26 ಮಾರ್ಚ್ 2009

ಯುಗಾದಿ ಶುಭವಾಗಲಿ



ಯುಗಾದಿ... ಹೊಸತನದ ಸಂಕೇತ....

ಎಲ್ಲರಿಗೂ ತರಲಿ ಶುಭ...ಆಗಲಿ ಅದು ಜೀವನದ ಹೊಸಬೆಳಕು..

ಸಂವತ್ಸರದಂತೆ ಬದಲಾಗಲಿ...ಮನವು ಕೂಡಾ...

ಬೆಳೆಯಲಿ ಪ್ರೀತಿ.. .. ಬೆಳೆಯಲಿ ಹೃದಯದ ನಡುವಿನ ಸಂಬಂಧ....

ಎಲ್ಲರಿಗೂ ಶುಭವಾಗಲಿ.....

21 ಮಾರ್ಚ್ 2009

God is Great.. I am "....."

ದೇವರು ಎಂಬ ಮೂರಕ್ಷರದ ಬಗ್ಗೆ ಜನ ಮೂವತ್ತು ಕೋಟಿ ಮಾತನಾಡಬಲ್ಲರು.ಆದರೆ ತನ್ನ ಮನೆಯ ಪಕ್ಕದಲ್ಲೇ ಇರುವ ಒಬ್ಬ ವ್ಯಕ್ತಿಯ ಬಗ್ಗೆ 3 ಶಬ್ದವನ್ನೂ ಮಾತನಾಡಲಾರರು. ಹಾಗೊಂದು ವೇಳೆ ಮಾತನಾಡಿದರೂ ಅದು ಆತನ ವಿರುದ್ದ ತೆಗಳುವ, ಟೀಕಿಸುವ, ಅವನ ಉನ್ನತಿಯ ಸಹಿಸದ ಕುಹಕದ ಮಾತುಗಳೇ ಆಗಿರುತ್ತದೆ.ಇದು ಯಾಕೆ ಹೀಗೆ..? ಪಕ್ಕದ ಮನೆಯಾತನಾದರೂ ಪರೋಪಕಾರಿಯಾದಾನೂ ದೇವರು..?

ದೇವರು ಎನ್ನುವ ಶಬ್ದಕ್ಕೆ ನಾನು ಹೀಗೆ ವ್ಯಾಖ್ಯಾನಿಸುತ್ತೇನೆ...ಪ್ರೀತಿ,.. ಸ್ನೇಹ....ವಾತ್ಸಲ್ಯ.... ಪ್ರೇಮಮಯಿ... ಕರುಣೆ..... ಹೃದಯವಂತಿಕೆ....

ಆದರೆ ಇಂದು ನಂಬುವ ದೇವರು ಇದೆಲ್ಲವನ್ನೂ ಸೇರಿಸಿಕೊಂಡು ಸರ್ವಶಕ್ತನಾಗಿದ್ದಾನೆ ಹಾಗಾಗಿ ಆತ ಬೇಡಿದ್ದನ್ನು ಕರುಣಿಸುತ್ತಾನೆ. ಆ ನಂಬಿಕೆಯಿಂದ ಆತನಲ್ಲಿ ಬೇಡುವುದು ನನಗೆ ಒಳ್ಳೆಯದು ಮಾಡು.... ಪಕ್ಕದ ಮನೆಯವನ ತೋಟದಲ್ಲಿ ನೀರು ಕಡಿಮೆ ಆಗುವಂತೆ ಮಾಡು.. ಅವನ ಉದ್ಯೋಗಕ್ಕೆ ಹಿನ್ನಡೆಯಾಗಲಿ.... ಹೀಗೆಯೇ ಸ್ವಾರ್ಥದ “ದೇವರು” ಸಮಾಜದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ.ಪುರಾಣಗಳ ಕತೆಗಳನ್ನು ನೋಡಿದರೆ ಯಾವುದೇ ದೇವರು ನನಗೆ ಪೂಜೆ ಮಾಡು ... ನಿನಗೆ ಒಳ್ಳೆಯದು ಮಾಡುತ್ತೇನೆ ಎನ್ನಲಿಲ್ಲ. ನೀನು ಒಳ್ಳೆಯದು ಮಾಡು ನೀನು ಒಳ್ಳೆಯದಾಗುತ್ತಿ ಎನ್ನುವ ಸಂದೇಶವನ್ನು ನೀಡಿದ್ದಾನೆ. ನನ್ನ ಕೆಲಸದ ಒಳ್ಳೆಯ ಅಂಶವನ್ನು ನೀನು ಕೂಡಾ ಸಮಾಜಕ್ಕೆ ಮಾಡು ಎಂದಿದ್ದಾನೆ.ಆತನ ಸಾಮಾಜಿಕ ಕೆಲಸಗಳು ಇಂದು ಪೂಜೆಗೆ ಕಾರಣವಾಗಿದೆ.ಹಾಗಾಗಿ ಭಗವಂತನ ಕರ್ಮಕ್ಕೆ ಸ್ಥಾನಕ್ಕೆ ನೆಲೆ,ಬೆಲೆ ಸಿಕ್ಕಿದೆ. ಆದರೆ ಇಂದು ಆತ ಮಾಡಿದ ಕೆಲಸವನ್ನು ನಾವು ಮಾಡಲು ಸಿದ್ದರಿಲ್ಲ.ಬದಲಾಗಿ ಆತನ್ನು ಪೂಜೆ ಮಾಡಿ ಮನಸ್ಸಿನಲ್ಲಿ ಕೇಡನ್ನು ಮಾತ್ರಾ ತುಂಬಿಸಿ ಕೊಳ್ಳುತ್ತೇವೆ. ಇನ್ನೂ ಒಂದು ಕತೆ ಕೇಳಿ.... ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕ. ಯಾವಾಗಲೂ ಭಗವಂತನ ಬಳಿ ಇರುವವ.ಆತ ಮಾತನಾಡುವುದು ಹೇಗೆ ಗೊತ್ತಾ..? ಹೆ.. ಹೋಗಾ... ಓ... ಬಾರಾ.. ..!!.

ಇದು ಅರ್ಚಕನ ಸಂಸ್ಕೃತಿ.. ಹಾಗಾದರೆ ಆತನಿಗೆ ದೇವರ ಬಗ್ಗೆ ಏನು ಗೊತ್ತು ಮತ್ತು ಎಷ್ಟು ಗೊತ್ತು..? ಆತನಿಗೆ ಹಣದ ಮೋಹ ಮಾತ್ರ ಎಂದು ಇಲ್ಲೇ ತಿಳಿಯುತ್ತದೆ. ಇನ್ನೂ ಒಂದು ಕತೆಯಿದೆ.. ದೇವಸ್ಥಾನಗಳಿಗೆ ಹೋಗಿ ಅಲ್ಲೆ ಜಗಳ ಕಾಯುವವರೂ ಇದ್ದಾರೆ. ಹಾಗಾದ್ರೆ ದೇವರು ಅಂದ್ರೆ ಒಂದು ಫ್ಯಾಷನ್....?. ಗೊತ್ತಿಲ್ಲ ಬಿಡಿ..

ಹಾಗೆಂದು ನಾನು ದೇವಸ್ತಾನಕ್ಕೆ ಹೋಗಲ್ಲ ಅಂತಲ್ಲ. ಹೋಗ್ತೇನೆ. ಅಂತಹ hifiದೇವಸ್ಥಾನಗಳಿಗೆ ಹೋಗಲ್ಲ.. ನನಗೆ “ಮನಸ್ಸೇ” ದೇವರು.. “ಕರ್ಮ”ವೇ ದೇವರು. ಹಾಗೊಂದು ವೇಳೆ ದೇವಸ್ಥಾನಕ್ಕೆ ಹೋದರೂ ಮೌನದಿಂದ ಸುತ್ತು ಹಾಕಿ ಬರುತ್ತೇನೆ. ಇದಕ್ಕಾಗಿಯೇ ನನ್ನನ್ನು ಮನೆ ಮಂದಿ ಬೈತಾರೆ.. ಈಗ "ಶನಿ" ಕಾಟವಿದೆ.. ದೇವಸ್ಥಾನಕ್ಕೆ ಹೋಗಲೇ ಬೇಕು ಅಂತಾರೆ.. ನನಗನ್ನಿಸುತ್ತದೆ , ನನಗೆ ಕಾಡುವ ಶನಿಗಿಂತ ದೊಡ್ಡದು ಅಲ್ಲೆ ಇದೆ..!!

ಇದೆಲ್ಲಾ ಏಕೆ ನೆನಪಾಯಿತೆಂದರೆ ಒಂದು ಪ್ರಸಿದ್ದ ದೇವಸ್ಥಾನದ ಕತೆಯನ್ನು ಮಿತ್ರನೊಬ್ಬ ವಿವರಿಸಿದ್ದ. ಅದನ್ನು ಕೇಳಿದಾಗ ನನ್ನ ಒಳಗಿನ ಭಾವವು ವ್ಯಕ್ತವಾಯಿತು.ಸರಿಯೋ ತಪ್ಪೋ ಗೊತ್ತಿಲ್ಲ.ಎಲ್ಲರದ್ದೂ ಒಂದೇ ಅಭಿಪ್ರಾಯ ಇರಬೇಕು ಎಂದೇನೂ ಇಲ್ಲವಲ್ಲ.

15 ಮಾರ್ಚ್ 2009

ಇದು ದೋಸೆ ಜಾತ್ರೆ. . . .




ಬೆಳಗ್ಗೆ ಪ್ಲಾನ್ ಹಾಕಿ ಹೊರಡೋಣ ಅಂದುಕೊಂಡಾಗಲೇ ಮನೆಯಿಂದ ಆದೇಶವಾಗಿತ್ತು. ಅದೊಂದು ದೈವಸ್ಥಾನಕ್ಕೆ ಹೋಗಬೇಕು.. ಆ ನಂತ್ರವೇ ಇತರ ಕೆಲಸ.... ಸರಿ ಇಲ್ಲ ಅನ್ನುವುದಕ್ಕಾಗಲಿಲ್ಲ.ಪ್ಲಾನ್ ಉಲ್ಟಾ ಹೊಡೆಯಿತೋ ಅಂದುಕೊಂಡು ಕಾರಿನಲ್ಲಿ ಹೋಗುವಾಗಲೇ ಮಿತ್ರರಿಗೆ ದೂರವಾಣಿ ಮೂಲಕ ನನ್ನ ಪ್ರೋಗ್ರಾಂ ಮತ್ತು ಯಾವಾಗ ಮುಗಿದೀತು ಅಂತ ಕೇಳಿದೆ.ಬನ್ನಿ ಸಿಗುತ್ತೆ ನೆಗೆಟಿವ್ ಚಿಂತನೆ ಬೇಡ ಫಾಸಿಟವ್ ಆಗಿಯೇ ಬನ್ನಿ ಅಂದ. ಸರಿ ಸುಳ್ಯದಿಂದ ಹೊರಟಾಗಲೇ ಗಂಟೆ 12.. ಆದ್ರೂ ಒಳಗೆ ಅನುಮಾನ.. ಸಂಪಾಜೆ ಬಂದಾಗ ಇನ್ನೂ ಅನುಮಾನ... ಡಾಮರು ರಸ್ತೆ ಬಿಟ್ಟು ಒಳ ಹೋಗಬೇಕು ಅಂದರು ಮಿತ್ರ... ರಸ್ತೆ ನೋಡಿದ್ರೆ ಅಯ್ಯೋ ಅನಿಸಿತ್ತು. ಕಾರು ಓಲಾಡುತ್ತಾ ಸಾಗಿತು.. ಮುಂದೆ... 7 ಕಿ ಮೀ ಒಳಗೆ ಕಾಡಿನಲ್ಲಿ ಹೋದಾಗ ಅಬ್ಬಾ.... ಬಂತು ಆ ಸ್ಟೋರಿಯ ಪ್ರದೇಶ.... ...ಮುಗೀತೋ ಇಲ್ವೋ...?? ಅಬ್ಬಾ ಇದೆ... ಕೊನೆಯ 10 ನಿಮಿಷ......

ಅಲ್ಲಿ ಜಾತ್ರೆ...!!


