣ ಕರಗಿಹೋಯಿತು....

ನನ್ನೊಂದಿಗೆ ಹೋರಾಟಗಾರರಿದ್ದರು.. ಅವರು ಹೇಳಿದ ಮಾತು ಕೇಳಿ ನಾನು ಮೂಕನಾದೆ.... ನಮ್ಮ ಸಾಧನೆಯೇನೂ ಇಲ್ಲ ಎನಿಸಿತು.. ಮಾತ್ರವಲ್ಲ ಮಾಧ್ಯಮಗಳು ಇಂದು ಪ್ರಭಾವ ಶಾಲಿಯಲ್ಲವೇ ಎಂದು ಮನದೊಳಗೆ ಪ್ರಶ್ನೆ ಮೂಡಿತು..

ಇವರ ಕತೆ ಕೇಳಿ.. ಈ ವ್ಯಕ್ತಿ ಇಲ್ಲಿನ ಸ್ಥಿತಿಯನ್ನು ಸಂಪೂರ್ಣ ಚಿತ್ರೀಕರಿಸಿ ಮಂತ್ರಿಗಳಿಗೆ ತೋರಿಸಲು ರಾಜಧಾನಿಗೆ ಹೋಗಿದ್ದರಂತೆ.. ಆದರೆ ಅಲ್ಲಾದ ಅನುಭವ ಅವರಲ್ಲಿದ್ದ ಎಲ್ಲಾ ಆಸೆಗಳಿಗೆ ತಣ್ಣೀರು ಬಿತ್ತಂತೆ.. ಹಾಗೆ ಪತ್ರಿಕಾಗೋಷ್ಠಿ ಮಾಡೋಣ ಎಂದರೆ ಅವರ ಕಿಸೆಯಲ್ಲಿದ್ದುದು ಕೇವಲ ಒಂದುಸಾವಿರವಂತೆ.. ಹಾಗಿದ್ದರೂ ಅವರು ಮತ್ತೆ ಊರಿಗೆ ಬಂದು ಹೋರಾಟ ಆರಂಭಿಸಿದರು. ಸ್ವತ: ಈ ವ್ಯಕ್ತಿಯೇ ರೋಗ ಪೀಡಿತ.. ಒಂದು ಕಣ್ಣು ದೃಷ್ಠಿ ಕಳಕೊಂಡಿದೆ ಇನ್ನೊಂದು ಶೇಕಡಾ ೨೫ ಮಾತ್ರಾ ಕಾಣುತ್ತದೆ ಇದು ಯಾವಾಗ ಮಂದವಾಗುತ್ತದೆ ಅಂತ ಗೊತ್ತಿಲ್ಲ ಎನ್ನುವ ಈ ವ್ಯಕ್ತಿಗೆ ಇದರಿಂದ ಏನೂ ಪ್ರಯೋಜನವಿಲ್ಲ.ಈ ಹೋರಾಟ ಮಾಡುವುದರಿಂದ ಫಲ ಸಿಕ್ಕುತ್ತದೆ ಎನ್ನುವ ವಿಶ್ವಾಸ ಇಲ್ಲದಿದ್ದರೂ ಅವರ ಮನೆಯಲ್ಲಿರುವ ಅವರ ತಾಯಿ ಸುಮ್ಮನಿದ್ದರೆ ಕೇಳುತ್ತಾರಂತೆ .. ಇಂದು ಅವನಿಗೆ ಕಣ್ಣು ಕಾಣುವುದಿಲ್ಲ ಅಂತ.. ಹಾಗಾಗಿ ಮನೆಯವರ ಸಮಾಧಾನ ಮತ್ತು ಆತನ ಆತ್ಮ ತೃಪ್ತಿಗಾಗಿ ಈ ಹೋರಾಟ ಮಾಡುತ್ತಾರಂತೆ.. ಏಕೆಂದರೆ ಇಂದಿನ ಜನಪ್ರತಿನಿಧಿಗಳು ಈ ಸಮಾಜಕ್ಕೆ ನಾಲಾಯಕ್ಕು.. ನಾವು ಆರಿಸಿ ಕಳಿಸುತ್ತೇವಲ್ಲಾ ನಾವೇ ಮೂರ್ಖರು..

