01 ಜನವರಿ 2012

ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ ವರ್ಷ 2011



ಭೂತಕಾಲದ ಅನುಭವಗಳು, ವರ್ತಮಾನದ ಕ್ರಿಯೆಗಳು ಜೊತೆ ಸೇರಿ ಭವಿಷ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆಯಂತೆ. ಈ ನಂಬಿಕೆಯನ್ನು ಇಟ್ಟುಕೊಂಡು ಬದುಕುವ ನಾವು ಈಗ 2011 ನೇ ವರ್ಷವನ್ನು ದಾಟಿ ಮುಂದೆ ಬಂದಿದ್ದೇವೆ.2012 ನೇ ಇಸವಿಗೆ ಕಾಲಿಡುವ ಈ ವೇಳೆ ಹಿಂದೆ ತಿರುಗಿ ಸಾಗಿ ಬಂದ ದಾರಿಯನೊಮ್ಮೆ ಅವಲೋಕಿಸಬೇಡವೇ ?. 2011 ರಲ್ಲಿ ಏನೇನಾಗಿದೆ ಅಂತ ಕುಂತು ಯೋಚಿಸುವ, ಎಲ್ಲವೂ ನೆನೆಪಾಗುತ್ತದೆ ಎಂದಲ್ಲ , ನೆನಪು ಮಾಡುವ ಪ್ರಯತ್ನ ಮಾಡೋಣ. .

 ಇಂದು ಇಡೀ ದೇಶದಲ್ಲಿ ಚರ್ಚೆಯಾಗುತ್ತಿರುವ ಮತ್ತು ಎಲ್ಲಾ ಜನ ಕೂಡಾ ಒಕ್ಕೊರಲಿನಿಂದ ಧ್ವನಿಗೂಡಿಸುವುದು ಭ್ರಷ್ಟಾಚಾರ ತೊಲಗಲಿ ಅಂತಲೇ. ಅಂತಹ ಭ್ರಷ್ಟಾಚಾರದ ವಿರುದ್ದ ಮೊದಲ ಕಹಳೆ ಮೊಳಗಿದ್ದು ಪುತ್ತೂರಿನಿಂದ. ಮಾರ್ಚ್ ವೇಳೆಗೆ ಪುತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾವು ನಡೆಯಿತು. ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳು ಈ ಸಭಾದಲ್ಲಿ ಭಾಗವಹಿಸಿ ದೇಶದ ಆಗುಹೋಗುಗಳ ಬಗ್ಗೆ ಚಿಂತಿಸುತ್ತಾ ಭವಿಷ್ಯದ ಭಾರತಕ್ಕಾಗಿ ದಿಟ್ಟ ಹೆಜ್ಜೆ ಇಡುವ ಪ್ರಯತ್ನ ನಡೆಯಿತು. ಅದರ ಒಂದು ಭಾಗವಾದ ಭ್ರಷ್ಟಾಚಾರ ವಿರುದ್ದದ ಆಂದೋಲನ ಇಂದಿಗೂ ನಡೆಯುತ್ತಿದೆ. ಇದರ ಜೊತೆ ಜೊತೆಗೇ ಯೋಗಗುರು ಬಾಬಾ ರಾಂದೇವ್ ಅವರು ಕೂಡಾ ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡುತ್ತಾ ಮಂಗಳೂರಿನಲ್ಲಿ ಸಭೆಯನ್ನು ನಡೆಸಿದರು.ಈ ಮೂಲಕವೂ ಭ್ರಷ್ಟಾಚಾರ ವಿರೋಧಿ ಅಲೆಯನ್ನು ಎಬ್ಬಿಸಿದರು. ಅದಾದ ನಂತರ ದೇಶದಲ್ಲಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ದ ಸಮರ ಸಾರಿ ಉಪವಾಸ ಕುಳಿತಾಗ ಮಂಗಳೂರು ಸೇರಿದಂತೆ ಇಡೀ ಜಿಲ್ಲೆಯ ಜನತೆ ಕೂಡಾ ಉಪವಾಸಕ್ಕೆ ಬೆಂಬಲವಾಗಿ ನಿಂತರು.ಪುತ್ತೂರಿನಲ್ಲಿ ಕೂಡಾ ಈ ಉಪವಾಸಕ್ಕೆ ಬೆಂಬಲಲವಾಗಿ ಗಾಂಧಿ ಪ್ರತಿಮೆ ಬಳಿ ಕುಳಿತು ಅಣ್ಣಾಗೆ ಬೆಂಬಲ ವ್ಯಕ್ತವಾಯಿತು.ಲೋಕಪಾಲ ಜಾರಿಗೆ ಒತ್ತಾಯ ಕೇಳಿಬಂತು. ಯುವಕರಲ್ಲೂ ಈ ಜಾಗೃತಿ ಮೂಡಿತು.ಹೀಗೆಯೇ ಇದುವರೆಗಿನ ಇತಿಹಾಸದಲ್ಲಿ 2011 ಭ್ರಷ್ಟಾಚಾರದ ವಿರುದ್ದ ಸಮರ ಸಾರಿದ ವರ್ಷ ಅಂತ ಹೇಳಿಬಿಡಬಹುದು. ಈ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖ ವರ್ಷ.