ಸುಳ್ಯದ ಸಂಪಾಜೆ ಸಂಪಾಜೆಯಿಂದ ತಿರುಗಿ ಸುಮಾರು 7 ಕಿಮೀ ದೂರ ಕಾನನದ ನಡುವೆ ಸಂಚರಿಸುತ್ತಾ ಸಾಗಿದಾಗ ಕೊಡಗಿನ ಗಡಿಭಾಗದ ದಟ್ಟ ಕಾನನದ ಪ್ರದೇಶದಲ್ಲಿ ಅರೆಕಲ್ ಎಂಬ ಪ್ರದೇಶವಿದೆ. ಹಕ್ಕಿಗಳ ಇಂಚರ ಬಿಟ್ಟರೆ ಬೇರೆ ಯಾವುದೇ ಸದ್ದು ಗದ್ದಲಗಳಿಲ್ಲದ ಈ ಭಾಗದಲ್ಲಿ ಅಯ್ಯಪ್ಪ ದೇವರ ಗುಡಿಯಿದೆ. ಇಲ್ಲಿನ ಜಾತ್ರೆಯ ಸಂದರ್ಭದಲ್ಲಿ ದೋಸೆ ಎರೆಯುವ ಆಚರಣೆ ನಡೆಯುತ್ತದೆ.ಊರಿನ ಮಹಿಳೆಯರೆಲ್ಲಾ ಸೇರಿಕೊಂಡು ಸಾಮೂಹಿಕವಾಗಿ ದೋಸೆಯನ್ನು ಎರೆದು ನಂತರ ಸಂಜೆಯ ವೇಳೆಗೆ ಅದನ್ನು ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ.ಅದಕ್ಕಾಗಿ ದೇವಸ್ಥಾನದಿಂದ ಅಕ್ಕಿ ಹಾಗೂ ಎಣ್ಣೆಯನ್ನು ಕೊಡುತ್ತಾರೆ.

ಅಯ್ಯಪ್ಪ ಸ್ವಾಮಿಯು ಹುಲಿ ಹಾಲಿಗಾಗಿ ಕಾಡಿಗೆ ಬಂದಿದ್ದ ಸಂದರ್ಭದಲ್ಲಿ ವಿಶ್ರಮಿಸಿದ ಸ್ಥಳ ಇದಾದ್ದರಿಂದ ಇಲ್ಲಿ ಅಯ್ಯಪ್ಪನ ಗುಡಿ ನಿರ್ಮಿಸಲಾಗಿದೆ ಎಂಬುದು ಇಲ್ಲಿನ ಇತಿಹಾಸ.ಅದರ ಹೊರತಾಗಿ ಬೇರಾವುದೇ ಪುರಾಣಗಳು , ಕಥೆಗಳು ಇಲ್ಲಿ ಅಲಭ್ಯ. ಆದರೆ ಈ ದೇವಸ್ಥಾನವು ಮಲೆಕುಡಿಯ ಹಾಗೂ ಕೊಡಗಿನ ಪಾಂಡೀರ ಜನಾಂಗದ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.ಅದಕ್ಕಿಂತಲೂ ಹೆಚ್ಚಾಗಿ ಬಡವರ ನಂಬಿಕೆಯ ಕೇಂದ್ರ ಪರಿಸರದ ಆರಾಧನೆಯ ತಾಣ. ಇಲ್ಲಿಗೆ ಮಲೆಕುಡಿಯರು ಸಂಪಾಜೆ ಹಾಗೂ ಇನ್ನಿತರ ಕಡೆಗಳಿಂದ ಆಗಮಿಸಿದರೆ ಪಾಂಡೀರ ಜನಾಂಗದವರು ಕೊಡಗಿನ ಮಡಿಕೇರಿಯ ಗಾಳಿಬೀಡಿನಿಂದ ಬರುತ್ತಾರೆ.ಅತ್ಯಂತ ಶ್ರದ್ಧಾ ಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದರ್ಥದಲ್ಲಿ ಇಲ್ಲಿ ಜಾತ್ರೆ ಎಂದರೆ ವೃತ. ಜಾತ್ರೆಯ ದಿನ ಈ ದೇವಸ್ಥಾನಕ್ಕೆ ಸಂಬಂಧ ಪಟ್ಟ 18 ಕುಂಟುಂಬದವರು ಬೆಳಗಿನಿಂದಲೇ ಉಪವಾಸವಿರುತ್ತಾರೆ. ಅಂದರೆ ವೃತದಲ್ಲಿರುತ್ತಾರೆ. ಅವರಿಗೆ ಸಂಜೆಯ ವೇಳೆಗೆ ಫಲಹಾರ ಅಥವಾ ದೋಸೆಯ ಆಹಾರವೊಂದೇ ಆ ದಿನದ ಊಟ. ಮಾತ್ರವಲ್ಲ ಅವರು ಆ ದಿನವಿಡೀ ಬಾಳೆ ಎಲೆಯಲ್ಲಿ ಊಟ ಮಾಡುವಂತಿಲ್ಲ. ಅದಕ್ಕಾಗಿ ಕಾಡಿನಲ್ಲಿ ದೊರೆಯುವ ಎಲೆಯೊಂದನ್ನು ತಂದು ಅದರಲ್ಲಿ ದೋಸೆಯನ್ನು ತಿನ್ನುತ್ತಾರೆ.ಈ ಉಪವಾಸವನ್ನು ಪಟ್ನಿ ಅಂತ ಕರೆಯಲಾಗುತ್ತದೆ.ದೇವರ ಸೇವೆಗಾಗಿ ಇಲ್ಲಿ ಉಪವಾಸ ಆಚರಿಸಲಾಗುತ್ತದೆ.ಈ ಉಪವಾಸಕ್ಕಾಗಿಯೇ ದೋಸೆ ತಯಾರಾಗಬೇಕು.ವಿಶೇಷ ಇರುವುದು ಇಲ್ಲಿ. ಕೇವಲ 18 ಕುಟುಂಬಗಳ ಉಪವಾಸದ ವೃತಕ್ಕೆ ದೇವಸ್ಥಾನದಿಂದ ಕೊಡಮಾಡುವ ಅಕ್ಕಿ ಹಾಗೂ ಎಣ್ಣೆಯನ್ನು ಊರಿನ ಎಲ್ಲಾ ಮಹಿಳೆಯರು ಮನೆಗೆ ಕೊಂಡೊಯ್ದು ಹಿಟ್ಟನ್ನು ತಯಾರಿಸಿ ನಂತರ ದೇವಸ್ಥಾನದ ವಠಾರಕ್ಕೆ ಬಂದು ಸಾಮೂಹಿಕವಾಗಿ ದೋಸೆಯನ್ನು ಎರೆಯುವ ಕೆಲಸವನ್ನು ಮಾಡುತ್ತಾರೆ.ಹೀಗೆ ದೋಸೆ ಎರೆಯುವ ಸಂದರ್ಭದಲ್ಲೇ ಇರಬಹುದು ಅಥವಾ ಇನ್ನಿತರ ಕೆಲಸ ಮಾಡುವ ವೇಳೆ ಮಾತನಾಡುವ ಹಾಗಿಲ್ಲ.ಅದಕ್ಕಾಗಿ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಪದ್ದತಿ ಇಲ್ಲಿದೆ.ಹೀಗೆ ತಯಾರಾದ ದೋಸೆಯನ್ನು ಇಲ್ಲೇ ಮುಚ್ಚಿಡಲಾಗುತ್ತದೆ. ನಂತರ ರಾತ್ರಿ ವೇಳೆ ದೇವರ ಪೂಜೆಯ ಬಳಿಕ 18 ಕುಟುಂಬಸ್ಥರಿಗೆ ಹಾಗೂ ಊರ ಮಂದಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಆಚರಣೆಯಿಂದ ಮಹಿಳೆಯರು ತೀರಾ ಸಂತಸವನ್ನು ಪಡುತ್ತಾರೆ.ಇನ್ನೊಂದು ಅಂಶವೆಂದರೆ ಇಲ್ಲಿ ಜಾತ್ರೆಯ ವೇಳೆ ಊಟಕ್ಕೆ ಹಲಸಿನ ಗುಜ್ಜೆ , ಹುರುಳಿ ಬಿಟ್ಟರೆ ಬೇರೆ ಪದಾರ್ಥಗಳನ್ನೂ ಮಾಡುವಂತಿಲ್ಲ.