ಅಲ್ಲಿ ಶ್ರೀಮಂತ ದೇವರುಗಳಿಗೆ ಕೋಟಿ ಕೋಟಿ ಸುರಿಯುವ ನಾಯಕರು ಒಂದೆಡೆ.... ಇನ್ನೊಂದೆಡೆ ನಾಯಾಲಕ್ಕು ಎಂದು ಮಾಧ್ಯಮದ ಮಂದಿಗೆ ಬರೆಯುವ ಮಂತ್ರಿಗಳು ಇನ್ನೊಂದು ಕಡೆ . ಇಂತಹವರು ಒಮ್ಮೆಯಾದರೂ ಈ ಪ್ರದೇಶಕ್ಕ ಭೇಟಿ ನೀಡಿ ಕನಿಷ್ಠ ಸಾಂತ್ವಾನವನ್ನಾದರೂ ಹೇಳುವ ಸೌಜನ್ಯ ಇವರಲ್ಲಿದೆಯಾ..? ಕೇವಲ ಅಲ್ಲಿಕೂತು ಕುರ್ಚಿ ಕಾಯುವ ಕೆಲಸ ಮಾಡುವ ನಾಯಕರಿಂದ ಏನನ್ನು ಬಯಸಬಹುದು ಹೇಳಿ...? ಅದೇ ಕೆರಳದ ಸರಕಾರ ಎಲ್ಲಾ ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿದೆ... ಆದರೆ ಇಲ್ಲಿ ನಮ್ಮ ನಾಯಕರ ಗಮನಕ್ಕೇ ಬಂದಿಲ್ಲ ಕೇಳಿದರೆ ಕೋಟಿ ಲೆಕ್ಕ... ಅತಿ ಶೀಘ್ರದಲ್ಲಿ ಪರಿಹಾರ.. ಎನ್ನುವ ಬೊಗಳೆ...
ಆದರೂ ಇಲ್ಲಿಯ ಜನ ಕಣ್ಣೀರು ಬತ್ತಿ ಹೋದರೂ ಬದುಕು ಸಾಗಿಸುತ್ತಿದ್ದಾರಲ್ಲಾ.. ಅದು ಗ್ರೇಟ್... ದೇವರಿದ್ದಾನೆ ಎಂದಾದರೆ ಅಂತಹವರಿಗೆ ಒಲಿಯಬೇಕು. ಅದು ಬಿಟ್ಟು ಶ್ರೀಮಂತರನ್ನು ಮಾತ್ರಾ ಕಾಯುವ ಕೆಲಸ ಮಾಡಬೇಡ ದೇವಾ....


10 ಜೂನ್ 2009

ಇದು ಸುದ್ದಿಯಾಗಿಲ್ಲ....