 ಧರ್ಮ ಕ್ಷೇತ್ರ :

 ಇದೆಲ್ಲಾ ನಡೆಯುತ್ತಿರುವಂತೆಯೇ ಧಾರ್ಮಿಕವಾಗಿಯೂ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿ , ಟೀಕೆಗಳು ಬಂತು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ , ಇದಕ್ಕಾಗಿ ಸಾಕಷ್ಟು ತಯಾರಿ ನಡದರೆ ಇತ್ತ ಕಡೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಕೆಲಸ ಕಾರ್ಯಗಳು ಕೂಡಾ ವೇಗ ಪಡೆದುಕೊಂಡಿತು.ಈಶ್ವರಮಂಗಲದಲ್ಲಿ ಏಕಶಿಲಾ ಆಂಜನೇಯನ ವಿಗ್ರಹ ಸ್ಥಾಪನೆ , ರಾಮಾಯಣ ಹಾಗೂ ಹನುಮಾನ್ ಮಾನಸೋದ್ಯಾನ ಇನ್ನೊಂದು ಪ್ರಮುಖ ಅಂಶವಾಗಿದೆ.ಕಲ್ಲಡ್ಕದಲ್ಲಿ ನಡೆದ ವಾಜಪೇಯ ಯಾಗವು ಇಡೀ ನಾಡಿನ ಜನರ ಗಮನ ಸೆಳೆಯಿತು , ನಾಡಿನ ಹಿತ ದೃಷ್ಠಿಯಿಂದ ಆಯೋಜಿಸಿದ್ದ ಈ ಯಾಗವು ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾಗಿ ದಾಖಲಾಯಿತು. ಇನ್ನೊಂದು ಕಡೆ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ವಿಧವೆಯರಿಂದ ರಥೋತ್ಸವ ಕೂಡಾ ನಡೆಯುವ ಮೂಲಕ ವಿಶೇಷ ಗಮನ ಸೆಳೆದರೆ , ರಾಜ್ಯದ ಪ್ರಮುಖ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆಮಡೆಸ್ನಾನವು ವ್ಯಾಪಕ ಚರ್ಚೆಗೆ ಕಾರಣವಾಯಿತು. ಅಂತಿಮವಾಗಿ ಸರಕಾರಕ್ಕೆ ಕೂಡಾ ಈ ಬಗ್ಗೆ ಸ್ಫಷ್ಟವಾದ ನಿಲುವು ಪಡೆಯಲು ಸಾಧ್ಯವಾಗಲಿಲ್ಲ. ಉಳಿದಂತೆ ಪ್ರತೀ ವರ್ಷದಂತೆ ಧರ್ಮಸ್ಥಳದ ಲಕ್ಷದೀಪೋತ್ಸವ, ಸುಬ್ರಹ್ಮಣ್ಯದ ಚಂಪಾಷಷ್ಟಿ ಸೇರಿದಂತೆ ದೇವಾಲಯಗಳ ಉತ್ಸವಗಳು ನೆನಪಾದವು. ಒಂದು ಹಂತದಲ್ಲಿ ರಾಜ್ಯದ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ತಿಕ್ಕಾಟವು ಆಣೆ ಭಾಷೆಗೆ ತಲುಪಿ ಧರ್ಮಸ್ಥಳಕ್ಕೆ ಆಗಮಿಸಿದ್ದು ರಾಜ್ಯದಾದ್ಯಂತ ಅತ್ಯಂತ ಕುತೂಹಲಕ್ಕೆ ಕಾರಣವಾದ ವಿದ್ಯಮಾನವಾಗಿತ್ತು.ಆ ಬಳಿಕದ ವಿದ್ಯಮಾನದಲ್ಲಿ ಮುಖ್ಯಮಂತ್ರಿ ಪಟ್ಟವನ್ನು ಯಡಿಯೂರಪ್ಪ ಬಿಡಬೇಕಾಯಿತು. ಜನರ ಅತೀ ಅಗತ್ಯದ ಮಾಣಿ - ಸಂಪಾಜೆ ತೀರಾಹದಗೆಟ್ಟು ಜನರಿಗೆ ಓಡಾಟಕ್ಕೆ ಕಷ್ಟವಾದ ಸನಿವೇಶ ಒಂದು ಕಡೆಯಾದರೆ ಮತ್ತೊಂದು ಕಡೆ ಅನಿರೀಕ್ಷಿತ ಬೆಳವಣಿಯೆಲ್ಲಿ ನಮ್ಮದೇ ಜಿಲ್ಲೆಯ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದರು.

 ಶಾಂತಿ-ಅಶಾಂತಿ: 

 ಬೆಳ್ತಂಗಡಿ ತಾಲೂಕಿನಲ್ಲಿ ಗುಂಡಿನ ಧಾಳಿಗೆ ಪೊಲೀಸ್ ಕಾನ್‌ಸ್ಟೇಬಲ್ ಮಾನೆ ಮೃತರಾದರು.ಈ ಗುಂಡಿನ ಧಾಳಿ ಪೊಲೀಸರದ್ದೂ ನಕ್ಸಲರದ್ದೋ ಎಂಬುದು ಕೊನೆಯವರೆಗೂ ಸ್ಫಷ್ಟವಾಗಿಲ್ಲ.ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲೂ ಕೂಡಾ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕೆ ಕಬ್ಬಿನಾಲೆ ಸದಾಶಿವ ಗೌಡ ಮೃತನಾದ.ಇದೆಲ್ಲಾ ನಕ್ಸಲ್ ಘಟನೆಗೆ ಸಂಬಂಧಿಸಿದ್ದಾರೆ ,ಮತ್ತೊಂದು ಕಡೆ ಉಗ್ರಗಾಮಿಗಳ ನಂಟು ದಕ್ಷಿಣ ಕನ್ನಡ ಜಿಲ್ಲೆ , ಉಡುಪಿ ಜಿಲ್ಲೆಗಳ ಮೇಲೆ ಬಿದ್ದದ್ದು ಸ್ಫಷ್ಟವಾಗಿ ಕಂಡಿದೆ. ಕರಾವಳಿ ಜಿಲ್ಲೆಯಾದ್ಯಂತ ಈ ಜಾಲ ಇರುವುದು ತನಿಖೆಯ ವೇಳೆ ಗೊತ್ತಾಗಿದೆ ಅದರ ಒಂದು ಭಾಗವೇ ಭಟ್ಕಳದ ನಂಟು ಇರುವುದರ ಬಗ್ಗೆಯೂ ಪೊಲೀಸರು ಹೇಳಿದ್ದಾರೆ. ಇನ್ನು ಮತಾಂಧರ ಚಟುವಟಕೆ ಕಮ್ಮಿ ಏನೂ ಇದ್ದಿರಲಿಲ್ಲ. ಕಾಸರಗೋಡು ಸೇರಿದಂತೆ ಕರ್ನಾಟಕದ ಗಡಿಭಾಗಗಳಲ್ಲಿ ಇಂತಹ ಅನೇಕ ಚಟುವಟಿಕೆ ಕಂಡುಬಂದಿದೆ. ಇನ್ನು ಸುಳ್ಯದಲ್ಲಿ ಹಿಂದೂ ತರುಣರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಜಿಲ್ಲೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಉಳಿದುಕೊಂಡಿತು.

