04 ಮಾರ್ಚ್ 2009

ಬೆಂಬಲವೂ ಇಲ್ಲ . . ಬೆಲೆಯೂ ಇಲ್ಲ...!!

ಮೊನ್ನೆ ಯಡಿಯೂರಪ್ಪನವರು ಅಡಿಕೆ ಬೆಂಬಲ ಬೆಲೆ ಅಂದಾಗ ಕೃಷಿಕರಿಗೆ ಅಬ್ಬಾ ,ಖುಶಿಯೋ ಖುಷಿ. ಮದುವೆ , ಪೂಜೆ . ರಸ್ತೆಯಲ್ಲಿ ಹೀಗೆ ಸಿಕ್ಕ ಸಿಕ್ಕಲ್ಲಿ ಮಾತನಾಡಿ ಸಂತಸಪಟ್ಟರು. ಹೇ ...ಅಡಿಕೆಗೆ ಬೆಂಬಲ ಬೆಲೆಯಂತೆ ಕೆ.ಜೆಗೆ 95ಅಂತೆ.. ಅದು ಯಾವುದಕ್ಕಂತೆ ಹಳತಿಗೋ..?? ಹೊಸತಕ್ಕೋ .. .?? ಹೀಗೆ ಕೇಳಿದವರೇ ಹೆಚ್ಚು. ಕೆಲವರಂತೂ ನಮ್ಮ ಸಮಸ್ಯೆ ಮುಗಿಯಿತು ಅಂತ ಹಿಗ್ಗಿದ್ದರು.ಆದ್ರೆ ಯಾರು ಕೂಡಾ ಇದು ನಮ್ಮಲ್ಲಿಗೆ ಅನ್ವಯವಾಗುವುದಿಲ್ಲ ಅಂತ ಯೋಚಿಸಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ಶ್ರೀಮಂತರಿಗೆ ಮಾತ್ರಾ ಈ ಬೆಂಬಲ ಬೆಲೆಯ ಸುಖ ಸಿಗುವುದು.ಬಡವರಿಗೆ ಗೋಲಿ ಮಾತ್ರಾ . ಆ ಕಾರಣದಿಂದಲೂ ಈಗ ಬೇಗನೆ ಬೆಂಬಲೆ ಸಿಕ್ಕರೆ ಮಾತ್ರಾ ಎಲ್ಲರಿಗೂ ಪ್ರಯೋಜನ ಇಲ್ಲಾಂದ್ರೆ ಶ್ರೀಮಂತರು ಮಾತ್ರಾ ಕೊಳ್ಳೆ ಹೊಡೆಯುತ್ತಾರೆ.ಅವರಿಗೆ ಎಷ್ಟು ಸಿಕ್ಕರೂ ಸಾಲುವುದಿಲ್ಲ ಬಿಡಿ.ಆದ್ರೆ ಸರಕಾರ ಮಾತ್ರಾ ಕೃಷಿಕರನ್ನು ಮಂಗ ಮಾಡುವ ಪ್ರಯತ್ನ ಮಾಡಿದೆ.ಏಕೆಂದ್ರೆ ಓಟು ಬಂತಲ್ಲಾ...!!


ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಯು ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸಿತ್ತಿದೆ. ಒಂದೆಡೆ ಹಳದಿರೋಗ ಇನ್ನೊಂದೆಡೆ ಬೇರುಹುಳದ ಬಾದೆ ಕಾಡುತ್ತಿದೆ.ಹೀಗಾಗಿ ಈ ಬೆಳೆಗೆ ಬೆಂಬಲ ಬೆಲೆ ನೀಡಿ ಮಾರುಕಟ್ಟೆಯನ್ನು ಸ್ಥಿರೀಕರಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು.ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪ ಅಡಿಕೆಗೆ 9500 ರು ಬೆಂಬಲ ಬೆಲೆ ಘೋಷಿಸಿದಾಗ ಮಲೆನಾಡಿನ ಅಡಕೆ ಬೆಳೆಗಾರರರಿಗೆ ಸಂತಸವಾಗಿತ್ತು. ಈ ಬೆಲೆ ಘೋಷಣೆಯಾದಾಗಲೇ ಕರಾವಳಿ ಜಿಲ್ಲೆಯ ಕೃಷಿಕರಿಗೆ ಅಚ್ಚರಿಯಾಗಿತ್ತು. ಏಕೆಂದರೆ ಈ ಬೆಲೆ ಯಾವ ಅಡಿಕೆಗೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಕರಾವಳಿಯಲ್ಲಿ ಹೇಳುವಂತೆ ಹಳತು ಅಡಿಕೆಗೋ ಅಥವಾ ಹೊಸ ಅಡಿಕೆಗೋ ಎಂದುಕೇಳುತ್ತಿದ್ದರು.ಆದರೆ ಎರಡು ದಿನಗಳ ಬಳಿಕ ದೊರೆತ ಮಾಹಿತಿ ಎಂದರೆ ಈ ಬೆಂಬಲ ಬೆಲೆ ಕರಾವಳಿಯಲ್ಲಿ ಬೆಳೆಯುವ ಚಾಲಿ ಅಡಿಕೆಗೆ ಅಲ್ಲ ಇದು ಕೇವಲ ಶಿವಮೊಗ್ಗದ ಹಾಗೂ ಆ ಭಾಗದಲ್ಲಿ ಬೆಳೆಯುವ ಕೆಂಪಡೆಗೆ ಮಾತ್ರಾ.ಇದರಿಂದಾಗಿ ಕರಾವಳಿಯ ರೈತರು ತೀರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಅಡಕೆ ಬೆಳೆ ಮಾತ್ರವಲ್ಲ ರೈತರು ಬೆಳೆಯುವ ಯಾವುದೇ ಉತ್ಪನ್ನವಿರಬಹುದು ಅದಕ್ಕೆ ತಮ್ಮ ಉತ್ಪಾದನಾ ವೆಚ್ಚದ ಶೇಕಡಾ 7ರಷ್ಟು ಲಾಭವಿರಿಸಿ ಬೆಂಬಲ ಬೆಲೆಯನ್ನು ಸರಕಾರವು ನಿಗದಿಪಡಿಸಬೇಕು ಎಂದು ಹೇಳುತ್ತಾರೆ ರೈತರು. ಆದರೆ ಸರಕಾರ ಮಾತ್ರಾ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನ್ಯಾಯವನ್ನು ಹೊಂದಿರುವುದು ಸರಿಯಲ್ಲ.

ರಾಜ್ಯದಲ್ಲಿ ಬೆಳೆಯುವ ಅಡಿಕೆಯಲ್ಲಿ ಶೇಕಡಾ 70 ರಿಂದ 75 ರಷ್ಟು ಚಾಲಿ ಅಡಿಕೆಯನ್ನು ಸಂಸ್ಕರಿಸಿದರೆ ಶೇಕಡಾ 25 ರಿಂದ 30 ರಷ್ಟು ಕೆಂಪಡಗೆ ಸ್ಥಾನವಿದೆ ಎಂದು ಅಂಕಿ ಅಂಶ ಹೇಳುತ್ತದೆ. ಈಗ ಸರಕಾರ ನೀಡಿರುವ ಬೆಂಬಲ ಬೆಲೆ ಶೇಕಡಾ ೩೦ ರಷ್ಟಿರುವ ಕೆಂಪಡಕೆಗೆ ಮಾತ್ರಾ. ಅಂದು ಅಡಿಕೆಗೆ ಬೆಂಬಲ ಬೆಲೆಗಾಗಿ ಹೋರಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಈಗ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡುತ್ತಾರೆ.ಮಾತ್ರವಲ್ಲ ಈಗ ಕರಾವಳಿಯ ಅಡಕೆ ಬೆಳೆಗಾರರು ಬೇರು ಹುಳ, ಹಳದಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಯಿಂದ ಬಳಲುತ್ತಿರುವ ಈ ಸಂದರ್ಭದಲ್ಲಾದರೂ ಸರಕಾರ ಗಮನಹರಿಸಬೇಕಿದೆ.