ಇಂದು ಹುಡುಗರೆಲ್ಲಾ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಅಂತ ಬೊಬ್ಬಿಡುವ ನಾವು ನಿಜಕ್ಕೂ ಕೃಷಿ ಬಗೆಗಿನ ಒಳ್ಳೆಯ ವಿಚಾರಗಳಿಗೆ ಏಕೆ ಪ್ರಚಾರ ಕೊಡುತ್ತಿಲ್ಲ ಎನ್ನುವ ಸಂಗತಿಯೊಂದು ಮೊನ್ನೆ ತಲೆಯಲ್ಲಿ ತಿರುಗಾಡುತ್ತಿತ್ತು. ಪ್ರತೀ ದಿನ ಭಾಷಣದಲ್ಲಿ , ಪತ್ರಿಕೆಗಳಲ್ಲಿ , ಮಾಧ್ಯಮಗಳಲ್ಲಿ ಹೇಳುವುದು ಮತ್ತು ಬರೆಯುವುದು ಒಂದೇ ವಿಚಾರ ಇಂದು ಕೃಷಿ ಬಡವಾಗುತ್ತಯಿದೆ. ಯುವಕರು ನಗರದ ಹಾದಿ ಹಿಡಿಯುತ್ತಿದ್ದಾರೆ. ... ಇದೇ ರೀತಿಯ ಹತ್ತು ಹಲವು ವಿಚಾರಗಳನ್ನು ಹೇಳುತ್ತಲೇ ಇರುವು ನಾವು ಯಾಕೆ ಈ ವಿಷಯಗಳಿಂದ ಹೊರಬಂದು ಇಲ್ಲಿರುವ ಕೃಷಿಕರಿಗೆ ಜೀವ ತುಂಬುವ ಮತ್ತು ಪ್ರೋತ್ಸಾಹ ಕೊಡುವ ಕೆಲಸ ಮಾಡಬಾರದು. ಆಗ ನಗರದ ಕೆಲಸದಿಂದ ಬೇಸತ್ತ ಒಂದಷ್ಟು ಯವಕರಾದರೂ ಹಳ್ಳಿಗೆ ಬರಬಹುದಲ್ವಾ ಅಂತ ಯೋಚನೆ ಮಾಡುತ್ತಿರಬೇಕಾದರೆ ಮೊನ್ನೆ ಅಂತಹುದ್ದೇ ಸಂಗತಿಯೊಂದು ನಡೆಯಿತು,.