 ಕೃಷಿಕರಿಗೆ ಬೇವು-ಬೆಲ್ಲ :

 ಈ ಬಾರಿ ಅವಿಭಜಿತ ಜಿಲ್ಲೆಗೆ ಸಾಕಷ್ಟು ಮಳೆ ಸಿಕ್ಕಿದೆ.ಇದೆಲ್ಲದರ ನಡುವೆ 2011 ಕೃಷಿಕರ ಪಾಲಿಗೆ ಬೇವು-ಬೆಲ್ಲ ಮಿಶ್ರಣದ ವರ್ಷ. ಜಿಲ್ಲೆಯ ಪ್ರಮುಖ ಬೆಳೆ ಅಡಿಕೆಗೆ ಆರಂಭದಲ್ಲಿ ಬೆಲೆ ಕಡಿಮೆ ಇದ್ದರೂ ಆ ಬಳಿಕ ಏರುಹಾದಿಯಲ್ಲಿ ಕಂಡಿದೆ. ಅದರ ಜೊತೆಗೆ ರಬ್ಬರ್ , ತೆಂಗು, ಕಾಳುಮೆಣಸು ,ಕೂಡಾ ರೈತರಿಗೆ ಆಶಾದಾಯಕ ವಾತಾವರಣ ಸೃಷ್ಠಿ ಮಾಡಿತ್ತು. ಆದರೆ ಯಥಾ ಪ್ರಕಾರ ಕೃಷಿಕರು ಕೂಲಿ ಕಾರ್ಮಿಕರ ಸಮಸ್ಯೆಯಿಂದ ಮಾತ್ರಾ ಮುಕ್ತಿ ಪಡೆಯಲಿಲ್ಲ.ಅದರ ಬದಲಾಗಿ ಯಂತ್ರಗಳತ್ತ ಹೆಚ್ಚು ರೈತರು ಒಲವು ತೋರಿದರು. ಇದರ ಜೊತೆ ಜೊತೆಗೇ ಈ ಬಾರಿ ಅಡಿಕೆಗೆ ಕೊಳೆರೋಗ ವ್ಯಾಪಕವಾಗಿ ಕಾಡಿದ್ದು ರೈತರನ್ನು ಹೈರಾಣಾಗಿಸಿದೆ. ಆ ಹೊಡೆತದಿಂದ ಇನ್ನೂ ಅನೇಕ ಕೃಷಿಕರು ಚೇತರಿಸಿಕೊಂಡಿಲ್ಲ.

 ಸಾಹಿತ್ಯ-ಸಾಂಸ್ಕೃತಿಕ 

 ವಿಶ್ವ ತುಳು ಸಮ್ಮೇಳನದ ಬಳಿಕ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅಖಿಲ ಬಾರತ ತುಳು ಸಮ್ಮೇಳನವು ಯಶಸ್ವಿಯಾಗಿ ಸಂಘಟಿಸಲಾಯಿತು , ಜೊತೆ ಜೊತೆಗೇ ಅಳಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೂಡಾ ಯಶಸ್ವಿಯಾಯಿತು.ಇನ್ನು ಮೂಡಬಿದರೆಯಲ್ಲಿ ಆಳ್ವಾಸ್ ನುಡಿಸಿರಿ ಕೂಡಾ ಉತ್ತಮವಾಗಿ ಸಂಘಟಿಸಲಾಗಿತ್ತು.

 ------------------------------------------------------------
ಇದು ಇಂದಿನ ಹೊಸದಿಗಂತದಲ್ಲಿ ಪ್ರಕಟವಾದ ನನ್ನ ಬರಹ. ..  .
--------------------------------------------------------------