ಈ ದೇವಸ್ಥಾನದ ಜಾತ್ರೆ ಆರಂಭವಾಗುವ ಮುನ್ನ ಗಾಳಿಬೀಡಿನಿಂದ ಅಂದರೆ ಸುಮಾರು 5 ರಿಂದ 10 ಕಿ ಮೀಗಳಷ್ಡು ದೂರ ದೇವಸ್ಥಾನಕ್ಕೆ ಸಂಬಂಧಪಟ್ಟವರು ಅಂದರೆ ತಕ್ಕಮಖ್ಯಸ್ಥರು ಕಾಲ್ನಡಿಗೆಯಲ್ಲಿ ಸಾಗಿ ಭಂಡಾರ ತಂದು ಪೂಜೆ ಮಾಡಲಾಗುತ್ತದೆ.ಇಲ್ಲಿನ ವಿಶೇಷವಾದ ಇನ್ನೊಂದು ಸಂಪ್ರದಾಯವೆಂದರೆ ಫಲಕ್ಕೆ ನಿಲ್ಲವುದು.ಅಂದರೆ ಮಕ್ಕಳಾಗದೇ ಇರುವವರು ಇಲ್ಲಿ ಬಂದು ಹರಕೆ ಹೇಳಿ ಸಿಂಗಾರದ ಎಸಳಿನ ಮೂಲಕ ಹರಕೆ ಹೇಳುವುದು. ಅದು ಈಡೇರುತ್ತದೋ ಇಲ್ಲವೋ ಎಂಬುದನ್ನು ಹೇಳಿಕೊಳ್ಳಲಾಗುತ್ತದೆ.ಮಾತ್ರವಲ್ಲ ಇಲ್ಲಿ ಸುಮಾರು 600 ರಿಂದ 900 ದಷ್ಟು ಕೋಳಿಗಳು ಹರಕೆ ರೂಪದಲ್ಲಿ ಬರುತ್ತದೆ.ರಾತ್ರಿ ವೇಳೆ ಕೊಡಗಿನ ಸಾಂಪ್ರದಾಯಿಕ ನೃತ್ಯಗಳು ಕೂಡಾ ನಡೆಯುತ್ತದೆ.ಈ ಎಲ್ಲಾ ಆಚರಣೆ ಮುನ್ನ ನಡೆಯುವ ಸಾಮೂಹಿಕ ದೋಸೆ ಎರೆಯುವ ಕಾರ್ಯಕ್ರಮಕ್ಕೆ ಊರಿನ ಜನರೆಲ್ಲಾ ಅತ್ಯಂತ ಶ್ರಧ್ದಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.ಹೀಗೆ ದೋಸೆ ಎರೆಯುವ ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ.

ಇಲ್ಲಿ ದೇವರ ಬಗ್ಗೆಯಾಗಲಿ , ಆಚರಣೆಯ ಬಗ್ಗೆಯಾಗಲಿ ಮಾತನಾಡುವುದು ಬೇಡ. ಜಗತ್ತು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ದೇವರೂ ಹಾಗೆಯೇ ಅದೊಂದು ನಂಬಿಕೆ, ಶ್ರದ್ದೆ. ಗುಡಿಯೊಳಗೆ ಪೂಜೆ ಮಾಡಿ , ಇತ್ತ ಕಡೆ ಮಾಡುವ ಮೋಸ , ವಂಚನೆ, ಡೋಂಗಿಗಳ ಬದಲಾಗಿ ಬಡವರು ಆಚರಿಸುವ ಇಂತಹ ಆಚರಣೆಗಳು ಸಂಘಜೀವನವನ್ನು ಹೇಳಿಕೊಡುತ್ತದೆ ಮಾತ್ರವಲ್ಲ ಮಾನವೀಯ ಸಂಬಂಧಗಳನ್ನು ಹೇಳಿಕೊಡುತ್ತವೆ.ಇದು ಒಂದಿಷ್ಟು ಹಳ್ಳಿಗಳಲ್ಲಿ ಸಂಬಂಧಗಳು ಉತ್ತಮವಾಗಿ ಉಳಿಯಲು ಕೂಡಾ ಕಾರಣವಾಗಿವೆ. ಹಾಗಾಗಿ ಇಂತಹ ಕೆಲವು ಹಳ್ಳಿಗಳು ಇಂದು ನಗರದ ಬದುಕಿಗೆ ಕೂಡಾ ಉತ್ತಮ ಸಂದೇಶವನ್ನು ಕೊಡಬಲ್ಲುದು

ಇಂದು ಅಲ್ಲಲ್ಲಿ ಗಲಭೆಗಳು ನಡೆಯುತ್ತದೆ.ಜನಾಂಗದ ನಡುವೆ, ಧರ್ಮದ ನಡುವೆ ಅನಗತ್ಯ ಕಲಹಗಳು ನಡೆಯುತ್ತಲ್ಲಾ ಅವಕ್ಕೆಲ್ಲಾ ಏಕೆ ಈ ಜಾತ್ರೆಯೊಂದು ಆದರ್ಶವಾಗುವುದಿಲ್ಲ.?. ಎನ್ನವ ಪ್ರಶ್ನೆಯನ್ನು ನನ್ನೊಳಗೆ ಹಾಕಿಕೊಳ್ಳುತ್ತಾ ನಾವಲ್ಲಿಂದ ಹೊರಟು ಬಂದೆವು.

04 ಮಾರ್ಚ್ 2009

ಬೆಂಬಲವೂ ಇಲ್ಲ . . ಬೆಲೆಯೂ ಇಲ್ಲ...!!

ಮೊನ್ನೆ ಯಡಿಯೂರಪ್ಪನವರು ಅಡಿಕೆ ಬೆಂಬಲ ಬೆಲೆ ಅಂದಾಗ ಕೃಷಿಕರಿಗೆ ಅಬ್ಬಾ ,ಖುಶಿಯೋ ಖುಷಿ. ಮದುವೆ , ಪೂಜೆ . ರಸ್ತೆಯಲ್ಲಿ ಹೀಗೆ ಸಿಕ್ಕ ಸಿಕ್ಕಲ್ಲಿ ಮಾತನಾಡಿ ಸಂತಸಪಟ್ಟರು. ಹೇ ...ಅಡಿಕೆಗೆ ಬೆಂಬಲ ಬೆಲೆಯಂತೆ ಕೆ.ಜೆಗೆ 95ಅಂತೆ.. ಅದು ಯಾವುದಕ್ಕಂತೆ ಹಳತಿಗೋ..?? ಹೊಸತಕ್ಕೋ .. .?? ಹೀಗೆ ಕೇಳಿದವರೇ ಹೆಚ್ಚು. ಕೆಲವರಂತೂ ನಮ್ಮ ಸಮಸ್ಯೆ ಮುಗಿಯಿತು ಅಂತ ಹಿಗ್ಗಿದ್ದರು.ಆದ್ರೆ ಯಾರು ಕೂಡಾ ಇದು ನಮ್ಮಲ್ಲಿಗೆ ಅನ್ವಯವಾಗುವುದಿಲ್ಲ ಅಂತ ಯೋಚಿಸಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ಶ್ರೀಮಂತರಿಗೆ ಮಾತ್ರಾ ಈ ಬೆಂಬಲ ಬೆಲೆಯ ಸುಖ ಸಿಗುವುದು.ಬಡವರಿಗೆ ಗೋಲಿ ಮಾತ್ರಾ . ಆ ಕಾರಣದಿಂದಲೂ ಈಗ ಬೇಗನೆ ಬೆಂಬಲೆ ಸಿಕ್ಕರೆ ಮಾತ್ರಾ ಎಲ್ಲರಿಗೂ ಪ್ರಯೋಜನ ಇಲ್ಲಾಂದ್ರೆ ಶ್ರೀಮಂತರು ಮಾತ್ರಾ ಕೊಳ್ಳೆ ಹೊಡೆಯುತ್ತಾರೆ.ಅವರಿಗೆ ಎಷ್ಟು ಸಿಕ್ಕರೂ ಸಾಲುವುದಿಲ್ಲ ಬಿಡಿ.ಆದ್ರೆ ಸರಕಾರ ಮಾತ್ರಾ ಕೃಷಿಕರನ್ನು ಮಂಗ ಮಾಡುವ ಪ್ರಯತ್ನ ಮಾಡಿದೆ.ಏಕೆಂದ್ರೆ ಓಟು ಬಂತಲ್ಲಾ...!!


ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಯು ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸಿತ್ತಿದೆ. ಒಂದೆಡೆ ಹಳದಿರೋಗ ಇನ್ನೊಂದೆಡೆ ಬೇರುಹುಳದ ಬಾದೆ ಕಾಡುತ್ತಿದೆ.ಹೀಗಾಗಿ ಈ ಬೆಳೆಗೆ ಬೆಂಬಲ ಬೆಲೆ ನೀಡಿ ಮಾರುಕಟ್ಟೆಯನ್ನು ಸ್ಥಿರೀಕರಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು.ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅಡಿಕೆಗೆ 9500 ರು ಬೆಂಬಲ ಬೆಲೆ ಘೋಷಿಸಿದಾಗ ಮಲೆನಾಡಿನ ಅಡಕೆ ಬೆಳೆಗಾರರರಿಗೆ ಸಂತಸವಾಗಿತ್ತು. ಈ ಬೆಲೆ ಘೋಷಣೆಯಾದಾಗಲೇ ಕರಾವಳಿ ಜಿಲ್ಲೆಯ ಕೃಷಿಕರಿಗೆ ಅಚ್ಚರಿಯಾಗಿತ್ತು. ಏಕೆಂದರೆ ಈ ಬೆಲೆ ಯಾವ ಅಡಿಕೆಗೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಕರಾವಳಿಯಲ್ಲಿ ಹೇಳುವಂತೆ ಹಳತು ಅಡಿಕೆಗೋ ಅಥವಾ ಹೊಸ ಅಡಿಕೆಗೋ ಎಂದುಕೇಳುತ್ತಿದ್ದರು.ಆದರೆ ಎರಡು ದಿನಗಳ ಬಳಿಕ ದೊರೆತ ಮಾಹಿತಿ ಎಂದರೆ ಈ ಬೆಂಬಲ ಬೆಲೆ ಕರಾವಳಿಯಲ್ಲಿ ಬೆಳೆಯುವ ಚಾಲಿ ಅಡಿಕೆಗೆ ಅಲ್ಲ ಇದು ಕೇವಲ ಶಿವಮೊಗ್ಗದ ಹಾಗೂ ಆ ಭಾಗದಲ್ಲಿ ಬೆಳೆಯುವ ಕೆಂಪಡೆಗೆ ಮಾತ್ರಾ.ಇದರಿಂದಾಗಿ ಕರಾವಳಿಯ ರೈತರು ತೀರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಅಡಕೆ ಬೆಳೆ ಮಾತ್ರವಲ್ಲ ರೈತರು ಬೆಳೆಯುವ ಯಾವುದೇ ಉತ್ಪನ್ನವಿರಬಹುದು ಅದಕ್ಕೆ ತಮ್ಮ ಉತ್ಪಾದನಾ ವೆಚ್ಚದ ಶೇಕಡಾ 7ರಷ್ಟು ಲಾಭವಿರಿಸಿ ಬೆಂಬಲ ಬೆಲೆಯನ್ನು ಸರಕಾರವು ನಿಗದಿಪಡಿಸಬೇಕು ಎಂದು ಹೇಳುತ್ತಾರೆ ರೈತರು. ಆದರೆ ಸರಕಾರ ಮಾತ್ರಾ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನ್ಯಾಯವನ್ನು ಹೊಂದಿರುವುದು ಸರಿಯಲ್ಲ.

ರಾಜ್ಯದಲ್ಲಿ ಬೆಳೆಯುವ ಅಡಿಕೆಯಲ್ಲಿ ಶೇಕಡಾ 70 ರಿಂದ 75 ರಷ್ಟು ಚಾಲಿ ಅಡಿಕೆಯನ್ನು ಸಂಸ್ಕರಿಸಿದರೆ ಶೇಕಡಾ 25 ರಿಂದ 30 ರಷ್ಟು ಕೆಂಪಡಗೆ ಸ್ಥಾನವಿದೆ ಎಂದು ಅಂಕಿ ಅಂಶ ಹೇಳುತ್ತದೆ. ಈಗ ಸರಕಾರ ನೀಡಿರುವ ಬೆಂಬಲ ಬೆಲೆ ಶೇಕಡಾ ೩೦ ರಷ್ಟಿರುವ ಕೆಂಪಡಕೆಗೆ ಮಾತ್ರಾ. ಅಂದು ಅಡಿಕೆಗೆ ಬೆಂಬಲ ಬೆಲೆಗಾಗಿ ಹೋರಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಈಗ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡುತ್ತಾರೆ.ಮಾತ್ರವಲ್ಲ ಈಗ ಕರಾವಳಿಯ ಅಡಕೆ ಬೆಳೆಗಾರರು ಬೇರು ಹುಳ, ಹಳದಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿರುವ ಈ ಸಂದರ್ಭದಲ್ಲಾದರೂ ಸರಕಾರ ಗಮನಹರಿಸಬೇಕಿದೆ.

02 ಮಾರ್ಚ್ 2009

ಭಕ್ತಿಯ ಸೇತುವೆ





ಈ ಸುದ್ದಿ ನನಗೆ ಮುಖ್ಯ ಅನಿಸಿತ್ತು.ಯಾಕೆಂದ್ರೆ ನಾವು ಯಾವಾಗಲೂ ಸಮಸ್ಯೆಗಳತ್ತಲೇ ಸುಳಿಯುತ್ತಿರುವವರು.ಹಾಗೆಂದು ಇಲ್ಲಿ ಸಮಸ್ಯೆಯೇ ಇಲ್ಲ ಎಂದಲ್ಲ.ಸಮಸ್ಯೆಯ ಕಾರಣದಿಂದಲೇ ಈ ಸೇತುವೆ ರಚನೆಯಾದದ್ದು.ಆದರೆ ಇಲ್ಲೊಂದು ಸಮಾಧಾನವಿದೆ. ಸೇತುವೆ ನಿರ್ಮಾಣದ ಅಷ್ಟು ಸಮಯದಲ್ಲಾದರೂ ಶಕ್ತಿಯ ಸದ್ಭಳಕೆಯಾಯಿತಲ್ಲಾ..ಸ್ವತಹ ಭಗವಂತನೇ ಮೆಚ್ಚುವ ಕೆಲಸ ಮಾಡಿದ್ದಾರಲ್ಲಾ. ಕೆಲದಿನಗಳವರೆಗೆಯಾದರೂ ನೆನಪಿಸುವಂತೆ ಮಾಡಿದ್ದಾರಲ್ಲಾ. ಹಾಗಾಗಿ ಇಂತಹ ಕೆಲಸಗಳಾಗುತ್ತಿದ್ದರೆ ಇನ್ನಷ್ಟು ದೇವಸ್ಥಾನಗಳು ಸಭಿವೃದ್ದಿಯಾಗಲಿ ಎಂದು ಆಶಿಸುವವನು ನಾನು.ಅದಿಲ್ಲವಾದರೆ ನೋಡಿ ಅದೆಷ್ಟೋ ದೇವಸ್ಥಾನಗಳು ಇತ್ತೀಚೆಗೆ ಜೀರ್ಣೋದ್ದಾರ ಆಗಿವೆ. ಅಭಿವೃದ್ಧಿಯಾಗಿವೆ.ಹೊಸದಾಗಿ ನಿರ್ಮಾಣವೂ ಆಗಿದೆ. ಆದರೆ ಈಗ ಅಂತಹ ದೇವಸ್ಥಾನಗಳಿಗೆ ಒಮ್ಮೆ ಹೋಗಿ ನೋಡಿ.ಅಲ್ಲಿ ಒಳಜಗಳ, ಪಾಳು ಬಿದ್ದಿರುವ ವಸ್ತುಗಳು, ಅತೃಪ್ತ ಪುರೋಹಿತ, ಕಲ್ಮಶಯುಕ್ತ ಆಡಳಿತ ವರ್ಗ ಹೀಗೇ ಎಲ್ಲವೂ ಇರುವ ದೇವಾಲಯವಾಗಿರುತ್ತದೆ. ಅಂದು ವೈಭವಯುತವಾಗಿ ಕಾರ್ಯಕ್ರಮ ನಡೆದದ್ದು ಇಲ್ಲೇ ಅಂತ ಮನಸ್ಸಿನೊಳಗೆ ಪ್ರಶ್ನೆ ಹಾಕುವಂತೆ ಮಾಡುತ್ತದೆ.ನಿಜವಾದ ಬ್ರಹ್ಮಕಲಶವಾಗಬೇಕಾದ್ದು ದೇವಸ್ತಾನಕ್ಕಲ್ಲ ನಮ್ಮ ಹೃದಯಕ್ಕೆ.ಯಾಕೆಂದ್ರೆ ಎಲ್ಲವೂ ಇಲ್ಲೇ ಇದೆ. ಅದು ಮಾತ್ರವಲ್ಲ ಗರ್ಭಗುಡಿಯಲ್ಲಿ ಪ್ರತಿಷ್ಠೆಯಾದಂತೆ ನಮ್ಮೊಳಗಿನ ಪ್ರತಿಷ್ಠೆ ಇಲ್ಲವಾಗಬೇಕು ಎಂಬುದು ನನ್ನ ಅನಿಸಿಕೆ.ಆದರೆ ಈ ದೇವಸ್ಥಾನ ಹೇಗೆ ಅಂತ ಗೊತ್ತಿಲ್ಲ.ಆದರೆ ಈಗಂತೂ ಒಳ್ಳೆಯ ಕೆಲಸವನ್ನು ಇಲ್ಲಿನನ ಜನ ಮಾಡಿದ್ದಾರೆ. ಜೀರ್ಣೋದ್ದಾರದ ಸಮಯದಲ್ಲಿ ಊರಿನ ಅಭಿವೃದ್ದಿಗೂ ಕಾರಣವಾಗಿದ್ದಾರೆ.


ಅಂದು ಲಂಕೆಗೆ ಹೋಗಲು ರಾಮನ ಮೇಲಿನ ಭಕ್ತಿಯಿಂದ ವಾನರ ಸೇನೆಯು ಸೇತುವೊಂದನ್ನು ರಾಮೇಶ್ವರದಿಂದ ಲಂಕೆಗೆ ನಿರ್ಮಿಸಿದರು ಎಂದು ರಾಮಾಯಣದಲ್ಲಿ ಕೇಳಿದ್ದೇವೆ.ಆ ಬಗ್ಗೆ ಇತ್ತೀಚೆಗೆ ವಿವಾದವಾದ್ದನ್ನೂ ಕೂಡಾ ವಾನು ತಿಳಿದಿದ್ದೇವೆ. ಆದರೆ ಇಲ್ಲೊಂದು ಸೇತುವೆಯನ್ನು ಭಕ್ತರು ನಿರ್ಮಿಸಿದ್ದಾರೆ.ಇದು ಕೂಡಾ ಭಕ್ತಿಯ ಕಾರಣದಿಂದ ರಚನೆಯಾದ ಸೇತುವೆ.ಈ ಸೇತುವೆ ರಚನೆಯಾದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಎಂಬಲ್ಲಿ.

ನೂಜಿಬಾಳ್ತಿಲದ ಕಲ್ಲುಗುಡ್ಡೆ ಪ್ರದೇಶದಲ್ಲಿರುವ ಮಹಾಗಣಪತಿ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವವು ನಡೆಯುವುದಕ್ಕೆ ಸಿದ್ದತೆ ನಡೆಯುತ್ತಿದೆ. ಈ ದೇವಸ್ಥಾನದ ಪಕ್ಕದಲ್ಲಿ ಗುಂಡ್ಯ ಹೊಳೆಯು ಹರಿಯುವ ಕಾರಣ ನದಿಯ ಅ ಕಡೆ ಇರುವ ಭಕ್ತರಿಗೆ ನದಿ ದಾಟಲು ಅನಾದಿ ಕಾಲದಿಂದಲೂ ಅಸಾಧ್ಯವಾಗಿತ್ತು. ಹೀಗಾಗಿ ಇವರು ದೇವಸ್ಥಾನಕ್ಕೆ ಬರಬೇಕಾದರೆ ಸುಮಾರು 6 ರಿಂದ 15 ಕಿ ಮೀ ದೂರ ಸುತ್ತು ಬಳಸಿ ಅಥವಾ ದೋಣಿಯಲ್ಲಿ ಬರಬೇಕಾಗಿತ್ತು. ದೇವಸ್ಥಾನದ ಬ್ರಹ್ಮಕಲಶದ ಈ ಸಂದರ್ಭದಲ್ಲಿ ಭಕ್ತರ ಓಡಾಟ ಹೆಚ್ಚಾಗಿರುವುದರಿಂದ ಮತ್ತು ತುರ್ತು ಕೆಲಸಗಳಿಗೆ ತೀರಾ ತೊಂದರೆಯಾಗಿತ್ತು. ಇದಕ್ಕಾಗಿ ಭಕ್ತರ ೧೮ ಜನರ ಸಮಿತಿಯೊಂದನ್ನು ರಚನೆ ಮಾಡಿ ಅವಿರತವಾಗಿ ಶ್ರಮದಾನದ ಮೂಲಕ ದುಡಿದು ಸೇತುವೆಯನ್ನು ರಚನೆ ಮಾಡಿದರು.ಇದರಿಂದಾಗಿ ನಡೆದಾಟಲು ಮತ್ತು ದ್ವಿಚಕ್ರ ಓಡಿಸಲು ಈಗ ಸಾಧ್ಯವಾಗಿದೆ. ಹೀಗಾಗಿ ಈಗ ಸ್ಥಳಿಯ ಭಕ್ತರಿಗೆ ಮಾತ್ರವಲ್ಲ ಅನ್ಯರಿಗೂ ತೀರಾ ಅನುಕೂಲವಾಗಿದೆ.




ಈ ಸೇತುವೆ ರಚನೆಗೆ ಭಕ್ತಿ ಹಾಗೂ ದೇವರ ಸೇವೆ ಮಾಡುವ ತವಕವೇ ಕಾರಣವೆಂದು ಇಲ್ಲಿನ ಭಕ್ತರು ಹೇಳುತ್ತಾರೆ. ಸೇತುವೆ ರಚನೆ ಸಮಿತಿಯ ೧೮ ಜನ ಹಾಗೂ ಇನ್ನಿತರೂ ಸೇತುವೆ ರಚನೆಗೆ ದುಡಿದಿದ್ದಾರೆ.ಸುಮಾರು 150 ರಿಂದ 200 ಮೀಟರ್ ಅಗಲ ಇರಬಹುದಾದ ಈ ಗುಂಡ್ಯ ನದಿಗೆ 20 ರಿಂದ 25 ದಿನಗಳಲ್ಲಿ ಸೇತುವನ್ನು ನಿರ್ಮಿಸಿದ್ದಾರೆ. ಈಗ ಈ ಬಗ್ಗೆ ಅವರಿಗೆ ಸಂತಸವಿದೆ.ಭಕ್ತಿಯೇ ಸೇತುವೆಗೆ ಮೂಲ ಕಾರಣ ಎನ್ನುತ್ತಾರೆ. ಸೇತುವೆಯ ನಿರ್ಮಾಣದಿಂದ ಅನೇಕ ಮಂದಿಗೆ ಉಪಕಾರವಾಗಿದೆ.

ಇಲ್ಲಿನ ಸಾರ್ವಜನಿಕರು ಈ ಭಾಗದಲ್ಲಿ ತೂಗು ಸೇತುವೆಯಾಗಬೇಕು ಎಂದು ಹಲವಾರು ವರ್ಷಗಳಿಂದ ಸರಕಾರವನ್ನು ಹಾಗೂ ಸಂಬಂಧಿತರನ್ನು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಆ ಬೇಡಿಕೆ ಈಡೇರಿರಲಿಲ್ಲ.ಇಲ್ಲಿ ತೂಗು ಸೇತುವೆ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿಯಿಂದಲೂ ಅತಿ ಸನಿಹದಿಂದ ಈ ದೇವಸ್ಥಾನ ಹಾಗೂ ನೂಜಿಬಾಳ್ತಿಲ , ಕಲ್ಲುಗುಡ್ಡೆ ಪ್ರದೇಶಕ್ಕೆ ಸಂಪರ್ಕ ಹೊಂದಬಹುದಾಗಿದೆ. ಆದುದರಿಂದ ಈಗ ರಚನೆಯಾದ ಭಕ್ತರ ಭಕ್ತಿ ಸೇತುವಿನಲ್ಲಿ ಮಳೆಗಾಲದ ವೇಳೆ ಸಂಚರಿಸಲು ಅಸಾಧ್ಯ.ಹಾಗಾಗಿ ಸರಕಾರವು ಇತ್ತ ಚಿತ್ತ ಹರಿಸಬೇಕಾಗಿದೆ.

