02 ಮಾರ್ಚ್ 2009

ಭಕ್ತಿಯ ಸೇತುವೆ





ಈ ಸುದ್ದಿ ನನಗೆ ಮುಖ್ಯ ಅನಿಸಿತ್ತು.ಯಾಕೆಂದ್ರೆ ನಾವು ಯಾವಾಗಲೂ ಸಮಸ್ಯೆಗಳತ್ತಲೇ ಸುಳಿಯುತ್ತಿರುವವರು.ಹಾಗೆಂದು ಇಲ್ಲಿ ಸಮಸ್ಯೆಯೇ ಇಲ್ಲ ಎಂದಲ್ಲ.ಸಮಸ್ಯೆಯ ಕಾರಣದಿಂದಲೇ ಈ ಸೇತುವೆ ರಚನೆಯಾದದ್ದು.ಆದರೆ ಇಲ್ಲೊಂದು ಸಮಾಧಾನವಿದೆ. ಸೇತುವೆ ನಿರ್ಮಾಣದ ಅಷ್ಟು ಸಮಯದಲ್ಲಾದರೂ ಶಕ್ತಿಯ ಸದ್ಭಳಕೆಯಾಯಿತಲ್ಲಾ..ಸ್ವತಹ ಭಗವಂತನೇ ಮೆಚ್ಚುವ ಕೆಲಸ ಮಾಡಿದ್ದಾರಲ್ಲಾ. ಕೆಲದಿನಗಳವರೆಗೆಯಾದರೂ ನೆನಪಿಸುವಂತೆ ಮಾಡಿದ್ದಾರಲ್ಲಾ. ಹಾಗಾಗಿ ಇಂತಹ ಕೆಲಸಗಳಾಗುತ್ತಿದ್ದರೆ ಇನ್ನಷ್ಟು ದೇವಸ್ಥಾನಗಳು ಸಭಿವೃದ್ದಿಯಾಗಲಿ ಎಂದು ಆಶಿಸುವವನು ನಾನು.ಅದಿಲ್ಲವಾದರೆ ನೋಡಿ ಅದೆಷ್ಟೋ ದೇವಸ್ಥಾನಗಳು ಇತ್ತೀಚೆಗೆ ಜೀರ್ಣೋದ್ದಾರ ಆಗಿವೆ. ಅಭಿವೃದ್ಧಿಯಾಗಿವೆ.ಹೊಸದಾಗಿ ನಿರ್ಮಾಣವೂ ಆಗಿದೆ. ಆದರೆ ಈಗ ಅಂತಹ ದೇವಸ್ಥಾನಗಳಿಗೆ ಒಮ್ಮೆ ಹೋಗಿ ನೋಡಿ.ಅಲ್ಲಿ ಒಳಜಗಳ, ಪಾಳು ಬಿದ್ದಿರುವ ವಸ್ತುಗಳು, ಅತೃಪ್ತ ಪುರೋಹಿತ, ಕಲ್ಮಶಯುಕ್ತ ಆಡಳಿತ ವರ್ಗ ಹೀಗೇ ಎಲ್ಲವೂ ಇರುವ ದೇವಾಲಯವಾಗಿರುತ್ತದೆ. ಅಂದು ವೈಭವಯುತವಾಗಿ ಕಾರ್ಯಕ್ರಮ ನಡೆದದ್ದು ಇಲ್ಲೇ ಅಂತ ಮನಸ್ಸಿನೊಳಗೆ ಪ್ರಶ್ನೆ ಹಾಕುವಂತೆ ಮಾಡುತ್ತದೆ.ನಿಜವಾದ ಬ್ರಹ್ಮಕಲಶವಾಗಬೇಕಾದ್ದು ದೇವಸ್ತಾನಕ್ಕಲ್ಲ ನಮ್ಮ ಹೃದಯಕ್ಕೆ.ಯಾಕೆಂದ್ರೆ ಎಲ್ಲವೂ ಇಲ್ಲೇ ಇದೆ. ಅದು ಮಾತ್ರವಲ್ಲ ಗರ್ಭಗುಡಿಯಲ್ಲಿ ಪ್ರತಿಷ್ಠೆಯಾದಂತೆ ನಮ್ಮೊಳಗಿನ ಪ್ರತಿಷ್ಠೆ ಇಲ್ಲವಾಗಬೇಕು ಎಂಬುದು ನನ್ನ ಅನಿಸಿಕೆ.ಆದರೆ ಈ ದೇವಸ್ಥಾನ ಹೇಗೆ ಅಂತ ಗೊತ್ತಿಲ್ಲ.ಆದರೆ ಈಗಂತೂ ಒಳ್ಳೆಯ ಕೆಲಸವನ್ನು ಇಲ್ಲಿನನ ಜನ ಮಾಡಿದ್ದಾರೆ. ಜೀರ್ಣೋದ್ದಾರದ ಸಮಯದಲ್ಲಿ ಊರಿನ ಅಭಿವೃದ್ದಿಗೂ ಕಾರಣವಾಗಿದ್ದಾರೆ.