ಅದು ವಿದೇಶದ ಕೃಷಿನೊಬ್ಬ ನಗರಕ್ಕೆ ಆಗಮಿಸಿ ಪರ್ಯಾಯ ಕೃಷಿಯತ್ತ ವಿವರ ನೀಡುತ್ತಿದ್ದ. ಅದಕ್ಕಾಗಿ ಭಾಷೆಯ ತರ್ಜುಮೆಯಯನ್ನೂ ವ್ಯವಸ್ಥೆ ಮಾಡಲಾಗಿತ್ತು. ಒಂದಷ್ಡು ಉತ್ಸಾಹಿ ಕೃಷಿಕರು ಬಂದಿದ್ದರು. ಅವರಲ್ಲಿ ತಲೆ ಹಣ್ಣಾದವರೇ ಜಾಸ್ತಿ ಅಂತ ನಾವು ಒಳಗೊಳಗೇ ಹೇಳುವ ಬದಲು ಅವರೆರೆಲ್ಲರೂ ಉತ್ಸಾಹೀ ಯುವಕರೇ ಅಂತ ಕರೆದು ಬಿಡೋಣ . ಆದರೆ ನಮ್ಮ ದುರಾದೃಷ್ಠ ಎಂಬಂತೆ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರವೇ ಸಿಕ್ಕಿಲ್ಲ. ನಿಜವಾಗಲೂ ಇಂತಹ ಕಾರ್ಯಕ್ರಮಕ್ಕೆ ಪ್ರಚಾರ ಅವಶ್ಯಕತೆಯಿದೆ. ಅಲ್ಲಿ ವಿದೇಶಿ ಕೃಷಿಕನಿಗೆ ಅಲ್ಲ. ಅವನ ವಿಚಾರಕ್ಕೆ ಪ್ರಚಾರ ಬೇಕಿತ್ತು. ಹೇಗೆ ಅಲ್ಲಿನ ಕೃಷಿಕರು ಕಾಫಿ ಬೆಳೆಯಲ್ಲಿ ಸೋತು ಹೋಗಿದ್ದರೂ ಅವರು ಅದನ್ನು ಸರಿದೂಗಿಸಿ ಕೃಷಿಯಲ್ಲಿ ಬೆಳೆದು ಬಂದರು ಎಂಬುದು ಮುಖ್ಯವಾಗುತ್ತದೆ. ಆದರೆ ಅಂತಹ ಕಾರ್ಯಕ್ರಮದ ಒಂದು ತುಣುಕು ಕೂಡಾ ಲೀಡ್ ಆಗಲೇ ಇಲ್ಲ. ನಮ್ಮಲ್ಲೊಂದು ಪೂರ್ವಾಗ್ರಹವಿದೆ. ನಮಗೂ ಆತನಲ್ಲಿ ಆಗೋಲ್ಲ , ಆತನಿಗೂ ನಮ್ಮಲ್ಲಿ ಆಗೋಲ್ಲ ಎಂದರೆ ವಿಚಾರಗಳಿಗೆ ಬ್ರೇಕ್ ಹಾಕುವುದರ ಪರಿಣಾಮವಾಗಿ ಒಂದಷ್ಟು ಉತ್ಸಾಹಿತರಿಗೆ ವಿಚಾರವೇ ತಲಪುವುದಿಲ್ಲ. ಹಾಗಾಗಿ ಕೃಷಿ ಸಂಬಂಧಿ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ಬೇಕು. ಏಕೆಂದರೆ ಯುವಕರು ಕೃಷಿಯತ್ತ ಬರುತ್ತಿಲ್ಲ ಎನ್ನುವ ನಾವು , ಕೃಷಿ ಬೇಕು ಎನ್ನುವ ನಾವು ಅದಕ್ಕೆ ಸಂಬಂಧಿತ ಒಳ್ಳೆಯ ಕಾರ್ಯಕ್ರಮ , ಅಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದಿದ್ದರೆ ಹೇಗೆ..? ಅದು ಮಾತ್ರವಲ್ಲ ಇಂದು ಕೃಷಿಯಲ್ಲಿ ಹೊಸ ಆವಿಷ್ಕಾರಗಳು ಮತ್ತು ಬದಲಾವಣೆ ಬೇಕು. ತಂತ್ರಜ್ಞಾನಗಳು ಬೇಕು. ಹಾಗಿದ್ದರೆ ಒಂದಷ್ಡು ಹುಡುಗರು ಇಲ್ಲಿ ಉಳಿಯ ಬಲ್ಲರು. ಅದಲ್ಲದೇ ಹೋದರೆ ಅಜ್ಜ ನೆಟ್ಟ ಆಲದ ಮರವಾದರೆ ಸುತ್ತು ಬಂದು ಸುಸ್ತಾಗಿ ದೂರ ಹೋಗುವುದು ಖಂಡಿತಾ. ಆದ ಕಾರಣ ಇಂತಹ ಹೊಸ ಆವಿಷ್ಕಾರಗಳು , ಬದಲಾವಣೆಗೆಳು, ಚಿಂತನೆಗೆಳು ಜನಸಾಮಾನ್ಯರಿಗೂ ತಲುಪಬೆಕಾಗದ್ದು ಅಗತ್ಯವಾಗಿದೆ. ಏನೇ ಆಗಲಿ ಆ ಕಾರ್ಯಕ್ರಮ ಸಂಘಟನೆ ಚೆನ್ನಾಘಿತ್ತು. ಒಳ್ಳೆಯ ಕಾರ್ಯಕ್ರವೂ ಆಗಿತ್ತು.

ಅದೇ ಕೇರಳದಲ್ಲಿ ಈ ಸುದ್ದಿ ಎಲ್ಲಾ ಮಾದ್ಯಮಗಳಲ್ಲಿ ಕವರ್ ಸ್ಟೋರಿಯಾಗಿ ಬಂದಿತ್ತು ಅಂತ ನಿನ್ನೆ ಮಾತನಾಡುತ್ತಿದ್ದ ಮಿತ್ರರೊಬ್ಬರು ಹೇಳಿದರು.........