ಒಟ್ಟಿನಲ್ಲಿ ಭಕ್ತಿ ಹಾಗೂ ಧರ್ಮದ ಮೇಲಿನ ಅಭಿಮಾನವು ಇಲ್ಲಿ ಅಂಧಾಭಿಮಾನವಾಗದೆ ಸಂಘಟಿತ ಕೆಲಸದ ಮೂಲಕ ಊರಿಗೆ ಉಪಕಾರವಾಗಿದೆ.ಆದುರಿಂದ ಅಂತಹ ಭಕ್ತಿಯು ಅಭಿವೃದ್ದಿಯತ್ತ ದೃಷ್ಠಿ ನೆಟ್ಟರೆ ಊರು ಅಭಿವೃದ್ದಿಯಾಗಲು ಸಾಧ್ಯ. ಗಲಭೆ, ದೊಂಬಿಗಳಿಗೂ ಕಡಿವಾಣ ಸಾಧ್ಯ ಎನ್ನುವುದು ನನ್ನ ಅನಿಸಿಕೆ. ಹೀಗೆ ಶಕ್ತಿಗಳ ಸದ್ಭಕೆಯಾದರೆ ದೇಶ....???

01 ಮಾರ್ಚ್ 2009

ಅಡಿಕೆ ಪತ್ರಿಕೆಗೆಧನ್ಯವಾದ...



ನನ್ನ ಬ್ಲಾಗ್ ಬಗ್ಗೆ ಮತ್ತು ಬ್ಲಾಗ್ ಬಗೆಗಿನ ನನ್ನ ಅಭಿಪ್ರಾಯವನ್ನು ಈ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಅಡಿಕೆ ಪತ್ರಿಕೆ ಬಳಗಕ್ಕೆ ಧನ್ಯವಾದಗಳು.ಬ್ಲಾಗ್ ಲೋಕದಲ್ಲಿ ನಾನು ಒಂದು ವರ್ಷದಿಂದ ವಿಹರಿಸುತ್ತಿದ್ದೇನೆ. ಇತ್ತೀಚೆಗೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಅಡಿಕೆ ಪತ್ರಿಕೆಯಲ್ಲಿ ಈ ಬಗ್ಗೆ ಬಂದ ಬಳಿಕ ಅನೇಕರು ಮಾಹಿತಿಯನ್ನು ಕೇಳುತ್ತಿದ್ದಾರೆ.ಬ್ಲಾಗ್ ಅಂದರೇನು ಎಂಬುದರಿಂದ ಹಿಡಿದು ವಿಷಯವನ್ನು ಪೋಸ್ಟ್ ಮಾಡುವುದರವರೆಗೆ ಕೇಳುತ್ತಾರೆ. ನಾನು ಕೂಡಾ ಆರಂಭದಲ್ಲಿ ಹೀಗೆಯೇ ಕೇಳಿ ತಿಳಿದಿದ್ದೆ. ಆಗ ನನಗೆ ದಾರಿ ಹೇಳಿದವರು ಕುಂಟಿನಿಯವರು.

ನನಗೆ ಈಗ ಖುಷಿಯಾಗಿದೆ. ಕಾರಣ ಗೊತ್ತಾ ?. ನಾನು ಮೂಲತ: ಕೃಷಿ ಕುಟುಂಬದವನು.ಮುಂದೆಯೂ ಇದೇ ನನ್ನ ಜೀವನ.ಸದ್ಯ ಮಾಧ್ಯಮದ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೇನಾದರೂ ನನ್ನ ಮನಸ್ಸು ಕೃಷಿಯನ್ನು ಬಿಡಲಿಲ್ಲ. ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳಿವೆ ಹುಡುಗರು ಇಲ್ಲಿ ಉಳಿಯುತ್ತಿಲ್ಲ , ಕೃಷಿಕ ಕೆಲಸವೆಂದರೆ ನಿಶ್ಪ್ರಯೋಜಕ ಎನ್ನುವ ಈ ಸಂದರ್ಭದಲ್ಲಿಯೂ ನಾನು ಕೃಷಿ ಕಡೆಗೆ ಮುಂದೆ ತೆರಳುವುದು ನಿಶ್ಚಿತ. ಆದರೆ ಕೆಲ ಕಾಲ ಮಾದ್ಯಮ ಕ್ಷೇತ್ರದಲ್ಲಿ ದುಡಿಯುವ ನಿರ್ಧಾರ.

ನನ್ನ ಈ ನಿರ್ಧಾರದಕ್ಕೆ ಇನ್ನಷ್ಟು ಉತೇಜನ ನೀಡಿದ್ದು ಕೃಷಿಕರ ಕೈಗೆ ಲೇಖನಿ ಎನ್ನುವ ಕಲ್ಪನೆಯಿಂದ ಪ್ರಕಟವಾಗುತ್ತಿರುವ ಅಡಿಕೆ ಪತ್ರಿಕೆಯಲ್ಲಿ ನನ್ನ ಅಭಿಪ್ರಾಯ ಪ್ರಕಟಿಸಿದ್ದಕ್ಕೆ ಮತ್ತು ನನ್ನ ಬ್ಲಾಗ್ ಬಗ್ಗೆ ತಿಳಿಸಿರುವುದು. ಇದು ನನಗೆ ತೀರಾ ಖುಷಿಯಾಗಿದೆ. ಹಾಗಗಿ ಈ ಬರಹವು ನನ್ನ ಮುಂದಿನ ಬದುಕಿಗೆ ಸ್ಫೂರ್ತಿ ನೀಡಲಿದೆ ಅಂತ ನಾನು ಅಂದುಕೊಂಡಿದ್ದೇನೆ. ಯಾಕೆಂದರೆ ಅದು ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಕೃಷಿಕರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹಾಗಾಗಿ ನನಗೆ ಖುಷಿ. ಈ ಮೊದಲು ಇನ್ನೊಂದು ಪತ್ರಿಕೆಯಲ್ಲೂ ನನ್ನ ಬ್ಲಾಗ್ ಬಗ್ಗೆ ಒಬ್ಬರು ಪ್ರಸ್ತಾಪಿಸಿದ್ದನ್ನು ಈಗ ನೆನಪಿಸಿಕೊಳ್ಳುತ್ತೇನೆ.

ಅಡಿಕೆ ಪತ್ರಿಕೆಯ ಮುಖಪುಟದ ಚಿತ್ರ ನಾ.ಕಾರಂತರ ಬ್ಲಾಗ್ ನಿಂದ ಪಡೆದದ್ದು. ಅವರ ಬ್ಲಾಗ್ ಹಸಿರುಮಾತು.