ಅಂದು ಲಂಕೆಗೆ ಹೋಗಲು ರಾಮನ ಮೇಲಿನ ಭಕ್ತಿಯಿಂದ ವಾನರ ಸೇನೆಯು ಸೇತುವೊಂದನ್ನು ರಾಮೇಶ್ವರದಿಂದ ಲಂಕೆಗೆ ನಿರ್ಮಿಸಿದರು ಎಂದು ರಾಮಾಯಣದಲ್ಲಿ ಕೇಳಿದ್ದೇವೆ.ಆ ಬಗ್ಗೆ ಇತ್ತೀಚೆಗೆ ವಿವಾದವಾದ್ದನ್ನೂ ಕೂಡಾ ವಾನು ತಿಳಿದಿದ್ದೇವೆ. ಆದರೆ ಇಲ್ಲೊಂದು ಸೇತುವೆಯನ್ನು ಭಕ್ತರು ನಿರ್ಮಿಸಿದ್ದಾರೆ.ಇದು ಕೂಡಾ ಭಕ್ತಿಯ ಕಾರಣದಿಂದ ರಚನೆಯಾದ ಸೇತುವೆ.ಈ ಸೇತುವೆ ರಚನೆಯಾದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಎಂಬಲ್ಲಿ.

ನೂಜಿಬಾಳ್ತಿಲದ ಕಲ್ಲುಗುಡ್ಡೆ ಪ್ರದೇಶದಲ್ಲಿರುವ ಮಹಾಗಣಪತಿ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವವು ನಡೆಯುವುದಕ್ಕೆ ಸಿದ್ದತೆ ನಡೆಯುತ್ತಿದೆ. ಈ ದೇವಸ್ಥಾನದ ಪಕ್ಕದಲ್ಲಿ ಗುಂಡ್ಯ ಹೊಳೆಯು ಹರಿಯುವ ಕಾರಣ ನದಿಯ ಅ ಕಡೆ ಇರುವ ಭಕ್ತರಿಗೆ ನದಿ ದಾಟಲು ಅನಾದಿ ಕಾಲದಿಂದಲೂ ಅಸಾಧ್ಯವಾಗಿತ್ತು. ಹೀಗಾಗಿ ಇವರು ದೇವಸ್ಥಾನಕ್ಕೆ ಬರಬೇಕಾದರೆ ಸುಮಾರು 6 ರಿಂದ 15 ಕಿ ಮೀ ದೂರ ಸುತ್ತು ಬಳಸಿ ಅಥವಾ ದೋಣಿಯಲ್ಲಿ ಬರಬೇಕಾಗಿತ್ತು. ದೇವಸ್ಥಾನದ ಬ್ರಹ್ಮಕಲಶದ ಈ ಸಂದರ್ಭದಲ್ಲಿ ಭಕ್ತರ ಓಡಾಟ ಹೆಚ್ಚಾಗಿರುವುದರಿಂದ ಮತ್ತು ತುರ್ತು ಕೆಲಸಗಳಿಗೆ ತೀರಾ ತೊಂದರೆಯಾಗಿತ್ತು. ಇದಕ್ಕಾಗಿ ಭಕ್ತರ ೧೮ ಜನರ ಸಮಿತಿಯೊಂದನ್ನು ರಚನೆ ಮಾಡಿ ಅವಿರತವಾಗಿ ಶ್ರಮದಾನದ ಮೂಲಕ ದುಡಿದು ಸೇತುವೆಯನ್ನು ರಚನೆ ಮಾಡಿದರು.ಇದರಿಂದಾಗಿ ನಡೆದಾಟಲು ಮತ್ತು ದ್ವಿಚಕ್ರ ಓಡಿಸಲು ಈಗ ಸಾಧ್ಯವಾಗಿದೆ. ಹೀಗಾಗಿ ಈಗ ಸ್ಥಳಿಯ ಭಕ್ತರಿಗೆ ಮಾತ್ರವಲ್ಲ ಅನ್ಯರಿಗೂ ತೀರಾ ಅನುಕೂಲವಾಗಿದೆ.




ಈ ಸೇತುವೆ ರಚನೆಗೆ ಭಕ್ತಿ ಹಾಗೂ ದೇವರ ಸೇವೆ ಮಾಡುವ ತವಕವೇ ಕಾರಣವೆಂದು ಇಲ್ಲಿನ ಭಕ್ತರು ಹೇಳುತ್ತಾರೆ. ಸೇತುವೆ ರಚನೆ ಸಮಿತಿಯ ೧೮ ಜನ ಹಾಗೂ ಇನ್ನಿತರೂ ಸೇತುವೆ ರಚನೆಗೆ ದುಡಿದಿದ್ದಾರೆ.ಸುಮಾರು 150 ರಿಂದ 200 ಮೀಟರ್ ಅಗಲ ಇರಬಹುದಾದ ಈ ಗುಂಡ್ಯ ನದಿಗೆ 20 ರಿಂದ 25 ದಿನಗಳಲ್ಲಿ ಸೇತುವನ್ನು ನಿರ್ಮಿಸಿದ್ದಾರೆ. ಈಗ ಈ ಬಗ್ಗೆ ಅವರಿಗೆ ಸಂತಸವಿದೆ.ಭಕ್ತಿಯೇ ಸೇತುವೆಗೆ ಮೂಲ ಕಾರಣ ಎನ್ನುತ್ತಾರೆ. ಸೇತುವೆಯ ನಿರ್ಮಾಣದಿಂದ ಅನೇಕ ಮಂದಿಗೆ ಉಪಕಾರವಾಗಿದೆ.

ಇಲ್ಲಿನ ಸಾರ್ವಜನಿಕರು ಈ ಭಾಗದಲ್ಲಿ ತೂಗು ಸೇತುವೆಯಾಗಬೇಕು ಎಂದು ಹಲವಾರು ವರ್ಷಗಳಿಂದ ಸರಕಾರವನ್ನು ಹಾಗೂ ಸಂಬಂಧಿತರನ್ನು ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಆ ಬೇಡಿಕೆ ಈಡೇರಿರಲಿಲ್ಲ.ಇಲ್ಲಿ ತೂಗು ಸೇತುವೆ ನಿರ್ಮಾಣವಾದರೆ ರಾಷ್ಟ್ರೀಯ ಹೆದ್ದಾರಿಯಿಂದಲೂ ಅತಿ ಸನಿಹದಿಂದ ಈ ದೇವಸ್ಥಾನ ಹಾಗೂ ನೂಜಿಬಾಳ್ತಿಲ , ಕಲ್ಲುಗುಡ್ಡೆ ಪ್ರದೇಶಕ್ಕೆ ಸಂಪರ್ಕ ಹೊಂದಬಹುದಾಗಿದೆ. ಆದುದರಿಂದ ಈಗ ರಚನೆಯಾದ ಭಕ್ತರ ಭಕ್ತಿ ಸೇತುವಿನಲ್ಲಿ ಮಳೆಗಾಲದ ವೇಳೆ ಸಂಚರಿಸಲು ಅಸಾಧ್ಯ.ಹಾಗಾಗಿ ಸರಕಾರವು ಇತ್ತ ಚಿತ್ತ ಹರಿಸಬೇಕಾಗಿದೆ.

ಒಟ್ಟಿನಲ್ಲಿ ಭಕ್ತಿ ಹಾಗೂ ಧರ್ಮದ ಮೇಲಿನ ಅಭಿಮಾನವು ಇಲ್ಲಿ ಅಂಧಾಭಿಮಾನವಾಗದೆ ಸಂಘಟಿತ ಕೆಲಸದ ಮೂಲಕ ಊರಿಗೆ ಉಪಕಾರವಾಗಿದೆ.ಆದುರಿಂದ ಅಂತಹ ಭಕ್ತಿಯು ಅಭಿವೃದ್ದಿಯತ್ತ ದೃಷ್ಠಿ ನೆಟ್ಟರೆ ಊರು ಅಭಿವೃದ್ದಿಯಾಗಲು ಸಾಧ್ಯ. ಗಲಭೆ, ದೊಂಬಿಗಳಿಗೂ ಕಡಿವಾಣ ಸಾಧ್ಯ ಎನ್ನುವುದು ನನ್ನ ಅನಿಸಿಕೆ. ಹೀಗೆ ಶಕ್ತಿಗಳ ಸದ್ಭಕೆಯಾದರೆ ದೇಶ....???

ಕಾಮೆಂಟ್‌ಗಳಿಲ್ಲ: